ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಸದಸ್ಯರು ಸೋಮವಾರ ಬೆಸ್ಕಾಂ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿದಿದೆ. 20 ದಿನಗಳಿಂದ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಕೃಷಿ ಪಂಪ್ಸೆಟ್ಗಳಿಗೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ 3 ವಾರದಿಂದ 11 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ ಮಾಡುತ್ತಿರುವುದಾಗಿ ಪತ್ರಿಕೆಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ನಮ್ಮ ಭಾಗದಲ್ಲಿ ಮಾತ್ರ ವಿದ್ಯುತ್ ಸಮಸ್ಯೆ ಬಗೆಹರಿದಿಲ್ಲ. ರಾತ್ರಿ ವೇಳೆ ವಿದ್ಯುತ್ ಇರುವುದೇ ಇಲ್ಲ. ರೇಷ್ಮೆ ಹುಳು ಸಾಕಾಣಿಕೆ ಮನೆಗಳಿಗೆ ಹಾಗೂ ಬೆಳಗಿನ ಜಾವ ಹಾಲು ಕರೆಯಲು ವಿದ್ಯುತ್ ಇಲ್ಲದಾಗಿದೆ. ಇದರಿಂದಾಗಿ ಮಾನ್ಯ ಸಚಿವರ ಹೇಳಿಕೆಗಳು ಮತ್ತು ವಾಸ್ತವದ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ವಿದ್ಯುತ್ ಸಮಸ್ಯೆಯನ್ನು ಬಗೆ ಹರಿಸಿ ಗೊಂದಲವನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ದ್ಯಾವಪ್ಪ, ಕೇಶವಪ್ಪ, ಮೋಹನ್, ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಮರ್ಪಕವಾಗಿ ವಿದ್ಯುತ್ ನೀಡುವಂತೆ ಮನವಿ
ನಗರಸಭೆಯ ಅವ್ಯವಹಾರ ಬಯಲಿಗೆಳೆದ ಸದಸ್ಯರು
ಒಂದೆಡೆ ಪೌರಕಾರ್ಮಿಕರು ಆರು ತಿಂಗಳುಗಳಿಂದ ಸಂಬಳ ಬಂದಿಲ್ಲ ಎಂದು ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಯಾರ ಅರಿವಿಗೂ ಬರದಂತೆ ಕೆಲಸಕ್ಕೆ ಹಾಜರಾಗದ ಪೌರಕಾರ್ಮಿಕರ ಹೆಸರಿನಲ್ಲಿ ಸುಮಾರು ಎರಡು ಲಕ್ಷ ರೂಗಳಷ್ಟು ಸಂಬಳವನ್ನು ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ.
ಕಳೆದ ೧೯ ವರ್ಷಗಳಿಂದ ಕೆಲಸಕ್ಕೆ ಹಾಜರಾಗದೇ ಇದ್ದರೂ ಪೌರಕಾರ್ಮಿಕರೊಬ್ಬರ ಹೆಸರಿನಲ್ಲಿ ಸಂಬಳ ಡ್ರಾ ಮಾಡಿ ಲಕ್ಷಾಂತರ ರೂ ಸರ್ಕಾರಿ ಹಣ ದುರುಪಯೋಗವಾಗುವಲ್ಲಿ ನಗರಸಭೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನಗರಸಭೆಯ ಕೆಲ ಸದಸ್ಯರು ದೂರಿದ್ದಾರೆ.
ನಗರಸಭೆಯ ಪೌರಕಾರ್ಮಿಕರಾದ ಸುಭದ್ರಾಬಾಯಿ ಎನ್ನುವವರು ೧೯೯೬ ರಿಂದ ಈವರೆಗೂ ಒಂದೇ ಒಂದು ದಿನ ಕೆಲಸ ಮಾಡಿಲ್ಲ. ಹಾಗಿದ್ದರೂ ಕಳೆದ ಹತ್ತೊಂಬತ್ತು ವರ್ಷಗಳಿಂದ ಆಕೆಯ ಹೆಸರಿಗೆ ಸಂಬಳದ ಚೆಕ್ ನೀಡಲಾಗುತ್ತಿದೆ. ಬ್ಯಾಂಕಿನಲ್ಲಿ ಸಂಬಳ ಡ್ರಾ ಆಗುತ್ತಿದ್ದಂತೆ ನಗರಸಭೆಯ ಕೆಲ ಅಧಿಕಾರಿಗಳು ಅದರಲ್ಲಿ ಆಕೆಗೊಂದಿಷ್ಟು ಹಣ ನೀಡಿ ಉಳಿದ ಹಣ ತಾವು ಹಂಚಿಕೊಳ್ಳುವ ಕಾಯಕ ಮಾಡುತ್ತಾರೆ ಎಂದು ಕೆಲವು ಸದಸ್ಯರು ಆರೋಪಿಸಿದ್ದಾರೆ.
ಪ್ರತಿನಿತ್ಯ ನಗರವನ್ನೆಲ್ಲಾ ಸ್ವಚ್ಚಗೊಳಿಸುವ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿಂದ ಸಂಬಳ ನೀಡಲು ನಗರಸಭೆಯಲ್ಲಿ ಹಣವಿಲ್ಲ ಎನ್ನುವ ಅಧಿಕಾರಿಗಳು ಕಳೆದ ನವೆಂಬರ್ ೨೭ ರಂದು ಸುಭದ್ರಾಭಾಯಿಯವರಿಗೆ ಒಂದು ವರ್ಷದ ಸಂಬಳದ ಬಾಬ್ತು ೨,೦೭,೯೨೦ ರೂ ಹಣವನ್ನು ಬ್ಯಾಂಕಿನಿಂದ ಡ್ರಾ ಮಾಡಿಸಿರುವ ಅಧಿಕಾರಿಗಳು ಆಕೆಗೆ ಕೇವಲ ೭೦ ಸಾವಿರ ಮಾತ್ರ ನೀಡಿ ಉಳಿದ ಹಣವನ್ನು ತಾವೇ ಹಂಚಿಕೊಂಡಿದ್ದಾರೆ.
ತಿಂಗಳಿಗೆ ೨೦ ಸಾವಿರದಂತೆ ಸುಮಾರು ೧೯ ವರ್ಷಗಳ ಕಾಲ ಕೆಲಸ ಮಾಡದಿರುವ ಪೌರಕಾರ್ಮಿಕರೊಬ್ಬರಿಗೆ ಸಂಬಳ ನೀಡಿರುವ ನಗರಸಭೆ ಅಧಿಕಾರಿಗಳು ಸುಮಾರು ೪೫ ಲಕ್ಷ ರೂಪಾಯಿಗಳಿಗೂ ಹೆಚ್ಚು ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದು ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಎಂ.ಕೇಶವಮೂರ್ತಿ, ಸದಸ್ಯರಾದ ಎಸ್.ರಾಘವೇಂದ್ರ, ಲಕ್ಷ್ಮಯ್ಯ, ಶಫೀ, ಸಿಕಂದರ್, ಮುಖಂಡರಾದ ತನ್ವೀರ್ಪಾಷ, ಶ್ರೀನಾಥ್, ಶ್ರೀಧರ್, ಮಂಜುನಾಥ್, ಸಾಧಿಕ್ ಮತ್ತಿತರರು ನಗರಸಭೆ ಆಯುಕ್ತರ ಕೋಣೆಗೆ ತೆರಳಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
‘ಶಿಡ್ಲಘಟ್ಟ ನಗರಸಭೆಗೆ ಆಯುಕ್ತರಾಗಿ ನಾನು ಬಂದು ಕೇವಲ ಎರಡು ತಿಂಗಳಷ್ಟೇ ಆಗಿದ್ದು ಪ್ರಭಾರಿಯಾಗಿ ಚಿಂತಾವಣಿ ನಗರಸಭೆಯ ಉಸ್ತುವಾರಿಯಿದ್ದುದರಿಂದ ಶಿಡ್ಲಘಟ್ಟ ನಗರಸಭೆ ಕಚೇರಿಯಲ್ಲಿ ಸಮಸ್ಯೆಗಳೇನಿವೆ ಎಂಬುದು ಇನ್ನೂ ಅಷ್ಟಾಗಿ ತಿಳಿದಿಲ್ಲ. ಕೆಲಸಕ್ಕೆ ಬಾರದೇ ಸಂಬಳ ಡ್ರಾ ಆಗಿರುವುದು ಇದೇ ಮೊದಲೇನಲ್ಲ ಈ ಹಿಂದಿನಿಂದಲೂ ಆಗಿದೆ. ನಮ್ಮ ಕಚೇರಿಯ ಪರಿಸರ ಅಭಿಯಂತರರು ಸೇರಿದಂತೆ ಆರೋಗ್ಯ ನಿರೀಕ್ಷಕರು ನೀಡಿರುವ ವರದಿಯನ್ವಯ ಹಾಗು ಕೆಸಿಎಸ್ಆರ್ ನಿಯಮದಡಿ ಸಂಬಳ ಪಾವತಿಸುವಂತೆ ಸೂಚಿಸಿದ್ದು ಸಂಬಳ ಆಕೆಯ ಬ್ಯಾಂಕ್ ಖಾತೆಯಲ್ಲಿ ಜಮೆಯಾಗಿದೆ. ಇನ್ನು ಆಕೆಗೆ ಸ್ವಲ್ಪ ಹಣ ನೀಡಿ ಇನ್ನುಳಿದ ಹಣವನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂಬ ಸದಸ್ಯರ ದೂರಿನ ಬಗ್ಗೆ ಸುಭದ್ರಾಬಾಯಿಯಿಂದ ಲಿಖಿತವಾಗಿ ಹೇಳಿಕೆ ಪಡೆದುಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು. ಸಂಬಳ ನೀಡುವಲ್ಲಿ ಅವ್ಯವಹಾರವಾಗಿರುವುದು ಸಾಬೀತಾದಲ್ಲಿ ಯಾವುದೇ ಮುಲಾಜಿಲ್ಲದೇ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು’ ಎಂದು ನಗರಸಭೆ ಆಯುಕ್ತ ಎಚ್.ವಿ.ಹರೀಶ್ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರಕಾರ್ಮಿಕರು ನಗರಸಭೆ ಮುಂಭಾಗದಲ್ಲಿ ಕಳೆದ ಆರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಘಟನೆ ಕೂಡ ನಡೆಯಿತು.
ಸರ್ಕಾರಿ ಹಣ ದುರುಪಯೋಗ
ಶಿಡ್ಲಘಟ್ಟದ ನಗರಸಭೆಯಲ್ಲಿ ಸೋಮವಾರ ಸರ್ಕಾರಿ ಹಣ ದುರುಪಯೋಗ ಮಾಡುವಲ್ಲಿ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ನಗರಸಭೆ ಸದಸ್ಯರು ನಗರಸಭೆ ಆಯುಕ್ತರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಾವೂ ಮಗುವನ್ನು ದತ್ತು ತೆಗೆದುಕೊಳ್ಳಬಾರದೇಕೆ – ಭಾಗ 3
ಪರಿಸರ ಅಥವಾ ಅನುವಂಶೀಯತೆ?
ಹೆಣ್ಣು ಮಗುವನ್ನು ದತ್ತು ಪಡೆದ ಮಧ್ಯವಯಸ್ಸಿನ ದಂಪತಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಆತಂಕವೆಂದರೆ ಈಗ ಬೆಳೆದು ದೊಡ್ಡವಳಾಗಿರುವ ಮಗಳು ಕೆಳವರ್ಗದ ಜನರ ಜೊತೆ ಹೆಚ್ಚು ಬೆರೆಯುತ್ತಾಳೆ, ಇದಕ್ಕೆ ಅನುವಂಶೀಯತೆ ಕಾರಣವಿರಬಹುದೇ?- ಎನ್ನುವುದು.
ಅನುವಂಶೀಯತೆ ಮತ್ತು ಪರಿಸರಗಳು ವ್ಯಕ್ತಿಯೊಬ್ಬನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದು ನಿರಂತರ ಚರ್ಚೆಯ ಮತ್ತು ಸಂಶೋಧನೆಯ ವಿಷಯ. ಎಲ್ಲರೂ ಒಪ್ಪುವ ವಿಚಾರವೆಂದರೆ ದೇಹದ ಬಣ್ಣ, ಆಕಾರ, ರೂಪ ಮುಂತಾದ ದೈಹಿಕ ಅಂಶಗಳನ್ನು ಅನುವಂಶೀಯತೆ ನಿರ್ಧರಿಸುತ್ತದೆ. ಇನ್ನು ಬುದ್ಧಿವಂತಿಕೆಯ ಮಟ್ಟದ ಮೇಲೆ ಅನುವಂಶೀಯತೆಯ ಪ್ರಭಾವ ಇರಬಹುದಾಗಿದ್ದರೂ, ಸಂಪೂರ್ಣವಾಗಿಯಂತೂ ಇಲ್ಲ. ಮಗುವಿಗೆ ಸೂಕ್ತ ಮಾರ್ಗದರ್ಶನ, ಉತ್ತೇಜನ ಮತ್ತು ಅವಕಾಶಗಳನ್ನು ನೀಡುವುದರ ಮೂಲಕ ಅದರಲ್ಲಿ ಇರುಬಹುದಾದ ಶಕ್ತಿಯ ಪೂರ್ಣ ಪ್ರಯೋಜನ ಪಡೆಯುವ ತರಬೇತಿ ನೀಡಲು ಪೋಷಕರಿಗೆ ಸಾಧ್ಯವಿದೆ.
ಆದರೆ ಗುಣ, ಸ್ವಭಾವ, ವರ್ತನೆ ಮುಂತಾದ ವ್ಯಕ್ತಿತ್ವದ ಅಂಶಗಳಲ್ಲಿ ಪರಿಸರವೇ ಪ್ರಮುಖವಾಗಿ ಪ್ರಭಾವ ಬೀರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳ ವ್ಯಕ್ತಿತ್ವವನ್ನು ತಮಗೆ ಬೇಕಾದಂತೆ ರೂಪಿಸಲು ಮತ್ತು ಅವರಿಗೆ ಉತ್ತಮ ಮಾದರಿಗಳನ್ನು ಒದಗಿಸಲು ಸಂಪೂರ್ಣ ಅವಕಾಶವಿರುತ್ತದೆ. ಇದನ್ನು ಉಪಯೋಗಿಸಿಕೊಳ್ಳದೆ ಅನುವಂಶೀಯತೆಯನ್ನು ದೂಷಿಸುವುದು ನಿಷ್ಪ್ರಯೋಜಕ. ಇದರ ಬಗೆಗೆ ಅಗತ್ಯವಿದ್ದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ನಮ್ಮ ಬಳಿ ಆಪ್ತಸಲಹೆಗೆ ಬಂದಿದ್ದ ಮೇಲಿನ ಘಟನೆಯಲ್ಲಿ ಪೋಷಕರಿಂದ ಹಂತಹಂತವಾಗಿ ಹೆಚ್ಚಿನ ವಿವರಗಳನ್ನು ಪಡೆಯುತ್ತಾ ಹೋದಂತೆ ತಿಳಿದ ವಿಚಾರ ಇದು-ಮಗುವಿನ ಮೇಲಿನ ಅತಿಯಾದ ಮಮಕಾರದಿಂದ ಸ್ನೇಹಿತರು ಅಥವಾ ಇತರ ವ್ಯಕ್ತಿಗಳೊಡನೆ ಸಹಜವಾಗಿ ಬೆರೆಯಲು ಪೋಷಕರು ಮಗುವಿಗೆ ಅವಕಾಶ ನೀಡಿರಲಿಲ್ಲ. ಬೆಳೆದು ನಿಂತ ಮಗಳ ಮೇಲೂ ಇಂತಹ ನಿರ್ಬಂಧ ಮುಂದುವರೆಸಿದ್ದರು. ಮನುಷ್ಯ ಸಂಪರ್ಕದ ತನ್ನ ಮಾನಸಿಕ ಹಸಿವನ್ನು ತೀರಿಸಿಕೊಳ್ಳಲು ಆ ಮುಗ್ಧ ಮಗು ಮನೆಯ ಅಥವಾ ತೋಟದ ಕೆಲಸದವರೊಡನೆ ನಗುತ್ತಾ ಬೆರೆಯುತ್ತಿತ್ತು. ಇದನ್ನೇ ಅನುವಂಶೀಯವಾಗಿ ಬಂದ ಕೀಳುಗುಣ ಎಂದು ಪೋಷಕರು ಹಣೆಪಟ್ಟಿ ಹಚ್ಚಿದ್ದರು.
ತಂದೆ ತಾಯಿಗಳಿಗೆ ಒಂದು ನಮ್ರ ಸಲಹೆಯೆಂದರೆ ಒಮ್ಮೆ ದತ್ತು ಪಡೆದು ಮಗುವನ್ನು ತಮ್ಮದಾಗಿಸಿಕೊಂಡ ಮೇಲೆ ಅದರ ಹಿನ್ನಲೆಗೆ ಮಗುವಿನ ಭವಿಷ್ಯದ ಯಾವುದೇ ಅಂಶಗಳನ್ನು ದಯವಿಟ್ಟು ಜೋಡಿಸಬೇಡಿ. ಮಗುವನ್ನು ತಮಗೆ ಬೇಕಾದಂತೆ ಬೆಳೆಸಲು ಸಾಧ್ಯತೆ ಇದೆ ಎನ್ನುವ ಮನೋಭಾವದಿಂದ ಮುಂದುವರೆದರೆ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಬಹುದು.
ಗುಟ್ಟು ಗುಟ್ಟಾಗಿರಬೇಕೆ?
ದತ್ತು ಪಡೆದ ಎಲ್ಲಾ ತಂದೆತಾಯಿಗಳು ಎದುರಿಸುವ ಸಾಮಾನ್ಯ ದ್ವಂದ್ವಗಳೆದರೆ- ಮಗುವಿಗೆ ದತ್ತಕದ ವಿಷಯವನ್ನು ತಿಳಿಸಬೇಕೇ?, ಹಾಗೆ ತಿಳಿಸುವುದಾದರೆ ಹೇಗೆ ಮತ್ತು ಯಾವಾಗ ತಿಳಿಸುವುದು ಮತ್ತು ಇದರ ಬಗೆಗೆ ಮುನ್ನೆಚ್ಚರಿಕೆ ಏನಾದರೂ ವಹಿಸಬೇಕೆ?- ಎನ್ನುವುದು.
ದತ್ತಕ ವಿಷಯವನ್ನು ಮಗುವಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಮತವಾದರೂ ಅದನ್ನು ಎಷ್ಟು ವಯಸ್ಸಿಗೆ ತಿಳಿಸಬೇಕು ಎನ್ನುವುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿನ ಗ್ರಹಿಕೆಯ ಮಟ್ಟವನ್ನು ಅನುಸರಿಸಿ ಆದಷ್ಟು ಬೇಗ ತಿಳಿಸುವುದು ಪೋಷಕರ ಮತ್ತು ಮಕ್ಕಳ ಸಂಬಂಧಕ್ಕೆ ಹಿತಕರ.
ಆದರೆ ಹೆಚ್ಚಿನ ಪೋಷಕರು ನಂಬಿರುವುದು ಮತ್ತು ಪಾಲಿಸುವುದು ದತ್ತಕದ ವಿಚಾರವನ್ನು ಗುಟ್ಟಾಗಿಡುವುದೇ ಒಳ್ಳೆಯದು ಎನ್ನುವುದು. ವಿಷಯವನ್ನು ಬಹಿರಂಗವಾಗಿಸಲು ಅವರಿಗಿರುವ ದೊಡ್ಡ ಆತಂಕವೆಂದರೆ, ಎಲ್ಲಾ ತಿಳಿದ ಮಗುವಿಗೆ ತಮ್ಮ ಮೇಲಿನ ಪ್ರೀತಿ ಆದರಗಳು ಕಡಿಮೆಯಾಗಬಹುದು ಮತ್ತು ತನ್ನ ಹೆತ್ತವರನ್ನು ಮಗು ಹುಡುಕಿಕೊಂಡು ಹೋಗಬಹುದು-ಎನ್ನುವುದು. ಅನಧಿಕೃತವಾಗಿ ದತ್ತು ಪಡೆದ ಪೋಷಕರಿಗೆ ಇನ್ನೂ ಇತರ ತೊಂದರೆಗೆ ಸಿಲುಕಿಕೊಳ್ಳುವ ಹೆಚ್ಚಿನ ಆತಂಕ ಸೇರಿರುತ್ತದೆ. ಹೀಗಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದಿದ್ದರೂ ದತ್ತಕವನ್ನು ಗುಟ್ಟಾಗಿಡುವುದು ಇದಕ್ಕೆ ಪರಿಹಾರವಲ್ಲ.
ಹಾಗೊಮ್ಮೆ ದತ್ತಕದ ವಿಷಯವನ್ನು ಪೋಷಕರು ಗುಟ್ಟಾಗಿ ಇಟ್ಟರೂ ಮಗು ದೊಡ್ಡದಾದ ಮೇಲೆ ಸುತ್ತಲಿನ ಯಾರಾದರೂ ಇದರ ಬಗೆಗೆ ಮಗುವಿಗೆ ಹೇಳಬಹುದು. ಯಾರೂ ಹೇಳದಂತೆ ತಡೆಯುವುದು ಪೋಷಕರ ಹಿಡಿತದಲ್ಲಿರುವುದಿಲ್ಲ. ಒಮ್ಮೆ ಮೂರನೆಯವರಿಂದ ಇದು ಮಗುವಿಗೆ ತಿಳಿದಾಗ ಅದರಲ್ಲಿ ಒಮ್ಮೆಲೆ ಪರಕೀಯ ಭಾವನೆ ಮೂಡುವುದಲ್ಲದೆ, ತಾನು ಇಷ್ಟು ದಿನ ಅಪ್ಪ ಅಮ್ಮ ಎಂದು ನಂಬಿದ್ದವರು ತನಗೆ ವಿಷಯ ತಿಳಿಸದೆ ಮೋಸ ಮಾಡಿದರು ಎಂದುಕೊಳ್ಳುತ್ತದೆ. ಇದರಿಂದ ಅವರ ಸಂಬಂಧದಲ್ಲಿ ಸರಿಪಡಿಸಲಾರದ ಕಂದಕ ಉಂಟಾಗುತ್ತದೆ. ಇದನ್ನು ತಪ್ಪಿಸಲು ಪೋಷಕರಿಗೆ ಇರುವ ಒಂದೇ ದಾರಿಯೆಂದರೆ ತಾವಾಗಿಯೇ ವಿಷಯವನ್ನು ಹೇಳುವುದು.
ಹಾಗಾದರೆ ಯಾವಾಗ ಮತ್ತು ಹೇಗೆ ಹೇಳುವುದು? ಇದರ ಬಗೆಗೆ ಯೋಚಿಸುವ ಮೊದಲು ಪೋಷಕರು ತಮ್ಮ ಮತ್ತು ಮಕ್ಕಳ ಬಾಂಧವ್ಯ ಗಟ್ಟಿಯಾಗಿದೆ ಎನ್ನವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ವಂತ ಮಕ್ಕಳಾದ ತನ್ನ ಸ್ನೇಹಿತರ ಪೋಷಕರಷ್ಟೇ ತಮ್ಮ ಅಪ್ಪ ಅಮ್ಮಂದಿರೂ ತನ್ನನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ ಎಂದು ಮಗುವಿಗೆ ಅನ್ನಿಸಿರಬೇಕು.
ಸಾಮಾನ್ಯವಾಗಿ ಮಗುವಿಗೆ ಸುಮಾರು ಹತ್ತು ವರ್ಷಗಳಾಗುವಷ್ಟರಲ್ಲಿ ದತ್ತಕದ ವಿಷಯವನ್ನು ತಿಳಿಸಬಹುದು. ಮಗುವಿನೊಡನೆ ಪೋಷಕರು ಇದರ ಬಗೆಗೆ ಖುದ್ದಾಗಿ ಮಾತನಾಡಬೇಕು. ಅಗತ್ಯವೆನ್ನಿಸಿದರೆ ಆಪ್ತಸಲಹೆಗಾರರ ಸಹಾಯ ಪಡೆದರೂ ದತ್ತಕದ ವಿಷಯವನ್ನು ಅವರ, ವೈದ್ಯರು, ಕುಟುಂಬದ ಆತ್ಮೀಯರ, ಅಜ್ಜ ಅಜ್ಜಿ ಮುಂತಾದವರ ಮೂಲಕ ಹೇಳಿಸಬಾರದು. ಪೋಷಕರಿಬ್ಬರೂ ಒಟ್ಟಾಗಿ ಕುಳಿತು ಮಾತನಾಡಬೇಕು. ಮಗು ಕೇಳುವವರೆಗೂ ಕಾಯದೇ ಪೋಷಕರೇ ಮೊದಲ ಹೆಜ್ಜೆ ಇಡಬೇಕು. ಹೇಳುವ ಮಾತುಗಳು ಸುಮಾರಾಗಿ ಈ ಧಾಟಿಯಲ್ಲಿರಬಹುದು.
“ಪುಟ್ಟಾ, ನೀನು ಸಿಗುವ ಮೊದಲು ಬಹಳ ವರ್ಷಗಳಿಂದ ನಮಗೆ ನಿನ್ನಂತದೇ ಒಂದು ಪುಟಾಣಿ ಇದ್ದರೆ ಎಷ್ಟು ಚನ್ನಾಗಿರುತ್ತದೆ ಅನ್ನಿಸುತ್ತಿತ್ತು. ಮನೆಯಲ್ಲಿ ಮಕ್ಕಳಿಲ್ಲದೆ ನಮಗೆ ಬಹಳ ಬೇಜಾರಾಗಿತ್ತು. ನಿನ್ನನ್ನು ನೋಡಿದ ಕೂಡಲೇ ನಮಗೆ ಬಹಳ ಆಸೆಯಾಯಿತು. ನೀನು ಯಾವ ಅಪ್ಪ ಅಮ್ಮನಿಂದ ಬಂದೆ ಅಂತ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರೋ ಒಬ್ಬ ಸ್ನೇಹಿತರು ನೀನಿರುವ ಸ್ಥಳವನ್ನು ತೋರಿಸಿ ಈ ಪುಟಾಣಿಗೆ ಅಪ್ಪ ಅಮ್ಮ ಬೇಕಾಗಿದೆ, ಅಂತ ಹೇಳಿದರು. ಹಾಗಾಗಿ ನಾವು ನಿನಗೆ ಅಪ್ಪ ಅಮ್ಮ ಆದೆವು. ಅವತ್ತಿನಿಂದ ನಾವೆಲ್ಲಾ ಒಟ್ಟಾಗಿ ನಗುನಗುತ್ತಾ ಬದುಕಿದೀವಿ. ನೀನು ಬಹಳ ಮುದ್ದಾಗಿ ಮತ್ತು ನಮಗೆ ಇಷ್ಟ ಆಗೋ ಹಾಗೆ ಇದ್ದೀಯಾ. ನೀನು ಯಾವಾಗಲೂ ನಮಗೆ ಬೇಕು”
ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡಬೇಕು. ಪೊಷಕರಲ್ಲಿರಬಹುದಾದ ಮುಜುಗರ, ಆತಂಕ, ಹಿಂಜರಿಕೆಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಅವುಗಳನ್ನು ನಿವಾರಿಸಿಕೊಂಡು ಸಹಜ ಮನಸ್ಥಿತಿಯಲ್ಲಿ ಮಾತನಾಡಲು ಪೋಷಕರಿಗೆ ಸಾಧ್ಯವಾಗಬೇಕು.
ಪ್ರಾರಂಭದ ಹಂತದಲ್ಲಿ ಮಗು ಅಳಬಹುದು, ಸಿಟ್ಟಾಗಬಹುದು, ಬೇಸರಮಾಡಿಕೊಳ್ಳಬಹುದು. ಆದರೆ ಪೋಷಕರು ತಮ್ಮ ಪ್ರೀತಿಯ ಅಭಿವ್ಯಕ್ತಿಯನ್ನು ಮುಂದುವರೆಸಿದರೆ ನಿಧಾನವಾಗಿ ಮಗು ವಾಸ್ತವವನ್ನು ಒಪ್ಪಿಕೊಳ್ಳುತ್ತದೆ.
ತಂದೆತಾಯಿಗಳ ಮಾತನ್ನು ಕೇಳಿದ ಮಗು ಬೇರೆ ಬೇರೆ ರೀತಿಯ ಪ್ರಶ್ನೆ ಕೇಳಬಹುದು. ಇಲ್ಲಿ ಎಚ್ಚರ ವಹಿಸಬೇಕಾದದ್ದು ಮಗುವಿಗೆ ಸುಳ್ಳು ಹೇಳಬಾರದು ಅಥವಾ ಮಗುವಿನ ಕುತೂಹಲವನ್ನು ಹತ್ತಿಕ್ಕಬಾರದು. ದತ್ತು ನೀಡಿದ ಸಂಸ್ಥೆ ಅಥವಾ ಇತರ ಆಪ್ತಸಲಹೆಗಾರರ ಸಹಾಯವನ್ನು ಪದೇಪದೇ ಉಪಯೋಗಿಸಬಹುದು.
ಈ ಎಲ್ಲಾ ಪ್ರಕ್ರಿಯೆ ಒಂದು ದಿನದಲ್ಲಿ ಮುಗಿಯುತ್ತದೆ ಎಂದು ಪೋಷಕರು ಅಪೇಕ್ಷಿಸಬಾರದು. ಕೆಲವೊಮ್ಮೆ ಹಂತಹಂತವಾಗಿ ಅಥವಾ ಹಲವಾರು ಬಾರಿ ಮಗುವಿಗೆ ಹೇಳಬೇಕಾಗಬಹುದು. ಇದರಿಂದ ದೊರೆಯಬಹುದಾದ ದೂರಾಗಮೀ ಉತ್ತಮ ಪರಿಣಾಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರು ಹತಾಶರಾಗದೆ ವ್ಯವಸ್ಥಿತವಾಗಿ ಕೆಲಸ ಮಾಡಬೇಕು.
ದತ್ತಕದ ವಿಷಯವನ್ನು ಭಾವೀ ಪತಿ ಅಥವಾ ಪತ್ನಿಗೆ ತಿಳಿಸುವುದು ಇಡೀ ಕುಟುಂಬದ ನಿರ್ಧಾರವಾಗಬೇಕು. ಎಲ್ಲಾ ವಿಚಾರವನ್ನು ತೆರೆದಿಡುವುದು ಮುಂದಿನ ಜೀವನದ ದೃಷ್ಟಿಯಿಂದ ಉತ್ತಮ. ಯಾವುದೇ ದೀರ್ಘಕಾಲದ ಆತ್ಮೀಯ ಸಂಬಂಧವನ್ನು ಸುಳ್ಳು ಹೇಳುವುದರ ಅಥವಾ ವಿಷಯಗಳನ್ನು ಗುಟ್ಟಾಗಿಡುವುದರ ಮೂಲಕ ಕಟ್ಟಲಾಗುವುದಿಲ್ಲ. ಪರಸ್ಪರ ನಂಬಿಕೆ ಗಟ್ಟಿ ಸಂಬಂಧಗಳ ಒಂದು ಅಡಿಗಲ್ಲು.
ಕೊನೆಯಲ್ಲಿ
ಜೀವನದಲ್ಲಿ ಮಕ್ಕಳು ನೀಡಬಹುದಾದ ಸಂತೋಷ ಮತ್ತು ಪೂರ್ಣತೆಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೋಷಕರು ದತ್ತಕದ ಬಗೆಗೆ ಯೋಚಿಸಬೇಕು. ಯಾವುದೇ ಹಂತದಲ್ಲಿಯೂ ಆತುರ ಪಡದೆ, ಎಲ್ಲಾ ಮಾಹಿತಿ ಪಡೆದು, ತಮ್ಮ ಅನುಮಾನ ಆತಂಕಗಳನ್ನು ಪರಿಹರಿಸಿಕೊಂಡು ಮುಂದುವರೆಯಬೇಕು. ಮಗುವನ್ನು ಆರಿಸುವಾಗ, ಬೆಳೆಸುವಾಗ ಗಾಳಿಗೋಪುರವನ್ನು ಕಟ್ಟದೆ ವಾಸ್ತವದ ಕಲ್ಪನೆ ಇಟ್ಟುಕೊಳ್ಳಬೇಕು. ಮಗು ಒಮ್ಮೆ ಮನೆಗೆ ಬಂದ ಮೇಲೆ ಹಿಂತಿರುಗಿ ನೋಡಬಾರದು.
ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಡಬೇಕಾದದ್ದು ಯಾವುದೂ ಸಮಸ್ಯೆಗಳೇ ಬಾರದಿದ್ದಾಗ ಮಾತ್ರ ದತ್ತು ಪಡೆದಿದ್ದು ಸಾರ್ಥಕವಾಯಿತು ಎಂದುಕೊಳ್ಳಬಾರದು. ಸ್ವಂತ ಮಕ್ಕಳಿರುವಾಗ ಕೂಡ ಸಮಸ್ಯೆಗಳಿದ್ದೇ ಇರುತ್ತವೆ. ಕಷ್ಟದ ಪರಿಸ್ಥಿತಿಗಳನ್ನು ಒಪ್ಪಿಕೊಂಡು ನಿಭಾಯಿಸುವುದನ್ನು ಕಲಿಯುವುದು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ. ಎಲ್ಲಾ ಹಂತದಲ್ಲಿಯೂ ಪೋಷಕರ ಮತ್ತು ಮಕ್ಕಳ ಸಹಾಯಕ್ಕೆ ದತ್ತು ಪಡೆದು ಸುಖಿಯಾಗಿ ಬದುಕುತ್ತಿರುವ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತಸಲಹೆಗಾರರು ಇದ್ದೇ ಇರುತ್ತಾರೆ.
ಮುಗಿಯಿತು.
ವಸಂತ್ ನಡಹಳ್ಳಿ
ಸ್ವಸ್ಥ ಸಮಾಜಕ್ಕಾಗಿ ಅರ್ಥಹೀನ ಕಂದಾಚಾರಗಳನ್ನು ತೊಡೆದುಹಾಕಿ
ಸಮಾಜದಲ್ಲಿ ಅಡಗಿರುವ ಜಾತೀಯತೆ, ಅಮಾನವೀಯ ಆಚರಣೆಗಳು, ಅರ್ಥಹೀನ ಕಂದಾಚಾರಗಳನ್ನು ತೊಡೆದುಹಾಕಿ ಸ್ವಸ್ಥ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ಅನಿವಾರ್ಯತೆಯಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಾಂಸ್ಕೃತಿಕ ಸಂಚಾಲಕ ಸಿ.ಎಂ.ಮುನಯ್ಯ ತಿಳಿದಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಭಾನುವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೫೯ ನೇ ಮಹಾಪರಿನಿರ್ವಾಣ ದಿನ ಹಾಗೂ ಪರಿವರ್ತನಾ ದಿನಾಚರಣೆ ಅಂಗವಾಗಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ರುದ್ರಭೂಮಿಯಲ್ಲಿ ದಾಸೋಹ – ಮೌಡ್ಯಾಚರಣೆಯ ವಿರುದ್ದ ಪರಿವರ್ತನೆಯ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಸಮುದಾಯಕ್ಕೆ ಮಾರಕವೆನಿಸುವ ಶೋಷಣೆ ಮತ್ತು ಹಿಂಸೆಗೆ ಕಾರಣವಾಗುವ ಮೌಢ್ಯಾಚರಣೆಗಳನ್ನು ಯಾವುದೇ ನಾಗರಿಕ ಸಮಾಜ ಒಪ್ಪಿಕೊಳ್ಳಬಾರದು. ಈಗಾಗಲೇ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದಿತ್ತು. ರಾಜ್ಯ ಸರ್ಕಾರ ಈ ಹಿಂದೆ ಮೌಡ್ಯಾಚರಣೆ ನಿಷೇದ ಕಾಯಿದೆ ಜಾರಿಗೆ ತರಲು ಯತ್ನಿಸಿತ್ತಾದರೂ ಕೆಲವು ಮೂಲಭೂತವಾದಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಈ ಮಸೂದೆಯ ಬಗ್ಗೆ ವಿವಾದ ಎಬ್ಬಿಸಿದ್ದರಿಂದ ಕಾಯಿದೆ ಜಾರಿಯಾಗದೇ ಮುಂದೂಡಲ್ಪಟ್ಟಿತು. ಕೂಡಲೇ ರಾಜ್ಯ ಸರ್ಕಾರ ಮೌಢ್ಯಾಚರಣೆ ನಿಷೇಧ ಕಾಯಿದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ದ.ಸಂ.ಸ ತಾಲ್ಲೂಕು ಸಂಚಾಲಕ ಎನ್.ವೆಂಕಟೇಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ೬೯ ವರ್ಷಗಳು ಕಳೆದರೂ ಕೂಡಾ ಇಂದಿಗೂ ತಮಗೆ ಸಿಗಬೇಕಾದಂತಹ ಸೌಲಭ್ಯಗಳಿಗಾಗಿ ದಲಿತರು ನಿರಂತರವಾಗಿ ಹೋರಾಟಗಳನ್ನು ನಡೆಸಬೇಕಾಗಿರುವಂತಹ ದುಸ್ಥಿತಿ ಬಂದಿದೆ. ಜೀವವಿರೋಧಿ ಮೌಡ್ಯಗಳು, ಕಂದಾಚಾರಗಳು, ಅಮಾನವೀಯ ಆಚರಣೆಗಳನ್ನು ಜನರ ಮೇಲೆ ನಿರಂತರವಾಗಿ ಹೇರುವಂತಹ ಪುರೋಹಿತಶಾಹಿ ಶಕ್ತಿಗಳು ಸಾವಿರಾರು ವರ್ಷಗಳಿಂದ ದಲಿತ ಸಮುದಾಯಗಳನ್ನು ಮತ್ತು ಮಹಿಳೆಯರನ್ನು ಶೋಷಣೆಗೆ ಒಳಪಡಿಸುತ್ತಾ ಬಂದಿದ್ದು ಇಂತಹ ಮೌಢ್ಯತೆಯ ಸಮಾಜ ಪರಿವರ್ತನೆಯಾಗದಿದ್ದರೆ ಮಾನವಕುಲಕ್ಕೆ ಉಳಿಗಾಲವಿಲ್ಲವೆಂದರು.
ದಲಿತ ಸಮುದಾಯವನ್ನು ಶೋಷಣೆಗೆ ಒಳಪಡಿಸಿ, ನಿರಂತರವಾಗಿ ದಬ್ಬಾಳಿಕೆ ನಡೆಸುವುದರೊಂದಿಗೆ ಸಂಪತ್ತು, ಅಧಿಕಾರ, ವಿದ್ಯೆ ಮತ್ತು ಅವಕಾಶಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಸಮಾಜದಲ್ಲಿನ ಶ್ರೇಣಿಕೃತ ಜಾತಿ ವ್ಯವಸ್ಥೆಯ ವಿಷಬೀಜವನ್ನು ಬಿತ್ತುತ್ತಿದ್ದ ಪುರೋಹಿತಶಾಹಿಗಳ ಕುತಂತ್ರದಿಂದ ದಲಿತರನ್ನು ಮೌಢ್ಯತೆಯ ಗುಲಾಮಗಿರಿಯಿಂದ ಮುಕ್ತಗೊಳಿಸಲು ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದ್ದಾರೆ. ಅವರ ಕನಸು ನನಸು ಮಾಡುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ದಲಿತರಲ್ಲಿ ಹಾಗೂ ಸಂಘಟಕರಲ್ಲಿ ಬರಬೇಕು ಎಂದರು.
ತಾಲ್ಲೂಕು ಸಂಘಟನಾ ಸಂಚಾಲಕರಾದ ಟಿ.ಎ.ಚಲಪತಿ, ಲಕ್ಷ್ಮೀನಾರಾಯಣ, ಹುಜುಗೂರು ವೆಂಕಟೇಶ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ೫೯ ನೇ ಮಹಾ ಪರಿನಿರ್ವಾಣ ದಿನ
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೫೯ ನೇ ಮಹಾ ಪರಿನಿರ್ವಾಣ ದಿನ ಅಂಗವಾಗಿ ದಸಂಸ ಪದಾಧಿಕಾರಿಗಳು ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಮೌಢ್ಯತೆಯನ್ನು ವಿರೋಧಿಸಿದರು.
ಬೈಕ್ ರ್ಯಾಲಿ
ತಾಲ್ಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಡಿಸೆಂಬರ್ ೬ ರ ಭಾನುವಾರದಂದು ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿದೆ.
ಬೆಳಗ್ಗೆ ೧೦ ಗಂಟೆಗೆ ನಗರದ ಪ್ರವಾಸಿ ಮಂದಿರದಿಂದ ಹೊರಡಲಿರುವ ಬೈಕ್ ರ್ಯಾಲಿಗೆ ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಚಾಲನೆ ನೀಡಲಿದ್ದಾರೆ.
ಕಳೆಗಿಡಗಳ ತಾಣ – ಪಿ.ಡಬ್ಲೂ.ಡಿ ಕಛೇರಿಯ ಆವರಣ
ಶಿಡ್ಲಘಟ್ಟದ ಪಿ.ಡಬ್ಲೂ.ಡಿ ಕಛೇರಿಯ ಆವರಣವು ಕಳೆಗಿಡಗಳ ತಾಣವಾಗಿದ್ದು, ಇಲ್ಲಿರುವ ಹಳೆಯ ಬಾವಿಯೂ ಕಾಣದಂತೆ ಸ್ವಚ್ಛತೆಯಿಲ್ಲದೆ ಸೊರಗುತ್ತಿದೆ.
ರಸ್ತೆಯಲ್ಲಿ ಹೊಂಡ
ಶಾಲಾ ಮಕ್ಕಳು ಹಾಗೂ ವೃದ್ಧರು ಹೆಚ್ಚಾಗಿ ಓಡಾಡುವ ಈ ರಸ್ತೆಯಲ್ಲಿನ ಹಳ್ಳವು ಕತ್ತಲಾದ ನಂತರ ಇಲ್ಲಿ ಬೆಳಕಿಲ್ಲದಿರುವುದರಿಂದ ತಿಳಿಯದೇ ಬೀಳುವ ಸಾಧ್ಯತೆಗಳಿವೆ. 16 ನೇ ವಾರ್ಡ್ಗೆ ಸೇರುವ ಈ ರಸ್ತೆಯ ಬದಿಯಲ್ಲಿ ಒಂದೆಡೆ ಕಳೆಗಿಡಗಳು ಮತ್ತೊಂದೆಡೆ ಈ ಹಳ್ಳವಿದ್ದು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗಿದೆ.
ನಗರಸಭೆಗೆ ಸರ್ಕಾರದಿಂದ ಲಕ್ಷಗಟ್ಟಲೆ ಹಣ ಬಂದರೂ ಕಾಮಗಾರಿ ಮಾತ್ರ ಕಳಪೆಯಾಗಿದ್ದು, ಜನರಿಗೆ ತೊಂದರೆಯುಂಟಾಗುತ್ತಿದೆ. ಅಧಿಕಾರಿಗಳು ಹಾಗು ಜನ ಪ್ರತಿನಿಧಿಗಳು ಇತ್ತಕಡೆ ಗಮನಿಸಿ ಸರಿಪಡಿಸಲು ಮುಂದಾಗಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮನೆಯೊಳಗೆ ಮನೆಯೊಡೆಯ ಇದ್ದಾನೋ . . .?
ಹೊಸ್ತಿಲಲಿ ಹುಲ್ಲು ಹುಟ್ಟಿ
ಬಾಗಿಲೊಳು ರಜವು ತುಂಬಿ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ
ಎಂಬ ಬಸವಣ್ಣನವರ ವಚನ ಸಾರ್ವಕಾಲಿಕ ಸತ್ಯವನ್ನು ಹೇಳುವಂಥದ್ದು. ಒಳಗಡೆಯ ಸಾರವನ್ನರಿಯಲು ಒಳಗಡೆಗೇ ಪ್ರವೇಶಮಾಡಬೇಕೆಂದಿಲ್ಲ ಹೊರಗಡೆ ಗಮನಿಸಿಯೇ ತೀರ್ಮಾನಕ್ಕೆ ಬರಲು ಸಾಧ್ಯ. ಮನೆಯೊಂದನ್ನು ಒಳಗಡೆ ನೋಡಬೇಕೆಂದಾದರೆ ಮೊದಲು ಕಕ್ಕಸು ಮತ್ತು ಸ್ನಾನದ ಮನೆಯೊಂದನ್ನು – ಅನಂತರ ಅಡುಗೆಮನೆಯನ್ನು ಗಮನಿಸಿದರೆ ಮನೆಯವರ ಶಿಸ್ತು ಸ್ವಚ್ಛತೆ ಗೋಚರವಾಗುತ್ತದೆ. ಮನೆ ಎಂದರೆ ಅಲ್ಲಿ ಮನೆಮಂದಿಯ ಜವಾಬ್ದಾರಿಯಿರುತ್ತದೆ. ಅದು ತಮ್ಮದೆಂಬ ಭಾವ ಜಾಗೃತವಾಗಿರುತ್ತದೆ. ಆ ಕಾರಣದಿಂದಾಗಿಯೇ ಸದಾ ಸ್ವಚ್ಛವಾಗಿ ಮತ್ತು ಆದಷ್ಟು ಆಕರ್ಷಣೀಯವಾಗಿ ಇರುತ್ತದೆ. ಆದರೆ ಇದೇ ಮಾತನ್ನು ಸಾರ್ವಜನಿಕ ಕಛೇರಿಯ ಕುರಿತು ಆಡುವಂತಿಲ್ಲ. ಸಾರ್ವಜನಿಕ ಆಸ್ತಿ ಎಂದರೆ ಅದು ಎಲ್ಲರ ಮತ್ತು ಯಾರದ್ದೂ ಅಲ್ಲದ ಕಾರಣದಿಂದಾಗಿ ಅಲಕ್ಷಕ್ಕೆ ಗುರಿಯಾಗಿರುವುದೇ ಹೆಚ್ಚು. ಅದರಲ್ಲೂ ವಿಶೇಷವಾಗಿ ಸರಕಾರಿ ಅಥವಾ ಖಾಸಗಿ ಕಾಲೇಜುಗಳನ್ನು ಬೇಕಿದ್ದರೆ ಗಮನಿಸಬಹುದು.
ಕಾಲೇಜುಗಳಿಗೆ ವಿದ್ಯಾರ್ಥಿಗಳು ಕಲಿಕೆಗಾಗಿ ಬರುತ್ತಾರೋ ಕಿಡಿಗೇಡಿತನದ ಪ್ರದರ್ಶನಕ್ಕಾಗಿ ಬರುತ್ತಾರೋ ತಿಳಿಯುವುದಿಲ್ಲ, ಎಲ್ಲರೂ ಹಾಗಂತ ಅಲ್ಲ. ವಾಸ್ತವವಾಗಿ ಕಿಡಿಗೇಡಿಗಳ ಸಂಖ್ಯೆ ಅತ್ಯಂತ ಕಡಿಮೆ. ಆದರೆ ಅವರು ಕ್ರಿಯಾಶೀಲರು, ಸಂಪನ್ನರ ಸಂಖ್ಯೆ ಜಾಸ್ತಿ. ಆದರೆ ಅವರು ಸಜ್ಜನ ನಿಷ್ಕ್ರಿಯರು ಹೀಗಾಗಿ ಪ್ರತಿಭಟನೆ ಇರದೆ ತಪ್ಪನ್ನು ತಪ್ಪೆಂದು ಖಂಡಿಸುವ ಛಾತಿಯಿರದೆ ನೋಡಿದರೂ ನೋಡದಂತೆ ತಮ್ಮ ಪಾಡಿಗೆ ತಾವೆಂದು ಭಾವಿಸುತ್ತಿರುವುದರಿಂದಲೇ ವ್ಯವಸ್ಥೆ ಮತ್ತಷ್ಟು ಹದಗೆಡುತ್ತ ಸಾಗುತ್ತಿದೆ ಎಂದು ಅನ್ನಿಸುತ್ತಿದೆ. ಕಾಲೇಜಿನ ಒಳಗೆ ಪ್ರವೇಶಿಸುವ ಪೂರ್ವದಲ್ಲೆ ಅಲ್ಲಿನ ವಿದ್ಯಾರ್ಥಿಗಳ ಸಂಸ್ಕಾರವನ್ನು ಹೇಳಲು ಸಾಧ್ಯ. ಗೋಡೆಯ ತುಂಬೆಲ್ಲ ಪಾದರಕ್ಷೆಯ ಗುರುತುಗಳು ಕಾಲನ್ನು ಗೋಡೆಗೆ ತಾಗಿಸಿ ನಿಲ್ಲುವುದೇ ಚಟವಾದ ವಿದ್ಯಾರ್ಥಿಗಳಿದ್ದಲ್ಲಿ ಯಾವ ಗೋಡೆಯನ್ನು ಸುಣ್ಣ-ಬಣ್ಣದಿಂದ ಚೆಂದ ಕಾಣುವಂತೆ ಇಡಲಾಗುವುದಿಲ್ಲ. ಸುತ್ತೆಲ್ಲ ಗುಟ್ಕಾ ಪ್ಯಾಕೆಟ್ ಚೂರುಗಳ ಚಾಕಲೇಟ್ ಕವರು ಇತ್ಯಾದಿಗಳನ್ನು ಸಮೃದ್ದವಾಗಿ ಹರಡುತ್ತಲೇ ಇದ್ದರೆ ಯಾವುದೇ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರುಗಳಿಂದ ಏನನ್ನೂ ಮಾಡಲಾಗುವುದಿಲ್ಲ. ಎಷ್ಟು ಎಂದು ಮಾಡುವುದು?
ಕಿಡಿಗೇಡಿತನವನ್ನೇ ವ್ಯಕ್ತಿತ್ವದ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಬರುವ ವಿದ್ಯಾರ್ಥಿಗಳನ್ನು ಹದ್ದು ಬಸ್ತಿನಲ್ಲಿಡುವುದು ಕಷ್ಟ. ಡೆಸ್ಕಿನ ತುಂಬೆಲ್ಲ ತರಹೇವಾರಿ ಬರವಣಿಗೆಗಳು – ಚಿತ್ರಗಳನ್ನು ಬಿಡಿಸಿರುತ್ತಾರೆ. ಬ್ಲೇಡಿನಿಂದಲು ಕೆತ್ತಿರುತ್ತಾರೆ. ಸ್ವಿಚ್ ಬೋರ್ಡ್‍ಗಳನ್ನೆ ಒಡೆಯುತ್ತಿರುತ್ತಾರೆ. ಹಾಕಿಸಿದಂತೆಲ್ಲ ಬಲ್ಬುಗಳನ್ನು ಒಡೆಯುತ್ತಾರೆ. ಬೋರ್ಡ್‍ಗಳ ಮೇಲೂ ಬೇಕಾಬಿಟ್ಟಿ ಬರೆದು – ಶಿಕ್ಷಕರು ಮತ್ತಲ್ಲಿ ಬರೆಯಲು ಬಾರದಂತೆ ಮಾಡಿರುತ್ತಾರೆ. ಹೀಗಾದಾಗ ಕಲ್ಪಿಸಿದ ಸೌಲ್ಯಭ್ಯಗಳು ಸದುಪಯೋಗಕ್ಕೆ ಬಾರದೆ ಹೋಗುತ್ತದೆ. ದೀಪಗಳು ಪ್ರಕಾಶಿಸುವುದಿಲ್ಲ. ಫ್ಯಾನುಗಳು ತಿರುಗುವುದಿಲ್ಲ, ಡೆಸ್ಕ್‍ಗಳನ್ನು ನೋಡಿದರೆ ಕೂಡ್ರುವುದೇ ಹೇಸಿಗೆ ಎನ್ನಿಸುತ್ತದೆ. ಜೊತೆಗೆ ತರಗತಿಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುವ ಬೇಂಚುಗಳ ಪಕ್ಕದ ಗೋಡೆಗಳ ತುಂಬೆಲ್ಲ ವಿವಿಧ ವಿಷಯಗಳ ಟಿಪ್ಪಣಿಗಳನ್ನು ಬರೆದಿರುತ್ತಾರೆ. ಪರೀಕ್ಷಾ ಸಮಯದಲ್ಲಿ ಕಾಪಿ ಹೊಡೆಯಲು ಅನುಕೂಲವಾಗಲಿ ಎಂದು ಚೀಟಿ ತಂದಿದ್ದರೆ ಪರೀಕ್ಷಾ ಸಮಯದಲ್ಲಿ ಅದು ಕೊಠಡಿ ಮೇಲ್ವಿಚಾರಕರ ಕೈಗೆ ಸಿಕ್ಕರೆ ಅಥವಾ ವಿಶ್ವವಿದ್ಯಾನಿಲಯ ನೇಮಿಸಿದ ವೀಕ್ಷಕರಿಗೆ ಗೋಚರಿಸಿದರೆ ಅಥವಾ ಪರೀಕ್ಷಾ ಜಾಗೃತದಳದವರ ತಪಾಸಣೆಯ ವೇಳೆಯಲ್ಲಿ ಪತ್ತೆಯಾದರೆ – ಪರೀಕ್ಷೆಯಿಂದ ಡಿಬಾರಾಗುವ ಸಾಧ್ಯತೆಯಿದೆ. ಆದೇ ಡೆಸ್ಕ್‍ಗಳ ಮೇಲೆ – ಪಕ್ಕದ ಗೋಡೆಗಳ ಮೇಲೆ ಬರೆಯಲ್ಪಟ್ಟರೆ – ಎದುರಾಗಬಹುದಾದ ಅಪಾಯದಿಂದ ಪಾರಾಗಬಹುದೆಂಬ ಲೆಕ್ಕಾಚಾರ ವಿದ್ಯಾರ್ಥಿಗಳದ್ದು. ಈ ರೀತಿಯಾಗಿ ಡೆಸ್ಕುಗಳ ಮೇಲೆ ಗೋಡೆಗಳ ಮೇಲೆ ಬರೆಯಲು ವಿನಿಯೋಗಿಸುವ ಶ್ರಮ ಮತ್ತು ವೇಳೆಯನ್ನು ಓದಿನ ಕಡೆಗೆ ಬಳಸಿದ್ದರೆ ಖಂಡಿತವಾಗಿಯೂ ಅವರೆಲ್ಲ ಉತ್ತಮ ಅಂಕಗಳಿಸಿ ಉತ್ತೀರ್ಣರಾಗುತ್ತಿದ್ದರು. ಆದರೆ ಇಂದಿನ ಕೆಲವು ಕಿಡಿಗೇಡಿಗಳಿಗೆ ನೇರವಾದ ಮಾರ್ಗದಲ್ಲಿ ನಂಬಿಕೆಯಿಲ್ಲ, ಆಸಕ್ತಿಯೂ ಇಲ್ಲ.
ಇದರೊಟ್ಟಿಗೇ ಗ್ರಂಥಾಲಯದಲ್ಲಿ ಕೂಡ ಪುಸ್ತಕಗಳ ಹಾಳೆಗಳನ್ನು ಕೀಳುವುದು, ಪುಸ್ತಕಗಳ ಒಳಗಿನ ಮಾಹಿತಿಗಳನ್ನು ಕತ್ತರಿಸುವುದು ಇತ್ಯಾದಿ ಕಿಡಿಗೇಡಿತನ ಪ್ರದರ್ಶಿಸುತ್ತಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ಓದಲು ಬರುವ ವಿದ್ಯಾರ್ಥಿಗಳಿಗೆ – ಸಂಸ್ಥೆಯಲ್ಲಿರುವ ಪುಸ್ತಕಗಳು ದೊರಕದೆ ಅವರು ಪರದಾಡುವಂತಾಗುತ್ತದೆ. ಗ್ರಂಥಪಾಲಕರಿಗೂ ಇವರ ಆಗಮನವೇ ಭಯಾನಕವಾಗಿರುತ್ತದೆ. ದಿನಗಳೆದಂತೆ ಅವರಲ್ಲೂ ವಿದ್ಯಾರ್ಥಿಗಳಿಗೆ ಸಹಾಯಮಾಡಬೇಕೆಂಬ ಕಾಳಜಿ ಕಣ್ಮರೆಯಾಗುತ್ತ ಸಾಗುತ್ತಿದೆ. ಹಾಗೇ ನೀರಿನ ನಲ್ಲಿ ಮುರಿಯುವುದು, ಶೌಚಾಲಯಗಳನ್ನು ಹಾಳುಮಾಡುವುದು ಇತ್ಯಾದಿಗಳಿಂದಾಗಿ – ಓದುವವರಿಗೆ ತೊಡಕು ಮತ್ತು ಅಂಥ ಒಂದು ವಾತಾವರಣದ ಸೃಷ್ಟಿಗೆ ಧಕ್ಕೆಯಾಗುತ್ತಿರುವುದು ವರ್ತಮಾನದ ಸತ್ಯ. ಸೈಕಲ್ ಸ್ಟಾಂಡ್ (ಅಲ್ಲೀಗ ಮೊಪೆಡ್, ಬೈಕು, ಕಾರುಗಳು ಮಾತ್ರ ಇರುತ್ತವೆ) ದಲ್ಲಿ ಕೂಡ ಕಿಡಿಗೇಡಿತನ ನೆರೆವೇರಿಸುತ್ತಾ – ಟೈರಿನ ಗಾಳಿ ತೆಗೆಯುವುದು – ಸೀಟಿನ ಕವರ್ ಹರಿಯುವುದು – ವಾಹನದ ಮೇಲೆಲ್ಲ ಗೀರುವುದು ಬಹುಶಃ ಅನಾಗರೀಕ ಸಂಸ್ಕøತಿಯ ಲಕ್ಷಣವಲ್ಲದೆ ಮತ್ತೇನೂ ಆಗಿರಲಿಕ್ಕೆ ಸಾಧ್ಯವಿಲ್ಲ. ತಮ್ಮ ಮನೆಯಾಗಿದ್ದರೆ ಅವರು ಹೀಗೆ ಮಾಡುತ್ತಿದ್ದರೆ? ಸರಕಾರ ಮತ್ತು ಸಾರ್ವಜನಿಕರ ಸ್ವತ್ತನ್ನು ಹೀಗೆ ಹಾಳುಗೆಡವುದರಿಂದ ಸಾಧಿಸುವುದಾದರು ಏನನ್ನು? ಪ್ರಾಂಶುಪಾಲರು – ಶಿಕ್ಷಕರು ಪದೇ ಪದೇ ತಿಳಿಹೇಳಿದಾಗ್ಯೂ ತಿದ್ದಿಕೊಳ್ಳದವರೆದುರು ಅವರೂ ಅಸಹಾಯಕರಾಗುತ್ತಾರೆ.
ಪದ್ಧತಿಯನ್ನು ಬದಲಾಯಿಸಿ – ಸುಂದರ ವಾತಾವರಣ ಸೃಷ್ಠಿಸುವುದರತ್ತ ನಮ್ಮೆಲ್ಲರ ಚಿತ್ತ ಹರಿಯಬೇಕಿದೆ. ಮೊದಲು ಕಿಡಿಗೇಡಿಗಳಿಗೆ ಬುದ್ಧಿ ಹೇಳುವುದು, ಹಾಜರಾತಿಯನ್ನು ಕಡ್ಡಾಯಗೊಳಿಸುವುದು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು. ಹೀಗಾದರೆ ವರ್ಷವಿಡೀ ತರಗತಿಯ ಹೊರಗಡೆಯೇ ಅಡ್ಡಾಡುವ ಪಡ್ಡೆ ಹುಡುಗರನ್ನು ನಿಯಂತ್ರಿಸಲು ಸಾದ್ಯ. ತರಗತಿಗಳು ನಡೆಯುತ್ತಿರುವಾಗಲೆ ಹೊರಗಡೆ ಸುತ್ತಾಡುವವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸುವ ಪೂರ್ವದಲ್ಲಿ ಅವರ ಪಾಲಕರುಗಳಿಗೆ ಮಾಹಿತಿ ನೀಡಿದರೆ ಸೂಕ್ತ. ಯಾವ ಪಾಲಕರಿಗೂ ತಮ್ಮ ಮಕ್ಕಳು ಉಡಾಳರಾಗಿ ಬೆಳೆಯುವುದು ಬೇಕಾಗಿರುವುದಿಲ್ಲ. ಇದನ್ನೂ ಅಲಕ್ಷಿಸಿದ ಪಕ್ಷದಲ್ಲಿ ಅವರನ್ನು ಅಲ್ಲಿಂದ ಹೊರ ಹಾಕುವುದೇ ಬಹಳ ಯುಕ್ತವಾದ ಮಾರ್ಗ. ಬುಟ್ಟಿಯೊಂದರಲ್ಲಿ ಇರುವ ಒಳ್ಳೆಯ ಹಣ್ಣುಗಳ ಜೊತೆ ಕೆಟ್ಟದೊಂದು ಸೇರಿದರೆ ಕಷ್ಟ, ಇಡೀ ಬುಟ್ಟಿಯ ಹಣ್ಣುಗಳು ಹಾಳಾಗುವುದಕ್ಕೆ ಮುನ್ನ ಕೆಟ್ಟಿದ್ದನ್ನಷ್ಟೇ ಕಿತ್ತೆಸೆಯುವುದು ಸೂಕ್ತವೇನೋ? ಕಾಪಿ ಹೊಡೆಯುವ ಪಿಡುಗಿನಿಂದ ಪಾರುಮಾಡುವ ಸಲುವಾಗಿ ನಾವು ಬೇಸರದಿಂದ ಆದರೆ ಗಂಭೀರವಾಗಿ ನೀಡಬಹುದಾದ ಸಲಹೆಯೆಂದರೆ – ಎಲ್ಲ ಡೆಸ್ಕುಗಳಿಗೂ ಡಾಂಬರನ್ನು ಹೊಡೆಯುವುದು ಅಷ್ಟನ್ನೂ ಕಪ್ಪು ಬಣ್ಣದಿಂದ ತುಂಬಿದರೆ – ಬರೆದುಕೊಳ್ಳಲು ಅಸಾಧ್ಯ. ಹಾಗೇ ಕೊಠಡಿಯೊಳಗಿನ ಗೋಡೆಗಳಿಗೆ – ನೆಲದಿಂದ ಕನಿಷ್ಠ ಐದು ಅಡಿಗಳವರೆಗೆ ಕಡುಗಪ್ಪು ಬಣ್ಣವನ್ನು ಬಳಿಯಬೇಕು ತರಗತಿಯ ಸೌಂದರ್ಯ ಹಾಳಾಗುತ್ತದೆ ನಿಜ. ಆದರೆ ಸೌಂದರ್ಯ ಪ್ರಜೆÐಯೇ ಇರದವರಿಗೆ ಪಾಠ ಕಲಿಸುವುದೂ ಇಂದಿನ ಅಗತ್ಯ, ಹಾಗೆ ಹೊರಗಡೆಯ ಗೋಡೆಗಳಿಗೂ – ನಾಲ್ಕು ಅಡಿಗಳವರೆಗೆ ಮಣ್ಣಿನ ಬಣ್ಣವನ್ನು ಮೆತ್ತಿಡುವುದು ಸೂಕ್ತವಾಗಬಹುದು. ಇನ್ನು ಲೈಟಿನ ಸ್ವಿಚ್ ಒಡೆಯುವುದು – ನಲ್ಲಿಗಳನ್ನು ಮುರಿದು ಹಾಕುವುದು – ಕುರ್ಚಿ – ಬೇಂಚ್‍ಗಳ ಅಂದಗೆಡಿಸುವುದು ನಡೆದರೆ – ಮತ್ತೆ ಮತ್ತೆ ಸರಿಮಾಡಿಸುವುದಕ್ಕೆ ಬದಲಾಗಿ ಆ ವರ್ಷವಿಡೀ ಅವರು ಅದರಲ್ಲೇ ಹೊಂದಿಕೊಳ್ಳುವ ಅನಿವಾರ್ಯತೆಯ ಶಿಕ್ಷೆ ನೀಡಬೇಕು. ಇದರಿಂದ ಓದಲಿಕ್ಕಾಗಿಯೇ ಬಂದ ಸಂಪನ್ನ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದು ನಿಜ. ಆದರೆ ಅವರಿಗೂ ಜವಾಬ್ದಾರಿ ಬರಬೇಕಾದ ಅಗತ್ಯವಿದೆ, ಯಾರು ಹಾಳುಗೇಡಿಗಳೋ ಅವರನ್ನು ಸರಿದಾರಿಗೆ ತರುವ ಅಥವಾ ಕನಿಷ್ಟ ಪಕ್ಷ ಅಂಥವರ ಕುರಿತು ಸಂಸ್ಥೆಗೆ ಸಂಬಂಧಿಸಿದವರ ಹತ್ತಿರ ಮಾಹಿತಿಯನ್ನಾದರೂ (ಗುಟ್ಟಿನಲ್ಲಿ ಬೇಕಾದರೆ) ನೀಡುವ ಧೈರ್ಯ ತೋರುವಂತಾಗಬೇಕು. ಇಷ್ಟೂ ಸಾಧ್ಯವಾಗದ ಪಕ್ಷದಲ್ಲಿ ಅವರು ಎಷ್ಟೇ ಅಧ್ಯಯನ ಮಾಡಿ – ಎಷ್ಟೇ ಅಂಕಗಳನ್ನು ಪಡೆದು ಉತ್ತೀರ್ಣರಾದರೂ – ಮುಂದೆ ಇದೇ ಸಮಾಜದಲ್ಲಿ ಧೈರ್ಯದಿಂದ ಬದುಕಲಾರರು. ಹೇಡಿಗಳಾಗಿಬಿಡುವ ಅಪಾಯವಿದೆ. ಬದುಕಿನಲ್ಲಿ ದಿಟ್ಟತನ ತೋರುವ – ಸಶಕ್ತ ಸುಶಿಕ್ಷಿತರನ್ನು ದೇಶವಿಂದು ಬಯಸುತ್ತದೆ.
ರವೀಂದ್ರ ಭಟ್ ಕುಳಿಬೀಡು.
ನೂತನ ತಹಶೀಲ್ದಾರ್
ತಾಲ್ಲೂಕು ದಂಡಾಧಿಕಾರಿಯಾಗಿ ಕೆ.ಎಂ. ಮನೋರಮಾ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇವರು ಶಿಡ್ಲಘಟ್ಟ ತಹಶೀಲ್ದಾರ್ ಆಗಿ ಅಧಿಕಾರವಹಿಸಿಕೊಂಡಿದ್ದಾರೆ. ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿ.ಎ.ನಾರಾಯಣಸ್ವಾಮಿ ಅವರನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರವಹಿಸಿಕೊಂಡ ನಂತರ ಕೆ.ಎಂ. ಮನೋರಮಾ, ವಿಧಾನಪರಿಷತ್ತಿನ ಚುನಾವಣೆಯನ್ನು ಮುಕ್ತವಾಗಿ ಮಾಡಲು ಆದ್ಯತೆ ನೀಡುವುದಾಗಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ ತಾಲ್ಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಮಣ್ಣಿನ ಪರೀಕ್ಷೆ ಕಡ್ಡಾಯ
ಮಣ್ಣಿನ ಫಲವತ್ತತೆಯನ್ನು ಆಧರಿಸಿ ರಸಗೊಬ್ಬರಗಳನ್ನು ಬಳಸುವ ಮೂಲಕ ಅಧಿಕ ಇಳುವರಿಯನ್ನು ಪಡೆಯಬಹುದೆಂದು ಸಹಾಯಕ ಕೃಷಿ ನಿರ್ದೇಶಕ ದೇವೇಗೌಡ ತಿಳಿಸಿದರು.
ವಿಶ್ವ ಮಣ್ಣಿನ ದಿನದ ಅಂಗವಾಗಿ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಕೃಷಿ ಇಲಾಖೆಯ ವತಿಯಿಂದ ಶನಿವಾರ ರೈತರಿಗೆ ಅರಿವು ಮೂಡಿಸುವ ಸಲುವಾಗಿ ನಡೆದ ‘ಮಣ್ಣಿನ ಆರೋಗ್ಯ ನಿರ್ವಹಣೆ ಮತ್ತು ಸುರಕ್ಷಿತ ಕೀಟನಾಶಕ ಬಳಕೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ರೈತರೂ ಮಣ್ಣಿನ ಪರೀಕ್ಷೆಯನ್ನು ಖಡ್ಡಾಯವಾಗಿ ಮಾಡಿಸಬೇಕು. ಮಣ್ಣಿನ ಪರೀಕ್ಷೆಯ ಅಂಕಿ ಅಂಶಗಳನ್ನು ಗಣಕೀಕೃತಗೊಳಿಸಲಾಗುತ್ತದೆ. ಇದರಿಂದ ರೈತರು ಯಾವ ಬೆಳೆ ಬೆಳೆಯಬಹುದು, ಅದಕ್ಕೆ ಬೇಕಾಗುವ ಪೌಷ್ಠಿಕಾಂಶಗಳೇನು ಮತ್ತು ಕಾಲಾನುಕ್ರಮದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳಬಹುದು. ಮಣ್ಣಿನ ಪರೀಕ್ಷೆಯ ಸಲುವಾಗಿ ಅಧಿಕಾರಿಗಳು ರೈತರ ಭೂಮಿಗಳಿಗೆ ಭೇಟಿ ನೀಡಲಿದ್ದು ಸಹಕರಿಸಬೇಕೆಂದು ಹೇಳಿದರು.
ಕೃಷಿ ಇಲಾಖೆಯಿಂದ ಯಾವುದೇ ಪ್ರಯೋಜನವನ್ನು ಹೊಂದಲು ಮಣ್ಣಿನ ಪರೀಕ್ಷೆ ಖಡ್ಡಾಯವಾಗಿದೆ. ಬೆಳೆಯಿದ್ದಾಗ ಪರೀಕ್ಷೆಗೆ ಮಣ್ಣಿನ ಸಂಗ್ರಹಣೆ ಮಾಡಬಾರದು. ತಿಪ್ಪೆಗೊಬ್ಬರವಿರುವೆಡೆ, ಕಳೆಗಳಿರುವ ಜಾಗದಲ್ಲೂ ಮಾಡಬಾರದು. ಬೆಳೆ ಕಟಾವು ಮಾಡಿದ ನಂತರ ಮಣ್ಣಿನ ಪರೀಕ್ಷೆಯನ್ನು ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸುರಕ್ಷಿತ ಕೀಟ ನಾಶಕಗಳ ಬಳಕೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವಿಕೆಯ ಬಗ್ಗೆಯೂ ರೈತರಿಗೆ ಮಾಹಿತಿಯನ್ನು ನೀಡಲಾಯಿತು.
ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ರವಿಪ್ರಕಾಶ್, ತಾದೂರು ಮಂಜುನಾಥ್, ಪ್ರತೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
ತಾಲ್ಲೂಕಿನ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಶಿಡ್ಲಘಟ್ಟದ ಪ್ರಗತಿಪರ ಕುರಿ ಸಾಗಾಣಿಕೆದಾರರ ಸಹಕಾರ ಸಂಘದಿಂದ ಈಚೆಗೆ ಬೆಂಗಳೂರಿನಲ್ಲಿರುವ ಪಶುವೈದ್ಯಕೀಯ ಕಾಲೇಜಿನ ಆವರಣದ ತಂತ್ರಜ್ಞಾನ ವರ್ಗಾವಣೆ ಕೇಂದ್ರದಲ್ಲಿ ನುರಿತ ಅಧ್ಯಾಪಕರಿಂದ ತರಬೇತಿ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಕುರಿ ಮತ್ತು ಮೇಕೆ ವೈಜ್ಞಾನಿಕ ಸಾಕಾಣಿಕೆ, ಕುರಿ ಮತ್ತು ಮೇಕೆಗಳಲ್ಲಿ ಬರುವ ವಿವಿಧ ರೋಗಗಳ ಬಗ್ಗೆ ಮಾಹಿತಿ, ಮುಂಜಾಗ್ರತೆ ಕ್ರಮದ ಬಗ್ಗೆ, ಬ್ಯಾಂಕ್ ಸಾಲದ ಬಗ್ಗೆ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಬರುವ ಎಲ್ಲಾ ಸೌಲಭ್ಯಗಳನ್ನು, ವಿವಿಧ ರೀತಿಯ ತಳಿಯ ಪರಿಚಯ ಹಾಗೂ ವಿವಿಧ ರೀತಿಯ ಮೇವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಕೌಶಲ್ಯ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಹಾಗೂ ಭಾರತ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿಕೊಡಲಾಯಿತು.
ಕುರಿ ಮತ್ತು ಮೇಕೆಗಳ ಸಾಕಾಣಿಕೆಗೆ ಅವಶ್ಯವಿರುವ ವಿವಿಧ ತರವಾದ ಕೊಟ್ಟಿಗೆಗಳನ್ನು ಹಾಗೂ ವಿವಿಧ ತರವಾದ ಮೇವು ಬೆಳೆಯುವ ಬಗ್ಗೆ ಪ್ರಾತ್ಯಕ್ಷತೆಯ ಮುಖಾಂತರ ಭಾಗವಹಿಸಿದವರಿಗೆ ತಿಳಿಯಪಡಿಸಲಾಯಿತು.
ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾರಿಗೂ ಉಚಿತವಾಗಿ ಶಿಡ್ಲಘಟ್ಟದಿಂದ ವಾಹನ ಸೌಕರ್ಯ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿದ್ದು, ತರಬೇತಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಒಂದು ದಿನದ ತರಬೇತಿ ಕಾರ್ಯಕ್ರಮದ ಪ್ರಮಾಣಪತ್ರವನ್ನು ವಿತರಿಸಲಾಯಿತು.
‘ನಮ್ಮ ಸಂಘದ ವತಿಯಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಿಗಮ ಮತ್ತು ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ನಮ್ಮ ಸಂಘದ ಸದಸ್ಯರುಗಳಿಗೆ ನೀಡಲಾಗಿದೆ. ಈ ಬಾರಿ ಜೀವ ವಿಮೆಯ ಕೇಂದ್ರೀಯ ಭೇಡ್ಪಾಲಕ್ ಯೋಜನೆಯಡಿಯಲ್ಲಿ ಸುಮಾರು ೩೭೮ ಜನರಿಗೆ ಜೀವ ವಿಮೆ ಮಾಡಿಸಲಾಗಿದೆ. ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಉಚಿತವಾಗಿ ಮೇವು ಕತ್ತರಿಸುವ ಯಂತ್ರಗಳನ್ನು ನೀಡಿದ್ದು, ಬಿತ್ತನೆ ಟಗರು ಯೋಜನೆಯ ತಳಿ ಅಭಿವೃದ್ಧಿಯಲ್ಲಿ ರ್ಯಾಂಬುಲೇಟ್ ಮಿಶ್ರತಳಿ ಟಗರುಗಳನ್ನು ನಮ್ಮ ಸಂಘದ ಸದಸ್ಯರುಗಳಿಗೆ ನೀಡಲಾಗಿದೆ. ತಾಲ್ಲೂಕಿನ ಅನೇಕ ಕಡೆ ಉಚಿತವಾಗಿ ಜಂತುನಾಶಕ ಔಷಧಿಗಳು ಹಾಗೂ ಮಿನರಲ್ ಮಿಕ್ಷರ್ಗಳನ್ನು ಕುರಿಗಾರರಿಗೆ ಶಿಬಿರಗಳ ಮೂಲಕ ಉಚಿತವಾಗಿ ನೀಡಲಾಗಿದೆ. ಬಿತ್ತನೆ ಮೇವು ಬೀಜಗಳನ್ನು ನಮ್ಮ ಸಂಘದ ಸದಸ್ಯರುಗಳಿಗೆ ಉಚಿತವಾಗಿ ನೀಡಲಾಗಿದೆ’ ಎಂದು ಪ್ರಗತಿಪರ ಕುರಿ ಸಾಗಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷರಾದ ಬಳುವನಹಳ್ಳಿ ಲೋಕೇಶ್ಗೌಡ ತಿಳಿಸಿದರು.
ಕ್ರೀಡಾಕೂಟ ಉದ್ಘಾಟನೆ
ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಾಟ್ಪುಟ್ ಎಸೆಯುವ ಮೂಲಕ ಶಾಸಕ ಎಂ.ರಾಜಣ್ಣ ಉದ್ಘಾಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್ ಹಾಜರಿದ್ದರು.
ಸರ್ಕಾರಿ ನೌಕರರ ಮೇಲೆ ಹೆಚ್ಚಿನ ಒತ್ತಡವಿದೆ
ಜಿಲ್ಲೆಯಲ್ಲಿ ಸಾವಿರಾರು ಸರ್ಕಾರಿ ನೌಕರರ ಹುದ್ದೆಗಳು ಖಾಲಿಯಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ನೌಕರರ ಮೇಲೆ ಹೆಚ್ಚಿನ ಒತ್ತಡ ಬಿದ್ದಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಸಿ.ರೆಡ್ಡಪ್ಪ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವೂ ಕೂಡ ಏಳನೇ ವೇತನ ಆಯೋಗ ಅನುಷ್ಟಾನಗೊಳಿಸಬೇಕೆಂದು ಒತ್ತಡ ಹೇರಲಾಗುತ್ತಿದ್ದು, ಸರ್ಕಾರದೊಂದಿಗೆ ಮಾತುಕತೆ ನಡೆದಿದೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸರ್ಕಾರಿ ನೌಕರರು ತಮ್ಮ ಕ್ರಿಯಾಶಿಲತೆಯನ್ನು ಪ್ರದರ್ಶಿಸಲು ಹಾಗೂ ಒತ್ತಡ ನಿವಾರಣೆಗಾಗಿ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಉತ್ಸಾಹ ಮತ್ತು ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವಂತೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ 2000 ಮಂದಿ ಸರ್ಕಾರಿ ನೌಕರರಿದ್ದು, ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಕೆಲವೇ ಮಂದಿ ಭಾಗವಹಿಸಿರುವುದು ದುರದೃಷ್ಟಕರ. ಕ್ರೀಡಾಕೂಟಕ್ಕೆ ಹಾಜರಾದವರಿಗೆ ಮಾತ್ರ ಹಾಜರಾತಿ ಪತ್ರವನ್ನು ನೀಡಬೇಕು. ಈ ಕಾರ್ಯಕ್ರಮದ ನೆಪದಲ್ಲಿ ರಜೆ ಹಾಕುವುದು ತಪ್ಪು ಎಂದರು.
ಈ ಸಂದರ್ಭದಲ್ಲಿ ಹಿರಿಯ ಕ್ರೀಡಾಪಟು ಹಾಗೂ ನಿವೃತ್ತ ಶಿಕ್ಷಕ ವಿ.ಮುನಿರಾಜು ಮತ್ತು ರಾಷ್ಟ್ರೀಯ ಮಟ್ಟಕ್ಕೆ 400 ಮೀಟರ್ ಹರ್ಡಲ್ಸ್ಗೆ ಆಯ್ಕೆಯಾದ ಅನಂತರಾಜು ಅವರನ್ನು ಸನ್ಮಾನಿಸಲಾಯಿತು.
ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ತಾಲ್ಲೂಕು ಪಂಚಾಯತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಕೆ.ಎನ್.ಸುಬ್ಬಾರೆಡ್ಡಿ, ಅಕ್ಕಲರೆಡ್ಡಿ, ಆರ್.ಕೇಶವರೆಡ್ಡಿ, ಸಿ.ಎಂ.ಮುನಿರಾಜು, ಗ್ರೇಡ್ 2 ತಹಶಿಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ್ ನರೇಂದ್ರಬಾಬು, ಶ್ರೀರಾಮಯ್ಯ, ಗೌಸ್ಪೀರ್, ಬೈರಾರೆಡ್ಡಿ, ಮುನಿರಾಜು, ಬಿ.ಆರ್.ನಾರಾಯಣಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೌಢ್ಯಾಚರಣೆ ವಿರುದ್ಧ ರುದ್ರಭೂಮಿಯಲ್ಲಿ ದಾಸೋಹ
ಮೌಢ್ಯಾಚರಣೆ ವಿರುದ್ಧ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಮಳ್ಳೂರು ಗ್ರಾಮದ ಸಾರ್ವಜನಿಕ ಸ್ಮಶಾನದಲ್ಲಿ ಉಪಹಾರವನ್ನು ಏರ್ಪಡಿಸಿರುವುದಾಗಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಎಂ.ಮುನಯ್ಯ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರವು ಈ ಹಿಂದೆ ಮೌಢ್ಯಾಚರಣೆಗಳನ್ನು ನಿಷೇಧಿಸಬೇಕೆಂಬ ಕಾನೂನು ತರಲು ಪ್ರಯತ್ನಿಸಿತ್ತು. ಈ ಕಾಯ್ದೆಯನ್ನು ಸದನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಹಂತದಲ್ಲಿ ಕೆಲವು ಮೂಲಭೂತವಾದಿ, ಪಟ್ಟಭದ್ರ ಹಿತಾಸಕ್ತಿಗಳು ಈ ಮಸೂದೆಯ ಬಗ್ಗೆ ದೊಡ್ಡ ವಿವಾದ ಎಬ್ಬಿಸಿದ್ದರಿಂದಾಗಿ ಸರ್ಕಾರ ಮೌನವಹಿಸಿತು. ಮೌಢ್ಯಾಚರಣೆ ನಿಷೇಧಿಸುವ ಮಸೂದೆಯು ಯಾವ ಜಾತಿ ಶರ್ಮದ ವಿರುದ್ಧವೂ ಅಲ್ಲ. ಕೆಲ ದುಷ್ಟಾಚಾರಗಳನ್ನು ನಿಷೇದಿಸುವುದೇ ಈ ಮಸೂದೆಯ ಗುರಿ. ಈ ಕಂದಾಚಾರಗಳನ್ನು ಹಾಗೂ ಸಮಾಜದಲ್ಲಿನ ಮೌಢ್ಯವನ್ನು ವಿರುದ್ಧ ಜನಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಸೃಷ್ಟಿಸುವ, ಸ್ತ್ರೀಯರು ಮಕ್ಕಳ ಹಿಂಸೆಗೆ ಕಾರಣವಾಗುವ ಆಚರಣೆಗಳು ನಮ್ಮ ಸಮಾಜದಲ್ಲಿ ರೂಢಿಯಲ್ಲಿವೆ. ಅವೆಲ್ಲವನ್ನೂ ನಿಲ್ಲಿಸಬೇಕು. ಸ್ಮಶಾನದಲ್ಲಿ ಅಡುಗೆಯನ್ನು ಮಾಡಿ ಸೇವಿಸುವ ಮುಲಕ ಮೌಢ್ಯಾಚರಣೆಗಳಿಲ್ಲದ, ಕಂದಾಚಾರಗಳಿಲ್ಲ, ಜಾತಿಬೇಧವಿಲ್ಲದ, ಸಮ–ಸಮಾಜದ ಕನಸು ನನಸಾಗಬೇಕಿದೆ. ಪರಿವರ್ತನೆಯ ಕಡೆಗೆ ನಮ್ಮ ನಡಿಗೆಯಾಗಬಹುದಾದ ಈ ಕಾರ್ಯಕ್ರಮದಲ್ಲಿ ಪ್ರಗತಿಪರರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ಡಿ.ಎಂ.ವೆಂಕಟೇಶ್, ಹುಜಗೂರು ವೆಂಕಟೇಶ್, ಮುತ್ತೂರು ಲಕ್ಷ್ಮಣ್, ದೊಡ್ಡ ತಿರುಮಳಯ್ಯ, ಮಟ್ಟಿ ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಮಫಲಕವಿಲ್ಲದ ಸರ್ಕಾರಿ ಕಛೇರಿ
ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ನೂತನ ಕಟ್ಟಡವು ನಾಮಫಲಕವೇ ಇಲ್ಲದೆ ಇರುವುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಬಳ್ಳಿಗೆ ವಿದ್ಯುತ್ ಕಂಬವೇ ಆಸರೆ
ಶಿಡ್ಲಘಟ್ಟ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ತಲಕಾಯಲಬೆಟ್ಟ ಕ್ರಾಸ್ ಬಳಿ ವಿದ್ಯುತ್ ಕಂಬಕ್ಕೆ ಬಳ್ಳಿಗಳು ಹಬ್ಬಿ ನಿಂತಿದ್ದು, ಅಪಾಯಕಾರಿಯಾಗಿದೆ.
ನಗರದಲ್ಲಿ ಎಲ್ಲೆಲ್ಲಿ ನೋಡಿದರೂ ಕಸದ ರಾಶಿ
ಪುರಸಭೆಯಿಂದ ನಗರಸಭೆಯಾಗಿ ಮೇಲ್ದಜೆಗೇರಿದರೂ ಕೂಡಾ ಜನರು ನೆಮ್ಮದಿಯಿಂದ ಜೀವನ ನಡೆಸುವಂತಹ ವಾತಾವರಣ ಶಿಡ್ಲಘಟ್ಟದಲ್ಲಿ ನಿರ್ಮಾಣವಾಗಲಿಲ್ಲವೆಂದು ನಾಗರಿಕರು ನಗರಸಭೆಯ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ನಗರದಲ್ಲಿ ಸುಮಾರು ೨೭ ವಾರ್ಡುಗಳಿದ್ದು, ಯಾವ ವಾರ್ಡುಗಳಲ್ಲಿಯೂ ಕೂಡಾ ಸರಿಯಾಗಿ ಕಸವಿಲೇವಾರಿಯಾಗುತ್ತಿಲ್ಲ. ನಗರದಲ್ಲಿ ಎಲ್ಲೆಂದರಲ್ಲಿ ಬಿದ್ದಿರುವ ಆಳವಾದ ಗುಂಡಿಗಳಿಂದಾಗಿ ಇಲ್ಲಿನ ಜನತೆ ನರಕಯಾತನೆ ಅನುಭವಿಸುವಂತಾಗಿದೆ. ನಗರದಲ್ಲಿನ ಪ್ರಮುಖ ಉದ್ಯಮ ರೇಷ್ಮೆಯಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರೂ ಕೂಡಾ ಶಿಡ್ಲಘಟ್ಟ ನಗರಕ್ಕೆ ಬೇಟಿ ನೀಡುತ್ತಿದ್ದಂತೆ ಸ್ವಾಗತಿಸುವುದು ಕಸಯುಕ್ತವಾದ ಚರಂಡಿಗಳು. ಬಹುತೇಕ ಹಂದಿಗಳಿಗೆ ತಾಣವಾಗಿ ಪರಿಣಮಿಸಿರುವ ಚರಂಡಿಗಳಲ್ಲಿ ಪ್ಲಾಸ್ಟಿಕ್ ಕವರುಗಳು ಸೇರಿದಂತೆ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವೆಲ್ಲಾ ಚರಂಡಿಗಳ ಪಾಲಾಗುತ್ತಿದೆ.
ತಾಲ್ಲೂಕಿನ ಹಿತ್ತಲಹಳ್ಳಿಯ ಸಮೀಪದಲ್ಲಿ ನಿರ್ಮಾಣ ಮಾಡಲಾಗಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಪ್ರಯೋಜನವಿಲ್ಲದಂತಾಗಿದೆ. ನಗರದಲ್ಲಿಯೂ ಕೂಡಾ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ, ದಿಬ್ಬೂರಹಳ್ಳಿ ಬೈಪಾಸ್ ರಸ್ತೆ, ಅಶೋಕ ರಸ್ತೆ, ಮಯೂರ ವೃತ್ತ, ವೇಣುಗೋಪಾಲಸ್ವಾಮಿ ದೇವಾಲಯದ ಮುಂಭಾಗ ಸೇರಿದಂತೆ ಎಲ್ಲೆಲ್ಲೂ ಕಸದ ರಾಶಿಗಳ ದರ್ಶನವಾಗುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿರುವುದರ ಪರಿಣಾಮವಾಗಿ ಕಸವು ಎಲ್ಲೆಂದರಲ್ಲಿ ಕೊಳೆತು ದುರ್ನಾತ ಬೀರುತ್ತಿದೆ.
ನಗರಸಭೆಯಲ್ಲಿ ಒಟ್ಟು ೧೦೦ ಮಂದಿ ಪೌರಕಾರ್ಮಿಕರಿದ್ದು, ೪೦ ಮಂದಿ ಖಾಯಂ ನೌಕರರಿದ್ದಾರೆ. ಈ ಹಿಂದೆ ಕಸವನ್ನು ವಿಲೇವಾರಿ ಮಾಡುವಂತಹ ಗುತ್ತಿಗೆಯನ್ನು ಪಡೆದುಕೊಂಡಿದ್ದ ದೊಡ್ಡಬಳ್ಳಾಪುರ ಮೂಲಕ ಗುತ್ತಿಗೆದಾರ ಈ ಕಡೆಗೆ ತಿರುಗಿಯೂ ನೋಡಿಲ್ಲ. ಇದರಿಂದಾಗಿ ಪೌರಕಾಮಿಕರಿಗೆ ಮೂರು ತಿಂಗಳ ಸಂಬಳವನ್ನೆ ನೀಡಿಲ್ಲ. ಹೀಗಾಗಿ ನಗರಸಭೆಯು ಉತ್ತಮವಾಗಿದೆಯೊ ಅಥವಾ ದಿವಾಳಿಯಾಗಿದೆಯೊ ಎನ್ನುವಂತಹ ಅನುಮಾನಗಳು ಜನತೆಯನ್ನು ಕಾಡತೊಡಗಿವೆ.
ನಗರಸಭೆಯ ವ್ಯಾಪ್ತಿಯಲ್ಲಿ ೨೭ ವಾರ್ಡುಗಳಿವೆ, ಅವುಗಳ ಪೈಕಿ ೧೦ ವಾರ್ಡುಗಳಿಂದ ಮಾತ್ರ ನಗರಸಭೆಗೆ ತೆರಿಗೆಗಳು ವಸೂಲಿಯಾಗುತ್ತಿವೆ. ಉಳಿದ ಯಾವ ವಾರ್ಡುಗಳಿಂದಲೂ ತೆರಿಗೆಗಳು ಬರುತ್ತಿಲ್ಲ, ಕಸವಿಲೇವಾರಿಗೆ ಟೆಂಡರ್ ಕರೆದು ಈಗಾಗಲೇ ಅನುಮೊದನೆಗೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದೆ. ಅನುಮೋದನೆ ದೊರಕಿದ ನಂತರ ಶೀಘ್ರವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೌರಾಯುಕ್ತ ಎಚ್.ಎ.ಹರೀಶ್ ತಿಳಿಸಿದ್ದಾರೆ.
ರಕ್ತದಾನದ ಮೂಲಕ ಮಹಿಳೆಯರ ಪ್ರಾಣ ರಕ್ಷಣೆ
ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಸಂಗ್ರಹಿಸುವಂತಹ ರಕ್ತವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪ್ರಾಣ ರಕ್ಷಣೆಗಾಗಿ ಉಪಯೋಗ ಮಾಡಲಾಗುತ್ತಿದೆ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷರಾದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ದಿ ಕ್ರೆಸೆಂಟ್ ಶಾಲೆಯ ಆವರಣದಲ್ಲಿ ಬುಧವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಕ್ರೆಸೆಂಟ್ ಶಾಲೆಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಕ್ತದಾನದ ಜೊತೆಗೆ ಇತ್ತಿಚೆಗೆ ದೇಹದ ಅಂಗಾಂಗ ದಾನ ಮಾಡುವಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಗಳಿಸುತ್ತಿರುವ ದೇಶದಲ್ಲಿ ಜನತೆ ಮಾನವೀಯತೆಯನ್ನು ಮೆರೆಯುತ್ತಿರುವುದು ಶ್ಲಾಘನೀಯ. ರಕ್ತದಾನದಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಪಾಲ್ಗೊಳ್ಳುವುದರೊಂದಿಗೆ ರಕ್ತದಾನದಿಂದ ಆಗುವಂತಹ ಉಪಯೋಗಗಳ ಬಗ್ಗೆ ತಿಳಿದು ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡುವಂತಹ ಕೆಲಸ ಮಾಡಬೇಕು ಎಂದರು.
ಅಪಘಾತಗಳು ಸಂಭವಿಸಿದಾಗ ರಕ್ತಸ್ರಾವ ಹೆಚ್ಚಾಗಿ ಅಪಘಾತಕ್ಕೀಡಾದವರು ಮೃತ ಪಡುವುದು ಸೇರಿದಂತೆ ಹೆರಿಗೆ ಹಾಗು ಶಸ್ತ್ರಚಿಕಿತ್ಸೆ ಸಮಯದಲ್ಲಿ ರಕ್ತದ ಅಗತ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ೧೮ ವರ್ಷಕ್ಕೂ ಮೇಲ್ಪಟ್ಟ ಎಲ್ಲರೂ ರಕ್ತದಾನ ಮಾಡುವುದರಿಂದ ಬಹಳಷ್ಟು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದರು.
ದಿ ಕ್ರೆಸೆಂಟ್ ಶಾಲೆಯ ಅಧ್ಯಕ್ಷ ತಮೀಮ್ ಅನ್ಸಾರಿ ಮಾತನಾಡಿ, ಪ್ರತಿವರ್ಷ ಡಿಸೆಂಬರ್ ೦೧ ರಂದು ವಿಶ್ವ ಏಡ್ಸ್ದಿನಾಚರಣೆಯ ಅಂಗವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತಹ ಕೆಲಸವನ್ನು ಶಾಲೆಯ ವತಿಯಿಂದ ಮಾಡುತ್ತಿದ್ದು, ಈ ಬಾರಿ ಸಂಸ್ಥೆಯ ಮೂಲಕ ಉಚಿತ ರಕ್ತದಾನ ಶಿಬಿರವನ್ನು ಮಾಡಲಾಗುತ್ತಿದೆ. ಶಾಲಾ ಮಕ್ಕಳ ಮೂಲಕ ಅವರ ಪೋಷಕರನ್ನು ರಕ್ತದಾನ ಮಾಡುವಂತೆ ಮನವೊಲಿಸಲಾಗಿದ್ದು ಹೆಚ್ಚಿ ಸಂಖ್ಯೆಯಲ್ಲಿ ರಕ್ತ ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗು ರೆಡ್ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎನ್.ಕೆ.ಗುರುರಾಜ್ರಾವ್ ಮಾತನಾಡಿ ತಾಲೂಕಿನಾದ್ಯಂತ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಈಗಾಗಲೇ ಸುಮಾರು ಸಾವಿರಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥಗೌಡ, ಕ್ರೆಸೆಂಟ್ ಶಾಲೆಯ ಕಾರ್ಯದರ್ಶಿ ಸಿರಾಜ್, ಶಿಕ್ಷಕರು ಮತ್ತಿತರರು ಹಾಜರಿದ್ದರು.

