Home Blog Page 492

ಹಳೇಹಳ್ಳಿಯಲ್ಲಿ ಕನಕ ಜಯಂತಿ

0

ಕನಕ ಜಯಂತಿಯ ನಿಜ ಅರ್ಥದ ಆಚರಣೆ ಸಮಾಜಕ್ಕೆ ನೀಡುವ ಕೊಡುಗೆಯಾಗಿದೆ ಎಂದು ರಾಜ್ಯ ಕುರುಬರ ಸಂಘದ ಉಪಾಧ್ಯಕ್ಷ ಎ.ನಾಗರಾಜು ತಿಳಿಸಿದರು.
ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಹಳೇಹಳ್ಳಿ ಮತ್ತು ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು ಬುಧವಾರ ಹಳೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಚರಿಸಿದ ಕನಕ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಜಾತಿ, ಕುಲ, ಮತ, ಧರ್ಮವೆನ್ನದೆ ಪ್ರಪಂಚದ ಎಲ್ಲಾ ಮನುಕುಲವೂ ಉದ್ಧಾರವಾಗಬೇಕು ಎಂದು ಸಾರಿದ ಕನಕದಾಸರ ಆದರ್ಶವನ್ನು ಪರಿಪಾಲಿಸುವ ಮೂಲಕ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿಸಬೇಕಿದೆ. ತಮ್ಮ ಬದುಕಿನಲ್ಲಿ ಕನಕದಾಸರು ಜಾತಿ ವೈಮನಸ್ಯ, ಅಸೂಯೆ ಮನೋಭಾವನೆ ನಿರ್ಮೂಲನೆ ಮಾಡಲು ಶ್ರಮಿಸಿದರು. ಕುಲ ಕುಲವೆಂದು ಹೊಡೆದಾಡಬೇಡಿ, ಕುಲಗಳು ಹುಟ್ಟಿದ್ದು ಎಲ್ಲಿ ಎಂಬುದನ್ನು ಅರ್ಥಮಾಡಿಕೊಂಡಿದ್ದಾದರೆ ಜಾತಿ ಸಂಘರ್ಷಗಳಿಗೆ ಅವಕಾಶವಿರುವುದಿಲ್ಲವೆಂದು ಸಾರಿದ ಕನಕದಾಸರು ಸುಮಾರು ಐದು ಶತಮಾನಗಳಿಂದ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ನೆಲೆಸಿದ್ದಾರೆ ಎಂದು ಹೇಳಿದರು.
ಗ್ರಾಮದ ಶಿಕ್ಷಕರು ಹಾಗೂ ಹಿರಿಯರಾದ ಸರೋಜಮ್ಮ, ಸುಬ್ಬಣ್ಣ, ಸುರೇಶ್, ಮಂಜುನಾಥ್, ಚಂದ್ರಪ್ಪ, ಎಂ.ಕೆ.ರೆಡ್ಡಿ ಮತ್ತಿತರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಗೌಡರ ವೆಂಕಟರಾಯಪ್ಪ ಮತ್ತು ಮಕ್ಕಳು 80 ಮಂದಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ಟೈ, ಬೆಲ್ಟ್ ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಮಂಜುನಾಥ್, ಜಿಲ್ಲಾ ಉಪಾಧ್ಯಕ್ಷ ಆದಿನಾರಾಯಣಪ್ಪ, ರಾಮಚಂದ್ರಪ್ಪ, ರಾಮಾಂಜಿ, ರಾಮಣ್ಣ, ನಾರಾಯಣಸ್ವಾಮಿ, ದೇವಾರೆಡ್ಡಿ, ವೆಂಕಟರಾಯಪ್ಪ, ವೆಂಕಟರೋಣಪ್ಪ, ಚಂದ್ರಪ್ಪ, ದೇವರಾಜು, ಮಲ್ಲಪ್ಪ, ಸುಬ್ಬಣ್ಣ, ನಾರಾಯಣರೆಡ್ಡಿ, ನರೇಂದ್ರ, ಆಂಜನೇಯರೆಡ್ಡಿ, ಮೌಲಾ, ಬೈರಾರೆಡ್ಡಿ, ವೆಂಕಟಾಚಲಪತಿ, ಬಾಬಾಜಾನ್, ವೆಂಕಟರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶಾಲೆಯಲ್ಲಿ ಆಚರಿಸಿದ ಕನಕ ಜಯಂತಿ ಕಾರ್ಯಕ್ರಮ

0

ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಹಳೇಹಳ್ಳಿ ಮತ್ತು ಮಲ್ಲಶೆಟ್ಟಿಹಳ್ಳಿ ಗ್ರಾಮಸ್ಥರು ಬುಧವಾರ ಹಳೇಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಆಚರಿಸಿದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಗ್ರಾಮದ ಶಿಕ್ಷಕರು ಹಾಗೂ ಹಿರಿಯರಾದ ಸರೋಜಮ್ಮ, ಸುಬ್ಬಣ್ಣ, ಸುರೇಶ್, ಮಂಜುನಾಥ್, ಚಂದ್ರಪ್ಪ, ಎಂ.ಕೆ.ರೆಡ್ಡಿ ಮತ್ತಿತರರನ್ನು ಸನ್ಮಾನಿಸಲಾಯಿತು.

ಸುಟ್ಟುಹೋದ ಲಾರಿ ಪತ್ತೆ

0

ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಬೈರಸಂದ್ರ ಗ್ರಾಮದ ಗೇಟ್ ಬಳಿ ಅಪರಿಚಿತ ಲಾರಿಯೊಂದಕ್ಕೆ ಬೆಂಕಿ ಹಚ್ಚಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ತಾಲ್ಲೂಕಿನ ಜಂಗಮಕೋಟೆ ಹೊರವಲಯದ ಪೋಲೀಸ್ ಠಾಣೆ ವ್ಯಾಪ್ತಿಯ ಬೈರಸಂದ್ರ ಗೇಟ್ ಬಳಿ ಸೋಮವಾರ ರಾತ್ರಿ ಲಾರಿಯೊಂದಕ್ಕೆ (ಕೆಎ ೦೩ ೬೧೮) ಯಾರೋ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಸ್ಥಳದಲ್ಲಿ ಬೆಂಕಿ ಹಚ್ಚಿರುವ ಲಾರಿ ಮಾತ್ರವಿದ್ದು ಲಾರಿಯ ಚಾಲಕ ಅಥವ ಕ್ಲೀನರ್ ಯಾರೂ ಇಲ್ಲದಿರುವುದರಿಂದ ಲಾರಿ ಯಾರದ್ದು, ಲಾರಿಗೆ ಬೆಂಕಿ ಇಟ್ಟವರಾರು ಎಂಬುದು ತಿಳಿದುಬಂದಿಲ್ಲ.
ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಲ್.ಶ್ರೀನಿವಾಸಮೂರ್ತಿ ಹಾಗೂ ಪುರ ಠಾಣೆ ಸಬ್ಇನ್ಸ್ಪೆಕ್ಟರ್ ವಿಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೇಷ್ಮೆ ಬೆಳೆಯನ್ನು ಚಳಿಗಾಲದಲ್ಲಿ ಉಳಿಸಿಕೊಳ್ಳುವ ಬಗ್ಗೆ ಕರಪತ್ರ ವಿತರಣೆ

0

ಚಳಿಗಾಲ ಹಾಗು ಮಳೆಗಾಲದಲ್ಲಿ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾಗಿ ರೇಷ್ಮೆ ಹುಳುಗಳಿಗೆ ಸುಣ್ಣಕಟ್ಟು ರೋಗ ಬರುವುದರಿಂದ ರೇಷ್ಮೆ ಹುಳು ಸಾಕಾಣಿಕೆದಾರರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ರೇಷ್ಮೆ ಇಲಾಖೆಯ ಉಪನಿರ್ದೇಶಕ ಬಿ.ಆರ್.ನಾಗಗಭೂಷಣ್ ಹೇಳಿದರು.
ನಗರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಮಂಗಳವಾರ ಇಲಾಖೆಯ ಅಧಿಕಾರಿಗಳೊಂದಿಗೆ ರೇಷ್ಮೆ ಹುಳುವಿಗೆ ತಗಲುವ ಸುಣ್ಣಕಟ್ಟು ರೋಗ, ಹಾಲು ತೊಂಡೆ ರೋಗ ಹಾಗೂ ಎಲೆ ಸುರಳಿ ಕೀಟ ನಿಯಂತ್ರಣದ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲು ಕರಪತ್ರ ವಿತರಿಸಿ ಮಾತನಾಡಿದರು.
ಬುವೇರಿಯಾ ಬ್ಯಾಸಿಯಾನ ಮತ್ತು ಆಸ್ಪರ್ ಜಿಲ್ಲೋಸಿಸ್ ಎಂಬ ಶಿಲೀಂದ್ರಗಳಿಂದ ಹರಡುವ ಈ ರೋಗ ಚಳಿಗಾಲ ಹಾಗು ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಳೆದ ಇಪ್ಪತ್ತು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದ ವಾತಾವರಣದಲ್ಲಿ ಶೈತ್ಯಾಂಶ ಹೆಚ್ಚಾಗಿ ರೇಷ್ಮೆ ಹುಳುವಿಗೆ ಸುಣ್ಣಕಟ್ಟು ರೋಗ ಬರುತ್ತಿದ್ದು, ಸಾಕಾಣಿಕೆದಾರರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಸುಣ್ಣಕಟ್ಟು ರೋಗ ಬಂದಂತಹ ರೇಷ್ಮೆ ಹುಳುಗಳು ಸೊಪ್ಪು ತಿನ್ನದೇ ಚಟುವಟಿಕೆ ಕಳೆದುಕೊಂಡು ಸಾಯುತ್ತದೆ. ಸತ್ತ ಹುಳುವಿನ ದೇಹವು ಗಟ್ಟಿಯಾಗಿ ಮೈಮೇಲೆ ಬಿಳಿಯ ಪೌಡರ್ನಂತಹ ವಸ್ತುವಿನ ರೂಪದಲ್ಲಿ ವೈರಾಣುಗಳು ಉತ್ಪತ್ತಿಯಾಗುತ್ತವೆ. ಹೀಗೆ ಉತ್ಪತ್ತಿಯಾದ ವೈರಾಣುಗಳು ಗಾಳಿಯ ಮೂಲಕ ಹಾಗೂ ಸತ್ತ ಹುಳುವನ್ನು ಮುಟ್ಟಿದ ಕೈಗಳಿಂದ ಉಳಿದ ಆರೋಗ್ಯವಂತ ಹುಳುವಿಗೆ ತಾಕುವುದರಿಂದ ಎಲ್ಲಾ ಹುಳುಗಳು ಸುಣ್ಣಕಟ್ಟು ರೋಗಕ್ಕೆ ತುತ್ತಾಗಿ ಸಾಯುತ್ತವೆ ಎಂದರು.
ರೇಷ್ಮೆ ಹುಳು ಸಾಕುವ ಮನೆ ಹಾಗೂ ಸಲಕರಣೆಗಳ ಸೋಂಕು ನಿವಾರಣೆ ಕ್ರಮಗಳನ್ನು ಅಗತ್ಯವಾಗಿ ಅಳವಡಿಸಿಕೊಳ್ಳಬೇಕು. ಕೈ ಕಾಲುಗಳನ್ನು ಸ್ವಚ್ಚಗೊಳಿಸದೇ ಹುಳು ಸಾಕಣೆ ಮನೆಗೆ ಪ್ರವೇಶಿಸಬಾರದು. ಅನಗತ್ಯ ವ್ಯಕ್ತಿಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಬೇಕು. ಹುಳು ಸಾಕಣೆ ಮನೆಯ ಉಷ್ಣಾಂಶ ಹೆಚ್ಚಿಸಲು ಥರ್ಮೋಸ್ಟಾಟ್ ಅಳವಡಿಸಿರುವ ವಿದ್ಯುತ್ ಹೀಟರ್ಗಳಿಂದ ಅಥವ ಹೊಗೆಯಾಡದ ಇದ್ದಿಲು ಕೆಂಡಗಳಿಂದ ಉಷ್ಣಾಂಶ ಹೆಚ್ಚಿಸಬೇಕು. ಮುಖ್ಯವಾಗಿ ಹಾಸಿಗೆಯ ತೇವಾಂಶ ಕಡಿಮೆ ಮಾಡಲು ಹುಳುಗಳನ್ನು ಒತ್ತಾಗಿ ಹಾಕದೇ ತೆಳುವಾಗಿಡುವುದರೊಂದಿಗೆ ಸೊಪ್ಪನ್ನು ತೆಳುವಾಗಿ ನೀಡಬೇಕು ಎಂದರು.
ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸುಣ್ಣಕಟ್ಟು ರೋಗ, ಹಾಲು ತೊಂಡೆ ರೋಗ ಹಾಗೂ ಎಲೆ ಸುರಳಿ ಕೀಟ ನಿಯಂತ್ರಣದ ಬಗ್ಗೆ ಕರಪತ್ರಗಳನ್ನು ರೇಷ್ಮೆ ಇಲಾಖೆಯ ಅಧಿಕಾರಿಗಳು ರೈತರಿಗೆ ವಿತರಿಸಿದರು.
ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಮಾರುಕಟ್ಟೆ ಉಪನಿರ್ದೇಶಕ ರತ್ನಯ್ಯಶೆಟ್ಟಿ, ರೇಷ್ಮೆ ವಿಸ್ತರಣಾಧಿಕಾರಿಗಳಾದ ಎಂ.ನಾರಾಯಣಸ್ವಾಮಿ, ತಿಮ್ಮರಾಜು, ರೇಷ್ಮೆ ಸಹಾಯಕ ನಿರ್ದೇಶಕ (ರೀಲಿಂಗ್ವಿಭಾಗ) ನರಸಿಂಹಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಳೆಯ ಮರಗಳ ಮಾರಣಹೋಮ

0

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಸಿಗಳನ್ನು ನೆಟ್ಟು ಗಿಡ ಮರಗಳನ್ನು ಬೆಳೆಸಬೇಕೆಂದು ಒಂದಡೆ ಘೋಷಣೆ ಮಾಡಿದರೆ, ಮತ್ತೊಂದಡೆ ಅಭಿವೃದ್ಧಿಯ ಹೆಸರಿನಲ್ಲಿ ಸುಮಾರು 4೦ ವರ್ಷಗಳ ಹಳೆಯ ಮರಗಳ ಮಾರಣಹೋಮ ಮಾಡಿರುವ ಸಂಗತಿ ನಗರದಲ್ಲಿ ನಡೆದಿದೆ.
ತಾಲೂಕಿನಾದ್ಯಂತ ಸಂಭವಿಸುವ ಬೆಂಕಿ ಅನುಹಾತಗಳನ್ನು ತಡೆಗಟ್ಟುವ ಸಲುವಾಗಿ ಹೊರವಲಯದ ಆನೂರು ಗೇಟ್ ಬಳಿ ಅಗ್ನಿಶಾಮಕ ದಳ ಘಟಕದ ಕಟ್ಟಡ ನಿರ್ಮಿಸಲು ಸರ್ಕಾರ ಸುಮಾರು ೬೫ ಲಕ್ಷ ರೂಗಳನ್ನು ಮಂಜೂರಾಗಿದ್ದು ನೂತನ ಕಟ್ಟಡವನ್ನು ನಿರ್ಮಿಸಲು ಟೆಂಡರ್ ಆಹ್ವಾನಿಸಲಾಗಿದೆ. ಅಲ್ಲಿಯವರೆಗೂ ತಾತ್ಕಾಲಿಕವಾಗಿ ಕಚೇರಿಯನ್ನು ನಡೆಸಲು ಹಳೇ ನ್ಯಾಯಾಲಯ ಕಟ್ಟಡದಲ್ಲಿ ತೆರೆಯಲು ನಿರ್ಧರಿಸಲಾಗಿದೆ. ಹಳೇ ನ್ಯಾಯಾಲಯ ಮುಂದೆ ಖಾಲಿ ಇರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುವ ಸಲುವಾಗಿ ಸುಮಾರು ೩೦ ರಿಂದ -೪೦ ವರ್ಷಗಳ ಹಿಂದಿನ ಬೃಹತ್ಗಾತ್ರದ ಮರಗಳನ್ನು ಕಡಿದು ಹಾಕಿದ್ದರಿಂದಾಗಿ ಪರಿಸರ ಪ್ರೇಮಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಅವರು, ಅಗ್ನಿಶಾಮಕದಳದ ಘಟಕ ಕಾರ್ಯಾರಂಭಿಸಲು ಹಳೇ ನ್ಯಾಯಾಲಯದ ಮುಂದೆ ಇರುವ ಜಾಗದಲ್ಲಿ ವಾಹನಗಳನ್ನು ನಿಲ್ಲಿಸಲು ಕೆಲವು ಮರಗಳನ್ನು ಕಡಿಯಲು ನಗರಸಭೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ. ಹಳೆಯ ಮರಗಳ ಮಾರಣಹೋಮ ನಡೆಸಲು ಅರಣ್ಯ ಇಲಾಖೆಯ ಅಧಿಕಾರಿಗಳು ನೆರವು ನೀಡುವ ಮೂಲಕ ಪರಿಸರವನ್ನು ಸಂರಕ್ಷಣೆ ಮಾಡುವುದು ಕೇವಲ ಘೋಷಣೆಗಷ್ಟೇ ಸೀಮಿತವೆಂದು ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬೀದಿಪಾಲಾದ ಚಹಾ ಅಂಗಡಿಗಳು: ಹಳೇ ನ್ಯಾಯಾಲಯ ಕಟ್ಟಡದ ಮುಂದೆ ಖಾಲಿವಿದ್ದ ಜಾಗದಲ್ಲಿ ಬಹುತೇಕ ಬಡವರು ಚಹಾ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಇದೀಗ ಮರಗಳನ್ನು ಕಡಿದು ಹಾಕುವ ನೆಪದಲ್ಲಿ ಟೀ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು ಬಹುತೇಕ ಬಡಕುಟುಂಬದ ಸದಸ್ಯರು ಬೀದಿಪಾಲಾಗಿದ್ದಾರೆ. ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಬಡವರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲು ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ತಳ್ಳುವ ಅಂಗಡಿಯಿಟ್ಟುಕೊಂಡಿದ್ದವರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೈಕಲ್ ಮೇಲೆ ತಾಯಿ ಭುವನೇಶ್ವರಿಯ ಟ್ಯಾಬಲೋ

0

ಶಿಡ್ಲಘಟ್ಟದ ಉಲ್ಲೂರುಪೇಟೆಯ ವಿ.ಸಿ.ಮಂಜುನಾಥ್ ಸೈಕಲ್ ಮೇಲೆ ತಾಯಿ ಭುವನೇಶ್ವರಿಯ ಟ್ಯಾಬಲೋ ರಚಿಸಿ ನಗರದಲ್ಲಿ ರಾಜ್ಯೋತ್ಸವದ ಮೆರುಗನ್ನು ಪಸರಿಸಿ ಗಮನ ಸೆಳೆದರು.

ಕನ್ನಡ ನಾಡು, ನುಡಿಯ ರಕ್ಷಣೆ ಯುವಕರ ಧ್ಯೇಯವಾಗಲಿ

0

ಕನ್ನಡ ನಾಡು, ನುಡಿಯ ರಕ್ಷಣೆ ಹಾಗೂ ಗಡಿಭಾಗಗಳ ರಕ್ಷಣೆ ಪ್ರತಿಯೊಬ್ಬ ಯುವಕರ ಆದ್ಯ ಕರ್ತವ್ಯವೆಂದು ಹಿರಿಯ ಕನ್ನಡಪರ ಹೋರಾಟಗಾರ ಖ.ರಾ.ಖಂಡೇರಾವ್ ತಿಳಿಸಿದರು.
ನಗರದ ಉಲ್ಲೂರು ಪೇಟೆಯಲ್ಲಿ ಸೋಮವಾರ ಸ್ನೇಹ ಯುವಕ ಸಂಘದಿಂದ ಆಯೋಜನೆ ಮಾಡಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ಗಡಿ, ನೆಲ, ಜಲ, ಭಾಷೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ, ಅದರಲ್ಲೂ ವಿಶೇಷವಾಗಿ ಯುವಜನತೆ ನಾಡಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಯುವಜನತೆ ಹೆಚ್ಚು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದರಿಂದ ಕನ್ನಡ ಭಾಷೆಯ ಹಿರಿಮೆಯ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದರೂ ಕೂಡಾ ಇಂದಿಗೂ ಭಾಷೆಯ ಉಳಿವಿಗಾಗಿ ಹೋರಾಟ ನಡೆಸಬೇಕಾದಂತಹ ದುಸ್ಥಿತಿ ಒದಗಿ ಬಂದಿರುವುದು ಶೋಚನೀಯವಾದ ಸಂಗತಿಯಾಗಿದೆ ಎಂದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ ಮಾತನಾಡಿ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆಯೆಂದರೆ ಅದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ. ಇಂದು ಬದಲಾಗುತ್ತಿರುವ ಜನರ ಜೀವನ ಶೈಲಿಯಿಂದಾಗಿ ನಗರ ಪ್ರದೇಶಗಳಲ್ಲಿ ಕನ್ನಡ ಭಾಷೆಯನ್ನು ಹುಡುಕಾಡಬೇಕಾದಂತಹ ದುಸ್ಥಿತಿ ಒದಗಿ ಬಂದಿದೆ, ಎಲ್ಲಾ ರಾಜ್ಯಗಳ ಜನತೆಗೆ ಆಸರೆಯನ್ನು ನೀಡುತ್ತಾ ಸಹೃದಯತೆಯಿಂದ ಎಲ್ಲರನ್ನೂ ಸ್ವಾಗತಿಸುವಂತಹ ರಾಜ್ಯದಲ್ಲಿ ಅನ್ಯ ಬಾಷಿಕರಿಂದ ಕನ್ನಡಿಗರ ಮೇಲೆ ನಿರಂತರವಾಗಿ ದೌರ್ಜನ್ಯಗಳು, ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುವ ಮೂಲಕ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ ಆದೇಶಗಳನ್ನು ಕನ್ನಡ ಭಾಷೆಯಲ್ಲಿಯೆ ಹೊರಡಿಸಬೇಕು. ನ್ಯಾಯಾಲಯಗಳಿಂದ ಬರುವಂತಹ ತೀರ್ಪುಗಳೂ ಕೂಡಾ ಕನ್ನಡ ಭಾಷೆಯಲ್ಲಿದ್ದರೆ, ಕಕ್ಷಿದಾರರಿಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ, ಈ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಪ್ರತಿಯೊಬ್ಬ ಕನ್ನಡಿಗರು ಹೋರಾಟ ಮಾಡಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಲ್ಲೂರುಪೇಟೆಯಲ್ಲಿ ಹಾಗೂ ಮಯೂರ ವೃತ್ತದಲ್ಲಿ ಆಟೋಚಾಲಕರ ಸಂಘದ ವತಿಯಿಂದ ಧ್ವಜಾರೋಹಣ ಮತ್ತು ತಾಯಿ ಭುವನೇಶ್ವರಿ ಚಿತ್ರಪಟಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.
ಭರತ್, ಮುನಿರಾಜು, ನವೀನ್. ಶ್ರೀನಿವಾಸ್, ಚಂದ್ರು, ಡಿ.ವಿ.ವೆಂಕಟೇಶ್, ಶ್ರೀರಾಮ್, ಪ್ರಕಾಶ್, ಗಂಗಾಧರ, ಸುನಿಲ್, ಕೃಷ್ಣಕುಮಾರ್ ಮತ್ತಿತರರು ಹಾಜರಿದ್ದರು.

ಅಧಿಕಾರಿಗಳಿಲ್ಲದ ಆಹಾರ ಶಾಖೆಯ ಕಚೇರಿ – ರೈತರ ಆಕ್ರೋಷ

0

ತಾಲ್ಲೂಕಿನಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ನವೀಕರಣದ ಹೆಸರಿನಲ್ಲಿ ರದ್ದುಪಡಿಸಲಾಗಿರುವುದರಿಂದ ನೂರಾರು ಸಂಖ್ಯೆಯಲ್ಲಿ ನಾಗರಿಕರು, ತಾಲ್ಲೂಕು ಕಚೇರಿಯಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್ ಆರೋಪಿಸಿದ್ದಾರೆ.
ನಗರದ ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಶಾಖೆಯ ಬಾಗಿಲು ಸೋಮವಾರ ಬೀಗ ತೆರೆದಿದ್ದರೂ ಕೂಡಾ ಇಲಾಖೆಯ ಯಾವೊಬ್ಬ ಅಧಿಕಾರಿಗಳು ಹಾಜರಿಲ್ಲದೆ, ಇಲಾಖೆಗೆ ಸಂಬಂಧಪಟ್ಟ ಕಡತಗಳು ಎಲ್ಲೆಂದರಲ್ಲಿ ಬಿಸಾಡಿದ್ದು, ಅಮೂಲ್ಯವಾದ ಕಡತಗಳಿಗೆ ಭದ್ರತೆಯಿಲ್ಲದಂತಾಗಿದೆ. ನೂರಾರು ಮಂದಿ ನಾಗರಿಕರು ತಾಲ್ಲೂಕು ಕಚೇರಿಗೆ ಬಂದು ತಮ್ಮ ಪಡಿತರ ಚೀಟಿಗಳಿಗಾಗಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಅಧಿಕಾರಿಗಳು ನಾಗರಿಕರಿಂದ ಒಂದೊಂದು ಪಡಿತರ ಚೀಟಿಗೆ ಒಂದು ಸಾವಿರ ರೂಪಾಯಿಗಳಂತೆ ಹಣವನ್ನು ವಸೂಲಿ ಮಾಡಿಕೊಂಡು ಪಡಿತರ ಚೀಟಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಈ ಬಗ್ಗೆ ತಹಶೀಲ್ದಾರರು ಸೇರಿದಂತೆ ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕರಿಗೆ ಅನೇಕ ಬಾರಿ ದೂರು ನೀಡಿದ್ದರೂ ಕೂಡಾ ಯಾವುದೇ ಕ್ರಮ ಕೈಗೊಂಡಿಲ್ಲ, ಇದೇ ಪರಿಸ್ಥಿತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಅಕ್ರಂಪಾಷ, ಹುಸೇನ್ಸಾಬ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗ್ರಾಹಕರ ಸೇವೆಯೇ ಬ್ಯಾಂಕಿನ ಅಧಿಕಾರಿಗಳ ಗುರಿಯಾಗಲಿ

0

ಬ್ಯಾಂಕಿಗೆ ಬರುವಂತಹ ಗ್ರಾಹಕರೊಂದಿಗೆ ಉತ್ತಮವಾದ ಭಾಂದವ್ಯವನ್ನು ಇಟ್ಟುಕೊಂಡು ಉತ್ತಮ ಸೇವೆಯನ್ನು ಒದಗಿಸುವಂತೆ ಕೆನರಾ ಬ್ಯಾಂಕಿನ ಸಿಬ್ಬಂದಿಗೆ ಚಿಕ್ಕಬಳ್ಳಾಪುರ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕಿ ಸ್ವರ್ಣಲತಾ ತಿಳಿಸಿದರು.
ನಗರದ ಟಿ.ಬಿ. ರಸ್ತೆಯ ಹಳೇ ಪೊಲೀಸ್ ಠಾಣೆಯ ಸಮೀಪದಲ್ಲಿದ್ದ ತಾಲ್ಲೂಕಿನ ಕೆನರಾ ಬ್ಯಾಂಕನ್ನು ನಗರಸಭೆ ಕಾರ್ಯಾಲಯದ ಪಕ್ಕದಲ್ಲಿರುವ ನೂತನ ಕಟ್ಟಡಕ್ಕೆ ವರ್ಗಾವಣೆ ಮಾಡಿದ್ದು, ನೂತನ ಬ್ಯಾಂಕ್ ಶಾಖೆಯನ್ನು ಸೋಮವಾರ ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಕೆನರಾ ಬ್ಯಾಂಕಿನ ವತಿಯಿಂದ ಗ್ರಾಹಕರ ಅನುಕೂಲಕ್ಕಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಗ್ರಾಹಕರು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಬ್ಯಾಂಕುಗಳಿಂದ ಪಡೆಯುವಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿ, ಬ್ಯಾಂಕುಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಬೇಕು, ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವುದೇ ಬ್ಯಾಂಕಿನ ಅಧಿಕಾರಿಗಳ ಗುರಿಯಾಗಲಿ ಎಂದರು.
ಬ್ಯಾಂಕಿನ ವ್ಯವಸ್ಥಾಪಕ ಗಿರೀಶ್ ಮಾತನಾಡಿ, ನಮ್ಮ ಬ್ಯಾಂಕಿಗೆ ಬರುವಂತಹ ಎಲ್ಲಾ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕಿನಲ್ಲಿ ಲಾಕರ್ಗಳ ವ್ಯವಸ್ಥೆ, ತ್ವರಿತಗತಿಯಲ್ಲಿ ಸೇವೆ ಒದಗಿಸಲು ಎರಡು ಕೌಂಟರ್ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ೨೫ ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚಿನ ಹಣವನ್ನು ತುಂಬುವಂತಹ ಗ್ರಾಹಕರಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಇದೆ. ೨೫ ಸಾವಿರ ರೂಪಾಯಿಗಳಿಗಿಂತ ಕಡಿಮೆ ಹಣವನ್ನು ತುಂಬುವಂತಹ ಗ್ರಾಹಕರಿಗೆ ಪ್ರತ್ಯೇಕವಾದ ಕೌಂಟರ್ ಮಾಡಲಾಗಿದೆ, ವಿನೂತನವಾದ ಟೋಕನ್ ಸಿಸ್ಟಮ್ ಇದೆ. ನಗರದಲ್ಲಿ ೪ ಎ.ಟಿ.ಎಂ.ಗಳ ವ್ಯವಸ್ಥೆ ಇದೆ, ಬ್ಯಾಂಕಿನಲ್ಲಿ ಕೀಯೋಸ್ಕ್ ವ್ಯವಸ್ಥೆಯಿರುವುದರಿಂದ ಗ್ರಾಹಕರು ಹಣವನ್ನು ನೇರವಾಗಿ ಯಾವುದೇ ಚಲನ್ ಭರ್ತಿ ಮಾಡದೆ ಕಳುಹಿಸಬಹುದಾಗಿದೆ, ಭದ್ರವಾದ ಲಾಕರ್ಗಳ ವ್ಯವಸ್ಥೆಯೂ ಇದೆ, ಅಂಗವಿಕಲರು ಹಾಗೂ ವೃದ್ಧರು ಯಾವುದೇ ಸಮಸ್ಯೆಯಿಲ್ಲದೆ ಬ್ಯಾಂಕಿನಲ್ಲಿ ವ್ಯವಹರಿಸಬಹುದು ಎಂದು ತಿಳಿಸಿದರು.
ಮೇಲೂರು ಕೆನರಾ ಬ್ಯಾಂಕಿನ ವ್ಯವಸ್ಥಾಪಕಿ ಇಂದುಶ್ರೀ ಪಾಟೀಲ್, ವೈದ್ಯ ಡಾ.ಸತ್ಯನಾರಾಯಣರಾವ್, ಮುನಿಲಕ್ಷ್ಮಮ್ಮ, ಶಿವರುದ್ರಾಚಾರಿ, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ಅಶ್ವಕ್ಅಹ್ಮದ್ ಹಾಗೂ ಬ್ಯಾಂಕಿನ ಸಿಬ್ಬಂದಿ ಈ ಸಂದರ್ಭದಲ್ಲಿ ಹಾಜರಿದ್ದರು.

ನಾವೂ ಮಗುವನ್ನು ದತ್ತು ತೆಗೆದುಕೊಳ್ಳಬಾರದೇಕೆ? – ಭಾಗ 2

0

ಮಗುವಿನ ಆಯ್ಕೆ
ಜೀವನ ಪರ್ಯಂತದ ಒಂದು ಅನನ್ಯವಾದ ಸಂಬಂಧವನ್ನು ರೂಪಿಸಿಕೊಳ್ಳಲು ಆಯ್ಕೆ ಮಾಡುವ ವ್ಯಕ್ತಿಯನ್ನು ಅಂಗಡಿಯಲ್ಲಿ ಬಟ್ಟೆಯನ್ನು ಕೊಳ್ಳುವಂತೆ ಹೆಕ್ಕಿ ತೆಗೆಯುಲಾಗುವುದಿಲ್ಲ. ಹಾಗೆ ದತ್ತಕಕ್ಕೆ ಸಿದ್ದವಿರುವ ಮಕ್ಕಳನ್ನು ಪೋಷಕರೆದುರು ಪ್ರದರ್ಶಿಸುವುದು ಅಮಾನವೀಯವಾಗಬಹುದು. ದತ್ತು ಪಡೆಯುವವರಿಗೂ ಕೂಡ ಹತ್ತಾರು ಪುಟಾಣಿ ಕಂದಮ್ಮಗಳನ್ನು ನೋಡಿ ಒಂದನ್ನು ಆರಿಸಿಕೊಳ್ಳುವುದು ಮಾನಸಿಕ ಹಿಂಸೆಯಾಗಬಹುದು. ಒಂದು ಮಗುವಿನ ಬಣ್ಣ, ಮತ್ತೊಂದರ ಕಣ್ಣು, ಇನ್ನೊಂದರ ಕೂದಲು, ಮಗದೊಂದರ ಮೈಕಟ್ಟು ಅವರಿಗೆ ಖುಷಿ ನೀಡಿ, ಆಯ್ಕೆಯ ಪ್ರಕ್ರಿಯೆಯನ್ನು ತುಂಬಾ ತೊಡಕಾಗಿಸಬಹುದು.
ಹಾಗಾಗಿ ಸಂಸ್ಥೆಯ ಸಿಬ್ಬಂದಿ ಮೊದಲು ಪೋಷಕರ ಆಯ್ಕೆಯ ಮಾನದಂಡಗಳನ್ನು ತಿಳಿದುಕೊಳ್ಳುತ್ತಾರೆ. ಪೋಷಕರು ತಮ್ಮ ಕಲ್ಪನೆಯ ಕಂದಮ್ಮನ ಬಗೆಗೆ ಸಂಪೂರ್ಣ ವಿವರಗಳನ್ನು ನೀಡಿದ ಮೇಲೆ ಅದಕ್ಕೆ ಆದಷ್ಟು ಹತ್ತಿರವಾಗಿ ಹೊಂದುವ ಮಗುವನ್ನು ಮಾತ್ರ ಪೋಷಕರಿಗೆ ತೋರಿಸುತ್ತಾರೆ. ಅದು ಒಪ್ಪಿಗೆಯಾಗದಿದ್ದರೆ ಮತ್ತೊಂದನ್ನು ತೋರಿಸಬಹುದು.
ಪೊಷಕರು ತಮಗೆ ಇಂತದೇ ಧರ್ಮದ, ಜಾತಿಯ, ಹಿನ್ನೆಲೆಯ ಮಗು ಬೇಕೆಂದಿದ್ದರೆ ಅದನ್ನು ಸಂಸ್ಥೆಯವರಿಗೆ ತಿಳಿಸಬೇಕು. ಇದರ ವಿವರಗಳು ಲಭ್ಯವಿದ್ದರೆ ಸಂಸ್ಥೆಯವರು ಅದನ್ನು ಹಂಚಿಕೊಳ್ಳಬಹುದು.
ಪೋಷಕರು ನಮ್ಮ ಸುತ್ತಲೂ ಕಾಣುವಂತಹ ದಷ್ಟಪುಷ್ಟ ಮಕ್ಕಳನ್ನು ನಿರೀಕ್ಷಿಸಬಾರದು. ತಾಯಂದಿರ ಮಮತೆ ಮತ್ತು ಆರೈಕೆ ಇಲ್ಲದೆ ಮಕ್ಕಳು ಸೊರಗಿರಬಹುದು. ಒಮ್ಮೆ ಅದು ದೊರಕಿತೆಂದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ.
ಸಾಕಷ್ಟು ಮಕ್ಕಳನ್ನು ನೋಡಿದ ಮೇಲೆಯೂ ಪೋಷಕರು ಗಟ್ಟಿ ನಿರ್ಧಾರವನ್ನು ಮಾಡುತ್ತಿಲ್ಲವೆಂದಾದರೆ, ಅವರು ದತ್ತು ತೆಗೆದುಕೊಳ್ಳಲು ಇನ್ನೂ ಮಾನಸಿಕವಾಗಿ ಸಿದ್ಧರಾಗಿಲ್ಲದಿರುವ ಸಾಧ್ಯತೆಗಳಿವೆ. ಹಾಗಾಗಿ ಈ ವಿಷಯದಲ್ಲಿ ಆಪ್ತಸಲಹೆ ಪಡೆದು ಮುಂದಿನ ಪ್ರಯತ್ನಗಳನ್ನು ಮಾಡುವುದು ಹಿತಕರ.
ಮನೆಗೆ ಬಂದ ಮಗು
ಮಗುವಿನ ಅಯ್ಕೆಯಾಗಿ ದತ್ತಕದ ಕಾನೂನಿನ ಅಗತ್ಯಗಳನ್ನು ಪೂರೈಸಿದ ನಂತರ ಅದನ್ನು ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸುವ ದಿನ ನಿರ್ಧರಿಸಬಹುದು. ಪೋಷಕರು ನೆನಪಿಡಬೇಕಾದ್ದು ಈ ಕಾಲಘಟ್ಟ ನಿರೀಕ್ಷೆಯ, ಸಂತೋಷದ, ಹೊಸ ಅನುಭವ ಹುಟ್ಟಿಸುವ ಆತಂಕದ, ಗೊಂದಲಗಳ ಸಮಯವಾಗಿರುತ್ತದೆ. ಹೆಣ್ಣೊಬ್ಬಳು ಗರ್ಭಧರಿಸಿ ಮಗುವನ್ನು ಪಡೆಯುವ ಕ್ರಿಯೆಯಲ್ಲಿ ದಂಪತಿಗಳಿಗೆ ಮಾನಸಿಕವಾಗಿ ಸಿದ್ಧರಾಗಲು ಸಾಕಷ್ಪು ಸಮಯವಿರುತ್ತದೆ. ಜೊತೆಗೆ ಎಲ್ಲರಿಂದ ಮುಕ್ತವಾದ ಸಲಹೆಗಳು ಮತ್ತು ಸಹಕಾರ ದೊರಕುತ್ತದೆ. ಆದರೆ ದತ್ತು ಪಡೆಯುವ ಕ್ರಿಯೆ ಭಿನ್ನವಾಗಿರುತ್ತದೆ. ಹಾಗಾಗಿ ಪೋಷಕರು ಆರಂಭದ ಹಂತವನ್ನು ದಾಟಲು ಸಂಸ್ಥೆಯ ಕಾರ್ಯಕರ್ತರ ಸಹಾಯ ಪಡೆಯಬಹುದು. ಬಹಳ ಬೇಗ ಎಲ್ಲವೂ ಸಮತೋಲನಕ್ಕೆ ಬಂದು ಮಗುವನ್ನು ಕುಟುಂಬದ ಸದಸ್ಯನಾಗಿ ಸಹಜವಾಗಿ ಸ್ವೀಕರಿಸಿದ ಮೇಲೆ ಮುಂದೆ ಜೀವನಕ್ಕೆ ಒಂದು ಹೊಸ ದಿಕ್ಕು ಮತ್ತು ಅರ್ಥಗಳೆಲ್ಲವೂ ದೊರೆಯುತ್ತದೆ.
ಮಗುವಿನ ಆರೋಗ್ಯ ತಪಾಸಣೆಯನ್ನು ಸಂಸ್ಥೆಯವರು ನಿಯಮಿತವಾಗಿ ಮಾಡಿಸಿ ಅದರ ದಾಖಲೆಗಳನ್ನು ಇಟ್ಟಿರುತ್ತಾರೆ. ಪೋಷಕರು ಇದರ ಪ್ರತಿಗಳನ್ನು ಪಡೆಯುವುದಲ್ಲದೆ, ತಮ್ಮ ಸಮಾಧಾನಕ್ಕಾಗಿ ಕುಟುಂಬ ವೈದ್ಯರಿಂದ ಮತ್ತೊಮ್ಮೆ ಸಂಪೂರ್ಣ ತಪಾಸಣೆ ಮಾಡಿಸಿಕೊಳ್ಳಬೇಕು.
ಪರಿಸರ ಅಥವಾ ಅನುವಂಶೀಯತೆ?
ಹೆಣ್ಣು ಮಗುವನ್ನು ದತ್ತು ಪಡೆದ ಮಧ್ಯವಯಸ್ಸಿನ ದಂಪತಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಆತಂಕವೆಂದರೆ ಈಗ ಬೆಳೆದು ದೊಡ್ಡವಳಾಗಿರುವ ಮಗಳು ಕೆಳವರ್ಗದ ಜನರ ಜೊತೆ ಹೆಚ್ಚು ಬೆರೆಯುತ್ತಾಳೆ, ಇದಕ್ಕೆ ಅನುವಂಶೀಯತೆ ಕಾರಣವಿರಬಹುದೇ?- ಎನ್ನುವುದು.
ಅನುವಂಶೀಯತೆ ಮತ್ತು ಪರಿಸರಗಳು ವ್ಯಕ್ತಿಯೊಬ್ಬನ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದು ನಿರಂತರ ಚರ್ಚೆಯ ಮತ್ತು ಸಂಶೋಧನೆಯ ವಿಷಯ. ಎಲ್ಲರೂ ಒಪ್ಪುವ ವಿಚಾರವೆಂದರೆ ದೇಹದ ಬಣ್ಣ, ಆಕಾರ, ರೂಪ ಮುಂತಾದ ದೈಹಿಕ ಅಂಶಗಳನ್ನು ಅನುವಂಶೀಯತೆ ನಿರ್ಧರಿಸುತ್ತದೆ. ಇನ್ನು ಬುದ್ಧಿವಂತಿಕೆಯ ಮಟ್ಟದ ಮೇಲೆ ಅನುವಂಶೀಯತೆಯ ಪ್ರಭಾವ ಇರಬಹುದಾಗಿದ್ದರೂ, ಸಂಪೂರ್ಣವಾಗಿಯಂತೂ ಇಲ್ಲ. ಮಗುವಿಗೆ ಸೂಕ್ತ ಮಾರ್ಗದರ್ಶನ, ಉತ್ತೇಜನ ಮತ್ತು ಅವಕಾಶಗಳನ್ನು ನೀಡುವುದರ ಮೂಲಕ ಅದರಲ್ಲಿ ಇರುಬಹುದಾದ ಶಕ್ತಿಯ ಪೂರ್ಣ ಪ್ರಯೋಜನ ಪಡೆಯುವ ತರಬೇತಿ ನೀಡಲು ಪೋಷಕರಿಗೆ ಸಾಧ್ಯವಿದೆ.
ಆದರೆ ಗುಣ, ಸ್ವಭಾವ, ವರ್ತನೆ ಮುಂತಾದ ವ್ಯಕ್ತಿತ್ವದ ಅಂಶಗಳಲ್ಲಿ ಪರಿಸರವೇ ಪ್ರಮುಖವಾಗಿ ಪ್ರಭಾವ ಬೀರುತ್ತದೆ. ಹಾಗಾಗಿ ಪೋಷಕರಿಗೆ ತಮ್ಮ ಮಕ್ಕಳ ವ್ಯಕ್ತಿತ್ವವನ್ನು ತಮಗೆ ಬೇಕಾದಂತೆ ರೂಪಿಸಲು ಮತ್ತು ಅವರಿಗೆ ಉತ್ತಮ ಮಾದರಿಗಳನ್ನು ಒದಗಿಸಲು ಸಂಪೂರ್ಣ ಅವಕಾಶವಿರುತ್ತದೆ. ಇದನ್ನು ಉಪಯೋಗಿಸಿಕೊಳ್ಳದೆ ಅನುವಂಶೀಯತೆಯನ್ನು ದೂಷಿಸುವುದು ನಿಷ್ಪ್ರಯೋಜಕ. ಇದರ ಬಗೆಗೆ ಅಗತ್ಯವಿದ್ದರೆ ತಜ್ಞರಿಂದ ಆಪ್ತಸಲಹೆ ಪಡೆಯಬಹುದು.
ನಮ್ಮ ಬಳಿ ಆಪ್ತಸಲಹೆಗೆ ಬಂದಿದ್ದ ಮೇಲಿನ ಘಟನೆಯಲ್ಲಿ ಪೋಷಕರಿಂದ ಹಂತಹಂತವಾಗಿ ಹೆಚ್ಚಿನ ವಿವರಗಳನ್ನು ಪಡೆಯುತ್ತಾ ಹೋದಂತೆ ತಿಳಿದ ವಿಚಾರ ಇದು-ಮಗುವಿನ ಮೇಲಿನ ಅತಿಯಾದ ಮಮಕಾರದಿಂದ ಸ್ನೇಹಿತರು ಅಥವಾ ಇತರ ವ್ಯಕ್ತಿಗಳೊಡನೆ ಸಹಜವಾಗಿ ಬೆರೆಯಲು ಪೋಷಕರು ಮಗುವಿಗೆ ಅವಕಾಶ ನೀಡಿರಲಿಲ್ಲ. ಬೆಳೆದು ನಿಂತ ಮಗಳ ಮೇಲೂ ಇಂತಹ ನಿರ್ಬಂಧ ಮುಂದುವರೆಸಿದ್ದರು. ಮನುಷ್ಯ ಸಂಪರ್ಕದ ತನ್ನ ಮಾನಸಿಕ ಹಸಿವನ್ನು ತೀರಿಸಿಕೊಳ್ಳಲು ಆ ಮುಗ್ಧ ಮಗು ಮನೆಯ ಅಥವಾ ತೋಟದ ಕೆಲಸದವರೊಡನೆ ನಗುತ್ತಾ ಬೆರೆಯುತ್ತಿತ್ತು. ಇದನ್ನೇ ಅನುವಂಶೀಯವಾಗಿ ಬಂದ ಕೀಳುಗುಣ ಎಂದು ಪೋಷಕರು ಹಣೆಪಟ್ಟಿ ಹಚ್ಚಿದ್ದರು.
ತಂದೆ ತಾಯಿಗಳಿಗೆ ಒಂದು ನಮ್ರ ಸಲಹೆಯೆಂದರೆ ಒಮ್ಮೆ ದತ್ತು ಪಡೆದು ಮಗುವನ್ನು ತಮ್ಮದಾಗಿಸಿಕೊಂಡ ಮೇಲೆ ಅದರ ಹಿನ್ನಲೆಗೆ ಮಗುವಿನ ಭವಿಷ್ಯದ ಯಾವುದೇ ಅಂಶಗಳನ್ನು ದಯವಿಟ್ಟು ಜೋಡಿಸಬೇಡಿ. ಮಗುವನ್ನು ತಮಗೆ ಬೇಕಾದಂತೆ ಬೆಳೆಸಲು ಸಾಧ್ಯತೆ ಇದೆ ಎನ್ನುವ ಮನೋಭಾವದಿಂದ ಮುಂದುವರೆದರೆ ಅನಗತ್ಯ ಕಿರಿಕಿರಿಗಳನ್ನು ತಪ್ಪಿಸಬಹುದು.
ಗುಟ್ಟು ಗುಟ್ಟಾಗಿರಬೇಕೆ?
ದತ್ತು ಪಡೆದ ಎಲ್ಲಾ ತಂದೆತಾಯಿಗಳು ಎದುರಿಸುವ ಸಾಮಾನ್ಯ ದ್ವಂದ್ವಗಳೆದರೆ- ಮಗುವಿಗೆ ದತ್ತಕದ ವಿಷಯವನ್ನು ತಿಳಿಸಬೇಕೇ?, ಹಾಗೆ ತಿಳಿಸುವುದಾದರೆ ಹೇಗೆ ಮತ್ತು ಯಾವಾಗ ತಿಳಿಸುವುದು ಮತ್ತು ಇದರ ಬಗೆಗೆ ಮುನ್ನೆಚ್ಚರಿಕೆ ಏನಾದರೂ ವಹಿಸಬೇಕೆ?- ಎನ್ನುವುದು.
ದತ್ತಕ ವಿಷಯವನ್ನು ಮಗುವಿಗೆ ತಿಳಿಸಬೇಕು ಎನ್ನುವುದು ತಜ್ಞರ ಅಭಿಮತವಾದರೂ ಅದನ್ನು ಎಷ್ಟು ವಯಸ್ಸಿಗೆ ತಿಳಿಸಬೇಕು ಎನ್ನುವುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಮಗುವಿನ ಗ್ರಹಿಕೆಯ ಮಟ್ಟವನ್ನು ಅನುಸರಿಸಿ ಆದಷ್ಟು ಬೇಗ ತಿಳಿಸುವುದು ಪೋಷಕರ ಮತ್ತು ಮಕ್ಕಳ ಸಂಬಂಧಕ್ಕೆ ಹಿತಕರ.
ಆದರೆ ಹೆಚ್ಚಿನ ಪೋಷಕರು ನಂಬಿರುವುದು ಮತ್ತು ಪಾಲಿಸುವುದು ದತ್ತಕದ ವಿಚಾರವನ್ನು ಗುಟ್ಟಾಗಿಡುವುದೇ ಒಳ್ಳೆಯದು ಎನ್ನುವುದು. ವಿಷಯವನ್ನು ಬಹಿರಂಗವಾಗಿಸಲು ಅವರಿಗಿರುವ ದೊಡ್ಡ ಆತಂಕವೆಂದರೆ, ಎಲ್ಲಾ ತಿಳಿದ ಮಗುವಿಗೆ ತಮ್ಮ ಮೇಲಿನ ಪ್ರೀತಿ ಆದರಗಳು ಕಡಿಮೆಯಾಗಬಹುದು ಮತ್ತು ತನ್ನ ಹೆತ್ತವರನ್ನು ಮಗು ಹುಡುಕಿಕೊಂಡು ಹೋಗಬಹುದು-ಎನ್ನುವುದು. ಅನಧಿಕೃತವಾಗಿ ದತ್ತು ಪಡೆದ ಪೋಷಕರಿಗೆ ಇನ್ನೂ ಇತರ ತೊಂದರೆಗೆ ಸಿಲುಕಿಕೊಳ್ಳುವ ಹೆಚ್ಚಿನ ಆತಂಕ ಸೇರಿರುತ್ತದೆ. ಹೀಗಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದಿದ್ದರೂ ದತ್ತಕವನ್ನು ಗುಟ್ಟಾಗಿಡುವುದು ಇದಕ್ಕೆ ಪರಿಹಾರವಲ್ಲ.
ಹಾಗೊಮ್ಮೆ ದತ್ತಕದ ವಿಷಯವನ್ನು ಪೋಷಕರು ಗುಟ್ಟಾಗಿ ಇಟ್ಟರೂ ಮಗು ದೊಡ್ಡದಾದ ಮೇಲೆ ಸುತ್ತಲಿನ ಯಾರಾದರೂ ಇದರ ಬಗೆಗೆ ಮಗುವಿಗೆ ಹೇಳಬಹುದು. ಯಾರೂ ಹೇಳದಂತೆ ತಡೆಯುವುದು ಪೋಷಕರ ಹಿಡಿತದಲ್ಲಿರುವುದಿಲ್ಲ. ಒಮ್ಮೆ ಮೂರನೆಯವರಿಂದ ಇದು ಮಗುವಿಗೆ ತಿಳಿದಾಗ ಅದರಲ್ಲಿ ಒಮ್ಮೆಲೆ ಪರಕೀಯ ಭಾವನೆ ಮೂಡುವುದಲ್ಲದೆ, ತಾನು ಇಷ್ಟು ದಿನ ಅಪ್ಪ ಅಮ್ಮ ಎಂದು ನಂಬಿದ್ದವರು ತನಗೆ ವಿಷಯ ತಿಳಿಸದೆ ಮೋಸ ಮಾಡಿದರು ಎಂದುಕೊಳ್ಳುತ್ತದೆ. ಇದರಿಂದ ಅವರ ಸಂಬಂಧದಲ್ಲಿ ಸರಿಪಡಿಸಲಾರದ ಕಂದಕ ಉಂಟಾಗುತ್ತದೆ. ಇದನ್ನು ತಪ್ಪಿಸಲು ಪೋಷಕರಿಗೆ ಇರುವ ಒಂದೇ ದಾರಿಯೆಂದರೆ ತಾವಾಗಿಯೇ ವಿಷಯವನ್ನು ಹೇಳುವುದು.
ಹಾಗಾದರೆ ಯಾವಾಗ ಮತ್ತು ಹೇಗೆ ಹೇಳುವುದು? ಇದರ ಬಗೆಗೆ ಯೋಚಿಸುವ ಮೊದಲು ಪೋಷಕರು ತಮ್ಮ ಮತ್ತು ಮಕ್ಕಳ ಬಾಂಧವ್ಯ ಗಟ್ಟಿಯಾಗಿದೆ ಎನ್ನವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಸ್ವಂತ ಮಕ್ಕಳಾದ ತನ್ನ ಸ್ನೇಹಿತರ ಪೋಷಕರಷ್ಟೇ ತಮ್ಮ ಅಪ್ಪ ಅಮ್ಮಂದಿರೂ ತನ್ನನ್ನು ಪ್ರೀತಿಸುತ್ತಾರೆ, ಇಷ್ಟಪಡುತ್ತಾರೆ ಎಂದು ಮಗುವಿಗೆ ಅನ್ನಿಸಿರಬೇಕು.
ಸಾಮಾನ್ಯವಾಗಿ ಮಗುವಿಗೆ ಸುಮಾರು ಹತ್ತು ವರ್ಷಗಳಾಗುವಷ್ಟರಲ್ಲಿ ದತ್ತಕದ ವಿಷಯವನ್ನು ತಿಳಿಸಬಹುದು. ಮಗುವಿನೊಡನೆ ಪೋಷಕರು ಇದರ ಬಗೆಗೆ ಖುದ್ದಾಗಿ ಮಾತನಾಡಬೇಕು. ಅಗತ್ಯವೆನ್ನಿಸಿದರೆ ಆಪ್ತಸಲಹೆಗಾರರ ಸಹಾಯ ಪಡೆದರೂ ದತ್ತಕದ ವಿಷಯವನ್ನು ಅವರ, ವೈದ್ಯರು, ಕುಟುಂಬದ ಆತ್ಮೀಯರ, ಅಜ್ಜ ಅಜ್ಜಿ ಮುಂತಾದವರ ಮೂಲಕ ಹೇಳಿಸಬಾರದು. ಪೋಷಕರಿಬ್ಬರೂ ಒಟ್ಟಾಗಿ ಕುಳಿತು ಮಾತನಾಡಬೇಕು. ಮಗು ಕೇಳುವವರೆಗೂ ಕಾಯದೇ ಪೋಷಕರೇ ಮೊದಲ ಹೆಜ್ಜೆ ಇಡಬೇಕು. ಹೇಳುವ ಮಾತುಗಳು ಸುಮಾರಾಗಿ ಈ ಧಾಟಿಯಲ್ಲಿರಬಹುದು.
“ಪುಟ್ಟಾ, ನೀನು ಸಿಗುವ ಮೊದಲು ಬಹಳ ವರ್ಷಗಳಿಂದ ನಮಗೆ ನಿನ್ನಂತದೇ ಒಂದು ಪುಟಾಣಿ ಇದ್ದರೆ ಎಷ್ಟು ಚನ್ನಾಗಿರುತ್ತದೆ ಅನ್ನಿಸುತ್ತಿತ್ತು. ಮನೆಯಲ್ಲಿ ಮಕ್ಕಳಿಲ್ಲದೆ ನಮಗೆ ಬಹಳ ಬೇಜಾರಾಗಿತ್ತು. ನಿನ್ನನ್ನು ನೋಡಿದ ಕೂಡಲೇ ನಮಗೆ ಬಹಳ ಆಸೆಯಾಯಿತು. ನೀನು ಯಾವ ಅಪ್ಪ ಅಮ್ಮನಿಂದ ಬಂದೆ ಅಂತ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರೋ ಒಬ್ಬ ಸ್ನೇಹಿತರು ನೀನಿರುವ ಸ್ಥಳವನ್ನು ತೋರಿಸಿ ಈ ಪುಟಾಣಿಗೆ ಅಪ್ಪ ಅಮ್ಮ ಬೇಕಾಗಿದೆ, ಅಂತ ಹೇಳಿದರು. ಹಾಗಾಗಿ ನಾವು ನಿನಗೆ ಅಪ್ಪ ಅಮ್ಮ ಆದೆವು. ಅವತ್ತಿನಿಂದ ನಾವೆಲ್ಲಾ ಒಟ್ಟಾಗಿ ನಗುನಗುತ್ತಾ ಬದುಕಿದೀವಿ. ನೀನು ಬಹಳ ಮುದ್ದಾಗಿ ಮತ್ತು ನಮಗೆ ಇಷ್ಟ ಆಗೋ ಹಾಗೆ ಇದ್ದೀಯಾ. ನೀನು ಯಾವಾಗಲೂ ನಮಗೆ ಬೇಕು”
ಮಗುವನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಾತನಾಡಬೇಕು. ಪೊಷಕರಲ್ಲಿರಬಹುದಾದ ಮುಜುಗರ, ಆತಂಕ, ಹಿಂಜರಿಕೆಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ. ಹಾಗಾಗಿ ಅವುಗಳನ್ನು ನಿವಾರಿಸಿಕೊಂಡು ಸಹಜ ಮನಸ್ಥಿತಿಯಲ್ಲಿ ಮಾತನಾಡಲು ಪೋಷಕರಿಗೆ ಸಾಧ್ಯವಾಗಬೇಕು.
ಪ್ರಾರಂಭದ ಹಂತದಲ್ಲಿ ಮಗು ಅಳಬಹುದು, ಸಿಟ್ಟಾಗಬಹುದು, ಬೇಸರಮಾಡಿಕೊಳ್ಳಬಹುದು. ಆದರೆ ಪೋಷಕರು ತಮ್ಮ ಪ್ರೀತಿಯ ಅಭಿವ್ಯಕ್ತಿಯನ್ನು ಮುಂದುವರೆಸಿದರೆ ನಿಧಾನವಾಗಿ ಮಗು ವಾಸ್ತವವನ್ನು ಒಪ್ಪಿಕೊಳ್ಳುತ್ತದೆ.
ತಂದೆತಾಯಿಗಳ ಮಾತನ್ನು ಕೇಳಿದ ಮಗು ಬೇರೆ ಬೇರೆ ರೀತಿಯ ಪ್ರಶ್ನೆ ಕೇಳಬಹುದು. ಇಲ್ಲಿ ಎಚ್ಚರ ವಹಿಸಬೇಕಾದದ್ದು ಮಗುವಿಗೆ ಸುಳ್ಳು ಹೇಳಬಾರದು ಅಥವಾ ಮಗುವಿನ ಕುತೂಹಲವನ್ನು ಹತ್ತಿಕ್ಕಬಾರದು. ದತ್ತು ನೀಡಿದ ಸಂಸ್ಥೆ ಅಥವಾ ಇತರ ಆಪ್ತಸಲಹೆಗಾರರ ಸಹಾಯವನ್ನು ಪದೇಪದೇ ಉಪಯೋಗಿಸಬಹುದು.
ಈ ಎಲ್ಲಾ ಪ್ರಕ್ರಿಯೆ ಒಂದು ದಿನದಲ್ಲಿ ಮುಗಿಯುತ್ತದೆ ಎಂದು ಪೋಷಕರು ಅಪೇಕ್ಷಿಸಬಾರದು. ಕೆಲವೊಮ್ಮೆ ಹಂತಹಂತವಾಗಿ ಅಥವಾ ಹಲವಾರು ಬಾರಿ ಮಗುವಿಗೆ ಹೇಳಬೇಕಾಗಬಹುದು. ಇದರಿಂದ ದೊರೆಯಬಹುದಾದ ದೂರಾಗಮೀ ಉತ್ತಮ ಪರಿಣಾಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪೋಷಕರು ಹತಾಶರಾಗದೆ ವ್ಯವಸ್ಥಿತವಾಗಿ ಕೆಲಸ ಮಾಡಬೇಕು.
ದತ್ತಕದ ವಿಷಯವನ್ನು ಭಾವೀ ಪತಿ ಅಥವಾ ಪತ್ನಿಗೆ ತಿಳಿಸುವುದು ಇಡೀ ಕುಟುಂಬದ ನಿರ್ಧಾರವಾಗಬೇಕು. ಎಲ್ಲಾ ವಿಚಾರವನ್ನು ತೆರೆದಿಡುವುದು ಮುಂದಿನ ಜೀವನದ ದೃಷ್ಟಿಯಿಂದ ಉತ್ತಮ. ಯಾವುದೇ ದೀರ್ಘಕಾಲದ ಆತ್ಮೀಯ ಸಂಬಂಧವನ್ನು ಸುಳ್ಳು ಹೇಳುವುದರ ಅಥವಾ ವಿಷಯಗಳನ್ನು ಗುಟ್ಟಾಗಿಡುವುದರ ಮೂಲಕ ಕಟ್ಟಲಾಗುವುದಿಲ್ಲ. ಪರಸ್ಪರ ನಂಬಿಕೆ ಗಟ್ಟಿ ಸಂಬಂಧಗಳ ಒಂದು ಅಡಿಗಲ್ಲು.
ಕೊನೆಯಲ್ಲಿ
ಜೀವನದಲ್ಲಿ ಮಕ್ಕಳು ನೀಡಬಹುದಾದ ಸಂತೋಷ ಮತ್ತು ಪೂರ್ಣತೆಯ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪೋಷಕರು ದತ್ತಕದ ಬಗೆಗೆ ಯೋಚಿಸಬೇಕು. ಯಾವುದೇ ಹಂತದಲ್ಲಿಯೂ ಆತುರ ಪಡದೆ, ಎಲ್ಲಾ ಮಾಹಿತಿ ಪಡೆದು, ತಮ್ಮ ಅನುಮಾನ ಆತಂಕಗಳನ್ನು ಪರಿಹರಿಸಿಕೊಂಡು ಮುಂದುವರೆಯಬೇಕು. ಮಗುವನ್ನು ಆರಿಸುವಾಗ, ಬೆಳೆಸುವಾಗ ಗಾಳಿಗೋಪುರವನ್ನು ಕಟ್ಟದೆ ವಾಸ್ತವದ ಕಲ್ಪನೆ ಇಟ್ಟುಕೊಳ್ಳಬೇಕು. ಮಗು ಒಮ್ಮೆ ಮನೆಗೆ ಬಂದ ಮೇಲೆ ಹಿಂತಿರುಗಿ ನೋಡಬಾರದು.
ಎಲ್ಲಕ್ಕಿಂತ ಹೆಚ್ಚಾಗಿ ನೆನಪಿಡಬೇಕಾದದ್ದು ಯಾವುದೂ ಸಮಸ್ಯೆಗಳೇ ಬಾರದಿದ್ದಾಗ ಮಾತ್ರ ದತ್ತು ಪಡೆದಿದ್ದು ಸಾರ್ಥಕವಾಯಿತು ಎಂದುಕೊಳ್ಳಬಾರದು. ಸ್ವಂತ ಮಕ್ಕಳಿರುವಾಗ ಕೂಡ ಸಮಸ್ಯೆಗಳಿದ್ದೇ ಇರುತ್ತವೆ. ಕಷ್ಟದ ಪರಿಸ್ಥಿತಿಗಳನ್ನು ಒಪ್ಪಿಕೊಂಡು ನಿಭಾಯಿಸುವುದನ್ನು ಕಲಿಯುವುದು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗ. ಎಲ್ಲಾ ಹಂತದಲ್ಲಿಯೂ ಪೋಷಕರ ಮತ್ತು ಮಕ್ಕಳ ಸಹಾಯಕ್ಕೆ ದತ್ತು ಪಡೆದು ಸುಖಿಯಾಗಿ ಬದುಕುತ್ತಿರುವ ಪೋಷಕರು, ಸ್ವಯಂಸೇವಾ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಆಪ್ತಸಲಹೆಗಾರರು ಇದ್ದೇ ಇರುತ್ತಾರೆ.
ಮುಂದುವರೆಯುವುದು….
ವಸಂತ್ ನಡಹಳ್ಳಿ

ಅವ್ಯವಸ್ಥೆಯ ಆಗರವಾಗಿರುವ ನೆಹರೂ ಕ್ರೀಡಾಂಗಣ

0

ಉತ್ತಮ ಗುಣಮಟ್ಟದ ಕ್ರೀಡಾಂಗಣವಾಗಿ ರೂಪಿಸಲು ಉದ್ದೇಶಿಸಿದ್ದ ನಗರದ ನೆಹರೂ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದ್ದು, ಕ್ರೀಡೆಗಳು ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ.
ಕ್ರೀಡಾಂಗಣದ ಕಚೇರಿಯಲ್ಲಿ ಹಾವಿನ ಪೊರೆಗಳು ಕಂಡು ಬಂದಿದ್ದು ಕ್ರೀಡಾಂಗಣದ ಕಾವಲುಗಾರರು ಕಚೇರಿಗೆ ಹೋಗಲು ಹೆದರುವಂತಾಗಿದೆ. ಟ್ರಾಕ್ ಮೇಲೆ ಹುತ್ತಗಳು ಮೊಳೆತಿವೆ. ಕ್ರೀಡಾಂಗಣದ ಟ್ರಾಕ್ ಅಕ್ಕ ಪಕ್ಕ, ಪೆವಿಲಿಯನ್ ಸುತ್ತಮುತ್ತ, ಬ್ಯಾಸ್ಕೆಟ್ ಬಾಲ್ ಕೋರ್ಟ್ ಸುತ್ತ ಪಾರ್ಥೇನಿಯಂ ಮತ್ತು ಕಳೆಗಿಡಗಳು ಮೂಡಿವೆ. ಜೂಜುಕೋರರ ಅವ್ಯವಹಾರದ ತಾಣವಾಗಿ ಕ್ರೀಡಾಂಗಣ ಬದಲಾಗಿದೆ.
ಕ್ರೀಡಾಂಗಣದ ಪ್ರವೇಶದ್ವಾರದಲ್ಲಿರುವ ಕಬ್ಬಣದ ಗೇಟನ್ನು ದುಷ್ಕರ್ಮಿಗಳು ಮುರಿದುಹಾಕಿದ್ದು, ರಾತ್ರಯ ವೇಳೆಯಲ್ಲಿ ಪೆವಿಲಿಯನ್ ಮೇಲಿನ ಕಲ್ಲುಚಪ್ಪಡಿಗಳನ್ನು ಹಾಗೂ ಲಾಂಗ್ ಜಂಪ್ ಪಿಟ್ನಲ್ಲಿರುವ ಮರಳನ್ನು ಕದ್ದು ಸಾಗಿಸಿದ್ದಾರೆ. ಇಲ್ಲಿನ ಎರಡು ಕಚೇರಿಗಳಂತೂ ಗೋಡೆಯೆಲ್ಲಾ ಬೂಜು ಕಟ್ಟಿದ್ದು, ಮಳೆ ನೀರು ಸೋರುತ್ತಿರುತ್ತದೆ. ಕ್ರೀಡೆಗೆ ಉತ್ತೇಜನ ನೀಡಲು ಹಲವಾರು ಯೋಜನೆಗಳನ್ನು ರೂಪಿಸಿರುವುದಾಗಿ ಜನಪ್ರತಿನಿಧಿಗಳು ಹೇಳಿದ್ದರು. ಆದರೆ ಇಲ್ಲಿ ಯಾವ ಕಾಮಗಾರಿಗಳೂ ನಡೆಯದೇ ಅವ್ಯವಹಾರಗಳ ತಾಣವಾಗಿದೆ ಎಂದು ಕ್ರೀಡಾಪಟುಗಳು ದೂರಿದ್ದಾರೆ.
‘ಡಿಸೆಂಬರ್ 4 ರಿಂದ ಸರ್ಕಾರಿ ನೌಕರರ ಕ್ರೀಡಾಕೂಟ ಪ್ರಾರಂಭವಾಗಲಿದೆ. ಕ್ರೀಡಾಂಗಣದಲ್ಲಿ ಸೂಕ್ತ ಭದ್ರತೆಯಿಲ್ಲದ ಕಾರಣ ಇರುವ ಎಲ್ಲಾ ಅನುಕೂಲಗಳೂ ಕ್ರೀಡಾಪಟುಗಳಿಗೆ ಲಭ್ಯವಾಗದಂತಾಗಿದೆ. ರಾತ್ರಿ ವೇಳೆ ಕಾವಲು ಇರದ ಕಾರಣ ಕಳ್ಳತನಗಳು ನಡೆಯುತ್ತಿವೆ. ಹಾವಿನ ಕಾಟದಿಂದಾಗಿ ಕಚೇರಿಯೊಳಗೆ ಹೋಗಲು ಭಯವಾಗುತ್ತದೆ’ ಎನ್ನುತ್ತಾರೆ ಹಗಲುಪಾಳಿಯ ಕಾವಲುಗಾರ ಶ್ರೀನಿವಾಸ್.

ಕನ್ನಡ ಶಾಲೆಗಳನ್ನು ಮುಚ್ಚುವವರ ವಿರುದ್ಧ ಧ್ವನಿ ಎತ್ತಿ

0

ಜನಜೀವನದ ಎಲ್ಲಾ ವಿಭಾಗದಲ್ಲೂ ಕನ್ನಡ ಬಳಕೆ ಕಡ್ಡಾಯವಾಗಬೇಕೆನ್ನುವ ಒತ್ತಾಯವನ್ನು ಹೇರಬೇಕಾದ ಸಮಯದಲ್ಲಿ ನಾವಿನ್ನು ಕನ್ನಡ ಶಾಲೆಗಳನ್ನು ಮುಚ್ಚುವವರ ವಿರುದ್ಧ ಧ್ವನಿ ಎತ್ತಬೇಕಾದ ಸ್ಥಿತಿಯಲ್ಲಿದ್ದೆವೆ -ಎಂದು ಪ್ರಗತಿಪರ ಕುರಿ ಸಾಗಾಣಿಕೆದಾರರ ಸಹಕಾರ ಸಂಘದ ಅಧ್ಯಕ್ಷ ಸಿ.ವಿ.ಲೋಕೇಶ್ಗೌಡ ತಿಳಿಸಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯೋತ್ಸವ ಸಂಭ್ರಮ ಸಂಪನ್ನಗೊಳ್ಳುವುದು ಕನ್ನಡದ ಸಮಸ್ಯೆಗಳಿಗೆ ಇತಿಶ್ರೀ ಹಾಡಿದಾಗಲೇ ಅನ್ನುವುದು ಸತ್ಯ. ಕನ್ನಡ ಪ್ರೀತಿ ನಿತ್ಯನೂತವಾಗಿರಲಿ. ಕನ್ನಡ ಕಟ್ಟುವ ಕಾರ್ಯವನ್ನು ಮುಂದುವರಿಸೋಣ. -ಕನ್ನಡಿಗರು ಮನಸ್ಸು ಮಾಡಿದರೆ ಕನ್ನಡ ಭಾಷೆಯ ಅಭಿವೃದ್ಧಿ, ಕನ್ನಡ ಪುಸ್ತಕಗಳ ಮಾರಾಟದ ಭರಾಟೆಗೆ ವೇಗೋತ್ಕರ್ಷ ತಂದುಕೊಡಲು ಸಾಧ್ಯವಿದೆ. ಬೆಂಗಳೂರಿನಲ್ಲಿ ವಾಸಿಸುವ ಕನ್ನಡಿಗರು ಕನ್ನಡವೂ ಅಲ್ಲದ ಇತ್ತ ಇಂಗ್ಲಿಷ್ ಕೂಡ ಅಲ್ಲದ ‘ಕಂಗ್ಲಿಷ್’ ಭಾಷೆಗೆ ಮೊರೆ ಹೋಗಿರುವುದು ಯಾವ ಪುರುಷಾರ್ಥಕ್ಕಾಗಿ. ನಮ್ಮ ನಮ್ಮ ಮನೆಗಳಲ್ಲಿ ದಿನ ಬೆಳಗಾದರೆ ಕೇಳಿಬರುವ ಭಾಷೆಯ ಇಂಪು ಕನ್ನಡದ್ದಾಗಿರಲಿ ಎಂದು ಹೇಳಿದರು.
ಗ್ರಾಮದ ಹಿರಿಯರಾದ ಬ್ಯಾಟರಾಯಶೆಟ್ಟಿ, ದಾಮೋದರ್, ಲಕ್ಷ್ಮಣಮೂರ್ತಿ, ಶಿಕ್ಷಕ ಕೆಂಪಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಪಾಪಣ್ಣ, ದ್ಯಾವಪ್ಪ, ಉಪನ್ಯಾಸಕ ಈಶ್ವರ್, ಮಂಜುನಾಥ, ಚಲಪತಿ, ವೆಂಕಟೇಶ್, ಮಂಜುಳಾ ಸುರೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದ ಕಛೇರಿಯಲ್ಲಿ ಕಂಡುಬಂದ ಹಾವಿನ ಪೊರೆ

0

ಶಿಡ್ಲಘಟ್ಟದ ನೆಹರೂ ಕ್ರೀಡಾಂಗಣದ ಕಛೇರಿಯಲ್ಲಿ ಕಂಡುಬಂದ ಹಾವಿನ ಪೊರೆ.

ಕನ್ನಡಪರ ಕೆಲಸಗಳು ಹೆಚ್ಚಾಗಲಿ

0

ಕನ್ನಡ ರಾಜ್ಯೋತ್ಸವ ಕೇವಲ ಆಚರಣೆಗಷ್ಟೇ ಸೀಮಿತವಾಗದೆ ವಿವಿಧ ಕನ್ನಡಪರ ಕೆಲಸಗಳಿಗೆ ಪೂರಕವಾಗಲಿ ಎಂದು ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ರಾಜ್ಯೋತ್ಸವವನ್ನು ಕೇವಲ ಆಚರಣೆಗಷ್ಟೇ ಸೀಮಿತಗೋಳಿಸದೇ ನಾಡು–ನುಡಿಯ ಸ್ಮರಣೆ ಮಾಡಿಕೊಳ್ಳುವುದರೊಂದಿಗೆ ಕನ್ನಡ ನಾಡು-ನುಡಿಯನ್ನು ಇನ್ನಷ್ಟು ಸಂಪದ್ಭರಿತ, ಶ್ರೀಮಂತಗೊಳಿಸುವ ಬಗೆ ಹೇಗೆ, ನಾಡು ಎದುರಿಸುತ್ತಿರುವ ಸಮಸ್ಯೆಗಳು ಯಾವುವು, ಕನ್ನಡಿಗರು ಮಾಡಬೇಕಾದುದೇನು ಮುಂತಾದ ಹತ್ತು ಹಲವು ಸಂಗತಿಗಳ ಕುರಿತು ಗಂಭೀರ ಸ್ವರೂಪದ ಚರ್ಚೆ, ಸಮಾಲೋಚನೆ, ಚಿಂತನೆಗಳು ನಡೆಯಬೇಕಾಗಿದೆ ಎಂದು ಹೇಳಿದರು.
ಮಕ್ಕಳಿಂದ ಕನ್ನಡ ನಾಡು ನುಡಿಯನ್ನು ಪ್ರಶಂಸಿಸುವ ಗೀತೆಗಳಿಗೆ ನೃತ್ಯ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಿವೃತ್ತ ಶಿಕ್ಷಕ ನಂದೀಶ್, ಲಕ್ಷ್ಮೀನಾರಾಯಣಪ್ಪ, ಮುನಿರಾಜು, ವೆಂಕಟಸ್ವಾಮಿ, ಜಗದೀಶ್ ಬಾಬು ಮತ್ತು ಶಶಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಹೊಸಪೇಟೆ ಶಶಿಕುಮಾರ್, ರಮೇಶ್, ಬಸಪ್ಪ, ಪ್ರಕಾಶ್, ಲಕ್ಷ್ಮೀನಾರಾಯಣಪ್ಪ, ಚನ್ನಕೇಶವ, ಮುರಳಿ ಹಾಗೂ ಕನ್ನಡಸೇನೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ವೃತ್ತಿ ಶಿಕ್ಷಣ ಏಕರೂಪ ಪರೀಕ್ಷಾ ಪದ್ಧತಿ

0

ಇದೇ ಮೊದಲ ಬಾರಿಗೆ 2013 ರಲ್ಲಿ ಪಿ.ಯು.ಸಿ. ಪೂರೈಸಿದ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನೆದುರಿಸಬೇಕಾಗಿದೆ. ಇಷ್ಟು ವರ್ಷಗಳ ಕಾಲ ರಾಜ್ಯದ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿ ಅದರಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಇಂಜಿನಿಯರ್, ಆರ್ಕಿಟೆಕ್ಟ್, ವೈದ್ಯ ಮತ್ತು ದಂತವೈದ್ಯ ಕೋರ್ಸುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತಿತ್ತು. ವಿದ್ಯಾರ್ಥಿಗಳು ತಮ್ಮ ರ್ಯಾಂಕಿಂಗ್ ನೋಡಿಕೊಂಡು ತಮ್ಮ ಕಾಲೇಜುಗಳ ಆಯ್ಕೆಗಳನ್ನು ಮಾಡಿಕೊಳ್ಳುವ ಪದ್ಧತಿ ಇತ್ತು. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದ್ದ ಪದ್ದತಿ. ಈಗ ರಾಜ್ಯ ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳು ಅಣಿಯಾಗಬೇಕಿದೆ. ಈಗ ಅವರ ಆಯ್ಕೆಯ ಹರಹು ರಾಷ್ಟ್ರಮಟ್ಟದ್ದಾಗಿರುತ್ತದೆ. ಇಲ್ಲಿನ ವಿದ್ಯಾರ್ಥಿಗಳು ತಮಗಿಷ್ಟವಾದ ಬೇರೆ ಬೇರೆ ರಾಜ್ಯಗಳ ಕಾಲೇಜುಗಳನ್ನು ಸೇರಬಹುದ್ದಾಗಿದ್ದಂತೆ ಬೇರೆ ಬೇರೆ ರಾಜ್ಯಗಳ ವಿದ್ಯಾರ್ಥಿಗಳು ಕೂಡ ಈ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ. ಇದೆಲ್ಲವೂ ಸರಿ. ಆದರೆ ಇಲ್ಲಿನ ವಿದ್ಯಾರ್ಥಿಗಳು ಈಗ ಒಮ್ಮಿಂದೊಮ್ಮೆನೇ ರಾಷ್ಟ್ರಿಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಲು ಸಿದ್ದರಾಗಿದ್ದಾರೆಯೇ? ಇಲ್ಲಿನ ಶೈಕ್ಷಣಿಕ ಪಠ್ಯ ಕೇಂದ್ರಿಯ ಪಠ್ಯ ಕ್ರಮದೆದುರು ಕಡಿಮೆ ಗುಣಮಟ್ಟದ್ದಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಕೇಂದ್ರಿಯ ಪಠ್ಯ ಕ್ರಮದ ಮೇಲೆ ತಯಾರಾಗಿ ಬರುವ ಪ್ರಶ್ನೆಗಳಿಗೆ ಉತ್ತರಿಸಲು ನಮ್ಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗಿದೆಯೇ? ಹಾಗಿಲ್ಲದಿದ್ದಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳೇ ನಮ್ಮ ರಾಜ್ಯದಲ್ಲಿನ ಕಾಲೇಜುಗಳಲ್ಲಿ ಪ್ರವೇಶ ಪಡೆದರೆ ನಮ್ಮವರಿಗೆ ಜಾಗ ಎಲ್ಲಿ? ಇವರ ಭವಿಷ್ಯವೇನು? ಇತ್ಯಾದಿ ಪ್ರಶ್ನೆಗಳು ಧುತ್ತೆಂದು ನಮ್ಮೆದುರಿಗೆ ಬಂದು ನಿಲ್ಲುವುದು ಸಹಜ. ಬಹುಶಃ ಇಂತಹ ಗೊಂದಲಗಳ ಪರಿಣಾಮವಾಗಿತೇ? ಕೆಲವು ಕಡೆ ವಿದ್ಯಾರ್ಥಿಗಳಿಂದ ಏಕರೂಪದ ಪರೀಕ್ಷಾ ಪದ್ಧತಿಯ ತಕ್ಷಣದ ಜಾರಿಗೆ ವಿರೋಧ ವ್ಯಕ್ತವಾಗಿದೆ. ಪ್ರತಿಭಟನೆಗಳು ಚದುರಿದಂತೆ ನಡೆದಿವೆ. ಯಾವುದೇ ಹೊಸತನಕ್ಕೆ ಬದಲಾವಣೆಗೆ ಅಣಿಯಾದ ಸಂದರ್ಭದಲ್ಲೆಲ್ಲಾ ಇದು ಸಹಜವಾದ ಪ್ರಕ್ರಿಯೆಯೂ ಹೌದು.
ಯಾವುದೇ ಪೂರ್ವ ಸಿದ್ದತೆಯನ್ನು ಕೈಗೊಳ್ಳದೇ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಏರಿಸುವ ಪ್ರಯತ್ನಗಳಾಗದೆ, ಏಕಾಏಕಿ ಇವರನ್ನು ಪರೀಕ್ಷೆ ಎದುರಿಸಿ ಎಂದು ಹೇಳಿದರೆ ಅದರ ತೀವ್ರ ಪರಿಣಾಮವಾಗುವುದು ವಿದ್ಯಾರ್ಥಿಗಳ ಮೇಲೆ ಎಂಬುದರಲ್ಲಿ ಎರಡು ಮಾತಿರಲಾರದು. ಆದರೆ ಕೇಂದ್ರದಿಂದ ಏಕರೂಪದ ಶಿಕ್ಷಣ ನೀತಿಗೆ ಒತ್ತಡ ಬೀಳುತ್ತ ಬಹಳ ವರ್ಷಗಳಾದರೂ, ಜಾರಿಗೊಳಿಸದೆ, ಮುಂದೂಡುತ್ತ ಮುಂದೂಡುತ್ತ ಹೋದದ್ದರ ಪರಿಣಾಮ ಇದು. ಮೊದಲು ಮುಂದೂಡವುದರಲ್ಲೇ ಜಾಣತನವನ್ನು ತೋರಿದಕ್ಕೆ, ಇದು ಇಂದು ಇದ್ದಕ್ಕಿದ್ದಂತೆ ಎಂಬ ಜನಾಭಿಪ್ರಾಯ ಮೂಡುವಂತಾಗಿದೆ. ಈಗ ಮೇಲಿನಿಂದ ಕಟ್ಟಪ್ಪಣೆ ಜಾರಿಯಾದ ಸಂದರ್ಭದಲ್ಲಿ ಮತ್ತೆ ಮೂಂದೂಡಲಾಗದ ಇಕ್ಕಟ್ಟಿನಲ್ಲಿ ಸಿಲುಕಿ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ ಪ್ರಪಂಚದ ಎಲ್ಲ ರಂಗಗಳಲ್ಲೂ ಬದಲಾವಣೆಯ ಗಾಳಿ ಬೀಸುತ್ತಿರುವಾಗ ಅದು ಶೈಕ್ಷಣಿಕ ರಂಗವನ್ನು ಬಿಡಲು ಸಾಧ್ಯವಿಲ್ಲ ಎಂಬ ಸತ್ಯ ಸ್ವಲ್ಪ ಮೊದಲೇ ಅರ್ಥವಾಗಿದಿದ್ದರೆ, ವಿಧ್ಯಾರ್ಥಿಗಳ ದೃಷ್ಟಿಯಿಂದ ಒಳಿತಾಗುತ್ತಿತ್ತು. ಈ ವರ್ಷದ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯದ ಪಠ್ಯಕ್ರಮವಿದೆ, ಪ್ರಥಮ ಪಿಯುಸಿಗೆ ಕೇಂದ್ರಿಯ ಪಠ್ಯಕ್ರಮ ಜಾರಿಯಾಗಿದೆ ಹಾಗಾಗಿ ನಿರ್ಧಿಷ್ಟವಾಗಿ ತೊಂದರೆಯಾಗಿರುವುದು ಸಧ್ಯ ದ್ವಿತೀಯ ಪಿಯುಸಿಯಲ್ಲಿ ಓದುತ್ತಿರುವವರಿಗೆ ಮಾತ್ರ.
ಹಿಂದಿರುಗಿ ನೋಡಲಿಕ್ಕಾಗಿ, ಹಿಂದಿನವರನ್ನು ಹಳಿಯುತ್ತ ಕೂರುವುದಕ್ಕಾಗಲಿ ಈಗ ಸಮಯವಿಲ್ಲ, ಇದ್ದ ಸಮಯದಲ್ಲೇ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸುವ ಗುರುತರ ಜವಬ್ದಾರಿ ಶಿಕ್ಷಕ ಸಮುದಾಯದ ಮೇಲಿದೆ. ಪ್ರತಿಭಟನೆಗಳಿಂದ ಪರೀಕ್ಷಾ ಪದ್ಧತಿ ಬದಲಾಯಿಸಲಾಗುವುದಿಲ್ಲ. ಮಾನವೀಯತೆಯ ದೃಷ್ಟಿಯಿಂದ ಎಂಬ ಪದವನ್ನು ಮೇಲಿನವರಿಗೆ ಹೇಳುವುದಕ್ಕಿಂತ, ಇಲ್ಲಿನವರು ಉಪಯೋಗಿಸಿಕೊಳ್ಳುವುದು ಇಂದಿನ ಅಗತ್ಯ ಈ ಕಾರಣದಿಂದ ಈ ಒಂದು ಅವಧಿಯಲ್ಲಿ ವಿದ್ಯಾರ್ಥಿಗಳ ಒಳತಿಗಾಗಿ ಶಿಕ್ಷಕರು ತಮ್ಮ ಶ್ರಮವನ್ನು ಧಾರೆಯೆರದು ಅವರನ್ನು ಪರೀಕ್ಷೆಗೆ ಸಿದ್ದಗೊಳಿಸಬೇಕಿದೆ. ಅದನ್ನು ಬಿಟ್ಟು ನಾವು ನಮ್ಮ ಸುಖವನ್ನು ಸ್ವಲ್ಪವೂ ತ್ಯಾಗಮಾಡುವುದಿಲ್ಲ. ನಿಮಗೆ ನಮ್ಮ ನೆಮ್ಮದಿಯಷ್ಟೆ ಮುಖ್ಯ ಎಂದು ಶಿಕ್ಷಕ ಸಮೂದಾಯ ಭಾವಿಸಿದರೆ, ವಿದ್ಯಾರ್ಥಿಗಳನ್ನು ಕಾಪಾಡುವವರು ಯಾರು? ಹೀಗಾಗಿ ಯಾರು ಯಾರಿಂದಲೋ, ಯಾವ ಯಾವೂದೋ ಕಾರಣಕ್ಕಾಗಿ ಮುಂದೂಡುತ್ತ ಬಂದಿರುವ ತಪ್ಪಿಗೆ, ಕಾರಣಗಳನ್ನು ಈಗ ಹುಡುಕುತ್ತ ಕುಳಿತುಕೊಳ್ಳುವುದು ಮತ್ತಷ್ಟು ಅಪಾಯಗಳಿಗೆ ಎಡೆಮಾಡಿ ಕೊಡಬಲ್ಲದು ಅಷ್ಟೆ.
ಕನಿಷ್ಠ ಎಂಟನೆಯ ತರಗತಿಯಿಂದಲೇ ವಿದ್ಯಾರ್ಥಿಗಳಿಗೆ ಕೇಂದ್ರಿಯ ಮಾದರಿಯ ಪಠ್ಯಕ್ರಮ ಜಾರಿಯಾಗಿ, ಅವರು ಅದೇ ಕ್ರಮದಲ್ಲಿ ಅಭ್ಯಸಿಸುತ್ತ ಬಂದಲ್ಲಿ ಕೇಂದ್ರಿಯ ಸಾಮಾನ್ಯ ಪ್ರವೇಶ ಪರೀಕ್ಷೆ ಅವರಿಗೆ ಕಷ್ಟವೆನ್ನಿಸಲಾರದು ಎಂಬುದು ಸತ್ಯ. ಆದರೆ ಈಗ ಪಿಯುಸಿ ದ್ವಿತೀಯ ವರ್ಷದಲ್ಲಿರುವ ವಿದ್ಯಾರ್ಥಿಗಳನ್ನು ಹಿಂದೆ ಕಳುಹಿಸಲಾಗುವುದಿಲ್ಲವಲ್ಲ, ಹಾಗಾಗಿ ಪಿಯುಸಿ ಮಂಡಳಿ ಕೇಂದ್ರಿಯ ಪಠ್ಯಕ್ರಮವನ್ನು ಹೆಚ್ಚುವರಿಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ಉಪನ್ಯಾಸಕರುಗಳಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ. ಆದರೆ ಅದಕ್ಕೆ ಬೇಕಾಗುವ ಅವಧಿಯ ಹೊಂದಣಿಕೆಯೇ ಕಷ್ಟದ ಕೆಲಸ ಎಂದು ಬಹಳಷ್ಟು ಕಾಲೇಜುಗಳ ಉಪನ್ಯಾಸಕರು ಅಭಿಪ್ರಾಯ ಪಡುತ್ತಾರೆ. ಇದು ಸ್ವಲ್ಪಮಟ್ಟಿಗೆ ನಿಜವೂ ಹೌದು, ಆದರೆ ವಿದ್ಯಾರ್ಥಿಗಳ ಭವಿಷ್ಯದೆದುರು ಇದೆಲ್ಲ ಗೌಣವಾಗಬೇಕಿದೆ. ಹೆಚ್ಚಿನ ಅವಧಿಯ ಬೋಧನೆ ಅಗತ್ಯವಾಗಿರುವುದರಿಂದ ಕಾಲೇಜಿನ ಬೋದನಾವಧಿಯನ್ನು ಹೆಚ್ಚಿಸುವ ಮತ್ತು ಈ ವರ್ಷದ ತುರ್ತು ಎಂಬ ಕಾರಣಕ್ಕಾಗಿ ರಜಾದಿನಗಳನ್ನು ಪಾಠದ ದಿನಗಳನ್ನಾಗಿಸಿ ಸರಕಾರ ಸುತ್ತೋಲೆ ಹೊರಡಿಸುವುದು ಅಗತ್ಯವೇನೋ ಬೇಕಿದ್ದರೆ ಹೆಚ್ಚುವರಿ ಬೋಧನಗೆ ಬೇಕಿದ್ದರೆ ಭತ್ಯೆಯನ್ನು ನೀಡಿದರೂ ತಪ್ಪಿಲ್ಲ. ಯಾಕೆಂದರೆ ನಮ್ಮ ವಿದ್ಯಾರ್ಥಿಗಳಿಗೆ ಒಳ್ಳೆಯ ಕಡೆ ಭವಿಷ್ಯ ದೊರಬೇಕೆಂಬುದು ಮುಖ್ಯ ಗುರಿಯಾಗಿರಬೇಕಾದ್ದು ಇಂದಿನ ಅಗತ್ಯ.
ವಿದ್ಯಾರ್ಥಿಗಳು ಕೂಡ ಏನಾದರೂ ಪವಾಡ ನಡೆಯುತ್ತದೆ ಎಂದು ಭಾವಿಸಿದರೆ, ಪ್ರತಿಭಟನೆ ಇತ್ಯಾದಿಗಳಲ್ಲಿ ಕಾಲಹರಣ ಮಾಡದೆ ಪರೀಕ್ಷೆಗೆ ನಿಗದಿಗೊಳಿಸಿಲಾದ ಪಠ್ಯಕ್ರಮವನ್ನು ಶ್ರದ್ಧೆಯಿಂದ ಅಭ್ಯಸಿಸುವವರಾಗಬೇಕಿದೆ, ಕಷ್ಟವಾಗುವುದು ನಿಜ, ಹಾಗಂತ ಸುಮ್ಮನೆ ಕುಳಿತರೆ ಕಷ್ಟ ಇನ್ನಷ್ಟು ಅಧಿಕವಾಗುತ್ತದೆ. ಪರಿಹಾರಕ್ಕೆ ಪ್ರಯತ್ನಿಸುವುದು ಸೂಕ್ತವಾದ ಮಾರ್ಗ, ಹಾಗಾಗಿ ಇನ್ನು ಇರುವ ಸೀಮಿತ ಅವಧಿಯೊಳಗೆ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಜ್ಞಾನಗಳಿಸುವ ದೃಷ್ಟಿಯಿಂದ ತಮ್ಮ ತಮ್ಮ ಕಾಲೇಜಿನ ಉಪನ್ಯಾಸಕ ವೃಂದವನ್ನು ಒತ್ತಾಯಪೂರ್ವಕವಾಗಿಯಾದರೂ ಬಳಸಿಕೊಳ್ಳಬೇಕು. ‘ತಾಯಿಯೇ ಆದರೂ ಮಗು ಅಳದಿದ್ದರೆ ಎದೆಹಾಲನ್ನು ನೀಡುವುದಿಲ್ಲವಂತೆ’ ಹಾಗೇ ನೀವೂ ಈಗ ನಿಮ್ಮ ಅಳಲನ್ನೂ ಅವÀರುಗಳ ಮುಂದಿಟ್ಟು ಪಾಠ ಹೇಳಿಸಿಕೊಳ್ಳಬೇಕು, ಸಂಜೆಯಾದರೂ ಸರಿ, ರಜಾದಿನಗಳಾದರೂ ಸರಿ ನಾವು ಪಾಠ ಕೇಳಲು ಸಿದ್ಧರಿದ್ದೇವೆ, ನಮ್ಮ ಕುರಿತು ಕರುಣೆ ತೋರಿ ನಮಗೆ ಪಾಠ ಹೇಳಿ, ನಮಗಾಗಿ ನಿಮ್ಮ ವಿರಾಮವನ್ನಷ್ಟು ತ್ಯಾಗಮಾಡಿ ಎಂದು ದುಂಬಾಲು ಬಿದ್ದರೆ ಪರಿಸ್ಥಿತಿ ತಕ್ಕಮಟ್ಟಿಗಾದರೂ ಸುಧಾರಿಸಲೂ ಸಾಧ್ಯ. ಹೆಜ್ಜೆಯನ್ನು ಹಿಂದಿಕ್ಕಿಡಲಂತೂ ಸಾಧ್ಯವೇ ಇಲ್ಲ ಮುಂದುಕ್ಕಿಡುವುದು ಅನಿವಾರ್ಯವೂ ಹೌದು ಅಗತ್ಯವೂ ಹೌದು, ಅದಕ್ಕೆ ತಕ್ಕಂತೆ ಮಾರ್ಗ ನಿರ್ಮಿಸಿಕೊಳ್ಳುತ್ತ ಸಾಗುವುದೇ ಸದ್ಯದ ಜಾಣ್ಮೆ.
ಇನ್ನು ಕೇಂದ್ರಿಯ ಪಠ್ಯಕ್ರಮವೆಂಬುದೇನೂ ಅರ್ಥವಾಗದ ಭಯಂಕರ ಕಷ್ಟದ ಭೂತವಲ್ಲ, ಯಾಕೆಂದರೆ ಈ ಕ್ರಮ ಈಗಾಗಲೇ ಉಳಿದಡೆಯಲ್ಲಿ ಯಶಸ್ವಿಯಾಗಿದೆ, ಅಲ್ಲಿನ ವಿದ್ಯಾರ್ಥಿಗಳು ಅದಕ್ಕೆ ಒಪ್ಪಿಕೊಂಡಿದ್ದಾರೆ, ನಮ್ಮವರೇನೂ ಅದಕ್ಕೆ ಒಗ್ಗಿಕೊಳ್ಳಲಾಗದವರಲ್ಲ ಅದಕ್ಕೆ ಸದ್ಯಕ್ಕೆ ಒಂದಿಷ್ಟು ತರಬೇತಿಯ ಅವಶ್ಯಕತೆಯಿದೆ ಅಷ್ಟೆ. ಹೀಗಾಗಿ ಮುಂಬರುವ ವರ್ಷಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರಿಯ ಪ್ರವೇಶ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾಗಿ ಮೊದಲಿಗೆ ಇಲ್ಲಿನ ಉಪನ್ಯಾಸಕರುಗಳಿಗೂ ಬೇಕಿದ್ದರೆ ಸೂಕ್ತ ತರಬೇತಿಗಳನ್ನು (ರಜಾ ಅವಧಿಯಲ್ಲಿ) ನೀಡುವುದು ಒಳ್ಳೆಯದು. ಇಡೀ ರಾಷ್ಟದಲ್ಲಿ ಏಕರೂಪದ ವ್ಯವಸ್ಥೆ ಜಾರಿಗೊಳ್ಳುತ್ತಿರುವಾಗ ಅದರಿಂದ ಕರ್ನಾಟಕ ಹೊರಗುಳಿಯಲು ಸಾಧ್ಯವೇ ಇಲ್ಲ, ಹೊಂದಿಕೊಳ್ಳುವುದನ್ನು ಕಲಿಯುವುದು ಕಡ್ಡಾಯ, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಧ್ಯದ ಪರಿಸ್ಥಿತಿಯಲ್ಲಿ ತಮ್ಮ ತಮ್ಮ ಆರಾಮನ್ನಷ್ಟು ತ್ಯಾಗಮಾಡದೇ ವಿಧಿಯಿಲ್ಲ, ತಮ್ಮ ತಮ್ಮ ಆರಾಮವನ್ನಷ್ಟೇ ಗಮನಿಸಿಕೊಳ್ಳುವುದಾದ ಪಕ್ಷದಲ್ಲಿ ಸುಧಾರಣೆಯ ಕುರಿತು ಮಾತನಾಡುವುದು ಅಪರಾಧವಾಗಬಹುದು ಎನ್ನಿಸುತ್ತದೆ, ಪ್ರಯತ್ನಿಸದೆ ಫಲಿತಾಂಶವನ್ನು ಪ್ರತಿಭಟನೆಗಳಿಂದ ಪಡೆದುಕೊಳ್ಳಲೆತ್ನಿಸುವುದು ಎಂದಿದ್ದರೂ ಅಪಾಯಕ್ಕೆ ಆಹ್ವಾನ ನೀಡಿದಂತೆ!
ರವೀಂದ್ರ ಭಟ್ ಕುಳಿಬೀಡು.

ಮಳೆಯಿಂದಾಗಿ ಮನೆ ಕುಸಿತ

0

ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ನರಸಿಂಹಪ್ಪ ಅವರ ಮನೆಯು ಮಳೆಯಿಂದಾಗಿ ಮಂಗಳವಾರ ಕುಸಿದಿದೆ.

ಟೊಮೆಟೋ ಬೆಳೆ ಮಳೆಯಿಂದಾಗಿ ನಷ್ಟ

0

ಶಿಡ್ಲಘಟ್ಟ ತಾಲ್ಲೂಕಿನ ಬೀರಪ್ಪನಹಳ್ಳಿಯ ರೈತ ವೆಂಕಟೇಶ್ ಅವರ ಟೊಮೆಟೋ ಬೆಳೆ ಮಳೆಯಿಂದಾಗಿ ನೆಲಕಚ್ಚಿದ್ದು ಲಕ್ಷಾಂತರ ರೂಗಳ ನಷ್ಟವುಂಟಾಗಿದೆ.

ರೈತರಿಗೆ ಪರಿಹಾರವನ್ನು ನೀಡಲು ಕೋರಿ ಮನವಿ

0

ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಸರ್ಕಾರದಿಂದ ರೈತರಿಗೆ ಪರಿಹಾರವನ್ನು ನೀಡುವಂತೆ ರೈತ ಮುಖಂಡರು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಾದ್ಯಂತ ಸರಿ ಸುಮಾರು 10 ರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಈಗಾಗಲೇ ಕಷ್ಟದಲ್ಲಿರುವ ರೈತರಿಗೆ ಕೈಗೆ ಬಂದ ಬೆಳೆ ನಾಶವಾಗಿರುವುದು ತುಂಬಲಾರದ ನಷ್ಟವನ್ನು ತಂದಿದೆ. ಮೇವುಗಳು ಕೂಡ ಕೊಳೆತು ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಹೈನುಗಾರಿಕೆ ದುಸ್ಥರವಾಗಿದೆ. ಅತಿ ಹೆಚ್ಚು ತೇವಾಂಶದಿಂದ ರೇಷ್ಮೆ ಬೆಳೆಯು ಕೂಡ ರೋಗಪೀಡಿತವಾಗಿ ಬೆಳೆಗಾರರಿಗೆ ತೊಂದರೆಯಾಗಿದೆ. ಒಟ್ಟಾರೆಯಾಗಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ರೇಷ್ಮೆಯಲ್ಲಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ. ರೈತರ ತೊಂದರೆಗೆ ಸರ್ಕಾರವು ಸ್ಪಂದಿಸಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೇಣುಗೋಪಾಲ್, ಏಜಾಜ್ ಪಾಷ, ಖಂಡೇರಾವ್, ಮುನಿನಂಜಪ್ಪ, ದೇವರಾಜ್, ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಗರ್ಭಿಣಿ ಆರೈಕೆ ಭಾಗ – 2

0

ಗರ್ಭಿಣಿಯರಿಗೆ ನಿಷಿದ್ಧವಾದ ಆಹಾರ
1. ಒಣಗಿದ, ಹಳಸಿದ, ಕೆಟ್ಟ ಹಾಗು ಸೀದ ಆಹಾರ ಭಕ್ಷ್ಯಗಳನ್ನು ಗರ್ಭಿಣಿ ವರ್ಜಿಸಬೇಕು.
2. ತಂಬಾಕು, ಮಧ್ಯಪಾನ ಸೇವನೆ ಕೂಡದು.
3. ತುಂಬಾ ಖಾರ, ಸಿಹಿ, ಬಿಸಿಯಾದ ಆಹಾರ ಸೇವನೆ ನಿಷಿದ್ಧ.
4. ಗುರು ಅಥವಾ ಜೀರ್ಣಕ್ಕೆ ಕಷ್ಟಕರವಾದ ಆಹಾರ ಸೇವನೆಯನ್ನು ಮಾಡಬಾರದು.
ಗಭೀಣಿಯರಿಗೆ ನಿಷಿದ್ಧವಾದ ಜೀವನ ಶೈಲಿ
1. ಗರ್ಭಿಣಿಯರಿಗೆ ತೀಕ್ಷ್ಣವಾದ ಔಷಧಿಗಳು, ವ್ಯಾಯಾಮ, ಮೈಥುನ, ಅತಿಯಾಗಿ ಆಯಾಸ ಪಡುವುದು ಪ್ರಯಾಣ ಮಾಡುವುದು ಅಹಿತಕರ.
2. ಅತಿಯಾದ ಆಹಾರ ಸೇವನೆ ಹಾಗೂ ಅತಿ ಕಡಿಮೆ ಆಹಾರ ಸೇವನೆ ಕೂಡ ವಜ್ರ್ಯ. ಮಧ್ಯಾಹ್ನ ಮಲಗುವುದು, ರಾತ್ರಿ ಜಾಗರಣೆ ಮಾಡುವುದು, ದ್ವಿ ಚಕ್ರ ವಾಹನದಲ್ಲಿ ಪ್ರಯಾಣ ಮಾಡುವುದು ನಿಷಿದ್ಧ.
3. ಆಯುರ್ವೇದದಲ್ಲಿ ವಿವರಿಸಲಾದ ಪಂಚಕರ್ಮ ಚಿಕಿತ್ಸೆಗಳನ್ನು ಅನುಸರಿಸಬಾರದು.
4. ಮಲಿನ, ವಿಕೃತ, ಹೀನ ವಸ್ತುಗಳ ಸ್ಪರ್ಶನ ದುರ್ಗಂಧ, ದುರ್ದರ್ಶನ ಮಾಡಬಾರದು.
5. ಎತ್ತರದ ಪ್ರದೇಶದಲ್ಲಿ, ಸ್ಮಶಾನದಲ್ಲಿ ಓಡಾಡುವುದು, ಕತ್ತಲೆಯಿರುವ ಜಾಗಕ್ಕೆ ಒಂಟಿ ಪ್ರವೇಶ ಹಾಗೂ ಮನಸ್ಸಿಗೆ ಆಘಾತ ತರುವ ಪ್ರದೇಶಗಳ ವೀಕ್ಷಣೆ ಮಾಡಬಾರದು.
6. ಅಸಮತಲವಾದ ಹಾಸಿಗೆ, ಆಸನ ಹಾಗೂ ಕಠಿಣ ಆಸನಗಳ ಉಪಯೋಗ ನಿಷಿದ್ಧ.
7. ಯಾವಾಗಲೂ ಶೋಕದಿಂದ ಕೂಡಿರುವುದು, ಚಿಂತೆ, ಭಯ ಕೋಪ, ಉದ್ವೇಗ, ಕಿರುಚಾಟಗಳೂ ಕೂಡ ಸಲ್ಲದು.
ಗರ್ಭಿಣಿ ಅನುಸರಿಸಬೇಕಾದ ಕೆಲವು ವಿಹಾರ ಅಥವಾ ಜೀವನ ಶೈಲಿ
1. ಗರ್ಭಿಣಿ ಸ್ತ್ರೀ ನಿತ್ಯವೂ ಸ್ನಾನ ಮಾಡಿ, ಶುಭ್ರವಸ್ತ್ರ ಹಾಗೂ ಆಭರಣಗಳನ್ನು ಧರಿಸಿ ಪೂಜಾ ಕಾರ್ಯಗಳನ್ನು ಮಾಡಬೇಕು.
2. ಸ್ತೋತ್ರ ಪಠಣ, ಧರ್ಮಗ್ರಂಥಗಳ ಪಠಣ, ವೀರರ ಶೂರರ ಕಥೆಗಳನ್ನು ಕೇಳುವುದು, ಓದುವುದು, ಭಕಿಗೀತೆಗಳನ್ನು, ಮಂತ್ರಗಳನ್ನು ಆಲಿಸುವುದು ಇತ್ಯಾದಿಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.
3. ಗರ್ಭಿಣಿಯು ಮೃದುವಾದ ಸ್ವಚ್ಛವಾದ, ಸಮತಟ್ಟಾದ ಹಾಸಿಗೆಯಲ್ಲಿ ಮಲಗುವುದು ಉತ್ತಮ.
4. ಅತಿಯಾಗಿ ಎಣ್ಣೆ ಹಚ್ಚಿ ಮೈಯನ್ನು ಉಜ್ಜಿ ಸ್ನಾನ ಮಾಡುವುದು ನಿಷಿದ್ಧ.
5. ನಿತ್ಯವೂ ಸಂತೋಷದಿಂದ ಧೈರ್ಯದಿಂದ ಇರಬೇಕು.
6. ಸ್ನಾನಕ್ಕೆ ಬಿಲ್ವ, ಗುಲಾಬಿ, ಬೇವು, ಹರಳೆಣ್ಣೆ ಗಿಡಗಳ ಎಲೆಗಳ ಕಷಾಯ ಮತ್ತು ಸುಗಂಧ ದ್ರವ್ಯಗಳನ್ನೊಳಗೊಂಡ ನೀರನ್ನು ಉಪಯೋಗಿಸಬೇಕು.
7. ರಾತ್ರಿ 7ರಿಂದ 8 ಘಂಟೆಗಳ ಕಾಲ ನಿದ್ರಿಸುವುದು ಹಿತಕರ.
8. ಸ್ತನದ ತೊಟ್ಟನ್ನು ಶುಚಿಯಾಗಿಟ್ಟುಕೊಳ್ಳಬೇಕು. ನಿತ್ಯವೂ ಸ್ನಾನ ಮಾಡುವಾಗ ಗರ್ಭಿಣಿ ಅದರಲ್ಲೂ ಚೊಚ್ಚಲ ಗರ್ಭದಲ್ಲಿ ಸ್ತನದ ತೊಟ್ಟಿಗೆ ಎಣ್ಣೆ ಹಚ್ಚಿ ತಿಕ್ಕಿ ಹೊರಗೆಳೆದುಕೊಳ್ಳುತ್ತಿರಬೇಕು.
ಗರ್ಭಿಣಿಯ ಸಾಮಾನ್ಯ ತೊಂದರೆಗಳು ಹಾಗೂ ಚಿಕಿತ್ಸೆ
1. ವಾಂತಿ: ಮೊದಲ 2 – 3 ತಿಂಗಳಲ್ಲಿ ವಾಂತಿ, ಸುಸ್ತು, ತಲೆ ಸುತ್ತು ವಿಶೇಷವಾಗಿ ಬೆಳಗಿನ ಹೊತ್ತು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.
ಚಿಕಿತ್ಸೆ: 1. ಆಗಾಗ ಸಿಹಿಯಾದ, ಶೀತವಾದ ಹಾಲನ್ನು ಸ್ವಲ್ಪ ಸ್ವಲ್ಪವಾಗಿ ತೆಗೆದುಕೊಳ್ಳಬೇಕು.
2. ದಾಳಿಂಬೆ ಹಣ್ಣಿನ ರಸಕ್ಕೆ ಸಕ್ಕರೆ ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಬೇಕು.
3. ದೊಡ್ಡ ಏಲಕ್ಕಿ ಪುಡಿಯನ್ನು ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ಆಗಾಗ ಸೇವಿಸಬೇಕು.
4. ಪ್ರತಿ ದಿನ ಬೆಳಗ್ಗೆ ಒಂದು ನೆಲ್ಲಿಕಾಯಿಯನ್ನು ತಿನ್ನಬೇಕು.
5. ಆಗಾಗ ಒಣ ದ್ರಾಕ್ಷಿಯನ್ನು ತಿನ್ನುತ್ತಿರಬೇಕು.
6. ನಿಂಬೆ ಹಣ್ಣನ್ನು ಕತ್ತರಿಸಿ 2 ಭಾಗ ಮಾಡಿಕೊಂಡು ಅದಕ್ಕೆ ಉಪ್ಪು ಅಥವಾ ಸಕ್ಕರೆಯನ್ನು ಸಿಂಪಡಿಸಿಕೊಂಡು ಚೀಪಬೇಕು,
2. ಹಸಿವೆ ಇಲ್ಲದಿರುವುದು
1. ಬಡೆಸೊಪ್ಪು (ಸೋಂಪು), ಕೊತ್ತುಂಬರಿ, ಜೀರಿಗೆ, ಕಾಲುಮೆಣಸು ಇವೆಲ್ಲವುಗಳನ್ನು ಪುಡಿ ಮಾಡಿ ಇಟ್ಟುಕೊಂಡು, ನೀರಿಗೆ ಬೆರೆಸಿ, ಕುದಿಸಿ ಸೋಸಿ, ಸಕ್ಕರೆಯೊಂದಿಗೆ ಸೇವಿಸಬೇಕು.
2. ಒಂದು ಸಣ್ಣ ತುಂಡು ಶುಂಠಿಯನ್ನು ನಿಂಬೆರಸದಲ್ಲಿ ಅದ್ದಿ, ಸ್ವಲ್ಪ ಉಪ್ಪು ಬೆರೆಸಿ ಚಪ್ಪರಿಸುತ್ತಿರಬೇಕು.
3. ಮಲಬದ್ಧತೆ
1. ತಾಜಾ ಹಸಿ ತರಕಾರಿಯ ಸೇವನೆ ಉತ್ತಮ.
2. ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯಬೇಕು.
3. ಸೀಬೆ ಹಣ್ಣು, ಬಾಳೆಹಣ್ಣುಗಳನ್ನು ಸೇವಿಸಬೇಕು.
4. ಒಣ ದ್ರಾಕ್ಷಿಯನ್ನು ಹಾಲಿನೊಂದಿಗೆ ಸೇರಿಸಿ ಕುದಿಸಿ ಆ ಹಾಲನ್ನು ದ್ರಾಕ್ಷಿಯೊಡನೆ ಸೇವಿಸಬೇಕು.
5. ಒಂದು ಲೋಟ ಬಿಸಿ ನೀರಿಗೆ ಉಪ್ಪು ಹಾಗೂ ಲಿಂಬೆರಸವನ್ನು ಬೆರೆಸಿ ಬಳಸುವುದರಿಂದ ವಾಯುವಿನ ಅನುಲೋಮನವಾಗುವುದು.
4. ಹೊಟ್ಟೆ ಉರಿ ಮತ್ತು ಹುಳಿ ತೇಗು
ಸಿಹಿ ಹಾಲು, ಎಳೆ ನೀರು, ಸೋರೆಕಾಯಿ ಸೂಪ್, ನೆಲ್ಲಿಕಾಯಿ ಪುಡಿಯೊಂದಿಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬೇಕು. ಒಣದ್ರಾಕ್ಷಿ ಸೇವನೆ ಹಾಗೂ ಜೇಷ್ಠಮಧುವಿನ ಕ್ಷೀರ ಪಾಕ ಸೇವನೆ ಹಿತಕರ. (ಒಂದು ಚಮಚ ಜೇಷ್ಠಮಧು ಪುಡಿಯನ್ನು ಒಂದು ಲೋಟ ಹಾಲು ಹಾಗೂ ಒಂದು ಲೋಟ ನೀರಿನ ಮಿಶ್ರಣಕ್ಕೆ ಬೆರೆಸಿ ಕುದಿಸಿ ಒಂದು ಲೋಟ ಹಾಲಿನ ಪ್ರಮಾಣಕ್ಕೆ ಇಳಿಸಿ ಸೋಸಬೇಕು).
5. ಕೈ ಕಾಲುಗಳಲ್ಲಿ ಊತ
ಕೈ ಕಾಲುಗಳಲ್ಲಿ ಊತ ಅಲ್ಪ ಪ್ರಮಾಣದಲ್ಲಿದ್ದು, ಇನ್ನಿತರ ಪರೀಕ್ಷೆಗಳು ಸಾಮಾನ್ಯವಾಗಿದ್ದಲ್ಲಿ, ಮನೆ ಮದ್ದುಗಳ ಉಪಯೋಗ ಮಾಡಬಹುದು. ಇಲ್ಲದಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು.
ನೆಗ್ಗಿಲ ಮುಳ್ಳಿನ ಚೂರ್ಣ ಒಂದು ಚಮಚದಷ್ಟು ತೆಗೆದುಕೊಂಡು ಒಂದು ಲೋಟ ನೀರಿಗೆ ಸೇರಿಸಿ, ಕುದಿಸಿ ಸೋಸಿ ಕುಡಿಯುವುದು ಹಿತಕರ.
ಡಿ.ವಿ.ಜಿ. ಯವರು ತಮ್ಮ “ಮಂಕು ತಿಮ್ಮನ ಕಗ್ಗ” ದಲ್ಲಿ ಈ ರೀತಿ ಹೇಳಿದ್ದಾರೆ.
“ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು|
ಹೊಸ ಯುಕ್ತಿ ಹಳೆ ತತ್ವದೊಡಗೂಡೆ ಧರ್ಮ||
ಋಷಿ ವಾಕ್ಯದೊಡನೆ ವಿಜ್ಞಾನ ಕಲೆ ಮೇಲವಿಸೆ|
ಜಸವು ಜನ ಜೀವನಕೆ – ಮಂಕುತಿಮ್ಮ||
ಹಳೆಯ ಬೇರಿನ ಮರಕ್ಕೆ ಹೊಸ ಚಿಗುರು ಸೇರಿದರೆÀ ಮರವು ಸುಂದರವಾಗಿ ಕಾಣುವುದು. ಅದೇ ರೀತಿ ಹಳೆಯ ತತ್ವಕ್ಕೆ ಹೊಸ ಯುಕ್ತಿಯು ಸೇರಿದರೆÀ, ಅಲ್ಲದೆ ಪ್ರಾಚೀನ ಋಷಿಮುನಿಗಳು ರಚಿಸಿರುವ ವೇದ ಗ್ರಂಥಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜನರು ಆರೋಗ್ಯವಂತ, ಸತ್ವಯುತ ಜೀವನದ ಹಾದಿಯಲ್ಲಿ ಸಾಗಬಹುದು.
ಮುಗಿಯಿತು.
ಡಾ. ನಾಗಶ್ರೀ. ಕೆ.ಎಸ್.

ಹೆದ್ದಾರಿ ಬಂದ್ಗೆ ವಿವಿಧ ಸಂಘಟನೆಗಳ ಬೆಂಬಲ

0

ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಗೊಳಿಸುವಂತೆ ಒತ್ತಾಯಿಸಿ ಕಳೆದ ೬೩ ದಿನಗಳಿಂದ ಹೋರಾಟ ನಡೆಸುತ್ತಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗದ ಸರ್ಕಾರದ ನೀತಿಯನ್ನು ಖಂಡಿಸಿ ಹೆದ್ದಾರಿಗಳನ್ನು ಬಂದ್ ಮಾಡುವ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
ನಗರದ ಪ್ರವಾಸಿಮಂದಿರದಲ್ಲಿ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹೆದ್ದಾರಿ ಬಂದ್ ಮಾಡುವ ಬಗ್ಗೆ ಪೂರ್ವಭಾವಿ ಸಭೆ ಸೇರಿ ಚರ್ಚಿಸಿದರು. ಇದೇ ನವೆಂಬರ್ ೨೫ ರಂದು ರಾಜ್ಯ ರೈತ ಸಂಘ ಹಾಗು ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಯಲುಸೀಮೆಯ ವಿವಿಧ ಹೆದ್ದಾರಿಗಳನ್ನು ಬಂದ್ ಮಾಡಿ ಆ ಮೂಲಕ ಸರ್ಕಾರಕ್ಕೆ ಬಯಲುಸೀಮೆ ಭಾಗದ ಜನರ ಕೂಗನ್ನು ಮುಟ್ಟಿಸುವ ಕೆಲಸ ಮಾಡಲು ತೀರ್ಮಾನಿಸಲಾಯಿತು.
ಕಳೆದ ಎರಡು ದಶಕಗಳಿಂದ ಕುಡಿಯುವ ನೀರಿಗೂ ಪರಿತಪಿಸುತ್ತಿರುವ ಬಯಲುಸೀಮೆಯ ಭಾಗಕ್ಕೆ ನೀರಾವರಿ ತಜ್ಞ ಪರಮಶಿವಯ್ಯ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವಂತೆ ವಿವಿಧ ರೀತಿಯ ಹೋರಾಟ ಪ್ರತಿಭಟನೆಗಳನ್ನು ಈ ಭಾಗದ ಜನರು ಮಾಡುತ್ತಿದ್ದಾರೆ. ಯಾವುದೇ ಸರ್ಕಾರ ಈ ಭಾಗದ ಜನರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆ ಬಂದಾಗ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಗೆದ್ದು ಹೋದ ನಂತರ ಮರೆಯುವ ಜನಪ್ರತಿನಿಧಿಗಳಿಂದ ಈ ಭಾಗಕ್ಕೆ ನೀರು ಸಿಗುವುದಿಲ್ಲ ಎಂಬುದನ್ನರಿತು ಅನಿರ್ದಿಷ್ಠಾವಧಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಹೋರಾಟ ಶುರು ಮಾಡಿ ೬೪ ದಿನವಾದರೂ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಲಿಲ್ಲವಾದ್ದರಿಂದ ಹೋರಾಟ ತೀವ್ರಗೊಳಿಸುವ ಸಲುವಾಗಿ ಇದೇ ನವೆಂಬರ್ ೨೫ ರಂದು ಹೆದ್ದಾರಿ ಬಂದ್ ಮಾಡಲು ತೀರ್ಮಾನಿಸಲಾಗಿದೆ. ಹೆದ್ದಾರಿಗಳಲ್ಲಿ ಜಾನುವಾರುಗಳನ್ನು ಕಟ್ಟಿ ಟ್ರಾಕ್ಟರ್ಗಳನ್ನು ನಿಲ್ಲಿಸುವುದರೊಂದಿಗೆ ವಾಹನ ಸಂಚಾರ ತಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರುಮಂಜುನಾಥ್, ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಅಬ್ಲೂಡು ಆರ್.ದೇವರಾಜ್, ವೇಣುಗೋಪಾಲ್, ವೀರಾಪುರ ರಾಮಣ್ಣ, ಹುಜುಗೂರು ರಾಮಚಂದ್ರಪ್ಪ, ಅಪ್ಜಲ್ಪಾಷಾ ಮತ್ತಿತರರು ಹಾಜರಿದ್ದರು.