ಕಳೆದ ಕೆಲ ವರ್ಷಗಳಿಂದ ವರುಣನ ಅವಕೃಪೆಗೆ ತುತ್ತಾಗಿದ್ದ ತಾಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಹಲವಾರು ಕೆರೆಗಳು ತುಂಬಿರುವುದು ರೈತರು ಹಾಗೂ ನಾಗರಿಕರಲ್ಲಿ ಸಂತಸ ಮೂಡಿಸಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಕಳೆದ ಸುಮಾರು ವರ್ಷಗಳಿಂದ ಈ ಭಾಗಕ್ಕೆ ಮಳೆಯಾಗದೇ ಬಹುತೇಕ ಕೆರೆಗಳು ಬತ್ತಿ ಹೋಗಿದ್ದವು. ಒಂದೆಡೆ ಇದೀಗ ಸುರಿದ ಮಳೆಯಿಂದ ತಾಲ್ಲೂಕಿನ ಸುಮಾರು ಹದಿನೈದು ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ಸಂತಸದ ವಿಷಯವಾದರೆ, ಇನ್ನೊಂದೆಡೆ ತಾಲೂಕಿನಾದ್ಯಂತ ಹಲವಾರು ಮನೆಗಳು ಭಾಗಶಃ ಬಿದ್ದು ಹೋಗಿರುವುದು ಹಾಗು ತಾಲ್ಲೂಕಿನ ಕರಿಯಪ್ಪನಹಳ್ಳಿ ಗ್ರಾಮದ ಇಬ್ಬರು ಮೃತ ಪಟ್ಟಿರುವುದು ದುರಂತದ ಸಂಗತಿ ಎಂದು ವಿಷಾಧಿಸಿದರು.
ಒಂದು ಕಡೆ ಮಳೆಯಾಯಿತು ಎಂಬ ಸಂತಸದಲ್ಲಿರುವ ರೈತ ಇನ್ನೊಂದು ಕಡೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ತಾಲೂಕಿನಾದ್ಯಂತ ಸುಮಾರು ೩೨೦೦ ಹೆಕ್ಟೇರ್ ಭೂಮಿಯಲ್ಲಿ ಬೆಳೆದಿದ್ದ ರಾಗಿ ಮತ್ತು ಜೋಳ ಸಂಪೂರ್ಣವಾಗಿ ನಾಶವಾಗಿದ್ದು ಹೊಲದಲ್ಲಿಯೇ ಮೊಳಕೆ ಬಂದಿರುವ ಬಗ್ಗೆ ಅಧಿಕಾರಿಗಳು ಸೇರಿದಂತೆ ರೈತರು ನಮ್ಮ ಗಮನಕ್ಕೆ ತಂದಿದ್ದಾರೆ. ತಾಲ್ಲೂಕಿನಾದ್ಯಂತ ಆಗಿರುವ ಬೆಳೆ ನಷ್ಟ ಹಾಗು ಹಾನಿಯ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಕೃಷಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.
ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯನ್ನು ಸರ್ಕಾರದ ನಿರ್ದೇಶನದಂತೆ ವಿತರಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದ್ದು ಅಧಿಕಾರಿಗಳು ತಾಲ್ಲೂಕಿನಾಧ್ಯಂತ ಸಂಚರಿಸಿ ರೈತರಿಗೆ ಆಗಿರುವ ಹಾನಿಯ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ತಿಳಿಸಿದರು.
ಬಯಲುಸೀಮೆಯ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಸೇರಿದಂತೆ ಈ ಭಾಗದ ಎಲ್ಲಾ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಶಾಶ್ವತ ನೀರಾವರಿ ಯೋಜನೆಗಾಗಿ ಹೋರಾಟ ಮಾಡುತ್ತಿದ್ದು ತಾಲ್ಲೂಕು ಜೆಡಿಎಸ್ ಪಕ್ಷದ ವತಿಯಿಂದ ಕಳೆದ ನವೆಂಬರ್ ೧೫ ರಂದು ಏರ್ಪಡಿಸಲಾಗಿದ್ದ ಟ್ರಾಕ್ಟರ್ ರ್ಯಾಲಿಗೆ ಶಿಡ್ಲಘಟ್ಟ ವಿಧಾನಸಭೆ ಕ್ಷೇತ್ರದ ಜನತೆ ಹಾಗು ಕಾರ್ಯಕರ್ತರಿಂದ ಉತ್ತಮ ಬೆಂಬಲ ವ್ಯಕ್ತವಾದ ಹಿನ್ನಲೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ನಗರಸಭೆ ಸದಸ್ಯ ಅಪ್ಸರ್ಪಾಷ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ ರೆಹಮತ್ತುಲ್ಲ, ಮಾಜಿ ಪುರಸಭೆ ಸದಸ್ಯ ಸಲಾಂ, ನಂಜಪ್ಪ, ಮಂಜುನಾಥ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೆಳೆ ನಷ್ಟಕ್ಕೆ ಪರಿಹಾರ ನೀಡಲಾಗುವುದು
ನಾವೂ ಮಗುವನ್ನು ದತ್ತು ತೆಗೆದುಕೊಳ್ಳಬಾರದೇಕೆ? – ಭಾಗ 1
ಮಕ್ಕಳು ನಮ್ಮೆಲ್ಲರ ಜೀವನದ ಅನನ್ಯವಾದ ಅನುಭವ ಮತ್ತು ಆಸ್ತಿ. ಜೀವನಕ್ಕೆ ಪೂರ್ಣತೆಯ ಮತ್ತು ಧನ್ಯತೆಯ ಭಾವವನ್ನು ಕೊಡುವುದೇ ಮಕ್ಕಳು. ಮಕ್ಕಳಿಲ್ಲದವರ ಕೊರಗು ಉಳಿದವರ ಕಲ್ಪನೆಗೆ ಸಿಗುವುದಿಲ್ಲ. ತಮ್ಮದೇ ಮಗುವೊಂದನ್ನು ಪಡೆಯಲು ವಿಜ್ಞಾನ, ದೇವರು, ಧರ್ಮ, ಹೀಗೆ ಎಲ್ಲಾ ದಾರಿಗಳನ್ನು ದಂಪತಿಗಳು ಹುಡುಕುತ್ತಾರೆ. ಈ ಎಲ್ಲದರ ಜೊತೆಗೆ ತಂದೆತಾಯಿಗಳಾಗಲು ದತ್ತು ಪಡೆಯುವ ಮಾರ್ಗವೂ ಇದೆ. ಇದರ ಬಗೆಗೆ ನಾವೆಲ್ಲಾ ಹೆಚ್ಚು ಮುಕ್ತವಾಗಿ ಯೋಚಿಸಬೇಕಾಗಿದೆ.
ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮತ್ತು ಹಾಗೆ ತೆಗೆದುಕೊಂಡ ಮಕ್ಕಳನ್ನು ಸಾಕುವ ಬಗೆಗೆ ಆಪ್ತಸಲಹೆಗೆ ಬರುವ ಪೋಷಕರು ಕೇಳುವ ಕೆಲವು ಸಾಮಾನ್ಯ ಪ್ರಶ್ನೆಗಳು ಹೀಗಿರುತ್ತವೆ.
• ದತ್ತು ತೆಗೆದುಕೊಳ್ಳೂವ ಬಗೆಗಿನ ವಿವರಗಳು ಏನೇನು? ಮಗುವನ್ನು ಆಯ್ಕೆ ಮಾಡುವುದು ಹೇಗೆ?
• ಹೀಗೆ ದತ್ತು ಪಡೆದ ಮಕ್ಕಳನ್ನು ಸಾಕಲು ವಹಿಸಬೇಕಾದ ವಿಶೇಷ ಕಾಳಜಿಗಳೇನು?
• ಮಕ್ಕಳಿಗೆ ದತ್ತಿನ ವಿಷಯವನ್ನು ಹೇಳಬೇಕೇ ಬೇಡವೇ? ಹೇಳುವುದಾದರೆ ಯಾವಾಗ, ಹೇಗೆ ಹೇಳುವುದು?
• ಮಕ್ಕಳನ್ನು ಮದುವೆ ಮಾಡುವಾಗ ಅವರ ಭಾವೀ ಪತಿ ಅಥವಾ ಪತ್ನಿಯ ಮನೆಯವರಿಗೆ ಈ ವಿಚಾರವನ್ನು ತಿಳಿಸಬೇಕೇ?
ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು ದತ್ತಕದ ಇತಿಹಾಸದ ಬಗೆಗೆ ಸ್ವಲ್ಪ ನೋಡೋಣ.
ಮಾನವನಷ್ಟೇ ಪುರಾತನ
ಮಕ್ಕಳಿಲ್ಲದ ದಂಪತಿಗಳು ಬೇರೆಯವರ ಮಕ್ಕಳನ್ನು ತಮ್ಮದೆಂದು ಸಾಕುವ ಪರಿಪಾಟ ಯಾವಾಗಿನಿಂದ ಪ್ರಾರಂಭವಾಗಿದೆ ಎನ್ನುವುದನ್ನು ಹುಡುಕುವುದು ಕಷ್ಟ. ಇದು ಬಹುಷಃ ಮಾನವನ ಇತಿಹಾಸದಷ್ಟೇ ಪುರಾತನ. ಎಲ್ಲಾ ದೇಶದ ಇತಿಹಾಸದ ಪುಟಗಳಲ್ಲಿ ಸಂತಾನರಹಿತ ರಾಜರುಗಳು ತಮ್ಮ ವಾರಸುದಾರರನ್ನಾಗಿ ಬೇರೆಯವರನ್ನು ಆಯ್ಕೆ ಮಾಡುವ ಪದ್ದತಿ ಇತ್ತೆಂಬುದಕ್ಕೆ ದಾಖಲೆಗಳಿವೆ. ಅಂದಮೇಲೆ ಆ ದೇಶದ ಪ್ರಜೆಗಳೂ ಕೂಡ ಮಕ್ಕಳಿಲ್ಲದಿದ್ದರೆ, ತಮ್ಮ ಆಸ್ತಿಪಾಸ್ತಿಗಳಿಗೆ ಉತ್ತರಾಧಿಕಾರಿಗಳನ್ನಾಗಿ ಬೇರೆ ಮಕ್ಕಳನ್ನು ನಿಯಮಿಸುವ ವ್ಯವಸ್ಥೆ ಇದ್ದಿರಲೇಬೇಕು.
ಆದರೆ ಬಹಳ ಹಿಂದಿನ ಕಾಲದಲ್ಲಿ ಆಸ್ತಿಪಾಸ್ತಿಗಳ ವರ್ಗಾವಣೆ ಮತ್ತು ಪರಭಾರೆ ಲಿಖಿತ ಕಾನೂನು ಮತ್ತು ದಾಖಲೆಗಳ ಆಧಾರದ ಮೇಲೆ ಮಾತ್ರ ನಡೆಯುತ್ತಿರಲಿಲ್ಲ. ಇದಕ್ಕೆಲ್ಲಾ ನಂಬಿಕೆಯೆಂಬ ಒಂದು ಅಲಿಖಿತ ವ್ಯವಸ್ಥೆ ಇರುತ್ತಿತ್ತು. ಆಸ್ತಿವ್ಯಾಜ್ಯಗಳನ್ನು ಅಲ್ಲಿನ ರಾಜರುಗಳು ಮೌಖಿಕ ಸಾಕ್ಷದ ಆಧಾರಗಳ ಮೇಲೆ ತೀರ್ಮಾನಿಸುತ್ತಿದ್ದರು. ಹಾಗಾಗಿ ದತ್ತುಮಕ್ಕಳಿಗೆ ಆಸ್ತಿಯ ಹಕ್ಕುಗಳು ತನ್ನಿಂದ ತಾನೇ ಬರುತ್ತಿತ್ತು. ಆದರೆ ಆಸ್ತಿ ಪರಭಾರೆಗಳಿಗೆ ಲಿಖಿತ ದಾಖಲೆಗಳನ್ನು ಬೇಡುವ ಕಾನೂನುಗಳಿರುವ ಪ್ರಜಾಪ್ರಭುತ್ವದಂತಹ ಆಡಳಿತ ವ್ಯವಸ್ಥೆ ಬಂದ ಮೇಲೆ ದತ್ತು ಮಕ್ಕಳಿಗೆ ಆಸ್ತಿಯ ಹಕ್ಕು ಕೊಡಲು ವಿಶೇಷ ಕಾನೂನುಗಳ ಅಗತ್ಯ ಕಂಡಿತು. ಜೊತೆಗೆ ದತ್ತು ತೆಗೆದುಕೊಂಡಿರುವುದಕ್ಕೂ ದಾಖಲೆಗಳನ್ನು ಸೃಷ್ಟಿಸುವ ವ್ಯವಸ್ಥೆ ಪ್ರಾರಂಭವಾಯಿತು. ಹೀಗೆ ಎಲ್ಲಾ ದೇಶದಲ್ಲಿ ದತ್ತಕದ ಬಗೆಗೆ ಸಾಕಷ್ಟು ಕಾನೂನುಗಳು ರೂಪಗೊಂಡವು.
ಸಾಮಾನ್ಯ ನಿಯಮಗಳು
ಯಾವ ಕಾನೂನಿನಡಿ ದತ್ತಕವನ್ನು ಪಡೆಯಲಾಗುತ್ತದೆ ಎನ್ನುವುದರ ಆಧಾರದ ಮೇಲೆ ದತ್ತಕದ ನಿಯಮಗಳನ್ನು ಹೇಳಬೇಕಾಗುತ್ತದೆ. ಎಲ್ಲಾ ಕಾನೂನಿಗೆ ಹೊಂದಬಲ್ಲ ಕೆಲವು ಸಾಮಾನ್ಯ ನಿಯಮಗಳು ಹೀಗಿವೆ.
1. ಇಪ್ಪತ್ತೊಂದು ವರ್ಷ ವಯಸ್ಸಾಗಿರುವ ಎಲ್ಲಾ ಭಾರತೀಯ ಪ್ರಜೆಗಳೂ ದತ್ತು ತೆಗೆದುಕೊಳ್ಳಲು ಅರ್ಹರು. ಅಂದರೆ ಮದುವೆಯಾಗದ ಗಂಡು ಹೆಣ್ಣುಗಳಿಗೂ ದತ್ತು ತೆಗೆದುಕೊಳ್ಳುವ ನಿಷೇಧವೇನಿಲ್ಲ.
2. ದತ್ತು ತೆಗೆದುಕೊಳ್ಳುವ ವ್ಯಕ್ತಿಗಳು ದೈಹಿಕವಾಗಿ ಆರೋಗ್ಯಕರವಾಗಿದ್ದ, ಮಗುವನ್ನು ಸಾಕಲು ಬೇಕಾದ ಆರ್ಥಿಕ ಶಕ್ತಿ ಹೊಂದಿರಬೇಕು.
3. ಒಂದು ವರ್ಷಕ್ಕಿಂತ ಕಡಿಮೆ ಇರುವ ಮಗುವನ್ನು ದತ್ತು ತೆಗೆದುಕೊಳ್ಳುವ ಪೋಷಕರ ಒಟ್ಟು ವಯಸ್ಸು 90ಕ್ಕೆ ಮೀರಿರಬಾರದು ಮತ್ತು ಪ್ರತಿಯೊಬ್ಬರ ವಯಸ್ಸು 45ಕ್ಕೆ ಮೀರಿರಬಾರದು. ಆದರೆ ಒಂದು ವರ್ಷ ಮತ್ತು ಅದಕ್ಕಿಂತ ದೊಡ್ಡ ಮಕ್ಕಳಾದರೆ ಮಕ್ಕಳ ವಯಸ್ಸನ್ನು ಪೋಷಕರ ವಯಸ್ಸಿಗೆ ಸೇರಿಸಿ ಗರಿಷ್ಠ ಮಿತಿಯನ್ನು ನಿರ್ಧರಿಸಲಾಗುತ್ತದೆ. ಅಂದರೆ ಒಂದು ವರ್ಷದ ಮಗುವಿಗೆ ಪೋಷಕರ ವಯಸ್ಸು 46, ಎರಡು ವರ್ಷದ ಮಗುವಿಗೆ 47 ಗರಿಷ್ಠ ಮಿತಿಯಾಗಬಹುದು.
4. ಒಂಟಿ ಪೋಷಕರು ತಮ್ಮ ವಿರುದ್ಧ ಲಿಂಗದ ಮಗುವನ್ನು ದತ್ತು ತೆಗೆದುಕೊಳ್ಳಬೇಕಾದರೆ ಪೋಷಕರ ಮತ್ತು ಮಗುವಿನ ವಯಸ್ಸಿನ ಅಂತರ ಕನಿಷ್ಟ 21ವರ್ಷಗಳಾಗಿರಬೇಕು. ಉದಾಹರಣೆಗೆ ಗಂಡಸು ಹೆಣ್ಣು ಮಗುವನ್ನು ದತ್ತು ಪಡೆಯಬೇಕಾದರೆ ಅವರಿಬ್ಬರ ವಯಸ್ಸಿನ ಅಂತರ ಕನಿಷ್ಠ 21ವರ್ಷಗಳಾಗಿರಬೇಕು.
5. ದತ್ತಕದ ಮಗುವಿನ ಗರಿಷ್ಠ ವಯಸ್ಸು 15 ಮತ್ತು ಪೋಷಕರ ಗರಿಷ್ಠ ವಯಸ್ಸು 55 ಆಗಿರಲು ಸಾಧ್ಯ. ಆದರೆ ವಿಶೇಷ ಅಗತ್ಯಗಳನ್ನು ಬೇಡುವ ಮಗುವಾಗಿದ್ದರೆ, ರಾಜ್ಯ ಸರ್ಕಾರ ಮಗುವಿನ ವಯಸ್ಸನ್ನು ಸ್ವಲ್ಪ ಮಟ್ಟಿಗೆ ಹೆಚ್ಚಿಸಬಹುದು.
6. ತಮ್ಮದೇ ಮಗುವನ್ನು ಹೊಂದಿರುವವರೂ ಕೂಡ ಇನ್ನೊಂದು ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಆದರೆ ಹಾಗೆ ತೆಗೆದುಕೊಳ್ಳುವ ಮಗುವಿನ ಲಿಂಗ ಈಗಾಗಲೇ ಇರುವ ಸ್ವಂತ ಮಗುವಿನ ಲಿಂಗವಾಗಿರುವಂತಿಲ್ಲ.
ಯಾವಾಗ ಮತ್ತು ಹೇಗೆ?
ಪೋಷಕರು ಯಾವಾಗ ದತ್ತು ಪಡೆಯಬೇಕೆನ್ನುವ ಬಗೆಗೆ ಕಾನೂನಿನ ನಿಯಮಗಳೇನಿಲ್ಲ. ಹಾಗಿದ್ದರೂ ಮದುವೆಯಾಗಿ ಐದು ವರ್ಷಗಳಾದರೂ ಆಗಿದ್ದು, ಸ್ವಂತ ಮಕ್ಕಳಾಗುವ ಸಾಧ್ಯತೆಗಳಿಲ್ಲವೆಂದು ಖಾತ್ರಿಪಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಮುಂದೆ ತಮ್ಮದೇ ಮಕ್ಕಳು ಹುಟ್ಟಿದರೂ ದತ್ತು ಪಡೆದ ಮಗುವಿಗೆ ಸಮಾನ ಪ್ರೀತಿಯನ್ನು ತಾವು ನೀಡಬಲ್ಲೆವು ಎಂಬ ಆತ್ಮವಿಶ್ವಾಸ ಹೊಂದಿರಬೇಕು.
ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳಬೇಕೆನ್ನುವವರು ಈ ಉದ್ದೇಶಕ್ಕಾಗಿಯೇ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಅಲ್ಲಿ ದತ್ತಕದ ಎಲ್ಲಾ ವಿಷಯಗಳ ಬಗೆಗೆ ಸೂಕ್ತ ಮಾರ್ಗದರ್ಶನ ಕೊಡಲಾಗುತ್ತದೆ. ಅನಧಿಕೃತವಾಗಿ ಮಕ್ಕಳನ್ನು ಪಡೆದುಕೊಳ್ಳುವುದು ಸಾಮಾಜಿಕ ದೃಷ್ಟಿಯಿಂದ ಪೋಷಕರಿಗೆ ಸುರಕ್ಷಿತ ಅನ್ನಿಸಿದರೂ ಇದನ್ನು ಮಾಡದಿರುವುದು ಒಳ್ಳೆಯದು.*
ಇಂತಹ ಸಂಸ್ಥೆಯಲ್ಲಿ ನೋಂದಣಿ ಮಾಡಿದ ನಂತರ ಅಲ್ಲಿನ ಸಾಮಾಜಿಕ ಕಾರ್ಯಕರ್ತರು ದತ್ತು ಪಡೆಯಬೇಕೆಂದುಕೊಂಡಿರುವವರ ಮನೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳನ್ನು ನೋಡುತ್ತಾರೆ. ಪೋಷಕರು ದತ್ತು ಪಡೆದ ಮಕ್ಕಳನ್ನು ಸಾಕಿ ಸಲಹಬಲ್ಲರು ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದು ಇಂತಹ ಭೇಟಿಯ ಉದ್ದೇಶ. ಯಾವುದೇ ಹಂತದಲ್ಲಿಯೂ ಪೋಷಕರು ತಪ್ಪು ಮಾಹಿತಿಗಳನ್ನು ನೀಡುವುದಾಗಲೀ ಅಥವಾ ಮಾಹಿತಿಗಳನ್ನು ಮುಚ್ಚಿಡುವುದನ್ನಾಗಲೀ ಮಾಡಲೇ ಕೂಡದು ಇದರಿಂದ ಅವರು ಮುಂದೆ ಕಾನೂನಿನ ಅಥವಾ ಮತ್ತಿತರ ತೊಡಕಿಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಎಲ್ಲಾ ವಿಷಯಗಳನ್ನು ಸಾಮಾಜಿಕ ಕಾರ್ಯಕರ್ತರಿಗೆ ತಿಳಿಸಬೇಕು. ಅಗತ್ಯವಿದ್ದಲ್ಲಿ ಅವರಿಂದ ಸಲಹೆ ಸಹಕಾರ ಪಡೆಯುವುದರ ಜೊತೆಗೆ ತಮ್ಮ ಎಲ್ಲಾ ಅನುಮಾನ, ಆತಂಕಗಳನ್ನು ಮುಕ್ತವಾಗಿ ಪರಿಹರಿಸಿಕೊಳ್ಳಬೇಕು. ಯಾವುದಾದರೂ ಅನುಮಾನ, ಹಿಂಜರಿಕೆಗಳಿಂದ ದತ್ತು ಪಡೆದರೆ ಮಗುವಿಗೆ ಅನ್ಯಾಯ ಮಾಡುವುದಲ್ಲದೆ, ಪೋಷಕರೂ ಮಾನಸಿಕ ಕಿರಿಕಿರಿ ಅನುಭವಿಸಬೇಕಾಗುತ್ತದೆ.
ಯಾವುದೇ ಹಂತದಲ್ಲಿಯೂ ಒಂದು ಅನಾಥ ಮಗುವಿಗೆ ಬಾಳನ್ನು ಕೊಡುವ ತ್ಯಾಗದ ಮನೋಭಾವದಿಂದ ದತ್ತಕದ ಬಗೆಗೆ ಯೋಚಿಸಬಾರದು. ಹೀಗೆ ಮಾಡುವುದು ಮಗುವಿಗೆ ಅನ್ಯಾಯ ಮಾಡಿದಂತಾಗುತ್ತದೆ. ನಾವು ತಂದೆತಾಯಿಗಳಾಗದಿದ್ದರೂ ಮಗು ಒಳ್ಳೆಯ ಬದುಕನ್ನು, ಕೆಲವೊಮ್ಮೆ ನಾವು ಕೊಡಬಹುದಾದ್ದಕ್ಕಿಂತ ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ ಎನ್ನುವುದನ್ನು ಮರೆಯಬಾರದು. ಮಕ್ಕಳ ಪ್ರೀತಿ ಮಮತೆಗಳನ್ನು ಅನುಭವಿಸಬೇಕೆನ್ನುವ ನಮ್ಮ ಆಸೆಗಾಗಿ ದತ್ತು ಪಡೆಯುತ್ತಿದ್ದೇವೆ ಎಂದುಕೊಂಡರೆ ಮುಂದಿನ ಜೀವನ ಸುಗಮವಾಗುತ್ತದೆ.
* ದತ್ತಕದ ಕಾನೂನುಗಳು
ಭಾರತೀಯ ಪ್ರಜೆಗಳಾದ ಹಿಂದುಗಳು, ಸಿಕ್ ಸಮುದಾಯದವರು, ಜೈನರು ಮತ್ತು ಬೌದ್ಧರು ದತ್ತಕದ ವಿಷಯದಲ್ಲಿ 1956ರ ಹಿಂದೂ ಅಡಾಪ್ಷನ್ ಅಂಡ್ ಮೈಂಟೆನನ್ಸ್ ಕಾನೂನಿಗೊಳಪಡುತ್ತಾರೆ. ಇತರ ಭಾರತೀಯ ಪ್ರಜೆಗಳಿಗೆ ಮತ್ತು ವಿದೇಶೀಯರಿಗೆ 1890ರ ಗಾರ್ಡಿಯನ್ ಅಂಡ್ ವಾಡ್ರ್ಸ್ ಕಾನೂನು ಅನ್ವಯವಾಗುತ್ತದೆ. ಜುವನೈಲ್ ಜಸ್ಟೀಸ್ ಆಕ್ಟ್ 2000ರಲ್ಲಿ ಕೂಡ ದತ್ತಕದ ಕೆಲವು ಅಂಶಗಳನ್ನು ಹೇಳಲಾಗಿದೆ.
ವಿದೇಶಿ ಪ್ರಜೆಗಳು ಭಾರತೀಯ ಮಕ್ಕಳನ್ನು ದತ್ತಕ ಪಡೆಯವುದರ ಬಗೆಗೆ ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಾಲಯ 2006ರಲ್ಲಿ ವಿವರವಾದ ಮಾರ್ಗದರ್ಶಿ ಸೂಚನೆಗಳನ್ನು ರೂಪಿಸಿದೆ.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಗಾರ್ಡಿಯನ್ ಮತ್ತು ವಾಡ್ರ್ಸ್ ಕಾನೂನು ದತ್ತು ಪಡೆದ ಪೋಷಕರನ್ನು ತಂದೆತಾಯಿಗಳೆಂದು ಗುರುತಿಸದೆ ಬರಿಯ ಗಾರ್ಡಿಯನ್ ಆಗಿ ಒಪ್ಪುತ್ತದೆ. ಅಂದರೆ ನ್ಯಾಯಾಲಯಗಳು ಇದನ್ನು ರದ್ದುಪಡಿಸಬಹುದು. ಹೀಗೆ ಗಾರ್ಡಿಯನ್ ಆಗಿರುವ ಪೋಷಕರು ತಮ್ಮ ಆಸ್ತಿಪಾಸ್ತಿಗಳನ್ನು ತಾವು ದತ್ತುಪಡೆದ ಮಗುವಿಗೆ ಮರಣಶಾಸನದ ಮೂಲಕ ವರ್ಗಾಯಿಸಬೇಕಗುತ್ತದೆ.
ನೇರ ದತ್ತಕಗಳು
ದತ್ತು ತೆಗೆದುಕೊಳ್ಳಬೇಕೆನ್ನುವ ಪೋಷಕರು ಇದಕ್ಕಾಗಿಯೇ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಕಾನೂನುಬದ್ಧವಾಗಿ ವ್ಯವಹರಿಸುವುದು ಉತ್ತಮ. ಸಾಕಷ್ಟು ಜನರ ತಪ್ಪು ತಿಳುವಳಿಕೆಯೆಂದರೆ ಹೀಗೆ ಮಾಡ ಹೊರಟರೆ ನೂರಾರು ಕಾನೂನಿನ ಮತ್ತು ಸರ್ಕಾರೀ ತೊಡಕುಗಳನ್ನು ಎದುರಿಸಬೇಕು ಮತ್ತು ಹಲವಾರು ಕಾಗದ ಪತ್ರಗಳನ್ನು ತಯಾರಿಸಬೇಕಾಗುತ್ತದೆ, ಎನ್ನುವುದು. ಇಷ್ಟೇ ಅಲ್ಲ ಹೀಗೆ ಕಾನೂನು ಬದ್ಧವಾಗಿ ದತ್ತು ಪಡೆಯಲು ಹೋದರೆ ಇದು ಎಲ್ಲರಿಗೂ ಪ್ರಚಾರವಾಗುತ್ತದೆ ಎನ್ನುವ ಹಿಂಜರಿಕೆ ಕೂಡ ಸಾಕಷ್ಟು ಪೋಷಕರಲ್ಲಿ ಇರುತ್ತದೆ. ಹಾಗಾಗಿ ಹಲವಾರು ಜನ ಕೆಲವು ಸರಳ ಅಡ್ಡದಾರಿಗಳನ್ನು ಹಿಡಿಯುತ್ತಾರೆ. ಯಾವುದೋ ಆಸ್ಪತ್ರೆ ಅಥವಾ ಅನಾಥಾಲಯದಲ್ಲಿ ವಾರಸುದಾರರಿಲ್ಲದೆ ಇರುವ ಮಗುವನ್ನು ತಮಗೆ ದೈಹಿಕವಾಗಿ ಹುಟ್ಟಿದ ಮಗುವೆಂದು ದಾಖಲೆಗಳನ್ನು ಸೃಷ್ಟಿಸುವುದರ ಮೂಲಕ ಪಡೆಯುತ್ತಾರೆ. ಮಹಿಳೆಯರು ಇದಕ್ಕಾಗಿ ನಕಲಿ ಗರ್ಭಧರಿಸಿ ಆಸ್ಪತ್ರೆ ಸೇರಿಕೊಳ್ಳುತ್ತಾರೆ. ಅಂದರೆ ನಕಲಿ ದಾಖಲೆಗಳ ದೊಡ್ಡ ಜಾಲವನ್ನೇ ತಯಾರಿಸಬೇಕಾಗುತ್ತದೆ. ಹೀಗೆ ಗುಪ್ತವಾಗಿ ಪಡೆಯುವ ಮಗುವನ್ನು ಮುಂದೆ ತಮ್ಮದೇ ಮುಗುವೆಂದು ಬೆಳೆಸಬಹುದು, ಮಗುವಿಗೂ ಕೂಡ ದತ್ತಕದ ವಿಚಾರವನ್ನು ಹೇಳುವ ಅಗತ್ಯವಿಲ್ಲ ಎನ್ನವು ತಿಳುವಳಿಕೆ ಅವರದು. ಕೆಲವೊಮ್ಮೆ ಎಲ್ಲಾ ಸಸೂತ್ರವಾಗಿ ನಡೆಯಬಹುದು ಕೂಡ. ಆದರೆ ಕಾನೂನಿನ ಮಾನ್ಯತೆ ಇಲ್ಲದ ಇಂತಹ ದತ್ತಕಗಳಿಂದ ಪೋಷಕರು ಮುಂದೆ ಹಲವಾರು ರೀತಿಯ ತೊಂದರೆಗೊಳಗಾಗಬಹುದು. ಉದಾಹರಣೆಗೆ ಮಗು ಆಸ್ಪತ್ರೆಯ ಸಿಬ್ಬಂದಿ ಕದ್ದು ತಂದದ್ದಾಗಿದ್ದರೆ, ಅದರ ಜೈವಿಕ ತಂದೆತಾಯಿಗಳು ಇದರ ಪತ್ತೆ ಹಚ್ಚಿದಾಗ ದತ್ತು ಪಡೆದವರು ಮಗುವನ್ನು ಕಳೆದುಕೊಳ್ಳುವುದಲ್ಲದೆ ಅನಗತ್ಯ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗಬಹುದು. ಅಥವಾ ಮಗು ಕಾನೂನುಬದ್ದವಾಗಿ ದತ್ತು ಪಡೆದದ್ದಲ್ಲ, ಹಾಗಾಗಿ ಪೋಷಕರ ಆಸ್ತಿಪಾಸ್ತಿಗಳು ತಮಗೆ ಸೇರಬೇಕು ಎಂದು ದಾಯಾದಿಗಳು ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಬಹುದು. ಆಗ ಅಧಿಕೃತ ದಾಖಲೆಗಳಿಲ್ಲದ ಕಾರಣ ದತ್ತು ತೆಗೆದುಕೊಂಡದ್ದಕ್ಕೆ ಸಾಕ್ಷ ಒದಗಿಸಲು ಪೋಷಕರು ತಿಣುಕಾಡಬೇಕಾಗುತ್ತದೆ. ಇಂತಹ ಅಪ್ರಿಯ ಘಟನೆಗಳನ್ನು ಆಹ್ವಾನಿಸಿಕೊಳ್ಳುವುದನ್ನು ತಪ್ಪಿಸಬೇಕಾದರೆ, ಕಾನೂನುಬದ್ಧ ದತ್ತಕಗಳೊಂದೇ ದಾರಿ.
ವಿಶೇಷ ದತ್ತಕಗಳು
• ಒಂಟಿ ಪೋಷಕರೂ (ಅವಿವಾಹಿತ ಅಥವಾ ವಿಚ್ಛೇದಿತ) ಕೂಡ ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿದ್ದರೂ, ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಇದು ವಿರಳ. ಇದರ ಬಗೆಗೆ ಇತ್ತೀಚಿಗೆ ಅಲ್ಲಲ್ಲಿ ಸುದ್ದಿಯಾಗುತ್ತಿದ್ದರೂ ಇದರ ಚಿಂತನೆ ಇನ್ನೂ ಕಲ್ಪನೆಯ ಹಂತದಲ್ಲಿದೆ. ಮಗುವಿನ ಮಾನಸಿಕ ಆರೋಗ್ಯದ ಬೆಳವಣಿಗೆಗೆ ತಂದೆತಾಯಿಗಳಿಬ್ಬರ ಸಮಾನ ಅಗತ್ಯವಿರುವುದರಿಂದ ಒಂಟಿ ಪೋಷಕರು ದತ್ತು ಮಕ್ಕಳನ್ನು ಬೆಳೆಸಲು ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಪೋಷಕರೇ ಇಲ್ಲದ ಸ್ಥಿತಿಗಿಂತ ಒಬ್ಬರಾದರೂ ಪೋಷಕರಿರುವುದು ಸಾಮಾಜಿಕವಾಗಿ ಆರೋಗ್ಯಕರ. ಹಾಗಾಗಿ ನಾವೆಲ್ಲಾ ಇದರ ಬಗೆಗೆ ಮುಕ್ತಮನಸ್ಕರಾಗುವ ಅಗತ್ಯವಿದೆ.
• ಸಾಮಾನ್ಯ ಸಂದರ್ಭಗಳಲ್ಲಿ ಎಲ್ಲಾ ಪೋಷಕರು ಹಸುಗೂಸುಗಳನ್ನು ಮಾತ್ರ ದತ್ತು ಪಡೆಯಲು ಬಯಸುತ್ತಾರೆ. ಇದರಿಂದ ಅವರಿಗೆ ಮಕ್ಕಳನ್ನು ತಮ್ಮ ಮನಸ್ಸಿಗೆ ಮತ್ತು ವಾತಾವರಣಕ್ಕೆ ಹೊಂದುವಂತೆ ಬೆಳೆಸಲು ಅನುಕೂಲವಾಗುತ್ತದೆ. ಆದರೆ ಮಧ್ಯವಯಸ್ಸಿನ ಅಥವಾ ಅದನ್ನು ಮೀರಿರುವವರು ಹಸುಗೂಸುಗಳನ್ನು ಬೆಳೆಸುವ ಮನಸ್ಥಿತಿ ಅಥವಾ ದೈಹಿಕ ಆರೋಗ್ಯವನ್ನು ಹೊಂದಿರದಿದ್ದಾಗ ಸ್ವಲ್ಪ ದೊಡ್ಡ ಮಕ್ಕಳನ್ನು ದತ್ತು ಪಡೆಯಬಹುದು. ಇಂತಹ ದತ್ತಕದಲ್ಲಿ ಇರುವ ಭಿನ್ನ ಸವಾಲೆಂದರೆ, ವ್ಯಕ್ತಿತ್ವದ ರೂಪರೇಶೆಗಳು ಈಗಾಗಲೇ ಸಿದ್ಧವಾಗಿರುವ ಇಂತಹ ಮಕ್ಕಳನ್ನು ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡುವುದು. ಸ್ವಲ್ಪ ಸಹನೆ ಮತ್ತು ಸೂಕ್ತ ಸಹಾಯದೊಂದಿಗೆ ಇದನ್ನು ಸಾಧಿಸಬಹುದು. ಹಾಗಾಗಿ ಇದರ ಬಗೆಗೆ ಹಿಂಜರಿಕೆ ಇಟ್ಟುಕೊಳ್ಳಬೇಕಿಲ್ಲ.
• ಈಗಾಗಲೇ ತಮ್ಮದೇ ಮಕ್ಕಳನ್ನು ಹೊಂದಿರುವವರೂ ಕೂಡ ದತ್ತು ಪಡೆಯಲು ಕಾನೂನಿನಲ್ಲಿ ಅವಕಾಶವಿದೆ. ಕೆಲವೊಮ್ಮೆ ದತ್ತು ಪಡೆದ ನಂತರ ಪೋಷಕರಿಗೆ ತಮ್ಮದೇ ಮಕ್ಕಳಾಗಬಹುದು. ಇಂತಹ ಸಂದರ್ಭಗಳಲ್ಲಿ ದತ್ತು ಮಕ್ಕಳನ್ನು ಸ್ವಂತ ಮಕ್ಕಳಂತೆಯೇ ಬೆಳೆಸುವುದು ಮತ್ತು ಆ ಮಕ್ಕಳಲ್ಲಿ ಕೂಡ ಹೊಂದಾಣಿಕೆಯನ್ನು ಮೂಡಿಸಿ ಪ್ರೀತಿಯನ್ನು ಉಳಿಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ. ಇದು ಅಂತಹ ಸವಾಲಿನ ಸಮಸ್ಯೆಯೇನೂ ಅಲ್ಲ. ಕೆಲವೊಮ್ಮೆ ಪೋಷಕರಿಗೆ ಸೂಕ್ತ ಆಪ್ತಸಲಹೆ ಬೇಕಾಗವಹುದು ಅಷ್ಟೇ.
ಮುಂದುವರೆಯುವುದು….
ವಸಂತ್ ನಡಹಳ್ಳಿ
ಸಾದಲಿ ಹೊಸಕೆರೆಗೆ ಬಾಗಿನ ಅರ್ಪಣೆ
ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆ ರೈತರಿಗೆ ಹಾಗೂ ನಾಗರಿಕರಿಗೆ ಸಂತಸ ಹಾಗೂ ನೋವು ಎರಡನ್ನೂ ಒಟ್ಟಿಗೇ ತಂದಿದೆ. ಕೆರೆಗಳು ತುಂಬುತ್ತಿರುವುದು ಅಂತರ್ಜಲ ವೃದ್ಧಿಗೆ ಕಾರಣವಾಗುವುದರಿಂದ ಗಂಗಮ್ಮನನ್ನು ಪೂಜಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ಕೋಡಿ ಹರಿದಿದ್ದರಿಂದ ಸೋಮವಾರ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಕಳೆದ 15 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ತುಂಬಿ ಹರಿದಿದೆ. ಉತ್ತಾರ ಪೆನ್ನಾರ್ ನದೀ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್ಗಳಷ್ಟಿದೆ. ಈ ಪ್ರದೇಶದಲ್ಲಿ ರೈತರಿಗಿದು ವರದಾನವಾಗಿದೆ ಎಂದು ಹೇಳಿದರು.
ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿವೆ. ಎಸ್.ದೇವಗಾನಹಳ್ಳಿ ಪಂಚಾಯತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನಕೆರೆಗೆ ಹರಿಯುತ್ತದೆ, ಅಲ್ಲಿಂದ ಮುಂದೆ ರಾಮಸಮುದ್ರದ ಕಡೆಗೆ ನೀರು ಹರಿದುಹೋಗುತ್ತದೆ. ರಾಮಸಮುದ್ರ ಕೆರೆ ಅತ್ಯಂತ ದೊಡ್ಡದಾಗಿದ್ದು ತುಂಬಲು ಇನ್ನೂ 14 ಅಡಿ ಬಾಕಿಯಿದೆ. ಈ ಕೆರೆಯೂ ತುಂಬಲಿ ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದರಾಜು, ಜಿಲ್ಲಾ ಪಂಚಾಯತಿ ಸದಸ್ಯೆ ಶೋಭಾ ಜಯಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುತ್ತೂರು ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರಿಗೆ ಯುವ ರೈತ ಪ್ರಶಸ್ತಿ
ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರಿಗೆ ಬೆಂಗಳೂರಿನ ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಕೃಷಿ ಮೇಳದಲ್ಲಿ ಯುವ ರೈತ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.
ತಾಲ್ಲೂಕಿನ ಮುತ್ತೂರು ಗ್ರಾಮದ ಎಂ.ಎಸ್.ಮಂಜುನಾಥ್ ಮತ್ತು ಬಡುವನಹಳ್ಳಿಯ ಬಿ.ರೂಪಾ ಅವರು ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಸಾವಯವ ಗೊಬ್ಬರ, ಅಜೋಲಾ, ರಸಸಾರ ತಯಾರಿಕೆ, ಗೋಬರ್ ಗ್ಯಾಸ್ ಬಳಕೆ, ಹಸು, ಕುರಿ, ಕೋಳಿ, ಜೇನು ಸಾಕಾಣಿಕೆ, ತರಕಾರಿ, ಹಿಪ್ಪುನೇರಳೆ, ತೋಟಗಾರಿಕಾ ಬೆಳೆಗಳು, ನೀರಿನ ಸದ್ಭಳಕೆ ಮುಂತಾದ ಪದ್ಧತಿಗಳನ್ನು ಪರಿಗಣನೆಗೆ ತೆಗೆದುಕೊಂಡು ತಾಲ್ಲೂಕು ಯುವ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿರುವುದಾಗಿ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮನೆ ಕುಸಿತದಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ವಿತರಣೆ
ತಾಲ್ಲೂಕಿನಾದ್ಯಂತ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕರಿಯಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಇಬ್ಬರು ಮೃತಪಟ್ಟಿದ್ದು ಅವರ ಕುಂಟುಂಬದವರಿಗೆ ಸರ್ಕಾರದಿಂದ ತಲಾ 4 ಲಕ್ಷ ರೂಗಳ ಪರಿಹಾರ ಘೋಷಣೆಯಾಗಿದೆ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿ ಗ್ರಾಮಕ್ಕೆ ಭಾನುವಾರ ಶಾಸಕ ಎಂ.ರಾಜಣ್ಣ ಅವರೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ಈಗ ತಕ್ಷಣ ಮೃತರ ಕುಟುಂಬದವರಿಗೆ ಒಂದು ಲಕ್ಷ ರೂಗಳ ಚೆಕ್ ನೀಡುತ್ತಿದ್ದು ಉಳಿದ ಹಣವನ್ನು ಶೀಘ್ರವಾಗಿ ನೀಡಲಾಗುತ್ತದೆ ಎಂದು ಹೇಳಿದರು.
ತಾಲ್ಲೂಕಿನಾದ್ಯಂತ ನಾಲ್ಕು ಹೋಬಳಿಗಳಲ್ಲಿ 49 ಮನೆಗಳು ಸಂಪೂರ್ಣವಾಗಿ ಕುಸಿದಿದ್ದರೆ, 267 ಮನೆಗಳು ಭಾಗಶಃ ಕುಸಿದಿದೆ. 3,200 ಎಕರೆಯಷ್ಟು ರಾಗಿ ಹೊಲಗಳಿಗೆ ತೊಂದರೆಯಾಗಿದ್ದು 99,05,020 ರೂಗಳಷ್ಟು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ.. ಇನ್ನೂ ಮಳೆಯಿಂದಾಗಿ ಇನ್ನಷ್ಟು ಮನೆಗಳು ಜಖಂಗೊಳ್ಳುವ ಅಂದಾಜಿದ್ದು, ಈಗಿನ ಮನೆಗಳ ನಷ್ಟದ 97,86,500 ರೂಗಳ ಜೊತೆಗೆ 2,13,500 ರೂಗಳನ್ನು ಬಿಡುಗಡೆ ಮಾಡಲು ಮೇಲಿನ ಅಧಿಕಾರಿಗಳಿಗೆ ವರದಿ ನೀಡಿರುವುದಾಗಿ ತಿಳಿಸಿದರು.
ಸಾದಲಿ ಹೊಸಕೆರೆ ಕೋಡಿ ಹರಿದಿದೆ
ಕಳೆದ 15 ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಭಾನುವಾರ ತಾಲ್ಲೂಕಿನ ಸಾದಲಿ ಹೊಸಕೆರೆ ಸುಮಾರು 8 ವರ್ಷಗಳ ನಂತರ ತುಂಬಿ ಹರಿದಿದೆ. ಉತ್ತಾರ ಪೆನ್ನಾರ್ ನದೀ ಕಣಿವೆ ಪ್ರದೇಶದಲ್ಲಿರುವ ಸಾದಲಿ ಹೊಸಕೆರೆ ಅಚ್ಚುಕಟ್ಟು 45 ಹೆಕ್ಟೇರ್ಗಳಷ್ಟಿದೆ. ಈ ಕೆರೆಯ ನೀರಿನ ಶೇಖರಣೆ ಪ್ರದೇಶ 4.21 ಹೆಕ್ಟೇರ್ಗಳಷ್ಟಿದೆ.
‘ತಾಲ್ಲೂಕಿನ ಸಾದಲಿ ಮತ್ತು ಎಸ್.ದೇವಗಾನಹಳ್ಳಿ ಪಂಚಾಯತಿ ವ್ಯಾಪ್ತಿಗೆ ಬರುವ ಹಲವು ಕೆರೆಗಳು ತುಂಬಿದ್ದು ಈ ಭಾಗದ ಜನರ ಹರ್ಷಕ್ಕೆ ಕಾರಣವಾಗಿವೆ. ಎಸ್.ದೇವಗಾನಹಳ್ಳಿ ಪಂಚಾಯತಿಯ ಇರಗಪ್ಪನಹಳ್ಳಿ ಕೆರೆಯೂ ತುಂಬಿದೆ. ಈ ಭಾಗದ ಅಕ್ಕಯ್ಯಗಾರು ಕೆರೆ ಮತ್ತು ಎಸ್.ಗೊಲ್ಲಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದು ಸಾದಲಿ ಹೊಸಕೆರೆಗೆ ನೀರು ಹರಿದು ಬಂದು ಈಗ ಈ ಕೆರೆಯೂ ತುಂಬಿ ಕೋಡಿ ಹರಿದಿದೆ. ಸಾದಲಿ ಹೊಸಕೆರೆ ತುಂಬಿ ಹರಿಯುವ ನೀರು ಸಾದಲಿ ಸಾದಲಮ್ಮನಕೆರೆಗೆ ಹರಿಯುತ್ತದೆ, ಅಲ್ಲಿಂದ ಮುಂದೆ ರಾಮಸಮುದ್ರದ ಕಡೆಗೆ ನೀರು ಹರಿದುಹೋಗುತ್ತದೆ. ರಾಮಸಮುದ್ರ ಕೆರೆ ಅತ್ಯಂತ ದೊಡ್ಡದಾಗಿದ್ದು ತುಂಬಲು ಇನ್ನೂ 14 ಅಡಿ ಬಾಕಿಯಿದೆ’ ಎಂದು ನಿವೃತ್ತ ಶಿಕ್ಷಕ ಕೆ.ಎನ್. ಲಕ್ಷ್ಮೀನಾರಾಯಣ ತಿಳಿಸಿದರು.
ಮುಚ್ಚುತ್ತಿರುವುದಕ್ಕೆ ಪರ್ಯಾಯ?
ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ವೇದಿಕೆಯ ಮುಖಾಂತರ ರಾಜ್ಯ ಸರಕಾರ ನಡೆಸುತ್ತಿರುವ ಸರಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ, ಮುಚ್ಚದಿರುವ ಕುರಿತು ಮಾತುಗಳು ಉದುರುತ್ತಲೇ ಇವೆ. ಯಾವುದು ಸತ್ಯ ಯಾವುದು ಸುಳ್ಳು ಎಂದು ನಿರ್ಧರಿಸಲಾರದ ಸ್ಥಿತಿಯೊಳಗೆ ಕೇವಲ ಪಾಲಕರಷ್ಟೇ ಅಲ್ಲ, ಅಧಿಕಾರಿಗಳೂ ಕೂಡ ಇದ್ದಾರೆ, ಮಂತ್ರಿ ಮಹೋದಯರ ಹೇಳಿಕೆಗಳು ಮತಾಧಾರಿತವೇ ವಿನಃ ಮತ್ತೇನೂ ಅಲ್ಲ.
ವಾಸ್ತವದ ಸಂಗತಿಯೆಂದರೆ ರಾಜ್ಯದ ಪಟ್ಟಣ ಪ್ರದೇಶದ ಶಾಲೆಗಳು ಸೇರಿದಂತೆ, ನೂರಾರು ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಬಹುತೇಕ ಇಲ್ಲಿನ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಎರಡಂಕಿಯಲ್ಲೂ ಇಲ್ಲ. ಹೀಗಿದ್ದಾಗ ಅವುಗಳಲ್ಲಿ ಕೆಲವನ್ನು ಮುಚ್ಚಿ, ಅಕ್ಕಪಕ್ಕದಲ್ಲಿ ಇರುವ ಶಾಲೆಯೊಂದಿಗೆ ಸಂಯೋಜನೆಗೊಳಿಸುವ ವಿಚಾರವು ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಇರುವ ಶಾಲೆಗಳನ್ನು ಮುಚ್ಚಬಾರದೆಂದು ಹಲವು ಸಂಘ ಸಂಸ್ಥೆಗಳು, ಹಿರಿಕರು ಹಕ್ಕೋತ್ತಾಯಕ್ಕೂ ಇಳಿದಿದ್ದಾರೆ. (ಇವರಾರೂ ತಮ್ಮ ಮಕ್ಕಳನ್ನು ಅಂಥ ಶಾಲೆಗಳಿಗೆ ಕಳಿಸುತ್ತಿಲ್ಲ ಎಂಬುದು ಪ್ರತ್ಯೇಕ ವಿಷಯ) ನಮ್ಮದೆಂಬ ಮೋಹ ಇರಬೇಕಾದದ್ದೇನೋ ಸರಿ. ಆದರೆ ಎಷ್ಟು ಕಾಲ ಅಂತ ಮೋಹದಲ್ಲಿ ಇಂಥವುಗಳನ್ನು ನಡೆಸಲು ಸಾಧ್ಯ?.
ಒಂದು ಶಾಲೆಯನ್ನು ನಡೆಸುವುದೆಂದರೆ ಸಾಮನ್ಯ ಸಂಗತಿಯಲ್ಲ. ಅದಕ್ಕೆ ಬೇಕಾದ ಕಟ್ಟಡ, ಪೀಠೋಪಕರಣ, ಪಾಠೋಪಕರಣಗಳ ಜೊತೆ ಅಗತ್ಯವಿರುವಷ್ಟು ಶಿಕ್ಷಕರನ್ನು ಒದಗಿಸಬೇಕು, ಅವರಿಗೆಲ್ಲ ಪ್ರತಿ ತಿಂಗಳೂ ಸಂಬಳವನ್ನು ನೀಡಬೇಕು. ಅದಕ್ಕೆ ತಗಲುವ ಒಟ್ಟು ವೆಚ್ಚ ಎಷ್ಟು? ಎಷ್ಟಾದರೂ ಸರಿ – ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದರೆ ಮಾಡುವ ವೆಚ್ಚದ ಪ್ರಸ್ತಾಪ ಅಪ್ರಸ್ತುತ, ಆದರೆ ವಿದ್ಯಾರ್ಥಿಗಳೇ ಇಲ್ಲದಾಗಲು ಶಾಲೆಗಳನ್ನು ನಡೆಸುವುದು ಎಂದಾದರೆ, ವೆಚ್ಚವನ್ನು ಪರಿಗಣಿಸುವುದು, ಅರ್ಥಿಕ ನಷ್ಟವನು ಪರಿಗಣಿಸುವುದು ಅಗತ್ಯವಾಗಿಬಿಡುತ್ತದೆ. ಅದರೊಟ್ಟಿಗೆ ಅಗತ್ಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಇರದಿದ್ದರೆ, ಶಾಲೆ ನಡೆಸುವುದು ಅವೈಜ್ಞಾನಿಕವೂ ಆಗಿಬಿಡುತ್ತದೆ. ಹೀಗಾದಾಗ ಅಂಥ ಶಾಲೆಗಳನ್ನು ಮುಚ್ಚುವ ಮತ್ತು ಅಲ್ಲಿ ಇರುವ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿಗೆ ಪಕ್ಕದ ಶಾಲೆಯಲ್ಲಿ ಪ್ರವೇಶ ನೀಡುವ ಕ್ರಮ ತಪ್ಪೆಂದು ವಾದಿಸಲು ಕಾರಣಗಳು ಇಲ್ಲ. ಆದರೆ ಹೀಗೆ ಮಾಡುವ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಬಹಳ ಮುಖ್ಯ. ಯಾವು ಯಾವುದೇ ದೊಡ್ಡವರು ರಾಜಕಾರಣಿಗಳ ತೆವಲಿಗನುಗುಣವಾಗಿ ಯಾವೂದೇ ಶಾಲೆಯನ್ನು ಇನ್ನಾವುದೇ ಶಾಲೆಯೊಂದಿಗೆ ವಿಲೀನಗೊಳಿಸುವುದಲ್ಲ. ಬದಲಿಗೆ 8-10 ಕಿ.ಮೀ ವ್ಯಾಪ್ತಿಯಲ್ಲಿ ಇದ್ದುದರಲ್ಲೇ ಅತ್ಯಂತ ಸುಸಜ್ಜಿತವಾದ ಸೌಲಭ್ಯವುಳ್ಳ ಉಳಿದ ನಾಲ್ಕಾರು ಶಾಲೆಗಳಿಗೆ ಕೇಂದ್ರವಾದ, ಓಡಾಟಕ್ಕೆ ಅನುಕೂಲವಾದ ಶಾಲೆಯೊಂದನ್ನು ಮುಲಾಜಿಲ್ಲದೆ ಆಯ್ಕೆ ಮಾಡಿಕೊಳ್ಳುವುದು ಸೂಕ್ತ, ಮತ್ತು ಆ ಶಾಲೆಗೆ ಹೋಗಿ, ಬರುವ ವಿದ್ಯಾರ್ಥಿಗಳಿಗೆ ಸೂಕ್ತ ವಾಹನದ ವ್ಯವಸ್ಥೆ ಕಲ್ಪಿಸುವುದು ಒಂದು ಜವಾಬ್ದಾರಿ, ಮನೆಯಿಂದಲೇ ಶಾಲೆಗೆ ಹೋಗಿ ಬರುತ್ತಿದ್ದ ಚಿಕ್ಕಮಕ್ಕಳಿಗೆ ಯಾವುದೋ ಒಂದು ಸರಕಾರಿ ವಸತಿ ನಿಲಯವನ್ನು ನೀಡುತ್ತೇವೆಂದರೆ ಆಗದು, ಯಾಕೆಂದರೆ ಬಹಳಷ್ಟು ಪಾಲಕರು, ವಸತಿ ನಿಲಯದಲ್ಲಿ ತಮ್ಮ ಮಕ್ಕಳನ್ನು ಬಿಡಲು ಇಷ್ಟಪಡದೆ ಹೋಗಬಹುದು, ಒಂದೊಮ್ಮೆ ವಸತಿ ನಿಲಯಗಳಲ್ಲಿಟ್ಟು ಮಕ್ಕಳನ್ನು ಓದಿಸಬೇಕಾದರೆ, ಸರಕಾರ ನಿಗದಿಗೊಳಿಸುವ ವಸತಿ ನಿಲಯಗಳಲ್ಲೇ ಯಾಕೆ ಬಿಡಬೇಕು? ಹೀಗೆಲ್ಲ ಯೋಚನೆಗಳು ಬಂದಾಗ, ಬರಬಹುದಾದ ಮಕ್ಕಳನ್ನು ಕಳೆದುಕೊಳ್ಳುವ ಅಪಾಯವೇ ಅಧಿಕ.
ನಡೆಯುವಷ್ಟು ಶಾಲೆಗಳಾದರೂ ಚೆನ್ನಾಗಿ ನಡೆಯಬೇಕು, ಬರುವಷ್ಟು ಮಕ್ಕಳಾದರೂ ಖುಷಿಯಿಂದ ಬಂದು ಹೋಗುವಂತಾಗಬೇಕು, ಕನ್ನಡದ ಉಳಿವಿಗಾಗಿ ಕನ್ನಡ ಶಾಲೆಗಳನ್ನು ಕಾಪಾಡಿಕೊಳ್ಳುವುದು ಎಷ್ಟು ಮುಖ್ಯವೂ ಅಷ್ಟೇ ಮುಖ್ಯ ಅಲ್ಲಿಗೆ ಬರುವ ವಿದ್ಯಾರ್ಥಿಗಳನ್ನು ಕಾಪಾಡಿಕೊಳ್ಳುವುದು. ಆರೋಗ್ಯ ಮತ್ತು ಶಿಕ್ಷಣದ ವಿಷಯಕ್ಕೆ ಬಂದಾಗ ಸರಕಾರ ಕೇವಲ ಲಾಭಗಳಿಕೆಯನ್ನಷ್ಟೇ ಲಕ್ಷಿಸುವುದಲ್ಲ. ಇದನ್ನು ಅನುಲಕ್ಷಿಸಿಯೇ ನಮ್ಮಲ್ಲಿ ವಾಜಪೇಯಿ ಆರೋಗ್ಯಶ್ರೀ ಜಾರಿಗೆ ಬಂತು. ಎಲ್ಲೋ ಯಾವುದೇ ಸಂದರ್ಭದಲ್ಲಿ ಅಪಘಾತವಾದರೂ 108 ರ ವಾಹನ ಅಲ್ಲಿಗೆ ಬಂದು ರಕ್ಷಣಾ ಕಾರ್ಯವೆಸಗಿ – ಅಪಘಾತಕ್ಕೆ ಒಳಗಾದವರನ್ನು ಸಮೀಪದ ಆಸ್ಪತ್ರೆಗೆ ಸೇರಿಸುವ ಬಹುದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವಂತಾಗಿದೆ. ರೋಗಿಗಳ ಮನೆ ಬಾಗಿಲಿಗೆ ಬಂದು ಅವರನ್ನು ಆಸ್ಪತ್ರೆಗೆ ಸೇರಿಸುವ ಸ್ತುತ್ಯಾರ್ಹ ಕಾರ್ಯ ಇದರಿಂದಾಗಿ ನೆರವೇರುತ್ತಿದೆ. ಅನೇಕರ ಜೀವವನ್ನು ಉಳಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲಬೇಕು. ಒಂದು ಜೀವದ ಉಳಿವಿನ ಎದುರು ಆರ್ಥಿಕ ನಷ್ಟ ನಗಣ್ಯ. ಹೀಗಾಗಿ ಇಂದು ಇದು ಅತ್ಯಂತ ಜನಪ್ರಿಯವಾಗಿದೆ. ನಮ್ಮ ಘನ ಸರ್ಕಾರಕ್ಕೆ 108 ವಾಹನ ವ್ಯವಸ್ಥೆ ಕಲ್ಪಿಸುವ ಇಚ್ಛಾಶಕ್ತಿ ಪ್ರಾಪ್ತವಾದ ಪರಿಯಲ್ಲೇ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನದ ವ್ಯವಸ್ಥೆ ಕಲ್ಪಿಸಿ ಅತೀ ಕಡಿಮೆ ಮಕ್ಕಳಿರುವ ಶಾಲಾ ಮಕ್ಕಳನ್ನು ಕೇಂದ್ರದ ಇನ್ನೊಂದು ಶಾಲೆಗೆ ಕರೆದುಕೊಂಡು ಹೋಗಿ ಕರೆದುಕೊಂಡು ಬಂದು ಮನೆ ಮುಟ್ಟಿಸುವ ಜವಾಬ್ದಾರಿ ಹೊತ್ತರೆ ಒಳ್ಳೇಯದಾಗುತ್ತದೆ. ಅಂಥó ವಾಹನಗಳಿಗೆ ‘ಕನ್ನಡವಾಹಿನಿ’ ಎಂದು ಬೇಕಾದರೆ ನಾಮಕರಣ ಮಾಡಬಹುದು. ಕನ್ನಡ ಶಾಲೆಗಳಿಗೆ ಬರುವ ಮಕ್ಕಳ ಸಂಖ್ಯೆ ದಿನೇ – ದಿನೇ ಕ್ಷೀಣಿಸುತ್ತಿರುವಾಗ – ಸುರಕ್ಷಿತವಾಗಿ ನಮ್ಮ ಮಕ್ಕಳು ಶಾಲೆಯೊಂದಕ್ಕೆ ಮನೆಯಿಂದಲೇ ಹೋಗಿಬರಲು ಅನುಕೂಲತೆಯಿದೆ ಎಂದಾದರೆ ಅನೇಕ ಪಾಲಕರು – ತಮ್ಮ ಮಕ್ಕಳನ್ನು ಅಲ್ಲಿಗೆ ನೆಮ್ಮದಿಯಿಂದ ಕಳಿಸಿಕೊಡಬಹುದು.
ಕನ್ನಡ ಶಾಲೆಗಳಿಗೆ ಕಳಿಸಿದರೆ ತಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದೆಂಬ ಭರವಸೆ ಪಾಲಕರಲ್ಲಿ ಮೂಡುವಂತೆ ಮಾಡಬೇಕಾದದ್ದು ಇಂದಿನ ಅಗತ್ಯ. ಹೀಗಾಗಿ ನಡೆಸುವ ಶಾಲೆಗಳನ್ನು ವ್ಯವಸ್ಥಿತವಾಗಿ ನಡೆಸುವಂತಾಗಬೇಕು. ಅಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಜೊತೆಗೆ ಅಗತ್ಯ ಪ್ರಮಾಣದಲ್ಲಿ ಶಿಕ್ಷಕರ ನಿಯೋಜನೆಯಾಗಬೇಕು. ಬಹಳಷ್ಟು ಶಿಕ್ಷಕರು ಇಂದು ನಗರ ಮೋಹಿಗಳಾಗಿರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ಮಾಡುವವರ ಸಂಖ್ಯೆ ಗಣನೀಯವಾಗಿ ತಗ್ಗಿದೆ. ನಗರದ ಸೌಲಭ್ಯಗಳು ಗ್ರಾಮೀಣ ಪ್ರದೇಶಗಳಲ್ಲಿ ದೊರಕುವುದಿಲ್ಲ. ಸೂಕ್ತವಾದ ಮನೆ ಬಾಡಿಗೆಗೆ ದೊರಕುವುದಿಲ್ಲ ಎಂಬ ಕಾರಣಕ್ಕಿಂತ, ತಮ್ಮ ಮಕ್ಕಳ ವಿದ್ಯಾಭ್ಯಾಸದ ಯೋಚನೆ ಇವರನ್ನು ಕಾಡುತ್ತಿರುತ್ತದೆ. ತಾವೇ ಶಿಕ್ಷಕರಾದರೂ ತಮ್ಮ ಮಕ್ಕಳನ್ನು ತಮ್ಮ ಶಾಲಗೇ ಸೇರಿಸುವುದರ ಕುರಿತ ಅವರು ಮೀನಾಮೇಷ ಎಣಿಸುವುದರ ಹಿಂದೆ, ಅವರಿಗೆ ಅಲ್ಲಿನ ಪರಿಸ್ಥಿತಿಯ ಪರಿಚಯವಿರುವುದು ಕಾರಣವಾಗಿರುತ್ತದೆ, ಜೊತೆಗೆ ಅವರಿಗೆ ಅವರು ನೀಡುವ ಶಿಕ್ಷಣದ ಕುರಿತಾಗಿಯೂ ಅನುಮಾನಗಳಿರುವಂತೆ ಅನ್ನಿಸುತ್ತದೆ. ಅದೇನೇ ಇದ್ದರೂ ಸದ್ಯಕ್ಕೆ ವಾಸ್ತವವನ್ನು ಒಪ್ಪಿಕೊಂಡೇ ಸುಧಾರಣೆಯತ್ತ ಗಮನಹರಿಸುವುದಾದರೆ, ಅಂಥ ಶಿಕ್ಷಕರೂ ಕೂಡ ಸಕಾಲದಲ್ಲಿ ಶಾಲೆಗೆ ಬಂದು ಹೋಗಿ ಮಾಡಲು ಈ ವಿದ್ಯಾರ್ಥಿಗಳಿಗೆ ಒದಗಿಸುವ ವಾಹನ ಸೌಲಭ್ಯವನ್ನೆ ವಿಸ್ತರಿಸಬಹುದು. ಹೀಗಾದಾಗ ಶಿಕ್ಷಕರೂ ಸಮಾಧಾನದಿಂದ ಶಾಲೆಗೆ ಬಂದು ಪಾಠ ಪ್ರವಚನಗಳಲ್ಲಿ ತೊಡಗಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಬರುವ ಬಸ್ ಹಿಡಿಯುವ ಯೋಚನೆಯಲ್ಲೇ ಅವರ ಸಾಮಥ್ರ್ಯ ವ್ಯಯವಾಗಬಹುದು! ಇದರೊಂದಿಗೆ ಶಿಕ್ಷಕರೊಟ್ಟಿಗೇ ಮಕ್ಕಳೂ ಸೇರಿ ಒಂದೇ ವಾಹನದಲ್ಲಿ ಬಂದು, ಹೋಗುವಂತಾದರೆ, ಆ ಬಂದು ಹೋಗುವ ಅವಧಿ ಕೂಡ ಒಂದಲ್ಲ ಒಂದು ರೀತಿಯಿಂದ ಉಪಯುಕ್ತವಾಗಬಹುದು.
ಇದೇ ಸಂದರ್ಭದಲ್ಲಿ ಪ್ರಸ್ತಾಪಿಸಬಹುದಾದ ಇನ್ನೊಂದು ಸಂಗತಿಯೆಂದರೆ ಶಾಲಾಭಿವೃದ್ಧಿ ಸಮಿತಿಯ ಪಾತ್ರ. ಶಾಲೆಯೊಂದರ ಸರ್ವತೋಮುಖ ಅಭಿವೃದ್ಧಿಯನ್ನು ಬಯಸಿ, ಸದುದ್ಧೇಶದಿಂದಲೇ ಸರಕಾರ ಪ್ರತಿ ಶಾಲೆಗೂ ಒಂದು ಶಾಲಾಭಿವೃದ್ಧಿ ಸಮಿತಿಯನ್ನು ರಚಿಸಿಕೊಳ್ಳಲು ಮಾರ್ಗದರ್ಶನ ನೀಡಿದೆ. ಆದರೆ ಬಹುತೇಕ ಕಡೆಗಳಲ್ಲಿ ಈ ಸಮಿತಿ ಎಂಬುದು ಕೇವಲ ರಾಜಕಾರಣಿಗಳ ಕೂಟವಾಗಿದ್ದುದು ವಿಪರ್ಯಾಸ. ಶಾಲಾಭಿವೃದ್ಧಿಯ ಕುರಿತು ಚರ್ಚೆಗೆ, ಸೂಕ್ತ ಕ್ರಮ ಕೈಗೊಳ್ಳುವದಕ್ಕಿಂತ ಹೆಚ್ಚಿನ ಉತ್ಸಾಹ ತೋರುವಂತಾದದ್ದು ದುರಂತವೇ ಸರಿ. ಶಾಲೆಯ ಪಠ್ಯ, ಪಠ್ಯೇತರ ಚಟುವಟಿಕೆಗಳ ಕುರಿತು ನಿರ್ಧಾರ ಕೈಗೊಳ್ಳಲು, ಕ್ರಮ ಕೈಗೊಳ್ಳಲು ಶಿಕ್ಷಕರು ಸ್ವತಂತ್ರರಾಗಿದ್ದು, ಅದಕ್ಕೆ ಅಗತ್ಯವಾದದ್ದನ್ನು ಹೊರಗಿನಿಂದ ಪೂರೈಸಲಷ್ಟೇ ಈ ಸಮಿತಿ ಬದ್ಧವಾದರೆ ಒಳ್ಳೆಯದೇನೋ, ಒಂದರೊಳಗೊಂದು ಬೆರೆತು ಕಲಸು ಮೇಲೋಗರವಾಗುವುದಕ್ಕಿಂತ, ಅವರವರ ಜವಾಬ್ದಾರಿ ಕರ್ತವ್ಯದ ನಡುವೆ ಒಂದು ನಿರ್ದಿಷ್ಟ ಗಡಿಯನ್ನು ಗುರುತಿಸಿಕೊಳ್ಳುವುದೂ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು.
ಚುನಾವಣೆಯನ್ನು ಲಕ್ಷದಲ್ಲಿರಿಸಿಕೊಂಡು, ಮತಗಳಿಕೆಯನ್ನು ಮಾನದಂಡವನ್ನಾಗಿಸಿಕೊಂಡು, ಮತ್ತೆ ಕೆಲವೊಂದು ಪ್ರಭಾವಿ ಸಂಘ, ಸಂಸ್ಥೆಗಳ ವ್ಯಕ್ತಿಗಳ ಒತ್ತಡಕ್ಕೆ ಮಣಿದು ದಿನಕ್ಕೊಂದು ಹೇಳಿಕೆ ನೀಡುವ ಬದಲು ಮುಚ್ಚ ಬೇಕಾದವುಗಳನ್ನು, ಮುಚ್ಚಲೇ ಬೇಕಾದ ಅನಿವಾರ್ಯತೆಯನ್ನು ಸ್ಪಷ್ಟವಾಗಿ ತಿಳಿಸುವುದಲ್ಲದೆ, ಮುಚ್ಚಿದರೆ ಮಾಡುವ ಪರ್ಯಾಯ ವ್ಯವಸ್ಥೆ ಕುರಿತು ಮುಕ್ತವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳುವುದು ಸೂಕ್ತ. ದಿಟ್ಟ ನಿರ್ಧಾರವನ್ನು ಕೈಗೊಳ್ಳದೆ ದಿನದೂಡುವುದರಿಂದ ಮಕ್ಕಳಿಗೂ ಪಾಲಕರಿಗೂ ಮುಂದೇನೆಂಬ ಚಿಂತೆಯಾದರೆ, ಇಂಥಲ್ಲಿ ಕರ್ತವ್ಯ ನಿರ್ವಹಿಸಲು ಬಂದ ಶಿಕ್ಷಕರೂ ಉತ್ಸಾಹವನ್ನು ಕಳೆದುಕೊಳ್ಳುತ್ತ, ಶುದ್ಧ ಸೋಮಾರಿಗಳಾಗಿ ಮತ್ತೆಂದೂ ಉಪಯೋಗಕ್ಕೆಬಾರದಂತವರಾಗಿ ಬಿಡುವ ಆಪಾಯ ಕೂಡ ಇದೆ. ಸೂಕ್ತ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಂಡು ಚಾಲ್ತಿಗೆ ತರದೆ, ಪುರುಸೊತ್ತಾದಾಗ ನೋಡೋಣವೆಂದು ಕುಳಿತು ಬಿಟ್ಟರೆ ನಾಳೆಗೆ ಪ್ರಯೋಜನಕ್ಕೆ ಬಾರದೆ ಹೋಗಬಹುದು.
ರವೀಂದ್ರ ಭಟ್ ಕುಳಿಬೀಡು.
ಮಳೆಯಿಂದಾಗಿ ರಾಗಿ ಬೆಳೆ ನಷ್ಟ
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ದಿಬ್ಬೂರಹಳ್ಳಿ ವ್ಯಾಪ್ತಿಯ ಬಚ್ಚನಹಳ್ಳಿ ಗ್ರಾಮದ ವೆಂಕಟೇಶ್ ಎಂಬುವರ ಮೂರು ಎಕರೆಯಷ್ಟು ರಾಗಿ ಹೊಲದಲ್ಲಿ ತೆನೆತುಂಬಿದ್ದ ರಾಗಿಯಲ್ಲಿ ಮೊಳಕೆಯು ಮೂಡಿ ನಷ್ಟವುಂಟಾಗಿದೆ.
ಶಿಡ್ಲಘಟ್ಟ ತಾಲ್ಲೂಕಿನ 'ಅಮೃತ'ಳಿಗೆ ಪ್ರಶಸ್ತಿ
ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಎನ್. ಅಮೃತಳಿಗೆ ‘ವಿದ್ಯಾಸಾಗರ ಬಾಲ ಪುರಸ್ಕಾರ’ವನ್ನು ಶನಿವಾರ ಗದಗ ಜಿಲ್ಲೆಯ ಮುಂಡರ್ಗಿಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಸಾಹಿತಿಗಳಾದ ಆನಂದಪಾಟೀಲ, ರಾಜಶೇಖರ ಕುಕ್ಕುಂದ ಹಾಗೂ ಸುನಂದ ಪಿ. ಕಡಮೆ ಅವರು ಪ್ರಧಾನ ಮಾಡಿದರು.
ಕೆ.ಎನ್. ಅಮೃತ ಬರೆದ ಕಥೆ, ಕವನ, ನಾಟಕ, ಲೇಖನಗಳನ್ನು ಪರಿಗಣಿಸಿ ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಕ್ಕೆ ಆಯ್ಕೆ ಮಾಡಲಾಗಿತ್ತು. ರಾಜ್ಯದಾದ್ಯಂತ ಕ್ರಿಯಾಶೀಲ ಯುವ ಮನಸ್ಸುಗಳ ಬರಹಗಳಲ್ಲಿ ಕೆ.ಎನ್.ಅಮೃತ ಅವರ ಬರಹಗಳಿಗೆ ಮೊದಲ ಸ್ಥಾನ ನೀಡಿರುವುದಾಗಿ ತೀರ್ಪುಗಾರರಾಗಿದ್ದ ಡಾ. ಸುರೇಶ್ ನಾಗಲಮಡಿಕೆ ತಿಳಿಸಿದ್ದಾರೆ.
ಕೆರೆಗೆ ಬಾಗಿನ ಅರ್ಪಣೆ
ತಾಲೂಕಿನಾದ್ಯಂತ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಹುತೇಕ ಕೆರೆಗಳು ತುಂಬಿರುವುದು ಸಂತಸದ ವಿಷಯವಾಗಿದೆ. ಇದರಿಂದಾಗಿ ಅಂತರ್ಜಲ ವೃದ್ಧಿಸಿ ಬರುವ ಬೇಸಿಗೆಯನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆಯ ರೆಡ್ಡಿಕೆರೆ ಹಾಗೂ ನಿಮ್ಮನ್ನವಡ್ಡು ಕೆರೆ ತುಂಬಿ ಕೋಡಿ ಹೋಗಿದ್ದರಿಂದ ಶನಿವಾರ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಮ್ಮ ಪೂರ್ವಜರು ಕೆರೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದರು. ಒಂದು ಕೆರೆಯ ನೀರು ಮತ್ತೊಂದಕ್ಕೆ ಹೋಗುವಂತೆ ರೀತಿಯಲ್ಲಿ ಕೆರೆಗಳ ಸಾಲೇ ನಮ್ಮಲ್ಲಿದೆ. ಆದರೆ ಹಲವಾರು ಕರೆಗಳನ್ನು ಒತ್ತುವರಿ ಮಾಡಿರುವ ಕಾರಣ ನೀರು ಶೇಖರಣೆಯ ಸಾಮರ್ಥ್ಯ ಕಡಿಮೆಯಾಗಿದೆ. ಎಂಟು ವರ್ಷಗಳಿಂದ ತುಂಬದ ಕೆರೆಗಳು ಈ ಬಾರಿ ತುಂಬಿ ಹರಿದು ನಮ್ಮಲ್ಲಿನ ಕೆರೆಗಳ ಮಹತ್ವದ ಬಗ್ಗೆ ಜಾಗೃತರನ್ನಾಗಿಸಿದೆ.
ವರುಣನ ಕೃಪೆಯಿಂದ ತಾಲ್ಲೂಕಿನಾದ್ಯಂತ ಮಳೆ ಹೀಗೇ ಮುಂದುವರೆದು ಕೆರೆಗಳು ತುಂಬಲಿ. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ ಎಂದು ಹೇಳಿದರು.
ಗಂಜಿಗುಂಟೆ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹಮೂರ್ತಿ, ಮಾಜಿ ಉಪಾಧ್ಯಕ್ಷ ಮೂರ್ತಿ, ಎಂಪಿಸಿಎಸ್ ಅಧ್ಯಕ್ಷ ದೊಡ್ಡ ನರಸಿಂಹಪ್ಪ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಉಸ್ಮಾನ್ಸಾಬಿ, ದೊಣ್ಣಹಳ್ಳಿ ರಾಮಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರಸ್ತೆಯನ್ನು ದುರಸ್ಥಿಗೊಳಿಸಲು ಆಗ್ರಹಿಸಿ ಪ್ರತಿಭಟನೆ
ರಸ್ತೆಯನ್ನು ದುರಸ್ಥಿಗೊಳಿಸಿ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ನಗರದ ಹೊರವಲಯದ ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರ ನಿವಾಸಿಗಳು ಶನಿವಾರ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶಿಲ್ದಾರ್ ಮತ್ತು ನಗರಸಭಾ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ನಗರದ ನೆಲ್ಲಿಮರದಹಳ್ಳಿ ಮಾರ್ಗವಾಗಿ ಹನುಮಂತಪುರ ಹಾಗೂ ವರದನಾಯಕನಹಳ್ಳಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆಗೆ ಒಳಪಡುವ ರಸ್ತೆಯು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಚಾರಕ್ಕೆ ಅನುಪಯುಕ್ತವಾಗಿದ್ದು ಜನತೆಯ ಓಡಾಟಕ್ಕೆ ತೊಂದರೆಯಾಗಿದೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಈ ರಸ್ತೆಯು ಕೆಸರುಗದ್ದೆಯಾಗಿದೆ. ಈ ಪ್ರದೇಶವೆಲ್ಲಾ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಚರಂಡಿಗಳಿಲ್ಲದೆ, ಸುರಿದ ತ್ಯಾಜ್ಯವನ್ನು ತೆಗೆಯದೇ ಜನರು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ.
ಈ ಭಾಗದಲ್ಲಿ ಡಾಲ್ಫಿನ್ ಪಬ್ಲಿಕ್ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಮಸೀದಿ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಈ ರಸ್ತೆಯಲ್ಲಿ ನಡೆದಾಡುವುದೇ ಕಷ್ಟಕರವಾಗಿದೆ. ದ್ವಿಚಕ್ರ ವಾಹನಗಳು ಸಾಗುವುದು ಇನ್ನೂ ದುಸ್ಥರವಾಗಿದೆ.
ಈಗಾಗಲೇ ಹಲವಾರು ವಾಹನ ಸವಾರರು ಬಿದ್ದಿದ್ದಾರೆ, ಶಾಲಾ ಮಕ್ಕಳಂತೂ ತಮ್ಮ ಬಟ್ಟೆ ಕೈಕಾಲು, ಚಪ್ಪಲಿ ಶೂಗಳನ್ನು ಕೆಸರು ಮಾಡಿಕೊಂಡೇ ಮನೆಗೆ ಹೋಗಬೇಕಾಗಿದೆ. ಈ ಭಾಗದಲ್ಲಿನ ರೇಷ್ಮೆ ತಯಾರಿಕಾ ಘಟಕಗಳಿಗೆ ಅಗತ್ಯವಾದ ನೀರಿನ ಗಾಡಿಗಳು, ಸೌದೆ ಗಾಡಿಗಳು ಹೋಗಲಾರದಂತಾಗಿದೆ. ಮೆದುವಾದ ನೆಲದಲ್ಲಿ ವಾಹನಗಳ ಚಕ್ರಗಳು ಸಿಕ್ಕಿಹಾಕಿಕೊಳ್ಳುವುದರಿಂದ ಈ ಭಾಗಕ್ಕೆ ಆಟೋಗಳು ಸಹ ಹೋಗುತ್ತಿಲ್ಲ. ಅಧಿಕಾರಿಗಳಿಗೆ ಪ್ರತಿ ಮಳೆಗಾಲದಲ್ಲೂ ನಾವು ಮನವಿ ಸಲ್ಲಿಸುವುದು ತಪ್ಪುವುದಿಲ್ಲ. ಆದರೂ ಯಾರೊಬ್ಬರೂ ಕ್ರಮ ಕೈಗೊಳ್ಳದ ಕಾರಣ ಈ ಬಗ್ಗೆ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ. ಇನ್ನಾದರೂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತುರ್ತಾಗಿ ಚರಂಡಿ ಹಾಗೂ ರಸ್ತೆಯ ಡಾಂಬರೀಕರಣ ಕಾರ್ಯವನ್ನು ನಡೆಸಬೇಕೆಂದು ಒತ್ತಾಯಿಸಿದರು.
ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರ ನಿವಾಸಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿ ತಹಶಿಲ್ದಾರ್ ಮತ್ತು ನಗರಸಭಾ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದರು.
ನರಸಿಂಹಮೂರ್ತಿ, ರಾಜಣ್ಣ, ಡಿ.ಆರ್.ನರಸಿಂಹರಾಜು, ವಿ.ದೇವರಾಜ್, ಸುರೇಶ್, ಪ್ರಸಾದ್, ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೆಲ್ಲಿಮರದಹಳ್ಳಿ ರಸ್ತೆಯ ದುರವಸ್ಥೆ
ನಗರದ ಹೊರವಲಯದ ಪೂಜಮ್ಮ ದೇವಿಯ ದೇವಸ್ಥಾನದಿಂದ ನೆಲ್ಲಿಮರದಹಳ್ಳಿ ಹಾಗೂ ಹನುಮಂತಪುರಕ್ಕೆ ಹೋಗುವ ರಸ್ತೆಯು ಕೆಸರಿನ ಆಗರವಾಗಿದ್ದು, ಸಾರ್ವಜನಿಕರು ಈ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲು ಶನಿವಾರ ಪ್ರತಿಭಟನೆಯನ್ನು ಆಯೋಜಿಸಿದ್ದಾರೆ.
ಈ ಭಾಗದಲ್ಲಿ ಡಾಲ್ಫಿನ್ ಪಬ್ಲಿಕ್ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಮಸೀದಿ, ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಇಲ್ಲಿನ ರಸ್ತೆಗಳಲ್ಲಿನ ಕೆಸರು, ಗದ್ದೆಯ ರೂಪದಲ್ಲಿದ್ದು, ನಡೆದಾಡುವುದೇ ಕಷ್ಟಕರವಾಗಿರುವಾಗ ದ್ವಿಚಕ್ರ ವಾಹನಗಳು ಸಾಗುವುದು ಇನ್ನೂ ದುಸ್ಥರವಾಗಿದೆ.
ಒಂದು ಶತಮಾನದ ಅಂತರ – ಸಂಚಾರ ಪ್ರಾರಂಭಿಸಿತು ಬೆಂಗಳೂರು ರೈಲು
‘ಕೋಲಾರ – ಬೆಂಗಳೂರು ಸಿಟಿ’ ಎಂಬ ಫಲಕವನ್ನು ಹೊಂದಿದ ರೈಲು ಶುಕ್ರವಾರ ನಗರದ ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆಯೇ ‘ಹೋ..’ ಎಂಬ ಉದ್ಘಾರ, ಚಪ್ಪಾಳೆಯ ಸ್ವಾಗತವು ದೊರಕಿತು. ಊರಿಗೆ ಬಂದ ನೂತನ ಅತಿಥಿಯಂತೆ, ಕನಸಿನಂತೆ, ಹೊಸ ಆಶಾವಾದದಂತೆ, ಪ್ರಗತಿಯ ದ್ಯೋತಕದಂತೆ ರೈಲಿಗಾಗಿ ಕಾಯುತ್ತಿದ್ದ ಜನರು ಸಂಭ್ರಮಿಸಿದರು.
ಆಗಮಿಸಿದ ರೈಲಿಗೆ ಕರ್ಪೂರವನ್ನು ಅಂಟಿಸಿ ತೆಂಗಿನ ಕಾಯಿಯನ್ನು ಒಡೆದು ಪೂಜೆಯನ್ನು ಸಲ್ಲಿಸಿದರು. ಬೆಳಿಗ್ಗೆ 6.30 ರಿಂದಲೇ ಕಾಯುತ್ತಿದ್ದ ಜನರು 8.20 ಕ್ಕೆ ರೈಲು ಆಗಮಿಸಿದರೂ ಅದೇ ಉತ್ಸಾಹದಲ್ಲಿದ್ದರು. ಕೋಲಾರದಿಂದ ಆಗಮಿಸಿದ ರೈಲಿಗೆ ವಿವಿಧ ನಿಲ್ದಾಣಗಳಲ್ಲಿ ಜನರು ಪೂಜೆ ಸಲ್ಲಿಸಿದ ಕಾರಣ ತಡವಾದರೂ, ಇನ್ನು ಮುಂದೆ ಪ್ರತಿ ದಿನ ಬೆಂಗಳೂರಿಗೆ ರೈಲಿನಲ್ಲಿ ಹೋಗಬಹುದು ಎಂಬ ಖುಷಿಯು ಜನರ ಉತ್ಸಾಹ ಮತ್ತು ಸಂತೋಷವನ್ನು ದ್ವಿಗುಣಗೊಳಿಸಿತ್ತು.
ಶಿಡ್ಲಘಟ್ಟಕ್ಕೆ ನ್ಯಾರೋಗೇಜ್ ರೈಲು ನಿಂತ ಮೇಲೆ, ಸುಮಾರು ಹದಿನೈದು ವರ್ಷಗಳ ನಂತರ 2013 ರಲ್ಲಿ ರೈಲಿನ ಆಗಮನವಾದಾಗ ಜನರು ಸಂತೋಷಿಸಿದಂತೆ ಶುಕ್ರವಾರವೂ ಸಾರ್ವಜನಿಕರು ಸಂತಸವನ್ನು ಅನುಭವಿಸಿದರು. ಹಿಂದೆ ಈ ಭಾಗದಲ್ಲಿದ್ದ ನ್ಯಾರೋಗೇಜ್ ರೈಲು ತಾಲ್ಲೂಕಿನಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನಕಾಯಿ ಮುಂತಾದ ವಾಣಿಜ್ಯ ಬೆಳೆಗಳ ಸಾಕಾಣಿಕೆಗೆ ಅನುಕೂಲವಾಗಿತ್ತು. ಈಗ ರೈತರು ಗತ ವೈಭವ ಮರುಕಳಿಸಿದಂತೆ ಭಾವಿಸಿದ್ದಾರೆ.
‘ಕೋಲಾರ – ಬೆಂಗಳೂರು ಸಿಟಿ’ ರೈಲಿನಿಂದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಬೆಳಗಿನ 7.20 ರ ಸಮಯಕ್ಕೆ ಶಿಡ್ಲಘಟ್ಟಕ್ಕೆ ಬಂದು 9.45 ರ ಒಳಗೆ ಬೆಂಗಳೂರು ತಲುಪುವುದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಿದೆ. ಶಿಡ್ಲಘಟ್ಟದಿಂದ ಪ್ರತಿದಿನವೂ ಹಲವಾರು ಮಂದಿ ನೌಕರಿಗಾಗಿ, ವಿದ್ಯಾಭ್ಯಾಸಕ್ಕಾಗಿ ಯಲಹಂಕ ಮತ್ತು ಬೆಂಗಳೂರಿಗೆ ಹೋಗುತ್ತಾರೆ. ಅವರಿಗೆಲ್ಲಾ ಇದು ವರದಾನವಾಗಲಿದೆ. ಹಲವಾರು ಮಂದಿ ವರ್ತಕರು ಯಶವಂತಪುರದ ಯಾರ್ಡ್ಗೆ ಹೋಗುತ್ತಾರೆ. ಅವರು ರೈಲಿನಲ್ಲಿ ನೇರವಾಗಿ ಹೋಗಿ ಯಶವಂತಪುರದಲ್ಲೇ ಇಳಿಯಬಹುದು. ನಂತರ ಅಲ್ಲಿ ಖರೀದಿ ಮಾಡಿ ರೈಲಿನಲ್ಲೇ ವಾಪಸಾಗಬಹುದು. ಬಸ್ನಲ್ಲಿ ಹೋಗಿ ಬರುವ ಹಣದ ಅರ್ಧದಷ್ಟು ಉಳಿತಾಯವಾಗಲಿದೆ. ಸಂಜೆ ಬೆಂಗಳೂರು ರೈಲು ನಿಲ್ದಾಣದಿಂದ 6.10ಕ್ಕೆ ಹೊರಟು ಶಿಡ್ಲಘಟ್ಟಕ್ಕೆ 7.30 ಕ್ಕೆ ತಲುಪುವುದರಿಂದ ಪ್ರತಿದಿನ ಪ್ರಯಾಣಿಸುವವರಿಗೂ ಸಹಕಾರಿಯಾಗಲಿದೆ’ ಎಂದು ಮಂಜುನಾಥ ಅರಸ್ ತಿಳಿಸಿದರು.
ನ್ಯಾರೋಗೇಜ್ ನಿಂದ ಬ್ರಾಡ್ಗೇಜ್ವರೆಗೆ ನೂರು ವರ್ಷದ ಇತಿಹಾಸ
ಸರ್.ಎಂ.ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸಂದರ್ಭದಲ್ಲಿ ದಕ್ಷಿಣ ರೈಲ್ವೆ ವಿಭಾಗದ ಏಕೈಕ 104 ಕಿ.ಮೀ ನ್ಯಾರೋಗೇಜ್ ಮಾರ್ಗವು ಪೂರ್ಣಗೊಂಡಿತ್ತು. ಜನರಿಂದ ಸಾಲ ಪತ್ರ ಮುಖೇನ ಸಂಗ್ರಹಿಸಿದ ಹಣದಲ್ಲಿ 1911 ರಲ್ಲಿ ಪ್ರಾರಂಭವಾದ ಬೆಂಗಳೂರು – ಬೌರಿಂಗ್ಪೇಟೆ(ಬಂಗಾರಪೇಟೆ) ನಡುವಿನ ರೈಲು ಮಾರ್ಗ 1915ರಲ್ಲಿ ಮುಗಿಸಲಾಯಿತು. ಬೆಂಗಳೂರಿನಿಂದ ಯಶವಂತಪುರ, ಯಲಹಂಕ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ಶ್ರೀನಿವಾಸಪುರ, ಕೋಲಾರ, ಬಂಗಾರಪೇಟೆ ಸೇರಿದಂತೆ 13 ನಿಲ್ದಾಣಗಳಿದ್ದವಂತೆ. 1935ರಲ್ಲಿ ಬೆಂಗಳೂರಿನಿಂದ ಕೋಲಾರಕ್ಕಿದ್ದ ರೈಲು ಪ್ರಯಾಣ ದರ ಮೂರು ರೂಪಾಯಿ ಆರಾಣೆ(ಮೇಲ್ದರ್ಜೆಗೆ). 1970 ರ ದಶಕದಲ್ಲಿ ನ್ಯಾರೋಗೇಜ್ ಮಾರ್ಗವು ಆರ್ಥಿಕವಾಗಿ ಲಾಭಕರವಾಗಿಲ್ಲವೆಂದು ರದ್ದು ಮಾಡಿದರೂ, ಸಾರ್ವಜನಿಕರ ಒತ್ತಡಕ್ಕೆ ಮಣಿದು 1979 ರಲ್ಲಿ ಯಲಹಂಕ, ಚಿಕ್ಕಬಳ್ಳಾಪುರ, ಬಂಗಾರಪೇಟೆ ನಡುವೆ ರೈಲುಸಂಚಾರವನ್ನು ಪುನರಾರಂಭಿಸಿತು. 90 ರ ದಶಕದಲ್ಲಿ ಬ್ರಾಡ್ಗೇಜ್ ಪರಿವರ್ತನೆಗಾಗಿ ಸ್ಥಗಿತಗೊಂಡ ನಂತರ 2013 ರ ಮೇ ತಿಂಗಳಲ್ಲಿ ಪುನರಾಂಭವಾಗಿತ್ತು. ಚಿಕ್ಕಬಳ್ಳಾಪುರ ಮತ್ತು ಕೋಲಾರದ ನಡುವೆ ಮಾತ್ರ ಸಂಚಾರವಿತ್ತು. ಈಗ ಒಂದು ಶತಮಾನದ ಬಳಿಕ 104 ಕಿ.ಮೀ ‘ಕೋಲಾರ – ಬೆಂಗಳೂರು ಸಿಟಿ’ ರೈಲು ಸಂಚಾರ ಪ್ರಾರಂಭವಾಗಿದೆ.
ಶಿಡ್ಲಘಟ್ಟದ ಟಿ.ಬಿ ರಸ್ತೆ ಮಧ್ಯೆ ಗುಂಡಿ
ಸರ್ಕಾರ ರಸ್ತೆಗಳ ಅಭಿವೃದ್ಧಿಗಾಗಿ ಖರ್ಚು ಮಾಡುತ್ತಿರುವ ಹಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ, ಯಾವ ಗತಿ ಬರುತ್ತದೆ ಎಂಬುದಕ್ಕೆ ಶಿಡ್ಲಘಟ್ಟದ ಟಿ.ಬಿ.ರಸ್ತೆಯೇ ಜೀವಂತ ಸಾಕ್ಷಿಯಾಗಿದೆ.
ಜನನಿಬಿಡ ರಸ್ತೆಗಳಲ್ಲಿ ಒಂದಾದ ಟಿ.ಬಿ.ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು ಅದನ್ನು ದುರಸ್ಥಿಗೊಳಿಸಲು ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದು, ಇದರಿಂದ ರಸ್ತೆಯು ಅಪಾಘಾತದ ಕೂಪವಾಗಿ ಪರಣಮಿಸಿದೆ. ಅಕ್ಷರಶಃ ಈ ಗುಂಡಿ ದ್ವಿಚಕ್ರ ವಾಹನ ಸವಾರರ ಪಾಲಿಗೆ ಮೃತ್ಯಕೂಪವಾಗಿದೆ.
ಸಾರಿಗೆ ಬಸ್ ನಿಲ್ದಾಣಕ್ಕೆ ಹೋಗಿ ಬರಲು ಪ್ರಯಾಣಿಕರು, ವಾಹನ ಸವಾರರು, ಎಲ್ಲಾ ಶಾಲಾ ಕಾಲೇಜು, ಕಚೇರಿಗಳಿಗೆ ಇದೇ ರಸ್ತೆಯಲ್ಲಿ ಹೋಗಬೇಕಾಗಿದೆ. ರಸ್ತೆಯ ಮಧ್ಯದಲ್ಲಿ ಗುಂಡಿ ಬಿದ್ದಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯುಂಟಾಗಿದೆ. ಈ ರಸ್ತೆಯಲ್ಲಿ ಬಾಯಿ ತೆರೆದು ನಿಂತಿರುವ ಗುಂಡಿಯನ್ನು ಮುಚ್ಚಲು ನಗರಸಭೆಯ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯವಹಿಸಿದ್ದು ಅನಾಹುತ ಸಂಭವಿಸಿದ ಬಳಿಕ ಅಧಿಕಾರಿಗಳು ಎಚ್ಚತ್ತುಕೊಳ್ಳುತ್ತಾರೇಯೇ ಎಂದು ನಾಗರಿಕರು ಪ್ರಶ್ನಿಸಿದ್ದಾರೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ನೋಡುವ ಬದಲಿಗೆ ಗುಂಡಿಯನ್ನು ತಪ್ಪಿಸಲು ಹರಸಾಹಸ ಮಾಡುತ್ತಿದ್ದು ರಸ್ತೆಯ ಇಕ್ಕೆಲಗಳಲ್ಲಿ ಸಂಚರಿಸುವ ಪಾದಚಾರಿಗಳು ಗುಂಡಿಗಳನ್ನು ತಪ್ಪಿಸುವ ಭರಾಟೆಯಲ್ಲಿ ಎಲ್ಲಿ ವಾಹನಗಳು ತಮ್ಮ ಮೇಲೆ ಸವಾರಿ ಮಾಡುತ್ತಾರೋ ಎಂದು ಆತಂಕ ಪಡುವಂತಾಗಿದೆ. ಬೀದಿ ದೀಪಗಳನ್ನೂ ಸಹ ನಗರಸಭೆಯವರು ಸಮರ್ಪಕವಾಗಿ ಹಾಕಿಲ್ಲ. ಹೀಗಾಗಿ ಕತ್ತಲಾದಾಗ ನಿಜಕ್ಕೂ ಇದು ಅಪಘಾತದ ತಾಣವಾಗಿದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಗುಂಡಿಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗಾಂಡ್ಲಚಿಂತೆ ಶಾಲೆಯಲ್ಲಿ ‘ವಿಶ್ವ ಶೌಚಾಲಯ’ ದಿನಾಚರಣೆ
ತಾಲ್ಲೂಕಿನ ಗಾಂಡ್ಲಚಿಂತೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗುರುವಾರ ‘ವಿಶ್ವ ಶೌಚಾಲಯ’ ದಿನಾಚರಣೆಯನ್ನು ವಿದ್ಯಾರ್ಥಿಗಳು ಶಾಲೆಯ ಶೌಚಾಲಯವನ್ನು ಶುಚಿಗೊಳಿಸಿ, ಐಕ್ಯತಾ ಪ್ರತಿಜ್ಞೆಯನ್ನು ಪಾಠಿಸುವ ಮೂಲಕ ಆಚರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ವಿ.ಎಂ.ಮಂಜುನಾಥ್ ಶೌಚಾಲಯ ಬಳಕೆ, ನೀರು, ಗಾಳಿ, ಬೆಳಕಿನ ಅಗತ್ಯ, ಕನ್ನಡಿ, ಸೋಪು, ಟವಲು, ಪೆನಾಯಿಲ್, ಚಪ್ಪಲಿ ಮುಂತಾದ ವಸ್ತುಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಸೇವಾದಳ ವೆಂಕಟರೆಡ್ಡಿ ವಿದ್ಯಾರ್ಥಿಗಳಿಗೆ ‘ರಾಷ್ಟ್ರೀಯ ಐಕ್ಯತಾ ಪ್ರಮಾಣವಚನ’ವನ್ನು ಬೋಧಿಸಿದರು.
ಶಿಕ್ಷಕರಾದ ಮನಸ್ವಿ, ಗೀತಾ ಮತ್ತಿತರರು ಹಾಜರಿದ್ದರು.
ಕಸವಿಲೇವಾರಿಯ ಬಗ್ಗೆ ಚರ್ಚೆ
ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಬಗ್ಗೆ ನಗರಸಭಾ ಆಯುಕ್ತ ಹರೀಶ್, ಟೈಡ್ ಟೆಕ್ನೋಕ್ರೇಡಿಕ್ ಪ್ರೈವೇಟ್ ಲಿಮಿಟೆಡ್ನ ಎಂಜಿನಿಯರ್ ಅರೊಂದಿಗೆ ಗುರುವಾರ ಸಮಾಲೋಚನೆ ನಡೆಸಿದರು.
ನಗರದ ನಗರಸಭಾ ಕಾರ್ಯಾಲಯದಲ್ಲಿ ಎಂಜಿನಿಯರ್ರೊಂದಿಗೆ ಚರ್ಚೆ ನಡೆಸಿ, ನಗರದಲ್ಲಿ ಉತ್ಪತ್ತಿಯಾಗುತ್ತಿರುವ ಸುಮಾರು ೧೮ ಟನ್ ಕಸದ ಪ್ರಮಾಣವನ್ನು ಶೇಖರಣೆ ಮಾಡಿಕೊಂಡು ಹಸಿಕಸ ಮತ್ತು ಒಣಕಸವನ್ನು ವಿಂಗಡಣೆ ಮಾಡಲು ನಾಗರಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಪ್ರತಿಯೊಂದು ಮನೆಗೆರಡರಂತೆ ಟಬ್ಗಳನ್ನು ನೀಡಿ ಮನೆಯ ಬಾಗಿಲಿಗೆ ಹೋಗಿ ಕಸವನ್ನು ಪಡೆದುಕೊಳ್ಳಲಾಗುತ್ತದೆ. ನಂತರ ಕಸದ ಪ್ರಮಾಣದ ಬಗ್ಗೆ ಮತ್ತು ಕಸವನ್ನು ವಿಂಗಡಣೆ ಮಾಡಿ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವ ಬಗ್ಗೆ ಡಿ.ಪಿ.ಆರ್ ತಯಾರಿಸಿ, ಡಿ.ಎಂ.ಎ. ಅನುಮೋದನೆ ಪಡೆದುಕೊಂಡ ನಂತರ ಸ್ವಚ್ಚ ಭಾರತ ಅಭಿಯಾನ ಯೋಜನೆಯಿಂದ ಇದಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕ್ರಿಯಾ ಯೋಜನೆಯನ್ನು ಸಲ್ಲಿಸಲಾಗುತ್ತದೆ ಎಂದರು.
ನಗರಸಭೆಯಿಂದ ಗುರ್ತಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲೆ ಕಸವನ್ನು ಸಂಗ್ರಹ ಮಾಡಿಕೊಂಡು ಗೊಬ್ಬರ ತಯಾರಿಕೆ ಮಾಡುವುದರಿಂದ ನಗರದಲ್ಲಿ ಕಸದ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಹಕಾರಿಯಾಗುತ್ತದೆ ಹಾಗು ಈಗಾಗಲೇ ಯಾದಗಿರಿ, ತುಮಕೂರು, ದಾವಣಗೆರೆ, ವಿಜಯಪುರ, ಕೆ.ಆರ್.ನಗರ, ಮಡಿಕೇರಿ ಮುಂತಾದ ಕಡೆಗಳಲ್ಲಿ ಗೊಬ್ಬರ ತಯಾರಿಕೆ ಮಾಡಲಾಗುತ್ತಿದೆ ಎಂದು ಪರಿಸರ ಇಂಜಿನಿಯರ್ ಅಕ್ಷಯ್ರಂಗನಾಥ್ ವಿವರಿಸಿದರು.
ನಗರಸಭೆ ಸದಸ್ಯ ವೆಂಕಟಸ್ವಾಮಿ, ಪರಿಸರ ಇಂಜಿನಿಯರ್ ದಿಲೀಪ್, ಮುಖಂಡ ಮಂಜುನಾಥ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಸದಿಂದ ರಸ
‘ಈ ಹಿಂದೆ ಕಸ ಶೇಖರಿಸಿ ನಂತರ ವಿಲೇವಾರಿ ಮಾಡಲೆಂದು ನಗರದಲ್ಲಿ ಹಲವಾರು ಕಡೆ ಲಕ್ಷಾಂತರ ರೂಗಳ ವೆಚ್ಚದ ಕಬ್ಬಿಣದ ಕಂಟೈನರ್ಗಳನ್ನು ಇರಿಸಲಾಗಿತ್ತು. ಹಸಿಕಸ ಮತ್ತು ಒಣಕಸವನ್ನು ವಿಂಗಡಣೆ ಮಾಡಿ ಪ್ರತಿ ಮನೆಯಿಂದ ಕಸವನ್ನು ಸಂಗ್ರಹಿಸಲು ಕೆಲವು ಸ್ತ್ರೀ ಶಕ್ತಿ ಸಂಘಗಳಿಗೆ ಒಪ್ಪಂದ ನೀಡಿ ಅವರಿಗೆಲ್ಲಾ ಲಕ್ಷಾಂತರ ರೂಗಳ ವೆಚ್ಚದಲ್ಲಿ ತಳ್ಳುವ ಗಾಡಿಗಳನ್ನು ವಿತರಿಸಲಾಗಿತ್ತು. ಕಸವಿಲೇವಾರಿಗೆಂದೇ ಟ್ರಾಕ್ಟರ್, ಟಿಪ್ಪರ್ ಮುಂತಾದ ವಾಹನಗಳ ಡೀಸಲ್, ಬಾಡಿಗೆಗಾಗಿ ಲಕ್ಷಾಂತರ ಬಿಲ್ಲುಗಳಾಗುತ್ತಿವೆ. ಒಂದು ಕೋಟಿ ರೂಗಳಿಗೂ ಅಧಿಕ ವೆಚ್ಚದಲ್ಲಿ ತಾಲ್ಲೂಕಿನ ಹಿತ್ತಲಹಳ್ಳಿಯ ಸಮೀಪ ನಿರ್ಮಿಸಿರುವ ಘನ ತ್ಯಾಜ್ಯ ವಿಲೇವಾರಿ ಘಟಕ ಹೆಸರಿಗೆ ಮಾತ್ರ ಸೀಮಿತವಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಗೂ ಕಸ ತುಂಬಿ ತುಳುಕುತ್ತಿದ್ದು, ಡಿ ಗ್ರೂಪ್ ನೌಕರರು 5 ತಿಂಗಳಿಂದ ಸಂಬಳ ನೀಡದ ಕಾರಣ ಕೆಲಸ ಸ್ಥಗಿತಗೊಳಿಸಿದ್ದಾರೆ. ಈಗಾಗಲೇ ಪೋಲಾಗಿರುವ ಹಣದ ಜೊತೆಗೆ ಸ್ವಚ್ಛ ಭಾರತ್ ಹೆಸರಿನಲ್ಲಿ ನಗರಸಭೆಯಲ್ಲಿ ಮತ್ತೊಂದು ಲಕ್ಷಾಂತರ ರೂಪಾಯಿಗಳ ‘ಕಸದಿಂದ ರಸ’ ಯೋಜನೆ ರೂಪಿತಗೊಳ್ಳುತ್ತಿದೆ’ ಎಂದು ಹಿರಿಯರೊಬ್ಬರು ತಿಳಿಸಿದರು.
ಜಿಲ್ಲಾಧಿಕಾರಿಗಳ ಭೇಟಿ
ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆಯಿಂದಾಗಿ ಜಿಲ್ಲೆಯಾಧ್ಯಂತ ನೂರಾರು ಮನೆಗಳು ಕುಸಿದಿದ್ದು ಈ ಬಗ್ಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೇಂಕಟೇಶ್ ಹೇಳಿದರು.
ನಗರದ ಸಿದ್ದಾರ್ಥನಗರದ ಹರಿಜನ ಕಾಲೋನಿಯಲ್ಲಿ ಗುರುವಾರ ಕುಸಿದುಬಿದ್ದಿರುವ ಮನೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು.
ನಗರದ ೮ ಮತ್ತು ೯ ನೇ ವಾರ್ಡುಗಳಲ್ಲಿ ಸುಮಾರು ೧೫ ಕ್ಕೂ ಹೆಚ್ಚು ಮನೆಗಳು ಮಳೆಯಿಂದಾಗಿ ಕುಸಿದುಬಿದ್ದಿದ್ದು ಮನೆಗಳಿಲ್ಲದೆ ನಿರಾಶ್ರಿತರಾಗಿವವರಿಗೆ ಕೂಡಲೇ ಪರಿಹಾರಧನ ವಿತರಿಸುವಂತೆ ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿರಿಗೆ ಸೂಚಿಸಿದರು.
ಮನೆಗಳನ್ನು ಕಳೆದುಕೊಂಡಿರುವ ನಾಗರಿಕರು ಸರ್ಕಾರದಿಂದ ನೀಡುವ ರಾಷ್ಟ್ರೀಯ ಪ್ರಕೃತಿ ವಿಕೋಪ ನಿಧಿ ಪರಿಹಾರಧನದ ಹಣವನ್ನು ಮನೆಗಳ ರಿಪೇರಿ ಮಾಡಿಸಿಕೊಳ್ಳಲಷ್ಟೆ ಉಪಯೋಗ ಮಾಡಿಕೊಳ್ಳಬೇಕು. ಬೇರೆ ಉದ್ದೇಶಗಳಿಗೆ ಈ ಹಣವನ್ನು ಉಪಯೋಗ ಮಾಡಿಕೊಂಡರೆ ನೀಡಿರುವ ಪರಿಹಾರಧನವನ್ನು ಹಿಂಪಡೆಯಲಾಗುತ್ತದೆ ಎಂದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಎಚ್.ಎ.ಹರೀಶ್, ನಗರಸಭಾ ಸದಸ್ಯ ಚಿಕ್ಕಮುನಿಯಪ್ಪ, ಎಸ್.ಎಂ.ರಮೇಶ್, ನಾಗನರಸಿಂಹ, ಕೆ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಹಕಾರಿ ಸಂಘಗಳ ವ್ಯಾಪ್ತಿ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾಗದೆ ವಿಸ್ತರಿಸಲಿ
ಸಹಕಾರಿ ಸಂಘಗಳು ಕೇವಲ ಹಾಲಿನ ಉತ್ಪಾದನೆಗಷ್ಟೇ ಸೀಮಿತವಾಗದೆ ವಿವಿಧ ಸೇವಾ ಕಾರ್ಯಗಳ ಮೂಲಕ ರೈತರಿಗೆ ಉಪಯುಕ್ತವಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಗುರುವಾರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ, ಪಿ.ಎಲ್.ಡಿ.ಬ್ಯಾಂಕ್ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ೬೨ ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸಹಕಾರಿ ಸಂಘಗಳ ಮೂಲಕ ಸಹಕಾರಿ ಬೇಸಾಯ, ಸಹಕಾರಿ ಉದ್ದಿಮೆ, ಸಹಕಾರಿ ಮಾರಾಟ ಮತ್ತು ವ್ಯಾಪಾರ, ಸಹಕಾರಿ ಪತ್ತು ಹಾಗೂ ಹಣಕಾಸಿನ ನಿರ್ವಹಣೆ, ಶಿಕ್ಷಣ, ಕೌಶಲ್ಯಾಧಾರಿತ ತರಬೇತಿ, ಪ್ರಚಾರ, ಮಾನವನ ಇತರೇ ಸಹಕಾರಿ ಚಟುವಟಿಕೆಗಳು ಹಾಗೂ ಆರೋಗ್ಯದ ಉದ್ದೇಶಗಳಿಗಾಗಿ ಉತ್ತೇಜನ ನೀಡುವಂತಹ ಕೆಲಸವಾಗಬೇಕು. ಸಹಕಾರಿ ಸಂಘಗಳಿಂದ ಪಡೆಯುವಂತಹ ಸಾಲಗಳನ್ನು ನಾಗರಿಕರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘಗಳನ್ನು ಉಳಿಸಿಕೊಳ್ಳಬೇಕು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ ಯಾವುದೇ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕಾದರೆ ಸಂಘದಲ್ಲಿರುವ ಷೇರುದಾರರು ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಸಾಲಗಳನ್ನು ಯಾವ ಉದ್ದೇಶಕ್ಕಾಗಿ ಪಡೆಯುತ್ತಾರೊ ಅದೇ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ರೈತರು ಕೇವಲ ಕೃಷಿಯನ್ನು ಮಾತ್ರ ಅವಲಂಬಿಸದೆ ಹೈನುಗಾರಿಕೆ, ಮಿನಿಅರಣ್ಯ, ಗುಡಿಕೈಗಾರಿಕೆಗಳ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ತೀವ್ರ ನೀರಿನ ಅಭಾವದಿಂದಾಗಿ ಬಯಲುಸೀಮೆ ಭಾಗದ ಜನರು ರೇಷ್ಮೆಯಿಂದ ಸುಧಾರಣೆ ಕಾಣಲು ಸಾಧ್ಯವಾಗುವುದಿಲ್ಲ ಹಾಗಾಗಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತಹ ಚಟುವಟಿಕೆಗಳ ಕಡೆಗೆ ಹೆಚ್ಚು ಒಲವು ತೋರಿಸಬೇಕು ಎಂದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಒಕ್ಕೂಟಗಳ ಅಧ್ಯಕ್ಷ ಎಚ್.ವಿ.ನಾಗರಾಜ್, ಜಿಲ್ಲಾ ಯೂನಿಯನ್ ನಿರ್ದೇಶಕ ರಮೇಶ್, ಸಹಕಾರ ಸಂಘಗಳ ಉಪನಿಬಂಧಕಿ ಮಂಜುಳಾ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್, ಕೋಚಿಮುಲ್ ಶಿಬಿರ ಘಟಕದ ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ಎಂ.ವಿ.ವೆಂಕಟೇಶ್ಮೂರ್ತಿ, ರಾಜಣ್ಣ, ಪಿ.ಡಿ.ಬಲರಾಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ನೀರಾವರಿ ಹೋರಾಟಕ್ಕೆ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರ ಬೆಂಬಲ
ಕರ್ನಾಟಕ ರಾಜ್ಯ ರೈತ ಸಂಘಟನೆ ನಡೆಸುತ್ತಿರುವ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಿ ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು ಬುಧವಾರ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರ್ ಅವರಿಗೆ ಮನವಿಪತ್ರವನ್ನು ಸಲ್ಲಿಸಿದರು.
ಬಯಲು ಸೀಮೆಯ ಆರು ಜಿಲ್ಲೆಗಳಿಗೆ ಶಾಶ್ವತವಾದ ನೀರಿನ ಅಗತ್ಯವಿದೆ. ಶಾಶ್ವತ ನೀರಾವರಿ ಹೋರಾಟ ಸಮಿತಿಯಿಂದ ನಡೆಯುತ್ತಿರುವ 59 ನೇ ದಿನದ ಧರಣಿಯಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು ಪಾಲ್ಗೊಂಡು ಬೆಂಬಲಿಸಲಿದ್ದೇವೆ. ಕುಡಿಯಲು ಮತ್ತು ವ್ಯವಸಾಯಕ್ಕೆ ರೈತಾಪಿ ಜನ ನೀರಿಲ್ಲದೆ ಕಷ್ಟಕರ ಪರಿಸ್ಥಿತಿಯನ್ನೆದುರಿಸುತ್ತಿದ್ದಾರೆ. ಅನ್ನದಾತ ಹಳ್ಳಿಗಳನ್ನು ತೊರೆದು ನಗರಗಳಿಗೆ ಈಗಾಗಲೇ ವಲಸೆ ಹೋಗಲು ಪ್ರಾರಂಭಿಸಿದ್ದಾರೆ. ಸರ್ಕಾರ ಆದಷ್ಟು ಬೇಗ ಎಚ್ಚೆತ್ತು ಶಾಶ್ವತ ನೀರಿನ ಯೋಜನೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರು.
ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರು ಮನವಿಪತ್ರವನ್ನು ಶಿರಸ್ತೆದಾರರಿಗೆ ನೀಡಿದರು.
ತಾಲ್ಲೂಕಿನ ಸ್ತ್ರೀ ಶಕ್ತಿ ಸಂಘಟನೆಗಳ ಸದಸ್ಯರಾದ ಭಾರತಿ, ನಂಜಮ್ಮ, ಗೌರಮ್ಮ, ಲಕ್ಷ್ಮೀ, ರೈತಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಗುಡಿಹಳ್ಳಿ ಕೆಂಪಣ್ಣ, ಆನೂರು ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಶಾಲೆಗಳ ಮೇಲ್ಛಾವಣಿಗಳು ಸೋರುತ್ತಿವೆ
ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಯ ಮೇಲ್ಛಾವಣಿಗಳು ಸೋರುತ್ತಿದ್ದು, ಮಕ್ಕಳು ಕುಳಿತು ಪಾಠವನ್ನು ಕೇಳಲು ತೊಂದರೆಯಾಗಿದೆ. ಶಾಲೆಯ ಮೇಲ್ಛಾವಣಿಗಳನ್ನು ದುರಸ್ಥಿಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೊರೆಯುವ ಚಳಿಯಲ್ಲೆ ಶಾಲೆಯ ಪಡಸಾಲೆಯಲ್ಲಿ. ಮಕ್ಕಳನ್ನು ಕೂರಿಸಿಕೊಂಡು ಪಾಠವನ್ನು ಹೇಳಿಕೊಡಲಾಗುತ್ತಿದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಗಮನಹರಿಸಿ ಶಾಲಾ ಕೊಠಡಿಗಳನ್ನು ದುರಸ್ಥಿಗೊಳಿಸುವಂತೆ ಗ್ರಾಮಸ್ಥರಾದ ಶಿವಾನಂದ, ಮನೋಜ್, ಮುನಿರಾಜು, ಮಧು, ಶಿವಕುಮಾರ್, ಸಂತೋಷ್ಕುಮಾರ್, ತ್ಯಾಗರಾಜ್ ಮುಂತಾದವರು ಒತ್ತಾಯಿಸಿದ್ದಾರೆ.
‘ತಾಲ್ಲೂಕಿನಾಧ್ಯಂತ ಸೋರುತ್ತಿರುವ ಶಾಲೆಗಳ ಪಟ್ಟಿಯನ್ನು ಮಾಡಲಾಗುತ್ತಿದ್ದು, ಸಧ್ಯದಲ್ಲೆ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಿ, ದುರಸ್ಥಿಗೆ ಹಣ ಬಿಡುಗಡೆ ಮಾಡಿಕೊಡುವಂತೆ ಮನವಿ ಮಾಡಲಾಗುತ್ತದೆ. ತೊಂದರೆಯಿರುವ ಶಾಲೆಗಳಿಗೆ ಖುದ್ದಾಗಿ ಭೇಟಿ ನೀಡಿ ತಾತ್ಕಾಲಿಕ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ ತಿಳಿಸಿದರು.

