ನಗರದ ಪ್ರಸಿದ್ಧ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುವ ರಸ್ತೆ ಅಕ್ಷರಶಃ ಅಪಘಾತದ ತಾಣವಾಗಿ ಪರಿಣಮಿಸಿದೆ. ಕೋಟ್ಯಾಂತರ ರೂಪಾಯಿಗಳ ಆದಾಯವನ್ನು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ತಂದುಕೊಡುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸದೆ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
ಕೆಲ ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿನ ಗುಂಡಿಗಳು ನೀರಿನಿಂದ ಆವೃತ್ತವಾಗಿದ್ದರೆ, ಉಳಿದ ಸ್ಥಳವೆಲ್ಲಾ ರೊಚ್ಚಿನಿಂದ ಕೂಡಿದ್ದು, ನಡೆದು ಹೋಗುವವರೇ ಜಾರಿ ಬೀಳುತ್ತಿದ್ದಾರೆ. ರೇಷ್ಮೆ ಗೂಡನ್ನು ತಲೆಯ ಮೇಲೆ ಹೊತ್ತುಕೊಂಡು ಸೈಕಲ್ ತುಳಿಯುತ್ತಾ ಸಾಗುವ ಹಮಾಲಿ ಕಾರ್ಮಿಕರಿಗೆ ಈ ರಸ್ತೆಯು ನರಕಸದೃಶವಾಗಿದೆ. ಎರಡು ಮೂರು ದಿನಗಳಿಂದ ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ರೇಷ್ಮೆ ಗೂಡಿನ ಮೂಟೆ ಕೆಳಗೆ ಬಿದ್ದರೆ ಸಾವಿರಾರು ರೂಗಳು ಒಮ್ಮೆಗೇ ನಷ್ಟವಾಗುತ್ತದೆ. ಕೆಳಗೆ ಬಿದ್ದವರನ್ನು ಉಪಚರಿಸುವುದು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುವುದು ನಮ್ಮ ಕೆಲಸವಾಗಿದೆ ಎನ್ನುತ್ತಾರೆ ಅಂಗಡಿ ಮಾಲಿಕ ಮಂಜುನಾಥ.
ಇದೇ ರಸ್ತೆಯಲ್ಲಿ ಮೂರು ಬ್ಯಾಂಕುಗಳು, ಹಲವು ಹೋಟೆಲ್ಗಳು ಹಾಗೂ ಸಾಕಷ್ಟು ಅಂಗಡಿಗಳಿವೆ. ಮಾರುಕಟ್ಟೆಗೆ ಆಗಮಿಸುವ ಸಾವಿರಾರು ಮಂದಿಗೆ ಇಷ್ಟು ತೊಂದರೆಯಾದರೂ ಯಾರೂ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಕೆಲ ತಿಂಗಳ ಹಿಂದೆ ರಾಜ್ಯ ರೈತ ಸಂಘದ ಸದಸ್ಯರು ಈ ರಸ್ತೆಯನ್ನು ಸರಿಪಡಿಸುವಂತೆ ಪ್ರತಿಭಟನೆ ನಡೆಸಿದ್ದಾಗ, ಆಗಿನ ಪುರಸಭೆ ಮುಖ್ಯಾಧಿಕಾರಿ ಮೂರು ತಿಂಗಳೊಳಗೆ ರಸ್ತೆಯನ್ನು ಸರಿಪಡಿಸುವುದಾಗಿ ಹಿಂಬರಹ ಕೊಟ್ಟಿದ್ದರು. ಆದರೆ ಈ ರಸ್ತೆ, ಇಲ್ಲಿನ ದುರವಸ್ಥೆ, ಅಪಘಾತ, ತೊಂದರೆ ಮುಂದುವರೆದಿದೆ. ಈ ರಸ್ತೆಯ ಮೇಲಿನ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಗರಸಭೆಯಾಗಿರುವುದರಿಂದ ಅಧಿಕಾರಿಗಳನ್ನು ಎಚ್ಚರಿಸಲು ರಾಜ್ಯ ರೈತ ಸಂಘದ ವತಿಯಿಂದ ಮತ್ತೊಮ್ಮೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆಯ ರಸ್ತೆ ದುರವಸ್ಥೆ
ಸಹಕಾರ ರತ್ನ ಪ್ರಶಸ್ತಿಗೆ ಹೊಸಪೇಟೆ ಗ್ರಾಮದ ಕೆ.ಗುಡಿಯಪ್ಪ ಆಯ್ಕೆ
ತಾಲ್ಲೂಕಿನ ಹೊಸಪೇಟೆ ಗ್ರಾಮದ ಕೆ.ಗುಡಿಯಪ್ಪ 2015–16ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೆಂಬರ್ 18 ರಂದು ಬೆಂಗಳೂರಿನಲ್ಲಿ ನಡೆಯುವ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ನಂದಿನಿ ಹಾಲು ಉತ್ಪಾದಕರ ವಿವಿದೋದ್ಧೇಶ ಸಹಕಾರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೆ.ಗುಡಿಯಪ್ಪ(71) ಕಳೆದ ಐವತ್ತು ವರ್ಷಗಳಿಂದ ವಿವಿಧ ವರ್ಗದ ಸಹಕಾರಿ ಸಂಘ ಸಂಸ್ಥೆಗಳಲ್ಲಿ ಹಾಗೂ ಸಾರ್ವಜನಿಕ ಸರ್ಕಾರಿ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ. ತಾಲ್ಲೂಕು ಮಟ್ಟದ ಸಾರ್ವಜನಿಕ ಸರ್ಕಾರಿ ಸಂಸ್ಥೆಗಳಾದ ಭೂ ಅಭಿವೃದ್ಧಿ ಬ್ಯಾಂಕ್, ಟಿ.ಎ.ಪಿ.ಎಂ.ಎಸ್, ಎಸ್.ಎಫ್.ಎಸ್.ಸಿ.ಎಸ್, ಮಂಡಲ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಚುನಾಯಿತ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.
192 ರಲ್ಲಿ ಅಮೂಲ್ ಮಾದರಿಯ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹೊಸಪೇಟೆ ಗ್ರಾಮದಲ್ಲಿ ಸ್ಥಾಪಿಸಿ ಅಧ್ಯಕ್ಷರಾಗಿ, 1983 ರಲ್ಲಿ ಬೆಂಗಳೂರು ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಶಿಡ್ಲಘಟ್ಟ ತಾಲ್ಲೂಕಿನಿಂದ ಆಯ್ಕೆಯಾಗಿ ಆಡಳಿತ ಮಂಡಳಿಯ ಸದಸ್ಯರಾಗಿದ್ದರು. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ಸ್ಥಾಪನೆಯಾದಾಗಿಂದ 2014 ರ ವರೆಗೂ ಸತತವಾಗಿ ಚುನಾವಣೆಯಲ್ಲಿ ಆಯ್ಕೆಯಾಗಿ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರಾಗಿ, ಮೂರು ಬಾರಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2012–13 ರಲ್ಲಿ ಶಿಡ್ಲಘಟ್ಟದಲ್ಲಿ ನಂದಿನಿ ಹಾಲು ಉತ್ಪಾದಕರ ವಿವಿದೋದ್ಧೇಶ ಸಹಕಾರ ಸಂಘವನ್ನು ಸ್ಥಾಪಿಸಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನರೇಗಾ ಯೋಜನೆಯಡಿಯಲ್ಲಿ ಆಟದ ಮೈದಾನ ನಿರ್ಮಿಸಲು ಕಾಮಗಾರಿಗೆ ಗುದ್ದಲಿ ಪೂಜೆ
ಶಿಡ್ಲಘಟ್ಟ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಶನಿವಾರ ಸರ್ಕಾರಿ ಹಿರಿಯ ಪ್ರಾಥಮಿ ಶಾಲೆಯ ಆವರಣದಲ್ಲಿ ನರೇಗಾ ಯೋಜನೆಯಡಿಯಲ್ಲಿ ಆಟದ ಮೈದಾನ ನಿರ್ಮಿಸಲು 2 ಲಕ್ಷ ರೂಗಳ ಕಾಮಗಾರಿಗೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕಾತ್ಯಾಯಿನಿ, ಗ್ರಾಮ ಪಂಚಾಯತಿ ಅಧ್ಯಕ್ಷ ರಘುನಾಥ್, ಉಪಾಧ್ಯಕ್ಷ ಚಂದ್ರೇಗೌಡ, ಸದಸ್ಯರಾದ ಷಣ್ಮುಖ, ದೇವರಾಜ್, ಭಾಗ್ಯಮ್ಮ ಹಾಜರಿದ್ದರು.
ಶಿಡ್ಲಘಟ್ಟ ಅಂಚೆ ಕಚೇರಿಯಲ್ಲಿ ಕೋರ್ಬ್ಯಾಂಕಿಂಗ್ಗೆ ಚಾಲನೆ
ಸಾರ್ವಜನಿಕರಿಗೆ ಬರೀ ಪತ್ರ ವ್ಯವಹಾರಕ್ಕೆ ಸೀಮಿತವಾಗಿದ್ದ ಅಂಚೆ ಇಲಾಖೆ ಇದೀಗ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಿ ಹೊಸ ದಾಖಲೆಯತ್ತ ಹೆಜ್ಜೆ ಇಟ್ಟಿದೆ. ಕೋರ್ಬ್ಯಾಂಕಿಂಗ್ ವ್ಯವಸ್ಥೆಯಿಂದ ಗ್ರಾಹಕರು ದೇಶದ ಯಾವುದೇ ಭಾಗದಿಂದ ಹಣ ವರ್ಗಾವಣೆ ಹಾಗೂ ಹಣ ಪಡೆಯುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೋಲಾರ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಕೆ.ಮುನಿಶಾಮಯ್ಯ ತಿಳಿಸಿದರು.
ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಸೋಮವಾರ ಅಂಚೆ ಕಚೇರಿ ಗ್ರಾಹಕರಿಗೆ ತುರ್ತು ಸೇವೆ ಪೂರೈಸುವ ಉದ್ದೇಶದಿಂದ ಎಲ್ಲ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆ (ಸಿ ಬಿ ಎಸ್ ಆನ್ಲೈನ್)ಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೋಲಾರ ವಿಭಾಗದ 63 ಅಂಚೆ ಕಚೇರಿಗಳು ಗಣಕೀಕೃತವಾಗಿದ್ದು, ಕೋರ್ ಬ್ಯಾಂಕಿಂಗ್ ಸೇವೆ ನೀಡುತ್ತಿವೆ. ಈಗ ಶಿಡ್ಲಘಟ್ಟದಲ್ಲಿ ಪ್ರಾರಂಭಿಸುವುದರೊಂದಿಗೆ ಕೋಲಾರ ವಿಭಾಗ ಸಂಪೂರ್ಣಗೊಂಡಿದೆ. ಅಂಚೆ ಇಲಾಖೆಯ ದಕ್ಷಿಣ ವಲಯದಲ್ಲಿ ಮೊಟ್ಟಮೊದಲು ಕೋರ್ ಬ್ಯಾಂಕಿಂಗ್ ಸೇವೆ ನೀಡಿರುವ ವಿಭಾಗವು ಕೋಲಾರದ್ದಾಗಿದೆ. ತಾಲ್ಲೂಕಿನ ಬುರುಡುಗುಂಟೆಯಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದಿರುವುದರಿಂದ ಅಲ್ಲಿ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ನಗರದಲ್ಲಿ ಅಂಚೆ ಇಲಾಖೆಯಿಂದ ಎ.ಟಿ.ಎಂ ಕೂಡ ಪ್ರಾರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಅಂಚೆ ಇಲಾಖೆಯ ಎಟಿಎಂ ಕಾರ್ಡ್ ಬಳಸಿ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಡ್ರಾ ಮಾಡುವ ಯೋಜನೆ ಆರಂಭವಾಗಲಿದೆ. ಗ್ರಾಹಕರು ಉಳಿತಾಯ ಖಾತೆ ಮೂಲಕ ಅಂಚೆ ಕಚೇರಿಯಲ್ಲಿ ಹಣಕಾಸಿನ ವ್ಯವಹಾರ ಮಾಡಬಹುದು. ಅಂಚೆ ಕಚೇರಿಯ ಮುಖಾಂತರ ದೇಶದ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹಣದ ವ್ಯವಹಾರ ಮಾಡಬಹುದು ಎಂದರು.
ಕೋಲಾರ ವಿಭಾಗದ ಎಲ್ಲ ಅಂಚೆ ಕಚೇರಿಗಳು ಈಗ ಕಾಗದ ರಹಿತವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದ ಗ್ರಾಹಕರು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಲ್ಲಿ ವಾರ್ಷಿಕ 330 ರೂ ಪಾವತಿಸಬೇಕು. ಈ ವಿಮೆ 18 ರಿಂದ 50 ವರ್ಷದ ವರೆಗೆ ಚಾಲ್ತಿಯಲ್ಲಿರುತ್ತದೆ. ಖಾತೆ ದಾರ ಮೃತಪಟ್ಟರೆ 2 ಲಕ್ಷ ರೂ ವಿಮೆ ಹಣ ವಿತರಿಸಲಾಗುತ್ತದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ 18 ರಿಂದ 70 ವರ್ಷದವರೆಗೆ ವಿಮೆ ಚಾಲ್ತಿಯಲ್ಲಿರುತ್ತದೆ. ಖಾತೆದಾರರು ವಾರ್ಷಿಕ 12 ರೂ ಪಾವತಿಸಬೇಕು. ಅಪಘಾತವಾದರೆ 2 ಲಕ್ಷ ರೂಗಳವರೆಗೆ ವಿಮೆ ಹಣ ದೊರೆಯುತ್ತದೆ. ಗ್ರಾಮೀಣ ಪ್ರದೇಶದ ಜನರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಪೋಸ್ಟ್ ಮಾಸ್ಟರ್ ಗಜೇಂದ್ರ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಶೀವಣ್ಣ, ವಿಭಾಗೀಯ ಅಧಿಕಾರಿ ಸತೀಶ್, ಅಧಿಕಾರಿಗಳಾದ ನರಸಿಂಹಪ್ಪ, ಬಿ.ಎಂ.ಮಂಜುನಾಥ್, ಎನ್.ಜೆ.ಮಂಜುನಾಥ್, ವೆಂಕಟಾಚಲಪತಿ, ಆಶಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಆಶ್ರಮ ವಸತಿ ಶಾಲೆಯಲ್ಲಿ ಅವ್ಯವಸ್ಥೆ
ತಾಲ್ಲೂಕಿನ ದಿಬ್ಬೂರಹಳ್ಳಿ ಬಳಿಯ ಬಚ್ಚನಹಳ್ಳಿ ಆಶ್ರಮ ವಸತಿ ಶಾಲೆಯಲ್ಲಿ ಅವ್ಯವಹಾರ ಹಾಗೂ ಅವ್ಯವಸ್ಥೆ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಾಲ್ಲೂಕಿನಾದ್ಯಂತ ಜಲಜಲಧಾರೆ
ತಾಲ್ಲೂಕಿನಾದ್ಯಂತ ಬೀಳುತ್ತಿರುವ ಮಳೆಯು ಒಂದೆಡೆ ಕೆರೆ, ಕುಂಟೆ, ಚೆಕ್ ಡ್ಯಾಮ್ಗಳನ್ನು ತುಂಬಿಸಿ ಹೊರಕ್ಕೆ ನೀರು ಹರಿಸುತ್ತಾ ಜಲಪಾತಗಳನ್ನು ಸೃಷ್ಟಿಸಿ ಸಂತಸವನ್ನು ಉಕ್ಕಿಸಿದ್ದರೆ, ಮತ್ತೊಂದೆಡೆ ಮಳೆಯ ತಣುವನ್ನು ತಡೆಯದೇ ಜಂತಿಕೆ ಮನೆಗಳು ಹಾಗೂ ಹೊಲಗಳು ಕುಸಿದು ನಷ್ಟವನ್ನೂ ತಂದಿದೆ.

ರಕ್ಷಣೆ ಬೇಡುತ್ತಿದೆ ಐತಿಹಾಸಿಕ ಶಾಸನ
ಒಂದಾನೊಂದು ಕಾಲದಲ್ಲಿ ‘ಅಗ್ರಹಾರ’ಗಳು ಶೈಕ್ಷಣಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಕ್ಷಣ ಕೇಂದ್ರಗಳಾಗಿದ್ದವು. ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯು ಐದು ಶತಮಾನಗಳ ಹಿಂದೆ ‘ಅಗ್ರಹಾರ ರಾಮಸಮುದ್ರ’ ವೆಂಬ ಖ್ಯಾತ ಕಲಿಕಾ ಕೇಂದ್ರವಾಗಿತ್ತೆಂದು ಅಲ್ಲಿನ ಶಾಸನದ ಮೂಲಕ ತಿಳಿದುಬರುತ್ತದೆ. ಕುಂದಲಗುರ್ಕಿಯ ಚಂದ್ರಕವಿಯ ‘ಶ್ರೀಕೃಷ್ಣ ಭೂಪಾಲಿಯಮು’ ಕೃತಿ ರಚನೆಯು 1830 ರಲ್ಲಾಯಿತೆಂದೂ ಆತ ಇನ್ನೂ ಕೆಲವು ಕೃತಿಗಳನ್ನು ಬರೆದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಗ್ರಾಮ ಪಂಚಾಯತಿ ಕೇಂದ್ರವಾದ ಕುಂದಲಗುರ್ಕಿ ಗ್ರಾಮದ ಹಿರಿಮೆಯನ್ನು ಸಾರುವ ಶಾಸನದ ಕಲ್ಲು ಹಾಗೂ ಹಲವಾರು ವೀರಗಲ್ಲುಗಳು ಅನಾಥವಾಗಿ ಗ್ರಾಮದಲ್ಲಿ ಕೆರೆಗೆ ಹೋಗುವ ದಾರಿಯ ಪಕ್ಕದಲ್ಲಿ ಬಿದ್ದಿವೆ. ಶಾಸನದ ಕಲ್ಲಂತೂ ಮಕಾಡೆ ಬಿದ್ದಿದ್ದು, ಹಳೆಯ ಲಿಪಿಯಿರುವ ಭಾಗ ನೆಲದ ಕಡೆಗೆ ತಿರುಗಿದೆ. ಅನಾಥಸ್ಥಿತಿಯಲ್ಲಿರುವ ಐದು ಶತಮಾನಗಳ ಹಿಂದಿನ ಈ ಅಪರೂಪದ ಶಾಸನ ಮತ್ತು ಹಲವಾರು ವೀರಗಲ್ಲುಗಳಿಗೆ ಕಾಯಕಲ್ಪಕ್ಕಾಗಿ ಕಾಯುತ್ತಿವೆ. ತಾಲ್ಲೂಕಿನ ಚೌಡಸಂದ್ರ, ಚೀಮಂಗಲ ಮತ್ತು ಸಾದಲಿ ಗ್ರಾಮಗಳಲ್ಲಿ ಹಳೆಯ ವೀರಗಲ್ಲುಗಳನ್ನೆಲಾ ಒಂದೆಡೆ ಸೇರಿಸಿ ಗುಡಿಯನ್ನಾಗಿಸಿ ಸಂರಕ್ಷಿಸಿದ್ದಾರೆ. ಈ ಮಾದರಿಯ ರಕ್ಷಣೆ ಇಲ್ಲಿ ಅವಶ್ಯವಿದೆ.
ಕರ್ನಾಟಕದ ಅಗ್ರಹಾರಗಳಲ್ಲಿ ಶಿವಮೊಗ್ಗದ ತಾಳಗುಂದದ ಅಗ್ರಹಾರ ಅತ್ಯಂತ ಪ್ರಾಚೀನವಾದ್ದು. ಇದನ್ನು ಮಯೂರಶರ್ಮನ ಪುರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ. ಬಾದಾಮಿ ಚಾಲುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು. ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿದ್ದುದು ಹಲವಾರು ಶಾಸನಗಳಿಂದ ತಿಳಿದು ಬಂದಿದೆ. ಅಗ್ರಹಾರಗಳಲ್ಲಿ ವೇದ, ವೇದಾಂಗ, ನ್ಯಾಯ, ಮೀಮಾಂಸೆ, ಸಾಂಖ್ಯ, ಯೋಗ, ವೇದಾಂತ, ಸ್ಮೃತಿ, ಇತಿಹಾಸ, ಪುರಾಣ, ಖಗೋಳಶಾಸ್ತ್ರ- ಮುಂತಾದವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಅಧ್ಯಾಪಕರ ವಿಷಯಪಾಂಡಿತ್ಯಕ್ಕೂ ಕಾರ್ಯಮಹತ್ತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು.
‘ನಮ್ಮ ಗ್ರಾಮ ಹಿಂದೆ ಒಂದು ಶಿಕ್ಷಣ ಕೇಂದ್ರವಾಗಿತ್ತೆಂದು ತಿಳಿದು ಬಹಳ ಹೆಮ್ಮೆ ಎನಿಸುತ್ತದೆ. ನಮ್ಮ ಗ್ರಾಮದ ಐತಿಹ್ಯವನ್ನು ತಿಳಿಸುವ ಅಪರೂಪದ ಶಾಸನ ಮತ್ತು ಪೂರ್ವಿಕರು ನಾಡಿನ ರಕ್ಷಣೆಗಾಗಿ ಮರಣಿಸಿದ್ದುದರ ಕುರುಹಾಗಿ ಉಳಿದಿರುವ ವೀರಗಲ್ಲುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಗ್ರಾಮ ಪಂಚಾಯತಿಯಿಂದ ಈ ಮಹತ್ವದ ದಾಖಲೆಗಳಾದ ಕಲ್ಲುಗಳನ್ನು ಜೋಪಾನ ಮಾಡಬೇಕಿದೆ’ ಎಂದು ಗ್ರಾಮಸ್ಥ ನರಸಿಂಹಪ್ಪ ತಿಳಿಸಿದರು.
ಗರ್ಭಿಣಿ ಆರೈಕೆ ಭಾಗ – 1
“ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ” ಎನ್ನುವುದು ಲೋಕೋಕ್ತಿ. ಅದರಂತೆ “ಮಾತೃ ದೇವೋ ಭವ” ತಾಯಿಗಿಂತ ಮಿಗಿಲಾದ ದೇವರಿಲ್ಲ ಇನ್ನುವುದೂ ಕೂಡ ವಾಡಿಕೆಯಲ್ಲಿರುವ ಸಂಸ್ಕøತ ನುಡಿ. ಇಷ್ಟೇ ಅಲ್ಲದೆ ಕಥೆ, ಕಾದಂಬರಿ, ಸಿನಿಮಾಗಳಲ್ಲಿ ಕೂಡ ಮಾತೃ ಪ್ರಾಧಾನ್ಯತೆಯನ್ನು ನಾವು ನೋಡಿರುತ್ತೇವೆ, ಕೇಳಿರುತ್ತೇವೆ ಹಾಗೂ ಓದಿರುತ್ತೇವೆ. ದೇವರು ತಾನು ಎಲ್ಲ ಕಡೆಯಲ್ಲಿಯೂ ಇದ್ದು ಮಕ್ಕಳ ರಕ್ಷಣೆಯನ್ನು ಮಾಡಲಾಗುವುದಿಲ್ಲವೆಂದು ತಾಯಿಯನ್ನು ಸೃಷ್ಟಿಸಿದನಂತೆ.
ಒಂಭತ್ತು ತಿಂಗಳು ಗರ್ಭದಲ್ಲಿ ಶಿಶುವಿನ ರಕ್ಷಣೆಯನ್ನು ನೀಡುವುದು ಮಹಿಳೆಯ ಜೀವನದ ಒಂದು ಸೂಕ್ಷ್ಮ ಹಾಗೂ ಮಹತ್ತರ ಘಟ್ಟ. ಇಲ್ಲಿ ತಾಯ್ತನದ ಅನುಭವವನ್ನು ಮಹಿಳೆ ಪಡೆಯುತ್ತಾಳೆ. ಇಷ್ಟೇ ಅಲ್ಲದೆ ಈ ಅವಧಿಯು ಮಹಿಳೆಯ ತ್ಯಾಗ ಜೀವನ ಹಾಗೂ ಸಹನಶೀಲತೆಯ ಸಂಕೇತ. “ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಂದಿರು ಇರಲು ಸಾಧ್ಯವಿಲ್ಲ” ಇನ್ನುವುದೂ ಕೂಡ ಒಂದು ಪ್ರಚಲಿತ ಸಂಸ್ಕøತ ಸುಭಾಷಿತ. ಗರ್ಭಿಣಿ ಮಹಿಳೆ ಈ ಅವಧಿಯಲ್ಲಿ ಸೇವಿಸುವ ಆಹಾರ ಹಾಗೂ ವಿಹಾರಗಳ ಮೇಲೆ ಜನಿಸುವ ಶಿಶುವಿನ ಆರೋಗ್ಯವು ನಿರ್ಧಾರಿತವಾಗುತ್ತದೆ.
ಗರ್ಭಿಣಿ ಸೇವಿಸುವ ಆಹಾರವು ಪ್ರಧಾನವಾಗಿ ಮೂರು ಪ್ರಯೋಜನಗಳನ್ನು ಒದಗಿಸಬೇಕು.
1. ಗರ್ಭಿಣಿಯ ದೇಹದ ಪೋಷಣೆ
2. ಬೆಳೆಯುತ್ತಿರುವ ಶಿಶುವಿನ ಪೋಷಣೆ
3. ಮಗುವಿನ ಹಾಲುಣಿಸಲು ಸ್ತನಗಳ ಪೋಷಣೆ
ಗರ್ಭಿಣಿ ಸ್ತ್ರೀಯು ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸೇವಿಸಿದರೆ ಸಾಲದು. ಆಹಾರವು ಪೌಷ್ಟಿಕಾಂಶಯುಕ್ತವಾಗಿರಬೇಕು. ಅಲ್ಲದೆ ಗರ್ಭಿಣಿಯಲ್ಲಿ ರಕ್ತ ಕಣಗಳ ಉತ್ಪತ್ತಿ, ಕಬ್ಬಿಣಾಂಶಗಳ ದಾಸ್ತಾನು, ಪ್ರಸವ ವೇದನೆಯನ್ನು ಸಹಿಸಿಕೊಳ್ಳಲು ಶಾರೀರಿಕ ಹಾಗೂ ಮಾನಸಿಕ ಬಲ ಮಾಂಸಖಂಡಗಳಲ್ಲಿ ಬಲವನ್ನು ನೀಡುವಂತಿರಬೇಕು.
ಮೊದಲನೆಯ ತಿಂಗಳು: ಮೊದಲ ಮೂರು ತಿಂಗಳುಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ವಾಂತಿ, ಸುಸ್ತು, ತಲೆ ಸುತ್ತು ಇತ್ಯಾದಿಗಳು ಇರುತ್ತವೆ. ಈ ತಿಂಗಳಿನಲ್ಲಿ ಹಾಲು ಪ್ರಮುಖವಾದ ಆಹಾರವಾಗಬೇಕು. ಸಿಹಿ, ಶೀತ, ದ್ರವ ಹಾಗೂ ಜೀರ್ಣಕ್ಕೆ ಹಗುರವಾದಂಥಹ ಆಹಾರ ಸೇವನೆ ಹಿತಕರ. ಹಣ್ಣಿನ ರಸ, ಗಂಜಿ, ಎಳನೀರು ಇತ್ಯಾದಿಗಳೂ ಕೂಡ ಈ ತಿಂಗಳಿನಲ್ಲಿ ಉತ್ತಮ. ಅಲ್ಲದೆ ಚೆನ್ನಾಗಿ ಬೆಂದ ಅನ್ನವನ್ನು ತೊವ್ವೆ ಅಥವಾ ಬೇಳೆಕಟ್ಟು ಇತ್ಯಾದಿಗಳೊಂದಿಗೆ ಅಥವಾ ಬೆಣ್ಣೆ, ತುಪ್ಪ, ಮೊಸರಿನೊಂದಿಗೆ ಸೇವಿಸಬೇಕು.
ಎರಡನೆಯ ತಿಂಗಳು: ಈ ತಿಂಗಳಿನಲ್ಲಿಯೂ ಕೂಡ ಆಹಾರ ಮೊದಲನೆಯ ತಿಂಗಳಿನಂತೆ ಇದ್ದು, ಹಾಲಿಗೆ ಅತಿ ಮಧುರ (ಜೇಷ್ಠವಧು) ಶತಾವರಿ (ಹಲವು ಮಕ್ಕಳ ತಾಯಿ ಬೇರು) ಸಸ್ಯಗಳ ಬೇರನ್ನು ಬೆರೆಸಿ, ಕುದಿಸಿ, ಶೋಧಿಸಿ ದಿನಕ್ಕೆ ಎರಡು ಲೋಟದಷ್ಟು ಹಾಲನ್ನು ಗರ್ಭಿಣಿಯು ಕುಡಿಯಬೇಕು. ಅತಿ ಮಧುರ ಮತ್ತು ಶತಾವರಿಗಳು ಎದೆ ಹಾಲಿನ ಉತ್ಪತ್ತಿ ಮತ್ತು ಕಫ ದೋಷಗಳ ನಿವಾರಣೆ ಮಾಡುತ್ತವೆ.
ಮೂರನೆಯ ತಿಂಗಳು: ಸಿಹಿ ಪದಾರ್ಥಗಳನ್ನು ಸೇವಿಸಬೇಕು. ಹಾಲು, ತುಪ್ಪ, ಜೇನುತುಪ್ಪ, ಬೆಣ್ಣೆ, ಮೊಸರುಗಳನ್ನು ಸೇವಿಸಬೇಕು. ಅನ್ನವನ್ನು ಹಾಲಿನೊಂದಿಗೆ ಸೇರಿಸಿ ಸೇವಿಸುವುದು ಹಿತಕರ. ಕಸಕಸೆ, ಶಾವಿಗೆ, ಹೆಸರುಬೇಳೆ, ಕಡ್ಲೆಬೇಳೆಗಳಿಂದ ತಯಾರಿಸಿದ ಪಾಯಸಕ್ಕೆ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಪೌಷ್ಠಿಕಾಂಶಗಳು ದೊರೆಯುತ್ತವೆ. ಅಲ್ಲದೆ ತುಪ್ಪವು ದೇಹಕ್ಕೆ ಶಕ್ತಿ ಹಾಗೂ ಶಾಖವನ್ನು ನೀಡುತ್ತದೆ. ಚರ್ಮವು ಬಿರುಕು ಬಿಡುವುದನ್ನು ತಡೆದು, ಕಾಂತಿಯನ್ನು ನೀಡುತ್ತದೆ. ಮಗುವಿನ ಬುದ್ಧಿಶಕ್ತಿಯು ಬೆಳವಣಿಗೆಗೂ ಇದು ಸಹಕಾರಿ.
ನಾಲ್ಕನೆಯ ತಿಂಗಳು: ಈ ತಿಂಗಳಿನಲ್ಲಿ ಗರ್ಭಿಣಿಯರಲ್ಲಿ ವಾಕರಿಕೆ ಸ್ವಲ್ಪ ಕಡಿಮೆಯಾಗುತ್ತದೆ. ಆಹಾರವನ್ನು ತಿನ್ನಲು ಇಚ್ಛೆಯಾಗುತ್ತದೆ. ಆದುದರಿಂದ ಘನ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕು. ಈ ತಿಂಗಳಿನಲ್ಲಿ ಚೆನ್ನಾಗಿ ಬೆಂದ ಅನ್ನವನ್ನು ಮೊಸರು ಅಥವಾ ಬೆಣ್ಣೆಯೊಂದಿಗೆ ಸೇವಿಸಬೇಕು. ಬಿಸಿಯಾದ ಆಹಾರದೊಂದಿಗೆ ಬೆಣ್ಣೆಯನ್ನು ಬೆರೆಸಿ ಸೇವಿಸುವುದು ಹಿತಕರ. ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸ (ಕೋಳಿ, ಕುರಿ) ದಿಂದ ಸಿದ್ಧಪಡಿಸಿದ ಆಹಾರವನ್ನು ಸೇವಿಸಬಹುದು. ಮಾಂಸ ರಸದ ಸೇವನೆ ಕೂಡ ಒಂದು ಉತ್ತಮ ಆಹಾರ.
ಹಸಿ ತರಕಾರಿ, ತಾಜಾ ಹಣ್ಣುಗಳು, ರಾಗಿ, ಗೋಧಿ, ಜೋಳ ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಮೊಟ್ಟೆ ಇತ್ಯಾದಿಗಳ ಸೇವನೆ ಈ ತಿಂಗಳಿನಲ್ಲಿ ಉತ್ತಮ.
ಐದನೆಯ ತಿಂಗಳು: ಹಣ್ಣಿನ ಸೇವನೆ ಈ ಅವಧಿಯಲ್ಲಿ ಅಗತ್ಯ. ಬೆಣ್ಣೆ, ತುಪ್ಪ, ಹಾಲು, ಜೇನುತುಪ್ಪಗಳೂ ಕೂಡ ಈ ತಿಂಗಳಿನಲ್ಲಿ ಹಿತಕರ, ಸೊಪ್ಪು, ತರಕಾರಿ, ಬೇಳೆಕಾಳುಗಳು ಆಹಾರದಲ್ಲಿದ್ದರೆ ಉತ್ತಮ. ಅನ್ನದ ಗಂಜಿ, ಅಕ್ಕಿಯಿಂದ ತಯಾರಿಸಿದ ಪಾಯಸ ಆಥವಾ ಖೀರೂ ಕೂಡ ಈ ಅವಧಿಯಲ್ಲಿ ಉತ್ತಮ ಪೌಷ್ಠಿಕಾಂಶಗಳನ್ನು ನೀಡುವುದು. ಮಾಂಸಾಹಾರಿಗಳು ಒಣ ಪ್ರದೇಶದ ಪ್ರಾಣಿಗಳ ಮಾಂಸ ಸೇವನೆಯನ್ನು ಹೆಚ್ಚಿನ ಮಸಾಲೆ ಪದಾರ್ಥಗಳು ಖಾರದ ಬಳಕೆಯನ್ನು ಕಡಿಮೆ ಮಾಡಿ ಬಳಸಬಹುದು. ಈ ರೀತಿ ಎಲ್ಲ ರೀತಿಯ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಆರನೆಯ ತಿಂಗಳು: ಮೇಲೆ ಹೇಳಿದ ಎಲ್ಲ ಆಹಾರ ಪದಾರ್ಥಗಳನ್ನು ನಿತ್ಯ ಸೇವಿಸಬೇಕು. ಮೂತ್ರಕ್ಕೆ ಸಂಬಂಧಿಸಿದ ಸಣ್ಣ ಪುಟ್ಟ ತೊಂದರೆಗಳು ಈ ಅವಧಿಯಲ್ಲಿ ಸಾಮಾನ್ಯವಾಗಿ ಕಾಣಿಸುವುದು. ಇವುಗಳನ್ನು ಅಲ್ಪವಾಗಿರುವಾಗಲೇ ನಿವಾರಿಸಿಕೊಳ್ಳಬೇಕು. ಹಾಗಾಗಿ ಈ ಅವಧಿಯಲ್ಲಿ ನೀರನ್ನು ಸಂಸ್ಕರಿಸಿ ಕುಡಿಯಬೇಕು. ನೀರಿಗೆ ನೆಗ್ಗಿಲಮುಳ್ಳಿನ ಸಸ್ಯದ ಬೇರನ್ನು ಹಾಕಿ ಕುದಿಸಿ ಅನಂತರ ಶೋಧಿಸಿ ಕುಡಿಯಬೇಕು. ನೆಗ್ಗಿಲ ಮುಳ್ಳು ಹಾಕಿ ತಯಾರಿಸಿದ ಗೋಕ್ಷುರಾದಿ ಘೃತವನ್ನು ಅನ್ನದೊಂದಿಗೆ ಅಥವಾ ಬಿಸಿ ನೀರಿನೊಂದಿಗೆ ಸೇವಿಸಬೇಕು. ಹಾಲು, ತುಪ್ಪ, ಮೊಸರು, ಲಸ್ಸಿ, ಪಾಯಸ ಇತ್ಯಾದಿಗಳ ಸೇವನೆಯನ್ನು ಮುಂದುವರಿಸಬೇಕು.
ಏಳನೆಯ ತಿಂಗಳು: ತುಪ್ಪವನ್ನು ಹೆಚ್ಚಾಗಿ ಹಾಕಿ ತಯಾರಿಸಿದಂತಹ ಸಿಹಿ ತಿಂಡಿಯನ್ನು ಸೇವಿಸುವುದು ಹಿತಕರ. ಸಂಸ್ಕರಿತ ಘೃತಗಳಾದ ಫಲಘೃತ, ಮಹಾಕಲ್ಯಾಣಕ ಘೃತಗಳನ್ನು ಹಾಲಿನೊಂದಿಗೆ ಸೇವಿಸಬೇಕು.
ಎಂಟನೆಯ ತಿಂಗಳು: ಪ್ರಧಾನವಾಗಿ ಈ ತಿಂಗಳಿನಲ್ಲಿ ದ್ರವ ಆಹಾರವನ್ನು ಸೇವಿಸುವುದು ಉತ್ತಮ. ಪೌಷ್ಟಿಕಾಂಶಯುಕ್ತವಾದ ಆಹಾರವನ್ನು ಸೇವಿಸಬೇಕು. ತಿಂದ ಆಹಾರವು ಬೇಗನೇ ಜೀರ್ಣವಾಗುವಂತಿರಬೇಕು. ಅಲ್ಲದೆ ಉದರದಲ್ಲಿ ವೇದನೆಯನ್ನುಂಟು ಮಾಡುವಂತಿರಬಾರದು. ಹಣ್ಣಿನ ರಸ, ಹಾಲು ಗಂಜಿ ಎಳನೀರು, ಸಕ್ಕರೆ ನೀರು, ಗ್ಲೂಕೋಸ್ ನೀರು ಈ ತಿಂಗಳುಗಳಲ್ಲಿ ಹಿತಕರ.
ಹಾಲು ಮತ್ತು ತುಪ್ಪವನ್ನು ಸೇರಿಸಿ ತಯಾರಿಸಿದ ಗಂಜಿಯನ್ನು ಮೇಲಿಂದ ಮೇಲೆ ಸೇವಿಸಬೇಕು. ಹೆರಿಗೆ ಆಗುವವರೆಗೂ ತುಪ್ಪ ಹಾಕಿ ಸಿದ್ಧಪಡಿಸಿದ ಗಂಜಿ ಮತ್ತು ಮಾಂಸಾಹಾರ ಸೇವನೆ ಮಾಡುವವರು ಒಣ ಪ್ರದೇಶದ ಪ್ರಾಣಿಗಳ ಮಾಂಸರಸ ಸೇವನೆ ಮಾಡಬೇಕು.
ಅಲ್ಲದೆ ಈ ತಿಂಗಳೀನಲ್ಲಿ ವೈದ್ಯರ ಸಲಹೆಯ ಮೇರೆಗೆ ಆಸ್ಥಾಪನಾ ಬಸ್ತಿ (ಗುದದ್ವಾರದ ಮೂಲಕ ಔಷಧಿಯ ದ್ರವ್ಯ ಹಾಗೂ ತುಪ್ಪವನ್ನು ಸೇರಿಸುವುದು) ಯನ್ನು ತೆಗೆದುಕೊಳ್ಳಬೇಕು.
ಒಂಭತ್ತನೆಯ ತಿಂಗಳು: ಎಂಟನೆಯ ತಿಂಗಳಿನಲ್ಲಿ ಸೇವಿಸಿದ ಆಹಾರವನ್ನೇ ಮುಂದುವರಿಸಬೇಕು. ವೈದ್ಯರ ಸಲಹೆಯ ಮೇರೆಗೆ ಯೋನಿ ಪಿಚು ಅಂದರೆ ಔಷಧಿಯ ತೈಲವನ್ನು ಹತ್ತಿಯಲ್ಲಿ ಅದ್ದಿ ಯೋನಿ ಮಾರ್ಗದಲ್ಲಿ ಪ್ರಸವವಾಗುವವರಗೂ ಇಟ್ಟುಕೊಳ್ಳುವುದು. ಇದರಿಂದ ಯೋನಿ ಮಾರ್ಗವು ಮೃದುವಾಗುವುದಲ್ಲದೆ ಸುಖ ಪ್ರಸವವೂ ಆಗುವುದು.
ಮುಂದುವರೆಯುವುದು…
ಡಾ. ನಾಗಶ್ರೀ. ಕೆ.ಎಸ್.
ಕೈ ಬರಹವೆಂಬ ಅಳತೆಗೋಲು!
ಸ್ವಲ್ಪ ಫ್ಲಾಶ್‍ಬ್ಯಾಕ್‍ಗೆ ಹೋಗೋಣ. ಆಗ ಒಂದನೇ ತರಗತಿಗೆ ಒಂದೇ ಪಾಠದ ಪುಸ್ತಕ. ಕ- ಕಮಲ, ಅಂ- ಅಂಜೂರಗಳನ್ನು ಕಲಿಯುತ್ತಿದ್ದ ಕಾಲ. ಆದರೆ ಆ ಕಾಲದಲ್ಲೂ ಕಾಪಿ ಪುಸ್ತಕಗಳಿದ್ದವು. ಕನ್ನಡ ಹಾಗೂ ಇಂಗ್ಲೀಷ್‍ನ ವಿವಿಧ ಮಾದರಿಯ ಕಾಪಿ ಪುಸ್ತಕಗಳಲ್ಲಿ ನಾಲ್ಕು ಗೆರೆಯ, ಮೂರು ಗೆರೆಯ ನೋಟ್ ಪುಸ್ತಕಗಳು, ಮುದ್ರಿತ ಶೀರ್ಷಿಕೆಗಳ ಕಾಪಿ ಪುಸ್ತಕಗಳು…..ಎಷ್ಟೆಲ್ಲ? ಈಗಿನ ದಿನಗಳಲ್ಲಿ, ಒಂದನೇ ತರಗತಿಗೇ 5-6 ಪಠ್ಯ ಪುಸ್ತಕ ಹೊರುವ ಮಕ್ಕಳಿಗೆ ಕಾಪಿ ಪುಸ್ತಕ ಬಹುಪಾಲು ಇಲ್ಲ. ಆದರೆ……
ಯುರೋಪಿಯನ್ ದೇಶಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಒಬ್ಬ ಉದ್ಯೋಗಾಕಾಂಕ್ಷಿ ಎಷ್ಟೇ ಡಿಗ್ರಿಗಳನ್ನು ಪಡೆದಿರಲಿ, ಅಸಾಧ್ಯ ಬುದ್ಧಿವಂತನಾಗಿರಲಿ – ನೌಕರಿ ನೀಡುವಾತ ಅದನ್ನೆಲ್ಲವನ್ನು ಮಾತ್ರ ಪರಿಗಣಿಸುತ್ತಿಲ್ಲ. ಉದ್ಯೋಗಾಕಾಂಕ್ಷಿಯ ಕೈ ಬರಹವನ್ನು ಮುದ್ದಾಂ ಪರಿಶೀಲಿಸಲಾಗುತ್ತದೆ!!
ಗ್ರಾಫಾಲಜಿಯ ಆಧಾರದಲ್ಲಿ ಮನುಷ್ಯನ ವ್ಯಕ್ತಿತ್ವ, ಅವರ ಸಾಮಥ್ರ್ಯ, ಅವರ ಬೆಳವಣಿಗೆ ಸಾಧ್ಯತೆಗಳನ್ನು ಹೇಳಬಹುದು. ಇವಕ್ಕಿಂತ ಮುಖ್ಯವಾಗಿ, ಆ ಮನುಷ್ಯನ ಸಾಚಾತನವನ್ನೂ ಗ್ರಾಫಾಲಜಿಯನ್ನು ಬಳಸಿ ಕಂಡುಕೊಳ್ಳಬಹುದು ಎನ್ನುತ್ತಾರೆ ಗ್ರಾಫಾಲಜಿಸ್ಟ್ ಮಾರ್ಗರೇಟ್ ವೈಟ್. ಉದ್ಯೋಗಗಳನ್ನು ತುಂಬುವ ಕೆಲಸದಲ್ಲಿ ಇವರ ಗ್ರಾಫಾಲಜಿಯೇ ಯೂರೋಪ್‍ನಲ್ಲಿ ಮಾನದಂಡ!
ಲಂಡನ್‍ನ ಬ್ಯಾಂಕಿಂಗ್ ಗುಂಪು ಬಟರ್‍ಫೀಲ್ಡ್ ಸಾರ್ವಜನಿಕವಾಗಿಯೇ ತಾನು ಗ್ರಾಫಾಲಜಿಯನ್ನು ಆಧರಿಸಿ ನೌಕರಿ ನೀಡುತ್ತಿರುವುದಾಗಿ ಘೋಷಿಸಿದೆ. ಅದರ ಮ್ಯಾನೇಜಿಂಗ್ ಡೈರೆಕ್ಟರ್ ಪೌಲ್ ಟುರ್ಟಲ್ ಹೇಳುವಂತೆ, ಈ ಸಾಧ್ಯತೆಯಿಂದ ಒಳ್ಳೆಯ ಪ್ರತಿಭೆಗಳನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತಿದೆ.
ಉದ್ಯೋಗಾಕಾಂಕ್ಷಿಗಳು ಕಳಿಸುವ ಇ ಮೇಲ್‍ಗಳು ಅರ್ಧ ಸತ್ಯವನ್ನಷ್ಟೇ ಹೇಳುತ್ತವೆ. ಪ್ರತಿ ಮನುಷ್ಯ ತನ್ನ ಕುರಿತು ಅತಿರಂಜಿತಗೊಳಿಸಿಕೊಳ್ಳುವುದು ಸಹಜ. ಹೋಗಲಿ, ಸಂದರ್ಶನದ ಮೇಲೆ ಆತನನ್ನು ಅಧ್ಯಯನ ಮಾಡುತ್ತಾರೆಂದರೂ ಒಟ್ಟಾರೆ ಮನುಷ್ಯ ಕಂಪನಿಯ ಅಗತ್ಯವನ್ನು ಅರಿತು ನಟಿಸಿಬಿಡಬಹುದು. ಪ್ಸಿಕೋ ಮೆಟ್ರಿಕ್ ಸಮೀಕ್ಷೆಗಳು ವಿಫಲವಾಗುತ್ತಿವೆ ಎಂದು ಕಂಪನಿಗಳೇ ಒಪ್ಪಿಕೊಳ್ಳುತ್ತಿರುವ ವೇಳೆಯಲ್ಲಿ ಗ್ರಾಫಾಲಜಿಗೆ ಮಹತ್ವ ಬಂದಿದೆ.
ಪ್ರಸ್ತುತ ಬಹುಪಾಲು ಕಂಪನಿಗಳು ತಾವು ಗ್ರಾಫಾಲಜಿಯನ್ನು ಆಯ್ಕೆಯ ಆಧಾರವಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ ಎಂಬುದನ್ನು ಘೋಷಿಸುತ್ತಿಲ್ಲ. ಗ್ರಾಫಾಲಜಿಯ ಬಗ್ಗೆ ಪೂರ್ಣ ನಂಬಿಕೆ ಬಾರದಿರುವುದೇ ಇದಕ್ಕೆ ಕಾರಣ. ಲಂಡನ್‍ನ ಗ್ರಾಫಾಲಜಿ ಇನ್ಸಿಟ್ಯೂಷನ್ ಮಾತ್ರ ಅಭ್ಯರ್ಥಿಯ ಒಪ್ಪಿಗೆ ಪಡೆದೇ ಪರೀಕ್ಷಿಸುವುದು ನೈತಿಕ ಧರ್ಮ ಎನ್ನುತ್ತದೆ.
ಸ್ವಾರಸ್ಯವೆಂದರೆ, ಕೆಟ್ಟ ಕೈ ಬರಹದವ ಎಂದ ಕೂಡಲೇ ಆ ವ್ಯಕ್ತಿ ಸೋಮಾರಿ, ಕಳಪೆ ಎಂದುಕೊಳ್ಳುವುದು ತಪ್ಪು. ಅದು ಬುದ್ಧಿವಂತಿಕೆ ಹಾಗೂ ಉತ್ಸಾಹಗಳ ಪ್ರತಿಫಲನವಾಗಿರಬಹುದು! ಗಮನಿಸಬೇಕಾದುದು ಅಕ್ಷರಗಳಲ್ಲ, ಬರಹದ ಶೈಲಿ. ಸಾಮಾನ್ಯವಾಗಿ ಗಮನಿಸಿದಂತೆ, ಒಂದು ಮನೆಯ ಹಲವರ ಕೈ ಬರಹಗಳಲ್ಲಿ ದಟ್ಟ ಹೋಲಿಕೆಗಳಿರುತ್ತವೆ. ಅವರ ಸ್ವಭಾವಗಳೂ ಒಂದೇ ಲಯದಲ್ಲಿ ಇರುತ್ತವೆಂದ ಮೇಲೆ ಗ್ರಾಫಾಲಜಿ ಸತ್ಯವನ್ನು ಹೇಳುತ್ತದಲ್ಲವೇ?
ಭಾರತೀಯ ಕಂಪನಿಗಳು ತಾವು ಗ್ರಾಫಾಲಜಿಯನ್ನು ಬಳಸುತ್ತಿದ್ದೇವೆಯೇ ಎಂಬ ಬಗ್ಗೆ ಪಾರದರ್ಶಕವಾಗಿಲ್ಲ. ಪ್ರತಿ ಕಂಪನಿ ನಡೆಸುವ ಲಿಖಿತ ಪರೀಕ್ಷೆಗಳ ಹಿಂದೆ ಇಂತದೊಂದು ಸಾಧ್ಯತೆಯಂತೂ ಇದ್ದೇ ಇದೆ. ಉದ್ಯೋಗ ಭರ್ತಿ ಪ್ರಕ್ರಿಯೆಯ ದುಬಾರಿತನದಿಂದಾಗಿಯೇ ಹೆಚ್ಚು ದಕ್ಷ ಆಯ್ಕೆಗಳನ್ನು ಮಾಡಲು ಈಗ ಗ್ರಾಫಾಲಜಿಯನ್ನು ಆಧರಿಸುವುದು ಅನಿವಾರ್ಯ. ಗ್ರಾಫಾಲಜಿ ಒಂದು ಹೆಚ್ಚಿನ ಅಳತೆಗೋಲಾಗಿ ಉದ್ಯೋಗದಾತರಿಗೆ ಸಿಕ್ಕಿದೆ ಎಂಬ ಮಾತಿದೆ. ಅಷ್ಟಕ್ಕೂ ಕೈ ಬರಹದಲ್ಲಿ ವಂಚನೆ ಸಾಧ್ಯವಿಲ್ಲ!
ಕೈ ಬರಹದ ಮೊದಲ ಕೆಲವು ಸಾಲುಗಳವರೆಗೆ ಬೇರೆಯವರನ್ನು ದಿಕ್ಕು ತಪ್ಪಿಸುವಂತೆ ಬರೆಯಬಹುದಂತೆ. ಆದರೆ ಆ ಅಭ್ಯಥಿಯ ಆಸಕ್ತಿಯ ವಿಷಯದಲ್ಲಿ ಹೆಚ್ಚು ಬರೆಯಲು ಹೇಳಿದರೆ ನಿಜ ಬರಹ ದಕ್ಕುತ್ತದೆ ಎನ್ನುತ್ತಾರೆ ಮಿಸ್ ವೈಟ್.
ಕೈ ಬರಹಗಳು ವ್ಯಕ್ತಿತ್ವದ ಬಗ್ಗೆ ಹೇಳುತ್ತವೆ ಎನ್ನುವುದರ ಬೆನ್ನಲ್ಲೇ ಕಾಪಿ ಬರಹಗಳಿಂದ ಏನು ಉಪಯೋಗ ಎಂಬ ಪ್ರಶ್ನೆ ಮೂಡುವುದು ಸಹಜ. ಹೇಗೆ ವ್ಯಕ್ತಿತ್ವದ ಓರೆ ಕೋರೆಗಳನ್ನು ತಿದ್ದಿಕೊಳ್ಳಬಹುದೋ, ಆ ಯತ್ನ ಕಾಪಿ ಬರಹದಲ್ಲಿ ಎದ್ದು ಕಾಣಬಹುದು. ವಾಸ್ತವವಾಗಿ, ಕಾಪಿ ಬರಹ ಒಂದು ಧ್ಯಾನ. ಆ ಕೆಲಸಕ್ಕೆ ಅತಿ ಹೆಚ್ಚಿನ ತಾಳ್ಮೆ, ಶ್ರಮ ಬೇಕು. ಅಂದಮೇಲೆ ಬದಲಾಗುವ ಕೈ ಬರಹ ಮಾರ್ಪಾಡಾಗುವ ಸ್ವಭಾವಕ್ಕೂ ಸಾಕ್ಷಿ ಹೇಳುತ್ತದೆ ಎಂಬುದು ದೃಢಪಡುತ್ತದೆ.
ಕೈ ಬರಹ ಮನುಷ್ಯನ ಒಳ ಭಾವಗಳನ್ನು ಹೊರಗೆಡಹುತ್ತದೆ. ಹಾಗಾಗಿ ನಿಮ್ಮ ಕೈ ಬರಹವನ್ನು ನಿರ್ಲಕ್ಷಿಸಬೇಡಿ. ಅಷ್ಟೇಕೆ, ನಿಮಗೆ ಒಂದು ಒಳ್ಳೆಯ ಉದ್ಯೋಗ ಸಿಕ್ಕಲೂ ಇದೇ ಕಾರಣ ಆಗಬಹುದು. ಶುರು ಹಚ್ಚಿ ಕಾಪಿ ಪುಸ್ತಕ ಬರೆಯಲು!!
– ಮಾ.ವೆಂ.ಸ.ಪ್ರಸಾದ್
ಬೇಸಿಗೆ ಶಿಬಿರಗಳೆಂಬ ಭ್ರಮಾ ಲೋಕ
ಒಂದು ಹಂತದ ಪ್ರಾಥಮಿಕ ಮಾಧ್ಯಮಿಕ ಪರೀಕ್ಷೆಗಳೆಲ್ಲಾ ಮುಗಿದು ವಿದ್ಯಾರ್ಥಿಗಳೆಲ್ಲಾ ವರ್ಷದ ಓದಿನ ಚಿಂತೆ ಬಿಟ್ಟು ಹೋಂವರ್ಕ್ ಚಿಂತೆ ಬಿಟ್ಟು ಯೂನಿಫಾರಂ ಚಿಂತೆ ಬಿಟ್ಟು ಖುಷಿಯಿಂದ ಮನೆ ತುಂಬಾ ಹಿತ್ತಲು ತುಂಬಾ ಅಥವಾ ಹಳ್ಳಿಗಳಲ್ಲಿ ಯಾ ಪಟ್ಟಣಗಳಲ್ಲಿರುವ ಅಜ್ಜ-ಅಜ್ಜಿ ಅಥವಾ ಹತ್ತಿರದ ಸಂಬಂಧಿಕರ ಮನೆಗಳಿಗೆ ಓಡಾಡಿ ಬರುವ ಕಾಲವಿದು ಎಂದು ಯಾರಾದರೂ ಭಾವಿಸಿದರೆ ತಪ್ಪಾಗುತ್ತದೆ. ಎಲ್.ಕೆ.ಜಿ. ಯಿಂದ ಹಿಡಿದು ಪಿಯೂಸಿ ವರೆಗಿನ ಮಕ್ಕಳಿಗೆ ಪರೀಕ್ಷೆಗಳು ಮುಗಿದರೂ ಪಾಠದ ಕಾಟ ತಪ್ಪುವುದಿಲ್ಲ. ಆಟೋಟಕ್ಕೆ ಅವಕಾಶಗಳೇ ಇಲ್ಲದಾಗಿದೆ.
ಪ್ರತಿಯೊಬ್ಬ ಪಾಲಕರಿಗೂ ಅವರದ್ದೇ ಆದ ಚಿಂತೆ-ಕಾರಣಗಳು. ನೌಕರಿಗೆ ಹೋಗುವ ದಂಪತಿಗಳಿಗೆ ಹಗಲು ಹೊತ್ತಿನಲ್ಲಿ ತಮ್ಮ ಮಕ್ಕಳನ್ನು ಎಲ್ಲಿ ಬಿಡಬೇಕೆಂಬ ಚಿಂತೆ. ಕೆಲವರಿಗೆ ತಮ್ಮ ಮಕ್ಕಳು ಮುಂದಿನ ತರಗತಿಗಳಿಗೆ ಈಗಲೇ ಸಿದ್ಧರಾಗಿರಬೇಕೆಂಬ ಚಿಂತೆ. ಇನ್ನು ಕೆಲವರಿಗೆ ತಮ್ಮ ಮಕ್ಕಳು ಒಂದಿಷ್ಟು ಕಲೆ, ಸಾಹಿತ್ಯ, ಆಟೋಟಗಳನ್ನು ಪಡೆಯಲಿ ಎಂಬ ಕಳಕಳಿ. ಹೀಗೆ ಹಲವರ ಹಲವು ಬಗೆಯಾದ ತುರ್ತುಗಳನ್ನು ನಗದೀಕರಸಿಕೊಳ್ಳಲು ಇಂದು ಎಲ್ಲೆಂದರಲ್ಲಿ ಬಗೆ ಬಗೆಯ ಬೇಸಿಗೆ ಶಿಬಿರಗಳು ಹುಟ್ಟಿಕೊಳ್ಳುತ್ತಿದೆ.
ಚಿಕ್ಕ ಚಿಕ್ಕ ಮಕ್ಕಳಿಗೆ ಹಾಡು ನೃತ್ಯ ಕಲಿಸುತ್ತೇವೆ, ಚಿತ್ರಕಲೆ ಕಲಿಸುತ್ತೇವೆ, ಬೇರೆ ಬೇರೆ ವಿಷಯ ತಜ್ಞರಿಂದ ಅವರಿಗೆ ತಿಳುವಳಿಕೆ ಮಾರ್ಗದರ್ಶನ ನೀಡುತ್ತೇವೆ, ಇಂತಿಷ್ಟು ದಿನಗಳ ಶಿಬಿರ. ಇಂತಿಷ್ಟು ಹಣ. ಇತ್ಯಾದಿ ಆಕರ್ಷಕ ಜಾಹೀರಾತುಗಳು, ಕರಪತ್ರಗಳು, ಜನರನ್ನು ಆಕರ್ಷಿಸುತ್ತಿವೆ. ಜನಗಳಿಗೋ ಏನಾದರೂ ಕಲಿಯಲಿ ಹಾದಿ ಬೀದಿ ಸುತ್ತದಿರಲಿ ಮೂರೂ ಹೊತ್ತು ಟಿ.ವಿ. ಮುಂದೆ ಕೂತಿರುವುದು ತಪ್ಪಲಿ. ಅದಕ್ಕಿಂತ ಹೆಚ್ಚಾಗಿ ಬೆಳಿಗ್ಗೆಯಿಂದ ಸಂಜೆ ತನಕ ಮಕ್ಕಳು ಸುರಕ್ಷಿತರಾಗಿ ಒಂದೆಡೆ ಇರುವುದು ಮುಖ್ಯವಾಗಿದೆ.
ಬದಲಾಗುತ್ತಿರುವ ವರ್ತಮಾನದ ಅಗತ್ಯ ಇದಾಗಿರಬಹುದು. ಇಂಥ ಶಿಬಿರಗಳಿಂದ ಮಕ್ಕಳು ಜ್ಞಾನ ಸಂಪಾದನೆ ಕೌಶಲ್ಯ ಸಂಪಾದನೆ ಮಾಡಿಕೊಳ್ಳಬಹುದು. ಆದರೆ ಇಂಥ ಸಂಪಾದನೆಗಳ ಕಾರಣದಿಂದಾಗಿ ಕಳೆದುಕೊಳ್ಳುತ್ತಿರುವುದರ ಕುರಿತು ಕಲ್ಪನೆ ಏನಾದರೂ ನಮಗಿದೆಯೇ?.
ಚಿಕ್ಕ ಮಕ್ಕಳು ಬೇಸಿಗೆ ರಜೆಯೆಂದಾಕ್ಷಣ ಖುಷಿಯಿಂದ ಅಜ್ಜ ಅಜ್ಜಿಯ ಅಥವಾ ನೆಂಟರಿಷ್ಟರ ಮನೆಗಳಿಗೆ ತೆರಳುವುದು ಹಳ್ಳಿಗಳಿಗೆ ತೆರಳಿದ ಮಕ್ಕಳು ಅಲ್ಲಿನ ತೋಟ ಗದ್ದೆ ಬೆಟ್ಟ, ಕಾಡು ಮೇಡುಗಳನ್ನು ಸುತ್ತುವುದು ಹೊಳೆ ಹಳ್ಳಗಳಲ್ಲಿ ಸಂಭ್ರಮಿಸುವುದು. ಹಾಗಲ್ಲದೇ ನೆಂಟರಿಷ್ಟರ ಮನೆಗಳಲ್ಲಿ ಜರುಗುವ ಮದುವೆ ಮುಂಜಿ ಇತ್ಯಾದಿ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು. ಹಿಂದೆ ಸಾಮಾನ್ಯ ಸಂಗತಿಯಾಗಿತ್ತು. ಆದರೆ ಇಂದಿನ ಮಕ್ಕಳಿಗೆ ಇವುಗಳಿಗೆಲ್ಲಾ ಬಿಡುವಿಲ್ಲ. ಬೇಸಿಗೆ ಶಿಬಿರಗಳಲ್ಲಿ ಪಾಲ್ಗೊಳ್ಳುವುದೇ ದೊಡ್ಡ ಸಾಧನೆಯಾಗುತ್ತಿದೆ. ಖುದ್ದಾಗಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಚಿತ್ರಗಳಲ್ಲಿ ತೋರಿಸಿದ್ದನ್ನೇ ಅನುಭವ ಎಂದುಕೊಳ್ಳುವ ಹುಂಬತನವನ್ನು ಬೆಳೆಸುತ್ತಿರುವಂತೆ ಭಾಸವಾಗುತ್ತದೆ. ಸಹಜವಾಗಿ ಅರಳುವುದಕ್ಕೇ ಬದಲಾಗಿ ನಿರ್ದಿಷ್ಟ ಚಪ್ಪರಹಾಕಿ ಬೆಳೆಸುವ ಬಳ್ಳಿಯಂತೆ ಮಕ್ಕಳಾಗುತ್ತಿದ್ದಾರೆ. ನಮ್ಮ ಬೌದ್ಧಿಕ ಜಗತ್ತಿಗೆ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ನಾವು ನಮ್ಮ ಭಾವ ಪ್ರಪಂಚವನ್ನೇ ಮರೆಯುತ್ತಿದ್ದೇವೆ. ಹೀಗಾದಾಗ ಮಕ್ಕಳು ಮನುಷ್ಯರಾಗಿ ಬೆಳೆಯುವುದು ಕಷ್ಟ. ಒಂದು ಬಗೆಯಾದ ಯಂತ್ರಗಳಾಗುತ್ತ ಪರಸ್ಪರರ ಸಂಬಂಧಗಳ ಕೊಂಡಿಯೇ ದಿನಕಳೆದಂತೆ ಕಳಚಿ ಹೋಗುತ್ತಿದೆ. ಹಾಗೇ ರಜಾ ಅವಧಿ ಕೂಡಾ ಕಳೆದು ಮತ್ತೆ ಮೊದಲಿನ ಅದೇ ಶಾಲಾ ಕಾಲೇಜುಗಳ ಪಾಠ ಪ್ರವಚನಕ್ಕೆ ತಿರುಗಿ ಹೋಗುವಂತಾಗುತ್ತದೆ. ಹಾಗಾದರೆ ನೀಡುವ ರಜೆ ಮಕ್ಕಳನ್ನು ಶಿಬಿರಗಳಿಗೆ ಕಳಿಸಲು ಮಾಡಿಕೊಟ್ಟ ಬಿಡುವೇ ಅನುಮಾನ ಹುಟ್ಟುತ್ತದೆ.
ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆಗಳು ಹಾಡುಗಳೆಲ್ಲಾ ಇಂದು ಕ್ಯಾಸೆಟ್ ಮುಖಾಂತರ ಮಕ್ಕಳನ್ನು ತಲುಪುವಂತಾಗಿದೆ. ಮಣ್ಣನ್ನು ಮಕ್ಕಳು ಕೈಯಿಂದ ಅಥವಾ ಬರಿಗಾಲಿನಿಂದಲೂ ಮುಟ್ಟುವುದಿಲ್ಲ. ಎಲ್ಲಾ ಬಗೆಯ ನಾಜೂಕನ್ನು, ಶಿಸ್ತು-ಸಂಸ್ಕøತಿಯ ಹೆಸರಿನಲ್ಲಿ ಕಲಿಸುತ್ತಾ ಅವರಲ್ಲಿನ ನೈಜತೆಯನ್ನು, ಅಪ್ಪಟ ದೇಸೀ ಗುಣಗಳನ್ನು ನಾಶಪಡಿಸುತ್ತಾ, ಬಂದು ಮುಂದೆ ದೇಶದ ತುಂಬಾ ಇರುವ ಮಕ್ಕಳೆಲ್ಲಾ ಒಂದೇ ಅಚ್ಚಿನಲ್ಲಿ ಎರಕ ಹೊಯ್ದು ಬಂದಂತೆ ಕಾಣ ಹತ್ತಿದರೂ ಆಶ್ಚರ್ಯವೇನಿಲ್ಲ.
ಬೇಸಿಗೆ ಶಿಬಿರಗಳನ್ನು ಏರ್ಪಡಿಸುವ ವ್ಯಕ್ತಿ ಅಥವಾ ಸಂಸ್ಥೆಗಳು ಎಲ್ಲವೂ ಮಕ್ಕಳಿಗೆ ಅನುಕೂಲವಾಗಲೆಂಬ ಉದಾತ್ತ ಉದ್ದೇಶವನ್ನಷ್ಟೇ ಹೊಂದಿರುತ್ತವೆಂದು ಭಾವಿಸುವುದು ತಪ್ಪು. ಬಹಳಷ್ಟು ಸಂದರ್ಭಗಳಲ್ಲಿ ಇಂಥ ಶಿಬಿರಗಳನ್ನು ಏರ್ಪಡಿಸುವ ಹಿಂದೆ ಹಣಗಳಿಸುವ ಉದ್ದೇಶ ಕೂಡಾ ಇರುವುದನ್ನು ಅಲ್ಲಗೆಳೆಯಲಾಗುಯವುದಿಲ್ಲ. ದೇವರು ಬಾಳಲಿ ಎಂದು ಪುಷ್ಟಾರ್ಚನೆ ಮಾಡುವುದಕ್ಕೆ ಬದಲಾಗಿ ನಾವು ಬಾಳಲಿ ಎಂದು ಪುಷ್ಪಾರ್ಜನೆ ಮಾಡುತ್ತೇವೆ ಎಂಬುದೇ ಹೆಚ್ಚು ಸರಿ. ಹೇಳಿಕೇಳಿ ಬೇಸಿಗೆಯಲ್ಲಿ ಒಳ್ಳೆಯ ನೀರಿಗೂ ತತ್ವಾರ. ನೆರಳಿಗೂ ತತ್ವಾರ. ಇಂಥ ಹೊತ್ತಲ್ಲಿ ಏರ್ಪಡಿಸುವ ಶಿಬಿರಗಳಲ್ಲಿ ಶುದ್ಧ ನೀರು ಸ್ವಚ್ಛ ಪರಿಸರ ಶುಚಿಯಾದ ರುಚಿಯಾದ ಆಹಾರ ಮಗುವಿನ ಬೆಳವಣಿಗೆಗೆ ಅಗತ್ಯ. ಆದರೆ ಇಂಥ ಅಗತ್ಯಗಳ ಪೂರೈಕೆ ಶಿಬಿರಗಳಲ್ಲಾಗುತ್ತಿದೆಯೇ ಎಂದು ಪಾಲಕರಾದವರು ಪರಿಶೀಲಿಸುವುದು ಕೂಡಾ ಅಗತ್ಯ. ಹಣ ಕೊಡುವುದು ಎಷ್ಟು ಮುಖ್ಯವೋ, ಕೊಟ್ಟ ಹಣಕ್ಕೆ ತಕ್ಕ ಪ್ರತಿಫಲದ ಅಪೇಕ್ಷೆ ಕೂಡಾ ಅಷ್ಟೇ ಮುಖ್ಯ. ಅಂಥ ಪ್ರತಿಫಲ ಸಿಗುವುದರ ಕುರಿತು ಖಾತ್ರಿ ಪಡಿಸಿಕೊಳ್ಳಬೇಕಾದ್ದೂ ನಮ್ಮ ಜವಾಬ್ದಾರಿ. ಹಾಗಲ್ಲದೇ ಹೋದಲ್ಲಿ ಬೇಸಿಗೆ ಶಿಬಿರಗಳು ಬೇಕಾಬಿಟ್ಟಿ ಶೋಷಣೆಯ ಕೇಂದ್ರಗಳಾಗಬಹುದು. ನಡೆಸುವ ವ್ಯಕ್ತಿ ಮತ್ತು ಸಂಸ್ಥೆಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ, ಅವುಗಳಿಗೆ ಮಕ್ಕಳು ತೆರಳಿದಾಗ ಅಪಾಯಗಳಾಗುವುದು ವಿರಳ.
ಪಾಲಕರಿಗೆ ಒತ್ತಡಗಳಿರುವುದು ಸಹಜ. ಹಾಗಂತ ತಮ್ಮ ಒತ್ತಡಗಳಿಗೆ ಉತ್ತರವಾಗಿ ಬೇಸಿಗೆ ಶಿಬಿರಗಳನ್ನು ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಆತ್ಮಾವಲೋಕನ ಮಾಡಿಕೊಳ್ಳಬೇಕಾದದ್ದೂ ಅಗತ್ಯ. ಪಾಲಕರ ಒತ್ತಡ ಮಕ್ಕಳಿಗೆ ಹೊರೆಯಾಗುವುದು ಸಾಧುವಾದ ಮಾರ್ಗವಲ್ಲ. ಚಿಕ್ಕ ಚಿಕ್ಕ ಮಕ್ಕಳ ಉತ್ಸಾಹ ನಗುವನ್ನು ಬತ್ತಿಸುವುದು ಸಲ್ಲದು. ಅದೇ ರಜಾ ಸಂಭ್ರಮವನ್ನು ಅನುಭವಿಸುವ ಅನುಕೂಲತೆಯಿರುವ ವ್ಯವಸ್ಥೆ ದೊರಕಿದರೆ ಸಂತೋಷ.
ಚಿಕ್ಕ ಮಕ್ಕಳಾದಾಗಿನಿಂದ ಇಂಥ ಶಿಬಿರಗಳಿಗೆ ತೆರಳಿ ತೆರಳಿ ಅಭ್ಯಾಸವಾದ ಮಕ್ಕಳು ಪ್ರತೀ ವರ್ಷ ಅದನ್ನು ಒಂದು ವೃತ್ತದಂತೆ ಆಚರಿಸಲು ತೊಡಗುವ ಪರಿ ಬೆರಗನ್ನಷ್ಟೇ ಅಲ್ಲ ಗಾಬರಿಯನ್ನು ಹುಟ್ಟಿಸುವಂತಹದ್ದು. ಇವರು ಬೆಳೆದಂತೆ ಎಸ್.ಎಸ್.ಎಲ್.ಸಿ. ಮತ್ತು ಪಿಯೂಸಿ ಹಂತಕ್ಕೆ ಬಂದಾಗ ಬೇಸಿಗೆಯ ಶಿಬಿರಗಳ ಬದಲಾಗಿ ಬೇರೆ ಬೇರೆ ರೀತಿಯ ತರಬೇತಿ ಕೇಂದ್ರಗಳಿಗೆ ತೆರಳಲು ತೊಡಗುತ್ತಿದ್ದಾರೆ. ಬಗೆ ಬಗೆಯ ಕೋರ್ಸ್ ಸೆಂಟರ್‍ಗಳು ಇದರ ಲಾಭ ಪಡೆಯುತ್ತಿವೆ. ಹೊಸ ಹೊಸ ಬಗೆಯ ಬಣ್ಣ ಬಣ್ಣದ ಜಾಹೀರಾತುಗಳು ಭಿತ್ತಿ ಪತ್ರಗಳು ಪತ್ರಿಕೆಗಳೊಳಗೆ ಕರ ಪತ್ರಗಳು ದಿನ ನಿತ್ಯ ಎಲ್ಲೆಂದರಲ್ಲಿ ರಾರಾಜಿಸುತ್ತಿವೆ. ಇದಕ್ಕೆಲ್ಲಾ ವೆಚ್ಚ ಮಾಡುವ ಹಣ ಮರಳಿ ಬರಬೇಕೆಂದೇ ವಿನ: ಕಳೆದುಕೊಳ್ಳಲೆಂದಲ್ಲ. ಎಂಬ ಸತ್ಯ ಅರ್ಥವಾದರೆ ಸಾಕು.
ನಮ್ಮ ಮಕ್ಕಳು ಬುಧ್ಧಿವಂತರಾಗಬೇಕು. ವಿವಿಧ ರೀತಿಯ ಕಲಾ ಪ್ರಕಾರಗಳಲ್ಲಿ ಪ್ರಾಥಮಿಕ ಪ್ರಜ್ಞೆಯನ್ನಾದರೂ ಹೊಂದಿರಬೇಕು ಎಂದು ಬಯಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಅಂಥ ಪ್ರಯತ್ನಗಳನ್ನು ಒತ್ತಾಯದಿಂದಾಗಲೀ ಒತ್ತಡದಿಂದಾಗಲೀ ಮಾಡುವುದು ಸರಿಯಾಗಲಿಕ್ಕಿಲ್ಲ. ಮಕ್ಕಳು ಕೂಡಾ ಜೀವಂತ ವ್ಯಕ್ತಿಗಳು. ಅವುಗಳಿಗೆ ಕೂಡಾ ಅವುಗಳದ್ದೇ ಆದ ಭಾವ ಪ್ರಪಂಚವೊಂದಿದೆ. ಅದನ್ನು ರಕ್ಷಿಸುವುದು ಕೂಡಾ ನಮ್ಮ ಜವಾಬ್ದಾರಿ. ಅನಿವಾರ್ಯವಾದಲ್ಲಿ ಮಾತ್ರ ಶಿಬಿರಗಳಿರಲಿ ಇಲ್ಲವಾದಲ್ಲಿ ಮಕ್ಕಳು ಅವರಷ್ಟಕ್ಕೇ ಅವರು ಅರಳಲಿ. ಅವರವರ ಅಜ್ಜ-ಅಜ್ಜಿ ನೆಂಟರಿಷ್ಟರ ಮನೆಗೆ ತೆರಳಲಿ. ಅವರ ಮುಖದಲ್ಲೂ ಒಂದಿಷ್ಟು ಮಂದಹಾಸ ಮೂಡಲಿ.
ರವೀಂದ್ರ ಭಟ್ ಕುಳಿಬೀಡು.
ತುಮ್ಮನಹಳ್ಳಿಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಸೌಂದರ್ಯ 600 ಮೀಟರ್ ಓಟದಲ್ಲಿ ಪ್ರಥಮ ಮತ್ತು 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದರೆ, ಎಂ.ಡಿ.ಗಿರೀಶ್ 600 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ಇಬ್ಬರೂ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಿರಿ ಧಾನ್ಯಗಳ ಕೃಷಿಯ ಖುಷಿ
‘ಆರೋಗ್ಯಕ್ಕಾಗಿ ಆಹಾರ, ಆಹಾರಕ್ಕಾಗಿ ಕೃಷಿ’ ಎಂಬ ಧ್ಯೇಯದಿಂದ ಕೃಷಿ ಮಾಡುವವರು ವಿರಳ. ಈ ಉದ್ದೇಶದಿಂದ ಈಗ ವಿರಳವಾಗಿರುವ ಅತ್ಯಂತ ಪೌಷ್ಠಿಕಾಂಶಗಳಿರುವ ಸಿರಿ ಧಾನ್ಯಗಳನ್ನು ಬೆಳೆಯುತ್ತಾ ಇತರರಿಗೂ ಬೆಳೆಯಲು ಪ್ರೇರೇಪಿಸುತ್ತಿದ್ದಾರೆ ತಾಲ್ಲೂಕಿನ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ ರೆಡ್ಡಿ,
ಕೃಷಿ ವಿಶ್ವವಿದ್ಯಾಲಯದ ತೃಣಧಾನ್ಯ ವಿಭಾಗದಿಂದ ಹಾಗೂ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಸ್ವಲ್ಪ ಸ್ವಲ್ಪ ತಂದ ತೃಣ ಧಾನ್ಯಗಳನ್ನು ಕಳೆದ ಮೂರು ವರ್ಷಗಳಿಂದ ಬೆಳೆಯುತ್ತಾ ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆಯಿಂದ ಇವರಿಗೆ ಪ್ರಮಾಣ ಪತ್ರವೂ ಲಭಿಸಿದೆ.
‘ಕಿರು ಧಾನ್ಯಗಳ ಕೃಷಿ – ಕೇವಲ ಸಾಂಪ್ರದಾಯಕ ಕೃಷಿಯಷ್ಟೇ ಅಲ್ಲ. ಅದೊಂದು ವಿಶಿಷ್ಟ ಕೃಷಿ ಪದ್ಧತಿ. ಈ ಪದ್ಧತಿಯಲ್ಲಿ ಆರರಿಂದ ವಿವಿಧ ಬೆಳೆಗಳನ್ನು ಏಕಕಾಲದಲ್ಲಿ ಒಂದೇ ಪ್ರದೇಶದಲ್ಲಿ ಬಿತ್ತಿ ಬೆಳೆಯಲಾಗುತ್ತದೆ. ಕಿರು ಧಾನ್ಯಗಳು ಅತ್ಯಂತ ಕಡಿಮೆ ನೀರಿನಲ್ಲಿ ಬೆಳೆಯುತ್ತವೆ. ಈ ಬೆಳೆಗಳಿಂದ ಭೂಮಿಯೂ ಸುರಕ್ಷಿತ ಅದನ್ನು ಸೇವಿಸುವರೂ ಆರೋಗ್ಯವಂತರಿರುತ್ತಾರೆ. ಆದರೆ ನಮ್ಮಲ್ಲಿ ರಾಗಿಗೆ ಮಾತ್ರ ಪ್ರಾಧಾನ್ಯತೆ ನೀಡಿ ಇತರ ಕಿರುಧಾನ್ಯಗಳನ್ನು ಮರೆತಿದ್ದಾರೆ’ ಎನ್ನುತ್ತಾರೆ ಸಾವಯವ ಕೃಷಿಕ ಬೋದಗೂರು ವೆಂಕಟಸ್ವಾಮಿ ರೆಡ್ಡಿ,
ನವಣೆಯಲ್ಲಿ 12.3 ಗ್ರಾಂ ಪೋಷಕಾಂಶ, 8 ಗ್ರಾಂ ನಾರಿನಂಶವಿರುತ್ತದೆ. ಹಾಗಾಗಿ ಅಕ್ಕಿಗಿಂತ ಹೆಚ್ಚು ನವಣೆ ಬೇಗ ಜೀರ್ಣವಾಗುತ್ತದೆ. ಸಾಮೆ ಮತ್ತು ನವಣೆ ಅಕ್ಕಿಯಲ್ಲಿನ ಪೋಷಕಾಂಶಗಳು ಮತ್ತಾವುದೇ ಆಹಾರ ಬೆಳೆಗಳಲ್ಲೂ ಇಲ್ಲ. ಕಿರುಧಾನ್ಯಗಳಲ್ಲಿ ಎಲ್ಲ ಪೋಷಕಾಂಶಗಳನ್ನು ಒಟ್ಟಿಗೆ ನೀಡುವ ತಾಕತ್ತಿದೆ. ಹಿಂದೆ ಈ ಧಾನ್ಯಗಳಿಂದ ಭೀಮ ಬಲ ಬರುತ್ತದೆಂದು ನಂಬಿಕೆಯಿಂದ ದೇಹಧಾರ್ಡ್ಯ ಪಟುಗಳು ಕಿರುಧಾನ್ಯಗಳನ್ನು ಹೆಚ್ಚಾಗಿ ಬಳಸುತ್ತಿದ್ದರು ಮತ್ತು ಎಳೆ ಮಕ್ಕಳಿಗೆ ಇವುಗಳ ಮಿಶ್ರಣದ ಪುಡಿಯ ಪೇಯವನ್ನು ನೀಡುತ್ತಿದ್ದರು’ ಎಂದು ಅವರು ವಿವರಿಸಿದರು.
‘ರೈತ ಪರವಾಗಿದ್ದ ಕಿರು ಧಾನ್ಯಗಳು ಹಸಿರು ಕ್ರಾಂತಿಯ ಹೆಸರಲ್ಲಿ, ಹೆಚ್ಚು ಬೆಳೆಯಬೇಕೆಂಬ ಆತುರದಲ್ಲಿ ರೈತರ ಹೊಲಗಳಿಂದ ನಾಪತ್ತೆಯಾದವು’ ಎನ್ನುತ್ತಾರೆ ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಾಳ ರಾಮಾಂಜಿನಪ್ಪ.
‘ಕ್ಷೀಣಿಸುತ್ತಿರುವ ಕಿರು ಧಾನ್ಯಗಳಿಗೆ ಮತ್ತೆ ಜೀವತುಂಬಲೆಂದೇ ‘ಭಾರತೀಯ ಕಿರು ಧಾನ್ಯಗಳ ಜಾಲ’ ಅಸ್ತಿತ್ವಕ್ಕೆ ಬಂದಿದೆ. ಕಿರು ಧಾನ್ಯಗಳ ಮಹತ್ವದ ಪ್ರಚಾರ, ಅವುಗಳ ಸಂಸ್ಕರಣೆ, ವೈವಿಧ್ಯಮಯ ಖಾದ್ಯಗಳ ತಯಾರಿಸುವ ಮೂಲಕ ಆಹಾರ ವೈವಿಧ್ಯವನ್ನು ಅದು ಪರಿಚಯಿಸುತ್ತಿದೆ. ಕರ್ನಾಟಕದಲ್ಲಿ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗ ಈ ಆಂದೋಲನವನ್ನು ಮುನ್ನೆಡೆಸುತ್ತಿದೆ. ಭವಿಷ್ಯದ ಆಹಾರ ಬೆಳೆಗಳೆಂದೇ ಭಾವಿಸಿರುವ ಈ ‘ಕಿರು ಧಾನ್ಯಗಳ’ ಪುನಶ್ಚೇತನಕ್ಕೆ ರೈತರು ಮುಂದಾಗಬೇಕು’ ಎಂದು ಅವರು ತಿಳಿಸಿದರು.
–ಡಿ.ಜಿ.ಮಲ್ಲಿಕಾರ್ಜುನ
ಟ್ರಾಕ್ಟರ್ ರ್ಯಾಲಿಗೆ ಮಳೆಯಲ್ಲೂ ವ್ಯಾಪಕ ಬೆಂಬಲ
ಬಯಲುಸೀಮೆ ಪ್ರದೇಶಕ್ಕೆ ನೀರಾವರಿ ತಜ್ಞ ದಿ.ಪರಮಶಿವಯ್ಯ ಅವರ ವರದಿಯಂತೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರದ ಚದಲಪುರ ಕ್ರಾಸ್ನಲ್ಲಿ ನಡೆಯುತ್ತಿರುವ ಅನಿರ್ದಿಷ್ಠಾವಧಿ ಧರಣಿಗೆ ಬೆಂಬಲ ವ್ಯಕ್ತಪಡಿಸಿ ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ರಾಕ್ಟರ್ ರ್ಯಾಲಿಗೆ ಭಾರಿ ಬೆಂಬಲ ವ್ಯಕ್ತವಾಯಿತು.
ಶಿಡ್ಲಘಟ್ಟ ನಗರದಿಂದ ನೂರಾರು ಟ್ರ್ಯಾಕ್ಟರ್ಗಳಲ್ಲಿ ನೀರಾವರಿ ಹೋರಾಟಕ್ಕೆ ಹೊರಟ ಟ್ರ್ಯಾಕ್ಟರ್ಗಳಿಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನಗರದ ಹೊರವಲಯದ ಹಂಡಿಗನಾಳದ ಬಳಿ ಚಾಲನೆ ನೀಡಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ ಬಯಲುಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಕಳೆದ ೫೪ ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದರೂ ಕೂಡಾ ಈವರೆಗೂ ರಾಜ್ಯ ಸರ್ಕಾರ ಈ ಭಾಗದ ನೀರಾವರಿ ಸಮಸ್ಯೆಯ ಬಗ್ಗೆ ಗಂಭೀರವಾದ ನಿರ್ಧಾರಕ್ಕೆ ಬಂದಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಹೋರಾಟಗಾರರ ಒತ್ತಡಕ್ಕೆ ಮಣಿದು ಪ್ರತಿಭಟನಾಸ್ಥಳಕ್ಕೆ ಬೇಟಿ ನೀಡಿದ್ದರೇ ಹೊರತು ಈ ಭಾಗದ ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಂಡು ಪರಿಹಾರವನ್ನು ಕಲ್ಪಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
ಕಳೆದ ಲೋಕಸಭೆ ಚುನಾವಣೆಯ ವೇಳೆ ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಚಾಲನೆ ನೀಡಲಾಯಿತಾದರೂ ಈ ಯೋಜನೆಯಿಂದ ಈ ಭಾಗಕ್ಕೆ ಸಿಗುವ ನೀರಿನ ಪ್ರಮಾಣವೆಷ್ಟು ಎನ್ನುವುದು ಸರ್ಕಾರಕ್ಕೆ ಗೊತ್ತಿಲ್ಲ. ಕುಡಿಯುವ ನೀರಿಗೂ ಪರಿತಪಿಸುವ ಸ್ಥಿತಿ ತಲುಪಿರುವ ಈ ಭಾಗದ ಜನತೆ ದಂಗೆ ಏಳುವ ಮೊದಲೇ ನೀರಾವರಿ ಯೋಜನೆ ಕಲ್ಪಿಸಲು ಸರ್ಕಾರ ಮುಂದಾಗಬೇಕು ಎಂದರು.
ಈಗಾಗಲೇ ಜಿಲ್ಲೆಯ ಜನತೆ ಬೈಕ್ರ್ಯಾಲಿ, ಪಾದಯಾತ್ರೆ, ಸೇರಿದಂತೆ ರಾಸುಗಳನ್ನು ಪ್ರತಿಭಟನೆ ಸ್ಥಳಕ್ಕೆ ಕರೆದೊಯ್ದು, ನೀರಾವರಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ, ಸರ್ಕಾರ ಈಗಲಾದರೂ ಈ ಭಾಗದ ರೈತರ ಕೂಗಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರ್ಯಾಲಿಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಎನ್.ಮುನೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ನಗರಸಭೆ ಸದಸ್ಯ ಅಪ್ಸರ್ಪಾಷ, ಮುಖಂಡರಾದ ರಹಮತ್ತುಲ್ಲಾ, ದೊಣ್ಣಹಳ್ಳಿ ರಾಮಣ್ಣ ಮತ್ತಿತರರು ಹಾಜರಿದ್ದರು.
ಡಿ.ಸಿ.ಸಿ.ಬ್ಯಾಂಕ್ನಿಂದ ಮನೆ ಬಾಗಿಲಿಗೆ ಬಂದು ಸಾಲ ವಿತರಣೆ
ಡಿ.ಸಿ.ಸಿ.ಬ್ಯಾಂಕುಗಳಿಂದ ಪಡೆದಂತಹ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಪ್ರಥಮ ಸ್ಥಾನದಲ್ಲಿವೆ ಎಂದು ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ತಾಲ್ಲೂಕಿನ ಎ.ಹುಣಿಸೇನಹಳ್ಳಿ ಗ್ರಾಮದಲ್ಲಿ ಶನಿವಾರ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕ್ನ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇದರಿಂದ ಬ್ಯಾಂಕುಗಳಿಗೆ ಸಾಲ ನೀಡುವಂತೆ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡಲು ಅವರ ಮನೆ ಬಾಗಿಲಿಗೆ ಬ್ಯಾಂಕ್ ಅಧಿಕಾರಿಗಳು ಬಂದು ಸಾಲ ನೀಡುವ ವಿನೂತನ ಪ್ರಯೋಗವನ್ನು ಮಾಡಲಾಗುತ್ತಿದೆ, ರೈತರು, ಸ್ವ-ಸಹಾಯ ಗುಂಪುಗಳು, ಬ್ಯಾಂಕ್ಗೆ ಬಂದು ಖಾತೆ ತೆರೆದು ಸಾಲ ಪಡೆಯಬಹುದು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಂದಾಗಲಿ ಅಥವಾ ಸಹಕಾರಿ ಬ್ಯಾಂಕುಗಳಿಂದಾಗಲಿ ಪಡೆದುಕೊಂಡಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಉಳಿಸಬೇಕು ಎಂದರು.
ನಗರದ ಎಸ್.ಎಫ್.ಸಿ.ಸೊಸೈಟಿಯಿಂದ ತಿಪ್ಪೇನಹಳ್ಳಿಯ ಶ್ರೀ ಮಂಜುನಾಥ ಸ್ವ ಸಹಾಯ ಸಂಘಕ್ಕೆ ೩.೭೫ ಲಕ್ಷ, ಮುನೇಶ್ವರ ಸ್ವ ಸಹಾಯ ಸಂಘಕ್ಕೆ ೩.೭೫ ಲಕ್ಷ ಅಬ್ಲೂಡು ಗ್ರಾಮದ ಕರಗದಮ್ಮ ಸ್ವ ಸಹಾಯ ಸಂಘಕ್ಕೆ ೩ ಲಕ್ಷರೂ ಸಾಲ ವಿತರಣೆ ಮಾಡಲಾಯಿತು.
ಡಿ.ಸಿ.ಸಿ ಬ್ಯಾಂಕ್ ವತಿಯಿಂದ ದೇವರ ಮಳ್ಳೂರು ಗ್ರಾಮದ ಭವಾನಿ ಸ್ವಸಹಾಯ ಸಂಘಕ್ಕೆ ೧.೫ ಲಕ್ಷ, ಎ.ಹುಣಿಸೇನಹಳ್ಳಿ ಗ್ರಾಮದ ಕೃತಿಕ ಸ್ವಸಹಾಯ ಸಂಘಕ್ಕೆ ೩ ಲಕ್ಷ, ಶಿಡ್ಲಘಟ್ಟದ ಮಲ್ಲಿಗೆ ಸ್ವ ಸಹಾಯ ಸಂಘಕ್ಕೆ ೪ ಲಕ್ಷ, ಅಮ್ಮಾಜಾನ್ ಸ್ವಸಹಾಯ ಸಂಘಕ್ಕೆ ೪ ಲಕ್ಷ, ಕುತ್ತಾಂಡ ಹಳ್ಳಿ ಶ್ರೀ ಲಕ್ಷೀ ಸ್ವಸಹಾಯ ಸಂಘಕ್ಕೆ ೯೦ ಸಾವಿರ ರೂ ಸಾಲ ವಿತರಣೆ ಮಾಡಲಾಯಿತು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವರ್ತಕರ ಸಮುದಾಯದಿಂದ ಬೈಕ್ ರ್ಯಾಲಿ
ತಾಲ್ಲೂಕಿನ ಎಲ್ಲಾ ವರ್ತಕರ ಸಮುದಾಯದಿಂದ ಶನಿವಾರದಂದು ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಬೈಕ್ ರ್ಯಾಲಿಯನ್ನು ಆಯೋಜಿಸಲಾಗಿತ್ತು.
ನಗರದ ಅರಳೇಪೇಟೆಯ ಬಸವೇಶ್ವರ ದೇವಾಲಯದ ಆವರಣದಿಂದ ಪ್ರಾರಂಭಿಸಿ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿಯನ್ನು ನಡೆಸಿದ ವರ್ತಕರು ತಾಲ್ಲೂಕು ಕಚೇರಿಯ ಬಳಿ ಶಿರಸ್ತೇದಾರ್ ನರೇಂದ್ರಬಾಬು ಅವರಿಗೆ ಮನವಿ ಸಲ್ಲಿಸಿದರು. ನಂತರ ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟದ ಸ್ಥಳಕ್ಕೆ ನೂರಾರು ಬೈಕುಗಳಲ್ಲಿ ತೆರಳಿದರು.
ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘ, ಚಿನ್ನ ಬೆಳ್ಳಿ ವರ್ತಕರ ಸಂಘ, ದಿನಸಿ ವರ್ತಕರ ಸಂಘ, ಸಗಟು ವಿತರಕರ ಸಂಘ, ಪತಂಜಲಿ ಯೋಗ ಶಿಕ್ಷಣ ಸಂಘ, ಛಾಯಾಗ್ರಾಹಕರ ಸಂಘ, ಜವಳಿ ವ್ಯಾಪಾರಿಗಳ ಸಂಘ, ಫ್ಯಾನ್ಸಿ ಸ್ಟೋರ್ಸ್ಗಳ ಸಂಘ, ಸವಿತಾ ಸಮುದಾಯ ಸಂಘ, ರಸಗೊಬ್ಬರ ವ್ಯಾಪಾರಿಗಳ ಸಂಘ, ಪೇಂಟ್ಸ್ ಮತ್ತು ಹಾರ್ಡ್ವೇರ್ ಸಂಘ, ಹೋಟೆಲ್ ಮಾಲೀಕರ ಸಂಘ, ರಸ್ತೆ ಬದಿ ವ್ಯಾಪಾರಿಗಳ ಸಂಘದ ಸದಸ್ಯರು ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಗಂಗಮ್ಮನ ತೊಡೆಯ ಮೇಲೆ ಭೂದೇವಿ
‘ಕೆರೆಗೆ ಮೊರವೆ(ಕೋಡಿ) ಬಹಳ ಮುಖ್ಯ. ಕೆರೆಯಲ್ಲಿ ಎಷ್ಟು ನೀರು ಇರಬೇಕು ಎನ್ನುವುದನ್ನು ತೀರ್ಮಾನಿಸುವುದೇ ಕೋಡಿ. ಕೋಡಿ ಹರಿಯುವ ಕಾಲುವೆ ಸರಿಯಿರದಿದ್ದರೆ, ಕೆರೆ ಕಟ್ಟೆ ಒಡೆದು ಹೋಗುತ್ತದೆ, ಇಲ್ಲದಿದ್ದರೆ, ಕೆರೆಯ ನೀರೆಲ್ಲಾ ಹರಿದು ಹೋಗುತ್ತದೆ’ ಎಂದು ಹಿರಿಯರು ಕೆರೆಯ ಕೋಡಿ ಮತ್ತು ಕಾಲುವೆಗಳ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಹಲವಾರು ಕೆರೆ ಏರಿಯ ಮೇಲೆ ಕೆರೆಯನ್ನು ಹಾಗೂ ಅದರ ಕೋಡಿಯನ್ನು ಕಾಪಾಡಲೆಂದು ‘ದುಗ್ಗಲಮ್ಮ’ ಎಂದು ಕರೆಯುವ ದೇವತೆಯ ಶಿಲ್ಪಗಳು ಕಂಡುಬರುತ್ತವೆ. ಜೀವದಾಯಿನಿ ಕೆರೆಯನ್ನು ರಕ್ಷಿಸುವ ಅಪರೂಪದ ದೇವಿಯ ಶಿಲ್ಪವು ನಗರದ ಬಸ್ ನಿಲ್ದಾಣದ ಬಳಿಯ ಗೌಡನ ಕೆರೆಯ ಸೇತುವೆ ಮೇಲೂ ಇದೆ.
ಸಾಮಾನ್ಯವಾಗಿ ಕೆರೆ ಕಟ್ಟೆ ಒಡೆಯದಿರಲಿ ಎಂದು ಕೆರೆಯ ಕಟ್ಟೆಗಳ ಮೇಲೆ ಅಮ್ಮನವರ ವಿಗ್ರಹ ಇಟ್ಟು ಪೂಜಿಸುವುದು ಹಿಂದಿನವರ ವಾಡಿಕೆ. ಈ ಶಿಲ್ಪದ ಲಕ್ಷಣವನ್ನು ನೋಡಿದಾಗ, ಅದು ಕೆರೆಯ ನಿರ್ಮಾಣ ಕಾಲದ್ದಿರಬಹುದು, ನಂತರ ಸೇತುವೆಯನ್ನು ನಿರ್ಮಿಸುವಾಗ ಅಲ್ಲಿಯೇ ಹತ್ತಿರದಲ್ಲಿದ್ದ ಅದನ್ನು ಸೇತುವೆಗೆ ಜೋಡಿಸಿರಬಹುದೆಂದು ಹಿರಿಯರು ಅಭಿಪ್ರಾಯಪಡುತ್ತಾರೆ.
‘ನಾವ್ ಸಣ್ಣೋರಿದ್ವಿ. ಆಗ ಗೌಡನ ಕೆರೆ ತುಂಬಿ ಮೊರವೆ(ಕೋಡಿ) ಹೋಗ್ತಿತ್ತು. ಒಂದು ಅಡಿ ಎತ್ತರಕ್ಕೆ ಹರಿದರೆ ಅಮ್ಮನ ಕೆರೆಗೆ ನೀರು ಹೋಗ್ತಿತ್ತು, ಎರಡೂವರೆ ಅಡಿಗೂ ಜಾಸ್ತಿಯಾದ್ರೆ ಬೆಳ್ಳೂಟಿ ಕೆರೆಗೆ ಹೋಗ್ತಿತ್ತು’ ಎಂದು ಹಳಬರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ.
‘ಸುಮಾರು 55 ವರ್ಷಗಳ ಹಿಂದಿನ ಸೇತುವೆಯು ಗತನೆನಪುಗಳನ್ನು ಸಾರುವುದರೊಂದಿಗೆ ಅಪರೂಪದ ಶಿಲ್ಪವೊಂದನ್ನು ಇಲ್ಲಿ ತನ್ನೊಡಲಲ್ಲಿರಿಸಿಕೊಂಡಿದೆ. ಗೌಡನ ಕೆರೆಯು ಈಗ ನಗರದ ತ್ಯಾಜ್ಯಗಳನ್ನು ಸುರಿಯುವ ಗುಂಡಿಯಾಗಿದ್ದು, ಆಗಿನ ಕೋಡಿ, ತೂಬು, ಕೆರೆಯಿಂದ ಕೆರೆಗೆ ನೀರು ಹರಿಯುವ ಸಂಗತಿಗಳೆಲ್ಲಾ ಈಗಿನವರಿಗೆ ಅಪ್ರಸ್ತುತವಾಗಿದೆ. ಶಿಡ್ಲಘಟ್ಟಕ್ಕೆ ಪ್ರವೇಶಿಸುತ್ತಿದ್ದಂತೆ ಕಾಣುವ ಗೌಡನ ಕೆರೆಯನ್ನು ತ್ಯಾಜ್ಯದಿಂದ ಮುಕ್ತಿಗೊಳಿಸಿದಲ್ಲಿ ಅದರ ಸೌಂದರ್ಯ ಮರುಕಳಿಸುತ್ತದೆ. ಊರಿಗೂ ಇದೊಂದು ಲಕ್ಷಣವಾಗುತ್ತದೆ. ಅಂತರ್ಜಲವೂ ಇದರಿಂದ ಹೆಚ್ಚಲಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎನ್ನುತ್ತಾರೆ ಹಿರಿಯರಾದ ಎಸ್.ವಿ.ಅಯ್ಯರ್.
–ಡಿ.ಜಿ.ಮಲ್ಲಿಕಾರ್ಜುನ
ಪ್ರಚೋದಾತ್ಮಕ ಹೇಳಿಕೆಗೆ ಖಂಡನೆ
ಪ್ರಚೋದಾತ್ಮಕ ಹಾಗೂ ದ್ವಂದ್ವ ಹೇಳಿಕೆಗಳನ್ನು ನೀಡುತ್ತಿರುವ ಸಾಹಿತಿ ಗಿರೀಶ್‌ಕಾರ್ನಾಡ್ ಅವರಿಂದ ಜ್ಞಾನಪೀಠ ಪ್ರಶಸ್ತಿಯನ್ನು ವಾಪಸ್ಸು ಪಡೆಯಬೇಕು ಹಾಗೂ ಗಡೀಪಾರು ಮಾಡಬೇಕೆಂದು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ನವೆಂಬರ್ ೧೦ ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಹೆಸರಿಡಬೇಕು, ಟಿಪ್ಪುಸುಲ್ತಾನ್ ಸರಿಸಮಾನರಾದ ಕನ್ನಡಿಗರಿಲ್ಲ ಎಂಬ ವಿವಾದಾತ್ಮಕವಾದ ಹೇಳಿಕೆಯನ್ನು ನೀಡಿರುವ ಸಾಹಿತಿ ಗಿರೀಶ್‌ಕಾರ್ನಾಡ್ ಅವರು ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ.
ವಿಧಾನಸೌಧದ ಸರ್ಕಾರಿ ಕಾರ್ಯಕ್ರಮದಲ್ಲಿ ನೀಡಿರುವ ಈ ಹೇಳಿಕೆಗೆ ರಾಜ್ಯಸರ್ಕಾರ ಬೆಂಬಲ ನೀಡಿದೆ, ಇದರಿಂದಾಗಿ ರಾಜ್ಯದ ಪ್ರತಿಯೊಬರ ಮನಸ್ಸಿಗೆ ನೋವಾಗಿದೆ, ಕೆಂಪೇಗೌಡರು ಟಿಪ್ಪುಸುಲ್ತಾನರಂತೆ ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂಬ ಪ್ರಚೋದನಕಾರಿ ಹೇಳಿಕೆಯನ್ನು ನೀಡುವ ಮೂಲಕ ರಾಜ್ಯದ ಜನತೆಯನ್ನು ಅವಮಾನಿಸಿದ್ದಾರೆ, ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಾಗ ಬ್ರಿಟೀಷರು ಭಾರತದಲ್ಲಿ ವಸಾಹಾತನ್ನು ಪ್ರಾರಂಭಿಸಿರಲಿಲ್ಲ ಎಂಬ ಕನಿಷ್ಠ ಜ್ಞಾನವೂ ಅವರಿಗಿಲ್ಲ. ವೇದಿಕೆಯಲ್ಲಿ ಅವರ ಮಾತನ್ನು ತಡೆಯಬೇಕಾಗಿದ್ದ ಮುಖ್ಯಮಂತ್ರಿಗಳು ಹಾಗೂ ಇತರ ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದದ್ದು, ಪರೋಕ್ಷವಾಗಿ ಸಾಹಿತಿಯ ಮಾತಿಗೆ ಸಮ್ಮತಿ ಸೂಚಿಸಿದಂತಾಗಿದೆ. ಈಗಾಗಲೇ ರಾಜ್ಯಾದ್ಯಂತ ಹೋರಾಟಗಳು ತೀವ್ರಗೊಳ್ಳುತ್ತಿದ್ದು, ೩ ಜನರ ಪ್ರಾಣಹಾನಿಯಾಗಿದೆ. ಕೂಡಲೇ ಸಾಹಿತಿಯಿಂದ ಪ್ರಶಸ್ತಿಯನ್ನು ವಾಪಸ್ಸು ಪಡೆದುಕೊಂಡು, ಅವರನ್ನು ರಾಜ್ಯದಿಂದ ಹೊರಹಾಕಬೇಕು, ಒಂದು ವೇಳೆ ಸರ್ಕಾರ ರಾಜ್ಯದ ಜನತೆಯ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಿದ್ದರಾಗುತ್ತೇವೆ ಎಂದು ಹೇಳಿದರು.
ಒಕ್ಕಲಿಗರ ಸಂಘದ ಕಾರ್ಯದರ್ಶಿ ಕೆಂಪರೆಡ್ಡಿ, ಕೆ.ಎನ್.ಸುಬ್ಬಾರೆಡ್ಡಿ, ಚನ್ನಕೇಶವಪ್ಪ, ಕೃಷ್ಣಪ್ಪ, ಪಿ.ವಿ.ಶ್ರೀನಿವಾಸ್, ಸಿ.ಎ.ದೇವರಾಜ್, ಭಕ್ತರಹಳ್ಳಿ ಲಕ್ಷ್ಮೀನಾರಾಯಣಪ್ಪ, ವಿಶ್ವನಾಥ್, ಗಂಗಾಧರ್, ಲಕ್ಕಹಳ್ಳಿ ದೇವರಾಜ್, ಡಿ.ಬಿ.ಶ್ರೀನಿವಾಸರೆಡ್ಡಿ, ದೇವಿರಪ್ಪ, ಅಶ್ವಥ್, ಕೇಶವಪ್ಪ ಮತ್ತಿತರರು ಹಾಜರಿದ್ದರು.
ಹಳೆಯ ನ್ಯಾಯಾಲಯದ ಕಟ್ಟಡದಲ್ಲಿ ಅಗ್ನಿಶಾಮಕ ಠಾಣೆ
ನಗರದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಗ್ನಿಶಾಮಕ ಠಾಣೆಯು ನಿರ್ಮಾಣವಾಗುವವರೆಗೂ ತಾತ್ಕಾಲಿಕವಾಗಿ ಅಗ್ನಿಶಾಮಕ ಠಾಣೆಯನ್ನು ನಗರದ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಹಳೆಯ ನ್ಯಾಯಾಲಯದ ಕಟ್ಟಡವನ್ನು ಬಳಕೆ ಮಾಡಿಕೊಳ್ಳುವಂತೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಶಾಸಕ ಎಂ.ರಾಜಣ್ಣ ತಿಳಿಸಿದ್ದಾರೆ.
ನಗರದ ಹಳೇಯ ನ್ಯಾಯಾಲಯದ ಕಟ್ಟಡವನ್ನು ವೀಕ್ಷಣೆ ಮಾಡಿದ ಅವರು, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿ, ನಗರ ಪೊಲೀಸ್ಠಾಣೆ, ತೋಟಗಾರಿಕಾ ಇಲಾಖೆ, ಕೃಷಿ ಸಹಾಯಕ ನಿರ್ದೇಶಕರ ಇಲಾಖೆಗಳ ಸಮೀಪದಲ್ಲೆ ಇರುವಂತಹ ಹಳೆಯ ನ್ಯಾಯಾಲಯ ಸಂಕೀರ್ಣದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ಮಾಡಿಕೊಂಡು ಮುಂದಿನ ಆವರಣದಲ್ಲಿ ಅಗ್ನಿಶಾಮಕ ವಾಹನಗಳನ್ನು ನಿಲ್ಲಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.
ಅಗ್ನಿಶಾಮಕ ಠಾಣೆಯ ಸಿಬ್ಬಂದಿ, ನಗರಸಭಾ ಸದಸ್ಯ ಅಪ್ಸರ್ಪಾಷಾ, ಮಳ್ಳೂರಯ್ಯ, ಗ್ರಾಮ ಲೆಕ್ಕಾಧಿಕಾರಿ ಲಾರೆನ್ಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೂರು ವರ್ಷದ ಕಟ್ಟಡ
ಹಳೆಯ ನ್ಯಾಯಾಲಯದ ಕಟ್ಟಡವನ್ನು ಕಟ್ಟಿದ್ದು ೧೯೧೮ರಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಕಟ್ಟಡವು ಬ್ರಿಟೀಷರ ತಾಲ್ಲೂಕು ಆಡಳಿತ ಕಚೇರಿಯಾಗಿತ್ತು. ಮರಣದಂಡನೆ ವಿಧಿಸುವ ನೇಣು ಗಂಬದ ಕುರುಹುಗಳು ಈಗಲೂ ಈ ಕಟ್ಟಡದಲ್ಲಿ ಕಾಣಬಹುದಾಗಿದೆ. ಸ್ವಾತಂತ್ರ್ಯಾ ನಂತರ ಇದೇ ಕಟ್ಟಡದ ಒಂದು ಭಾಗದಲ್ಲಿ ಪೊಲೀಸ್ ಸ್ಟೇಷನ್ ಮತ್ತು ಇನ್ನೊಂದು ಭಾಗದಲ್ಲಿ ತಾಲೂಕು ಕಚೇರಿ ಕಾರ್ಯನಿರ್ವಹಿಸುತ್ತಿತ್ತು. ಹೊಸ ಕಟ್ಟಡಕ್ಕೆ ಪೋಲೀಸ್ ಸ್ಟೇಷನ್ ವರ್ಗಾವಣೆಯಾಯ್ತು. ಮಿನಿವಿಧಾನಸೌಧವಾದ ಮೇಲೆ ಆಡಳಿತ ಕಚೇರಿಯೂ ಅಲ್ಲಿಗೆ ಹೋಯಿತು. ಆಗ ಸ್ವಂತ ಕಟ್ಟಡವಿರದಿದ್ದರಿಂದ ನ್ಯಾಯವಾದಿಗಳ ವಶಕ್ಕೆ ಈ ಕಟ್ಟಡ ಬಂತು. ಈ ಕಟ್ಟಡದ ಮಧ್ಯಭಾಗದ ಖಾಲಿ ಜಾಗದಲ್ಲಿ ವಕೀಲರೆಲ್ಲರ ಆಸಕ್ತಿಯಿಂದಾಗಿ ತರತರದ ಹೂಗಿಡಗಳನ್ನು ನೆಟ್ಟಿದ್ದರು. ಇತ್ತೀಚೆಗೆ ದಿಬ್ಬೂರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾದ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ನ್ಯಾಯಾಲಯ ವರ್ಗಾವಣೆಯಾದ್ದರಿಂದ ಈ ಕಟ್ಟಡವು ಖಾಲಿಯಾಗಿತ್ತು. ಇದೀಗ ಇದು ಅಗ್ನಿಶಾಮಕ ಠಾಣೆಯಾಗಲಿದೆ.
ಅನುವುಗಾರರನ್ನು ಮುಂದುವರಿಸಲು ಮನವಿ
ಕೃಷಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲ ವರ್ಷಗಳಿಂದ ಕೆಲಸ ಮಾಡುತ್ತಿರುವ ಅನುವುಗಾರರನ್ನು ಯಥಾವತ್ತಾಗಿ ಕೆಲಸದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿ ಶಾಸಕ ಎಂ.ರಾಜಣ್ಣ ಅವರಿಗೆ ಶುಕ್ರವಾರ ಅನುವುಗಾರರು ಮನವಿ ಪತ್ರವನ್ನು ಸಲ್ಲಿಸಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿ ಮನವಿ ಪತ್ರವನ್ನು ಸಲ್ಲಿಸಿದ ಅವರು, ಕೃಷಿ ಇಲಾಖೆಯಲ್ಲಿ ಸತತವಾಗಿ ಹತ್ತು ವರ್ಷಗಳಿಂದ ನಿರಂತವಾಗಿ ಕೆಲಸ ಮಾಡಿಕೊಂಡು ಬಂದಿದ್ದು, ಪ್ರತಿಯೊಬ್ಬ ಅನುವುಗಾರರು ರೈತರ ಮನೆಬಾಗಿಲಿಗೆ ತೆರಳಿ ಕ್ಷೇತ್ರ ಪಾಠಶಾಲೆಗಳ ಮೂಲಕ ರೈತರಿಗೆ ಅಗತ್ಯವಾಗಿರುವ ಮಾಹಿತಿಗಳನ್ನು ನೀಡುವ ಮೂಲಕ ನೆರವಾಗಿದ್ದೇವೆ. ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದಂತಹ ನಮ್ಮನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಿರುವುದರಿಂದ ನಮ್ಮ ಕುಟುಂಬಗಳ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗಿದೆ, ಆದ್ದರಿಂದ ಜಿಲ್ಲೆಯಲ್ಲಿನ ೧೮೩ ಮಂದಿ ರೈತ ಅನುವುಗಾರರನ್ನು ಯಥಾವತ್ತಾಗಿ ಮುಂದುವರೆಸಬೇಕು, ಈ ಬಗ್ಗೆ ಕೃಷಿ ಸಚಿವರೊಂದಿಗೆ ಚರ್ಚೆ ನಡೆಸಬೇಕು, ಎನ್.ಜಿ.ಓ.ರದ್ದುಪಡಿಸಿ ರೈತ ಅನುವುಗಾರರನ್ನು ಮುಂದುವರೆಸಿ. ಹಿಂಗಾರು ಮುಂಗಾರು ಹೊರತುಪಡಿಸಿ ವರ್ಷವಿಡೀ ೫೦೦ ಹೆಕ್ಟೇರ್ಗೆ ಒಬ್ಬ ಅನುವುಗಾರರನ್ನು ನೇಮಿಸುವುದು, ರೈತ ಅನುವುಗಾರರಿಗೆ ಸೇವಾ ಭದ್ರತೆಯನ್ನು ನೀಡಬೇಕು ಎಂದು ಮನವಿ ಮಾಡಿದರು.
ಆಂಜನೇಯರೆಡ್ಡಿ, ವೆಂಕಟರಾಯಪ್ಪ, ಕೋನಪ್ಪರೆಡ್ಡಿ, ಲಕ್ಷ್ಮಣರೆಡ್ಡಿ, ಬಿ.ಎಂ.ರಾಮಾಂಜಿ, ರಮೇಶ್, ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಲ್ಲೂಕಿನಾದ್ಯಂತ ಮಳೆಯಿಂದಾಗಿ 30 ಮನೆಗಳು ಕುಸಿದಿವೆ
ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು 30 ಮನೆಗಳು ಕುಸಿದಿವೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಮಳೆಯಿಂದಾದ ತೊಂದರೆಗಳು ಹಾಗೂ ಅನಾಹುತಗಳ ಕುರಿತಂತೆ ಸರ್ಕಾರಕ್ಕೆ ವಿಸ್ತೃತ ವರದಿಯನ್ನು ಸಲ್ಲಿಸಿದ್ದು ಪರಿಹಾರಕ್ಕೆ ಕೋರಲಾಗಿದೆ ಎಂದಿದ್ದಾರೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಯ ಒಂಟೂರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಚಿಕ್ಕಪಾಪಣ್ಣ ಅವರ ಮನೆ ಕುಸಿದಿದೆ. ಆ ಮನೆಯಲ್ಲಿ 13 ಜನ ವಾಸವಾಗಿದ್ದು, ಅದೃಷ್ಟವಶಾತ್ ಮನೆ ಕುಸಿಯುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರದ ಕಾರಣ ಪ್ರಾಣ ಹಾನಿ ತಪ್ಪಿದೆ. ಸ್ಥಳಕ್ಕೆ ಶಾಸಕ ಎಂ.ರಾಜಣ್ಣ ಭೇಟಿ ನೀಡಿ ಸಾಂತ್ವನ ಹೇಳಿ 10 ಸಾವಿರ ರೂಗಳ ಸಹಾಯಧನವನ್ನು ನೀಡಿದ್ದಾರೆ. ಗ್ರಾಮಸ್ಥರೆಲ್ಲಾ ಸೇರಿ ಮನೆ ಕಳೆದುಕೊಂಡ ಕುಟುಂಬದವರಿಗೆ ತಾತ್ಕಾಲಿಕವಾಗಿ ವಾಸವಿರಲು ಶೀಟ್ ಹೊದಿಕೆಯನ್ನು ರೂಪಿಸಿಕೊಟ್ಟಿದ್ದು, ಮಾನವೀಯತೆಯನ್ನು ಮೆರೆದಿದ್ದಾರೆ.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ವೆಂಕಟೇಶ್, ಕನಕಪ್ರಸಾದ್, ತಿಮ್ಮಯ್ಯ, ನಾಗರಾಜ್, ದ್ಯಾವಪ್ಪ, ಮಳ್ಳೂರಯ್ಯ, ಭೈರಾರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

