ಶಿಡ್ಲಘಟ್ಟ ತಾಲ್ಲೂಕಿನ ರೈತ ಸಂಘದ ಪದಾಧಿಕಾರಿಗಳು ಈಚೆಗೆ ಅಪಘಾತದಲ್ಲಿ ಮೃತಪಟ್ಟ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಕಾರ್ಯದರ್ಶಿ ಮೇಲೂರು ನಾಗರಾಜ್ ಅವರ ಚಿತ್ರಪಟಕ್ಕೆ ಕೋಟೆ ವೃತ್ತದಲ್ಲಿ ಪೂಜೆ ಸಲ್ಲಿಸಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಕಾರ್ಯದರ್ಶಿ ಪ್ರತೀಶ್, ಬಾಲಮುರಳಿಕೃಷ್ಣ, ಮುನಿಕೆಂಪಣ್ಣ, ಟಿ.ವಿ.ನಾರಾಯಣಸ್ವಾಮಿ, ಮುನಿರಾಜು, ಮಾರುತಿ ಮತ್ತಿತರರು ಹಾಜರಿದ್ದರು.
ಅಪಘಾತದಲ್ಲಿ ಮೃತಪಟ್ಟ ರಾಜ್ಯ ರೈತ ಸಂಘ ಕಾರ್ಯದರ್ಶಿ ಮೇಲೂರು ನಾಗರಾಜ್ ಅವರಿಗೆ ಶ್ರದ್ಧಾಂಜಲಿ
ಚಿಕ್ಕದಾಸೇನಹಳ್ಳಿ ಗ್ರಾಮದಲ್ಲಿ ರಸ್ತೆಯ ಮೇಲೆ ರಸ್ತೆಯ ನಿರ್ಮಾಣ
ಗ್ರಾಮ ಪಂಚಾಯತಿಯ ನರೇಗಾ ಯೋಜನೆಯಡಿಯಲ್ಲಿ ಮಾಡಿರುವ ರಸ್ತೆ ಕಾಮಗಾರಿಗಳ ಮೇಲೆಯೆ ಪುನಃ ಕಾಮಗಾರಿಯನ್ನು ಮಾಡುವ ಮೂಲಕ ಶಾಸಕರ ಅನುದಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಎಸ್.ಮಂಜುನಾಥ್ ಆರೋಪಿಸಿದ್ದಾರೆ.
ಗ್ರಾಮಸ್ಥರಾದ ಮುನಿರಾಜು, ಶಂಕರಪ್ಪ, ಕೃಷ್ಣಪ್ಪ, ನರಸಿಂಹಮೂರ್ತಿ, ಸಿದ್ದೇಗೌಡ, ಭೂಮಪ್ಪ, ಈರಪ್ಪ, ನಾರಾಯಣಸ್ವಾಮಿ, ಮುನೇಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಶಿಡ್ಲಘಟ್ಟದಲ್ಲಿ ಟ್ರಾಕ್ಟರ್ ರ್ಯಾಲಿಗೆ ಚಾಲನೆ
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡುವ ಮೂಲಕ ತಾಲ್ಲೂಕು ಜೆಡಿಎಸ್ ಕಾರ್ಯಕರ್ತರು ಶಾಶ್ವತ ನೀರಾವರಿ ಯೋಜನೆಗೆ ಒತ್ತಾಯಿಸಿ ಟ್ರಾಕ್ಟರ್ ರ್ಯಾಲಿಯನ್ನು ನವೆಂಬರ್ 15 ರ ಭಾನುವಾರದಂದು ನಡೆಸುವುದಾಗಿ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ ಹಲವು ದಶಕಗಳಿಂದ ಬಯಲು ಸೀಮೆ ಭಾಗಗಳಿಗೆ ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟಗಳಿಗೆ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸಿಲ್ಲ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಬಳಿಯಿರುವ ಚದಲಪುರದ ಬಳಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಡೆಸುತ್ತಿರುವ ಹೋರಾಟಕ್ಕೆ ಶಿಡ್ಲಘಟ್ಟದ ಜೆಡಿಎಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿ, ಟ್ರ್ಯಾಕ್ಟರ್ ರ್ಯಾಲಿಯನ್ನು ನಡೆಸಲಿದ್ದಾರೆ ಎಂದು ಹೇಳಿದರು.
ಕಳೆದ ೫೩ ದಿನಗಳಿಂದ ನೀರಾವರಿ ಹೋರಾಟ ನಡೆಯುತ್ತಿದೆ. ಸರ್ಕಾರ ನೀರಾವರಿ ತಜ್ಞ ಪರಮಶಿವಯ್ಯನವರ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕೆನ್ನುವ ಕೂಗು ಬಯಲುಸೀಮೆ ಭಾಗಗಳ ಜನರದ್ದಾಗಿದೆ. ಆದರೆ ಸರ್ಕಾರ ಎತ್ತಿನಹೊಳೆ ಯೋಜನೆ, ಮೇಕೆದಾಟು ಯೋಜನೆ, ಬೆಂಗಳೂರಿನ ಕೊಳವೆ ನೀರನ್ನು ಸಂಸ್ಕರಣೆ ಮಾಡಿ ಕೆರೆಗಳನ್ನು ತುಂಬಿಸುವುದು ಮುಂತಾದ ಯೋಜನೆಗಳ ಮೂಲಕ ಜನರನ್ನು ಗೊಂದಲಕ್ಕೀಡು ಮಾಡಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಾಗರಿಕರು ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲವನ್ನು ನೀಡಿದ್ದಾರೆ. ಅದರಂತೆ ತಾಲ್ಲೂಕಿನ ಜೆಡಿಎಸ್ ಪಕ್ಷದಿಂದಲೂ ಕೂಡಾ ನೀರಾವರಿ ಹೋರಾಟಕ್ಕೆ ಬೆಂಬಲಿಸಿ, ನವೆಂಬರ್ 15 ರ ಭಾನುವಾರದಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಟ್ರ್ಯಾಕ್ಟರ್ ರ್ಯಾಲಿ ಪ್ರಾರಂಭಿಸಲಿದ್ದು, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಸುಮಾರು 400 ಕ್ಕೂ ಹೆಚ್ಚು ಟ್ರ್ಯಾಕ್ಟರ್ಗಳು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಆಗಮಿಸಲಿವೆ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡಲಾಗಿದೆ, ನೀರಾವರಿ ಹೋರಾಟಕ್ಕೆ ಬೆಂಬಲ ನೀಡುವಂತಹ ನಾಗರಿಕರು ಸ್ವಯಂ ಪ್ರೇರಿತರಾಗಿ ಭಾಗವಹಿಸಬಹುದಾಗಿದೆ ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಾ.ಧನಂಜಯರೆಡ್ಡಿ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಡಿ.ಸಿ.ಸಿ.ಬ್ಯಾಂಕ್ನಿರ್ದೇಶಕ ಪಿ.ಶಿವಾರೆಡ್ಡಿ, ನಗರಸಭಾ ಸದಸ್ಯ ಅಪ್ಸರ್ಪಾಷಾ, ರಮೇಶ್, ಕೆ.ಎಸ್.ಕನಕಪ್ರಸಾದ್, ಸುರೇಂದ್ರ, ಜೆಡಿಎಸ್ ಕಾರ್ಮಿಕ ಘಟಕದ ಅಧ್ಯಕ್ಷ ರಹಮತ್ತುಲ್ಲಾ ಮತ್ತಿತರರು ಹಾಜರಿದ್ದರು.
ವಿಜಾಪುರ ಮಹಿಳಾ ವಿಶ್ವವಿದ್ಯಾಲಯ ‘ಕರ್ನಾಟಕ’ದ್ದಲ್ಲ?
ಮಹಿಳಾ ವಿಶ್ವವಿದ್ಯಾಲಯ ಪ್ರಾರಂಭ: 1916 ರಲ್ಲಿ ಭಾರತ ರತ್ನ ಮಹರ್ಷಿ ಧೋಂಡೋ ಕೇಶವ ಕಾರ್ವೆಯವರು ಅವಿಭಜಿತ ಮಹಾರಾಷ್ಟ್ರದಲ್ಲಿ (ಮಹರಾಷ್ಟ್ರ ಮತ್ತು ಗುಜರಾತ್ ಸೇರಿ) ಶ್ರೀಮತಿ ನಾತಿಬಾಯಿ ದಾಮೋದರ ಠಾಕರೆ [SNDT] ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದ್ದು ಅದು ಭಾರತದ ಮೊದಲ ಮಹಿಳಾ ವಿಶ್ವವಿದ್ಯಾಲಯವಷ್ಟೇ ಅಲ್ಲ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಿರುತ್ತದೆ.
ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ-ಮಾನ ಕಲ್ಪಿಸುವುದು. ಅವರಿಗೆ ಉನ್ನತ ಶಿಕ್ಷಣ ದೊರಕುವಂತೆ ಮಾಡುವ ಮುಖಾಂತರ ಮಹಿಳಾ ಸಬಲೀಕರಣ ಜಾರಿಗೆ ತರುವುದು. ಮಹಿಳೆಯರಿಗೆ ಅವರದ್ದೇ ಆದ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಪ್ರಯತ್ನಿಸುವುದು. ಅವರಿಗೇ ಮೀಸಲಾದ ವಿಶ್ವವಿದ್ಯಾಲಯದ ಮುಖಾಂತರ ಅವರಿಗೆ ವಿಶೇಷವಾಗಿ ಒಗ್ಗುವ ಗೃಹವಿಜ್ಞಾನ, ಕಸೂತಿಕಲೆ, ಪಿಕ್ಟುರಿಯಲ್ ಸೈನ್ಸ್, ಚಿತ್ರಕಲೆ-ಅಡಿಗೆ-ಪ್ಯಾಶನ್ ಡಿಸೈನಿಂಗ್, ಆಹಾರ ಪದ್ಧತಿ, ಹಾಸ್ಪಿಟಾಲಿಟಿ ಮ್ಯಾನೆಜ್‍ಮೆಂಟ್, ಕಷ್ಟ ನಿರ್ವಹಣೆ, ಮಕ್ಕಳ ಪೋಷಣೆ, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಹೀಗೆ ಪೂರಕ ವಿಷಯಗಳನ್ನು ಸಾಮಾನ್ಯ ವಿಷಯದೊಂದಿಗೇ ಕಲಿಸುವುದು, ತರಬೇತಿ ನೀಡುವುದು ವರ್ತಮಾನ-ಇತಿಹಾಸ-ಪುರಾಣಗಳಲ್ಲಿನ ಸ್ತ್ರೀಯರ ಸಾಧನೆಗಳನ್ನು ಮುಂದಿಟ್ಟು ಅವರಲ್ಲಿ ಆತ್ಮವಿಶ್ವಾಸದ ಭರವಸೆಯನ್ನು ತುಂಬುವುದು. ಪಠ್ಯೇತರ ಚಟುವಟಿಕೆಗಳಲ್ಲಿ ಪುರುಷರೊಂದಿಗೆ ಸೇರಲು ಸಂಕೋಚಪಡುವ ವಿದ್ಯಾರ್ಥಿನಿಯರಿಗೆ ಮತ್ತು ಅವರೊಂದಿಗೆ ಕಳಿಸಲು ಹಿಂದೇಟು ಹಾಕುವ ಪಾಲಕರಿಗೆ ಭರವಸೆ ಮೂಡಿಸುವುದು ಕೂಡ ಇದರ ಉದ್ದೇಶಗಳಲ್ಲೊಂದಾಗಿತ್ತು. 1950-60 ರ ದಶಕದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡಿದ್ದು-ಗುಜರಾತ್ ಮಹಾರಾಷ್ಟ್ರದಿಂದ ಪ್ರತ್ಯೇಕವಾಗುವ ಮೊದಲಿನ ಗುಜರಾತ್ ಭಾಗದ ಮಹಿಳಾ ಕಾಲೇಜುಗಳಿಗೆ 1951 ರಲ್ಲಿ ಮಾನ್ಯತೆ ನೀಡಿದ್ದು, ಇದು ಈ SNDT ಯಡಿ ಗುಜರಾತ್‍ನಲ್ಲಿರುವ 91 ಮಹಿಳಾ ಕಾಲೇಜುಗಳೂ ಇವೆ. ಮಹಾರಾಷ್ಟ್ರದ ಎಲ್ಲ ಮಹಿಳಾ ಕಾಲೇಜುಗಳೂ ಇದರ ವ್ಯಾಪ್ತಿಯಲ್ಲಿದ್ದು ಅಲ್ಲಿನ 26 ಕಾಲೇಜುಗಳಲ್ಲಿ 70000 ವಿದ್ಯಾರ್ಥಿನಿಯರಿದ್ದು 38 ಸ್ನಾತಕೋತ್ತರ ವಿಭಾಗಗಳಿವೆ. ಅದು ಮಹಿಳೆಯರ ಸರ್ವಾಂಗೀಣ ಅಭ್ಯುದಯಕ್ಕೆ ಒತ್ತು ನೀಡುತ್ತಿದೆ. ಪುರುಷ ವ್ಯವಸ್ಥೆಯ ಸಹ-ಶಿಕ್ಷಣ ಪದ್ಧತಿಯ ಅವಲಂಬನೆಯಿಂದ ಮುಕ್ತವಾಗಿ, ವಿದ್ಯಾರ್ಥಿನಿಯರು ಮುಕ್ತವಾಗಿ-ಸ್ವತಂತ್ರವಾಗಿ ಏನನ್ನಾದರೂ ಸಾಧಿಸಬಹುದಾಗಿದೆ.
ಕರ್ನಾಟಕದಲ್ಲಿನ ಸ್ಥಿತಿಗತಿ
ಇದೇ ರೀತಿಯ ಘನ ಉದ್ದೇಶವನ್ನಿಟ್ಟುಕೊಂಡ ಕರ್ನಾಟಕದ ಘನ ಸರ್ಕಾರ 2003 ರ ಆಗಸ್ಟ್ ನಲ್ಲಿ ರಾಜ್ಯದಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ವಿಜಾಪುರದಲ್ಲಿ ಸ್ಥಾಪಿಸಿತು. ಅದೀಗ ದಶಕದ ಹೊಸ್ತಿಲಲ್ಲಿದೆ ನಿಜ. ಇಂಥ ವಿಶ್ವವಿದ್ಯಾಲಯಗಳ ಹುಟ್ಟು ವಿಶಿಷ್ಟ ಉದ್ದೇಶದಿಂದ ಕೂಡಿದ್ದಾಗಿರುತ್ತದೆ. ನಮ್ಮಲ್ಲಿ ಈಗ ಬೆಂಗಳೂರು, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೆಳಗಾವಿ ಮತ್ತು ದಾವಣಗೆರೆಗಳಲ್ಲಿ ಒಟ್ಟು ಹತ್ತು ಸಾಮಾನ್ಯ ವಿಶ್ವವಿದ್ಯಾಲಯಗಳಿವೆ.
ಕರ್ನಾಟಕದಲ್ಲಿ ವಿಶಿಷ್ಟ ಉದ್ದೇಶಗಳನ್ನು ಹೊಂದಿರುವ ಪ್ರಮುಖ ವಿಶ್ವವಿದ್ಯಾಲಯಗಳೆಂದರೆ:
1. ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ – ಬೆಂಗಳೂರು ಇದರ ವ್ಯಾಪ್ತಿಗೆ ಕರ್ನಾಟಕದ ಎಲ್ಲ ವೈದ್ಯಕೀಯ ಕಾಲೇಜುಗಳೂ ಬರುತ್ತವೆ.
2. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳೂ ಬರುತ್ತವೆ.
3. ಪಶುವೈದ್ಯಕೀಯ ವಿಶ್ವವಿದ್ಯಾಲಯದ – ಬೀದರ್ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಪಶುವೈದ್ಯಕೀಯ ಕಾಲೇಜುಗಳೂ ಬರುತ್ತವೆ. ಕಾನೂನು ವಿಶ್ವವಿದ್ಯಾಲಯ – ಹುಬ್ಬಳ್ಳಿ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಕಾನೂನು ಕಾಲೇಜುಗಳೂ ಬರುತ್ತವೆ.
ಆದರೆ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ ಇದರ ವ್ಯಾಪ್ತಿಗೆ ಕೇವಲ ಉತ್ತರ ಕರ್ನಾಟಕದ 13 ಜಿಲ್ಲೆಗಳ ಮಹಿಳಾ ಕಾಲೇಜುಗಳು 42 ಕಾಲೇಜುಗಳು ಮಾತ್ರ ಸೇರಿವೆ. ದಕ್ಷಿಣ ಕರ್ನಾಟಕದ 18 ಜಿಲ್ಲೆಗಳಲ್ಲಿರುವ ಸುಮಾರು 90 ಕಾಲೇಜುಗಳು ಪ್ರತ್ಯೇಕವಾಗಿ ಉಳಿದಿದ್ದು – ಆಯಾ ಜಿಲ್ಲೆಗಳಿಗೆ ಸಂಬಂಧಪಟ್ಟ ಸಾಮಾನ್ಯ ವಿಶ್ವವಿದ್ಯಾಲಯಗಳಡಿಯಲ್ಲಿ ಉಳಿದ ಸಾಮಾನ್ಯ ಸಹ ಶಿಕ್ಷಣದ ಕಾಲೇಜುಗಳಂತೆ ಕಾರ್ಯನಿರ್ವಹಿಸುತ್ತಿವೆ. ಹೆಸರಿಗೆ ಮಾತ್ರ ಮಹಿಳಾ ಕಾಲೇಜುಗಳು ಮಹಿಳಾ ವಿಶ್ವವಿದ್ಯಾಲಯ ಬೇಡ. ಅದರ ಉದ್ದೇಶಗಳು ಇವುಗಳಿಗೆ ಬಹುಶಃ ಅಪಥ್ಯ!
ಹೀಗಾಗಿ ಸ್ತ್ರೀಯರಿಗೆ ಗುಣಾತ್ಮಕ, ಸ್ತ್ರೀಕೇಂದ್ರಿತ ಶಿಕ್ಷಣವನ್ನು ನಿಡುವ ಮಹದಾಸೆಯಿಂದ ಪ್ರಾದುರ್ಭವಿಸಿದ ವಿಶ್ವವಿದ್ಯಾಲಯದ ಮೂಲ ಉದ್ದೇಶಕ್ಕೆ ಈ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಹಿಳಾ ಕಾಲೇಜುಗಳು ಹೊರಗುಳಿದು – ಅಲ್ಲಿನ ವಿದ್ಯಾರ್ಥಿನಿಯರಿಗೆ ಅವರದ್ದೇ ವಿಶ್ವವಿದ್ಯಾಲಯ ನೀಡುವ ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ.
ಇಡಿಯ ಕರ್ನಾಟಕದ ಎಲ್ಲ ಮಹಿಳಾ ಕಾಲೇಜುಗಳನ್ನೂ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಬೇಕೆಂಬ ಉದ್ದೇಶ ಇನ್ನೂ ಈಡೇರಿಲ್ಲ. ಈ ಕುರಿತು ಶಾಸನ ಸಭÉಯಲ್ಲಿ ಮತ್ತು ಎಂ.ಪಿ. ಪ್ರಕಾಶರವರೂ ಸೇರಿದಂತೆ ಕರ್ನಾಟಕದ ಜನ ಪ್ರತಿನಿಧಿಗಳು ಪ್ರಭಲವಾಗಿ ವಾದ ಮಂಡಿಸಿದ್ದರೂ ಪ್ರಯೋಜನವಾಗಲಿಲ್ಲ. ದಕ್ಷಿಣ ಕರ್ನಾಟಕದವರಿಗೆ ವಿಜಾಪುರ ತುಂಬಾ ದೂರದಲ್ಲಿದೆ ಎಂಬ ಸಬೂಬು ಹೇಳಿ – ಒಂದು ಮಹಿಳಾ ವಿಶ್ವವಿದ್ಯಾಲಯಕ್ಕೆ ಬಲಕೊಡುವ ಬದಲು ಅದನ್ನು ಪ್ರತ್ಯೇಕವಾಗಿಸಲಾಗಿದೆ. ಉತ್ತರ ಕರ್ನಾಟಕದ ಆರ್ಥಿಕ – ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತು ಡಾ. ನಂಜುಡಪ್ಪ ಸಮಿತಿ ಆಳವಾದ ಅಧ್ಯಯನ ನಡೆಸಿ – ಇಲ್ಲಿನ ಅಭಿವೃದ್ಧಿಗೆ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪರಸ್ಪರ ವಿನಿಮಯ ಪದ್ಧತಿಗೆ ಬರಬೇಕೆಂಬುದನ್ನು ಒತ್ತಿ ಹೇಳಿದೆ. ಹಾಗಿದ್ದೂ ಈ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜುಗಳು ಸೇರದೆ – ಪರಸ್ಪರ ಹಂಚಿಕೊಳ್ಳಬಹುದಾಗಿದ್ದ ಶೈಕ್ಷಣಿಕ – ಸಾಂಸ್ಕøತಿಕ ಸಂಪತ್ತನ್ನು ಪ್ರತ್ಯೇಕವಾಗಿಡಲಾಗಿದೆ. ಹೀಗೆ ಉತ್ತರ ಕರ್ನಾಟಕದ ಮಹಿಳಾ ಕಾಲೇಜುಗಳಿಗೆ ಒಂದು ವಿಶ್ವವಿದ್ಯಾಲಯ – ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜುಗಳಿಗೆ ಹಲವು ವಿಶ್ವವಿದ್ಯಾಲಯವೆಂದು ಹೇಳುವ ಮುಖಾಂತರ ಕರ್ನಾಟಕದ ಅಖಂಡತೆಯ ಕುರಿತೇ ಅನುಮಾನ ಮೂಡಿಸಿದ್ದರಲ್ಲಿ ವಿದ್ಯಾರ್ಥಿನಿಯರ ತಪ್ಪೇನೂ ಇಲ್ಲ. ಅವರು ಯಾರೂ ಈ ಕುರಿತು ಅಪಸ್ವರ ಎತ್ತಲಿಲ್ಲ ಆದರೆ ರಾಜಕಾರಣದ ಕಾಣದ ಕೈಗಳು – ಪರಸ್ಪರ ದೂರುವುಳಿವಂತೆ ಮಾಡಿವೆ ಹೀಗೆ ಬೇರೆÀ ಇರಲು ಇಲ್ಲಿನವರು ನೀಡುವ ಕಾರಣ ವಿಜಾಪುರ ದೂರ ಎನ್ನುವುದು ಈ ದೂರ ಎಲ್ಲಿಂದ? ಯಾರಿಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಇಂದಿನ ಸಾರಿಗೆ – ಸಂಪರ್ಕ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆ ಜೊತೆಗೆ ಮಾಹಿತಿ ತಂತ್ರಜ್ಞಾನ – ಅಂತರ್ಜಾಲ ಸೌಲಭ್ಯಗಳೆಲ್ಲ ಲಭ್ಯವಿರುವಾಗ ದೂರ ಎನ್ನುವುದು ದೂರವಿರಿಸುವುದಕ್ಕೆ ನೆಪಮಾತ್ರ.
ದೂರದ ಯಾದಗಿರಿಯಿಂದ ಜನರು ಸರ್ಕಾರಿ ಅಥವಾ ಇನ್ನಿತರ ಕೆಲಸಗಳಿಗೆ ಬೆಂಗಳೂರಿಗೆ ಬರುತ್ತಾರೆ (ಸುಮಾರು 1200 ಕಿ.ಮಿ.) ಇಂಜಿನಿಯರಿಂಗ್ ಕಾಲೇಜುಗಳಿಗೆ ಬೆಳಗಾವಿ ನಡೆಯುತ್ತದೆ. ಪಶು ವೈದ್ಯಕೀಯ ಕಾಲೇಜುಗಳಿಗೆ ಬೀದರ್ ನಡೆಯುತ್ತದೆ. ಹಾಗೇ ವೈದ್ಯಕೀಯ ಕಾಲೇಜುಗಳಿಗೆ ಬೀದರಿಂದ ಬೆಂಗಳೂರು ದೂರವಲ್ಲ. ಕಾನೂನು ಕಾಲೇಜುಗಳಿಗೆ ಹುಬ್ಬಳ್ಳಿಯ ಕುರಿತು ತಕರಾರಿಲ್ಲ. ಆದರೆ ಅದೇ ಮಹಿಳಾ ಕಾಲೇಜುಗಳಿಗಾದರೆ ಬಿಜಾಪುರ ದೂರ ಬಹುಶಃ ಈ ದೂರ ಎನ್ನುವುದು ಕಿ.ಮಿ. ಅಂತರಕ್ಕಿಂತ ಹೆಚ್ಚಾಗಿ ಮಾನಸಿಕ ದೂರ ಎಂದು ಬದಿಗೆ ಸರಿಸಿದರೆ ಇಡೀ ಕರ್ನಾಟಕ ಒಂದೇ ಎಂಬ ಕಲ್ಪನೆಯನ್ನೂ ದೂರ ಸರಿಸಿದಂತಾಗುವುದಿಲ್ಲವೇ?
ಕರ್ನಾಟಕದಲ್ಲಿರುವ ಎಲ್ಲ ಜಿಲ್ಲೆಗಳ ಎಲ್ಲ ಮಹಿಳಾ ಕಾಲೇಜುಗಳೂ – ಮಹಿಳಾ ವಿಶ್ವವಿದ್ಯಾಲಯ – ಬಿಜಾಪುರ ಇದರ ವ್ಯಾಪ್ತಿಗೆ ಒಳಪಡಬೇಕಾದ್ದು ನ್ಯಾಯಯುತವಾದದ್ದು. ತನ್ಮೂಲಕ ಕರ್ನಾಟಕದ ಎಲ್ಲ ಮಹಿಳೆಯರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯ. ತಮ್ಮನ್ನು ತಾವು ಬಲಗೊಳಿಸಿಕೊಳ್ಳಲು ಅಗತ್ಯವಾದ ಅವಕಾಶವನ್ನು ಕಲ್ಪಿಸಿಕೊಟ್ಟಾಗ ಅದರ ಪ್ರಯೋಜನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳದೆ ಹೋದರೆ ತಪ್ಪು ಯಾರದ್ದಾಗುತ್ತದೆ? ಘನ ಉದ್ದೇಶದಿಂದ ಸ್ಥಾಪಿತವಾದ ಒಂದು ವಿಶ್ವವಿದ್ಯಾಲಯವನ್ನು ಒಂದು ಭಾಗಕ್ಕಷ್ಟೇ ಸೀಮಿತಗೊಳಿಸಿದರೆ – ಅಲ್ಲಿನವರ ಮನೋಭಾವ ದಕ್ಷಿಣ ಕರ್ನಾಟಕದ ಕುರಿತು ಏನಾಗಿ ಬೆಳೆಯಬಹುದು? ಪರಸ್ಪರ ಹೊಂದಿಕೊಂಡು – ಕೇವಲ ತಮ್ಮ ದೂರವನ್ನಷ್ಟೇ ದೊಡ್ಡದು ಮಾಡದೆ ದೊಡ್ಡ ಮನಸ್ಸು ಮಾಡಿದರೆ – ಅಖಂಡ ಕರ್ನಾಟಕದ ಪರಿಕಲ್ಪನೆಗೆ ಅರ್ಥ ಪ್ರಾಪ್ತವಾದೀತಲ್ಲವೇ? ಈ ದಿಶೆಯಲ್ಲಿ ಸಂಬಂಧಪಟ್ಟ ಮಹಿಳಾ ಕಾಲೇಜುಗಳಿಗೆ ಸರಕಾರ ತಿಳಿಹೇಳುವ ತುರ್ತು- ಅಗತ್ಯವೆನಿಸಿದರೆ ಕಾನೂನು ರೀತ್ಯಾ ಅವುಗಳನ್ನೆಲ್ಲ ಒಂದೇ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಡೆ ತಂದರೆ – ವಿಶ್ವವಿದ್ಯಾಲಯದ ಸ್ಥಾಪನೆಯ ಉದ್ದೇಶ ನೆರವೇರಬಹುದು. ಮತ್ತು ವಿಶ್ವವಿದ್ಯಾಲಯ ಸದೃಢವಾಗಿ ಬೆಳೆಯಲು ಸಾಧ್ಯವಾಗಬಹುದು. ಯಾವುದಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಪ್ರಾಪ್ತವಾಗಬೇಕು! ಮಹಾರಾಷ್ಟ್ರದ ಎಸ್.ಎನ್.ಡಿ.ಟಿ. ಯಂತೆ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯವೂ ಯಾಕೆ ಬೆಳೆಯಬಾರದು? ಯಾಕೆ ಬೆಳೆಯಬಾರದು ಎಂಬುದಕ್ಕಿಂತ ಯಾಕೆ ಬೆಳೆಸಬಾರದು? ಯೋಚಿಸಲು ಇದು ಸಕಾಲ.
ರವೀಂದ್ರ ಭಟ್ ಕುಳಿಬೀಡು.
ಐಕ್ಯತೆ ಹಾಗೂ ಸೌಹಾರ್ಧತೆಯನ್ನು ಪ್ರದರ್ಶಿಸಿ
ಐಕ್ಯತೆ ಹಾಗೂ ಸೌಹಾರ್ಧತೆಯ ಧ್ಯೋತಕವಾಗಿ ಟಿಪ್ಪುಸುಲ್ತಾನ್ ಜಯಂತ್ಯುತ್ಸವವನ್ನು ಆಚರಿಸುವಂತೆ ಶಾಸಕ ಎಂ.ರಾಜಣ್ಣ ಕರೆ ನೀಡಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತಿ, ನಗರಸಭೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಟಿಪ್ಪುಸುಲ್ತಾನ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಅನೇಕ ಸಾಮಂತರು, ರಾಜರು ಬ್ರಿಟಿಷರೊಂದಿಗೆ ಕೈ ಜೋಡಿಸಿ ಅಧಿಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ವಿರುದ್ಧ ತಿರುಗಿ ಬಿದ್ದವರು ಹೈದರ್ ಅಲಿ ಹಾಗೂ ಟಿಪ್ಪುಸುಲ್ತಾನ್. ಹಿಂದೂ- ಮುಸ್ಲಿಮರ ನಡುವೆ ಒಡಕನ್ನು ಮೂಡಿಸಿ ಲಾಭ ಪಡೆಯಲು ಬ್ರಿಟಿಷರು ಯತ್ನಿಸುತ್ತಿದ್ದಾಗ ಟಿಪ್ಪು ಹಿಂದೂ-ಮುಸ್ಲಿಮರ ನಡುವೆ ಐಕ್ಯತೆ, ಸದ್ಭಾವನೆಯನ್ನು ಬೆರೆಸಲು ಪ್ರಯತ್ನ ಪಡುತ್ತಿದ್ದರು. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಹಿಂದೂ -ಮುಸ್ಲಿಮರು ಒಂದಾಗಬೇಕು. ಜಾತಿ, ಧರ್ಮಗಳ ಆಧಾರದಲ್ಲಿ ಸಮಾಜವನ್ನು ಒಡೆಯುವ ದುಷ್ಟಶಕ್ತಿಗಳನ್ನು ತಿರಸ್ಕರಿಸಬೇಕು. ಈ ಸಂಬಂಧ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲ ಮೊಹಮ್ಮದ್ ಖಾಸೀಂ ಮಾತನಾಡಿ, ಈ ಭಾಗದ ರೈತರ ಜೀವನಾಡಿಯಾಗಿರುವ ರೇಷ್ಮೆ ಬೆಳೆಯನ್ನು ಮೊಟ್ಟಮೊದಲು ನಮ್ಮ ಭಾಗಕ್ಕೆ ಪರಿಚಯಿಸಿದ್ದು ಟಿಪ್ಪುಸುಲ್ತಾನ್ ಹಾಗಾಗಿ ಈ ಭಾಗದ ಜನ ಅವರನ್ನು ಸದಾ ಸ್ಮರಿಸಬೇಕು. ದೇಶಕ್ಕೋಸ್ಕರ ತಮ್ಮ ಸ್ವಂತ ಮಕ್ಕಳನ್ನು ಒತ್ತೆಯಿಟ್ಟು ಸಾಯುವ ತನಕ ಹೋರಾಡಿ ಹುತಾತ್ಮರಾದರು. ಮೊಟ್ಟಮೊದಲು ಯುದ್ಧದಲ್ಲಿ ಕ್ಷಿಪಣಿಯ ಪ್ರಯೋಗಿಸಿದ್ದ ಎಂಬ ಕಾರಣಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯವರು ಟಿಪ್ಪುವಿನ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರದಲ್ಲಿ ಅಲ್ಪಸಂಖ್ಯಾತರ ಕಾರ್ಯಕ್ರಮ ನಡೆಸಲು ಟಿಪ್ಪು ಭವನವೊಂದನ್ನು ನಿರ್ಮಿಸಬೇಕು ಹಾಗೂ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಟಿಪ್ಪು ವಸತಿ ಶಾಲೆಯನ್ನು ಮಂಜೂರು ಮಾಡಿಸುವಂತೆ ಕೋರಿ ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಮನವಿಪತ್ರವನ್ನು ಸಲ್ಲಿಸಿದರು.
ವಕೀಲರಾದ ನೌಷಾದ್, ಯಾಸ್ಮೀನ್ ತಾಜ್, ಸರ್ಕಾರಿ ಆಸ್ಪತ್ರೆಯ ಅಧಿಕಾರಿ ಸಮೀವುಲ್ಲಾ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಮುಸ್ಲೀಂ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು. ಉರ್ದು ಪೌಢಶಾಲೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಶಾಸಕ ಎಂ.ರಾಜಣ್ಣ ಅವರಿಗೆ ಕತ್ತಿಯನ್ನು ನೀಡಿ ಮೈಸೂರು ಪೇಟವನ್ನಿಟ್ಟು ಗೌರವಿಸಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ನಗರಸಭೆ ಆಯುಕ್ತ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಟಿಪ್ಪುಸುಲ್ತಾನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಜಿ.ರೆಹಮಾನ್, ರಹಮತ್ತುಲ್ಲ, ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ನಗರಸಭೆ ಸದಸ್ಯ ಅಫ್ಸರ್ಪಾಷ, ಸಿಕಂದರ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮೌಲಾ, ರಾಜ್ಯ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಹ್ಮದ್ ಹುಸೇನ್, ನಜೀರ್ಸಾಬ್, ಬಂಕ್ ಮುನಿಯಪ್ಪ, ದೊಣ್ಣಹಳ್ಳಿ ರಾಮಣ್ಣ, ಸಾದಿಕ್, ಬುರುಡುಗುಂಟೆ ಬಷೀರ್, ಅಫ್ಜಲ್ ಪಾಷ, ಜಾಮಿಯಾ ಮತ್ತು ಮದೀನಾ ಮಸೀದಿಯ ಧರ್ಮಗುರುಗಳು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಮನೆ ಹಂಚಿಕೆ ಕಾನೂನು ಬಾಹಿರ
ಸಾಮಾಜಿಕ ನ್ಯಾಯ ಹಾಗೂ ನಿಯಮಗಳನ್ನು ಮೀರಿ ಬಡವರ ಮನೆಗಳ ಹಂಚಿಕೆ ಮಾಡಿದ ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಬಡವರ ವಿರೋಧಿಗಳು ಎಂದು ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಗೆ ಶಾಸಕರ ಮೂಲಕ ಬಸವ ವಸತಿ ಯೋಜನೆಯಡಿಯಲ್ಲಿ 31 ಮನೆಗಳು ಹಾಗೂ ಐಎವೈ ಯೋಜನೆಯಲ್ಲಿ 18 ಮನೆಗಳು ಮಂಜೂರಾಗಿದ್ದವು. ಜೆಡಿಎಸ್ ಬೆಂಬಲಿತ ಏಳು ಸದಸ್ಯರು 21 ಮನೆಗಳನ್ನು ಹಾಗೂ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, 29 ಮನೆಗಳನ್ನು ತಮ್ಮ ಕ್ಷೇತ್ರದ ಬಡವರಿಗೆ ನೀಡಲು ಒಡಂಬಡಿಕೆಗೆ ಬಂದೆವು. ಆದರೆ ಗ್ರಾಮ ಪಂಚಾತಿಯ ಕಾಂಗ್ರೆಸ್ ಬೆಂಬಲಿತರು ಅನುಮೋದನೆ ಹಾಗೂ ಕಂಪ್ಯೂಟರ್ನಲ್ಲಿ ಸೇರಿಸುವ ಸಂದರ್ಭದಲ್ಲಿ ಜೆಡಿಎಸ್ ಬೆಂಬಲಿತರ 12 ಮನೆಗಳನ್ನು ಉಳಿಸಿ ತಾವುಗಳು 37 ಮನೆಗಳನ್ನು ತೆಗೆದುಕೊಂಡಿದ್ದಾರೆ. ಈ ಅನ್ಯಾಯದ ಬಗ್ಗೆ ನಾವು ಪ್ರಶ್ನಿಸಿದೆವು. ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು, ಸಮರ್ಪಕವಾಗಿ ನಡೆಯದ ಫಲಾನುಭವಿಗಳ ಆಯ್ಕೆಯನ್ನು ಪುನಃ ನಡೆಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದೆವು ಎಂದರು.
ಫಲಾನುಭವಿಗಳ ಆಯ್ಕೆಗಾಗಿ ನಡೆಸಬೇಕಾದ ಗ್ರಾಮ ಸಭೆಯಲ್ಲಿ ಕೇವಲ ಅರ್ಜಿಗಳನ್ನು ಸ್ವೀಕರಿಸಿ ಗ್ರಾಮ ಸಭೆಯನ್ನು ಮುಕ್ತಾಯ ಮಾಡಿದ್ದರು. ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಏಕಪಕ್ಷೀಯವಾಗಿ ಪಟ್ಟಿ ತಯಾರಿಸಿ ಗ್ರಾಮ ಪಂಚಾಯತಿಯ ಅನುಮೋದನೆ ನೀಡಿರುವುದು ಕಾನೂನು ಬಾಹಿರ. ವಸತಿ ರಹಿತ ಫಲಾನುಭವಿಗಳ ಪಟ್ಟಿ ಗ್ರಾಮ ಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬಂದಿಲ್ಲ. ಕಾನೂನು ಬಾಹಿರವಾಗಿ ತಯಾರಿಸಲಾದ ಪಟ್ಟಿಯನ್ನು ಸರ್ಕಾರೇತರ ಸಂಸ್ಥೆಯ ಸಹಯೋಗದಲ್ಲಿ ಕರೆದಿದ್ದ ಸಭೆಯ ನಡಾವಳಿಯಲ್ಲಿ ಕಾನೂನು ಬಾಹಿರವಾಗಿ ಸೇರಿಸಿದ್ದಾರೆ. ಈ ಬಗ್ಗೆ ನಾವು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಾಸಕರಿಗೆ ಲಿಖಿತವಾಗಿ ದೂರು ನೀಡಿದ್ದೆವು. ಅವರು ಕ್ರಮ ಕೈಗೊಳ್ಳದ ಕಾರಣ ತಾಲ್ಲೂಕು ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದೆವು ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರದಿಂದ ಸಿಗುವ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಶಿಡ್ಲಘಟ್ಟ ಕ್ಷೇತ್ರ ಮೊದಲಸ್ಥಾನವನ್ನು ಪಡೆದಿದೆ. ಈ ಮಾನದಂಡವನ್ನು ಪರಿಗಣಿಸದೇ ಕ್ಷುಲ್ಲಕವಾಗಿ ಶಾಸಕರ ರಾಜೀನಾಮೆಗೆ ಒತ್ತಾಯಿಸಿರುವುದು ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಅವರ ಅಪ್ರಬುದ್ಧತೆಯನ್ನು ತೋರಿಸುತ್ತದೆ. ದಿಬ್ಬೂರಹಳ್ಳಿ ಪಂಚಾಯತಿಗೆ ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷರಾಗಿ ರಾಜು ಅವರ ಕೊಡುಗೆಯೇನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಶಾಸಕರಾದವರು ಸರ್ಕಾರ ಮಟ್ಟದಲ್ಲಿ ಕ್ಷೇತ್ರಕ್ಕೆ ವಿವಿಧ ಯೋಜನೆಗಳನ್ನು ತರುತ್ತಾರೆ. ಆದರೆ ಪಕ್ಷದ ವಿವಿಧ ಮುಖಂಡರು ಸಾಮಾಜಿಕ ನ್ಯಾಯವನ್ನು ಮರೆತು ರಾಜಕೀಯ ಮಾಡುತ್ತಾರೆ. ಪಂಚಾಯತಿ ಮಟ್ಟದಲ್ಲಿ ನಡೆಯುವ ಅಸಮಾನತೆ, ಅನ್ಯಾಯಗಳನ್ನು ಸರಿಪಡಿಸದೇ ಶಾಸಕರನ್ನು ದೂರುವುದು ತರವಲ್ಲ ಎಂದು ಹೇಳಿದರು.
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀನಿವಾಸ್, ನರಸಿಂಹಪ್ಪ, ಮಧು, ವೇಣುಗೋಪಾಲ್, ಚಿಕ್ಕನರಸಿಂಹಪ್ಪ, ಟೈಲರ್ ಶಿವಣ್ಣ, ಶ್ರೀನಿವಾಸರೆಡ್ಡಿ, ಬಿ.ಸಿ.ಮಂಜುನಾಥ್, ಡಿ.ಜಿ.ರಾಮಚಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗರಸಭೆ ಅನುದಾನ ದರ್ಬಳಕೆಯಾಗಿದೆ
ಕಳೆದ ಹತ್ತು ವರ್ಷಗಳಿಂದ ನಗರಸಭೆಗೆ ಸರ್ಕಾರದಿಂದ ಬರುತ್ತಿರುವ ಅನುದಾನಗಳು ದುರುಪಯೋಗವಾಗಿದ್ದು, ನಗರದ ಅಭಿವೃದ್ಧಿ ಕುಂಠಿತವಾಗಿದೆ. ಅನುದಾನಗಳ ಬಳಕೆಯ ಕುರಿತಂತೆ ಲೋಕಾಯುಕ್ತ ತನಿಖೆ ನಡೆಯಬೇಕೆಂದು ಕೆಲ ನಗರಸಭಾ ಸದಸ್ಯರು ಒತ್ತಾಯಿಸಿದರು.
ನಗರಸಭೆಯಲ್ಲಿ ಸೋಮವಾರ ಅನುದಾನಗಳ ಹಂಚಿಕೆ ಹಾಗೂ ಬಳಕೆಯ ಕುರಿತಂತೆ ಮತ್ತು ನಗರಾಭಿವೃದ್ಧಿಗೆ ವಿವಿಧ ಯೋಜನೆಗಳಡಿಯಲ್ಲಿ ಕರೆಯಲಾಗಿದ್ದ ಟೆಂಡರ್ ದರಗಳನ್ನು ಅನುಮೋದಿಸುವ ಬಗ್ಗೆ ಕರೆಯಲಾಗಿದ್ದ ತುರ್ತು ಸಭೆಯಲ್ಲಿ ನಗರ ಸಭೆಯ ಸದಸ್ಯರ ನಡುವೆ ವಾಗ್ಯುದ್ಧ ನಡೆಯಿತು. ಒಬ್ಬರನ್ನೊಬ್ಬರು ಬೈದಾಡುತ್ತಾ ಹೊಡೆದಾಡುವ ಮಟ್ಟಕ್ಕೂ ಹೋಗುತ್ತಾ ಒಬ್ಬರನ್ನೊಬ್ಬರು ನಿಂದಿಸುತ್ತಾ ಆರೋಪಗಳು ಹಾಗೂ ಪ್ರತ್ಯಾರೋಪಗಳು ನಡೆಯಿತು. ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮಹಿಳಾ ಸದಸ್ಯರು ಏನು ನಡೆಯುತ್ತಿದೆ ಎಂದು ತಿಳಿಯದೇ ನೋಡುತ್ತಾ ಕುಳಿತಿದ್ದರು.
ಕಳೆದ ಬಾರಿ ತಾತಹಳ್ಳಿ, ಚಾಗೆ ಸಮೀಪ 22.50 ಎಕರೆ ಜಮೀನು ಪುರಸಭೆಯಿಂದ ಖರೀದಿಸಿದ್ದು. ಒಂದು ಎಕರೆಗೆ ಏಳು ಲಕ್ಷ 25 ಸಾವಿರ ರೂಗಳಂತೆ ನಿಗದಿಪಡಿಸಲಾಗಿತ್ತು. ಆದರೆ ರೈತರಿಗೆ ಒಂದು ಎಕರೆಗೆ ಕೇವಲ 2.25 ಲಕ್ಷ ರೂಗಳು ಹಣ ಮಾತ್ರ ಸೇರಿದೆ. ಉಳಿಕೆ ಹಣ ದುರ್ಬಳಕೆಯಾಗಿದೆ. ಈ ಜಮೀನಿನ ಖರೀದಿಯ ಹಣದ ವಿಷಯವಾಗಿ ನಗರಸಭಾ ಸದಸ್ಯರಿಗೆ ಯಾವುದೇ ಮಾಹಿತಿ ನೀಡಿಲ್ಲ. ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನಗಳು ಬಂದಿದ್ದರೂ ಸಹ ನಗರದಲ್ಲಿ ಸ್ವಚ್ಛತೆಯಿಲ್ಲ, ನೀರಿನ ಸಮಸ್ಯೆ ಬಗೆಹರಿಸಿಲ್ಲ, ಬೀದಿ ದೀಪಗಳ ವ್ಯವಸ್ಥೆಯಿಲ್ಲದೆ ಹಲವಾರು ಬೀದಿಗಳು ಕತ್ತಲಲ್ಲಿವೆ. ಹಲವು ವಾರ್ಡುಗಳಿಗೆ ಹದಿನೈದು ದಿನಗಳಾದರೂ ನೀರು ಸರಬರಾಜಾಗುತ್ತಿಲ್ಲ. ಇನ್ನು ರಸ್ತೆಗಳಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡು ಓಡಾಡಬೇಕಾಗಿದೆ. ಸೊಳ್ಳೆಗಳ ಕಾಟದಿಂದಾಗಿ ನಗರದ ಕೆಲ ವಾರ್ಡುಗಳಂತೂ ಬದುಕು ಕಷ್ಟಕರವಾಗಿದೆ. ಜನಪ್ರತಿನಿಧಿಗಳಾಗಿದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ಏನೂ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾದಿಂದ ಬರುತ್ತಿರುವ ಅನುದಾನಗಳ ಸೋರಿಕೆಯನ್ನು ತಡೆಗಟ್ಟಲು ತಕ್ಷಣ ಲೋಕಾಯುಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕಳೆದ ಒಂದು ವರ್ಷಗಳಿಂದ ನಗರಸಭಾ ಸದಸ್ಯರಿಗೆ ಗೌರವಧನ ನೀಡದೆ ಇರುವ ವಿಚಾರವಾಗಿ ಚರ್ಚೆ ನಡೆಯಿತು. ಕಳೆದ ರಂಜಾನ್ ಹಬ್ಬಕ್ಕೆ ಮುಸ್ಲಿಂ ಸದಸ್ಯರಿಗೆ ಮಾತ್ರ ಗೌರವಧನ ನೀಡಲಾಗಿದೆ, ಇತರೇ ಯಾವ ಸದಸ್ಯರಿಗೂ ನೀಡದೇ ತಾರತಮ್ಯ ಮಾಡಲಾಗಿದೆ. ದೀಪಾವಳಿ ಹಬ್ಬಕ್ಕೆ ಉಳಿದ ಸದಸ್ಯರಿಗೆ ಗೌರವಧನ ನೀಡಬೇಕೆಂದು ಕೆಲ ಸದಸ್ಯರು ಬೇಡಿಕೆ ಇಟ್ಟಾಗ, ಡಿ ಗ್ರೂಪ್ ನೌಕರರಿಗೆ 6 ತಿಂಗಳಿಂದಲೂ ವೇತನ ನೀಡಿಲ್ಲ, ಮೊದಲು ಅವರಿಗೆ ವೇತನ ನೀಡಿ ಇನ್ನು ಕೆಲವರು ಹೇಳಿದರು. ಆಗ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಮಧ್ಯ ಪ್ರವೇಶಿಸಿದ ನಗರಸಭಾ ಆಯುಕ್ತರು ಹಾಗೂ ಕೆಲ ಸದಸ್ಯರು ಬೈದಾಡುತ್ತಿದ್ದವರನ್ನು ಸಮಾಧಾನ ಪಡಿಸಲು ಹರಸಾಹಸ ಮಾಡಿದರು.
ನಗರಸಭಾ ಅಧ್ಯಕ್ಷೆ ಮುಷ್ಠರಿ ತನ್ವೀರ್, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ನಗರಸಭಾ ಆಯುಕ್ತ ಹರೀಶ್, ಸದಸ್ಯರಾದ ಅಫ್ಸರ್ಪಾಷ, ವೆಂಕಟಸ್ವಾಮಿ, ಕಿಶನ್, ಲಕ್ಷ್ಮಣ್, ಜಬೀವುಲ್ಲಾ, ವಹೀದಾ ಕೌಸರ್, ಬಾಲಕೃಷ್ಣ, ಷಫೀವುಲ್ಲಾ, ಪ್ರಭಾವತಿ ಸುರೇಶ್, ಸಂಧ್ಯಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಾಶ್ವತ ನೀರಾವರಿ ಹೋರಾಟದಲ್ಲಿ ಡಾ.ಡಿ.ಕೆ.ರಮೇಶ್ ತಂಡ
ಅವಿಭಜಿತ ಕೋಲಾರ ಜಿಲ್ಲೆ ಸೇರಿದಂತೆ ಬಯಲುಸೀಮೆಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಗ್ರಹವನ್ನು ಬೆಂಬಲಿಸಿ ಕೋಲಾರದಿಂದ ಚದಲಪುರದವರೆಗೆ ಡಾ.ಡಿ.ಕೆ.ರಮೇಶ್ ಭಾನುವಾರ ಬೈಕ್ರ್ಯಾಲಿ ನಡೆಸಿದರು.
ಕೋಲಾರದಿಂದ ಶಿಡ್ಲಘಟ್ಟ ಮಾರ್ಗವಾಗಿ ಬಂದ ಡಾ.ಡಿ.ಕೆ.ರಮೇಶ್ ತಂಡವನ್ನು ನಗರದ ಹೊರವಲಯದ ಒಕ್ಕಲಿಗರ ಸಂಘದ ಕಚೇರಿಯ ಸಮೀಪ ಭವ್ಯವಾಗಿ ಸ್ವಾಗತಿಸಿಸಲಾಯಿತು. ಅಲ್ಲಿಂದ ತೆರೆದ ಜೀಪಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ತಂಡಕ್ಕೆ ಜನರು ಬೆಂಬಲ ವ್ಯಕ್ತಪಡಿಸಿ ಬೀಳ್ಕೊಟ್ಟರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಾಧ್ಯಕ್ಷ ಶ್ರೀನಿವಾಸ್, ರಾಮಚಂದ್ರಪ್ಪ, ರೈತ ಮುಖಂಡರಾದ ರಾಮಕೃಷ್ಣಪ್ಪ, ಎಚ್.ಕೆ.ಸುರೇಶ್, ಬೈಯಣ್ಣ ಮತ್ತಿತರರು ಹಾಜರಿದ್ದರು.
ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಬಿಂಬಿಸುವ ಚಿತ್ರ ಪ್ರದರ್ಶನ
ಶಿಕ್ಷಕರು ನಿರ್ಮಿಸಿದ ಚಲನಚಿತ್ರವೊಂದನ್ನು ಶಿಕ್ಷಕರೊಬ್ಬರು ನಿರ್ದೇಶಿಸಿದ್ದು, ಅದನ್ನು ಕೆಲವು ಸಮಾನಮನಸ್ಕ ಶಿಕ್ಷಕರು ತಾಲ್ಲೂಕಿನ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ತೋರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ವೃತ್ತಿಯಲ್ಲಿ ಕನ್ನಡ ಶಿಕ್ಷಕರು. ಪ್ರವೃತ್ತಿಯಲ್ಲಿ ಕವಿ, ನಾಟಕಕಾರರಾದ ಎಲ್.ಎನ್.ಮುಕುಂದರಾಜ್. ಮಾತೃಭಾಷೆಗೆ ಸಂಬಂಧಿಸಿದಂತೆ ನಿರ್ದೇಶಿಸಿರುವ ‘ಕಾಡ ಹಾದಿಯ ಹೂಗಳು’ ಎಂಬ ಮಕ್ಕಳ ಚಿತ್ರವನ್ನು ತಾಲ್ಲೂಕಿನ ಹಾರಡಿಯ ಸರ್ಕಾರಿ ಶಾಲಾ ಶಿಕ್ಷಕರಾದ ಬಸವರಾಜ್ ಮತ್ತು ಸಮಾನ ಮನಸ್ಕ ಶಿಕ್ಷಕರ ತಂಡ ಮಕ್ಕಳಿಗೆ ತೋರಿಸುವ ಪ್ರಯತ್ನದಲ್ಲಿದ್ದಾರೆ. ತಾಲ್ಲೂಕಿನ ಎಚ್.ಕ್ರಾಸ್ನಲ್ಲಿರುವ ವೆಂಕಟೇಶ್ವರ ಚಿತ್ರಮಂದಿರದಲ್ಲಿ ನವೆಂಬರ್ 15 ರ ಭಾನುವಾರ ಮತ್ತು ನವೆಂಬರ್ 16 ರ ಸೋಮವಾರ ಪ್ರದರ್ಶಿಸಲು ಆಯೋಜಿಸಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮಕ್ಕಳ ಚಲನಚಿತ್ರ ಪ್ರದರ್ಶನವನ್ನು ಬೆಳಿಗ್ಗೆ 8 ರಿಂದ 10 ಗಂಟೆಯ ನಡುವೆ ನಡೆಸಬೇಕು ಮತ್ತು ಪ್ರತಿ ವಿದ್ಯಾರ್ಥಿಯಿಂದ 10 ರೂ ಮಾತ್ರ ಪಡೆಯಬೇಕೆಂದು ನಿರ್ದೇಶನ ನೀಡಿದೆ.
ಮುದ್ದು ತೀರ್ಥಹಳ್ಳಿ ಎನ್ನುವ ಹುಡುಗಿಯೊಬ್ಬಳು ಬರೆದ ಕಾದಂಬರಿ ಆಧರಿಸಿದ ಚಿತ್ರ ಇದು. ಆಕೆ ಆರನೇ ತರಗತಿಯವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಓದಿ, ನಂತರ ಕನ್ನಡ ಮಾಧ್ಯಮದಲ್ಲೇ ಓದಬೇಕೆಂದು ತೀರ್ಮಾನಿಸಿ ಹೆತ್ತವರ ಜೊತೆ ಜಗಳ ಮಾಡಿ ಏಳನೇ ತರಗತಿಯಿಂದ ಕನ್ನಡದಲ್ಲಿಯೇ ಓದುತ್ತಿದ್ದಾಳೆ. ತಾನು ತುಳಿದ ಹಾದಿ, ಅದರ ಅನುಭವಗಳನ್ನೆಲ್ಲ ಒಟ್ಟಾಗಿಸಿ ‘ಕಾಡ ಹಾದಿಯ ಹೂಗಳು’ ಎಂಬ ಕಾದಂಬರಿ ಬರೆದಿದ್ದಾಳೆ. ಅದೇ ಹೆಸರನ್ನು ಇಟ್ಟುಕೊಂಡು ಅವರು ಚಿತ್ರ ಮಾಡಿದ್ದಾರೆ.
‘ಕಲಿಕಾ ಭಾಷೆಯ ಬಗ್ಗೆ ಮಕ್ಕಳು ಹಾಗೂ ಪೋಷಕರಿಗೆ ಪ್ರಬಲವಾದ ಸಂದೇಶವನ್ನು ಈ ಚಲನಚಿತ್ರ ನೀಡುತ್ತದೆ. ಕನ್ನಡ ಭಾಷೆಯಲ್ಲಿ, ಅಂದರೆ ಮಾತೃಭಾಷೆಯಲ್ಲಿ ಕಲಿಯುವ ಮಕ್ಕಳ ಅಭಿವ್ಯಕ್ತಿ ಶಕ್ತಿ, ಗ್ರಹಿಕೆ, ಮಾನವೀಯ ಗುಣ, ಅರಿಯುವ ಕುತೂಹಲ ಹಾಗೂ ಕ್ರಿಯಾಶೀಲತೆ ಚೆನ್ನಾಗಿರುತ್ತದೆ. ಅದೇ ಇಂಗ್ಲಿಷ್ ಮೋಹಕ್ಕೆ ಬಿದ್ದು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಸುವ ಪೋಷಕರು ಮಕ್ಕಳ ಕ್ರಿಯಾಶೀಲತೆಯನ್ನು ಹೇಗೆ ಕೊಲೆ ಮಾಡುತ್ತಾರೆ, ಅಂತಹ ಮಕ್ಕಳ ವ್ಯಕ್ತಿತ್ವ ಹೇಗೆ ಕುಬ್ಜವಾಗುತ್ತ ಹೋಗುತ್ತದೆ ಎಂಬುದು ಚಿತ್ರದ ಕಥೆ. ಇದರಲ್ಲಿ ಮಕ್ಕಳಿಗೂ ಸಂದೇಶವಿದೆ. ಹಾಗೆಯೇ ದೊಡ್ಡವರಿಗೂ. ಶಿಶುನಾಳ ಷರೀಫರ ‘ಸಾಲಿಯ ನೋಡಿದಿರ ಸರ್ಕಾರದ ಸಾಲಿಯ ನೋಡಿದಿರ…’ ಹಾಡನ್ನು ಚಿತ್ರದಲ್ಲಿ ಬಳಸಿದ್ದು, ಸರ್ಕಾರಿ ಶಾಲೆಯ ಹಿರಿಮೆಯನ್ನು ಸಾರುತ್ತದೆ’ ಎಂದು ಶಿಕ್ಷಕ ಬಸವರಾಜ್ ತಿಳಿಸಿದರು.
‘ಕಾಡ ಹಾದಿಯ ಹೂಗಳು ಕೃತಿ ಕಾದಂಬರಿಯೂ ಹೌದು, ಅನುಭವ ಕಥನವೂ ಹೌದು, ಹಾಗೆಯೇ ಶೈಕ್ಷಣಿಕ ಪಠ್ಯಪುಸ್ತಕವೂ ಹೌದೆಂಬುದು ನನ್ನ ಖಚಿತ ನಿಲುವು. ಶಿಕ್ಷಕರಿಗೆ ಒಂದು ಮಾದರಿ ಕೈಪಿಡಿಯಾಗಬಹುದಾದ ಇದು ಮಕ್ಕಳಿಗೆ ಬುದ್ಧಿ, ಮನೋವಿಕಾಸದ ಕಥೆಯೂ ಆಗಿದೆ ಎಂದು ಮೆಚ್ಚದೆ ಹೋದರೆ ಜಿಪುಣತನವಾದೀತು’ ಎಂದು ಸಾಹಿತಿ ಸ.ರಘುನಾಥ ಅವರು ಪುಸ್ತಕ್ ಬೆನ್ನುಡಿಯಲ್ಲಿ ಬರೆದ ಮಾತುಗಳು ಚಲನಚಿತ್ರಕ್ಕೂ ಅನ್ವಯಿಸುತ್ತದೆ. ತಾಲ್ಲೂಕಿನ ಹಾರಡಿ, ಎಚ್.ಕ್ರಾಸ್, ಉರುಟ ಅಗ್ರಹಾರ, ಕನ್ನಮಂಗಲ, ಕುವೆಂಪು ಶಾಲೆ, ಕುಂಬಿಗಾನಹಳ್ಳಿ, ಕಾಳನಾಯಕನಹಳ್ಳಿ, ಯಣ್ಣೂರು, ಬೀಚಗೊಂಡಹಳ್ಳಿ ಮುಂತಾದ ಶಾಲಾ ಶಿಕ್ಷಕರು ಜೊತೆಗೂಡಿದ್ದು ತಮ್ಮ ಮಕ್ಕಳಿಗೆ ಹಾಗೂ ಪೋಷಕರಿಗೆ ಈ ಚಿತ್ರವನ್ನು ತೋರಿಸಲು ಉತ್ಸುಕರಾಗಿದ್ದಾರೆ. ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಈ ಮೂಲಕ ತಿಳಿಯಪಡಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ಹೇಳಿದರು.
ಓಡಾಡುವ ರಸ್ತೆಯಲ್ಲಿ ಚರಂಡಿ ನೀರು
ತಾಲ್ಲೂಕಿನ ಹೊಸಪೇಟೆ ಗ್ರಾಮದಿಂದ ವಿಜಯಪುರದ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿಯ ತ್ಯಾಜ್ಯ ನೀರು ಹರಿಯುತ್ತಿದ್ದು ಓಡಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ನೀರು ಸರಾಗವಾಗಿ ಹರಿಯುವಂತೆ ಚರಂಡಿ ವ್ಯವಸ್ಥೆ ರೂಪಿಸದ ಕಾರಣ, ಈಗಾಗಲೇ ಹದಗೆಟ್ಟಿದ್ದ ರಸ್ತೆಯಲ್ಲಿ ತ್ಯಾಜ್ಯದ ನೀರು ಹರಿಯುತ್ತಿದೆ. ಗ್ರಾಮದ ಪ್ರಮುಖ ದೇವಾಲಯಗಳಾದ ಚನ್ನಕೇಶ್ವರಸ್ವಾಮಿ ಹಾಗೂ ಸೋಮೇಶ್ವರಸ್ವಾಮಿ ಈ ಮಾರ್ಗದಲ್ಲಿದ್ದು, ಹೆಚ್ಚಾಗಿ ಗ್ರಾಮಸ್ಥರು ಬಳಸುವ ರಸ್ತೆಯಾಗಿದೆ. ಮಳೆ ಬಂದಲ್ಲಿ ಈ ಮಾರ್ಗದಲ್ಲಿ ನಡೆದು ಹೋಗುವುದೂ ದುಸ್ಥರವಾಗುತ್ತದೆ. ಹಲವು ದ್ವಿಚಕ್ರ ವಾಹನ ಸವಾರರು ಈ ಹದಗೆಟ್ಟ ರಸ್ತೆಯಲ್ಲಿ ಬಿದ್ದು ಪೆಟ್ಟು ಮಾಡಿಕೊಂಡ ನಿದರ್ಶನಗಳೂ ಇವೆ. ಗ್ರಾಮಸ್ಥರು ಹಲವಾರು ಬಾರಿ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದರೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ. ಮೊದಲು ಚರಂಡಿಯನ್ನು ದುರಸ್ಥಿಗೊಳಿಸಿ ಚರಂಡಿ ನೀರು ರಸ್ತೆಯಲ್ಲಿ ಹರಿಯದಂತೆ ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಖಾಯಿಲೆಗಳೂ ಹರಡುತ್ತಿವೆ. ತಾತ್ಕಾಲಿಕವಾದರೂ ರಸ್ತೆಯನ್ನು ಸರಿಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಮಾರ್ಗದಲ್ಲಿ ಮೇಯಿಸಲು ಜಾನುವಾರುಗಳನ್ನು ಕರೆದುಕೊಂಡು ಹೋಗಲಾಗುತ್ತದೆ. ಹೆಣ್ಣು ಮಕ್ಕಳು ಹಾಗೂ ಹಿರಿಯರು ಜಾನುವಾರುಗಳಿಗಾಗಿ ಮೇವಿನ ಹೊರೆ ಹೊತ್ತುಕೊಂಡು ಇದೇ ದಾರಿಯಲ್ಲಿ ಹೋಗಿ ಬರಬೇಕಾಗುತ್ತದೆ. ಪಂಚಾಯತಿ ಕೇಂದ್ರದಲ್ಲೇ ದಿನಬಳಕೆಯ ರಸ್ತೆಯನ್ನು ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಇಟ್ಟುಕೊಂಡಿರುವುದು ಸರಿಯಲ್ಲ. ಆದಷ್ಟು ಬೇಗ ರಸ್ತೆಯ ಸ್ಥಿಯನ್ನು ಸುಧಾರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪರೀಕ್ಷೆಗಳಿಂದಷ್ಟೇ ಪದವಿ ಪ್ರಾಪ್ತಿ?
ಯಾವುದೇ ಒಂದು ವ್ಯವಸ್ಥೆಯೊಳಗೆ ವ್ಯಕ್ತಿಯೊಬ್ಬನ ಅಂತಃಸತ್ವವನ್ನು ಅಳೆಯಲು ಪರೀಕ್ಷೆ ನಡೆಸಬೇಕಾದದ್ದು ಅನಿವಾರ್ಯ. ನಮ್ಮ ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವೇ ಈ ಪರೀಕ್ಷೆ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೊತ್ತರ ಪದವಿಯವರೆಗೂ ಪ್ರತಿ ವರ್ಷ, ವರ್ಷದಲ್ಲಿ ಎರಡು ಬಾರಿ ಹೀಗೆ ಪರೀಕ್ಷೆಗಳನ್ನು ನಡೆಸಿ, ವಿದ್ಯಾರ್ಥಿಗಳ ಬೌದ್ಧಿಕಮಟ್ಟವನ್ನು ಅಂಕಗಳ ಮೇಲೆ ನಿರ್ಧರಿಸಿ, ಮುಂದಿನ ವ್ಯಾಸಂಗಕ್ಕೆ ಅನುವು ಮಾಡಿಕೊಡುವುದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ, ಪರೀಕ್ಷೆಯ ವಿಧಾನಗಳು ಅದರ ಪಾವಿತ್ರ್ಯತೆ, ಅದು ಅಲ್ಲಲ್ಲಿಗೆ ಸಂಬಂಧಿಸಿದ ವಿಚಾರ.
ಇದೇ ಪದ್ದತಿ ನಮ್ಮ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೂ ಅನ್ವಯವಾಗಿದೆ. ಹಿಂದೆ ವರ್ಷಕ್ಕೊಂದು ಬಾರಿ ಪರೀಕ್ಷೆಗಳನ್ನು ನಡೆಸಿ ಆ ಮೂರು ಗಂಟೆಗಳ ಆವಧಿಯಲ್ಲಿ ಒಬ್ಬ ವಿದ್ಯಾರ್ಥಿ ತೋರ್ಪಡಿಸಿದ ಸಾಮಥ್ರ್ಯನುಗುಣವಾಗಿ ಅವನನ್ನು ಮುಂದಿನ ತರಗತಿಗಳಿಗೆ ಯೋಗ್ಯ ಅಥವಾ ಅಯೋಗ್ಯ ಎಂದು ತೀರ್ಮಾನಿಸಲಾಗುತ್ತಿತ್ತು. ವ್ಯವಸ್ಥೆಯೊಳಗಡೆ ಏನೇ ದೋಷಗಳಿದ್ದರೂ ಒಂದು ವ್ಯವಸ್ಥೆಯಂತೂ ಇತ್ತು. ಮತ್ತು ಆ ವ್ಯವಸ್ಥೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹೊಂದಿಕೊಂಡಿದ್ದರು, ಆದರೆ ವರ್ಷವಿಡೀ ಓದಿದ್ದನ್ನು ಅಥವಾ ಉರು ಹೊಡೆದದ್ದನ್ನೆಲ್ಲ ಒಂದೇ ಬಾರಿಗೆ ಪರೀಕ್ಷೆಯಲ್ಲಿ ಕಕ್ಕುವ ಕ್ರಮಕ್ಕೆ ಬದಲಾವಣೆ ಬಂದದ್ದು ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಿಸಬೇಕೆಂಬ ಕಾಳಜಿಯಿಂದ ಹುಟ್ಟಿಕೊಂಡ ಸೆಮಿಸ್ಟರ್ ಪದ್ಧತಿಯಿಂದ, ಇಡೀ ವರ್ಷ ವಿದ್ಯಾರ್ಥಿ ಶೈಕ್ಷಣಿಕ ವಾತಾವರಣದಲ್ಲಿ ಎಂಬ ಸದಾಶಯ ಸೆಮಿಸ್ಟರ್ ಪದ್ಧತಿಯ ಹಿಂದೆ ಇದ್ದದ್ದೆನೋ ಸತ್ಯ ಅದರಿಂದಾಗಿ ವಿದ್ಯಾರ್ಥಿಗಳಿಗೆ ಆಟೋಟಗಳಿಗೆ, ಸಾಸ್ಕøತಿಕ ಚಟುವಟಿಕೆಗಳಿಗೆ ಸಮಯ ಸಾಲದೆಂಬ ಗೊಣಗಾಟ ಒಂದೆಡೆಯಿಂದ ಕೇಳಿಬರುತ್ತಿದ್ದರೆ ಇನ್ನೊಂದೆಡೆಯಿಂದ ಸೆಮಿಸ್ಟರ್ ಪದ್ದತಿಯೆಂದರೆ ಕೇವಲ ಪರೀಕ್ಷಾ ಪದ್ಧತಿಯೇ? ಪ್ರಶ್ನಿಸುವಂತಾಗಿದೆ.
ಪಾಠಗಳನ್ನು ಆಧರಿಸಿ ಪರೀಕ್ಷೆಗಳನ್ನು ನಡೆಸಬೇಕೆ ವಿನಃ, ಪರೀಕ್ಷೆಗಳನ್ನಾಧರಿಸಿ ಪಾಠಗಳನ್ನು ರೂಪಿಸುವುದಲ್ಲ, ಇಂದು ಪದವಿಯಲ್ಲಿ ಅಭ್ಯಸಿಸುವ ಪ್ರತಿ ವಿದ್ಯಾರ್ಥಿಯನ್ನು ಕಾಡುವ ಪ್ರಶ್ನೆಯೆಂದರೆ, ತಾವು ಪಠ್ಯದ ಅಧ್ಯಯನಕ್ಕಾಗಿ ಬಂದಿದ್ದೆವೆಯೋ ಅಥವಾ ಕೇವಲ ಪರೀಕ್ಷೆಗಳನ್ನೆದುರಿಸಲು ಬಂದಿದ್ದೇವೆಯೋ ಎಂಬುದು. ಶಿಕ್ಷಕ ಸಮುದಾಯಕ್ಕೂ, ತಾವು ಪಾಠ ಹೇಳಲು ಇದ್ದೆವೆಯೋ ಅಥವಾ ಕೇವಲ ಪರೀಕ್ಷೆ ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಷ್ಟೇ ನಿಗದಿಯಾಗಿದ್ದೆವೋ ಎಂಬ ಬಲವಾದ ಗುಮಾನಿ ಕಾಡುತ್ತಿದ್ದರೆ ಆಶ್ಚರ್ಯವಿಲ್ಲ.
ಕಾರಣವಿಷ್ಟೇ, ಪ್ರತಿ ಸೆಮಿಸ್ಟರ್ ಅಂತ್ಯಕ್ಕೆ ಪರೀಕ್ಷೆಗಳು ಸುಮಾರು ಒಂದೂವರೆ ತಿಂಗಳುಗಳ ಕಾಲ ನಡೆಯುತ್ತದೆ. ಅಂದರೆ ವರ್ಷದಲ್ಲಿ ಮೂರು ತಿಂಗಳುಗಳ ಕಾಲ ಪರೀಕ್ಷೆಗಳೇ ಜರುಗುತ್ತಿರುತ್ತವೆ, ಅವುಗಳಲ್ಲಿ ಶಿಕ್ಷಕರು ತೊಡಗಿರುವುದು ಅನಿವಾರ್ಯ, ಅನಂತರ ಮೌಲ್ಯಮಾಪನ ಈ ಮೌಲ್ಯಮಾಪನ ಪ್ರಕ್ರಿಯೆ, ಪರೀಕ್ಷೆಗಳು ನಡೆಯುವ ರಜಾ? ಅವಧಿಯಲ್ಲಿ ಜರುಗಿದರೆ ತೊಂದರೆಯಿಲ್ಲ. ಆದರೆ ವಾಸ್ತವವಾಗಿ ಹಾಗಾಗುವುದಿಲ್ಲ. ಪ್ರತಿಬಾರಿ ಅನಂತರದ ಸೆಮಿಸ್ಟರ್ ಶೈಕ್ಷಣಿಕ ವರ್ಷ ಪ್ರಾರಂಭವಾದ ಮೇಲೂ ಸಹ ಹತ್ತು, ಹದಿನೈದು ದಿನಗಳ ಕಾಲ ಜರುಗುತ್ತಿರುತ್ತದೆ. ಅಂದರೆ ಪ್ರತಿ ಸೆಮಿಸ್ಟರನ್ನು ಶೈಕ್ಷಣಿಕ ಅವಧಿಯ ಪ್ರಾರಂಭದ ಹದಿನೈದು ದಿನಗಳು ಮೌಲ್ಯಮಾಪನಕ್ಕಾದರೆ, ವರ್ಷದಲ್ಲಿ ಒಂದು ತಿಂಗಳ ಅವಧಿ, ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ವ್ಯರ್ಥವಾದಂತೆ, ಇದರೊಟ್ಟಿಗೆ ವಿಶ್ವವಿದ್ಯಾಲಯಗಳ ದೂರಶಿಕ್ಷಣ ಕೇಂದ್ರಗಳು ನಡೆಸಿದ ಪರೀಕ್ಷೆಗಳಿಗೂ ಇದೇ ಶಿಕ್ಷಕರನ್ನು ಬಳಸಿಕೊಂಡಾಗ ಈ ಅವಧಿ ಇನ್ನಷ್ಟು ಅಧಿಕವಾಗುತ್ತ ಸಾಗುತ್ತದೆ. ಇದು ವಿಶ್ವವಿದ್ಯಾಲಯವೇ ಅಧಿಕೃತವಾಗಿ ನಡೆಸುವ ಪ್ರಕ್ರಿಯೆ.
ಶಿಕ್ಷಣದ ಆತಂರಿಕ ಗುಣಮಟ್ಟದ ಹೆಚ್ಚಳಕ್ಕಾಗಿ ಪದವಿಗಳಲ್ಲಿ ಆತಂರಿಕ ಅಂಕಗಳನ್ನು ನಿಗದಿಗೊಳಿಸಲಾಗಿದೆ. ಅವುಗಳ ನಿರ್ಧಾರಕ್ಕಾಗಿ ಪ್ರತಿ ಸೆಮಿಸ್ಟರ್ ನಲ್ಲೂ ವಿದ್ಯಾರ್ಥಿಗಳಿಗೆ ಎರಡು ಆತಂರಿಕ ಕಿರು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅವುಗಳನ್ನು ಜರುಗಿಸಲು ಮತ್ತು ಅವುಗಳು ಮೌಲ್ಯಮಾಪನ ಮತ್ತು ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ವಿಶ್ವವಿದ್ಯಾಲಯಗಳಿಗೆ ಕಳಿಸಿಕೊಡಲು ಪ್ರತಿ ಸೆಮಿಸ್ಟರ್‍ನಲ್ಲೂ ಕನಿಷ್ಠ ಹತ್ತು ದಿನಗಳ ಅಗತ್ಯವಿದ್ದೇ ಇರುತ್ತದೆ. ಇವುಗಳನ್ನೆಲ್ಲಾ ಗಮನಿಸಿದಾಗ ಶೈಕ್ಷಣಿಕ ಅವಧಿಯಲ್ಲಿ ನಿಜಕ್ಕೂ ನಿಗದಿತ ಪಠ್ಯವನ್ನು ಬೋಧಿಸಲು ಸಿಗುವ ಅವಧಿ ಕುಗ್ಗುತ್ತ ಹೋಗುತ್ತಿರುವುದು ಯಾರ ಗಮನಕ್ಕಾದರು ಬರಬಹುದಾದ ವಿಷಯ.
ಪರೀಕ್ಷೆಗಳು ಮತ್ತು ಮೌಲ್ಯಮಾಪನ ಇವೆ ವಿದ್ಯಾರ್ಥಿಗಳಿಗೆ ಪಾಠಕ್ಕೆ ದಕ್ಕಬೇಕಾದ ಅವಧಿಯನ್ನೆಲ್ಲಾ ಕಬಳಿಸುತ್ತಿದೆ. ಅವರು ಪಾಪ ಏನು ಮಾಡಿಯಾರು? ಪಾಠವೇ ಸಸೂತ್ರವಾಗಿ ಜರುಗದೇ ಅವರಿಂದ ಗುಣಮಟ್ಟದ ಉತ್ತರಗಳನ್ನು ನಿರೀಕ್ಷಿಸುವುದಾದರು ಹೇಗೆ ಸಾಧ್ಯ. ಅಪವಾಧಗಳು ಇರಬಹುದು ಆದರೆ ಅಪವಾಧಗಳು ಎಂದಿಗೂ ವಾಕ್ಯಕ್ಕೊಳಗೊಳ್ಳುವುದಿಲ್ಲ.
ಪದವಿ ಕಾಲೇಜುಗಳಿಗೆ ವರ್ಷಕ್ಕೆ ಎರಡು ಭಾರಿ ರಜಾ ಅವಧಿ ಅಂದರೆ ಶಿಕ್ಷಕರಿಗೆ ರಜಾ. ರಜಾ ಅವಧಿಯುಳ್ಳ ನೌಕರರು ಎಂದು ಸರ್ಕಾರವೇನೋ ಪರಿಗಣಿಸಿದೆ. ಅದರೆ ವಾಸ್ತವವಾಗಿ ಪರೀಕ್ಷೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಬಹುತೇಕ ವಿಭಾಗಗಳ ಶಿಕ್ಷಕರಿಗೆ ರಜೆ ಎಂಬುದೆ ದಕ್ಕುತ್ತಿಲ್ಲ ಪರೀಕ್ಷೆ ಮತ್ತು ಮೌಲ್ಯಮಾಪನದಲ್ಲೇ ವರ್ಷದ ಬಹಳಷ್ಟು ಅವಧಿಯು ವ್ಯಯವಾಗುತ್ತಿರುವಾಗ ಅವರು ಕೂಡ ಹೊಸ ಹೊಸದನ್ನು ಅಧ್ಯಯನ ಮಾಡಲಿಕ್ಕಾಗಲಿ ಅವರು ಬೆಳೆಯುವುದಕ್ಕಾಗಲಿ ಅದರ ಲಾಭವನ್ನು ಅವರ ವಿದ್ಯಾರ್ಥಿಗಳಿಗೆ ಹಂಚುವುದಕ್ಕಾಗಲಿ ಸಾಧ್ಯವಾಗುವುದಿಲ್ಲ. ಅದರೊಟ್ಟಿಗೆ ಇದ್ದುದರಲ್ಲೇ ಒಂದಿಷ್ಟು ಹೆಚ್ಚುವರಿಯಾಗಿ ಹೇಳ ಹೊರಟರೆ ಅದು ಪರೀಕ್ಷೆಗೆ ಇದೆಯಾ? ಪರೀಕ್ಷೆಗಳಲ್ಲಿ ಅವುಗಳ ಮೇಲೆ ಪ್ರಶ್ನೆಗಳು ಇವೆಯಾ? ಎಂದು ಪ್ರಶ್ನಿಸುವ ವಿದ್ಯಾರ್ಥಿಗಳ ಸಂಖ್ಯೆಯೇ ಅಧಿಕ. ಪಾಪ ಅವರಿಗೂ ಪರೀಕ್ಷೆಗಳೆಂಬ ಸಾಗರವನ್ನು ಹೇಗೂ ದಾಟಿ ಅಚೆ ದಡವನ್ನು ಸೇರಿದರೆ ಸಾಕು ಎಂಬ ಭಾವನೆ.
ಎಲ್ಲವೂ ವಿಶ್ವವಿದ್ಯಾಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ನಡೆಸುವ ಪರೀಕ್ಷೆ ಮತ್ತು ಅಂಕ ಗಳಿಕೆಯನ್ನೆ ಆಧರಿಸಿದ್ದು. ಪದವಿಗಳೆಂದರೆ ಕೇವಲ ಪರೀಕ್ಷೆಗಳಿಗೆ ಪ್ರಯತ್ನಿಸುವುದು, ಅಂಕಗಳಿಸುವುದು ಎಂಬ ಭಾವನೆ, ಅದು ಸತ್ಯ ಕೂಡ. ಪರೀಕ್ಷೆಗಳಿಂದ ಅಷ್ಟೇ ಪದವಿ ಪ್ರಾಪ್ತಿ ಹಾಗಾಗಿ ಪರೀಕ್ಷೆಗಳನ್ನಷ್ಟು ಎದುರಿಸುವ ಕೌಶಲ್ಯ ಕಲಿತರೆ ಸಾಕು. ಪದವಿ ದಕ್ಕಿದಂತೆ ಇದು ವಿದ್ಯಾರ್ಥಿಗಳ ಪಾಡಾದರೇ, ಶಿಕ್ಷಕರ ಪಾಡು ಕೂಡ ಇದ್ದಕ್ಕಿಂತ ಭಿನ್ನವಾಗಿಲ್ಲ. ಪರೀಕ್ಷೆಗಳನ್ನು ನಡೆಸುವುದು ಮತ್ತು ಮೌಲ್ಯಮಾಪನ ಮಾಡುವುದು ವ್ಯವಸ್ಥೆಯತ್ತ ಜವಾಬ್ದಾರಿಯೆಂದು ತಿಳಿದು, ಅದರಲ್ಲೇ ಅವರಿಗರಿವಾಗದಂತೆ ಅವರು ಕಳೆದು ಹೋಗುತ್ತಿದ್ದಾರೆ. ದಿನೇ ದಿನೇ ಒಂದರ್ಥದಲ್ಲಿ ವ್ಯವಸ್ಥೆಯ ಕಾರಣದಿಂದ ದುರ್ಬಲವಾಗುತ್ತಿದ್ದರೆ ಮುಂದೆ ಈ ‘ಪದವಿ’ ಎಂಥದ್ದಾಗಿರಬಹುದು?.
ರವೀಂದ್ರ ಭಟ್ ಕುಳಿಬೀಡು.
ಬೈಪಾಸ್ ರಸ್ತೆಯಲ್ಲಿನ ಗಿಡಗಂಟೆಗಳ ತೆರವು
ನಗರದಿಂದ ಚಿಕ್ಕಬಳ್ಳಾಪುರಕ್ಕೆ ಹೋಗುವ ಬೈಪಾಸ್ ರಸ್ತೆಯಲ್ಲಿನ ತಿರುವಿನಲ್ಲಿ ಗಿಡಗಂಟೆಗಳು ಬೆಳೆದಿದ್ದು, ಅದನ್ನು ಶನಿವಾರ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತೆರವುಗೊಳಿಸುವ ಮೂಲಕ ವಾಹನ ಸವಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಬೈಪಾಸ್ ರಸ್ತೆಯಲ್ಲಿ ಕಳ್ಳಿ, ಮುಳ್ಳು ಹಾಗೂ ವಿವಿಧ ಗಿಡಗಂಟೆಗಳು ಬೆಳೆದಿದ್ದು ತಿರುವಿನಲ್ಲಿ ಬರುವ ವಾಹನಗಳಿಗೆ ಮುಂದಿನಿಂದ ಬರುವ ವಾಹನ ಕಾಣುತ್ತಿರಲಿಲ್ಲ. ನಗರಸಭೆಯವರಿಗಾಗಿ ಕಾಯದೇ ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತ್ಯಾಜ್ಯ ಹಾಗೂ ಅಡ್ಡವಾಗಿ ಬೆಳೆದಿರುವ ಗಿಡಗಳನ್ನು ತೆರವುಗೊಳಿಸಿದರು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಮುನಿರತ್ನಂ, ಕಾರ್ಯದರ್ಶಿ ಎ.ಎಂ.ಶ್ರೀಕಾಂತ್, ಮುಖ್ಯಶಿಕ್ಷಕರಾದ ವೆಂಕಟರಮಣಪ್ಪ, ಈಶ್ವರ್ಸಿಂಗ್, ಶಿಕ್ಷಕರಾದ ರಾಘವೇಂದ್ರ, ರಾಜೇಶ್, ಮುರಳಿ, ಮಂಜುನಾಥ್, ಮುನಿಯಪ್ಪ, ರಮೇಶ್, ಶಾಂತ, ಹೇಮಾವತಿ ಮತ್ತಿತರರು ಹಾಜರಿದ್ದರು.
ಮಡಿವಾಳ ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರ್ಪಡಿಸಿ
ಮಡಿವಾಳ ಜನಾಂಗದವರು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು, ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರ್ಪಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷ ಸಿ.ನಂಜಪ್ಪ ಸರ್ಕಾರವನ್ನು ಒತ್ತಾಯಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಶುಕ್ರವಾರ ಮಡಿವಾಳ ಮಾಚಿದೇವ ಯುವಕರ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ- ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಿವಾಳ ಜನಾಂಗದವರು ಇಂದಿಗೂ ಕೂಡಾ ತಮ್ಮ ಕುಲಕಸುಬನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದಾರೆ, ಶೈಕ್ಷಣಿಕವಾಗಿ ಮುಂದುವರೆಯಲು ಅಗತ್ಯವಾಗಿರುವ ಸೌಲಭ್ಯಗಳು ಸರ್ಕಾರದಿಂದ ಸಿಗುತ್ತಿಲ್ಲ, ಜನಾಂಗಕ್ಕೆ ಸರ್ಕಾರದಿಂದ ಯಾವುದೇ ಸೌಲಭ್ಯಗಳು ಲಭ್ಯವಾಗದೆ ಇರುವುದರಿಂದ ಸಾಮಾಜಿಕವಾಗಿಯೂ ಕೂಡಾ ಹಿಂದುಳಿಯುವಂತಾಗಿದೆ. ಸಮುದಾಯದ ಪ್ರತಿಯೊಂದು ಕುಟುಂಬಗಳಲ್ಲಿಯೂ ಕೂಡಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು, ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನು ಕಾಯ್ದುಕೊಳ್ಳಬೇಕಾದರೆ, ವಿದ್ಯೆಯಿಂದ ಮಾತ್ರ ಸಾಧ್ಯವಾಗುತ್ತದೆ, ಈ ನಿಟ್ಟಿನಲ್ಲಿ ಸಮುದಾಯದ ಮುಖಂಡರು ಸಮಾಜದ ಉದ್ದಾರಕ್ಕಾಗಿ ಸಂಘಟಿತರಾಗಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಯಾವುದೇ ಸಮುದಾಯವಿರಲಿ ಶಿಕ್ಷಣದಿಂದ ವಂಚಿತವಾದರೆ ಅಂತಹ ಸಮುದಾಯವು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ, ಕೇವಲ ವರ್ಷಕ್ಕೊಮ್ಮೆ ಮಾತ್ರ ಸಂಘಟಿತರಾದರೆ ಸಾಲದು, ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮುದಾಯದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಅವರನ್ನು ಮುಖ್ಯವಾಹಿನಿಗೆ ತರುವಂತಹ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು, ಸಮುದಾಯದವರು ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು, ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಪ್ರವಾಸಿಮಂದಿರದ ಆವರಣದಿಂದ ಮಾಚಿದೇವ ಪಲ್ಲಕ್ಕಿಯೊಂದಿಗೆ ಮೆರವಣಿಗೆ ನಡೆಸಲಾಯಿತು, ಮೆರವಣಿಗೆಯಲ್ಲಿ ಡೊಳ್ಳುಕುಣಿತ ಮತ್ತು ವೀರಗಾಸೆ ಕುಣಿತ ಗಮನಸೆಳೆದವು, ಕಾರ್ಯಕ್ರಮವನ್ನು ಮಡಿವಾಳ ಜನಾಂಗದವರು ಪ್ರತಿಯೊಂದು ಶುಭ ಕಾರ್ಯದಲ್ಲೂ ಪಂಜನ್ನು ಹಿಡಿದು ಮುನ್ನಡೆಸುವುದರ ಧ್ಯೋತಕವಾಗಿ ಪಂಜಿಗೆ ಬೆಂಕಿಹೊತ್ತಿಸುವ ಮೂಲಕ ಉದ್ಘಾಟನೆ ಮಾಡಲಾಯಿತು,
ಮಡಿವಾಳ ಜನಾಂಗವನ್ನು ಪರಿಶಿಷ್ಠ ಜಾತಿಗೆ ಸೇರಿಸಬೇಕು ಹಾಗೂ ಮಾಚಿದೇವರ ಜಯಂತ್ಯುತ್ಸವವನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಬೇಕು. ಆದರೆ ನಮಗೆ ಸರ್ಕಾರಿ ರಜೆ ಬೇಕಿಲ್ಲ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಪತ್ರವನ್ನು ಶಾಸಕ ಎಂ.ರಾಜಣ್ಣ ಅವರಿಗೆ ಜನಾಂಗದ ಮುಖಂಡರು ಸಲ್ಲಿಸಿದರು.
ಕಾರ್ಯಕ್ರಮದ ಅಂಗವಾಗಿ ರೆಡ್ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು, ರಕ್ತದಾನ ಶಿಬಿರಕ್ಕೆ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಚಾಲನೆ ನೀಡಿದರು.
2014–15ನೇ ಸಾಲಿನಲ್ಲಿ ಉನ್ನತ ಶಿಕ್ಷಣ, ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸದಸ್ಯ ಜಿ.ಡಿ.ಗೋಪಾಲ್, ರಾಜ್ಯ ಸಹಕಾರ ಮಹಾಮಂಡಳಿ ಉಪಾಧ್ಯಕ್ಷ ಎಚ್.ವಿ.ನಾಗರಾಜ್, ಕಾರ್ಮಿಕರ ಕನಿಷ್ಠ ವೇತನ ಆಯೋಗದ ಅಧ್ಯಕ್ಷೆ ವಿ.ಯೋಗೇಶ್ವರಿ ವಿಜಯ್, ಬಿ.ಬಿ.ಎಂ.ಪಿ ಸದಸ್ಯೆ ಸವಿತಾ.ವಿ.ಕೃಷ್ಣ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.ದೇವರಾಜ್, ಸಾಹಿತಿ ದೇವರಮಳ್ಳೂರು ವಿ.ಚನ್ನಕೃಷ್ಣ, ನಾ.ಡಿಸೋಜ ಮಕ್ಕಳ ಸಾಹಿತ್ಯ ಪ್ರಶಸ್ತಿ ವಿಜೇತ ಶಿಕ್ಷಕ ಎಸ್.ಕಲಾಧರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚಿತ್ರದುರ್ಗ ಶ್ರೀ ಮಾಚಿದೇವ ಮಹಾಸಂಸ್ಥಾನ ಮಠದ ಬಸವ ಮಾಚಿದೇವ ಸ್ವಾಮಿ ಆಶೀರ್ವಚನ ನೀಡಿದರು. ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ.ನಂಜಪ್ಪ ‘ಮಡಿವಾಳ ಬಂಧು’ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಮಡಿವಾಳ ಸಂಘದ ರಾಜ್ಯ ಉಪಾಧ್ಯಕ್ಷ ಆರ್.ವಿ.ರಾಜಣ್ಣ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಕೆ.ವಿ.ಅಮರ್ನಾಥ್, ಮಡಿವಾಳ ಸಂಘದ ರಾಜ್ಯ ಪ್ರಧಾನಕಾರ್ಯದರ್ಶಿ ಬಿ.ರಂಗಸ್ವಾಮಯ್ಯ, ಖಜಾಂಚಿ ಜಿ.ಸುಬ್ರಮಣ್ಯಂ ಗಿರಿಧರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಎಚ್.ಸಿ.ರುದ್ರಪ್ಪ, ಎನ್.ಕೆ.ಗುರುರಾಜರಾವ್, ಶೇಖರ್ ಬಾಬು, ರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
‘ಅಮೃತ’ಳಿಗೆ ರಾಜ್ಯಮಟ್ಟದ ಪ್ರಶಸ್ತಿ
‘ಹೆಣ್ಣು ಮಕ್ಕಳನ್ನು ಪ್ರತಿಯೊಂದು ವಿಷಯದಲ್ಲೂ ಬೈತಾ ಇರ್ತಾರೆ. ಏಕೆ ಹೆಣ್ಣು ಮಕ್ಕಳೆಂದರೆ ಅಷ್ಟೊಂದು ಕೀಳಾ? ಗಂಡುಮಕ್ಕಳು ದಿನವೆಲ್ಲಾ ಅಪಾಪೋಲಿ ಬಿದ್ದುಕೊಂಡು ಬಂದ್ರೂ ಏನೂ ಬಯ್ಯಲ್ಲ, ನಾವೇನಾದ್ರೂ ಒಬ್ಬರ್ ಮನೆ ಹತ್ರ ಹೋದ್ರೆ, ಏನಕ್ಕೋಗಿದ್ದೆ? ಎಲ್ಲಿಗೋಗಿದ್ದೆ? ಯಾಕೋಗಿದ್ದೆ? ಅನ್ನೋದೆಲ್ಲಾ ಹೇಳಬೇಕು. ಏಕೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯಾನೇ ಇಲ್ವಾ?…’ ಹೀಗೆ ಸಾಗುವ ಬರಹ ಹೆಣ್ಣುಮಕ್ಕಳ ಸಂವೇದನೆ, ನೋವು, ದುಗುಡ, ದುಃಖ, ಆಕಾಂಕ್ಷೆ, ಬೇಸರ, ಕೋಪ ತಾಪಗಳನ್ನು ಪ್ರತಿಧ್ವನಿಸುತ್ತದೆ.
ಈ ಬರಹವನ್ನು ನೋಡಿ ಇದನ್ನು ಬರೆದದ್ದು ಮಹಿಳಾ ಸಂಘಟನೆಯ ಮುಖಂಡರೋ, ಸ್ತ್ರೀ ಪರ ಹೋರಾಟಗಾರರೋ ಅಂದುಕೊಂಡರೆ ತಪ್ಪು. ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಮೃತ ಬರೆದಿರುವ ಬರಹವು ಹೆಣ್ಣಿನ ಮನಸ್ಸಿನ ಆಲೋಚನೆಗಳನ್ನು ಸಶಕ್ತವಾಗಿ ಪ್ರತಿಬಿಂಬಿಸುತ್ತದೆ. ‘ಅಮೃತ’ ಬರೆದ ಕಥೆ, ಕವನ, ನಾಟಕ, ಲೇಖನಗಳನ್ನು ಪರಿಗಣಿಸಿ ರಾಜ್ಯ ಮಟ್ಟದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಕ್ಕೆ ಆಯ್ಕೆ ಮಾಡಲಾಗಿದೆ.
ಕಳೆದ 15 ವರ್ಷಗಳಿಂದ ಸಂಧ್ಯಾ ಸಾಹಿತ್ಯ ವೇದಿಕೆ, ಶಹಾಪುರ- ಅವರು ಎಳವೆಯಲ್ಲೆ ಕಣ್ಮರೆಯಾದ ಬಾಲ-ಕವಿ ವಿದ್ಯಾಸಾಗರ ಕುಕ್ಕುಂದಾ ಅವರ ನೆನಪಿನಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ನೀಡುತ್ತ ಬರುತ್ತಿರುವ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಈ ಬಾರಿ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕೆ.ಎನ್.ಅಮೃತ ಅವರಿಗೆ ದೊರಕಿದೆ. ರಾಜ್ಯದಾದ್ಯಂತ ಕ್ರಿಯಾಶೀಲ ಯುವ ಮನಸ್ಸುಗಳ ಬರಹಗಳಲ್ಲಿ ಕೆ.ಎನ್.ಅಮೃತ ಅವರ ಬರಹಗಳಿಗೆ ಮೊದಲ ಸ್ಥಾನ ನೀಡಿರುವುದಾಗಿ ತೀರ್ಪುಗಾರರಾಗಿದ್ದ ಡಾ. ಸುರೇಶ್ ನಾಗಲಮಡಿಕೆ ತಿಳಿಸಿದ್ದಾರೆ.
ಕನ್ನಮಂಗಲ ಗ್ರಾಮದ ಕೆ.ಎನ್.ಅಮೃತ ಪ್ರಾಥಮಿಕ ಶಿಕ್ಷಣವನ್ನು ಪಡೆದದ್ದು ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಂತರ ಈಗ ಓದುತ್ತಿರುವುದು ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ. ‘ಹೀಗಾದರೆ ಟೆಂತ್ ಫೇಲಾಗುವುದು ಗ್ಯಾರಂಟಿ’, ‘ಅಪ್ಪಾ ನಿನಗೇನೂ ಆಸೇನೇ ಇಲ್ವಾ?’, ‘ಪರಿಸರ ಮಾಲಿನ್ಯ’, ‘ನನ್ನಜ್ಜಿ’, ‘ನನ್ನ ಬ್ಯಾಗು’, ‘ನೆಮ್ಮದಿಯೇ ಇಲ್ಲ ನನ್ನಮ್ಮನಿಗೆ’, ‘ಒಗಟು’, ‘ಹಂದಿಗಳು’, ‘ತಾರೆಗಳು’, ‘ನನ್ನ ನೋವು ಹೇಗಿತ್ತು’, ‘ನನ್ನ ಸಂತಸ ಹೇಗಿತ್ತು’ ಮುಂತಾದ ಕಥೆಗಳು, ‘ನಾನೂ ಇದನ್ನು ನಂಬ್ತೀನಾ?’, ‘ನನ್ನಲ್ಲಿನ ಅನುಮಾನ’, ‘ನಮ್ಮಂತಹವರು ಈ ಪ್ರಪಂಚದಲ್ಲಿ ಎಷ್ಟು ಜನರೋ’, ‘ನನ್ನೊಳಗಿನ ಭಯ’, ‘ಇವರೆಲ್ಲ ಅಜ್ಜಿಗಳಾ?’, ‘ಹಳ್ಳಿಯ ಸ್ಪೆಶಲ್ ಗೊಡ್ಡುಖಾರ’, ‘ಹೆಣ್ಣು ಗಂಡು ಬೇಧ ಭಾವ ಏಕೆ?’, ‘ಆತುರ್ಗಾರಳು ನಮ್ಮಕ್ಕ’ ಮುಂತಾದ ಕವನಗಳು ಹಾಗೂ ಗ್ರಾಮದಲ್ಲಿ ತೆಲುಗು ನಾಟಕವನ್ನು ನೋಡಿ ಬಂದು ಬರೆದ ಕನ್ನಡದ ನಾಟಕ ‘ಸಾಸುಲ ಚಿನ್ನಮ್ಮ’ ಈಕೆಯ ಬರವಣಿಗೆಯ ವೈವಿಧ್ಯತೆಯನ್ನು ತೋರುತ್ತದೆ.
‘ಕನ್ನಮಂಗಲ ಶಾಲೆಯಲ್ಲಿನ ಸಾಹಿತ್ಯಿಕ ವಾತಾವರಣ ‘ನಾನೂ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸ ಮೂಡಿಸಿತು. ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್ ನೇತೃತ್ವದಲ್ಲಿ ಪ್ರತೀ ವರ್ಷ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಬರೆದ ಬರವಣಿಗೆಗಳ ಸಂಕಲನ ‘ಶಾಮಂತಿ’ ಹೊರತರುವುದರಿಂದಾಗಿ ಹಲವಾರು ಪ್ರತಿಭೆಗಳು ಹೊರಹೊಮ್ಮುತ್ತಿದ್ದಾರೆ. ಅದರಲ್ಲಿ ನನ್ನ ಬರಹಗಳು ಪ್ರಕಟವಾದಾಗ ಖುಷಿಯಾಯಿತು. ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಕೈಗೊಂಡ ನನಗೆ ಅಲ್ಲಿಯೂ ಶಿಕ್ಷಕರ ಪ್ರೋತ್ಸಾಹ ಲಭಿಸಿತು. ಹೀಗಾಗಿ ನನ್ನ ಅನಿಸಿಕೆಗಳನ್ನು ಅಕ್ಷರ ರೂಪದಲ್ಲಿ ಮೂಡಿಸಲು ಸಾಧ್ಯವಾಯಿತು’ ಎಂದು ಕೆ.ಎನ್.ಅಮೃತ ತಿಳಿಸಿದರು.
‘ನಮ್ಮ ಗ್ರಾಮದ ಹೆಣ್ಣು ಮಗುವೊಂದು ರಾಜ್ಯಮಟ್ಟದ ಪ್ರಶಸ್ತಿ ಪಡೆಯುತ್ತಿರುವುದು ಹೆಮ್ಮೆ ತಂದಿದೆ. ಈ ಪ್ರಶಸ್ತಿಯು ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಹೆಣ್ಣುಮಕ್ಕಳಿಗೆ ಪ್ರೇರಣೆ ನೀಡಬಲ್ಲುದಾಗಿದೆ. ಮಕ್ಕಳಲ್ಲಿನ ಸುಪ್ತ ಬರಹಗಾರನನ್ನು ಬಡಿದೆಬ್ಬಿಸುವ, ಅವರ ಭಾವನೆಗೆ ಕ್ರಿಯಾತ್ಮಕ ರೂಪ ನೀಡುವ ಸಲುವಾಗಿ ನಾವು ಪ್ರತೀ ವರ್ಷ ಶಾಮಂತಿ ಎಂಬ ಮಕ್ಕಳ ಬರಹಗಳ ಪುಸ್ತಕವನ್ನು ಹೊರತರುತ್ತೇವೆ. ಶಾಮಂತಿಯ ಕೂಸಾದ ‘ಅಮೃತ’ ಳಿಗೆ ಈ ವರ್ಷದ ‘ವಿದ್ಯಾಸಾಗರ ಬಾಲ ಪುರಸ್ಕಾರ’ ಸಂದಿರುವುದು ನಮ್ಮ ಸ್ನೇಹ ಪ್ರಕಾಶನದ ವೃಂದಕ್ಕೂ ಪ್ರೋತ್ಸಾಹ ನೀಡಿದಂತಿದೆ’ ಎನ್ನುತ್ತಾರೆ ಕನ್ನಮಂಗಲದ ಸ್ನೇಹ ಪ್ರಕಾಶನದ ವಸಂತಕುಮಾರ್.
–ಡಿ.ಜಿ.ಮಲ್ಲಿಕಾರ್ಜುನ
ವಿನಾಕಾರಣ ಸುಳ್ಳು ಆರೋಪ – ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು
ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು ಅಧಿಕಾರ ಹಿಡಿದಿದ್ದರಿಂದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಹಾಗು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ಹತಾಶರಾಗಿ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ಹಾಗು ಕಾಂಗ್ರೆಸ್ ಪಕ್ಷದ ವಿರುದ್ಧ ವಿನಾಕಾರಣ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು ಹೇಳಿದರು.
ನಗರದಲ್ಲಿ ಗುರುವಾರ ಸುದ್ಧಿಗೋಷ್ಟಿ ನಡೆಸಿ ಅವರು ಮಾತನಾಡಿದರು. ಕಳೆದ ನವೆಂಬರ್ ೩ ರಂದು ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಡಾ. ಧನಂಜಯರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ನಗರದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಬಡವರಿಗೆ ಹಂಚಿಕೆ ಮಾಡಲಾಗಿರುವ ಮನೆಗಳಲ್ಲಿ ತಾರತಮ್ಯ ಮಾಡಿದ್ದಾರೆ ಎಂದಿರುವುದು ಸತ್ಯಕ್ಕೆ ದೂರ ಎಂದರು.
ಬಡವರಿಗೆ ಮನೆಗಳನ್ನು ಹಂಚುವ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ. ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ವಾರ್ಡ್ ಸಭೆಗಳನ್ನು ನಡೆಸಿ ನಂತರ ಗ್ರಾಮ ಪಂಚಾಯತಿಯ ಆವರಣದಲ್ಲಿ ಗ್ರಾಮಸಭೆಯನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮಸಭೆಗೆ ಎಲ್ಲಾ ಜೆಡಿಎಸ್ ಸದಸ್ಯರು ಹಾಜರಿದ್ದು ಅವರ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾಗಿದೆ. ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಜೆಡಿಎಸ್ನ ತಾಲುಕು ಅಧ್ಯಕ್ಷ ಗ್ರಾಮಸಭೆಯಲ್ಲಿ ವಿನಾಕಾರಣ ರಗಳೆ ತೆಗೆದು ಹೊರನಡೆದು ಇದೀಗ ಇಂತಹ ಆರೋಪಕ್ಕೆ ಮುಂದಾಗಿದ್ದಾರೆ. ಗ್ರಾಮ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಸದಸ್ಯರೆಲ್ಲರೂ ಹಾಜರಾಗಿ ಸಭೆಯ ನಡಾವಳಿಗೆ ಸಹಿಗಳನ್ನು ಮಾಡಿರುತ್ತಾರೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗರಾಜಯ್ಯ ಪಂಚಾಯತಿಯಲ್ಲಿ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ಈ ಹಿಂದೆ ಡಾ.ಧನಂಜಯರೆಡ್ಡಿ ಅವರ ಅಧಿಕಾರಾವಧಿಯಲ್ಲಿಯೂ ಅವರೇ ಕಾರ್ಯದರ್ಶಿಗಳಾಗಿದ್ದರು ಹಾಗೂ ಅವರನ್ನು ಅಲ್ಲಿಗೆ ಕರೆತಂದಿದ್ದು ಸಹ ಸ್ವತಃ ಅವರೇ ಎನ್ನುವುದನ್ನು ಅವರು ಮರೆತಂತಿದೆ ಎಂದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷರು ಹಾಗು ಕಾರ್ಯಕರ್ತರು ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳನ್ನು ಶಾಸಕರ ಸಮ್ಮುಖದಲ್ಲಿಯೇ ಸೆದೆಬಡಿಯುತ್ತೇವೆ, ಮಟ್ಟಹಾಕುತ್ತೇವೆ ಎಂದು ಅವಾಚ್ಯ ಶಬ್ದಗಳನ್ನು ಬಳಸುತ್ತಿದ್ದರೂ ಸಹ ಮೌನವಾಗಿದ್ದ ಶಾಸಕರು ಅವರಿಗೆ ಸಹಕರಿಸುತ್ತಿದ್ದುದು ಶೋಚನೀಯ ಎಂದರು.
ತಾಲ್ಲೂಕಿನಲ್ಲಿ ಆಡಳಿತದ ಯಂತ್ರ ಕುಸಿದಿದ್ದು, ಯಾವ ಅಧಿಕಾರಿಗಳೂ ಕೂಡಾ ಶಾಸಕರ ಮಾತಿಗೆ ಬೆಲೆ ನೀಡುತ್ತಿಲ್ಲವೆಂದು ಸ್ವತಃ ಹೇಳುವ ಶಾಸಕರು ಅಧಿಕಾರಿಗಳಿಂದ ಕೆಲಸ ತೆಗೆದುಕೊಳ್ಳಲಾಗದಿರುವುದು ಅವರ ಅಸಹಾಯಕತೆಯನ್ನು ತೋರಿಸುತ್ತದೆ. ಅಧಿಕಾರಿಗಳು ತಮ್ಮ ಮಾತು ಕೇಳುತ್ತಿಲ್ಲ ಎಂಬ ನೆಪವೊಡ್ಡಿ ಜನರನ್ನು ಹುರಿದುಂಬಿಸಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡಿಸುವ ಬದಲಿಗೆ ಅಧಿಕಾರಿಗಳಿಂದ ಕೆಲಸ ಮಾಡಿಸಲು ತನ್ನಿಂದಾಗುವುದಿಲ್ಲ ಎಂದು ಒಪ್ಪಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಶಾಸಕರಾಗಿರುವ ಬದಲಿಗೆ ಶಾಸಕ ಸ್ಥಾನಕ್ಕೆ ಅವರೇ ರಾಜೀನಾಮೆ ನೀಡಲಿ ಎಂದರು.
ಡಾ.ಧನಂಜಯರೆಡ್ಡಿಯವರು ಬಡವರ ಪರವಾಗಿದ್ದರೆ ಅವರದೇ ಪಕ್ಷದ ಶಾಸಕರ ಬಳಿ ಹೋಗಿ ಇನ್ನಷ್ಟು ಮನೆಗಳನ್ನು ಪಂಚಾಯತಿಗೆ ಹಾಕಿಸಿಕೊಂಡು ಬಂದು ಗ್ರಾಮ ಪಂಚಾಯತಿ ವ್ಯಾಪ್ತಿಯ ಇನ್ನಷ್ಟು ಬಡವರಿಗೆ ನೀಡಲಿ. ಅದು ಬಿಟ್ಟು ಇನ್ನೊಬ್ಬರು ಮಾಡುವ ಒಳ್ಳೆಯ ಕೆಲಸಕ್ಕೆ ಅಡ್ಡಿಯುಂಟುಮಾಡುವುದು ಅವರಿಗೆ ತರವಲ್ಲ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ಬಣ್ಣ, ಎಂಪಿಸಿಎಸ್ ಅಧ್ಯಕ್ಷ ಡಿ.ಪಿ.ನಾಗರಾಜ್, ಸದಸ್ಯರಾದ ಶ್ರೀರಂಗಪ್ಪ, ದೊಡ್ಡನರಸಿಂಹಪ್ಪ, ಪ್ರಸನ್ನ, ಮಾಜಿ ಸದಸ್ಯ ನರಸಿಂಹರೆಡ್ಡಿ, ಗೋಪಾಲಕೃಷ್ಣ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಐಟಿಐ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮ
ವಿದ್ಯಾರ್ಥಿ ದೆಸೆಯಲ್ಲೇ ಮುಂದಿನ ಗುರಿಯನ್ನು ರೂಪಿಸಿಕೊಂಡಾಗ ಮಾತ್ರ ಉಜ್ವಲ ಭವಿಷ್ಯ ಎದುರುಗೊಳ್ಳುತ್ತದೆ ಎಂದು ಕೆನರಾ ಬ್ಯಾಂಕ್ ಮೇಲೂರು ಶಾಖೆಯ ಪ್ರಬಂಧಕರಾದ ಇಂದು ಪಾಟೀಲ್ ತಿಳಿಸಿದರು.
ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ(ಐಟಿಐ) ಕಾಲೇಜಿನಲ್ಲಿ ಗುರುವಾರ ಕೆನರಾ ಬ್ಯಾಂಕ್ ಮೇಲೂರು ಮತ್ತು ಶಿಡ್ಲಘಟ್ಟ ಶಾಖೆಗಳ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆಸಿದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಂತರದ ದಿನಗಳಲ್ಲಿ ಸ್ವಂತ ಉದ್ಯೋಗ ಪ್ರಾರಂಭಿಸಬೇಕಿರುವ ಉದ್ದೇಶಕ್ಕೆ ಪೂರಕವಾಗಿ ಹಲವಾರು ಮಾಹಿತಿಯನ್ನು ಹೊಂದಿರಬೇಕಾಗುತ್ತದೆ. ಹಣಕಾಸು, ಮಾರುಕಟ್ಟೆ, ತಾಂತ್ರಿಕ ಪರಿಣತಿ ಮುಂತಾದ ವಿಷಯಗಳನ್ನು ತಿಳಿದುಕೊಳ್ಳುವಂತೆ ಹೇಳಿದರು.
ಐಟಿಐ ದಿನಾಚರಣೆಯ ಅಂಗವಾಗಿ ಮುದ್ರಾ ಯೋಜನೆ ಕುರಿತಂತೆ ಹಾಗೂ ಕೈಗಾರಿಕಾ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳ ಕುರಿತಂತೆ ಮಾಹಿತಿಯನ್ನು ನೀಡಲಾಯಿತು.
ಉಪಪ್ರಾಂಶುಪಾಲ ಶ್ರೀನಿವಾಸ್, ಕೆನರಾ ಬ್ಯಾಂಕ್ ಶಿಡ್ಲಘಟ್ಟ ಶಾಖೆಯ ಅಧಿಕಾರಿ ಎಂ.ಮುನಿಲಕ್ಷ್ಮಮ್ಮ, ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹಾಗಾರ ಎಂ.ಜಿ.ಗಂಗರಾಮಯ್ಯ, ಕಿರಿಯ ತರಬೇತಿ ಅಧಿಕಾರಿ ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಿಸಿಯೂಟ ಆಹಾರಧಾನ್ಯಗಳ ಅಕ್ರಮ ಸಾಗಾಣಿಕೆಯ ತಡೆ
ಶಾಲಾ ಮಕ್ಕಳಿಗೆ ಮದ್ಯಾಹ್ನದ ಬಿಸಿಯೂಟಕ್ಕೆ ಸರಬರಾಜು ಮಾಡಿರುವ ಆಹಾರಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ಅನುದಾನಿತ ಶಾಲೆಯೊಂದರ ವಾಹನವನ್ನು ನಾಗರಿಕರು ಗುರುವಾರ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗೇಟ್ನಲ್ಲಿರುವ ಎಸ್.ಆರ್.ಇ.ಟಿ. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆಂದು ಅಕ್ಷರದಾಸೋಹ ಇಲಾಖೆಯಿಂದ ಸರಬರಾಜು ಮಾಡಿದ್ದ ಆಹಾರ ಧಾನ್ಯಗಳಲ್ಲಿ ೧೧ ಮೂಟೆ ಗೋದಿ ೦೩ ಮೂಟೆ ತೊಗರಿಬೆಳೆ ಹಾಗೂ ೫೦ ಕೆ.ಜಿ. ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಸ್ಥಳೀಯ ನಾಗರಿಕರು ಕೊತ್ತನೂರು ಗೇಟ್ನಲ್ಲಿ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ತಾಲ್ಲೂಕಿನ ಅಕ್ಷರದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ರಂಗಪ್ಪ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಲಾ ವಾಹನ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿರುವ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪರಭಾಷೆ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ವಿರುದ್ಧ ಕ್ರಮಕ್ಕೆ ಆಗ್ರಹ
ನವೆಂಬರ್ ತಿಂಗಳಿನಲ್ಲಿ ಖಡ್ಡಾಯವಾಗಿ ತಾಲ್ಲೂಕಿನ ಎಲ್ಲಾ ಚಿತ್ರಮಂದಿರಗಳಲ್ಲೂ ಕನ್ನಡ ಚಲನಚಿತ್ರ ಪ್ರದರ್ಶಿಸುವ ಮೂಲಕ ನಾಡು ಮತ್ತು ನುಡಿಗೆ ಗೌರವ ಸಲ್ಲಿಸಬೇಕು. ಪರಭಾಷೆ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯರು ಒತ್ತಾಯಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದ ಸಮಾನ ಮನಸ್ಕರ ಹೋರಾಟ ಸಮಿತಿಯ ಸದಸ್ಯರು, ಕನ್ನಡದ ಬಗ್ಗೆ ಗೌರವವಿಲ್ಲದೆ ಈಗಾಗಲೇ ಹಲವು ಚಿತ್ರಮಂದಿರಗಳಲ್ಲಿ ತೆಲುಗು ಚಿತ್ರವನ್ನು ಪ್ರದರ್ಶಿಸುತ್ತಿದ್ದರೂ ನೀವು ಕ್ರಮ ಕೈಗೊಂಡಿಲ್ಲ. ನವೆಂಬರ್ ತಿಂಗಳಿನಲ್ಲಿ ಪರಭಾಷೆ ಚಿತ್ರವನ್ನು ಪ್ರದರ್ಶಿಸದಂತೆ ಸೂಚನೆ ನೀಡಿ. ತಾಲ್ಲೂಕಿನ ಎಲ್ಲಾ ಖಾಸಗಿ ಅಂಗಡಿ ಮುಂಗಟ್ಟುಗಳು, ಕಚೇರಿಗಳ ಮೇಲೆ ಕನ್ನಡದ ಅಕ್ಷರದಲ್ಲಿ ನಾಮಫಲಕ ಹಾಕುವಂತೆ ಆದೇಶ ನೀಡಬೇಕೆಂದು ಮನವಿ ಮಾಡಿದರು.
ತಾಲ್ಲೂಕಿನ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನು ಪ್ರದರ್ಶನ ಮಾಡಿದ್ದಲ್ಲಿ ತಾಲ್ಲೂಕಿನ ಎಲ್ಲಾ ಕನ್ನಡಪರ, ರೈತಪರ, ದಲಿತಪರ, ಅಲ್ಪಸಂಖ್ಯಾತರ ಪರ ಸಂಘಟನೆಗಳು ಒಗ್ಗೂಡಿ ಆ ಚಿತ್ರಮಂದಿರಕ್ಕೆ ಮುತ್ತಿಗೆ ಹಾಕುತ್ತೇವೆ. ಅದಕ್ಕೆ ನೇರ ಹೊಣೆ ತಾಲ್ಲೂಕು ಆಡಳಿತವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಮಾನ ಮನಸ್ಕರ ಹೋರಾಟ ಸಮಿತಿಯ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಫ್ಜಲ್ ಪಾಷ, ಮಹಮ್ಮದ್ ಅಸಾದ್, ಅಪ್ಪೇಗೌಡನಹಳ್ಳಿ ತ್ಯಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮದಗಜಗಳ ಕುಸ್ತಿ, ರೋಚಕತೆಗೆ ಸಾಕ್ಷಿಯಾದ ಜನತೆ
ಪಟ್ಟಣದ ಅಮೀರ್ ಭಾಬಾ ದರ್ಗಾ ಹತ್ತಿರ ಬುಧವಾರ ಹೈದರಾಲಿ ಗರಡಿ ವತಿಯಿಂದ ನಡೆಸಿದ ಐದನೇ ವರ್ಷದ ಕುಸ್ತಿ ಪಂದ್ಯಾವಳಿಯು ರೋಚಕವಾಗಿದ್ದು ಜನರು ಉತ್ಸಾಹದಿಂದ ವೀಕ್ಷಿಸಿದರು.
ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಹಾಸನ, ಮೈಸೂರು, ಹುಬ್ಬಳ್ಳಿ, ಚಿತ್ರದುರ್ಗ, ದಾವಣಗೆರೆ, ಬೀದರ್, ಗುಲ್ಬರ್ಗಾ, ಕೋಲಾರ, ಹರಿಹರ, ಬೆಂಗಳೂರು ಮುಂತಾದೆಡೆಗಳಿಂದ ಪೈಲ್ವಾನರು ಆಗಮಿಸಿದ್ದರು.
ಮರಿ ಪೈಲ್ವಾನರು ಒಂದೆಡೆ ಸೆಣಸಿ ಜನರಿಂದ ಮೆಚ್ಚುಗೆ ಪಡೆದರೆ, ಮದಗಜಗಳಂತಿದ್ದ ಪೈಲ್ವಾನರು ಮಾರ್ಪೀಟ್ ನಡೆಸಿ ಜನರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು.
ಕುಸ್ತಿ ನಡೆಯುವ ಸ್ಥಳದಲ್ಲಿ ಜನರು ಕಿಕ್ಕಿರಿದು ನಿಂತಿದ್ದಲ್ಲದೆ, ಸುತ್ತಮುತ್ತಲಿನ ಕಟ್ಟಡಗಳು ಹಾಗೂ ಮರದ ಮೇಲೆಲ್ಲಾ ಜನರಿದ್ದು ಕುಸ್ತಿಯನ್ನು ಆಸ್ವಾದಿಸಿದರು. ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದರು. ಗೆದ್ದವರನ್ನು ಅಭಿನಂದಿಸಿದರು. ವಿಜೇತರಿಗೆ ಪ್ರೋತ್ಸಾಹಿಸಲು ಕೆಲವರು ಬಹುಮಾನ ಹಣವನ್ನು ಘೋಷಿಸುತ್ತಿದ್ದರು. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ವಿವಿಧ ಕಸರತ್ತು ಹಾಗೂ ಕೈ ಚಳಕದೊಂದಿಗೆ ಸ್ಥಳೀಯ ಕುಸ್ತಿ ಪಟುಗಳೊಂದಿಗೆ ಕುಸ್ತಿ ನಡೆಸಿದರು. ಪರಸ್ಪರರು ಬಗ್ಗಿಸಲು ಮತ್ತು ಹೆಣೆಯಲು ನಡೆಸಿದ ತಂತ್ರ ಮತ್ತು ಪ್ರತಿ ತಂತ್ರದ ಕುಸ್ತಿ ಪಟುಗಳು ನೋಡುಗರ ಮೈನವಿರೇಳಿಸಿದವು. ಸೂಕ್ಷ್ಮ ಹೋರಾಟದ ಕ್ಷಣಗಳಲ್ಲಿ ಉತ್ತೇಜಿಸುವ ಜೈಕಾರ ಕೇಳಿ ಬಂದಿತು. ವಿಜೇತರಾದಾಗ ಅಭಿಮಾನಿಗಳು ಸಂತಸದಿಂದ ಕೇಕೆ ಹಾಕಿ ಕೂಗಿ ಕುಣಿದಾಡಿದ ದೃಶ್ಯ ಸಹ ಕಂಡುಬಂತು.
ಕೆಮ್ಮಣ್ಣಿನಿಂದ ನಿರ್ಮಿಸಿದ್ದ ಎತ್ತರದ ಕುಸ್ತಿ ಅಖಾಡದ ಸುತ್ತಲೂ ನೆರೆದಿದ್ದ ನೂರಾರು ಜನರು ಕುಸ್ತಿ ಪಟುಗಳ ಪ್ರತಿಯೊಂದು ಪಟ್ಟನ್ನೂ ಕಣ್ಣು ಮಿಟುಕಿಸದೆ ಕಣ್ತುಂಬಿಕೊಂಡು ರೋಮಾಂಚನಗೊಂಡರು. ಆಹ್ವಾನಿತ ಪೈಲ್ವಾನರಿಗಿಂತ ತಾವೇನೂ ಕಡಿಮೆಯಿಲ್ಲ ಎಂಬಂತೆ ಸ್ಥಳೀಯ ಪೈಲ್ವಾನರು ಕೂಡ ಸೆಣಸಿ ಸೈ ಎನಿಸಿಕೊಂಡರು.
ಭಾಗವಹಿಸಿದ್ದ ಎಲ್ಲಾ ಪೈಲ್ವಾನರಿಗೂ ಪದಕ ಹಾಗೂ ಹೂವಿನ ಹಾರವನ್ನು ಹಾಕಿ ಹೈದರಾಲಿ ಗರಡಿ ವತಿಯಿಂದ ಅಭಿನಂದಿಸಿದ್ದಲ್ಲದೆ, ವಿಶೇಷ ಮಾರ್ಪೀಟ್ನಲ್ಲಿ ಗೆದ್ದವರಿಗೆ ನಗದು ಹಣ ಮತ್ತು ಟ್ರೋಫಿ ನೀಡಿದರು.
ಗೌಸ್ಪೀರ್ಸಾಬ್, ಎಂ.ಡಿ.ಮೌಲ, ಮುಕ್ತಿಯಾರ್ ಪಾಷ, ತಮೀಮ್, ಅಫ್ಜಲ್, ಅಮ್ಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಟಿಪ್ಪುಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಖಂಡನೆ
ದೇಶ ಪ್ರೇಮಿ ಟಿಪ್ಪುಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ಟಿಪ್ಪುಸುಲ್ತಾನ್ ಕಮಿಟಿಯ ತಾಲ್ಲೂಕು ಘಟಕದ ಪದಾಧಿಕಾರಿಗಳು ಬುಧವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ನ ಗೋಪಾಲಜಿ ಮತ್ತಿತರರು ದೇಶಪ್ರೇಮಿ ಟಿಪ್ಪುಸುಲ್ತಾನದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದರೊಂದಿಗೆ ಇತಿಹಾಸ ತಿರುಚಿ ಹೇಳಿಕೆ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು. ಅಲ್ಪಸಂಖ್ಯಾತ ಎಂಬ ಒಂದೇ ಕಾರಣಕ್ಕೆ ಟಿಪ್ಪುಸುಲ್ತಾನ್ರ ಬಗ್ಗೆ ಅವಹೇಳಿನಕಾರಿ ಮಾತುಗಳನ್ನಾಡುತ್ತಿದ್ದಾರೆ. ಟಿಪ್ಪು ದೇಶಕ್ಕಾಗಿ ತನ್ನಿಬ್ಬರ ಮಕ್ಕಳನ್ನು ಒತ್ತೆಯಾಗಿಟ್ಟಿದ್ದ ಹಾಗು ಮೈಸೂರು ರಾಜ್ಯ ಪರಕೀಯರ ಪಾಲಾಗಬಾರದು ಎಂಬ ಉದ್ದೇಶದಿಂದ ಯುದ್ಧದಲ್ಲಿ ವೀರ ಮರಣವನ್ನು ಅಪ್ಪಿದ. ಅಪ್ಪಟ ದೇಶಭಕ್ತನ ಬಗ್ಗೆ ಕೀಳಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಟಿಪ್ಪುಸುಲ್ತಾನ್ ಕಮಿಟಿಯ ತಾಲ್ಲೂಕು ಅಧ್ಯಕ್ಷ ಅಫ್ಜಲ್ಪಾಷ, ಪದಾಧಿಕಾರಿಗಳಾದ ಶಬ್ಬೀರ್ಪಾಷ, ಆರಿಫ್ಖಾನ್, ನವಾಜ್, ಇಮ್ರಾನ್ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

