ಸಮಾನ ಮನಸ್ಕರ ಹೋರಾಟ ಸಮಿತಿಯೊಂದಿಗೆ ವಿವಿಧ ಸಂಘಟನೆಗಳು ಒಗ್ಗೂಡಿ ಸೋಮವಾರ ವಿದ್ಯುತ್ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡು ಬೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿಯನ್ನು ನಡೆಸಿದರು.
ರೈತರು ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಿ ಕೊರೆಸಿರುವ ಕೊಳವೆ ಬಾವಿಗಳಿಂದ ವಿದ್ಯುತ್ ಇಲ್ಲದ ಕಾರಣ ನೀರೆತ್ತಲಾಗದೆ ಬೆಳೆಗಳು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ 18 ಸಾವಿರ ರೂಗಳನ್ನು ಕಟ್ಟಿಸಿಕೊಂಡು 2 ವರ್ಷಗಳಾದರೂ ವಿದ್ಯುತ್ ಪರಿವರ್ತಕ ಅಳವಡಿಸಿಲ್ಲ. ಖಾಸಗಿ ಗುತ್ತಿಗೆದಾರರಿಂದ ನಡೆಯುವ ಅಕ್ರಮವನ್ನು ತಡೆದು ಈಗಾಗಲೇ ಹಣ ಕಟ್ಟಿರುವ ರೈತರಿಗೆಲ್ಲ ಅನುಕೂಲವಾಗುವಂತೆ ತಕ್ಷಣ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಬೇಕು. ನಗರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ರೇಷ್ಮೆ ರೀಲರುಗಳಿದ್ದು, ಲಕ್ಷಾಂತರ ರೂಗಳ ಬಂಡವಾಳ ಹೂಡಿ ಅವರು ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಈ ಉದ್ದಿಮೆಯನ್ನು ನಂಬಿ ಲಕ್ಷಾಂತರ ಕುಟುಂಬಗಳಿವೆ. ಸಮರ್ಪಕ ವಿದ್ಯುತ್ ಇಲ್ಲದ ಕಾರಣ ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳನ್ನು ಮುಚ್ಚುವ ಹಂತಕ್ಕೆ ರೀಲರುಗಳು ಬಂದಿದ್ದಾರೆ. ಬ್ಯಾಂಕಿಂಗ್ ವ್ಯವಹಾರ, ಓದುವ ವಿದ್ಯಾರ್ಥಿಗಳಿಗೆ ಹಾಗೂ ಎಲ್ಲಾ ವರ್ಗದವರಿಗೂ ತೊಂದರೆಯಾಗಿದೆ.
ವಿದ್ಯುತ್ ಸಮಸ್ಯೆಯಿಂದಾಗಿ ಆರ್ಥಿಕತೆ ಕುಂಠಿತಗೊಂಡಿದೆ. ವಿದ್ಯುತ್ ಸಮರ್ಪಕವಾಗಿ ವಿತರಿಸಬೇಕು. ನಿರಂತರ 3 ಫೇಸ್ ವಿದ್ಯುತ್ 8 ಗಂಟೆಗಳ ಕಾಲ ಪೂರೈಕೆ ಮಾಡಬೇಕು. ನಗರದಲ್ಲಿ ಮೇನ್ ಕನೆಕ್ಷನ್ ತಂತಿಗಳು ಅಲುಗಾಡುತ್ತಿದ್ದು, ಜೋತುಬಿದ್ದಿರುವ ವಿದ್ಯುತ್ ತಂತಿಗಳನ್ನು ತಕ್ಷಣ ಸರಿಪಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರತ ಲೈನ್ಮನ್ಗಳು ಹಳ್ಳಿಗಳಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾಕಾರರು ತಾಲ್ಲೂಕು ಕಚೇರಿಯ ಬಳಿ ಹಾಗೂ ಓ.ಟಿ.ವೃತ್ತದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿ ವಿದ್ಯುತ್ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸಿದರು. ನಂತರ ಬೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿಯನ್ನು ನಡೆಸಿ, ಎ.ಇ.ಇ ಬೈರೇಗೌಡ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಕನ್ನಡ ಸೇನೆ ಬಿ.ಮಂಜುನಾಥ್, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ(ಪುಟ್ಟಣ್ಣಯ್ಯ) ಜಿಲ್ಲಾಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್, ಮುನಿಕೆಂಪಣ್ಣ, ಯೂನಿಟಿ ಸಿಲ್ಸಿಲಾ ಫೌಂಡೇಷನ್ ಅಧ್ಯಕ್ಷ ಮಹಮ್ಮದ್ ಅಸಾದ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಬಿ.ಎಸ್.ಅಫ್ಜಲ್ಪಾಷ, ಅಖಿಲ ಕರ್ನಾಟಕ ಅಲ್ಪಸಂಖ್ಯಾತರ ಸಂಘದ ಅಧ್ಯಕ್ಷ ಬಿ.ಎಸ್.ಸಾದಿಕ್ಪಾಷ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ತಾಲ್ಲೂಕು ಅಧ್ಯಕ್ಷ ಜಿಯಾ, ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ಜಿ.ಎಲ್.ವಸಂತ್ಕುಮಾರ್, ದಲಿತ ಸೇನೆ ಆರ್.ಸುರೇಶ್, ಟಿಪ್ಪು ಸೆಕ್ಯುಲರ್ ಸೇನಾ ತಾಲ್ಲೂಕು ಶಾಖೆಯ ಮೌಲಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಸ್ಕಾಂ ಕಚೇರಿಗೆ ಬೀಗ ಜಡಿದು ಧರಣಿ
ಸಹಿ ಮಾಡಿದರೆ ಸಾಕ್ಷರರಲ್ಲ
ದೇಶದ ಐಕ್ಯತೆ, ಸಮಗ್ರತೆ ಹಾಗೂ ಅಭಿವೃದ್ಧಿಗಾಗಿ ಸಾಕ್ಷರತೆ ಬಹಳ ಮುಖ್ಯ. ಅವಿದ್ಯಾವಂತರನ್ನು ಓದಿನೆಡೆಗೆ ಆಕರ್ಷಿಸಿ ಅದರ ಉಪಯುಕ್ತತೆಯನ್ನು ಮನಗಾಣಿಸಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ ಸಾಕ್ಷರ ಭಾರತ್ ಕಾರ್ಯಕ್ರಮದಡಿ ಮೂರು ದಿನಗಳ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೇವಲ ಸಹಿ ಮಾಡುವುದನ್ನು ಕಲಿತರೆ ಸಾಕ್ಷರರಾಗುವುದಿಲ್ಲ. ಗ್ರಾಮ ಲೋಕ ಶಿಕ್ಷಣ ಕೇಂದ್ರದಲ್ಲಿ ತರಿಸುವ ದಿನಪತ್ರಿಕೆ, ವಾರಪತ್ರಿಕೆಗಳು, ನಿಯಕಾಲಿಕಗಳನ್ನು ಓದುವ ರೀತಿಯಲ್ಲಿ ಅಕ್ಷರಸ್ಥರನ್ನಾಗಿಸಬೇಕು. ಸ್ವತಂತ್ರವಾಗಿ ವ್ಯವಹರಿಸುವ ರೀತಿಯಲ್ಲಿ ಸ್ವಯಂ ಸೇವಕರು ತರಬೇತಿ ನೀಡಬೇಕು. ಗ್ರಾಮದ ಮಹಿಳೆಯರಲ್ಲಿ ಅಕ್ಷರ ಜಾಗೃತಿಯನ್ನು ಮೂಡಿಸಬೇಕು ಎಂದು ಹೇಳಿದರು.
ತಾಲ್ಲೂಕು ಸಾಕ್ಷರತಾ ಸಂಯೋಜಕ ಟಿ.ವಿ.ಶ್ರೀನಿವಾಸ್ ಮಾತನಾಡಿ, ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಿದ್ದು, ಈಗಾಗಲೇ 4 ಪಂಚಾಯತಿಗಳಲ್ಲಿ ಕಾರ್ಯಾಗಾರ ಮುಗಿದು, ಕಲಿಕೆಯು ಪ್ರಾರಂಭಗೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿ ಕಲಿಕಾರ್ಥಿಗೂ ನೀಡಬೇಕಾದ ಕಲಿಕೋಪಕರಣಗಳನ್ನು ವಿತರಿಸಿ ಪ್ರೇರಕರು ಹಾಗೂ ಭಾಗವಹಿಸಿದ್ದ 39 ಮಂದಿ ಸ್ವಯಂ ಸೇವಕರಿಗೆ ಅವರವರ ಜವಾಬ್ದಾರಿಗಳ ಬಗ್ಗೆ ವಿವರಿಸಲಾಯಿತು.
ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ರೋಜಲಿನ್ ಫೆರೆರಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೈ.ರಾಮಕೃಷ್ಣ, ಜಿಲ್ಲಾ ಸರ್ಕಾರೇತರ ಸಾಕ್ಷರತಾ ಸಂಯೋಜಕ ಆನಂದಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ದಾವುದ್ ಪಾಷ, ಎಲ್.ವಿ.ವೆಂಕಟರೆಡ್ಡಿ, ಪ್ರಭಾಕರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿವಿಧ ಸಂಘಟನೆಗಳಿಂದ ಸೋಮವಾರ ಬೆಸ್ಕಾಂ ಕಚೇರಿ ಮುತ್ತಿಗೆ
ವಿದ್ಯುತ್ ಸಮಸ್ಯೆಯನ್ನು ಪರಿಹರಿಸದ ಬೆಸ್ಕಾಂ ಇಲಾಖೆಯ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿ ಬೆಸ್ಕಾ ಕಚೇರಿಗೆ ಮುತ್ತಿಗೆ ಹಾಕಲು ವಿವಿಧ ಸಂಘಟನೆಗಳ ಸದಸ್ಯರು ಸಭೆ ಸೇರಿ ತೀರ್ಮಾನಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಭೆ ಸೇರಿದ ವಿವಿಧ ಸಂಘಟನೆಯ ಸದಸ್ಯರು, ರೈತರಿಗೆ, ರೀಲರುಗಳಿಗೆ, ವ್ಯಾಪಾರಸ್ಥರಿಗೆ, ಓದುವ ಮಕ್ಕಳಿಗೆ ಎಲ್ಲರಿಗೂ ಸಮಸ್ಯೆಯಾಗಿ ಆರ್ಥಿಕತೆಯು ಕುಂಠಿತಗೊಳ್ಳಲು ಕಾರಣವಾದ ವಿದ್ಯುತ್ ಸಮಸ್ಯೆ ಸರಿಹೋಗಬೇಕು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕತ್ತಲಲ್ಲಿ ಕಣ್ಣು ಮುಚ್ಚಿ ಕುಳಿತಂತಿದ್ದಾರೆ. ಎಲ್ಲಾ ಸಂಘಟನೆಗಳ ಸದಸ್ಯರೂ ಒಗ್ಗೂಡಿ ಪ್ರತಿಭಟಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಉಪಾಧ್ಯಕ್ಷ ಅಕ್ರಂಪಾಷ, ಕನ್ನಡಸೇನೆಯ ಬಿ.ಮಂಜುನಾಥ್, ಯೂನಿಟಿ ಸಿಲ್ಸಿಲಾ ಅಧಯಕ್ಷ ಮೊಹಮ್ಮದ್ ಅಸಾದ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ಅಫ್ಜತ್ ಪಾಷ, ಅಲ್ಪಸಂಖ್ಯಾತರ ಸಂಘದ ಬಿ.ಎಸ್.ಸಾದಿಕ್ ಪಾಷ, ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷ ಹುಸೇನ್ಸಾಬ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಗೊಂಬೆಹಬ್ಬ ಆಚರಣೆ
ಶಿಡ್ಲಘಟ್ಟದ ಜೌಗುಪೇಟೆಯ ಪ್ರಕಾಶ್ಬಾಬು ಮತ್ತು ಸಾವಿತ್ರಮ್ಮ ಅವರ ಮನೆಯಲ್ಲಿ ಚಾಮುಂಡೇಶ್ವರಿಯ ಅಲಂಕೃತ ಮೂರ್ತಿಯೊಂದಿಗೆ ವೈವಿಧ್ಯಮಯ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಟ್ಟು ಗೊಂಬೆಹಬ್ಬವನ್ನು ಆಚರಿಸುತ್ತಿದ್ದಾರೆ.
ಗೊಂಬೆ ತಯಾರಿಕಾ ಪಾಠ
ವ್ಯಾಪಾರಕ್ಕೆ ಕುಳಿತ ಶೆಟ್ಟಿ ದಂಪತಿಗಳು, ಅವರ ವ್ಯಾಪಾರೀ ವಸ್ತುಗಳು, ಆಟಿಕೆಗಳು, ಪ್ರಾಣಿಗಳು, ಪಕ್ಷಿಗಳು, ದೇವಾನು ದೇವತೆಗಳು, ಪದ್ಮಾವತಿ ಪರಿಣಯ, ಗೋಕುಲದ ಶ್ರೀಕೃಷ್ಣ, ದಶಾವತಾರ, ಕಾಳಿಂಗಮರ್ಧನ, ಕೈಲಾಸ, ಅನಂತಪದ್ಮನಾಭ, ಹಣ್ಣುಗಳು ಮುಂತಾದ ಗೊಂಬೆಗಳು ಸಾಲುಸಾಲಾಗಿ ಜೋಡಿಸಿಡಲಾಗಿದೆ. ಪೈರನ್ನು ಬೆಳೆಸಿ ಹಸುರನ್ನೂ ಮೂಡಿಸಿದ್ದಾರೆ.
ನಗರದ ಗೌಡರ ಬೀದಿಯ ಡಿ. ಪಾರ್ಥಸಾರಥಿ ಮತ್ತು ಮಂಜುನಾಥ ಅವರ ಮನೆಯಲ್ಲಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿಟ್ಟು ವಿವಿಧ ತಿಂಡಿಗಳನ್ನು ಮಾಡಿಟ್ಟು ಆಚರಿಸಲಾಗಿದೆ. ಹಲವಾರು ವರ್ಷಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಅವರ ಮನೆಯಲ್ಲಿನ ಮಹಿಳೆಯರು ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯನ್ನು ಮಕ್ಕಳಿಗೆ ಹೇಳಿಕೊಡುವ ಮೂಲಕ ಗೊಂಬೆ ಹಬ್ಬಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿದ್ದಾರೆ. ಗೊಂಬೆ ವೀಕ್ಷಿಸಲು ಬರುವ ಮಕ್ಕಳಿಗೆ ಸಿಹಿ ಹಂಚಿ, ಕಲಿಯುವ ಆಸಕ್ತಿಯುಳ್ಳವರಿಗೆ ಕಲಿಸುತ್ತಾ, ಗೊಂಬೆಗಳ ಮೂಲಕ ಹಲವು ಕಥೆಗಳನ್ನು ತಿಳಿಸುತ್ತಿದ್ದಾರೆ.
‘ನಮ್ಮ ಮನೆಯಲ್ಲಿ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಈ ಗೊಂಬೆ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ. ನಾವು ಹೋದೆಡೆಯಲ್ಲೆಲ್ಲಾ ಗೊಂಬೆಗಳನ್ನು ಮತ್ತು ಅವುಗಳನ್ನು ಅಲಂಕರಿಸಲು ಬೇಕಾದ ವಸ್ತುಗಳನ್ನು ಹುಡುಕುತ್ತೇವೆ. ಮನೆಯಲ್ಲಿ ಗೊಂಬೆಗಳನ್ನು ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ತಯಾರಿಸುತ್ತೇವೆ ಹಾಗೂ ಅಲಂಕರಿಸುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆ ಸಿಹಿ ನೀಡಿ ಕಥೆ ಹೇಳುತ್ತೇವೆ. ಮನೆಯ ಹತ್ತಿರದ ಕೆಲ ಮಕ್ಕಳು ಕುಸುರಿ ಕೆಲಸ, ಗೊಂಬೆ ಅಲಂಕಾರ ಹಾಗೂ ಕಸದಿಂದ ರಸ ಎಂಬಂತೆ ಬಿಸಾಡುವ ಪದಾರ್ಥದಿಂದ ಕಲಾಕೃತಿ ಮಾಡುವುದನ್ನು ಕಲಿಸುತ್ತೇವೆ’ ಎಂದು ಡಿ.ಮಂಜುನಾಥ್ ತಿಳಿಸಿದರು.
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಗೆ ಬಹಿಷ್ಕಾರ
ನಾಡಹಬ್ಬ ಕನ್ನಡರಾಜ್ಯೋತ್ಸವ ಆಚರಣೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೈರುಹಾಜರಾಗಿದ್ದರಿಂದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆಯಲಾಗಿದ್ದ ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆಯನ್ನು ಕನ್ನಡ ಪರ ಸಂಘಟನೆಗಳು ಬಹಿಷ್ಕರಿಸಿದ ಘಟನೆ ನಡೆಯಿತು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ಪೂರ್ವಭಾವಿ ಸಭೆಗೆ ೧೦ ಕ್ಕೂ ಹೆಚ್ಚು ಇಲಾಖೆಗಳು ಅಧಿಕಾರಿಗಳು ಹಾಜರಾಗಿರಲಿಲ್ಲ. ಇದರಿಂದ ಕೋಪಗೊಂಡ ಕನ್ನಡ ಸೇನೆಯ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಯಾವ ಅಧಿಕಾರಿಗಳಿಗೂ ನಾಡಹಬ್ಬಗಳ ಬಗ್ಗೆ ಕಾಳಜಿಯಿಲ್ಲ, ಒಂದು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವಾರು ಸಂಘಟನೆಗಳು ಹೋರಾಟಗಳನ್ನು ಮಾಡುತ್ತಿದ್ದರೆ, ಅದಕ್ಕೆ ವಿರುದ್ಧವಾಗಿ ಸರ್ಕಾರಿ ಅಧಿಕಾರಿಗಳ ವರ್ತನೆ ಇದೆ. ಇದು ಆತಂಕದ ವಿಚಾರವಾಗಿದ್ದು, ನಾವು ಸಭೆಯನ್ನು ಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಅಧಿಕಾರಿಗಳಿಗೆ ದಿಕ್ಕಾರಗಳನ್ನು ಕೂಗಿ ಹೊರನಡೆದರು,
ಸಭೆಗೆ ಬರದೆ ಇರುವ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ನೀಡಿ ಕಾರಣ ಕೇಳಲಾಗಿದೆ ಎಂದು ತಹಶೀಲ್ದಾರ್ ಉತ್ತರ ನೀಡಿದರೂ ಕೂಡಾ ಸಮಾಧಾನವಾಗದ ಸಂಘಟಕರು, ಕೇವಲ ನಾಮಕಾವಸ್ತೆಗೆ ನೊಟೀಸ್ಗಳನ್ನು ಜಾರಿ ಮಾಡುವುದರಿಂದ ಯಾವುದೇ ಬದಲಾವಣೆಗಳು ಆಗುವುದಿಲ್ಲವೆಂದು ಹೊರನಡೆದರು. ನಂತರ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ ಅವರನ್ನು ಮನವೊಲಿಸಿ ಒಳಗೆ ಕರೆದುಕೊಂಡು ಬರುವಂತಹ ಪ್ರಯತ್ನ ಮಾಡಿದರಾದರೂ ಸಭೆಯನ್ನು ಅಕ್ಟೋಬರ್ ೨೬ ಕ್ಕೆ ಮುಂದೂಡಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಶಿರಸ್ತೆದಾರ ನರೇಂದ್ರಬಾಬು, ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪುರುಷೋತ್ತಮ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೊಲೀಸರ ವಿರುದ್ಧ ಚೀಮನಹಳ್ಳಿ ಗ್ರಾಮಸ್ಥರ ಪ್ರತಿಭಟನೆ
ದಸರಾ ಆಚರಣೆಗಾಗಿ ಅಂಗಡಿಯನ್ನು ಸ್ವಚ್ಛ ಮಾಡುವ ವೇಳೆಯಲ್ಲಿ ಪುರಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯ್ ಅವರು ಏಕಾಏಕಿ ಅಂಗಡಿ ಮಾಲೀಕರ ಮೇಲೆ ಹಲ್ಲೆ ನಡೆಸಿ, ದುರ್ವತನೆಯಿಂದ ನಡೆದುಕೊಂಡಿದ್ದಾರೆ ಎಂದು ಆರೋಪಿಸಿ ಚೀಮನಹಳ್ಳಿ ಗ್ರಾಮಸ್ಥರು ಬುಧವಾರ ನಗರಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಿಜಯ್ ಅವರು ಮಂಗಳವಾರ ರಾತ್ರಿಯಲ್ಲಿ ದಿಬ್ಬೂರಹಳ್ಳಿ ರಸ್ತೆಯಲ್ಲಿ ಸಂಚಾರ ಮಾಡುವಾಗ ಅಂಗಡಿಯನ್ನು ಸ್ವಚ್ಛ ಮಾಡಿಕೊಳ್ಳುತ್ತಿದ್ದಾಗ ಬಂದು ಅಂಗಡಿಯ ಬಾಗಿಲನ್ನು ಮುಚ್ಚುವಂತೆ ಹೇಳಿದರು, ಅಂಗಡಿಯನ್ನು ಸ್ವಚ್ಛ ಮಾಡುತ್ತಿದ್ದೇನೆ ಎಂದು ಹೇಳಿದರೂ ಕೂಡಾ ಕೇಳದೆ ಏಕಾಏಕಿ ಹಲ್ಲೆ ನಡೆಸಿ, ಅಂಗಡಿಯ ಗಾಜುಗಳನ್ನು ಹೊಡೆದುಹಾಕಿದ್ದಾರೆ, ರೌಡಿಯಂತೆ ವರ್ತನೆ ಮಾಡುತ್ತಾರೆ, ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ಮಾತನಾಡುತ್ತಾರೆ ಅವರ ವರ್ತನೆ ಸರಿಯಿಲ್ಲವೆಂದು ಆರೋಪಿಸಿ ಮುತ್ತಿಗೆ ಹಾಕಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಚೀಮನಹಳ್ಳಿ ಗ್ರಾಮದ ಮುಖಂಡರನ್ನು ಸಮಾಧಾನಪಡಿಸಿದ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಮಂಗಳವಾರದಂದು ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದವರಿಂದ ಪಥಸಂಚಲನವಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಭದ್ರತೆಯನ್ನು ಒದಗಿಸಲಾಗಿತ್ತು, ಆದರೆ ರಾತ್ರಿಯಲ್ಲಿ ಆಚಾತುರ್ಯವಾಗಿ ಈ ಘಟನೆ ನಡೆದಿದೆ. ಮುಂದೆ ಇಂತಹ ಅನಾಹುತಗಳು ಆಗದಂತೆ ಜಾಗ್ರತೆವಹಿಸುವುದಾಗಿ ಸಮಾಧಾನಪಡಿಸಿ ವಾಪಸ್ಸು ಕಳುಹಿಸಿದರು.
ಪಕ್ಷಾತೀತವಾಗಿ ನೀರಾವರಿ ಹೋರಾಟದಲ್ಲಿ ಭಾಗಿಯಾಗಿ – ವಿ.ಮುನಿಯಪ್ಪ
ಬಯಲುಸೀಮೆ ಭಾಗಗಳಿಗೆ ಶಾಶ್ವತ ನೀರಾವರಿ ಸೌಲಭ್ಯಗಳನ್ನು ಕಲ್ಪಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು, ಅಕ್ಟೋಬರ್ ೨೯ರಂದು ಗುರುವಾರ ಬೆಳಿಗ್ಗೆ ೧೧ ಗಂಟೆಗೆ ಬೃಹತ್ ಬೈಕ್ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಪಕ್ಷಾತೀತವಾಗಿ ಎಲ್ಲಾ ನಾಗರಿಕರು ಭಾಗವಹಿಸಬೇಕು ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮನವಿ ಮಾಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜನೆ ಮಾಡಿದ್ದ ಶಾಶ್ವತ ನೀರಾವರಿ ಹೋರಾಟಕ್ಕೆ ನಡೆಸಲು ಉದ್ದೇಶಿಸಿರುವ ಬೈಕ್ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಚದಲಪುರ ಗೇಟ್ನಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಹೋರಾಟಗಾರರಲ್ಲಿ ಆತ್ಮಸ್ಥೈರ್ಯ ತುಂಬಿಸುವ ಅಗತ್ಯವಿದೆ. ತೀವ್ರವಾದ ನೀರಿನ ಅಭಾವ ಅನುಭವಿಸುತ್ತಿರುವ ಬಯಲುಸೀಮೆ ಭಾಗಗಳಲ್ಲಿನ ಜನರು, ಐಕ್ಯತೆಯಿಂದ ಹೋರಾಟದಲ್ಲಿ ಭಾಗವಹಿಸಬೇಕು. ಬಯಲು ಸೀಮೆ ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಕೇಳುವುದು ನಮ್ಮ ಹಕ್ಕು. ಪ್ರತಿಯೊಬ್ಬ ನಾಗರಿಕರು ಮನೆಗೊಬ್ಬರಂತೆ ನೀರಾವರಿ ಹೋರಾಟದಲ್ಲಿ ಭಾಗವಹಿಸಬೇಕು ಎಂದರು.
ಬಯಲುಸೀಮೆ ಭಾಗಗಳಿಗೆ ನೀರಾವರಿ ಯೋಜನೆಗಳನ್ನು ಸಾಕಾರಗೊಳಿಸುವಂತೆ ಒತ್ತಾಯಿಸಲು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಯುವಜನತೆಯೂ ಕೂಡಾ ಬೆಂಬಲ ನೀಡುತ್ತಿದ್ದಾರೆ. ಬಯಲು ಸೀಮೆ ಭಾಗಗಳಿಂದ ಗುಳೆ ಹೋಗದಂತೆ ತಡೆಯುವ ಅಗತ್ಯವಿರುವುದರಿಂದ ಪ್ರತಿಯೊಬ್ಬ ನಾಗರಿಕರು ನೀರಾವರಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಸುಭ್ರಮಣಿ, ಆರ್.ಶ್ರೀನಿವಾಸ್, ಮುನಿಯಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಡಿ.ಎಸ್.ಎನ್.ರಾಜು, ಮುನಿಕೃಷ್ಣಪ್ಪ, ಬಿ.ಸಿ.ವೆಂಕಟೇಶ್, ದೊಡ್ಡಪಾಪಣ್ಣ, ಸುರೇಶ್, ಮೌಲಾ, ಜೆ.ಎಂ.ಬಾಲಕೃಷ್ಣ, ರಘು, ಚಿಕ್ಕಮುನಿಯಪ್ಪ, ಎಚ್.ಶಂಕರ್, ಮುತ್ತೂರು ಚಂದ್ರೇಗೌಡ, ವೆಂಕಟರಾಜೇಗೌಡ, ಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನೀರಾವರಿ ಹೋರಾಟಕ್ಕೆ ಬೈಕ್ ರ್ಯಾಲಿ
ಚಿಕ್ಕಬಳ್ಳಾಪುರದ ಚದಲಪುರದಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಸದಸ್ಯರು ಬೆಂಬಲಿಸಿ ಬುಧವಾರ ಪ್ರತಿಭಟನಾ ಮೆರವಣಿಗೆ ಹಾಗೂ ಬೈಕ್ ರ್ಯಾಲಿ ನಡೆಸಿದರು.
ಜಿಲ್ಲಾದ್ಯಂತ ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಸದಸ್ಯರು ಶಾಶ್ವತ ನೀರಾವರಿ ಹೋರಾಟಕ್ಕೆ ವಿವಿಧ ಭಾಗಗಳಿಂದ ಚದಲಪುರಕ್ಕೆ ತೆರಳಿದ ಸಂದರ್ಭದಲ್ಲಿ ಚಿಂತಾಮಣಿಯಿಂದ ಬಂದ ಸದಸ್ಯರು ಶಿಡ್ಲಘಟ್ಟದ ಸದಸ್ಯರೊಂದಿಗೆ ಸೇರಿ ಬೈಕ್ ರ್ಯಾಲಿ ನಡೆಸಿ ನಂತರ ಜೊತೆಯಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.
ಶಾಶ್ವತ ನೀರಾವರಿ ಕಾಮಗಾರಿ ತ್ವರಿತವಾಗಿ ನಡೆಯಬೇಕು. ಇದು ಬಯಲು ಸೀಮೆಯ ಜನರ ಜೀವನ್ಮರಣ ಪ್ರಶ್ನೆಯಾಗಿದೆ. ಜನ ಜಾನುವಾರುಗಳು ಉಳಿಯಲು ಹಾಗೂ ಜಿಲ್ಲೆಯು ಆರ್ಥಿಕವಾಗಿ ಬೆಳೆಯಲು, ರೈತರ ಕಷ್ಟ ನಿವಾರಣೆಯಾಗಲು ಶುದ್ಧ ನೀರು ಬೇಕೇ ಬೇಕು ಎನ್ನುತ್ತಾ ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಲು ತೆರಳಿದರು.
ಮಾನವ ಹಕ್ಕುಗಳ ಹೋರಾಟಗಾರರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೋದಗೂರು ನವೀನ್, ತಾಲ್ಲೂಕು ಗೌರವಾಧ್ಯಕ್ಷ ಶಿವಕುಮಾರ್, ಕಲ್ಲಹಳ್ಳಿ ವೆಂಕಟೇಶ್, ನವೀನ್ ಕುಮಾರ್, ನಾಗಾರ್ಜುನ, ಅಶೋಕ್, ಸತೀಶ್, ದೇವರಾಜ್, ಚೊಕ್ಕನಹಳ್ಳಿ ದೇವಪ್ಪ, ನಾಗೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರಿನಲ್ಲಿ ಗೊಂಬೆಹಬ್ಬ
ದಸರಾ ಗೊಂಬೆ ಹಬ್ಬಕ್ಕೆ ನಾಲ್ಕು ತಲೆಮಾರುಗಳ ನಂಟು ತಾಲ್ಲೂಕಿನ ಮೇಲೂರಿನಲ್ಲಿ ಮೂಡಿ ಸಂಭ್ರಮಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಮೇಲೂರಿನ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ನಾಲ್ಕು ತಲೆಮಾರುಗಳಿಂದ ಆಚರಿಸಿಕೊಂಡ ಬಂದ ಗೊಂಬೆ ಹಬ್ಬವು ಈ ವರ್ಷವೂ ಮುಂದುವರೆದಿದೆ. ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ಬಗೆ ಆಕರ್ಷಕವಾಗಿದೆ. ಪಟ್ಟದ ಗೊಂಬೆಗಳು, ದೇವರ ಗೊಂಬೆಗಳು, ಶೆಟ್ಟಿ ಅಂಗಡಿ, ಪ್ರಾಣಿಗಳು, ವಾದ್ಯವೃಂದ, ಹಾಸ್ಯಗಾರರು, ನೃತ್ಯಗಾರರು ಮುಂತಾದ ಹತ್ತು ಹಲವು ಗೊಂಬೆಗಳಿಲ್ಲಿವೆ.
ನಾಲ್ಕು ತಲೆಮಾರಿನ ನಂಟನ್ನು ಹೊಂದಿರುವ ಅಜ್ಜಿಯಿಂದ ಮರಿಮಗಳೊಂದಿಗೆ ಹಬ್ಬವನ್ನು ಆಚರಿಸುತ್ತಿರುವ ಸರೋಜಮ್ಮ, ‘ತಮ್ಮ ಮನೆಯ ಹೆಣ್ಣುಮಕ್ಕಳಾದ ದಿವ್ಯ ಪ್ರಸಾದ್, ಅಂಬುಜ ಚಲಾ ಮತ್ತು ಕುಶಲ ರವಿ ಎಲ್ಲರೂ ಸೇರಿ ಗೊಂಬೆ ಜೋಡಿಸಿಟ್ಟಿದ್ದಾರೆ. ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ’ ಎಂದು ಹೇಳಿದರು.
ನಗರದ ನಿವಾಸಿ ಜನಪದತಜ್ಞ ಡಾ.ಜಿ.ಶ್ರೀನಿವಾಸಯ್ಯ ಅವರ ‘ತಣಿಗೆ’ ಕೃತಿಗೆ ಪ್ರಶಸ್ತಿ
ನಗರದ ನಿವಾಸಿ ಜನಪದತಜ್ಞ ಡಾ.ಜಿ.ಶ್ರೀನಿವಾಸಯ್ಯ ಅವರ ಕೃತಿ ‘ತಣಿಗೆ’ಗೆ ಈಚೆಗೆ ಬಾಗಲಕೋಟದಲ್ಲಿ ನಡೆದ 6ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗಿದೆ.
ತಣಿಗೆ ಕೃತಿಯು ಜನಪದ ತಜ್ಞ ಡಾ.ಶ್ರೀನಿವಾಸಯ್ಯ ಅವರ ಜನಪದ ಲೇಖನಗಳ ಸಂಗ್ರಹವಾಗಿದೆ. ಸಮ್ಮೇಳನದಲ್ಲಿ ಸಂಶೋಧನಾ ವಿಭಾಗದಲ್ಲಿ ಈ ಕೃತಿಯನ್ನು ಆಯ್ಕೆ ಮಾಡಲಾಗಿದ್ದು, ಯಲ್ಲಪ್ಪ ಗೋಳಸಂಗಿ ದತ್ತಿ ನಿಧಿಯ ಪ್ರಶಸ್ತಿ ಪತ್ರ, ಎರಡು ಸಾವಿರ ನಗದು, ಫಲಕ ಹಾಗೂ ಪದಕವನ್ನು ನೀಡಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ, ಸಮ್ಮೇಳನಾಧ್ಯಕ್ಷ ಡಾ.ಸತ್ಯಾನಂದ ಪಾತ್ರೋಟ, ಡಾ.ಮಲ್ಲಿಕಾರ್ಜುನ ಸಿದ್ದಣ್ಣನವರ, ಡಾ.ಚಲುವರಾಜ, ಎಂ.ವೆಂಕಟಸ್ವಾಮಿ, ಆರ್.ಮೋಹನರಾಜ್, ಅರ್ಜುನ ಗೊಳಸಂಗಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಂಕಿತ ಡೆಂಗ್ಯೂ ಜ್ವರಕ್ಕೆ ಬಾಲಕಿ ಬಲಿ
ತಾಲ್ಲೂಕಿನ ಮಳ್ಳೂರು ಗ್ರಾಮದ ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದು ಡೆಂಗ್ಯೂ ಜ್ವರವಿದ್ದಿರಬಹುದೆಂದು ಶಂಕಿಸಲಾಗಿದೆ.
ತಾಲ್ಲೂಕಿನ ಮಳ್ಳೂರು ಗ್ರಾಮದ ದ್ಯಾವಪ್ಪ, ಚಿನ್ನಮ್ಮಯ್ಯ ದಂಪತಿಗಳ ಮಗಳಾದ ಅಮೃತವರ್ಷಿಣಿ (೮) ಮೃತಪಟ್ಟಿರುವ ದುರ್ದೈವಿಯಾಗಿದ್ದಾಳೆ.
ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಪ್ರಾಥಮಿಕ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಗೆ ಕಳೆದ ಒಂದು ವಾರದ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಹೆಚ್ಚಿನಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ, ಸೋಮವಾರ ಸಂಜೆ ಆಸ್ಪತ್ರೆಯಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಗ್ರಾಮಸ್ಥರಆಕ್ರೋಶ: ಗ್ರಾಮದಲ್ಲಿ ಕಳೆದ ಒಂದು ವಾರದ ಹಿಂದೆ ಬಾಲಕನೊಬ್ಬ ಮೃತಪಟ್ಟಿದ್ದಾನೆ. ನಾಲ್ಕೈದು ಮಂದಿ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ, ಇಷ್ಟಾದರೂ ಕೂಡಾ ಗ್ರಾಮ ಪಂಚಾಯತಿಯಿಂದ ಸ್ವಚ್ಛತೆಯ ಕುರಿತಂತೆ ಯಾವುದೇ ಕ್ರಮತೆಗೆದುಕೊಂಡಿಲ್ಲ. ಚರಂಡಿಗಳ ಸ್ವಚ್ಛತೆಯಿಲ್ಲ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಳ್ಳೂರಿಗೆ ದೌಡಾಯಿಸಿದ ಆಸ್ಪತ್ರೆಯ ಸಿಬ್ಬಂದಿ : ಘಟನೆಯ ಹಿನ್ನೆಲೆಯಲ್ಲಿ ತಕ್ಷಣ ಗ್ರಾಮದ ಕಡೆಗೆ ದೌಡಾಯಿಸಿದ ಮೇಲೂರು ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಗ್ರಾಮದಲ್ಲಿನ ನಾಗರಿಕರ ಆರೋಗ್ಯ ತಪಾಸಣೆ, ಹಾಗೂ ರಕ್ತದ ಮಾದರಿಗಳನ್ನು ಸಂಗ್ರಹ ಮಾಡಿಕೊಂಡು ರಕ್ತಪರೀಕ್ಷೆಗೆ ಒಳಪಡಿಸಿದ್ದಾರೆ.
ಅಕ್ಷರ ಜ್ಞಾನದ ಅಗತ್ಯವಿದೆ
ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನದ ಅಗತ್ಯವಿದೆ. ಸಂಪೂರ್ಣ ಸಾಕ್ಷರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಹೊಣೆಗಾರಿಕೆ ತೆಗೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಸಾಕ್ಷರ ಭಾರತ್ ಕಾರ್ಯಕ್ರಮದಡಿಯಲ್ಲಿ ಸುಮಾರು 40 ಮಂದಿ ಸ್ವಯಂ ಸೇವಕರಿಗೆ 3 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಅಕ್ಷರ ಜ್ಞಾನ ಹೊಂದಿ ಸಮಾಜದಲ್ಲಿ ನಡೆಯುತ್ತಿರುವ ಬಾಲ್ಯವಿವಾಹ, ಮೂಢನಂಬಿಕೆ, ದೌರ್ಜನ್ಯಗಳನ್ನು ತಡೆಗಟ್ಟಿ, ಸಂಪೂರ್ಣ ಸಾಕ್ಷರತಾ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಸ್ವಯಂ ಸೇವಕರು ಹೆಚ್ಚಿನ ಆಸಕ್ತಿವಹಿಸಿ ಅನಕ್ಷರಸ್ಥರನ್ನು ಗುರುತಿಸಿ, ಅವರಲ್ಲಿ ಅಕ್ಷರ ಜ್ಞಾನ ಮೂಡಿಸಲು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಮತಾ ಮಂಜುನಾಥ್, ಸಾಕ್ಷರ ಭಾರತ್ ಜಿಲ್ಲಾ ಸಂಯೋಜಕ ಆನಂದಕುಮಾರ್, ತಾಲ್ಲೂಕು ಸಂಯೋಜಕ ಟಿ.ವಿ.ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀರಂಗಪ್ಪ, ಪ್ರಸನ್ನ, ನಾರಾಯಣಮ್ಮ, ಮೂರ್ತಿಯಮ್ಮ, ಪ್ರೇರಕರಾದ ಮುನಿವೆಂಕಟರೋಣ, ಅನಿತಾ, ಶಿಕ್ಷಕರಾದ ರಮೇಶ್, ಪ್ರಭಾಕರ್, ವೆಂಕಟರೆಡ್ಡಿ ಹಾಜರಿದ್ದರು.
ಟಿಪ್ಪುಸುಲ್ತಾನ್ ಸಂಘದಿಂದ ಬೈಕ್ ರ್ಯಾಲಿ
ಪರಮಶಿವಯ್ಯನವರ ವರದಿಯ ಒಂದು ಭಾಗವಾಗಿರುವ ಎತ್ತಿನಹೊಳೆ ಯೋಜನೆಯನ್ನು ತೋರಿಸಿ, ಈ ಭಾಗದ ಜನತೆಯನ್ನು ಸರ್ಕಾರ ವಂಚನೆ ಮಾಡುತ್ತಿದೆ ಎಂದು ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಪ್ಜಲ್ಪಾಷ ಆರೋಪಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಸೋಮವಾರ ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ವತಿಯಿಂದ ಶಾಶ್ವತ ನೀರಾವರಿ ಯೋಜನೆಯ ಅನುಷ್ಟಾನಕ್ಕಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನೀರು ಕೇಳುವುದು ನಮ್ಮ ಹಕ್ಕು, ಪ್ರಾಕೃತಿಕವಾಗಿ ಸಿಗುವಂತಹ ನೀರು ಕೊಡಿ ಎಂದು ಸರ್ಕಾರಗಳಿಗೆ ಮಾಡುತ್ತಿರುವ ಮನವಿಗಳನ್ನು ಆಲಿಸದ ಸರ್ಕಾರಗಳು, ಡಾ.ಪರಮಶಿವಯ್ಯನವರ ವರದಿಯಂತೆ ಯೋಜನೆಗಳನ್ನು ಜಾರಿಗೊಳಿಸದೇ ಜನರಿಗೆ ಮಂಕು ಬೂದಿ ಎರಚುತ್ತಿದ್ದಾರೆ. ಸರ್ಕಾರ ಕೂಡಲೇ ಈ ಭಾಗದ ರೈತರು, ಹಾಗೂ ನಾಗರಿಕರ ಮನವಿಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದರು.
ಕರ್ನಾಟಕ ಟಿಪ್ಪುಸುಲ್ತಾನ್ ಸಂಘದ ತಾಲ್ಲೂಕು ಪದಾಧಿಕಾರಿಗಳು ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಿವಾರೆಡ್ಡಿ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಪ್ರತೀಶ್, ಕನ್ನಡ ಸೇನೆಯ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಹುಸೇನ್ಸಾಬ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಷೇಕ್ ಶಬ್ಬೀರ್ಪಾಷಾ, ತಾಲ್ಲೂಕು ಅಧ್ಯಕ್ಷ ಅಪ್ಜಲ್ಪಾಷಾ, ಉಪಾಧ್ಯಕ್ಷರಾದ ಝಿಯಾವುಲ್ಲಾ, ಇಮ್ರಾನ್ಖಾನ್, ಕಾರ್ಯದರ್ಶಿ ಜಹೀರ್ಅಹ್ಮದ್, ಆರೀಪ್ಪಾಷಾ, ಖಜಾಂಚಿ ಇಂತಿಯಾಜ್ಪಾಷಾ, ಏಜಾಜ್, ಬಾಬು ಮುಂತಾದವರು ಹಾಜರಿದ್ದರು.
ಶ್ರೀರಾಮಸೇನೆಯ ಕಾರ್ಯಕರ್ತರ ಬೈಕ್ ರ್ಯಾಲಿ
ಚಿಕ್ಕಬಳ್ಳಾಪುರದ ಚದಲಪುರದಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟಕ್ಕೆ ಶ್ರೀರಾಮ ಸೇನೆಯ ತಾಲ್ಲೂಕು ಘಟಕ ಬೆಂಬಲಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಜಿಲ್ಲಾದ್ಯಂತ ಶ್ರೀರಾಮಸೇನೆಯ ಕಾರ್ಯಕರ್ತರು ಶಾಶ್ವತ ನೀರಾವರಿ ಹೋರಾಟಕ್ಕೆ ವಿವಿಧ ಭಾಗಗಳಿಂದ ಚದಲಪುರಕ್ಕೆ ತೆರಳಿದ ಸಂದರ್ಭದಲ್ಲಿ ಚಿಂತಾಮಣಿಯಿಂದ ಬಂದ ಕಾರ್ಯಕರ್ತರು ಶಿಡ್ಲಘಟ್ಟದ ಕಾರ್ಯಕರ್ತರೊಂದಿಗೆ ಸೇರಿ ಮೆರವಣಿಗೆ ಮಾಡಿ ನಂತರ ಜೊತೆಯಾಗಿ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.
ಶಾಶ್ವತ ನೀರಾವರಿ ಕಾಮಗಾರಿ ತ್ವರಿತವಾಗಿ ನಡೆಯಬೇಕು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೆರವಾಗಬೇಕು, ವಿದ್ಯುತ್ ಸಮಸ್ಯೆಯನ್ನು ನಿವಾರಿಸಬೇಕು. ಮಹಿಳೆಯರಿಗೆ ರಕ್ಷಣೆ ಸಿಗಬೇಕು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಅನಿರ್ಧಿಷ್ಟಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲಿಸಲು ತೆರಳಿದರು.
ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್, ಖಜಾಂಚಿ ಆರ್.ವಿ.ರಾಜಣ್ಣ, ತಾಲ್ಲೂಕು ಅಧ್ಯಕ್ಷ ನಾಗೇಶ್, ಉಪಾಧ್ಯಕ್ಷ ಸುಧಾಕರ್, ಕಾರ್ಯದರ್ಶಿ ಮುನಿರಾಜು, ನಾರಾಯಣಸ್ವಾಮಿ, ನರಸಿಂಹಮೂರ್ತಿ, ಸುಮನ್, ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾಂಗ್ರೆಸ್ನಲ್ಲಿ ಪಕ್ಷದ್ರೋಹ
ರಾಜ್ಯ ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗೆ, ಪಿ.ಎಲ್.ಡಿ ಬ್ಯಾಂಕ್ನಿಂದ ಪ್ರತಿನಿಧಿ ಆಯ್ಕೆ ಪ್ರಕ್ರಿಯೆಯಲ್ಲಿ ನಿರ್ದೇಶಕ ರಾಯಪಲ್ಲಿ ಅಶ್ವತ್ಥನಾರಾಯಣರೆಡ್ಡಿ ಜೆಡಿಎಸ್ ಬೆಂಬಲಿತರೊಂದಿಗೆ ಸೇರಿ ಪಕ್ಷದ್ರೋಹವೆಸಗಿದ್ದಾರೆ ಎಂದು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಎಂ.ಗೋಪಾಲ್ ಆರೋಪಿಸಿದರು.
ನಗರದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಪೈಕಿ 9 ಕಾಂಗ್ರೆಸ್ ಬೆಂಬಲಿತರಿದ್ದರೆ, 4 ಜೆಡಿಎಸ್ ಬೆಂಬಲಿತರಿದ್ದಾರೆ. ಅಕ್ಟೋಬರ್ 15 ರಂದು ರಾಜ್ಯ ಗ್ರಾಮೀಣಾಭಿವೃದ್ಧಿ ಬ್ಯಾಂಕ್ಗೆ ಪಿ.ಎಲ್.ಡಿ ಬ್ಯಾಂಕ್ನಿಂದ ಪ್ರತಿನಿಧಿ ಆಯ್ಕೆ ನಡೆಯಿತು. ತಾಲ್ಲೂಕಿನ ಕಾಂಗ್ರೆಸ್ ವರಿಷ್ಠರಾದ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಅವರು ಸೂಚಿಸಿದಂತೆ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರೇ ಪ್ರತಿನಿಧಿಯಾಗಬೇಕಿತ್ತು. ಆದರೆ ಕಾಂಗ್ರೆಸ್ ಪಕ್ಷದಿಂದ ಬಂದ ಸೂಚನೆಯನ್ನು ಧಿಕ್ಕರಿಸಿ ಜೆಡಿಎಸ್ ಪಕ್ಷದವರ ಬೆಂಬಲ ಪಡೆದು ನಿರ್ದೇಶಕ ರಾಯಪಲ್ಲಿ ಅಶ್ವತ್ಥನಾರಾಯಣರೆಡ್ಡಿ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ರಮಾದೇವಿ, ಭಾಗ್ಯಮ್ಮ ಕೂಡ ಇವರಿಗೆ ಬೆಂಬಲಿಸಿ ಪಕ್ಷ ದ್ರೋಹವೆಸಗಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮತ್ತು ಸಂಸದ ಕೆ.ಎಚ್. ಮುನಿಯಪ್ಪ, ಪಕ್ಷ ವಿರೋಧಿ ಚಟುವಟಿಕೆಯನ್ನು ಖಂಡಿಸದೆ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಈ ಬೆಳವಣಿಗೆಗೆ ಸಮ್ಮತಿಯನ್ನು ಸೂಚಿಸಿರುವಂತಿದೆ. ಈ ಹಿಂದೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಚುನಾವಣೆಯ ಸಮಯದಲ್ಲಿ ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಹಾಗೂ ಗೌರಿಬಿದನೂರು ಶಾಸಕ ಶಿವಶಂಕರರೆಡ್ಡಿ ಅವರ ಬಗ್ಗೆ ಅನವಶ್ಯಕವಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದಾರೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ ಮತ್ತು ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಆರೋಪಿಸಿದ್ದರು. ಆದರೆ ಈಗ ಪಕ್ಷದ ವಿರುದ್ಧ ಚಟುವಟಿಕೆ ಕಣ್ಣ ಮುಂದೆ ಇದ್ದರೂ ಏಕೆ ಕ್ರಮ ಕೈಗೊಂಡಿಲ್ಲ ಎಂಬುದಕ್ಕೆ ಉತ್ತರಿಸಲಿ. ನಾವು ಈ ಎಲ್ಲಾ ಪಕ್ಷ ವಿರೋಧಿಗಳ ಕುರಿತಂತೆ ರಾಜ್ಯ ಮಟ್ಟದ ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು.
ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಆರ್.ಶ್ರೀನಿವಾಸ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕರಾದ ಶಂಕರ್, ಕೆ.ಎಂ.ಭೀಮೇಶ್, ಸಿದ್ದಪ್ಪ, ಸಾದಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋವಿಂದರಾಜ್, ನಗರ ಯೋಜನ ಪ್ರಾಧಿಕಾರ ಅಧ್ಯಕ್ಷ ಬಿ.ಪಿ.ರಾಘವೇಂದ್ರ, ಗೊರಮಡುಗು ಕೃಷ್ಣಪ್ಪ, ಶ್ರೀನಾಥ್, ಸಂತೋಷ್, ಮಂಜುನಾಥ್, ಮಯೂರ್ ಹಾಜರಿದ್ದರು.
ಪಠ್ಯದಲ್ಲಿ ತಾಲ್ಲೂಕಿನ ಪರಂಪರಾಗತ ಮರದ ಬಗ್ಗೆ ತಪ್ಪು ಮಾಹಿತಿ
ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ವೆಂಕಟಾಪುರದ ಕೆರೆಯ ಏರಿಯ ಮೇಲೆ ಅತ್ಯಂತ ಹಳೆಯ ಬೇವಿನ ಮರಗಳಿವೆ. ಈ ಮರಗಳಲ್ಲಿ ಒಂದು ಇನ್ನೂರು ವರ್ಷಕ್ಕೂ ಹಳೆಯದು. ಕರ್ನಾಟಕ ಜೀವ ವೈವಿಧ್ಯ ಮಂಡಳಿ ಗುರುತಿಸಿರುವ ರಾಜ್ಯದ ಹತ್ತು ಪರಂಪರಾಗತ ಮರಗಳಲ್ಲಿ (ಹೆರಿಟೇಜ್ ಟ್ರೀಸ್) ಈ ಮರವೂ ಒಂದು.
ಸುಮಾರು ಇಪ್ಪತ್ತು ಅಡಿ ಸುತ್ತಳತೆಯ ಈ ಮರ ಎಸ್.ವೆಂಕಟಾಪುರ, ಪೂಸಗಾನದೊಡ್ಡಿ, ನೇರಳೇ ಮರದಹಳ್ಳಿ ಮತ್ತು ಎಸ್.ಗೊಲ್ಲಹಳ್ಳಿ ಎಂಬ ನಾಲ್ಕು ಗ್ರಾಮಗಳಿಗೆ ಸೇರಿದೆ. ಕೆರೆ ಏರಿ (ಕಟ್ಟೆ) ಮತ್ತು ಬೆಟ್ಟಗಳ ನಡುವೆ ಈ ಮರವಿದೆ.
ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಈ ಪಾರಂಪರಿಕ ವೃಕ್ಷದ ಬಗ್ಗೆ ಮಾಹಿತಿಯನ್ನು ತಪ್ಪಾಗಿ ನೀಡಲಾಗಿದೆ. ಎಸ್.ವೆಂಕಟಾಪುರ ಎಂದು ಇರಬೇಕಾದೆಡೆ ಟಿ.ವೆಂಕಟಾಪುರ ಎಂದು ಮುದ್ರಿತವಾಗಿದೆ. ಪಠ್ಯಪುಸ್ತಕದ 3ನೇ ಅಧ್ಯಾಯ ‘ಕರ್ನಾಟಕದ ವಾಯುಗುಣ, ಮಣ್ಣುಗಳು, ಸ್ವಾಭಾವಿಕ ಸಸ್ಯವರ್ಗ ಹಾಗೂ ಪ್ರಾಣಿ ಸಂಪತ್ತು’ ಎಂಬ ಪಾಠವಿದೆ. ಅದರಲ್ಲಿ ಈ ತಪ್ಪು ಉಂಟಾಗಿದೆ.
‘ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೂರು ವೆಂಕಟಾಪುರ ಗ್ರಾಮಗಳಿವೆ. ಎಸ್.ವೆಂಕಟಾಪುರ(ಸಾದಲಿ), ಟಿ.ವೆಂಕಟಾಪುರ(ತಲಕಾಯಲಬೆಟ್ಟ) ಮತ್ತು ಜೆ.ವೆಂಕಟಾಪುರ(ಜಂಗಮಕೋಟೆ). ಸಾದಲಿ ಪಂಚಾಯತಿಗೆ ಸೇರಿರುವ ನಮ್ಮ ಗ್ರಾಮ ಎಸ್.ವೆಂಕಟಾಪುರದ ಬಳಿ ಪರಂಪರಾಗತ ಮರಗಳಲ್ಲಿ (ಹೆರಿಟೇಜ್ ಟ್ರೀಸ್) ಒಂದಾದ ಪುರಾತನ ಬೇವಿನ ಮರವಿದೆ. ಅದು ನಮಗೆ ಹೆಮ್ಮೆ. ಒಂಬತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನಮ್ಮ ಗ್ರಾಮದ ಬಗ್ಗೆ ತಪ್ಪಾಗಿ ಮಾಹಿತಿ ಮುದ್ರಿತವಾಗಿದೆ. ನಮ್ಮ ತಾಲ್ಲೂಕಿನ ಶಿಕ್ಷಕರಿಗಾದರೆ ಎಸ್.ವೆಂಕಟಾಪುರ ಹಾಗೂ ಟಿ.ವೆಂಕಟಾಪುರದ ನಡುವೆ ವ್ಯತ್ಯಾಸ ತಿಳಿದಿದೆ. ಸರಿಪಡಿಸಿ ಮಕ್ಕಳಿಗೆ ಪಾಠ ಹೇಳುತ್ತಾರೆ. ಆದರೆ ರಾಜ್ಯಾದ್ಯಂತ ತಪ್ಪು ಮಾಹಿತಿ ರವಾನೆಯಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ತಪ್ಪನ್ನು ಸರಿಪಡಿಸಬೇಕು. ಜನಪ್ರತಿನಿಧಿಗಳೂ ಸಹ ನಮ್ಮ ತಾಲ್ಲೂಕಿನ ಹೆಮ್ಮೆಯ ಸಂಗತಿಯ ಬಗ್ಗೆ ಸರಿಯಾದ ಮಾಹಿತಿ ರವಾನೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ಎಸ್.ವೆಂಕಟಾಪುರ ಗ್ರಾಮದ ಮುನಿಕೃಷ್ಣಪ್ಪ ತಿಳಿಸಿದರು.
ತಾಲ್ಲೂಕಿನಲ್ಲಿ ಬೆಳೆಗಳ ಹಸುರೋತ್ಸವ
ತಾಲ್ಲೂಕಿನಲ್ಲಿ ಪೈರು ಒಣಗಿದ, ಕೆರೆ ಬಿರುಕು ಬಿಟ್ಟ ಚಿತ್ರಣವು ಈಗ ಬದಲಾಗಿದೆ. ನೀರು ತುಂಬಿರುವ ಕೆರೆಗಳು, ಹಚ್ಚ ಹಸಿರ ಪೈರುಗಳು ಕಂಡುಬರುತ್ತವೆ. ಕಳೆದ ಕೆಲ ದಿನಗಳ ಹಿಂದ ಬಿದ್ದ ಮಳೆಯು ರೈತರಲ್ಲಿ ಉಲ್ಲಾಸ ಹಾಗೂ ಉತ್ಸಾಹವನ್ನು ಮೂಡಿಸಿದೆ.
ಈ ಬಾರಿ ತಾಲ್ಲೂಕಿನಲ್ಲಿ 16,763 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, ನೆಲಗಡಲೆ, ಹುರಳಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಇದೀಗ ರಾಗಿ ಕಾಳುಗಳು ತೆನೆ ತುಂಬಿ ನಿಂತಿವೆ. ತಾಲ್ಲೂಕಿನಲ್ಲಿ ಇದುವರೆಗೂ 568.3 ಮಿ.ಮೀ ಮಳೆಯಾಗಿದ್ದು, ಉತ್ತಿ ಬಿತ್ತಿದ ಹೊಲಗಳೆಲ್ಲಾ ಹಸಿರಿನಿಂದ ಕಂಗೊಳಿಸುತ್ತಿವೆ.
ಬೆಳೆ ಕೈಗೆ ಬಂದ ಖುಷಿಯೊಂದಿಗೆ ಜಾನುವಾರುಗಳ ಮೇವಿಗೂ ಕೊರತೆಯಿಲ್ಲದಿರುವುದರಿಂದ ರೈತರು ಸಂತುಷ್ಟರಾಗಿದ್ದಾರೆ. ಇದುವರೆಗೂ ಬಿದ್ದ ಮಳೆಗೆ ಭೂಮಿಯಲ್ಲಿ ತಣುವಿದ್ದು, ಬೆಳೆ ಕೈಗೆ ಬರುವ ಎಲ್ಲಾ ಲಕ್ಷಣಗಳಿವೆ. ನಂತರ ಬೀಳುವ ಕಡೆಯ ಮಳೆಗಳು ಕೂಡ ರೈತರಿಗೆ ವರದಾನವಾಗಲಿದೆ. ಮಳೆ ಉತ್ತಮವಾಗಿ ಬಂದಿದ್ದರಿಂದ ಬೆಳೆಗಳು ನಳನಳಿಸುತ್ತಿವೆ. ರಾಗಿಯ ಬೆಳೆಯಂತೂ ನೋಡಲು ಆನಂದವಾಗಿದೆ.
ರೈತರು ರಾಗಿ ಹೊಲಗಳಲ್ಲಿ ಕಳೆ ಕೀಳುವ ಕಾರ್ಯದಲ್ಲಿ ನಿರತರಾಗಿದ್ದು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ.
‘ತಾಲ್ಲೂಕಿನಲ್ಲಿ 11,289 ಹೆಕ್ಟೇರ್ ಪ್ರದೇಶದಲ್ಲಿ ರಾಗಿ, 2,285 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ, 793 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ, ಸಾಸಿವೆ, ಹುಚ್ಚೆಳ್ಳು ಮುಂತಾದ ಎಣ್ಣೆ ಕಾಳುಗಳನ್ನು, 2,210 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ, ಅಲಸಂದೆ, ಅವರೆ ಮುಂತಾದ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಿದ್ದು ಬಹುತೇಕ ಎಲ್ಲೆಡೆ ಬೆಳೆಗಳು ಚೆನ್ನಾಗಿ ಆಗಿವೆ. ಕೆಲ ಸೂಕ್ತ ಕ್ರಮಗಳನ್ನು ತಜ್ಞರಿಂದ ಪಡೆದು ರೈತರು ಅಳವಡಿಸಿಕೊಂಡಲ್ಲಿ ಬೆಳೆಗೆ ಹಾನಿಯಾಗದು’ ಎಂದು ಕೃಷಿ ಸಹಾಯಕ ನಿರ್ದೇಶಕ ಬಿ.ಸಿ.ದೇವೇಗೌಡ ತಿಳಿಸಿದ್ದಾರೆ.
ಗ್ರಾಮಸ್ಥರ ಶ್ರಮಕ್ಕೆ ಸರ್ಕಾರದ ನೆರವು ಯಾಚನೆ
ಗ್ರಾಮದ ಜೀವನಾಡಿ ಕೆರೆಯನ್ನು ಉಳಿಸುವ ಸಲುವಾಗಿ ಸ್ವಂತ ಹಣದಲ್ಲಿ ಗ್ರಾಮಸ್ಥರು ರಾಜಕಾಲುವೆಯನ್ನು ದುರಸ್ಥಿಗೊಳಿಸಲು ಅನುವಾಗಿರುವುದು ರಾಜ್ಯಕ್ಕೇ ಮಾದರಿಯಾಗಿದೆ. ರಾಜಕಾಲುವೆಯನ್ನು ಶಾಶ್ವತವಾಗಿ ಕಲ್ಲುಕಟ್ಟಡದಲ್ಲಿ ನಿರ್ಮಿಸಲು ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಬೆಳ್ಳೂಟಿ ಗ್ರಾಮದಲ್ಲಿ ಶನಿವಾರ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಗ್ರಾಮಸ್ಥರು ನಿರ್ಮಿಸಲು ಪ್ರಾರಂಭಿಸಿರುವ ರಾಜಕಾಲುವೆಯನ್ನು ಪರಿವೀಕ್ಷಿಸಿ ಅವರು ಮಾತನಾಡಿದರು.
ಎಲ್ಲೆಡೆ ಸರ್ಕಾರ ಅಥವಾ ಆಳುವ ಜನಪ್ರತಿನಿಧಿಗಳು ಈ ಕೆಲಸ ಮಾಡಬೇಕೆಂದು ಜನರು ಆಶಿಸುತ್ತಾರೆ. ಆದರೆ ಈ ಗ್ರಾಮದಲ್ಲಿ ಯಾರ ನೆರವನ್ನೂ ಆಶಿಸದೆ ತಮ್ಮ ಖರ್ಚಿನಲ್ಲೇ ಸುಮಾರು 30 ಲಕ್ಷ ರೂಗಳಷ್ಟು ಖರ್ಚು ಮಾಡಿ ರಾಜಕಾಲುವೆ ತೆರವು ಹಾಗೂ ದುರಸ್ತಿ ಕಾರ್ಯ ನಡೆಸಿರುವುದು ಅನುಕರಣೀಯ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ‘ಉತ್ತಮ ಭವಿಷ್ಯಕ್ಕಾಗಿ, ನಮ್ಮೂರ ಉಳಿವಿಗಾಗಿ, ರೈತರ ಅಭಿವೃದ್ಧಿಗಾಗಿ ಗ್ರಾಮಕ್ಕೆ ನಾಲೆ ಮಾಡಿಸಿ’ ಎಂಬ ಬರಹಗಳುಳ್ಳ ಭಿತ್ತಿ ಚಿತ್ರಗಳನ್ನು ಜಿಲ್ಲಾಧಿಕಾರಿಗಳಿಗೆ ಪ್ರದರ್ಶಿಸಿ ಗಮನ ಸೆಳೆದರು.
ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿ ಗ್ರಾಮದ ಕೆರೆಗೆ ನೀರು ಹರಿಯುವ ಕಾಲುವೆಯ ಕಲ್ಲು ಕಟ್ಟಡ ನಿರ್ಮಾಣಕ್ಕೆ 1.6 ಕೋಟಿ ರೂಗಳು ಅಂದಾಜು ವೆಚ್ಚವಾಗಲಿದೆ. ಅನುದಾನವನ್ನು ಬಿಡುಗಡೆ ಮಾಡಿ ಕಾಲುವೆ ನಿರ್ಮಾಣ ಶೀಘ್ರವಾಗಿ ನಡೆಯಲು ಸಹಕರಿಸಬೇಕೆಂದು ಕೋರಿದರು.
ಬೆಳ್ಳೂಟಿ ಕೆರೆಯು 360 ಎಕರೆಯಷ್ಟಿದ್ದು, ಕೆರೆ ತುಂಬಿದಲ್ಲಿ ಸುತ್ತಮುತ್ತಲಿನ 3000 ಎಕರೆ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಗ್ರಾಮಸ್ಥರು ಒಗ್ಗೂಡಿ ರಾಜಕಾಲುವೆಯಲ್ಲಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿದೆವು. ನಂತರ ಬಿದ್ದ ಮಳೆಗೆ ಕಾಲುವೆ ತೆರವುಗೊಳಿಸಿದ ಕಾರಣ ನೀರು ಹರಿದು ಬಂದು ಶೇಕಡಾ 30 ರಷ್ಟು ಕೆರೆ ತುಂಬಿದೆ. ಕಾಲುವೆಯ ನಿರ್ಮಾಣಕ್ಕೆ ಹಲವು ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿನ ಸ್ಥಳವನ್ನು ಸಹ ಕಾಲುವೆ ನಿರ್ಮಾಣಕ್ಕೆ ಬಿಟ್ಟುಕೊಟ್ಟರು. ಈಗಾಗಲೇ ಸುಮಾರು 250 ಮೀಟರಿನಷ್ಟು ಕಲ್ಲುಕಟ್ಟಡದ ರಾಜಕಾಲುವೆಯ ಕಾಮಗಾರಿಯನ್ನು ಸ್ವಂತ ಹಣ ಖರ್ಚು ಮಾಡಿ ಗ್ರಾಮಸ್ಥರು ಮಾಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನದಿಂದ ಇನ್ನುಳಿದ ರಾಜಕಾಲುವೆಯ ನಿರ್ಮಾಣ ಮಾಡಿ ಕೆರೆಯನ್ನು ಸಂರಕ್ಷಿಸಬೇಕೆಂದು ಬೇಡಿಕೆಯನ್ನಿಟ್ಟರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಎಸ್.ವೆಂಕಟೇಶ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಸದಸ್ಯ ಆರ್.ಶ್ರೀನಿವಾಸ್, ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ, ಶಿರಸ್ತೆದಾರ್ ರಂಗನಾಥ್, ರಾಜಸ್ವ ನಿರೀಕ್ಷಕ ಸುಬ್ರಮಣಿ, ಸಂತೋಷ್, ರಮೇಶ್, ವಿಜಯ್ಕುಮಾರ್, ಬಿ.ಎನ್.ಸತೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದಸರಾ ಗೊಂಬೆಗಳಿಂದ ಪೌರಾಣಿಕ ಕಥನ
ದಸರ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ. ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ 10 ದಿನ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯ ಅನುಸರಿಸಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಗೊಂಬೆಹಬ್ಬವನ್ನು ನಾಡಿನ ಗೃಹಿಣಿಯರು ಮನೆಮನೆಗಳಲ್ಲಿ ಆಚರಿಸುತ್ತಾರೆ.
ನಗರದ ಕುಚ್ಚಣ್ಣನವರ ಕೆ.ವಿ.ಮುರಳೀಧರ್ ಅವರ ಮನೆಯಲ್ಲಿ ಗೊಂಬೆಹಬ್ಬ ವಿಶೇಷವಾಗಿ ಆಚರಿಸಲಾಗುತ್ತಿದೆ. ಸ್ವತಃ ಗೊಂಬೆಗಳನ್ನು ತಯಾರಿಸಿ ಪ್ರತೀ ವರ್ಷ ಒಂದೊಂದು ಪೌರಾಣಿಕ ವಿಷಯವನ್ನಿಟ್ಟುಕೊಂಡು ಗೊಂಬೆಗಳನ್ನು ಜೋಡಿಸಿಡುವುದು ಅವರ ವಿಶೇಷವಾಗಿದೆ.
ಒಂದೆಡೆ ಭೂಕೈಲಾಸ, ಮತ್ತೊಂದೆಡೆ ಪಟ್ಟದ ಗೊಂಬೆಗಳ ಸಾಲು, ಅವುಗಳ ಸಂಗಡ ಗ್ರಾಮ ಬದುಕಿನ ಚಿತ್ರಣ, ದಶಾವತಾರ, ಶೆಟ್ಟಿ ಅಂಗಡಿ, ವಿವಾಹದ ವಿವಿಧ ಶಾಸ್ತ್ರಗಳು, ಸ್ವಾತಂತ್ರ್ಯ ಹೋರಾಟಗಾರರು ಗೊಂಬೆಗಳ ಮೂಲಕ ವಿವಿಧ ಕಥಾ ಚಿತ್ರಣಗಳನ್ನು ಕಟ್ಟಿಕೊಡುತ್ತಿದೆ.
ಶಿವನಿಂದ ಆತ್ಮಲಿಂಗವನ್ನು ಪಡೆದ ರಾವಣನಿಂದ ಬಾಲಕ ರೂಪಿ ಗಣಪತಿ ಪಡೆದು ನೆಲದ ಮೇಲಿಟ್ಟ ಗೋಕರ್ಣದ ಭೂಕೈಲಾಸ ಕಥೆಯಿದೆ. ಬೋನ್ಸಾಯ್ ಮರಗಳನ್ನು ಅರಳಿಕಟ್ಟೆಯನ್ನಾಗಿಸಿ, ಗುಡಿಸಲು, ಕಲಾಯಿ ಹಾಕುವವರು, ಶಾಸ್ತ್ರ ಹೇಳುವವರು, ಕುರಿ ಮೇಯಿಸುವವರು, ಉಳುವಾ ರೈತ, ಕುಂಟೆ ಸೇರಿಸಿ ಗ್ರಾಮ ಜೀವನದ ಚಿತ್ರಣವಿದೆ. ಚಾಮುಂಡೇಶ್ವರಿಯನ್ನು ಹೊತ್ತ ಆನೆಯೊಂದಿಗೆ ದಸರಾ ಮೆರವಣಿಗೆಯಿದೆ. ವಿವಾಹ ಮಹೋತ್ಸವಕ್ಕೆ ಸಾಕ್ಷಿಯಾಗುವ ವಿವಿಧ ಶಾಸ್ತ್ರಗಳ ಗೊಂಬೆಗಳ ಚಿತ್ರಣವಿದೆ.
ಈ ಗೊಂಬೆಗಳನ್ನು ಹಾಗೂ ಇದರೊಂದಿಗೆ ಹಲವು ಬಗೆಯ ಗೊಂಬೆಗಳನ್ನು ಹಂತ ಹಂತವಾಗಿ ಅಲಂಕರಿಸಲಾದ ಜಗತಿಗಳ ಮೇಲೆ ಕೂರಿಸಿ ಅಲಂಕರಿಸಿದ್ದಾರೆ.
‘ಪ್ರತೀ ವರ್ಷ ನಾವು ಮನೆಯಲ್ಲಿ ಎಂದಿನಂತೆ ಗೊಂಬೆಗಳನ್ನು ಜೋಡಿಸುವುದರೊಂದಿಗೆ ಒಂದೊಂದು ಪೌರಾಣಿಕ ವಿಷಯಕ್ಕೆ ಸಂಬಂಧಿಸಿದಂತೆ ಗೊಂಬೆಗಳನ್ನು ನಾವೇ ಮನೆಯಲ್ಲಿ ತಯಾರಿಸಿ ಜೋಡಿಸಿಡುತ್ತೇವೆ. ಪದ್ಮಾವತಿ ಕಲ್ಯಾಣ, ಉತ್ತರ ರಾಮಾಯಣ ಮುಂತಾದ ವಿಷಯಗಳನ್ನು ಹಿಂದೆ ಆರಿಸಿಕೊಂಡಿದ್ದೆವು. ಈ ಬಾರಿ ‘ಭೂಕೈಲಾಸ’ ಎಂಬ ವಿಷಯವನ್ನು ಆರಿಸಿಕೊಂಡಿದ್ದೇವೆ. ಮನೆಗೆ ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆಲ್ಲಾ ಈ ಕಥೆಗಳನ್ನು ಹೇಳುತ್ತಾ ಅವರಲ್ಲಿ ಪೌರಾಣಿಕ ಕಥೆಗಳ ಚಿತ್ರಣವನ್ನು ಕಟ್ಟಿಕೊಡುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಹಿರಿಯರೂ ಅಚ್ಚರಿಯಿಂದ ಕಥೆಯನ್ನು ಆಲಿಸಿ ಮನಸ್ಸಿನ ಮೂಲೆಯಲ್ಲಿ ಮರೆತಿದ್ದ ಕಥೆಯನ್ನು ಮೆಲುಕು ಹಾಕುತ್ತಾರೆ. ನಮಗಂತೂ ಕಥೆಗೆ ತಕ್ಕಂತೆ ಗೊಂಬೆಗಳನ್ನು ತಯಾರಿಸುವುದಕ್ಕೆ ಬಲು ಉತ್ಸಾಹ’ ಎಂದು ಗೃಹಿಣಿಯರಾದ ರಾಜೇಶ್ವರಿ ಮತ್ತು ರಾಜಲಕ್ಷ್ಮಿ ತಿಳಿಸಿದರು.

