ಕೆಲವು ವರ್ಷಗಳ ಹಿಂದೆ ಎಲ್ಲೆಡೆ ಬಿ.ಟಿ. ಬದನೆ ಅರ್ಥಾತ್ ಕುಲಾಂತರಿ ಬದನೆಯದ್ದೇ ಚರ್ಚೆ ನಡೆಯುತ್ತಿತ್ತು. ಸದ್ಯಕ್ಕೆ ಬಿ.ಟಿ ಬದನೆ ದೇಶಕ್ಕೆ ಬೇಡ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ಈ ಬದನೆ ಗಿಡಗಳು ಮೂರು ನಾಲ್ಕು ವರ್ಷಗಳವರೆಗೂ ಕುಬ್ಜಮರಗಳಾಗಿ ಬೆಳೆಯುತ್ತವೆ ಮತ್ತು ಅಡುಗೆಕೋಣೆಯಲ್ಲಿ ಬದನೆ ಮೇಳಕ್ಕೆ ಕಾರಣವಾಗುತ್ತವೆ. ಆದರೆ ನಗರದ ಇದ್ಲೂಡು ರಸ್ತೆಯಲ್ಲಿರುವ ಎಸ್.ಶಂಕರ್ ಅವರ ಮನೆಯಲ್ಲಿ ಹತ್ತು ಅಡಿಗೂ ಹೆಚ್ಚು ಎತ್ತರಕ್ಕೆ ಬೆಳೆದಿರುವ ಬದನೆ ಗಿಡ ಆಕರ್ಷಣೆಗೆ ಹಾಗೂ ಅಚ್ಚರಿಗೆ ಕಾರಣವಾಗಿದೆ.
ಎರಡು ವರ್ಷಗಳ ಹಿಂದೆ ಮನೆ ಬಳಕೆಗೆಂದು ನಾಟಿ ಮಾಡಿದ ಬದನೆ ಗಿಡ ಕಾಯಿಗಳನ್ನು ಬಿಡುತ್ತಲೇ ನೋಡನೋಡುತ್ತಿದ್ದಂತೆಯೇ ಎತ್ತರೆತ್ತರಕ್ಕೆ ಬೆಳೆದಿದೆ. ಈಗ ಸುಮಾರು ಹತ್ತು ಅಡಿಯಷ್ಟು ಬೆಳೆದಿರುವ ಬದನೆ ಗಿಡ ಇನ್ನೂ ಬೆಳೆಯುತ್ತಲೇ ಸಾಗಿದೆ.
‘ಬದನೆಗೆ ಹೆಚ್ಚಿನ ಪೋಷಣೆಯ ಅಗತ್ಯವಿಲ್ಲ. ಬೀಜಗಳಿಂದ ಸಸ್ಯಾಭಿವೃದ್ಧಿ ಮಾಡಬಹುದು. ಬೆಳೆಸಬಹುದು. ಕುಂಡಗಳಲ್ಲೂ ಬೆಳೆಸಬಹುದು. ಗಿಡ ವರ್ಷದಲ್ಲಿ ನಾಲ್ಕರಿಂದ ಐದು ಸಲ ಕಾಯಿ ಬಿಡುತ್ತವೆ. ಹಾಗಾಗಿ ಮನೆಯ ಬಳಿ ನಾಟಿ ಮಾಡಿದೆವು. ನಾಟಿ ತಳಿಯಾದ್ದರಿಂದ ಸಾಕಷ್ಟು ಬದನೆಕಾಯಿಗಳು ಬಿಡುತ್ತಿವೆ. ನಮಗೆ ಹೆಚ್ಚಾಗಿದ್ದು ಪರಿಚಿತರು, ಅಕ್ಕಪಕ್ಕದ ಮನೆಯವರಿಗೆ ಕೊಡುತ್ತೇವೆ. ಅದರ ಬೆಳವಣಿಗೆ ಮಾತ್ರ ನಮಗೂ ಸೇರಿದಂತೆ ಹಲವರು ಅಚ್ಚರಿ ಪಡುವ ರೀತಿಯಲ್ಲಿದೆ. ಸಾಮಾನ್ಯವಾಗಿ ನಾವು ಮೈ ಬಗ್ಗಿಸಿ ಕಾಯಿ ಕೀಳುವ ಗಿಡವು ಈಗ ತಲೆ ಎತ್ತಿ ಕಾಯಿ ಕೀಳುವಂತೆ ಬೆಳೆದಿದೆ’ ಎಂದು ಎಸ್.ಶಂಕರ್ ತಿಳಿಸಿದರು.
’ಮಾಗಿದ ಎರಡು ಬದನೆ ಹಣ್ಣು ಕೊಯ್ದು ಬೀಜ ಬೇರ್ಪಡಿಸಿ, ತೊಳೆದು ಬಿಸಿಲಲ್ಲಿ ಒಣಗಿಸಿ ನಂತರ ಹತ್ತಿಬಟ್ಟೆಯಲ್ಲಿ ಕಟ್ಟಿ ಅದನ್ನು ಯಾವುದೋ ಡಬ್ಬದಲ್ಲಿಟ್ಟು ಭದ್ರವಾಗಿ ಕಾಪಿಡುತ್ತೇವೆ. ಸ್ವಲ್ಪ ಸೆಗಣಿಯೊಂದಿಗೆ ಒಂದು ಹಿಡಿ ಬೀಜಗಳನ್ನು ಸೇರಿಸಿ ಮಿಶ್ರಮಾಡಿ ಹತ್ತಿಬಟ್ಟೆಯಲ್ಲಿ ಕಟ್ಟಿ, ಅದಕ್ಕೆ ನೀರು ಸಿಂಪಡಣೆ ಮಾಡಿ ತೂಗು ಹಾಕುತ್ತೇವೆ. ಹೀಗೆ ಎರಡು ವಾರ ಮಾಡಿ, ಆ ಬಳಿಕ ಈ ಗಂಟು ಬಿಚ್ಚಿನೋಡಿದರೆ ಬೀಜಗಳಲ್ಲಿ ಪುಟಾಣಿ ಸಸ್ಯಗಳು ಜೀವತಾಳಿರುತ್ತವೆ. ಆ ಬಳಿಕ ಪಾತಿ ಮಾಡಿ ನಟ್ಟರಾಯಿತು. ಮತ್ತೆರಡು ತಿಂಗಳಲ್ಲಿ ಬದನೆ ಗಿಡದಲ್ಲಿ ಹೂ, ಮತ್ತೆ ಕೆಲ ದಿನದಲ್ಲಿ ಕಾಯಿ ಆಗಮನ. ಬದನೆ ಹೂಗಳನ್ನು ಮಾತನಾಡಿಸಲು ಬರುವ ಪಾತರಗಿತ್ತಿಗಳ ಲೋಕವೇ ಬೇರೆ’ ಎಂದು ವಿವರಿಸಿದರು.
ಹತ್ತು ಅಡಿ ಎತ್ತರದ ಬದನೆ ಗಿಡ
ಸ್ವಚ್ಛತೆಯಿಂದ ಆರೋಗ್ಯ – ಜಾಗತಿಕ ಕೈ ಸ್ವಚ್ಛತಾ ದಿನ ಕಾರ್ಯಕ್ರಮ
ಎಲ್ಲಿ ಸ್ವಚ್ಛತೆಯಿರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು ಎಂದು ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಕೆ.ನರೇಶ್ಕುಮಾರ್ ಹೇಳಿದರು.
ನಗರದ ಐಟಿಐ ಕಾಲೇಜಿನ ಆವರಣದಲ್ಲಿ ಗುರುವಾರ ನೆಹರೂ ಯುವ ಕೇಂದ್ರ ಹಾಗೂ ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾಗತಿಕ ಕೈ ಸ್ವಚ್ಚತಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಜೀವನಶೈಲಿಗೆ ಹೊಂದಿಕೊಂಡಿರುವ ನಾವುಗಳು ನಮ್ಮ ವೈಯಕ್ತಿಕ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದೇವೆ ಎಂದರು.
ಪ್ರತಿಯೊಬ್ಬರೂ ಊಟಕ್ಕೆ ಮುಂಚೆ ಹಾಗು ಶೌಚದ ನಂತರ ಕಡ್ಡಾಯವಾಗಿ ಸೋಪಿನಿಂದ ಕೈ ತೊಳೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಜನರಲ್ಲಿ ಅದರಲ್ಲಿಯೂ ವಿಶೇಷವಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗತಿಕ ಕೈ ಸ್ವಚ್ಚತಾ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಾಮಾನ್ಯವಾಗಿ ಮನೆಗಳಲ್ಲಿ, ತೋಟಗಳಲ್ಲಿ ದುಡಿದು ಬಂದಂತಹವರು ಊಟಕ್ಕೆ ಮುಂಚೆ ಬರೀ ನೀರಿನಲ್ಲಿ ಕೈ ತೊಳೆದು ಊಟ ಮಾಡುತ್ತರೆ. ಒಮ್ಮೊಮ್ಮೆ ಕೈ ತೊಳೆಯದೇ ಊಟ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕೈಯಲ್ಲಿರುವ ವೈರಾಣುಗಳು ಊಟದೊಂದಿಗೆ ಹೊಟ್ಟೆ ಸೇರಿ ವಿವಿಧ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಪ್ರತಿಯೊಬ್ಬರೂ ಕೈಗಳನ್ನು ಸೋಪಿನಿಂದ ತೊಳೆಯುವದನ್ನು ರೂಡಿಸಿಕೊಳ್ಳುವುದರೊಂದಿಗೆ ನೈರ್ಮಲ್ಯದಿಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲ ರವೀಂದ್ರನಾಥ್, ಕಾಲೇಜಿನ ಪ್ರಾಧ್ಯಾಪಕರಾದ ಶ್ರೀನಿವಾಸ್, ಗಿರೀಶ್, ಸುಜಾತ ಮತ್ತಿತರರು ಹಾಜರಿದ್ದರು.
ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ
ಜಿಲ್ಲೆಯ ಚದಲಪುರ ಕ್ರಾಸ್ನಲ್ಲಿ ನಡೆಯುತ್ತಿರುವ ಅನಿರ್ಧಿಷ್ಠಾವಧಿ ಶಾಶ್ವತ ನೀರಾವರಿ ಹೋರಾಟಕ್ಕೆ ತಾಲ್ಲೂಕಿನ ದೇವರಮಳ್ಳೂರು ಗ್ರಾಮ ಪಂಚಾಯತಿಯ ಗ್ರಾಮಸ್ಥರು ಬೆಂಬಲ ಸೂಚಿಸಿ ಮನವಿ ಪತ್ರ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕಾದ್ಯಕ್ಷ ತಾದೂರು ಮಂಜುನಾಥ್ ಮಾತನಾಡಿ, ಚಿಕ್ಕಬಳ್ಳಾಪುರ- ಕೋಲಾರ ಜಿಲ್ಲೆ ಬರಪೀಡಿತ ಪ್ರದೇಶಗಳಾಗಿದ್ದು ಸಾವಿರಾರು ಅಡಿ ಕೊರೆದರೂ ಸಹ ನೀರು ಸಿಗದೆ ವಿಷಯುಕ್ತ ಪ್ಲೋರೈಡ್ ನೀರು ಕುಡಿಯುತ್ತಿದ್ದೇವೆ. ರೋಗಗಳಿಗೆ ತುತ್ತಾಗುತ್ತಿದ್ದೇವೆ. ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಹೋರಾಟ ನಡೆಯುತ್ತಿದ್ದು ೨೪ ದಿನಗಳಿಂದ ನಿರಂತರವಾಗಿ ಹೋರಾಟ ನಡೆಯುತ್ತಿದ್ದು ವಿವಿಧ ಸಂಘಟನೆಗಳು ಬೆಂಬಲ ನೀಡುತ್ತಿದ್ದಾರೆ. ಪರಮಶಿವಯ್ಯನವರ ವರದಿ ಜಾರಿಯಾಗುವವರೆಗೂ ಸಹ ಯಾವುದೇ ಕಾರಣಕ್ಕೂ ಸಹ ಪ್ರತಿಭಟನೆಯನ್ನು ಹಿಂತೆಗೆಯುವುದಿಲ್ಲವೆಂದು ತಿಳಿಸಿದರು.
ತಾಲ್ಲೂಕಿನ ದೇವರ ಮಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವೀರಾಪುರ, ಬೂದಾಳ, ಸೊಣ್ಣೇನಹಳ್ಳಿ, ತಲದುಮ್ಮನಹಳ್ಳಿ, ಇದ್ಲೂಡು, ಕುತ್ತಾಂಡಹಳ್ಳಿ, ಬೊಮ್ಮನಹಳ್ಳಿ ಗ್ರಾಮಗಳಿಂದ ಶಾಶ್ವತ ನೀರಾವರಿ ಹೋರಾಟವನ್ನು ಬೆಂಬಲಿಸಿ ನಗರದ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಶಿರಸ್ತೆದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಜಿಲ್ಲೆಯ ಚದಲಪುರ ಕ್ರಾಸ್ ಬಳಿ ನಡೆಯುತ್ತಿರುವ ಹೋರಾಟಕ್ಕೆ ತೆರಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕಾದ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಅಂಜನೇಯರೆಡ್ಡಿ, ರೈತ ಮುಖಂಡರು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯ ಮೇಲೆ ಹಲ್ಲೆ
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮದಲ್ಲಿ ಮಹಿಳೆಯ ಮೇಲೆ ಬುಧವಾರ ಹಲ್ಲೆ ನಡೆದಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೆ.ವೆಂಕಟಾಪುರ ಗ್ರಾಮದಲ್ಲಿ ಸುಮಾರು 25 ವರ್ಷಗಳಿಂದ ವಾಸವಾಗಿರುವ ಗಿರಿಜಮ್ಮ(49) ಅವರ ಪಕ್ಕದ ಮನೆಯ ದಂಪತಿಗಳು ಹಲ್ಲೆ ನಡೆಸಿರುವುದಾಗಿ ದೂರು ನೀಡಿದ್ದಾರೆ. ಅಕ್ಕಪಕ್ಕದ ಮನೆಯವರ ಕಿರುಕುಳದಿಂದ ಸ್ವಂತ ಮನೆಯನ್ನು ಬಾಡಿಗೆಗೆ ನೀಡಿ ಅದೇ ಗ್ರಾಮದಲ್ಲಿ ಬೇರೆಡೆ ವಾಸಿಸುತ್ತಿದ್ದರು. ಬುಧವಾರ ಸಂಜೆ ಬಾಡಿಗೆ ವಸೂಲಿಗೆಂದು ಹೋದಾಗ ಅವರ ಮೇಲೆ ಹಲ್ಲೆ ನಡೆದಿರುವುದಾಗಿ ತಿಳಿಸಿದ್ದಾರೆ. ಗಿರಿಜಮ್ಮ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಗೆ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ಎನ್.ಪಿ. ಶೋಭಾರಾಣಿ ಭೇಟಿ ನೀಡಿದ್ದರು.
ಸ್ವಂತ ಖರ್ಚಿನಿಂದ ರಾಜಕಾಲುವೆ, ಶಾಶ್ವತ ಕಾಮಗಾರಿಗೆ ಸರ್ಕಾರದ ನೆರವು ಯಾಚನೆ
ಬೆಳ್ಳೂಟಿ ಗ್ರಾಮದ ಕೆರೆಗೆ ಸ್ವಂತ ಖರ್ಚಿನಿಂದ ರಾಜಕಾಲುವೆಯನ್ನು ತೆರವುಗೊಳಿಸಿದ ಗ್ರಾಮಸ್ಥರು, ಶಾಶ್ವತವಾದ ಕಲ್ಲುಕಟ್ಟಡದ ಕಾಮಗಾರಿಗಾಗಿ ಸರ್ಕಾರದ ನೆರವನ್ನು ಬಯಸುತ್ತಿರುವುದಾಗಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬೆಳ್ಳೂಟಿ ಸಂತೋಷ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಬೆಳ್ಳೂಟಿ ಕೆರೆಯು 360 ಎಕರೆಯಷ್ಟಿದ್ದು, ಕೆರೆ ತುಂಬಿದಲ್ಲಿ ಸುತ್ತಮುತ್ತಲಿನ 300 ಎಕರೆ ಜಮೀನುಗಳಲ್ಲಿ ಅಂತರ್ಜಲ ಹೆಚ್ಚಿ ಬೆಳೆ ಬೆಳೆಯಲು ಅನುಕೂಲವಾಗುತ್ತದೆ. ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಸ್.ವೆಂಕಟೇಶ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಒಗ್ಗೂಡಿ ರಾಜಕಾಲುವೆಯಲ್ಲಿದ್ದ ಮಣ್ಣನ್ನು ಜೆಸಿಬಿ ಮೂಲಕ ತೆರವುಗೊಳಿಸಿದೆವು. ನಂತರ ಬಿದ್ದ ಮಳೆಗೆ ಕಾಲುವೆ ತೆರವುಗೊಳಿಸಿದ ಕಾರಣ ನೀರು ಹರಿದು ಬಂದು ಶೇಕಡಾ 30 ರಷ್ಟು ಕೆರೆ ತುಂಬಿದೆ.
ಕಾಲುವೆಯ ನಿರ್ಮಾಣಕ್ಕೆ ಹಲವು ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿನ ಸ್ಥಳವನ್ನು ಸಹ ಕಾಲುವೆ ನಿರ್ಮಾಣಕ್ಕೆ ಬಿಟ್ಟುಕೊಟ್ಟರು. ಈಗಾಗಲೇ ಸುಮಾರು 250 ಮೀಟರಿನಷ್ಟು ಕಲ್ಲುಕಟ್ಟಡದ ರಾಜಕಾಲುವೆಯ ಕಾಮಗಾರಿಯನ್ನು ಸ್ವಂತ ಹಣ ಖರ್ಚು ಮಾಡಿ ಗ್ರಾಮಸ್ಥರು ಮಾಡಿದ್ದೇವೆ. ಸರ್ಕಾರದ ಮಟ್ಟದಲ್ಲಿ ಯಾವುದೇ ಅನುದಾನದಿಂದ ಇನ್ನುಳಿದ ರಾಜಕಾಲುವೆಯ ನಿರ್ಮಾಣ ಮಾಡಿ ಕೆರೆಯನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದರು.
ಸುಮಾರು 50 ವರ್ಷಗಳ ಮಳೆ ಪ್ರಮಾಣವನ್ನು ಅಧ್ಯಯನ ಮಾಡಿದ್ದೇವೆ. ಸಾಧಾರಣ ಏರುಪೇರಿನಿಂದ ಮಳೆಯಾಗುತ್ತಿದೆ. ಕೆರೆಗಳ ಒತ್ತುವರಿ ಹಾಗೂ ಜಲಮೂಲಗಳು ಮುಚ್ಚಿಹೋದ ಕಾರಣ ಕೆರೆಗಳಿಗೆ ನೀರು ಬಾರದೆ ಅಂತರ್ಜಲ ಕುಸಿದಿದೆ. ಬೆಳ್ಳೂಟಿ ಕೆರೆಗೆ ಸುಮಾರು ಒಂದೂವರೆ ಕಿ.ಮೀ ರಾಜಕಾಲುವೆಯ ಕಲ್ಲುಕಟ್ಟಡದ ಕಾಮಗಾರಿ ನಡೆಯಬೇಕಿದೆ. ಸರ್ಕಾರದ ಯಾವುದೇ ಅನುದಾನದಲ್ಲಿ ಶೀಘ್ರವಾಗಿ ನಡೆಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರು ಈಗಾಗಲೇ ಮನವಿಯನ್ನು ಮಾಡಿದ್ದೇವೆ. ಅಕ್ಟೋಬರ್ 17 ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಪೋಡಿ ಅದಾಲತ್ ಕಾರ್ಯಕ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಂದು ಖುದ್ದಾಗಿ ಪರಿಶೀಲಿಸಿ ಕೆರೆಯಲ್ಲಿ ನೀರು ತುಂಬಲು ಅನುಕೂಲಕರ ಶಾಶ್ವತ ಕೆಲಸಕ್ಕೆ ಮುಂದಾಗಬೇಕೆಂದು ಕೋರಿದರು.
ತಾಲ್ಲೂಕಿನಲ್ಲಿ ಕೆರೆಗಳು ಹಾರದಂತೆ ಸರಪಣಿಯಂತೆ ರೂಪಿಸಲಾಗಿದೆ. ಜಾತವಾರದ ಕೆರೆ ತುಂಬಿ, ಕೇಶವಾರದ ಕೆರೆಗೆ, ಕೇಶವಾರದ ಕೆರೆ ತುಂಬಿ ರಾಳ್ಳಕೆರೆಗೆ, ಅಲ್ಲಿಂದ ಬೆಳ್ಳೂಟಿ ಕೆರೆ ತುಂಬಿದ ನಂತರ ಭದ್ರನ ಕೆರೆಗೆ ನೀರು ಹರಿಯುತ್ತದೆ. ಭದ್ರನ ಕೆರೆ ತುಂಬಿ ಹೊಸಕೋಟೆ ಕೆರೆಗೆ ನೀರು ಹರಿಯುತ್ತದೆ. ಹಿಂದಿನವರ ಜಲಸಾಕ್ಷರತೆಯು ಈಗಿನವರ ನೆಲದಾಸೆಯಿಂದ ಮರೆಯಾಗಿ ನೀರು ಪಾತಾಳಕ್ಕೆ ಇಳಿದಿದೆ. ಮುಂದಿನ ವರ್ಷ ಗ್ರಾಮಸ್ಥರೆಲ್ಲಾ ತಮ್ಮ ಸ್ವಂತ ಹಣದಿಂದ ಕೆರೆಯಲ್ಲಿನ ಮುಳ್ಳುಗಿಡಗಳನ್ನು ತೆಗೆದು ಸ್ವಚ್ಛಗೊಳಿಸುತ್ತೇವೆ. ಕೆರೆಯ ಸುತ್ತ 20 ಅಡಿ ಟ್ರೆಂಚ್ ತೆಗೆದು ಕೆರೆಯ ಒತ್ತುವರಿ ತೆರವುಗೊಳಿಸುತ್ತೇವೆ. ಈ ಮಾದರಿಯಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಕೆರೆಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರೇ ಕಾಳಜಿ ವಹಿಸಿ ಜಲಮೂಲಗಳನ್ನು ಸರಿಪಡಿಸಿಕೊಂಡಲ್ಲಿ ಅಂತರ್ಜಲ ಹೆಚ್ಚುತ್ತದೆ ಎಂದು ಹೇಳಿದರು.
ಆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬೆಳ್ಳೂಟಿ ಎಸ್.ವೆಂಕಟೇಶ್, ರಮೇಶ್, ವಿಜಯ್ಕುಮಾರ್, ಬಿ.ಎನ್.ಸತೀಶ್ ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಣಂತಿ ಆರೈಕೆ ಭಾಗ – 2
ಬಾಣಂತಿಯಲ್ಲಿ ಉಪಯೋಗವಾಗುವ ಕೆಲವು ಔಷಧಿಗಳು
ದಶಮೂಲ ಕಷಾಯ
ದಶಮೂಲಾರಿಷ್ಠ
ಜೀರಕಾದ್ಯರಿಷ್ಠ
ಸಹಚರಾದಿ ಕಷಾಯ
ಸೌಭಾಗ್ಯ ಶುಂಠಿ ಅವಲೇಹ್ಯ
ವೈದ್ಯರ ಸಲಹೆಯ ಮೇರೆಗೆ ಇವುಗಳನ್ನು ಉಪಯೋಗಿಸಬೇಕು.
ಬಾಣಂತಿಯರಿಗೆ ಕಿವಿ ಮಾತು
1. ಅತಿಯಾಗಿ ಭಾರವನ್ನು ಎತ್ತುವುದು, ತುಂಬಾ ಹೊತ್ತು ಕುಳಿತ ಭಂಗಿಯಲ್ಲಿಯೇ ಇರುವುದು, ತುಂಬಾ ಹೊತ್ತು ನಿಂತಿರುವುದು ಸಲ್ಲದು.
2. ಅತಿಯಾತಿ ಗಟ್ಟಿ ಧ್ವನಿಯಲ್ಲಿ ಮಾತನಾಡುವುದು, ಓದುವುದು, ದೂರದರ್ಶನ, ಕಂಪ್ಯೂಟರ್ ವೀಕ್ಷಣೆ, ಮೊಬೈಲ್ ಬಳಕೆ ಕೂಡ ನಿಷಿದ್ಧ.
3. ಸಿಟ್ಟು, ದು:ಖ, ಬೇಸರ ಕೂಡ ಈ ಸಮಯದಲ್ಲಿ ಸೂಕ್ತವಲ್ಲ. ಇದು ಎದೆ ಹಾಲನ್ನು ಕ್ಷೀಣಗೊಳಿಸುವುದಲ್ಲದೆ ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಹದಗೆಡಿಸುವುದು.
4. ಮುಗಿವಿನೆಡೆಗೆ ಪ್ರೀತಿ, ಕಾಳಜಿಯನ್ನು ಬಳಸಿಕೊಳ್ಳಬೇಕು. ಇದೂ ಕೂಡ ಸ್ತನ್ಯ ವರ್ಧನೆಗೆ ಸಹಾಯಕ.
5. ಮಗುವಿಗೆ ಸ್ತನ್ಯಪಾನ ಮಾಡಿಸುವಾಗ ತಾಯಂದಿರು ಋಣಾತ್ಮಕ ವಿಚಾರಗಳನ್ನು ಮಾಡದೆ, ಒಳ್ಳೆಯ ವಿಚಾರಗಳನ್ನು ಮಾಡಬೇಕು. ದೇವರ ಸ್ಮರಣೆ, ಸ್ತೋತ್ರಗಳ ಪಠಣ ಕೂಡ ಈ ಸಮಯದಲ್ಲಿ ಒಳ್ಳೆಯದು. ಋಣಾತ್ಮಕ ವಿಚಾರಗಳು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
6. ಬಾಣಂತಿಯರು ಸ್ನಾನ, ಶೌಚ ಹಾಗೂ ಇನ್ನಿತರೇ ಕಾರ್ಯಗಳಿಗೆ ಬಿಸಿ ನೀರಿನ ಬಳಕೆ ಮಾಡುವುದು ಅಗತ್ಯ.
7. ದೇಹ ಶಿಥಿಲಗೊಂಡಿರುವುದರಿಂದ ಬಾಣಂತಿಯರಿಗೆ ನಿದ್ದೆ ಅತೀ ಅವಶ್ಯಕ. ಮಗು ಮಲಗಿರುವ ಸಮಯದಲ್ಲಿಯೇ ತಾಯಂದಿರೂ ನಿದ್ರಿಸುವುದು ಉತ್ತಮ.
ಹಿರಿಯರಿಗೆ ಕಿವಿ ಮಾತು
1. ಬಾಣಂತನದ ಅವಧಿಯಲ್ಲಿ ಹೆಣ್ಣಿನ ದೇಹ ಹಾಗೂ ಮನಸ್ಸುಗಳು ಅತೀ ಸೂಕ್ಷ್ಮವಾಗಿರುತ್ತವೆ. ಈ ಸಮಯದಲ್ಲಿ ಅವರನ್ನು ಪ್ರೀತಿ, ವಿಶ್ವಾಸ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು.
2. ಒಳ್ಳೆಯ ವಿಚಾರಗಳನ್ನು ಅವರ ಮನಸ್ಸಿನಲ್ಲಿ ತುಂಬಬೇಕು ಧೈರ್ಯ ಹೇಳುವುದು ಒಳ್ಳೆಯದು.
3. ಏಕಾಂಗಿತನವನ್ನು ಹೋಗಲಾಡಿಸುವುದಲ್ಲದೆ, ಎಲ್ಲರೂ ಜೊತೆಗಿರುವ ಭಾವವನ್ನು ಅವರಲ್ಲಿ ತುಂಬಬೇಕು.
4. ಮಗುವಿನ ಜವಾಬ್ದಾರಿಯನ್ನು ವಹಿಸಿಕೊಂಡು ತಾಯಂದಿರಿಗೆ ನಿದ್ರಿಸಲು ಅವಕಾಶ ಮಾಡಿಕೊಡಬೇಕು.
ಬಾಣಂತಿಯರಲ್ಲಿ ಕಂಡು ಬರುವ ಸಾಮಾನ್ಯ ರೋಗಗಳು
1. ಜ್ವರ: ಅಮೃತ ಬಳ್ಳಿಯ ಚೂರ್ಣ, ಕಾಂಡ ಅಥವಾ ರಸವನ್ನು ಕಷಾಯ ಮಾಡಿ ಸೇವಿಸುವುದರಿಂದ ಜ್ವರವು ಕಡಿಮೆಯಾಗುವುದು. ಕಷಾಯ ಮಾಡುವಾಗ ಅರ್ಧ ಚಮಚ ಚೂರ್ಣ ಅಥವಾ ಒಂದು ಚಮಚ ರಸವನ್ನು ಎರಡು ಲೋಟ ನೀರಿನೊಂದಿಗೆ ತೆಗೆದುಕೊಂಡು ಚೆನ್ನಾಗಿ ಕುದಿಸಿ, ಅರ್ಧದಷ್ಟು ನೀರು ಉಳಿಯುವವರೆಗೆ ಕುದಿಸಿ, ಅನಂತರ ಶೋಧಿಸಿ ಕುಡಿಯಲು ಕೊಡಬೇಕು.
2. ಕೆಮ್ಮು: ಕೆಮ್ಮಿನಲ್ಲಿ ಎರಡು ವಿಧ. ಅ. ಒಣ ಕೆಮ್ಮು ಹಾಗೂ ಆ. ಕಫಯುಕ್ತ ಕೆಮ್ಮು.
ಅ. ಒಣ ಕೆಮ್ಮು: 1. ದ್ರಾಕ್ಷಿ ಹಾಗೂ ಕೆಂಪು ಕಲ್ಲು ಸಕ್ಕರೆಯನ್ನು ಬಾಯಿಯಲ್ಲಿ ಜಗಿಯುವುದರಿಂದ ಒಣ ಕೆಮ್ಮು ಕಡಿಮೆಯಾಗುವುದು.
2. ಜೇಷ್ಠಮಧುವಿನ ಕ್ಷೀರಪಾಕವನ್ನು ಕುಡಿಯುವುದರಿಂದಲೂ ಒಣ ಕೆಮ್ಮು ಕಡಿಮೆಯಾಗುವುದು.
ಮಾಡುಮ ವಿಧಾನ: 1/2 ಚಮಚ ಜೇಷ್ಠಮಧುವಿನ ಪುಡಿ, ಒಂದು ಲೋಟ ಹಾಲು, ಒಂದು ಲೋಟ ನೀರನ್ನು ತೆಗೆದುಕೊಂಡು ಚೆನ್ನಾಗಿ ಕುದಿಸಿ ಒಂದು ಲೋಟ ಹಾಲಿನ ಪ್ರಮಾಣಕ್ಕೆ ಇಳಿಸಿ ಶೋಧಿಸಿ ಸೇವಿಸಬೇಕು.
ಆ. ಕಫಯುಕ್ತ ಕೆಮ್ಮು: 1. ಬಿಸಿ ಹಾಲಿಗೆ ಚಿಟಿಕೆಯಷ್ಟು ಮೆಣಸಿನ ಕಾಳಿನ ಪುಡಿ, ಅರಿಶಿಣ ಹಾಗೂ ಅರ್ಧ ಚಮಚ ತುಪ್ಪ ಹಾಕಿ ಸೇವಿಸುವುದು ಅಥವಾ ತುಳಸಿಯ ರಸಕ್ಕೆ ಜೇನನ್ನು ಸೇರಿಸಿ ಚಮಚದಷ್ಟು ಸೇವಿಸುವುದು.
2. ದೊಡ್ಡ ಪತ್ರೆಯನ್ನು ಸ್ವಲ್ಪ ಬಿಸಿ ಮಾಡಿ ರಸವನ್ನು ತೆಗೆದು 2 ಚಮಚ ರಸಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
3. ಮಲಬದ್ಧತೆ
1. ಒಣ ದ್ರಾಕ್ಷಿ, ಸೊಪ್ಪು, ತರಕಾರಿಗಳ ಸೇವನೆ ಅಗತ್ಯ.
2. ಒಣ ಶುಂಠಿಯ ಪುಡಿಯನ್ನು ಬೆಲ್ಲದೊಂದಿಗೆ ಸೇರಿಸಿ ಊಟಕ್ಕೆ ಮುಂಚೆ ಅರ್ಧ ಚಮಚದಷ್ಟು ಸೇವಿಸಬೇಕು.
3. ಬಿಸಿ ಹಾಲಿಗೆ ಮೆಣಸಿನಕಾಳಿನ ಪುಡಿ, ಅರ್ಧ ಚಮಚದಷ್ಟು ತುಪ್ಪ ಸೇರಿಸಿ ಸೇವಿಸುವುದು.
4. ಭೇದಿ
1. ಬಾಣಂತಿಯಲ್ಲಿ ಕಂಡು ಬರುವ ಭೇದಿಯ ನಿವಾರಣೆಯಲ್ಲಿ ಕೊನ್ನಾರಿಗಡ್ಡೆ, ಜೀರಿಗೆ ಹಾಗೂ ಕೊತ್ತಂಬರಿ ಬೀಜದಿಂದ ಮಾಡಿದ ಕಷಾಯವನ್ನು ಸೇವಿಸಬೇಕು.
5. ಮೈ ಕೈ ನೋವು
1. ನಿರ್ಗುಂಡಿ ಸೊಪ್ಪಿನಿಂದ ಮಾಡಿದ ಕಷಾಯವನ್ನು ಸೇವಿಸುವುದರಿಂದ ಮೈ, ಕೈ ನೋವು ಕಡಿಮೆಯಾಗುವುದು. ಹಾಗೆಯೇ ನೋವಿರುವ ಜಾಗಕ್ಕೆ ಲಕ್ಕಿ ಗಿಡದ ಸೊಪ್ಪನ್ನು ಜೇನಿನೊಂದಿಗೆ ಹಚ್ಚುವುದರಿಂದ ನೋವು ಶಮನವಾಗುವುದು.
2. ಬಾಣಂತಿಯರನ್ನು ಕಾಡುವ ಸೊಂಟ ನೋವಿಗೆ, ಎರಡು ಎಸಳು ಬೆಳ್ಳುಳ್ಳಿಯನನ್ನು ತುಪ್ಪದಲ್ಲಿ ಹುರಿದು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಸೊಂಟ ಹಾಗೂ ಮೈಕೈ ನೋವುಗಳು ನಿವಾರಣೆಯಾಗುತ್ತವೆ.
ಹೆಣ್ಣಿನ ಜೀವನದಲ್ಲಿ ತಾಯ್ತನ ಎನ್ನುವುದು ಒಂದು ಹಂತ. ಈ ಹಂತದಲ್ಲಿ ಆರೈಕೆ, ಪೋಷಣೆಯ ಜೊತೆಗೆ ಜಾಗರೂಕತೆಯೂ ಅವಶ್ಯಕ. ಈ ಹಂತದಲ್ಲಿ ಸ್ವಲ್ಪ ಅಜಾಗರೂಕತೆಯೂ ಕೂಡ ಜೀವನ ಪರ್ಯಂತ ಅನುಭವಿಸುವ ರೋಗಗಳನ್ನುಂಟು ಮಾಡಬಹುದು. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಾಣಂತಿಯ ಆರೈಕೆ ಮಾಡುವುದು ಅಗತ್ಯ.
ಡಿ.ವಿ.ಜಿ.ಯವರು ತಮ್ಮ “ಮಂಕು ತಿಮ್ಮನ ಕಗ್ಗ” ದಲ್ಲಿ ಈ ರೀತಿ ಹೇಳಿದ್ದಾರೆ.
“ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ
ಅನುವಪ್ಪುದೊಂದೊಂದು ರೋಗಕೊಂದೊಂದು
ನಿನಗಮಾತೆಯೆ ನೂರು ನೀತಿ ಸೂತ್ರಗಳಿರಲು
ಅನುವನರಿವುದೆ ಜಾಣು ಮಂಕುತಿಮ್ಮ”
ಮೆಣಸು, ಹಿಪ್ಪಲಿ, ಶುಂಠಿ, ಜೀರಿಗೆ ಹೀಗೆ ಹಲವಾರು ರೀತಿಯ ಆಹಾರ ದ್ರವ್ಯಗಳು ಹಾಗೂ ಔಷಧ ದ್ರವ್ಯಗಳು ನಮ್ಮಲ್ಲಿವೆ. ದೇಶ, ಕಾಲ, ಪ್ರಕೃತಿ, ರೋಗಗಳಿಗನುಗುಣವಾಗಿ ಅವುಗಳ ಬಳಕೆಯನ್ನು ಮಾಡಿ ಜಾಣರಾಗೋಣ ಎನ್ನುವುದು ಇದರ ತಾತ್ಪರ್ಯ.
ಆಯುರ್ವೇದವು ಬಾಣಂತಿಯ ಆರೈಕೆಯಲ್ಲಿ ನಂಬಿಕೆ ಇಟ್ಟಿರುವ ದೇಶ, ಹಾಗೂ ಕಾಲಕ್ಕೂ ಮಹತ್ವ ನೀಡುತ್ತದೆ. ಶೀತಲ ಪ್ರದೇಶದಲ್ಲಿ ವಾಸಿಸುತ್ತಿರುವ ಬಾಣಂತಿಯರಿಗೆ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಜೀರ್ಣ ಶಕ್ತಿ ಸರಿಯಾದ ಮೇಲೆ ಕೊಡಬೇಕು. ಒಣ ಪ್ರದೇಶದಲ್ಲಿ ವಾಸಿಸುವ ಬಾಣಂತಿಯರಿಗೆ ಜೀರ್ಣ ಶಕ್ತಿ ಇದ್ದಲ್ಲಿ ಎಣ್ಣೆ, ತುಪ್ಪ ಇತ್ಯಾದಿಗಳನ್ನು ಶುಂಠಿ, ಹಿಪ್ಪಲಿ ಇತ್ಯಾದಿಗಳ ಜೊತೆ ಕೊಡುವುದು ಹಿತಕರ.
ಮುಗಿಯಿತು.
ಡಾ. ನಾಗಶ್ರೀ. ಕೆ.ಎಸ್.
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಅಧ್ಯಕ್ಷರಾಗಿ ಎಂ.ನಾಗರಾಜ್
ಮಾನವ ಹಕ್ಕುಗಳ ಜಾಗೃತಿ ಸಮಿತಿಯ ತಾಲ್ಲೂಕು ಅಧ್ಯಕ್ಷರಾಗಿ ಎಂ.ನಾಗರಾಜ್ ನೇಮಕವಾಗಿದ್ದಾರೆ ಎಂದು ಸಂಸ್ಥಾಪಕ ಅಧ್ಯಕ್ಷ ಸಮೇತನಹಳ್ಳಿ ಲಕ್ಷ್ಮಣ್ಸಿಂಗ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾನವ ಹಕ್ಕುಗಳ ಜಾಗೃತಿ ಸಮಿಯು, ಎಲ್ಲಾ ವರ್ಗದ ಜನತೆಗೆ ನ್ಯಾಯವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಜನರ ಹಕ್ಕುಗಳಿಗೆ ಧಕ್ಕೆಯಾಗುವಂತಹ ಸಂದರ್ಭದಲ್ಲಿ ನಿರಂತರವಾಗಿ ಹೋರಾಟದ ಮುಖಾಂತರ ನ್ಯಾಯವನ್ನು ಒದಗಿಸುವಂತಹ ಕೆಲಸವನ್ನು ಮಾಡಲಾಗುತ್ತಿದೆ. ತಾಲ್ಲೂಕಿನಲ್ಲಿಯೂ ಕೂಡಾ ದೀನ ದಲಿತರ ಏಳಿಗೆ, ಹಾಗೂ ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವವರು ಹಾಗೂ ತಮ್ಮ ಹಕ್ಕುಗಳಿಂದ ವಂಚಿತರಾಗಿರುವಂತಹ ಜನತೆಗೆ ನ್ಯಾಯವನ್ನು ಒದಗಿಸಿಕೊಡುವಂತಹ ಪ್ರಾಮಾಣಿಕವಾದ ಹೋರಾಟಗಳನ್ನು ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಪದಾಧಿಕಾರಿಗಳೂ ಕೂಡಾ ಉತ್ತಮವಾದ ಸೇವೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಛಾವಣಿ ಕುಸಿದು ಮಹಿಳೆ ಸಾವು
ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಸೋಮವಾರ ರಾತ್ರಿ ಮನೆಯ ಛಾವಣಿ ಕುಸಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಚಿಕ್ಕತಮ್ಮಯ್ಯ ಅವರ ಪತ್ನಿ ನಾಗರತ್ನಮ್ಮ(55) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ರಾತ್ರಿ ಮನೆಯಲ್ಲಿ ಚಿಕ್ಕತಮ್ಮಯ್ಯ, ನಾಗರತ್ನಮ್ಮ ಮತ್ತು ಮಗಳು ಗಂಗೋತ್ರಿ ಮಲಗಿದ್ದಾಗ, ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಶಿಥಿಲವಾಗಿದ್ದ ಜಂತಿಕೆ ಮನೆಯ ಮಾಳಿಗೆ ರಾತ್ರಿ 11 ಗಂಟೆ ಸುಮಾರಿಗೆ ಕುಸಿದಿದೆ. ಮಲಗಿದ್ದವರ ಮೇಲೆ ಮನೆಯ ಸೂರು ಬಿದ್ದ ಪರಿಣಾಮ ನಾಗರತ್ನಮ್ಮ ಸ್ಥಳದಲ್ಲೇ ಮೃತಪಟ್ಟು, ಮಗಳು ಗಂಗೋತ್ರಿ(12)ಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿವಿಲಾಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಭೇಟಿ ನೀಡಿ ಅಂತ್ಯಸಂಸ್ಕಾರಕ್ಕೆ ಸರ್ಕಾರದ ವತಿಯಿಂದ 5000 ರೂಗಳನ್ನು ನೀಡಿದರು. ಶಾಸಕ ಎಂ.ರಾಜಣ್ಣ ಭೇಟಿ ನೀಡಿ ಮೃತರ ಕುಟುಂಬಕ್ಕೆ 5000 ರೂಗಳನ್ನು ನೀಡಿದರು. ಗ್ರಾಮ ಪಂಚಾಯತಿ ವತಿಯಿಂದ 10 ಸಾವಿರ ರೂಗಳನ್ನು ನೀಡಲಾಯಿತು. ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ, ರಾಜಸ್ವ ನಿರೀಕ್ಷಕ ಸುಬ್ರಮಣಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ವರದನಾಯಕನಹಳ್ಳಿ ಹಾಗೂ ಚೀಮನಹಳ್ಳಿ ಗ್ರಾಮಸ್ಥರ ಬೈಕ್ ರ್ಯಾಲಿ
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದ ಚದಲಪುರದ ಬಳಿಯಲ್ಲಿ ನಡೆಯುತ್ತಿರುವ ಶಾಶ್ವತ ನೀರಾವರಿ ಹೋರಾಟದ ಸ್ಥಳಕ್ಕೆ ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ಬೇಗ್ ಅವರು ಬೇಟಿ ನೀಡದೆ ಈ ಭಾಗದ ಜನತೆಯನ್ನು ಕಡೆಗಣಿಸಿದ್ದಾರೆ. ಅವರು ಭಾಗವಹಿಸುವ ಸಭೆ ಸಮಾರಂಭಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಕಚೇರಿಯ ಬಳಿ ಮಂಗಳವಾರ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದ ವರದನಾಯಕನಹಳ್ಳಿ ಹಾಗೂ ಚೀಮನಹಳ್ಳಿ ಗ್ರಾಮಸ್ಥರು ಮಾತನಾಡಿದರು.
ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರಾವರಿ ತಜ್ಞ ಪರಮಶಿವಯ್ಯನವರ ವರದಿಯಂತೆ ನೀರಾವರಿ ಯೋಜನೆಯನ್ನು ಕಲ್ಪಿಸಿಕೊಡುವಂತೆ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟಗಳನ್ನು ಮಾಡುತ್ತಿದ್ದರೂ ಈ ಭಾಗದ ರೈತಾಪಿ ವರ್ಗದ ಸಹನೆಯನ್ನು ಪರೀಕ್ಷಿಸುವಂತೆ ಸರ್ಕಾರಗಳು ಜಾಣಕುರುಡು ಪ್ರದರ್ಶನ ಮಾಡುತ್ತಿವೆ. ಇಡೀ ದೇಶಕ್ಕೆ ಚಿನ್ನ, ರೇಷ್ಮೆ, ಹಾಲು, ಹೂವು, ತರಕಾರಿಗಳನ್ನು ಪೂರೈಸಿದ ಜನರಿಗೆ ಕುಡಿಯುವ ನೀರು ಕೊಟ್ಟು ಉಳಿಸಬೇಕೆಂಬ ಕನಿಷ್ಟ ಸೌಜನ್ಯವೂ ಇಲ್ಲದೆ, ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ.
ಬಯಲು ಸೀಮೆ ಭಾಗದಲ್ಲಿನ ಜನತೆಯ ಜೀವನಕ್ಕೆ ಯಾವುದೇ ನದಿನಾಲೆಗಳ ಆಸರೆಯಿಲ್ಲ. ಸುಮಾರು ೧೫೦೦ ಅಡಿಗಳು ಕೊರೆದರೂ ಒಂದಿಂಚು ನೀರು ಸಿಗುತ್ತಿಲ್ಲ. ನಾವು ಕುಡಿಯುತ್ತಿರುವ ನೀರು ಪ್ಲೋರೈಡ್ ಮಿಶ್ರಿತವಾಗಿದ್ದು, ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ನಾವು ತಿನ್ನುತ್ತಿರುವ ಆಹಾರವೂ ಕೂಡಾ ವಿಷವಾಗಿದೆ. ಇಂತಹ ಸಂದರ್ಭದಲ್ಲಿಯೂ ರಾಜಕೀಯ ಪ್ರತಿಷ್ಠೆಗಳಿಂದ ಜನಪ್ರತಿನಿಧಿಗಳು, ಇನ್ನೂ ವಿಳಂಬ ಮಾಡುವುದು ತರವಲ್ಲ. ಒಂದು ಕೊಳವೆಬಾವಿಯನ್ನು ಕೊರೆಸಲು ೫ ರಿಂದ ೬ ಲಕ್ಷ ರೂಪಾಯಿಗಳು ಖರ್ಚಾಗುತ್ತಿದ್ದು, ಸಾಲಗಳನ್ನು ಮಾಡಿರುವ ರೈತರು ಆತ್ಮಹತ್ಯೆಗಳಿಗೆ ಒಳಗಾಗುತ್ತಿದ್ದಾರೆ. ನೀರು ಕೇಳುವುದು ಸಂವಿಧಾನ ಬದ್ದವಾಗಿ ನಮ್ಮ ಹಕ್ಕು.
ಸರ್ಕಾರ ಇದೇ ರೀತಿಯಾಗಿ ಅಸಡ್ಡೆ ಮಾಡಿದರೆ, ಮುಂದೆ ಆಗುವಂತಹ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ಬೀದಗಳಲ್ಲಿ ಬೈಕ್ರ್ಯಾಲಿಯನ್ನು ನಡೆಸುವ ಮೂಲಕ ನೀರಾವರಿ ಹೋರಾಟದ ಸ್ಥಳಕ್ಕೆ ತೆರಳಿದರು.
ತಾಲ್ಲೂಕು ರೈತ ಸಂಘ, ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವಿ.ಎನ್.ಗಜೇಂದ್ರ, ವೇಣು, ವಿಶ್ವನಾಥ, ದ್ಯಾವಪ್ಪ, ಆಂಜಿನಮ್ಮ, ಅಮರನಾಥ, ನಾಗರಾಜ, ವಿ.ಆರ್.ಶ್ರೀನಿವಾಸ್ ಮತ್ತಿತರರು ಹಾಜರಿದ್ದರು.
ಅಗರ್‍ವುಡ್: ಕುರುಡು ಕಾಂಚಾಣದ ಬೆನ್ನು ಹತ್ತಿ……
ಆರೆ, ಏಳೇ ವರ್ಷಗಳಲ್ಲಿ ಬೆಳೆ ಕೈಗೆ. ಕೆ.ಜಿ.ಗೆ 30 ಸಾವಿರದಿಂದ 60 ಸಾವಿರ ರೂ. ಬೆಲೆ. ನಿಸ್ಸಂಶಯವಾಗಿ ಶ್ರೀಗಂಧಕ್ಕಿಂತಲೂ ಲಾಭದಾಯಕ ಬೆಳೆ. ಕಳ್ಳರ ಕಾಟವಿಲ್ಲ, ಜೇಬಿಗೆ ಝಣ ಝಣ ಕಾಂಚಾಣ…..! ಹೀಗೆಂದು ಬೆಳೆಯೊಂದರ ಬಗ್ಗೆ ಪ್ರಚಾರ ಕೇಳೀಬರುತ್ತಿರುವಾಗ ಹಲವು ಬೆಳೆ ಬೆಳೆದು, ಲಾಭದ ಕನಸು ಕಂಡು ಸುಸ್ತಾಗಿರುವ ರೈತರಿಗೆ ಆಹ್ಲಾದಕರ ಭಾವ ಮೂಡಿದರೆ ಅಚ್ಚರಿಯಿಲ್ಲ. ಅಗರ್‍ವುಡ್ ಎಂಬ ಸುಗಂಧದ್ರವ್ಯ ನೀಡುವ ಮರದ ಕೃಷಿ ಕುರಿತಂತೆ ರಾಜ್ಯದ ರೈತರಲ್ಲಿ ಬಿಸಿಬಿಸಿ ಚರ್ಚೆಯಂತೂ ಆರಂಭವಾಗಿದೆ.
ಏನಿದು ಅಗರ್‍ವುಡ್?
ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಕೃಷಿ ನಡೆಸುತ್ತಿರುವ ವಾಣಿಜ್ಯ ಬೆಳೆ ಅಗರ್‍ವುಡ್. ವಾಸ್ತವವಾಗಿ ಇದು ಅಕ್ವಿಲೇರಿಯಾ ಎಂಬ ಜಾತಿಯ ಮರದಿಂದ ಲಭ್ಯವಾಗುವ ಉತ್ಪನ್ನ. ಈ ಮರದ ಕಾಂಡದಿಂದ ಅಗರ್‍ವುಡ್ ಕರಿ ಕಿಟ್ಟವನ್ನು ತೆಗೆಯಲಾಗುತ್ತದೆ. ಮುಖ್ಯವಾಗಿ, ಅತ್ತರಿನ ತಯಾರಿಕೆಯಲ್ಲಿ, ಔಷಧ ಪ್ರಪಂಚದಲ್ಲಿ ಇದು ವಿನಿಯೋಗವಾಗುತ್ತಿದೆ. ಪ್ರಪಂಚದ ಅತ್ಯುತ್ತಮ ಸುವಾಸನೆಯುಳ್ಳ ಸುಗಂಧದ್ರವ್ಯ ಎಂಬ ಖ್ಯಾತಿಯಿರುವುದರಿಂದ ಅಗರ್‍ವುಡ್‍ಗೆ ಭಾರೀ ಬೆಲೆ.
ಮಲೇಶ್ಯಾ, ಥಾಯ್ಲೆಂಡ್, ಇಂಡೋನೇಷ್ಯಾ, ದಕ್ಷಿಣ ಕೊರಿಯಾ, ವಿಯೆಟ್ನಾಂ, ಕಾಂಬೋಡಿಯಾ ಮೊದಲಾದ ದೇಶಗಳಲ್ಲಿ ಈ ಮರ ನೈಸರ್ಗಿಕವಾಗಿಯೇ ಬೆಳೆಯುತ್ತದೆ. ಸುಮಾರು 40 ಮೀ. ಎತ್ತರ ಹಾಗೂ 80 ಸೆಂ.ಮೀ. ಸುತ್ತಳತೆಯ ಮರ 20 ವರ್ಷಗಳಲ್ಲಿ ತಯಾರಾಗುತ್ತದೆ. ಸ್ವಾಭಾವಿಕ ಅಗರ್‍ವುಡ್ ತಯಾರಾಗುವುದು ಈ ಕಾಲದಲ್ಲಿ. ಮರದಲ್ಲಿ ಆದ ಗಾಯ, ಪೊಟರೆಗಳ ಮೂಲಕ ಮಧ್ಯಕಾಂಡಕ್ಕೆ ಫಂಗಸ್ ದಾಳಿ ನಡೆದಾಗ ಕಾಂಡದ ಒಳಗೆ ಅಗರ್‍ವುಡ್ ಕಿಟ್ಟ ತಯಾರಾಗುತ್ತದೆ. ಗಮನಿಸಬೇಕಾದುದೆಂದರೆ, ಸ್ವಾಭಾವಿಕ ಅಗರ್‍ವುಡ್ ಸಿದ್ಧಗೊಳ್ಳುವುದು ಶೇ.7ರಷ್ಟು ಮರದಲ್ಲಿ ಮಾತ್ರ!
ಈ ಮರವನ್ನು ರಾಜ್ಯಕ್ಕೆ ಆಮದು ಮಾಡಿ ಕೃತಕವಾಗಿ ಅಗರ್‍ವುಡ್ ತಯಾರಾಗಲು ಪ್ರಚೋದಿಸಿದರೆ ಹೇಗೆ? ಅಂತಹ ಪ್ರಯತ್ನಗಳು ನಮ್ಮ ದೇಶದಲ್ಲಿ ಮತ್ತು ಪಕ್ಕದ ಬಾಂಗ್ಲಾದಲ್ಲಿ ನಡೆಯುತ್ತಿದೆ. ಈ ಅಕ್ವಿಲೇರಿಯಾ ಮರದಲ್ಲಿ ಒಟ್ಟು 28 ಜಾತಿಗಳಿವೆಯಂತೆ. ಅದರಲ್ಲಿ ಮಾಲಾಸೆಗಿನ್, ಅಗಲೋಚಾ ಮತ್ತು ಸೆರುಂಡಾರಿಯಾ ಮಾದರಿಗಳು ಅಗರ್‍ವುಡ್ ತಯಾರಿಯಲ್ಲಿ ಬಳಕೆಯಾಗಿವೆ. ಇದನ್ನು ಮುಖ್ಯ ಬೆಳೆಯಾಗಿ ಅಥವಾ ನಮ್ಮೂರಿನ ಅಡಿಕೆ, ತೆಂಗು, ತಾಳೆ ಮಧ್ಯೆ ಉಪಬೆಳೆಯಾಗಿಯೂ ಬೇಸಾಯ ಮಾಡಬಹುದು.
ಅಗರ್‍ವುಡ್ ತಯಾರಿ ಹೇಗೆ?
ಏಳು ವರ್ಷಗಳ ಸಮೃದ್ಧ ಬೆಳವಣಿಗೆ ಕಂಡ ಅಕ್ವಲೇರಿಯಾ ಮರದ ಕಾಂಡವನ್ನು ಎದೆಮಟ್ಟದ ಎತ್ತರದಲ್ಲಿ ಕೃತಕವಾಗಿ ಡ್ರಿಲ್ ಮಾಡಿ ಕಾಂಡದ ಮಧ್ಯದ ತಿರುಳಿನವರೆಗೆ ರಂಧ್ರ ಕೊರೆಯಬೇಕು. ಈ ಭಾಗಕ್ಕೆ ನಿರ್ದಿಷ್ಟ ಬಯೋ ಏಜೆಂಟ್ ಮತ್ತು ವಿಶೇಷವಾದ ಫಂಗಸ್‍ಗಳ ಸೋಂಕು ಮಾಡಿಸಬೇಕಾಗುತ್ತದೆ. ಒಂದು ತಿಂಗಳ ನಂತರ ರಂಧ್ರದ ಸುತ್ತ ಪೇಲವ ಬಣ್ಣ ತೇವಗೊಂಡಿದ್ದು ಕಂಡುಬಂದರೆ ಮರಕ್ಕೆ ಸೋಂಕು ತಗುಲಿದೆಯೆಂದರ್ಥ.
ಮುಂದಿನ ಮೂರು ತಿಂಗಳಿನಲ್ಲಿ ಮರ ಅರಿಸಿನ ಕಂದು ಬಣ್ಣಕ್ಕೆ, ಆ ನಂತರದ 8-10 ತಿಂಗಳಿನಲ್ಲಿ ರಂಧ್ರದ ಸುತ್ತ ಮುತ್ತ ದಟ್ಟ ಕಂದು ಬಣ್ಣಕ್ಕೆ ತಿರುಗಿದರೆ ವಾರದೊಳಗೆ ಅಗರ್‍ವುಡ್ ಕಿಣ್ವ ತಯಾರಾಗುತ್ತಿದೆ ಎನ್ನಬಹುದು. ಅಷ್ಟಕ್ಕೂ ಫಂಗಸ್‍ಗಳ ವಿರುದ್ಧ ಹೋರಾಡುವ ಮರ ಪ್ರತಿರೋಧಕ್ಕಾಗಿ ತಯಾರಿಸುವ ದ್ರವ್ಯವೇ ಅಗರ್‍ವುಡ್. ತನ್ನ ಯುದ್ಧದಲ್ಲಿ ಸೋಲುವ ಮರ 20 ತಿಂಗಳಲ್ಲಿ ರಂಧ್ರದ ಜಾಗದಲ್ಲಿ ಕಪ್ಪು ಬಣ್ಣಕ್ಕೆ ತಿರುಗಿದಾಗ ಅಗರ್‍ವುಡ್ ಸಿದ್ಧ. ಇದಕ್ಕೆ ಪ್ರಥಮತಃ ಸುಟ್ಟ ವಾಸನೆ ಇರುತ್ತದೆ. ಈ ಹಂತದಲ್ಲಿ ಮರವನ್ನು ಕಟಾವು ಮಾಡಿ ಅಗರ್‍ವುಡ್ ತೆಗೆಯಲಾಗುತ್ತದೆ. ಇದರ ಚಕ್ಕೆ, ಪೌಡರ್, ಕಾಂಡಗಳು ಊದುಬತ್ತಿ, ಕಲಾಕೃತಿಗಳು, ಔಷಧ. ಕಾಗದ ತಯಾರಿಕೆಗಳಲ್ಲಿ ಬಳಕೆಯಾಗುವುದರಿಂದ ಇದರ ಪ್ರತಿಯೊಂದು ಉತ್ಪನ್ನವೂ ಮಾರುಕಟ್ಟೆಯಲ್ಲಿ ಬಿಕರಿಯಾಗಬಲ್ಲದು ಎಂಬ ವಾದವೂ ಇದೆ.
ನಮ್ಮೂರಲ್ಲಿ ಹೇಗೆ?
ಮಲೆನಾಡಿನ ಭಾಗಗಳಲ್ಲಿ ಇದನ್ನು ಬೆಳೆಯಲು ಸೂಕ್ತ ವಾತಾವರಣವಿದೆ ಎಂಬ ಮಾತಿದೆ. ಪ್ರವರ್ತಕ ಕಂಪನಿಯೊಂದು 2009ರಿಂದ ರಾಜ್ಯದ ಐದು ಜಿಲ್ಲೆಗಳ 19 ತಾಲ್ಲೂಕಿನಲ್ಲಿ ಸುಮಾರು 700 ಮಂದಿ ಬೆಳೆ ನಾಟಿ ಮಾಡಿದ್ದಾರೆ ಎಂದು ಪ್ರಕಟಿಸಿದೆ. ಈ ಅಂಕಿಅಂಶಗಳ ಹೊರತಾಗಿ ಯೋಚಿಸುವುದಾದರೆ, ಒಮ್ಮೆಗೇ ದೊಡ್ಡ ಪ್ರಮಾಣದಲ್ಲಿ ಬೆಳೆ ಹಚ್ಚುವುದು ಅನಾಹುತಕಾರಿ. ಅಂತರ್ರಾಷ್ಟ್ರೀಯ ಮಟ್ಟದಲ್ಲಿಯೇ ಇದರ ಫಸಲು ಪ್ರಮಾಣ, ಉತ್ಪನ್ನದ ಗುಣಮಟ್ಟದ ಬಗ್ಗೆ ಸ್ಪಷ್ಟ ಲೆಕ್ಕಾಚಾರ ದೊರಕಿಲ್ಲ. ಕೃತಕವಾಗಿ ಸೋಂಕು ತಗುಲಿಸುವ ಫಂಗಸ್, ಬಯೋ ಏಜೆಂಟ್‍ಗಳು ಪೇಟೆಂಟ್ ಲಗಾಮಿನೊಳಗಿದ್ದು ಅದರ ಬೆಲೆ ಅವರು ಹೇಳಿದಷ್ಟು!
ನೈಸರ್ಗಿಕವಾಗಿ 20 ವರ್ಷದ ವೇಳೆಗೆ 10 ಮೀ. ಎತ್ತರ ಬೆಳೆಯುವ ಗಿಡ, ನಾವು ಹಚ್ಚಿದ ಏಳೇ ವರ್ಷಗಳಲ್ಲಿ ಸದೃಢವಾಗುವುದು ಸಂಶಯಾಸ್ಪದ. ಈ ಕುರಿತಂತೆ ಸಣ್ಣ ಪ್ರಮಾಣದಲ್ಲಿ ಗಿಡ ನೆಟ್ಟಿರುವವರ ಒಂದು ವರ್ಷದ ಅನುಭವದಂತೆ ನಿರೀಕ್ಷಿತ ಮಟ್ಟದಲ್ಲಿ ಗಿಡದ ಬೆಳವಣಿಗೆ ಕಂಡುಬಂದಿಲ್ಲ. ಸಫೇದ್ ಮುಸ್ಲಿ, ಸ್ಟೀವಿಯಾ, ಮ್ಯಾಜಿಯಂಗಳನ್ನೆಲ್ಲ ಬೆಳೆದ ನಾವು ಕೈಸುಟ್ಟುಕೊಂಡದ್ದು ನೆನಪಿನಲ್ಲಿರಬೇಕು.
ಬಾಂಗ್ಲಾದಲ್ಲಿ ಅಗರ್‍ವುಡ್ ಕುರಿತಂತೆ ವೈಜ್ಞಾನಿಕ ಸಮೀಕ್ಷೆ ನಡೆದಿರುವುದನ್ನು ಗಮನಿಸಲೇಬೇಕು. ಅಲ್ಲಿನ ಬ್ರಾಕ್ ಟೀ ಎಸ್ಟೇಟ್ 2007ರ ಜುಲೈನಿಂದ ಅಗರ್‍ವುಡ್ ಕುರಿತಂತೆ 17 ಎಕರೆ ಭೂಮಿಯಲ್ಲಿ ಬೆಳೆ ಪ್ರಾತ್ಯಕ್ಷಿಕೆಯನ್ನೆ ನಡೆಸಿದೆ. ಮಣ್ಣು ಪರೀಕ್ಷೆ, ಗುಣಮಟ್ಟದ ಗೊಬ್ಬರ ಮತ್ತು ನಿರಂತರ ಪರಿವೀಕ್ಷಣೆಗಳ ನಂತರ ಅದು ಗೋಡೆಯ ಮೇಲೆ ದೀಪವಿರಿಸಿದಂತೆ ಹೇಳಿರುವುದು ಇಷ್ಟು, ಶೇ.95ರ ತಾಳಿಕೆಯನ್ನು ಕಾಣಬಹುದು. ಆದರೆ ಮಳೆ ಹಾಗೂ ಇಬ್ಬನಿ ವಾತಾವರಣ ತೊಂದರೆ ಕೊಟ್ಟೀತು ಎನ್ನುತ್ತದೆ. ಪಕ್ಕದ ಚಿಟಗಾಂಗ್‍ನ ಕರ್ನಾಫುಲಿ ಫಾರ್ಮ್ ಉದಾಹರಣೆಯಲ್ಲಿ ನಾಟಿ 2004ರಲ್ಲಿ ನಡೆದಿದ್ದು, ನೆಟ್ಟ 426 ಗಿಡದಲ್ಲಿ ಬೆಳವಣಿಗೆ ಸ್ಕೇಲು ತೃಪ್ತಿದಾಯಕವಾಗಿಲ್ಲ ಎನ್ನಬಹುದು.
ಸದ್ಯ ಬೈಬ್ಯಾಕ್ ವ್ಯವಸ್ಥೆಯಡಿ ಗಿಡ ಕೊಡುವ ಕಂಪನಿಗಳು ನಮ್ಮಲ್ಲಿ ಹುಟ್ಟಿಕೊಂಡಿವೆ. ವೆನಿಲ್ಲಾದಂತೆ ಒಮ್ಮೆಗೇ ಹಣ ಬಾಚಿಕೊಳ್ಳುವ ಯೋಚನೆಯುಳ್ಳವರು ರಿಸ್ಕ್ ತೆಗೆದುಕೊಳ್ಳಬಹುದು!
-ಮಾ.ವೆಂ.ಸ.ಪ್ರಸಾದ್
ರೇಷ್ಮೆ ಹುಳುಗಳ ನಾಶ
ಭೂ ವಿವಾದದ ವಿಚಾರದಲ್ಲಿ ಪರಸ್ಪರ ದ್ವೇಷ ಬೆಳೆಸಿಕೊಂಡಿರುವ ದಾಯಾದಿಗಳು ರೇಷ್ಮೆ ಗೂಡು ಹಣ್ಣಾಗಿ ಗೂಡು ಕಟ್ಟುವ ಸಮಯದಲ್ಲಿ ಮೆಣಸಿನಕಾಯಿ ಘಾಟು ಹಾಕಿದ್ದರಿಂದ ಹುಳುಗಳು ಚಂದ್ರಿಕೆಗಳಲ್ಲಿ ಗೂಡು ಕಟ್ಟದೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ರೈತ ಮುನಿರಾಜು ಆರೋಪಿಸಿದ್ದಾರೆ.
ತಾಲ್ಲೂಕಿನ ಮುತ್ತೂರು ಗ್ರಾಮದ ರೈತ ಮುನಿರಾಜು ಎಂಬುವವರು ಮೇಯಿಸಿದ್ದ ಸುಮಾರು ೪೦೦ ಮೊಟ್ಟೆ ರೇಷ್ಮೆಹುಳುಗಳು ಭಾನುವಾರದಂದು ಹಣ್ಣಾಗಿದ್ದು ಬೆಳಿಗ್ಗೆ ಚಂದ್ರಿಕೆಗಳಿಗೆ ಹಾಕಿದ್ದರು. ಪಕ್ಕದ ಮನೆಯಲ್ಲಿರುವ ಇವರ ದಾಯಾದಿಗಳು ಉದ್ದೇಶ ಪೂರ್ವಕವಾಗಿ ಮೆಣಸಿನಕಾಯಿ ಹುರಿದು ಘಾಟುಹಾಕಿರುವುದರ ಪರಿಣಾಮವಾಗಿ ರೇಷ್ಮೆ ಹುಳುಗಳು ಚಂದ್ರಿಕೆಗಳಲ್ಲಿ ಗೂಡು ಕಟ್ಟದೆ ಕೆಳಗೆ ಬಿದ್ದಿವೆ. ಇದರಿಂದಾಗಿ ಸುಮಾರು ೧ ಲಕ್ಷ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.
ತಾಲ್ಲೂಕು ಮಟ್ಟದ ಯುವಜನಮೇಳ
ಗ್ರಾಮಗಳಲ್ಲಿರುವ ಮೌಖಿಕ ಜನಪದ ಸಾಹಿತ್ಯದ ದಾಖಲಾತಿ ಹಾಗೂ ಕಲಾವಿದರ ಗುರುತಿಸುವಿಕೆಯ ಕಾರ್ಯ ನಡೆಯಬೇಕಿದೆ ಎಂದು ಸಾಹಿತಿ ಹಾಗೂ ಕಲಾವಿದ ಕೆ.ರವಿಕುಮಾರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್ ಬಳಿಯ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಅಪ್ಪೇಗೌಡನಹಳ್ಳಿ ಶ್ರೀರಾಮ ಯುವಕರ ಸಂಘದ ಸಹಯೋಗದಲ್ಲಿ ನಡೆದ ತಾಲ್ಲೂಕು ಮಟ್ಟದ ಯುವಜನಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆಯಾಗುತ್ತಿದ್ದ ಮೌಖಿಕ ಜನಪದ ಗೀತೆಗಳು, ಲಾವಣಿಗಳು, ಪದಗಳು ಈಗ ಮರೆಯಾಗುವ ಮುನ್ನ ದಾಖಲಿಸಬೇಕಿದೆ. ಈ ಅಮೂಲ್ಯ ಸಾಹಿತ್ಯದ ವಾರಸುದಾರರಾದ ಜನಪದ ಕಲಾವಿದರನ್ನು ಗೌರವಿಸುವ ಸುಸಂಪ್ರದಾಯ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಭಾವಗೀತೆ, ಲಾವಣಿ, ರಂಗಗೀತೆ, ಏಕಪಾತ್ರಾಭಿನಯ, ಗೀಗಿ ಪದ, ಜಾನಪದ ಗೀತೆ, ಭಜನೆ, ಕೋಲಾಟ, ಜಾನಪದ ನೃತ್ಯ, ಡೊಳ್ಳುಕುಣಿತ, ವೀರಗಾಸೆ ಕುಣಿತ, ಚರ್ಮವಾದ್ಯ, ಸೋಬಾನೆ ಪದ, ರಾಗಿ ಬೀಸುವ ಪದ ಮುಂತಾದ ಸ್ಪರ್ಧೆಗಳು ಯುವಕ ಮತ್ತು ಯುವತಿಯರಿಗೆ ಪ್ರತ್ಯೇಕವಾಗಿ ನಡೆಸಲಾಯಿತು. ವಿಜೇತರಿಗೆ ಪ್ರಶಸ್ತಿ ಪತ್ರವನ್ನು ನೀಡಲಾಯಿತು.
ತಾಲ್ಲೂಕು ಪಂಚಾಯತಿ ಸದಸ್ಯ ವೆಂಕಟೇಶ್, ಹಂಡಿಗನಾಳ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಾರದಮ್ಮ ನಾಗರಾಜ್, ಸದಸ್ಯರಾದ ಸಿ.ಉಮಾ ಚನ್ನೇಗೌಡ. ಎ.ಎಂ.ತ್ಯಾಗರಾಜ, ಕಲಾವಿದರಾದ ನಾಮದೇವ್, ವೀರಪ್ಪ, ಪ್ರಕಾಶ್ ಮತ್ತಿತರರು ಹಾಜರಿದ್ದರು.
ಬೇಂಟ್ ಬೆಳೆವಣಿಗೆ ಬೇಕೆ?
“ಬೇಂಟ್” ಎಂಬ ಶಬ್ದ ನಿಮಗೆ ಹೊಸದಾಗಿ ಕಾಣಿಸಬಹುದು ನಿಜ. ಅದು ಕನ್ನಡದ “ಬೇಡ” ಇಂಗ್ಲೀಷ್‍ನ “ಡೋಂಟ್” ಗಳ ಕಸಿ. ನಿಷೇದಾತ್ಮಕ ಶಬ್ದಗಳು. ಅವುಗಳೇ ನಮ್ಮನ್ನು ಆಳುತ್ತಿರುವ ಶಬ್ದಗಳು.
ಕಾನ್ವೆಂಟ್‍ಗೆ ಹೋಗುತ್ತಿದ್ದ ಪುಟ್ಟ ಬಾಲಕನೊಬ್ಬನ ಹತ್ತಿರ ಅಲ್ಲಿನ ಟೀಚರ್ ಕೇಳಿದಳು “What is your name?” ಅಂತ. ಅದಕ್ಕೆ ಆ ಬಾಲಕ ಉತ್ತರಿಸಿದ “don’t John” ಅಂತ. ಟೀಚರ್‍ಗೆ ಆಶ್ಚರ್ಯ ಇದೆಂಥ ಹೆಸರು ಅಂತ. ಆದರೆ ಕೊನೆಗೆ ತಿಳಿದದ್ದಿಷ್ಟು. ಅವನ ಹೆಸರು “ಜಾನ್” ಅಂತ. ಆದರೆ ಮನೆಯಲ್ಲಿ ಅವನೇನು ಮಾಡುತ್ತಿದ್ದರೂ ಅವನ ತಂದೆ-ತಾಯಿ “don’t John” ಅಂತ ಪದೇ ಪದೇ ಹೇಳುತ್ತಿದ್ದುದ್ದರಿಂದ ಆತ ಸ್ವಾಭಾವಿಕವಾಗಿಯೇ ತನ್ನ ಹೆಸರು “don’t John” ಅಂತ ತಿಳಿದುಕೊಂಡಿದ್ದ.
ಇದು ಜಾನ್‍ನೊಬ್ಬನ ಕಥೆಯಲ್ಲ. ಇದು ಇಂದಿನ ಬದುಕಿನ ವಾಸ್ತವ. ನಮ್ಮ ಮನೆಗಳಲ್ಲೂ ನೋಡಿ. ಮಗುವಿಗೆ ನಾವು ಹೇಳುವುದು “ಬೇಡ” ಅಂತ. ಅದನ್ನು ಮುಟ್ಟಬೇಡ, ಇದನ್ನು ಕೇಳಬೇಡ, ಇಲ್ಲಿ ಆಟವಾಡಬೇಡ, ಹಾಗೆ ತಿನ್ನಬೇಡ, ಓಡಬೇಡ, ಹೀಗೆ ಬೇಡಬೇಡ ಎಂದು ಹೇಳುತ್ತಲೇ ಇರುತ್ತೇವೆ. ಮಗುವೊಂದು ಏನನ್ನು ಮಾಡಲು ಹೊರಟರೂ ನಾವು ಮೊದಲಿಗೆ ಅದಕ್ಕೆ ಪ್ರೋತ್ಸಾಹ ನೀಡುವುದನ್ನು ಬಿಟ್ಟು, ನೀನು ಮಾಡು. ಮುಂದುವರಿ, ಎಂದು ಹೇಳುವುದಕ್ಕೆ ಬದಲಾಗಿ ‘ಬೇಡ’ ಎಂದು ಅದರ ಉತ್ಸಾಹವನ್ನು ಕುಗ್ಗಿಸುತ್ತೇವೆ.
ಜಾತ್ರೆಯಲ್ಲೋ-ಪೇಟೆಯಲ್ಲೋ ಮಗುವಿಗೊಂದು ಆಟಿಕೆ ವಸ್ತುವನ್ನು ಕೊಡಿಸಿದರೆ, ಅದು ಅದರಷ್ಟಕ್ಕೆ ಆಡಲು ಬಿಡುವುದಿಲ್ಲ. ಬದಲಿಗೆ ಅದನ್ನು ಹೀಗೇ ಆಡಬೇಕು. ಅದನ್ನು ಹೀಗೇ ಇಟ್ಟುಕೊಳ್ಳಬೇಕು. ಎಂದು ನಿರ್ಬಂಧಿಸುತ್ತಲೇ ಅದೇನೋ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿಡಬೇಕಾದ ಅಮೂಲ್ಯವಸ್ತು ಎಂಬಂತೆ ವರ್ತಿಸುತ್ತೇವೆ. ಅದಕ್ಕೆಂದು ಕೊಡಿಸಿದ್ದು, ಅದು-ಅದರ ಗಾಲಿಯನ್ನಾದರು ಕಳಚಲಿ-ಕಿತ್ತಾದರೂ ಹಾಕಲಿ, ಒಡೆದರೂ ಸರಿ, ಎಂದು ಅದನ್ನದರಷ್ಟಕ್ಕೆ ಬಿಡುವುದಿಲ್ಲ. ಅದರರ್ಥ ನಾವು ಅದಕ್ಕಿರುವ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಿತ್ತುಕೊಳ್ಳುತ್ತಲೇ ಅದನ್ನೊಂದು ಅಚ್ಚಿನ ವಿಗ್ರಹದಂತೆ ತಯಾರಿಮಾಡಲು ತೊಡಗುತ್ತೇವೆ. ಹೀಗೆ ಸಾಗಿದರೆ ಬೆಳೆವಣಿಗೆ ಹೇಗೆ ಸಾಧ್ಯವೆಂದು ಒಂದು ಕ್ಷಣ ಯೋಚಿಸಿ.
ಜಿದ್ದು ಕೃಷ್ಣಮೂರ್ತಿಯವರು ಹೇಳುವಹಾಗೆ ‘ಸ್ವತಂತ್ರವಾಗಿ ಯೋಚಿಸುವ, ಹೆದರಿಕೆಯಿಲ್ಲದ, ನಿರ್ಧಿಷ್ಟ ಮಾದರಿಗಳಿಲ್ಲದ, ಸಂದರ್ಭದಲ್ಲಿ ಮಾತ್ರ ಯಾವುದು ನಿಜ-ಸತ್ಯ ಎನ್ನುವುದನ್ನು ಅನ್ವೇಷಿಸಿಕೊಳ್ಳಲು ಸಾಧ್ಯ’. ಆದರೆ ನಾವು ಪ್ರತಿಯೊಂದು ಸಂದರ್ಭದಲ್ಲೂ ಭಯವನ್ನು ಹುಟ್ಟು ಹಾಕುತ್ತೇವೆ. ಸ್ವತಂತ್ರ ಕ್ರಿಯೆಯನ್ನು ಕಿತ್ತುಕೊಳ್ಳುತ್ತೇವೆ. ಹಾಗಾಗಿ ಅದರ ಅನ್ವೇಷಕ ಗುಣವನ್ನು ನಿಧಾನವಾಗಿ ನಾಶಪಡಿಸುತ್ತೇವೆ. ಮನೆಯಲ್ಲಿ ಮಗುವಿದ್ದಲ್ಲಿ ಅದನ್ನು ಜೊಪಾನವಾಗಿ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗುವುದು. ಆದರೆ ಜೋಪಾನದ ನೆಪದಲ್ಲಿ ಅದರ ಚಟುವಟಿಕೆಗಳನ್ನು ಸದಾ ನಿಯಂತ್ರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಬೇಕಿದ್ದರೆ ಬೆಳಗಿನಿಂದ ರಾತ್ರಿಯವರೆಗೆ ಒಟ್ಟು ಎಷ್ಟು ಬಾರಿ ‘ಬೇಡ ಮಗು’. ಅದು ಬೇಡ, ಹಾಗೆ ಮಾಡ ಬೇಡ, ಹೀಗೆ ಮಾಡಬೇಡ, ಎಂದು ನಿಷೇಧಾತ್ಮಕ ಶಬ್ದಗಳನ್ನು ಬಳಸುತ್ತೇವೆ. ಎಂದು ಬೇಕಿದ್ದರೆ ಪರೀಕ್ಷಿಸಿ. ನಾವು ನಮಗರಿವಿಲ್ಲದೆ ಇಂಥ ನಿಷೇದಾತ್ಮಕ ಪದಪ್ರಯೋಗಗಳನ್ನು ಮಾಡುತ್ತಲೇ ಇರುತ್ತೇವೆ. ಇದರಿಂದಾಗಿ ಅದರ ಬೆಳೆವಣಿಗೆಯ ಮೇಲಾಗುವ ಪರಿಣಾಮಗಳನ್ನ ಮಾತ್ರ ಗಮನಿಸುವುದೇ ಇಲ್ಲ. ಪ್ರತಿಯೊಂದಕ್ಕು ಬೇಡ-Don’t ಏನ್ನುತ್ತಲೇ ಸಾಗಿದರೆ, ಅದು ಕಾಲಕ್ರಮೇಣ ಅದೇ ಸರಿ ಎಂದು ಕೊಳ್ಳಬಹುದು. ಅಥವಾ ಖಿನ್ನತೆಗೆ ಗುರಿಯಾಗಬಹುದು. ಸ್ವತಂತ್ರ ಪರಿಸರವಿದ್ದಲ್ಲಿ ಸರಾಗವಾಗಿ ಉಸಿರಾಡಬಹುದು. ಸಹಜವಾಗಿ ಉಸಿರಾಡುವ ವಾತವರಣದಲ್ಲಿ ಸರಿಯಾಗಿ ಬೆಳೆಯಬಹುದು!.
ನಮ್ಮಲ್ಲಿ ಇಂದು ‘ಶಿಸ್ತು ಎನ್ನುವುದು ಒಂದು ವ್ಯಸನವಾಗುತ್ತಿದೆ. ನಾವು ಶಿಸ್ತಿನಿಂದ ಇರಬೇಕು. ನಮ್ಮ ಮನೆ ಹೀಗಿರಬೇಕು. ನಮ್ಮ ಬಟ್ಟೆ-ಬರೆ ಹೀಗಿರಬೇಕು. ನಮ್ಮ ಮನೆಯ ಜಗುಲಿ ಹೀಗಿರಬೇಕು. ಅಂಗಳ ಹೀಗೇ ಇರಬೇಕು. ಹಾಗೇ ನಮ್ಮ ಮಕ್ಕಳೂ ಹೀಗೇ ಇರಬೇಕು. ಅವರು ಹೀಗೇ ಮಾತನ್ನಾಡಬೇಕು. ಹೀಗೇ ಊಟ-ತಿಂಡಿ ಮಾಡಬೇಕು. ಹೀಗೇ ಕೂತಿರಬೇಕು. ಎಂದೆಲ್ಲ ‘ಬೇಕು’ ಗಳ ಪಟ್ಟಿ ಬೆಳೆಸಿಕೊಳ್ಳುತ್ತಲೇ ಸಾಗುತ್ತೇವೆ. ಅನಂತರ ಒಂದು ರೀತಿಯಲ್ಲಿ ನಮಗರಿವಾಗದೆ ನಾವು ನಾವಾಗಿರುವುದಕ್ಕೆ ಬದಲಾಗಿ ಬೇರೆಯವರಿಂದ ತಿದ್ದಿ-ತೀಡಲ್ಪಟ್ಟ ಯಂತ್ರಗಳಾಗುವ ಅಪಾಯವಿದೆ. ಇನ್ನು ಅಲ್ಪ-ಸ್ವಲ್ಪ ಇಂಗ್ಲೀಷ್ ಜ್ಞಾನವಿದ್ದರಂತೂ ಮಗುವಿಗೆ ಅದು ಇಂಗ್ಲೀಷ್‍ನಲ್ಲೇ ಸಂಭಾಷಿಸಬೇಕು. ಮಮ್ಮಿ- ಡ್ಯಾಡಿ ಅಂತಲೇ ಕರೆಯಬೇಕು. ಗುಡ್ ಮಾರ್ನಿಂಗ್, ಗುಡ್ ನೈಟ್ ಹೇಳಬೇಕು. ಅಂದಾಗ ಮಾತ್ರ ತಮ್ಮ ಜನ್ಮ ಸಾರ್ಥಕವಾದಂತೆ ಎಂದು ಭಾವಿಸುತ್ತಾರೆ ಯಾ ಭ್ರಮಿಸುತ್ತಾರೆ ಮತ್ತು ಅದನ್ನೇ ಸಂಭ್ರಮಿಸುತ್ತಾರೆ.
ಮಗು ಶಿಸ್ತಾಗಿ ಬೆಳೆಯಬಾರದೆಂದು ಹೇಳುತ್ತಿಲ್ಲ. ಅದು ಇಂಗ್ಲೀಷ್ನಲ್ಲಿ ಸಂಭಾಷಣೆ ನಡೆಸುವುದು ತಪ್ಪು ಎಂದೂ ಹೇಳುತ್ತಿಲ್ಲ. ಆದರೆ ಆ ಶಿಸ್ತಿನ ಹೆಸರಿನಲ್ಲಿ ಒತ್ತಡ ಹೇರುವುದು ತರವಲ್ಲ. ಸಹಜ ಬೆಳವಣಿಗೆಗೆ ಅಡ್ಡಿ ಮಾಡುವುದು ಅಷ್ಟೊಂದು ಸಮಂಜಸವಲ್ಲ, ಎಂದಷ್ಟೇ ಹೇಳಬಹುದು. ಒಂದು ಮಗು ತನಗೆ ಸಿಕ್ಕಿದ್ದನ್ನು ತನ್ನಿಷ್ಟದಂತೆ ಗಮನಿಸುತ್ತದೆ. ಅದರ ಕೈಗೆ ಬಳಪ ಸಿಕ್ಕರೆ ಸಿಕ್ಕ ಸಿಕ್ಕಂತೆ ಗೀಚುತ್ತದೆ. ಮತ್ತದರಲ್ಲೇ ಸಂಭ್ರಮಿಸುತ್ತದೆ. ಹಾಗೇ, ಆಟಿಕೆಯ ವಸ್ತು ಸಿಕ್ಕಾಗ ಅದನ್ನು ಕಿತ್ತು ನೊಡುತ್ತದೆ. ಪುನಃ ಸರಿಪಡಿಸಲು ಪ್ರಯತ್ನಿಸುತ್ತದೆ. ಕುತೂಹಲ ಅದರ ಸಹಜ ಸ್ವಭಾವ. ಆ ಮೂಲಕವೇ ಅದು ಪ್ರಪಂಚವನ್ನು ಅರ್ಥೈಸಿಕೊಳ್ಳುತ್ತಾ ಬೆಳೆಯುವುದು. ಆದರೆ ಅದರ ಭಾವ/ಬುಧ್ದಿ ಪ್ರಪಂಚವನ್ನು ಅರ್ಥೈಸಿಕೊಳ್ಳದೇ-ಅದನ್ನು ಹತ್ತಿಕ್ಕುವುದು, ಸದಾ ನಮ್ಮ ಕ್ರಿಯೆಗಳಲ್ಲಿ ಅದಕ್ಕಿಂತ ಹೆಚ್ಚಾಗಿ ನಾವಾಡುವ ಮಾತುಗಳ ಮುಖಾಂತರ ಜರುಗುತ್ತಿರುತ್ತದೆ. ಮಗುವಿಗಾಗಿ ಖರೀದಿಸಿದ್ದು ಅದು ಅದರ ವಸ್ತು. ಅದನ್ನದು ಹೇಗಾದರೂ ಬಳಸಿಕೊಳ್ಳಲಿ ಎಂಬ ಉದಾರತೆಯ ಕೊರತೆ ನಮ್ಮೆಲ್ಲರಲ್ಲೂ ಎದ್ದು ಕಾಣುತ್ತದೆ. ಯಾಕೆಂದರೆ ಅದು ಹಾಳು ಮಾಡುತ್ತಿರುತ್ತದೆ. ಪುನಃ ಪುನಃ ನಾವು ಕೊಡಿಸುತ್ತಿರುತ್ತೇವೆ. ಒಂದು ಹಂತದವರೆಗೆ ಇದೆಲ್ಲ ಸಾಮಾನ್ಯ. ಮಗುವಿಗೆ ಮುಖ್ಯವಾಗಿ ಅನಿಸಬೇಕಾದ್ದು ಅದು. ಅದರದ್ದೇ ಅದರ ಮೇಲೆ ಅದಕ್ಕೇ ಸಂಪೂರ್ಣ ಹಕ್ಕಿದೆ. ಅದರ ಸಂಪೂರ್ಣ ಸ್ವಾಮ್ಯ ಅದರದ್ದೇ, ಎಂಬ ಭಾವನೆ ಮೂಡಿದರೆ, ಅದು ಸಂತೋಷದಿಂದ, ಕ್ರಿಯಾಶೀಲತೆಯಿಂದ ಬೆಳೆಯಲು ಸಾಧ್ಯ.
ಪ್ರತಿಯೊಂದು ಸಂದರ್ಭದಲ್ಲೂ ಮಗುವಿಗೆ ‘ಬೇಡ’ ಎಂದೇ ಹೇಳುತ್ತೇವೆ. ಎಂದಾದರೂ ಮಗುವಿಗೆ ‘ಸರಿ ನೀನು ಮಾಡಿದ್ದೇ ಸರಿ, ಹಾಗೇ ಮಾಡು’. ಎಂದು ಹೇಳಿದ ಉದಾಹರಣೆಗಳಿವೆಯೇ? ಯೋಚಿಸಬೇಕು. ಈ ಪ್ರಪಂಚವನ್ನು ಮಗುವೊಂದು ಹೆಚ್ಚಾಗಿ ಭಾಷೆಯ ಮೂಲಕವೇ ಅರ್ಥಮಾಡಿಕೊಳ್ಳುತ್ತ ಸಾಗುತ್ತದೆ. ಹಾಗೆ ಸಾಗುವ ಸಂದರ್ಭಗಳಲ್ಲೆಲ್ಲಾ, ನಿಷೇಧಾತ್ಮಕ ಪದಗಳೇ, ಇಂತಹಾ ವಾಕ್ಯಗಳೇ, ಕಿವಿಗಳ ಮೇಲೆ ಬಿದ್ದು-ಬಿದ್ದು, ಧನಾತ್ಮಕವಾದ ಪದ ಪ್ರಯೋಗವಾಗಲೀ!, ಅಂಥ ಬೆಳೆವಣಿಗೆಯಾಗಲೀ, ಅದರಿಂದ ಸಾಧ್ಯವಾಗಲೆಂದು ನಿರೀಕ್ಷಿಸಲು ಸಾಧ್ಯವೇ?
‘ಡೋಂಟ್ ಜಾನ್’ ಎನ್ನುವುದಕ್ಕೆ ಬದಲಾಗಿ ‘ಎಸ್‍ಜಾನ್’ ಎಂದರೆ ‘ಬೇಡ ಮಗು’ ಎನ್ನುವುದಕ್ಕೆ ಬದಲಾಗಿ ‘ಮಾಡು ಮಗು’ ಎಂದರೆ, ಪ್ರೋತ್ಸಾಹದ ನುಡಿಗಳು ನಮ್ಮಿಂದ ಹೊರಬಂದರೆ, ಅದರ ಕ್ರಿಯೆಗಳಿಗಿಷ್ಟು ಬೆನ್ನು ತಟ್ಟಿದರೆ, ಅದರ ಮುಖದಲ್ಲಿ ಸದಾ ಮಂದಹಾಸ ಮತ್ತು ಅದರ ಚಟುವಟಿಕೆಗಳಿಗಷ್ಟು ಸ್ಪೂರ್ತಿ ದೊರೆತಂತಾಗಿ, ಅದರ ಬೆಳೆವಣಿಗೆ ಸ್ವತಂತ್ರವಾಗಿ, ಕ್ರಿಯಾಶೀವಾಗಿ, ಇರಬಹುದು. ಹಾಗಲ್ಲದೆ ಎಲ್ಲಿ ‘ಡೋಂಟ್’ ಅನ್ನುತ್ತಾರೊ, ‘ಬೇಡ’ ವೆನ್ನುತ್ತಾರೋ ಎಂಬ ಭಯದಲ್ಲೇ ಇದ್ದರೆ ಬೆಳೆವಣಿಗೆ ಕುಂಠಿತವಾಗುವ ಸಾಧ್ಯತೆಯೇ ಹೆಚ್ಚು.
ಜಿದ್ದು ಕೃಷ್ಣಮೂರ್ತಿಯವರು ಹೇಳುವಂತೆ ‘ಭಯ ಮನುಷ್ಯನ ವೈಚಾರಿಕತೆಯನ್ನು ನಾಶಪಡಿಸುತ್ತದೆ. ಅಷ್ಟೆ ಅಲ್ಲ ಮನುಷ್ಯ ಸಂಬಂಧಗಳನ್ನು ಮತ್ತು ಪ್ರೀತಿಯನ್ನು ಕೂಡ’. ಹಾಗಾಗಿ ನಾವು, ಬೇಡ-ಬೇಡ ಎಂದು ಭೀತಿ ಹುಟ್ಟಿಸುವುದಕ್ಕೆ ಬದಲಾಗಿ ಭೇಷ್ ಎಂದು ಪ್ರೀತಿ ಹುಟ್ಟಿಸಿದರೆ ‘ಬೇಂಟ್’ ಬೆಳವಣಿಗೆಗೆ ಮಂಗಳ ಹಾಡಬಹುದು.
ಮಗುವೊಂದು ಮನೆಗೆ ಬೇರೆಯಾರಾದರೂ ಬಂದಾಗಲೇ ಹೆಚ್ಚು ಹಟ-ಗಲಾಟೆ ಮಾಡುವ ಅಂಶವನ್ನು ನೀವು ಗಮನಿಸಿರಬಹುದು. ಕಾರಣ ಅದು ಬೇರೆಯವರು ಬಂದದ್ದಕ್ಕಲ್ಲ. ಬದಲಿಗೆ ತನ್ನನ್ನು ಸರಿಯಾಗಿ ಗಮನಿಸದಿದ್ದಕ್ಕೆ. ನೀವು ನೀವೇ ಮಾತುಕತೆಗೆ ತೊಡಗಿದ್ದಕ್ಕೆ. ಅದು ತಪ್ಪಲು ನೀವು ಹೋದಲ್ಲಿ ಮೊದಲಿಗೆ ಮಗುವನ್ನೆ ಮಾತನಾಡಿಸಿ. ಬೆನ್ನುತಟ್ಟಿ ನೋಡಿ. ಅನಂತರ ಅದರ ರಗಳೆ-ಗಲಾಟೆ ಎಷ್ಟಿರುತ್ತದೆ ಎಂದು. ಬಹುತೇಕ ಸಂದರ್ಭಗಳಲ್ಲಿ ಎಲ್ಲಾ ಮಾಮೂಲಿಯಾಗಿ ಸಹಜವಾಗಿ ಶಾಂತವಾಗಿ ಇದ್ದು ಬಿಡುತ್ತದೆ. ಇದೆಲ್ಲ ಸಾಧ್ಯವಾಗುವುದು ನಾವು ಸೂಕ್ಷ್ಮವಾಗಿ ಈ ಬದುಕನ್ನು ಗಮನಿಸಿದಾಗ ಮಾತ್ರ. ‘ಬೇಂಟ್-ಬೇಡ-ಡೋಂಟ್’ ಬದಲಿಗೆ ಭೇಷ್!, ಶಬ್ದ ಪ್ರಯೋಗವಾಗಲಿ. ‘ಗದರಿ’ ಸಾಧಿಸುವುದು ಸಾಧುವಲ್ಲ. ಡಾ.ಜಿ.ಎಸ್.ಶಿವರುದ್ರಪ್ಪ ನವರ ಕವಿತೆ ‘ಪ್ರೀತಿ ಇಲ್ಲದ ಮೇಲೆ-ಹೂವು ಅರಳೀತು ಹೇಗೆ? ಹಾಗೇ ಮಗು ಬೆಳೆದೀತು ಹೇಗೆ?.
ರವೀಂದ್ರ ಭಟ್ ಕುಳಿಬೀಡು.
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ
ಯುವ ಪೀಳಿಗೆ ಸ್ಪರ್ಧಾತ್ಮಕ ಯುಗದಲ್ಲಿರುವುದರಿಂದ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೂ ಉತ್ಕೃಷ್ಟತೆಯನ್ನು ಸಾಧಿಸಿದಾಗ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದು ಉದಯವಾಣಿ ಸಮೂಹ ಸಂಪಾದಕ ರವಿ ಹೆಗಡೆ ತಿಳಿಸಿದರು.
ನಗರದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಎಸ್.ಎಸ್.ಎಲ್.ಸಿ, ಪಿ.ಯು.ಸಿ ನಂತರದ ದಿನಗಳಲ್ಲಿ ಹಾಗೂ ಜೀವನದ ತಿರುವುಗಳಲ್ಲಿ ಕಷ್ಟಗಳು ಎದುರಾಗುತ್ತದೆ. ಆಗ ಕಷ್ಟಗಳನ್ನು ಎದುರಿಸುತ್ತಾ ಕುದಿಯುವ ನೀರಿಗೆ ಬಿದ್ದ ಕಾಫಿ ಬೀಜ ಹೊಸ ಪೇಯದ ಸೃಷ್ಟಿಗೆ ಕಾರಣವಾಗು ರೀತಿಯಲ್ಲಿ ಸಮಾಜದಲ್ಲಿ ಹೊಸ ಹರಿಕಾರರಾಗಿ ರೂಪುಗೊಳ್ಳಬೇಕು ಎಂದು ಪ್ರೇರಣಾದಾಯಕವಾಗಿ ಹೇಳಿದರು.
ಹಿರಿಯ ಪತ್ರಕರ್ತ ಈಶ್ವರ ದೈತೋಟ ಮಾತನಾಡಿ, ಪ್ರತಿಯೊಬ್ಬ ನಾಗರೀಕರಿಗೂ ಸಮಾಜದ ಆಗುಹೋಗುಗಳ ಬಗ್ಗೆ ಅರಿವು ಹಾಗೂ ಪಾಲ್ಗೊಳ್ಳುವಿಕೆಯಿರಬೇಕು. ವಿದ್ಯಾವಂತರು, ಸುಶಿಕ್ಷಿತರು, ಅನುಕೂಲಸ್ಥರು ಸಮಾಜದಿಂದ ಪಡೆದ ಋಣವನ್ನು ತೀರಿಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುವುದು ಹಾಗೂ ಸಾಧಕರನ್ನು ಸನ್ಮಾನಿಸುವ ಕಾರ್ಯ ಇತರರಿಗೆ ಪ್ರೇರಕ ಮತ್ತು ಸ್ಫೂರ್ತಿದಾಯಕ. ನಮ್ಮ ತಾಲ್ಲೂಕಿನಲ್ಲಿ ಹಲವಾರು ಸಾಧಕರಿದ್ದಾರೆ ಎಂಬ ವಿಷಯವೇ ಇಂದಿನ ಪೀಳಿಗೆಗೆ ಪ್ರೇರಣದಾಯಕ. ಪುರಸ್ಕೃತಗೊಂಡ ತಾಲ್ಲೂಕಿನ ಪ್ರತಿಭಾವಂತರು ಮುಂದೆ ಸಾಧಕರಾಗಿ ಹುಟ್ಟೂರಿನ ಕೀರ್ತಿಯನ್ನು ಎಲ್ಲೆಡೆ ಹಬ್ಬಿಸುವಂತಾಗಲಿ. ಜಾತಿ ಬೇಧವಿಲ್ಲದೆ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪುರಸ್ಕರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಟ್ರಸ್ಟ್ನ ಈವರೆಗಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಸೂರ್ಯನಾರಾಯಣರಾವ್, ಎಚ್.ವಿ.ರಾಮಚಂದ್ರರಾವ್, ನಾರಾಯಣಾಚಾರ್, ವಿ.ಸೀತಾಲಕ್ಷ್ಮಿ, ಪ್ರಕಾಶ್ಚಂದ್ರ ಕೃಷ್ಣಮೂರ್ತಿ ಅವರನ್ನು ಗೌರವಿಸಲಾಯಿತು.
ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ಶಿಕ್ಷಣದಲ್ಲಿ ತಾಲ್ಲೂಕಿನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ 23 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ಡಿ.ಟಿ.ಸತ್ಯನಾರಾಯಣರಾವ್, ಹಿರಿಯ ಪತ್ರಕರ್ತರಾದ ಈಶ್ವರ ದೈತೋಟ, ರವಿ ಹೆಗಡೆ. ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ, ಉದ್ಯಮಿ ಕ್ರಮದಾತಿ ಶ್ರೀಧರ್, ಅಖಿಲಭಾರತ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ವಾಸುದೇವರಾವ್, ಸ್ತ್ರೀರೋಗತಜ್ಞ ಡಾ.ಐ.ಎಸ್.ರಾವ್, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಪಟೇಲ್ ಪಾಂಡು, ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ವಿ.ಕೃಷ್ಣ, ಶೋಭಾರಾಣಿ, ಶ್ರೀಕಾಂತ್, ಕೃಷ್ಣಮೂರ್ತಿ, ಸತೀಶ್, ಎಸ್.ಆರ್.ಸಕಲೇಶ್ಕುಮಾರ್, ಮಾಧವರಾವ್, ಎಚ್.ವಿ.ನಾಗೇಂದ್ರ, ರಾಮಮೋಹನಶಾಸ್ತ್ರಿ ಮತ್ತಿತರರು ಹಾಜರಿದ್ದರು.
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರವಿ ಹೆಗಡೆ ಅವರ ಪರಿಚಯ
ರವಿ ಹೆಗಡೆ ಅವರು ಉದಯವಾಣಿ ಸಮೂಹ ಸಂಪಾದಕರು. ಅಪಾರ ಪತ್ರಿಕೋಧ್ಯಮದ ಜ್ಞಾನವುಳ್ಳ ಇವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣ, ತಂತ್ರಜ್ಞಾನ, ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮುಂತಾದ ವಿಷಗಳಲ್ಲಿ ಆಸಕ್ತಿಯುಳ್ಳವರು.
2012 ರಲ್ಲಿ ನಡೆದ 21ನೇ ಏಷಿಯನ್ ಶೃಂಗಸಭೆ ಮತ್ತು ಇಂಡೋ ಈಸ್ಟ್ ಏಷಿಯನ್ ಶೃಂಗಸಭೆಯಲ್ಲಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಮಾಧ್ಯಮ ನಿಯೋಗದ ಭಾಗವಾಗಿ ಕಾಂಬೋಡಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ.
ತ್ರೀಡಿ ತಂತ್ರಜಾನದಲ್ಲಿ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಚಲನಚಿತ್ರ ನಿಯಕಾಲಿಕ (ರೂಪತಾರ) ಹೊರತಂದ ಹೆಗ್ಗಳಿಕೆ ಇವರದ್ದು.
2011 ರಲ್ಲಿ ಉದಯವಾಣಿ ಸೇರುವ ಮುನ್ನ ಅವರು ‘ಸುವರ್ಣ ನ್ಯೂಸ್ 24 × 7’ ಟಿವಿ ಚಾನೆಲ್ ನ ಸಂಪಾದಕ ರಾಗಿದ್ದರು, ಕನ್ನಡ ಪ್ರಭಾ ಪತ್ರಿಕೆಯ ಕಾರ್ಯಕಾರಿ ಸಂಪಾದಕ ರಾಗಿದ್ದರು. ಅವರು ತನ್ನ ಪಾತ್ರ ಮತ್ತು ವಿಷಯವನ್ನು ಬಳಕೆಯ ನಿಯಮಗಳು ಪತ್ರಿಕೆ ಹೊಸ ಕಕ್ಷೆಯಲ್ಲಿ ನೀಡಲು ತಂತ್ರಜ್ಞಾನದಲ್ಲಿ ತನ್ನ ಜ್ಞಾನವನ್ನು . ಇವರು ನಿರಂತರವಾಗಿ ತಂತ್ರಜ್ಞಾನದಲ್ಲಿ ನೂತನ ಆವಿಷ್ಕಾರಗಳ ಬಗ್ಗೆ ಸ್ವತಃ ತಿಳಿದುಕೊಳ್ಳುತ್ತಾ, ತನ್ನ ಕಿರಿಯ ಸಹೋದ್ಯೋಗಿಗಳನ್ನೂ ಈ ನಿಟ್ಟಿನಲ್ಲಿ ಹೊಸತನಕ್ಕೆ ತೆರೆದುಕೊಳ್ಳಲು ಪ್ರೇರೇಪಿಸುವವರು. ಮ್ಯಾಜಿಕ್ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ.
http://www.ravihegde.com/
ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಈಶ್ವರ ದೈತೋಟ ರವರ ಪರಿಚಯ
ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಶನ್‌ನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ ಹೊಂದಿದ್ದು, ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ ಮತ್ತು ಮೀಡಿಯಾ ಮ್ಯಾನೇಜ್ಮೆಂಟ್‌ನಲ್ಲಿಯೂ ಅಪಾರ ಸಾಧನೆಗಳನ್ನು ದಾಖಲಿಸಿರುವ ವಿಶಿಷ್ಟ ಪತ್ರಕರ್ತ ಈಶ್ವರದೈತೋಟ, ಯು.ಜಿ.ಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವೆಲ್ಮೆಂಟ್ ಕನ್ಸಲ್ಟೆಂಟ್ ಎಂದು ಮನ್ನಣೆ ಪಡೆದಿದ್ದಾರೆ.
೨೦೧೫ ರಲ್ಲಿ ಅವರಿಗೆ ಪ್ರತಿಷ್ಠಿತ ಟಿಎಸ್‌ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗು ೧ ಲಕ್ಷರೂ.ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿದೆ. ೨೦೦೮ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿಯೂ ಅವರಿಗೆ ಲಭ್ಯವಾಗಿತ್ತು. ಹಾಗೆಯೇ ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (೨೦೦೬) ಹಾಗು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಅತ್ಯುತ್ತಮ ಕನ್ನಡ ಪುಸ್ತಕ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟದಿಂದ ಅತ್ಯುತ್ತಮ ಅಭ್ಯುದಯ ವರದಿ ಪ್ರಶಸ್ತಿ ಇತ್ಯಾದಿ ಪ್ರೊಫೆಶನಲ್ ಗೌರವಗಳಿಗೆ ಭಾಜನರಾಗಿದ್ದಾರೆ. ೨೦೦೮ ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್ ಅವರನ್ನು ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆಅತಿದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತುಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ ( ವೀಕ್ಷಕರಆಯ್ಕೆ) ಎಂಬೆರಡು ಪ್ರಶಸ್ತಿಗಳನ್ನೂ ನೀಡಿ ಸನ್ಮಾನಿಸಿದೆ.
ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆಯನ್ನೂ ಹೊಂದಿರುವ ಅವರು ೧೯೯೧ರಿಂದ ೨೦೧೧ ರವರೆಗೆ ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಬೆನೆಟ್‌ಕೋಲ್ಮನ್ ಗುಂಪಿನ ಟೈಮ್ಸ್‌ಆಫ್‌ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್‌ದೈನಿಕ ಸಂಯುಕ್ತಕರ್ನಾಟಕದ ಚೀಫ್‌ಎಡಿಟರ್, ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯಕರ್ನಾಟಕದ ಫೌಂಡರ್‌ಚೀಫ್ ಎಡಿಟರ್ ಹಾಗೂ ನೂತನ ವಾರಪತ್ರಿಕೆ ಚೀಫ್‌ಎಡಿಟರ್ ಆಗಿ ಹೊಣೆಹೊತ್ತವರು.
ಡೈಲಿ ಜರ್ನಲಿಸಂನಲ್ಲಿ ದಿನಕ್ಕೊಂದು ವಿಶೇಷ ಪುರವಣಿ ಮತ್ತು ಪುಟಾಣಿಗಳಿಗೆ ಮತ್ತು ಮಹಿಳೆಯರಿಗಾಗಿ ವೀಕ್ಲಿ ಸಪ್ಲಿಮೆಂಟ್ಸ್-ಹಾಗೆಯೇ ಕೃಷಿ, ಯುವಜನತೆಗಾಗಿ ವಿಶೇಷ ಪುರವಣಿಗಳೆಂಬ ವೈಶಿಷ್ಟ್ಯವನ್ನು ಮೊದಲಬಾರಿಗೆ ಅಳವಡಿಸಿದವರು. ಅಲ್ಲದೆ, ಭಾರತೀಯ ಪತ್ರಿಕೋದ್ಯಮದಲ್ಲಿ ಕುಗ್ರಾಮ ಗುರುತಿಸಿ ಎಂಬ ಡೆವೆಲಪ್‌ಮೆಂಟ್‌ಜರ್ನಲಿಸಂ ಎಕ್ಸಪರಿಮೆಂಟ್ ನೇತೃತ್ವ(೧೯೮೧-–೮೭) ವಹಿಸುವುದರೊಂದಿಗೆಮುದ್ರಣ ಮಾಧ್ಯಮದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.
ಎರಡೂವರೆ ದಶಕಗಳಿಂದ ಅವರ ಅಂಕಣಗಳು – ಅಂತರದೃಷ್ಟಿ, ಅನುಭಾವ ಮತ್ತು ಚಿಣ್ಣಚಿಣ್ಣ ಪಾಠ ಮತ್ತು ಮಾಧ್ಯಮ ಭ್ರಮರಿ (ಉದಯವಾಣಿ, ವಿಜಯಕರ್ನಾಟಕ, ಸಂಯುಕ್ತಕರ್ನಾಟಕ, ಟೈಮ್ಸ್‌ಆಫ್‌ಇಂಡಿಯಾ-ಕನ್ನಡ, ವಿಜಯವಾಣಿ ಹಾಗೂ ಹೊಸದಿಗಂತ) ಕನ್ನಡ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಣೆ ಆಗುತ್ತಿವೆ. ೮ ವರ್ಷ ಡಿಡಿ ಕನ್ನಡ ನ್ಯೂಸ್ ರೀಡರ್ ಆಗಿದ್ದುದಲ್ಲದೆ, ಆಕಾಶವಾಣಿ, ಉದಯ, ದೂರದರ್ಶನ ಮತ್ತಿತರ ಟಿವಿ, ರೇಡಿಯೋಗಳಲ್ಲಿ ಪ್ರಚಲಿತ ವಿಷಯಗಳ ಬಗ್ಗೆ ೨,೦೦೦ ಕ್ಕೂ ಹೆಚ್ಚು ವಿಭಿನ್ನಕಾರ್ಯಕ್ರಮಗಳನ್ನು ನಡೆಸಿ (ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ) ಮನೆಮಾತಾಗಿದ್ದಾರೆ. ಸಮಯ ಟಿವಿಯಲ್ಲಿ ಪ್ರೈಮ್‌ಟೈಮ್ ಬುಲೆಟಿನ್ ಗೆಸ್ಟ್ ಆಂಕರ್ ಕೂಡಾ ಆಗಿದ್ದರು. ಸದ್ಯ, ಪ್ರಜಾಟಿವಿಯಲ್ಲಿ ಚದುರಂಗ ಎಂಬ ವೀಕ್ಲಿ ಸಂದರ್ಶನ ಮತ್ತಿತರ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.
ವಾಯ್ಸ್‌ಆಫ್‌ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‌ನ್ಯಾಶನಲ್ ಜರ್ನಲ್‌ಗಳಿಗೂ ಲೇಖನ ಬರೆದಿದ್ದಾರೆ.
ಜಗತ್ತಿನ ಐದು ಭೂಖಂಡಗಳಿಗೆ ಭೇಟಿ ನೀಡಿರುವ ದೈತೋಟ, ಪ್ರಧಾನಿಗಳಾದರಾಜೀವ್‌ಗಾಂಧಿ, ವಿ.ಪಿ. ಸಿಂಗ್ ಮತ್ತು ಪಿ.ವಿ. ನರಸಿಂಹರಾವ್ ಜೊತೆಗೆ ಸ್ವೀಡನ್, ರಶಿಯಾ ಮತ್ತು ದಕ್ಷಿಣಅಮೆರಿಕಾ ಪ್ರವಾಸ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾಕುಮಾರತುಂಗೆ, ಫ್ರಾನ್ಸ್‌ನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟೆಕೋಲ್, ರಶಿಯಾದ ಕೊಸಿಗಿನ್, ಸ್ವೀಡನಿನ ಒಲೋಫ್ ಪಾಮೆ ಮುಂತಾಗಿ ಅಂತಾರಾಷ್ಟ್ರೀಯ ಪ್ರಮುಖರನ್ನೂ ಭೇಟಿಯಾಗಿರುವುದಲ್ಲದೆ, ರಿಯೋ ಭೂಶೃಂಗದಲ್ಲಿ ಅಮೇರಿಕದ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್‌ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದ ಅನುಭವವೂ ಅವರಿಗಿದೆ.
ಮೈಸೂರು ಯೂನಿವರ್ಸಿಟಿ ಜರ್ನಲಿಸಂ ಎಂ.ಎ., (೧೯೭೩) ಫಿಲಿಪ್ಪೀನ್ಸ್‌ನ ಪ್ರೆಸ್ ಫೌಂಡೇಶನ್‌ಆಫ್ ಏಶಿಯಾದಲ್ಲಿ ಸ್ನಾತಕೋತ್ತರ ಡೆವಲಪ್‌ಮೆಂಟ್ ಜರ್ನಲಿಸಂ ಶಿಕ್ಷಣ (೧೯೭೯–-೮೦)ಪಡೆದವರು. ಆಸ್ಟ್ರೇಲಿಯಾದ ವಿಕ್ಟೋರಿಯ ಮತ್ತು ನ್ಯೂಸೌತ್ ವೇಲ್ಸ್ ರಾಜ್ಯಗಳ ಕಮ್ಯುನಿಟಿ ನ್ಯೂಸ್‌ಪೇಪರ್‌ಗಳಲ್ಲಿ ತರಬೇತಿ ಪಡೆದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಅಭ್ಯುದಯ ಸಂಬಂಧಿತ ಭಾಷಣ, ಸಮಾಲೋಚನೆಗಳಲ್ಲಿ ಭಾಗಿಯಾಗಿದ್ದಾರೆ.
ಬ್ರಿಟಿಷ್ ಸರ್ಕಾರದಿಂದ ಆರ್ಥಿಕ ಮತ್ತು ಪರಿಸರ ಸಂಬಂಧಿತವಾಗಿ (೧೯೮೮,೯೧,೯೭ ಮತ್ತು ೯೮ ರಲ್ಲಿ) ಮತ್ತು ಯು.ಎಸ್.ನಿಂದ ಕಾನ್‌ಫ್ಲಿಕ್ಟ್ ರೆಸೊಲ್ಯೂಷನ್ ಮತ್ತು ಮೀಡಿಯಾ ಸ್ಟಡೀಸ್‌ಗೆ (೧೯೯೨ ಮತ್ತು ೧೯೯೮) ಹಾಗೂ ೨೦೦೮ ರಲ್ಲಿ ಪ್ರವಾಸೋದ್ದಿಮೆ ಪ್ರವರ್ಧನೆಗಾಗಿ ಯುರೋಪ್‌ಗೆ ಆಹ್ವಾನಿತರಾಗಿದ್ದರು.
ದೂರದರ್ಶನದಲ್ಲಿ ನ್ಯೂಸ್‌ರೀಡರ್ ಆಗಿ ೮ ವರ್ಷ ಸೇವೆ ಸಲ್ಲಿಸಿರುವ ದೈತೋಟರ ಮಂಥನ ಸೀರಿಯಲ್ (೫ ವರ್ಷದೂರದರ್ಶನ) ಪಂಚಾಯ್ತಿಕಟ್ಟೆ- ಡೆವಲಪ್‌ಮೆಂಟ್ ಡಿಬೇಟ್ (ಉದಯ ನ್ಯೂಸ್‌ಚಾನೆಲ್ ೫ ವರ್ಷ) ಹಾಗೂ ಸಂವೇದನೆ -ಶೇರಿಂಗ್ ವಿದ್‌ಕನ್ಸರ್ನ್‌ಇಂಟರ್ ವ್ಯೂ (ಉದಯಚಾನೆಲ್‌ನಲ್ಲಿ ವಾರಕ್ಕೆಐದು ದಿನ ೩ ವರ್ಷ) ಜನಪ್ರಿಯವಾಗಿದ್ದವು. ಹಾಲಿ, ಪ್ರಜಾಟೀವಿಯಲ್ಲಿಚದುರಂಗ ವೀಕ್ಲಿ ವರ್ಬಲ್ ವಾರ್ ಸಂದರ್ಶನ ಶುರು ಮಾಡಿದ್ದಾರೆ.
ಅಭ್ಯುದಯ ಪತ್ರಿಕೋದ್ಯಮ ಅವರ ನಿತ್ಯಜಪ. ಅಭ್ಯುದಯ ಸಂಬಂಧಿತ ಅನೇಕಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ ಅವರಿಗಿದೆ. ಏಶಿಯನ್ ಮೀಡಿಯ ಬ್ಯಾರೋಮೀಟರ್ ಎಂಬ ಜರ್ಮನಿಯಎಫ್.ಇ.ಎಸ್. ಸಂಸ್ಥೆ ಪ್ರಕಾಶಿತ ೨೦೦೯ ಮತ್ತು ೧೪ ರ ಸಂಶೋಧನಾ ಪ್ರಕಟಣೆಗಳ (ಇಂಗ್ಲೀಷ್) ಸಂಪಾದಕೀಯ ಹೊಣೆಯಲ್ಲಿ ಅವರು ತೊಡಗಿಸಿಕೊಂಡಿದ್ದರು.
ಅವರು ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ ೭೦ ಕ್ಕೂ ಹೆಚ್ಚು. ದಿ ಎಯ್ಟೀಂತ್ ಎಲಿಫೆಂಟ್, (ಇಂಗ್ಲೀಷ್), ಮಾಧ್ಯಮ ಬ್ರಹ್ಮಾಂಡ, ವಿಧಾನಮಂಡ ವರದಿಗಾರಿಕೆ, ಅಭ್ಯುದಯ ಪತ್ರಿಕೋದ್ಯಮ, ನಾಡು ನುಡಿ, ಸಂಸ್ಕೃತಿ ಮತ್ತು ಫ್ಯಾಶನ್, ಪ್ರೆಸ್‌ಅಂಡ್ ಪೊಲೀಸ್, ಡೆವೆಲಪ್‌ಮೆಂಟ್ ಆಫ್ ಜರ್ನಲಿಸಂ ಇನ್ ಸೌತ್‌ಕೆನರಾ (ಇಂಗ್ಲೀಷ್-ಮೈಸೂರು ವಿವಿ) ಅಂತರದೃಷ್ಟಿ ಪ್ರಮುಖವಾದವು. ಮಾಧ್ಯಮ ಸಂಬಂಧಿತ ಎರಡು ಹೊಸ ಪುಸ್ತಕಗಳು ಪ್ರಕಟಣಾ ಹಂತದಲ್ಲಿವೆ. ಭಾರತದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ (ಎ ಮ್ಯಾನಿಫೆಸ್ಟೋ ಫಾರ್‌ಚೇಂಜ್) ಝಕೀರ್ ಹುಸೈನ್ ಅವರ ಪುಸ್ತಕಗಳನ್ನಲ್ಲದೆ ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ, ಸಬ್ಮೆರೀನ್ ಆಗಿ – ಎಂದು ಅನೇಕ ಪುಸ್ತಕಗಳನ್ನು ಕನ್ನಡೀಕರಿಸಿದ್ದಾರೆ. ೨೦ ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳ ಸಹ – ಲೇಖಕರಾಗಿಯೂ ದುಡಿದಿದ್ದಾರೆ.
ರಮೇಶ್ ರಾಮನಾಥನ್ ಅವರ ಜನಾಗ್ರಹದ ಸಹಭಾಗಿತ್ವ ಸರ್ಕಾರ ಚಳವಳಿಯ ಮೀಡಿಯಾ ಅಡ್‌ವೈಸರ್ ಹಾಗೂ ಜಾಗತಿಕ ದಾಖಲೆ ಮಾಡಿರುವ ರೋಹಿಣಿ ನಿಲೇಕಣಿಯವರ ಮಕ್ಕಳ ಪುಸ್ತಕ ಪ್ರಕಟಣಾ ಸಂಸ್ಥೆ – ಪ್ರಥಮ್ ಟ್ರಸ್ಟಿನ ಕಂಟೆಂಟ್‌ಕನ್ಸಲ್ಟೆಂಟ್ ಆಗಿ ತಲಾಮೂರು ವರ್ಷ ವಾಲೆಂಟಿಯರ್ ಆಗಿ ದುಡಿದಿದ್ದಾರೆ.
ಯೂನಿವರ್ಸಿಟಿ ಗ್ರಾಂಟ್‌ಕಮೀಶನ್‌ನ ಡೆವೆಲಪ್‌ಮೆಂಟ್‌ಕಮ್ಯುನಿಕೇಶನ್ ಕನ್ಸಲ್ಟೆಂಟ್ ಆಗಿ ಯು.ಪಿ.ಇ, ಮತ್ತು ಯೂನಿಸೆಫ್‌ಜರ್ನಲಿಸಂ ಟ್ರೈನಿಂಗ್‌ಗೆ ಎರಡು ವರ್ಷಗಳಿಂದ ಸಂಪನ್ಮೂಲ ವ್ಯಕ್ತಿಯಾಗಿಯೂ ಕೊಡುಗೆ ಕೊಡುತ್ತಿದ್ದಾರೆ. ಪಾರ್ಟಿಸಿಪೇಟಿವ್ ಗವರ್ನೆನ್ಸ್ ಸಂಬಂಧಿತವಾಗಿ ಹಲವು ಇಂಗ್ಲೀಷ್ ಮತ್ತುಕನ್ನಡ ಪುಸ್ತಕಗಳ ಪ್ರಕಟಣೆಗಳ ಸಂಪಾದಕೀಯತಂಡದಲ್ಲಿ ಕೆಲಸ ಮಾಡಿದ್ದಾರೆ. ಹೆಸರಾಂತ ಪರಿಸತಜ್ಞ ಡಾ. ಅನಿಲ್ ಅಗರ್‌ವಾಲ್ ಅವರ ಹೊಸದಿಲ್ಲಿಯ ಸೆಂಟರ್ ಫಾರ್ ಸಯನ್ಸ್ ಅಂಡ್ ಎನ್‌ವಯರ್ನ್‌ಮೆಂಟ್ ಸಂಸ್ಥೆಯ ಹಲವು ಪ್ರಕಟಣೆಗಳಿಗೆ ಅವರು ಕೊಡುಗೆ ನೀಡಿದ್ದಾರೆ.
ಗ್ರೇಟ್‌ಈಸ್ಟರ್ನ್ ಮ್ಯಾನೇಜ್ಮೆಂಟ್ ಸ್ಕೂಲ್, ಬ್ರಿಟನಿನ ಡಬ್ಲುಎಲ್ಸಿ ಮೀಡಿಯಾ ಸ್ಕೂಲ್, ಜಿಸಿಸಿ ಯೂನಿವರ್ಸಿಟಿ, ಸುರಾನಾ ಇನ್ಸಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್, ಬೆಂಗಳೂರು ಯೂನಿವರ್ಸಿಟಿ, ಮೀಡಿಯಾ ಇನ್‌ಫಾರ್ಮೇಶನ್ ಅಂಡ್ ಕಮ್ಯುನಿಕೇಶನ್ ಸೆಂಟರ್ ಆಫ್ ಇಂಡಿಯಾ ಮುಂತಾಗಿ ಹತ್ತಾರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಮೀಡಿಯಾ ಮ್ಯಾನೇಜ್‌ಮೆಂಟ್, ಡೆವೆಲಪ್‌ಮೆಂಟ್ ಕಮ್ಯುನಿಕೇಶನ್, ರಿಪೋರ್ಟಿಂಗ್, ಮೀಡಿಯಾ ಬಿಸಿನೆಸ್, ಎಥಿಕ್ಸ್ ಅಂಡ್ ಮೀಡಿಯಾ ಲಾ ಇತ್ಯಾದಿ ವಿಷಯಗಳ ವಿಸಿಟಿಂಗ್ ಫಾಕಲ್ಟಿ ಅಲ್ಲದೆ, ಮಣಿಪಾಲದ ಮಾಹೆ ಯೂನಿವರ್ಸಿಟಿ, ಬೆಂಗಳೂರು ಮತ್ತು ಮೈಸೂರು ಯೂನಿವರ್ಸಿಟಿಗಳ ಕಮ್ಯುನಿಕೇಶನ್ ಮತ್ತುಜರ್ನಲಿಸಂ ಅಧ್ಯಯನದ ಬೋರ್ಡ್‌ಆಫ್ ಸ್ಟಡೀಸ್ ಸದಸ್ಯರಾಗಿಯೂ, ಸಿಲೆಬಸ್ ರಚನೆಗೂ ಕೊಡುಗೆ ಕೊಟ್ಟಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಸಾಧಕರಿಗೆ ಸನ್ಮಾನ
ಸಾಧಕರು ಎಲ್ಲೇ ಇದ್ದು ಸಾಧನೆ ಮಾಡಿದರೂ ಅವರ ಹುಟ್ಟೂರು ಸಂಭ್ರಮಿಸುತ್ತದೆ. ಹುಟ್ಟೂರಿನೊಂದಿಗೆ ತಳುಕು ಹಾಕಿಕೊಂಡ ಅವರ ಹೆಸರಿನಿಂದ ‘ನಮ್ಮ ಊರಿನವರು ಈ ಸಾಧನೆ ಮಾಡಿದ್ದಾರೆ’ ಎಂದು ಊರಿನವರು ಹೆಮ್ಮೆ ಪಡುತ್ತಾರೆ. ಈ ರೀತಿ ಊರಿನ ನಂಟನ್ನು ಹೆಸರಲ್ಲಿ ಇಟ್ಟುಕೊಂಡು ದೂರದೂರುಗಳಲ್ಲಿದ್ದುಕೊಂಡೇ ಸಾಧನೆ ಮಾಡಿರುವವರನ್ನು ಹುಟ್ಟೂರಿಗೆ ಕರೆಸಿ ಗೌರವಿಸುವ ಕೆಲಸ ಅಲ್ಲಲ್ಲಿ ನಡೆಯುತ್ತದೆ.
ಶಿಡ್ಲಘಟ್ಟದಲ್ಲಿಯೂ ಈ ರೀತಿಯ ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಹುಟ್ಟಿದ ಊರಿನ ಘನತೆ ಗೌರವವನ್ನು ಹೆಚ್ಚಿಸಿರುವವರನ್ನು ಕರೆಸಿ ಇಂದು ಗೌರವಿಸಲಾಗುತ್ತಿದೆ. ಈ ಸಾಧಕರನ್ನು ಗೌರವಿಸುತ್ತಿರುವವರು ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಜನಿಸಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಸೂರ್ಯನಾರಾಯಣರಾವ್, ಎಚ್.ವಿ.ರಾಮಚಂದ್ರರಾವ್, ನಾರಾಯಣಾಚಾರ್, ವಿ.ಸೀತಾಲಕ್ಷ್ಮಿ, ಪ್ರಕಾಶ್ಚಂದ್ರ ಕೃಷ್ಣಮೂರ್ತಿ ಅವರನ್ನು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಗೌರವಿಸುತ್ತಿದ್ದಾರೆ.
ಡಾ.ಸೂರ್ಯನಾರಾಯಣರಾವ್: ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಎನ್.ಪಿ.ನಾಗೇಶ ರಾವ್ ಮತ್ತು ಕೃಷ್ಣವೇಣಮ್ಮ ದಂಪತಿಗಳ ಮಗ 79 ವರ್ಷ ವಯಸ್ಸಿನ ಡಾ.ಸೂರ್ಯನಾರಾಯಣರಾವ್, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಬೆಂಗಳೂರಿನ ಪದ್ಮಶ್ರೀ ವಿದ್ಯಾಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇಂಗ್ಲೆಂಡಿನ ಲಿವರ್ಪೂಲ್ನಲ್ಲಿಯೂ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. ವರ್ಲ್ಡ್ ಬ್ಯಾಂಕ್ ಡ್ಯಾನಿಡಾ, ಯೂನಿಸೆಫ್, ಫೋರ್ಡ್ ಫೌಂಡೇಶನ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ತಾಂತ್ರಿಕ ಸಲಹೆಗಾರರು. ಬಯೋ ಸ್ಟಾಟಿಕ್ಸ್ ವಿಭಾಗದಲ್ಲಿ ಇವರು ನೀಡಿರುವ ಕೊಡುಗೆಯನ್ನು ಸ್ಮರಿಸಿ ಉತ್ತರಪ್ರದೇಶದ ಹಿಂದೂ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಸೊಸೈಟಿ ಫಾರ್ ಮೆಡಿಕಲ್ ಸ್ಟಾಟಿಸ್ಟಿಕ್ಸ್ ಸಂಸ್ಥೆಗಳು ಗೌರವಿಸಿವೆ. ಇವರು ಹಲವಾರು ವೈಜ್ಞಾನಿಕ ಲೇಖನಗಳು ಹಾಗೂ ಪುಸ್ತಕಗಳನ್ನು ರಚಿಸಿದ್ದಾರೆ.
ಎಚ್.ವಿ.ರಾಮಚಂದ್ರರಾವ್: ಶಿಡ್ಲಘಟ್ಟ ತಾಲ್ಲೂಕಿನ ಹಿತ್ತಲಹಳ್ಳಿ ಗ್ರಾಮದ ಶ್ಯಾನುಬೋಗರ ಕುಟುಂಬದಲ್ಲಿ ಜನಿಸಿದ 85 ವರ್ಷ ವಯಸ್ಸಿನ ಎಚ್.ವಿ.ರಾಮಚಂದ್ರರಾವ್, ಎಸ್ಎಸ್ಎಲ್ಸಿವರೆಗೆ ಓದಿದ್ದು ಚಿಕ್ಕಬಳ್ಳಾಪುರದಲ್ಲಿ. ಮುಂದೆ ಕಾಲೇಜಿನಲ್ಲಿ ಓದಲು ಅವಕಾಶವಿಲ್ಲದೆ ಆಗಿನ ಮೈಸೂರು ರಿಯಾಸತ್ ಹಿಂದಿ ಪ್ರಚಾರ ಸಮಿತಿಯಲ್ಲಿ 1949ರಲ್ಲಿ ರಾಷ್ಟ್ರ ಭಾಷಾ ವಿಶಾರದ ಪಾಸು ಮಾಡಿ ಶಿಡ್ಲಘಟ್ಟದ ಬಿ.ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ ಅಧ್ಯಾಪಕರಾದರು. ಬನಾರಸ್ ಹಿಂದಿ ವಿವಿಯ ಅಂಚೆ ಶಿಕ್ಷಣದ ಮೂಲಕ ಬಿ.ಎ ಪದವಿ, ನಂತರ ಹಿಂದಿ ಎಂ.ಎ ಮುಗಿಸಿ 1962 ರಲ್ಲಿ ಆಕಾಶವಾಣಿಗೆ ಪ್ರೋಗ್ರಾಂ ಎಕ್ಸಿಕ್ಯೂಟಿವ್ ಆಗಿ ಆಯ್ಕೆಯಾದರು. ಮುಂಬಯಿ, ಧಾರವಾಡ, ಗುಲ್ಬರ್ಗಾ, ಮಿಜೋರಾಮ್, ವಿಶಾಖಪಟ್ಟಣ, ಮಂಗಳೂರು, ಅಹ್ಮದಾಬಾದ್, ಬರೋಡಾ, ದೆಹಲಿ ಮತ್ತು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಹಲವಾರು ಹಿಂದಿ ಮತ್ತು ಕನ್ನಡ ಅನುವಾದಗಳನ್ನು ಮಾಡಿದ್ದು, ಕನ್ನಡ, ಹಿಂದಿ ಮತ್ತು ಸಂಸ್ಕೃತದಲ್ಲಿ ಕೃತಿಗಳನ್ನು ರಚಿಸಿದ್ದಾರೆ. ತುಳಸಿ ರಾಮಾಯಣದ ಮೇಲೆ ಬರೆದ ‘ರಾಮಚರಿತ ಮಾನಸ ಒಂದು ರಸಯಾತ್ರೆ’, ಗ್ರಾಮಾಯಣ, ಸತ್ಯಾಗ್ರಹ ಮತ್ತು ಇತರ ಕಥೆಗಳು, ಕಬೀರ ವಚನಾವಳಿ, ಹರಿಕಥಾಮೃತಸಾರ ಮುಂತಾದ 16 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹಿಂದಿ ಮಾತನಾಡದ ರಾಜ್ಯದ ಲೇಖಕರಿಗೆ ನೀಡುವ ಮಾನವ ಸಂಪನ್ಮೂಲ ಮಂತ್ರಾಲಯದ ಪ್ರಶಸ್ತಿ, ಶಬ್ಧ ಸಾಹಿತ್ಯ ಸನ್ಮಾನ, ಹಿಂದಿ ಮಾರ್ತಾಂಡ ಪ್ರಶಸ್ತಿ, ಹಿಂದಿ ಸೌಹಾರ್ಧ ಸನ್ಮಾನ್, ವಿಶಿಷ್ಠ ಹಿಂದಿ ಸೇವಾ ಸನ್ಮಾನ್ ಪ್ರಶ್ತಿ ಪುರಸ್ಕೃತರು. ಶಿಡ್ಲಘಟ್ಟದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಪ್ರಥಮ ಅಧ್ಯಕ್ಷರಾಗಿದ್ದರು.
ಸಿ.ಕೆ. ನಾರಾಯಣಾಚಾರ್: ಶಿಡ್ಲಘಟ್ಟ ತಾಲ್ಲೂಕಿನ ತಾತಹಳ್ಳಿ ಗ್ರಾಮದ ರಾಮಾನುಜಚನ್ನಮಾಚಾರ್ಯ ಮತ್ತು ಕನ್ನಮ್ಮ ದಂಪತಿಗಳ ಮಗ 85 ವರ್ಷ ವಯಸ್ಸಿನ ಸಿ.ಕೆ. ನಾರಾಯಣಾಚಾರ್ ಎಸ್ಎಸ್ಎಲ್ಸಿ ಓದಿದ್ದು ಶಿಡ್ಲಘಟ್ಟದ ಬಿ.ವಿರೂಪಾಕ್ಷಪ್ಪ ಪ್ರೌಢಶಾಲೆಯಲ್ಲಿ. ಪಿಯುಸಿ ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ. 1953 ರಲ್ಲಿ ಆಂಧ್ರದ ಮೆಹಬೂಬ್ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಸೇರಿ 1978ರಲ್ಲಿ ಅಧೀಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದರು. ನಿವೃತ್ತಿಯ ನಂತರ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಸದಸ್ಯರಾಗಿ ಅದರ ಚಟುವಟಿಕೆಗಳನ್ನು ಜಿಲ್ಲಾಧ್ಯಂತ ವ್ಯಾಪಕವಾಗಿ ನಡೆಸಿ ಮೆಹಬೂಬ್ನಗರದಲ್ಲಿ ರಕ್ತನಿಧಿ ಘಟಕವನ್ನು ಸ್ಥಾಪಿಸಿದರು. ಇವರ ಸೇವೆಯನ್ನು ಗುರುತಿಸಿ ಮೆಹಬೂಬ್ನಗರದ ಅಂದಿನ ಜಿಲ್ಲಾಧಿಕಾರಿ ಎಲ್.ವಿ.ಸುಬ್ರಮಣ್ಯಂ ಇವರಿಗೆ ಗೌರವಾನ್ವಿತ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆಂಧ್ರದ ರಾಜ್ಯಪಾಲರಿಂದ ಇವರ ಸೇವೆಗೆ ಮೂರು ಬಾರಿ ಚಿನ್ನದ ಪದಕ ಲಭಿಸಿದೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಇವರ ನಂಟು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಮುಂದುವರೆಯಿತು. ರೆಡ್ಕ್ರಾಸ್ ಸೊಸೈಟಿ ಕಾರ್ಯದರ್ಶಿಯಾಗಿ ರಕ್ತನಿಧಿ ಘಟಕವನ್ನು ಸ್ಥಾಪಿಸಿ, ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದಾರೆ. ಇದರೊಂದಿಗೆ ಆರೋಗ್ಯ ಶಿಬಿರ, ನೇತ್ರದಾನ ಶಿಬಿರ, ವಿಪತ್ತು ನಿರ್ವಹಣ ಜಾಗೃತಿ ಶಿಬಿರ, ನೇತ್ರ ಶಸ್ತ್ರಚಿಕಿತ್ಸಾ ಶಿಬಿರ, ವೃದ್ಧಾಶ್ರಮ ಅನಾಥಾಶ್ರಮಗಳಿಗೆ ಸೌಲಭ್ಯ ಕಲ್ಪಿಸುವುದು, ಅಪೌಷ್ಟಿಕತೆ ನಿವಾರಣೆಗೆ ಕಾರ್ಯಕ್ರಮಗಳನ್ನು ರೆಡ್ಕ್ರಾಸ್ ಸೊಸೈಟಿ ಮೂಲಕ ನಡೆಸುತ್ತಿದ್ದಾರೆ.
ವಿ.ಸೀತಾಲಕ್ಷ್ಮಿ : ಶಿಡ್ಲಘಟ್ಟದ ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷೆಯಾದ 60 ವರ್ಷ ವಯಸ್ಸಿನ ವಿ.ಸೀತಾಲಕ್ಷ್ಮಿ ಅವರು ಗೈಡ್ಸ್ ಕ್ಯಾಪ್ಟನ್ ಆಗಿ, ಎನ್.ಸಿ.ಸಿ ಅಧಿಕಾರಿಯಾಗಿ ಹಲವಾರು ರಾಜ್ಯಗಳಲ್ಲಿ ಶಿಬಿರಗಳಲ್ಲಿ ಪಾಲಗೊಂಡು ಮುಖ್ಯಮಂತ್ರಿಗಳಿಂದ ಮನ್ನಣೆ ಪಡೆದಿದ್ದಾರೆ. ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪುರಸ್ಕಾರ, ಡಾ.ಎಸ್.ರಾಧಾಕೃಷ್ಣನ್ ಪ್ರಶಸ್ತಿ, 2015 ರ ಸಾಲಿನ ಸೀನಿಯರ್ ಗೈಡರ್ ಎಂದು ಕರ್ನಾಟಕ ರಾಜ್ಯಪಾಲರಿಂದ ಪುರಸ್ಕೃತರು.
ಪ್ರಕಾಶ್ ಚಂದ್ರ ಕೃಷ್ಣಮೂರ್ತಿ : ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲ ಗ್ರಾಮದ ಕೆ.ಎನ್.ಕೃಷ್ಣಮೂರ್ತಿ ಮತ್ತು ಇಂದ್ರಮ್ಮ ದಂಪತಿಗಳ ಮಗ 50 ವರ್ಷ ವಯಸ್ಸಿನ ಪ್ರಕಾಶ್ ಚಂದ್ರ ಕೃಷ್ಣಮೂರ್ತಿ ಎಸ್ಎಸ್ಎಲ್ಸಿ ಓದಿದ್ದು ಶಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯಲ್ಲಿ. 1990 ರಲ್ಲಿ ಪತ್ರಿಕೋಧ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಭಾರತೀಯ ವಿದ್ಯಾಭವನದಲ್ಲಿ ಪೂರೈಸಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಇವರೀಗ ಉದಯ ಟೀವಿಯಲ್ಲಿ ಸುದ್ಧಿ ಸಂಪಾದಕರು. ಅಂಚೆ ಚೀಟಿ ಹವ್ಯಾಸವನ್ನು ಹೊಂದಿರುವ ಪ್ರಕಾಶ್ ಚಂದ್ರ ಕೃಷ್ಣಮೂರ್ತಿ ಅವರ ಬಳಿ 20 ಸಾವಿರಕ್ಕೂ ಹೆಚ್ಚು ಅಂಚೆ ಚೀಟಿಗಳ ಸಂಗ್ರಹವಿದೆ. 2015 ರಲ್ಲಿ ನಡೆದ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ ಕರ್ನಾಪೆಕ್ಸ್ನಲ್ಲಿ ಇವರ ಸ್ವಾತಂತ್ರ್ಯಪೂರ್ವ ಅಂಚೆಚೀಟಿಗಳ ಸಂಗ್ರಹಕ್ಕೆ ರಜತ ಪದಕ ಲಭಿಸಿದೆ. ಕರ್ನಾಟಕ ಅಂಚೆ ಚೀಟಿ ಸಂಗ್ರಹಕಾರರ ಸಂಘಕ್ಕೆ ಆಜೀವ ಸದಸ್ಯ ಹಾಗೂ ಪೋಸ್ಟ್ ಕ್ರಾಸಿಂಗ್ ಎಂಬ ವಿಶಿಷ್ಠ ಹವ್ಯಾಸವನ್ನೂ ಹೊಂದಿದ್ದಾರೆ.
–ಡಿ.ಜಿ.ಮಲ್ಲಿಕಾರ್ಜುನ
ಸಹಕಾರಿ ಸಂಘ ಗಟ್ಟಿಗೊಳ್ಳಲಿ
ಸಹಕಾರಿ ಸಂಘಗಳಿಂದ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ, ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ- ಚಿಕ್ಕಬಳ್ಳಾಪುರ ಸಹಕಾರ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಲಾಭದ ದೃಷ್ಟಿಯನ್ನು ಹೊಂದದೆ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡು ಬದ್ದತೆಯಿಂದ ಕೆಲಸ ಮಾಡಿದಾಗ ಮಾತ್ರ, ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತವೆ. ಈ ನಿಟ್ಟನಲ್ಲಿ ಕಾರ್ಯದರ್ಶಿಗಳು ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಹಾಲು ಉತ್ಪಾದಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಬೇಕು. ಉತ್ತರ ಕರ್ನಾಟಕದ ಅಭಿವೃದ್ದಿಗಾಗಿ ಅಲ್ಲಿನ ರೈತರು, ಹಾಗೂ ಕಬ್ಬು ಬೆಳೆಗಾರರು, ಸರ್ಕಾರವನ್ನು ಅವಲಂಭಿಸದೆ, ತಮ್ಮ ಅಭಿವೃದ್ದಿಯ ಮಾರ್ಗವನ್ನು ತಾವೇ ಕಂಡುಕೊಂಡಿದ್ದಾರೆ. ಶೇ. ೮೦ ರಷ್ಟು ರೈತರು ಹೈನುಗಾರಿಕೆಯನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತಿದೆ ಎಂದರು.
ರಾಜ್ಯ ಸಹಕಾರ ಮಹಾ ಮಂಡಳಿಯ ಉಪಾಧ್ಯಕ್ಷ ಎಚ್.ವಿ.ನಾಗರಾಜ್ ಮಾತನಾಡಿ, ವೈದ್ಯನಾಥನ್ ವರದಿಯಂತೆ ಸಹಕಾರಿ ಸಂಘಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಆದ್ದರಿಂದ ಉತ್ಪಾದಕರು ಉತ್ತಮ ಗುಣಮಟ್ಟದ ಹಾಲನ್ನು ಸಂಘಗಳಿಗೆ ಪೂರೈಕೆ ಮಾಡುವ ಮೂಲಕ ಸಂಘಗಳ ಅಭಿವೃದ್ಧಿಗಾಗಿ ಸಹಕರಿಸುವಂತೆ ಕಾರ್ಯದರ್ಶಿಗಳು ಅವರನ್ನು ಪ್ರೋತ್ಸಾಹ ಮಾಡಬೇಕು. ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಪ್ರವೇಶವಾಗಬಾರದು ಎಂದರು.
ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಗುಣಮಟ್ಟದ ಹಾಲಿನ ಉತ್ಪಾದನೆಯಾಗುತ್ತಿದೆ. ಕುಡಿಯುವ ನೀರಿನ ತೀವ್ರ ಅಭಾವದ ನಡುವೆಯೂ ಕೂಡಾ ಹಾಲಿನ ಉತ್ಪಾದನೆಯಲ್ಲಿ ತಾಲ್ಲೂಕಿನ ಉತ್ಪಾದಕರು ಹಿಂದೆ ಬಿದ್ದಿಲ್ಲ. ಬಹುತೇಕ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದರಿಂದ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ಮುಂದಿನ ಮಾರ್ಚ್ನ ನಂತರ ಹಾಲಿನ ಬೆಲೆ ಏರಿಸಲಾಗುವುದು ಎಂದರು.
ವಿಮಾ ಯೋಜನೆಗೆ ಒಳಪಟ್ಟು ಮರಣ ಹೊಂದಿದ್ದ ೧೦ ರಾಸುಗಳಿಗೆ ತಲಾ ೪೦ ಸಾವಿರ ರೂಪಾಯಿಗಳಂತೆ ವಿಮಾ ಚೆಕ್ಕುಗಳನ್ನು ವಿತರಣೆ ಮಾಡಲಾಯಿತು.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್, ರಮೇಶ್, ಸಹಕಾರಿ ಹಾಲು ಒಕ್ಕೂಟದ ಉಪ-ವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ನಿರ್ದೇಶಕಿ ಪ್ರೇಮಾಕುಮಾರಿ, ರವಿಶಂಕರ್ಹೆಗ್ಡೆ ಹಾಗೂ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪಾತ್ರಾಭಿನಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಚೀಮಂಗಲ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು
ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ಉಂಟಾಗುವ ಪರಿಣಾಮಗಳನ್ನು ಕುರಿತ ಆಂಗ್ಲ ಭಾಷೆಯ ರಾಷ್ಟ್ರೀಯ ಪಾತ್ರಾಭಿನಯ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಮುಖ್ಯ ಶಿಕ್ಷಕರಾದ ಶಿವಶಂಕರ್ ಮತ್ತು ಸಹಶಿಕ್ಷಕರುಗಳು ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿವಿಧ ಸಂಘಟನೆಗಳಿಂದ ನೀರಿಗಾಗಿ ಪ್ರತಿಭಟನೆ
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆ ಭಾಗದ ಜನತೆ ಉಳಿಯಬೇಕಾದರೆ, ನೀರಾವರಿ ತಜ್ಞ ಪರಮಶಿವಯ್ಯನವರ ವರದಿಯಂತೆ ಶಾಶ್ವತ ನೀರಾವರಿ ಯೋಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಬಯಲುಸೀಮೆಯ ಭಾಗಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ತುಮಕೂರು ಭಾಗಗಳಲ್ಲಿನ ಜನರು ನೀರಿಗಾಗಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಸುತ್ತಿರುವ ಹೋರಾಟಗಳಿಗೆ ಆಡಳಿತ ನಡೆಸಿದಂತಹ ಯಾವುದೇ ಸರ್ಕಾರಗಳು, ಕವಡೆಕಾಸಿನ ಕಿಮ್ಮತ್ತನ್ನೂ ನೀಡಿಲ್ಲ. ಚುನಾವಣೆಗಳ ಸಮಯದಲ್ಲಿ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ನೀರಿನ ವಿಷಯವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ಸರ್ಕಾರ ಘೋಷಣೆ ಮಾಡಿರುವ ೧೩ ಸಾವಿರ ಕೋಟಿ ರೂಪಾಯಿಗಳ ಹಣವು ದುರುಪಯೋಗವಾಗುತ್ತದೆ. ನೂತನ ತಂತ್ರಜ್ಞಾನಗಳ ಬಗ್ಗೆ ಅರಿವಿಲ್ಲದಂತಹ ತಜ್ಞರನ್ನು ಇಟ್ಟುಕೊಂಡು ಸರ್ಕಾರ ಚೆಲ್ಲಾಟವಾಡುತ್ತಿದೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಒಂದು ವರ್ಷಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದರೆ, ೧೩ ಸಾವಿರ ಕೋಟಿಗಳನ್ನು ಖರ್ಚು ಮಾಡಲು ೧೩ ವರ್ಷಗಳು ಬೇಕು. ಅಷ್ಟರಲ್ಲಿ ಇನ್ನೆರಡು ಬಾರಿ ಚುನಾವಣೆಗಳಲ್ಲಿ ಈ ಭಾಗದಲ್ಲಿನ ಜನರ ಕಣ್ಣಿಗೆ ಮಣ್ಣೆರಚುವಂತಹ ತಂತ್ರಗಾರಿಕೆಯನ್ನು ಮಾಡಲು ಹುನ್ನಾರ ನಡೆಸಿದೆ. ನಾವು ಕೇಳುತ್ತಿರುವುದು ನದಿಯಲ್ಲಿನ ಹರಿಯುವ ನೀರಲ್ಲ. ಮಳೆಗಾಲದಲ್ಲಿ ವ್ಯರ್ಥವಾಗಿ ಸಮುದ್ರಕ್ಕೆ ಹರಿಯುವ ನೀರನ್ನು ನಮಗೆ ಕುಡಿಯಲು ಕೊಡಿ ಎಂದರೆ, ಜನಪ್ರತಿನಿಧಿಗಳು ಜನರನ್ನು, ಹೋರಾಟಗಾರರನ್ನು ದಿಕ್ಕುತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಎಂದು ರೈತ ಸಂಘದ ಮುಖಂಡರೂ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆರೋಪಿಸಿದರು.
ಸುಮಾರು ಮೂರು ಗಂಟೆಗಳ ಕಾಲ ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿ ಕಚೇರಿಗೆ ದಿಗ್ಭಂಧನವನ್ನು ನಡೆಸಿ ನಂತರ ತಹಶೀಲ್ದಾರರಿಗೆ ಮನವಿಯನ್ನು ಸಲ್ಲಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಗೌರವಾಧ್ಯಕ್ಷ ಮೇಲೂರು ನಾಗರಾಜ್, ಮುನಿಕೆಂಪಣ್ಣ, ಕಾರ್ಯದರ್ಶಿ ಪ್ರತೀಶ್, ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಳ್ಳೂರು ಶಿವಣ್ಣ, ಡಿ.ವೈ.ಎಫ್.ಐ.ಸಂಘಟನೆಯ ಲಕ್ಷ್ಮೀದೇವಮ್ಮ, ಮುನೀಂದ್ರ, ಒಕ್ಕಲಿಗರ ಯುವ ಸೇನೆ ತಾಲ್ಲೂಕು ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಶಶಿಕುಮಾರ್, ಯೂನಿಟಿ ಸಿಲ್ಸಿಲಾ ಪದಾಧಿಕಾರಿಗಳು ಮುಂತಾದವರು ಹಾಜರಿದ್ದರು.

