ತಾಲ್ಲೂಕಿನ ರೈತಕೂಟಗಳ ಒಕ್ಕೂಟದ ಸುಮಾರು 60 ಮಂದಿ ರೈತರು ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಥಾಯ್ಲೆಂಡ್, ಸಿಂಗಾಪುರ ಮತ್ತು ಶ್ರೀಲಂಕಾ ದೇಶಗಳಿಗೆ ತೆರಳುತ್ತಿದ್ದಾರೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ನಡೆದ ಪ್ರವಾಸದ ಪೂರ್ವಭಾವಿ ಸಭೆಯಲ್ಲಿ ಪ್ರವಾಸದಲ್ಲಿ ರೈತರು ತಿಳಿದುಕೊಳ್ಳಬಹುದಾದ ಕೃಷಿಗೆ ಸಂಬಂಧಿಸಿದ ವಿವಿಧ ಮಾಹಿತಿಗಳ ಕುರಿತಂತೆ ಪ್ರವಾಸಿ ಸಂಸ್ಥೆಯ ಅಧಿಕಾರಿ ಪ್ರಭಾಕರ್ ವಿವರಿಸಿದರು.
ಥಾಯ್ಲೆಂಡ್ ದೇಶದ ಬ್ಯಾಂಕಾಕ್ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯ ರೈತರ ಬೆಳೆಗಳನ್ನು ನೇರವಾಗಿ ಸಂತೆಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಅಲ್ಲಿನ ಪ್ರಗತಿ ಹೊಂದಿದ ಗ್ರಾಮಗಳಾದ ತಾರಾಬೂರಿ, ಕಾಂಚನಬೂರಿಗಳಲ್ಲಿ ರೇಷ್ಮೆ, ತರಕಾರಿ ಮತ್ತು ಸಾಕು ಪ್ರಾಣಿಗಳಾದ ಹಸು, ಕುರಿ, ಎಮ್ಮೆ, ಹಂದಿ ಸಾಕಾಣಿಕೆಯ ಆಧುನಿಕ ಪದ್ಧತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಸಿಂಗಾಪೂರ ಮತ್ತು ಶ್ರೀಲಂಕಾ ದೇಶಗಳಲ್ಲೂ ರೈತರ ಉತ್ಪನ್ನಗಳ ಮಾರಾಟ ವ್ಯವಸ್ಥೆಯ ಬಗ್ಗೆ, ಗುಣಮಟ್ಟದ ಬಗ್ಗೆ ತಿಳುವಳಿಕೆಯನ್ನು ಹೊಂದುವುದರ ಬಗ್ಗೆ ವಿವರಿಸಲಾಯಿತು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಗೋಪಾಲಗೌಡ, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಪ್ಪ, ಸ್ವಾಮಿ ವಿವೇಕಾನಂದ ರೈತ ಕೂಟದ ಬೂದಾಳ ರಾಮಾಂಜಿನಪ್ಪ, ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟದ ಮೇಲೂರು ನಾಗೇಂದ್ರಪ್ರಸಾದ್, ಬೋದಗೂರು ರಾಮಮೂರ್ತಿ, ಕೆಂಪರೆಡ್ಡಿ, ವೈ.ರಾಮಕೃಷ್ಣಪ್ಪ, ಪಿಳ್ಳವೆಂಕಟಸ್ವಾಮಪ್ಪ, ಮಳಮಾಚನಹಳ್ಳಿ ಜಗದೀಶ್, ತಾತಹಳ್ಳಿ ವೆಂಕಟೇಶಪ್ಪ, ನರಸಿಂಹಮೂರ್ತಿ, ಶ್ರೀರಾಮಪ್ಪ, ಮಾರೇಗೌಡ, ವೆಂಕಟೇಶಪ್ಪ, ಶ್ರೀನಿವಾಸ್, ವೀರಣ್ಣ, ವೆಂಕಟರೆಡ್ಡಿ, ಕುಚ್ಚಣ್ಣ ಅನಂತು, ದೇವರಾಜ್ ಮತ್ತಿತರರು ಹಾಜರಿದ್ದರು.
ಕೃಷಿ ಅಧ್ಯಯನಕ್ಕಾಗಿ ವಿದೇಶಕ್ಕೆ ಹೊರಟ ರೈತರು
ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆ
ಮಹರ್ಷಿ ವಾಲ್ಮೀಕಿಯವರು ಯಾವುದೇ ಒಂದು ಜನಾಂಗಕ್ಕೆ ಸಂಬಂಧಪಟ್ಟವರಲ್ಲ. ಇಂತಹ ಮಹಾನ್ ಪುರುಷರ ಜಯಂತಿಯಲ್ಲಿ ಎಲ್ಲಾ ಸಮುದಾಯದವರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಕೈಜೋಡಿಸುವುದರೊಂದಿಗೆ ಅದ್ದೂರಿಯಾಗಿ ಆಚರಿಸುವಂತೆ ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲು ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಸರ್ಕಾರಿ ಹಬ್ಬವನ್ನಾಗಿ ಆಚರಿಸುತ್ತಿರುವ ವಾಲ್ಮೀಕಿ ಜಯಂತಿಯನ್ನು ಕಳೆದ ಭಾರಿಗಿಂತ ಈ ಭಾರಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲು ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಜಿಲ್ಲಾಧ್ಯಕ್ಷ ಹಾಗು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಕಳೆದ ಐದು ವರ್ಷಗಳಿಂದ ವಾಲ್ಮೀಕಿ ಜಯಂತಿಯನ್ನು ಸರಕಾರಿ ಹಬ್ಬವನ್ನಾಗಿ ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಈಗಾಗಲೇ ತಾಲ್ಲೂಕಿನ ತಲಕಾಯಲಬೆಟ್ಟ ಸೇರಿದಂತೆ ನಗರದ ಮಯೂರ ವೃತ್ತ ಬಳಿಯಿರುವ ವಾಲ್ಮೀಕಿ ದೇವಾಲಯದ ಬಳಿ ವಾಲ್ಮೀಕಿ ಭವನ ಹಾಗೂ ಸುಂಡ್ರಹಳ್ಳಿಯ ಬಳಿ ವಾಲ್ಮೀಕಿ ವಸತಿ ಆಶ್ರಮ ನಿರ್ಮಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಶುರುವಾಗಲಿದೆ ಎಂದರು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಎಸ್.ಪುರುಶೋತ್ತಮ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ನಗರಸಭೆ ಪೌರಾಯುಕ್ತ ಎಚ್.ಎ.ಹರೀಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಮುನಿಯಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರಾಮಚಂದ್ರಪ್ಪ, ಮುಗಿಲಡಿಪಿ ನಂಜಪ್ಪ ಮತ್ತಿತರರು ಹಾಜರಿದ್ದರು.
ಜೈವಿಕ ಕೀಟನಾಶಕಗಳಿಂದ ಪರಾವಲಂಬಿ ಕೀಟಗಳ ನಿರ್ವಹಣೆ
ಪರಾವಲಂಬಿ ಕೀಟಗಳಿಂದ ರೈತರು ಅನುಭವಿಸುವ ನಷ್ಟದ ಪ್ರಮಾಣ ಉತ್ಪಾದನೆಯ ಶೇಕಡಾ 60 ರಷ್ಟಾಗಿದೆ. ಕೀಟ ನಿರ್ವಹಣೆಯಿಂದ ಕೃಷಿಯ ಉತ್ಪನ್ನ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ ಎಂದು ತೋಟಗಾರಿಕಾ ಸಂಶೋಧನಾ ವಿಭಾಗದ ವಿಜ್ಞಾನಿ ಡಾ.ಎಂ.ಎಸ್.ರಾವ್ ತಿಳಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಗುರುವಾರ ನಡೆದ ‘ಸಂರಕ್ಷಿತ ಬೇಸಾಯದಲ್ಲಿ ಜೈವಿಕ ಕೀಟನಾಶಕಗಳಿಂದ ಪರಾವಲಂಬಿ ಕೀಟಗಳ ನಿರ್ವಹಣೆ’ ಎಂಬ ವಿಷಯವಾಗಿ ರೈತರಿಗೆ ನಡೆದ ಪ್ರಾತ್ಯಕ್ಷಿಕಾ ಶಿಬಿರದಲ್ಲಿ ಅವರು ಮಾತನಾಡಿದರು.
ವರ್ಷವಿಡೀ ಫಸಲನ್ನು ಉತ್ಪಾದಿಸುವ ನಿಟ್ಟಿನಲ್ಲಿ ಪಾಲಿಹೌಸ್ಗಳು ಪ್ರಾರಂಭವಾದವು. ಅಲ್ಲಿನ ತೇವಾಂಶ, ಉಷ್ಣಾಂಶ, ರಾಸಾಯನಿಕಗಳು ಪರಾವಲಂಬಿ ಕೀಟಗಳ ಬೆಳವಣಿಗೆಗೆ ಪೂರಕವಾಗಿ ಅವುಗಳು ವೃದ್ಧಿಸಿ ಬೆಳೆಗೆ ಮಾರಕವಾಗಿವೆ. ಅದಕ್ಕಾಗಿ ಜೈವಿಕ ಕೀಟನಾಶಕಗಳನ್ನು ವೈಜ್ಞಾನಿಕವಾಗಿ ತಯಾರಿಸಲಾಗಿದೆ. ಅದರ ಬಳಕೆಯಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿರುವ ರೈತರು ಬೆಳೆಯನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.
ಕ್ಯಾಪ್ಸಿಕಂ, ಟೊಮೆಟೊ, ಮೆಣಸಿನಕಾಯಿ , ಬೆಂಡೆಕಾಯಿ , ಘೇರ್ಕಿನ್ಸ್, ಕಲ್ಲಂಗಡಿ, ಗುಲಾಬಿಗಳು ಮುಂತಾದ ಬೆಳೆಗಳನ್ನು ಹಸಿರು ಮನೆಗಳಲ್ಲಿ ಬೆಳೆಯಲಾಗುತ್ತಿದೆ. ಈ ಎಲ್ಲಾ ಬೆಳೆಗಳ ಮೇಲೆ ನೆಮಟೋಡ್ ಸಮಸ್ಯೆಗಳ ಕಾರಣ ನಷ್ಟವು ಅಪಾಯಕಾರಿ ಪ್ರಮಾಣದಲ್ಲಿ ಆಗುತ್ತದೆ. ಶಿಲೀಂಧ್ರಗಳ ರೋಗಗಳು ತೀವ್ರತೆಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿ ಜೈವಿಕ ಕೀಟನಾಶಕಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜ್ಞಾನಿಗಳು ಜೈವಿಕ ಕೀಟನಾಶಕಗಳನ್ನು ಬೆಳೆಯ ವಿವಿಧ ಹಂತದಲ್ಲಿ ಬಳಸುವ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿಕೊಟ್ಟರು.
ತೋಟಗಾರಿಕಾ ಸಂಶೋಧನಾ ವಿಭಾಗದ ವಿಜ್ಞಾನಿಗಳಾದ ಡಾ.ಆರ್.ನಾರಾಯಣಸ್ವಾಮಿ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಆನಂದ್, ಕೃಷಿ ಇಲಾಖೆಯ ಉಪನಿರ್ದೇಶಕ ದೇವೇಗೌಡ ಮತ್ತಿತರರು ಹಾಜರಿದ್ದರು.
ಬೈರಸಾಗರ ಕೆರೆಗೆ ಬಾಗಿನ ಅರ್ಪಣೆ
ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಮಳೆಯಿಂದಾಗಿ ಕೆರೆಗಳು ತುಂಬುತ್ತಿರುವುದು ರೈತರಿಗೆ ಆಶಾದಾಯಕವಾಗಿದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಬಳಿಯ ಬೈರಸಾಗರ ಕೆರೆ ಮತ್ತು ಕಣಗಲಮ್ಮ ಕೆರೆ ತುಂಬಿ ಕೋಡಿ ಹೋಗಿದ್ದರಿಂದ ಗುರುವಾರ ತಮ್ಮ ಪತ್ನಿಯೊಂದಿಗೆ ಬಾಗಿನ ಅರ್ಪಿಸಿದ ನಂತರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಮ್ಮ ಪೂರ್ವಜರು ಕೆರೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಿದ್ದರು. ಒಂದು ಕೆರೆಯ ನೀರು ಮತ್ತೊಂದಕ್ಕೆ ಹೋಗುವಂತೆ ರೀತಿಯಲ್ಲಿ ಕೆರೆಗಳ ಸಾಲೇ ನಮ್ಮಲ್ಲಿದೆ. ಆದರೆ ಹಲವಾರು ಕರೆಗಳನ್ನು ಒತ್ತುವರಿ ಮಾಡಿರುವ ಕಾರಣ ನೀರು ಶೇಖರಣೆಯ ಸಾಮರ್ಥ್ಯ ಕಡಿಮೆಯಾಗಿದೆ. ಎಂಟು ವರ್ಷಗಳಿಂದ ತುಂಬದ ಕೆರೆಗಳು ಈ ಬಾರಿ ತುಂಬಿ ಹರಿದು ನಮ್ಮಲ್ಲಿನ ಕೆರೆಗಳ ಮಹತ್ವದ ಬಗ್ಗೆ ಜಾಗೃತರನ್ನಾಗಿಸಿದೆ. ವರುಣನ ಕೃಪೆಯಿಂದ ತಾಲ್ಲೂಕಿನಾದ್ಯಂತ ಮಳೆ ಹೀಗೇ ಮುಂದುವರೆದು ಕೆರೆಗಳು ತುಂಬಲಿ. ಇದರಿಂದ ಅಂತರ್ಜಲವೂ ಹೆಚ್ಚಾಗಲಿದೆ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ, ಡಿ.ಸಿ.ಸಿ ಬ್ಯಾಂಕ್ ಮಾಜಿ ನಿರ್ದೇಶಕ ರಾಮಲಿಂಗಾರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಶಿವಣ್ಣ, ನಂಜಪ್ಪ, ಎ.ಇ.ಇ ಶಿವಾನಂದ, ಆರ್.ಐ. ಆದಿಶೇಶಪ್ಪ, ಅರ್ಚಕ ರವಿ, ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತರ ಪರವಾಗಿ ಕರವೇ ಧರಣಿ
ಶಾಶ್ವತ ನೀರಾವರಿ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲ್ಲೂಕು ಘಟಕದ ಸದಸ್ಯರು ತಾಲ್ಲೂಕು ಕಚೇರಿಯ ಮುಂದೆ ಧರಣಿ ನಡೆಸಿ ಒತ್ತಾಯಿಸಿದರು.
ನಗರದ ಬಸ್ ನಿಲ್ದಾಣದ ಬಳಿಯಿಂದ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿದರು.
ನೊಂದ ಅನ್ನದಾತರ ಪರವಾಗಿ ಕರವೇ ಸದಸ್ಯರು ಹೋರಾಟ ನಡೆಸಿದ್ದೇವೆ. ಬರಪೀಡಿತ ಜಿಲ್ಲೆಗೆ ಶುದ್ಧ ಕುಡಿಯುವ ನೀರು ಬೇಕು. ಅದಕ್ಕಾಗಿ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಬೇಕು. ರೈತರ ಪಂಪ್ಸೆಟ್ಗಳಿಗೆ 7 ಗಂಟೆ ವಿದ್ಯುತ್ ಕೊಡುತ್ತೇವೆಂದು ಹೇಳಿದ ಸರ್ಕಾರ ಈಗ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಇದರಿಂದ ಬೆಳೆಯನ್ನು ಬೆಳೆಯಲಾಗದೆ ರೈತರು ಕಂಗಾಲಾಗಿದ್ದಾರೆ. ರೈತರು ಕೃಷಿಗಾಗಿ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳಲ್ಲಿ ಸಾಲವನ್ನು ತೀರಿಸಲಾಗದೇ ಅನ್ನದಾತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿವೆ. ಸರ್ಕಾರ ಸಾಲ ಮತ್ತು ಬಡ್ಡಿ ಮನ್ನಾ ಮಾಡಬೇಕು. ಜಿಲ್ಲೆಯ ಜನತೆ ಹೈನುಗಾರಿಕೆಯನ್ನು ನಂಬಿದ್ದಾರೆ. ಹಾಲಿನ ಬೆಲೆಯನ್ನು ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಕರವೇ ಸದಸ್ಯರು ಅಧಿಕಾರಿಗಳಿಗೆ ಸರ್ಕಾರಕ್ಕೆ ಸಲ್ಲಿಸುವಂತೆ ಮನವಿಯನ್ನು ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ತಾಲ್ಲೂಕು ಅಧ್ಯಕ್ಷ ಗಂಜಿಗುಂಟೆ ಜಿ.ಎಲ್.ವಸಂತ್ಕುಮಾರ್, ಸಂಚಾಲಕ ಆನಂದರೆಡ್ಡಿ, ಗೌರವಾಧ್ಯಕ್ಷ ಚೌಡರೆಡ್ಡಿ, ಸಂಚಾಲಕ ಆರ್.ನರಸಿಂಹರೆಡ್ಡಿ, ರೈತ ಮುಖಂಡರಾದ ಶಿವಾರೆಡ್ಡಿ, ಆರ್.ಆನಂದರೆಡ್ಡಿ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಶಾಶ್ವತ ನೀರಾವರಿಗೆ ಬೈಕ್ ರ್ಯಾಲಿ
ಶಾಶ್ವತ ನೀರಾವರಿಗಾಗಿ ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನ ಹಂಡಿಗನಾಳ ಗ್ರಾಮಸ್ಥರು ಬೈಕ್ ರ್ಯಾಲಿಯ ಮೂಲಕ ಬುಧವಾರ ತೆರಳಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಬೈಕ್ ರ್ಯಾಲಿ ನಡೆಸಿದ ಗ್ರಾಮಸ್ಥರು ನಗರದ ಬಸ್ ನಿಲ್ದಾಣದಿಂದ ಸಾಗಿ ತಲ್ಲೂಕು ಕಚೇರಿಯವರೆಗೂ ಸಾಗಿದೆರು.
ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಹಂಡಿಗನಾಳ ಗ್ರಾಮದ ನಾಗರಿಕರು, ಯುವಕರು, ಪರಮಶಿವಯ್ಯನವರ ಶಾಶ್ವತ ನೀರಿನ ಯೋಜನೆ ಜಾರಿಯಾಗುವವರೆಗೂ ನಡೆಯುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತೇವೆ. ನೀರಿನ ಅಗತ್ಯತೆಯ ಅರಿವು ಆಢಳಿತ ನಡೆಸುವ ಜನಪ್ರತಿನಿಧಿಗಳಿಗೆ ಆಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು. ನಂತರ ಹಂಡಿಗನಾಳ ಗ್ರಾಮಸ್ಥರು ಅನಿರ್ಧಿಷ್ಠ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಬೈಕ್ ರ್ಯಾಲಿಯ ಮೂಲಕ ತೆರಳಿದರು.
ಇಂದ್ರಧನುಷ್ ಲಸಿಕೆ ಕಾರ್ಯಕ್ರಮ
ಇಂದ್ರಧನುಷ್ ಲಸಿಕೆಯನ್ನು ಹಾಕಿಸುವುದರಿಂದ ಮಕ್ಕಳಿಗೆ ಬರುವಂತಹ ಏಳು ಬಗೆಯ ಖಾಯಿಲೆಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಇಂದ್ರಧನುಷ್, ಲಸಿಕಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ತಾಯಂದಿರು ತಮ್ಮ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸುವ ಮೂಲಕ ಮಕ್ಕಳಿಗೆ ಹರಡಬಹುದಾದಂತಹ ಏಳು ಬಗೆಯ ಖಾಯಿಲೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು, ಹಾಗೂ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದಾಗ ಮಾತ್ರ ಸರ್ಕಾರ ಆಯೋಜನೆ ಮಾಡುವಂತಹ ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ೯೧ ಕೇಂದ್ರಗಳನ್ನು ಮಾಡಿ, ೧೪೮ ತಂಡಗಳನ್ನು ರಚನೆ ಮಾಡಿ, ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿನ ಮಕ್ಕಳಿಗೆ ಲಸಿಕೆ ಹಾಕಿಸಬೇಕು. ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಜಾಗ್ರತೆ ವಹಿಸಬೇಕು. ಅಂಗನವಾಡಿ ನೌಕರರು ಹಾಗೂ ಆಶಾ ಕಾರ್ಯಕರ್ತೆಯರೂ ಕೂಡಾ ಇಂತಹ ಉತ್ತಮವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಯಾಗಿ ಮಾಡಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ಅಕ್ಕಲರೆಡ್ಡಿ, ಡಾ.ತಿಮ್ಮೇಗೌಡ, ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಂದ್ರ, ಎನ್.ಕೆ.ಗುರುರಾಜ್ ರಾವ್, ಸುಭ್ರಮಣಿ ಮತ್ತಿತರರು ಹಾಜರಿದ್ದರು.
ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ನಾಲ್ಕು ಟ್ರಾಕ್ಟರ್ಗಳ ವಶ
ಅಕ್ರಮವಾಗಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ನಾಲ್ಕು ಟ್ರಾಕ್ಟರ್ಗಳನ್ನು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ತಲಾ ಐದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಿರುವುದಾಗಿ ಸಬ್ಇನ್ಸ್ಪೆಕ್ಟರ್ ರಾಘವೇಂದ್ರ ತಿಳಿಸಿದ್ದಾರೆ.
ಮಾರುಕಟ್ಟೆಯಲ್ಲಿ ರೈತರು ಮತ್ತು ರೀಲರುಗಳ ಸಮಸ್ಯೆ ಆಲಿಸದ ಅಧಿಕಾರಿಗಳ ತಂಡ
ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಬುಧವಾರ ಕೇಂದ್ರ ರೇಷ್ಮೆ ಮಂಡಳಿಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಕೇಂದ್ರ ಸರ್ಕಾರ ಚೀನಾ ರೇಷ್ಮೆ ಆಮುದು ಸುಂಕವನ್ನು ಇಳಿಕೆ ಮಾಡಿದ್ದರ ಪರಿಣಾಮವಾಗಿ ದಿಡೀರನೆ ಕುಸಿದಿದ್ದ ಗೂಡಿನ ಬೆಲೆಗಳಿಂದಾಗಿ ರೈತರು ಕಂಗೆಟ್ಟಿದ್ದ ಹಿನ್ನೆಲೆಯಲ್ಲಿ ಆಗಮಿಸಿದ್ದ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿದರು.
ರೇಷ್ಮೆ ಗೂಡಿನ ಉತ್ಪಾದನೆ, ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ನಡೆಯುವ ವಿಧಾನಗಳು, ರೈತರಿಗೆ ಯಾವ ಮಾದರಿಯಲ್ಲಿ ಗೂಡಿನ ಹಣವನ್ನು ತಲುಪಿಸಲಾಗುತ್ತಿದೆ ಎಂಬುದರ ಬಗ್ಗೆ ಉಪನಿರ್ದೇಶಕ ರತ್ನಯ್ಯಶೆಟ್ಟಿ ಅವರಿಂದ ಮಾಹಿತಿ ಪಡೆದ ನಂತರ ರೈತರನ್ನಾಗಲಿ, ರೀಲರುಗಳನ್ನಾಗಲಿ ಮಾತನಾಡಿಸದೆ, ತಮ್ಮ ಪಾಡಿಗೆ ತಾವು ಕಚೇರಿಯಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಂತೆ ಧಾವಿಸಿ ಬಂದ ರೈತ ಮುಖಂಡ ಎಸ್.ಎಂ.ನಾರಾಯಣಸ್ವಾಮಿ ಹಾಗೂ ರೀಲರುಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಭಾಷೆಯ ಸಮಸ್ಯೆಯಿಂದಾಗಿ ರೈತರು ಹಾಗೂ ರೀಲರುಗಳು ಏನು ಮಾತನಾಡುತ್ತಿದ್ದಾರೆಂಬುದು ಅರ್ಥವಾಗದೆ, ಅಧಿಕಾರಿಗಳು ಏಕಾಏಕಿ ಕಚೇರಿಯಿಂದ ಹೊರಗೆ ಹೋದರು.
ಅಧಿಕಾರಿಗಳ ಈ ವರ್ತನೆಯಿಂದ ಕೆರಳಿದ ರೈತರು, ರೈತರ ಕಷ್ಟಗಳನ್ನು ವಿಚಾರಿಸದೆ, ಕಾಟಾಚಾರಕ್ಕೆ ಬಂದು ಬೇಟಿ ನೀಡಿ ಹೋಗುತ್ತಿದ್ದಾರೆ, ಮಧ್ಯವರ್ತಿಗಳು ಅವರನ್ನು ದಿಕ್ಕುತಪ್ಪಿಸುತ್ತಿದ್ದಾರೆ, ಉದ್ದೇಶಪೂರ್ವಕವಾಗಿಯೆ ಗೂಡು ಹರಾಜು ಕೂಗುವ ಸಂಧರ್ಭದಲ್ಲಿ ಮಾರುಕಟ್ಟೆಗೆ ಬೇಟಿ ನೀಡಿದ್ದಾರೆ. ರೀಲರುಗಳನ್ನು ಮಾತನಾಡಿಸಲಿಲ್ಲ, ರೈತರ ಸಮಸ್ಯೆಗಳನ್ನೂ ಆಲಿಸಲಿಲ್ಲವೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಎಚ್ಚೆತ್ತುಕೊಂಡ ಕೆಲ ಅಧಿಕಾರಿಗಳು ಉಪನಿರ್ದೇಶಕರ ಕಚೇರಿಯಲ್ಲಿ ರೀಲರುಗಳನ್ನು ಹಾಗೂ ರೈತರನ್ನು ಸಮಾಧಾನಪಡಿಸುವ ಯತ್ನ ಮಾಡಿದರು, ಕೇಂದ್ರ ರೇಷ್ಮೆ ಮಂಡಳಿಯಿಂದ ಬಂದಿರುವ ಅಧಿಕಾರಿಗಳಿಗೆ ಇಲ್ಲಿನ ರೈತರ ಸಮಸ್ಯೆಗಳನ್ನು ಪರಿಹಾರ ಮಾಡುವಂತಹ ಅಧಿಕಾರವಿಲ್ಲ, ನಾವು ಕೊಟ್ಟಿರುವ ವರದಿಗಳಿಗೆ ಅನುಕೂಲವಾಗುವಂತೆ ಅವರಿಗೆ ಸನ್ನಿವೇಶಗಳನ್ನು ಮಾತ್ರ ತೋರಿಸುತ್ತಿದ್ದೇವೆ, ಎಲ್ಲಾ ರೈತರು ಒಂದೇ ಬಾರಿಗೆ ಮಾತನಾಡಿದರೆ, ಅವರಿಗೇನು ಅರ್ಥವಾಗದೆ, ರೈತರು, ಹಾಗೂ ರೀಲರುಗಳ ವಿರುದ್ಧವಾಗಿ ವರದಿಯನ್ನು ಕೊಡುತ್ತಾರೆ, ನಾವು ಬಂದಿರುವುದು ನಿಮ್ಮ ಅನುಕೂಲಕ್ಕೆ ನಮಗೆ ಸಹಕಾರ ನೀಡಿ ಎಂದು ಸಮಾಧಾನಪಡಿಸುವಂತಹ ಯತ್ನವನ್ನು ಮಾಡಿದರು.
ಅಧಿಕಾರಿಗಳು ರೈತರು ಹಾಗೂ ರೀಲರುಗಳ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ತಕ್ಷಣ ಕಾರುಗಳಲ್ಲಿ ಹತ್ತಿ ಹೊರಟು ಹೋದರು.
ಚಿಂತಾಮಣಿ ಬೈಪಾಸ್ ರಸ್ತೆಯಲ್ಲಿ ಅಪಘಾತ
ನಗರದ ಚಿಂತಾಮಣಿ ಬೈಪಾಸ್ ರಸ್ತೆಯ ಪ್ರಣಾಮ್ ಧಾಬಾ ಬಳಿಯ ತಿರುವಿನಲ್ಲಿ ಬುಧವಾರ ಸಂಜೆ ಲಾರಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರಿಗೂ ಕಾಲು ಮುರಿದಿದೆ.
ಬೈಕ್ ಸವಾರರಾದ ರಾಘವೇಂದ್ರ(22) ಮತ್ತು ವಿಜಯ್(20) ಬಸ್ಸ್ಟಾಂಡ್ ಕಡೆಯಿಂದ ಬರುತ್ತಿದ್ದರು, ಲಾರಿಯು ಚಿಂತಾಮಣಿ ಕಡೆಯಿಂದ ಬರುತ್ತಿತ್ತು. ಕಾಲು ಮುರಿತಕ್ಕೊಳಗಾದ ಬೈಕ್ ಸವಾರರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ಕರೆದೊಯ್ಯಲಾಯಿತು. ಲಾರಿ ಚಾಲಕ ಪರಾರಿಯಾಗಿದ್ದು, ಲಾರಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಗರಸಭೆಯ ಕಟ್ಟಡಗಳ ಬಳಿಯೇ ತ್ಯಾಜ್ಯದ ರಾಶಿ
ಕೊಳೆತ ತ್ಯಾಜ್ಯಗಳ ರಾಶಿ, ಕಪ್ಪುಬಣ್ಣಕ್ಕೆ ತಿರುಗಿದ ನಿಂತ ನೀರು, ಕೆಟ್ಟ ವಾಸನೆ, ಕಟ್ಟಡದ ಮೇಲೆಲ್ಲಾ ಹಸಿರುಗಟ್ಟಿದ ಪಾಚಿ, ಕಟ್ಟಡದ ಮೇಲೂ ನಿಂತ ನೀರು ಮತ್ತು ತ್ಯಾಜ್ಯ. ಇದರೊಂದಿಗೆ ಕೆಟ್ಟು ಕಿಲುಬುಗಟ್ಟುತ್ತಿರುವ ಜೆಸಿಬಿ ಯಂತ್ರ. ಇವೆಲ್ಲಾ ಎಲ್ಲೂ ನಗರದ ಹೊರವಲಯದ ಪಾಳು ಕಟ್ಟಡದ ಚಿತ್ರಣವಲ್ಲ.
ನಗರಸಭೆಯಿಂದ ಎರಡು ವರ್ಷಗಳ ಹಿಂದಷ್ಟೇ ಅಂಚೆಕಚೇರಿಯ ಮುಂದೆ ನಿರ್ಮಾಣವಾದ ಕಟ್ಟಡಗಳ ಹಾಗೂ ಅದರ ಮುಂದಿನ ದುಸ್ಥಿತಿಯ ಚಿತ್ರಣವಾಗಿದೆ.

ಅಂಗವಿಕಲರು ಶಾಪಗ್ರಸ್ಥರಲ್ಲ
ಶ್ರವಣ ದೋಷ ಉಳ್ಳವರು ಹಾಗೂ ಇನ್ನಿತರೆ ಅಂಗವಿಕಲರನ್ನು ಶಾಪಗ್ರಸ್ಥರೆಂದು ಪರಿಭಾವಿಸಬೇಕಿಲ್ಲ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಎನ್.ಎ.ಶ್ರೀಕಂಠ ತಿಳಿಸಿದರು.
ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ ಅಂಗವಿಕಲರ ಹಾಗೂ ಸಬಲೀಕರಣ ಇಲಾಖೆ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಲಿಟಿ (ಎ.ಪಿ.ಡಿ) ಮಂಗಳವಾರ ಆಯೋಜಿಸಿದ್ದ ವಿಶ್ವ ವಾಕ್ ಮತ್ತು ಶ್ರವಣದೋಷವುಳ್ಳ ವ್ಯಕ್ತಿಗಳ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂಗವಿಕಲರಲ್ಲೂ ಹಲವಾರು ಮಂದಿ ಸಾಧಕರಿದ್ದಾರೆ. ಅಂಗವಿಕಲತೆಯಿರುವ ಕಾರಣಕ್ಕೆ ಮಕ್ಕಳನ್ನು ಮನೆಯಲ್ಲಿ ಬಂಧಿಸಬೇಡಿ. ಅಂಗವಿಕಲರು ಸಾಮಾನ್ಯರಿಗಿಂತ ಬುದ್ಧಿವಂತರಾಗಿದ್ದು, ಅಂಗವಿಕಲತೆಯನ್ನು ಯಾರು ಬೇಡಿ ಪಡೆದಿರುವುದಿಲ್ಲ. ಪ್ರಕೃತಿಯ ಈ ವೈರುದ್ಯವನ್ನು ನಾವು ಒಪ್ಪಿಕೊಂಡು ಅಂಗವಿಕಲತೆಯನ್ನು ಸವಾಲಾಗಿ ಜಯಿಸಬೇಕಿದೆ. ಅಂಗವಿಕಲರಾಗಿ ಸಾಧನೆ ಮಾಡಿದ ಹಲವು ಪ್ರತಿಭಾನ್ವಿತರು ನಮ್ಮೊಡನೆಯಿದ್ದು. ಸಾಧಕ ಅಂಗವಿಕಲರನ್ನು ಮಾದರಿಯಾಗಿಸಿಕೊಂಡು ಬದುಕಲ್ಲಿ ಸಾಧನೆ ಮಾಡಬೇಕಿದೆ. ನೀವು ಯಾರಿಗೂ ಕಡಿಮೆಯಿಲ್ಲ ಎಂದು ಅಂಗವಿಕಲರನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರ ಭಾಷಣವನ್ನೂ ಎ.ಪಿ.ಡಿ ಸಂಸ್ಥೆಯ ಸದಸ್ಯರು ಶ್ರವಣ ದೋಷ ಉಳ್ಳವರಿಗೆ ಅರ್ಥವಾಗುವ ಕೈ ಬಾಯಿಯ ಅಭಿನಯದ ಭಾಷೆಯ ಮೂಲಕ ಅಭಿವ್ಯಕ್ತಿಸಿದರು.
ಈ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಡಾಲ್ಫಿನ್ ವಿದ್ಯಾಸಂಸ್ಥೆಯ ಅಶೋಕ್, ರಾಮಚಂದ್ರಪ್ಪ, ಎ.ಪಿ.ಡಿ ಸಂಸ್ಥೆಯ ಶಿಕ್ಷಣ ಸಂಯೋಜಕ ಜೆ.ಮುನಿನಾರಾಯಣ, ಡಾಲ್ಫಿನ್ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕ ಮುನಿಶಾಮಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೈರಸಾಗರ ಕೆರೆಗೆ ಬಾಗಿನ ಅರ್ಪಣೆ
ಜಿಲ್ಲೆಯಲ್ಲಿ ಹಿಂದುಳಿದ ಬರಪೀಡಿತ ಪ್ರದೇಶವೆಂದು ಗುರುತಿಸಿಕೊಂಡಿದ್ದ ದಿಬ್ಬೂರಹಳ್ಳಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿದೆ. ಸುಮಾರು ೮ ವರ್ಷಗಳಿಂದ ನೀರಿರದೆ ಒಣಗಿದ್ದ ಗ್ರಾಮದ ಬೈರಸಾಗರ ಕೆರೆ ಕೋಡಿ ಹರಿದಿದ್ದು ಸಂತಸ ಹಾಗೂ ಸಂಭ್ರಮಗೊಂಡ ದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಕೆರೆಗೆ ಪೂಜೆ ಸಲ್ಲಿಸಿದ್ದಾರೆ.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಮಂಗಳವಾರ ಕೆರೆಗೆ ಬಾಗಿನ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದಲ್ಲಿ ಸಮೃದ್ಧವಾಗಿ ಮಳೆಯಾಗಿ ಕೆರೆ-ಕುಂಟೆಗಳು ಭರ್ತಿಯಾಗಿ ಜನಸಾಮಾನ್ಯರು ಹಾಗೂ ರೈತರು ಸುಖಶಾಂತಿಯಿಂದ ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಅವರು ಹೇಳಿದರು.
ಈಗಾಗಲೇ ತುಂಬಿರುವ ಕೆರೆಯ ನೀರು ವ್ಯರ್ಥವಾಗಿ ಹರಿಯುತ್ತಿದ್ದನ್ನು ಕಂಡು ಅಸಮಾಧಾನಗೊಂಡು ಕೂಡಲೇ ಕೆರೆಯ ನೀರು ಪೋಲಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಣ್ಣನೀರಾವರಿ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರಪ್ಪ ಹಾಗೂ ಜಿಲ್ಲಾ ಪಂಚಾಯತಿ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ರವಿ, ವಿ.ಸುಭ್ರಮಣಿ, ಆರ್.ಶ್ರೀನಿವಾಸ್, ಎನ್.ಮುನಿಯಪ್ಪ, ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುಬ್ಬಣ್ಣ, ಉಪಾಧ್ಯಕ್ಷೆ ಮಮತಾ, ತಿಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್, ಗೋಪಿ, ಪ್ರಸನ್ನ, ದ್ಯಾವಪ್ಪ, ಶ್ರೀನಿವಾಸ್ರೆಡ್ಡಿ, ಗೋವಿಂದ್ರಾಜು, ಸಮೀಉಲ್ಲಾ, ಗಫೂರ್, ಮಧುಸೂದನ್, ಡಿ.ಪಿ.ನಾಗರಾಜ್, ಅಶ್ವತ್ಥರೆಡ್ಡಿ, ದಿಬ್ಬೂರಹಳ್ಳಿ ಪೋಲಿಸ್ಠಾಣೆಯ ಪಿ.ಎಸ್.ಐ ರಾಘವೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬಾಕ್ಸ್್…
ಕೊಳವೆಬಾವಿಗಳಿಗೆ ಮರುಜೀವ : ದಿಬ್ಬೂರಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಒಣಗಿರುವ ಕೊಳವೆಬಾವಿಗಳು ಇದೀಗ ಮರುಜೀವ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಬೈರಸಾಗರ ಕೆರೆ ಕೋಡಿ ಹರಿಯುತ್ತಿರುವುದರಿಂದ ಅಂತರ್ಜಲಮಟ್ಟ ವೃದ್ಧಿಗೊಂಡು ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿಯುವ ಸಾಧ್ಯತೆ ಗೋಚರಿಸುತ್ತಿದೆ.
ಮಳೆಗೆ ಕುಸಿದ ಮನೆ
ತಾಲ್ಲೂಕಿನಾದ್ಯಂತ ಸೋಮವಾರ ಬಿದ್ದ ಮಳೆಯಿಂದಾಗಿ ನಗರದ ಸಿದ್ಧಾರ್ಥನಗರದಲ್ಲಿ ಮನೆಯೊಂದು ಕುಸಿದಿರುವ ಘಟನೆ ನಡೆದಿದೆ.
ಸೋಮವಾರ ಮಧ್ಯಾಹ್ನ ಬಿದ್ದ ಭಾರೀ ಮಳೆಗೆ ನಗರದ ಬೈಪಾಸ್ ರಸ್ತೆಯ ಸಮೀಪದ ಒಂಬತ್ತನೇ ವಾರ್ಡಿನ ಸಿದ್ಧಾರ್ಥನಗರದಲ್ಲಿರುವ ಪಿ. ಅನ್ವರ್ಪಾಷ ಅವರ ಜಂತಿಕೆಯ ಮನೆ ಚಾವಣಿ ಕುಸಿದಿದೆ. ಕುಸಿತದ ಮುನ್ಸೂಚನೆ ಕಂಡು ಕುಟುಂಬದವರು ಮನೆಯಿಂದ ಹೊರಕ್ಕೆ ಓಡಿದ್ದಾರೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಪಾತ್ರೆಗಳು, ಟೀವಿ ಹಾಗೂ ವಿವಿಧ ವಸ್ತುಗಳೆಲ್ಲಾ ಜಖಂಗೊಂಡಿದ್ದು, ಕುಟುಂಬದವರಿಗೆ ದಿಕ್ಕು ತೋಚದಂತಾಗಿದೆ.
‘ಸೋಮವಾರ ಸಂಜೆ ಮನೆಯ ಗೋಡೆಯಲ್ಲಿ ಶಬ್ದವಾದೊಡನೆ ಮಕ್ಕಳನ್ನೆಲ್ಲಾ ಕರೆದುಕೊಂಡು ಹೊರಬಂದೆವು. ನಮ್ಮ ಕಣ್ಣಮುಂದೆಯೇ ಚಾವಣಿ ಕುಸಿಯಿತು. ಮನೆಯಲ್ಲಿದ್ದ ಎಲ್ಲಾ ವಸ್ತುಗಳೂ ಹಾಳಾಯಿತು. ಮನೆಯಲ್ಲಿ ನಾಲ್ವರು ದೊಡ್ಡವರು ಎರಡು ಪುಟ್ಟ ಮಕ್ಕಳೂ ಇದ್ದೆವು. ಈಗ ನಮಗೆ ಉಳಿಯಲೂ ಸ್ಥಳವಿಲ್ಲ, ಅಡುಗೆಯೂ ಮಾಡಿಕೊಳ್ಳಲಾಗದ ಸ್ಥಿತಿಯುಂಟಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಮಗೆ ಸಹಾಯ ಮಾಡಬೇಕು’ ಎಂದು ತಿಳಿಸಿದರು.
ಬಾಣಂತಿ ಆರೈಕೆ ಭಾಗ – 1
ಹೆಣ್ಣಿಗೆ ತಾಯ್ತನ ಎನ್ನುವುದು ವರದಾನ. ಇಂದಿನ ಆಧುನಿಕ ಯುಗದಲ್ಲಿ ಗಂಡನ ಸರಿಸಮಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ಈ ಕಾರಣದಿಂದಾಗಿ ಹೆಣ್ಣು ತಾಯ್ತನವನ್ನು ಮುಂದೂಡಿದರೂ ಕೂಡ ತನ್ನದೇ ಆದ ಸ್ವಂತ ಕೂಸನ್ನು ಪಡೆಯುವುದು ಎಲ್ಲ ವಿವಾಹಿತ ಮಹಿಳೆಯರ ಕನಸು. ಹೆಣ್ಣು ಗರ್ಭಿಣಿಯಾದ ದಿನದಿಂದಲೇ ಅವಳಿಗೆ ಹಿರಿಯರಿಂದ ಕಿವಿಮಾತು, ಎಚ್ಚರಿಕೆಯ ಮಾತುಗಳು ಕೇಳಿಬರುತ್ತವೆ. ಹಿರಿಯರು ಆಹಾರ, ಊಟೋಪಚಾರದಿಂದ ಹಿಡಿದು ಅವಳ ಪೂರ್ತಿ ನಿಗಾವಣೆಯನ್ನು ವಹಿಸುತ್ತಾರೆ. ಗರ್ಭಿಣಿಯ ವಿಚಾರದಲ್ಲಿ ಎಷ್ಟು ಜಾಗರೂಕತೆಯನನ್ನು ಹಿರಿಯರು ವಹಿಸುತ್ತಾರೋ ಅಷ್ಟೇ ಜಾಗರೂಕತೆ ಹೆರಿಗೆಯ ನಂತರವೂ ಹೆಣ್ಣಿಗೆ ಅವಶ್ಯಕ. ಒಂಭತ್ತು ತಿಂಗಳು ಇನ್ನೊಂದು ಜೀವವನ್ನು ಹೊತ್ತು, ಹೆತ್ತು ದೇಹ ಬಸವಳಿದಿರುತ್ತದೆ. ಅದಕ್ಕೆ ತಕ್ಕ ರೀತಿಯಲ್ಲಿ ಆರೈಕೆ ದೊರೆತರೆ ಮತ್ತೆ ದೇಹ ಮೊದಲಿನ ಸ್ಥಿತಿಗೆ ತಲುಪುವುದು. ಈ ಅವಧಿಯಲ್ಲಿ ಸರಿಯಾದ ರೀತಿಯ ಆರೈಕೆ, ಪೋಷಣೆಗಳು ದೊರೆಯದಿದ್ದರೆ ಅದರಿಂದ ಸಂಭವಿಸುವ ರೋಗಗಳನ್ನು ಗುಣಪಡಿಸುವುದು ಕಷ್ಟಸಾಧ್ಯ ಎನ್ನುವುದು ಆಚಾರ್ಯರ ಅಭಿಪ್ರಾಯ.
ಹೆರಿಗೆ ಆದ ದಿನದಿಂದ ಒಂದುವರೆ ತಿಂಗಳಿನವರೆಗಿನ ಅವಧಿಯನ್ನು ಬಾಣಂತಿಯ ಆರೈಕೆಯ ದಿನಗಳು ಎನ್ನುವುದು ಆಯುರ್ವೇದ ಆಚಾರ್ಯರ ಅಭಿಮತ. ಕೆಲವರು ಆರು ತಿಂಗಳುಗಳು ಆರೈಕೆ ಅವಶ್ಯಕ ಎನ್ನುವರು. ಮತ್ತೆ ಋತುಸ್ರಾವ ಆರಂಭವಾಗುವವರೆಗೆ ಆರೈಕೆ ಅವಶ್ಯಕ ಎನ್ನವುದು ಇನ್ನು ಕೆಲವರ ಅಭಿಪ್ರಾಯ.
ಬಾಣಂತಿಯ ಆರೈಕೆಯಲ್ಲಿ ನಾಲ್ಕು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕು.
1. ಶೇಖರಣೆಗೊಂಡ ಅಶುದ್ಧ ರಕ್ತವನ್ನು ಹೊರ ಹೋಗುವಂತೆ ಮಾಡುವುದು.
2. ದೇಹದಲ್ಲಿ ಪ್ರಕೋಪವಾದ ವಾತ ದೋಷವನ್ನು ಶಮನ ಮಾಡುವುದು.
3. ಶಿಥಿಲಗೊಂಡ ದೇಹ ಧಾತುಗಳನ್ನು ಸಮಸ್ಥಿತಿಗೆ ತರುವುದು.
4. ಪೌಷ್ಟಿಕಾಂಶ ಇರುವ ಆಹಾರವನನ್ನು ನೀಡುವುದು. (ಪ್ರಧಾನವಾಗಿ ಸ್ತನ್ಯ ವರ್ಧನೆಗೆ ಸಹಾಯಕವಾದ ಆಹಾರ ಸೇವನೆ.)
ಬಾಣಂತಿ ಆರೈಕೆ
1. ಬಾಣಂತಿಗೆ ಎಳ್ಳೆಣ್ಣೆ ಮತ್ತು ತುಪ್ಪವನ್ನು ಮಿಶ್ರಣ ಮಾಡಿ, ಬಿಸಿ ಮಾಡಿ ಮೈಯನ್ನು ಉಜ್ಜಿ, ಬಿಸಿ ನೀರಿನಿಂದ ಸ್ನಾನ ಮಾಡಿಸಬೇಕು. ಪ್ರಧಾನವಾಗಿ ಎದೆ, ಹೊಟ್ಟೆ, ಸೊಂಟ ಈ ಭಾಗಗಳಿಗೆ ಸರಿಯಾಗಿ ಮಿಶ್ರಣವನ್ನು ಹಚ್ಚಿ ತಿಕ್ಕಿ, ಬಿಸಿ ನೀರಿನ ಸಿಂಚನವನ್ನು ಮಾಡಬೇಕು. ಬಾಣಂತಿಯ ಅಭ್ಯಂಗಕ್ಕೆ ಕ್ಷೀರಬಲಾ ತೈಲ, ಮಹಾ ನಾರಾಯಣ ತೈಲ, ಸಹಚರಾದಿ ತೈಲಗಳಲ್ಲಿ ಯಾವುದನ್ನಾದರೂ ಬಳಸಬಹುದು.
2. ಸ್ನಾನದ ನಂತರ ಶುದ್ಧವಾದ ಹತ್ತಿಯ ಬಟ್ಟೆಯಿಂದ ಹೊಟ್ಟೆಯನ್ನು ಬಿಗಿಯಬೇಕು. ಇದು ಹೊಟ್ಟೆಯಲ್ಲಿ ವಿಕೃತ ವಾತದ ಗತಿಯನ್ನು ಶಮನ ಮಾಡುವುದು. ಅಲ್ಲದೆ ಉದರದ ಮಾಂಸ ಖಂಡಗಳು ದುರ್ಬಲವಾಗುವುದನ್ನು ತಡೆದು ಗಟ್ಟಿಗೊಳಿಸುವುದಲ್ಲದೆ, ಗರ್ಭಿಣಿಯ ಪೂರ್ವಾವಸ್ಥೆಗೆ ತಲುಪಲು ಸಹಾಯ ಮಾಡುವುದು.
3. ನಂತರ ಹಿಪ್ಪಲಿ, ಹಿಪ್ಪಲಿ ಮೂಲ, ಶುಂಠಿ, ಕಾಳುಮೆಣಸು, ಗಜಪಿಪ್ಪಲಿ ಇವುಗಳಿಂದ ಸಿದ್ಧಪಡಿಸಿದ ತುಪ್ಪ ಅಥವಾ ಕಷಾಯವನ್ನು ಬೆಲ್ಲದ ನೀರಿನೊಂದಿಗೆ ಸೇವಿಸಬೇಕು. ಇದನ್ನು 2 ರಿಂದ 3 ದಿನಗಳವರೆಗೆ ಅಥವಾ ಹನ್ನೊಂದು ದಿನಗಳವರೆಗೆ ಅಶುದ್ಧ ರಕ್ತಸ್ರಾವವಾಗುವವರೆಗೆ ಸೇವಿಸಬೇಕು.
4. ಹಸಿವೆ ಆದ ನಂತರ ಬಿಸಿಯಾದ ಚೆನ್ನಾಗಿ ಬೆಂದ ಅನ್ನಕ್ಕೆ ತುಪ್ಪವನ್ನು ಬೆರೆಸಿ, ಕಾಳುಮೆಣಸಿನಿಂದ ಸಿದ್ಧಪಡಿಸಿದ ಸಾರನ್ನು ಮಿಶ್ರಣ ಮಾಡಿ ಸೇವಿಸುವುದು ಹಿತಕರ.
5. ಪ್ರತಿ ಆಹಾರದೊಂದಿಗೆ ತುಪ್ಪವನ್ನು ಮಿಶ್ರಣ ಮಾಡಿ ಸೇವಿಸುವುದು ಒಳ್ಳೆಯದು.
6. ಕಾಳು ಮೆಣಸಿನ ಸಾರನ್ನು ಕುಡಿಯಲೂ ಕೂಡ ಉಪಯೋಗಿಸಬಹುದು.
7. ದಿನ ನಿತ್ಯದ ಆಹಾರದಲ್ಲಿ ಹಾಲು, ಮೊಸರು ಹಾಗೂ ತುಪ್ಪವನ್ನು ಅಧಿಕ ಪ್ರಮಾಣದಲ್ಲಿ ಬಳಸಬೇಕು.
8. ಏಳು ದಿನಗಳ ನಂತರ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಇದರಲ್ಲಿ ಮುಖ್ಯವಾಗಿ ಬಾಣಂತಿಯ ಎದೆ ಹಾಲನ್ನು ಹೆಚ್ಚಿಸುವಂತಹ ಆಹಾರ ಸೇವನೆ ಮಾಡುವುದು ಅತ್ಯವಶ್ಯಕ.
9. ಶತಾವರಿ (ಹಲವು ಮಕ್ಕಳ ತಾಯಿ ಬೇರು), ಕಬ್ಬಿನ ಹಾಲು, ಜೀವಂತಿ (ಸಿಹಿ ಹಾಲೆ), ಕೆಂಪಕ್ಕಿ, ಬೆಳ್ಳುಳ್ಳಿ, ಸಬ್ಬಸಿಗೆ ಸೊಪ್ಪು, ಹಾಲು ಹಾಗೂ ಹಾಲಿನ ಉತ್ಪನ್ನಗಳು ಇವೆಲ್ಲವು ಸ್ತನ್ಯ (ಎದೆ ಹಾಲು) ವರ್ಧನೆಗೆ ಸಹಾಯಕಾರಿ.
10. ಜೀರ್ಣ ಶಕ್ತಿಯನ್ನು ಉತ್ತಮಗೊಳಿಸಲು ಹಿಪ್ಪಲಿ, ಹಿಪ್ಪಲಿಮೂಲ, ಶುಂಠಿಪುಡಿಯನ್ನು ಒಂದು ಚಮಚದಷ್ಟು ತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು. ತೆಳುವಾದ ಅನ್ನದ ಗಂಜಿಗೆ ಹಿಪ್ಪಲಿ ಮತ್ತು ಒಣ ಶುಂಠಿಯ ಪುಡಿಯನ್ನು ಹಾಕಿ ಸೇವಿಸಲು ಕೊಡಬೇಕು. ಇದೇ ರೀತಿ ಐದರಿಂದ ಏಳು ದಿನಗಳವರೆಗೆ ಪಾಲಿಸಬೇಕು. ಇದರೊಂದಿಗೆ ಭದ್ರದಾರುವನ್ನು ಹಾಕಿ ಕುದಿಸಿದ ನೀರನ್ನು ಕುಡಿಯಲು ಕೊಡಬೇಕು.
11. ಒಂದು ಲೋಟ ಬೆಲ್ಲದ ನೀರನ್ನು ಎರಡು ಬಾರಿ ಕುಡಿಯಬೇಕು. ಬೆಲ್ಲವು ಸುಣ್ಣ ಮತ್ತು ಕಬ್ಬಿಣಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ರಕ್ತದ ಅಂಶವನ್ನು ಪೂರೈಸುವ ದೃಷ್ಟಿಯಿಂದ ಬೆಲ್ಲದ ನೀರು ಹಿತಕರ.
12. ಬೂದಗುಂಬಳ, ಮೂಲಂಗಿ, ಸೌತೆಕಾಯಿ ಇವುಗಳ ಸೊಪ್ಪುಗಳನ್ನು ತುಪ್ಪದಲ್ಲಿ ಹುರಿದು ಮಾಡಿದ ಪಲ್ಯವು ಊಟದಲ್ಲಿರಬೇಕು.
13. ತುಪ್ಪದಲ್ಲಿ ಹುರಿದ ಸಬ್ಬಸಿಗೆ ಸೊಪ್ಪು ಮತ್ತು ಹಲವು ಮಕ್ಕಳ ತಾಯಿ ಬೇರಿನ ಗಿಡದ ಎಲೆಗಳನ್ನು ಸೇವಿಸಬೇಕು.
14. ಸಬ್ಬಸಿಗೆ ಸೊಪ್ಪಿನಿಂದ ಚಟ್ನಿ, ತಂಬುಳಿ, ದೋಸೆ, ಇಡ್ಲಿಗಳನ್ನು ತಯಾರಿಸಿ ಸೇವಿಸುವುದು ಹಿತಕರ.
15. ಶತಾವರಿ ಲೇಹ್ಯವನ್ನು ತಯಾರಿಸಿ ಸೇವಿಸಬೇಕು.
16. ಬೆಳ್ಳುಳ್ಳಿ ಚಟ್ನಿ, ತಂಬುಳಿಗಳನ್ನು ತಯಾರಿಸಿ ಸೇವಿಸುವುದು ಹಿತಕರ.
17. ಸೋರಲೆ ಸೊಪ್ಪು, ಎಲೆವರಿಗೆ ಸೊಪ್ಪು, ಚಕ್ರಮರ್ದ ಸೊಪ್ಪು, ದುಂಡು ಮಲ್ಲಗೆ ಗಿಡದ ಎಲೆ ಇತ್ಯಾದಿಗಳಿಂದ ಚಟ್ನಿಯನ್ನು ತಯಾರಿಸಿ ಸೇವಿಸುವುದು ಉತ್ತಮ.
18. ತರಕಾರಿ, ಸೊಪ್ಪುಗಳು (ಉದಾ: ಬಸಳೆ, ಹರಿವೆ, ಮೆಂತ್ಯ, ಪಾಲಕ್, ಪುದಿನ ಇತ್ಯಾದಿ) ಬೇಳೆ, ಕಾಳುಗಳು, ಸೇಬು ಸಪೋಟದಂತಹ ಶೀತಕಾರಕವಲ್ಲದ ಹಣ್ಣುಗಳ ಸೇವನೆ ಉತ್ತಮ. ದಾಳಿಂಬೆ, ಒಣದ್ರಾಕ್ಷಿ, ಅಂಜೂರ, ಖರ್ಜೂರ, ಉತ್ತುತ್ತಿಗಳು ಹಿತಕರ.
19. ಈರುಳ್ಳಿ, ಹುರುಳಿಕಾಯಿ, ಹೀರೇಕಾಯಿಯ ಪಲ್ಯಗಳು, ಬೆಳ್ಳುಳ್ಳಿಯನ್ನು ಹೆಚ್ಚಾಗಿ ಹಾಕಿ ತಯಾರಿಸಿದಂತಹ ಗೊಜ್ಜು ಅಥವಾ ತಿಳಿಸಾರು ಇತ್ಯಾದಿಗಳನ್ನು ಅನ್ನದೊಂದಿಗೆ ಸೇವಿಸಬೇಕು.
20. ಸಜ್ಜಿಗೆ, ಪಾಯಸ, ಕೀರು ಇತ್ಯಾದಿ ಸಿಹಿ ಆಹಾರಗಳನ್ನು ಸೇವಿಸಬೇಕು.
21. ಗೋಧಿ, ಅಕ್ಕಿ ಎಳ್ಳಿನ ಚಟ್ನಿ, ತೆಂಗಿನ ಕಾಯಿಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು.
22. ಅತ್ತಿ, ಆಲ ಮತ್ತು ಅರಳಿ ಮರಗಳ ಚಕ್ಕೆಯ ಕಷಾಯವನ್ನು ಹಾಲಿನೊಂದಿಗೆ ಕುದಿಸಿಕೊಂಡು ಸ್ವಲ್ಪ ತುಪ್ಪ, ಬೆಲ್ಲ, ಸೇರಿಸಿ ಅನ್ನದೊಂದಿಗೆ ಊಟ ಮಾಡಬೇಕು. ಇದರಿಂದ ತಾಯಿಯ ಎದೆ ಹಾಲು ಹೆಚ್ಚುತ್ತದೆ.
23. ಅಂಟಿನ ಉಂಡೆ ಸೇವನೆಗೆ ಹಿತಕರ.
ಅಂಟಿನ ಉಂಡೆ ಮಾಡುವ ವಿಧಾನ:
ದ್ರಾಕ್ಷಿ 1/4 ಕೆ.ಜಿ., ಉತ್ತುತ್ತಿ 1 ಕೆ.ಜಿ., ಬಾದಾಮಿ 100 ಗ್ರಾಂ, ಗಸಗಸೆ 1/4 ಕೆ.ಜಿ., ಕೆಂಪು ಕಲ್ಲು ಸಕ್ಕರೆ 50 ಗ್ರಾಂ, ಕೊಬ್ಬರಿ 1/2 ಕೆ.ಜಿ. ಜಾಲಿಯ ಅಂಟು 100 ಗ್ರಾಂ, ಬೆಲ್ಲ 1/2 ಕೆ.ಜಿ.
ಬಾದಾಮಿ, ಉತ್ತುತ್ತಿ, ಕಲ್ಲು ಸಕ್ಕರೆಗಳನ್ನು ಸಣ್ಣಗೆ ಪುಡಿಮಾಡಿಕೊಳ್ಳಬೇಕು. ಕೊಬ್ಬರಿಯನ್ನು ತುರಿದುಕೊಂಡು ಎಲ್ಲಾ ಪದಾರ್ಥಗಳನ್ನು ತಪ್ಪದಲ್ಲಿ ಹುರಿದುಕೊಳ್ಳಬೇಕು. ಅಂಟನ್ನೂ ಸಣ್ಣಗೆ ಪುಡಿಮಾಡಿಕೊಂಡು ತುಪ್ಪದಲ್ಲಿ ಹುರಿದು ಬೆಲ್ಲದ ಪಾಕದಲ್ಲಿ ಎಲ್ಲವನ್ನೂ ಸೇರಿಸಿಕೊಂಡು ಉಂಡೆಗಳನ್ನು ಮಾಡಿಕೊಳ್ಳುವುದು.
ಮುಂದುವರೆಯುವುದು…
ಡಾ. ನಾಗಶ್ರೀ. ಕೆ.ಎಸ್.
ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಈ.ತಿಮ್ಮಸಂದ್ರ ಗ್ರಾಮದಲ್ಲಿ ಕೆನರಾ ಬ್ಯಾಂಕ್ ಶಾಖೆಯ ಪ್ರಥಮ ಶಾಖಾ ವ್ಯವಸ್ಥಾಪಕರಾಗಿ ಎರಡು ವರ್ಷದಿಂದ ಸೇವೆ ಸಲ್ಲಿಸಿ ವರ್ಗಾವಣೆಯಾಗಿರುವ ಎಎಸ್ವಿ ಗುಪ್ತಾ ಅವರನ್ನು ಈ.ತಿಮ್ಮಸಂದ್ರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಬೀಳ್ಕೊಟ್ಟು ನೂತನ ಶಾಖಾ ವ್ಯವಸ್ಥಾಪಕರಾಗಿ ಬಂದಿರುವ ರಾಹುಲ್ ಅವರನ್ನು ಸ್ವಾಗತಿಸಿ ಇಬ್ಬರನ್ನೂ ಗೌರವಿಸಿದರು. ಮದ್ದಾಲ ಸಿದ್ದಯ್ಯಶೆಟ್ಟಿ, ಮದ್ದಾಲ ಶ್ರೀರಾಮಯ್ಯಶೆಟ್ಟಿ, ಪಿ.ವೆಂಕಟರವಣಪ್ಪ, ವೆಂಕಟಚಲಪತಿ, ಟಿ.ಪಿ.ಬೈರಾರೆಡ್ಡಿ, ಎಂ.ವಿ.ವೇಣುಗೋಪಾಲಶಾಸ್ತ್ರಿ, ಶ್ರೀರಾಮರೆಡ್ಡಿ, ವೆಂಕಟನರಸಪ್ಪ, ಚಂದ್ರಮೋಹನ್.ಎಂ.ವಿ, ಸುನಿಲ್ ಹಾಜರಿದ್ದರು.
ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪದಕ
ತಾಲ್ಲೂಕಿನ ತುಮ್ಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟದಲ್ಲಿ ಖೋ-ಖೋ ಪಂದ್ಯಾಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ೪೦೦ ಮೀ. ಓಟದಲ್ಲಿ ದಿವ್ಯ(ದ್ವಿತೀಯ), ೧೫೦೦ ಮೀ ಓಟದಲ್ಲಿ ಲಕ್ಷ್ಮಿ(ತೃತೀಯ), ೧೦೦ ಮೀ ಓಟದಲ್ಲಿ – ಸೌಂಧರ್ಯ (ತೃತೀಯ), ಉದ್ದಜಿಗಿತದಲ್ಲಿ- ಮೀನಾ (ತೃತೀಯ) ವಿಜೇತರಾಗಿದ್ದಾರೆ.
ಇದೇ ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿಯಲ್ಲಿ ನಾಟಕ ಸ್ಪರ್ಧೆಯಲ್ಲಿ ಉತ್ತಮವಾಗಿ ಅಭಿನಯಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಮೃತ ಕೆ.ಎನ್., ವಾಣಿಶ್ರೀ ಡಿ.ಕೆ., ದಿಲೀಪ್, ಭವಾನಿ, ಮೋಹನ್, ನವೀನ್, ಸಾಗರ್, ಧನುಷ್ ಇವರು ನಾಟಕ ಸ್ಫರ್ಧೆಯಲ್ಲಿ ತ್ರಿವೇಣ್ಕುಮಾರ್ ಕ್ಲೇಮಾಡಲಿಂಗ್ ಸ್ಪರ್ಧೆಯಲ್ಲಿ ಮೋಹನ್ ಮಿಮಿಕ್ರಿ ಸ್ಪರ್ಧೆಯಲ್ಲಿ ನಕುಲ್ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ರೇಷ್ಮೆ ಪ್ರವಾಸ
ಬಯಲುಸೀಮೆ ಜನರ ಜೀವನಾಡಿಯಾಗಿರುವ ರೇಷ್ಮೆ ಬೆಳೆಯನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸಬೇಕಾದಂತಹ ಅನಿವಾರ್ಯತೆ ಇದೆ ಎಂದು ದಿ.ಡಾ.ಸಂಜಯ್ದಾಸ್ಗುಪ್ತಾ ಪೌಂಡೇಷನ್ ‘ನಮ್ಮ ಮುತ್ತೂರು’ ಸಂಸ್ಥೆಯ ಸಂಚಾಲಕಿ ಉಷಾಶೆಟ್ಟಿ ತಿಳಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆ, ರೇಷ್ಮೆ ಬಿಚ್ಚಾಣಿಕೆ ಕೇಂದ್ರಗಳು, ಟ್ವಿಸ್ಟಿಂಗ್ ಮತ್ತು ಮಗ್ಗಗಳ ಘಟಕಗಳಿಗೆ ಸೋಮವಾರ ಬೇಟಿ ನೀಡಿದ್ದ ಹ್ಯಾಮೋಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳ ತಂಡದ ಜೊತೆಯಲ್ಲಿ ಆಗಮಿಸಿದ್ದ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಬಹುತೇಕ ರೈತರು ಹೈನುಗಾರಿಕೆ ಮತ್ತು ರೇಷ್ಮೆ ಉದ್ಯಮವನ್ನೆ ನಂಬಿಕೊಂಡು ಜೀವನ ಮಾಡುತ್ತಿದ್ದು, ಈ ಉದ್ಯಮದ ಬಗ್ಗೆ ಯುವಜನತೆಗೆ ಸರಿಯಾದ ಮಾಹಿತಿಯಿಲ್ಲದ ಕಾರಣ, ಉದ್ಯಮವನ್ನು ಬಿಟ್ಟು ಮಹಾನಗರದ ಕಡೆಗೆ ಉದ್ಯೋಗಗಳನ್ನು ಅರಸಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗುತ್ತಿದೆ. ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಹ್ಯಾಮೋಕ್ ಸಂಸ್ಥೆಯು ರಾಜ್ಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳನ್ನು ಕರೆತಂದು ಹಿಪ್ಪುನೇರಳೆ ತೋಟಗಳ ಬೆಳವಣಿಗೆ, ರೇಷ್ಮೆ ಮೊಟ್ಡೆಯ ಉತ್ಪಾದನೆ, ಹುಳುಗಳ ಬೆಳವಣಿಗೆ, ಗೂಡು ಕಟ್ಟುವಿಕೆ, ಗೂಡಿನಿಂದ ನೂಲು ತೆಗೆಯುವುದು ಸೇರಿದಂತೆ ‘ಚಿಟ್ಟೆಯಿಂದ ಬಟ್ಟೆಯವರೆಗಿನ’ ವಿವಿಧ ಹಂತಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಸ್ಥಳೀಯ ವಿದ್ಯಾರ್ಥಿಗಳಿಗೂ ಕೂಡಾ ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.
ತಾಲ್ಲೂಕಿನ ಮುತ್ತೂರಿನಲ್ಲಿ ಹಿಪ್ಪುನೇರಳೆ ತೋಟ, ಹುಳು ಸಾಕಾಣಿಕಾ ಕೇಂದ್ರ, ರೇಷ್ಮೆ ಬಿತ್ತನೆ ಕೋಠಿ, ರೇಷ್ಮೆ ಗೂಡಿನ ಮಾರುಕಟ್ಟೆ, ಸಿದ್ಧಾರ್ಥನಗರದ ನಾರಾಯಣಪ್ಪ ಅವರ ರೇಷ್ಮೆ ಬಿಚ್ಚಾಣಿಕಾ ಕೇಂದ್ರ, ಟ್ವಿಸ್ಟಿಂಗ್ ಘಟಕ, ಉಲ್ಲೂರುಪೇಟೆಯ ಅನಿಲ್ ಪದ್ಮಶಾಲಿ ಅವರ ರಾಮ್ ಸಿಲ್ಕ್ ಮಗ್ಗಗಳ ಘಟಕಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದರು.
ಹ್ಯಾಮೋಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಚಂದ್ರನ್, ಕಾರ್ಯದರ್ಶಿ ಶೀಬಾ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ವಿಸ್ತರಣಾಧಿಕಾರಿ ರಾಮ್ಕುಮಾರ್ ಮತ್ತಿತರರು ಹಾಜರಿದ್ದರು.
ಸೋಮವಾರ ಬಿದ್ದ ಮಳೆಗೆ ದಿಬ್ಬೂರಹಳ್ಳಿ ಕೆರೆಯು ಕೋಡಿ ಹರಿದಿದೆ
ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಸೋಮವಾರ ಬಿದ್ದ ಮಳೆಗೆ ದಿಬ್ಬೂರಹಳ್ಳಿ ಕೆರೆಯು ಕೋಡಿ ಹರಿದಿದೆ. ಸುಮಾರು ಎಂಟು ವರ್ಷಗಲ ನಂತರ ಈ ರೀತಿ ಕೋಡಿ ಹರಿದಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ರಾಜ್ಯಮಟ್ಟದ ಅಥ್ಲೆಟಿಕ್ಸ್ನಲ್ಲಿ ತಾಲ್ಲೂಕಿನ ಕ್ರೀಡಾಪಟುವಿಗೆ ಚಿನ್ನದ ಪದಕ
ತಾಲ್ಲೂಕಿನ ಜಯಂತಿ ಗ್ರಾಮದ ಕ್ರೀಡಾಪಟು ನಾರಾಯಣಸ್ವಾಮಿ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಿ ಮೂರು ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗಳಿಸಿದ್ದಾರೆ.
ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ನಲ್ಲಿ 10 ಸಾವಿರ ಮೀಟರ್ ಓಟದಲ್ಲಿ ಚಿನ್ನ, 5000 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು 1500 ಮೀಟರ್ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.
‘ರೈತನಾಗಿದ್ದರೂ ಕ್ರೀಡೆಯಲ್ಲಿ ನನಗಿರುವ ಆಸಕ್ತಿಯನ್ನು ಗುರುತಿಸಿ ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್ ತರಬೇತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿಯನ್ನು ಹೊಂದಿದ್ದೇನೆ’ ಎಂದು ಜಯಂತಿ ಗ್ರಾಮದ ಕ್ರೀಡಾಪಟು ನಾರಾಯಣಸ್ವಾಮಿ ತಿಳಿಸಿದರು.

