ಜೀವದಾನ ಮಾಡುವ ರಕ್ತವನ್ನು ಯಾವ ಕಂಪನಿಗಳಲ್ಲಿಯೂ ತಯಾರಿಸಲು ಸಾಧ್ಯವಿಲ್ಲ, ಪ್ರಕೃತಿದತ್ತವಾಗಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವಂತಹ ರಕ್ತವನ್ನು ಆರೋಗ್ಯವಂತ ವ್ಯಕ್ತಿಗಳು ದಾನಮಾಡಬೇಕು ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಹಾಗೂ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಒಕ್ಕಲಿಗರ ಯುವಸೇನೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ಸಂಘಟನೆಗಳು, ರಕ್ತದಾನದಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ, ನಗರದ ಯೂನಿಟಿ ಸಿಲ್ಸಿಲಾ ಸಂಘಟನೆ, ದಲಿತ ಸಂಘಟನೆಗಳು, ಸರ್ಕಾರಿ ಅಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘಗಳು ಸೇರಿದಂತೆ ಅನೇಕ ಮಂದಿ ರಕ್ತದಾನದಲ್ಲಿ ಪಾಲ್ಗೊಳ್ಳುವ ಮೂಲಕ, ರಕ್ತದ ಕೊರತೆಯಿಂದಾಗಿ ಕಂಗಾಲಾಗುತ್ತಿರುವ ಗರ್ಭೀಣಿಯರು, ಅಪಘಾತಗಳಿಗೆ ಒಳಗಾಗಿರುವವರು, ದೈಹಿಕವಾಗಿ ಬಲಹೀನರಾಗಿರುವವರು ಎಂದು ಹೇಳಿದರು.
ತಾಲ್ಲೂಕು ಒಕ್ಕಲಿಗರ ಯುವಸೇನೆ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ದೇಶಕ್ಕೆ ಹಾಲು, ತರಕಾರಿ ಕೊಟ್ಟಂತಹ ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಿಭಜಿತ ಜಿಲ್ಲೆಯ ಜನತೆ ರಕ್ತದಾನ ಮಾಡುವುದರಲ್ಲಿಯೂ ಪ್ರಥಮ ಸ್ಥಾನದಲ್ಲಿದ್ದೇವೆ. ಸರ್ಕಾರ ನಮಗೆ ನೀರು ಕೊಡಲಿ ಎಂದು ತಿಳಿಸಿದರು.
ಯುವಕರು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು ರಕ್ತದಾನ ಮಾಡಿದರು. 106 ಯೂನಿಟ್ ರಕ್ತ ಸಂಗ್ರಹವಾಯಿತು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜನಯ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಕೆ.ಗುರುರಾಜ್, ಜಿ.ಶಶಿಕುಮಾರ್, ಒಕ್ಕಲಿಗರ ಯುವಸೇನೆಯ ನಗರ ಘಟಕದ ಅಧ್ಯಕ್ಷ ಪುರುಷೋತ್ತಮ್, ತಾಲ್ಲೂಕು ಉಪಾಧ್ಯಕ್ಷ ಪ್ರಭಾಕರ್, ಪ್ರಧಾನಕಾರ್ಯದರ್ಶಿ ಬಿ.ಮಂಜುನಾಥ್, ಮುದ್ದುರಾಜ್, ಶಂಕರ್, ಗಂಗಿರೆಡ್ಡಿ, ಎಸ್.ಎನ್.ಮರಳಿಮೋಹನ್, ಮುರಳಿ ಮತ್ತಿತರರು ಹಾಜರಿದ್ದರು.
ರಕ್ತವನ್ನು ತಯಾರಿಸಲಾಗದು, ದಾನ ಮಾಡಿ
ಉಪಬೆಳೆಯಾಗಿ ಕೋಕೋ ಎಷ್ಟು ಸೂಕ್ತ?
ಕೋಕೋ ಬೆಳೆ ವಾಣಿಜ್ಯ ಬೆಳೆಯಾಗಿ ಕಾಲಿರಿಸಿ ವಿಪರೀತ ವರ್ಷಗಳಾಗಿಲ್ಲ. ಆದರೆ ಈ ಅಲ್ಪಾವಧಿಯಲ್ಲಿ ಅದಕ್ಕೆ ಸಿಕ್ಕ ಪ್ರಚಾರ ನಿರೀಕ್ಷೆಗಿಂತ ಹೆಚ್ಚು. ಉಳಿದ ಕೃಷಿಕರಂತೆ ಬಹುವಾರ್ಷಿಕ ಬೆಳೆಗಳ ಮಧ್ಯೆ ಮಲೆನಾಡು, ಕರಾವಳಿಯ ಕೃಷಿಕರು ಅಡಿಕೆ, ತೆಂಗು ತೋಟದಲ್ಲಿ ಕೋಕೋವನ್ನು ಉಪಬೆಳೆಯಾಗಿ ಬೆಳೆಯುವ ಪ್ರಾಯೋಗಿಕ ಯತ್ನ ನಡೆಸಿದರು. ಯಶಸ್ವಿಯೂ ಆದರು. ಆದರೆ ಅದೇ ಅಂತಿಮ ಎನ್ನಿಸಲಿಲ್ಲ. ಸಮಸ್ಯೆಗಳು ಕಾಣಿಸಿಕೊಂಡವು. ಈ ಹಂತದಲ್ಲೇ ಉಪಬೆಳೆಯಾಗಿ ಕೋಕೋ ಸೂಕ್ತವೇ ಎಂಬ ಪ್ರಶ್ನೆ ಮೂಡಿದ್ದು.
ಉಪಬೆಳೆಯಾಗಿ ಕೋಕೋ ಸೂಕ್ತವಲ್ಲ ಎನ್ನುವಷ್ಟೇ ಮಂದಿ ಸೂಕ್ತ ಎನ್ನುವವರೂ ಇದ್ದಾರೆ. ಅವರದೇ ಆದ ವಾದವನ್ನೂ ಹೊಂದಿದ್ದಾರೆ. ಅದು ಹೀಗಿದೆ.
1. ಕೋಕೋ ವಿಶೇಷ ನಿರ್ವಹಣೆಯಿಲ್ಲದೆ ಬದುಕುವ, ಬೆಳೆ ಕೊಡುವ ಬೆಳೆ. ಅದಕ್ಕೆ ಪ್ರತ್ಯೇಕ ನೀರು, ಗೊಬ್ಬರಗಳ ಅಗತ್ಯ ಇಲ್ಲವೇ ಇಲ್ಲ.
2. ಗಿಡದ ತುಂಬಾ ಎಲೆಗಳನ್ನು ಹೊಂದಿ ಸೊಂಪಾಗಿ ಬೆಳೆಯುವುದರಿಂದ ತೋಟದಲ್ಲಿ ಕಳೆ ಕಡಿಮೆಯಾಗುತ್ತದೆ. ಹೆಚ್ಚುವರಿ ಕೊಂಬೆಗಳನ್ನು ಸವರುವುದರಿಂದ ತೋಟಕ್ಕೆ ಸೊಪ್ಪೂ ದೊರಕುತ್ತದೆ. ಉದುರಿದ ಎಲೆಗಳು ಕೂಡ ಇದೇ ರೀತಿಯ ಅನುಕೂಲವೊದಗಿಸುತ್ತವೆ.
3. ಯಾವುದೇ ರೀತಿಯ ರೋಗ, ಕಾಟಗಳಿಲ್ಲ. ಕೆಲವು ಕಡೆ ಕಾಟಗಳು ಇವೆಯಾದರೂ ನಗಣ್ಯ.
4. ತೋಟಕ್ಕೆ ನೆರಳು ಒದಗಿಸುತ್ತವೆ. ನೆರಳಿನಿಂದಾಗಿ ಎಲೆ ಅಡಿಕೆ ಸಸಿಗಳು ಬೆಳೆಯಲು ಸುಲಭವಾಗುತ್ತದೆ. ಅಡಿಕೆ ಸಸಿಗಳಿಗೆ ಪಶ್ಚಿಮ ದಿಕ್ಕಿನಿಂದ ಸೂರ್ಯನ ಬಿಸಿಲು ಬೀಳಬಾರದು. ಆ ರಕ್ಷಣೆ ಇದರಿಂದ ಸಿಗುತ್ತದೆ.
ಗಮನಿಸಬೇಕಾದುದೆಂದರೆ, ರಾಸಾಯನಿಕ ಆಧಾರಿತ ಮತ್ತು ಸಾವಯವ ಅನುಸರಿಸುವ ಕೃಷಿಕರಿಬ್ಬರೂ ಅಡಿಕೆ ತೋಟದಲ್ಲಿ ಕೋಕೋ ಬೆಳೆಯುವುದು ಮುಖ್ಯ ಬೆಳೆಗೆ ಮಾರಕವೆಂತಲೇ ವಾದಿಸುತ್ತಾರೆ. ಕೋಕೋ ಬೇಕೆನ್ನುವವರು ನೀಡಿದ ಪಟ್ಟಿಯನ್ನು ಈ ಮಂದಿ ಅಲ್ಲಗಳೆಯುತ್ತಾರೆ. ಅವರ ಸಮರ್ಥನೆ, ಸಂಶೋಧನೆಗಳ ಪ್ರವರ ಇಲ್ಲಿದೆ.
1. ಕೋಕೋ ಪ್ರತ್ಯೇಕ ನಿರ್ವಹಣೆ ಇಲ್ಲದೆ ಬೆಳೆಯಬಲ್ಲದು ನಿಜ. ಆದರೆ ಶೀಘ್ರ ಬೆಳವಣಿಗೆ ಲಕ್ಷಣಗಳನ್ನು ಹೊಂದಿರುವ ಗಿಡಗಳು ಹೆಚ್ಚು ಭೂಸಾರ ತಿನ್ನುವುದು ಖಚಿತ. ಈಗ ಹೇಳಿ ಇದೇ ಜೀವಲಕ್ಷಣದ ಕೋಕೋ ಮುಖ್ಯ ಬೆಳೆಗೆ ತೊಂದರೆ ನೀಡದೆ?
2. ಕೋಕೋ ಅತಿ ಹೆಚ್ಚು ಸೊಪ್ಪು, ನೆರಳು ನೀಡುತ್ತದೆ. ಆದರೆ ಈ ಅತಿ ಕೂಡ ತೋಟಕ್ಕೆ ಹಾನಿಕರ. ಇವು ವಿಶಾಲವಾಗಿ ವಿಸ್ತರಿಸುವುದರರಿಂದ ತೋಟಕ್ಕೆ ಗೊಳಲಾಗುತ್ತದೆ. (ಗೊಳಲು-ಗ್ರಾಮ್ಯಪದ-ಅಗತ್ಯಕ್ಕಿಂತ ಹೆಚ್ಚು ನೆರಳು ಉಂಟಾದಾಗಿನ ಪ್ರದೇಶ, ವಾತಾವರಣ) ಅಡಿಕೆ ಸಸಿಗಳು ಏಳಲಾರವು. ಇತರೆ ಉಪಬೆಳೆಗಳು (ಏಲಕ್ಕಿ, ಕಾಫಿ) ನಾಶವಾಗುತ್ತವೆ. ಅಲ್ಲದೆ ದರಲೆ ಕಾದಿಗೆ (ತೋಟದಲ್ಲಿ ನೀರು ಹರಿಯಲು ಮಾಡಿದ ಸಣ್ಣ ಕಾಲುವೆ)ಯಲ್ಲಿ ಸೇರಿ ನೀರಿನ ಹರಿವಿಗೆ ಅಡಚಣೆ ಮಾಡುತ್ತದೆ. ತೋಟದಲ್ಲಿ ನೀರು ನಿಲ್ಲುವುದರಿಂದ ಮಹಾಳಿ(ಕೊಳೆ)ಯಂಥ ರೋಗಗಳ ಸಾಧ್ಯತೆ ಹೆಚ್ಚು.
3. ಇತ್ತೀಚೆಗೆ ಇದಕ್ಕೆ ಕೊಳೆ ರೋಗದ ಬಾಧೆ ಕಾಣಿಸಿದೆ. ಕಾಯಿ ಬೆಳೆಯುವ ಮುನ್ನವೇ ರೋಗಾಣುಗಳಿಗೆ ತುತ್ತಾಗಿ ಕಪ್ಪಾಗಿ ಕೊಳೆಯುತ್ತದೆ, ಈ ಬಾರಿ ಅನೇಕರು ಈ ಸಮಸ್ಯೆಗೆ ಸಿಲುಕಿದ್ದಾರೆ.
4. ಮಂಗ, ಕಾಡುಬೆಕ್ಕು (ಕಬ್ಬೆಕ್ಕು)ಗಳು ಇದರ ರುಚಿ ಕಂಡಿವೆ. ಈ ಪ್ರಾಣಿಗಳ ಹಾವಳಿಯ ಅಂದಾಜು ಕಷ್ಟ. ಈ ಲೇಖಕರಂಥವರ ಅನುಭವವೇ ಸಾಕು.
5. ಇಂದು ಕೋಕೋ ಕೊಳ್ಳುತ್ತಿರುವವರು ಕ್ಯಾಂಪ್ಕೋದವರೊಂದೇ. ಒಂದು ವೇಳೆ ನಷ್ಟವಾಗಿಯೇ, ಇನ್ನಾವುದೋ ಬಹಿರಂಗಪಡಿಸಿದ ಕಾರಣಗಳಿಗಾಗಿ ಕೊಳ್ಳುವಿಕೆಯನ್ನು ನಿಲ್ಲಿಸಿದರೆ ಸಮಸ್ಯೆ ಗಗನ ಸದೃಶವಾಗುವುದು.
ಈ ಎರಡು ಮಾರ್ಗಗಳಲ್ಲಿ ಕೃಷಿಕನಿಗೆ ಯಾವುದು ಉತ್ತಮವೆಂದು ಆಲೋಚಿಸಿ. ಇವೆರಡೂ ಸ್ವೀಕಾರಾರ್ಹವೆನಿಸದಿದ್ದಲ್ಲಿ ಇನ್ನೊಂದು ಕೊನೆ ಮಾರ್ಗವಿದೆ. ಇದು ಅನಿವಾರ್ಯ ಅಲ್ಲ. ಆದರೆ ಎರಡನೇ ಮಾರ್ಗವನ್ನು ಒಪ್ಪಿಯೇ ಮುಂದಿಡಬೇಕಾದ ಹೆಜ್ಜೆ. ಕೃಷಿಕರು ಮನೆಯ ಹಿಂದಿನ ಗುಡ್ಡಗಳಲ್ಲಿ ಕೋಕೋವನ್ನು ಬೆಳೆಸಬಹುದು. ಅದು ಮುಖ್ಯ ಬೆಳೆಯೂ ಆದೀತು. ಇದೇನು ಹೊಸ ಯೋಚನೆಯಲ್ಲ. ಈ ಲೇಖಕ ಸಾಗರದಲ್ಲಿ ಹಿಂದೊಮ್ಮೆ ಕೋಕೋ ಬೀಜ ಮಾರಲು ಹೋದಾಗ ರೈತರೋರ್ವರು ಒಮ್ಮೆಗೆ 92 ಕೆ.ಜಿ. ಬೀಜವನ್ನು ಮಾರಲು ತಂದ ಉದಾಹರಣೆ ಇದೆ. ಇವರು ಕೋಕೋ ಬೆಳೆದದ್ದು ಬೋಳು ಗುಡ್ಡದಲ್ಲಿ.
ಈ ಪದ್ಧತಿಯ ಪ್ರತ್ಯಕ್ಷ, ಪರೋಕ್ಷ ಅನುಕೂಲಗಳು ಹೀಗಿವೆ.
1. ಪ್ರತ್ಯೇಕ ನೀರು, ನೆರಳು ಅಗತ್ಯವಿಲ್ಲ. ವರ್ಷಕ್ಕೊಮ್ಮೆ ಹಟ್ಟಿಗೊಬ್ಬರ, ಹೆಚ್ಚುವರಿ ಕೊಂಬೆಗಳ ಕಟಿಂಗ್ ಸಾಕು, ಇದಕ್ಕೂ ಹೆಚ್ಚಿನ ನಿರ್ವಹಣೆ ಅನಗತ್ಯ.
2. ತೋಟದಲ್ಲಿಗಿಂತ ರೋಗಗಳು ಕಡಿಮೆ.
3. ಬೆಟ್ಟಗಳ ಕೃತಕ ಸೃಷ್ಟಿಯಿಂದ ಮಳೆಯಿಂದುಂಟಾಗುವ ಭೂ ಕೊರೆತ ತಪ್ಪುತ್ತದೆ.
4. ‘ಇಂದು ಹಳ್ಳಿಗರು ಮನೆ ಸುತ್ತ ಏನೂ ಬೆಳೆಯುವುದಿಲ್ಲ. ಮಂಗ ವಂಶಸ್ಥರ ಕಾಟ. ಆದರೆ ಗುಡ್ಡಗಳಲ್ಲಿ ಕೋಕೋ ಬೆಳೆಯುವುದರಿಂದ ಮಂಗಗಳು ಅಲ್ಲೇ ತಮ್ಮ ಆಹಾರ ಮೂಲ ಕಂಡುಕೊಳ್ಳುತ್ತದೆ. ಇದರಿಂದ ಮನೆ ಸುತ್ತ ಮಂಗಗಳ ಕಾಟ ತಪ್ಪುತ್ತೋ ಇಲ್ಲವೋ ಆದರೆ ಖಂಡಿತಾ ಕಡಿಮೆಯಾಗುತ್ತದೆ. ಇದು ಬಹುದೊಡ್ಡ ಪರೋಕ್ಷ ಅನುಕೂಲ.
5. ಪ್ರತ್ಯೇಕವಾಗಿ ಬೆಳೆಯುವುದರಿಂದ ತೋಟದ ಅಥವಾ ವ್ಯಾವಹಾರಿಕ ನಷ್ಟ ಅನುಭವಿಸುವ ಸಮಸ್ಯೆಗಳಿಲ್ಲ.
ಈ ಎಲ್ಲ ವಿವರಗಳು ಅನೇಕ ಕೃಷಿಕರ ಅನುಭವ ಆಧಾರಿತವಾದದ್ದು. ಕೊನೆ ಪಕ್ಷ ಗುಡ್ಡ, ಖುಷ್ಕಿಯಲ್ಲಿ ಬೆಳೆಯಲು ಯಾರ ತಕರಾರೂ ಇಲ್ಲ. ಹಾಗಿದ್ದರೆ ಕೋಕೋ ಬೆಳೆಯುವ ವಿಧಾನ ಹೇಗೆ? ಅದನ್ನು ವಿವರಿಸುವುದಾದರೆ, ಸಾಮಾನ್ಯವಾಗಿ ಎಲ್ಲಾ ವಿಧದ ಮಣ್ಣಿನಲ್ಲೂ ಕೋಕೋ ಬೆಳೆಯುತ್ತದಾದರೂ ಮರಳು ಮಿಶ್ರಿತ ಗೋಡು, ಕೆಂಪು ಗೋಡು ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಟ್ಟಿ ನೆಲ ಮತ್ತು ಜೌಗು ಭೂಮಿ ಯೋಗ್ಯವಲ್ಲ. ಗಿಡಗಳು ಸುಲಭ ಲಭ್ಯ. ಕಸಿ ಗಿಡಗಳ ಅಗತ್ಯವೇ ಇಲ್ಲ. ಮಳೆಗಾಲದಲ್ಲಿ ಈ ಗಿಡದ ಬುಡದಲ್ಲಿ ಎದ್ದ ಸಸಿಗಳನ್ನೇ ನೇರವಾಗಿ ತಂದು ನಾಟಿ ಮಾಡಬಹುದು. ನೆಟ್ಟ 2 ವರ್ಷಕ್ಕೆ ಹೂ ಬಿಡುವ ಕೋಕೋ ಮೂರನೇ ವರ್ಷದಿಂದಲೇ ಪೂರ್ಣ ಪ್ರಮಾಣದ ಫಸಲು ಕೊಡುತ್ತವೆ. ಸ್ವಾರಸ್ಯವೆಂದರೆ ಕಸಿ ಗಿಡಗಳಲ್ಲೂ ಇದೇ ಕತೆ! ಹೈಬ್ರಿಡ್ ತಳಿಗಳನ್ನು ಹಲವರು ಬೆಳೆಸುತ್ತಿದ್ದು, ಇದರಲ್ಲಿ ಕಾಯಿ ದೊಡ್ಡದಾಗಿರುವುದಲ್ಲದೆ 250 ರಿಂದ 400 ಗ್ರಾಂವರೆಗೂ ಬೀಜ ತೂಗುತ್ತದೆ. ಸಾಮಾನ್ಯ ತಳಿಗಳಲ್ಲಿ ಬೀಜ 200 ಗ್ರಾಂಗಳ ಆಜುಬಾಜು ತೂಗುತ್ತದೆ. ಪ್ರಸ್ತುತ ತೋಟಗಾರಿಕೆ ಇಲಾಖೆಯಲ್ಲೂ ಪ್ರತಿ ಗಿಡಕ್ಕೆ 2 ರೂ.ನಂತೆ ಸಿಗುತ್ತಿದೆ. ಒಂದು ಎಕರೆಗೆ 436 ಗಿಡಗಳನ್ನು ನೆಡಬಹುದು. 3ಮೀ. ಅಂತರದಲ್ಲಿ 90 ಸೆಂ.ಮಿ. ಘನಾಕೃತಿಯ ಗುಣಿಗಳನ್ನು ತೋಡಬೇಕು. 4ರಿಂದ 6 ತಿಂಗಳ ಸಸಿ ನಾಟಿ ಮಾಡಲು ಸೂಕ್ತ. ನಂತರದ ದಿನಗಳಲ್ಲಿ ಗಿಡ ಚೆನ್ನಾಗಿ ಬೆಳೆಯಲು ಕೆಲವು ಹೊರಚಾಚಿದ ಕೊಂಬೆಗಳನ್ನು ಕತ್ತರಿಸುತ್ತಿರಬೇಕು. ಬಹುಪಾಲು ಗಿಡಗಳು 2 ವರ್ಷಗಳ ನಂತರ ಹೂ ಬಿಡುತ್ತದೆ. 8 ವರ್ಷಗಳ ನಂತರ ಪೂರ್ಣಪ್ರಮಾಣದ ಇಳುವರಿ ನೀಡುತ್ತದೆ. ಕಾಯಿ ಹಣ್ಣಾಗುವಾಗ ನಸುಹಳದಿ ಬಣ್ಣದ್ದಾಗಿರುತ್ತದೆ. ಇದರ ಬೀಜಗಳನ್ನು ಮಾತ್ರ ಖರೀದಿಸಲಾಗುವುದರಿಂದ ಉಳಿದ ಸಿಪ್ಪೆಯನ್ನು ಸ್ವಲ್ಪ ಪ್ರಮಾಣ ಜಾನುವಾರುಗಳಿಗೆ ಮತ್ತು ಹೆಚ್ಚಾದುದನ್ನು ಗೊಬ್ಬರ, ಗೋ ಗ್ಯಾಸ್ ಸ್ಥಾವರಕ್ಕೆ ಉಣಿಸಬಹುದು.
ಯಾವುದೋ ಹೊಸ ಬೆಳೆಯ ಗಿಡವೊಂದಕ್ಕೆ 15-20 ರೂ. ಕೊಟ್ಟು ತ್ರಿಶಂಕು ಸ್ವರ್ಗ ಅನುಭವಿಸುವುದಕ್ಕಿಂತ ಕೃಷಿಕನಿಗೆ ‘ಕೈ ತುತ್ತು’ ಕೊಡುವ ಕೋಕೋ ಆತ್ಮೀಯವಾಗಬೇಕು.
– ಮಾ.ವೆಂ.ಸ.ಪ್ರಸಾದ್
ಮಹಿಳೆಯರಿಗೆ ಸುರಕ್ಷಿತ ಭಾವ ಮೂಡಿಸಬೇಕು
ಕಠಿಣ ಕಾನೂನುಗಳಷ್ಟೇ ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯಲಾರವು. ಮಹಿಳೆಯರಿಗೆ ಸುರಕ್ಷಿತ ಭಾವವನ್ನು ಉಂಟುಮಾಡುವ ಕಾರ್ಯ ನಡೆಯಬೇಕಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಜಿಲ್ಲಾ ಅಧ್ಯಕ್ಷ ನಾಗದೇನಹಳ್ಳಿ ನಾರಾಯಣಸ್ವಾಮಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಂದು ತಾಲ್ಲೂಕಿನಲ್ಲೂ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ಮಹಿಳಾ ಘಟಕಗಳನ್ನು ಸ್ಥಾಪಿಸಿ, ಮಹಿಳೆಯರ ದೌರ್ಜನೆಯನ್ನು ತಡೆಗಟ್ಟಬೇಕು. ಮಹಿಳಾ ಘಟಕದಲ್ಲಿ ಮಹಿಳೆಯರು ನಿರ್ಭಯವಾಗಿ ತಮ್ಮ ನೋವು, ಕಷ್ಟ, ದುಃಖ, ಅನ್ಯಾಯಗಳನ್ನು ಚರ್ಚಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಕಾನೂನುಗಳ ಭದ್ರತೆಯೊಂದಿಗೆ ಅನ್ಯಾಯಕ್ಕೊಳಗಾದ ಮಹಿಳೆಗೆ ಆಪ್ತ ಸಲಹೆ ಸಹಾಯ ಬಹು ಮುಖ್ಯ. ಅನೇಕ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿಹೋಗಿರುವ ನಿದರ್ಶನಗಳಿವೆ. ಅನ್ಯಾಯದ ವಿರುದ್ಧ ನಿರಂತರ ಹೋರಾಟ ಗುರಿಯಾಗಲಿ ಎಂದು ಹೇಳಿದರು.
ಕಳೆದ ಹತ್ತು ವರ್ಷಗಳಿಂದ ಶಾಶ್ವತ ನೀರಾವರಿ ಯೋಜನೆ ಕುರಿತಂತೆ ಘೋಷಣೆಗಳು ಭಾಷಣಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಕೇಳಿ ಬರುತ್ತಿವೆ. ಕೇವಲ ಹೇಳಿಕೆಗಳನ್ನು ನೀಡುವ ಮೂಲಕ ಅವಕಾಶವಾದಿ ರಾಜಕಾರಣ ನಡೆಸುತ್ತಿದ್ದಾರೆ. ಕೇವಲ ಹೇಳಿಕೆಗಳನ್ನು ನೀಡದೇ ಕಳಸಾ ಬಂಡೂರಿ ಹೋರಾಟದ ಮಾದರಿಯಲ್ಲಿ ರಾಷ್ಟ್ರವ್ಯಾಪಿ ಗಮನಸೆಳೆಯುವಂತೆ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಸಭೆಯ ನಂತರ ಮಾನವ ಹಕ್ಕುಗಳ ಹೋರಾಟಗಾರರ ಸಂಘದ ತಾಲ್ಲೂಕು ಅಧ್ಯಕ್ಷರನ್ನಾಗಿ ಮೂರ್ತಿ ಅವರನ್ನು ಆಯ್ಕೆ ಮಾಡಿ ನೇಮಕಾತಿ ಪತ್ರವನ್ನು ನೀಡಲಾಯಿತು.
ಮಾನವ ಹಕ್ಕುಗಳ ಹೋರಾಟಗಾರರ ಸಂಘದ ರಾಜ್ಯ ಉಪಾಧ್ಯಕ್ಷ ಕಲ್ಲಹಳ್ಳಿ ವೆಂಕಟೇಶ್, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ರಾಜು, ಜಿಲ್ಲಾ ಯುವ ಘಟಕದ ಅಧ್ಯಕ್ಷ ನವೀನ್ಕುಮಾರ್, ಪ್ರಧಾನ ಕಾರ್ಯದರ್ಶಿ ಬೋದಗೂರು ನವೀನ್, ಸತೀಶ್, ನಾಗಾರ್ಜುನ, ಗೋಪಾಲ್, ಶಫೀವುಲ್ಲಾ, ಮಂಜು, ಪ್ರದೀಪ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮಂಗಳನ ಅಂಗಳದಲ್ಲಿ ಅವಳಿ ರೊಬಾಟುಗಳು ಭಾಗ – 1
ಭೂಮಿಯ ಪುತ್ರ ಮಂಗಳ ಉಗ್ರಸ್ವಭಾವದ ಕ್ರೂರ ಗ್ರಹ, ತಮೋ ಪಿತ್ತಕಾರಕ… ಎಂಬಿತ್ಯಾದಿ ಮಾನವಗುಣಗಳುಳ್ಳ ಬಿಂಬವೆಂದು ಭಾರತೀಯ ಜ್ಯೋತಿಷ್ಯಶಾಸ್ತ್ರದ ನಂಬಿಕೆ. ಆದರೆ ಆಧುನಿಕ ವಿಜ್ಞಾನಕ್ಷೇತ್ರ ಮಂಗಳನಂಗಳದ ಆಳ ಅಗಲಗಳನ್ನು ಅಳೆದು ಅಲ್ಲಿಗೆ ಮಾನವನನ್ನು ಕಳಿಸಲು ಸಜ್ಜಾಗುತ್ತಿದೆ.
ಚಿತ್ರ ನೋಡಿ, ಫಕ್ಕನೆ ಏನನಿಸುತ್ತದೆ? ನಿಮ್ಮೂರಿನ ಶಾಲಾಮೈದಾನವೇ? ಕಬ್ಬಿಣದ ಗಣಿಯೊಂದರ ವಿಸ್ತøತ ನೋಟವೇ? ಇರಬಹುದು, ಏಕೆಂದರೆ ನಮ್ಮಲ್ಲಿಯ ಗಣಿಪ್ರದೇಶದಂತೆ ಇಲ್ಲೂ ಹಸಿರಿನ ಉಸಿರಿಲ್ಲ, ಎಲ್ಲೆಲ್ಲೂ ಕಂದು ಬಣ್ಣದ ಮಣ್ಣು.
ಇದು ಭೂಮಿಯ ಸೋದರ ಗ್ರಹವಾದ ಮಂಗಳನ ಬರಡು ನೆಲದ ಚಿತ್ರ. ನೋಡಿದರೆ ನಮಗೆ ಅತಿ ಪರಿಚಿತ ಸ್ಥಳವೇನೋ ಎಂದು ಭಾಸವಾಗುತ್ತಿರುವ ಚಿತ್ರ.
ಆದರೆ……
ಇಡೀ ಮಂಗಳ ಗ್ರಹದ ಯಾವುದೇ ಭಾಗವಾದರೂ ಇದೇ ನೋಟ, ಅಂದರೆ ಆಳದ ಕಮರಿಗಳು, ಎತ್ತರದ ಗುಡ್ಡಗಳು, ಸಮತಟ್ಟಿನ ಬಯಲು ಎಲ್ಲೆಲ್ಲೂ ಕಂದು ಬಣ್ಣದ ಹುಡಿಮಣ್ಣು, ಕಲ್ಲುಹರಳು, ಬಂಡೆಗಲ್ಲುಗಳ ನೆಲ. ಆಗೀಗ ಭುಸ್ಸನೆಂದು ಮೇಲೇಳುವ ದೂಳುಕಣಗಳ ದಂಡನ್ನು ಬಿಟ್ಟರೆ ಅಲ್ಲಿ ಜೀವಜಂತುವಿನ ಸುಳಿವಿಲ್ಲ, ಹಸಿರು ಸಸ್ಯರಾಶಿಯಿಲ್ಲ, ಹರಿಯುವ ನದಿ ತೊರೆಗಳಿಲ್ಲ, ಉಕ್ಕೇರುವ ಸಮುದ್ರಸಾಗರಗಳಿಲ್ಲ.
ಇಂಥ ಮಂಗಳನನ್ನು ಕೈವಶ ಮಾಡಿಕೊಂಡು ಮುಂದೊಂದು ದಿನ ಅಲ್ಲಿ ಮಾನವ ವಸಾಹತು ಮಾಡಬೇಕೆಂಬುದು ಆಧುನಿಕ ಮಾನವನ ಕನಸು. ಹಾಗೆ ನೋಡಿದರೆ ಇದು ತಂತ್ರಜ್ಞಾನದ ಹುಚ್ಚು ಕನಸು ಎಂದರೇ ಸರಿಯಾಗಬಹುದೇನೋ.
ಕೋಟಿ ವರ್ಷಗಳ ಹಿಂದೆ ಹಸಿಯಾಗಿ ಬೆಚ್ಚಗಿದ್ದ ಮಂಗಳನ ವಾತಾವರಣದಲ್ಲಿ ಕಬ್ಬಿಣದ ಅದಿರು ತುಕ್ಕು ಹಿಡಿದು ಕೆಂಪನೆಯ ಬಣ್ಣಗಟ್ಟಿದೆಯೆಂಬ ವಾದವಿದೆ. ಮಂಗಳನ ವಾತಾವರಣ ಹೇಗೆ ಬದಲಾಗುತ್ತಿದೆ ಎಂಬ ಅಧ್ಯಯನವಂತೂ ಹತ್ತಿಪ್ಪತ್ತು ವರ್ಷಗಳಿಂದ ಸತತವಾಗಿ ನಡೆಯುತ್ತಲೇ ಇದೆ. ಅಲ್ಲಿ ಹಿಂದೊಮ್ಮೆ ನೀರಿದ್ದ ಕುರುಹುಗಳು ಕಂಡಿವೆ, ಜೀವಿಗಳಿಗೆ ಬೇಕಾದ ರಾಸಾಯನಿಕಗಳ ಪತ್ತೆಯಾಗಿದೆ, ಈಗಲೂ ಹುಡುಕಿದರೆ ಎಲ್ಲೋ ಸಂದಿಮೂಲೆಯಲ್ಲಿ ಸೂಕ್ಷ್ಮಾತಿಸೂಕ್ಷ್ಮ ಜೀವಿಗಳು ಇರಬಹುದೇ ಎಂಬ ಹುಡುಕಾಟವೂ ಸಾಗಿದೆ.
ಕೆಂಪುಗ್ರಹ ಮಂಗಳನ ಬಗ್ಗೆ ಭೂ ಮತ್ತು ಹಾರಾಡುವ ದೂರದರ್ಶಕಗಳು ಹಾಗೂ ಆ ಗ್ರಹದ ಸುತ್ತಲೂ ಹಾರಾಡುವ ಒಡಿಸ್ಸಿ, ರಿಕನಸನ್ಸ್, ಗ್ಲೋಬಲ್ ಸರ್ವೆಯರ್ ಗಗನನೌಕೆಗಳು ಅಪಾರವಾದ ಮಾಹಿತಿಗಳನ್ನು ಒದಗಿಸಿಕೊಟ್ಟಿವೆ. ಆ ಮಾಹಿತಿಗಳನ್ನು ಅರಗಿಸಿಕೊಂಡು, ಎವರೆಸ್ಟ್‍ಗಿಂತ ಎತ್ತರದ ಶೃಂಗವಿರುವ, 43 ಸಾವಿರಕ್ಕಿಂತ ಅಧಿಕ ಒಣಕೊಳ್ಳಗಳಿರುವ ಮಂಗಳನ ನೆಲನಕ್ಷೆಯನ್ನೂ ತಯಾರಿಸಿ ಶೋಧಕಾರ್ಯದ ಇನ್ನೂ ಮುಂದಿನ ಹೆಜ್ಜೆಯಾಗಿ ಕುಜನೆಲವನ್ನು ತಟ್ಟಿ, ಮುಟ್ಟಿ ಪರೀಕ್ಷಿಸಲೆಂದು ರೊಬಾಟ್ ಯಂತ್ರಗಳನ್ನು ಕಳಿಸಲಾಗುತ್ತಿದೆ.
ಮೈಕೈಗೆಲ್ಲ ಕ್ಯಾಮೆರಾ ಮತ್ತಿತರ ಉಪಕರಣಗಳನ್ನು ಕಟ್ಟಿಕೊಂಡ ಈ ಚಲಿಸುವ ಯಂತ್ರಗಳು ಅಥವಾ ರೊಬಾಟುಗಳು ಬಾಹ್ಯ ಅನ್ವೇಷಣೆಯ ಹೊಸ ಸಾಧನಗಳಾಗಿವೆ. ಲಕ್ಷಗಟ್ಟಲೆ ಮೈಲು ದೂರದಲ್ಲಿ ಏಳುತ್ತ ಬೀಳುತ್ತ ಮಂಗಳನ ಗುಡ್ಡ, ಗುಂಡಿಗಳಲ್ಲಿ ಅವು ಅಡ್ಡಾಡುವ ದೃಶ್ಯವನ್ನು ನೆನೆಯುವುದೇ ರೋಮಾಂಚನಕಾರಿ ಅನುಭವವಾಗಿದೆ. ಮಂಗಳ ನೆಲವನ್ನು ವಿವರವಾಗಿ ಪರೀಕ್ಷಿಸಲೆಂದು ಹೊರಟ ಮೊದಲ ಅವಳಿ ರೊಬಾಟುಗಳು ಸ್ಪಿರಿಟ್ ಮತ್ತು ಅಪಾರ್ಚುನಿಟಿ (ಕ್ರಮವಾಗಿ ಮಾರ್ಸ್ ಎಕ್ಸ್‍ಪ್ಲೊರೇಶನ್ ರೋವರ್ ಎ ಮತ್ತು ಬಿ). 2003 ರಲ್ಲಿ, ಒಂದು ತಿಂಗಳ ಅಂತರದಲ್ಲಿ ಬಾನನೌಕೆಯೊಂದರಲ್ಲಿ ಕೂತು 50 ದಶಲಕ್ಷ ಕಿಮೀ ದೂರದ ಆ ಕೆಂಪು ಗ್ರಹಕ್ಕೆ ‘ಡೆಲ್ಟಾ 2’ ರಾಕೆಟ್ಟಿನ ಮೂಲಕ ಅವೆರಡೂ ಹಾರಿಹೋದವು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಮ್ಮಿಕೊಂಡ ಆ ಯೋಜನೆ ‘ಮಾರ್ಸ್ ಎಕ್ಸ್‍ಪ್ಲೋರೇಶನ್ ರೋವರ್’. ಏಳು ತಿಂಗಳ ಪಯಣದಲ್ಲಿ ಸೂರ್ಯ ಮತ್ತು ಭೂಮಿಯಿಂದ ದೂರದಿಕ್ಕಿಗೆ ರೋವರುಗಳ ಹಾರಾಟ. ಮಂಗಳನನ್ನು ಬೆನ್ನಟ್ಟಿ, ಅದರ ಕಕ್ಷೆಯಲ್ಲಿ ಒಂದಿಷ್ಟು ಹಾರಿ ಆ ನಂತರ ಮಂಗಳನೊಳಕ್ಕೆ ಇಳಿದ ರೋವರುಗಳು ನೌಕೆಯೊಳಗಿಂದ ಪ್ಯಾರಾಚ್ಯೂಟ್ ಮತ್ತಿತರ ರಕ್ಷಣಾ ಕವಚಗಳನ್ನು ಕಳಚಿ ಹೊರಗಿಣುಕಿದವು. ಆಗ ಸ್ಪಿರಿಟ್ ರೊಬಾಟ್ ಕಳಿಸಿದ ಮಂಗಳನ ಚಿತ್ರ ಇದುವರೆಗಿನ ಅನ್ಯಗ್ರಹಗಳ ಚಿತ್ರದಲ್ಲೇ ಅತ್ಯಂತ ಮನೋಹರವಾದ ಮತ್ತು ವಿಹಂಗಮವಾದ ಚಿತ್ರ ಎನ್ನುತ್ತಾರೆ ವಿಜ್ಞಾನಿಗಳು.
ಸ್ಪಿರಿಟ್ ಮಂಗಳನ ನೆಲದ ಒಣಗಿದ ಕೆರೆಯ ಮಡಿಲಾಗಿರಬಹುದೆಂದು ಗುರುತಿಸಲ್ಪಟ್ಟ ‘ಗುಸೆವ್’ ಗುಂಡಿಯಲ್ಲೂ, ಅಪಾರ್ಚುನಿಟಿ ಹೆಮಟೈಟ್ ಕಲ್ಲುಗಳು ಹೆಚ್ಚಿರುವ ಅಂದರೆ ಹಿಂದೊಮ್ಮೆ ಹಸಿನೆಲವಿತ್ತೆಂಬುದನ್ನು ಊಹೆಮಾಡಬಹುದಾದ ‘ಮೆರಿಡಿಯನ್ ಪ್ಲೇನಂ’ ಬಯಲು ಪ್ರದೇಶದಲ್ಲೂ ಮೂರು ವಾರಗಳ ಅಂತರದಲ್ಲಿ ಬಂದಿಳಿದವು. ಅಂದ ಹಾಗೆ, ಬಾಹ್ಯ ಬ್ರಹ್ಮಾಂಡದ ಯಾವುದೇ ಹೊಸ ಅನ್ವೇಷಣೆಗೆ ಹೆಸರನ್ನಿಡುವ ಹೊಣೆಯನ್ನು ‘ಅಂತಾರಾಷ್ಟ್ರೀಯ ಖಗೋಳಶಾಸ್ತ್ರ ಸಂಘಟನೆ’ ವಹಿಸಿಕೊಂಡಿದೆ. ಖ್ಯಾತನಾಮ ಗಳಿಸಿದ ವಿಜ್ಞಾನಿಗಳು ಅಥವಾ ಸ್ಥಳಗಳ ಹೆಸರುಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗುತ್ತದೆ.
ಮಂಗಳ ಗ್ರಹಕ್ಕೆಂದೇ ವಿಶೇಷವಾಗಿ ತಯಾರಾದ ಸ್ಪಿರಿಟ್ ಮತ್ತು ಅಪಾರ್ಚುನಿಟಿ ಈ ಎರಡೂ ರೊಬಾಟುಗಳ ರಚನೆ ಒಂದೇ. ಇವುಗಳ ರೂಪ, ಕೆಲಸದ ವಿಧಾನ ಎಲ್ಲವೂ ಅತ್ಯದ್ಭುತವಾದುದು. 180 ಕೆ.ಜಿ. ತೂಕದ, ಕೈಗಾಡಿಯಂತಿರುವ ಇವುಗಳಿಗೆ ಮೈಯ್ಯಿಡೀ ಇಲೆಕ್ಟ್ರಾನಿಕ್ ಅಂಗಾಂಗಗಳು. ಒತ್ತಾಗಿ ಅಚ್ಚುಕಟ್ಟಾಗಿ ಜೋಡಿಸಲಾದ ವೈಜ್ಞಾನಿಕ ಉಪಕರಣಗಳೆಲ್ಲವೂ ಕನಿಷ್ಟ ಗಾತ್ರ, ತೂಕವುಳ್ಳವು ಹಾಗೂ ಅತ್ಯಲ್ಪ ವಿದ್ಯುತ್ ಬಳಸುವಂಥವು. ಓಡಾಡಲೆಂದು ಆರು ಗಾಲಿಗಳು, ನಟ್ಟನಡುವೆ ಒಂದೂವರೆ ಮೀಟರ್ ಎತ್ತರಕ್ಕೆ ಏರಿದ ಕವೆಗೋಲಿನ ತುದಿಯಲ್ಲಿ ಆ ಬೋಳು ಗ್ರಹದ ಮೇಲ್ನೋಟವನ್ನು ವಿಸ್ತಾರವಾಗಿ ಸೆರೆಹಿಡಿಯಬಲ್ಲ ಪಾನ್‍ಕ್ಯಾಮ್, ಮುಂದಕ್ಕೆ ಹೆಜ್ಜೆಯಿಡುವ ಮುನ್ನ ನೆಲದ ಚಿತ್ರ ತೆಗೆದು ಪರೀಕ್ಷಿಸುವ ನೇವ್‍ಕ್ಯಾಮ್, ರೋಬಾಟಿನ ಮುಂದೆ ಹಾಗೂ ಹಿಂದೆ ಜೋಡಿಸಲಾಗಿರುವ 120 ಡಿಗ್ರಿ ಕೋನದವರೆಗೆ ಚಿತ್ರ ತೆಗೆಯಬಲ್ಲ ಜೋಡಿ ಹಾಝ್‍ಕ್ಯಾಮ್ ಈ ಮೂರೂ ಪ್ರಮುಖ ಕ್ಯಾಮೆರಾಗಳು. ರೊಬಾಟಿಗೆ ಬಂಡೆಗಳ ಹೆಪ್ಪಳಿಕೆ ಕೆರೆದು ಒಳಪದರವನ್ನು ಕ್ಯಾಮೆರಾದೆದುರು ತೋರಿಸುವ, ಅಲ್ಲೇ ಕೆರೆದ ಭಾಗವನ್ನು ಪರೀಕ್ಷಿಸುವ ಸಾಧನವನ್ನು ಅಂಟಿಸಿದ ತೋಳೂ ಕೂಡ ಇದೆ. ಥರ್ಮಲ್ ಎಮಿಶನ್ ಸ್ಪೆಕ್ಟ್ರೋಮೀಟರ್ ಅಂದರೆ ಕಲ್ಲು, ಬಂಡೆಗಳ ಚೂರುಗಳು ಹೊರಸೂಸುವ ಬಿಸಿಯನ್ನು ಪರೀಕ್ಷಿಸುವ, ಶಕ್ತಿಯುತವಾದ ಎಕ್ಸ್‍ರೇ ಮತ್ತು ಗಾಮಾ ಕಿರಣಗಳನ್ನು ಬಂಡೆಗಳಿಗೆ ಹಾಯಿಸಿ ಅವು ವಿಸರ್ಜಿಸುವ ರಾಸಾಯನಿಕಗಳನ್ನು ಪರೀಕ್ಷಿಸುವ ಸಾಧನಗಳಿವೆ. ಆಯಸ್ಕಾಂತೀಯ ಗುಣದ ವಸ್ತುಗಳೇನಾದರೂ ಇದ್ದಲ್ಲಿ ಅವುಗಳನ್ನು ಆಕರ್ಷಿಸಲೆಂದು ಪುಟ್ಟಪುಟ್ಟ ಮ್ಯಾಗ್ನೆಟ್‍ಗಳನ್ನೂ ಅಲ್ಲಿ ಜೋಡಿಸಿಡಲಾಗಿದೆ. ಎಲ್ಲ ಅಂಗಗಳನ್ನು ಬೆಸೆದಿಡುವ ಅತಿ ವೇಗದ ಕಂಪ್ಯೂಟರ್ ಈ ರೋವರುಗಳ ಹೃದಯಭಾಗ.
ಭೂಮಿಯ ಹಾಗೂ ಮಂಗಳನ ಆಗಸದಲ್ಲಿ ಗಸ್ತು ಹೊಡೆಯುತ್ತಿರುವ ಗಗನನೌಕೆಗಳ ಜೊತೆ ಸಂಪರ್ಕಕ್ಕೆಂದು ಎರಡು ಅಂಟೆನಾಗಳಿವೆ. ಹೈ ಗೇನ್ ಅಥವಾ ಶಕ್ತಿಯುತ ಅಂಟೆನಾ ರೊಬಾಟು ಅತ್ತಿತ್ತ ಅಡ್ಡಾಡುವಾಗ ಭೂಮಿಯತ್ತಲೇ ಮುಖವೊಡ್ಡುತ್ತ ರೇಡಿಯೋ ಅಲೆಗಳ ಮೂಲಕ ಸಂದೇಶಗಳನ್ನು ರವಾನೆ ಮಾಡುತ್ತಿರುತ್ತದೆ. ಲೋಗೇನ್ ಅಂಟೆನಾ ಏಕಮುಖಿಯಾಗಿದ್ದು ಮಂಗಳಾಕಾಶದ ಉಪಗ್ರಹ ನೌಕೆಗಳು ಎದುರಾದಾಗಲೆಲ್ಲ ಸಂದೇಶ ಪಡೆಯುತ್ತವೆ. ರೋವರುಗಳು ಹಗಲು ಹೊತ್ತು ಸೂರ್ಯ ಶಾಖದಿಂದ ವಿದ್ಯುತ್ ಪಡೆದರೆ, ರಾತ್ರಿ ಚಳಿಯಲ್ಲಿ ಉಪಕರಣಗಳನ್ನು ಬೆಚ್ಚಗಿಡಲೆಂದು ಲೀಥಿಯಂ ಬ್ಯಾಟರಿಗಳಿವೆ. ಈ ಎಲ್ಲಾ ಉಪಕರಣಗಳು ಮಂಗಳನ ತಾಪಮಾನದ ಏರಿಳಿತವನ್ನು ತಡೆದುಕೊಳ್ಳ್ಳಬಲ್ಲವು.
ಮಂಗಳನ ಆಕಾಶದಲ್ಲಿ ಹಾರಾಡುತ್ತ ಕಾವಲು ಕಾಯುತ್ತಿರುವ ಒಡಿಸ್ಸಿ, ರೆಕನ್ಸಯನ್ಸ್ ಹಾಗೂ ಮಾರ್ಸ್ ಎಕ್ಸ್‍ಪ್ರೆಸ್(ಇತ್ತೀಚಿನ ಎಂಟ್ರಿ ಮಾವೆನ್ ಹಾಗೂ ನಮ್ಮ ಮಂಗಳಯಾನ) ನೌಕೆಗಳಿವೆ. ರೋವರುಗಳ ಹೆಜ್ಜೆಹೆಜ್ಜೆಯನ್ನೂ ನಿರುಕಿಸುತ್ತ ಕ್ಯಾಮೆರಾ ಕಣ್ಣಲ್ಲಿ ಬಂಧಿಸುತ್ತಿವೆ. ಇತ್ತ ನಾಸಾದಲ್ಲಿ ಬೃಹತ್ ಕಂಪ್ಯೂಟರ್ ಪರದೆಗಳ ಎದುರು ಕುಳಿತು ಎರಡೂ ರೊಬಾಟು ರೋವರುಗಳನ್ನು ದೂರನಿಯಂತ್ರಣ ಮಾಡುವ, ಪ್ರತಿನಿತ್ಯ ಪಥ ನಿರ್ದೇಶನ ಮಾಡುವ ತಂತ್ರಜ್ಞರ ಅಥವಾ ಚಾಲಕರ ತಂಡವೇ ಇದೆ. ರೋವರ್ ಮಂಗಳನ ಗುಡ್ಡ, ಬೆಟ್ಟ ಹತ್ತುವಾಗ ಈ ಚಾಲಕರಿಗೆ ಏದುಸಿರು ಬರುತ್ತದೆ, ಒಂದು ಗಾಲಿ ಓರೆಯಾಗಿ ಅದೇನಾದರೂ ಹೊರಳಿತೆಂದರೆ ಇವರೂ ಕತ್ತು ಬಗ್ಗಿಸುತ್ತಾರೆ. ಮರಳು ನೆಲದಲ್ಲಿ ಜಾರುತ್ತ ತೆವಳುತ್ತ ರೋವರುಗಳು ಸಮನೆಲದಲ್ಲಿ ಬಂದು ಸೇರಿದವೋ ಇಲ್ಲಿ ನಿಟ್ಟುಸಿರು ಹೊರಹೊಮ್ಮುತ್ತದೆ. ಒಂದೊಂದು ಹೊಸ ಅನ್ವೇಷಣೆ ಬೆಳಕು ಕಂಡಾಗಲೂ ಸುದ್ದಿ ವಿವಿಧ ದೇಶಗಳಲ್ಲಿ, ವಿವಿಧ ಅಧ್ಯಯನಾ ಸಂಸ್ಥೆಗಳಲ್ಲಿ ಪ್ರತಿಧ್ವಿನಿಸುತ್ತದೆ. ಸಂಶೋಧನಾಕಾರರಿಗೆ ಹೊಸ ಹೊಳಹು ಸಿಗುತ್ತದೆ.
ರೋವರುಗಳಿಗೆ ಹಗಲಿಡೀ ಕೈಮೈತುಂಬ ಕೆಲಸ, ಗಾಲಿಗಳು ಉರುಳಿದಂತೆ ಆಸುಪಾಸಿನ ವಿವರಗಳನ್ನು ಚಾಚೂ ತಪ್ಪದೆ ಗಮನಿಸಬೇಕು, ತನ್ನಲ್ಲಿರುವ ಸಲಕರಣೆಗಳನ್ನು ಬಳಸಿ ಅಗೆದೋ, ಕೆರೆದೋ ಪರೀಕ್ಷಿಸಬೇಕು, ಕ್ಯಾಮೆರಾಗಳಲ್ಲಿ ದಾಖಲಿಸಬೇಕು, ಅಂಟೆನಾ ಮೂಲಕ ಆ ಮಾಹಿತಿಗಳನ್ನೆಲ್ಲ ಭೂಮಿಗೆ ವರ್ಗಾಯಿಸಬೇಕು. ಹಾಗಾಗಿ ಯಾವುದೇ ಗಡಿಬಿಡಿಯಿಲ್ಲದೆ ದಿನಕ್ಕೆ ನೂರು ಮೀಟರ್ ಮಾತ್ರ ಚಲಿಸುವಂತೆ ಅವುಗಳಿಗೆ ಆದೇಶ. ಮಂಗಳನಲ್ಲಿ ಸೂರ್ಯ ಕಂತಿದ ಕೂಡಲೇ ಇವುಗಳಿಗೂ ರೆಸ್ಟ್.
2004 ರ ಜನೆವರಿ ತಿಂಗಳಲ್ಲಿ ಆರಂಭಗೊಂಡ ಸ್ಪಿರಿಟ್ ಮತ್ತು ಅಪಾರ್ಚುನಿಟಿಗಳ ಅವ್ಯಾಹತ ಪಯಣ ಮಂಗಳನ ಒಂದೊಂದೇ ರಹಸ್ಯವನ್ನು ಮಾನವಜಗತ್ತಿಗೆ ತಿಳಿಯಪಡಿಸುತ್ತ ಸಾಗಿತು. ಆಗಾಗ ಆ ಕೆಂಪು ನೆಲದಲ್ಲೆದ್ದ ಗಾಳಿ ಹುಡಿಮಣ್ಣನ್ನು ಎರಚಿ ಸೌರಪಟ್ಟಿಯ ಮೇಲೆ ತೆರೆಯೆಳೆದಾಗ ಅಥವಾ ಹುಡಿಮಣ್ಣಿನಲ್ಲಿ ಗಾಲಿ ಹುಗಿದಾಗ ಮಾತ್ರವೇ ಅವುಗಳ ನಿತ್ಯವಿಧಿಯಲ್ಲಿ ಅಡಚಣೆ ಉಂಟಾಗುತ್ತದೆ. 2009ರ ವೇಳೆಗೆ ಈ ಎರಡೂ ರೊಬಾಟು ಗಾಡಿಗಳು 21 ಕಿಮೀ ಪಯಣಿಸಿ ಎರಡೂವರೆ ಲಕ್ಷದಷ್ಟು ಚಿತ್ರಗಳನ್ನು ತೆಗೆದಿದ್ದವು.
ಈ ಜೋಡಿ ರೋವರುಗಳು ಇದುವರೆಗೆ ಬಾನನೌಕೆಗಳು ಕಂಡುಹಿಡಿದಿದ್ದನ್ನು ಪ್ರಮಾಣಿಸಿ ತೋರಿಸಿವೆ. ಹರಿಯುವ ನೀರು ತಿಕ್ಕಿ ಸವೆದು ತಯಾರಿಸಿರಬಹುದಾದ ಉರುಟುರುಟು ಕಲ್ಲುಗಳು, ನೀರಿನ ಹೂಳು ಮಣ್ಣಿನಲ್ಲಿರುವಂಥ ಸಲ್ಫೇಟುಗಳು, ಕಾರ್ಬೋನೇಟುಗಳು, ಓಡುವ ನೀರು ಕೊರೆದ ಹಳ್ಳಕೊಳ್ಳಗಳ ಮಾರ್ಗ, ಮುಂಚಾಚಿದ ಬಂಡೆಗಲ್ಲುಗಳು ಇವೆಲ್ಲವನ್ನೂ ರೋವರುಗಳು ಅತಿ ಹತ್ತಿರದಿಂದ ಚಿತ್ರ ತೆಗೆದು ತೋರಿಸಿವೆ. ಹಿಂದೊಮ್ಮೆ ಜ್ವಾಲಾಮುಖಿ ಸಿಡಿದಿತ್ತೆಂದು ಸೂಚಿಸುವ ಬಸಾಲ್ಟ್ ಹಾಗೂ ಹೆಮಟೈಟ್ ಕಲ್ಲುಗಳನ್ನು ರೋವರುಗಳು ಗುರುತಿಸಿವೆ. ಹೆಮಟೈಟ್ ಕಲ್ಲುಗಳು ನೀರಿದ್ದಲ್ಲಿ ಉಂಟಾಗುವ ಸಾಧ್ಯತೆಯೂ ಇದೆ.
ಒಮ್ಮೆ ಅಪಾರ್ಚುನಿಟಿಯ ಗಾಲಿಯೊಂದು ಕಲ್ಲುಗಳೆಡೆಯಲ್ಲಿ ಸಿಕ್ಕಿಹಾಕಿಕೊಂಡು ಐದು ವಾರಗಳವರೆಗೆ ಅಲುಗಾಡಲು ಸಾಧ್ಯವಾಗಿರಲಿಲ್ಲ, ನಾಸಾದ ಕೃತ್ರಿಮವಾಗಿ ನಿರ್ಮಿಸಿದ ‘ಮಂಗಳ ಮರಳು’ ನೆಲದಲ್ಲಿ ಮತ್ತೆಮತ್ತೆ ಪ್ರಯೋಗಗಳನ್ನು ನಡೆಸಿದ ತಜ್ಞರು ಐದು ವಾರಗಳ ಕೊನೆಗೆ ಸೂಕ್ತ ಆದೇಶ ಕೊಟ್ಟಾಗ ರೋವರ್ ಗಾಲಿಕಾಲನ್ನು ಎತ್ತಿಹಾಕಲು ಸಾಧ್ಯವಾಗಿತ್ತು.
ಆದರೆ ಆ ಉಪಾಯ ಸ್ಪಿರಿಟ್ ರೋವರಿನ ಮಟ್ಟಿಗೆ ಫಲಿಸಲಿಲ್ಲ. ಭೂಮಿಯಿಂದ ಮತ್ತೆ ಮತ್ತೆ ಆದೇಶಗಳನ್ನು ಕಳುಹಿಸಿದರೂ ಹೂತ ಗಾಲಿಯನ್ನು ಮೇಲೆತ್ತಲಾಗಿಲ್ಲ, 2009ರಲ್ಲಿ ನಾಸಾ ‘ಸ್ಪಿರಿಟ್ ಇನ್ನು ಸಂಚಾರಿಯಲ್ಲ, ನಿಲ್ಮನೆಯಾಗಿ ಸಂಶೋಧನೆ ಮುಂದುವರೆಸಲಿದೆ’ ಎಂದು ಸಾರಿತು. ಮತ್ತೂ ಒಂದು ವರ್ಷದ ನಂತರ ಸ್ಪಿರಿಟ್ ಜೊತೆ ಸಂಪರ್ಕ ಸಂಪೂರ್ಣ ಕಡಿದುಹೋಯಿತು.
ಈ ಅವಳಿ ರೊಬಾಟುಗಳು 90 ಮಂಗಳ ದಿನಗಳವರೆಗೆ ಸಮರ್ಥ ಕೆಲಸ ಮಾಡಬಹುದೆಂದು ಊಹಿಸಲಾಗಿತ್ತು. ಆದರೆ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಸ್ಪಿರಿಟ್ ಆರು ವರ್ಷಕಾಲ ಓಡಾಡಿ ಆನಂತರ ಮರಳಮಣ್ಣಿನಲ್ಲಿ ಗಾಲಿ ಹೂತು ಸ್ತಬ್ಧಗೊಂಡರೆ, 42 ಕಿಮೀ ಕ್ರಮಿಸಿದ ಅಪಾರ್ಚುನಿಟಿ 11 ವರ್ಷಗಳಾದರೂ, ಇನ್ನೂ ಬಸವಳಿಯದ ಬಸವನಂತೆ ಅಡ್ಡಾಡುತ್ತಲೇ ಇದೆ! ಎರಡೂ ಹತ್ತಾರು ದಾಖಲೆಗಳನ್ನು ಹುಟ್ಟುಹಾಕಿವೆ.
ಈ ಜೋಡಿ ರೋವರುಗಳ ನಂತರ ನಾಸಾ ಫೀನಿಕ್ಸ್ ಹಾಗೂ ಕ್ಯೂರಿಯಾಸಿಟಿ ಎಂಬ ಮತ್ತೂ ಅತ್ಯಾಧುನಿಕ ರೊಬಾಟುಗಳನ್ನು ಮಂಗಳನಲ್ಲಿಗೆ ಕಳಿಸಿದೆ. ಫೀನಿಕ್ಸ್ ಅತ್ಯಮೂಲ್ಯ ಸಂಶೋಧನೆಗಳನ್ನೇನೋ ಮಾಡಿತು, ಆದರೆ ಹಾರಿದ ಆರು ತಿಂಗಳಿಗೇ ಮಂಗಳನ ದೂಳಿಗೆ ಬಲಿಯಾಗಿ ವಿಫಲಗೊಂಡಿತು. ಕ್ಯೂರಿಯಾಸಿಟಿ ಈಗಲೂ ಮಂಗಳ ನೆಲವನ್ನು ಕೆದಕುತ್ತ, ಚಿತ್ರ ತೆಗೆಯುತ್ತ ಹೊಸ ದಾಖಲೆಗಳನ್ನು ಬರೆಯುತ್ತ ಸಾಗಿದೆ.
ಆದರೆ ಸ್ಪಿರಿಟ್ ಮತ್ತು ಅಪಾರ್ಚುನಿಟಿ ಜೋಡಿಗೆ ಬಹಳಷ್ಟು ಅಭಿಮಾನಿಗಳಿದ್ದಾರೆ. ಅಪಾರ್ಚುನಿಟಿಯ ದೂರಚಾಲಕರಲ್ಲೊಬ್ಬರಾದ ಸ್ಕಾಟ್ ಮಾಕ್ಸ್‍ವೆಲ್ ಹೇಳುವಂತೆ ‘ಹೊಸ ಕಾರು ತಗೊಂಡಿರಬಹುದು, ಆದರೆ ಮೊದಲು ಕೊಂಡ ಕಾರಂದ್ರೆ ನಮ್ಗೆ ಅದೇನೋ ಪ್ರೀತಿ..’
ಮುಂದುವರೆಯುವುದು…
ಸರೋಜಾ ಪ್ರಕಾಶ.
ಶಾಶ್ವತ ನೀರಾವರಿಗೆ ಪಾದಯಾತ್ರೆ
ಶಾಶ್ವತ ನೀರಾವರಿ ಚಿಕ್ಕಬಳ್ಳಾಪುರದ ಚದಲಪುರದ ಬಳಿ ನಡೆಯುತ್ತಿರುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಳ್ಳಲು ಮಣಮಾಚನಹಳ್ಳಿ ಗ್ರಾಮಸ್ಥರು ಪಾದಯಾತ್ರೆಯ ಮೂಲಕ ಭಾನುವಾರ ತೆರಳಿದರು.
ತಾಲ್ಲೂಕಿನ ಮಣಮಾಚನಹಳ್ಳಿ ಗ್ರಾಮದಿಂದ ಘೋಷಣೆಗಳನ್ನು ಕೂಗುತ್ತಾ ಪಾದಯಾತ್ರೆ ನಡೆಸಿದ ಗ್ರಾಮಸ್ಥರು ನಗರದ ಬಸ್ ನಿಲ್ದಾಣದ ಬಳಿ ಮಾನವ ಸರಪಣಿಯನ್ನು ನಿರ್ಮಿಸಿದರು.
ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಮಣಮಾಚನಹಳ್ಳಿ ಗ್ರಾಮದ ನಾಗರಿಕರು, ಯುವಕರು, ಕನ್ನಡಪರ ಸಂಘಟನೆಗಳು, ಸ್ತ್ರೀಶಕ್ತಿಸಂಘಗಳು, ಕಾರ್ಮಿಕರು ಪರಮಶಿವಯ್ಯನವರ ಶಾಶ್ವತ ನೀರಿನ ಯೋಜನೆ ಜಾರಿಯಾಗುವವರೆಗೂ ನಡೆಯುವ ಅನಿರ್ಧಿಷ್ಠ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸುತ್ತೇವೆ. ನೀರಿನ ಅಗತ್ಯತೆಯ ಅರಿವು ಆಢಳಿತ ನಡೆಸುವ ಜನಪ್ರತಿನಿಧಿಗಳಿಗೆ ಆಗುವವರೆಗೂ ಹೋರಾಟ ನಿಲ್ಲದು ಎಂದು ಹೇಳಿದರು. ನಂತರ ಮಣಮಾಚನಹಳ್ಳಿ ಗ್ರಾಮಸ್ಥರು ಅನಿರ್ಧಿಷ್ಠ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಪಾದಯಾತ್ರೆಯ ಮೂಲಕ ತೆರಳಿದರು.
ಮಕ್ಕಳ ಪಾಲನೆಯಲ್ಲೂ ಸಮಾನತೆಯಿರಲಿ
ಹೆಣ್ಣುಮಕ್ಕಳಿಗೆ ಪೋಷಕರು ನೀತಿ ನಿಬಂಧನೆ ಬೋಧಿಸಿ ಬೆಳೆಸುವಂತೆ ಗಂಡುಮಕ್ಕಳನ್ನೂ ಬೆಳೆಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಅನಿತಾ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಭಾನುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ಅನ್ಯಾಯಗಳನ್ನು ಹೋಗಲಾಡಿಸಲು ಮಕ್ಕಳ ಪಾಲನೆಯಲ್ಲಿಯೇ ಸಮಾನತೆಯನ್ನು ಪೋಷಕರು ರೂಢಿಸಿಕೊಳ್ಳಬೇಕು. ಮಕ್ಕಳ ಪಾಲನೆಯಲ್ಲಿ ಪರಸ್ಪರ ಗೌರವ, ಸ್ನೇಹ ಸೌಹಾರ್ಧ, ಸಹಾಯ ಮನೋಭಾವ, ಕಷ್ಟಕ್ಕೆ ಮರುಗುವ ಗುಣಗಳನ್ನು ಕಲಿಸಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗದು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಕಾನೂನಿನ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಅದರಿಂದ ಜೀವನದಲ್ಲಿ ಕಷ್ಟವನ್ನು ಎದುರಿಸುವ ಧೈರ್ಯ ಬರುತ್ತದೆ. ತಪ್ಪುಗಳನ್ನು ಮಾಡದಂತೆ ಕಾನೂನಿನ ಅರಿವು ಕಾಪಾಡುತ್ತದೆ ಎಂದು ಹೇಳಿದರು.
ಅಪರ ನ್ಯಾಯಾಧೀಶರಾದ ಶ್ರೀಕಂಠ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಮ್ಮ, ಸೌಂದರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಡಾ.ವಿಜಯಾ, ಅಬಕಾರಿ ನಿರೀಕ್ಷಕ ವಿಶ್ವನಾಥಬಾಬು, ಡಾ.ಅಂಬಿಕಾ, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪ, ಉಪಾಧ್ಯಕ್ಷ ಎಂ.ಡಿ.ನಾರಾಯಣಪ್ಪ, ಕಾರ್ಯದರ್ಶಿ ಗೋಪಿನಾಥ್, ಶ್ರೀನಿವಾಸಗೌಡ, ತಮ್ಮಣ್ಣ, ರಾಮಕೃಷ್ಣಪ್ಪ, ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ವಕೀಲರಾದ ಬೈರೇಗೌಡ, ಸತ್ಯನಾರಾಯಣಬಾಬು, ಲಕ್ಷ್ಮೀ, ಸುಬ್ರಮಣಿ, ನಾರಾಯಣಪ್ಪ, ಮಂಜುನಾಥ, ಚಂದ್ರಶೇಖರಗೌಡ, ಲೋಕೇಶ್, ನೌಶಾದ್ಅಲಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ನೀರಾವರಿ ಯೋಜನೆಯ ಪ್ರಾಮಾಣಿಕ ಪ್ರಯತ್ನ ಸರ್ಕಾರ ಮಾಡುತ್ತಿಲ್ಲ
ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಬರಗಾಲ ಘೋಷಿತ ತಾಲ್ಲೂಕುಗಳಲ್ಲಿ ಇದುವರೆಗೂ ಸರ್ಕಾರ ಕಾಮಗಾರಿ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ನಗರದ ಕೋಟೆ ವೃತ್ತದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರದಲ್ಲಿ 363 ಕೋಟಿ ರೂಗಳಷ್ಟು ಬರಗಾಲದ ಕಾಮಗಾರಿಗಳಿಗೆ ಬಳಸಬಹುದಾದ ಹಣವಿದೆ. ಅದರಲ್ಲಿ 244 ಕೋಟಿ ರೂಗಳು ಖರ್ಚಾಗದೇ ಉಳಿದಿದೆ. ಕೇಂದ್ರ ಸರ್ಕಾರದಿಂದ ಬರುವ ಹಣ ಹಿಂದಿಗಿಂತಲೂ ಈಗ 10 ಸಾವಿರ ಕೋಟಿ ರೂಗಳಷ್ಟು ಹೆಚ್ಚಳವಾಗಿದೆ. 14ನೇ ಫೈನಾನ್ಸ್ ಕಮಿಷನ್ ಜಾರಿಯಾದಂತೆ ಈಗ ಬರುವ ಹಣ ದುಪ್ಪಟ್ಟಾಗಲಿದೆ. ಆದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನರೇಂದ್ರ ಮೋದಿಯವರನ್ನು ಹಳಿಯುತ್ತಿರುವುದು ವಿಪರ್ಯಾಸ.
ಎಂಟು ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯ 45 ಸಾವಿರ ಕೋಟಿ ರೂಗಳಷ್ಟು ಸಾಲದ ಹೊರೆಯನ್ನು ಜನತೆಯ ತಲೆ ಮೇಲೆ ಹೊರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಅಂದರೆ ಬಡ್ಡಿ ಮನ್ನಾ ಮಾಡುವುದಾಗಿ ಮಂಕುಬೂದಿ ಎರಚುತ್ತಿದ್ದಾರೆ. ರೈತರ ನೆರವಿಗೆ ಬರದ, ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೋಗಿ ಸಾಂತ್ವನ ಹೇಳದ ಸರ್ಕಾರಕ್ಕೆ ನಾಚಿಕೆ ಆಗಬೇಕು. ರೈತರ ಸಾಲ ಮನ್ನಾ ಮಾಡುವಂತೆ ಹಾಗೂ ಶಾಶ್ವತ ನೀರನ್ನು ನೀಡುವಂತೆ ಬಿ.ಜೆ.ಪಿ ಸರ್ಕಾರ ನಿರಂತರ ಹೋರಾಟಕ್ಕೆ ಬದ್ಧವಾಗಿದೆ. ಕುಂಬಕರ್ಣ ನಿದ್ರೆಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಲ್ಲ. ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಯೋಜನೆ ರೂಪಿಸಿಲ್ಲ. ಮುದ್ದೇನಹಳ್ಳಿಯ ಐಐಟಿ, ರೈಲ್ವೆ ಯೋಜನೆ, ತೈಲ ಕಂಪೆನಿಗಳ ಹೂಡಿಕೆ ಎಲ್ಲವೂ ವೀರಪ್ಪ ಮೊಯಿಲಿಯವರ ಭಾಷಣಗಳ ಮಾತಷ್ಟೇ. ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಟೀಕಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ರಾಜ್ಯದ 600 ಮಂದಿ ರೈತರ ಆತ್ಮಹತ್ಯೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಕಾರಣ. ಹಗರಣಗಳಿಗೆ ಸರ್ಕಾರದ ಬಳಿ ಹಣವಿದೆ, ಆದರೆ ರೈತರಿಗೆ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಎತ್ತಿನ ಹೊಳೆ, ಐಐಟಿ, ಕಳಸಾಬಂಡೂರಿ ವಿಷಯಗಳಲ್ಲಿ ಜಿಲ್ಲೆಜಿಲ್ಲೆಗಳ ನಡುವೆ ವೈಷಮ್ಯ ಮೂಡಿಸುತ್ತಿರುವ ರಾಜ್ಯ ಸರ್ಕಾರ ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ರೈತರಿಗೆ ಸಾಂತ್ವನ, ಬೆಂಬಲ, ಧೈರ್ಯ ನೀಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಸರ್ಕಾರದ ಸಚಿವರುಗಳು ಮನವಿ ಮಾಡಬೇಕಾದ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಕೊಳವೆ ಬಾವಿ ಕೊರೆಸಿ ನೀರು ಸಿಗದವರಿಗೆ ಪರಿಹಾರವನ್ನು ಸರ್ಕಾರ ನೀಡಬೇಕು.
ಹಾಲಿನ 6 ಕೋಟಿ ರೂ ಸಹಾಯಧನ ಮತ್ತು ಹನಿನೀರಾವರಿಯ 32 ಕೋಟಿ 17 ಲಕ್ಷ ರೂಗಳ ಸಹಾಯಧನವನ್ನು ಸರ್ಕಾರ ಇನ್ನೂ ರೈತರಿಗೆ ನೀಡಿಲ್ಲ. ಪಡಿತರ ವ್ಯವಸ್ಥೆಯಲ್ಲಿ 30 ಕೆಜಿ ಅಕ್ಕಿಯನ್ನು ನೀಡುತ್ತಿದ್ದುದು ಈಗಿನ ಸರ್ಕಾರದಲ್ಲಿ 4 ಕೆಜಿಗೆ ಇಳಿದಿದೆ. ಇದರಿಂದ ಬಡವರು ಅನ್ನದ ಗಂಜಿ ಕುಡಿಯುವಂತಾಗಿದೆ. ಉಳಿದ ಅಕ್ಕಿ ‘ಅಮ್ಮ ಇಡ್ಲಿ’ಗೆ ಹೋಗುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರಾದ ಕೇಶವಾರ ಅಂಬರೀಷ್ ಮತ್ತು ಯಣ್ಣಗೂರು ಮುನಿಶಾಮಿ ಕುಟುಂಬದವರಿಗೆ ಬಿಜೆಪಿ ಮುಖಂಡರು ತಲಾ 20 ಸಾವರ ರೂಗಳ ಪರಿಹಾರ ಧನದ ಚೆಕ್ ವಿತರಿಸಿದರು.
ಬಿಜೆಪಿ ಮುಖಂಡರಾದ ರೇವೂನಾಯಕ್ ಬೆಳಮಗಿ, ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಚಂದ್ರಣ್ಣ, ರವಿನಾರಾಯಣರೆಡ್ಡಿ, ಜ್ಯೋತಿರೆಡ್ಡಿ, ಶ್ರೀರಾಮರೆಡ್ಡಿ, ಸುರೇಂದ್ರಗೌಡ, ರಮೇಶ್ ಬಾಯಿರಿ, ಲೋಕೇಶ್ಗೌಡ, ಮಂಜುಳಮ್ಮ, ನಂದೀಶ್, ರಾಘವೇಂದ್ರ, ಶಿವಕುಮಾರಗೌಡ ಮತ್ತಿತರರು ಹಾಜರಿದ್ದರು.
ಕೊನೆಯ ಮುಖ್ಯಮಂತ್ರಿ
‘ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಕನಸಿತ್ತು. ದೇವೇಗೌಡರು ಆಗಗೊಡಲಿಲ್ಲ. ಕಾಂಗ್ರೆಸ್ ಸೇರಿದ ಮೇಲೆ ಆದರು. ಜನರಿಗೆ ಕತ್ತಲೆ ಭಾಗ್ಯ, ಸಾಲದ ಭಾಗ್ಯ ಕೊಟ್ಟಿದ್ದಾರೆ. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸದೇ, ರೈತರ ನೆರವಿಗೆ ಬರದೇ ಕಾಂಗ್ರಸ್ ಪಕ್ಷವನ್ನೂ ಮನೆಗೆ ಕಳಿಸಿ ತಾವೂ ಮನೆಗೆ ಹೋಗುತ್ತಾರೆ. ಸಿದ್ಧರಾಮಯ್ಯನವರು ಕಾಂಗ್ರೆಸ್ನ ಕಡೆಯ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಗಿ ಹೇಳಿದರು.
ರೈತರ ಮನವಿ
ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕ ಹೆಚ್ಚಿಸಿ ರೇಷ್ಮೆ ಬೆಳೆಗಾರರನ್ನು ರಕ್ಷಿಸಿ. ನೀರಾವರಿ ಯೋಜನೆಯನ್ನು ಶೀಘ್ರವಾಗಿ ರೂಪಿಸಿ ಬಯಲು ಸೀಮೆಯ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಿಸಿದರು.
ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಶಾಶ್ವತ ನೀರಾವರಿ ಯೋಜನೆ ರೂಪಿಸಲು ಒತ್ತಾಯಿಸಿ ಬಿಜೆಪಿ ಪಕ್ಷ ಹೋರಾಡುತ್ತದೆ ಎಂದರು.
ಕೊಡಮೆಯಲ್ಲಿ ಬಿದ್ದ ಮೀನು ಬಲು ರುಚಿ
‘ಕೊಡಮೆಯಲ್ಲಿ ಬಿದ್ದ ಮೀನು ಬಲು ರುಚಿ’ ಎಂಬ ಮಾತು ಗ್ರಾಮೀಣರಲ್ಲಿ ಜನಜನಿತ. ಈ ಮಾತಿಗೆ ನಿದರ್ಶನದಂತೆ ಈಚೆಗೆ ಬಿದ್ದ ಮಳೆಗೆ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿನ ಕುಂಟೆಯ ಬಳಿ ಗ್ರಾಮದ ಯುವಜನರು ನೆರೆದಿದ್ದರು. ಕುಂಟೆಗೆ ಹರಿದು ಬರುವ ಸಿಹಿನೀರಿನ ಕಾಲುವೆಗೆ ಅಡ್ಡಲಾಗಿ ಕೊಡಮೆ ಹಾಕಿ ಮೀನುಗಳನ್ನು ಹಿಡಿದಿಡಿದು ತುಂಬಿಕೊಳ್ಳುತ್ತಿದ್ದರು.
ಕೊಡಮೆ, ಬಯಲು ಸೀಮೆಯ ಮೀನು ಬೇಟೆಯ ಪ್ರಧಾನ ಸಾಧನ. ಕೆರೆ ಕೋಡಿ ಅಥವಾ ಕುಂಟೆಗಳ ಕೋಡಿ ಬಿದ್ದಾಗ ಈ ಕೊಡಮೆಗಳನ್ನು ಹಾಕುತ್ತಾರೆ. ಕೆರೆಗೆ ನೀರು ಬರುವ ಹೊಳೆ ಅಥವಾ ಹಳ್ಳಗಳಿಂದ ಹೊಸ ನೀರು ಕೆರೆಗೆ ಬಂದು ತಕ್ಷಣ, ಕೆರೆಯಲ್ಲಿರುವ ಮೀನುಗಳಿಗೆ ಪುಳಕವುಂಟಾಗಿ, ಹರೆಯದ ಹೆಣ್ಣು ಗಂಡು ಅಪಾಯ ಲೆಕ್ಕಸದೆ ಮುನ್ನುಗ್ಗುವಂತೆ, ಹೊಸ ನೀರಿನ ಎದುರು ಈಜುತ್ತಾ ಹೋಗುತ್ತವೆ. ಇವುಗಳಿಗೆ ‘ಹತ್ತು ಮೀನು’ ಎನ್ನುತ್ತಾರೆ. ಹೊಸ ನೀರಿನ ಗಾತ್ರ ಕಡಮೆಯಾಗಿಯೋ ಅಥವಾ ತವರು ಮನೆ ಬಿಟ್ಟು ಬಂದು ತಪ್ಪು ಮಾಡಿದೆವು ಎಂಬ ಭಯದಿಂದಲೋ ಅವು ಮತ್ತೆ ಕೆರೆಯತ್ತ ಬರತೊಡಗುತ್ತವೆ ಅವುಗಳಿಗೆ ‘ಇಳಿಮೀನು’ ಎನ್ನುತ್ತಾರೆ. ಆಗ ರೈತರು ನೀರು ಹರಿದು ಬರುವ ಹಳ್ಳಕ್ಕೆ ಅಡ್ಡಗಟ್ಟೆ ಹಾಕಿ ಮಧ್ಯೆ ಕೊಡಮೆಯನ್ನು ನೆಟ್ಟು, ನೀರೆಲ್ಲ ಕೊಡಮೆಯ ಮೂಲಕ ಹಾದು ಹೋಗುವಂತೆ ಮಾಡುವುದರಿಂದ, ನೀರು ಕೊಡಮೆಯಿಂದ ಹಾದು ಹೋದಾಗ ಮೀನುಗಳು ಕೊಡಮೆಯಲ್ಲಿ ಬಂಧಿತವಾಗುತ್ತವೆ. ಹರಿಯುವ ನೀರನ್ನರಸಿ ಮೀನು ಬಂದಾಗ ಬೇಟೆಯಾಗುವೆನೆಂಬ ಪ್ರಜ್ಞೆ ಇಲ್ಲದೆ, ಕೊಡಮೆಯನ್ನು ಪ್ರವೇಶಿಸಿ ಕೊಡಮೆಯ ಬಂಧೀಖಾನೆ(ಚಿಕ್ಕ ಚೇಂಬರ್)ಗೆ ಬಿದ್ದು ಸೆರೆಯಾಗುತ್ತದೆ.
ಕೊಡಮೆಗಳನ್ನು ಮೀನು ಹಿಡಿಯುವ ಕಾಯಷುದಾರರು ತಮ್ಮ ಬಿಡುವಿನ ವೇಳೆಯಲ್ಲಿ ಬಿದುರು ಮತ್ತು ಮೇಣ ಮೆತ್ತಿದ ಚಕ್ಕೆದಾರ ಬಳಸಿ ಕೊಡಮೆಗಳನ್ನು ತಯಾರಿಸಿಕೊಳ್ಳುತ್ತಾರೆ.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಮೀನು ಹಿಡಿಯುವುದು ಪ್ರಾರಂಭವಾಗುವುದು ಚೆನ್ನಾಗಿ ಮುಂಗಾರು ಮಳೆಯಾಗಿ ಕೆರೆಗಳಿಗೆ ನೀರು ಹರಿದು ಬರುವಾಗ, ಇಲ್ಲವೇ ಬೇಸಿಗೆಯಲ್ಲಿ ಕೆರೆಯ ನೀರು ಕಡಿಮೆಯಾಗಿ ಟಾಕುಗಳಲ್ಲಿ (ಚೌಕಾಕಾರದ ಮಡಿ) ತಪ್ಪಿಸಿಕೊಂಡ ಮೀನುಗಳನ್ನು ಹಿಡಿಯಲೂ ಕೊಡಮೆ ಬಳಸುತ್ತಾರೆ. ಈ ಕ್ರಿಯೆಯನ್ನು ಕೊಡಮೆ ಹಾಕುವುದು, ಕೊಡಮೆ ಇಕ್ಕುವುದು ಎನ್ನುತ್ತಾರೆ. ಕೊಡಮೆ ಕಟ್ಟುವುದು ಒಂದು ಕುಶಲತೆಯಿಂದ ಕೂಡಿದ ಕೆಲಸ. ಬಹುಶಃ ಇದು ಮೀನು ಹಿಡಿಯುವ ಸಾಧನಗಳಲ್ಲಿಯೇ ಅತ್ಯಂತ ಸುಂದರವಾದುದು.
‘ಮೀನುಗಾರರಿಗೆ ಮೀನಿನ ಚಲನೆ ಮತ್ತು ಕೊಡಮೆಯಲ್ಲಿ ತುಂಬಿಕೊಳ್ಳುವ ಸಮಯ ಗೊತ್ತಿರುವುದರಿಂದ ಆ ವೇಳೆಗೆ ಸರಿಯಾಗಿ ಹೋಗಿ ಕೊಡಮೆಯನ್ನೆತ್ತಿ ಮೀನುಗಳನ್ನು ತೆಗೆದುಕೊಳ್ಳುತ್ತಾರೆ. ಬಲೆಯಲ್ಲಿ ಮೀನು ಹಿಡಿಯುವುದು ಕೆರೆ ಕುಂಟೆಗಳಲ್ಲೇ ಇದ್ದು ಮಾಡಬೇಕಾದ ಕೆಲಸವಾದರೆ, ಕೊಡಮೆಯನ್ನಾದರೆ ಹಾಕಿ ಬೇರೊಂದು ಕೆಲಸಕ್ಕೆ ಹೋಗಬಹುದಾಗಿದೆ. ಬಲೆಯಲ್ಲಿ ಮೀನುಗಳು ತಪ್ಪಿಸಿಕೊಳ್ಳಬಹುದು, ಆದರೆ ಕೊಡಮೆಗೆ ಬಿದ್ದ ಮೀನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದರೊಳಗಿನ ನೀರನ್ನು ಯಾವ ಹಕ್ಕಿಪಕ್ಷಿಗಳೂ ಲಪಟಾಯಿಸಲಾರದು. ಮೀನುಗಳ್ಳರು ಅಷ್ಟು ಬೇಗನೆ ಕದಿಯಲಾಗದಿದ್ದರೂ ಕೆಲವು ಚತುರರು ತಮ್ಮ ಕೈಚಳಕವನ್ನು ತೋರಿಸಿ ಮೀನು ಕದ್ದು ಕೊಡಮೆ ಹಾಕಿದವರ ಹಿಡಿಹಿಡಿಶಾಪಕ್ಕೆ ಗುರಿಯಾಗುತ್ತಾರೆ.
ಕೊಡಮೆಯಲ್ಲಿ ಇಂದಿನ ಕ್ಯಾಟ್ಲಾಕ್ ನಂತಹ ಮೀನನ್ನು ಹಿಡಿಯಲಾಗುವುದಿಲ್ಲ. ಅತ್ಯಂತ ರುಚಿಕರವಾದ ಪಕ್ಕೆಗಳು, ಗಿರ್ಲು, ಕೊರದನ, ಉಣಿಸೆ ಮುಂತಾದ ಸ್ಥಳೀಯ ಮೀನಿನ ಪ್ರಬೇಧಗಳನ್ನಷ್ಟೆ ಬೇಟೆಯಾಡಬಹುದು. ಹೀಗೆ ಕೊಡಮೆಯಲ್ಲಿ ಹಿಡಿದ ಗಿರ್ಲು, ಕೊರದನ, ಉಣಿಸೆ ಮೀನುಗಳಿಗೆ ಹೆಚ್ಚು ಬೇಡಿಕೆಯೂ ಇದೆ. ಅದರಲ್ಲೂ ಉಣಿಸೆ ಮೀನುಗಳೆಂದರೆ ಸಸ್ಯಾಹಾರಿಗಳಿಗೆ ಹುರುಳಿ ಎಷ್ಟು ಪ್ರಿಯವೋ ಬಯಲು ಸೀಮೆಯ ಮೀನು ಪ್ರಿಯರಿಗೆ ಉಣಿಸೆ ಮೀನುಗಳು ಅಷ್ಟೊಂದು ಪ್ರಿಯ. ಆದರೆ ಕೆರೆ ಹೂಳೆತ್ತುವ ಯೋಜನೆಯಲ್ಲಿ ಮತ್ತು ಅನಾವೃಷ್ಠಿಯ ಕಾರಣದಿಂದ ಕೆರೆಗಳಿಗೆ ನೀರಿಲ್ಲದೆ ಈ ಸಾಂಪ್ರದಾಯಿಕ ಜಾನಪದ ರುಚಿಯುಳ್ಳ ಮೀನುಗಳನ್ನು ಅವುಗಳ ವಂಶವನ್ನು ಕಳೆದುಕೊಳ್ಳುತ್ತಿದ್ದೇವೆ. ಇವುಗಳನ್ನು ಮೀನುಗಾರಿಕೆ ಇಲಾಖೆ ಪ್ರತ್ಯೇಕ ಸಾಕಣೆ ಪದ್ಧತಿಯ ಮೂಲಕ ಉಳಿಸಿಕೊಳ್ಳಬೇಕಿದೆ’ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಎ.ಎಂ.ತ್ಯಾಗರಾಜ್.
–ಡಿ.ಜಿ.ಮಲ್ಲಿಕಾರ್ಜುನ
ತೂಬುಗಳನ್ನು ಸರಿಪಡಿಸುವಂತೆ ಒತ್ತಾಯ
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಕೆರೆಗಳಿಗೆ ನೀರು ಹರಿದು ಬರಲು ತೂಬುಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾಂಜಿನಪ್ಪ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ಹಲವು ವರ್ಷಗಳಿಂದ ಸರಿಯಾಗಿ ಮಳೆ ಬೀಳದೇ ಕೆರೆಯಲ್ಲಿ ನೀರು ನಿಲ್ಲದೇ ತೂಬುಗಳು ಹಾಳಾಗಿವೆ. ಈಚೆಗೆ ಬೀಳುತ್ತಿರುವ ಮಳೆ ನೀರು ಕೆರೆಗೆ ಸೇರದೆ ವ್ಯರ್ಥವಾಗುತ್ತಿದೆ. ಶೀಘ್ರವಾಗಿ ತೂಬುಗಳನ್ನು ಸರಿಪಡಿಸಿದಲ್ಲಿ ಕೆರೆಗೆ ನೀರು ತುಂಬಿ ಅಂತರ್ಜಲ ಹೆಚ್ಚುತ್ತದೆ. ಇದರಿಂದ ಕೊಳವೆ ಬಾವಿ ಕೊರೆಸುವ, ಟ್ಯಾಂಕರ್ ನೀರು ಸರಬರಾಜು ಮಾಡುವ ಹಣ ಉಳಿತಾಯವಾಗುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ತಕ್ಷಣ ತೂಬು ಸರಿಪಡಿಸುವಂತೆ ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ಟಿ.ಕೃಷ್ಣಪ್ಪ, ತಮ್ಮಣ್ಣ, ಪಾಪಣ್ಣ, ದೇವರಾಜ್, ಸಂತೋಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕೃಷಿ ವಸ್ತು ಪ್ರದರ್ಶನ ಹಾಗೂ ರೈತರ ವಿಜ್ಞಾನಗಳ ಮತ್ತು ಅಭಿವೃದ್ಧಿ ಇಲಾಖೆಗಳ ಸಂವಾದ ಕಾರ್ಯಕ್ರಮ
ಕೃಷಿಯು ಕೂಡ ವಿಜ್ಞಾನದಂತೆ ಆಧುನೀಕರಣಗೊಳ್ಳಬೇಕು. ಹೊಸ ತಂತ್ರಜ್ಞಾನ, ನೀರಿನ ಸದ್ಭಳಕೆ, ಭೂಮಿಯ ಫಲವತ್ತತೆ, ಉತ್ತಮ ಇಳುವರಿ ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳಂತೆ ರೈತರು ಕಲಿಯಬೇಕು ಎಂದು ಪಿ.ಎಲ್.ಡಿ ಬ್ಯಾಂಕ್ ಸದಸ್ಯ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ರಾಯಪ್ಪನಹಳ್ಳಿಯಲ್ಲಿ ಬುಧವಾರ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಕೃಷಿ ವಸ್ತು ಪ್ರದರ್ಶನ ಹಾಗೂ ರೈತರ ವಿಜ್ಞಾನಗಳ ಮತ್ತು ಅಭಿವೃದ್ಧಿ ಇಲಾಖೆಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ದಿನಗಳಿಂದ ಗ್ರಾಮದಲ್ಲಿ ಉಳಿದು ರೈತರೊಂದಿಗೆ ಚರ್ಚಿಸಿ, ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ದಾಖಲಿಸುತ್ತಾ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿದ್ದಾರೆ. ಒಂದೆಡೆ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ರೈತರಿಗೆ ಹೊಸ ಮಾಹಿತಿಯನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಈ ದಿನ ಕೃಷಿಯನ್ನು ಉತ್ತಮಗೊಳಿಸಲು ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ತಜ್ಞರನ್ನು ಕರೆಸಿ ರೈತರಿಗೆ ಮಾಹಿತಿಯನ್ನು ನೀಡುತ್ತಾ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಹೊಂಡ, ನೀರಿನ ಮರುಪೂರಣ, ಪಾಲಿಹೌಸ್, ಸಾವಯವ ಗೊಬ್ಬರ, ಮಳೆ ನೀರನ್ನು ಸಂಗ್ರಹಿಸುವುದು, ಸಸ್ಯ ಮಾದರಿಗಳು, ಅರಣ್ಯೀಕರಣ ಮುಂತಾದ ಹಲವು ವಿಷಯಗಳ ಕುರಿತಂತೆ ವಸ್ತು ಪ್ರದರ್ಶನ ಏರ್ಪಡಿಸಿದ್ದು, ವಿದ್ಯಾರ್ಥಿಗಳು ವಿವರ ನೀಡುತ್ತಿದ್ದರು.
ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಶ್ರೀನಿವಾಸರೆಡ್ಡಿ, ಟಿ.ಕೆ.ಅರುಣ್ಕುಮಾರ್, ರತ್ನಮ್ಮ, ಪ್ರಸನ್ನಕುಮಾರ್, ನರಸಿಂಹರೆಡ್ಡಿ, ಚಿನ್ನಮ್ಮ, ದ್ಯಾವಮ್ಮ, ಸರಸ್ವತಮ್ಮ, ಮುನಿವೆಂಕಟಪ್ಪ, ದ್ಯಾವಪ್ಪ, ನಾರಾಯಣಸ್ವಾಮಿ, ವೆಂಕಟಲಕ್ಷ್ಮಮ್ಮ, ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರವೇ ಸದಸ್ಯರ ಬೈಕ್ ರ್ಯಾಲಿ
ಬಯಲುಸೀಮೆ ಭಾಗದ ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ರೈತರ ಪಂಪ್ಸೆಟ್ಟುಗಳಿಗೆ ಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ ಹಾಗು ಈ ಭಾಗದ ರೈತರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಅಕ್ಟೋಬರ್ ೮ ರ ಗುರುವಾರದಂದು ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರವೇ (ಪ್ರವೀಣ್ಕುಮಾರ್ ಶೆಟ್ಟಿ ಬಣದ) ತಾಲ್ಲೂಕು ಅಧ್ಯಕ್ಷ ಜಿ.ಎನ್.ವಸಂತ್ಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬರಪೀಡಿತ ಪ್ರದೇಶಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಕಾಲದಲ್ಲಿ ಸರಿಯಾದ ಮಳೆಯಾಗದೇ ಜನರು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಕೃಷಿ ಮಾಡಲು ನೀರಿಲ್ಲದಿರುವುದರಿಂದ ಗುಳೆ ಹೋಗುವ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
ಇನ್ನು ಈ ಭಾಗದ ರೈತನಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇರುವುದರಿಂದ ಇರುವ ಅಲ್ಪ ಪ್ರಮಾಣದ ಕೊಳವೆ ಬಾವಿ ನೀರನ್ನು ಸಹ ಬಳಕೆ ಮಾಡಿಕೊಂಡು ಕೃಷಿ ಮಾಡಲಾಗುತ್ತಿಲ್ಲ. ರೈತರಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು ಎಂದರು.
ಕಳೆದ ಆರು ವರ್ಷಗಳಿಂದ ಸತತವಾಗಿ ಬೆಳೆ ಕೈ ಕೊಡುತ್ತಿದ್ದು ಈ ಭಾಗದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದು ಕೂಡಲೇ ರೈತರು ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಹಾಗು ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರವೇ ವತಿಯಿಂದ ಗುರುವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಹಾಗು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ರ್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕರವೇ ತಾಲ್ಲೂಕು ಸಂಚಾಲಕ ಆನಂದರೆಡ್ಡಿ, ಗೌರವಾಧ್ಯಕ್ಷ ಚೌಡರೆಡ್ಡಿ, ಸಂಚಾಲಕ ಆರ್.ನರಸಿಂಹರೆಡ್ಡಿ, ರೈತ ಮುಖಂಡರಾದ ಶಿವಾರೆಡ್ಡಿ, ಆರ್.ಆನಂದರೆಡ್ಡಿ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
ಭಗತ್ಸಿಂಗ್ ಜನ್ಮದಿನಾಚರಣೆ
ದೇಶದ ಅಭಿವೃದ್ಧಿಗಾಗಿ ಭಗತ್ಸಿಂಗ್ ಕಂಡ ಕನಸನ್ನು ನನಸಾಗಿಸುವ ಪ್ರಯತ್ನಗಳು ನಡೆಯಬೇಕಾಗಿದೆ ಎಂದು ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಎಂ.ದೇವರಾಜ್ ತಿಳಿಸಿದರು.
ತಾಲ್ಲೂಕಿನ ಜಯಂತಿ ಗ್ರಾಮದಲ್ಲಿ ಸೋಮವಾರ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಗತ್ಸಿಂಗ್ ಜನ್ಮದಿನಾಚರಣೆಯನ್ನು ಆಚರಿಸಿ ಸಿಹಿ ಹಂಚಿ ಅವರು ಮಾತನಾಡಿದರು.
ಯುವ ಸಮೂಹ ಭಗತ್ಸಿಂಗ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಭಗತ್ಸಿಂಗ್ ಕ್ರಾಂತಿ ಎಂಬುದು ಬಂದೂಕುಗಳ ಆರಾಧನೆಯಲ್ಲ, ಬದಲಿಗೆ ಮಾನವರ ನಡುವಿನ ಶೋಷಣೆ ಕೊನೆಗಾಣಿಸಲು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ತರಬೇಕೆಂದು ಭಗತ್ಸಿಂಗ್ ನಂಬಿದ್ದರು. ಸಮಾನ ಅವಕಾಶಗಳ ಜತೆಗೆ ಆರೋಗ್ಯಕರ ಸಮಾಜ ನಿರ್ಮಾಣವಾಗಬೇಕೆಂದು ಆಶಿಸುತ್ತಿದ್ದರೆಂದು ತಿಳಿಸಿದರು.
ಭಗತ್ಸಿಂಗ್ ಅಥ್ಲೆಟಿಕ್ ಅಸೋಸಿಯೇಶನ್ ಕಾರ್ಯದರ್ಶಿ ನಾರಾಯಣಸ್ವಾಮಿ, ಸುಧಾಕರರೆಡ್ಡಿ, ಚಂದ್ರಶೇಖರ್, ಬೈರೇಗೌಡ, ಡಿ.ಸುಬ್ಬಾರೆಡ್ಡಿ, ಶಿಕ್ಷಕರಾದ ಜೀವಿಂದರ್ ಕುಮಾರ್, ಮಾಲತೇಶ ಹಳ್ಳೇರ್, ರಾಧಾಕೃಷ್ಣ, ಕಲ್ಪನಾ, ಸುಮಲತಾ, ಶಿವಕುಮಾರಸ್ವಾಮಿ, ಮೆಹಬೂಬ್ ಸಾಬ್, ಸಿ.ಕೆ.ಮಂಜುಳಾ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೋಡಿ ಮುಕ್ತ ಅಭಿಯಾನ
ಹತ್ತಾರು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವ್ಯಾಜ್ಯಗಳು ನಡೆಯಲು ಹಾಗೂ ವೈಮನಸ್ಯಗಳುಂಟಾಗಲು ಪೋಡಿ ಆಗದಿರುವುದು ಒಂದು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಮಂಗಳವಾರ ನಡೆದ ಪೋಡಿ ಮುಕ್ತ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಹಿಸ್ಸೆಗೆ, ಒಂದು ಆರ್ಟಿಸಿ, ಒಂದು ನಕ್ಷೆ, ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದಲ್ಲಿ ನಡೆಯಲಿದೆ. ಬಹು ಮಾಲೀಕತ್ವದ ಪಹಣಿ ಪತ್ರಗಳನ್ನು ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ ನಕಾಶೆ ವಿತರಿಸುವುದು ಪೋಡಿ ಮುಕ್ತ ಅಭಿಯಾನ ಉದ್ದೇಶವಾಗಿದೆ.
ಭೂಮಾಪಕರು ಗ್ರಾಮದಲ್ಲಿ ಅಳತೆ ಕೆಲಸ ಕೈಗೊಳ್ಳಲು ಬಂದಾಗ ಅಗತ್ಯ ಮಾಹಿತಿ, ಸಹಕಾರ ನೀಡಿ, ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು. ಭೂಮಾಪನ ತಂಡ ಗ್ರಾಮಕ್ಕೆ ಭೇಟಿ ನೀಡಿದಾಗ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಈಗಾಗಲೇ ತಾಲ್ಲೂಕಿನ ಅಬ್ಲೂಡು ಹಾಗೂ ಬೋದಗೂರು ಗ್ರಾಮದಲ್ಲಿ ಪೋಡಿ ಮುಕ್ತ ಅಭಿಯಾನ ಪ್ರಾರಂಭವಾಗಿದ್ದು, ಹಂತಹಂತವಾಗಿ ಎಲ್ಲಾ ಗ್ರಾಮಗಳಲ್ಲೂ ನಡೆಯುತ್ತದೆ. ಪಕ್ಷಾತೀತವಾಗಿ ಎಲ್ಲರೂ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ, ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕು. ರೋಗಮುಕ್ತ ಗ್ರಾಮಕ್ಕಾಗಿ ಪ್ರತಿಯೊಂದು ಕುಟುಂಬವೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು. ಗ್ರಾಮದ ನೈರ್ಮಲ್ಯೀಕರಣಕ್ಕೆ ಆದ್ಯತೆ ನೀಡುವಂತೆ ತಿಳಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಡಿ.ಡಿ.ಎಲ್.ಆರ್. ಅಜ್ಜಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಾಮುನಿಕೃಷ್ಣಪ್ಪ, ರಾಮಚಂದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ವೆಂಕಟಪ್ಪ, ನಗರಸಭೆ ಸದಸ್ಯ ಅಫ್ಸರ್ಪಾಷ, ಜಗ್ಗಪ್ಪ, ವೆಂಕಟೇಶ್, ಕಂದಾಯ ನಿರೀಕ್ಷಕ ಸುಬ್ರಮಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಜಿಲ್ಲಾಧಿಕಾರಿಗಳಿಗೆ ಮನವಿ:
ಸತ್ತಿರುವ ರೇಷ್ಮೆ ಹುಳುಗಳ(ಪ್ಯೂಪಾ) ಅಕ್ರಮ ಸಂಸ್ಕರಣ ಘಟಕಗಳ ತೆರವು, ಕೆರೆಗಳ ಒತ್ತುವರಿ ತೆರವು ಹಾಗೂ ಕೆರೆಗಳಲ್ಲಿನ ಜಾಲಿ ಮರಗಳ ತೆರವುಗೊಳಿಸಲು ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಇದ್ಲೂಡು ಗ್ರಾಮದಲ್ಲಿ ಮಂಗಳವಾರ ನಡೆದ ಪೋಡಿ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಸಮಾನ ಮನಸ್ಕರ ಹೋರಾಟ ಸಮಿತಿ ಮತ್ತು ಕನ್ನಡ ಸೇನೆ ಸದಸ್ಯರು ಜಿಲ್ಲಾಧಿಕಾರಿ ಡಾ.ಎಂ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ನಗರಸಭೆಯ ಕಸವನ್ನು ಸಂಸ್ಕರಿಸಲು ಲಕ್ಷಾಂತರ ರೂಗಳ ವೆಚ್ಚದಲ್ಲಿ ಸಂಸ್ಕರಣ ಘಟಕವನ್ನು ನಿರ್ಮಿಸಿದ್ದರೂ ಹಳೆ ಬಾವಿಗಳಿಗೆ ಕಸವನ್ನು ತುಂಬಿಸಲಾಗುತ್ತಿದೆ. ನಗರದ ಹೊರವಲಯದಲ್ಲಿ ಸತ್ತಿರುವ ರೇಷ್ಮೆ ಹುಳುಗಳ(ಪ್ಯೂಪಾ) ಸಂಸ್ಕರಣೆ ನಡೆಯುತ್ತಿದ್ದು, ಇದರ ವಾಸನೆಯಿಂದ ರೇಷ್ಮೆ ಬೆಳೆಗಳ ನಾಶ, ಅನಾರೋಗ್ಯ, ಶಾಲಾ ಕಾಲೇಜುಗಳ ಮಕ್ಕಳಿಗೂ ತೊಂದರೆಯಾಗುತ್ತಿದೆ. ಇದರ ಬಗ್ಗೆ ನಗರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಗೌಡನ ಕೆರೆ ಮತ್ತು ಅಮ್ಮನ ಕೆರೆಯನ್ನು ಒತ್ತುವರಿ ಮಾಡಲಾಗಿದ್ದು, ಕಾನೂನುಬದ್ಧವಾಗಿ ತೆರವುಗೊಳಿಸಬೇಕಿದೆ. ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಕೆರೆಗಳಲ್ಲಿನ ಜಾಲಿ ಮರಗಳನ್ನು ತೆರವುಗೊಳಿಸಿ ಎಂದು ಕೋರಿದರು.
ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ವೆಂಕಟಸ್ವಾಮಿ, ಕಾರ್ಯದರ್ಶಿ ಪ್ರತೀಶ್, ಪುರುಷೋತ್ತಮ್, ರೈತಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಮುರಳಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು
ನಗರದ ಸ್ವಚ್ಛತೆಯನ್ನು ಮತ್ತು ಸಾರ್ವಜನಿಕ ಸ್ವಾಸ್ಥ್ಯವನ್ನು ಕಾಪಾಡುವ ಪೌರಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಪೌರಸೇವಾ ನೌಕರರ ಸಂಘದ ವತಿಯಿಂದ ಮಂಗಳವಾರ ನಗರದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ನಾಲ್ಕನೇ ವರ್ಷದ ಪೌರಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಇತರರಿಗಿಂತ ಬೇಗ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳು ಇವೆ. ಆಧುನಿಕ ಪರಿಕರಗಳು, ವೈದ್ಯಕೀಯ ಸೌಲಭ್ಯ, ಸೂಕ್ತ ವೇತನ ಪೌರಕಾರ್ಮಿಕರಿಗೆ ಅಗತ್ಯವಿದೆ. ಗಾಂಧೀಜಿ ಸ್ವಚ್ಛತೆಗೆ ಪ್ರಾಧಾನ್ಯತೆಯನ್ನು ನೀಡಿದ್ದರು. ಅವರು ಪೌರಕಾರ್ಮಿಕರ ಕೆಲಸವನ್ನು ಗೌರವದಿಂದ ಕಾಣಬೇಕೆಂದು ತಿಳಿಸಿರುವು ಸಾರ್ವಕಾಲಿಕ ಸತ್ಯವಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮುರಳಿ ಮಾತನಾಡಿ, ಸರ್ಕಾರದಿಂದ ಪೌರಕಾರ್ಮಿಕರಿಗೆ ವಸತಿಗೃಹಗಳ ನಿರ್ಮಾಣ ಮಾಡಲು ಆದೇಶ ಬಂದಿದ್ದು, ಅದಕ್ಕಾಗಿ ಸ್ಥಳವನ್ನು ಪರಿಶೀಲಿಸಿ ತ್ವರಿತ ಗತಿಯಲ್ಲಿ ಕಾಮಗಾರಿ ನಡೆಸಬೇಕಿದೆ ಎಂದು ಹೇಳಿದರು.
ನಿವೃತ್ತರಾಗಿರುವ ನಗರಸಭೆಯ ಕಂದಾಯ ನಿರೀಕ್ಷಕ ಷಮೀವುಲ್ಲಾ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷೆ ಮುಷ್ಠರಿ ತನ್ವೀರ್, ಜಿಲ್ಲಾ ನಗರ ಯೋಜನಾಧಿಕಾರಿ ನಾಗರಾಜಶೆಟ್ಟಿ, ನಗರಸಭೆ ಪೌರಾಯುಕ್ತ ಹರೀಶ್, ರಾಂಪ್ರಕಾಶ್, ನಗರಸಭೆ ಸದಸ್ಯ ಅಫ್ಸರ್ಪಾಷ, ಶ್ರೀನಾಥ್, ತನ್ವೀರ್ಪಾಷ, ಶಂಕರಪ್ಪ, ಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಧ್ವನಿ ಸಂಸ್ಕರಣೆ (Voice Culture) – ಏನು? ಏಕೆ? ಹೇಗೆ?
ಎಂ.ಎಸ್. ಸುಬ್ಬಲಕ್ಷ್ಮಿಯವರ ಸಂಗೀತವನ್ನು ಕೇಳಿದವರಿಗೆ ನಮಗೂ ಅಂತಹ ಕಂಠವಿದ್ದಿದ್ದರೆ! ಎಂದೆನಿಸುವುದು ಸಹಜ. ಕಿಶೋರ್ ಕುಮಾರ್ ರವರ ಗಾಯನವನ್ನಾಲಿಸಿದಾಗ ನಾನೂ ಅದೇ ರೀತಿ ಹಾಡುವಂತಿದ್ದಿದ್ದರೆ ಎಂಬಾಸೆಯಾಗುವುದು ಸ್ವಾಭಾವಿಕ. ಧ್ವನಿ ಹುಟ್ಟಿನಿಂದ ಬಂದದ್ದು ಅದನ್ನು ಬದಲಿಸಲಾಗದು ಎಂಬುದು ಸಹಜ ಅಭಿಪ್ರಾಯ. ಆದರೆ ಭಾರತೀಯ ಸಂಸ್ಕøತಿಯಲ್ಲಿ ಧ್ವನಿಯ ಗುಣಮಟ್ಟವನ್ನು ಸುಧಾರಿಸಲು ಅನೇಕ ವಿಧಿ-ವಿಧಾನಗಳು ತಿಳಿಸಲ್ಪಟ್ಟಿವೆ. ಪಾಶ್ಚಾತ್ಯ ದೇಶಗಳಲ್ಲಿ “voice Culture” ಎಂಬಂತಹ ತರಬೇತಿ ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ, ಆದರೆ ಭಾರತೀಯ ವಿಜ್ಞಾನಗಳಾದ ಆಯುರ್ವೇದ, ಯೋಗ ಸಂಗೀತ ಶಾಸ್ತ್ರಗಳಲ್ಲಿ ಸಹಸ್ರಾರು ವರ್ಷಗಳ ಮೊದಲೇ ಧ್ವನಿಯ ಗುಣವಟ್ಟವನ್ನು ಹೆಚ್ಚಿಸಿಕೊಳ್ಳಲು ಅನೇಕ ವೈಜ್ಞಾನಿಕ ಕ್ರಮಗಳು ತಿಳಿಸಲ್ಪಟ್ಟಿವೆ. ‘ಧ್ವನಿ’ ಇದು ಸಂವಹನ ಮಾಧ್ಯಮ, ಕೇವಲ ಗಾಯನಕ್ಕೊಂದೇ ಅಲ್ಲ, ಪರಿಣಾಮಕಾರಿ ಸಂವಹನ (communication) ಕ್ಕೂ ಕೂಡ ಉತ್ತಮ ಧ್ವನಿ ಅಗತ್ಯ. ಪ್ರಜ್ಞಾಪೂರ್ವಕವಾಗಿ ಧ್ವನಿಯನ್ನು ಸಂಸ್ಕರಿಸುವ ವಿಧಾನಕ್ಕೆ ‘ಧ್ವನಿ ಸಂಸ್ಕರಣೆ’ ಎನ್ನುತ್ತಾರೆ. ಅದಕ್ಕೆ ‘ಧ್ವನಿ’ ಹೇಗೆ ಉತ್ಪತ್ತಿ ಆಗುತ್ತದೆ ಎಂಬುದು ತಿಳಿದಿರಬೇಕು. ಗಂಟಲಿನಲ್ಲಿರುವ ಸ್ವರಯಂತ್ರ (Larynx) ದ ಸ್ವರತಂತುಗಳು ಕಂಪಿಸಿದಾಗ ಶಬ್ದ ಉತ್ಪತ್ತಿ ಆಗುತ್ತದೆ ಎಂಬ ಜ್ಞಾನ ನಮಗೆಲ್ಲಾ ಇದೆ. ಆದರೆ ಇದರ ಜೊತೆ ಇನ್ನೆರಡು ಅಂಶಗಳು ಬಹಳ ಮುಖ್ಯ. ಮೆದುಳಿನಿಂದ ಸ್ವರಯಂತ್ರಕ್ಕೆ ಆದೇಶ ಬಂದಾಗ ಉಸಿರಾಟದ ಕ್ರಮದಲ್ಲಿ ಹೊಂದಾಣೀಕೆಯಾಗಿ, ಉಸಿರನ್ನು ಬಿಡುವಾಗ ಸ್ವರತಂತುಗಳು ಕಂಪಿಸಿ ಧ್ವನಿ ಉತ್ಪತ್ತಿಯಾಗುತ್ತದೆ. ಇನ್ನು ಸಂಗೀತಕ್ಕೆ ಸಂಬಂಧ ಪಟ್ಟಂತೆ ‘ನಾದ’ ಉತ್ಪತ್ತಿಯಾಗಬೇಕೆಂದರೆ ಅಲ್ಲಿ ಇನ್ನೂ ಕೆಲವು ಅಂಶಗಳು ಅಗತ್ಯ. ಮೆದುಳಿನ ಬಲಭಾಗದಿಂದ ಭಾವ ಉತ್ಪತ್ತಿಯಾದರೆ, ಮೆದುಳಿನ ಎಡಭಾಗದಿಂದ ಧ್ವನಿಯ ಏರಿಳಿತ ಅಂದರೆ ಪ್ರಮಾಣದ ಜ್ಞಾನ ಉಂಟಾಗುತ್ತದೆ. ಇವುಗಳ ಜೊತೆ ಪೂರ್ವಾನುಭವ ಮನೋಧರ್ಮ, ಸೃಜನ ಶೀಲತೆ, ಉಸಿರಾಟದ ಹೊಂದಾಣಿಕೆ ಇವೆಲ್ಲವೂ ಸೇರಿದಾಗ ಸುಶ್ರಾವ್ಯವಾದ ‘ನಾದ’ ಉಂಟಾಗುತ್ತದೆ. ವಿವಿಧ ಸಂಗೀತ ಪ್ರಾಕಾರಗಳಾದ ಜನಪದ ಸಂಗೀತ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತಗಳಿಗೆ ಧ್ವನಿ ಸಂಸ್ಕರಣ ವಿಧಾನವು ಬೇರೆ ಬೇರೆ ರೀತಿಯಾಗಿರುತ್ತದೆ. ಇನ್ನು ಸರಳೀಕೃತ ‘ಧ್ವನಿ ಸಂಸ್ಕರಣೆ’ ಕುರಿತು ಒಂದೆರಡು ಮಾತು.
ಧ್ವನಿ ಸಂಸ್ಕರಣೆಯ ಮೂಲಭೂತ ಅವಶ್ಯಕತೆಗಳೆಂದರೆ ಉಸಿರಾಟದ ನಿಯಂತ್ರಣೆ, ಸದೃಢ ಆರೋಗ್ಯಪೂರ್ಣ ಶರೀರ ಹಾಗೂ ಶಾಂತವಾದ ಮನಸ್ಸು, ಧನಾತ್ಮಕವಾದ ಆಲೋಚನೆ ಹಾಗೂ ಆತ್ಮವಿಶ್ವಾಸಗಳಿದ್ದಲ್ಲಿ ಧ್ವನಿಯ ಪರಿವರ್ತನೆ ಸಾಧ್ಯ. ಜ್ಞಾನೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ; ಇವುಗಳ ಮೂಲಕ ನಾವು ಬಾಹ್ಯ ಪ್ರಪಂಚದ ಜೊತೆ ಸಂಪರ್ಕವನ್ನು ಹೊಂದುತ್ತೇವೆ. ಜ್ಞಾನೇಂದ್ರಿಯಗಳಿಂದ ಸದಾ ಧನಾತ್ಮಕ ಅಂಶಗಳನ್ನು ಗ್ರಹಿಸಿದಾಗ ಮಾತ್ರ ಮನಸ್ಸು ಧನಾತ್ಮಕವಾಗಿ ಆಲೋಚಿಸಲು ಸಾಧ್ಯ. ಸಂತುಲಿತ ಸಾತ್ವಿಕ ಆಹಾರ ಅಂದರೆ ಹಣ್ಣು, ತರಕಾರಿ, ಹಾಲು, ಸಿಹಿರಸ ಪ್ರಧಾನ ಆಹಾರದ ಸೇವನೆ ಅಗತ್ಯ. ಬೆಚ್ಚಗಿನ ಕಾದಾರಿಸಿದ ನೀರನ ಸೇವನೆ, ಬೆಚ್ಚಗಿನ ನೀರಿನಿಂದ ದಿನಕ್ಕೆರಡು ಬಾರಿ ಬಾಯಿ ಮುಕ್ಕಳಿಸುವುದು ಹಿತಕರ. ದಿನಕ್ಕೊಂದು ಬಾರಿ ಬೆಚ್ಚಗಿನ ಎಳ್ಳೆಣ್ಣೆಯನ್ನು ಎರಡೆರಡು ಹನಿ ಪ್ರತಿಯೊಂದು ಮೂಗಿನ ಹೊಳ್ಳೆಗೂ ಹಾಕಿಕೊಳ್ಳಬೇಕು. ಉಸಿರಾಟದ ನಿಯಂತ್ರಣೆಯನ್ನು ಸರಳವಾದ ಉಸಿರಾಟದ ಮೂಲಕ ಮಾಡಿಕೊಳ್ಳಬೇಕು. ನಿಧಾನಗತಿಯಲ್ಲಿ ಕ್ರಮಬದ್ಧವಾಗಿ ಸಮಪ್ರಮಾಣದಲ್ಲಿ ಉಸಿರನ್ನು ಬಿಡುವುದು ಹಾಗೂ ಉಸಿರನ್ನು ತೆಗೆದುಕೊಳ್ಳುವುದು ಈ ಕ್ರಮವನ್ನು ಅನುಸರಿಸುವುದರಿಂದ ಉಸಿರಾಟದ ನಿಯಂತ್ರಣೆ ಉಂಟಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿನ ಅಭ್ಯಾಸ ಗಾನದ ಕಲಿಕೆಯಿರುವುದೂ ಕೂಡ ಧ್ವನಿ ಸಂಸ್ಕರಣೆಗಾಗಿಯೇ. ಶ್ರುತಿಯ ಅಭ್ಯಾಸ, ಸರಳೆ ವರಸೆ, ಜಂಟಿವರಸೆ, ದಾಟುವರಸೆ, ಅಲಂಕಾರ ಹೆಚ್ಚುಸ್ಥಾಯಿ, ತಗ್ಗುಸ್ಥಾಯಿ, ಗೀತೆ, ಸ್ವರಜತಿ, ವರ್ಣ – ಹೀಗೆ.
ಈ ಎಲ್ಲಾ ಪಾಠಗಳಿರುವುದು ಧ್ವನಿ ಸಂಸ್ಕರಣೆಗಾಗಿಯೇ. ಇಷ್ಟೇ ಅಲ್ಲದೇ ಆಯುರ್ವೇದ ಶಾಸ್ತ್ರದಲ್ಲಿ ಧ್ವನಿಯ ವಿವಿಧ ದೋಷಗಳಿಗಾಗಿ ಅನೇಕ ಔಷಧಿಗಳು ಉಲ್ಲೇಖಿಸಲ್ಪಟ್ಟಿವೆ. ಆಚಾರ್ಯ ಚರಕರು “ಕಂಠ್ಯ ಔಷಧಿ” ಗಳ ಪಟ್ಟಿಯನ್ನೇ ನೀಡಿದ್ದಾರೆ. ಧ್ವನಿಯ ದೋಷಕ್ಕೆ ಅನುಸಾರವಾಗಿ ಈ ಔಷಧಿಗಳನ್ನು ಬಳಸಬಹುದು. ಮಾನವ ಉಳಿದೆಲ್ಲಾ ಜೀವಿಗಳಿಗಿಂತ ಭಿನ್ನನಾಗಿರುವುದೇ ಅವನ ಸಂವಹನ ಸಾಮಥ್ರ್ಯವಾದ ಧ್ವನಿಯಿಂದ. ಧ್ವನಿಯೇ ಆಧಾರ ಜೀವನಕೆ, ಧ್ವನಿ ಬೇಕು ಸಂವಹನಕೆ, ಸಂವಹನವೇ ಜೀವಾಳ ಉನ್ನತಿಗೆ, ಅಂತಹ ಉನ್ನತಿಯ ಹೊಂದಲು ಬೇಕು ಧ್ವನಿಯ ಸಂಸ್ಕರಣೆ.
ಡಾ. ಶ್ರೀವತ್ಸ
ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ಸಮರ್ಪಕ ವಿದ್ಯುತ್ ನೀಡುವಂತೆ ಒತ್ತಾಯಿಸಿ ಬೆಸ್ಕಾಂ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಪ್ರದೇಶಗಳಿಗೆ ಅಸಮರ್ಪಕವಾಗಿ ವಿದ್ಯುತ್ ನೀಡಲಾಗುತ್ತಿದೆ. ರಾತ್ರಿ ವೇಳೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ರೈತರು ಪಂಪ್ಸೆಟ್ ಬಳಸಿ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಬೇಸಿಗೆಗೆ ಮೊದಲೇ ವಿದ್ಯುತ್ ಕೊರತೆ ಕಾಣಿಸಿಕೊಂಡಿದೆ. ಬೇಸಿಗೆಯಲ್ಲಿ ರಾಜ್ಯ ಕತ್ತಲೆಯ ಸಾಮ್ರಾಜ್ಯವಾದರೆ ಆಶ್ಚರ್ಯವಿಲ್ಲ. ರಾಜ್ಯ ಸರ್ಕಾರ ಇತ್ತ ಶೀಘ್ರ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಬೆಸ್ಕಾಂ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬೆಸ್ಕಾಂ ಅಧಿಕಾರಿಗಳ ಮನೆ, ಕಚೇರಿಗೆ ಬೀಗ ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬೆಸ್ಕಾಂ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಬಿಜೆಪಿ ಪಕ್ಷದ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ರಮೇಶ್ಬಾಯಿರಿ, ಶ್ರೀರಾಮರೆಡ್ಡಿ, ಶ್ರೀಧರ್, ಸಿ.ವಿ.ಲೊಕೇಶ್ಗೌಡ, ನಂದೀಶ್, ಶಿವಕುಮಾರಗೌಡ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಶಿವಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಭ್ರಷ್ಟಾಚಾರದ ವಿವಸ್ತ್ರಕ್ಕೆ ಮಾಹಿತಿ ಹಕ್ಕಿನ ಬ್ರಹ್ಮಾಸ್ತ್ರ!
ಬ್ರಿಟಿಷರ ಆಡಳಿತದಿಂದ ನಾವು ಸ್ವಾತಂತ್ರ್ಯ ಪಡೆದಿದ್ದೇವೆಂಬುದು ನಾಣ್ಯದ ಒಂದು ಮುಖದ ಸತ್ಯ ಮಾತ್ರ. ಅಧಿಕಾರಿಶಾಹಿಯ ವರ್ತನೆ ಟಿಪಿಕಲ್ ಇಂಗ್ಲೀಷರ ಮಾದರಿಯಲ್ಲಿಯೇ ಇದ್ದಿರುವುದು ಅಕ್ಷರಶಃ ಸತ್ಯ. ಕಾನೂನು ಮಾಡುವ, ಕಾನೂನು ಹೇರುವ ಅಧಿಕಾರವನ್ನು ಅನುಭವಿಸುತ್ತಿರುವ ಅಧಿಕಾರಿ ವರ್ಗದ ಎದುರು ಜನಸಾಮಾನ್ಯರು ಕೈಕಟ್ಟಿ ನಿಲ್ಲಲೇಬೇಕಾದ ಪರಿಸ್ಥಿತಿ. ಅಂದಮೇಲೆ ಬದಲಾದದ್ದು ಏನು?
ಬಹುಷಃ ಇನ್ನು ಐವತ್ತು ವರ್ಷ ಕಳೆದರೂ ವಾತಾವರಣ ಹಾಗೇ ಇರುತ್ತಿತ್ತು. ಆಡಳಿತಶಾಹಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಣಕವಾಡುತ್ತಲೇ ಇರುತ್ತಿತ್ತು. ಇಂತಹ ವೇಳೆ ಮುಚ್ಚಿದ ಬಾಗಿಲ ಸಂದಿನಿಂದ ತೂರಿದ ಬೆಳಕಿನ ಕಿರಣದಂತೆ ಮಾಹಿತಿ ಹಕ್ಕು ಕಾಯ್ದೆ ಚಾಲ್ತಿಗೆ ಬಂದಿದೆ. ಶ್ರೀ ಸಾಮಾನ್ಯ ಅಧಿಕಾರಿಗಳ ವಿರುದ್ಧ ಝಳಪಿಸಲು ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ. ಜಾರಿಗೆ ಬಂದು ಈಗಾಗಲೇ ಎರಡು ವರ್ಷ ಕಳೆದೇಹೋಗಿದೆ ಎಂಬುದು ಒಂದೆಡೆಯಾದರೆ, ಅದರ ಬಳಕೆಯ ಕುರಿತು ಈಗಷ್ಟೇ ಅರಿವು ಮೂಡುತ್ತಿದೆ ಎಂಬುದು ಅನಿವಾರ್ಯ ಸತ್ಯ.
ಪ್ರಶ್ನೆಯೊಂದು ಮೂಡದಿರದು. ಕಾನೂನುಗಳನ್ನು ರೂಪಿಸುವವರೇ ಅಧಿಕಾರಿಗಳು. ಅಂತಹುದರಲ್ಲಿ ತಮ್ಮ ಕೈಯನ್ನು ತಾವೇ ಬಂಧಿಸಿಕೊಳ್ಳಲು ಅವರೇಕೆ ಮಾಹಿತಿ ಕಾಯ್ದೆಗೆ ಅವಕಾಶ ಮಾಡಿಕೊಟ್ಟರು? ಮಾಹಿತಿ ಕಾರ್ಯಕರ್ತರೊಬ್ಬರ ವಿವರಣೆ ಸ್ವಾರಸ್ಯಕರವಾದದ್ದು, ಕೌರವರ ಮಧ್ಯೆಯೂ ಪಾಂಡವರಿರುತ್ತಾರೆ! ಬಹುಷಃ ಐಎಎಸ್ ಅಧಿಕಾರಿ ವಿಜಯ್‍ಕುಮಾರ್ ಅಂತವರು ಈ ವರ್ಗದವರಿರಬೇಕು. ನಾಗರಿಕರಿಗೆಂದು ಕಛೇರಿಯಲ್ಲಿ ವಾರದ ನಿರ್ದಿಷ್ಟ ದಿನ ಫೈಲ್‍ಗಳನ್ನು ನೋಡುವ ಮುಕ್ತ ಅವಕಾಶ ಒದಗಿಸುವ ನಿಯಮ ರೂಪಿಸಿದ ಜನಪರ ಅಧಿಕಾರಿ ಈತ. ಒಂದೇ ಒಂದು ದುರಂತವೆಂದರೆ, ಹಿಂದೆ ನೂರು ಕೌರವರಿದ್ದರೆ ಇಂದು ಆ ಸಂಖ್ಯೆ ಕೋಟಿ ದಾಟಿದೆ. ಪಾಂಡವರ ಸಂಖ್ಯೆ ಅವತ್ತಿನ ಐದಕ್ಕಿಂತ ಹೆಚ್ಚಿರುವುದು ಅನುಮಾನ! ಅಷ್ಟರಮಟ್ಟಿಗೆ ಪ್ರಾಮಾಣಿಕತೆಯ ಹೋರಾಟಕ್ಕೆ ಅಡೆತಡೆ ಜಾಸ್ತಿ.
ವಾಸ್ತವವಾಗಿ ಈ ಕಾಯ್ದೆ ಸಂಕೀರ್ಣ ರೂಪದ್ದಲ್ಲ, ಸುಲಭ ಗ್ರಾಹ್ಯವಾಗುವಂತದು. ಆಸಕ್ತರಿಗೆ ಇದರ ಹೂರಣವನ್ನು ಅರ್ಥೈಸಿಕೊಳ್ಳಲು ಎರಡು ದಿನ ಸಾಕಾದೀತು. ಮಾಹಿತಿ ಕಾಯ್ದೆ ಕುರಿತು ನೂರಾರು ಪುಸ್ತಕಗಳು, ಸಾವಿರಾರು ಲೇಖನಗಳು ಪ್ರಕಟಗೊಂಡಿದ್ದು ಅವು ನೀಡುವ ಮಾಹಿತಿಯೇ ಧಾರಾಳವಾಗಿ ಸಾಕು. ಬೆಂಗಳೂರಿನ ಕ್ರಿಯೇಟ್ ಎಂಬ ಸಂಸ್ಥೆ ಮಾಹಿತಿ ಆಂದೋಲನದ ಮುಂಚೂಣಿಯಲ್ಲಿದೆ. ಇದು ಇಲಾಖೆಗಳ ಮಾಹಿತಿ ಅಧಿಕಾರಿಗಳಿಗೆ ಒಂದೆರಡು ದಿನಗಳ ಮಿತಿಯಲ್ಲೂ ಮಾಹಿತಿ ತರಬೇತಿ ನೀಡುತ್ತಿದೆ. ಅಷ್ಟಕ್ಕೂ ಸರ್ಕಾರಿ ಅಧಿಕಾರಿಗಳು ಬುಡಕ್ಕೆ ಬೆಂಕಿ ಬಿದ್ದರೆ ಮಾತ್ರ ನೀರು ಹುಡುಕುವವರು. ಇಂತವರಿಗೆ ಕಾಯ್ದೆ ಜಾರಿಗೆ ಐದು ವರ್ಷದ ಕಾಲಾವಕಾಶ ನೀಡಬೇಕಿತ್ತು ಎಂದರೆ ಇನ್ನೂ 60 ತಿಂಗಳು ನಿದ್ರಿಸಲು ಅನುವು ಮಾಡಿಕೊಟ್ಟಂತಾದೀತು ಅಷ್ಟೇ!
ಇತ್ತೀಚಿಗೆ ದಾವಣಗೆರೆಯ ನ್ಯಾಯಾಲಯದ ಅಧಿಕಾರಿಯೊಬ್ಬರು ಹೇಳುತ್ತಿದ್ದರು, `ತಮ್ಮ ಜಿಲ್ಲೆಯಲ್ಲಿ ಮೊತ್ತಮೊದಲಾಗಿ ಮಾಹಿತಿ ಕೋರಿ ಅರ್ಜಿ ತಮ್ಮ ಕಛೇರಿಗೇ ಬಂದಿತು. ಏನೇನೂ ಗೊತ್ತಿಲ್ಲದ ವೇಳೆ ತಮಗೇ ಅರ್ಜಿಗೆ ಮಾಹಿತಿ ಒದಗಿಸಲು ಉಳಿದವರು ಜವಾಬ್ದಾರಿ ದಾಟಿಸಿಬಿಟ್ಟರು. ಹಾಗಾಗಿ ಈ ಬಗ್ಗೆ ನಾನು ಪೂರ್ತಿ ಜ್ಞಾನ ಪಡೆಯಲೇಬೇಕಾಯಿತು.’ ಇದು ಸರ್ಕಾರಿ ವ್ಯವಸ್ಥೆಯ ಭಾಗವಾದವರ ನಡವಳಿಕೆ. ಅವರಿಗೆ ಕಾಲಾವಕಾಶ ನೀಡುವ ಮಾತು ಅರ್ಥವಿಲ್ಲದ್ದು. ಅಂದಮೇಲೆ ಮಾಹಿತಿ ಅರ್ಜಿಗಳು ಧಾಳಿ ಇಡಬೇಕು! ಆಗಲೇ ಅಧಿಕಾರಿಗಳು ಚುರುಕಾಗುತ್ತಾರೆ.
ಸದ್ಯ ಅಧಿಕಾರಿಗಳಷ್ಟೇ ಜನರೂ ತಟಸ್ಥರಾಗಿದ್ದಾರೆ. ಖಂಡಿತವಾಗಿಯೂ ಜನ ಮಾಹಿತಿ ಕೇಳಲಾರಂಭಿಸಿದಾಗ ಯೋಜನೆಗಳ ಅನುಷ್ಠಾನ ಹೆಚ್ಚು ಪಾರದರ್ಶಕವಾಗಿರಬೇಕಾಗುತ್ತದೆ, ಪ್ರಾಮಾಣಿಕತೆ ಇಣುಕಲೇಬೇಕಾಗುತ್ತದೆ. ಪ್ರಸ್ತುತ ಖೂಳರಿಗೇ ಈ ಕಾಯ್ದೆ ಹೆಚ್ಚಿನ ಲಾಭ ಒದಗಿಸಿದೆ. ಅಧಿಕಾರಿಗಳನ್ನೇ ಬ್ಲಾಕ್‍ಮೇಲ್ ಮಾಡಲು ಬಳಕೆಯಾಗುತ್ತಿದೆ. ಅಲ್ಲೂ ಒಂದು ಧನಾಂಶವಿದೆ. ಭ್ರಷ್ಟತೆ ಇದ್ದಲ್ಲಿ ಮಾತ್ರ ಬ್ಲಾಕ್‍ಮೇಲ್ ನಡೆದೀತು. ಪ್ರಾಮಾಣಿಕರಾಗಿದ್ದಲ್ಲಿ ಈ ಲಾಭ ಸಿಕ್ಕದು. ಸ್ವಚ್ಛ ಆಡಳಿತಕ್ಕೆ ಇದೇ ನಾಂದಿ ಹಾಡಿದರೆ ಚೆನ್ನ.
ಸಿನಿಕರಂತೆ ನಕಾರಾತ್ಮಕವಾಗಿ ಯೋಚಿಸಬೇಕಾದ ಅಗತ್ಯವಿಲ್ಲ. ಕಾಯ್ದೆಗೆ ಹಲ್ಲಿದೆ. ಬಳಸಲು ಅನುವು ಮಾಡಿಕೊಡುವ ಗ್ರಾಹಕ ಸಂಘಟನೆಗಳಿವೆ. ತುಸು ಕಾಲ ಬೇಕಾದೀತು. ಆದರೆ ಫಲಿತಾಂಶ ನಿಶ್ಚಿತ.
ಇನ್ನಷ್ಟು ಪರಿಣಾಮಕಾರಿಯಾಗಿ ಕಾಯ್ದೆ ಮೂಡಲು ಕೆಲ ತಿದ್ದುಪಡಿ ಅನಿವಾರ್ಯ. ಈಗ ಹಿಂದುಳಿದ ಜಾತಿ ವರ್ಗದವರು ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ನೂರು ಪುಟಗಳ ಮಾಹಿತಿಯನ್ನು ಉಚಿತವಾಗಿ ಒದಗಿಸುವ ಸೌಲಭ್ಯವಿದೆ. ಇದನ್ನು ಎಲ್ಲ ವರ್ಗಕ್ಕೂ ಅನ್ವಯಿಸಬೇಕು. ಈಗಾಗಲೆ ಅಧಿಕಾರಿಗಳು ಕಾಯ್ದೆಯ ಕಲಂ 8(1)(ಜೆ)ಯನ್ನು ಉಲ್ಲೇಖಿಸಿ ಕೇಳಿದ ಮಾಹಿತಿಯನ್ನು ವೈಯುಕ್ತಿಕ ವಿವರ ಎಂಬ ನೆಪದಲ್ಲಿ ನಿರಾಕರಿಸುತ್ತಿದ್ದಾರೆ. ಬೃಹತ್ ಸಂಖ್ಯೆಯಲ್ಲಿ ಪುಟಗಳ ಮಾಹಿತಿಯಿದೆ ಎಂದು ಹೇಳಿ ದೊಡ್ಡ ಮೊತ್ತ ಕಟ್ಟಿ ಬೇಕಿದ್ದರೆ ಮಾಹಿತಿ ಪಡೆಯಿರಿ ಎಂದು ಹೆದರಿಸಲಾಗುತ್ತಿದೆ. ಹಿನ್ನೆಲೆಯಲ್ಲಿರುವುದು ಮಾಹಿತಿ ಕೊಡದಿರುವ ಷಡ್ಯಂತ್ರ. ಕಲಂ 8(1)(ಜೆ)ಯನ್ನು ಇನ್ನಷ್ಟು ಸ್ಪಷ್ಟೀಕರಿಸಬೇಕು. ಮಾಹಿತಿ ಅರ್ಜಿಯಲ್ಲಿಯೇ ಲೋಪ ಹುಡುಕಿ ಕೋರಿಕೆಯನ್ನು ನಿರಾಕರಿಸುವ ಪ್ರವೃತ್ತಿಗೆ ತಡೆ ಹಾಕಲೇಬೇಕಿದೆ.
ಸದ್ಯ ಸಂಘಟನೆಗಳಿಗೆ ಮಾಹಿತಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಇದು ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ. ಇದನ್ನು ಹಿಂಪಡೆಯಲೇಬೇಕು. ಶಾಸಕಾಂಗ ಈ ವ್ಯವಸ್ಥೆಗಳನ್ನು ಪುನರಾವಲೋಕಿಸಬೇಕಾದ ಕಾಲವಿದು. ಅಷ್ಟಕ್ಕೂ ತಿದ್ದುಪಡಿಗಳು ಅದರ ಕೈಯಲ್ಲಿದೆ ತಾನೇ?
ನಿಜಕ್ಕೂ ಗ್ರಾಮಾಭಿವೃದ್ಧಿಗೆ, ನಗರಾಭಿವೃದ್ಧಿಗೆ ನಾಗರಿಕರು ತಮ್ಮ ಹಣ, ಶ್ರಮ ಹಾಕಬೇಕಾದುದಿಲ್ಲ. ತಮ್ಮೂರಿನ ಕಾಮಗಾರಿಗಳು ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಲು ಮಾಹಿತಿ ಹಕ್ಕನ್ನು ಬಳಸಿದರೆ ಬೇಷಾದೀತು. ಮಾಹಿತಿ ಅರ್ಜಿಗಳು ಭರಪೂರವಾಗಿ ದಾಖಲಾಗತೊಡಗಿದರೆ ಕಛೇರಿಗಳು ಇವುಗಳ ವಿಲೇವಾರಿಗೇ ತಮ್ಮೆಲ್ಲ ಸಮಯ ವ್ಯಯಿಸುವ ಆತಂಕ ಇಲ್ಲದಿಲ್ಲ. ವಾಸ್ತವವಾಗಿ ಇದನ್ನು ಸುಲಭದಲ್ಲಿ ಪರಿಹರಿಸಿಕೊಳ್ಳಬಹುದು. ಈ ಕಛೇರಿಗಳು ಯೋಜನೆಗಳ ವಿವರ, ಗುತ್ತಿಗೆ ದಾಖಲೆಗಳು, ಅಧಿಕಾರಿಗಳ ಸಂಬಳ- ಸಾರಿಗೆ ಮುಂತಾದ ಹತ್ತು ಹಲವು ನೇರ ವಿವರಗಳನ್ನು ಸ್ವಯಂಪ್ರೇರಿತವಾಗಿ ಪ್ರಕಟಿಸಬಹುದು, ವೆಬ್‍ಸೈಟ್‍ಗಳಲ್ಲಿ ಅಳವಡಿಸಬಹುದು. ಆಗ ಸಂಕೀರ್ಣ ವಿಚಾರಗಳ ಕುರಿತಾಗಿ ಮಾತ್ರ ಮಾಹಿತಿ ಅರ್ಜಿ ಬಂದೀತು. ಇಂತಹ ವಾತಾವರಣ ಸೃಷ್ಟಿಯಾಗಬೇಕೆನ್ನುವುದೇ ಮಾಹಿತಿ ಆಂದೋಲನದ ಹರಿಕಾರರ ಆಶಯ.
ಕಾಯ್ದೆಯ ಬಗ್ಗೆ ಅಧಿಕಾರಿಗಳಲ್ಲಿ ಸ್ಪಷ್ಟ ಭಯ ಮೂಡಬೇಕು. ಹಾಗಾಗಬೇಕಾದರೆ ರಾಜ್ಯ ಮಾಹಿತಿ ಆಯೋಗಗಳನ್ನು ಲೋಕಾಯುಕ್ತದ ಮಾದರಿಯಲ್ಲಿ ರೂಪಿಸಬೇಕು. ಸದ್ಯ ಈ ರಾಜ್ಯ ಆಯೋಗಗಳಲ್ಲಿ ಕಾರ್ಯ ನಿರ್ವಹಿಸುವವರು ರಾಜ್ಯ ಸರ್ಕಾರದ ಅಧಿಕಾರಿಗಳೇ. ಎಷ್ಟೇ ನಿಷ್ಪಕ್ಷಪಾತವಾಗಿ ಕಾಯ್ದೆಯನ್ವಯ ಕೆಲಸ ಮಾಡುತ್ತೇನೆಂದರೂ, ತಮ್ಮದೇ ಅಧಿಕಾರಿ ವರ್ಗದ ಮೇಲೆ ಇವರ ಕರುಣಾದೃಷ್ಟಿ ಇದ್ದೇ ಇರುತ್ತದೆ. ಇದು ಹತ್ತು ಹಲವು ಬಾರಿ ಶ್ರುತಪಟ್ಟಿದೆ. ಬಹುಷಃ ಲೋಕಾಯುಕ್ತದಂತೆ ಸ್ವಾಯತ್ತ – ನಿವೃತ್ತ ನ್ಯಾಯಾಧೀಶರ ನೇತ್ರತ್ವ ದಕ್ಕಿದರೆ, ಅವರು ಕಾನೂನಿನಂತೆ ನಿರ್ವಹಿಸಿದರೆ ಭ್ರಷ್ಟಾಚಾರದ ಪ್ರಮಾಣದಲ್ಲಿ ಇಳಿಕೆಯಾಗಲೇಬೇಕು.
ಸ್ವಾತಂತ್ರ್ಯ ಬಂದು ಬರೋಬ್ಬರಿ 67 ವರ್ಷ. ಹೆಚ್ಚು ಕಡಿಮೆ ಸಂವತ್ಸರದ ಅಂತರದಲ್ಲಿ ನಾಗರಿಕರಿಗೆ ಒಂದು ಉಸಿರಾಟದ ಅವಕಾಶ ಸಿಕ್ಕಿದೆ. ಇದು ಪೂರ್ಣ ಜನಪರ ಗಾಳಿ. ನಾಗರಿಕರ ಜವಾಬ್ದಾರಿ ದೊಡ್ಡದು. ರಾಮರಾಜ್ಯ ಸೃಷ್ಟಿಸುವುದು ಕಷ್ಟವಿದ್ದೀತು. ಕೊನೆಪಕ್ಷ ಅದರ ನೆರಳನ್ನಾದರೂ ಮೂಡಿಸಲು ಈ ಮಾಹಿತಿ ಹಕ್ಕು ಕಾಯ್ದೆ ಬಳಸಿಕೊಂಡರೆ ಚೆನ್ನ.
– ಮಾ.ವೆಂ.ಸ.ಪ್ರಸಾದ್
ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಿ
ಪಕ್ಷದ ಸಿದ್ಧಾಂತಗಳಂತೆ ನಡೆದುಕೊಳ್ಳದವರಿಗೆ ಬಿಜೆಪಿ ಪಕ್ಷದಲ್ಲಿ ಸ್ಥಾನವಿಲ್ಲ. ಕಟ್ಟಡಗಳನ್ನು ಕಟ್ಟಿ ಫ್ಲೆಕ್ಸಿಗಳಲ್ಲಿ ಭಾವಚಿತ್ರಗಳನ್ನು ಹಾಕಿಸಿಕೊಂಡ ಮಾತ್ರಕ್ಕೆ ಪಕ್ಷ ಸಂಘಟನೆ ಆಗುವುದಿಲ್ಲ ಎಂದು ಬಿ.ಜೆ.ಪಿ.ಜಿಲ್ಲಾಧ್ಯಕ್ಷ ರವಿನಾರಾಯಣರೆಡ್ಡಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘ ಪರಿವಾರದ ಅನೇಕ ಮಂದಿ ನಾಯಕರು ಈ ರಾಷ್ಟ್ರದ ಅಭಿವೃದ್ಧಿಗಾಗಿ ಹುಟ್ಟುಹಾಕಿದ ಬಿ.ಜೆ.ಪಿ. ಪಕ್ಷದಲ್ಲಿ ಯಾವೊಬ್ಬ ನಾಯಕರಿಗೂ ಸ್ಥಾನಮಾನವಿಲ್ಲ, ಯಾರಿಂದಲೂ ಪಕ್ಷವಿಲ್ಲ, ಪಕ್ಷವಿರುವುದು ಕಾರ್ಯಕರ್ತರಿಂದ. ಮೊದಲು ಕಾರ್ಯಕರ್ತರಿಗೆ ಅಧಿಕಾರ ಕೊಟ್ಟರೆ, ಅವರು ನಮಗೆ ಅಧಿಕಾರಗಳನ್ನು ಕೊಡುತ್ತಾರೆ. ಮುಖಂಡರು ಕಚ್ಚಾಡುವುದನ್ನು ಬಿಟ್ಟು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಯಕರ್ತರ ಮನದಾಳವನ್ನು ಅರಿತುಕೊಂಡು ಸಂಘಟಿತರಾಗಬೇಕು, ಪಕ್ಷವನ್ನು ಮುನ್ನಡೆಸಬೇಕು ಎಂದರು.
ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, ಪಂಡಿತ್ದೀನ ದಯಾಳ್ ಉಪಾಧ್ಯಾಯರಲ್ಲಿದ್ದಂತಹ ತುಡಿತ ಪ್ರತಿಯೊಬ್ಬ ಕಾರ್ಯಕರ್ತರಲ್ಲಿರಬೇಕು. ಪಕ್ಷದ ಸಂಘಟನೆಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ದುಡಿಯಬೇಕು ಎಂದರು.
ಬಿಜೆಪಿ ಪಕ್ಷದ ರಮೇಶ್ಬಾಯಿರಿ, ಶ್ರೀರಾಮರೆಡ್ಡಿ, ಶ್ರೀಧರ್, ಸಿ.ವಿ.ಲೊಕೇಶ್ಗೌಡ, ನಂದೀಶ್, ಶಿವಕುಮಾರಗೌಡ, ಮಂಜುಳಮ್ಮ, ಸುಜಾತಮ್ಮ, ರತ್ನಮ್ಮ, ಶಿವಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಗಿಡ ನೆಟ್ಟು ಪರಿಸರ ಸಂರಕ್ಷಿಸಿ
ಪರಿಸರ ಸಮತೋಲನವನ್ನು ಕಾಪಾಡಲು ಗಿಡ ನೆಟ್ಟು ಬೆಳೆಸುವುದೊಂದೇ ಮಾರ್ಗ ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ನಗರದ ತಾಲ್ಲೂಕು ಕಚೇರಿಯ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ವತಿಯಿಂದ ಸೋಮವಾರ ಸಾರ್ವಜನಿಕರಿಗೆ ಗಿಡಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬಯಲು ಸೀಮೆಯ ಭಾಗಗಳಲ್ಲಿನ ಜನರು, ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸುವ ಮೂಲಕ ಈ ಭಾಗದಲ್ಲಿ ನೀರಿನ ಅಭಾವವನ್ನು ತಡೆಗಟ್ಟಬಹುದಾಗಿದೆ. ಪರಿಸರ ನಾಶವಾಗಲು ಮಾನವನ ದುರಾಸೆಯೇ ಕಾರಣ. ಕೆರೆಗಳ ಒತ್ತುವರಿ, ಗುಂಡುತೋಪುಗಳ ನಾಶ, ರಾಜಕಾಲುವೆಗಳ ಒತ್ತುವರಿಗಳಿಂದಾಗಿ ಅಂತರ್ಜಲ ಕುಸಿತಗೊಂಡಿದೆ. ಪರಿಸರ ನಾಶದಿಂದಾಗಿ ಮರುಭೂಮಿಯಾಗಲಿದೆ. ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಿ ಮುಂದಿನ ಜನಾಂಗಕ್ಕೆ ಹಸಿರನ್ನು ಉಳಿಸಬೇಕು. ಇದರಿಂದ ಅಂತರ್ಜಲವೂ ವೃದ್ಧಿಸಲಿದೆ ಎಂದು ಹೇಳಿದರು.
ವಲಯ ಅರಣ್ಯಾಧಿಕಾರಿ ಸುಬ್ಬರಾವ್ ಮಾತನಾಡಿ, ರೈತರು ತಮ್ಮ ಜಮೀನುಗಳ ಬದುಗಳಲ್ಲಿ ಮರಗಳನ್ನು ಬೆಳೆಸುವುದರಿಂದ ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ಭೂಮಿಗಳಲ್ಲಿ ಫಲವತ್ತತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ರೈತರಿಗೆ ಇಲಾಖೆಯ ಮುಖಾಂತರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಒಂದು ಹೆಕ್ಟರ್ಪ್ರದೇಶಕ್ಕೆ ೪೦೦ ಸಸಿಗಳನ್ನು ನೀಡಲಾಗುತ್ತದೆ. ತಮ್ಮ ಜಮೀನುಗಳಲ್ಲಿ ರೈತರು ನಾಟಿ ಮಾಡಿ ಪೋಷಣೆ ಮಾಡಿದರೆ, ಸರ್ಕಾರದಿಂದ ಮೊದಲ ವರ್ಷದಲ್ಲಿ ಒಂದು ಗಿಡಕ್ಕೆ ೧೦ ರೂಪಾಯಿಗಳು, ೨ ನೇ ವರ್ಷದಲ್ಲಿ ೧೫ ಮೂರನೇ ವರ್ಷದಲ್ಲಿ ೨೦ ರೂಪಾಯಿಗಳಂತೆ ಪ್ರೋತ್ಸಾಹಧನವನ್ನು ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಶ್ರೀಗಂಧದ ಮರಗಳನ್ನೂ ಬೆಳೆಸಬಹುದಾಗಿದ್ದು, ೨೦ ವರ್ಷಗಳ ನಂತರ ಉತ್ತಮವಾಗಿ ಬೆಳೆದಂತಹ ಮರಗಳನ್ನು ಸರ್ಕಾರಿ ಸಾಬೂನು ಕಾರ್ಖಾನೆ, ಕಲ ಕುಶಲ ವಸ್ತು ಅಭಿವೃದ್ದಿ ಮಂಡಳಿಗೆ ರೈತರೇ ನೇರವಾಗಿ ಮಾರಾಟ ಮಾಡಬಹುದಾಗಿದೆ. ಶ್ರೀಗಂಧದ ಮರಗಳನ್ನು ಯಾರು ಬೆಳೆಸುತ್ತಾರೊ ಅವರೇ ಅದರ ಮಾಲೀಕರಾಗಿರುತ್ತಾರೆ ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ಕಟ್ಟುವಂತಿಲ್ಲ. ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ 1000 ಗಿಡಗಳನ್ನು ಸಾರ್ವಜನಿಕರು ಹಾಗೂ ರೈತರಿಗೆ ವಿತರಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಹಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರಾದಹುಸೇನ್ಸಾಬ್, ಮೇಲೂರು ನಾಗರಾಜ್, ಮುನಿಕೆಂಪಣ್ಣ, ಪ್ರತೀಶ್, ಬಾಲಮುರಳಿಕೃಷ್ಣ, ನಾಗೇಶ್, ರಾಜಪ್ಪ, ಗುಡಿಹಳ್ಳಿ ನಾರಾಯಣಸ್ವಾಮಿ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಶಿಡ್ಲಘಟ್ಟದ ಹಿಂದೂ ರುದ್ರಭೂಮಿ
ರುದ್ರಭೂಮಿ ಎಂದರೆ ಕೆಲವರಿಗೆ ಅಪಶಕುನ. ಹುಟ್ಟಿದ ಪ್ರತಿಯೊಂದು ಜೀವಿಯೂ ಮರಣಿಸಲೇ ಬೇಕು ಎಂದು ಎಲ್ಲರಿಗೂ ತಿಳಿದ ಸತ್ಯವಾದರೂ ರುದ್ರಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು ವಿರಳ. ಎಲ್ಲರಿಗೂ ಅವಶ್ಯವಿರುವ ಆದರೆ ಯಾರಿಗೂ ಬೇಡವಾದ ಸ್ಥಳವಿದು.
ನಗರದ ಕೆಲವು ಸಮಾನ ಮನಸ್ಕ ಜನರಿಂದಾಗಿ ಕಳೆ ಗಿಡಗಳ ಕೊಂಪೆಯಾಗಿದ್ದ ಹಿಂದೂ ರುದ್ರ ಭೂಮಿ ಶುಚಿತ್ವವನ್ನು ಕಂಡಿದೆ. ಒಂದು ಪ್ಲಾಟ್ಫಾರಂ ಮತ್ತು ನೆರಳಿಗಾಗಿ ಮಂಟಪವನ್ನು ನಿರ್ಮಿಸಲಾಗಿದೆ. ಇದರ ಜೊತೆಯಲ್ಲಿ ಸುಮಾರು ಒಂದೂವರೆ ಲಕ್ಷ ರೂ ಬೆಲೆಯ ಪರಿಸರ ಸ್ನೇಹಿ ಸಿಲಿಕಾನ್ ಚೇಂಬರನ್ನೂ ಅಳವಡಿಸಲಾಗಿದೆ.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಪವರ್ ಗ್ರಿಡ್ ಬಳಿ ಸುಮಾರು ೨೩ ಗುಂಟೆ ಹಿಂದೂ ರುದ್ರಭೂಮಿಯ ಸ್ಥಳವಿದೆ. ಸುಮಾರು ೨೫ ವರ್ಷಗಳ ಹಿಂದೆ ಇದಕ್ಕೆ ಕಾಂಪೋಂಡ್ ಮತ್ತು ಅಪರಕರ್ಮಕ್ಕೆ ಅವಶ್ಯವಿರುವ ಕಟ್ಟಡವನ್ನು ವಿವಿಧ ಸಂಘಗಳ ಸಹಕಾರದಿಂದ ಕಟ್ಟಲಾಗಿತ್ತು. ಆದರೆ ಅಲ್ಲಿ ಕಳೆಗಿಡಗಳೆಲ್ಲ ಬೆಳೆದು ಅಂತ್ಯಸಂಸ್ಕಾರಕ್ಕೆ ಹೋದವರು ಸಾಕಷ್ಟು ತೊಂದರೆ ಅನುಭವಿಸುವಂತಾಗಿತ್ತು.
ಈಗ ಕೆಲ ಸಮಾನಮನಸ್ಕರ ಸಾಂಘಿಕ ಪ್ರಯತ್ನದಿಂದಾಗಿ ರುದ್ರಭೂಮಿಯಲ್ಲಿ ನೆರಳಿಗಾಗಿ ಮಂಟಪ ಮತ್ತು ಸಿಲಿಕಾನ್ ಚೇಂಬರನ್ನು ಅಳವಡಿಸಲಾಗಿದೆ. ಹಿಂದೆ ಮೃತದೇಹವನ್ನು ಸುಡಲು ಸುಮಾರು ೭೫೦ ಕೆಜಿಗೂ ಹೆಚ್ಚಿನ ಸೌದೆ ಬೇಕಾಗುತ್ತಿತ್ತು. ಮಳೆಗಾಲದಲ್ಲಂತೂ ೧೦ ರಿಂದ ೨೦ ಲೀಟರ್ ಸೀಮೆಎಣ್ಣೆ ಬೇಕಾಗುತ್ತಿತ್ತು. ಆದರೆ ಈಗ ಕಡಿಮೆ ಸೌದೆಯಲ್ಲಿ ಮತ್ತು ಅಲ್ಪ ಪ್ರಮಾಣದ ಸೀಮೆಎಣ್ಣೆಯಲ್ಲಿ ಅಂತಿಮ ಸಂಸ್ಕಾರವನ್ನು ನಡೆಸಬಹುದಾಗಿದೆ. ಬೂದಿ ತೆಗೆದುಕೊಳ್ಳಲೆಂದೇ ಚೇಂಬರಿನಲ್ಲಿ ಅನುಕೂಲ ಕಲ್ಪಿಸಲಾಗಿದೆ. ಶಾಖ ಹೊರ ಹೋಗದಂತೆ, ಹೊಗೆ ಇರದಿರುವಂತೆ ಇದನ್ನು ರೂಪಿಸಲಾಗಿದೆ.
’ಬೆಂಗಳೂರಿನ ಚಾಮರಾಜಪೇಟೆಯಲ್ಲಿನ ರುದ್ರಭೂಮಿಯಲ್ಲಿನ ಸೌಕರ್ಯಗಳನ್ನು ಕಂಡು ನಮ್ಮಲ್ಲೂ ಈ ರೀತಿ ಅನುಕೂಲಗಳನ್ನು ಕಲ್ಪಿಸಬೇಕೆಂದು ಕೆಲ ಸಮಾನ ಮನಸ್ಕರೊಂದಿಗೆ ಚರ್ಚಿಸಿದೆ. ದೇವನಹಳ್ಳಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ನಾಗರಾಜ್ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಗೆ ಕಳುಹಿಸಿದರು. ಅಲ್ಲಿನ ನಿರ್ದೇಶಕ ಜಯರಾಂ ನೆಲ್ಲಿತ್ತಾಯ ಅವರಿಗೆ ಸಿಲಿಕಾನ್ ಚೇಂಬರಿನ ಅವಶ್ಯಕತೆಯನ್ನು ತಿಳಿಸಿ ಮನವಿ ಸಲ್ಲಿಸಿದೆವು. ಅವರು ಇಲ್ಲಿ ಸ್ಥಳ ಪರಿಶೀಲಿಸಿ ಮಂಜೂರು ಮಾಡಿದರು. ಅಷ್ಟರಲ್ಲಿ ಪುರಸಭೆಯ ಎಸ್ಎಫ್ಸಿ ಅನುದಾನದಲ್ಲಿ ೩ ಲಕ್ಷ ರೂ ವೆಚ್ಚದಲ್ಲಿ ಶೆಲ್ಟರ್ ಮತ್ತು ಪ್ಲಾಟ್ಫಾರಂ ನಿರ್ಮಿಸಲು ನಡೆಸಿದ ಪ್ರಯತ್ನದಲ್ಲಿ ಸಫಲರಾಗಿದ್ದೆವು’ ಎಂದು ತಮ್ಮ ಭಗೀರಥ ಪ್ರಯತ್ನದ ಬಗ್ಗೆ ತಾಲ್ಲೂಕು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
’ರುದ್ರಭೂಮಿಗೆ ಅವಶ್ಯವಿರುವ ರಸ್ತೆ, ನೀರು ಮೊದಲಾದ ಮೂಲಭೂತ ಸೌಕರ್ಯ ಕಲ್ಪಿಸಲು ಪುರಸಭೆಗೆ ಮತ್ತು ಶವಸಾಗಾಣಿಕಾ ವಾಹನಕ್ಕೆ ಆಗ ಶಾಸಕರಾಗಿದ್ದ ವಿ.ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದೆವು. ಶಾಸಕರ ಅನುದಾನದಲ್ಲಿ ೧೦ ಲಕ್ಷ ರೂ ಅನುದಾನದ ಪತ್ರವನ್ನು ಶವಸಾಗಾಣಿಕಾ ವಾಹನಕ್ಕೆ ಪಡೆದೆವು. ಪುರಸಭೆಯವರು ರುದ್ರಭೂಮಿ ಆವರಣಕ್ಕೆ ಕಾಂಕ್ರೀಟ್ ಬೆಡ್ ಹಾಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಧರ್ಮಸ್ಥಳದವರು ಸಿಲಿಕಾನ್ ಚೇಂಬರನ್ನು ಉಚಿತವಾಗಿ ನೀಡಿದರೂ ಅದನ್ನು ಸಾಗಿಸಿ ಜೋಡಣೆ ಮಾಡಿಸುವಷ್ಟರಲ್ಲಿ ೪೦ ಸಾವಿರ ರೂಗಳಷ್ಟು ಖರ್ಚಾಯಿತು. ಹಲವಾರು ಸಮಾನಮನಸ್ಕರು ಕೈಜೋಡಿಸಿದ್ದರಿಂದಾಗಿ, ತಮ್ಮ ಕೆಲಸ ಕಾರ್ಯ ಬದಿಗಿಟ್ಟು ಓಡಾಡಿದ್ದರಿಂದಾಗಿ ರುದ್ರಭೂಮಿಯ ಅಭಿವೃದ್ಧಿ ಕೆಲಸ ನಡೆಯಿತು. ಎನ್.ಶ್ರೀಕಾಂತ್, ಎನ್.ಲಕ್ಷ್ಮೀನಾರಾಯಣ, ಎಸ್.ವಿ.ನಾಗರಾಜರಾವ್ ಅವರೊಂದಿಗೆ ಎಂ.ರಾಜಣ್ಣ, ಮಂಜುಳಾಮಣಿ, ಹನುಮಂತೇಗೌಡ, ಬಿ.ಕೃಷ್ಣಮೂರ್ತಿ, ವಿ.ಕೃಷ್ಣ, ಎ.ಜಿ.ನಾಗೇಂದ್ರ, ಸತ್ಯನಾರಾಯಣಶೆಟ್ಟಿ, ಮಧುಸೂದನ್ ಹಾಗೂ ಕೆಲವು ಸಂಘ ಸಂಸ್ಥೆಗಳ ಸದಸ್ಯರು ಸಹಕರಿಸಿದ್ದಾರೆ’ ಎಂದು ಅವರು ವಿವರಿಸಿದರು.
– ಡಿ.ಜಿ.ಮಲ್ಲಿಕಾರ್ಜುನ.

