Home Blog Page 501

ಕನ್ನಡಿಗರೆಲ್ಲರೂ ಬೇಧಭಾವ ಮರೆತು ಒಂದಾಗಿ

0

ಕನ್ನಡಿಗರೆಲ್ಲರೂ ಜಾತಿ, ಮತ, ರಾಜಕೀಯ, ಮೇಲು ಕೀಳು ಎಂಬ ಭಾವನೆ ತೊರೆದು ಒಂದಾಗಬೇಕು. ಇಂತಹ ಕನ್ನಡ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡರ ಬಣ) ಜಿಲ್ಲಾಧ್ಯಕ್ಷ ಲೋಕೇಶ್ ಹೇಳಿದರು.
ನಗರದ ಪ್ರವಾಸಿಮಂದಿರದ ಆವರಣದಲ್ಲಿನ ಭಾನುವಾರ ನಡೆದ ಕನ್ನಡ ರಕ್ಷಣಾ ವೇದಿಕೆಯ ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಆಡಳಿತ ಭಾಷೆಯಾಗಬೇಕು. ಕನ್ನಡಿಗರು, ಕನ್ನಡ ಭಾಷೆಯಲ್ಲೆ ವ್ಯವಹರಿಸುವ ಮೂಲಕ ನಾಡು, ನುಡಿ, ಭಾಷೆ, ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮದಲ್ಲದ ಭಾಷೆಯ ಮೇಲೆ ಹೆಚ್ಚು ವ್ಯಾಮೋಹಗಳನ್ನು ಬೆಳೆಸಿಕೊಳ್ಳಬಾರದು. ಮನೆಗಳಲ್ಲಿ ತೆಲುಗು, ಹೊರಗೆ ಕನ್ನಡ, ಶಾಲೆಯಲ್ಲಿ ಆಂಗ್ಲಭಾಷೆ ಮತ್ತು ರಾಷ್ಟ್ರದಲ್ಲಿ ವ್ಯವಹಾರಿಕ ಭಾಷೆಯಾಗಿ ಹಿಂದಿ ಭಾಷೆಯನ್ನು ಕಲಿಯುವಂತಹ ಸ್ಥಿತಿ ಮಕ್ಕಳಿಗೆ ಒದಗಿ ಬಂದಿರುವುದರಿಂದ ಮಕ್ಕಳ ಕಲಿಕೆಯ ಮೇಲೆ ಹೆಚ್ಚು ದುಷ್ಪರಿಣಾಮವನ್ನು ಉಂಟು ಮಾಡುತ್ತಿವೆ. ಸಂಪರ್ಕ ಭಾಷೆಯನ್ನಾಗಿ ಆಂಗ್ಲಭಾಷೆಯನ್ನು ಉಳಿಸಿಕೊಂಡರೂ ಕೂಡಾ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಮಾತನಾಡುವ, ವ್ಯವಹರಿಸುವ, ಕಲಿಯುವಂತಹ ಭಾಷೆಯಾಗಿ ಬೆಳೆಸಬೇಕು. ಗ್ರಾಮ ಮಟ್ಟದಲ್ಲಿನ ಶಾಖೆಗಳ ಪದಾಧಿಕಾರಿಗಳು ಕನ್ನಡದ ನೆಲ,ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ, ಹೋರಾಟ ಮಾಡಬೇಕು. ನಾಡಿನ ವಿಚಾರವಾಗಿ ಧ್ವನಿಯೆತ್ತಬೇಕು ಎಂದರು.
ವೀರಾಪುರ ಮತ್ತು ಬೂದಾಳ ಗ್ರಾಮ ಘಟಕದ ಅಧ್ಯಕ್ಷರಾಗಿ ಎ.ಮಣಿಕಂಠ, ಉಪಾಧ್ಯಕ್ಷರಾಗಿ ಎನ್.ಸುನೀಲ್ಕುಮಾರ್, ಕಾರ್ಯದರ್ಶಿ ಕೆ.ಹರೀಶ್, ಖಜಾಂಚಿ ಆರ್.ಮೂರ್ತಿ, ನಿರ್ದೇಶಕರಾಗಿ ನಾಗೇಶ್ (ಪುಟ್ಟು), ಪಿ.ಚಂದ್ರಶೇಖರ್, ಜಿ.ಮಹೇಶ್, ಪಿ.ಎಂ.ವೆಂಕಟೇಶ್, ಆರ್.ಮಂಜುನಾಥ್, ಡಿ.ರಾಮಕೃಷ್ಣ, ರಾಮಾಂಜಿ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು, ತಾಲ್ಲೂಕು ಅಧ್ಯಕ್ಷ ವೆಂಕಟರವಣಪ್ಪ, ಅಂತರಾಷ್ಟ್ರೀಯ ಕ್ರೀಡಾಪಟು ಮಂಚನಬೆಲೆ ಶ್ರೀನಿವಾಸ್, ಕಬ್ಬಡ್ಡಿ ತೀರ್ಪುಗಾರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ದೇವರಾಜ್(ದೇವಿ) ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಲೂಕಿನಾದ್ಯಂತ ಯಶಸ್ವಿ ಬಂದ್

0

ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಸ್ನಿಲ್ದಾಣದ ಸಮೀಪದಲ್ಲಿ ಶನಿವಾರ ಮಾನವ ಸರಪಳಿಯನ್ನು ನಿರ್ಮಾಣ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸೇನೆ ಕಾರ್ಯಕರ್ತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಗಳ ಜನತೆಯ ಕೂಗು ನೀರಿನ ವಿಚಾರದ್ದಾಗಿರುವುದರಿಂದ ಮಹದಾಯಿ- ಕಳಸಾಬಂಡೂರಿ ವಿಚಾರಕ್ಕೆ ಬೆಂಬಲ ನೀಡುತ್ತಿದ್ದೇವೆ. ಬಯಲು ಸೀಮೆ ಭಾಗಗಳಲ್ಲಿನ ಜನರು ಕಳೆದ ೪ ದಶಕಗಳಿಂದ ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯಂತೆ ನಮ್ಮ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿರುವ ಹೋರಾಟಗಳಿಗೆ ಇದುವರೆಗೂ ಪ್ರತಿಫಲ ದೊರೆತಿಲ್ಲ. ಆದ್ದರಿಂದ ಮುಂದಿನ ಶಾಶ್ವತ ನೀರಾವರಿ ಹೋರಾಟಕ್ಕೂ ಕೂಡಾ ಉತ್ತರ ಕರ್ನಾಟಕದ ಜನತೆ ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಂಗಳೂರು ಭಾಗದಲ್ಲಿನ ಜನತೆಗೆ ತೊಂದರೆಯಾಗುತ್ತದೆ ಎನ್ನುವ ಮೂಲಕ ಬಯಲುಸೀಮೆಯ ಜನರನ್ನು ಕಡೆಗಣಿಸುತ್ತಿರುವ ಮಾಜಿ ಕೆ.ಪಿ.ಸಿ.ಸಿ.ಅಧ್ಯಕ್ಷ ಜನಾರ್ಧನ ಪೂಜಾರಿ ಅವರು ಈ ಭಾಗದ ರೈತರ ಕ್ಷಮೆ ಕೇಳಬೇಕು. ಎತ್ತಿನಹೊಳೆ ಯೋಜನೆಯನ್ನು ತೋರಿಸಿ ಈ ಭಾಗದ ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ಸರ್ಕಾರ, ನೆರೆಯ ಆಂದ್ರಪ್ರದೇಶದ ಮಾದರಿಯಲ್ಲಿ ಶಾಶ್ವತವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕು. ಉತ್ತರ ಕರ್ನಾಟಕದ ಜನತೆ ಬಂದ್ನ ಅಂಗವಾಗಿ ಸರ್ಕಾರಕ್ಕೆ ಸಲ್ಲಿಸುವಂತಹ ಮನವಿಯ ಜೊತೆಯಲ್ಲಿ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದರು. ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು, ಬಸ್ ಸಂಚಾರವಿಲ್ಲದೆ ಪರದಾಡಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಹೋಟೆಲುಗಳು, ಚಲನಚಿತ್ರಮಂದಿರಗಳು ಬಂದ್ ಆಗಿದ್ದವು, ಸಾರಿಗೆ ಇಲಾಖೆಯ ಬಸ್ಸುಗಳು ಸೇರಿದಂತೆ ಖಾಸಗಿ ಬಸ್ಸುಗಳೂ ರಸ್ತೆಗೆ ಇಳಿಯಲಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಗೈರು ಹಾಜರಿ ಎದ್ದುಕಾಣುತ್ತಿತ್ತು. ವಿವಿಧ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು, ಆಸ್ಪತ್ರೆಗೆ ಸೇರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬೇರೆ ಬೇರೆ ಕಡೆಗಳಿಂದ ಸುಮಾರು ೯೦೦ ಲಾಟುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಬಂದಿದ್ದರಿಂದ ಗೂಡಿನ ಬೆಲೆಗಳು ೧೫೦ ರೂಪಾಯಿಗಳಿಂದ ಹರಾಜು ಪ್ರಾರಂಭವಾಗಿ, ೨೫೭ ರವರೆಗೆ ಹರಾಜಾಯಿತು.
ಬೆಳಗಿನಿಂದಲೇ ಜಿನುಗುತ್ತಿದ್ದ ಮಳೆಯ ಹನಿಗಳ ನಡುವೆಯೆ ರಸ್ತೆ ತಡೆಯನ್ನು ನಡೆಸಿ, ಮಹಾರಾಷ್ಟ್ರ, ಗೋವಾ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಭಕ್ತರಹಳ್ಳಿಪ್ರತೀಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಉಲ್ಲೂರುಪೇಟೆ ನಾರಾಯಣಸ್ವಾಮಿ, ಲಕ್ಕಹಳ್ಳಿ ದೇವರಾಜ್, ಆನೂರು ದೇವರಾಜ್, ಸಮಾನ ಮನಸ್ಕರ ಸಮಿತಿಯ ಅಧ್ಯಕ್ಷ ಜೆ.ವೆಂಕಟಸ್ವಾಮಿ, ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀಧರ, ರಮೇಶ್, ಪ್ರತಾಪ್, ಮಂಜುನಾಥ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾ ಸಂಚಾಲಕ ಶಿವಪ್ರಕಾಶ್, ನಟರಾಜ್, ಮಧುಕುಮಾರ್, ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷ ಸುರೇಶ್, ಚಂದ್ರು ಮುಂತಾದವರು ಹಾಜರಿದ್ದರು.
ವಕೀಲರ ಸಂಘದ ಬೆಂಬಲ

ಶಿಡ್ಲಘಟ್ಟದ ತಾಲ್ಲೂಕು ವಕೀಲರ ಸಂಘ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟದ ತಾಲ್ಲೂಕು ವಕೀಲರ ಸಂಘ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ಕರ್ನಾಟಕದಾದ್ಯಂತ ನಡೆಯುತ್ತಿರುವ ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕುರಿತ ಹೋರಾಟಕ್ಕೆ ತಾಲ್ಲೂಕು ವಕೀಲರ ಸಂಘ ಬೆಂಬಲ ಸೂಚಿಸಿ ಶನಿವಾರ ನ್ಯಾಯಾಲಯದ ಕಲಾಪಗಳಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಹೋರಾಟಗಳು ತುಂಬಾ ಹಳೇಯ ಹೋರಾಟಗಳಾಗಿವೆ. ಉತ್ತರ ಕರ್ನಾಟಕದ ಎರಡು ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಶಾಶ್ವತ ನೀರಾವರಿ ಯೋಜನೆ ೬ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಈ ಭಾಗದಲ್ಲಿನ ರೈತರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಕೇಳುವುದು ನಮ್ಮ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಸರ್ಕಾರಗಳು ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕಾಗಿದೆ. ಆದ್ದರಿಂದ ಬಂದ್ಗೆ ನಮ್ಮ ಬೆಂಬಲ ಸೂಚಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸದೆ ನೀರಾವರಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ಎಂ.ಬಿ.ಲೊಕೇಶ್, ಯಣ್ಣಂಗೂರು ಮಂಜುನಾಥ್, ಮುನೇಗೌಡ, ಕೆಂಪೇಗೌಡ, ನೌಷದ್ಆಲಿ, ಬಾಸ್ಕರ್, ವೇಣುಗೋಪಾಲ್, ರಘು, ಮುಂತಾದವರು ಹಾಜರಿದ್ದರು.
ಜಂಗಮಕೋಟೆ ಕ್ರಾಸ್ನಲ್ಲಿ ಪ್ರತಿಭಟನೆ
ಶಿಡ್ಲಘಟ್ಟದ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ಶಿಡ್ಲಘಟ್ಟದ ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ಶನಿವಾರ ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ನಲ್ಲಿ ವಿವಿಧ ಸಂಘಟನೆಗಳು ಶನಿವಾರ ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನ ಕುರಿತ ಹೋರಾಟಕ್ಕೆ ಬೆಂಬಲಿಸಿ ಬಂದ್ ಆಚರಿಸಿದರು.
ಜಂಗಮಕೋಟೆ ಕ್ರಾಸ್ನ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘ, ಆಟೋ ಚಾಲಕರ ಸಂಘ, ವ್ಯಾಪಾರಿಗಳ ಸಂಘ, ಟೆಂಪೋ ಮಾಲಿಕರ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿರು.
ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು, ಹೋಟೆಲ್ ಸ್ವಯಂಪ್ರೇರಿತರಾಗಿ ಮುಚ್ಚಿದ್ದು, ಬಂದ್ ಯಶಸ್ವಿಗೆ ಕಾರಣರಾದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುನಿರಾಜ್(ಕುಟ್ಟಿ), ಕನ್ನಡ ಸೇನೆಯ ಮುರಳಿ, ರೈತ ಸಂಘದ ಮೂರ್ತಿ, ಸುಗಟೂರು ರಾಜು, ಕೆಂಪೇಗೌಡ, ಮಧು, ಸೂರಿ, ನಾಗೇಶ್, ರಮೇಶ್, ಡಿ.ಸಿ.ಮುನಿರಾಜು, ಸುರೇಶ್, ನರಸಿಂಹ, ಶಿವು, ನಾರಾಯಣ್, ದಿನಕರ, ಪ್ರಕಾಶ್, ಮಂಜುನಾಥ, ನಾರಾಯಣಸ್ವಾಮಿ, ಹರೀಶ್, ಅರುಣ್, ಮಣಿ ಮತ್ತಿತರರು ಹಾಜರಿದ್ದರು.

ಪ್ರೊಜೆಕ್ಟ್ ರಿಪೋರ್ಟ್‍ಗಳೆಂಬ ಹಳವಂಡಗಳು

0

ನಾವು ಚಿಕ್ಕವರಿದ್ದಾಗ ಹೋಗಲಿ, ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದ ಕಾಲದಲ್ಲಿ ಅಂದರೆ ಸುಮಾರು ಇಪ್ಪತೈದು, ಮೂವತ್ತು ವರ್ಷಗಳ ಹಿಂದೆ ನಾವು ‘ಪ್ರೊಜೆಕ್ಟ್ ರಿಪೋರ್ಟ್’ (ಯೋಜನಾ ವರದಿ) ಎಂಬ ಶಬ್ದವನ್ನು ಕೇಳಿದ್ದೇ ಇಲ್ಲ. ಆದರೆ ಇತ್ತೀಚಿಗೆ ಪ್ರಾಥಮಿಕ ಶಾಲಾ ಮಕ್ಕಳಿಂದ ಹಿಡಿದು ಸ್ನಾತಕೊತ್ತರ ಶಿಕ್ಷಣ ಪಡೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳ ಬಾಯಲ್ಲೂ ಈ ‘ಪ್ರೊಜೆಕ್ಟ್ ರಿಪೋರ್ಟ್’ ಗಳ ಮಾತುಗಳೇ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಬಗೆ ಬಗೆಯ ಹೂವುಗಳು, ಹಣ್ಣುಗಳು, ತರಕಾರಿ, ಹಸುಗಳು ಇನ್ನಿತರೆ ಪ್ರಾಣಿಗಳ ಕುರಿತು ‘ಪ್ರೊಜೆಕ್ಟ್ ರಿಪೋರ್ಟ್’ ತಯಾರಿಸಿಕೊಂಡು ಬರಲು ಕೇಳಿದಾಗ ಅವು ಪಾಲಕರಿಗೆ ಸಾಕಷ್ಟು ಕಷ್ಟಕೊಟ್ಟು, ಕಂಪ್ಯೂಟರ್ ಎದುರು ಕುಳಿತು ಬೇಕಾದ ಚಿತ್ರಗಳನ್ನು ಮಾಹಿತಿಗಳನ್ನು ಅಂತರ್ಜಾಲದಿಂದ ಪಡೆದು ಅವನ್ನು ಮತ್ತೆ ನೀಟಾಗಿ ಜೋಡಿಸಿ, ಪ್ಲಾಸ್ಟಿಕ್ ಹೊದಿಗೆ ಹಾಕಿ ಬದಿಗೊಂದು ಪಟ್ಟಿ ಸಿಕ್ಕಿಸಿ, ಶಿಕ್ಷಕರ ಎದುರು ಇಡುತ್ತವೆ. ಹೀಗೆ ಇಟ್ಟವುಗಳಲ್ಲಿ ಬಹಳಷ್ಟು ಪ್ರಾಜೆಕ್ಟ್ ರಿಪೋರ್ಟ್‍ಗಳ ಮೇಲೆ ಅವು ಬಣ್ಣ, ಬಣ್ಣ ಅಕ್ಷರಗಳಲ್ಲಿ, ಅಷ್ಟಿಷ್ಟು ಅಲಂಕಾರ ಮಾಡಿ, ತಮ್ಮ ಹೆಸರು, ತರಗತಿ, ಪ್ರಾಜೆಕ್ಟಿನ ಶೀರ್ಷಿಕೆ, ಯಾವ ಶೀಕ್ಷಕರಿಗೆ ಒಪ್ಪಿಸುವುದು ಮತ್ತು ತಮ್ಮ ಶಾಲೆಯ ಹೆಸರನ್ನು ಬರೆದದ್ದನ್ನು ಕಾಣಬಹುದೇ ವಿನಃ ಒಳಗಡೆ ಹೂರಣಗಳೇನೂ ಇರುವುದಿಲ್ಲ. ಎಲ್ಲಾ ಒಂದು ರೀತಿಯ ಕತ್ತರಿಸು, ಅಂಟಿಸು ((Cut and Paste) ಸ್ವಂತ ತಲೆ ಖರ್ಚು ಮಾಡುವುದಕ್ಕಲ್ಲ ಆಸ್ಪದವೂ ಇಲ್ಲ, ಅವಕಾಶವು ಇಲ್ಲ ಕಾರಣ ಪ್ರಾಜೆಕ್ಟ್ ಗಳು ಒಂದೆರೆಡೇ ಅಲ್ಲ. ಹಾಗಾಗಿ ಸೃಜನಶೀಲತೆಯ ಲವವೇಶವೂ ಇರದ ಒಣ ಯಾಂತ್ರಿಕ ಬರವಣಿಗೆಗಳು, ಅವುಗಳಿಂದ ಯಾವ ಪ್ರಯೋಜನ ಯಾರಿಗೆ ಸಿಗುತ್ತದೋ ಗೊತ್ತಿಲ್ಲ. ಬಹುಶಃ ಪ್ಲಾಸ್ಟಿಕ್ ಹೊದಿಕೆಯ ಮಾರಾಟಗಾರರಿಗೆ ಒಂದಿಷ್ಟು ಲಾಭವಾಗಬಹುದು! ಅದಕ್ಕಿಂತ ಹೆಚ್ಚಾಗಿ ಅವು ಶಾಲೆಯ ತುಂಬೆಲ್ಲ ಹರಡಿಕೊಂಡು ಬಿದ್ದಂತೆ ಪರಿಸರ ಪ್ಲಾಸ್ಟಿಕ್ ಮಾಯಾವಾಗಬಹುದು! ಯಾಕೆಂದರೆ ಯಾವುದೇ ಶಾಲೆಯಲ್ಲಿ ಅವನ್ನೆಲ್ಲ ಒಂದು ಶಿಸ್ತಿನಲ್ಲಿ ಇಡುವ ವ್ಯವಸ್ಥೆ ಇದೆ ಎಂಬ ಭರವಸೆಯಿಲ್ಲ. ಅದನ್ನಷ್ಟು ನೋಡಿ, ಆ ಪ್ಲಾಸ್ಟಿಕ್ ಹೊದಿಕೆ ಮತ್ತು ಪಟ್ಟಿಯನ್ನು ಪುನರ್ ಬಳಕೆಗೆ ನೀಡಿದರೆ ಪಾಲಕರ ಜೇಬಿಗೆ ಬೀಳಬಹುದಾದ ಕತ್ತರಿ ಕಡಿಮೆಯಾಗಬಹುದು! ಈ ಪ್ರಾಜೆಕ್ಟ್ ರಿಪೋರ್ಟ್ ಎಂಬುದು ಒಂದು ಫ್ಯಾಶನ್ನಾಗಿ ಬೆಳೆಯುತ್ತಿರಬೇಕೆಂಬುದೇ ನಮ್ಮ ಸದ್ಯದ ಗುಮಾನಿ.
ಈ ಪ್ರಾಜೆಕ್ಟ್ ರಿಪೋರ್ಟ್ ಎನ್ನುವುದು, ಮಾಹಿತಿಗಳನ್ನು ಒಂದು ವ್ಯವಸ್ಥಿತ ಕ್ರಮದಲ್ಲಿಡುವುದನ್ನು ಕಲಿಸಬಹುದೆನ್ನುವುದನ್ನು ಒಪ್ಪಬಹುದಾದರೂ, ಅದೇ ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸುತ್ತದೆ ಎಂದಾಗಲೀ, ಚಿಂತನಾಶಕ್ತಿಯನ್ನು ಬೆಳೆಸುತ್ತದೆ ಎಂದಾಗಲೀ ಸೃಜನಶೀಲತೆಯನ್ನು ಉತ್ತೇಜಿಸುತ್ತದೆ ಎಂದಾಗಲಿ ಭ್ರಮಿಸುವಂತಿಲ್ಲ. ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಬಳಕೆಯಿಂದ ಪಡೆದು ಭಟ್ಟಿ ಇಳಿಸಲು ತಿಳಿದವರಿಗೆ ಹೆಚ್ಚು ಅಂಕಗಳೂ ಹಾಗೆ ತಿಳಿಯದೆ ಸ್ವಂತ ಪ್ರತಿಭೆಯಿಂದ ಸೃಷ್ಟಿಸಿದವರಿಗೆ ಕಡಿಮೆ ಅಂಕಗಳೂ ಬರುವ ಸಾಧ್ಯತೆ ಕೂಡ ಇದೆ. ಇದು ಹೇಗೆಂದರೆ ಹಿಂದೆ ಛದ್ಮವೇಷ ಸ್ಫರ್ಧೆಗೆ, ಮಕ್ಕಳೇ ಅಥವಾ ಅವರ ಪಾಲಕರೇ ಅಷ್ಟಿಷ್ಟು ಶ್ರಮವಹಿಸಿ ರಾಮನನ್ನೂ, ಕೃಷ್ಣನನ್ನೂ ರಾಧೆಯನ್ನು, ವಿದೂಷಕರನ್ನು ಮಾಡಿ ತರುತ್ತಿದ್ದರೆ ಇಂದು ಅವುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಅದನ್ನೆ ಒಂದು ದಂಧೆಯನ್ನಾಗಿಸಿಕೊಂಡವರು ಬಂದು ಅಚ್ಚುಕಟ್ಟಾಗಿ ಬೇಕಿದ್ದರೆ ಯಕ್ಷಗಾನದ ವೇಷವನ್ನೇ ಮಾಡಿಕೊಡುತ್ತಾರೆ. ಆಗ ಬಹುಮಾನ ದಕ್ಕುವುದು ಧನವುಳ್ಳವರ ಮಕ್ಕಳಿಗೇ ವಿನಃ ಉಳಿದವರಿಗೆ ಅಲ್ಲ. ಈ ಪ್ರಾಜೆಕ್ಟ್ ರಿಪೋರ್ಟ್‍ಗಳೂ ಹಾಗೇ ಅಂದುಕೊಂಡರೆ ಬಹುಶಃ ತಪ್ಪೇನೂ ಇಲ್ಲ. ಇದೇ ಮಾದರಿಯಲ್ಲಿ ವಿಜ್ಞಾನದ ವಿವಿಧ ಮಾದರಿಗಳ ತಯಾರಿಕೆ ಮತ್ತು ಪ್ರದರ್ಶನ ಕೂಡ ನಡೆಯುತ್ತಿದೆ.
ಹೈಸ್ಕೂಲು ಮತ್ತು ಕಾಲೇಜುಗಳಲ್ಲಿ ಕೂಡ ಇಂದು ಇಂಥ ಪ್ರಾಜೆಕ್ಟ್ ರಿಪೋರ್ಟ್‍ಗಳು ಕಡ್ಡಾಯವಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಬಹುತೇಕ ಸಮಯ ಇವುಗಳ ತಯಾರಿಕೆಗೇ ಸಂದುಹೋಗುತ್ತಿದೆ. ಇವುಗಳ ತಯಾರಿಕೆಗೆ ನಮೂದಿಸುವುದೂ ಸಾಮಾನ್ಯ ಸಂಗತಿ ಪದವಿ ತರಗತಿಗಳಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಆತಂರಿಕ ಅಂಕ ನೀಡುವಿಕೆಗೂ ಇಂಥದೆ ಸ್ವಲ್ಪ ವಿಸ್ತøತ ಮಾದರಿಯ ಪ್ರಾಜೆಕ್ಟ್ ರಿಪೋರ್ಟ್‍ಗಳನ್ನು ಒಪ್ಪಿಸುವುದು ಕಡ್ಡಾಯವಾಗಿದೆ ಒಂದು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ಕಡೆಗೆ ಹೋಗಿ, ಅಲ್ಲಿನ ಕಾರ್ಖಾನೆಯನ್ನೋ, ವ್ಯಾಪಾರ ವಹಿವಾಟಿನ ಸಂಸ್ಥೆಯನ್ನೂ ಆಮೂಲಾಗ್ರವಾಗಿ ಅಭ್ಯಸಿಸಿ ಆ ಕುರಿತು ಪ್ರಾಜೆಕ್ಟ್ ರಿಪೋರ್ಟ್ ನೀಡುವುದು ಸರಿಯಾದ ಕ್ರಮವೇ ಹೌದಾದರೂ ಅದಕ್ಕೆ ಅಗತ್ಯವಾದ ಸಿದ್ಧತೆಗಳಾಗಲಿ, ಸೌಲಭ್ಯಗಳಾಗಲಿ ಎಲ್ಲರಿಗೂ ಸಿಗುವುದು ಅಸಾಧ್ಯ. ಹಾಗಾಗಿ ಮತ್ತೆ ಈ ವಿದ್ಯಾರ್ಥಿಗಳೆಲ್ಲ ಮೊರೆಹೋಗುವುದು ಸೈಬರ್ ಕೆಫೆಗಳಿಗೆ ಅಲ್ಲಿನವರಿಗೆ ಈ ರೀತಿ ಪ್ರಾಜೆಕ್ಟ್‍ಗಳನ್ನು ರೂಪಿಸಿ ಕೊಡುವುದೇ ಹಣಗಳಿಸುವ ದಂಧೆಯಾಗಿರುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಕೂಲತೆಗೆ ತಕ್ಕಂತೆ ಅವರ ಕೋರಿಕೆಯಷ್ಟು ಪುಟಗಳಲ್ಲಿ ರಿಪೋರ್ಟ್‍ಗಳನ್ನು ಅಂದವಾಗಿ ಡಿ.ಟಿ.ಪಿ ಮಾಡಿ ಅದನ್ನೊಂದು ಮಿನಿ ಪಿ.ಹೆಚ್.ಡಿ. ಪ್ರಬಂಧದಂತೆ ಅಚ್ಚುಕಟ್ಟಾಗಿ ನೀಡುತ್ತಾರೆ. ಅದಕ್ಕೊಂದು ವ್ಯವಸ್ಥಿತ ಜಾಲವೇ ಇರುತ್ತದೆ. ನಾಲ್ಕಾರು ಕಾಲೇಜುಗಳ ವಿದ್ಯಾರ್ಥಿಗಳು ಸಿಕ್ಕರೆ ಇವರ ಪ್ರಾಜೆಕ್ಟ್ ರಿಪೋರ್ಟ್‍ಗಳೆಂದರೆ ಅತ್ತ, ಇತ್ತ ಮಾಡುವುದು ಒಂದು ಕಾಲೇಜಿನ ಕಳೆದ ವರ್ಷದ ಅದರ ಹಿಂದಿನ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳು, ಮತ್ತೊಂದು ಕಾಲೇಜಿನ ಈ ವರ್ಷದ ಪ್ರಾಜೆಕ್ಟ್ ರಿಪೋರ್ಟ್‍ಗಳಾಗಿ ಮಾರ್ಪಟ್ಟರೆ ಅದರಲ್ಲಿ ಆಶ್ವರ್ಯ ಪಡುವಂಥದ್ದೆನಿಲ್ಲ, ಇವೆಲ್ಲ ವ್ಯವಸ್ಥಿತವಾಗಿ ಕತ್ತರಿಸು ಮತ್ತು ತೇಪೆ ಹಚ್ಚು ಎಂಬಂತಾದಾಗ, ಅವು ತಮ್ಮಿಂದ ತಾವೇ ಕೃತಿಚೌರ್ಯಗಳಾಗಲು ಪ್ರಾರಂಭವಾಗುತ್ತದೆ.
ಹೀಗೆ ಪ್ರಾಥಮಿಕ, ಮಾಧ್ಯಮಿಕ ಮತ್ತು ಕಾಲೇಜು ಹಂತಗಳಲ್ಲದೆ, ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳವರೆಗೆ ವ್ಯವಸ್ಥಿತವಾಗಿ ಕಲಿತ ಪ್ರಾಜೆಕ್ಟ್ ರಿಪೋರ್ಟಿನ ಕೈಚಳಕ ಅಥವಾ ವೈಖರಿಯ ಮುಂದುವರಿದ ಭಾಗವಾಗಿ ಪಿ.ಹೆಚ್.ಡಿ ಗ್ರಂಥಗಳು ಬರಲು ಪ್ರಾರಂಭಿಸಿದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇರುವುದಿಲ್ಲ. ಇಂದು ನಾವು ಮಾಧ್ಯಮದ ಮೂಲಕ ಪಿ.ಹೆಚ್.ಡಿಯಲ್ಲೂ ಕೃತಿಚೌರ್ಯ ಎಷ್ಟು ವ್ಯವಸ್ಥಿತವಾಗಿ ಜರುಗಿದೆ ಮತ್ತು ಜರುಗುತ್ತಿದೆ ಎಂದು ನೋಡುತ್ತಿದ್ದೇವೆ, ಓದುತ್ತಿದ್ದೇವೆ. ಆದರೆ ಅದರ ಪರಿಹಾರದ ಕುರಿತಾಗಲಿ, ಅದರ ಮೂಲ ಬೇರಿನ ಕುರಿತಾಗಲಿ ಚಿಂತಿಸುತ್ತಿಲ್ಲ. ಯಾವಾಗ ಕಾಲೇಜು ಪ್ರಾಧ್ಯಾಪಕ ಹುದ್ದೆಗೆ ಮತ್ತು ಪದೋನ್ನತಿಗೆ ಪಿ.ಹೆಚ್.ಡಿ ಪಡೆಯುವುದು ಒಂದು ಮಾನದಂಡವಾಗಿ ಪರಿವರ್ತಿತವಾಯಿತೋ ಆವಾಗಿನಿಂದ ಇವುಗಳು ಸಂಖ್ಯೆ ವಿಪರೀತವಾಗುತ್ತ ಹೋದದ್ದು ಎಂಥವರಿಗೂ ಗೋಚರಿಸುವಂಥದ್ದು, ಯಾರು ಯಾರೋ ಯಾವು ಯಾವೂದೋ ವಿಷಯದ ಮೇಲೆ ಪಿ.ಹೆಚ್.ಡಿ.ಗಾಗಿ ಪಿ.ಹೆಚ್.ಡಿ. ಮಾಡಲು ತೊಡಗಿದಂತೆ ಅವುಗಳ ಗುಣಮಟ್ಟ ತನ್ನಿಂದತಾನೆ ಕುಸಿಯುತ್ತ ಸಾಗಿದರೆ ಅದು ಸ್ವಾಭಾವಿಕ ಸಂಗತಿಯೇ ಆಗುತ್ತದೆ. ಅಂಥವುಗಳಿಂದ ಯಾವುದೇ ಸಂಸ್ಥೆಗಳಿಗಾಗಲಿ, ಸಮಾಜಕ್ಕಾಗಲಿ ಪ್ರಯೋಜನವಾಗುವುದು ಅಷ್ಟರಲ್ಲೇ ಇದೆ.
ಹೀಗೆ ಪ್ರಾಜೆಕ್ಟ್ ರಿಪೋರ್ಟ್‍ಗಳೆಂಬ ರಾಶ್ಯುತ್ಪನ್ನಗಳು ಮಾರುಕಟ್ಟೆಯ ಸರಕುಗಳಾಗದಂತೆ ಅಗ್ಗವಾಗದಂತೆ ಎಚ್ಚರವಹಿಸುದಕ್ಕೆ ಬಹುಶಃ ಇದು ಸಕಾಲ. ಈ ಕುರಿತು ಇನ್ನಷ್ಟು ಚಿಂತನ, ಮಂಥನಗಳು ವಿಷಯದ ಮೇಲೆ ಜರುಗಿದರೆ ಜೋಳ್ಳು ಗಟ್ಟಿಗಳ ಆಯ್ಕೆಯು ಕ್ರಿಯೆಗೊಂದು ಅರ್ಥಪೂರ್ಣವಾದ ವೇದಿಕೆ ನಿರ್ಮಾಣವಾಗಲು ಸಾಧ್ಯ ಎನ್ನುವುದು ಸದ್ಯದ ಅನ್ನಿಸಿಕೆ.
ರವೀಂದ್ರ ಭಟ್ ಕುಳಿಬೀಡು.

ರೈತರಿಗೆ ನೀಡುವ ಹಾಲಿನ ದರ ಇಳಿಕೆ ಅನಿವಾರ್ಯ

0

ಅಕ್ಟೋಬರ್ ಒಂದರಿಂದ ರೈತರಿಗೆ ನೀಡುವ ಹಾಲಿನ ದರದಲ್ಲಿ 1 ರೂಪಾಯಿ 30 ಪೈಸೆಯಷ್ಟು ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಶುಕ್ರವಾರ ಹಾಲು ಉತ್ಪಾದಕರ ಸಹಕಾರ ಸಂಘದಿಂದ 11 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟವು ಈಗ 33 ಕೋಟಿ ನಷ್ಟದಲ್ಲಿರುವ ಕಾರಣ ಹಾಲಿನ ದರ ಕಡಿತಗೊಳಿಸಬೇಕಾಗಿದೆ. ಒಕ್ಕೂಟ ಉಳಿದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಉತ್ಪಾದಕರು ಉಳಿಯುತ್ತಾರೆ. ಬರುವ ಮಾರ್ಚ್ ತಿಂಗಳ ನಂತರ ಒಕ್ಕೂಟದ ಆರ್ಥಿಕ ಪರಿಸ್ಥಿತಿಯನ್ನು ಅವಲೋಕಿಸಿ ನಂತರ ಬೆಲೆ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ತಾಲ್ಲೂಕಿನ 196 ಸಹಕಾರ ಸಂಘಗಳಿಂದ ಹಾಲು ಉತ್ಪಾದನೆ ಒಂದು ಲಕ್ಷ 16 ಸಾವಿರ ಲೀಟರಷ್ಟಿದ್ದು, ಗುಣಮಟ್ಟವನ್ನು ಶೇಕಡಾ 98 ರಷ್ಟು ಹೊಂದಿದ್ದು ಎರಡನೇ ಸ್ಥಾನದಲ್ಲಿದೆ. ಗುಣಮಟ್ಟವನ್ನು ಕಾಯ್ದುಕೊಂಡಲ್ಲಿ ಮಾತ್ರ ಹಾಲನ್ನು ರಫ್ತು ಮಾಡಲು ಸಾಧ್ಯ. ತಾಲ್ಲೂಕಿನ ಸಾದಲಿ ಹಾಗೂ ಗಂಭೀರನಹಳ್ಳಿಯಲ್ಲಿ ರೈತರೇ 20 ಎಕರೆ ನೀಡಲು ಮುಂದಾಗಿದ್ದಾರೆ. ಕೆ.ಎಂ.ಎಫ್ ನಿರ್ಧಾರದ ಮೇರೆಗೆ ಒಂದೆಡೆ 110 ಕೋಟಿ ರೂಗಳ ವೆಚ್ಚದಲ್ಲಿ ಹಸುಗಳ ಮೇವಿನ ಘಟಕವನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.
ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ ಮಾತನಾಡಿ, ಸುಮಾರು 24 ವರ್ಷಗಳ ಹಿಂದೆ 6 ಮಂದಿ ಹಾಲು ಉತ್ಪಾದಕರಿಂದ ದಿನ ಒಂದಕ್ಕೆ 60 ಲೀಟರ್ ಹಾಲು ಶೇಖರಣೆಯೊಂದಿಗೆ ಹನುಮಂತಪುರ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾಯಿತು. ಈಗ ಸರಾಸರಿ ದಿನಕ್ಕೆ 580 ಲೀಟರ್ ಉತ್ಪಾದನೆಯಾಗುತ್ತಿದೆ. ಗುಣಮಟ್ಟವನ್ನೂ ಕಾಯ್ದುಕೊಳ್ಳಲಾಗಿದೆ. ಎನ್.ಸಿ.ಡಿ.ಸಿ ಸಾಲ 5 ಲಕ್ಷ ರೂ, ಕೆ.ಎಂ.ಎಫ್ ನಿಂದ 2 ಲಕ್ಷ ರೂಗಳ ಸಹಾಯಧನ ಪಡೆದು ಸಂಘವು ಸ್ವಂತ ಕಟ್ಟಡವನ್ನು ನಿರ್ಮಿಸಿಕೊಂಡಿದೆ. ಸದೃಢವಾದ ಸಂಘದಿಂದ ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳೂ ನಡೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಚ್.ವಿ.ಮಾರಪ್ಪ, ಟಿ.ಡಿ.ನಾರಾಯಣರಾವ್, ಲಕ್ಷ್ಮೀನಾರಾಯಣಪ್ಪ ಅವರನ್ನು ಸನ್ಮಾನಿಸಲಾಯಿತು.
ಹನುಮಂತಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಆರ್.ಮಹದೇವಯ್ಯ, ಕೋಚಿಮುಲ್ ವ್ಯವಸ್ಥಾಪಕ ಎ.ಬಿ.ಲೋಕೇಶ್, ಉಪವ್ಯವಸ್ಥಾಪಕ ಬಿ.ಎಸ್.ಹನುಮಂತರಾವ್, ವಿಸ್ತರಣಾಧಿಕಾರಿ ಎಚ್.ಎಸ್.ಉಮೇಶ್ರೆಡ್ಡಿ, ಕಾರ್ಯನಿರ್ವಾಹಕ ಎಚ್.ಎನ್.ನಾಗೇಶ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ಡಿ.ಆರ್.ಯೋಗೇಶ್ ಕನ್ಯಾಡಿ, ಮಂಜುನಾಥ, ದೇವರಾಜ, ಸಹಕಾರ ಸಂಘದ ಶಾಮಣ್ಣ, ಮುನಿಕೃಷ್ಣಪ್ಪ, ಚಿಕ್ಕಬಚ್ಚಪ್ಪ, ಎಚ್.ಕೆ.ವೆಂಕಟೇಶಪ್ಪ, ಎಲ್.ಸೋಮಣ್ಣ, ಹನುಮಂತರೆಡ್ಡಿ, ಮುನಿನರಸಿಂಹಪ್ಪ, ಬಚ್ಚಮ್ಮ, ಸಾವಿತ್ರಮ್ಮ, ಗಂಗಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬಕ್ರೀದ್ ಹಬ್ಬದ ಆಚರಣೆ

0

ತ್ಯಾಗ, ಬಲಿದಾನದ ಹಾಗೂ ಸೋದರತ್ವದ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬ ನಗರದಲ್ಲಿ ಶುಕ್ರವಾರ ಸಂಭ್ರಮ- ಸಡಗರದಿಂದ ಆಚರಿಸಲಾಯಿತು.
ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ನಗರದ ವಿವಿಧ ಬಡಾವಣೆಗಳಿಂದ ಮೆರವಣಿಗೆಯ ಮೂಲಕ ಈದ್ಗಾ ಮೈದಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಅನೇಕರು ತಮ್ಮ ಮನೆಗಳ ಬಳಿ ಬಡವರಿಗೆ ದಾನ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ರೇಷ್ಮೆ ವ್ಯಾಪಾರವನ್ನೆ ಮುಖ್ಯ ಕಸುಬನ್ನಾಗಿಸಿಕೊಂಡಿರುವ ಮುಸ್ಲಿಂ ಬಾಂಧವರು ರೈತರನ್ನು ಬಕ್ರೀದ್ ಹಬ್ಬದ ಅಂಗವಾಗಿ ತಮ್ಮ ಮನೆಗಳಿಗೆ ಆಹ್ವಾನಿಸಿ ಸಿಹಿಯನ್ನು ನೀಡಿ, ಶುಭವನ್ನು ಕೋರಿದರು. ಈದ್ಗಾ ಮೈದಾನದಲ್ಲಿ ನಡೆದ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಂ.ರಾಜಣ್ಣ ಅವರು ಬಕ್ರೀದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು

0

ತಾಲ್ಲೂಕಿನಲ್ಲಿ ಸಂತೆ ಅಥವಾ ಜಾತ್ರೆ ನಡೆಯುವ, ಜನ ಸಂದಣಿ ಸೇರುವ ಸ್ಥಳಗಳಲ್ಲಿ ನೈರ್ಮಲ್ಯೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಂಗಮಕೋಟೆ ಕ್ರಾಸ್ನಲ್ಲಿ 30 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯ ಸಂಕೀರ್ಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಘಟಮಾರನಹಳ್ಳಿ ಕ್ರಾಸ್ ಎಂದು ಕರೆಯುವ ಜಂಗಮಕೋಟೆ ಕ್ರಾಸ್ನಲ್ಲಿ ಪ್ರತಿ ಮಂಗಳವಾರ ಜಾತ್ರೆ ನಡೆಯುವುದರಿಂದ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಈ ಭಾಗದಲ್ಲಿ ಇದು ಕೇಂದ್ರ ಸ್ಥಾನವಾಗಿದ್ದು, ಇಲ್ಲಿಂದ ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ, ಬೆಂಗಳೂರು, ವಿಜಯಪುರಕ್ಕೆ ಜನರು ಪ್ರಯಾಣಿಸುತ್ತಾರೆ. ಮಹಿಳೆಯರು ಮತ್ತು ಮಕ್ಕಳಿಗೆ ಶೌಚಾಲಯ ವ್ಯವಸ್ಥೆಯಿಲ್ಲದೇ ಸಾಕಷ್ಟು ತೊಂದರೆಯಾಗಿತ್ತು. ಈಗ ಬೆಂಗಳೂರು ಮಾದರಿಯ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ಗ್ರಾಮ ಪಂಚಾಯತಿ ವತಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಶೌಚಾಲಯವನ್ನು ಸ್ವಚ್ಛವಾಗಿರಿಸಲು ಸಹಕರಿಸಬೇಕು ಎಂದು ಹೇಳಿದರು.
ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ದಿಬ್ಬೂರಹಳ್ಳಿ, ವೈ.ಹುಣಸೇನಹಳ್ಳಿ, ಮೇಲೂರು, ಎಚ್.ಕ್ರಾಸ್ ಮುಂತಾದೆಡೆ ಶೌಚಾಲಯಗಳ ಅಗತ್ಯವಿದೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅತಿ ಶೀಘ್ರದಲ್ಲಿ ಎಲ್ಲೆಡೆ ಸುಸಜ್ಜಿತ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು ಎಂದರು.
ತಾದೂರು ರಮೇಶ್, ಶ್ರೀನಿವಾಸಗೌಡ, ರಘು, ಮುನೇಗೌಡ, ಜಗದೀಶ್, ನಂಜೇಗೌಡ, ರಮೇಶ್, ನಾಗಭೂಷಣ್, ಕೆಂಪರೆಡ್ಡಿ, ಲಕ್ಷ್ಮಣಮೂರ್ತಿ, ರಾಜಶೇಖರ್, ನಾರಾಯಣಸ್ವಾಮಿ, ಮಂಜುನಾಥ್, ಲಕ್ಷ್ಮೀನಾರಾಯಣ್, ವೀರಪ್ಪ, ಮಾರೇಗೌಡ, ಶ್ರೀನಿವಾಸ, ಮುನಿಕೃಷ್ಣ, ಬಾಬು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಹೈಜಂಪ್ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಿಡ್ಲಘಟ್ಟ ತಾಲ್ಲೂಕಿನ ದ್ಯಾವಪ್ಪನಗುಡಿ ಸರ್ಕಾರಿ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಸ್ನೇಹಲತಾ ಹೈಜಂಪ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಪೈಕಾ ಕ್ರೀಡಾಕೂಟದಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಕಾರಣ ಅವರನ್ನು ಶಿಕ್ಷಕರು ಪುರಸ್ಕರಿಸಿದರು. ಕನ್ನಡ ಶಿಕ್ಷಕ ಮಾಲತೇಶ ಹಳ್ಳೀರ, ದೈಹಿಕ ಶಿಕ್ಷಕಿ ಸಿ.ಕೆ.ಮಂಜುಳಾ, ಸಹ ಶಿಕ್ಷಕರಾದ ಶಿವಕುಮಾರಸ್ವಾಮಿ, ಬಿ.ಎಂ.ಸುಮಲತಾ ಹಾಜರಿದ್ದರು.

ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು

0

ಗ್ರಾಮೀಣ ಪ್ರದೇಶಗಳು ಸರ್ವಾಂಗೀಣ ಅಭಿವೃದ್ಧಿ ಕಾಣಬೇಕಾದರೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಜೆ.ವೆಂಕಟಾಪುರ ಗ್ರಾಮ ಪಂಚಾಯತಿಯ ಜೆ.ವೆಂಕಟಾಪುರದಲ್ಲಿ ಗುರುವಾರ ೧೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಂಬೇಡ್ಕರ್ಭವನ, ಬಳುವನಹಳ್ಳಿ ಗ್ರಾಮದಲ್ಲಿ ೪.೯೦ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ನರೇಗಾ ಯೋಜನೆಯಲ್ಲಿ ನರೇಗಾ ಭವನಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಪ್ರತಿಯೊಂದು ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ, ರಸ್ತೆ, ಬೀದಿದೀಪಗಳನ್ನು ಒದಗಿಸುವಂತಹ ಕಾರ್ಯವನ್ನು ಮಾಡಲು ಸರ್ಕಾರ ಕೋಟ್ಯಾಂತರ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡುತ್ತಿದ್ದು, ಈ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡಬಾರದು, ಗ್ರಾಮ ಪಂಚಾಯತಿಗಳ ಮುಖಾಂತರ ಶೌಚಾಲಯಗಳ ನಿರ್ಮಾಣಕ್ಕೆ ಪರಿಶಿಷ್ಠಜಾತಿ, ಪರಿಶಿಷ್ಠ್ಟವರ್ಗದ ಜನರಿಗೆ ೧೫ ಸಾವಿರ, ಇತರೆ ಜನಾಂಗದವರಿಗೆ ೧೨ ಸಾವಿರ ರೂಪಾಯಿಗಳ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ. ಬಳುವನಹಳ್ಳಿ ಗ್ರಾಮದಲ್ಲಿ ಇದುವರೆಗೂ ಸರ್ಕಾರಿ ಶಾಲೆಯಿಲ್ಲದೆ ದಾನಿಗಳು ನೀಡಿರುವ ಕಟ್ಟಡದಲ್ಲೆ ಮಕ್ಕಳ ಶಿಕ್ಷಣ ಮುಂದುವರೆಯುತ್ತಿದ್ದು, ಶೀಘ್ರವಾಗಿ ಭೂ ಮಾಪನ ಇಲಾಖೆಯ ಅಧಿಕಾರಿಗಳ ತಂಡವನ್ನು ಕಳುಹಿಸಿ, ಸರ್ವೆ ಮಾಡಿ ಪರಿಶಿಷ್ಠ ಜನಾಂಗದ ನಿವೇಶನ ರಹಿತರಿಗೆ ೫ ನಿವೇಶನಗಳನ್ನು ಮಂಜೂರು ಮಾಡಿ, ಸರ್ಕಾರಿ ಶಾಲೆಗೆ ಅಗತ್ಯವಾಗಿರುವ ಭೂಮಿಯನ್ನು ಮೀಸಲಿಟ್ಟು, ಶಾಸಕರ ಅನುದಾನದಲ್ಲಿ ಶಾಲೆಯ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಪಿ.ಎಂ.ಜಿ.ಎಸ್.ವೈ.ಯೋಜನೆಯಲ್ಲಿ ವೆಂಕಟಾಪುರದಿಂದ ಬಳುವನಹಳ್ಳಿಯವರೆಗೆ ರಸ್ತೆಯ ಡಾಂಬರೀಕರಣ ಮಾಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ರಘುನಾಥ್, ಉಪಾಧ್ಯಕ್ಷ ಚಂದ್ರೇಗೌಡ, ಪಿ.ಡಿ.ಓ ಎಂ.ಕೆ.ಕಾತ್ಯಾಯಿನಿ, ಸದಸ್ಯರಾದ ಮೂರ್ತಿ, ವಿಜಯಕುಮಾರ್, ಶ್ರೀನಿವಾಸ್, ತಾದೂರು ರಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬಸ್ಸಿನ ಸ್ಟೇರಿಂಗ್ ಮುರಿದು ರಸ್ತೆಯಿಂದ ಪಕ್ಕಕ್ಕೆ ಚಲಿಸಿದ ಬಸ್

0

ತಾಲ್ಲೂಕಿನ ಕುಂದಲಗುರ್ಕಿಗೆ ಚಿಂತಾಮಣಿ ಕಡೆಯಿಂದ ಬರುತ್ತಿದ್ದ ರೂಟ್ ನಂಬರ್ 57 ರ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಸ್ಟೇರಿಂಗ್ ಮುರಿದು ರಸ್ತೆಯ ಪಕ್ಕದ ಹಳ್ಳಕ್ಕೆ ಇಳಿದ ಘಟನೆ ಗುರುವಾರ ನಡೆದಿದೆ.
ಬಸ್ಸಿನಲ್ಲಿ ಎಂಟು ಮಂದಿ ಪ್ರಯಾಣಿಕರಿದ್ದು, ನಿರ್ವಾಹಕ ಕನಕಪ್ಪ ನೆಲವಾಸಿ ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಗಾಯಗೊಂಡವರು ಚಿಂತಾಮಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ಪ್ರತಿನಿತ್ಯ ಸಂಚರಿಸುವ ಈ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ನೂರಾರು ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಪ್ರಯಾಣಿಸುತ್ತಾರೆ. ಒಂದು ವೇಳೆ ಶಾಲಾ ಕಾಲೇಜುಗಳ ಮಕ್ಕಳು ಪ್ರಯಾಣಿಸುವಾಗ ಈ ಅನಾಹುತ ಸಂಭವಿಸಿದ್ದಿದ್ದರೆ ಯಾರು ಹೊಣೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಸಮರ್ಪಕವಾದ ಸುಸ್ಥಿತಿಯಲ್ಲಿರುವ ಬಸ್ಸನ್ನು ನೀಡದೆ ಗ್ರಾಮಾಂತರ ಪ್ರದೇಶಗಳಲ್ಲಿ ಅನಾಹುತಕ್ಕೆ ಕಾರಣರಾಗುತ್ತಿದ್ದಾರೆ ಎಂದು ನಾಗರಿಕರು ಆಕ್ರೋಷ ವ್ಯಕ್ತಪಡಿಸಿದರು.

ವಿದ್ಯುತ್ ವಿತರಣೆಯ ಸಮಯ ತಿಳಿಸಿ

0

ತಾಲ್ಲೂಕಿನಾದ್ಯಂತ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು, ಬೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣೆಯ ಸಮಯವನ್ನು ಪತ್ರಿಕಾ ಮಾದ್ಯಮದ ಮೂಲಕ ಜನರಿಗೆ ತಿಳಿಸಬೇಕು ಎಂದು ಸಂಸದ ಕೆ.ಎಚ್.ಮುನಿಯಪ್ಪ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲ್ಲೂಕಿನಾದ್ಯಂತ ನೀರು ಹಾಗೂ ವಿದ್ಯುತ್ ಸಮಸ್ಯೆಯ ಕುರಿತು ಏರ್ಪಡಿಸಿದ್ದ ಅಧಿಕಾರಿಗಳ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.
ಹಗಲು ಎರಡು ತಾಸು ಮತ್ತು ರಾತ್ರಿ ಎರಡು ತಾಸು ವಿದ್ಯುತ್ ನೀಡಿದರೂ ಪರವಾಗಿಲ್ಲ, ಆದರೆ ಅನಿರ್ಬಂಧಿತವಾಗಿ ನೀಡಿ ಹಾಗೂ ಸಮಯವನ್ನು ಜನರಿಗೆ ತಿಳಿಸಿ. ಸರ್ಕಾರದ ಮಟ್ಟದಲ್ಲಿ ವಿದ್ಯುತ್ ಖರೀದಿಯ ಪ್ರಕ್ರಿಯೆ ನಡೆದಿದೆ. ನಮ್ಮ ಭಾಗದ ಸಮಸ್ಯೆಯನ್ನು ಈಗಾಗಲೇ ಸಚಿವರೊಂದಿಗೆ ಚರ್ಚಿಸಿದ್ದೇನೆ. ತಾಲ್ಲೂಕಿಗೆ 480 ಮೆ.ವ್ಯಾ ವಿದ್ಯುತ್ ಅವಶ್ಯವಿದ್ದು, ಈಗ 140 ಮೆ.ವ್ಯಾ ವಿದ್ಯುತ್ ಮಾತ್ರ ಸರಬರಾಜಾಗುತ್ತಿದೆ. ಇನ್ನು ಕನಿಷ್ಠ 60 ರಿಂದ 80 ಮೆ.ವ್ಯಾ ವಿದ್ಯುತ್ ನೀಡಿದಲ್ಲಿ ತಾತ್ಕಾಲಿಕವಾಗಿ ತೊಂದರೆಗಳು ತಪ್ಪುತ್ತವೆ. ಅದರ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಚಿವರಲ್ಲಿ ತಿಳಿಸಿ ವ್ಯವಸ್ಥೆ ಮಾಡುವುದಾಗಿ ಹೇಳಿದರು.
ನೀರಿನ ಸಮಸ್ಯೆ: ಜಿಲ್ಲಾಧಿಕಾರಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಂಸದ ಕೆ.ಎಚ್.ಮುನಿಯಪ್ಪ, ತಾಲ್ಲೂಕಿನಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ತಕ್ಷಣ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಆದೇಶ ನೀಡಬೇಕು. ಅದರಂತೆ ತಹಶೀಲ್ದಾರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ಬೆಸ್ಕಾಂ ಅಧಿಕಾರಿ ಮತ್ತು ಜಿಲ್ಲಾ ಪಂಚಾಯತಿ ಸಹಾಯಕ ಎಂಜಿನಿಯರ್ ಸೋಮವಾರ ಹೊರತು ಪಡಿಸಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತಿಗಳಿಗೆ ದಿನಕ್ಕೆರಡು ತಾಸು ಭೇಟಿ ನೀಡಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ರೈತರಿಗೆ ಮನವೊಲಿಸಿ ಅವರ ಬೆಳೆಗಳಿಗೆ ಬೆಲೆ ನಿಗದಿಪಡಿಸಿ ಅವರ ಕೊಳವೆ ಬಾವಿಗಳಿಂದ ನೀರನ್ನು ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಒದಗಿಸಿ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನಂದಾ ಮುನಿಕೃಷ್ಣಪ್ಪ, ಜಿಲ್ಲಾ ಪಂಚಾಯತಿ ಸದಸ್ಯ ಸತೀಶ್, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಾಂಜಿನಪ್ಪ, ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಗಣಪತಿ ಸಾಕರೆ, ಜಿಲ್ಲಾ ಪಂಚಾಯತಿ ಎಇಇ ಶಿವಾನಂದ್, ಬೆಸ್ಕಾಂ ಅಧಿಕಾರಿ ಅನ್ಸರ್ ಪಾಷ, ನಗರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸರ್ಕಾರಿ ಆಸ್ಪತ್ರೆಗೆ ನೀರಿನ ವ್ಯವಸ್ಥೆ: ‘ತಾಲ್ಲೂಕಿನಲ್ಲಿ ಅಂತರ್ಜಲ ಕುಸಿತದಿಂದ 100 ಕೊಳವೆ ಬಾವಿ ಕೊರೆಸಿದರೆ, 60 ರಲ್ಲಿ ನೀರು ಸಿಗುತ್ತಿಲ್ಲ. ಹಾಗಾಗಿ ನೀರು ಸಿಗುವುದನ್ನು ಇತರರಿಗೂ ಹಂಚಿಕೆ ಮಾಡಿ. ಸಾರ್ವಜನಿಕ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಕೊಳವೆ ಬಾವಿ ಕೊರೆಸಿರುವುದಕ್ಕೆ ತಕ್ಷಣ ಪಂಪು ಮತ್ತು ಮೋಟರ್ ಅಳವಡಿಸಿ, ಸಾರ್ವಜನಿಕ ಆಸ್ಪತ್ರೆಗೂ ಪೈಪ್ಲೈನ್ ಅಳವಡಿಸಿ ಹಂಚಿಕೆ ಮಾಡಿ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ನಗರಸಭೆ ಮುಖ್ಯಾಧಿಕಾರಿ ರಾಂಪ್ರಕಾಶ್ ಅವರಿಗೆ ತಿಳಿಸಿದರು.

ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ

0

ಗ್ರಾಮದ ಪ್ರತಿಯೊಂದು ಕುಟುಂಬವೂ ಶೌಚಾಲಯವನ್ನು ನಿರ್ಮಿಸಿಕೊಳ್ಳುವುದರೊಂದಿಗೆ ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬೋದಗೂರು ಗ್ರಾಮದಲ್ಲಿ ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಪೋಡಿ ಮುಕ್ತ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಶುಲ್ಕವಿಲ್ಲದೇ, ಪೋಡಿ ಅಳತೆ ಮಾಡುವುದು, ಆರ್.ಟಿ.ಸಿ ಮತ್ತು ಭೂದಾಖಲೆಗಳಲ್ಲಿ ಇರುವ ಕ್ಷೇತ್ರದ ವ್ಯತ್ಯಾಸ ಸರಿಪಡಿಸುವುದು, ಗ್ರಾಮವಾರು ಬಾಕಿ ಇರುವ ಪೋಡಿ ಪ್ರಕರಣಗಳನ್ನು ಅಳತೆ ಮಾಡುವುದು ಈ ಅಭಿಯಾನದಲ್ಲಿ ಕೈಗೊಳ್ಳಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಜಿಲ್ಲಾ ಭೂದಾಖಲೆ ನಿರ್ದೇಶಕ (ಡಿಡಿಎಲ್ಆರ್) ಅಜ್ಜಪ್ಪ ಮಾತನಾಡಿ ಗ್ರಾಮಸ್ಥರು ವರ್ಷದುದ್ದಕ್ಕೂ ತಾಲ್ಲೂಕು ಕಚೇರಿಗೆ ಸುತ್ತುವ ಬದಲಿಗೆ ಅಭಿಯಾನದ ಮೂಲಕ ತಮ್ಮ ಗ್ರಾಮಕ್ಕೆ ಭೂಮಾಪನ ತಂಡ ಭೇಟಿ ನೀಡಿದಾಗ ಅಗತ್ಯ ದಾಖಲೆಗಳೊಂದಿಗೆ ತಪ್ಪದೇ ಜಮೀನಿನಲ್ಲಿ ಹಾಜರಿದ್ದು, ಅಗತ್ಯ ಮಾಹಿತಿ ನೀಡಿ ಅಳತೆಗೆ ಸಹಕರಿಸಬೇಕು. ಈ ಮೂಲಕ ಭೂ ದಾಖಲೆ ನವೀಕರಿಸಿಕೊಂಡು ಜಮೀನುಗಳ ಹಕ್ಕು ಮತ್ತು ಗಡಿ ರಕ್ಷಿಸಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಆನೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ವೆಂಕಟೇಶ್, ರಜಸ್ವ ನಿರೀಕ್ಷಕ ಸುಬ್ರಮಣಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ

0

ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಿದರು.
ನಗರದ ಬೆಸ್ಕಾಂ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿದ್ದ ರೈತರು ಸರ್ಕಾರದ ವಿರುಧ್ದ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ರೈತರು ಲಕ್ಷಾಂತರ ರೂಪಾಯಿಗಳನ್ನು ಸಾಲಮಾಡಿಕೊಂಡು ಕೊಳವೆಬಾವಿಗಳನ್ನು ಕೊರೆಯಿಸಿದ್ದಾರೆ, ಲಕ್ಷಾಂತರ ರೂಪಾಯಿಗಳ ಹಣವನ್ನು ಬೆಳೆಗಳನ್ನು ನಾಟಿ ಮಾಡಲು ಖರ್ಚು ಮಾಡಿದ್ದಾರೆ, ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಹಲವೆಡೆ ಸಾಲಗಳನ್ನು ಮಾಡಿಕೊಂಡಿದ್ದಾರೆ. ಸುಮಾರು ೧೫೦೦ ಅಡಿಗಳಿಂದ ನೀರು ತೆಗೆಯುತ್ತಿದ್ದಾರೆ. ಆದರೆ ಇಂತಹ ವಿಷಮ ಪರಿಸ್ಥಿತಿಯಲ್ಲಿ ರೈತರ ನೆರವಿಗೆ ಬರಬೇಕಾಗಿರುವ ಸರ್ಕಾರ ಕಣ್ಣು ಮುಚ್ಚಿಕುಳಿತಿದ್ದು, ಕೈಗಾರಿಕೋದ್ಯಮಿಗಳಿಗೆ ವಿದ್ಯುತ್ ಪೂರೈಕೆ ಮಾಡುವ ಸಲುವಾಗಿ ರೈತರನ್ನು ಕತ್ತಲೆಗೆ ದೂಡಿದೆ. ಮನೆಗಳಿಂದ ತೋಟಗಳಿಗೆ ಹೋಗಿ ಮೋಟಾರುಗಳನ್ನು ಚಾಲನೆ ಮಾಡುವಷ್ಟರಲ್ಲಿ ಕರೆಂಟು ಹೋಗುತ್ತದೆ, ರಾತ್ರಿಯಿಡಿ ನಿದ್ದೆಯಿಲ್ಲದೆ ಕಾಯಬೇಕಾಗಿದೆ. ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸುತ್ತಿದ್ದು, ನಮಗೆ ಕನಿಷ್ಟ ೮ ಗಂಟೆಗಳ ಕಾಲ ಮೂರು ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಒಂದು ವೇಳೆ ಸರ್ಕಾರ ನಮಗೆ ಕುಡಿಯಲು ನೀರೂ ಕೊಡದೆ, ವಿದ್ಯುತ್ ಪೂರೈಕೆಯನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದರೆ ಬೆಸ್ಕಾಂ ಕಚೇರಿಗೆ ಬೀಗಜಡಿದು ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಬೆಸ್ಕಾಂ ಇಲಾಖೆಯ ಎಇಇ ಪರಮೇಶ್ವರಪ್ಪ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ರೈತರಾದ ವೇಣುಗೋಪಾಲ್, ರಾಮಚಂದ್ರಪ್ಪ, ಆಂಜನೇಯರೆಡ್ಡಿ, ಮುನಿನಂಜಪ್ಪ, ತಾದೂರು ಮಂಜುನಾಥ್, ದೇವರಾಜು, ನರಸಿಂಹರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು ಬ್ಲೂ ದ್ರಾಕ್ಷಿಗೆ ಮಾರುಕಟ್ಟೆ ಸಮಸ್ಯೆ

0

ಬೆಂಗಳೂರು ಬ್ಲೂ ದ್ರಾಕ್ಷಿಗೆ ಮದ್ಯ ತಯಾರಿಕಾ ಘಟಕಗಳಲ್ಲಿ ಹೆಚ್ಚು ಬೇಡಿಕೆ ಇದ್ದರೂ, ಮಾರುಕಟ್ಟೆ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ವೈನ್ ಬೋರ್ಡ್ನ ಅಧ್ಯಕ್ಷ ಬಕ್ಕಪ್ಪಕೋಟೆ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಗಂಗಾದೇವಿ ಸಮುದಾಯಭವನದಲ್ಲಿ ಮಂಗಳವಾರ ಜಿಲ್ಲಾ ತೋಟಗಾರಿಕಾ ಇಲಾಖೆ, ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್, ಭಾರತೀಯ ತೋಟಗಾರಿಕಾ ಸಂಸ್ಥೆ, ಅಪೆಡಾ, ದ್ರಾಕ್ಷಾರಸ ಮಂಡಳಿ, ಹಾಗೂ ದ್ರಾಕ್ಷಿ ಬೆಳೆಗಾರರ ಸಂಘಗಳ ಸಹಯೋಗದಲ್ಲಿ ನಡೆದ ಬೆಂಗಳೂರು ಬ್ಲೂ ದ್ರಾಕ್ಷಿ ಅಭಿವೃದ್ಧಿ ಮತ್ತು ಅದರ ಉತ್ಪನ್ನಗಳ ಅಭಿವೃದ್ಧಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬೆಂಗಳೂರು ಬ್ಲೂ ದ್ರಾಕ್ಷಿ ಬೆಳೆಯುವಂತಹ ಬೆಳೆಗಾರರು ಹೊಸ ಹೊಸ ತಂತ್ರಜ್ಞಾನವನ್ನು ಉಪಯೋಗ ಮಾಡಿಕೊಳ್ಳಬೇಕು. ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವಂತಹ ಬೆಂಗಳೂರು ಬ್ಲೂ ದ್ರಾಕ್ಷಿಯಲ್ಲಿ ಹೆಚ್ಚು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಈ ದ್ರಾಕ್ಷಿಯಲ್ಲಿ ಹಲವು ಔಷಧಿಯ ಗುಣಗಳೂ ಕೂಡಾ ಅಡಗಿದೆ. ದ್ರಾಕ್ಷಿಯನ್ನು ಬೆಳೆಯುವಂತಹ ರೈತರುಗಳಿಗೆ ಸೂಕ್ತವಾದ ಬೆಲೆಗಳನ್ನು ನೀಡುವ ಸಲುವಾಗಿ ಮದ್ಯ ತಯಾರಿಕಾ ಘಟಕಗಳೊಂದಿಗೆ ಚರ್ಚೆ ನಡೆಸಿದ್ದು, ಉತ್ತಮವಾದ ಮಾರುಕಟ್ಟೆಯ ಸೌಲಭ್ಯವನ್ನು ಕಲ್ಪಿಸಿಕೊಡುವ ಚಿಂತನೆ ನಡೆಸಲಾಗಿದೆ ಎಂದರು.
ತೋಟಗಾರಿಕಾ ಸಲಹಾ ಕೇಂದ್ರದ ಮಾಜಿ ನಿರ್ದೇಶಕ ಡಾ.ವಸಂತ್ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಹಾಲಿನ ಜೊತೆಯಲ್ಲಿ ಪೌಷ್ಠಿಕಾಂಶಗಳುಳ್ಳ ಸಂಸ್ಕರಿಸಿದ ದ್ರಾಕ್ಷಿಯ ರಸವನ್ನು ನೀಡಲು ಪ್ರಾರಂಭಿಸಿದಲ್ಲಿ ದ್ರಾಕ್ಷಿ ಬೆಳೆಗಾರರನ್ನು ಉತ್ತೇಜಿಸಿದಂತಾಗುತ್ತದೆ. ದ್ರಾಕ್ಷಿ ಬೆಲೆ ಕುಸಿತಗೊಂಡಾಗ ಕಾಪಿಡಲು ಶಿಥಲೀಕರಣ ಘಟಕವನ್ನು ಸ್ಥಾಪಿಸಬೇಕು. ನೀರಿನಲ್ಲಿ ಕರಗುವ ಹ್ಯೂಮ್ಯಾಕ್ ಆಸಿಡ್ ಎಂಬ ಕೊಟ್ಟಿಗೆ ಗೊಬ್ಬರವನ್ನು ಬಳಸಿ ರಾಸಾಯನಿಕ ಗೊಬ್ಬರದಿಂದ ದೂರವಿರಿ ಎಂದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಜಮುನಾಧರ್ಮೇಂದ್ರ, ನೀಲಿ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಉಪಾಧ್ಯಕ್ಷ ರಾಮಣ್ಣ, ವಿ.ಟಿ.ಪಿ.ಸಿ. ಮುಖ್ಯಸ್ಥ ವಿ.ಎಸ್.ಹೆಗ್ಡೆ, ಜಂಟಿ ನಿರ್ದೇಶಕ ಕೃಷ್ಣಮೂರ್ತಿ, ಪ್ರಗತಿಪರ ರೈತರಾದ ವೇಣುಗೋಪಾಲ, ಮುತ್ತೂರು ಕೆಂಪೇಗೌಡ, ವೈನ್ಬೋರ್ಡ್ನ ಉಪನಿರ್ದೇಶಕ ಬಿ.ಕೃಷ್ಣಪ್ಪ, ತೋಟಗಾರಿಕೆ ಇಲಾಖೆಯ ಗಾಯಿತ್ರಿ, ಸಹಾಯಕ ನಿರ್ದೇಶಕ ಆನಂದ್, ಐ.ಹೆಚ್.ಆರ್.ವಿಜ್ಞಾನಿ ಡಾ.ಸಂಪತ್ಕುಮಾರ್, ದೊರೆಯಪ್ಪಗೌಡ, ಡಾ.ಹೊನ್ನಬೈರಯ್ಯ, ಡಾ.ಶ್ರೀನಿವಾಸ್, ಡಾ.ಪ್ರಶಾಂತ್, ನ್ಯಾಷನಲ್ ಲಾ ಸ್ಕೂಲ್ನ ಸಾದ್ವಿ, ತಂಗಮ್ ರಾಮಚಂದ್ರ, ನಾಗರಾಜು ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ನಡೆಸಲಾಗುವುದು

0

ನಗರದ ಆಸುಪಾಸಿನಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಆದ್ಯತೆಯ ಮೇರೆಗೆ ನಡೆಸಲಾಗುವುದು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಈದ್ಗಾ ಮೈದಾನದಲ್ಲಿ ಮಂಗಳವಾರ ಶಾಸಕರ ಅನುದಾನದಲ್ಲಿ ಕೊಳವೆ ಬಾವಿಯನ್ನು ಕೊರೆಸಲು ಹಾಗೂ ವಿವಿಧ ಕಾಮಗಾರಿಗಳ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಲ ಕಾಮಗಾರಿಗಳನ್ನು ಈಗ ಶಾಸಕರ ಸ್ಥಳೀಯ ಅಭಿವೃದ್ಧಿ ಕೈಗೆತ್ತುಕೊಂಡಿದ್ದು, ಸುಮಾರು 12 ಲಕ್ಷ ರೂಗಳ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ನಗರದ ಆಸುಪಾಸಿನಲ್ಲಿ ಅಗತ್ಯವಿರುವ ಎಲ್ಲಾ ಕೆಲಸಗಳನ್ನೂ ಮಾಡಿಸುವುದಾಗಿ ಹೇಳಿದರು. ಕೊಳವೆ ಬಾವಿಯಲ್ಲಿ ಸಿಗುವ ನೀರು ಸಮುದಾಯಕ್ಕೆ ಸದ್ಭಳಕೆ ಮಾಡಿಕೊಳ್ಳಬೇಕು. ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ನಗರದ ಬೈಪಾಸ್ ರಸ್ತೆಯಲ್ಲಿರುವ ಖಬರ್ಸ್ತಾನ್ಗೆ ಮೂರು ಹಂತದಲ್ಲಿ ಕಾಂಪೋಂಡ್ ನಿರ್ಮಾಣ, ತಾಲ್ಲೂಕಿನ ಬೆಳ್ಳೂಟಿ ಗೇಟ್ ಹತ್ತಿರ ಹಜರತ್ ಗೌಶಾವಲಿ ದರ್ಗಾದ ಮುಂಭಾಗದಲ್ಲಿ ಕಾಂಪೋಂಡ್, ಗೇಟ್, ಆರ್ಚ್ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಪೂಜೆಯನ್ನು ನೆರವೇರಿಸಲಾಯಿತು.
ನಗರಸಭಾ ಸದಸ್ಯ ಅಫ್ಸರ್ ಪಾಷ, ಆದಿಲ್ ಪಾಷ, ಮುಷ್ಟಾಕ್ ಅಹ್ಮದ್, ರಹಮತ್ತುಲ್ಲ, ಮಹಮ್ಮದ್ ಅಲಿ, ದೊಣ್ಣಹಳ್ಳಿ ರಾಮಣ್ಣ, ಸಲಾಂ, ಸೊಣ್ಣೇಗೌಡ, ಚಾಂದ್ಪಾಷ, ಷಫಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಜನಜಾತ್ರೆಯಲ್ಲಿ ಕಳೆದುಹೋಗುವ ಕಷ್ಟ

0

ಮೈಸೂರು ದಸರಾ ವಸ್ತುಪ್ರದರ್ಶನಕ್ಕೆ ಹೋದರೆ, ಚಿಕ್ಕ ವಯಸ್ಸಿನಲ್ಲಿ ಅಂಗಡಿಗಳೆದುರು ನಿಂತು ಅದು ಬೇಕು, ಇದು ಬೇಕು ಎಂದು ಧರಣಿ ಮಾಡಿ ಬೇಕಾಗಿದ್ದುದನ್ನು ಪಡೆದುಕೊಳ್ಳುತ್ತಿದ್ದುದು ಈಗ ನೆನಪಾಗುತ್ತದೆ. ಆಗ ಅಪ್ಪ ಅಮ್ಮನ ಕೈಗಳಿಗೆ ಜೋತು ನಡೆದು ಹೋಗಿದ್ದು ಇನ್ನೂ ಮನಸ್ಸಿನ ಚಿತ್ರ ಪುಟದಲ್ಲಿ ಹಾಗೇ ಇದೆ. ಇದರ ಜೊತೆಗೆ ಇನ್ನೊಂದು ನೆನಪಾಗುವುದೆಂದರೆ, ಹೀಗೆ ಜನಜಂಗುಳಿಯ ಮಧ್ಯೆ ನಡೆದು ಹೋಗಬೇಕಾದರೆ, ಬೇಡ ಎಂದರೂ ಕಿವಿಗಳಿಗೆ ಬಂದು ಅಪ್ಪಳಿಸುತ್ತಿದ್ದುದು ನಮ್ಮವರ ಮಧ್ಯೆಯೇ “ಕಳೆದು ಹೋದವರ ಸುದ್ದಿ”.
ವಸ್ತುಪ್ರದರ್ಶನದ ಹೊರಾಂಗಣದಲ್ಲಿ ಪೊಲೀಸರು ಕೆಲವು ಮಕ್ಕಳನ್ನು, ನಿಲ್ಲಿಸಿಕೊಂಡು,” ಈ ಹೆಸರಿನ ಮಗು ತಪ್ಪಿಸಿಕೊಂಡಿದೆ, ಪೋಷಕರು ತಕ್ಷಣ ಈ ಜಾಗಕ್ಕೆ ಬಂದು ನಿಮ್ಮ ಮಗುವನ್ನು ಕರೆದುಕೊಂಡು ಹೋಗಿ” ಎಂದು ಪ್ರತಿ ಬಾರಿಯೂ ಹೇಳುತ್ತಿದ್ದರು. ಇದನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ಆ ಮಕ್ಕಳನ್ನು ಊಹಿಸಿಕೊಳ್ಳುವುದೇ ಕೆಲಸವಾಗಿರುತಿತ್ತು. ಆ ಮಕ್ಕಳ ಮುಖ, ಅವರ ಅಳು, ಮನಸ್ಸಿನಲ್ಲಿ ಅನುಭವಿಸುತ್ತಿರಬಹುದಾದ ದುಗುಡ, ಎಲ್ಲವು ಒಮ್ಮೆ ನನ್ನಲ್ಲೂ ಮೂಡಿರುತ್ತಿತ್ತು. ಅವರು ತಮ್ಮ ಪಾಲಕರ ಕೈಗೆ ತಲುಪಿದರೋ ಇಲ್ಲವೋ ಎಂಬ ಕುತೂಹಲ ಕೊನೆಯವರೆಗೂ ಇದ್ದೇ ಇರುತಿತ್ತು. ಹಾಗಾಗಿ ಹೊರ ಹೋಗುವಾಗ ಒಮ್ಮೆಯಾದರೂ ಪೊಲೀಸರು ಕೂಗಿಕೊಳ್ಳುತ್ತಿದ್ದ ಜಾಗದತ್ತ ನೋಡಿ ಬರುತ್ತಿದ್ದೆ. “ನಾನು ಚಿಕ್ಕ ಮಗುವಾಗಿದ್ದಾಗ ಅವರಿವರ ಕೈಯಿಂದ ಕೈಗೆ ಹೋಗಿ ಗೋಕರ್ಣ ಜಾತ್ರೆಯಲ್ಲಿ ಕಳೆದು ಹೋಗಿದ್ದೆ” ಎಂದು ಅಪ್ಪ ತಾನು ಕಳೆದು ಹೋಗಿದ್ದ ಕಥೆಯನ್ನು ನೆನಪಿಸಿಕೊಳ್ಳುತ್ತಾನೆ. ಬಹುಶಃ ಕಳೆದು ಹೋದ ಸಮಯದಲ್ಲಿ ತಾನು ಕಳೆದು ಹೋಗಿದ್ದೇನೆ ಎಂದು ತಿಳಿದರೆ ಆಗ ನಮಗಾಗುವ ಭಯವನ್ನು ಅನುಭವಿಸಿಯೇ ತಿಳಿಯಬೇಕು.
ಇದೆಲ್ಲ ಯಾಕೆ ನೆನಪಾಯಿತೆಂದರೆ, ಮೊನ್ನೆ ಮೈಸೂರಿನ ರಂಗಾಯಣದಲ್ಲಿ ಬಹುರೂಪಿ ನಾಟಕೋತ್ಸವ ನಡೆಯುವಾಗ ಜಾತ್ರೆಯಂತಿದ್ದ ಅಲ್ಲಿಯ ಅಂಗಡಿಗಳಲ್ಲಿ ಸುತ್ತಾಡುತ್ತಿದ್ದೆ. ಒಂದು ಪುಸ್ತಕದ ಅಂಗಡಿಯಲ್ಲಿ ನಾವು ಮನೆಯವರೆಲ್ಲ ನಮ್ಮದೇ ಲೋಕದಲ್ಲಿ ಮುಳುಗಿರುವಾಗ ಅಮ್ಮನನ್ನು ಒಬ್ಬಳು ಪುಟ್ಟ ಹುಡುಗಿ ಹಿಂದಿನಿಂದ ಬಂದು ಅಮ್ಮಾ ಎನ್ನುತ್ತಾ ಗಟ್ಟಿಯಾಗಿ ಕೈಗಳನ್ನು ಹಿಡಿದುಕೊಂಡಳು. ನಾನು ಹಾಗು ತಂಗಿ ಇಬ್ಬರೂ ಒಮ್ಮೆಲೆ ಹಿಂತಿರುಗಿ ನೋಡಿದೆವು. ನಮ್ಮ ಅಮ್ಮನನ್ನು ಬಂದು ತಬ್ಬಿಕೊಳ್ಳುತ್ತಿರುವ ಮಗು ಯಾವುದೆಂದು ನಮಗೆ ಆಶ್ಚರ್ಯವಾಯ್ತು. ತನ್ನಮ್ಮನಲ್ಲ ಎಂದು ಗೊತ್ತಾದಾಗ ಆ ಪುಟ್ಟ ಕಂದಮ್ಮ ನಿರಾಶೆ, ಗಾಬರಿ, ಹೆದರಿಕೆ ಎಲ್ಲವನ್ನೂ ಒಟ್ಟಿಗೇ ಅನುಭವಿಸುತ್ತ ನಮ್ಮತ್ತ ನೋಡಿದಳು. ಅಮ್ಮ ಅಮ್ಮ ಎಂದು ಕರೆಯುತ್ತಾ ತಿರುಗಾಡಿದಳು. ಆಕೆಗೆ ಅಮ್ಮ ಸಿಗಲಿಲ್ಲ. ಇನ್ನೊಂದು ಬಾರಿ ಅಮ್ಮ ಎನ್ನುವಾಗ ಆಕೆ ಸಿಗದಿದ್ದರೆ ಜೋರಾಗಿ ಅಳುವುದು ಖಂಡಿತವಾಗಿತ್ತು. ಹೆದರ ಬೇಡ ಪುಟ್ಟ ಅಮ್ಮ ಬರ್ತಾರೆ ಎನ್ನುತ್ತಾ ನಾವು ಮೂವರೂ ಗೊತ್ತಿಲ್ಲದೇ ಸಂತೈಸುವ ಧ್ವನಿಯಲ್ಲಿ ಹೇಳಿದೆವು. ಇನ್ನೇನು ಅವಳ ದುಃಖದ ಕಟ್ಟೆಯೊಡೆಯಬೇಕು, ಆ ಹೊತ್ತಿಗೆ ಅವಳ ಅಮ್ಮ ಓಡಿ ಬರುವುದು ಕಾಣಿಸಿತು. ಮಗು ಓಡಿಹೋಗಿ ಅಮ್ಮನ ಕುತ್ತಿಗೆಗೆ ಜೋತುಬಿದ್ದು, ತನ್ನ ಪ್ರೀತಿ ಹಾಗೂ ಸಿಟ್ಟಿನ ಮೊತ್ತವೆಂಬಂತೆ ಅಮ್ಮನ ಹೊಟ್ಟೆಯ ಮೇಲೆ ಗುದ್ದಲು ತೊಡಗಿದಳು. ಅಮ್ಮ ಅಪ್ಪಿಕೊಂಡು ಮುತ್ತು ಕೊಟ್ಟು ಮುಂದೆ ಕರೆದೊಯ್ದಳು. ಆಕೆ ವಸ್ತುಪ್ರದರ್ಶನದಲ್ಲಿ ಒಮ್ಮೆ ಕಳೆದು ಹೋಗಿದ್ದ ಶ್ಯಾಮಲ, ನಯನ, ಕಿರಣ್, ಎಲ್ಲರನ್ನೂ ನೆನಪಿಸಿದಳು. ಚಿಕ್ಕವರಿರಲಿ, ದೊಡ್ಡವರಿರಲಿ ಜನಜಾತ್ರೆಯಲ್ಲಿ ಕಳೆದು ಹೋಗುವುದೆಂದರೆ – ಬಲ್ಲವರೇ ಬಲ್ಲರು ಅದರ ಭಯವಾ!
ಸ್ಫೂರ್ತಿ ವಾನಳ್ಳಿ

ಜಾಗತಿಕ ದಿಕ್ಸೂಚಿ ವ್ಯವಸ್ಥೆ (ಜಿಪಿಎಸ್) ಮತ್ತದರ ಹಿಂದಿನ ಮೂಲವಿಜ್ಞಾನ

0

ಅಮೆರಿಕ ಮತ್ತು ಸೋವಿಯೆತ್ ಯೂನಿಯನ್ ನಡುವಿನ ವೈಷಮ್ಯವೇ ಬಾಹ್ಯಾಕಾಶ ತಂತ್ರಜ್ಞಾನ ಮುಂದುವರೆಯಲು ಕಾರಣವಾಯ್ತೆಂದರೆ ತಪ್ಪಾಗಲಿಕ್ಕಿಲ್ಲ. ಏಕೆಂದರೆ ರಷ್ಯಾ ಮಾನವ ನಿರ್ಮಿತ ಪ್ರಪ್ರಥಮ ಉಪಗ್ರಹ ಸ್ಪುಟ್ನಿಕ್ ಅನ್ನು ಹಾರಿಬಿಟ್ಟಾಗ ದಂಗುಬಡಿದ ಅಮೆರಿಕ ಅತ್ಯಂತ ತೀವ್ರಗತಿಯಲ್ಲಿ ಅಪಾರ ಹಣ ಸುರಿದು ಸಂಶೋಧನೆ ನಡೆಸತೊಡಗಿತು. ಅದೇ ದಿನಗಳಲ್ಲಿ ಹಾರುತ್ತಿರುವ ಸ್ಪುಟ್ನಿಕ್ ಸೂಸುತ್ತಿದ್ದ ರೇಡಿಯೋ ಸಂಕೇತಗಳ ಅಧ್ಯಯನ ನಡೆಸುತ್ತಿದ್ದ ಅಮೆರಿಕದ ಇಬ್ಬರು ವಿಜ್ಞಾನಿಗಳು ಕಂಪ್ಯೂಟರ್ ನಲ್ಲಿ ಅತಿ ಕ್ಲಿಷ್ಟವಾದ ಲೆಕ್ಕಾಚಾರಗಳನ್ನು ನಡೆಸಿ ಅದು ಹಾರಾಡುತ್ತಿರುವ ಪಥವನ್ನು ಕಂಡುಹಿಡಿದು ಅದನ್ನು ಬಹಿರಂಗ ಪಡಿಸಿದಾಗ ಅಚ್ಚರಿ ಪಡುವ ಸರದಿ ರಷ್ಯಾದ್ದಾಗಿತ್ತು.
ಅದು ಅಮೆರಿಕ ಮತ್ತು ರಷ್ಯಾ ದೇಶಗಳ ಮಿಲಿಟರಿ ಪಡೆಗಳು ಬಲಗೊಳ್ಳುತ್ತಿದ್ದ ಕಾಲ. ಬಲವರ್ಧನೆಗೆಂದು ತಂತ್ರಜ್ಞಾನದಲ್ಲಿ ಹೆಚ್ಚೆಚ್ಚು ಸಂಶೋಧನೆಗಳು ಎರಡೂ ದೇಶಗಳಲ್ಲಿ ನಡೆಯತೊಡಗಿದ್ದವು. ಭೂಮಿಯಲ್ಲೇ ಕುಳಿತು ಹಾರಾಡುತ್ತಿರುವ ಉಪಗ್ರಹದ ಪಥವನ್ನು ಲೆಕ್ಕಹಾಕುವ ತಂತ್ರವನ್ನು ವಿಜ್ಞಾನಿಗಳು ಆಗಲೇ ಶೋಧಿಸಿದ್ದರು. ಇದಕ್ಕೆ ವಿರುದ್ಧವಾದ ಅಂದರೆ, ಉಪಗ್ರಹವನ್ನು ಬಳಸಿಕೊಂಡು ಭೂಮಿಯಲ್ಲಿ ನಿರ್ದಿಷ್ಟ ಸ್ಥಳವನ್ನು ಪತ್ತೆ ಮಾಡುವ ತಂತ್ರವನ್ನು ಮುಂದೆ ಕಂಡುಹಿಡಿಯಲಾಯಿತು. ಮಿಲಿಟರಿ ವಿಮಾನಗಳು, ಕ್ಷಿಪಣಿಗಳು ಮುಂತಾದ ವಾಯುಯಾನಗಳಿಗೆ ದಿಕ್ಸೂಚಿಯಾಗಿ ಈ ತಂತ್ರದ ಬಳಕೆ ಜಾರಿಗೆ ಬಂತು. ತಾವು ಎಷ್ಟು ಎತ್ತರದಲ್ಲಿ ಹಾಗೂ ಕೇಂದ್ರದಿಂದ ಎಷ್ಟು ದೂರದಲ್ಲಿ ಹಾರಾಡುತ್ತಿದ್ದೇವೆನ್ನುವ ವಿವರಗಳನ್ನು ವಿಮಾನಗಳು ದೂರದಲ್ಲಿ ಚಲಿಸುತ್ತಿರುವ ಉಪಗ್ರಹಗಳು ಬಿತ್ತರಿಸುವ ರೇಡಿಯೋ ಸಂಕೇತಗಳ ಆಧಾರದ ಮೇಲೆ ಕಳುಹಿಸತೊಡಗಿದವು. ಆದರೆ ಈ ತಂತ್ರಜ್ಞಾನ ಅಮೆರಿಕದ ಆಸ್ತಿಯಾಗಿಯೇ ಕೆಲವು ವರ್ಷಗಳ ಕಾಲ ಉಳಿದುಕೊಂಡಿತು.
1989ರಲ್ಲಿ 269 ಜನರನ್ನು ಸಾಗಿಸುತ್ತಿದ್ದ ಕೊರಿಯಾದ ವಿಮಾನವೊಂದು ತಪ್ಪು ನಿರ್ದೇಶನದ ಫಲವಾಗಿ ರಷ್ಯಾದ ನಿಷೇಧಿತ ವಾಯುಪ್ರದೇಶಕ್ಕೆ ಪ್ರವೇಶಿಸಿತ್ತು. ವೈರಿವಿಮಾನದ ಪ್ರವೇಶವಾಯ್ತೆಂದುಕೊಂಡು ರಷ್ಯಾದ ಕ್ಷಿಪಣಿ ಆ ವಿಮಾನವನ್ನೇ ಹೊಡೆದುರುಳಿಸಿತು. ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಆ ಘಟನೆಯ ನಂತರ ಅಮೆರಿಕದ ಅಧ್ಯಕ್ಷ ರೊನಾಲ್ಡ್ ರೇಗನ್ ತಮ್ಮ ದೇಶ ಬಳಸುತ್ತಿರುವ ಜಿಪಿಸ್ ಸಂಚಾರ ನಿರ್ದೇಶನ ವ್ಯವಸ್ಥೆ ಎಲ್ಲಾ ದೇಶಗಳೂ ಬಳಸುವಂತಾಗಲೆಂದು ಅನುಮತಿ ನೀಡಿದರು. ಆಗಿನಿಂದ ದಿಕ್ಸೂಚಿ ವ್ಯವಸ್ಥೆಯಿಂದಾಗಿ ವಿಶ್ವದ ವಾಯುಯಾನ ಕ್ಷೇತ್ರವು ಬಹಳೇ ಮುಂದುವರೆಯಲು ಸಾಧ್ಯವಾಗಿದೆ. ದಿನಕ್ಕೆ ದೇಶವಿದೇಶಗಳ ಸಾವಿರಾರು ವಿಮಾನಗಳು ಹಾರಾಡುತ್ತಿದ್ದರೂ ಪ್ರತಿಯೊಂದರ ದಿಕ್ಕು, ಹೋಗುವ ಮಾರ್ಗ, ಹಾರಾಟದ ಸಮಯ ಇತ್ಯಾದಿ ಮಾಹಿತಿಗಳು ಲಭ್ಯವಾಗುತ್ತಿವೆ.
ಇಂದು ಜಾಗತಿಕ ದಿಕ್ಸೂಚಿ ವ್ಯವಸ್ಥೆ ಜಿಪಿಎಸ್ ನ್ನು ಹತ್ತು ಹಲವಾರು ಕ್ಷೇತ್ರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದಲ್ಲಿ ಹೊಸಹೊಸ ಅನ್ವೇಷಣೆಗಳಾದಂತೆ ಸಾಮಾಜಿಕ, ಮಿಲಿಟರಿ ಹಾಗೂ ವ್ಯಾಪಾರೀ ಬೇಡಿಕೆಗಳಿಗನುಗುಣವಾಗಿ ಜಿಪಿಎಸ್ ವ್ಯವಸ್ಥೆಯಲ್ಲಿಯೂ ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇಂದಿಗೂ ಅಮೆರಿಕಾ ದೇಶದ ರಕ್ಷಣಾ ಇಲಾಖೆ ಕಾರ್ಯನಿರತವಾಗಿರುವ ಈ 30ಕ್ಕಿಂತ ಹೆಚ್ಚು ಉಪಗ್ರಹಗಳ ನಿರ್ವಹಣೆಯ ಹೊಣೆ ಹೊತ್ತಿದೆ. ಈ ಉಪಗ್ರಹಗಳು ಕನಿಷ್ಟ ಹತ್ತು ವರ್ಷ ಕಾರ್ಯನಿರತವಾಗಿರಬಲ್ಲವು. ಆದ್ದರಿಂದ ಅವಧಿ ಮೀರಿದ ಉಪಗ್ರಹಗಳಿಗೆ ಬದಲಿಯಾಗಿ ಹೊಸ ಹೊಸ ಉಪಗ್ರಹಗಳ ಉಡಾವಣೆಯಾಗುತ್ತಲೇ ಇರುತ್ತದೆ. ಇನ್ನು ಅವು ಕಳಿಸುವ ಸಂಕೇತಗಳು ಐ1 ಮತ್ತು ಐ2 ಎಂಬ ಬೇರೆ ಬೇರೆ ತರಂಗಾಂತರಗಳುಳ್ಳ ರೇಡಿಯೋ ಅಲೆಗಳು. ಐ1 ಅಲೆಗಳು ನಾಗರಿಕರ ಬಳಕೆಗಾದರೆ ಐ2 ಅಲೆಗಳು ಅಮೆರಿಕದ ರಕ್ಷಣಾ ಇಲಾಖೆಯ ಸ್ವತ್ತುಗಳು.
1978 ರಲ್ಲಿ ದಿಕ್ಸೂಚಿಯಾಗಿ ಬಳಕೆಗೆಂದು ಒಂದು ಉಪಗ್ರಹವನ್ನು ಅಮೆರಿಕದ ಮಿಲಿಟರಿ ಇಲಾಖೆಯ ವಿಜ್ಞಾನಿಗಳು ಆಗಸಕ್ಕೆ ಹಾರಿಬಿಟ್ಟರು. ಆದರೆ ಒಂದೇ ಒಂದು ಉಪಗ್ರಹ ಇಡೀ ಭೂಮಂಡಲವನ್ನು ನಿಟ್ಟಿಸಿ ಎಲ್ಲಾ ಕಡೆ ರೇಡಿಯೋ ಸಂಕೇತಗಳನ್ನು ಕಳುಹಿಸಲು ಸಾಧ್ಯವಿರಲಿಲ್ಲ. ಆದ್ದರಿಂದ ಅವುಗಳ ಸಂಖ್ಯೆಯನ್ನು ಹೆಚ್ಚಿಸುತ್ತ, 1994 ರಲ್ಲಿ ಏಕರೂಪದ, ಏಕ ಕಾರ್ಯವ್ಯಾಪ್ತಿಯ ಇಪ್ಪತ್ನಾಲ್ಕು ಉಪಗ್ರಹಗಳ ಜಾಲವೇ ಭೂಗ್ರಹದ ಸುತ್ತ ಆವರಿಸುವಂತೆ ಮಾಡಲಾಯಿತು.
ಈ 24 ಉಪಗ್ರಹಗಳು ಭೂಮಿಯ ಮೇಲಿರುವ ನಮಗೆ ನಾವಿರುವ ಸ್ಥಳದ ಅರಿವನ್ನು ಪಡೆಯುವಲ್ಲಿ ಅತ್ಯಂತ ದಕ್ಷವಾಗಿ ಕೆಲಸ ಮಾಡುತ್ತಿವೆ. ಭೂಮಿಯ ಮೇಲ್ಮೈನ ಯಾವುದೇ ಸ್ಥಳವನ್ನು ಗುರುತಿಸಲು ಸಾಧ್ಯವಾಗುವಂತೆ (ನಾಲ್ಕು ಉಪಗ್ರಹಗಳು ಹಾರಾಡುವ) ಆರು ವಿವಿಧ ಸಮತಲದ ನಿರ್ದಿಷ್ಟವಾದ 360 ಡಿಗ್ರಿಯ ವರ್ತುಲ ಕಕ್ಷೆಗಳಲ್ಲಿ ಈ 24 ಉಪಗ್ರಹಗಳು ಹಾರಾಡುತ್ತಿವೆ. 7000ಕಿಮೀ ವೇಗದಲ್ಲಿ ದಿನಕ್ಕೆ ಎರಡು ಬಾರಿ ಭೂಮಿಯನ್ನು ಗಸ್ತು ಹೊಡೆಯುವ ಉಪಗ್ರಹಗಳು ಅವು. ತಮ್ಮ ಪಥವನ್ನು ಬದಲಿಸಬಾರದೆಂದು ಪ್ರತಿಯೊಂದು ಉಪಗ್ರಹಕ್ಕೂ ರಾಕೆಟ್ ಬೂಸ್ಟರ್‍ನ ಲಗಾಮಿದೆ. ಇವುಗಳಲ್ಲಿ ಪ್ರತಿಯೊಂದೂ ಸುಮಾರು 2 ಸಾವಿರ ಪೌಂಡ್ ಅಥವಾ ಸುಮಾರು 900 ಕೆಜಿ ತೂಗುವ, ಹದಿನೇಳು ಅಡಿ ವಿಸ್ತಾರದ ಉಪಗ್ರಹ. ಅವುಗಳ ಶಕ್ತಿ ಸಂಚಯನಕ್ಕೆಂದು ಸೌರಫಲಕಗಳ ಪಟ್ಟಿ ಇದೆ. ಹಾಗಾಗಿ ಯಾವುದೇ ಹೊತ್ತಿನಲ್ಲಿ, ಕಟ್ಟಡದೊಳಗಿನ ಪ್ರದೇಶ, ದಟ್ಟ ಅರಣ್ಯದ ನೆಲ ಇವುಗಳನ್ನು ಹೊರತುಪಡಿಸಿ ಭೂಮಿಯ ಇಡೀ ಮೇಲ್ಮೈ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಉಪಗ್ರಹಗಳ ಅವಗಾಹನೆಗೆ ಒಳಗಾಗುತ್ತಲೇ ಇರುತ್ತದೆ. ಪ್ರತಿಯೊಂದೂ ಹತ್ತು ವರ್ಷಗಳ ಕಾಲ ಸಮರ್ಥವಾಗಿ ಕೆಲಸ ಮಾಡುವ ಉಪಗ್ರಹ. ಸತತವಾಗಿ ಬದಲೀ ಉಪಗ್ರಹಗಳ ನಿರ್ಮಾಣ ಮತ್ತು ಉಡಾವಣೆ ನಡೆಯುತ್ತಲೇ ಇವೆ.
ಈ ಉಪಗ್ರಹಗಳು ಬಿತ್ತರಿಸುವ ತರಂಗಗಳು ಮೋಡ, ನೀರು, ಪ್ಲಾಸ್ಟಿಕ್ ಮತ್ತು ಗಾಜುಗಳ ಮೂಲಕ ಹಾದುಹೋಗಬಲ್ಲವು ಆದರೆ ದಟ್ಟ ಕಾಡು, ಎತ್ತರದ ಬೆಟ್ಟ, ದಪ್ಪನೆಯ ಗೋಡೆಯ ಕಟ್ಟಡ ಇವುಗಳನ್ನು ದಾಟಲಾರವು. ಅವು ಕಳುಹಿಸುವ ಸಂದೇಶಗಳಲ್ಲಿ ಮೂರು ರೀತಿಯ ವಿವರಗಳು ಅಡಕವಾಗಿರುತ್ತವೆ. ಮೊದಲನೆಯದು ಉಪಗ್ರಹಕ್ಕೆ ನೀಡಲಾಗಿರುವ ಹೆಸರು ಅಥವಾ ಗುರುತುಪಟ್ಟಿ, ಎರಡನೆಯದು ಪ್ರಸಕ್ತ ದಿನಾಂಕ ಮತ್ತು ಸಮಯ ಹಾಗೂ ಮೂರನೆಯದು ಯಾವ ಉಪಗ್ರಹ ಯಾವ ಹೊತ್ತಿನಲ್ಲಿ ಎಲ್ಲಿರಬೇಕು ಎಂಬ ಮಾಹಿತಿಪಟ್ಟಿ.
ಭೂಗ್ರಹದ ಪೂರ್ತಿ ಮೇಲ್ಮೈನಲ್ಲಿ ಸತತವಾಗಿ ಬಿತ್ತರಗೊಳ್ಳುತ್ತಿರುವ ಉಪಗ್ರಹ ಸಂಕೇತಗಳನ್ನು ಬಳಸಿಕೊಳ್ಳಬೇಕೆಂದರೆ ಅವು ಬಿತ್ತರಿಸುವ ರೇಡಿಯೋ ಸಂದೇಶಗಳನ್ನು ಅರಿಯುವ ರಿಸಿವರ್ ಸಾಧನ ನಮ್ಮ ಬಳಿ ಇರಬೇಕು. ರಿಸಿವರ್ ಯಂತ್ರ ನಾಲ್ಕು ಉಪಗ್ರಹಗಳ ಸಂದೇಶಗಳ ಮೂಲಕ ಒಂದೊಂದಕ್ಕೂ ಇರುವ ದೂರವನ್ನು ಲೆಕ್ಕ ಹಾಕಿ ಗಣಿತದ ತತ್ವವೊಂದರ ಮೂಲಕ ಅದನ್ನು ಬಳಸಿಕೊಂಡು ತಾನಿರುವ ತಾಣವನ್ನು ಗುರುತಿಸುತ್ತದೆ.
ಉಪಗ್ರಹಗಳು ತಾವು ಸಂದೇಶಗಳನ್ನು ಹೊರಸೂಸಿದ ಸಮಯವನ್ನೂ ಕಳಿಸುತ್ತವೆ. 12,200 ಕಿಮೀ ದೂರದಿಂದ ಭೂಮಿಯನ್ನು ತಲುಪುವಾಗ ಬೆಳಕಿನ ವೇಗದ ಆ ಅಲೆಗಳಿಗೂ ಸ್ವಲ್ಪ ಸಮಯಾವಕಾಶ ಬೇಕೇ ಬೇಕು. ರಿಸಿವರ್ ತನ್ನ ಸಮಯದೊಂದಿಗೆ ಅದನ್ನು ಹೋಲಿಸಿ, ಅವೆರಡರ ನಡುವಿನ ಅಂತರವನ್ನು ಲೆಕ್ಕ ಹಾಕುತ್ತದೆ. ಉಪಗ್ರಹ ಕಳುಹಿಸಿದ ಸಂಕೇತಗಳು ಬೆಳಕಿನ ವೇಗದಲ್ಲಿ ಚಲಿಸುವುದರಿಂದ ಉಪಗ್ರಹ ಮತ್ತು ರಿಸಿವರ್ ನಡುವಿನ ದೂರವನ್ನು ಬೆಳಕಿನ ವೇಗವನ್ನು ಸಮಯದೊಂದಿಗೆ ಗುಣಿಸಿ ಕಂಡುಹಿಡಿಯಲಾಗುತ್ತದೆ. ಈಗ ತಾನಿರುವ ಸ್ಥಳವನ್ನು ಅಕ್ಷಾಂಶ, ರೇಖಾಂಶ ಹಾಗೂ ಎತ್ತರ ಈ ವಿವರಗಳೊಡನೆ ರಿಸಿವರ್ ಬಹಿರಂಗಪಡಿಸುತ್ತದೆ. ಅಂದರೆ ರಿಸಿವರ್ ಯಾರ ಬಳಿ ಇರುತ್ತದೋ ಆ ವ್ಯಕ್ತಿಗೆ ತಾನಿರುವ ತಾಣದ ಮಾಹಿತಿ ದೊರೆಯುತ್ತದೆ.
ಸಂಕೇತ ಆರಂಭಗೊಂಡ ಮತ್ತು ಅದನ್ನು ಸ್ವೀಕರಿಸಿದ ಸಮಯಗಳ ಅಂತರ ಅತ್ಯಂತ ಮಹತ್ವದ್ದು. ಇಲ್ಲಿ ಬೆಳಕಿನ ವೇಗ ಅತಿ ಹೆಚ್ಚಿದ್ದು ಸಮಯದಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸವಾದರೂ ‘ದೂರ’ ದಲ್ಲಿ ಬಹಳೇ ವ್ಯತ್ಯಯ ಉಂಟಾಗಬಹುದು. ಉದಾಹರಣೆಗೆ ಒಂದೇ ಒಂದು ಮೈಕ್ರೋಸೆಕೆಂಡ್ ಹೆಚ್ಚುಕಡಿಮೆಯಾದರೆ, ನಾವು ಬಯಸುವ ಜಾಗ ನಿಜವಾಗಿ ಇರುವುದಕ್ಕಿಂತ 300 ಮೀ ಆಚೀಚೆ ಇದೆಯೆಂದು ನಮ್ಮ ರಿಸಿವರ್ ತೋರಿಸುವ ಸಂಭವವಿರುತ್ತದೆ. ಆದ್ದರಿಂದ, ಉಪಗ್ರಹದಲ್ಲಿರುವ ಮತ್ತು ರಿಸಿವರಿನಲ್ಲಿರುವ ಗಡಿಯಾರಗಳಲ್ಲಿ ತಾಳಮೇಳವಿರಬೇಕು. ದೀರ್ಘಕಾಲ ಸಮರ್ಪಕವಾಗಿ ಚಲಿಸುವುದು ಅಣುಗಡಿಯಾರವೊಂದೇ. ಉಪಗ್ರಹಗಳಲ್ಲ್ಲಿ ಅಣುಗಡಿಯಾರವನ್ನೇ ಅಳವಡಿಸಿಡುತ್ತಾರೆ. ಆದರೆ ಗ್ರಾಹಕ ಸ್ನೇಹಿ ರಿಸಿವರ್‍ನಲ್ಲಿ ದುಬಾರಿ ವೆಚ್ಚದ ಅಣುಗಡಿಯಾರ ಕಷ್ಟಸಾಧ್ಯ. ಇದಕ್ಕೆಂದೇ ವಿಜ್ಞಾನಿಗಳು ಉಪಾಯವೊಂದನ್ನು ಹುಡುಕಿದ್ದಾರೆ. ರಿಸಿವರ್ ನಲ್ಲಿ ಸಾಧಾರಣವಾದ ಕ್ವಾಟ್ರ್ಜ್ ಗಡಿಯಾರವಿರುತ್ತದೆ. ಆದರೆ ಅದು ಉಪಗ್ರಹಗಳ ವೇಳೆಯನ್ನು ಅನುಸರಿಸಿ ಆಗಾಗ ತನ್ನ ವೇಳೆಯನ್ನು ಬದಲಾಯಿಸಿಕೊಳ್ಳುತ್ತಿರುತ್ತದೆ. ಹೀಗೆ ಕಡಿಮೆ ವೆಚ್ಚದಲ್ಲಿ ಅಣುಗಡಿಯಾರದ ನಿಖರತೆಯನ್ನು ಪಡೆಯುವ ಬಗೆಯನ್ನು ರಿಸಿವರ್ ಹೊಂದಿದೆ.
ನಾವಿರುವ ಸ್ಥಳದ ಅತಿ ನಿಖರವಾದ ವಿವರಗಳು ಬೇಕೆಂದರೆ ಅಧಿಕ ದುಡ್ಡು ಸುರಿಯಲು ತಯಾರಿರಬೇಕು. ಮುಂದುವರೆದ ದೇಶಗಳಲ್ಲಿ ನೀವು ನಿಂತ ಜಾಗದ ನಕ್ಷೆಯನ್ನು ಅತಿ ನಿಖರವಾಗಿ ಅಂದರೆ ಒಂದು ಸೆಂಟಿಮೀಟರ್ ವ್ಯತ್ಯಾಸದೊಳಗೆ ತಿಳಿಸುವ ಅತ್ಯಾಧುನಿಕವಾದ ಜಿಪಿಎಸ್ ಉಪಕರಣ ಕೂಡ ಇಂದು ಲಭ್ಯ.
2000 ದ ನಂತರದಲ್ಲಿ ತಂತ್ರಜ್ಞಾನದ ಪ್ರಗತಿ ಎಲ್ಲಾ ಕಡೆ ಸುಲಲಿತವಾಗಿ ಕಾರ್ಯವಹಿಸುವ ಜಿಪಿಎಸ್‍ಗಳ ಆವಿಷ್ಕಾರಕ್ಕೆ ಕಾರಣವಾಗಿದೆ.
ಇಂದಿಗೂ ಅಧಿಕೃತ ಮಾಲೀಕನೆಂದರೆ ಹಿರಿಯಣ್ಣ ಅಮೆರಿಕಾ. ಐರೋಪ್ಯ ಒಕ್ಕೂಟ ಗೆಲಿಲಿಯೋ ಎಂಬ ಪೂರಕ ಉಪಗ್ರಹ ವ್ಯವಸ್ಥೆಯನ್ನೂ, ರಷ್ಯಾ ಗ್ಲೊನಾಸ್ ಸಿದ್ಧಗೊಳಿಸುತ್ತಿದೆ. ಭಾರತದಲ್ಲಿಯೂ 774 ಕೋಟಿ ರೂಪಾಯಿಗಳ ಜಿಪಿಎಸ್ ಪೂರಕ ಯೋಜನೆ ಗಗನ್ ತಯಾರಾಗುತಿದೆ.
ಜಿಪಿಎಸ್ ತಂತ್ರಜ್ಞಾನ ಮನೋರಂಜನೆಯ ಸಾಧನವಾಗಿಯೂ ಉಪಯೋಗವಾಗುತ್ತಿದೆ.
ಭೂಮಿ, ಸಮುದ್ರ ಮತ್ತು ಆಕಾಶ ಹೀಗೆ ಎಲ್ಲೆಲ್ಲಿ ಈ ಉಪಗ್ರಹಗಳ ಸಂಕೇತಗಳು ತಲುಪುತ್ತವೋ ಅಲ್ಲೆಲ್ಲಾ ಕಡೆ ಜಿಪಿಎಸ್ ಸೇವೆಯನ್ನು ಬಳಸಿಕೊಳ್ಳಲು ಸಾಧ್ಯವೆಂದು ಹೇಳಿದೆವಷ್ಟೆ? ಇತ್ತೀಚೆಗೆ ಅಗಾಧವಾಗಿ ಬೆಳೆದು ನಿಂತಿರುವ ಕಂಪ್ಯೂಟರ್ ತಂತ್ರಜ್ಞಾನ ಹಾಗೂ ಜಿಪಿಎಸ್ ಜಂಟಿಯಾಗಿ ಹತ್ತಾರು ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿವೆ. ಗಗನದಲ್ಲಿ ವಿಮಾನಯಾನಕ್ಕೆ, ನೀರಿನಲ್ಲಿ ವೃತ್ತಿಪರ ಮೀನುಗಾರರಿಗೆ ಮತ್ತು ಸಮುದ್ರಗಾಮಿಗಳಿಗೆ ನಿರ್ದೇಶನ ನೀಡುವ ಜಿಪಿಎಸ್ ಭೂಮಿಯಲ್ಲಿ ತಂತ್ರಜ್ಞಾನ ಸುಧಾರಣೆಯೊಂದಿಗೆ ಈಗೀಗ ಕಡಿಮೆ ವೆಚ್ಚದ ಜಿಪಿಎಸ್ ಆಧಾರಿತ ಉಪಕರಣಗಳು ಸಾರ್ವಜನಿಕರಲ್ಲೂ ಹೆಚ್ಚು ಪ್ರಸಿದ್ಧಿ ಪಡೆಯತೊಡಗಿವೆ. ಸ್ವಂತದ ವಾಹನಗಳಲ್ಲಿ ನೇವಿಗೇಟರ್ ಅಥವಾ ಪಥನಿರ್ದೇಶನಕ್ಕೆಂದು ಜಿಪಿಎಸ್‍ನ್ನು ಇತರ ತಂತ್ರಜ್ಞಾನಗಳೊಂದಿಗೆ ಅಳವಡಿಸಿಕೊಳ್ಳಬಹುದಾಗಿದೆ. ಇಡೀ ಭೂಮಿಯ ನಕಾಶೆಯೊಂದಿಗೆ ಇಚ್ಛಿತ ಸ್ಥಳದ ವಿವರಗಳನ್ನೂ ನೀಡುವ ‘ಗೂಗಲ್ ಅರ್ಥ್’ ಜಾಲತಾಣ ಜೊತೆಗೆ ಫೋನು, ಕ್ಯಾಮೆರಾಗಳನ್ನು ಬಳಸಿಕೊಂಡು ಹೆಚ್ಚು ಮಾಹಿತಿ ಪಡೆಯಬಹುದಾಗಿದೆ. ಸೆಲ್ ಫೋನುಗಳಲ್ಲಿ ಕೂಡ ಜಿಪಿಎಸ್ ಸೇವೆ ಲಭ್ಯವಿದ್ದು ಬೆರಳತುದಿಯಲ್ಲಿ ಸುತ್ತಲ ಜಗತ್ತಿನ ವಿವರಗಳು ದೊರೆಯುತ್ತವೆ.
ಮೊದಮೊದಲು ಕಾರಿನಲ್ಲಿ ಸಂಚರಿಸುವವರಿಗೆ ಮಾತ್ರವೇ ಮಾರ್ಗದರ್ಶಿಯಾಗಿ ಜಿಪಿಎಸ್ ಬಳಕೆಯಾಗುತ್ತಿತ್ತು. ಚಾಲಕರು ರಸ್ತೆಯಿಂದ ತಮ್ಮ ಕಣ್ಣನ್ನು ಕೀಳದೇ, ಸಿಡಿಯಿಂದ ಸೂಚನೆಗಳನ್ನು ಆಲಿಸುತ್ತ ಮಾರ್ಗಕ್ರಮಿಸುತ್ತಿದ್ದರು. ಉದಾಹರಣೆಗೆ, ನೀವು ಹೊಸ ಊರಿನಲ್ಲಿ ಕಾರು ಓಡಿಸುತ್ತಿದ್ದೀರೆಂದುಕೊಳ್ಳಿ. ನೀವು ತಲುಪಬೇಕಾದ ಜಾಗವನ್ನು ಜಿಪಿಎಸ್ ಗೆ ಫೀಡ್ ಮಾಡಿ ನೀವು ಹೊರಡಿ. ಯಾವ ಮಾರ್ಗ ನಿಮಗೆ ಸಮೀಪ, ಅಲ್ಲಿಗೆ ತಲುಪುವುದು ಹೇಗೆ ಇತ್ಯಾದಿ ವಿವರಗಳನ್ನು ಉಪಕರಣವು ನಿಮಗೆ ಸೂಚಿಸುತ್ತದೆ. ತಲೆಬಿಸಿಯಿಲ್ಲದೆ ನೀವು ನಿಗದಿತ ಸ್ಥಾನವನ್ನು ತಲುಪಬಹುದು.
ಈಗೀಗ ಜಿಪಿಎಸ್ ಜೊತೆ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನಗಳ ಮಾರುಕಟ್ಟೆಯ ಬೆಲೆಗಳೂ ತಗ್ಗಿ ಹತ್ತು ಹಲವಾರು ಉಪಯೋಗಗಳು ಜನರಿಗೆ ಲಭ್ಯವಾಗಿವೆ. ಭೌಗೋಳಿಕ ಸ್ಥಳಗಳ ವಿವರಗಳಿರುವ ವಿವಿಧ ಸಿಡಿಗಳು ದೊರೆಯುತ್ತವೆ. ಬೇರೆ ಊರಿಗೆ ಹೋಗುವಾಗ ಅದಕ್ಕನುಗುಣವಾದ ಸಿಡಿಯನ್ನು ನಮ್ಮ ಕಂಪ್ಯೂಟರಿನಲ್ಲಿ ಹಾಕಿಕೊಳ್ಳಬೇಕಾಗುತ್ತದೆ.
ಕರಾರುವಾಕ್ ಜಾಗತಿಕ ಮಾಹಿತಿಯನ್ನು ಬಯಸುವ ಯಾವುದೇ ವ್ಯಾಪಾರ ಕ್ಷೇತ್ರದಲ್ಲೂ ಜಿಪಿಎಸ್ಸನ್ನು ಬಳಸಿಕೊಳ್ಳಬಹುದು. ಸರ್ವೆ ಇಲಾಖೆಯಲ್ಲಿ ಸಮರ್ಥವಾಗಿ ಬಳಸಿಕೊಂಡರೆ, ದೂರದೂರದ ಸ್ಥಳಗಳನ್ನು ಅತ್ಯಂತ ನಿಖರವಾಗಿ ಹಾಗೂ ಮಿತವ್ಯಯದಲ್ಲಿ ಗುರುತಿಸಬಹುದು. ಹಾಗೆಯೇ ಫೋನು ಡೈರೆಕ್ಟರಿಗಳಲ್ಲಿ, ಹಳದಿಪುಟಗಳಲ್ಲಿ, ಪ್ರವಾಸೋದ್ಯಮದಲ್ಲಿ, ಮೂಲಭೂತಸೌಕರ್ಯ, ಸಂಪರ್ಕ ಈ ಮುಂತಾದ ಕ್ಷೇತ್ರಗಳಲ್ಲಿ ಜಿಪಿಎಸ್ ಯಶಸ್ವೀ ತಂತ್ರಜ್ಞಾನಮಿತ್ರನಾಗಲಿದೆ. ಚಾರಣ, ಬೇಟೆ, ಗುಡ್ಡಗಾಡಿನ ಆಟೋಟ ಹೀಗೆ ವಿನೋದ ಕ್ರೀಡೆಗಳಲ್ಲಿಯೂ ಕೂಡ ಜನರು ತಾವಿರುವ ತಾಣದ ಹಾಗೂ ಅದರ ಮೂಲಕ ಗಮ್ಯಸ್ಥಾನದತ್ತ ತಮ್ಮ ಪ್ರಗತಿಯನ್ನು ಲೆಕ್ಕಹಾಕಲು ಜಿಪಿಎಸ್ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಆಟೋಮೊಬೈಲುಗಳಲ್ಲಿ ತುರ್ತುಪರಿಸ್ಥಿತಿ ಎದುರಾದರೆ, ಗುಂಡಿ ಒತ್ತಿ ತಾವಿರುವ ಸ್ಥಳವನ್ನು ತಿಳಿಸಿ ಅಲ್ಲಿಯೇ ಸಹಾಯ ಪಡೆಯುವುದೂ ಕೂಡ ಜಿಪಿಎಸ್ ನಿಂದ ಸಾಧ್ಯವಿದೆ.
ಕೇಂದ್ರಸ್ಥಳದಲ್ಲಿದ್ದುಕೊಂಡು ವಿವಿಧ ವೇಳೆಗಳಲ್ಲಿ ಅನೇಕ ವಾಹನಗಳ, ಜನರ ಮೇಲ್ವಿಚಾರಣೆ ಮಾಡಲು ಜಿಪಿಎಸ್ ಅತ್ಯಂತ ಸಮರ್ಥವಾದ ತಂತ್ರಜ್ಞಾನವಾಗಿದೆ. ಉದಾಹರಣೆಗೆ, ದೂರದಲ್ಲಿದ್ದುಕೊಂಡೇ ಅಪರಾಧಿಗಳನ್ನು ಕೊಂಡೊಯ್ಯುವ, ಸಾಮಾನು ಸರಂಜಾಮು ಒಯ್ಯುತ್ತಿರುವ ಮತ್ತು ಪೋಲೀಸರ ವಾಹನಗಳ ಹಾಗೂ ಸಾರ್ವಜನಿಕ ಬಸ್ಸುಗಳ ನಿಗರಾನಿ ವಹಿಸಲು ಜಿಪಿಎಸ್ ಸೇವೆಯಿಂದ ಸಾಧ್ಯ. ಈ ಕೆಲಸಕ್ಕೆ ಜಿಪಿಎಸ್ ರಿಸಿವರಿನೊಂದಿಗೆ ಅವಶ್ಯಕ ತಂತ್ರಾಂಶ, ಸಂಪರ್ಕಕ್ಕೆ ಫೋನು ಅಥವಾ ರೇಡಿಯೋ ಅಲೆಗಳ ಬಿತ್ತರ ಈ ವ್ಯವಸ್ಥೆ ಇರಬೇಕಾಗುತ್ತದೆ. ಶಾಲೆಗೆ ಹೋದ ಮಗು ದಾರಿ ತಪ್ಪಿದರೆ ಅದರ ಕೈಯ್ಯಲ್ಲಿರುವ ಜಿಪಿಎಸ್ ವಾಚು ಸೂಸುತ್ತಿರುವ ರೇಡಿಯೋ ಅಲೆಗಳು ದೂರದಲ್ಲಿರುವ ತಂದೆತಾಯಂದಿರಿಗೆ ಸಹಾಯ ಮಾಡಬಲ್ಲವು. ಚಾರಣಕ್ಕೆ ಹೋಗುವವರು ಜಿಪಿಎಸ್ ಆಧಾರಿತ ಇಲೆಕ್ಟ್ರಾನಿಕ್ ಉಪಕರಣಗಳಿದ್ದರೆ ತಾವು ಓಡಾಡುವ ಸ್ಥಳದ ವಿವರಗಳೆಲ್ಲವನ್ನೂ ಪಡೆಯಬಹುದು.
ಅಮೆರಿಕದಂಥಹ ಮುಂದುವರೆದ ದೇಶಗಳಲ್ಲಿ ಸಾವಿರಾರು ಎಕರೆ ಕೃಷಿಭೂಮಿ ಹೊಂದಿರುವ ರೈತರು ಹಾಗೂ ಕಂಪೆನಿಗಳು ಜಿಪಿಎಸ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಲ್ಲಿಯೂ ಬಳಸಿಕೊಳ್ಳುತ್ತಿದ್ದಾರೆ. ಮಣ್ಣುಪರೀಕ್ಷೆಯಿಂದ ಹಿಡಿದು ನೆಲಕ್ಕೆ ನೀರು, ಗೊಬ್ಬರ, ಕೀಟನಾಶಕಗಳ ಸಿಂಪಡಣೆ ಮತ್ತು ಕಟಾವಿನವರೆಗೆ ಎಲ್ಲಾ ಹಂತದಲ್ಲಿಯೂ ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆ ಅಲ್ಲಿ ನೆರವು ನೀಡುತ್ತದೆ.
ಬಹುಶಃ ಮನೆಯೊಳಗಿನ ಹಾಗೂ ಗಣಿಯಾಳದ ಆವರಣದ ಹೊರತಾಗಿ ಬೇರೆಲ್ಲೆಡೆಯಲ್ಲಿಯೂ ಜಿಪಿಎಸ್ ಸೇವೆಯನ್ನು ಬಳಸಿಕೊಳ್ಳಬಹುದೇನೋ. ಅಂದ ಹಾಗೆ, ಉಪಗ್ರಹ ಜಾಲ ಬಿತ್ತರಿಸುವ ಜಿಪಿಎಸ್ ಸೇವೆ ಎಲ್ಲರಿಗೂ ಉಚಿತ. ಆದರೆ ಅದಕ್ಕೆ ಪೂರಕವಾದ ರಿಸಿವರ್, ಯಂತ್ರಾಂಶ, ತಂತ್ರಾಂಶಗಳು, ಆಗಾಗ ಅವುಗಳ ಅಪ್‍ಗ್ರೇಡ್ ಹೀಗೆ ಗ್ರಾಹಕನ ಜೇಬಿಗೆ ಕತ್ತರಿ ತಪ್ಪಿದ್ದಲ್ಲ.
ಸರೋಜ ಪ್ರಕಾಶ್

ಗುಣಮಟ್ಟದ ಹಾಲನ್ನು ಪೂರೈಕೆ ಮಾಡಿ

0

ಗ್ರಾಮೀಣ ಪ್ರದೇಶಗಳಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ರೈತಾಪಿ ವರ್ಗದ ಜನರು ಜೀವನ ಮಾಡುತ್ತಿದ್ದು, ಉತ್ಪಾದಕರು ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರಿ ಸಂಘಗಳನ್ನು ಉಳಿಸಿಕೊಂಡು ಹೋಗಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈಚೆಗೆ ಆಯೋಜನೆ ಮಾಡಲಾಗಿದ್ದ ೨೦೧೪-–೧೫ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ತೀವ್ರ ಬರಗಾಲಕ್ಕೆ ಒಳಗಾಗಿರುವ ಬಯಲು ಸೀಮೆ ಭಾಗದ ರೈತಾಪಿ ವರ್ಗದ ಜನರು, ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿಯಿದ್ದರೂ ಕೂಡಾ ಹಾಲಿನ ಉತ್ಪಾದನೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಪೈಪೋಟಿ ಮಾಡುತ್ತಿದ್ದು, ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವ ಮೂಲಕ ಸಹಕಾರ ಸಂಘದ ಅಭಿವೃದ್ದಿಗಾಗಿ ಶ್ರಮಿಸಬೇಕು. ರಾಸುಗಳಿಗೆ ಸಹಕಾರ ಸಂಘದಿಂದ ಸಿಗುವಂತಹ ಪೌಷ್ಠಿಕಾಂಶ ಭರಿತವಾದ ಆಹಾರಗಳನ್ನು ನೀಡಬೇಕು. ಪಶುಆಹಾರಗಳನ್ನು ಬಳಸಿದಲ್ಲಿ ರಾಸುಗಳು ರೋಗ ಮುಕ್ತವಾಗಲು ಸಹಕಾರಿಯಾಗುತ್ತದೆ ಎಂದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಆರ್.ಪ್ರಭಾಕರ್ ಮಾತನಾಡಿ ಉತ್ಪಾದಕರು ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದು, ಸಂಘದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಯಶಸ್ವಿನಿ ಯೋಜನೆ ಸೇರಿದಂತೆ ಸರ್ಕಾರದಿಂದ ನೀಡುವಂತಹ ಪ್ರೋತ್ಸಾಹಧನವನ್ನು ಪಡೆಯುವುದರ ಜೊತೆಗೆ ಗುಣಮಟ್ಟದ ಹಾಲನ್ನು ನೀಡಿ ಸಹಕಾರ ಸಂಘಗಳ ಅಭಿವೃದ್ಧಿಗೆ ನೆರವಾಗಬೇಕು, ಎಸ್.ಎನ್.ಎಫ್. ಮತ್ತು ಫ್ಯಾಟ್ನ ಅಂಶಗಳ ಬಗ್ಗೆ ಕಡ್ಡಾಯ ಮಾಡಬಾರದು ಎಂದು ಈಗಾಗಲೇ ಕೋಚಿಮುಲ್ಗೆ ಮನವಿಗಳನ್ನು ಸಲ್ಲಿಸಲಾಗಿದ್ದು, ಒಪ್ಪಿಗೆ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಲ್ಲಿನ ಉತ್ಪಾದಕರು ಒಂದು ದಿನ ಹಾಲಿನ ಪೂರೈಕೆ ಸ್ಥಗಿತಗೊಳಿಸುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳುವ ಮುನ್ಸೂಚನೆಗಳು ಇವೆ ಎಂದರು.
ಕೋಚಿಮುಲ್ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಎಚ್.ಎಸ್.ಉಮೇಶ್ರೆಡ್ಡಿ, ಮೇಲೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಆಂಜನೇಯರೆಡ್ಡಿ, ಸದಸ್ಯ ಶ್ರೀನಿವಾಸ್, ನಿರ್ದೇಶಕರಾದ ಸಿ.ಆರ್.ನಾಗೇಶ್, ಸಿ.ಎಚ್.ಆನಂದ್, ಸಿ.ಆರ್.ರಾಜಣ್ಣ, ಎಂ.ಕೃಷ್ಣಪ್ಪ, ಎಂ.ಕ್ಯಾತಪ್ಪ, ಸಿ.ಎಸ್.ರಾಮಾಂಜಿನಪ್ಪ, ಸಿ.ಎನ್.ರಾಮಕೃಷ್ಣಪ್ಪ, ಸಿ.ಎಂ.ರಾಮಾಂಜಿನಪ್ಪ, ಆಂಜನಮ್ಮ, ದ್ಯಾವಮ್ಮ, ವೆಂಕಟೇಶ್ಮೂರ್ತಿ, ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್.ರವಿಚಂದ್ರ, ಸಿ.ಎನ್.ವೆಂಕಟರಾಯಪ್ಪ, ಸಿ.ಎನ್. ಮಂಜುನಾಥ್, ಶ್ರೀನಿವಾಸಮೂರ್ತಿ, ಚನ್ನೇಗೌಡ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಬೇರು ಕೊಳೆ ಮತ್ತು ಬೇರು ಗಂಟು ರೋಗ

0

ಹಿಪ್ಪುನೇರಳೆ ಸೊಪ್ಪು ಕಟಾವು ಮಾಡಿದ ನಂತರ ಅಥವಾ ದುಂಪೆ ಕಟಾವಿನ ನಂತರ ಬೇರಿಗೆ ಚಿಕಿತ್ಸೆ ನೀಡುವ ಅಂಶಗಳನ್ನು ಸಿಂಪಡಿಸಬೇಕು ಎಂದು ವಿಜಯಪುರದ ಕೇಂದ್ರ ರೇಷ್ಮೆ ಮಂಡಳಿ ಬಿತ್ತನೆಕೋಠಿಯ ಜಂಟಿ ನಿರ್ದೇಶಕ ಡಾ.ಫಣಿರಾಜ್ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ರೈತರಾದ ಬೈರೇಗೌಡ, ಶ್ರೀನಿವಾಸ್ ಮತ್ತು ಎಂ.ಎಚ್.ನಾರಾಯಣಸ್ವಾಮಿ ಅವರ ಹಿಪ್ಪುನೇರಳೆ ತೋಟದಲ್ಲಿ ಬೇರು ಕೊಳೆ ಮತ್ತು ಬೇರು ಗಂಟು ರೋಗಪೀಡಿತ ಗಿಡಗಳನ್ನು ಮಂಗಳವಾರ ವೀಕ್ಷಿಸಿ ಪರಿಹಾರೋಪಾಯಗಳನ್ನು ತಿಳಿಸಿದರು.
ಸೊಪ್ಪು ಕಟಾವು ಮಾಡಿದ ನಂತರ ಅಥವಾ ದುಂಪೆ ಕಟಾವಿನ ನಂತರ ಒಂದು ಲೀಟರ್ ನೀರಿಗೆ 2 ಗ್ರಾಂ ಬಾವಿಸ್ಟೈನ್ ಮಿಶ್ರಣ ಮಾಡಿ ಸಿಂಪಡಿಸಬೇಕು. ಜೈವಿಕ ನಿಯಂತ್ರಣ ಮಾದರಿಯನ್ನು ಅನುಸರಿಸುವವರು 50 ಕೆಜಿ ತಿಪ್ಪೆ ಗೊಬ್ಬರಕ್ಕೆ ಒಂದು ಕೆಜಿ ರಕ್ಷಕ್ ಮಿಶ್ರಣ ಮಾಡಿ ಹತ್ತು ದಿನಗಳ ಕಾಲ ನೆರಳಿನಲ್ಲಿ ನೀರಲ್ಲಿ ನೆನೆಸಿಡಬೇಕು. ಇದರಿಂದ ಫಂಗಸ್ ಹುಟ್ಟುತ್ತದೆ. ಅದನ್ನು ಗಿಡದ ಸುತ್ತ ಹಾಕಬೇಕು ಎಂದು ತಿಳಿಸಿದರು.
ರೈತ ಮಳ್ಳೂರು ಹರೀಶ್, ಜಿಲ್ಲಾ ಪಂಚಾಯತಿ ರೇಷ್ಮೆ ಉಪ ನಿರ್ದೇಶಕ ನಾಗಭೂಷಣ್, ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

ಕಲ್ಲುಗಣಿಗಾರಿಕೆ ವಿರುದ್ಧ ಆಕ್ರೋಷ

0

ತಾಲ್ಲೂಕಿನ ಸಾದಲಿ ಹೋಬಳಿಯ ಸಾದಲಿ, ಕೋಟಗಲ್, ಕಾಮನಹಳ್ಳಿ ಮತ್ತು ಬಂದಾರ್ಲಹಳ್ಳಿ ಗ್ರಾಮಸ್ಥರು ಗ್ರಾಮದ ಬಳಿ ಕಲ್ಲುಗಣಿಗಾರಿಕೆಗೆ ಅವಕಾಶಕೊಡಬಾರದೆಂದು ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ಧರಣಿಯನ್ನು ನಡೆಸಿದರು.
ಸಾದಲಿ ಗ್ರಾಮದ ಸರ್ವೆ ನಂಬರ್ 72, ಕೋಟಗಲ್ ಗ್ರಾಮದ ಸರ್ವೆ ನಂಬರ್ 39 ರ ಗೋಮಾಳದಲ್ಲಿ ಹಲವಾರು ಮಂದಿ ಕಲ್ಲು ಪುಡಿ ಮಾಡುವ ಯಂತ್ರಗಳನ್ನು ಜೋಡಿಸಲು ಇಲಾಖೆಯಿಂದ ಗುತ್ತಿಗೆ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ರೈತರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅವರ ಗುತ್ತಿಗೆ ಅರ್ಜಿಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.
ಸಾದಲಿ ಗ್ರಾಮದ ಸರ್ವೆ ನಂಬರ್ 72ರ ಗೋಮಾಳದ ಜಮೀನಿನಲ್ಲಿ ಬಂಡೆಯಿದ್ದು, ಬಂಡೆಯ ಮೇಲ್ಭಾಗದಲ್ಲಿ ಅತಿ ಪುರಾತನ ಕಾಲದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವಿದೆ. ಇದನ್ನು ರೂಢಿ ನಾಮದಂತೆ ದೇವರಗುಡಿ ಬೆಟ್ಟವೆಂದು ಕರೆಯುತ್ತಾರೆ. ಸುತ್ತಮುತ್ತ ಜಮೀನುಗಳಿದ್ದು, ರೈತರು ಕೊಳವೆ ಬಾವಿಗಳನ್ನು ಕೊರೆಸಿ ಬೆಳೆ ಬೆಳೆಯುತ್ತಿದ್ದಾರೆ. ಈ ಬೆಟ್ಟದ ತಪ್ಪಲಿನಲ್ಲಿ ಮೂರ್ನಾಕು ಕೆರೆಗಳಿವೆ. ರಾಜ್ಯ ಹೆದ್ದಾರಿ ಸುಮಾರು 100 ಮೀಟರ್ ಪಕ್ಕದಲ್ಲಿದೆ ಮತ್ತು ವಿದ್ಯುತ್ ಇಲಾಖೆಯವರು ಇದೇ ಸ್ಥಳದಲ್ಲಿ 66 ಕೆ.ವಿ. ವಿದ್ಯುತ್ ಲೈನ್ ಅಳವಡಿಸಿದ್ದಾರೆ.
ಕೋಟಗಲ್ ಗ್ರಾಮದ ಸರ್ವೆ ನಂಬರ್ 39 ಗೋಮಾಳದ ಜಮೀನಿನ ಬಳಿ ಕೋಟಗಲ್, ಕಾಮನಹಳ್ಳಿ ಮತ್ತು ಬಂದಾರ್ಲಹಳ್ಳಿಗೆ ಹೋಗುವ ರಸ್ತೆಯಿದೆ. ಬೆಟ್ದ ತಪ್ಪಲಲ್ಲಿ ಸಪ್ತ ಮಾತೆಯರ ಮತ್ತು ಮುನೇಶ್ವರ ದೇವಸ್ಥಾನವಿದೆ. ವರ್ಷಕ್ಕೊಮ್ಮೆ ಜಾತ್ರೆ ನಡೆಯುತ್ತದೆ. ಸರ್ಕಾರ ಈ ಸ್ಥಳದಲ್ಲಿ ಸಮುದಾಯಭವನ ಕೊಳವೆ ಬಾವಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ.
ಈ ಗೋಮಾಳದ ಜಮೀನುಗಳಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಸು, ಎಮ್ಮೆ, ಕುರಿ, ಮೇಕೆಗಳನ್ನು ಮೇಯಿಸುತ್ತಾರೆ. ಹತ್ತಿರದಲ್ಲಿ ಅರಣ್ಯಪ್ರದೇಶವಿದೆ. ಇಲ್ಲಿ ಗಣಿಗಾರಿಕೆ ನಡೆದಲ್ಲಿ ಕ್ರಷರ್ಗಳನ್ನು ಜೋಡಿಸಿದಲ್ಲಿ ಕಲ್ಲು ಪುಡಿ ಧೂಳಿನಿಂದ ಬೆಳೆಗಳು ಹಾನಿಯಾಗುತ್ತವೆ. ಆರೋಗ್ಯ ಹದಗೆಡುತ್ತದೆ. ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ. ಅಂತರ್ಜಲ ಕುಸಿಯುತ್ತದೆ. ಕೆರೆಗಳು, ರಸ್ತೆ, ವಿದ್ಯುತ್ ತಂತಿ ಹಾಳಾಗುತ್ತದೆ. ಜಾನುವಾರುಗಳಿಗೆ ಆಹಾರವಿಲ್ಲದಾಗುತ್ತದೆ. ಈ ಸ್ಥಳದಲ್ಲಿ ಗಣಿಗಾರಿಕೆಗೆ ಅವಕಾಶ ಕೊಟ್ಟರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.
ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಪ್ರತಿಭಟನಾಕಾರರು ಮನವಿ ಪತ್ರವನ್ನು ಸಲ್ಲಿಸಿದರು. ಕೋಟಗಲ್ ರೆಡ್ಡಪ್ಪ, ಕೆ.ಎಂ.ಮಂಜುನಾಥ್, ಕೆ.ಎನ್.ನಾಗಿರೆಡ್ಡಿ, ಕಾಮನಹಳ್ಳಿ ನರಸಿಂಹಪ್ಪ, ಪಾರ್ವತಮ್ಮ, ಲಕ್ಷ್ಮೀದೇವಮ್ಮ, ಬೊಮ್ಮನ್ನ, ಶ್ರೀನಿವಾಸರೆಡ್ಡಿ, ಗಂಗಿರೆಡ್ಡಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಾದಲಿ ಗ್ರಾಮದ ಬಳಿ ಮಳೆಗೆ ಹುಟ್ಟಿದ ಅಣಬೆಗಳು

0

ಈಚೆಗೆ ತಾಲ್ಲೂಕಿನಾದ್ಯಂತ ಬಿದ್ದ ಮಳೆ ನೀರಿನಿಂದಾಗಿ ಅಣಬೆಗಳು ಹುಟ್ಟಿಕೊಂಡಿದ್ದು, ಹಲವರ ಬಾಯಿಯರುಚಿ ತಣಿಸಿದೆ.
ತಾಲ್ಲೂಕಿನ ಸಾದಲಿ ಗ್ರಾಮದ ಬಳಿ ಈಚೆಗೆ ಬಿದ್ದ ಮಳೆಗೆ ಸುಂದರವಾದ ಅಣಬೆಗಳು ಹುಟ್ಟಿದ್ದು, ವಿಶಿಷ್ಠ ಖಾದ್ಯವಾಗಿ ಬಳಕೆಯಾಗುತ್ತಿದೆ.
ಅಣಬೆಗಳು ವಿಶಿಷ್ಟವಾದ ಸೃಷ್ಟಿ. ಬೇಸಗೆಯಲ್ಲಿರದ ಅಣಬೆಗಳು ಮಳೆಯ ಸಂದರ್ಭದಲ್ಲಿ ಕೊಡೆಗಳ ಮಾದರಿಯಲ್ಲಿ ಮೂಡಲಾರಂಭಿಸುತ್ತದೆ. ನಾನಾ ಆಕಾರದಲ್ಲಿ ಸೃಷ್ಟಿಯಾದರೂ, ಕೊಡೆಯಾಕಾರ ಹೊಂದಿರುವ ಅಣಬೆಗಳಿಗೆ ನಾಯಿಕೊಡೆ ಎಂದೇ ಎಲ್ಲರೂ ಕರೆಯುತ್ತರೆ. ಮರಗಳ ಬುಡದಲ್ಲಿ, ಕೊಳೆತ ಮರದ ತೊಗಟೆಗಳಲ್ಲಿ, ತರೆಗೆಲೆಗಳು, ಹುಲ್ಲಿನ ರಾಶಿಯಲ್ಲಿ ಅಣಬೆಗಳು ಹುಟ್ಟಿಕೊಳ್ಳುತ್ತವೆ.
ಕೃತಕವಾಗಿ ಅಣಬೆಯನ್ನು ಬೆಳೆಸಲಾಗುತ್ತದೆಯಾದರೂ, ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಟ್ಟ ಗುಡ್ಡದಲ್ಲಿ ಸಿಗುವ ಅಣಬೆಗಳ ಆಕರ್ಷಣೆ ಹೆಚ್ಚು. ಅಣಬೆಯಿಂದ ಹಲವು ತಿನಿಸುಗಳನ್ನು ತಯಾರಿಸಬಹುದು. ಇವುಗಳ ಆಹಾರ ಪದಾರ್ಥವನ್ನು ಸಸ್ಯಾಹಾರಿಗಳು ‘ಮಾಂಸಾಹಾರಿ’ ರುಚಿ ಹೊಂದಿದೆ ಎಂದು ಹೇಳುತ್ತಾರೆ.
ಮಷ್ರೂಮ್ ಅಥವಾ ಅಣಬೆ ಅತ್ಯಧಿಕ ವಿಟಾಮಿನ್ ನಿಂದ ಕೂಡಿದ್ದು, ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ. ಹಳ್ಳಿ ಪ್ರದೇಶದಲ್ಲಿ ವಾಸಿಸುವವರಿಗೆ ಅಣಬೆಗಳು ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತದೆಯಾದರೂ ನಗರ ಪ್ರದೇಶದ ಜನರು ದುಪ್ಪಟ್ಟು ಬೆಲೆ ನೀಡಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವವರಿದ್ದಾರೆ. ಒಟ್ಟಿನಲ್ಲಿ ಮಳೆಗಾಲ ಬಂತೆಂದರೆ ಅಣಬೆಗಳಿಗೆ ಬಾರಿ ಬೇಡಿಕೆಯಂತೂ ಇರುವುದು ನಿಜ.
‘ಅಣಬೆ ಅತ್ಯುತ್ತಮ ಆಹಾರ. ಗ್ರಾಮೀಣ ಪ್ರದೇಶಗಳಲ್ಲಿ ಸಹಜವಾಗಿ ಬೆಳೆಯುವ ಅಣಬೆ ಆರಿಸಿ ತಿನ್ನುತ್ತಾರಾದರೂ, ಆಯ್ಕೆಮಾಡುವುದು ತಿಳಿಯದಿದ್ದಾಗ ವಿಷಕಾರಿ ಅಣಬೆ ತಿಂದು ತೀವ್ರ ತೊಂದರೆಗಳಿಗೆ ಸಿಲುಕಿದವರ ಉದಾಹರಣೆಗಳು ಅಪಾರ. ನಗರಪ್ರದೇಶಗಳಲ್ಲಿ ಕೃತಕ ರೀತಿ ಅಣಬೆ ಕೃಷಿಯಿದೆ. ಸ್ವಾದಿಷ್ಟ ಅಣಬೆ ತಿನ್ನುವುದು ಇತ್ತೀಚಿನ ದಶಕಗಳಲ್ಲಿ ಬಂದ ರೂಢಿಯೆನ್ನಲ್ಲ. ಶತಶತಮಾನಗಳಿಂದಲೂ ಇದರ ಸೇವನೆಯಿದೆ.
ಅಣಬೆಯಲ್ಲಿ ಕೆಲವು ವಿಶೇಷ ಅಂಶಗಳಿವೆ. ಇದು ಒಂದು ರೀತಿಯಲ್ಲಿ ಪೌಷ್ಟಿಕಾಂಶಗಳ ಅಗರ. ಸಕ್ಕರೆ, ಕೊಬ್ಬಿನ ಅಂಶ ಕಡಿಮೆ. ಇದರಿಂದ ಮಧುಮೇಹಿಗಳು-, ಹೃದ್ರೋಗದ ಸಮಸ್ಯೆಗಳಿಂದ ಬಳಲುತ್ತಿರುವವರೂ ಸೇವಿಸಬಹುದು. ಮಕ್ಕಳಿಗೆ ಇದು ಅತ್ಯುತ್ತಮ ಪೋಷಕಾಂಶ ನೀಡುವ ಆಹಾರ. ತಿನ್ನಲು ಅರ್ಹವಾದ ಅಣಬೆ ಸೇವನೆಯಿಂದ ಮಕ್ಕಳ ಬೆಳವಣಿಗೆಯೂ ಚೆನ್ನಾಗಿರುತ್ತದೆ. ಮುಖ್ಯವಾಗಿ ಇವರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಸಾದಲಿ ಬಳಿ ಸಿಕ್ಕ ಅಣಬೆಗಳನ್ನು ಗ್ರಾಮಸ್ಥರು ರುಚಿಕರ ಖಾದ್ಯಗಳನ್ನು ತಯಾರಿಸಿ ಬಂಧು ಮತ್ತು ಮಿತ್ರರೊಂದಿಗೆ ಹಂಚಿ ತಿಂದರು’ ಎಂದು ಶಿಕ್ಷಕ ಸಂತೋಷ್ ತಿಳಿಸಿದರು.