“ಅಯ್ಯೋ ನನ್ನ ಮಗ/ಮಗಳು ಊಟ ತಿಂಡೀನೆ ಮಾಡಲ್ಲ, ಅದನ್ನು ಮಾಡಿಸೋದೇ ಒಂದು ಕಷ್ಟದ ಕೆಲಸ” ಈ ರೀತಿಯ ಅರ್ಥ ಬರುವ ಮಾತುಗಳನ್ನು ಇತ್ತೀಚೆಗೆ ಎಲ್ಲಾ ಅಮ್ಮಂದಿರು ಹೇಳುತ್ತಿರುತ್ತಾರೆ. ಐವತ್ತು ವರ್ಷಗಳ ಹಿಂದೆ ಊಟತಿಂಡಿಗಳಿಗಾಗಿ ಪೋಷಕರನ್ನು ಪೀಡಿಸುತ್ತಿದ್ದ ಮಕ್ಕಳು ಹೀಗೇಕಾಗಿದ್ದಾರೆ? ಮಕ್ಕಳಿಗೆ ಹಸಿವು ನೀರಡಿಕೆಗಳೇ ಕಡಿಮೆಯಾಗಿದೆಯೇ? ಅಥವಾ ನಾವೆಲ್ಲಾ ಎಲ್ಲೋ ತಪ್ಪುತ್ತಿದ್ದೇವೆ ಅನ್ನಿಸುತ್ತಿಲ್ಲವೇ?
ಬದಲಾಗಿರುವುದು ಕಾಲವಲ್ಲ ನಾವು!
ಒಟ್ಟು ಕುಟುಂಬದ ಜವಾಬ್ದಾರಿಗಳ ಜೊತೆಗೆ ನಾಲ್ಕೈದು ಮಕ್ಕಳನ್ನಾದರೂ ಸಾಕಿ ಸಲಹಬೇಕಿದ್ದ ಹಿಂದಿನ ಕಾಲದ ತಾಯಂದಿರಿಗೆ ಎಲ್ಲಾ ಮಕ್ಕಳನ್ನೂ ಕರೆದು ಒತ್ತಾಯದಿಂದ ತಿನ್ನಿಸುವುದು ಸಾಧ್ಯವಿರಲಿಲ್ಲ. ಹಾಗಾಗಿ ಊಟದ ಸಮಯಕ್ಕೆ ಬಂದವರಿಗೆ ಮತ್ತು ತಾವಾಗಿಯೇ ಹಸಿವು ಎಂದು ಕೇಳಿಕೊಂಡು ಬಂದವರಿಗೆ ಮಾತ್ರ ಊಟ ಸಿಗುತ್ತಿತ್ತು. ಒಂದೆರೆಡು ಮಕ್ಕಳನ್ನು ಮಾತ್ರ ಸಾಕಬೇಕಿರುವ ಇವತ್ತಿನ ತಾಯಂದಿರು ಮಕ್ಕಳ ಬಗೆಗೆ ಅಗತ್ಯಕ್ಕಿಂತ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಜೊತೆಗೆ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಅವರಿಗೆ ಯಾವ್ಯಾವ್ಯಾಗ ಏನು ಮತ್ತು ಎಷ್ಟು ಆಹಾರ ಕೊಡಬೇಕು ಎಂದು ವೈದ್ಯರು ದೊಡ್ಡ ಪಟ್ಟಿಯನ್ನು ನೀಡಿರುತ್ತಾರೆ. ಇದನ್ನು ಪಾಲಿಸುವ ಧಾವಂತದಲ್ಲಿ ಅಮ್ಮಂದಿರು ಮಕ್ಕಳಿಗೆ ಹಸಿವೆಯಾಗಿದೆಯೋ ಇಲ್ಲವೋ ಎನ್ನುವುದನ್ನು ನೋಡದೆ, ಆಹಾರವನ್ನು ಒತ್ತಾಯದಿಂದ ಗಂಟಲಿನಲ್ಲಿ ತುರುಕುತ್ತಾರೆ. ಇದಕ್ಕಾಗಿ ಟೀವಿಯ ಮುಂದೆ ಕೂರಿಸಿ, ಊರೆಲ್ಲಾ ಸುತ್ತಾಡಿಸಿ ನಾಯಿ ಬೆಕ್ಕುಗಳನ್ನು ತೋರಿಸಿ, ಹೆದರಿಸಿ, ಗದರಿಸಿ, ಪೂಸಿ ಹೊಡೆದು-ಅಂತೂ ಹೇಗಾದರೂ ಮಕ್ಕಳ ಹೊಟ್ಟೆಯನ್ನು ಚೀಲದಂತೆ ತುಂಬಲು ಯತ್ನಿಸುತ್ತಾರೆ. ಬೇಡಿಕೆ ಇಲ್ಲದೆ ಸಿಗುವ ಆಹಾರದ ಬಗೆಗೆ ಮಗು ಆಸಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. ಇದರಿಂದ ಅಮ್ಮಂದಿರ ಹತಾಶೆ ಹೆಚ್ಚಾಗಿ ಇನ್ನೂ ಜಾಸ್ತಿ ಒತ್ತಡ ಹಾಕುತ್ತಾರೆ. ವೈದ್ಯರ ಹತ್ತಿರ ಹೋಗಿ ಟಾನಿಕ್‍ಗಳನ್ನೂ ಬರೆಸಿಕೊಂಡು ಬರುತ್ತಾರೆ. ಇಷ್ಟೆಲ್ಲಾ ಆದಮೇಲೂ ಊಟ ಮಾಡಿಸುವ ನಿತ್ಯದ ಹೋರಾಟ ಮಾತ್ರ ನಡೆದೇ ಇರುತ್ತದೆ. ಇದರ ಅತಿರೇಕವೆಂದರೆ ಬೆಳೆದ ಮಕ್ಕಳ ಮೇಲೆಯೂ ಇದೇ ರೀತಿಯ ಒತ್ತಾಯ ಒತ್ತಡಗಳನ್ನು ಹಾಕಿ ಅವರಿಂದ ಪ್ರತಿಭಟಿಸಿ ಎದುರಿಸಿ ದೊಡ್ಡ ರಂಪಾಟವೇ ನಡೆದ ಮೇಲೂ ಯಾವುದೇ ಪಾಠ ಕಲಿತಿರುವುದಿಲ್ಲ.
ಎಲ್ಲಿದೆ ಇದಕ್ಕೆ ಉತ್ತರ?
ಆಹಾರ ತೆಗೆದುಕೊಳ್ಳುವುದು ಮಗುವಿನ ದೈಹಿಕ ಬೆಳವಣಿಗೆಗೆ ಮಾತ್ರವಲ್ಲ ಅದು ಮಗು ಇಷ್ಟಪಟ್ಟು ಮಾಡುವ ಕೆಲಸವಾಗಬೇಕು. ಮಗು ಎಷ್ಟು ತಿನ್ನುತ್ತದೆ ಅನ್ನುವಷ್ಟೇ ಅದು ಯಾವ ಮನಸ್ಥಿತಿಯಲ್ಲಿ ತಿನ್ನುತ್ತದೆ ಎನ್ನುವುದೂ ಮುಖ್ಯವಾಗುತ್ತದೆ. ಆಹಾರದ ಸಮಯ ಮನೆಯವರ ಜೊತೆ ಖುಷಿಯಾಗಿ ಕಳೆಯುವ ಸಮಯವಾಗಬೇಕು. ಜೊತೆಗೆ ಮಗುವಿಗೆ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ತರಬೇತಿಯೂ ಸಿಗುತ್ತಾ ಹೋಗಬೇಕು. ಇವೆಲ್ಲವನ್ನೂ ಸಾಧಿಸುವುದು ಹೇಗೆ?
1. ಎಲ್ಲಾ ಮಕ್ಕಳಿಗೂ ಬೇಕಾಗುವ ಆಹಾರದ ಪ್ರಮಾಣ ಒಂದೇ ರೀತಿಯಾಗಿರುವುದಿಲ್ಲ. ಹಾಗಾಗಿ ಮಗುವಿಗೆ ಒತ್ತಾಯದಿಂದ ತಿನ್ನಿಸುವುದನ್ನು ಕಡಿಮೆಮಾಡಬೇಕು. ಮಗು ಆರೋಗ್ಯಕರವಾಗಿ ಬೆಳೆಯುತ್ತಿದೆ ಎಂದಾದರೆ ಅದು ತನಗೆ ಬೇಕಾದಷ್ಟು ಆಹಾರವನ್ನು ತೆಗೆದುಕೊಳ್ಳುತ್ತಿದೆ ಎಂದರ್ಥ.
2. ಯಾವುದೇ ಸಂದರ್ಭದಲ್ಲಿಯೂ ಟಿವಿ ಮುಂದೆ ಕೂರಿಸಿ ಆಹಾರವನ್ನು ಗಂಟಲಿಗೆ ನೂಕುವ ಪ್ರಯತ್ನ ಮಾಡಬಾರದು. ಚಿಕ್ಕವರಿದ್ದಾಗ ಪೋಷಕರೇ ಕಲಿಸಿದ ಇಂತಹ ಅಭ್ಯಾಸದಿಂದ ಮುಂದೆ ಮಕ್ಕಳ ಪೋಷಕರ ಮಧ್ಯೆ ಬಹಳ ಭಿನ್ನಾಭಿಪ್ರಾಯಗಳು ಬರುತ್ತವೆ. ಜೊತೆಗೆ ಮಗುವಿಗೆ ತಿನ್ನುವ ಆಹಾರದ ಬಗೆಗೆ ಗಮನವಿರದೆ ಊಟ ಮೈಮನಸ್ಸುಗಳಿಗೆ ಹಿತವನ್ನು ನೀಡುವುದಿಲ್ಲ. ಟಿವಿಯಲ್ಲಿ ತೋರಿಸುವ ಘಟನೆಗಳು ಮಗುವಿನ ಮನಸ್ಸಿನಲ್ಲಿ ಮೂಡಿಸುವ ಭಾವನೆಗಳು ಪ್ರಭಾವಕಾರಿಯಾಗುತ್ತದೆಯೇ ಹೊರತು ಆಹಾರದ ರುಚಿ ಪೌಷ್ಠಿಕತೆಗಳಲ್ಲ. ತಾವೇ ಟಿವಿಯಲ್ಲಿ ಮೈಮರೆತು ತಿನ್ನಿಸುತ್ತಿರುವ ಆಹಾರ ಮಕ್ಕಳ ಮೂಗಿಗೆ ಹೋಗುತ್ತಿದೆಯೋ ಅಥವಾ ಬಾಯಿಗೋ ಎನ್ನುವುದನ್ನು ಗಮನಿಸಿದ ಅಮ್ಮಂದಿರು ಮಕ್ಕಳಿಂದ ಭವಿಷ್ಯದಲ್ಲಿ ಶಿಸ್ತನ್ನು ಹೇಗೆ ಅಪೇಕ್ಷಿಸಬಹುದು.?
3. ಮಗುವಿಗೆ ಒಂದು ಒಂದೂವರೆ ವರ್ಷವಾದಾಗಿನಿಂದ ಯಾವಾಗಲೂ ಒಂದು ನಿರ್ದಿಷ್ಟ ಸ್ಥಳದಲ್ಲಿ ಕೂರಿಸಿ ಆಹಾರವನ್ನು ಕೊಡಬೇಕು. ಊಟದ ಸಮಯ ಮಗುವಿಗೆ ಆಸಕ್ತಿದಾಯಕವಾಗಿರುವಂತೆ ಮಾಡಲು ಆಕರ್ಷಕವಾಗಿ ಕಥೆಗಳನ್ನು ಹೇಳಬಹುದು, ಹಾಡಬಹುದು, ಚಿತ್ರ ಬಿಡಿಸಬಹುದು. ಇದರಿಂದ ಮಗುವಿನ ಮಿದುಳಿನಲ್ಲಿ ಆಹಾರದ ಜೊತೆಗೆ ಆಹ್ಲಾದಕರ ಅನುಭವವೂ ಸೇರಿ ಅಂತಹ ಸಮಯಕ್ಕಾಗಿ ಅದು ಕಾದು ಕುಳಿತಿರುತ್ತದೆ.
4. ಮೂರು ವರ್ಷವಾಗುವಷ್ಟು ಹೊತ್ತಿಗೆ ಮಗುವಿಗೆ ಸ್ವಂತವಾಗಿ ಊಟಮಾಡುವ ತರಬೇತಿ ಶುರುಮಾಡಬಹುದು. ಆರಂಭದಲ್ಲಿ ಮಗು ಆಹಾರವನ್ನು ಚೆಲ್ಲುತ್ತದೆ, ಮೈಯನ್ನೆಲ್ಲಾ ರಾಡಿ ಮಾಡಿಕೊಳ್ಳುತ್ತದೆ. ನಿಧಾನವಾಗಿ ಸಹನೆ ಕಳೆದುಕೊಳ್ಳದೆ ತರಬೇತಿ ಮುಂದುವರೆಸಿದರೆ ನಾಲ್ಕೈದು ವರ್ಷದ ಹೊತ್ತಿಗೆ ಅದು ಸ್ವಂತಂತ್ರವಾಗುತ್ತದೆ. ಇದರಿಂದ ಪೋಷಕರ ದೊಡ್ಡ ತಲೆಬಿಸಿ ಕಡಿಮೆಯಾಗಿ ಸಮಯ ಉಳಿಯುವುದಲ್ಲದೆ ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಯೂ ಉತ್ತಮವಾಗಿರುತ್ತದೆ. ಊಟಮಾಡುವಾಗ ಮಗುವಿನ ಜೊತೆ ಕುಳಿತು ಕಥೆ, ಹಾಡುಗಳನ್ನು ಮುಂದುವರೆಸಬಹುದು.
5. ಸಾಧ್ಯವಾದಷ್ಟು ಚಾಕೋಲೇಟ್ ಬಿಸ್ಕಿಟ್‍ಗಳನ್ನು ಮತ್ತು ಅಂಗಡಿಗಳಲ್ಲಿ ದೊರಕುವ ಸಿದ್ಧ ಪಡಿಸಿದ ಜಂಕ್ ಅಹಾರವನ್ನು ಕಡಿಮೆ ಮಾಡಬೇಕು. ಇದು ಮಕ್ಕಳ ಹಸಿವನ್ನು ಹಾಳು ಮಾಡುವುದಲ್ಲದೆ, ಅಂತಹ ಆಹಾರದಲ್ಲಿ ಇರುವ ಸಂರಕ್ಷಕಗಳು (ಪ್ರಿಸರ್ವೇಟಿವ್ಸ್) ಮತ್ತು ಅದರ ಪ್ಲಾಸ್ಟಿಕ್ ಪ್ಯಾಕಿಂಗ್ ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು.
6. ಮಗು ಮಾಡುವ ಚಿಕ್ಕ ಪುಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಎಲ್ಲರೆದುರು ಹೊಗಳಿ ಅದರ ಆತ್ಮಗೌರವನವನ್ನು ಹೆಚ್ಚಿಸಬೇಕು. ಇದರಿಂದ ಮುಂದಿನ ಹಂತಕ್ಕೆ ಹೋಗಲು ಅದಕ್ಕೆ ಪ್ರೇರಣೆ ಸಿಗುತ್ತದೆ.
ಇವೆಲ್ಲವನ್ನೂ ಮಾಡಲು ಪೋಷಕರಿಗೆ ಬೇಕಾಗಿರುವುದು ಸ್ವಲ್ಪ ಸಹನೆ ಮತ್ತು ಮಕ್ಕಳ ಬಗೆಗೆ ಸಂಪೂರ್ಣ ಪ್ರಾಮಾಣಿಕ ಕಾಳಜಿ. ಜೊತೆಗೆ ಸ್ವಲ್ಪ ದೂರದ ಗುರಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಹೇಗಾದರೂ ಮಾಡಿ ಇವತ್ತಿನ ಊಟವನ್ನು ಮಗುವಿನ ಹೊಟ್ಟೆಗೆ ತುರುಕದಿದ್ದರೆ ಭಾರೀ ಅನಾಹುತವಾಗಬಹುದು ಎನ್ನುವ ಆತಂಕ ಪೋಷಕರಲ್ಲಿದ್ದರೆ ನಿತ್ಯದ ಊಟದ ಜಂಜಾಟ ತಪ್ಪಿದ್ದಲ್ಲ. ಕೆಲವೇ ದಿನಗಳು ಮಗುವಿನ ಆಹಾದಲ್ಲಿ ವ್ಯತ್ಯಾಸವಾದರೆ ಮಗುವಿನ ಆರೋಗ್ಯ ಹಾಳಾಗುವುದಿಲ್ಲ. ಆದರೆ ಆ ಸಮಯದಲ್ಲಿ ಪೋಷಕರು ಕಲಿಸುವ ಜೀವನ ಪಾಠಗಳು ಬಹಳ ದೂರದ ಪರಿಣಾಮಗಳನ್ನು ನೀಡುತ್ತವೆ.
ವಸಂತ್ ನಡಹಳ್ಳಿ
ನನ್ನ ಮಗು ಊಟ ಮಾಡೋಲ್ಲ!
ಮರಗಳ ಮಾರಣಹೋಮ
ತಾಲ್ಲೂಕಿನ ಮೇಲೂರು ಮತ್ತು ಚೌಡಸಂದ್ರ ಗ್ರಾಮಗಳ ನಡುವೆ ರಸ್ತೆ ಬದಿಯಲ್ಲಿ ಬೆಳೆದಿದ್ದ ಮರಗಳನ್ನು ಅರಣ್ಯ ಇಲಾಖೆ ಮತ್ತು ಬೆಸ್ಕಾಂ ಗುತ್ತಿಗೆದಾರರು ಕಡಿದು ಪರಿಸರ ನಾಶ ಮಾಡುತ್ತಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಸೋಮವಾರ ಚಿಕ್ಕಬಳ್ಳಾಪುರ ಬೆಸ್ಕಾಂ ಗ್ರಾಮೀಣ ಉಪ ವಿಭಾಗದ ಸಿಬ್ಬಂದಿ ಕಡಿದುಹಾಕಿದ್ದು ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಭೇಟಿ ನೀಡಿ ಮರ ಕಡಿಯುವುದನ್ನು ನಿಲ್ಲಿಸಿದ್ದಾರೆ.
ಶಿಡ್ಲಘಟ್ಟದಿಂದ ಬೆಂಗಳೂರಿಗೆ ಹೋಗುವ ರಸ್ತೆಯಲ್ಲಿ ಮೇಲೂರು ಮತ್ತು ಚೌಡಸಂದ್ರ ಗ್ರಾಮಗಳ ನಡುವೆ ರಸ್ತೆ ಬದಿಯಲ್ಲಿ ಸಾಲಾಗಿ ಮರಗಳಿದ್ದು, ಬೇಸಿಗೆಯಲ್ಲೂ ಇಲ್ಲಿ ತಂಪಾದ ವಾತಾವರಣವಿರುತ್ತದೆ. ಆದರೆ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ತಂತಿಗಳಿಗೆ ಅಡಚಣೆಯಾಗುತ್ತದೆಂದು, ಅಡ್ಡ ಇರುವ ಮರಗಳ ರೆಂಬೆಗಳನ್ನು ತೆಗೆಯಲು ಅರಣ್ಯ ಇಲಾಖೆಯವರು 2,500 ರೂಗಳಿಗೆ ಹರಾಜನ್ನು ನಡೆಸಿದ್ದಾರೆ. ಆದರೆ ಅಡ್ಡ ಇರುವ ಮರಗಳ ರೆಂಬೆಗಳನ್ನು ತೆಗೆಯದೆ ಇಡೀ ಮರವನ್ನೇ ಕಡಿಯಲಾಗುತ್ತಿದೆ. ಈಗಾಗಲೇ ಸುಮಾರು 10 ಮರಗಳನ್ನು ಕಡಿದಿದ್ದಾರೆ. ಮರಗಿಡ ರಕ್ಷಣೆ ಮಾಡಬೇಕಾದವರೇ ಮರ ಕಡಿಯಲು ಪ್ರೋತ್ಸಾಹಿಸಿದರೆ ಪರಿಸರ ಹೇಗೆ ತಾನೆ ಉಳಿಯುತ್ತದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಆರ್.ಎ.ಉಮೇಶ್ ತಿಳಿಸಿದರು.
ಈ ಬಗ್ಗೆ ನಾವು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ವಿಚಾರಿಸಿದರೆ ಹೊಸ ವಿದ್ಯುತ್ ಲೈನ್ ಅಳವಡಿಸಲು ಬೆಸ್ಕಾಂ ಇಲಾಖೆಯವರು ಅನುಮತಿ ಕೋರಿದ್ದು ಮರದ ರೆಂಬೆ ಕತ್ತರಿಸಲಷ್ಟೇ ಅನುಮತಿ ನೀಡಲಾಗಿತ್ತು. ಆದರೆ ಮರಗಳನ್ನು ಸಂಪೂರ್ಣವಾಗಿ ಕಡಿದಿರುವುದು ತಿಳಿದುಬಂದಿದೆ ಕೂಡಲೇ ಸಂಬಂದಪಟ್ಟವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದಿದ್ದಾರೆ.
ತಲಕಾಯಲಬೆಟ್ಟ ಅಭಿವೃದ್ಧಿಪಡಿಸಿ
ಜಿಲ್ಲೆಯ ಪವಿತ್ರ ಯಾತ್ರಾ ಸ್ಥಳವಾಗಿರುವ ತಲಕಾಯಲಬೆಟ್ಟದ ಅಭಿವೃದ್ಧಿಗಾಗಿ ಗ್ರಾಮ ಪಂಚಾಯತಿಯ ಸದಸ್ಯರು ಪಕ್ಷಭೇದ ಮರೆತು ಶ್ರಮಿಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಕಾರ್ಯಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದುಳಿದ ತಲಕಾಯಲಬೆಟ್ಟದ ಗ್ರಾಮ ಪಂಚಾಯತಿ ಅಭಿವೃದ್ಧಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಪೂರೈಕೆ, ರಸ್ತೆ ಹಾಗೂ ಚರಂಡಿಗಳನ್ನು ನಿರ್ಮಿಸಲು ಆದ್ಯತೆ ನೀಡಿ. ಗ್ರಾಮಸ್ಥರ ಆರೋಗ್ಯವನ್ನು ಸಂರಕ್ಷಣೆ ಮಾಡುವ ಸಲುವಾಗಿ ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎನ್.ಮುನಿಯಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಗೋಪಾಲ್,ಉಪಾಧ್ಯಕ್ಷ ರವಿ, ತಲಕಾಯಲಬೆಟ್ಟ ಗ್ರಾಮ ಪಂಚಾಯತಿಯ ಅಧ್ಯಕ್ಷ ಶ್ರೀನಿವಾಸ್ರೆಡ್ಡಿ, ಉಪಾಧ್ಯಕ್ಷೆ ಗಾಯಿತ್ರಿ, ಗ್ರಾಮ ಪಂಚಾಯಿತಿಯ ಸದಸ್ಯರಾದ ಮಹಬೂಬ್ ಸಾಬಿ, ಗಂಗಪ್ಪ, ನಾರಾಯಣಪ್ಪ, ರಾಘವೇಂದ್ರ, ಅಶ್ವತ್ಥರೆಡ್ಡಿ, ಗೋಪಾಲ್ಕೃಷ್ಣ, ರಮೇಶ್, ವೆಂಕಟರೆಡ್ಡಿ, ನಾರಾಯಣಸ್ವಾಮಿ, ದೇವರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಯಿನಾಥ ಜ್ಞಾನ ಮಂದಿರದಲ್ಲಿ ಹತ್ತನೇ ವಾರ್ಷಿಕೋತ್ಸವ ಆಚರಣೆ
ತಾಲ್ಲೂಕಿನ ಮಳ್ಳೂರಿನ ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ಹತ್ತನೇ ವಾರ್ಷಿಕೋತ್ಸವದ ಪ್ರಯುಕ್ತ ಚಂಡಿಕಾ ಹೋಮ ಹಾಗೂ ಗಿರಿಜಾ ಕಲ್ಯಾಣೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶನಿವಾರದಿಂದ ಪ್ರಾರಂಭಗೊಂಡ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಹಾಗಣಪತಿ, ಸಾಯಿಬಾಬಾ, ಅಯ್ಯಪ್ಪಸ್ವಾಮಿ, ಸುಬ್ರಹ್ಮಣ್ಯೇಶ್ವರಸ್ವಾಮಿ ಮತ್ತು ಜಲಕಂಠೇಶ್ವರ ಸ್ವಾಮಿಗೆ ವಿಶೇಷ ಅಲಂಕಾರಗಳೊಂದಿಗೆ ಪೂಜೆಗಳು ನಡೆದವು. ಗಣ ಹೋಮ ಮತ್ತು ಚಂಡಿಕಾ ಹೋಮಗಳು ನಡೆದವು. ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ ಪಾರಾಯಣ, ಕನಕದಾಸರ ಸ್ತೋತ್ರ, ಶ್ರೀಚಕ್ರಕ್ಕೆ ಅಭಿಷೇಕ ನಡೆದು ಗಿರಿಜಾ ಕಲ್ಯಾಣೋತ್ಸವದಲ್ಲಿ ಸುಮಂಗಲಿಯರಿಂದ ಕುಂಕುಮಾರ್ಚನೆಯು ನಡೆಯಿತು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು. ಭಕ್ತರಿಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು.
ಸಾಯಿನಾಥ ಜ್ಞಾನ ಮಂದಿರದ ಕಾರ್ಯಕಾರಿ ಸಮಿತಿಯ ಕೆ.ಎಸ್.ಮುನಿನಾರಾಯಣಪ್ಪ, ನಾರಾಯಣಸ್ವಾಮಿ, ರಾಮರೆಡ್ಡಿ, ವೆಂಕಟೇಶ್, ಅಮರ್, ಮಂಜುನಾಥ, ಮುನಿಕೃಷ್ಣ, ಎಂ.ವಿ.ವೆಂಕಟರಾಂ, ಗೋವಿಂದಪ್ಪ, ಕೇಶವನಾರಾಯಣ, ವೈ.ಎಂ.ದೇವರಾಜ್, ಲಕ್ಷ್ಮೀಪತಿ, ಸೀತಾರಾಮರೆಡ್ಡಿ ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಪ್ರ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ನಗರದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್(ರಿ) ವತಿಯಿಂದ ಅಕ್ಟೋಬರ್ 11 ರ ಭಾನುವಾರದಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ವಿಪ್ರ ಜನಾಂಗದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. 2014–15ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 85, ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80 ಮತ್ತು ಪದವಿ ಪರೀಕ್ಷೆಯಲ್ಲಿ ಶೇಕಡಾ 60 ಹಾಗೂ ಹೆಚ್ಚು ಅಂಕ ಗಳಿಸಿರುವ ವಿಪ್ರ ಜನಾಂಗದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೆಪ್ಟೆಂಬರ್ 26 ರೊಳಗೆ ಸೂಕ್ತ ದಾಖಲೆ ಹಾಗೂ ನಾಲ್ಕು ಭಾವಚಿತ್ರಗಳೊಂದಿಗೆ ಸಂಪರ್ಕಿಸಲು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಪ್ರಕಟಣೆಯಲ್ಲಿ ಕೋರಿದ್ದಾರೆ.
ಸಂಪರ್ಕಿಸುವ ವಿಳಾಸ:
ಡಾ.ಡಿ.ಟಿ.ಸತ್ಯನಾರಾಯಣರಾವ್, ಶುಶೃತ ನರ್ಸಿಂಗ್ ಹೋಂ, ಅಶೋಕ ರಸ್ತೆ, ಶಿಡ್ಲಘಟ್ಟ(ದೂ:9980901675); ಬಿ.ಆರ್.ಅನಂತಕೃಷ್ಣ(9964182305); ವಿ.ಕೃಷ್ಣ(9632025422)
ಬಾಹ್ಯಾಕಾಶವನ್ನು ಬಗೆದು ನೋಡುವ ಕಣ್ಣುಗಳಿವು
ಗ್ರಹ, ತಾರೆ, ತಾರಾಗುಚ್ಛಗಳು ಮತ್ತಿತರ ಆಕಾಶಕಾಯಗಳ ಸ್ಪಷ್ಟ ಸುಂದರ ಹಾಗೂ ವರ್ಣಮಯ ಚಿತ್ರಗಳು ಇಂದು ಲಭ್ಯವಿದೆ. ಲಕ್ಷಗಟ್ಟಲೆ ಕಿಮೀ ದೂರದಲ್ಲಿರುವ ಮಾನವರಹಿತ ಗಗನನೌಕೆಗಳು ಕಳುಹಿಸಿದ ಚಿತ್ರಗಳು ಅಷ್ಟೊಂದು ಸ್ಫುಟವಾಗಿ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಮೂಡುವುದು ಹೇಗೆ? ದೂರದ ಬಾನನೌಕೆ ಇಷ್ಟೇ ದೂರದಲ್ಲಿದೆ, ಅದರ ಪಥ ಬದಲಾಯಿಸಲಾಯಿತು ಇತ್ಯಾದಿ ಮಾಹಿತಿಗಳನ್ನು ಓದುತ್ತೇವೆ. ತನ್ನನ್ನೂ, ಸೂರ್ಯನನ್ನೂ ಸುತ್ತುವರೆಯುತ್ತ ಓಡುತ್ತಿರುವ ಭೂಮಿ ದೂರದಲ್ಲಿ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿರುವ ನೌಕೆಗಳಿಂದ 24 ಗಂಟೆಯೂ ಸಂಪರ್ಕದಲ್ಲಿದ್ದು ಕರಾರುವಾಕ್ ಮಾಹಿತಿಗಳನ್ನು ಪಡೆಯುವುದು ಸಾಧ್ಯವೆ?
ಬಾಹ್ಯಾಕಾಶ ಸಂಪರ್ಕ ಜಾಲ
ಇದಕ್ಕೆ ಉತ್ತರವೇ ಬೃಹದ್ ಅಂಟೆನಾಗಳನ್ನೊಳಗೊಂಡ ಮೂರು ಸರಣಿಗಳ ‘ಬಾಹ್ಯಾಕಾಶ ಸಂಪರ್ಕ ಜಾಲ’ ಅಥವಾ ಡೀಪ್ ಸ್ಪೇಸ್ ನೆಟ್‍ವರ್ಕ್. 120 ಡಿಗ್ರಿ ಕೋನದ ಅಂತರದಲ್ಲಿ ಭೂಮಿಯ ಮೂರು ಸ್ಥಳಗಳಲ್ಲಿ ಈ ಅಂಟೆನಾಗಳನ್ನು ಅಳವಡಿಸಲಾಗಿದೆ. ಗುಂಡಾಗಿರುವ ಭೂಮಿ ತನ್ನ ಅಕ್ಷದ ಮೇಲೆ ತಿರುಗುತ್ತಾ, ಸೂರ್ಯನ ಸುತ್ತೂ ಕೂಡ ತಿರುಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿಯೂ ದೂರದ ಉಪಕರಣಗಳಿಂದ ಬರುವ ಸಂದೇಶಗಳು ಕೈತಪ್ಪಿ ಹೋಗಬಾರದೆಂಬುದು ಇದರ ಉದ್ದೇಶ.
ಇದರಿಂದಾಗಿ ಬಾಹ್ಯಾಕಾಶದ ದೂರದೂರದಿಂದ ಬರುವ ಯಾವ ಸಂಕೇತವೂ ಈ ಅಂಟೆನಾಗಳ ಹದ್ದುಗಣ್ಣುಗಳಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಿರುವಾಗ ಈ ಮೂರೂ ಅಂಟೆನಾ ಜಾಲ ಕುತ್ತಿಗೆ ತಿರುಗಿಸುತ್ತ ಬಾನಿಗೆ ತಮ್ಮ ನಿಡುದೃಷ್ಟಿಯನ್ನು ಬೀರುತ್ತಲೇ ಇರುತ್ತವೆ. ಒಂದಲ್ಲ ಒಂದು ಅಂಟೆನಾ ಭೂಮಿಯತ್ತ ಬರುವ ಸಂಕೇತಗಳನ್ನು ಗ್ರಹಿಸಿಯೇ ಗ್ರಹಿಸುತ್ತದೆ.
ಡಿಎಸೆನ್‍ನ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲಾರರು, ಅಂಟೆನಾಗಳಿರುವ ವಲಯಗಳಲ್ಲಿ ಮೊದಲನೆಯದು ಅಮೆರಿಕದ ಬಾರ್‍ಸ್ಟೋವ್ ನಗರದಿಂದ ಎಪ್ಪತ್ತೆರಡು ಕಿಮೀ ದೂರದಲ್ಲಿದ್ದರೆ, ಎರಡನೆಯದು, ಸ್ಪೇನಿನ ಮ್ಯಾಡ್ರಿಡ್ ನಿಂದ ಅರವತ್ತು ಕಿಮೀ ದೂರದಲ್ಲಿ ಹಾಗೂ ಮೂರನೆಯದು ಆಸ್ಟ್ರೇಲಿಯಾದ ಕ್ಯಾನ್‍ಬೆರಾ ನಗರದಿಂದ ನಲವತ್ತು ಕಿಮೀ ದೂರದಲ್ಲಿದೆ. ಈ ವಲಯಗಳಲ್ಲೊಂದೊಂದೂ ಹೆಚ್ಚು ಎತ್ತರವಲ್ಲದ, ಇತರ ಭೂ ತರಂಗಗಳ ಕಿರಿಕಿರಿ ಇಲ್ಲದಿರುವ ಬುಟ್ಟಿಯಾಕಾರದ ಪ್ರದೇಶಗಳÀಲ್ಲಿ ಸ್ಥಾಪಿತವಾಗಿದೆ.
ತರಂಗದೂರ ಹೊಂದಿರುವ ಅಲೆಗಳು
ಸಂಕೇತ ಎಂದೆವು. ಅದು ಯಾವ ರೂಪದ್ದು? ಬೆಳಕೇ, ಶಬ್ದವೇ? ಚಿತ್ರದಲ್ಲಿ ತೋರಿಸಿರುವಂತೆ ವಿದ್ಯುತ್ಕಾಂತೀಯ ರೋಹಿತ ಪಟ್ಟಿಯಲ್ಲಿ ರೇಡಿಯೋ ಅಲೆಗಳು ಅತಿ ಹೆಚ್ಚು ತರಂಗದೂರ ಹೊಂದಿರುವ ಅಲೆಗಳು. ಇವುಗಳ ತರಂಗಾಂತರ 1 ಮಿಮೀ – 300 ಕಿಮೀ. ಚಿಕ್ಕ ಅಲೆಗಳೆಂದರೆ ಪರಮಾಣುವಿನಷ್ಟಗಲವಿದ್ದರೆ, ದೊಡ್ಡವು ಫುಟ್‍ಬಾಲ್ ಮೈದಾನದಷ್ಟು ಹರವು ಹೊಂದಿರುವವು. ಇವುಗಳ ವೇಗ ಬೆಳಕಿನಷ್ಟೇ ಅಂದರೆ ಸೆಕೆಂಡಿಗೆ ಮೂರು ಲಕ್ಷ ಕಿಮೀ ದೂರ ಸಾಗುವ ವೇಗ. ಆಕಾಶಕಾಯಗಳಿಂದಲೂ ಇವು ಸತತವಾಗಿ ತೂರಿ ಬರುತ್ತಿರುತ್ತವೆ. ಭೂವಾತಾವರಣವನ್ನು ಪ್ರವೇಶಿಸಿದಾಗ ಇಲ್ಲಿಯ ಬಿಸಿಲು, ಅನಿಲ, ದೂಳು ಯಾವುದೂ ರೇಡಿಯೋ ಅಲೆಗಳ ಮೇಲೆ ಪರಿಣಾಮ ಬೀರವು. ನಾವು ನಿತ್ಯ ಬಳಸುವ ಸೆಲ್ ಫೋನುಗಳು, ಟೆಲಿವಿಷನ್ ಚಿತ್ರಗಳು ಹಾಗೂ ರೇಡಿಯೋ ಇವು ರೇಡಿಯೋ ಅಲೆಗಳನ್ನು (ಇವು ಮಾನವ ನಿರ್ಮಿತ ಅಥವಾ ಕೃತಕ ರೇಡಿಯೋ ಅಲೆಗಳು) ಪ್ರಸಾರ ಮಾಡುತ್ತವೆ.
ಹೀಗೆ ವಿದ್ಯುತ್ ಕಾಂತೀಯ ಅಲೆಗಳ ರೋಹಿತಪಟ್ಟಿಯಲ್ಲಿ ರೇಡಿಯೋ ಅಲೆಗಳದ್ದು ವಿಶಿಷ್ಟ ಸ್ಥಾನ. ಮಾಹಿತಿಯನ್ನು ಆಕಾಶದಲ್ಲಿ ದೂರದೂರದವರೆಗೆ ಪಸರಿಸಲು ಕಡಿಮೆ ಆವರ್ತತರಂಗಗಳು ಇವು ತುಂಬ ಉಪಯೋಗಿ.
ಬೃಹತ್ ಅಂಟೆನಾಗಳು
2 ಲಕ್ಷ ಕಿಮೀ ಆಚೆಯಿಂದ ಬರುವ ಸಂದೇಶಗಳನ್ನು ಗ್ರಹಿಸಲು ಉಪಕರಣಗಳು ಅತಿ ದಕ್ಷವಾಗಿರಬೇಕಾಗುತ್ತದೆ. ಅಂದರೆ ಬೃಹತ್ ಅಂಟೆನಾಗಳು, ಅವುಗಳಲ್ಲಿ ಅಡಕವಾದ ಸೂಕ್ಷ್ಮ ರಿಸಿವರುಗಳು ಹಾಗೂ ಶಕ್ತಿಯುತವಾದ ಟ್ರಾನ್ಸ್‍ಮೀಟರುಗಳು ಈ ಸಂಪರ್ಕಜಾಲದಲ್ಲಿ ಬಳಕೆಯಾಗುತ್ತಿವೆ.
ಅಂಟೆನಾಗಳೆಂದೆವಲ್ಲ, ಇವು ಆಗಸದತ್ತ ಮುಖ ಮಾಡಿ ಗ್ರಹ, ನಕ್ಷತ್ರಗಳು, ಅನಿಲಗಳು, ಧೂಮಕೇತು, ಕ್ಷುದ್ರಗ್ರಹಗಳು, ಮಾನವ ಹಾರಿಸಿದ ಬಾನನೌಕೆಗಳು ಈ ಎಲ್ಲವುಗಳನ್ನೂ ಸದಾ ನಿರುಕಿಸುತ್ತಿರುವ ಅಗಲವಾದ ತಟ್ಟೆಗಳು. ಬಿಡುಬೀಸಾಗಿ, ಆಕಾಶಕ್ಕೆ ಮುಖವೊಡ್ಡಿ ಮಾನವ ಮತ್ತು ಬಾಹ್ಯಬ್ರಹ್ಮಾಂಡದ ನಡುವಿನ ಸಂಪರ್ಕಸೇತುಗಳಾಗಿ ನಿಂತ ಈ ಅಂಟೆನಾ ತಟ್ಟೆಯ ಮೇಲ್ಮೈನಲ್ಲಿ ಬಿದ್ದ ರೇಡಿಯೋ ಅಲೆಗಳೆಲ್ಲವೂ ಒಂದಾಗಿ ಕೇಂದ್ರಭಾಗಕ್ಕೆ ಸಮೀಕರಿಸಲ್ಪಡುತ್ತವೆ. ದುರ್ಬಲವಾದ ಅಲೆಗಳು ಒಂದರ ಮೇಲೊಂದು ಹೇರಲ್ಪಟ್ಟು ಸಶಕ್ತವಾಗಿ ಅರ್ಥವತ್ತಾದ ಬಿಂಬವನ್ನು ಪಡೆಯಲು ಸಾಧ್ಯವಾಗುತ್ತದೆ. ಸರಣಿಯಲ್ಲಿ ಜೋಡಿಸಿಟ್ಟ ಡಿಶ್ ತಟ್ಟೆಗಳೆಲ್ಲವೂ ಸಂಕೇತಗಳನ್ನು ಹೀರುತ್ತವಾದರೂ ಆ ಸಂಕೇತಗಳು ಪ್ರತಿ ತಟ್ಟೆಯ ಮೇಲೆ ಬೀಳುವ ವೇಳೆಯಲ್ಲಿ ವ್ಯತ್ಯಾಸವಿರುತ್ತದೆ. ಮೂರೂ ಸ್ಥಳಗಳಲ್ಲಿರುವ ಅಣು ಗಡಿಯಾರಗಳು ಇವನ್ನು ದಾಖಲುಮಾಡಿಕೊಂಡಿರುತ್ತವೆ. ಬಿತ್ತರಿಸುವಾಗ ಹೊತ್ತಿಗನುಗುಣವಾಗಿ ಮಾಹಿತಿಗಳನ್ನು ಜೋಡಿಸಲಾಗುತ್ತದೆ.
ಬಿತ್ತರಿಸಲಿರುವ ಸಂಕೇತಗಳು
ನಮ್ಮ ಟಿವಿ ಅಥವಾ ರೇಡಿಯೋ ಪ್ರಸಾರಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಸುಮಾರು 100 ಕಿಮೀ ವ್ಯಾಪ್ತಿಯ ಪ್ರದೇಶವನ್ನು ತಲುಪಲು ಅವು 50 ಸಾವಿರ ವ್ಯಾಟ್ ವಿದ್ಯುತ್ತನ್ನು ನುಂಗುತ್ತಿರುತ್ತವೆ. ಉಪಗ್ರಹಗಳ ಟ್ರಾನ್ಸ್‍ಮೀಟರುಗಳ ಬರೀ 20 ವ್ಯಾಟ್ ಶಕ್ತಿಯನ್ನು ಬಳಸಿ ಸಂಕೇತಗಳು ಲಕ್ಷಗಟ್ಟಲೆ ಕಿಮೀ ದೂರ ಕ್ರಮಿಸಿಯೂ ಹೇಗೆ ಮೂಲರೂಪವನ್ನು ಉಳಿಸಿಕೊಳ್ಳುತ್ತವೆ? ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದು ಆ ಟ್ರಾನ್ಸ್‍ಮೀಟರ್ ತಾನು ಬಿತ್ತರಿಸಲಿರುವ ಸಂಕೇತಗಳನ್ನು ಒಗ್ಗೂಡಿಸಿ ಬಲಿಷ್ಠವಾದ ಕಿರಣವೊಂದಾಗಿ ಮಾಡಿ ಭೂಮಿಗೆ ಕಳಿಸುತ್ತದೆ. ಅಪಾರ ಅಂತರದ ನಂತರ ಬಸವಳಿದ ಆ ಕಿರಣವನ್ನು ಸೆರೆಹಿಡಿದ ಡಿಎಸ್‍ಎನ್ ವಿಶೇಷವಾದ ತಂತ್ರಗಳನ್ನು ಬಳಸಿ ಹಿನ್ನೆಲೆಯ ಬಾಹ್ಯಾಕಾಶ ಸದ್ದುಗಳನ್ನು ತೆಗೆದುಹಾಕಿ ಅತ್ಯಮೂಲ್ಯವಾದ ವೈಜ್ಞಾನಿಕ ಮಾಹಿತಿಗಳನ್ನು ಆ ಸಂಕೇತ ಕಿರಣದಿಂದ ಹೊರತೆಗೆಯುತ್ತದೆ.
ಪ್ರತಿ ಕೇಂದ್ರದಲ್ಲಿಯೂ ಒಂದು 230 ಅಡಿ, ಒಂದು 85 ಅಡಿ ಹಾಗೂ ಮೂರು 112 ಅಡಿ ವ್ಯಾಸದ ಅಂಟೆನಾಗಳಿವೆ. 1988 ರಲ್ಲಿ ವಾಯೇಜರ್ ನೌಕೆಗಳು ಯುರೇನಸ್ ಮತ್ತು ನೆಪ್ಚೂನು ಗ್ರಹಗಳನ್ನು ದಾಟಿ ಮುಂದೆ ಹೋದಾಗ ದುರ್ಬಲವಾಗುತ್ತ ಹೋದ ಅದರ ಸಂದೇಶಗಳನ್ನು ಆಲಿಸಲೆಂದು ಮೊದಲ ಅಂಟೆನಾದ ಅಗಲವನ್ನು 190 ರಿಂದ 230 ಅಡಿಗಳಿಗೆ ಹೆಚ್ಚಿಸಲಾಯಿತು. ವಾರದಲ್ಲಿ ಎಂಟು ತಾಸು ಇವುಗಳ ನಿರ್ವಹಣಾ ಕಾರ್ಯ ನಡೆಯುತ್ತದೆ. ಆಗ ದೈತ್ಯ ಆಕಾರದ ಇವು ಸರಿಯಾಗಿ ತಿರುಗುತ್ತಿವೆಯೆ, ಬುಡದಲ್ಲಿರುವ ಎಣ್ಣೆಹಾಸು ಆರಿದೆಯೆ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ.
ಈ ಜಾಲದಲ್ಲಿ ವಿಶೇಷವಾದ ಒಂದು ಟ್ರಾನ್ಸ್‍ಮೀಟರನ್ನು ಹೊತ್ತ ಅಂಟೆನಾ ರಾಡಾರ್ ಕಿರಣಗಳಿಗೆಂದೇ ಮೀಸಲಾಗಿದೆ. ಮಾನವ ನಿರ್ಮಿತ ಬಾನಕಸ, ಕ್ಷುದ್ರಗ್ರಹ ಅಥವಾ ಹೊಸಗ್ರಹ ಹೀಗೆ ಗೊತ್ತಿರದ ವಸ್ತುವೊಂದು ಈ ಕಿರಣಕ್ಕೆ ದೊರೆತರೆ, ಅದರಿಂದ ದೊರೆಯುವ ಮಾಹಿತಿ ಆ ವಸ್ತುವಿನ ಪತ್ತೆಗೆ ನೆರವಾಗುತ್ತದೆ.
ಅರ್ಥವತ್ತಾದ ಚಿತ್ರಗಳು
ದೂರಕ್ಕೆ ಹಾರುವ ನೌಕೆಗಳೆಲ್ಲವೂ ಈ ಬಾಹ್ಯಾಕಾಶ ಸಂಪರ್ಕ ಜಾಲದೊಂದಿಗೆ ಸದಾ ಸಂಪರ್ಕದಲ್ಲಿರುತ್ತವೆ. ನೌಕೆಗಳಲ್ಲಿನ ಕ್ಯಾಮೆರಾಗಳು ತೆಗೆದ ಚಿತ್ರಗಳೆಲ್ಲವೂ ಸಂಕೇತ ರೂಪದಲ್ಲಿ ಮೊದಲು ಬಂದು ತಲುಪುವುದು ಈ ಅಂಟೆನಾಗಳನ್ನು. ಈ ಮೂಲಕ ಸಂಗ್ರಹವಾದ ಚಿತ್ರಗಳ ಸಂಕೇತರೂಪಗಳೆಲ್ಲವೂ ಬಳಿಯ ಕೇಂದ್ರ ಸ್ಥಳವೊಂದರಲ್ಲಿ ಸಂಸ್ಕರಣೆಗೊಂಡಾದ ಮೇಲೆ ನಾಸಾದ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ (ಜೆಪಿಎಲ್) ಕೇಂದ್ರ ಕಛೇರಿಗೆ ಸಂಪರ್ಕ ಉಪಗ್ರಹಗಳು, ಟೆಲಿಫೋನುಗಳು ಹಾಗೂ ಜಲಾಂತರ್ಗಾಮಿ ಕೇಬಲ್ಲುಗಳ ಮೂಲಕ ತಲುಪುತ್ತವೆ. ಅಲ್ಲಿ, ಸಂಕೇತಗಳನ್ನು ಸಂಸ್ಕರಿಸಿ ಚಿತ್ರರೂಪಕ್ಕೆ ಬದಲಾಯಿಸಲಾಗುತ್ತದೆ. ಈ ಮಾಹಿತಿಗಳ ಕಂತೆಯನ್ನು ವಿಜ್ಞಾನಿಗಳು, ವಿಶ್ಲೇಷಕರಿಗೂ, ಆಯ್ದ ಕೆಲವು ಭಾಗಗಳನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೂ ದೀರ್ಘಾವಧಿಯ ಸಂಗ್ರಹಣೆಗೂ ಹಂಚಿ ಕಳುಹಿಸಲಾಗುತ್ತದೆ. ಮತ್ತೊಮ್ಮೆ ಅವುಗಳನ್ನು ಸಂಸ್ಕರಿಸಿ ಅರ್ಥವತ್ತಾದ ಚಿತ್ರಗಳನ್ನು ಮೂಡಿಸಿ ಎಲ್ಲರಿಗೆ ಹಂಚುವುದು ಜೆಪಿಎಲ್ ಡ್ಯೂಟಿ.
ಪ್ರತಿಯೊಂದು ಗಗನನೌಕೆಯಲ್ಲಿಯೂ ಅತ್ಯಾಧುನಿಕವಾದ ರೇಡಿಯೋ ಟ್ರಾನ್ಸ್‍ಮೀಟರ್ ಮತ್ತು ರಿಸಿವರುಗಳನ್ನು ಅಳವಡಿಸಿಡಲಾಗುತ್ತದೆ. ಡೀಪ್ ಸ್ಪೇಸಿನ ಅಂಟೆನಾಗಳು ಈ ನೌಕೆಗಳು ಕಳುಹುವ ಸಂದೇಶಗಳನ್ನಷ್ಟೇ ಅಲ್ಲ, ಸೂರ್ಯ ಮತ್ತಿತರ ತಾರೆಗಳು, ಅನಿಲ ಭರಿತವಾದ ಗ್ರಹಗಳು ಹೊರಸೂಸುವ ನೈಸರ್ಗಿಕವಾದ ವಿದ್ಯುತ್ಕಾಂತೀಯ ತರಂಗಗಳನ್ನೂ ಸಂಗ್ರಹಿಸುತ್ತವೆ. (ಇಂಥ ರೇಡಿಯೋ ಸಂಕೇತಗಳು ಶಬ್ದರೂಪದಲ್ಲಿರುತ್ತವೆ. ಅವುಗಳ ಅಧ್ಯಯನವು ‘ರೇಡಿಯೋ ಆಸ್ಟ್ರಾನಮಿ’ ಎಂಬ ಹೊಸ ಶಾಖೆಯನ್ನೇ ಹುಟ್ಟುಹಾಕಿದೆ.) ಭೂವಾತಾವರಣವನ್ನು ಪ್ರವೇಶಿಸ ಹೊರಟ ಧೂಮಕೇತು, ಕ್ಷುದ್ರಗ್ರಹಗಳೂ ಇವುಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳುವಂತಿಲ್ಲ.
ಈ ಅಂಟೆನಾಗಳು ಮಾನವರಹಿತ ಎಲ್ಲಾ ಗಗನನೌಕೆಗಳಿಗೆ ಆದೇಶಗಳನ್ನು ಕಳುಹಿಸುತ್ತವೆ, ಅವುಗಳ ತಂತ್ರಾಂಶಗಳನ್ನು ಬದಲಾಯಿಸುತ್ತವೆ, ನೌಕೆಯ ಪಥ ಮತ್ತು ವೇಗವನ್ನು ಲೆಕ್ಕ ಇಟ್ಟಿರುತ್ತವೆ, ನೌಕೆಗಳಲ್ಲಿ ನಡೆಯುವ ಪ್ರಯೋಗಗಳ ಮಾಹಿತಿ ಪಡೆಯುತ್ತವೆ, ಹಾಗೂ ಇನ್ನೂ ಹತ್ತು ಹಲವಾರು ಕಾರ್ಯಗಳನ್ನು ನಡೆಸುತ್ತಿರುತ್ತವೆ.
ತುರ್ತುಪರಿಸ್ಥಿತಿಯಲ್ಲಿ ದೊಡ್ಡದಾದ 230 ಅಡಿ ವ್ಯಾಸದ ಅಂಟೆನಾಗಳನ್ನು ಬಳಸಲಾಗುತ್ತದೆ. ಭೂಕೇಂದ್ರದಿಂದ ಸಂಪರ್ಕ ಕಡಿದುಕೊಂಡ ಬಾನನೌಕೆಯಿಂದ ಬರುವ ಒಂದೊಂದೂ ಮಾಹಿತಿ ತುಣುಕೂ ಸಹ ತುಂಬಾ ಮಹತ್ವದ್ದಾಗಿರುತ್ತದೆ. ಅಂಥ ಮಾಹಿತಿಗಳ ಆಧಾರದ ಮೇಲೆ ಇವು ಗಗನನೌಕೆಗಳನ್ನು ಉಳಿಸಿದ ಉದಾಹರಣೆಗಳಿವೆ. ಸೊಹೋ ಎಂಬ ಐರೋಪ್ಯ ಸಂಘಟನೆಯ ವೇಧಶಾಲೆ ಹಾಗೂ ಅಪೋಲೋ 13 ನೌಕೆಗಳನ್ನು ಉಳಿಸಿದ್ದೇ ಈ ದೊಡ್ಡ ಅಂಟೆನಾಗಳು. ಅಪೋಲೋ ನೌಕೆಯ ಬ್ಯಾಟರಿಯ ಶಕ್ತಿಗುಂದಿ ಭೂಸಂಪರ್ಕ ಕಡಿಯುವಂತಾದಾಗ ಆಸ್ಟ್ರೇಲಿಯಾದ ಡೀಪ್ ಸ್ಪೇಸ್‍ನ ದೈತ್ಯ ಅಂಟೆನಾದ ಮೂಲಕ ಗಗನಯಾತ್ರಿಗಳನ್ನು ಉಳಿಸಲು ಸಾಧ್ಯವಾಯಿತು. ಹಾಗೆಯೇ, ಒಂದು ಬಾನನೌಕೆಯ ಯಂತ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸದೆ ತೊಂದರೆಗೊಳಗಾಗಿದೆ ಎಂದಿಟ್ಟುಕೊಳ್ಳಿ, ಆಗ ನೌಕೆಯಿಂದ ಬರುವ ಸಂದೇಶಗಳು ಅತಿ ಕ್ಷೀಣವಾಗಿರಬಹುದು, ಅವುಗಳನ್ನು ಸಂಗ್ರಹಿಸುವ ಕಾರ್ಯ ಈ ದೊಡ್ಡ ಅಂಟೆನಾಗಳದ್ದು.
ಈ ಸಂಪರ್ಕಜಾಲವನ್ನು ಸ್ವತಂತ್ರವಾದ ಕಾರ್ಯಪಡೆಯೊಂದು ನಿರ್ವಹಿಸುತ್ತಿದೆ. ಮೂರೂ ಕೇಂದ್ರಗಳಲ್ಲಿ ಸಂಶೋಧನೆ, ಡಿಸೈನ್, ನಿರ್ವಹಣೆ ಇತ್ಯಾದಿ ಅದರ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಹಾಗಾಗಿ ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಡಿಎಸ್‍ಎನ್ ನ ಈ ಸಾಮಥ್ರ್ಯವೂ ಬಹಳೇ ಉತ್ತಮಗೊಂಡಿದೆ. ಡಿಶ್‍ಗಳ ಮೇಲ್ವಿಚಾರಕರು, ನಿರ್ವಹಣಾ ಸಿಬ್ಬಂದಿ, ಪ್ರತಿಯೊಂದು ನೌಕೆಗೆ ಸಂಬಂಧಿಸಿದ ಆವರ್ತತರಂಗಗಳ ನಿರ್ದೇಶಕರು, ತಂತ್ರಾಂಶ ಬರೆಯುವವರು ಹೀಗೆ ನೌಕೆಗೆ ಸಂಬಂಧಿಸಿದ ಒಂದು ಆದೇಶದ ಹಿಂದೆ ಕನಿಷ್ಠ 30-40 ಜನರು ಕಾರ್ಯನಿರ್ವಹಿಸುತ್ತಿದ್ದಾರೆ!
ಅಂದ ಹಾಗೆ ಭಾರತ, ಚೀನಾ, ಯುರೋಪು ಮತ್ತು ರಷ್ಯಾಗಳಿಗೆ ಅವರದ್ದೇ ಆದ ಬಾಹ್ಯಾಕಾಶ ಸಂಪರ್ಕಜಾಲ ಇವೆ. ಆದರೆ ಇವೆಲ್ಲವೂ ಗಾತ್ರ ಮತ್ತು ಸಾಮಥ್ರ್ಯದಲ್ಲಿ ಅಮೆರಿಕದ ಜಾಲಕ್ಕಿಂತ ಬಹಳೇ ಕಡಿಮೆಯವು. ಬೆಂಗಳೂರು ಸಮೀಪದ ಬ್ಯಾಲಾಲು ತಾಣದಲ್ಲಿ ನಮ್ಮ ಇಸ್ರೋ ನಿರ್ಮಿಸಿದ ಜಾಲಕೇಂದ್ರ ಇದೆ. ಚಂದ್ರಯಾನ 1 ನೌಕೆಯ ನಿರ್ವಹಣೆ ಬ್ಯಾಲಾಲು ಕೇಂದ್ರದಿಂದಲೇ ನಡೆದಿತ್ತು.
ಬಿಸಿಲು, ಗಾಳಿ, ಮಳೆಗಳಿಗೆ ಸದಾಕಾಲ ಸಿಲುಕುತ್ತಿರುವ ಈ ಅಂಟೆನಾಗಳೀಗ ಸಾಕಷ್ಟು ನಲುಗಿವೆ. ಹೊಸ ಅಂಟೆನಾಗಳನ್ನು ಹೂಡಬೇಕು, ಬಿಡಿಭಾಗಗಳನ್ನು ಬದಲಿಸಬೇಕು. ಮಾನವನ ಸಂಶೋಧನಾ ಚಟುವಟಿಕೆಗಳು ಹೆಚ್ಚಿದಂತೆ, ದಿನದಿಂದ ದಿನಕ್ಕೆ ಬಾಹ್ಯಾಕಾಶಕ್ಕೆ ಧಾವಿಸುತ್ತಿರುವ ಗಗನನೌಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ, ಅಂದರೆ ಈ ಅಂಟೆನಾಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇಂಥ ಅಂಟೆನಾಗಳ ಬದಲಾಗಿ ಹೊಸ ಉಪಕರಣಗಳ ಕುರಿತಾಗಿಯೂ ಸಂಶೋಧನೆಗಳು ನಡೆಯುತ್ತಿವೆ.
ಸೂರ್ಯಗೋಲದ ಆಚೆ ಇಣುಕುತ್ತಿರುವ ವಾಯೇಜರ್ ನೌಕೆಗಳು (ಗಂಟೆಗೆ 91 ಸಾವಿರ ಮೈಲು ವೇಗದಲ್ಲಿ ನಮ್ಮಿಂದ ದೂರ ಓಡುತ್ತಿರುವ ವಾಯೇಜರ್‍ನ ಸಂದೇಶಗಳು ಇಲ್ಲಿಗೆ ತಲುಪಲು 32 ಗಂಟೆಗಳು ಬೇಕು), ಕ್ಷುದ್ರಗ್ರಹಗಳ ಬೆನ್ನಟ್ಟಿ ಹೊರಟಿರುವ ಡಾನ್, ಶನಿಯನ್ನು ಗಸ್ತು ಹೊಡೆಯುತ್ತಿರುವ ಕ್ಯಾಸಿನಿ, ಮಂಗಳನ ಅಂಗಳದಲ್ಲಿ ಓಡಾಡುತ್ತಿರುವ ಸ್ಪಿರಿಟ್, ಅಪಾರ್ಚುನಿಟಿ ರೋವರ್‍ಗಳು, ಹತ್ತಾರು ವೇಧಶಾಲೆಗಳು ಇವೆಲ್ಲವೂ ಮಾನವ ಬಾಹ್ಯಾಕಾಶವನ್ನು ಬಗೆದು ನೋಡಲು ಮಾಡುತ್ತಿರುವ ಪ್ರಯತ್ನಗಳಷ್ಟೆ. ಬಾಹ್ಯಾಕಾಶ ಸಂಪರ್ಕ ಜಾಲದ ಸಮರ್ಥ ಕಾರ್ಯದಿಂದಾಗಿ ಇದು ಸಾಧ್ಯವಾಗಿದೆ, ಅಲ್ಲವೆ?
ಎಲ್ಲಿಂದ ಬಾಹ್ಯಾಕಾಶ (deepspace) ಆರಂಭ?
ಅಪೋಲೋ ಮಿಶನ್ ಕಾಲದಲ್ಲಿ ಬಾಹ್ಯಾಕಾಶವೆಂದರೆ ಭೂಮಿಯ ಹೊರಗಣ ಸುಮಾರು 20-30 ಸಾವಿರ ಕಿಮೀ ಆಚಿನ ಪ್ರದೇಶ ಎಂದು ಅಂದಾಜಿಸಲಾಗಿತ್ತು. ಆದರಿಂದು ದಾಪುಗಾಲಿನ ತಂತ್ರಜ್ಞಾನದಿಂದಾಗಿ ಮಾನವ ದೂರದೂರದವರೆಗೆ ಗ್ರಹಿಸಬಲ್ಲವನಾಗಿದ್ದಾನೆ, ಅಂತರಿಕ್ಷದ ಅಗಾಧತೆ ಆತನಿಗೆ ಪರಿಚಯವಾಗಿದೆ. ಭೂಮಿಯಿಂದ 20 ಲಕ್ಷ ಕಿಮೀ ಆಚಿನ ನಿರ್ವಾತ ಪ್ರದೇಶವನ್ನು ಬಾಹ್ಯಾಂತರಿಕ್ಷ ಎಂದು ಕರೆಯಲಾಗುತ್ತಿದೆ. ಹಾಗಾಗಿ ಮೂರು ಲಕ್ಷ ಕಿಮೀ ದೂರದ ಚಂದ್ರÀನಿರುವ ಪ್ರದೇಶ ನಮಗೆ ಬಾಹ್ಯಾಕಾಶ ಅಲ್ಲ!
ಬಾಹ್ಯಾಕಾಶ ಸಂಪರ್ಕ ಜಾಲದ ಹಿನ್ನೆಲೆ
ಅದು 1958, ಅಮೆರಿಕದ ಎಕ್ಸ್‍ಪ್ಲೋರರ್ ಉಪಗ್ರಹ ಬಾನಿಗೆ ಹಾರಿದ ವರ್ಷ. ಭೂಮಿಯನ್ನು ಗಸ್ತು ಹೊಡೆಯುವ ಈ ನೌಕೆಯ ಪಥನಿರೀಕ್ಷಣೆಗೆಂದು ಅಮೆರಿಕದ ಸೇನೆ ನೈಜೀರಿಯಾ, ಸಿಂಗಾಪೂರ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ದೂರದರ್ಶಕಗಳನ್ನು ಅಳವಡಿಸಿತ್ತು.
ಮುಂದೆ ಅಮೆರಿಕದ ಗಗನಯೋಜನೆಗಳೆಲ್ಲವೂ ನಾಸಾ ಸಂಸ್ಥೆಯ ಕೈಸೇರಿತು. ಮೊದಮೊದಲು ಪ್ರತಿ ಬಾಹ್ಯಾಕಾಶ ಯೋಜನೆಗೂ ಪ್ರತ್ಯೇಕ ಸಂಪರ್ಕ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗಿತ್ತು. ಅಂತರಿಕ್ಷದಿಂದ ಬರುವ ಸಂಕೇತಗಳೆಲ್ಲವನ್ನೂ ಒಂದೆಡೆ ಕಲೆಹಾಕುವ ಸಲುವಾಗಿ ಬಾಹ್ಯಾಕಾಶ ಸಂಪರ್ಕ ಜಾಲವನ್ನೇ ಹುಟ್ಟುಹಾಕಲಾಯಿತು. ಸಾಕಷ್ಟು ಸಂಶೋಧನೆಗಳ ನಂತರ ಮೇಲೆ ತಿಳಿಸಿದ ಮೂರು ಸ್ಥಳಗಳನ್ನು ಸೂಕ್ತವೆಂದು ಆಯ್ಕೆ ಮಾಡಲಾಯಿತು.
ಸರೋಜ ಪ್ರಕಾಶ್
ಗುಣಮಟ್ಟದ ಆಹಾರದಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ
ತಾಲ್ಲೂಕಿನ ದಿಬ್ಬೂರಹಳ್ಳಿ ಹತ್ತಿರದ ಬಚ್ಚನಹಳ್ಳಿ ಆಶ್ರಮ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಂದ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ ಎಂದು ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದ್ದಾರೆ.
ವಸತಿ ಶಾಲೆಯಲ್ಲಿ 125 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ನೀಡುತ್ತಿರುವ ಆಹಾರ ಗುಣಮಟ್ಟವಾಗಿಲ್ಲ. ಕೊಳೆತ ತರಕಾರಿಗಳಿಂದ ಆಹಾರ ತಯಾರಿಸಲಾಗುತ್ತಿದೆ. ಅಲ್ಪಮಟ್ಟದ ತರಕಾರಿ ಬಳಸಲಾಗುತ್ತಿದೆ. ವಾರಕ್ಕೆರಡು ಬಾರಿ ನೀಡಬೇಕಾದ ಕೋಳಿಮೊಟ್ಟೆ ಹಾಗೂ ಬಾಳೆಹಣ್ಣನ್ನು ವಾರಕ್ಕೊಮ್ಮೆ ಕೊಡಲಾಗುತ್ತಿದೆ. ಪ್ರತಿವಾರ ನೀಡಬೇಕಾದ ಮಾಂಸಾಹಾರ ಊಟವನ್ನು 40 ದಿನಗಳಾದರೂ ನೀಡಿಲ್ಲ. ಕುಡಿಯಲು ಫಿಲ್ಟರ್ ನೀರಿಲ್ಲದೆ ಒಂದು ವರ್ಷದಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಬೆಳಿಗ್ಗೆ ಮತ್ತು ಸಂಜೆ ನೀಡಬೇಕಾದ ಕಾಫಿ, ಟೀ ಅಥವಾ ಹಾಲು ಬಿಸ್ಕೆಟ್ ನೀಡುತ್ತಿಲ್ಲ. ಮೆನು ಚಾರ್ಟ್ ವಸತಿ ಶಾಲೆಯಲ್ಲಿ ಹಾಕಿಲ್ಲ. ಯಾವ ದಿನ ಯಾವ ತಿಂಡಿ, ಊಟ ಹಾಗೂ ಸೌಲತ್ತುಗಳ ಬಗ್ಗೆ ಮಾಹಿತಿ ಇಲ್ಲದಾಗಿದೆ. ವಾರ್ಡನ್ ಪ್ರತಿನಿತ್ಯ ವಸತಿನಿಲಯಕ್ಕೆ ಆಗಮಿಸದೆ ಎರಡು ದಿನಕ್ಕೊಮ್ಮೆ ಬರುತ್ತಾರೆ. ವಸತಿ ನಿಲಯದಲ್ಲಿ ಬಯೋಮೆಟ್ರಿಕ್ ಅಳವಡಿಸದೆ ಹಾಜರಾತಿ ಪುಸ್ತಕದಲ್ಲಿ ಇಷ್ಟಾನುಸಾರವಾಗಿ ದಾಖಲಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಕೂಡಲೇ ಸರಿಪಡಿಸದಿದ್ದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಭೂನೀಳಾ ಸಮೇತ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆ
ಶಿಡ್ಲಘಟ್ಟ ತಾಲ್ಲೂಕಿನ ಅಬ್ಲೂಡು ಗ್ರಾಮದ ಭೂನೀಳಾ ಸಮೇತ ಚನ್ನಕೇಶ್ವರಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಅಂಗವಾಗಿ ವಿಶೇಷ ಪೂಜೆಯನ್ನು ಆಯೋಜಿಸಲಾಗಿತ್ತು.
ನಾಲ್ಕು ಮರಿಗಳಿಗೆ ಜನ್ಮನೀಡಿದ ಕುರಿ
ಶಿಡ್ಲಘಟ್ಟ ತಾಲ್ಲೂಕಿನ ಎ.ಹುಣಸೇನಹಳ್ಳಿ ಗ್ರಾಮದ ರೈತ ಶ್ರೀನಿವಾಸ್ ಅವರ ಮನೆಯಲ್ಲಿ ಕುರಿಯೊಂದು ನಾಲ್ಕು ಮರಿಗಳಿಗೆ ಜನ್ಮನೀಡಿದೆ.
ಅಮೆರಿಕೆಯ ‘ನಾವಿಕ’ದಲ್ಲಿ ಮೊಳಗಿದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ
ಉತ್ತರ ಅಮೇರಿಕದ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಘಟನೆಯ 3ನೆಯ ದ್ವೈವಾರ್ಷಿಕ ಸಮ್ಮೇಳನ ನಾರ್ತ್ ಕೆರೊಲೈನ ರಾಜ್ಯದ ರಾಜಧಾನಿ ‘ರಾಲಿ’ಯಲ್ಲಿ ಸೆಪ್ಟೆಂಬರ್ 4,5,6ರಂದು ‘ವೈಭವ ವೈವಿಧ್ಯ ವಿನೂತನ’ ಎಂಬ ಆಶಯ ಇಟ್ಟುಕೊಂಡು ಜರುಗಿತು.
ಸುಮಾರು 1500ರಷ್ಟು ಸಂಖ್ಯೆಯಲ್ಲಿ ಕನ್ನಡಿಗರು ಸೇರಿದ್ದ ಈ ಸಮ್ಮೇಳನದಲ್ಲಿ ತಾಲ್ಲೂಕಿನ ಪಿಂಡಿಪಾಪನಹಳ್ಳಿಯ ನಾಡೋಜ ಮುನಿವೆಂಕಟಪ್ಪ ಮತ್ತು ತಂಡದವರ ತಮಟೆ ವಾದನ ವಿಶೇಷ ಆಕರ್ಷಣೆಯಾಗಿತ್ತು. ಮೂರು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲ ‘ರಾಲಿ ಕನ್ವೆನ್ಷನ್ ಸೆಂಟರ್’ನಲ್ಲಿ ನಡೆಯಿತು. ಪಿಂಡಿಪಾಪನಹಳ್ಳಿಯ ನಾಡೋಜ ಮುನಿವೆಂಕಟಪ್ಪ, ಪ್ರಸನ್ನಕುಮಾರ್, ಮಧು, ದೇವರಮಳ್ಳೂರು ಮುನಿಯಪ್ಪ, ಶ್ರೀನಿವಾಸಪುರ ವೆಂಕಟೇಶಪ್ಪ ನಮ್ಮ ದೇಸೀಯ ಸೊಗಡು ಮತ್ತು ಸೊಬಗನ್ನು ಆವಾಹಿಸಿಕೊಂಡಿರುವ ಗಂಡುಕಲೆ ತಮಟೆ ವಾದನವನ್ನು ಸಮ್ಮೇಳನದಲ್ಲಿ ಪ್ರತಿಧ್ವಿನಿಸಿ ಅನಿವಾಸಿ ಕನ್ನಡಿಗರನ್ನು ಕುಣಿಸಿದ್ದಾರೆ.
ಕರ್ನಾಟಕ ಸರ್ಕಾವು ಕಲಾವಿದರನ್ನು ಮತ್ತು ಸರ್ಕಾರದ ಪ್ರತಿನಿಧಿಯಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ. ಎಲ್. ಹನುಮಂತಪ್ಪ ಅವರೊಂದಿಗೆ ಕಳುಹಿಸುವಾಗ ಕೆಲ ಕಲಾವಿದರಿಗೆ ವಿಸಾ ದೊರಕಿಲ್ಲ. ಆಗ ಕಳೆದ ವರ್ಷವಷ್ಟೆ ಅಮೆರಿಕೆಯ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಆಶ್ರಯದಲ್ಲಿ ಸ್ಯಾನ್ಹೂಸೆ ನಗರದಲ್ಲಿ ನಡೆದ ಎಂಟನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರಿಗೆ ಈಗಾಗಲೇ ವೀಸಾ ಇರುವುದರಿಂದ ಅವಕಾಶ ದೊರಕಿದೆ.
ನಮ್ಮೂರಿನ ಜಾತ್ರೆ ಅಥವಾ ಮೇಳದ ವಾತಾವರಣವನ್ನು ರಾಲಿ ಸಭಾ ಕನ್ವೆನ್ಶನ್ ಸೆಂಟರ್ ಪ್ರಾಂಗಣದಲ್ಲಿ ನಿರ್ಮಿಸುವುದರಲ್ಲಿ ಪಿಂಡಿಪಾಪನಹಳ್ಳಿಯ ಮುನಿವೆಂಕಟಪ್ಪ ಮತ್ತು ತಂಡದವರು ಯಶಸ್ವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಇಂಥ ನೆಲ ಸಂಸ್ಕೃತಿಯ ಕಲೆಯನ್ನು ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದ. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಪ್ರಶಸ್ತಿಗಳ ಸರಮಾಲೆಯೇ ಇವರ ಕೊರಳನ್ನು ಅಲಂಕರಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕುಗ್ರಾಮ ಪಿಂಡಿಪಾಪನಹಳ್ಳಿಯಲ್ಲಿ ಜನಿಸಿದ ಇವರದು ಬಡಕುಟುಂಬ. ತಂದೆ ಪಾಪಣ್ಣ ತಾಯಿ ಮುನಿಗಂಗಮ್ಮ. ಬದಕಿನ ಆಸರೆಗಾಗಿ ತಂದೆಯಿಂದಲೇ ತಮಟೆ ವಾದನದ ಮೊದಲ ಪಾಠ. ನಾಲ್ಕನೇ ಕ್ಲಾಸಿಗೇನೆ ಕಲಿಕೆ ನಿಲ್ಲಿಸಿದ ಮುನಿವೆಂಕಟಪ್ಪ ‘ನಾಡೋಜ’ ಪ್ರಶಸ್ತಿಯವರೆಗೂ ಬೆಳೆದು ನಿಂತದ್ದು ಮಾತ್ರ ಅವರ ಏಕಲವ್ಯ ಸಾಧನೆಯ ಮಹಾನ್ ಯಾತ್ರೆ!
‘1992 ರಲ್ಲಿ ಜಪಾನ್ಗೆ ಸರ್ಕಾರ ಕಳುಹಿಸಿತ್ತು. ಕಳೆದ ವರ್ಷ ಅಮೆರಿಕೆಯ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಈ ಬಾರಿ ಕೆಲವರಿಗೆ ವೀಸಾ ಸಿಗದ ಕಾರಣ ಅಕಸ್ಮಾತ್ತಾಗಿ ನಮಗೆ ರಾಲಿ ಎಂಬ ಪಟ್ಟಣದಲ್ಲಿ ನಡೆದ ‘ನಾವಿಕ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ನಮ್ಮ ಕಲೆಗೆ ಜನರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮ ನಾದಕ್ಕೆ ಅಲ್ಲಿನವರು ಕುಣಿದು ಕುಪ್ಪಳಿಸಿದರು. ನಮ್ಮನ್ನು ಆತ್ಮೀಯವಾಗಿ ಉಪಚರಿಸಿದರು. ಕನ್ನಡದ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಶ್ರೀನಾಥ್, ಯಶ್, ರಾಧಿಕಾ ಪಂಡಿತ್, ಸಿಹಿಕಹಿ ಚಂದ್ರು ಮುಂತಾದವರು ಅಲ್ಲಿ ಸಿಕ್ಕಿದ್ದರು’ ಎಂದು ಅಮೆರಿಕೆಯ ಅನುಭವವನ್ನು 68 ವರ್ಷದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ತಿಳಿಸಿದರು.
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಖಡ್ಡಾಯ
ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಲು ಇಚ್ಚಿಸುವವರು ಖಡ್ಡಾಯವಾಗಿ ಪೊಲೀಸ್, ನಗರಸಭೆ ಹಾಗೂ ಬೆಸ್ಕಾಂ ಇಲಾಖೆಯ ಅನುಮತಿಯನ್ನು ಪಡೆಯಬೇಕೆಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜನೆ ಮಾಡಲಾಗಿದ್ದ ಶಾಂತಿಸಭೆಯಲ್ಲಿ ಅವರು ಮಾತನಾಡಿದರು.
ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಗಟ್ಟಲು ನಾಗರಿಕರು ಹೆಚ್ಚಿನ ಸಹಕಾರ ನೀಡಬೇಕು. ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವವರು ಪೊಲೀಸ್, ನಗರಸಭೆ ಹಾಗೂ ಬೆಸ್ಕಾಂ ಇಲಾಖೆಯ ಅನುಮತಿಯನ್ನು ಪೊಲೀಸ್ ಠಾಣೆಯಲ್ಲೇ ಪಡೆದುಕೊಳ್ಳಬಹುದು. ಅನುಮತಿಯನ್ನು ಪಡೆಯದೆ ಪ್ರತಿಷ್ಠಾಪನೆಗೆ ಮುಂದಾದರೆ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ಹಬ್ಬವನ್ನು ಆಚರಿಸಬೇಕು ಎಂದು ನುಡಿದರು.
ಹನುಮಂತಪುರ ಗೇಟ್ ಬಳಿಯ ಕುಂಟೆಯನ್ನು ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಗುರುತಿಸಲಾಗಿದ್ದು, ಅಡೆತಡೆಗಳನ್ನು ನಿರ್ಮಿಸಲಾಗಿದೆ. ನಗರ ಹಾಗೂ ಹತ್ತಿರದ ಗ್ರಾಮಗಳ ಗಣೇಶ ಮೂರ್ತಿಗಳನ್ನು ಇಲ್ಲಿ ವಿಸರ್ಜನೆ ಮಾಡಿ. ಪರಿಸರ ಸ್ನೇಹಿ ಮಣ್ಣಿನ ಗಣಪನ ಮೂರ್ತಿಗಳನ್ನೇ ಬಳಸಿ. ಕೆಲವು ಹಳ್ಳಿಗಳಲ್ಲಿನ ನಾಗರಿಕರು ಒಂದು ಕಡೆ ಅನುಮತಿಯನ್ನು ಪಡೆದು ಕಾನೂನು ಬಾಹಿರವಾಗಿ ಮನಬಂದಂತೆ ಪ್ರತಿಷ್ಠಾಪನೆಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದ್ದು, ಅಂತಹವರ ಮೇಲೆಯೂ ಕ್ರಮ ಕೈಗೊಂಡು ಕೇಸು ದಾಖಲಿಸಲಾಗುತ್ತದೆ ಎಂದು ಹೇಳಿದರು.
ಪ್ರತಿಷ್ಠಾಪನೆಯ ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋದರೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ಸಂಜೆ ೬ ಗಂಟೆಯ ಒಳಗೆ ವಿಸರ್ಜನೆ ಮಾಡಬೇಕು. ರಾತ್ರಿಯಲ್ಲಿ ಹತ್ತು ಗಂಟೆಯ ನಂತರ ಧ್ವನಿವರ್ದಕಗಳನ್ನು ಬಳಕೆ ಮಾಡುವಂತಿಲ್ಲ. ಮೆರಣಿಗೆಯ ಸಮಯದಲ್ಲಿ ವಿನಾಕಾರಣ ಪಟಾಕಿಗಳನ್ನು ಸಿಡಿಸುವಂತಿಲ್ಲ. ವಿಸರ್ಜನೆಯ ವೇಳೆಯಲ್ಲಿ ನುರಿತ ಈಜುಪಟುಗಳನ್ನು ಜೊತೆಯಲ್ಲಿ ಇಟ್ಟುಕೊಂಡಿರಬೇಕು. ಗಣಪತಿಯ ಮೂರ್ತಿಗಳನ್ನು ವಿಸರ್ಜನೆ ಮಾಡುವ ಮುನ್ನಾ ನೀರಿನ ಆಳದ ಬಗ್ಗೆ ಗಮನಹರಿಸಬೇಕು. ಮೆರವಣಿಗೆಯಲ್ಲಿ ಪೊಲೀಸರೊಂದಿಗೆ ಸಹಕಾರ ನೀಡಬೇಕು ಎಂದರು.
ಬೆಸ್ಕಾಂ ಇಲಾಖೆಯ ಸಹಾಯಕ ಇಂಜಿನಿಯರ್ ಅನ್ಸರ್ಪಾಷಾ ಮಾತನಾಡಿ, ವಿದ್ಯುತ್ ಸಮಸ್ಯೆ ಕಾಡುತ್ತಿರುವುದರಿಂದ ಶಿಡ್ಲಘಟ್ಟ ತಾಲ್ಲೂಕಿಗೆ ಲಭ್ಯವಾಗುತ್ತಿರುವ ಕೇವಲ ೧೫ ಮೆ.ವ್ಯಾ. ವಿದ್ಯುತ್ತಿನಿಂದಾಗಿ ಈ ಬಾರಿಯ ಗಣೇಶನ ಹಬ್ಬಕ್ಕೆ ವಿದ್ಯುತ್ ಪೂರೈಕೆ ಅಸಾಧ್ಯವಾಗಿರುವುದರಿಂದ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವವರು, ಜನರೇಟರ್ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ನೀಡುವುದಿಲ್ಲ, ಒಂದು ವೇಳೆ ವಿದ್ಯುತ್ ತಂತಿಗಳಿಂದ ಅಕ್ರಮವಾಗಿ ಸಂಪರ್ಕ ಪಡೆದುಕೊಂಡರೆ, ಜಾಗೃತದಳದ ತಂಡ ಸಂಚಾರ ಮಾಡುತ್ತಿರುವುದರಿಂದ ಅಂತಹವರ ಮೇಲೆ ಕೇಸು ದಾಖಲಿಸಲಾಗುತ್ತದೆ. ಒಂದು ವೇಳೆ ಮೀಟರ್ಗಳಿಂದ ಸಂಪರ್ಕ ಪಡೆದುಕೊಂಡರೆ, ಸಾಮರ್ಥ್ಯ ಮೀರಿ ವಿದ್ಯುತ್ ದೀಪಗಳನ್ನು ಅಳವಡಿಸಬಾರದು ಎಂದು ಹೇಳಿದರು.
ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಜಯ್, ಗ್ರಾಮಾಂತರ ಠಾಣೆಯ ಪಿ.ಎಸ್.ಐ ಪ್ರದೀಪ್ಪೂಜಾರಿ, ಬೆಸ್ಕಾಂ ಇಲಾಖೆಯ ಎಇಇ ಪರಮೇಶಪ್ಪ, ನಗರಸಭೆಯ ಆರೋಗ್ಯ ಇಲಾಖೆಯ ಬಾಲಚಂದ್ರ, ಎಂಜಿನಿಯರ್ ಪ್ರಸಾದ್, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಗ್ರಾಮಗಳು ಹಾಗೂ ನಗರದ ನಾಗರಿಕರು ಈ ಸಂದರ್ಭದಲ್ಲಿ ಹಾಜರಿದ್ದರು.
ರೈತರ ಬೆಳೆಗಳಿಗೆ ಸೂಕ್ತವಾದ ಬೆಲೆಗಳನ್ನು ನೀಡಬೇಕು
ಸರ್ಕಾರದಿಂದ ಸಿಗುವಂತಹ ಅಲ್ಪಪ್ರಮಾಣ ಸಬ್ಸಿಡಿಗಳಿಗಾಗಿ ಇಲಾಖೆಗಳ ಮುಂದೆ ಸಾಲುಗಟ್ಟಿ ದಿನಗಟ್ಟಲೇ ನಿಲ್ಲುತ್ತಿರುವ ರೈತರಿಗೆ ಸಬ್ಸಿಡಿಗಳ ಬದಲಾಗಿ ನಾವು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಲೆಗಳನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಿ.ಮುನೇಗೌಡ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ಆಯೋಜನೆ ಮಾಡಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅನುದಾನಗಳು ತಲುಪದಿದ್ದರೆ, ಅಥವಾ ಅವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ, ನೇರವಾಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಮೇಲೆ ಕ್ರಮಜರುಗಿಸಲಾಗುತ್ತದೆ. ವಿದ್ಯಾರ್ಥಿ ನಿಲಯಗಳಲ್ಲಿ ವಾರ್ಡನ್ಗಳು ವಾಸ್ತವ್ಯ ಹೂಡುತ್ತಿಲ್ಲ. ಬಡವರ ಮಕ್ಕಳು ತಂಗುವಂತಹ ನಿಲಯಗಳು ಅವ್ಯವಸ್ಥೆಗಳ ಆಗರವಾಗುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು, ಗಮನಹರಿಸುವಂತೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಬಿ.ಸಿ.ಎಂ.ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಲು ತಲಾ ೧೦ ಲಕ್ಷದಂತೆ ಐದು ಕಡೆಗಳಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಹಣ ಮಂಜೂರಾಗಿದೆ, ದಿಬ್ಬೂರಹಳ್ಳಿ, ನಿಲುವರಾತಹಳ್ಳಿ, ಜೆ.ವೆಂಕಟಾಪುರ, ಆನೂರು, ಮತ್ತು ಶಿಡ್ಲಘಟ್ಟ ನಗರಕ್ಕೆ ಮಂಜೂರಾಗಿದೆ. ಜೆ.ವೆಂಕಟಾಪುರ ಹಾಗೂ ನಿಲುವರಾತಹಳ್ಳಿ ಎರಡು ಕಡೆಗಳಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಉಳಿದ ಕಡೆಗಳಲ್ಲಿ ಪ್ರಾರಂಭವಾಗಬೇಕು, ನಗರದಲ್ಲಿ ನಿವೇಶನ ಮಂಜೂರಾಗಬೇಕು ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಿಬ್ಬಂದಿ ಸ್ವಚ್ಚತೆಯನ್ನು ಕಾಪಾಡಬೇಕು. ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡಬೇಕು. ಗರ್ಬಿಣಿ ಸ್ತ್ರೀಯರು ಹೆರಿಗೆ ಮಾಡಿಸಿಕೊಳ್ಳಲು ಬಂದಾಗ ಅವರಿಂದ ೨ ರಿಂದ ೩ ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿದೆ. ವಿನಾಕಾರಣ ಶಸ್ತ್ರಚಿಕಿತ್ಸೆ ಮಾಡುವುದು. ಬೇರೆ ಆಸ್ಪತ್ರೆಗಳಿಗೆ ಕಳುಹಿಸಿಕೊಡುವುದನ್ನು ತಡೆಗಟ್ಟಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಲು ಕ್ರಮ ತೆಗೆದುಕೊಳ್ಳಿ, ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ಆಶಾ ಕಾರ್ಯಕರ್ತೆಯರಿದ್ದು, ಅವರ ಮೂಲಕ ಸ್ಥಳೀಯ ಜನಪ್ರತಿನಿಧಿಗಳ ಸಹಕಾರವನ್ನು ಪಡೆದುಕೊಂಡು ಡೆಂಗ್ಯೂ ಮುಂತಾದ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಪ್ರತಿಯೊಂದು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿರುವ ಉಪಯೋಗವಿಲ್ಲದ ಗೋಬರ್ಗ್ಯಾಸ್ ಘಟಕಗಳನ್ನು ಮುಚ್ಚಲು ಕ್ರಮ ತೆಗೆದುಕೊಳ್ಳಿ ಎಂದರು.
ಜಿ.ಪಂ.ಸದಸ್ಯ ಎಸ್.ಎಂ.ನಾರಾಯಣಸ್ವಾಮಿ ಮಾತನಾಡಿ ಹಿಪ್ಪುನೇರಳೆ ತೋಟಗಳನ್ನು ನೀರಿನ ಅಭಾವದಿಂದ ಕಿತ್ತುಹಾಕುವ ಬದಲಿಗೆ ನೂತನ ಬಗೆಯ ಮಾದರಿಯನ್ನು ಬಳಕೆ ಮಾಡಿಕೊಂಡು ಗುಂಡಿಪದ್ದತಿಯಲ್ಲಿ ಬೆಳೆಯುವುದರಿಂದ ಹೆಚ್ಚು ನೀರು ಅಗತ್ಯವಿರುವುದಿಲ್ಲ, ಎಂದು ಸಲಹೆ ನೀಡಿದರು.
ಕುಡಿಯುವ ನೀರು, ಬೆಸ್ಕಾಂ ಇಲಾಖೆ, ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿಯನ್ನು ನೀಡಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ರಾಧಮ್ಮ, ಸದಸ್ಯರಾದ ಶಿವಲೀಲಾರಾಜಣ್ಣ, ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಾನುಜಯ್ಯ, ಕುಡಿಯುವ ನೀರು ವಿಭಾಗದ ಎಇಇ ಗಣಪತಿ ಸಾಕರೆ, ಶಿವಾನಂದ, ಬಿ.ಇ.ಓ ರಘುನಾಥರೆಡ್ಡಿ ಮುಂತಾದವರು ಸಭೆಯಲ್ಲಿ ಹಾಜರಿದ್ದರು.
ಬೀಳ್ಕೊಡುಗೆ ಸಮಾರಂಭ
ತಾಲ್ಲೂಕಿನ ಮೇಲೂರು ಗ್ರಾಮದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಸುಮಾರು 12 ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದ ಡಾ. ಉಷಾವಾಣಿಶ್ರೀ ಅವರಿಗೆ ಸೇವಾ ಜ್ಞಾಪಕಾರ್ತವಾಗಿ ಮೇಲೂರು ಗ್ರಾಮಪಂಚಾಯತಿ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದರು.
ಸನ್ಮಾನವನ್ನು ಸ್ವೀಕರಿಸಿದ ಡಾ. ಉಷಾವಾಣಿಶ್ರೀ ಅವರು ಮಾತನಾಡಿ,‘ಸಾರ್ವಜನಿಕರ ಸೇವೆಮಾಡಲು ಮೇಲೂರಿನಲ್ಲಿ ಬಹಳಷ್ಟು ಸಹಕಾರ ಕೊಡುತ್ತಾರೆ. 12 ವರ್ಷಗಳ ಸುದೀರ್ಘ ಸೇವೆ ನನಗೆ ತೃಪ್ತಿನೀಡಿದೆ’ ಎಂದರು.
ಗ್ರಾಮಪಂಚಾಯತಿ ಅಧ್ಯಕ್ಷೆ ಜಮುನಾ ಧರ್ಮೇಂದ್ರ, ಸದಸ್ಯರಾದ ಕೆ.ಮಂಜುನಾಥ್, ಆರ್. ಎ. ಉಮೇಶ್, ಎಚ್.ಎನ್.ರೂಪೇಶ್, ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಸುದರ್ಶನ್, ಸುರೇಶ್, ಸುಧೀರ್, ಆಶಾಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸಾವಯವ ಗೊಬ್ಬರಗಳ ಉತ್ಪಾದನೆ ಮಾಡಿ ಬಳಸಿ
ಮಣ್ಣು ಪರೀಕ್ಷೆ ಆಧಾರದ ಮೇಲೆ ನೇರ ರಸಗೊಬ್ಬರಗಳ ಬಳಕೆ, ಹುಳು ಸಾಕಾಣಿಕ ಅವದಿಯಲ್ಲಿ ರೆಂಬೆ ಪದ್ಧತಿಯಲ್ಲಿ ಲಭ್ಯವಾಗುವ ಹಾಸಿಗೆ ತ್ಯಾಜ್ಯ ವಸ್ತುಗಳು ಮತ್ತು ತೋಟದಲ್ಲಿ ಉಳಿದಂತಹ ಹಿಪ್ಪುನೇರಳೆ ಕಡ್ಡಿಗಳಿಂದ ಉತ್ಕೃಷ್ಟ ಸಾವಯವ ಗೊಬ್ಬರಗಳ ಉತ್ಪಾದನೆಗೆ ಮಹತ್ವ ನೀಡುವಂತೆ ಪ್ರಾಧ್ಯಾಪಕ ಚಂದ್ರಶೇಖರ್ ಕಳ್ಳಿಮನಿ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಗ್ರಾಮದಲ್ಲಿ ರೇಷ್ಮೆ ಕೃಷಿ ಮಹಾವಿದ್ಯಾಲಯದ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗ್ರಾಮದ ರೈತರಿಗೆ ರೇಷ್ಮೆ ಕೃಷಿಯಲ್ಲಿ ದೊರೆಯುವ ಉಪ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಬಯೋಡೈಜೆಸ್ಟರ್ ಬಗ್ಗೆ, ರಸಮೇವು ಗೊಬ್ಬರ ತಯಾರಿಕೆಯ ಬಗ್ಗೆ ಹಾಗೂ ಅವುಗಳ ಉಪಯುಕ್ತತೆಗಳ ಕುರಿತಂತೆ ವಿದ್ಯಾರ್ಥಿಗಳಾದ ಉಮಾಮಹೇಶ್ವರಿ, ವೀಣಾ, ಸ್ವಾತಿ, ಮನೋಜ್ ಮತ್ತಿತರರು ವಿವರಿಸಿದರು.
ಹಿಪ್ಪುನೇರಳೆ ಸೊಪ್ಪನ್ನು ಬಳಸಿ ಬೋಂಡಾ, ಟೀ, ಹಪ್ಪಳ ತಯಾರಿಸಬಹುದು. ಹಿಪ್ಪುನೇರಳೆ ಸೊಪ್ಪಿನಲ್ಲಿ ವಿಟಮಿನ್ ಸಿ ಇರುವ ಕಾರಣ ಆರೋಗ್ಯಕ್ಕೆ ಮತ್ತು ಮಧುಮೇಹಿಗಳಿಗೆ ಉಪಯುಕ್ತ ಎಂದು ಹೇಳಿದರು. ಪ್ರಾಧ್ಯಾಪಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.
ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಬೌದ್ಧಿಕ ವಿಕಸನ
ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಿಂದ ಮಕ್ಕಳ ಬೌದ್ಧಿಕ ವಿಕಸನವಾಗುತ್ತಿದ್ದು ಈ ನಿಟ್ಟಿನಲ್ಲಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಪಲಿಚೇರ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ವಿಚಾರಗಳನ್ನು ಹೊರತು ಪಡಿಸಿ ಕೂಡ ವಿದ್ಯಾರ್ಥಿಗಳಲ್ಲಿ ಸಾಕಷ್ಟು ಇತರೆ ಪ್ರತಿಭೆ ಅಡಗಿರುತ್ತದೆ. ಅಂಕಗಳ ಕಡಿಮೆ ಬಂದಾಗ ಪೋಷಕರು ಮಕ್ಕಳನ್ನು ದಂಡಿಸುತ್ತಾರೆ, ಇದು ಸರಿಯಲ್ಲ. ಮಕ್ಕಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ, ಪ್ರತಿಭಾ ಕಾರಂಜಿಯಂತಹ ವೇದಿಕೆಯಲ್ಲಿ ಪ್ರದರ್ಶಿಸಲು ಪೋಷಕರು ಸಹಕರಿಸಬೇಕು ಮತ್ತು ಗ್ರಾಮೀಣ ಭಾಗದ ಶಿಕ್ಷಕರು ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಬೆಳಕಿಗೆ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ವಿವಿಧ ವೇಷಭೂಷಣಗಳೊಂದಿಗೆ, ಹಲವಾರು ಗೀತ ಗಾಯನಗಳೊಂದಿಗೆ, ಜಾನಪದ ನೃತ್ಯ ರೂಪಕಗಳೊಂದಿಗೆ ಹಬ್ಬದ ವಾತವರಣವನ್ನು ಸ್ವಲ್ಪ ಸಮಯ ಸೃಷ್ಟಿಸಿದರು.
ಶಾಲಾ ಮುಖ್ಯ ಶಿಕ್ಷಕಿ ವಿ.ಪದ್ಮಾ, ಸಿ.ಆರ್.ಪಿ. ಚೌಡರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ದ್ಯಾವಪ್ಪ, ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಿ, ಉಪಾಧ್ಯಕ್ಷೆ ಮಮತಾ, ಸೋಮಶೇಖರ್ರೆಡ್ಡಿ, ಟಿ.ಎಂ.ದೇವರಾಜ್, ರಾಮಚಂದ್ರ, ಲಕ್ಷ್ಮೀದೇವಮ್ಮ, ಉಲ್ಲಾಸಮ್ಮ, ಭಾಗ್ಯಮ್ಮ, ಬಸವರಾಜು, ನವೀನ್, ಶಿಕ್ಷಕರಾದ ರವಿ, ಬಾಬು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಅಧಿಕಾರಿಗಳ ನಿರ್ಲಕ್ಷ್ಯ, ತುಂಬಿದ ಕಸ
ನಗರದ ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಿಬ್ಬಂದಿಯ ಬೇಜಾವಾಬ್ದಾರಿಯಿಂದಾಗಿ ಕಸವನ್ನು ತೆಗೆಯದೆ ಸ್ಥಳೀಯ ನಾಗರಿಕರು ಹಲವಾರು ರೋಗರುಜಿನಗಳಿಂದ ಬಳಲುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಗರದ ಅಶೋಕರಸ್ತೆಯಲ್ಲಿರುವ ಹೂವಿನ ಸರ್ಕಲ್ನ ಬಳಿಯಲ್ಲಿ ಹೋಟೆಲೊಂದರ ಹಿಂಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ರಾಶಿಯಾಗಿ ಬಿದ್ದಿರುವ ಕಸವನ್ನು ವಿಲೇವಾರಿ ಮಾಡದೆ ಇರುವ ಕಾರಣದಿಂದಾಗಿ ಸುತ್ತಮುತ್ತಲಿನ ಪ್ರದೇಶದಲ್ಲಿ ದುರ್ನಾತ ಬೀರುತ್ತಿದೆ. ಅಶೋಕ ರಸ್ತೆಯ ಹೂ ಸರ್ಕಲ್ನಲ್ಲಿ ಸಾಮೂಹಿಕ ಶೌಚಾಲಯಗಳು ಇಲ್ಲದ ಕಾರಣದಿಂದಾಗಿ ಸ್ಥಳೀಯ ನಾಗರೀಕರು ಕೂಡಾ ಕಸವನ್ನು ಹಾಕಿರುವ ಜಾಗದಲ್ಲಿ ಮಲಮೂತ್ರ ವಿಸರ್ಜನೆಗಳನ್ನು ಮಾಡುತ್ತಿರುವುದರಿಂದಲೂ ಪರಿಸರ ಹಾಳಾಗುತ್ತಿದ್ದು, ಸಂಜೆಯಾದರೆ, ಸೊಳ್ಳೆಗಳ ಕಾಟ ಹೆಚ್ಚಾಗಿದೆ, ಇಲ್ಲಿನ ನಿವಾಸಿಗಳು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಪೊಲೀಸ್ ಠಾಣೆಯ ಸಮೀಪವಿರುವ ನಗರಸಭೆಯ ಖಾಲಿ ಸ್ಥಳದಲ್ಲೂ ಕಸ, ತ್ಯಾಜ್ಯ ತುಂಬಿದ್ದು, ಕಳೆದೆರಡು ದಿನಗಳಲ್ಲಿ ಬಿದ್ದ ಮಳೆಯಿಂದಾಗಿ ತ್ಯಾಜ್ಯವೆಲ್ಲಾ ಕೊಳೆತು ಕೆಟ್ಟ ವಾಸನೆ ಬೀರುತ್ತಿದೆ. ಈ ಬಗ್ಗೆ ನಗರಸಭೆಯ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ದೂರಿದ್ದಾರೆ.
ಆ ಜೀವಗಳು ಉಳಿಸಿದ ನೆನಪು..
ವಾನಳ್ಳಿ ಶಿರಸಿಯಿಂದ 20 ಕಿಮೀ ದೂರದ ಊರು. ನನ್ನಜ್ಜ ಅಲ್ಲಿಯ ಡಾಕ್ಟರು. ಸುಮಾರು ವರ್ಷಗಳಿಂದ, ಈತನೊಬ್ಬನೇ ವಾನಳ್ಳಿಯ ಆಸ್ಪತೆಯ ನಡೆಸುತ್ತಿರುವವನು. ಹಾಗಾಗಿ ಹತ್ತಿರದ ಹಳ್ಳಿಯವರು ರಸ್ತೆಯ ಅಪಘಾತ.. ಏನೇ ಆದರೂ ಓಡಿ ಬರುತ್ತಿದ್ದುದು ಅಜ್ಜನ ಆಸ್ಪತ್ರೆಗೆ. ಮೊಮ್ಮಕ್ಕಳಾದ ನಮಗೆ ವಾನಳ್ಳಿಗೆ ಹೋದಾಗ ಅಲ್ಲಿಯ ಮೊದಲ ಆಕರ್ಷಣೆ ಎಂದರೆ ಮನೆಯೊಳಗೇ ಇದ್ದ ಅಜ್ಜನ ಆಸ್ಪತ್ರೆ. ಹೊತ್ತಿಲ್ಲದ ಹೊತ್ತಿಗೂ “ಅರಾಮಿಲ್ಲ ಡಾಕ್ಟರ್ರೆ’ ಎಂದು ಓಡಿ ಬರುತ್ತಿದ್ದ ಜನರನ್ನು ನೋಡುತ್ತಾ, ಯಾರೂ ಇಲ್ಲದಿರುವಾಗ ಅಜ್ಜನ ಪಾತ್ರ ನಾವು ಮಾಡುತ್ತಾ, ಆಟವಾಡುತ್ತಿರುತ್ತಿದ್ದೆವು! ಬಂದವರಿಗೆ ಅಜ್ಜ ಯಾವ ಬಣ್ಣದ ಮಾತೆಗಳನ್ನು ಕೊಡುತ್ತಾನೆ, ಕೆಲವರಿಗೆ ಇಂಜೆಕ್ಷನ್ ಕೊಟ್ಟಾಗ ಅವರು ಹೇಗೆ ಕೂಗಿಕೊಳ್ಳುತ್ತಾರೆ ಎಂಬುದನ್ನು ಗಮನಿಸುತ್ತಾ, ಕೆಲವೊಮ್ಮೆ ಮರುಗುತ್ತಾ, ಇನ್ನೊಮ್ಮೆ ನಗುತ್ತಾ..”ಅಜ್ಜ ಅವರಿಗೆ ಇಂಜೆಕ್ಷನ್ ನೀಡುವಾಗ ಏಕೆ ನೋವು ಮಾಡಿದೆ” ಎಂದು ಆತನಿಗೊಂದು ಪೆಟ್ಟು ಕೊಡುತ್ತಾ ಇರುತ್ತಿದ್ದೆವು. ಇನ್ನು ಹೇಳ ಬೇಕಾದ ಸಂಗತಿ ಎಂದರೆ..ಹುಷಾರಿಲ್ಲ ಎಂದು ಬಂದವೆರೂ ಅಜ್ಜನೊಟ್ಟಿಗಿರುತ್ತಿದ್ದ ನಮ್ಮನ್ನು ..”ಅರೇ ಡಾಕ್ಟ್ರ ಮೊಮ್ಮಕ್ಕಳು” ಎಂದು ನಮ್ಮನ್ನು ಬೆರಗು ಗಣ್ಣಿನಿಂದ ನೋಡುತ್ತಾ ನಿಂತಿದ್ದರೆ..ಆ ಕ್ಷಣಕ್ಕೆ ನಾವು ಸಂತೋಷದಿಂದ ಬೀಗುತ್ತಿದ್ದ ರೀತಿಯನ್ನು ಈಗಲೂ ಹೇಳಲಾಗಲಿಕ್ಕಿಲ್ಲ ನಮಗೆ.
ಹೀಗೊಮ್ಮೆ ಒಂದು ಘಟನೆ ನಡೆಯಿತು. ರಜೆಗಾಗಿ ವಾನಳ್ಳಿಗೆ ಶಿರಸಿಯ ಬಸ್ಸಿನಲ್ಲಿ ಹೊರಟಿದ್ದೆವು. ದಾರಿ ಮಧೈ ಹಲವು ಜನ ಸೇರಿರುವುದನ್ನು ಕಂಡೆವು. ಲಾರಿ-ಬಸ್ಸು ಡಿಕ್ಕಿ ಹೊಡೆದಿದೆಯಂತೆ ..ಎಂದು ನಾವು ಏನಾಯಿತು ಎಂದು ಪ್ರಶ್ನಿಸುವ ಮುನ್ನ ಆ ಸುದ್ದಿ ಬಸ್ಸಿನಲ್ಲಿ ಹರಡಿತ್ತು. ವಾನಳ್ಳಿಗೆ ತಲುಪುವ ಹೊತ್ತಿಗೆ ಆ ಸುದ್ದಿ ಅಜ್ಜನಿಗೂ ತಲುಪಿತ್ತು. ಇನ್ನೇನು ಆತ ಅಪಘಾತ ಅದ ಸ್ಥಳಕ್ಕೆ ಹೊರಡಬೇಕು ಎನ್ನುವ ಹೊತ್ತಿಗೆ ಮನೆಯ ಫೋನ್ ರಿಂಗಾಯಿತು. “ಬೈಕ್‍ನ ಸವಾರನಿಗೆ ಬಹಳ ಪೆಟ್ಟಾಗಿದೆ, ನಮ್ಮ ಕಾರಿನಲ್ಲಿ ಆಸ್ಪತ್ರೆಗೆ ಆತನನ್ನು ಕರೆತರುತ್ತೇವೆ ದಯವಿಟ್ಟು ಏನಾದರು ಮಾಡಿ” ಎಂದರು. ಅಜ್ಜ ಸರಿ ಬನ್ನಿ ಎಂದು ಫೋನಿಟ್ಟರು. ಅಂದು ಬೆಳಿಗ್ಗೆಯಷ್ಟೆ ಮನೆ ತಲುಪಿದ್ದ ನಾವು ಸ್ವಲ್ಪ ಸುಧಾರಿಸಿ ಕೊಳ್ಳುವ ಹೊತ್ತಿಗೆ..ಮನೆಯೆದುರು ಕಾರು ಬಂದು ನಿಂತಿತು. ಅಜ್ಜ ಬೇಕಾದುದ್ದನೆಲ್ಲ ತಯಾರಿಸಿಟ್ಟುಕೊಂಡಿದ್ದ. ಪ್ರಜ್ಞೆ ತಪ್ಪಿ ಬಿದ್ದಿದ್ದ ಆತನನ್ನು ಒಳ ಎತ್ತಿ ತಂದು ಮಲಗಿಸಿದರು. ಇದನ್ನೆಲ್ಲ ನಿಂತು ನೋಡುತ್ತಿದ್ದ ನನ್ನನ್ನು ಅಜ್ಜ ಗಮನಿಸಿ..”ನೀ ಒಳಗೆ ಹೋಗು ಪುಟ್ಟಿ” ಎಂದ. ನನಗೆ ಒಳ ಹೋಗಲು ಮನಸ್ಸಾಗಲಿಲ್ಲ. ಅಲ್ಲಿಯೇ ನಿಂತರೆ ಬಯ್ಯುತ್ತಾರೇನೊ ಎಂಬ ಕಾರಣಕ್ಕೆ, ಅಲ್ಲಿದ್ದರೂ ಕಾಣದ ಹಾಗೆ ಹಿಂದೆಯೇ ಇದ್ದ ಪರದೆÀಯ ಸರಿಸಿ ನಿಂತೆ. ಅಂದು ಅಜ್ಜ ಆತನನ್ನು ಬದುಕಿಸಲು ನಾನಾ ರೀತಿಯ ಚಿಕಿತ್ಸೆಯನ್ನು ನೀಡಿದ್ದರು. ಸುಮಾರು 2 ಘಂಟೆಗಳ ಕಾಲ ಎಲ್ಲರೂ ಕಾದರು. ಏನೂ ಪ್ರಯೋಜನವಾಗಲಿಲ್ಲ. ನಿಂತು ನೋಡುತ್ತಿದ್ದಂತೆ ಆತನ ಪ್ರಾಣ ಪಕ್ಷಿ ನಮ್ಮ ಭೇದಿಸಿ ಹಾರಿ ಹೋಗಿತ್ತು. ಅಜ್ಜ ಶಾಂತ ಭಾವದಿಂದ..”ಬದುಕುಳಿಯುವುದಿಲ್ಲ.” ಎಂದು ಹೇಳಿದ್ದ ಸುದ್ದಿ ಇನ್ನೂ ನನ್ನ ಕಿವಿಯಲ್ಲಿದೆ!. ಆ ಕ್ಷಣಕ್ಕೆ ಅಲ್ಲಿ ನೆರೆದಿದ್ದ ಎಲ್ಲರ ಮುಖ ಭಾವ, ಹಾವ-ಭಾವ ಒಂದೇ ಸಮನೆ ಬೇರೆಯಾದವು. ನಾನು ಇಲ್ಲೇನಾಗುತ್ತಿದೆ ಎಂದು ಯೋಚಿಸುವಷ್ಟರಲ್ಲಿ ಸೂತಕದ ಛಾಯೆ ಎಲ್ಲೆಡೆ ಹರಡಿತ್ತು. ಆತನನ್ನು ಕರೆತಂದಾಗ ತೊಟ್ಟಿಕ್ಕಿದ್ದ ರಕ್ತ, ಬದುಕುಳಿಸುವ ಪ್ರಯತ್ನದಲ್ಲಿ ಉಪಯೋಗಿಸಿದ್ದ ಔಷಧದ ಬಾಟಲಿಗಳು, ಆತು ಬದುಕುತ್ತಾನೆ ಎಂಬ ಭರವಸೆಯ ಹೊತ್ತು ಕಾದು ನಿಂತಿದ್ದ ಆತನ ಮನೆಯವರು, ಸ್ನೇಹಿತರು, ಅವನು ಇನ್ನಿಲ್ಲ ಎಂದು ಸುದ್ದಿ ತಿಳಿಯುತ್ತಲೇ…ಬೇಸರದಿಂದ ಅತ್ತ ಕ್ಷಣ..ಇವೆಲ್ಲವು ನನಗಲ್ಲ ಎಂಬ ರೀತಿಯಲ್ಲಿ ನಿರ್ಲಿಪ್ತ ಭಾವದಿಂದ ಮಲಗಿದ್ದ ಆತ, ಎಲ್ಲರೂ ನನ್ನಲ್ಲಿ ಹಸಿರಾಗೇ ಇದ್ದಾರೆ. ಬಹುಶಃ ಆ ವಯಸ್ಸಿಗೆ ನನ್ನಲ್ಲಿ ಇನ್ನೂ ಸಾವು-ಬದುಕು ಎಂಬುದರ ಪರಿವೇ ಇಲ್ಲದಾಗಿತ್ತು. ಅಂದು ಅಳುತ್ತಿರುವವರ ಕಂಡು..ಅಯ್ಯೋ ಇದಕ್ಯಾಕೆ ಇವರೆಲ್ಲ ಅಷ್ಟು ಅಳುತ್ತಿದ್ದಾರೆ, ಅವನೇ ಬೇಸರಗೊಂಡಿಲ್ಲ ಎಂದೆನಿಸುತ್ತಿತ್ತು!. ಕಣ್ಣೆದುರಿಗೇ ಎಲ್ಲವು ಎಲ್ಲರೂ ಮಾಯವಾಗಿದ್ದರು. ಆದರೆ ಆ ಒಂದು ಸಾವಿನ ಘಟನೆ ನನ್ನಲ್ಲಿ ಹಾಗೆ ಉಳಿದಿದೆ. ಎಷ್ಟು ವರ್ಷಗಳು ಕಳೆದರು ಆ ಸಾವು-ಬದುಕಿನ ಹೋರಾಟ ಇಂದಿಗೂ ನೆನಪಿದೆ.
ಮೊನ್ನೆ ಆಸ್ಪತ್ರೆಯಲ್ಲಿ ಕೆಲಸದ ನಿಮಿತ್ತ ನಮ್ಮ ಕ್ಲಿನಿಕ್ಕಿನ ಕಡೆ ಹೊರಟಿದ್ದೆ. ದಿನ ಒಂದೇ ದಾರಿಯಲ್ಲಿ ಹೋಗುವುದು ಬೇಡ ಎಂದೆಣಿಸಿ, ಅಂದು ಇನ್ನೊಂದು ಹಾದಿಯ ಬಳಿ ಹೋಗುತ್ತಿದ್ದೆ. ಅದು ಆಸ್ಪತ್ರೆಯ ಶವಾಗಾರದ ಪಕ್ಕದಲ್ಲಿರುವ ದಾರಿಯಾಗಿತ್ತು. ಯಾರೋ ಸತ್ತಿದ್ದರು. ಜನ ಸೇರಿದ್ದು ಕಂಡಿತು. ಇಲ್ಲಿ ಹೀಗೆ ಯಾವಾಗಲೂ ಜನ ಜಾಸ್ತಿ ಎಂದು ಮನಸ್ಸಿನಲ್ಲಿ ಅಂದುಕೊಂಡು ಮುಂದೆ ನಡೆದು ಹೋಗುತ್ತಿದ್ದೆ. ಶವವನ್ನು ಕಟ್ಟಿ ಒಂದು ವ್ಯಾನಿನಲ್ಲಿ ತೂರಿಸುತ್ತಿದ್ದರು. ಮುಖ ಕಾಣಲಿಲ್ಲ. ಪೋಲಿಸರ, ಆಸ್ಪತ್ರೆಯ ಸಿಬ್ಬಂದಿ ಕೆಲವರು ಇದ್ದರು. “ಯಾರಪ್ಪಾ ಇವನ ಕಡೆಯವರು?ಬೇಗ ಕರೆಸಿ ಅವರನ್ನ. ನಮಗೇನು ಬೇರೆ ಕೆಲಸ ಇಲ್ಲ ಅಂತ ಅಂದುಕೊಂಡಿದ್ದಾರಾ?” ಎಂದು ಗುಂಪಿನಲ್ಲಿದ್ದವನೊಬ್ಬ ಕೂಗಿದ. ನಡೆದು ಹೋಗುತ್ತಿದ್ದ ನನಗೆ ಎದುರಿನಿಂದ ಗುಂಪೊಂದು ಚೀರಿಕೊಂಡು ನಮ್ಮತ್ತ ಓಡಿ ಬರುತ್ತಿರುವುದು ಕಂಡಿತು. ಮುಂದೆ ಹೆಜ್ಜೆ ಹಾಕಲು ಮನಸ್ಸಾಗಲಿಲ್ಲ. ಪಕ್ಕದಲ್ಲೇ ನಿಂತೆ, ಆ ಗುಂಪಿನ ಚೀರಾಟ, ಅಳು ಎಲ್ಲವೂ..ಒಮ್ಮೆ ನನ್ನನ್ನು ವಾನಳ್ಳಿಯ ಮನೆಗೆ, ಅಂದು ನಡೆದ ಸಾವು-ಬದುಕಿನ ಹೋರಾಟದತ್ತ ಕೊಂಡ್ಯೊದಿತ್ತು.
ಹಳ್ಳಿಯ ಆಸ್ಪತ್ರೆಯೊಂದರಲ್ಲಿ ಒಂದು ಜೀವವನ್ನು ಉಳಿಸಲು ಅಂದು ನಡೆದ ಪ್ರಯತ್ನ, ನಗರದ ಬಹುದೊಡ್ಡ ಆಸ್ಪತ್ರೆಯಲ್ಲಿ ಒಂದು ಜೀವ ಉಳಿಸಲು ಮಾಡಿದ ಪ್ರಯತ್ನ ಎರಡೂ ಒಂದೆಯೆ. ಕಣ್ಣಿಗೆ ಕಂಡಿದ್ದ ಎರಡು ದೇಹಗಳು, ಜೀವ ಕಳೆದುಕೊಂಡ ಮೇಲೆ..ಅದು ಕೇವಲ ಶವ ಮಾತ್ರ. ಆದರೆ ಜನ ತೋರಿದ್ದ ಮಾನವೀಯತೆ ಮಾತ್ರ ಬೇರೆ.
ಸ್ಫೂರ್ತಿ ವಾನಳ್ಳಿ
ವಿದ್ಯಾರ್ಥಿಗಳೇ ಆಚರಿಸಿದ ಶಿಕ್ಷಕರ ದಿನಾಚರಣೆ
ಮೈಸೂರಿನಿಂದ ಡಾ.ಎಸ್.ರಾಧಾಕೃಷ್ಣನ್ ಅವರು ವರ್ಗಾವಣೆಯಾದಾಗ ರಥದಲ್ಲಿ ಕುಳ್ಳರಿಸಿ ವಿದ್ಯಾರ್ಥಿಗಳೇ ಎಳೆಯುತ್ತಾ ಬೀಳ್ಕೊಟ್ಟರು ಎಂದು ವಿದ್ಯಾರ್ಥಿನಿ ಸಿ.ಅಶ್ವಿನಿ ತಿಳಿಸಿದರು.
ತಾಲ್ಲೂಕಿನ ದ್ಯಾವಪ್ಪನಗುಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ವಿದ್ಯಾರ್ಥಿಗಳೇ ಆಚರಿಸಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ತಮಗೆ ಮಾರ್ಗದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಾರಣರಾದ ಗುರುಗಳನ್ನು ನೆನೆಯುವ ಮೂಲಕ ಅವರನ್ನು ಗೌರವಿಸಬೇಕು. ಜ್ಞಾನ ಹಾಗೂ ನೈತಿಕ ಮೌಲ್ಯಗಳನ್ನು ಹಂಚುತ್ತಾ ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಶಿಕ್ಷಕರು ಪೂಜನೀಯರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ಕೆ.ವಿ.ವಂದನಾ ನಿರೂಪಣೆ ಮಾಡಿದರೆ, ಕೆ.ಎ.ಅನೂಷ ಸ್ವಾಗತ ಕೋರಿದರು. ಶಿರೀಷ ವಂದನೆಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದ್ದರು. ಮ್ಯೂಸಿಕಲ್ ಚೇರ್, ಬಕೆಟ್ಗೆ ಚೆಂಡು ಎಸೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಗೊಂಬೆಗೆ ಕುಂಕುಮ ಇಡುವ ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತ ಶಿಕ್ಷಕರಿಗೆ ಬಹುಮಾನಗಳನ್ನು ಹಾಗೂ ಶಿಕ್ಷಕರಿಗೆಲ್ಲಾ ಸಿಹಿಯನ್ನು ವಿದ್ಯಾರ್ಥಿಗಳು ವಿತರಿಸಿದರು.
ಪ್ರಭಾರಿ ಮುಖ್ಯಶಿಕ್ಷಕ ಎಂ.ಪಿ.ಜೀವಂಧರ್ಕುಮಾರ್, ಶಿಕ್ಷಕರಾದ ಮಾಲತೇಶ ಹಳ್ಳೇರ, ಸುಮಲತಾ ಮತ್ತಿತರರು ಹಾಜರಿದ್ದರು.
ದಿಬ್ಬೂರಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ
ಯುವಶಕ್ತಿ ಸಂಘಟನೆಯ ವತಿಯಿಂದ ಶನಿವಾರ ತಾಲ್ಲೂಕಿನ ದಿಬ್ಬೂರಹಳ್ಳಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 300 ಸಸಿಗಳನ್ನು ನೆಡಲಾಯಿತು. ಈ ಕಾರ್ಯಕ್ರಮದಲ್ಲಿ ಯುವಶಕ್ತಿ ಸಂಘಟನೆಯ ನಲ್ಲೋಜನಹಳ್ಳಿಯ ಶಿವಕುಮಾರ ಬಾವರೆಡ್ಡಿ, ಸುನಿಲ್ ರೆಡ್ಡಿ, ಸಂತೋಷ್ ರೆಡ್ಡಿ, ಶ್ರೀರಾಮರೆಡ್ಡಿ, ಶಂಕರರೆಡ್ಡಿ, ಚಿಂತಾಮಣಿ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು, ಸರ್ಕಾರಿ ವೈದ್ಯ ಮುನಿಶಾಮಿರೆಡ್ಡಿ ಹಾಗೂ ಸಿಬ್ಬಂದಿ, ಗಿಡ ಪೂರೈಸಿದ ಅರಣ್ಯ ಇಲಾಖೆ ಸಿಬ್ಬಂದಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಕಾಳಿಂಗ ಮರ್ಧನದ ಪ್ರತಿಕೃತಿ
ಯಮುನಾ ನದಿಯಲ್ಲಿದ್ದ ಕಾಳಿಂಗ ಎಂಬ ವಿಷ ಸರ್ಪವನ್ನು ಶಿಕ್ಷಸಲು ಶ್ರೀಕೃಷ್ಣ ಕದಂಬ ಮರದ ಮೇಲಿಂದ ನೀರಿಗೆ ಧುಮುಕಿದ. ಸರ್ಪದ ಹೆಡೆಯ ಮೇಲೆ ಜಿಗಿದು ಅದರ ಮೇಲೆ ನೃತ್ಯಮಾಡಿದ. ಗೋಪಾಲಕರು ನಮ್ಮನ್ನು ಸದಾ ಕಾಪಾಡು ದೇವರೆ ಎಂದು ಪ್ರಾರ್ಥಿಸುವಂತಿದ್ದ ಅವರ ಮನಃಸ್ಥಿತಿಯನ್ನು ಪ್ರದರ್ಶಿಸುವ ಪ್ರತಿಕೃತಿಯನ್ನು ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಗೌಡರಬೀದಿಯ ಮಂಜುನಾಥ್ ಅವರ ಮನೆಯಲ್ಲಿ ಸುಂದರವಾಗಿ ರೂಪಿಸಲಾಗಿತ್ತು.
ಗೋಕುಲದ ನದಿ, ಮರ ಗಿಡ, ಕೃಷ್ಣನ ಪ್ರೀತಿಯ ಬೆಣ್ಣೆ ಮತ್ತು ಸಿಹಿತಿನಿಸುಗಳೊಂದಿಗೆ ನೂರೆಂಟು ವಿಧದ ತಿನಿಸುಗಳನ್ನಿಟ್ಟು ಪೂಜಿಸಲಾಯಿತು. ಸುತ್ತಮುತ್ತಲಿನ ಮನೆಗಳವರು, ಮಕ್ಕಳು ಬಂದು ಭಾಗವತದ ಪ್ರಮುಖ ಘಟ್ಟ ಹಾಗೂ ಬಾಲಕೃಷ್ಣನ ಲೀಲೆಗಳನ್ನು ಕಂಡು ಪ್ರಸಾದವನ್ನು ಪಡೆದರು.
‘ಸುಮಾರು ಹದಿನಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತೇವೆ. ಈ ಬಾರಿ ಕೃಷ್ಣನು ಗೋಕುಲದಲ್ಲಿ ಕಾಳಿಂಗನನ್ನು ಮರ್ಧಿಸಿ ಗೋಪಾಲಕರನ್ನು ಕಾಪಾಡುವ ಹಾಗೂ ಅವರೆಲ್ಲರ ಪ್ರೀತಿಪಾತ್ರನಾಗುವುದನ್ನು ಪ್ರದರ್ಶಿಸಿದ್ದೇವೆ. ಮಕ್ಕಳಿಗೆ ಈ ರೀತಿಯ ಪ್ರತಿಕೃತಿಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಗೌಡರಬೀದಿಯ ಮಂಜುನಾಥ್ ತಿಳಿಸಿದರು.

