Sidlaghatta : ಕಾಕಚೊಕ್ಕಂಡಹಳ್ಳಿಯ ಹೊರವಲಯದಲ್ಲಿ ಹೊಲ ಗದ್ದೆ ತೋಟ ಮತ್ತು ದೇವಸ್ಥಾನಕ್ಕೆ ತೆರಳಲು ಇದ್ದ ರಸ್ತೆಯನ್ನು ಲಕ್ಷ್ಮಿನಾರಾಯಣ ಎಂಬಾತ ರಾತ್ರೋ ರಾತ್ರಿ ಮುಚ್ಚಿ ಹಾಕಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದು ಮುಚ್ಚಿರುವ ರಸ್ತೆಯನ್ನು ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಮನವಿ ಮಾಡಿದ್ದಾರೆ.
ಕಾಕಚೊಕ್ಕಂಡಹಳ್ಳಿಯ ಚನ್ನಕೃಷ್ಣಪ್ಪ ಸೇರಿದಂತೆ ಗ್ರಾಮದ ಇತರರು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದು, ಶಿಡ್ಲಘಟ್ಟ-ಜಂಗಮಕೋಟೆ ಮುಖ್ಯ ರಸ್ತೆಯಿಂದ ಕಾಕಚೊಕ್ಕಂಡಹಳ್ಳಿಗೆ 30 ಅಡಿ ಅಗಲದ ರೂಡಿಗತ ರಸ್ತೆಯಿದ್ದು ಅದನ್ನು ಗ್ರಾಮದ ಲಕ್ಷ್ಮೀನಾರಾಯಣ ಎಂಬಾತ ರಾತ್ರೋ ರಾತ್ರಿ ಮುಚ್ಚಿ ಹಾಕಿದ್ದಾರೆ.
ಇದರಿಂದ ಸುತ್ತ ಮುತ್ತಲ ಹೊಲ ಗದ್ದೆ ಹಾಗೂ ದೇವಸ್ಥಾನವೊಂದಿದ್ದು ಅದಕ್ಕೆ ಭಕ್ತರು ತೆರಳಲು ದಾರಿ ಇಲ್ಲದಾಗಿದೆ. ಇದರಿಂದ ಸಾಕಷ್ಟು ತೊಂದರೆ ಆಗುತ್ತಿದ್ದು ಸ್ಥಳ ಪರಿಶೀಲಿಸಿ ರಸ್ತೆ ಒತ್ತುವರಿ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಕೋರಿದ್ದಾರೆ.
Sidlaghatta : ಶಿಡ್ಲಘಟ್ಟ : ನಗರಸಭೆ ಸಾಮಾನ್ಯ ಸಭೆಯನ್ನು ಜುಲೈ 18 ರಂದು ಕರೆದಿದ್ದು ಯಾವುದೆ ಸಕಾರಣ ಇಲ್ಲದೆ ಏಕಾ ಏಕಿ ಸಭೆಯನ್ನು ರದ್ದು ಮಾಡಿದ್ದು ಏಕೆ ? ಕಾಲ ಕಾಲಕ್ಕೆ ಸಾಮಾನ್ಯ ಸಭೆಯನ್ನು ಕರೆಯದ ಕಾರಣ ಅಭಿವೃದ್ದಿ ಕಾರ್ಯಗಳು ನೆನೆಗುದಿಗೆ ಬಿದ್ದಿವೆ ಎಂದು ನಗರಸಭೆಯ ಸದಸ್ಯ ಅಫ್ಸರ್ ಪಾಷ ಅವರು ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಜುಲೈ 18 ರ ಶುಕ್ರವಾರ ಸಾಮಾನ್ಯ ಸಭೆ ಕರೆದಿದ್ದು ನಮ್ಮೆಲ್ಲರಿಗೂ ಸಭಾ ತಿಳುವಳಿಕೆ ನೊಟೀಸ್ ನೀಡಲಾಗಿತ್ತು. ಸಭೆಯಲ್ಲಿ ಸುಮಾರು 39 ಕ್ಕೂ ಹೆಚ್ಚು ವಿಷಯಗಳನ್ನು ಪ್ರಸ್ತಾಪಿಸಲು ಸಭಾ ತಿಳುವಳಿಕೆ ನೊಟೀಸ್‌ನಲ್ಲಿ ತಿಳಿಸಿತ್ತು.
ಆದರೆ ಏಕಾ ಏಕಿ 18 ರಂದು ನಡೆಯಬೇಕಿದ್ದ ಸಾಮಾನ್ಯ ಸಭೆಯನ್ನು ರದ್ದು ಮಾಡಿ ಜುಲೈ 19 ರಂದು ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ. ವಿಶೇಷ ಸಾಮಾನ್ಯ ಸಭೆಯಲ್ಲಿ ಕೇವಲ 3 ವಿಷಯಗಳ ಬಗ್ಗೆ ಚರ್ಚಿಸಲು ಮಾತ್ರವೇ ಅವಕಾಶ ಇದೆ. ಇದರಿಂದ ನಮ್ಮ ವಾರ್ಡುಗಳ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶವೇ ಇಲ್ಲವಾಗಿದೆ ಎಂದು ದೂರಿದರು.
ನಗರೋತ್ಥಾನ ಹಂತ-4 ರಲ್ಲಿ ನಗರದಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಕೆಲ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನೆ ಎಸ್.ಎಫ್.ಸಿ ಮುಕ್ತ ನಿಧಿ ಮೂಲ ಅನುದಾನದಲ್ಲೂ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿ ಲೋಪ ಎಸಗಲಾಗಿದೆ. ಅವ್ಯವಹಾರಕ್ಕೂ ಇದು ದಾರಿ ಮಾಡಿಕೊಡಲಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಇವೆಲ್ಲವನ್ನೂ ನಾವು ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಲು ಪೂರಕ ದಾಖಲೆಗಳೊಂದಿಗೆ ಸಿದ್ದರಾಗಿದ್ದೆವು. ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಏಕಾ ಏಕಿ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ನಗರೋತ್ಥಾನ ಹಂತ-4 ರ ಅನುದಾನದಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ಪಡೆದು ಟೆಂಡರ್ ಕೂಡ ಆಗಿದೆ. ಕಾಮಗಾರಿ ಇನ್ನೂ ಆರಂಭ ಆಗಿಲ್ಲ. ಈ ನಡುವೆ ಅದೇ ಒಂದೆರಡು ಕೆಲಸದ ಕಾಮಗಾರಿಗಳನ್ನು ಎಸ್.ಎಫ್.ಸಿ ಮುಕ್ತ ನಿಧಿ ಮೂಲ ಅನುಧಾನದಲ್ಲೂ ಕೈಗೊಳ್ಳಲು ಕ್ರಿಯ ಯೋಜನೆ ತಯಾರಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ.
ನಗರೋತ್ಥಾನ ಯೋಜನೆಯಡಿ ಕಾಮಗಾರಿಯನ್ನು ನಡೆಸಿ ಎಸ್.ಎಫ್.ಸಿ ಮುಕ್ತ ನಿಧಿ ಅನುದಾನವನ್ನು ಬೇರೊಂದು ಕಾಮಗಾರಿಗೆ ಬಳಸಬಹುದಲ್ಲವೇ ಎಂಬುದಷ್ಟೆ ನಮ್ಮ ವಾದ.
ಕಾಲ ಕಾಲಕ್ಕೆ ಸಾಮಾನ್ಯ ಸಭೆ ಕರೆಯದಿರುವುದು ಸೇರಿ ಈ ಎಲ್ಲ ಲೋಪಗಳನ್ನು ಮುಚ್ಚಿ ಹಾಕಲು ಜುಲೈ 18 ರಂದು ನಿಗದಿಯಾಗಿದ್ದ ಸಾಮಾನ್ಯ ಸಭೆಯನ್ನು ರದ್ದು ಮಾಡಿ ವಿಶೇಷ ಸಾಮಾನ್ಯ ಸಭೆಯನ್ನು ಕರೆದಿದ್ದಾರೆ. ಅಲ್ಲಿ ಈ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವುದಿಲ್ಲ. ಆದರೂ ನಾವು ನಗರಸಭೆ ಅಧ್ಯಕ್ಷರ ಲೋಪಗಳನ್ನು ಎತ್ತಿ ಚರ್ಚಿಸಿ ನಾಗರೀಕರ ಮುಂದಿಡುತ್ತೇವೆ ಎಂದರು. ನಗರಸಭೆ ಸದಸ್ಯ ಎಂ.ಶ್ರೀನಿವಾಸ್, ಮುಖಂಡರಾದ ಸಮೀವುಲ್ಲಾ, ಬಾಬಾ ಪ್ರಕೃದ್ದೀನ್, ಅನ್ಸರ್, ಅಫ್ಸಲ್ ಪಾಷಾ ಹಾಜರಿದ್ದರು.
Sugaturu, sidlaghatta : ಪುರಾತನ ದೇವಾಲಯಗಳಿಗೆ ಪ್ರಸಿದ್ಧಿಯಾಗಿರುವ ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಆಷಾಢ ಮಾಸದ ಕೊನೆಯ ಶುಕ್ರವಾರದಂದು ಗ್ರಾಮದೇವತೆ ಸತ್ಯಮ್ಮದೇವಿಗೆ ಗ್ರಾಮಸ್ಥರೆಲ್ಲರೂ ಸೇರಿ ಪೂಜೆ ಸಲ್ಲಿಸಿದರು.
ದೇವಾಲಯದ ಕಟ್ಟಡವಿಲ್ಲದೆ, ಬಯಲಿನಲ್ಲಿರುವ ಸತ್ಯಮ್ಮದೇವಿಗೆ, ಪ್ರತಿ ವರ್ಷ ಆಷಾಢ ಮಾಸದಲ್ಲಿ, ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ, ಗ್ರಾಮದ ಮಹಿಳೆಯರು, ಹೆಣ್ಣು ಮಕ್ಕಳು, ಒಂದೊಂದು ಬಿಂದಿಗೆ ನೀರು ತಂದು, ಮಜ್ಜನ ಮಾಡಿಸಿ, ಪೂಜೆ ಸಲ್ಲಿಸಿ ಹೋಗುವುದು ಸುಮಾರು ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಹಿಂದಿನ ನಡೆದುಕೊಂಡು ಬಂದಿರುವ ಪದ್ಧತಿಯಂತೆ ಈ ವರ್ಷವೂ, ಗ್ರಾಮದ ಮಹಿಳೆಯರು, ಹೆಣ್ಣುಮಕ್ಕಳು ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಮಜ್ಜನ ಮಾಡಿಸಿ, ಪೂಜೆ ಸಲ್ಲಿಸಿದ್ದಾರೆ. ಆಷಾಢದಲ್ಲಿ ತಿಂಗಳಲ್ಲಿ ಬರುವ ಎಲ್ಲಾ ಮಂಗಳವಾರ ಮತ್ತು ಶುಕ್ರವಾರ ನೀರು ಹಾಕಿ ಪೂಜೆ ಸಲ್ಲಿಸುವುದಾಗಿ ಹಲವರು ಹರಕೆ ಕಟ್ಟಿಕೊಳ್ಳುತ್ತಾರೆ. ಹರಕೆಗಳು ಈಡೇರಿವೆ ಎಂದು ಗ್ರಾಮದ ಹಿರಿಯ ಮಹಿಳೆ ನಾರಾಯಣಮ್ಮ ಹೇಳಿದರು.
ಸತ್ಯಮ್ಮ ದೇವಿಗೆ ಗ್ರಾಮಸ್ಥರೆಲ್ಲರೂ ಸೇರಿ, ದೇವಾಲಯವನ್ನು ನಿರ್ಮಾಣ ಮಾಡಬೇಕೆಂದು ಪ್ರಯತ್ನಿಸಿದ್ದಾರಾದರೂ ದೇವಾಲಯಕ್ಕಾಗಿ ನಿರ್ಮಾಣ ಮಾಡುವ ಕಟ್ಟಡ ನಿಲ್ಲದ ಕಾರಣ, ಇದುವರೆಗೂ ದೇವಾಲಯ ನಿರ್ಮಾಣ ಮಾಡಿಲ್ಲ. ದೇವಾಲಯದ ಬಳಿಯಲ್ಲಿ ಬನ್ನಿಮರವಿದ್ದು, ಇದು ಸಹಾ ಹಳೆಯದಾಗಿದ್ದು, ಕೊಂಬೆಗಳು ಮುರಿದು ಬಿದ್ದರೂ ಪುನಃ ಹೊಸದಾಗಿ ಕೊಂಬೆಗಳು ಬರುತ್ತಿವೆ. ಆದರೆ, ಬಡವು ಹಾಗೆ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
Sidlaghatta : ಜಲಜೀವನ್ ಮಿಷನ್ (JJM) ಕಾಮಗಾರಿಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಬೇಕು. ಗುಣಮಟ್ಟದ ಕಾಮಗಾರಿ ಆದ್ಯತೆಯಾಗಿರಲಿ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್ ತಿಳಿಸಿದರು.
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಿಕೆರೆ ಗ್ರಾಮದ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ಕಾಮಗಾರಿಯನ್ನು ಪರಿಶೀಲಿಸಿ ಅವರು ಮಾತನಾಡಿದರು.
ಕಾಮಗಾರಿಯಲ್ಲಿ ಗುಣಮಟ್ಟ ಪ್ರಮುಖವಾಗಿದ್ದು, ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯಬಾರದು. ಪರಿಶೀಲನೆ ವೇಳೆ ಲೋಪ ಕಂಡುಬಂದರೆ ಗುತ್ತಿಗೆದಾರರ ಜೊತೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಅತ್ತಿಗಾನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮಾರ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗ್ರಾಮದಲ್ಲಿರುವ ಮನೆ ಮನೆಗೆ ಗಂಗೆ ಅಳವಡಿಸಿರುವ (ನಲ್ಲಿ) ನಳಗಳನ್ನು ನೀರು ಬರುವಿಕೆಯ ಬಗ್ಗೆ ಪರೀಕ್ಷಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಹೇಮಾವತಿ.ಆರ್್, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ರಾಮಕೃಷ್ಣಪ್ಪ,ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕೇಶ, ಕುಂಭಿಗಾನಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ್, ಜಿಲ್ಲಾ ಪಂಚಾಯತ್ ಜಲ ಜೀವನ್ ಮಿಷನ್ ಜಿಲ್ಲಾ ಸಂಯೋಜಕ ಜಗದೀಶ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಆಂಜಿನಪ್ಪ, ನರೇಗಾ ಸಂಯೋಜಕ ಲೋಕೇಶ, ಚೀಮಂಗಲ ಮತ್ತು ಕುಂಭಿಗಾನಹಳ್ಳಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
Kundalagurki, sidlaghatta : ಗ್ರಾಮೀಣಭಾಗದ ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಸಮುದಾಯ, ಸಂಘಸಂಸ್ಥೆಗಳ ಸಹಕಾರವು ಬಹು ಮಹತ್ವದ್ದಾಗಿದೆ. ಗ್ರಾಮೀಣ ಬಡಮಕ್ಕಳ ಶಿಕ್ಷಣಕ್ಕೆ ಎಲ್ಲರೂ ಕೈಜೋಡಿಸಬೇಕು. ಗ್ರಾಮೀಣಭಾಗದ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳು ನಗರಪ್ರದೇಶದ ವಿದ್ಯಾರ್ಥಿಗಳೊಂದಿಗೆ ಕಲಿಕೆ, ಉದ್ಯೋಗಗಳಲ್ಲಿ ಸ್ಪರ್ಧೆ ಒಡ್ಡಲು ಸಮಾಜವು ಸಹಕರಿಸಬೇಕಿದೆ ಎಂದು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಅಧ್ಯಕ್ಷ ಹರಿಪ್ರಸಾದ್ ವರ್ದಾ ತಿಳಿಸಿದರು.
ತಾಲ್ಲೂಕಿನ ಕುಂದಲಗುರ್ಕಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಬೆಂಗಳೂರಿನ ವಿ.ಎಸ್.ಕೆ ಶ್ರೀ ಫೌಂಡೇಶನ್ ಮತ್ತು ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಉಚಿತ ನೋಟ್‌ಪುಸ್ತಕ ಮತ್ತು ಲೇಖನ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿ.ಎಸ್.ಕೆ ಶ್ರೀ ಫೌಂಡೇಶನ್‌ನ ಉಪಾಧ್ಯಕ್ಷ ಎಸ್.ಎಲ್.ರಾಮಗೋಪಾಲ ಮಾತನಾಡಿ, ಮಕ್ಕಳಲ್ಲಿ ಕಲಿಯುವಲ್ಲಿ ಆಶಕ್ತಿ, ಅಧ್ಯಯನಶೀಲತೆ, ಸಮಯದ ಸದ್ಬಳಕೆ, ಓದುವಲ್ಲಿ ಆತ್ಮವಿಶ್ವಾಸ, ದೃಢಛಲಗಳಂತಹ ಗುಣಗಳು ಸದೃಢವಾಗಬೇಕು. ಕಲಿಕೆಯು ಕೇವಲ ಅಂಕಪಟ್ಟಿ ಗಳಿಸಲು ಮಾತ್ರವಾಗದೇ ನಮ್ಮ ಬದುಕಿಗೆ ಪೂರಕವಾದ ಶಿಕ್ಷಣವಾಗಬೇಕು ಎಂದರು.
ಕುಂದಲಗುರ್ಕಿ ಗ್ರಾಮಪಂಚಾಯಿತಿಯ 9 ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ, ಜಾಮಿಟ್ರಿ ಬಾಕ್ಸ್, ಮತ್ತಿತರ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು.
ಮುಖ್ಯಶಿಕ್ಷಕ ಎಲ್.ವಿ.ವೆಂಕಟರೆಡ್ಡಿ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ವೆಸ್ಟ್ ನ ಕಾರ್ಯದರ್ಶಿ ಕೆ.ಆರ್.ಎನ್ ಚರಣ್, ಸದಸ್ಯ ವಿಷ್ಣು, ಮಂಜುನಾಥ್ ವರ್ದಾ, ಚೈತನ್ಯ, ಉಷಾ ಕಂಚಿ, ನಾಗಲಕ್ಷ್ಮಿ, ವಿ.ಎಸ್.ಕೆ ಶ್ರೀ ಫೌಂಡೇಶನ್‌ನ ನಿರ್ದೇಶಕ ಟಿ.ಎಸ್.ಶಿವಸಂಕರ್, ಸದಸ್ಯ ಸುದರ್ಶನ್ ಕಂಚಿ, ಶಿಕ್ಷಕ ಸಿ.ಪ್ರಶಾಂತ್‌ಕುಮಾರ್, ವಿ.ಮಂಜುನಾಥ್, ಕೆ.ಎಂ.ರಮೇಶ್‌ಕುಮಾರ್, ಎಸ್.ವೆಂಕಟರಾಜು, ಕಲ್ಪನಾ, ಅರ್ಚನಾ, ಶಬರೀನ್‌ತಾಜ್, ಶ್ರೀನಿವಾಸ್, ನರೇಂದ್ರಬಾಬು ಹಾಜರಿದ್ದರು.
Sidlaghatta : ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಶಿಡ್ಲಘಟ್ಟ ಲೀಜನ್ ನ ಅಧ್ಯಕ್ಷರನ್ನಾಗಿ ಹಿತ್ತಲಹಳ್ಳಿ ಎಚ್.ಕೆ.ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ವಾಸವಿ ಶಾಲೆಯಲ್ಲಿ ಮಂಗಳವಾರ ನಡೆದ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಶಿಡ್ಲಘಟ್ಟ ಲೀಜನ್ ನ ಅಧ್ಯಕ್ಷ ಎಂ.ಕೆಂಪಣ್ಣ ಅಧ್ಯಕ್ಷತೆಯಲ್ಲಿನ ಪದಾಧಿಕಾರಿಗಳ ಸಭೆಯಲ್ಲಿ 2025-26 ನೇ ಸಾಲಿಗೆ ಅಧ್ಯಕ್ಷರನ್ನಾಗಿ ಎಚ್.ಕೆ.ಸುರೇಶ್ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಶಿವಕುಮಾರ್, ಖಜಾಂಚಿಯಾಗಿ ಹರೀಶ್ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಅಧ್ಯಕ್ಷ ಎಂ.ಕೆಂಪಣ್ಣ, ಉಪಾಧ್ಯಕ್ಷ ಕೆ.ವಿ.ಮುನೇಗೌಡ, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ವಿಜಯಪುರ ಲೀಜನ್ ನ ಖಜಾಂಚಿ ಭಕ್ತರಹಳ್ಳಿ ಚಿದಾನಂದಮೂರ್ತಿ, ಬೋದಗೂರು ಮುನಿರಾಜು, ವೆಂಕಟಸ್ವಾಮಿ, ವಾಸವಿ ಶಾಲೆಯ ಆಡಳಿತಾಕಾರಿ ರೂಪಸಿ ರಮೇಶ್ ಹಾಜರಿದ್ದರು.
Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಹಸೀಲ್ದಾರ್ ಗ್ರೇಡ್ 2 ಆಗಿ ವರ್ಷಗಳಿಂದ ದಕ್ಷತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಪೂರ್ಣಿಮಾ.ವಿ ರವರನ್ನು ಗ್ರೇಡ್ 1 ತಹಸೀಲ್ದಾರ್ ಆಗಿ ಮಂಚೇನಹಳ್ಳಿ ತಾಲೂಕಿಗೆ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯ ನಾಲಕ್ಕೂ ಹೋಬಳಿಗಳಲ್ಲೂ ಎಲೆ ಮರಿ ಕಾಯಿಯಂತೆ ಕುದ್ದು ತಾವೇ ಪಿಂಚಣಿ ಆದಾಲತ್ ಮೂಲಕ ಹಿರಿಯ ನಾಗರೀಕರಿಗೆ ಪಿಂಚಣಿ ಸೇರಿದಂತೆ ಸುಮಾರು ವರ್ಷಗಳಿಂದ ನಿಂತು ಹೋಗಿದ್ದ ವೃದ್ಧಪ್ಯಾ ವೇತನ ವಿವಿಧ ಮಾಶಾಸನ ಹಾಗೂ ಸರಕಾರದ ಯೋಜನೆಗಳ ಕುರಿತು ಹಳ್ಳಿಗಳಲ್ಲಿ ಅರಿವು ಮೂಡಿಸುವ ಮೂಲಕ ಗ್ರಾಮೀಣ ಭಾಗದ ಹಿರಿಯ ನಾಗರೀಕರ ವಿಶ್ವಾಸವನ್ನು ಗಳಿಸಿದ್ದ ಅಧಿಕಾರಿಯಾಗಿದ್ದರು.
ಜೊತೆಗೆ ಸರಕಾರಿ ಕೆಲಸ ದೇವರ ಕೆಲಸ ಎಂದೇ ಪ್ರಾಮಾಣಿಕ ತಾಲೂಕು ಅಭಿವೃದ್ಧಿಯಲ್ಲಿ ಮಗ್ನರಾಗಿರುವ ಪೂರ್ಣಿಮಾ ಇವರು ಆದಾಲತ್ ಕಾರ್ಯಕ್ರಮಗಳಲ್ಲಿ ಅನೇಕ ಮಹಿಳೆ ಯರಿಗೆ ಹಾಗೂ ವೃದ್ಧರಿಗೆ ಪಿಂಚಣಿ ಸೌಲಭ್ಯಗಳನ್ನು ಒದಗಿಸುವುದಲ್ಲದೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇನ್ನಿತರೆ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ಪ್ರಾಮಾಣಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಯಾವುದೇ ಒಂದು ಪ್ರಮಾಣ ಪತ್ರ ನೀಡಲು ಸೂಕ್ತ ಹಾಗೂ ಅರ್ಹ ದಾಖಲೆಗಳಿಲ್ಲದಿದ್ದರೆ ಯಾವುದೇ ಮುಲಾಜಿ ಇಲ್ಲದೆ ತಿರಸ್ಕರಿಸಿ ತಮ್ಮ ಪ್ರಾಮಾಣಿಕತೆಯನ್ನು ಎತ್ತಿ ಹಿಡಿದ್ದಾರೆ.
ಸರಕಾರದ ಭೂ ಸುರಕ್ಷಾ ಯೋಜನೆಯಲ್ಲಿ ಏ ಮತ್ತು ಬಿ ವರ್ಗದ ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ತಹಸೀಲ್ದಾರ್ ಕಚೇರಿಯಲ್ಲಿ ವಿತರಣೆ ಮಾಡುವಲ್ಲಿ ವಿಶೇಷವಾಗಿ ಗಮನ ಸೆಳೆದರೂ ಜಾತಿ ಮತ್ತು ಆದಾಯ ಪತ್ರ ಹಾಗೂ ವಿವಿಧ ಕಂದಾಯ ದಾಖಲೆಗಳನ್ನು ಪಡೆಯಲು ಪ್ರತಿ ನಿತ್ಯ ಸಾವಿರಾರು ಜನರು ತಾಲೂಕು ಕಚೇರಿಯತ್ತ ಅಲೆದಾಡಬೇಕಿತ್ತು.
ಆದರೆ ಇವರು ಸಾರ್ವಜನಿಕರ ಅಲೆದಾಟವನ್ನು ತಪ್ಪಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಿಭಿನ್ನವಾಗಿ ತಮ್ಮ ಅವಧಿಯಲ್ಲಿ ಕಡಿಮೆ ಸಮಯದಲ್ಲಿ ತ್ವರಿತ ದಾಖಲೆಗಳನ್ನು ಪಡೆಯಲು ಸಮಯದ ವೇಳಾ ಪಟ್ಟಿಯನ್ನು ನಿಗದಿ ಮಾಡುವ ಮೂಲಕ ವ್ಯವಸ್ಥಿತವಾಗಿ ಆಡಳಿತ ಸುಧಾರಣೆಯನ್ನು ಮಾಡಿದರು.
ಒಟ್ಟಾರೆ ತಹಸೀಲ್ದಾರ್ ಗ್ರೇಡ್ 2 ಆಗಿ ತಮ್ಮ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಜನಸ್ನೇಹಿ ವಾತಾವರಣವನ್ನು ಸೃಷ್ಟಿಸಿದ ಇವರ ಕಾರ್ಯವೈಖರಿಗೆ ಸ್ಥಳೀಯ ದಲಿತ ಪರ, ರೈತಪರ, ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ಸುಮಾರು ತಿಂಗಳುಗಳಿಂದ ನಿಂತು ಹೋಗಿದ್ದ ಪಿಂಚಣಿಯ ಸದುಪಯೋಗಪಡಿಸಿಕೊಂಡ ಹಿರಿಯನಾಗರೀಕರು ಸದುಪಯೋಗ ಮೆಚ್ಚುಗೆಯ ಜೊತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ .