ಬೇಕಾಗುವ ಸಾಮಾಗ್ರಿ
10 ಕೆಸವಿನ ಸೊಪ್ಪು
1 ಟೀ ಕಪ್ಪು ಹೆಸರುಬೇಳೆ
1 ಟೀ ಕಪ್ಪು ಉದ್ದಿನಬೇಳೆ
1 ಟೀ ಕಪ್ಪು ಕಡಳೆಬೇಳೆ
1/2 ಟೀ ಕಪ್ಪು ಅಕ್ಕಿ
1 ಟೀ ಸ್ಪೂನ್ ಜೀರಿಗೆ, ಕೊತ್ತುಂಬರಿ
15 ಒಣಮೆಣಸು (ಖಾರ ಜಾಸ್ತಿ ಬೇಕಿದ್ದರೆ ಮೆಣಸು ಜಾಸ್ತಿ ಹಾಕಿಕೊಳ್ಳಿ)
ಒಂದು ಕಡಲೆಬೇಳೆ ಗಾತ್ರದಷ್ಟು ಇಂಗು
2 ನಿಂಬೆ ಗಾತ್ರದಷ್ಟು ಹುಣಸೆಹಣ್ಣು
ಉಪ್ಪು
ಒಂದು ನಿಂಬೆ ಗಾತ್ರದಷ್ಟು ಬೆಲ್ಲ
ಅರ್ಧ ತೆಂಗಿನ ಕಾಯಿ ತುರಿ
ಮಾಡುವ ವಿಧಾನ
ಮೊದಲು ಹುಣಿಸೆಹಣ್ಣನ್ನು ನೆನೆಸಿಟ್ಟಿಕೊಳ್ಳಿ. ಎಲ್ಲಾ ಬೇಳೆ ಮತ್ತು ಅಕ್ಕಿಯನ್ನು ಬೇರೆ ಬೇರೆಯಾಗಿ ಹುರಿಯಿರಿ. ಜೀರಿಗೆ ಕೊತ್ತುಂಬರಿ ಇಂಗು ಹುರಿಯಿರಿ. ಎಲ್ಲವನ್ನು ಒಣ ಪುಡಿಮಾಡಿಕೊಳ್ಳಿ. ಈ ಒಣಪುಡಿಗೆ ತೆಂಗಿನ ತುರಿ ನೆನೆಸಿಟ್ಟ ಹುಣಿಸೆರಸ, ಬೆಲ್ಲ, ಉಪ್ಪು, ಮೆಣಸಿನಕಾಯಿಯನ್ನು ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಕೆಸವಿನ ಎಲೆಯನ್ನು ಸ್ವಚ್ಛಗೊಳಿಸಿ ಅದರ ದಂಟನ್ನು ತೆಗೆದು ಎಲೆಯ ಹಿಂಬಾಗಕ್ಕೆ ಬೀಸಿದ ಮಸಾಲೆಯನ್ನು ಹಚ್ಚಿ ಅದರ ಮೇಲೆ ಇನ್ನೊಂದು ಎಲೆ ಇಟ್ಟು ಅದಕ್ಕು ಮಸಾಲೆ ಹಚ್ಚಿ, ಅದರ ಮತ್ತೊಂದು ಎಲೆ ಇಟ್ಟು ಮಸಾಲೆ ಹಚ್ಚಿ ಅದನ್ನು ಸುರುಳಿ ಸುತ್ತಿ ಎತ್ತಿಡಿ. ಉಳಿದ ಎಲೆಗೂ ಹೀಗೆ ಮಸಾಲೆ ಹಚ್ಚಿ ಸುರುಳಿ ಸುತ್ತಿ ಅದನ್ನು ಉಗಿಯಲ್ಲಿ 1/2 ಗಂಟೆ ಬೇಯಿಸಿ. ಒಮ್ಮೆ ಮುಚ್ಚಳ ತೆಗೆದು ನೋಡಿ ಎಲೆ ಬಾಡದಿದ್ದಲ್ಲಿ ಇನ್ನು 10 ನಿಮಿಷ ಬೇಯಿಸಿ. ನಂತರ ಬೇಯಿಸಿದ ಸುರುಳಿಯನ್ನು 2 ಅಥವಾ 3 ಭಾಗವಾಗಿ ಮಾಡಿ ಅದರ ಮೇಲ್ಮೈಗೆ ಸಣ್ಣರವೆ ಹಚ್ಚಿ ಕಾವಲಿ ಮೇಲೆ ಎಣ್ಣೆ ಹಾಕಿ ಫ್ರೈ ಮಾಡಿ, ತಿನ್ನಲು ಬಡಿಸಿ.
ಅಥವಾ
ಸುರುಳಿ ಸುತ್ತಿ ಬೇಯಿಸಿದ ಎಲೆಯನ್ನು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ. 6 ಈರುಳ್ಳಿಯನ್ನು ಸಣ್ಣಕೆ ಹೆಚ್ಚಿಕೊಳ್ಳಿ. ಬಾಣಲೆಯಲ್ಲಿ 8 ಚಮಚ ಕೊಬ್ಬರಿ ಎಣ್ಣೆ ಹಾಕಿ ಸಾಸಿವೆ, ಉದ್ದಿನಬೇಳೆ ಸಿಡಿಸಿ, 2 ಹೆಚ್ಚಿದ ಹಸಿಮೆಣಸು ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬಾಡಿಸಿ ಹೆಚ್ಚಿಟ್ಟ ಎಲೆಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಪಲ್ಯದಂತೆ ಆಗುತ್ತದೆ. ಇದನ್ನು ಹಾಗೆಯೂ ತಿನ್ನಬಹುದು ಅಥವಾ ಅನ್ನಕ್ಕೂ ಕಲೆಸಿಕೊಳ್ಳಬಹುದು.
ಕರಾವಳಿಯ ರುಚಿಕರ ತಿನಿಸು – ಪತ್ರೊಡೆ
ಅಭಿಮಾನಿಗಳಿಂದ ವಿಷ್ಣುವರ್ಧನ್ ಅವರ 64 ನೇ ಹುಟ್ಟುಹಬ್ಬ ಆಚರಣೆ
ಶಿಡ್ಲಘಟ್ಟ ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಶುಕ್ರವಾರ ಸಾಹಸಿಂಹ ವಿಷ್ಣುವರ್ಧನ್ ಅವರ 64 ನೇ ಹುಟ್ಟುಹಬ್ಬವನ್ನು ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ವತಿಯಿಂದ ಆಚರಿಸಿದರು.
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ಡೆಂಗ್ಯೂ ಜ್ವರದ ಅರಿವು ಮೂಡಿಸಲು ಜಾಥಾ
ಶಿಡ್ಲಘಟ್ಟ ತಾಲ್ಲೂಕಿನ ಆನೆಮಡಗು ಗ್ರಾಮದಲ್ಲಿ ಈಚೆಗೆ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಜಾಥಾ ಮೂಲಕ ಡೆಂಗ್ಯೂ ಜ್ವರದ ಕುರಿತಂತೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದರು. ಆರೋಗ್ಯ ಸಹಾಯಕಿ ಮುನಿರತ್ನಮ್ಮ, ಮುಖ್ಯಶಿಕ್ಷಕ ಕೆ.ವಿ.ಪ್ರಕಾಶ್‌ಬಾಬು, ಶಿಕ್ಷಕರಾದ ವೆಂಕಟರೆಡ್ಡಿ, ನಾರಾಯಣಸ್ವಾಮಿ, ಲಕ್ಷ್ಮೀನಾರಾಯಣ, ಹೇಮಲತಾ, ರಾದಮ್ಮ ಹಾಜರಿದ್ದರು.
ಮಳೆರಾಯ ಬರಲೆಂದು ಗಂಡು ಮಕ್ಕಳಿಗೆ ಮದುವೆ
‘ಬಾರೋ ಬಾರೋ ಮಳೆರಾಯ, ಬಾಳೆ ತೋಟಕೆ ನೀರಿಲ್ಲ, ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ…’ ಎಂದು ಹಾಡುತ್ತಾ ತಾಲ್ಲೂಕಿನ ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆಗಾಗಿ ಪ್ರಾರ್ಥಿಸಿದರು.
ಜಿಲ್ಲೆಯ ಗ್ರಾಮೀಣರು ಮಳೆ ಬಾರದಿದ್ದಾಗ ಹಲವು ಜಾನಪದ ಆಚರಣೆಗಳನ್ನು ಹಮ್ಮಿಕೊಳ್ಳುತ್ತಾರೆ. ‘ಮಳೆರಾಯ’ನ ಪೂಜೆ ಅಥವಾ ‘ವಾನರಾಯ ಪೂಜ’ ಎಂದು ಕರೆಯುವ ಆಚರಣೆಗಳಲ್ಲಿ ಗ್ರಾಮಸ್ಥರೆಲ್ಲಾ ಒಗ್ಗೂಡುತ್ತಾರೆ. ಪಡ್ಡೆ ಹುಡುಗರೆಲ್ಲ ಸೇರಿ ಕೆರೆ ಕಟ್ಟೆಯ ಹತ್ತಿರ ಹೋಗಿ ಜೇಡಿ ಮಣ್ಣಿನಿಂದ ಗೊಂಬೆಯೊಂದನ್ನು ತಯಾರಿಸುತ್ತಾರೆ. ಅದನ್ನು ಹಲಗೆ ಮೇಲಿಟ್ಟು ಒಬ್ಬ ಹುಡುಗನ ತಲೆ ಮೇಲೆ ಪ್ರತಿನಿತ್ಯ ಸಂಜೆ ಸಮಯ ಹೊರಿಸಿಕೊಂಡು ಮಳೆರಾಯನ ಕುರಿತು ಹಾಡುಗಳನ್ನು ಹೇಳುತ್ತಾ, ಸಿಳ್ಳೆ ಹಾಕುತ್ತಾ ಮನೆಮನೆಗಳ ಮುಂದೆ ಹೋಗುತ್ತಾರೆ. ಆಗ ಮನೆಯವರು ರಾಗಿ, ಅಕ್ಕಿ, ಬೇಳೆ, ಹಣವನ್ನು ಕಾಣಿಕೆಯಾಗಿ ಕೊಟ್ಟು ಮಳೆರಾಯನ ಗೊಂಬೆ ಹೊತ್ತ ಹುಡುಗನ ಮೇಲೆ ತಣ್ಣೀರನ್ನು ಸುರಿಯುತ್ತಾರೆ.
ಪ್ರತಿ ದಿನ ಚಂದ್ರಮನ ಆಕಾರದ ರಂಗೋಲಿಯನ್ನು ಗ್ರಾಮದ ಒಂದು ಮುಖ್ಯ ಸ್ಥಳದಲ್ಲಿ ಹಾಕಿ ಮಳೆರಾಯನನ್ನು ಪೂಜಿಸಲಾಗುತ್ತದೆ. ಇದನ್ನು ಐದು ಅಥವಾ ಒಂಭತ್ತು ದಿನಗಳು ಮುಂದುವರೆಸುತ್ತಾರೆ. ಕೊನೆಯ ದಿನದಂದು ಹೀಗೆ ಊರೆಲ್ಲಾ ಸುತ್ತಿ ಗ್ರಾಮಸ್ಥರೆಲ್ಲ ಒಗ್ಗೂಡಿ ತಮ್ಮದೇ ಆದ ರೀತಿಯಲ್ಲಿ ಉತ್ಸವ, ಕಲೆ, ಕಾವ್ಯ, ಹಾಡು, ಗೇಯಗಳಿಂದ ಆಚರಣೆಗೆ ಮೆರುಗನ್ನು ತುಂಬುತ್ತಾರೆ.
ಚೌಡಸಂದ್ರ ಮತ್ತು ಹಿತ್ತಲಹಳ್ಳಿಯಲ್ಲಿ ಮಳೆರಾಯನ ಆಚರಣೆಯ ಕೊನೆಯ ದಿನ ಇಬ್ಬರು ಗಂಡು ಮಕ್ಕಳಿಗೆ ಯಥಾವತ್ ಗಂಡು ಹೆಣ್ಣಿನ ಮದುವೆಯ ರೀತಿಯಲ್ಲೇ ಮದುವೆಯನ್ನು ಮಾಡಿದರು. ಚೌಡಸಂದ್ರದಲ್ಲಿ ಮಳೆರಾಯನನ್ನು ಭರತೇಶ ಹೊತ್ತಿದ್ದರೆ, ಹೆಣ್ಣಿನ ವೇಷಧಾರಿಯಾಗಿ ಹರಿಕೃಷ್ಣ ಮತ್ತು ಗಂಡಿನ ವೇಷಧಾರಿಯಾಗಿ ರಮೇಶ್ ಆಚರಣೆಯಲ್ಲಿ ಭಾಗಿಯಾಗಿದ್ದರು. ಗ್ರಾಮದ ಮಹಿಳೆಯರು ರಾಗಿಮುದ್ದೆ, ಪಾಯಸ, ಅನ್ನ, ಸಾರನ್ನು ತಯಾರಿಸಿ ಎಲ್ಲರಿಗೂ ಆಚರಣೆಯ ಮುಕ್ತಾಯದ ಸಂದರ್ಭದಲ್ಲಿ ಬಡಿಸಿದರು.
ಬರ ಪರಿಹಾರ ಕಾರ್ಯಗಳ ಜಾರಿಗೆ ಒತ್ತಾಯ
ಬರ ಪರಿಹಾರ ಕಾರ್ಯಗಳ ಜಾರಿಗೆ ಒತ್ತಾಯಿಸಿ ಡಿ.ವೈ.ಎಫ್.ವೈ ಸಮಿತಿಯ ಸದಸ್ಯರು ತಹಸಿಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೆದಾರರಿಗೆ ಗುರುವಾರ ಮನವಿಯನ್ನು ಸಲ್ಲಿಸಿದರರು.
ಚಿಕ್ಕಬಳ್ಳಾಪುರ ಜಿಲ್ಲೆ ನಿರಂತರವಾಗಿ ಬರಗಾಲದಿಂದ ಬಳಲುತ್ತಿದ್ದು ಈ ವರ್ಷವೂ ಸಹ ಸಕಾಲದಲ್ಲಿ ಮಳೆಯಿಲ್ಲದೆ ಹಾಕಿದ ಬೆಳೆಗಳು ಒಣಗಿದ್ದು ರೈತರು ಜೀವನ ನಡೆಸಲು ಕಷ್ಟವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವದಿಂದ ದನ ಕರುಗಳಿಗೆ ಮೇವಿನ ಕೊರತೆ ಉಂಟಾಗಿದೆ. ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದು ಗ್ರಾಮೀಣರಿಗೆ ಕೆಲಸ ಇಲ್ಲದಂತಾಗಿದೆ. ಬೀಕರ ಬರಗಾಲ ಎದುರಿಸಲು ಜಿಲ್ಲೆಗೆ ವಿಶೇಷ ಪ್ಯಾಕೇಜನ್ನು ರಾಜ್ಯ ಸರ್ಕಾರ ಘೋಷಿಸಬೇಕು. ಹೋಬಳಿ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯಬೇಕು. ಎಲ್ಲಾ ಹಳ್ಳಿಗಳಲ್ಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಶಿರಸ್ತೆದಾರರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಡಿ.ವೈ.ಎಫ್.ವೈ ರಾಜ್ಯ ಸಮಿತಿಯ ಸದಸ್ಯ ಮುನೀಂದ್ರ, ಜಿಲ್ಲಾ ಸಮಿತಿ ಸದಸ್ಯೆ ಲಕ್ಷೀದೇವಮ್ಮ, ಕಾರ್ಯದರ್ಶಿ ಮಂಜುಳಮ್ಮ, ನಟರಾಜ, ಸದಾನಂದ, ಮಂಜುನಾಥ, ನರಸಿಂಹ, ಅಶ್ವತ್ಥಮ್ಮ, ಭಾಗ್ಯಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮುಂಬೈನಲ್ಲಿ ನಡೆದ ಅಕ್ಷಯ್‌ಕುಮಾರ್ ಇನ್ವಿಟೇಷನಲ್ ಕೂಡೋ ಚಾಂಪಿಯನ್‌ಷಿಪ್ನಲ್ಲಿ ಪದಕ

ಪಟ್ಟಣದ ದಿವ್ಯ ಭಾರತ್ ಡೋ ಅಸೋಸಿಯೇಷನ್‌ನ ಕರಾಟೆ ಪಟುಗಳು ಈಚೆಗೆ ಮುಂಬೈನಲ್ಲಿ ನಡೆದ ಅಕ್ಷಯ್‌ಕುಮಾರ್ ಆರನೇ ಇನ್ವಿಟೇಷನಲ್ ಕೂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ.
ಕುಮಿತೆ 37 ಕೆಜಿ ವಿಭಾಗದಲ್ಲಿ ಹರ್ಷನ್ ದ್ವಿತೀಯ ಸ್ಥಾನ, ಕುಮಿತೆ 45 ಕೆಜಿ ವಿಭಾಗದಲ್ಲಿ ನರಸಿಂಹ ತೃತೀಯ ಸ್ಥಾನ ಪಡೆದಿದ್ದಾರೆ. ಓಂ ದೇಶಮುದ್ರೆ, ಪ್ರದೀಪ್, ಜಯಸಿಂಹ, ಹೇಮಂತ್, ಜಗದೀಶ್, ಚೇತನ್ ಸಮಾಧಾನ ಬಹುಮಾನ ಪಡೆದಿರುವುದಾಗಿ ಕರಾಟೆ ಶಿಕ್ಷಕ ಅರುಣ್‌ಕುಮಾರ್ ತಿಳಿಸಿದ್ದಾರೆ.
ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ಪೂಜೆ
ತಾಲ್ಲೂಕಿನ ಚೀಮಂಗಲ ಗ್ರಾಮ ಪಂಚಾಯತಿಯ ಕೆ.ಜಿ.ಪುರ ಗ್ರಾಮದಲ್ಲಿ ಅಭಯಾಂಜನೇಯಸ್ವಾಮಿ ದೇವಾಲಯ ಕಟ್ಟಡದ ಪುನರ್ನಿರ್ಮಾಣದ ಅಂಗವಾಗಿ ವಿಶೇಷ ಪೂಜೆ, ಹೋಮ, ಅಗ್ನಿಕುಂಡ ಹಾಗೂ ದೀಪದಾರತಿಗಳನ್ನು ಆಯೋಜಿಸಲಾಗಿತ್ತು.
ಸುಮಾರು ನೂರಾರು ವರ್ಷಗಳ ಹಳೆಯದಾದ ದೇವಾಲಯದ ಕಟ್ಟಡವನ್ನು ಈಚೆಗೆ ಗ್ರಾಮಸ್ಥರೆಲ್ಲಾ ಸೇರಿ ಪುನರ್ನಿರ್ಮಾಣ ಮಾಡಿದ್ದರು.
ಊರ ಹಬ್ಬದಂತೆ ಗ್ರಾಮವನ್ನೆಲ್ಲಾ ಸಿಂಗರಿಸಲಾಗಿತ್ತು. ಎಲ್ಲರ ಮನೆಗಳ ಮುಂದೆಯೂ ರಂಗೋಲಿಗಳನ್ನು ಹಾಕಿ, ವಿದ್ಯುತ್ ದೀಪಗಳು, ತಳಿರು ತೋರಣಗಳು ಹಾಗೂ ಹೂಗಳಿಂದ ಮನೆಮನೆ, ಬೀದಿಬೀದಿಗಳನ್ನು ಅಲಂಕರಿಸಿದ್ದರು. ಗ್ರಾಮದ ಮಹಿಳೆಯರು ತಂಬಿಟ್ಟು ದೀಪಗಳನ್ನು ವಿವಿಧ ಹೂಗಳಿಂದ ಅಲಂಕರಿಸಿ ತಲೆಯ ಮೇಲಿಟ್ಟುಕೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ಅಗ್ನಿಕುಂಡದಲ್ಲಿ ಹಾದು ಬಂದು, ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕುಂಡದಲ್ಲಿ ಹಾದು ಬಂದ ನಂತರ ಗ್ರಾಮಸ್ಥರೆಲ್ಲಾ ಅಭಯಾಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರಸಾದವನ್ನು ವಿನಿಯೋಗಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಕೆ.ಜಿ.ಪುರ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲಾ ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರ; ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ಪಟ್ಟಣದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭವನ್ನು ನವೆಂಬರ್ 23 ರ ಭಾನುವಾರ ಹಮ್ಮಿಕೊಂಡಿದ್ದು, ಅದರಂತೆ 2013–14ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಮತ್ತು ಪದವಿ ಪರೀಕ್ಷೆಗಳಲ್ಲಿ ಅನುಕ್ರಮವಾಗಿ ಶೇಕಡಾ 85, 75 ಮತ್ತು 60 ಹಾಗೂ ಮೇಲ್ಪಟ್ಟು ಅಂಕ ಗಳಿಸಿರುವ ತಾಲ್ಲೂಕಿನ ಬ್ರಾಹ್ಮಣ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ ನಕಲು ಹಾಗೂ ಮೂರು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅಕ್ಟೋಬರ್ 5 ನೇ ತಾರೀಖಿನ ಒಳಗೆ ನೀಡಬೇಕೆಂದು ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ
ಬಿ.ಆರ್.ಅನಂತಕೃಷ್ಣ(9964182305), ಡಾ.ಡಿ.ಟಿ.ಸತ್ಯನಾರಾಯಣರಾವ್(9980901675), ವಿ.ಕೃಷ್ಣ(9632025422), ಎನ್.ಶ್ರೀಕಾಂತ್(9845062116) ಸಂಪರ್ಕಿಸಲು ಕೋರಿದ್ದಾರೆ.
ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓಝೋನ್ ದಿನಾಚರಣೆ
ತಾಲ್ಲೂಕಿನ ಕನ್ನಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಓಝೋನ್ ದಿನಾಚರಣೆಯನ್ನು ಆಚರಿಸಲಾಯಿತು. ಓಝೋನ್ ದಿನಾಚರಣೆಯ ಅಂಗವಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಓಝೋನ್ ಕುರಿತಾದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ ಶಾಲಾ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ೪೦ ವಿದ್ಯಾರ್ಥಿಗಳು ಓಝೋನ್, ರಾಕೆಟ್, ಅಗ್ನಿಪರ್ವತ, ಶ್ವಾಸಕೋಶ, ಸೂಕ್ಷ್ಮದರ್ಶಕ, ಇತ್ಯಾದಿ ವೈಜ್ಞಾನಿಕ ಪ್ರಯೋಗ ಹಾಗೂ ಮಾದರಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿ,‘ಪರಿಸರ ದಿನಾಚರಣೆ ಹಾಗೂ ಓಝೋನ್ ದಿನಾಚರಣೆಗಳ ಯಾಂತ್ರಿಕ ಆಚರಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ ನಿಜವಾಗಿಯೂ ಪರಿಸರ ಕಾಳಜಿಯಿಂದ ನಮ್ಮ ಜೀವನಶೈಲಿಗಳನ್ನು ಮರುರೂಪಿಸಿಕೊಂಡರೆ ಮಾತ್ರ ಅದೇ ನಿಜವಾದ ಆಚರಣೆ’ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತುಮ್ಮನಹಳ್ಳಿ ಸಿ.ಆರ್.ಪಿ. ಚಂದ್ರಶೇಖರ್, ಸ್ನೇಹ ಯುವಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಸಂತ ಕುಮಾರ್, ಕಾರ್ಯದರ್ಶಿ ವಾಸುದೇವ್, ನಿವೃತ್ತ ಶಿಕ್ಷಣ ಸಂಯೋಜಕ ಆರ್.ಕೃಷ್ಣಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ದೇವರಾಜ್, ಮುನಿಯಪ್ಪ ಶಾಲಾಮುಖ್ಯಶಿಕ್ಷಕ ಎಚ್. ಮುನಿಯಪ್ಪ, ಶಿಕ್ಷಕರಾದ ಕೆ.ಶಿವಶಂಕರ್, ಜೆ.ಶ್ರೀನಿವಾಸ್, ಎಸ್.ಕಲಾಧರ, ಟಿ.ಜೆ.ಸುನೀತ ಹಾಗೂ ಅಂಗನವಾಡಿ ಶಿಕ್ಷಕಿ ಪದ್ಮಾವತಮ್ಮ ಭಾಗವಹಿಸಿದ್ದರು. ಆಶಯಗೀತೆಯನ್ನು ವಿದ್ಯಾರ್ಥಿ ಧನುಷ್ ಹಾಡಿದರು. ವಿದ್ಯಾರ್ಥಿನಿ ಭವಾನಿ ನಿರೂಪಿಸಿದರು.
ವಿಶ್ವಕರ್ಮ ಜಯಂತಿಯ ಆಚರಣೆ
ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಬುಧವಾರ ವಿಶ್ವಕರ್ಮ ಜಯಂತಿಯ ಆಚರಣೆಯ ಅಂಗವಾಗಿ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ಹಾಗೂ ಲೇಖನ ಸಾಮಗ್ರಿಯನ್ನೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಾಲಾ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣಾಚಾರಿ ಅವರನ್ನು ಸನ್ಮಾನಿಸಲಾಯಿತು.
‘ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ವಿಶ್ವಕರ್ಮ ಜನಾಂಗದ ಅಭಿವೃದ್ಧಿಗಾಗಿ ಎಲ್ಲಾ ಗ್ರಾಮಗಳಲ್ಲಿರುವ ಜನಾಂಗದವರನ್ನು ಒಗ್ಗೂಡಿಸಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಜನಾಂಗವು ಅಭಿವೃದ್ಧಿಯತ್ತ ಸಾಗಲು ಪ್ರಯತ್ನಿಸಬೇಕು. ಸರ್ಕಾರದ ಸೌಲಭ್ಯಗಳು ಬಡವರಿಗೆ ತಲುಪಲು ಶ್ರಮಿಸಬೇಕು’ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ತಿಳಿಸಿದರು.
ದಿಬ್ಬೂರಹಳ್ಳಿ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈಶ್ವರಾಚಾರಿ ಸಂಘದ ಕಟ್ಟಡಕ್ಕೆ ನಿವೇಶನ ನೀಡುವಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. ದಿಬ್ಬೂರಹಳ್ಳಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗದಲ್ಲಿ ನಿವೇಶನ ನೀಡುವುದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಡಾ.ಧನಂಜಯರೆಡ್ಡಿ ಹೇಳಿದರು.
ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಂದರಾಚಾರಿ, ಆದಿನಾರಾಯಣಾಚಾರಿ, ಶ್ರೀನಿವಾಸಾಚಾರಿ, ಕೃಷ್ಣಾಚಾರಿ, ಮುನಿರತ್ನಮಾಚಾರಿ, ಗ್ರಾಮ ಪಂಚಾಯತಿ ಸದಸ್ಯರು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಚಂದ್ರಶೇಖರಸ್ವಾಮಿ ಗುಡಿಯ ವಿನಾಯಕನ ಶಿಲ್ಪ ಕಳ್ಳತನ

ಪಟ್ಟಣದ ಹೊರವಲಯದ ಚಿಂತಾಮಣಿ ರಸ್ತೆಯಲ್ಲಿರುವ ಪುರಾತನ ಚಂದ್ರಶೇಖರಸ್ವಾಮಿ ಗುಡಿಯಲ್ಲಿರುವ ವಿನಾಯಕನ ಶಿಲ್ಪವನ್ನು ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕದ್ದೊಯ್ದಿದ್ದಾರೆ.
ಅತ್ಯಂತ ಪುರಾತನವಾದ ದೇವಾಲಯದಲ್ಲಿರುವ ಗಣೇಶನ ಮೂರ್ತಿಯೂ ಕೂಡ ಪುರಾತನದ್ದಾಗಿದ್ದು, ಕಲ್ಲಿನಲ್ಲಿ ಕೆತ್ತಿದ ಶಿಲ್ಪವು ಬಹಳ ಸುಂದರವಾಗಿತ್ತು. ಕದ್ದೊಯ್ಯುವ ಮುನ್ನ ಸ್ಥಳದಲ್ಲಿ ಪೂಜೆ ನಡೆಸಿರುವ ಕುರುಹಾಗಿ ಅರಿಶಿನ ಕುಂಕುಮ ಕಂಡುಬರುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಏಷ್ಯಾದ ಪ್ರಮುಖ ರಾಷ್ಟ್ರಗಳ ಪ್ರಿಯವಾದ ಖಾದ್ಯ 'ಮೊಮೊಸ್'
ಬೇಕಾಗುವ ಸಾಮಾಗ್ರಿ
ಸ್ಟಫಿಂಗ್
1 ಟೀ ಸ್ಪೂನ್ ಸಾಸಿವೆ
1 ಟೀ ಸ್ಪೂನ್ ಕಡಳೆಬೇಳೆ
1 ಟೀ ಸ್ಪೂನ್ ಉದ್ದಿನಬೇಳೆ
2 ಟೇಬಲ್ ಸ್ಪೂನ್ ಹೆಸರು ಬೇಳೆ
1 ಇಂಚು ಶುಂಠಿ
1 ಮಿಡಿಯಂ ಸೈಜ್ ಈರುಳ್ಳಿ
10 ಹಸಿರು ಮೆಣಸಿನಕಾಯಿ
1 ಸಣ್ಣ ಎಲೆಕೋಸು
ರುಚಿಗೆ ತಕ್ಕಷ್ಟು ಉಪ್ಪು
50 ಗ್ರಾಂ ಪನ್ನೀರ್
ನಿಂಬೆ ಹುಳಿ
ರುಬ್ಬಲು
1 ಕಪ್ಪು ಕಾಯಿತುರಿ
ಮೆಣಸಿನ ಕಾಯಿ
1 ಟೀ ಸ್ಪೂನ್ ಜೀರಿಗೆ
1 ಟೀ ಸ್ಪೂನ್ ಅರಿಶಿನದ ಪುಡಿ
ಹಿಟ್ಟು
1 ಲೋಟ ಮೈದಾಹಿಟ್ಟು,
1 ಟೀ ಸ್ಪೂನ್ ಉಪ್ಪು
1 ಟೀ ಸ್ಪೂನ್ ಸಕ್ಕರೆ
2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಸ್ವಲ್ಪ ಗಟ್ಟಿಯಾಗಿ ಕಲಸಿ, 30 ನಿಮಿಷ ನೆನೆಯಲು ಬಿಡಿ
ಮಾಡುವ ವಿಧಾನ
4 ಟೇಬಲ್ ಸ್ಪೂನ್ ಎಣ್ಣೆಗೆ ಕ್ರಮವಾಗಿ ಕಡಲೆ ಬೇಳೆ ಉದ್ದಿನ ಬೇಳೆ, ಹೆಸರುಬೇಳೆ, ಶುಂಠಿ, ಈರುಳ್ಳಿ, ಎಲೆಕೋಸು ಹಾಕುತ್ತ ಬನ್ನಿ. ಒಂದಾದ ಮೇಲೆ ಒಂದು. ಎಲೆಕೋಸು ಬೆಂದ ಮೇಲೆ ಉಪ್ಪು, ರುಬ್ಬಿದ ಮಸಾಲ ಹಾಕಿ ನೀರು ಹಾಕದೆ ಬೇಯಿಸಿ.
ಪನ್ನೀರನ್ನು 2 ಟೇಬಲ್ ಸ್ಪೂನ್ ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಕೊನೆಯಲ್ಲಿ ಪಲ್ಯಕ್ಕೆ ಪನ್ನೀರ್ ಕೊತ್ತಂಬರಿ, ಸೊಪ್ಪು ನಿಂಬೆ ಹುಳಿ ಹಾಕಿ.
ನಂತರ ನೆನೆದ ಹಿಟ್ಟನ್ನು ಚಪಾತಿ ತರಹ ಲಟಿಸಿಕೊಳ್ಳಿ, ಅದರ ಮಧ್ಯದಲ್ಲಿ ಸ್ವಲ್ಪ ಪಲ್ಯ ಇಟ್ಟು ನಿಮಗೆ ಯಾವ ಆಕಾರ ಬೇಕೋ ಅದನ್ನು ಮಡಿಕೆ ಮಾಡಿ 5-6 ನಿಮಿಷ ಉಗಿಯಲ್ಲಿ ಇಡ್ಲಿ ತರ ಬೇಯಿಸಿ. ಇದನ್ನು ಟೊಮೆಟೋ ಅಥವಾ ಚಿಲ್ಲಿ – ಗಾರ್ಲಿಕ್ ಸಾಸ್ ಜೊತೆ ಸವಿಯಲು ಕೊಡಿ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುಂಪು ಉದ್ಗಾಟನಾ ಹಾಗೂ ಗ್ರಾಮ ಸಮಾಲೋಚನಾ ಸಭೆ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಈಶ್ವರ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗುಂಪು ಉದ್ಗಾಟನಾ ಹಾಗೂ ಗ್ರಾಮ ಸಮಾಲೋಚನಾ ಸಭೆ ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗಿಶ್ ಕ್ಷೇತ್ರದ ಹಿನ್ನೆಲೆ, ಯೋಜನೆಯಲ್ಲಿ ಸಿಗುವ ಸವಲತ್ತುಗಳು, ಗುಂಪು ರಚನೆ, ಗುಂಪಿನಲ್ಲಿರುವ ಸದಸ್ಯರಿಗೆ ಆಗುವ ಉಪಯೋಗಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಜಂಗಮಕೋಟೆ ಠಾಣೆ ಎ.ಎಸ್.ಐ ವೀರಪ್ಪ, ಜ್ಯೋತಿ ವಿದ್ಯಾಸಂಸ್ಥೆ ಅಧ್ಯಕ್ಷ ಶ್ರೀಧರ್, ಸುರೇಂದ್ರಬಾಬು, ಜನಾರ್ಧನ್ ನಾಯಕ್ ಹಾಜರಿದ್ದರು.
ಜಂಗಮಕೋಟೆ ಗ್ರಾಮದಲ್ಲಿ ಹದಿನೆಂಟು ಗ್ರಾಮದೇವರುಗಳ ಮೆರವಣಿಗೆ
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಸೋಮವಾರ ಸಂಜೆ ವಿನಾಯಕ ಮೂರ್ತಿಯ ವಿಸರ್ಜನೆಯ ಪ್ರಯುಕ್ತ ಗ್ರಾಮದ ಹದಿನೆಂಟು ದೇವರುಗಳ ಮೆರವಣಿಗೆಯನ್ನು ವಿಜೃಂಭಣೆಯಿಂದ ನಡೆಸಲಾಯಿತು.
ವಿನಾಯಕ, ಗಂಗಾಧರೇಶ್ವರಸ್ವಾಮಿ, ಮುತ್ಯಾಲಮ್ಮ, ಸಪ್ಪಲಮ್ಮ, ಮದಗದಮ್ಮ, ಪೂಜಮ್ಮ, ಭೀಮೇಶ್ವರ, ಸೋಮೇಶ್ವರಸ್ವಾಮಿ, ಎಲ್ಲಮ್ಮ, ಅಣ್ಣಮ್ಮತಾಯಿ, ದ್ರೌಪದಮ್ಮ, ಕನಕದಾಸ, ಬಸವಣ್ಣ, ಶನೇಶ್ವರ, ಆಂಜನೇಯ, ಗಂಗಮ್ಮ, ಮುನೇಶ್ವರ ಮತ್ತು ಚಂದ್ರಮೌಳೇಶ್ವರಸ್ವಾಮಿ ದೇವರುಗಳನ್ನು ವಿಶೇಷವಾಗಿ ವಿವಿಧ ಹೂಗಳಿಂದ ಅಲಂಕರಿಸಿ ಮುತ್ತಿನ ಪಲ್ಲಕ್ಕಿಗಳೊಂದಿಗೆ 18 ವಾಹನಗಳಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಲಾಯಿತು.
ಗ್ರಾಮದ ಬೀದಿಗಳನ್ನು ವಿದ್ಯುತ್ ದೀಪಗಳು ಹಾಗೂ ರಂಗೋಲಿಗಳಿಂದ ಅಲಂಕರಿಸಲಾಗಿತ್ತು. ಕರಗ ಮಹೋತ್ಸವವನ್ನು ಹೊರತುಪಡಿಸಿದರೆ, ಹದಿನೆಂಟು ಗ್ರಾಮ ದೇವರುಗಳ ಮೆರವಣಿಗೆಯನ್ನು ಗಣೇಶ ಮೂರ್ತಿಯ ವಿಸರ್ಜನೆಯ ಪ್ರಯುಕ್ತ ಆಯೋಜಿಸಿದ್ದು ವಿಶೇಷವಾಗಿತ್ತು. ಗ್ರಾಮದಲ್ಲಿ ಮಳೆ ಬೆಳೆ ಆಗಿ, ಶಾಂತಿ ನೆಲೆಸಲೆಂದು ಈ ದೇವರುಗಳ ಮೆರವಣಿಗೆ ಆಯೋಜಿಸಿರುವುದಾಗಿ ಗಂಗಾಧರೇಶ್ವರಸ್ವಾಮಿ ಗೆಳೆಯರ ಬಳಗದ ಸದಸ್ಯರು ತಿಳಿಸಿದರು.
ಮಂಜುನಾಥ್, ಶ್ರೀನಿವಾಸ್, ಚಂದ್ರು, ಜಗ್ಗು, ನಾರಾಯಣಸ್ವಾಮಿ, ಜೆ.ಎಂ.ವೆಂಕಟೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಣ್ಣುಗಳು ಮಣ್ಣಾಗುವ ಬದಲು ಅಂಧರಿಗೆ ಬೆಳಕಾಗುವಂತೆ ಪಣ ತೊಡಬೇಕು – ವೈದ್ಯಾಧಿಕಾರಿ ಡಾ.ಲವಕುಮಾರ್
ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣುಗಳು ದೇವರು ಕೊಟ್ಟ ವರದಾನವಾಗಿವೆ. ದೇಹಾಂತ್ಯದ ನಂತರ ನಮ್ಮ ಕಣ್ಣುಗಳು ಮಣ್ಣಾಗುವ ಬದಲು ಇಬ್ಬರು ಅಂಧರಿಗೆ ಬೆಳಕಾಗುವಂತೆ ಪಣ ತೊಡಬೇಕಾದ ಕಾರ್ಯ ಎಲ್ಲರಿಂದಾಗಬೇಕಿದೆ ಎಂದು ಜಂಗಮಕೋಟೆ ಸರ್ಕಾರಿ ಆಸ್ಪತ್ರೆಯ ನೇತ್ರ ವೈದ್ಯಾಧಿಕಾರಿ ಡಾ.ಲವಕುಮಾರ್ ಕರೆನೀಡಿದರು.
ತಾಲ್ಲೂಕಿನ ಜಂಗಮಕೋಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಂಘ, ಅಂಧತ್ವ ನಿವಾರಣಾ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅಂಧತ್ವ ನಿಯಂತ್ರಣಾ ಜಾಗೃತಿ ಕಾರ್ಯಕ್ರಮದ ಪ್ರಯುಕ್ತ ಮಕ್ಕಳ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ಬದುಕಿದ್ದಾಗಲೇ ನೇತ್ರದಾನ ಮಾಡುವುದಾಗಿ ವಾಗ್ದಾನವನ್ನು ಮಾಡಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು.ಕನ್ನಡಕ ಧರಿಸುವವರು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಅಸ್ತಮಾದಂತಹ ಕಾಯಿಲೆಗಳಿರುವ ವ್ಯಕ್ತಿಗಳೂ ನೇತ್ರದಾನ ಮಾಡಬಹುದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಗ್ರಾಮದಲ್ಲಿ ಘೋಷಣೆಗಳೊಂದಿಗೆ ಜಾಗೃತಿ ಜಾಥಾ ನಡೆಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿ, ಶಾಲಾ ಶಿಕ್ಷಕವರ್ಗದವರು, ಮತ್ತಿತರರು ಇದ್ದರು.
ಮಾದರಿ ಗ್ರಾಮ ಪಂಚಾಯತಿಗಳನ್ನಾಗಿಸಲು ಕಾರ್ಯಾಗಾರ
ಗ್ರಾಮ ಪಂಚಾಯತಿಗಳನ್ನು ಮಾದರಿ ಗ್ರಾಮ ಪಂಚಾಯತಿಗಳನ್ನಾಗಿ ಬದಲಾಯಿಸಲು ಗ್ರಾಮೀಣಾಭಿವೃದ್ಧಿಯೊಂದಿಗೆ ಮಾನವಾಭಿವೃದ್ಧಿಯನ್ನೂ ಮಾಡುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸುತ್ತಿರುವುದಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣಪ್ಪ ತಿಳಿಸಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ನಡೆದ ‘ಗ್ರಾಮ ಪಂಚಾಯತಿ ಮಾನವ ಅಭಿವೃದ್ಧಿ ಹಾಗೂ ಸಂಬಂಧ’ ಕುರಿತಂತೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನೈರ್ಮಲ್ಯ, ಆರೋಗ್ಯ, ಶುದ್ದ ಕುಡಿಯುವ ನೀರು, ಅಂಗನವಾಡಿ ಪೂರಕ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದ ಬಗ್ಗೆ ಅರಿವನ್ನು ಮೂಡಿಸುವ ತರಬೇತಿ ಕಾರ್ಯಕ್ರಮವಿದು. ಈ ಶಿಬಿರದ ಮೂಲಕ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡಲಾಗುತ್ತಿದೆ. ಗ್ರಂಥಾಲಯಗಳ ಆಧುನೀಕರಣ, ಆಡಳಿತ ಸುಧಾರಣೆಗೆ ಜನಪ್ರತಿನಿಧಿಗಳ ಪಾತ್ರ ತಿಳಿಸಿಕೊಡಲಾಗುತ್ತಿದೆ.
ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಮುಖ್ಯಶಿಕ್ಷಕರು, ಶಾಲಾಭಿವೃದ್ಧಿ ಅಧ್ಯಕ್ಷರುಗಳಿಗೆ ಈ ತರಬೇತಿ ಶಿಬಿರವನ್ನು ಆಯೋಜಿಸಿದ್ದು, ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳನ್ನು ವಿಂಗಡಿಸಿ ಹಂತಹಂತವಾಗಿ ಡಿಸೆಂಬರ್ ತಿಂಗಳವರೆಗೂ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಅಬ್ದುಲ್ ನಜೀರ್ ಸಾಬ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಮಂಜುನಾಥ್, ನಾಗಮಂಗಲ ಪಂಚಾಯತಿ ಕಾರ್ಯದರ್ಶಿ ಗೋಪಿ ಹಾಜರಿದ್ದರು.
ಮಳ್ಳೂರು ಗ್ರಾಮದ ಸಾಯಿನಾಥ ಜ್ಞಾನ ಮಂದಿರ ವಾರ್ಷಿಕೋತ್ಸವ
ಜಾತಿ ಬೇದ ತೊರೆದು ಎಲ್ಲರನ್ನೂ ಮಾನವೀಯತೆಯಿಂದ ಕಾಣಬೇಕೆಂದು ಬೆಂಗಳೂರಿನ ಮುಕ್ತಿನಾಗ ದೇವಾಲಯದ ಸಂಚಾಲಕ ಸುಬ್ರಮಣ್ಯ ಸ್ವಾಮಿ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ಭಾನುವಾರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಯಿಬಾಬಾ ಶ್ರೇಷ್ಠ ದಾರ್ಶನಿರಾಗಿದ್ದು ಸಾಮಾನ್ಯರಲ್ಲಿ ಸರಳವಾದ ರೀತಿಯಲ್ಲಿ ದೈವ ಸಾಕ್ಷಾತ್ಕಾರ ಮಾಡಿದವರು. ಯಾಂತ್ರಿಕ ಯುಗದ ಇಂದಿನ ಜೀವನದಲ್ಲಿ ಮಾನಸಿಕ ನೆಮ್ಮದಿಗಾಗಿ ದಾರ್ಮಿಕ ಕ್ಷೇತ್ರಗಳನ್ನು ಬೇಟಿ ನೀಡಬೇಕು. ಎಲ್ಲರಲ್ಲೂ ದೇವರಿದ್ದಾನೆ ಬಡವ ಶ್ರೀಮಂತ ಬೇದ ಬಾವ ತೊರೆದು ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂಬುದೇ ಸಾಯಿ ಬಾಬಾ ಆಶಯವಾಗಿತ್ತು ಎಂದು ಹೇಳಿದರು.
ದೇವಾಲಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಲಕ್ಮೀ ನರಸಿಂಹ ಕಲ್ಯಾಣೋತ್ಸವ, ಲಕ್ಮೀ ನರಸಿಂಹ ಹೋಮ ಏರ್ಪಡಿಸಲಾಗಿತ್ತು. ಸಾಯಿಬಾಬಾ ಪಲ್ಲಕ್ಕಿಯೊಂದಿಗೆ ಸುಮಂಗಲಿಯರು ಕಳಶ ಹೊತ್ತು ಗ್ರಾಮದಲ್ಲಿ ಶೋಭಾಯಾತ್ರೆ ನಡೆಸಿದರು. ವಿವಿದ ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಂಜೆ ಬಾಗ್ಯಲಕ್ಷೀ ಅಯ್ಯರ್ ಮತ್ತು ತಂಡದಿಂದ ಭಕ್ತಿಗೀತೆಗಳು, ಪವನ್ ಮತ್ತು ತಂಡದಿಂದ ಭರತ ನಾಟ್ಯ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಸಾಯಿನಾಥ ಜ್ಞಾನ ಮಂದಿರದ ಕಾರ್ಯಕಾರಿ ಸಮಿತಿಯ ಸದಸ್ಯರು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂಜಿನಿಯರ್‌ಗಳ ದಿನಾಚರಣೆಯ ಅಂಗವಾಗಿ ಎಂಜಿನಿಯರ್ ಆಗಿರುವ ಶಾಲೆಯ ವಿದ್ಯಾರ್ಥಿಗೆ ಸನ್ಮಾನ
ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಎಂಜಿನಿಯರ್‌ಗಳ ದಿನಾಚರಣೆಯನ್ನು ವಿಶಿಷ್ಠವಾಗಿ ಆಚರಿಸಲಾಯಿತು.
ಗುಡಿಹಳ್ಳಿ ಗ್ರಾಮದಲ್ಲಿ ಹುಟ್ಟಿ ಅದೇ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಎಂಜಿನಿಯರ್‌ಗಳಾಗಿ ಉದ್ಯೋಗದಲ್ಲಿರುವ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಜಿ.ಸಿ.ರಾಘವೇಂದ್ರ ಮತ್ತು ಜಿ.ಎಲ್. ನಳಿನ ಅವರನ್ನು ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ ಸಮಿತಿ, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಜಿ.ಸಿ.ರಾಘವೇಂದ್ರ, ತಾವು ಕಲಿತ ಶಾಲೆ ಮತ್ತು ಶಿಕ್ಷಕರ ಋಣವನ್ನು ತೀರಿಸಲಾಗದು. ನಮ್ಮಂತೆ ಇನ್ನೂ ಹೆಚ್ಚು ಮಂದಿ ಉನ್ನತ ಶಿಕ್ಷಣವನ್ನು ಪೂರೈಸಿ ಗ್ರಾಮಕ್ಕೆ ಮಾದರಿಯಾಗಲಿ, ಗ್ರಾಮದ ಏಳಿಗೆಗಾಗಿ ಶ್ರಮಿಸಲಿ. ನಮ್ಮ ಶಾಲೆಯ ಕೀರ್ತಿಯನ್ನು ಬೆಳಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
‘ಪ್ರಸ್ತುತ ಜಿ.ಸಿ.ರಾಘವೇಂದ್ರ ಅವರು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿ, ಜಿ.ಎಲ್. ನಳಿನ ಅವರು ಚಿಂತಾಮಣಿಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಇವರಿಂದ ಪ್ರೇರಣೆ ಪಡೆಯಬೇಕು’ ಎಂದು ಮುಖ್ಯ ಶಿಕ್ಷಕ ಶ್ರೀರಾಮಪ್ಪ ತಿಳಿಸಿದರು.
ಶಾಲಾಭಿವೃದ್ಧಿ ಸಮಿತಿಯ ಸೊಣ್ಣಪ್ಪ, ಶಾಲಾ ಶಿಕ್ಷಕರಾದ ಎಂ.ಬಾಲಚಂದ್ರ, ಎಂ.ಪರಮೇಶ್ವರಪ್ಪ, ಎಂ.ಎನ್.ಲಕ್ಷ್ಮಿ, ಸಿಬ್ಬಂದಿಗಳಾದ ರತ್ನಮ್ಮ, ಜಯಲಕ್ಷ್ಮಮ್ಮ, ಭಾಗ್ಯಮ್ಮ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಅಪ್ಪೇಗೌಡನಹಳ್ಳಿಯಲ್ಲಿ ಶ್ರೀರಾಮದಂಡು ವ್ರತಾಚರಣೆ
ಶಿಡ್ಲಘಟ್ಟದ ತಾಲ್ಲೂಕು ಅಪ್ಪೇಗೌಡನಹಳ್ಳಿ ಗ್ರಾಮಸ್ಥರು ಒಂಭತ್ತು ಗ್ರಾಮಗಳಿಗೆ ಶ್ರೀರಾಮ ಚಿತ್ರಪಟ ಮತ್ತು ದೀಪಸ್ತಂಭದೊಂದಿಗೆ ರಾಮ ಭಜನೆ ಮಾಡುತ್ತಾ ತೆರಳಿ ‘ಶ್ರೀರಾಮದಂಡು’ ವ್ರತಾಚರಣೆಯನ್ನು ನಡೆಸಿದರು. ವೀರಪ್ಪ, ಕುಮಾರಪ್ಪ, ಮುನಾಂಜಿನಪ್ಪ, ಎ.ಎಂ.ತ್ಯಾಗರಾಜ್, ನಾಗರಾಜು, ರಾಮಚಂದ್ರ, ಆನಂದ್, ಕೇಶವ ಹಾಜರಿದ್ದರು.
ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಲು ರೈತ ಸಂಘ ಹಾಗೂ ಹಸಿರುಸೇನೆ ಮನವಿ
ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸುವಂತೆ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಲ್ಲಿ 17,285 ಹೆಕ್ಟೇರ್ ಕೃಷಿ ಭೂಮಿಯಿದ್ದು, ಅದರಲ್ಲಿ 15,236 ಹೆಕ್ಟೇರ್ ಭೂಮಿಯಲ್ಲಿ ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಇದರಲ್ಲಿ ಶೇಕಡಾ 25 ರಷ್ಟು ಮೊಳಕೆ ಕೂಡ ಬಂದಿಲ್ಲ. ಸುಮಾರು 435 ಮಿಮೀ ಮಳೆ ಬೇಕಿದ್ದು ಕೇವಲ 198 ಮಿಮೀ ಮಳೆಯಾಗಿದೆ. ಕುಡಿಯಲು ನೀರಿಲ್ಲದೆ ಮೇವಿಲ್ಲದೆ ದನಕರುಗಳು ಸೊರಗುತ್ತಿವೆ. ಕೃಷಿ ಕಾರ್ಮಿಕರು ವಲಸೆ ಹೋಗತೊಡಗಿದ್ದಾರೆ. ಸರ್ಕಾರ ತಕ್ಷಣ ಕ್ರಮ ಕೈಗೊಂಡು ತಾಲ್ಲೂಕನ್ನು ಬರಪೀಡಿತವೆಂದು ಘೋಷಿಸಿ ರೈತರನ್ನು ಉಳಿಸಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ರೈತ ಕುಲ ನಾಶವಾಗಲಿದೆ. ಮೂಕ ಜಾನುವಾರುಗಳು ಮೇವು ಮತ್ತು ನೀರಿಲ್ಲದೆ ನಶಿಸಲಿವೆ. ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ರೈತರು ಎಲ್ಲಿಗೆ ಹೋಗುವುದೆಂದು ತಿಳಿಯದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ ಎಂದು ವಿವರಿಸಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರೊಂದಿಗೆ ಸೇರಿ ವಸ್ತುನಿಷ್ಠ ವರದಿಯನ್ನು ತಯಾರಿಸಿದ್ದು, ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬೇಳೆಯಾಗಿಲ್ಲ, ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ ಎಂಬುದನ್ನೆಲ್ಲಾ ನಮೂದಿಸಿ, ರೈತರ ಮನವಿಯನ್ನೂ ಸೇರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುತ್ತೇನೆ. ರೈತರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಉದ್ದೇಶ ಕೂಡ ಆಗಿದೆ ಎಂದು ಹೇಳಿದರು.
ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಆಂಜನೇಯರೆಡ್ಡಿ, ಮುನಿನಂಜಪ್ಪ, ಟಿ.ಕೃಷ್ಣಪ್ಪ, ಎಂ.ದೇವರಾಜ್, ಅಂಬರೀಷ್, ಗೋಪಾಲ್, ರಾಮಚಂದ್ರಪ್ಪ, ನಾರಾಯಣಸ್ವಾಮಿ, ಗಜೇಂದ್ರ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

