Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಲಕ್ಕಹಳ್ಳಿಯ ನಿವೃತ್ತ ಉಪನ್ಯಾಸಕ ಆರ್.ಆಂಜನೇಯ ಅವರ ಹಿಪ್ಪುನೇರಳೆ ಸೊಪ್ಪಿಗೆ ದುಷ್ಕರ್ಮಿಗಳು ವಿಷವನ್ನು ಸಿಂಪಡಿಸಿದ್ದರಿಂದಾಗಿ ರೇಷ್ಮೆ ಹುಳುಗಳು ಸಾವಿಗೀಡಾಗಿವೆ.
ಹಣ್ಣಾದ ಹಂತದಲ್ಲಿದ್ದ ಮತ್ತು ಮೂರನೇ ಹಂತದಲ್ಲಿದ್ದ ಒಟ್ಟಾರೆ 300 ಮೊಟ್ಟೆಗಳ ಹುಳುಗಳು ಸತ್ತಿರುವುದರಿಂದ ರೈತರಿಗೆ ಸುಮಾರು ಎರಡೂವರೆ ಲಕ್ಷ ರೂ ನಷ್ಟವಾಗಿದೆ. ಆರ್.ಆಂಜನೇಯ ಅವರ ನಾಲ್ಕು ಎಕರೆ ಹಿಪ್ಪುನೇರಳೆ ತೋಟದಲ್ಲಿ ಒಂದು ಎಕರೆ ಸೊಪ್ಪಿಗೆ ದುಷ್ಕರ್ಮಿಗಳು ಶನಿವಾರ ವಿಷ ಸಿಂಪಡಿಸಿದ್ದು, ಆ ಸೊಪ್ಪನ್ನು ಹುಳುಗಳಿಗೆ ತಿನ್ನಲು ಹಾಕಿದ್ದರಿಂದ ಸಂಪೂರ್ಣ ಬೆಳೆ ನಾಶವಾಗಿದೆ.
ಭಾನುವಾರ ಸ್ಥಳಕ್ಕೆ ಭೇಟಿ ನೀಡಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ ಮತ್ತು ವಿಸ್ತರಣಾಧಿಕಾರಿ ಎಂ.ಸಿ.ಭಾರತಿ ಅವರು ಸೊಪ್ಪಿಗೆ ವಿಷ ಸಿಂಪಡನೆಯನ್ನು ದೃಢೀಕರಿಸಿದ್ದು, ಅದರಿಂದಲೇ ಹುಳುಗಳು ಸತ್ತಿವೆ ಎಂದು ಹೇಳಿದ್ದಾರೆ. ಈ ವಿಷಯವಾಗಿ ರೈತ ಪೋಲೀಸರಿಗೆ ದೂರು ನೀಡಿದ್ದಾರೆ.
Sidlaghatta : ಶಾಲೆ ವಂಚಿತ ವಲಸೆ ಕಾರ್ಮಿಕ ಮಹಿಳೆ ಲಕ್ಷ್ಮಿಬಾಯಿ ಹೊಸಮನೆ ಅವರ 9 ವರ್ಷದ ಮಗಳು ರೂಪ ರನ್ನು ತಾತಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸಲು ಅಸಂಘ ಟಿತ ಕಾರ್ಮಿಕರ ಸಂಘದ ತಾಲ್ಲೂಕು ಅಧ್ಯಕ್ಷ ದೇವರ ಮಳ್ಳೂರು ವಿ.ಚನ್ನಕೃಷ್ಣ ಮುಂದಾಗಿದ್ದಾರೆ.
ಬಿಜಾಪುರ ಮೂಲದ ಲಕ್ಷ್ಮಿಬಾಯಿ ಹೊಸಮನೆ ಅವರು ತನ್ನ ಮಗಳೊಂದಿಗೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡು ವಿ.ಚನ್ನಕೃಷ್ಣ ಅವರು ಮಗುವನ್ನು ಶಾಲೆಗೆ ಸೇರಿಸಲು ಪೋಷಕರನ್ನು ಮನವೊಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದೇವರ ಮಳ್ಳೂರು ವಿ.ಚನ್ನಕೃಷ್ಣ, “ಶಿಕ್ಷಣ ಎಲ್ಲರ ಬಾಳು ಬೆಳಕಾಗಿಸುತ್ತದೆ. ಸಮಾಜದ ಹಿತ ಕಾಯುತ್ತದೆ. ವಿದ್ಯೆಇರುವ ಮನೆ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗುತ್ತದೆ. ಮಗುವನ್ನು ತಪ್ಪದೇ ಶಾಲೆಗೆ ಕಳುಹಿಸುವಂತೆ ಪೋಷಕರಲ್ಲಿ ಮನವಿ ಮಾಡಿರುವೆ. ಆ ಮಗುವಿನ ಶಿಕ್ಷಣಕ್ಕೆ ಬೇಕಾದ ಪೂರಕ ಸಹಾಯ ನಾನು ಮಾಡಿಸುತ್ತೇನೆ ಎಂಬುದಾಗಿ ತಿಳಿಸಿರುವೆ. ಮಗುವನ್ನು ಶಾಲೆಗೆ ಸೇರಿಸುವ ವಿಚಾರದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳಾದ ಬಿ.ಆರ್.ಪಿ. ಕೆ. ಮಂಜುನಾಥ, ದೇವರಮಳ್ಳೂರು ಕ್ಲಸ್ಟರ್ ಸಿ.ಆರ್.ಪಿ ಬಿ.ವಿ. ಮಂಜುನಾಥ ಅವರು ಸಹಕಾರ ನೀಡುತ್ತಿದ್ದಾರೆ. ಶಾಲಾ ಮುಖ್ಯ ಶಿಕ್ಷಕರಾದ ಸುದರ್ಶನ್ ಸಹ ಶಾಲೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಈ ರೀತಿಯ ಮಕ್ಕಳು ಯಾರಿಗೇ ಕಂಡು ಬಂದರೂ ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಬೇಕು” ಎಂದು ಅವರು ಹೇಳಿದರು.
Sidlaghatta : ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಮುಂದಿನ ತಿಂಗಳು ಜುಲೈ 9 ರಂದು ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳದ ಕೆವಿ ಭವನದಲ್ಲಿ ನಡೆಯುತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಅಂಗನವಾಡಿ ನೌಕರರಿಗೆ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಿ 50 ವರ್ಷಗಳಾಗಿವೆ. ಐಸಿಡಿಎಸ್ ಯೋಜನೆಯನ್ನು ಖಾಯಂಗೊಳಿಸಬೇಕು, ಐಸಿಡಿಎಸ್ ಯೋಜನೆಗೆ ಮೀಸಲಿಡುವ ಅನುದಾನವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಎಲ್ಲ ಅಂಗನವಾಗಿ ಶಿಕ್ಷಕರು, ಸಹಾಯಕರನ್ನು ಖಾಯಂಗೊಳಿಸಬೇಕು, ಅದುವರೆಗೂ 26 ಸಾವಿರ ರೂ.ಕನಿಷ್ಠ ವೇತನ ನೀಡಬೇಕು ಮತ್ತು ನಿವೃತ್ತಿ ನಂತರ 10 ಸಾವಿರ ರೂ,ಮಾಸಿಕ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಹೊಸದಾಗಿ ಟಿ.ಎಚ್.ಆರ್ ಮೂಲಕ ಫಲಾನುಭವಿಗಳ ಫೋಷಣ್ ಟ್ರ್ಯಾಕರ್ ಕೆಲಸಗಳಿಗೆ ಅಪ್ ಡೇಟೆಡ್ ಮೊಬೈಲ್ ಹ್ಯಾಂಡ್ ಸೆಟ್ ವಿತರಿಸಬೇಕು, ನೆಟ್ ಗಾಗಿ ವಾರ್ಷಿಕವಾಗಿ ನೀಡುತ್ತಿರುವ 2 ಸಾವಿರ ರೂಗಳನ್ನು ಇನ್ನೂ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ತಿಂಗಳೂ ಮಗುವಿನ ಫೋಟೋವನ್ನು ಅಪ್ ಡೇಟ್ ಮಾಡುವ ಕೆಲಸವನ್ನು ಪ್ರತಿ ತಿಂಗಳ ಬದಲಿಗೆ ಮೂರು ತಿಂಗಳಿಗೊಮ್ಮೆ ಫೋಟೋ ಅಪ್ ಡೇಟ್ ಮಾಡಲು ಅವಕಾಶ ನೀಡಬೇಕು ಎಂದರು.
ಕಾರ್ಮಿಕ ಕಾನೂನುಗಳಿಗೆ ತಿದ್ದುಪಡಿ ತಂದು ನೌಕರರು ಸಂಘಗಳನ್ನು ರಚಿಸುವ, ಸಂಘಟಿಸುವ ಮತ್ತು ಮುಷ್ಕರ, ಪ್ರತಿಭಟನೆ ನಡೆಸುವ ಹಕ್ಕುಗಳಿಗೆ ಕಡಿವಾಣ ಹಾಕುವ ಕೆಲಸಕ್ಕೆ ಮುಂದಾಗಿದ್ದು ತಿದ್ದುಪಡಿ ಮಾಡುವ ಕೆಲಸವನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಹಾಗೆಯೆ 2023 ಏಪ್ರಿಲ್ 1 ರಂದು 1972 ರ ಗ್ರಾಜ್ಯುಟಿ ಪಾವತಿ ಕಾಯಿದೆಗೆ ತಿದ್ದುಪಡಿ ತಂದು 287 ಕಾರ್ಯಕರ್ತೆಯರು, 1204 ಸಹಾಯಕಿಯರಿಗೆ ಗ್ರಾಜ್ಯುಟಿ ಪಾವತಿಸಿದ್ದು ಅದೇ ರೀತಿ 2011 ರಿಂದ ನಿವೃತ್ತಿಯಾದ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕರಿಗೂ ಇದರ ಅನ್ವಯ ಗ್ರಾಜ್ಯುಟಿ ನೀಡಬೇಕೆಂದು ಮನವಿ ಮಾಡಿದರು.
ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈಡೇರಿಸುವಂತೆ ಒತ್ತಾಯಿಸಿ ಜುಲೈ 9 ರಂದು ರಾಜ್ಯದ ಎಲ್ಲ ಅಂಗನವಾಗಿ ಕೇಂದ್ರಗಳನ್ನು ಮುಚ್ಚಿ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷೆ ಲಕ್ಷ್ಮಿದೇವಮ್ಮ, ಕಾರ್ಯದರ್ಶಿ ಕೆ.ರತ್ನ, ಕೋಲಾರ ಜಿಲ್ಲಾಧ್ಯಕ್ಷೆ ಕಲ್ಪನ, ಕಾರ್ಯದರ್ಶಿ ಆಂಜಿನಮ್ಮ ಹಾಜರಿದ್ದರು.
Sidlaghatta : ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿಯು ಜಮೀನುಗಳನ್ನು ಸ್ವಾನಪಡಿಸಿಕೊಂಡು ಕೈಗಾರಿಕೆಗಳನ್ನು ಆರಂಭಿಸುವಂತೆ ಒತ್ತಾಯಿಸಿ ಜಂಗಮಕೋಟೆ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯು ಜೂ.30 ರಂದು ಸೋಮವಾರ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲು ಸಜ್ಜಾಗಿದೆ.
ಕೆಐಎಡಿಬಿ ರೈತಪರ ಹೋರಾಟ ಸಮಿತಿಯು ಹಮ್ಮಿಕೊಂಡಿರುವ ಮೆರವಣಿಗೆ ಮತ್ತು ಪ್ರತಿಭಟನೆಗೆ ದಲಿತ ಸಂಘಟನೆಗಳ ಒಕ್ಕೂಟ, ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಮಹಿಳಾ ಸಂಘಟನೆಗಳ ಒಕ್ಕೂಟ ಬೆಂಬಲ ವ್ಯಕ್ತಪಡಿಸಿದೆ.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀಬ್ಯಾಟರಾಯಸ್ವಾಮಿ ದೇವಾಲಯ ಆವರಣದಲ್ಲಿ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯ ಸಭೆ ನಡೆಸಿ ಸಭೆಯಲ್ಲಿ ಜೂ.30 ರಂದು ನಡೆಯುವ ಮೆರವಣಿಗೆ, ಪ್ರತಿಭಟನೆ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು.
ಈ ಕುರಿತು ಜಂಗಮಕೋಟೆ ಕೆಐಎಡಿಬಿ ರೈತ ಪರ ಹೋರಾಟ ಸಮಿತಿಯ ಪ್ರತೀಶ್ ಸುದ್ದಿಗಾರರೊಂದಿಗೆ ಮಾತನಾಡಿ, ಅದಷ್ಟು ಬೇಗ ಕೆಐಎಡಿಬಿಯು ಜಮೀನಿನ ಸ್ವಾಧೀನ ಪ್ರಕ್ರಿಯೆ ನಡೆಸಿ ಕೈಗಾರಿಕೆಗಳನ್ನು ಆರಂಭಿಸಬೇಕು. ತಾಲ್ಲೂಕಿನ ಪ್ರತಿ ಮನೆಗೂ ಒಂದು ಉದ್ಯೋಗ ಕೊಡಬೇಕೆಂದು ಆಗ್ರಹಿಸಿದರು.
ನಡಿಪಿನಾಯಕನಹಳ್ಳಿ ಗ್ರಾಮದ ರೈತ ಚನ್ನಕೃಷ್ಣಪ್ಪನ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ದ ಪ್ರಕರಣ ದಾಖಲಿಸಬೇಕು ಮತ್ತು ಚನ್ನಕೃಷ್ಣಪ್ಪನ ಮೇಲೆ ದಾಖಲಾಗಿರುವ ಸುಳ್ಳು ಕೇಸನ್ನು ರದ್ದುಪಡಿಸಬೇಕು. ಅನೇಕ ಮಂದಿ ರೈತರಿಗೆ ಆಸೆ ಆಮಿಷಗಳನ್ನು ಒಡ್ಡಿ ಪಿಎಸಿಎಲ್ ಕಂಪನಿಗೆ ಜಮೀನುಗಳನ್ನು ಜಿಪಿಎ ಮಾಡಿದ್ದು ಪಿಎಸಿಎಲ್ ಕಂಪನಿ ವಿರುದ್ದ ಕ್ರಮ ತೆಗೆದುಕೊಳ್ಳಬೇಕು. ಪಿಎಸಿಎಲ್ ಕಂಪನಿಯು ಜಿಪಿಎ ಮಾಡಿಕೊಂಡ ಜಮೀನಿನ ಮೂಲ ಮಾಲೀಕರಿಗೆ ಕೆಐಎಡಿಬಿಯು ಹಣ ಪಾವತಿಸಬೇಕು ಎಂದು ಆಗ್ರಹಿಸಿದರು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜೂನ್ 30 ರಂದು ಸೋಮವಾರ ಬೆಳಗ್ಗೆ 11 ಗಂಟೆಗೆ ಶಿಡ್ಲಘಟ್ಟ ನಗರದ ಸಾರಿಗೆ ಬಸ್ ನಿಲ್ದಾಣದ ಇಂದಿರಾ ಕ್ಯಾಂಟೀನ್ ನಿಂದ ತಾಲ್ಲೂಕು ಕಚೇರಿಯವರೆಗೂ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ತಾತಹಳ್ಳಿ ಚಲಪತಿ, ಕಸ್ತೂರಿ ಕನ್ನಡ ಜನಪರ ವೇದಿಕೆ ಜಿಲ್ಲಾಧ್ಯಕ್ಷ ರಾಮಾಂಜನೇಯ, ಮಳಮಾಚನಹಳ್ಳಿ ರಾಮಾಂಜಿ, ಪ್ರದೀಪ್, ಜಿಲ್ಲಾ ಕಾರ್ಯಾಧ್ಯಕ್ಷ ಎಚ್.ಎನ್.ಕದಿರೇಗೌಡ, ಭಕ್ತರಹಳ್ಳಿ ವಿಶ್ವನಾಥ್, ಸ್ವಾಭಿಮಾನಿ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕಿ ನಾಗವೇಣಿ, ಮಾದಿಗ ದಂಡೋರ ಕೃಷ್ಣಪ್ಪ, ದಲಿತ ಮುಖಂಡರಾದ ಜೆ.ಎನ್.ಪ್ರಕಾಶ್, ರಾಮದಾಸ್, ರೈತ ಸಂಘದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಸುಬ್ರಮಣಿ, ತಾಲ್ಲೂಕು ಅಧ್ಯಕ್ಷ ಮುನೇಗೌಡ, ಪ್ರದೀಪ್, ಈರಪ್ಪ, ಮಧು, ರಾಜೇಶ್, ಗಂಗಧರ್, ಮೂರ್ತಿ ಸಭೆಯಲ್ಲಿ ಭಾಗವಹಿಸಿದ್ದರು.
Kumbiganahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ತಿಮ್ಮಸಂದ್ರ ಗ್ರಾಮದ ರಾಮಕೃಷ್ಣಪ್ಪ 11 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ 9 ಮತಗಳನ್ನು ಪಡೆದ ಸೋಲು ಅನುಭವಿಸಿದ್ದಾರೆ.
ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಬಿ.ತಿಮ್ಮಸಂದ್ರ ರಾಮಕೃಷ್ಣಪ್ಪ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಹಾರಡಿ ಬೈರೇಗೌಡ ಅವರ ಎರಡು ನಾಮಪತ್ರ ಸಲ್ಲಿಕೆಯಾಗಿತ್ತು.
ನೂತನ ಅಧ್ಯಕ್ಷ ಬಿ.ತಿಮ್ಮಸಂದ್ರ ರಾಮಕೃಷ್ಣಪ್ಪ ಮಾತನಾಡಿ, ಸರ್ಕಾರದ ಸವಲತ್ತುಗಳನ್ನು ಗ್ರಾಮ ಪಂಚಾಯಿತಿ ಮೂಲಕ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡುತ್ತೇನೆ. ಅಭಿವೃದ್ಧಿಗೆ ಎಲ್ಲಾ ಸದಸ್ಯರ ಜೊತೆಗೂಡಿ ಶ್ರಮಿಸುತ್ತೇನೆ. ಗ್ರಾಮಗಳ ಅಭಿವೃದ್ಧಿಗೂ ಒತ್ತು ನೀಡಲಾಗುವುದು” ಎಂದು ಹೇಳಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಚುನಾವಣಾ ಅಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ರವಿ ರವರು ಕಾರ್ಯ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್.ಪಿ ನಾಗರಾಜ್, ವಿ. ಲೋಕೇಶ್, ಸಿದ್ಧಲಿಂಗಪ್ಪ, ಮುನಿರಾಜು, ರಾಮ್ ದಾಸ್, ನಾಗಮಣಿ ಕೇಶವಮೂರ್ತಿ, ರಾಜಣ್ಣ, ಮಂಜುನಾಥ್, ಅಶ್ವಿನಿ, ನಾಗಲಕ್ಷ್ಮಿ, ನಾಗರತ್ನಮ್ಮ, ಮುಖಂಡರಾದ ಎಚ್.ಪಿ.ಆಂಜಿನಪ್ಪ, ದೇವಣ್ಣ, ಹೇಮರ್ಲಹಳ್ಳಿ ಕೇಶವ ಮೂರ್ತಿ, ಶಾಂತಕುಮಾರ, ರಾಮಣ್ಣ, ವೆಂಕಟರೆಡ್ಡಿ, ರಾಘು, ದೇವರಾಜ್, ಮಂಜುನಾಥ್, ಆಂಜಿನಪ್ಪ ಹಾಜರಿದ್ದರು.
Sidlaghatta : ಕೆಂಪೇಗೌಡರು ಎಲ್ಲ ಮತಧರ್ಮಗಳನ್ನು ಸಮಭಾವದಿಂದ ಕಂಡವರು. ಅನೇಕ ಚಕ್ರವರ್ತಿಗಳು, ಸಾಮ್ರಾಟರು, ರಾಜ ಮನೆತನಗಳು ಕಟ್ಟಿದ ರಾಜಧಾನಿಗಳು, ಬೃಹತ್ ನಗರಗಳು ಇಂದು ಅಸ್ತಿತ್ವದಲ್ಲಿಲ್ಲ. ಆದರೆ ಕೆಂಪೇಗೌಡರು ಕಟ್ಟಿದ ಬೆಂಗಳೂರು ಈಗಲೂ ಉತ್ತರೋತ್ತರವಾಗಿ ಬೆಳೆಯುತ್ತಲೇ ಇದೆ. ನಾಡಿನ ಅಭಿವೃದ್ಧಿ ಚಿಂತಕರಿಗೆ ಅವರು ಮಾದರಿ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಾಡ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಕೆಂಪೇಗೌಡ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ 516 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಪ್ರಭುಗಳು ಬೆಂಗಳೂರಿನ ನಿರ್ಮಾತೃ, ಅಪ್ರತಿಮ ಆಡಳಿತಗಾರರಷ್ಟೇ ಆಗಿರಲಿಲ್ಲ, ಅವರೊಬ್ಬರು ಅನನ್ಯ ದಾರ್ಶನಿಕರು, ಶಾಂತಿಪ್ರಿಯರು, ಸರ್ವಜನರ ಶ್ರೇಯಸ್ಸಿಗಾಗಿ ದುಡಿದ ಮಹಾನ್ ಮಾನವತಾವಾದಿ. ಅಭಿವೃದ್ಧಿ, ಶಾಂತಿ, ಸೌಹಾರ್ದತೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನಾಡಪ್ರಭುಗಳು ಹಾಕಿಕೊಟ್ಟ ಹಾದಿ ನಮಗೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ 108 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಡಲಾಯಿತು.
ನಂತರ ಚಿಂತಾಮಣಿ ಮಾರ್ಗದಲ್ಲಿನ ಶ್ರೀಕೆಂಪೇಗೌಡರ ಪುತ್ಥಳಿಗೆ ಶಾಸಕರು ಹಾಗೂ ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಮಾಲಾರ್ಪಣೆ ಮಾಡಿದರು.
ಸಾರಿಗೆ ಬಸ್ ನಿಲ್ದಾಣದ ಶ್ರೀಸಲ್ಲಾಪುರಮ್ಮ ದೇವಿ ದೇವಾಲಯದ ಆವರಣದಲ್ಲಿ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆಗೆ ಶಾಸಕ ಬಿ.ಎನ್.ರವಿಕುಮಾರ್ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಮುತ್ತಿನ ಪಲ್ಲಕ್ಕಿಗಳ ಮೆರವಣಿಗೆ ಸಾಗಿತು. ವಿವಿಧ ಜನಪದ ಕಲಾ ತಂಡಗಳು ಮೆರವಣಿಗೆಗೆ ಕಳೆ ಕಟ್ಟಿದ್ದವು.
ಕೆಂಪೇಗೌಡರ ಬದುಕು ಸಾಧನೆ ಕುರಿತು ಹಾಡುಗಳು, ಘೋಷಣೆಗಳು ಮುಗಿಲು ಮುಟ್ಟಿದ್ದವು. ಕೋಟೆ ವೃತ್ತದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಪ್ರಮುಖರನ್ನು ಸನ್ಮಾನಿಸಲಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುತ್ತಿನ ಪಲ್ಲಕ್ಕಿಗಳ ವಾಹನಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಶಾಸಕ ಬಿ.ಎನ್.ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಆಂಜಿನಪ್ಪ, ಸೀಕಲ್ ಆನಂದಗೌಡ, ಅಪ್ಪೇಗೌಡನಹಳ್ಳಿ ಕೆ.ಲಕ್ಷ್ಮೀನಾರಾಯಣರೆಡ್ಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಯುವ ಸೇನೆ ಅಧ್ಯಕ್ಷ ವೆಂಕಟಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಂಕ್ ಮುನಿಯಪ್ಪ, ನಗರಸಭೆ ಅಧ್ಯಕ್ಷ ವೆಂಕಟಸ್ವಾಮಿ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಮೇಲೂರು ಮಂಜುನಾಥ್,ತಹಶೀಲ್ಧಾರ್ ಗಗನ ಸಿಂಧು, ಇಒ ಹೇಮಾವತಿ, ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಶ್ರೀನಿವಾಸ್, ನಗರಸಭೆ ಪೌರಾಯುಕ್ತ ಮೋಹನ್ ಕುಮಾರ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಕೆಂಪೇಗೌಡರ ಉತ್ಸವದಲ್ಲಿ ಪಾಲ್ಗೊಂಡಿದ್ದರು.
Sidlaghatta : ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಯಿಡಿಯುವುದಾಗಿ ಶಿಕ್ಷಣ ಇಲಾಖೆಯು ಅನುದಾನಿತ ಶಿಕ್ಷಕರ ಮೇಲೆ ಪ್ರಹಾರ ಮಾಡಿದ್ದು, ಅದನ್ನು ತಕ್ಷಣವೇ ಕೈಬಿಡಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘವು ಆಗ್ರಹಿಸಿದೆ.
ನಗರದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ,
ಕಳೆದ ಏಪ್ರಿಲ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಸಹ ಶಿಕ್ಷಕರ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳ ಬೋಧಕರನ್ನು ಗುರುತಿಸಿ ಅಂತವರ ವಾರ್ಷಿಕ ವೇತನ ಬಡ್ತಿಯನ್ನು ತಡೆಯಿಡಿಯುವುದು ಹಾಗೂ ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಲ್ಲಿ ಅಂತಹ ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಯಿಡಿಯುವುದಾಗಿ ಇಲಾಖೆಯು ಅನುದಾನಿತ ಶಿಕ್ಷಕರ ಮೇಲೆ ಪ್ರಹಾರ ಮಾಡಿದೆ. ಅದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.
ಎಸ್.ಎಸ್.ಎಲ್.ಸಿ ಫಲಿತಾಂಶ ಕಡಿಮೆ ಬರುವುದಕ್ಕೆ ಕೇವಲ ಪ್ರೌಢಶಾಲಾ ಶಿಕ್ಷಕರು ಮಾತ್ರ ಕಾರಣವಾಗದೇ ವಿದ್ಯಾರ್ಥಿಗಳು ತಾವು ಬೆಳೆದು ಬಂದಿರುವ ಪರಿಸರ. ಪ್ರಾಥಮಿಕ ಹಂತದಲ್ಲಿ ಕಲಿತಿರುವಂತಹ ಶಿಕ್ಷಣವೂ ಕಾರಣವಾಗುತ್ತದೆ. ಏಳನೇ ತರಗತಿಯವರೆಗೆ ಯಾವುದೇ ರೀತಿಯ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಇಲ್ಲದೇ ಇರುವುದರಿಂದ ನೇರವಾಗಿ ಯಾವುದೇ ಅಡೆತಡೆಗಳಿಲ್ಲದೆ ಕನಿಷ್ಠ ಸಂಖ್ಯಾಜ್ಞಾನ, ಮೂಲಭೂತ ಸಾಕ್ಷರತೆ ಪಡೆಯದಿರುವ, ಮಕ್ಕಳು ಎಂಟನೇ ತರಗತಿಗೆ ಪ್ರವೇಶ ಪಡೆಯುತ್ತಿರುವುದೂ ಮತ್ತೊಂದು ಕಾರಣ. ಪೋಷಕರು ಹಾಗೂ ಕೆಲವು ಶಾಲಾ ಆಡಳಿತ ಮಂಡಳಿಯ ಅಸಹಕಾರ, ವಿದ್ಯಾರ್ಥಿಗಳ ನಿರಂತರ ಗೈರು ಹಾಜರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿ ಖಾಲಿ ಇರುವ ಶಿಕ್ಷಕರುಗಳ ಹುದ್ದೆಗಳನ್ನು ತುಂಬದೇ ಇರುವಂತಹ ಸಮಸ್ಯೆಗಳು ಕೂಡ ಕಾರಣವಾಗಬಹುದಾಗಿದೆ ಎಂದು ವಿವರಿಸಿದರು.
ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಶ್ವತ್ಥರೆಡ್ಡಿ ಮಾತನಾಡಿ, ಬಹಳಷ್ಟು ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲಾಗದೇ ಕೇವಲ ಒಬ್ಬರು ಅಥವಾ ಇಬ್ಬರು ವಿಷಯ ಶಿಕ್ಷಕರು ಮಾತ್ರ ತರಗತಿಗಳಲ್ಲಿ ಪಾಠ ಬೋಧನೆ ಮಾಡುತ್ತಿದ್ದಾರೆ. ಪ್ರೌಢಶಾಲಾ ಸಹ ಶಿಕ್ಷಕರು ಬೆಳಿಗ್ಗೆ 9 ರಿಂದ 10 ರವರೆಗೆ ವಿಶೇಷ ತರಗತಿ, ಸಂಜೆ ದತ್ತು ಮಕ್ಕಳ ಯೋಜನೆ, ಗುಂಪು ಅಧ್ಯಯನ, ರಾತ್ರಿ ಅವಧಿಗಳಲ್ಲೂ ಹಾಗೂ ರಜಾ ಅವಧಿಗಳಲ್ಲೂ ಅಭ್ಯಾಸ ಮಾಡಿಸುವುದು ಮತ್ತು ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನಗಳನ್ನು ಚಾಚುತಪ್ಪದೆ ಪಾಲಿಸಿದರೂ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಾಗುತ್ತಿಲ್ಲ. ಅನುದಾನಿತ ಸಂಸ್ಥೆಗಳ ಮಾನ್ಯತೆ ನವೀಕರಣ ಹಾಗೂ ಇತರೆ ತಾಂತ್ರಿಕ ತೊಂದರೆಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಇಲಾಖೆಯು ಈ ರೀತಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಿ ಹೊರಡಿಸುವ ಆದೇಶಗಳು ಶಿಕ್ಷಕರನ್ನು ಮಾನಸಿಕ ಒತ್ತಡಕ್ಕೆ ದೂಡುತ್ತಿವೆ ಎಂದರು.
ಶಿಕ್ಷಕ ಜಯಶಂಕರ್ ಮಾತನಾಡಿ, ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಮತ್ತು ವೇತನಾನುದಾನ ತಡೆಯಿಡಿಯುವುದರಿಂದಾಗಿ ಶಿಕ್ಷಕರ ಕುಟುಂಬಗಳ ಜೀವನ ನಿರ್ವಹಣೆಯು ತುಂಬಾ ಕಷ್ಟಕರವಾಗುತ್ತದೆ. ಈ ಆದೇಶವನ್ನು ಹಿಂಪಡೆದು ಶಿಕ್ಷಕರು ಯಾವುದೇ ಗೊಂದಲವಿಲ್ಲದೇ ಬೋಧನೆ ಮಾಡಲು ಅನುವು ಮಾಡಿಕೊಡಬೇಕಿದೆ ಎಂದು ಹೇಳಿದರು.
ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಮನಗೂಳಿ, ಸಂಘದ ಪದಧಿಕಾರಿಗಳಾದ ಮೂರ್ತಿ, ಹರೀಶ್, ಎಂ.ಕೆ.ಸಿದ್ಧರಾಜು, ಶ್ರೀನಿವಾಸರೆಡ್ಡಿ, ಪ್ರಭಾಕರ್, ನಾಗರಾಜು, ಮಂಜುನಾಥ್, ಅನುದಾನಿತ ಶಾಲಾ ಶಿಕ್ಷಕರು ಹಾಜರಿದ್ದರು.
Sidlaghatta : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ಹೋರಾಟ ಸಮಿತಿಯ ನೇತೃತ್ವದಲ್ಲಿ ಗುರುವಾರ ಶಿಡ್ಲಘಟ್ಟ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು, ದೇವನಹಳ್ಳಿಯಲ್ಲಿ ಜೂನ್ 25 ರಂದು ರೈತರು ನಡೆಸಿದ ಬೃಹತ್ ಹೋರಾಟದ ವೇಳೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಸೇರಿದಂತೆ ಸುಮಾರು 300 ರಿಂದ 500 ಪ್ರತಿಭಟನಾಕಾರರನ್ನು ಬಂಧಿಸಿರುವುದು ಆಕ್ಷೇಪಾರ್ಹ ಎಂದರು. ಪ್ರತಿಭಟನಾಕಾರರ ಮೇಲೆ ಯಾವುದೇ ಕಾನೂನು ಪ್ರಕರಣಗಳನ್ನು ದಾಖಲಿಸಬಾರದು ಎಂದು ಅವರು ಒತ್ತಾಯಿಸಿದರು.
ರೈತರು ತಮ್ಮ ಭೂಮಿಯನ್ನು ನೀಡಬೇಕಾದರೆ, ಅವರ ಹೆಸರಲ್ಲಿ ಪಹಣಿ ದಾಖಲೆ ಇರಬೇಕು, ಗುತ್ತಿಗೆ ಆಧಾರದ ಮೇಲೆ ಬಾಡಿಗೆ ರೂಪದಲ್ಲಿ ಮಾತ್ರ ಭೂಮಿಯನ್ನು ಕೈಗಾರಿಕಾ ಉದ್ದೇಶಗಳಿಗೆ ಬಳಸಬೇಕು ಎಂಬುದು ಸಂವಿಧಾನಬದ್ಧ ಹಕ್ಕು ಎಂಬುದನ್ನು ಸಂಯುಕ್ತ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ. ರೈತರ ಒಪ್ಪಿಗೆ ಇಲ್ಲದೆ ಭೂಮಿ ಪಡೆದುಕೊಳ್ಳುವುದು ಸರ್ಕಾರಕ್ಕೆ ಶಿಷ್ಟಾಚಾರವೂ ಅಲ್ಲ, ಕಾನೂನುಬದ್ಧವೂ ಅಲ್ಲ ಎಂದರು.
ರೈತರ ಭೂಮಿಯನ್ನು ಜಬರದಸ್ತಿಯಾಗಿ ತೆಗೆದುಕೊಳ್ಳುವುದು ಒಂದು ತೀವ್ರವಾದ ಅನ್ಯಾಯ. ಮುಂದಿನ ದಿನಗಳಲ್ಲಿ ಇದೇ ಪದ್ಧತಿ ಅನುಸರಿಸಿದರೆ ರಾಜ್ಯಾದ್ಯಂತ ಪ್ರಗತಿಪರ ಸಂಘಟನೆಗಳ ನೆರವಿನಿಂದ ಬೃಹತ್ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯಪಾಲರಿಗೆ ಶಿರಸ್ತೆದಾರ್ ರಾಜು ಎನ್.ಪಿ. ರವರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು. ಸರ್ಕಾರದ ಈ ಕ್ರಮದ ವಿರುದ್ಧ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಗೌರವಾಧ್ಯಕ್ಷ ಭಕ್ತರಹಳ್ಳಿ ಕೋಟೆ ಚನ್ನೇಗೌಡ, ಕಾರ್ಯಾಧ್ಯಕ್ಷ ಮಾರುತಿ, ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸಿ.ಎನ್. ಶ್ರೀಧರ್, ಖಜಾಂಜಿ ಸಿ.ಬಿ. ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಗೋರ್ಲಪ್ಪ, ಯುವ ಘಟಕದ ಅಧ್ಯಕ್ಷ ಮನೋಜ್ ಕುಮಾರ್ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.