SSLC ಕಡಿಮೆ ಫಲಿತಾಂಶ, ವೇತನ ಬಡ್ತಿ ತಡೆ; ಅನುದಾನಿತ ಶಾಲಾ ಶಿಕ್ಷಕರ ಮೇಲೆ ಇಲಾಖೆ ಪ್ರಹಾರ

0
80
government SSLC Aided School Teachers Salary Increment

Sidlaghatta : ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಯಿಡಿಯುವುದಾಗಿ ಶಿಕ್ಷಣ ಇಲಾಖೆಯು ಅನುದಾನಿತ ಶಿಕ್ಷಕರ ಮೇಲೆ ಪ್ರಹಾರ ಮಾಡಿದ್ದು, ಅದನ್ನು ತಕ್ಷಣವೇ ಕೈಬಿಡಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘವು ಆಗ್ರಹಿಸಿದೆ.

ನಗರದ ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ ಮಾತನಾಡಿ,

ಕಳೆದ ಏಪ್ರಿಲ್‌ ನಲ್ಲಿ ನಡೆದ ಎಸ್‌.ಎಸ್‌.ಎಲ್‌.ಸಿ ಪರೀಕ್ಷಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಸಹ ಶಿಕ್ಷಕರ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ವಿಷಯಗಳ ಬೋಧಕರನ್ನು ಗುರುತಿಸಿ ಅಂತವರ ವಾರ್ಷಿಕ ವೇತನ ಬಡ್ತಿಯನ್ನು ತಡೆಯಿಡಿಯುವುದು ಹಾಗೂ ಅನುದಾನ ಪಡೆಯುತ್ತಿರುವ ವಿಷಯ ಶಿಕ್ಷಕರು ನಿರಂತರ ಮೂರು ವರ್ಷಗಳಲ್ಲಿ ಶೇ 60 ಕ್ಕಿಂತ ಕಡಿಮೆ ಫಲಿತಾಂಶ ನೀಡಿದ್ದಲ್ಲಿ ಅಂತಹ ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಯಿಡಿಯುವುದಾಗಿ ಇಲಾಖೆಯು ಅನುದಾನಿತ ಶಿಕ್ಷಕರ ಮೇಲೆ ಪ್ರಹಾರ ಮಾಡಿದೆ. ಅದನ್ನು ತಕ್ಷಣವೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಎಸ್‌.ಎಸ್‌.ಎಲ್‌.ಸಿ ಫಲಿತಾಂಶ ಕಡಿಮೆ ಬರುವುದಕ್ಕೆ ಕೇವಲ ಪ್ರೌಢಶಾಲಾ ಶಿಕ್ಷಕರು ಮಾತ್ರ ಕಾರಣವಾಗದೇ ವಿದ್ಯಾರ್ಥಿಗಳು ತಾವು ಬೆಳೆದು ಬಂದಿರುವ ಪರಿಸರ. ಪ್ರಾಥಮಿಕ ಹಂತದಲ್ಲಿ ಕಲಿತಿರುವಂತಹ ಶಿಕ್ಷಣವೂ ಕಾರಣವಾಗುತ್ತದೆ. ಏಳನೇ ತರಗತಿಯವರೆಗೆ ಯಾವುದೇ ರೀತಿಯ ಗುಣಾತ್ಮಕ, ನಿರ್ಣಯಾತ್ಮಕ ಮಾನದಂಡಗಳ ಪರೀಕ್ಷೆಗಳು ಮತ್ತು ಮೌಲ್ಯಮಾಪನ ಇಲ್ಲದೇ ಇರುವುದರಿಂದ ನೇರವಾಗಿ ಯಾವುದೇ ಅಡೆತಡೆಗಳಿಲ್ಲದೆ ಕನಿಷ್ಠ ಸಂಖ್ಯಾಜ್ಞಾನ, ಮೂಲಭೂತ ಸಾಕ್ಷರತೆ ಪಡೆಯದಿರುವ, ಮಕ್ಕಳು ಎಂಟನೇ ತರಗತಿಗೆ ಪ್ರವೇಶ ಪಡೆಯುತ್ತಿರುವುದೂ ಮತ್ತೊಂದು ಕಾರಣ. ಪೋಷಕರು ಹಾಗೂ ಕೆಲವು ಶಾಲಾ ಆಡಳಿತ ಮಂಡಳಿಯ ಅಸಹಕಾರ, ವಿದ್ಯಾರ್ಥಿಗಳ ನಿರಂತರ ಗೈರು ಹಾಜರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಮುಖವಾಗಿ ಖಾಲಿ ಇರುವ ಶಿಕ್ಷಕರುಗಳ ಹುದ್ದೆಗಳನ್ನು ತುಂಬದೇ ಇರುವಂತಹ ಸಮಸ್ಯೆಗಳು ಕೂಡ ಕಾರಣವಾಗಬಹುದಾಗಿದೆ ಎಂದು ವಿವರಿಸಿದರು.

ಸರಸ್ವತಿ ಕಾನ್ವೆಂಟ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಅಶ್ವತ್ಥರೆಡ್ಡಿ ಮಾತನಾಡಿ, ಬಹಳಷ್ಟು ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆಗಳನ್ನು ತುಂಬಿಕೊಳ್ಳಲಾಗದೇ ಕೇವಲ ಒಬ್ಬರು ಅಥವಾ ಇಬ್ಬರು ವಿಷಯ ಶಿಕ್ಷಕರು ಮಾತ್ರ ತರಗತಿಗಳಲ್ಲಿ ಪಾಠ ಬೋಧನೆ ಮಾಡುತ್ತಿದ್ದಾರೆ. ಪ್ರೌಢಶಾಲಾ ಸಹ ಶಿಕ್ಷಕರು ಬೆಳಿಗ್ಗೆ 9 ರಿಂದ 10 ರವರೆಗೆ ವಿಶೇಷ ತರಗತಿ, ಸಂಜೆ ದತ್ತು ಮಕ್ಕಳ ಯೋಜನೆ, ಗುಂಪು ಅಧ್ಯಯನ, ರಾತ್ರಿ ಅವಧಿಗಳಲ್ಲೂ ಹಾಗೂ ರಜಾ ಅವಧಿಗಳಲ್ಲೂ ಅಭ್ಯಾಸ ಮಾಡಿಸುವುದು ಮತ್ತು ಇಲಾಖೆಯು ಕಾಲಕಾಲಕ್ಕೆ ನೀಡುವ ಮಾರ್ಗದರ್ಶನಗಳನ್ನು ಚಾಚುತಪ್ಪದೆ ಪಾಲಿಸಿದರೂ ನಿರೀಕ್ಷಿತ ಫಲಿತಾಂಶವನ್ನು ಪಡೆಯಲಾಗುತ್ತಿಲ್ಲ. ಅನುದಾನಿತ ಸಂಸ್ಥೆಗಳ ಮಾನ್ಯತೆ ನವೀಕರಣ ಹಾಗೂ ಇತರೆ ತಾಂತ್ರಿಕ ತೊಂದರೆಗಳೂ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿವೆ. ಇಲಾಖೆಯು ಈ ರೀತಿ ಶಿಕ್ಷಕರನ್ನೇ ಹೊಣೆಗಾರರನ್ನಾಗಿಸಿ ಹೊರಡಿಸುವ ಆದೇಶಗಳು ಶಿಕ್ಷಕರನ್ನು ಮಾನಸಿಕ ಒತ್ತಡಕ್ಕೆ ದೂಡುತ್ತಿವೆ ಎಂದರು.

ಶಿಕ್ಷಕ ಜಯಶಂಕರ್ ಮಾತನಾಡಿ, ಶಿಕ್ಷಕರ ವಾರ್ಷಿಕ ವೇತನ ಬಡ್ತಿ ಮತ್ತು ವೇತನಾನುದಾನ ತಡೆಯಿಡಿಯುವುದರಿಂದಾಗಿ ಶಿಕ್ಷಕರ ಕುಟುಂಬಗಳ ಜೀವನ ನಿರ್ವಹಣೆಯು ತುಂಬಾ ಕಷ್ಟಕರವಾಗುತ್ತದೆ. ಈ ಆದೇಶವನ್ನು ಹಿಂಪಡೆದು ಶಿಕ್ಷಕರು ಯಾವುದೇ ಗೊಂದಲವಿಲ್ಲದೇ ಬೋಧನೆ ಮಾಡಲು ಅನುವು ಮಾಡಿಕೊಡಬೇಕಿದೆ ಎಂದು ಹೇಳಿದರು.

ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ನಿವೃತ್ತ ಮುಖ್ಯಶಿಕ್ಷಕ ಬೈರಾರೆಡ್ಡಿ, ಮನಗೂಳಿ, ಸಂಘದ ಪದಧಿಕಾರಿಗಳಾದ ಮೂರ್ತಿ, ಹರೀಶ್, ಎಂ.ಕೆ.ಸಿದ್ಧರಾಜು, ಶ್ರೀನಿವಾಸರೆಡ್ಡಿ, ಪ್ರಭಾಕರ್, ನಾಗರಾಜು, ಮಂಜುನಾಥ್, ಅನುದಾನಿತ ಶಾಲಾ ಶಿಕ್ಷಕರು ಹಾಜರಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!