Chikkatekahalli, Sidlaghatta : “ಜನಪದ ನೃತ್ಯ ಕಲೆಗಳು ನಮ್ಮ ಹಿರಿಯರು ನಮಗೆ ನೀಡಿರುವ ಅಮೂಲ್ಯವಾದ ಬಳುವಳಿ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಕರ ಮೇಲಿದೆ” ಎಂದು ಆಂಧ್ರಪ್ರದೇಶದ ಕೋಲಾಟ ತರಬೇತುದಾರ ಭೋಗ ನಾಗರಾಜ್ ಅಭಿಪ್ರಾಯಪಟ್ಟರು.
ಎರಡು ತಿಂಗಳ ತರಬೇತಿ ನಂತರ ಪ್ರದರ್ಶನ:
ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಕೋಲಾಟ ತಂಡದ ಕಲಾವಿದರು ಕಳೆದ ಎರಡು ತಿಂಗಳಿಂದ ತರಬೇತಿ ಪಡೆದು, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಅತ್ಯಾಕರ್ಷಕ ಕೋಲಾಟ ಪ್ರದರ್ಶನ ನೀಡಿದರು. ಪ್ರದರ್ಶನವನ್ನು ವೀಕ್ಷಿಸಿದ ತರಬೇತುದಾರ ಭೋಗ ನಾಗರಾಜ್, “ಜನಪದ ಕಲೆ ವೈವಿಧ್ಯಮಯವಾಗಿದೆ. ಕೋಲಾಟವು ಕೇವಲ ನೃತ್ಯವಲ್ಲ, ಅದು ಗುಂಪಿನಲ್ಲಿ ಬಾಂಧವ್ಯವನ್ನು ಬೆಳೆಸುತ್ತಾ ವೀಕ್ಷಕರಿಗೆ ಸಂತೋಷ ನೀಡುವ ನೈಪುಣ್ಯತೆಯ ಕಲೆ,” ಎಂದು ಶ್ಲಾಘಿಸಿದರು.
ಗ್ರಾಮದಲ್ಲಿ ಜನಪದ ಕಲೆಗೆ ಮರುಜೀವ:
ಪ್ರಸ್ತುತ ಮೊಬೈಲ್ ರೀಲ್ಸ್, ಟಿವಿ ಮತ್ತು ಸಿನಿಮಾ ಲೋಕದಲ್ಲಿ ಮಗ್ನರಾಗಿರುವ ಇಂದಿನ ದಿನಗಳಲ್ಲಿ, ಗ್ರಾಮದಲ್ಲಿ ನಡೆದ ಈ ಕೋಲಾಟ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ಜಮಾಯಿಸಿದ್ದ ಗ್ರಾಮಸ್ಥರು, ಮಕ್ಕಳು ಮತ್ತು ಮಹಿಳೆಯರು ಗ್ರಾಮದ ಯುವಕರು ಹಾಗೂ ಕಲಾವಿದರು ಪ್ರದರ್ಶಿಸಿದ ಈ ಸಾಂಪ್ರದಾಯಿಕ ಕಲಾ ಪ್ರದರ್ಶನವನ್ನು ವೀಕ್ಷಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕೋಲಾಟ ಕಲಾವಿದರು ಮತ್ತು ತರಬೇತುದಾರರಾದ ಭೋಗ ನಾಗರಾಜ್, ವೇಮು ಮಾಸ್ಟರ್, ಸಂಗೀತ ನಿರ್ದೇಶಕ ಇನಿಮಿಂಚೇನಹಳ್ಳಿ ಶ್ರೀನಿವಾಸ್, ಜನಪದ ಕಲಾವಿದ ಈಧರೆ ಪ್ರಕಾಶ್ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಭಾಗವಹಿಸಿದ್ದರು.








