ನಗರದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡದ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ದಲಿತ ಕಾಲೋನಿಗಳ ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ ಎಂದು ಆರೋಪಿಸಿ ಸಿದ್ದಾರ್ಥನಗರದ ನಿವಾಸಿಗಳು ಮಂಗಳವಾರ ನಗರಸಭೆ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ನಗರಸಭೆ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದರು.
ನಗರದ ವಾರ್ಡ್ ಸಂಖ್ಯೆ ೭, ೮, ೯ ನೇ ವಾರ್ಡುಗಳಲ್ಲಿ ಬಹುತೇಕ ದಲಿತ ಕುಟುಂಬಗಳು ವಾಸಿಸುತ್ತಿದ್ದು ಅಲ್ಲಿನ ಜನರು ಕೂಲಿಯಿಂದ ಜೀವನ ನಡೆಸುತ್ತಿದ್ದಾರೆ. ಇಂತಹ ರಸ್ತೆಗಳಲ್ಲಿ ಕಳೆದ ಒಂದು ವಾರದಿಂದ ಕಸವನ್ನು ವಿಲೇವಾರಿ ಮಾಡದೆ ಇರುವುದರಿಂದ ಕಸ ಹಾಕಿರುವ ಸ್ಥಳದಲ್ಲಿ ಕೊಳೆತು ದುರ್ನಾತ ಬೀರುತ್ತಿದ್ದರೂ ಸಂಬಂದಪಟ್ಟ ಯಾವುದೇ ಅಧಿಕಾರಿಗಳು ಈವರೆಗೂ ವಾರ್ಡಿಗೆ ಭೇಟಿ ನೀಡಿಲ್ಲ. ಕಳೆದ ಮಾರ್ಚ ೨ ನೇ ತಾರೀಖಿನಂದು ವಾರ್ಡಿನ ಕೆಲ ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಣೆ ಮಾಡಿದ್ದನ್ನು ಹೊರತುಪಡಿಸಿದರೆ, ಪುನಃ ಈ ಕಡೆಗೆ ಯಾವುದೇ ಅಧಿಕಾರಿ ತಿರುಗಿಯೂ ನೋಡಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮನೆಗಳ ಸಮೀಪದಲ್ಲಿ ತುಂಬಾ ಇಕ್ಕಟ್ಟಾದ ಪರಿಸ್ಥಿತಿ ಇರುವುದರಿಂದ ಕಸವನ್ನು ಬೇರೆ ಕಡೆಗಳಲ್ಲಿ ಹಾಕಲು ಸ್ಥಳಾವಕಾಶವಿಲ್ಲದೆ ನಾಗರಿಕರು ಪರದಾಡುವಂತಾಗಿದೆ. ಮನೆಗಳ ಸಮೀಪದಲ್ಲಿ ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಾರಾದರೂ, ವಾರವಾದರೂ ನಗರಸಭೆಯ ಸಿಬ್ಬಂದಿ ಸರಿಯಾಗಿ ಕಸ ವಿಲೇವಾರಿ ಮಾಡುವುದಿಲ್ಲ. ವಾರ್ಡಿನ ಚರಂಡಿಗಳೆಲ್ಲವೂ ತುಂಬಿ ನೀರು ಸರಾಗವಾಗಿ ಮುಂದೆ ಹೋಗದೆ ಸೊಳ್ಳೆಗಳ ಉಗಮ ಸ್ಥಾನಗಳಾಗಿ ಪರಿವರ್ತನೆಯಾಗಿವೆ. ಹೀಗೆ ನಿಂತ ನೀರಿನಿಂದ ದುರ್ವಾಸನೆ ಬರಲು ಆರಂಭವಾಗಿದ್ದು ಇದರಿಂದ ರಾತ್ರಿಯ ಸಮಯದಲ್ಲಿ ಮನೆಗಳಲ್ಲಿ ಇರಲು ಸಾಧ್ಯವಾಗುತ್ತಿಲ್ಲ. ಸೊಳ್ಳೆಗಳ ಕಾಟ ಜಾಸ್ತಿಯಾಗಿದ್ದು ಜನರು ವಿವಿಧ ಖಾಯಿಲೆಗಳಿಗೆ ತುತ್ತಾಗುವಂತಾಗಿದೆ.
ನಗರದ ೦೮ ನೇ ವಾರ್ಡಿನ ಸದಸ್ಯರಾದ ಸುಮಿತ್ರಮ್ಮ ರಮೇಶ್ ನಗರಸಭೆ ಉಪಾಧ್ಯಕ್ಷರಾಗಿದ್ದರೂ ಅಧಿಕಾರಿಗಳು ಅವರ ಮಾತಿಗೆ ಬೆಲೆ ನೀಡುವುದಿಲ್ಲ. ದಲಿತ ಕಾಲೋನಿಗಳ ಬೇಡಿಕೆಗಳಿಗಾಗಿ ಪ್ರತಿಭಟನೆಗಳನ್ನು ಮಾಡಿದಾಗ ಮಾತ್ರ ನ್ಯಾಯ ಒದಗಿಸಿಕೊಡುವ ಭರವಸೆ ನೀಡುವ ಅಧಿಕಾರಿಗಳು ಮತ್ತೆ ಮತ್ತೆ ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾಕಾರ ಮನವಿ ಸ್ವೀಕರಿಸಿ ಮುಖ್ಯಾಧಿಕಾರಿ ಎಸ್.ಎ.ರಾಮ್‌ಪ್ರಕಾಶ್ ಮಾತನಾಡಿ ಕಳೆದ ಒಂದು ತಿಂಗಳ ಕಾಲ ನಾನು ರಜೆಯ ಮೇಲೆ ತೆರಳಿದ್ದರಿಂದ ಈ ರೀತಿಯ ಹಲವು ಸಮಸ್ಯೆಗಳು ಉದ್ಭವವಾಗಿದ್ದು ಪ್ರತಿನಿತ್ಯ ಅಧಿಕಾರಿಗಳಿಗೆ ಸ್ವಚ್ಚತೆಯ ಬಗ್ಗೆ ಹೆಚ್ಚು ಕಾಳಜಿವಹಿಸುವಂತೆ ಎಚ್ಚರಿಕೆ ನೀಡಲಾಗುತ್ತದೆ.
ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ತೊಂದರೆಯಾಗಿದ್ದು ಕೂಡಲೇ ನಗರಸಭೆಯ ಎಲ್ಲಾ ಸಿಬ್ಬಂದಿಯನ್ನು ನಗರದ ೭,೮ ಮತ್ತು ೯ ನೇ ವಾರ್ಡುಗಳಿಗೆ ಕಳುಹಿಸಿ ಸಂಗ್ರಹವಾಗಿರುವ ಕಸವನ್ನು ಸ್ವಚ್ಛಗೊಳಿಸುವುದಾಗಿ ಭರವಸೆ ನೀಡಿದರು.
ಎಸ್.ಎಂ.ರಮೇಶ್, ಶ್ರೀನಿವಾಸ್, ನಾಗರಾಜು, ಮುನಿರಾಜು, ದೇವರಾಜು, ಮುನಿಕೃಷ್ಣ, ಸುಬ್ರಮಣಿ, ಮಧು, ಮಂಜುನಾಥ, ವೆಂಕಟರಾಜು, ಶಿವಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಿದ್ದಾರ್ಥನಗರದ ನಿವಾಸಿಗಳ ಪ್ರತಿಭಟನೆ
ಆಟ ಬೇಕು ಆರೋಗ್ಯಕ್ಕೆ
1. ಶರೀರ ಹಾಗೂ ಮನಸ್ಸು ಆರೋಗ್ಯವಂತರಾಗಿರಲು, ಕ್ರಿಯಾಶೀಲರಾಗಿರಲು ಆಟ (ಕ್ರೀಡೆ) ಎಂಬ ಚಟುವಟಿಕೆ ಅಗತ್ಯ.
2. ಹೊರಾಂಗಣದ ಕ್ರೀಡೆಗಳಾದ ಓಟ, ಕೊಕ್ಕೋ, ಕಬಡ್ಡಿ, ವಾಲಿಬಾಲ್, ಪುಟ್‍ಬಾಲ್, ಥ್ರೋಬಲ್‍ನಂಥ ಆಟಗಳು ಹಾಗೂ ಒಳಾಂಗಣದ ಆಟಗಳಾದ ಚದುರಂಗ (ಚೆಸ್), ಕೇರಂ, ಪಗಡೆ, ಚನ್ನೆಮಣೆ, ಚೌಕಾಭಾರದಂಥ ಆಟಗಳು ಆರೋಗ್ಯ ರಕ್ಷಣೆಗೆ ಸಹಕಾರಿ.
3. ಆಯಾಸವಾಗದಷ್ಟು ಪ್ರಮಾಣದಲ್ಲಿ ಆಟಗಳನ್ನು ಆಡಬೇಕು. ಆಟವಾಡುವುದರಿಂದ ಅತಿಯಾದ ಮೈ ಕೈನೋವು, ಅತಿಯಾದ ಆಯಾಸ (ಸುಸ್ತು) ಆಗದಂತೆ ಗಮನವಹಿಸಬೇಕು.
4. ಊಟ ಆದ ತಕ್ಷಣ ಅಥವಾ ಆಹಾರ ಸೇವಿಸಿದ ತಕ್ಷಣ ಅತಿಯಾದ ಬಿಸಿಲಿನಲ್ಲಿ, ಮಹಡಿಯ ಮೇಲೆ ಆಡುವುದು ಒಳ್ಳೆಯದಲ್ಲ.
5. ಹೊರಾಂಗಣದ ಆಟ ಆಡಿದ ತಕ್ಷಣ ನೀರು-ಆಹಾರ ಸೇವನೆ ಒಳ್ಳೆಯದಲ್ಲ, ಹದಿನೈದು ನಿಮಿಷಗಳ ವಿಶ್ರಾಂತಿಯ ನಂತರ ನೀರು-ಲಘು ಆಹಾರವನ್ನು ಸೇವಿಸಬೇಕು.
6. ಬೇಸಿಗೆ ಹಾಗೂ ಚಳಿಗಾಲದಲ್ಲಿ ಹೊರಾಂಗಣದ ಆಟಗಳನ್ನು ಆಡಬಹುದು. ಮಳೆಗಾಲದಲ್ಲಿ ಒಳಾಂಗಣದ ಆಟಗಳನ್ನು ಆಡಬೇಕು.
7. ಆಟದಲ್ಲಿ ಸೋಲು ಗೆಲುವಿಗಿಂತ ಸಂತೋಷವಾಗಿ ಆಡುವುದು ಬಹಳ ಮುಖ್ಯ.
8. ಸಂಜೆ ಹೊತ್ತು ಮುಸ್ಸಂಜೆಗಿಂತ ಮೊದಲು ಹೊರಾಂಗಣದ ಆಟಗಳನ್ನು ಆಡಬೇಕು.
9. ತಂಡದ ಆಟಗಳಲ್ಲಿ ಭಿನ್ನಾಭಿಪ್ರಾಯ ಬಂದಾಗ ನಿಧಾನವಾಗಿ ಶಾಂತಚಿತ್ತದಿಂದ ಪರಸ್ಪರ ಮಾತಿನಲ್ಲಿ ಬಗೆಹರಿಸಿಕೊಳ್ಳಬೇಕು ಹಾಗೂ ಆಟವನ್ನು ಮುಕ್ತಮನಸ್ಸಿನಿಂದ ಮತ್ತೆ ಪ್ರಾರಂಭಿಸಬೇಕು.
10. ಪ್ರತಿದಿನ ಕನಿಷ್ಟ ಅರ್ಧ ಗಂಟೆಯಾದರೂ ಆಟಗಳಲ್ಲಿ ಭಾಗವಹಿಸಬೇಕು. ಹೊರಾಂಗಣ ಹಾಗೂ ಒಳಾಂಗಣದ ಆಟಗಳನ್ನು ಒಂದು ವಾರದಲ್ಲಿ ದಿನಬಿಟ್ಟು ದಿನದಂತೆ ಆಯ್ದುಕೊಂಡು ಆಡುವುದು ಒಳ್ಳೆಯದು.
11. ಆಟವೂ ಒಂದು ಕಲಿಕೆಯ ಸಾಧನ, ಹೊರಾಂಗಣದ ಆಟಗಳಿಂದ ಸುದೃಢವಾದ ಶರೀರ ರೂಪುಗೊಳ್ಳುತ್ತದೆ. ಹಾಗೆಯೇ ಹೊಂದಾಣಿಕೆ ಗುಣವು ಬೆಳೆಯುತ್ತದೆ. ಒಳಾಂಗಣದ ಆಟಗಳಿಂದ ಸಹನೆ, ಗ್ರಹಿಕೆ, ಬುದ್ಧಿವಂತೆಕೆ, ನೆನಪಿನ ಶಕ್ತಿಗಳು ಹೆಚ್ಚಾಗುತ್ತವೆ.
12. ಸದಾ ಉತ್ಸಾಹಶೀಲವಾಗಿರಲು, ಕ್ರಿಯಾಶೀಲರಾಗಿರಲು ಸದಾ ಲವಲವಿಕೆಯಿಂದಿರಲು ಜೀವನದಲ್ಲಿ ಆಟಗಳು ಅತ್ಯಗತ್ಯ.
13. ವಿವಿಧ ರೀತಿಯ ಶಾರೀರಿಕ ವ್ಯಾಯಾಮ, ಯೋಗಾಭ್ಯಾಸವನ್ನು ಮಾಡಬಹುದು.
14. ಉಸಿರಾಟವೆಂಬುದು ಪ್ರಮುಖವಾದ ಶಾರೀರಿಕ ಕ್ರಿಯೆ. ನಿಧಾನಗತಿಯ ಸಮಪ್ರಮಾಣದ ಉಸಿರಾಟದ ಕಡೆಗೆ ಯಾವಾಗಲೂ ಗಮನ ಕೊಡಬೇಕು. ಇದರಿಂದ ಮನಸ್ಸು ಶಾಂತವಾಗುತ್ತದೆ, ಶರೀರವೂ ವಿಶ್ರಾಂತಿಯನ್ನು ಹೊಂದುತ್ತದೆ.
15. ಆಟವಾಡಿದ ನಂತರ ಅಥವಾ ವ್ಯಾಯಾಮ ಮಾಡಿದ ನಂತರ ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿದರೆ ಎಲ್ಲ ಆಯಾಸ ಪರಿಹಾರವಾಗುತ್ತದೆ.
ಡಾ. ಶ್ರೀವತ್ಸ
ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ದಿನಾಚರಣೆ
ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿಯೂ ಸಮಾನತೆ ಕಲ್ಪಿಸಿದಾಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ನಗರದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿಜಯದೇವರಾಜ ಅರಸ್ ಹೇಳಿದರು.
ನಗರದ ಸ್ರೀ ಶಕ್ತಿ ಭವನದಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೋಲಿಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ, ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ತ್ರೀಯನ್ನು ದೇವತೆಯ ಸ್ಥಾನದಲ್ಲಿ ಪೂಜಿಸುವಂತಹ ಭಾರತ ದೇಶದಲ್ಲಿ ಮಹಿಳೆಯು ಪುರುಷರಷ್ಟೆ ಸಮಾನವಾಗಿ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾಳೆ, ಪುರುಷರಿಗಿಂತ ಯಾವುದೇ ರಂಗದಲ್ಲೂ ಕಡಿಮೆಯಿಲ್ಲದಂತೆ ಭಾಗವಹಿಸುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದಾಗ ಪ್ರತಿಭಟಿಸಬೇಕು. ಕಾನೂನಿನ ಅಡಿಯಲ್ಲಿ ನ್ಯಾಯವನ್ನು ಪಡೆಯಬೇಕು. ಶೇಕಡಾ ೫೦ ರಷ್ಟು ಮೀಸಲಾತಿಯನ್ನು ಈಗಾಗಲೇ ಮಹಿಳೆಯರಿಗೆ ಕಲ್ಪಿಸಿದ್ದರೂ ಸಹ ಅದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಮಹಿಳೆಯರು ಇಲ್ಲದಿರುವುದರಿಂದ ಮಹಿಳೆಯರಿಗೆ ಈವರೆಗೂ ಕೌಟುಂಬಿಕ ಸ್ವಾತಂತ್ರ್ಯ ಲಭಿಸಿಲ್ಲ ಎಂದರು.
ಮಹಿಳಾ ದಿನಾಚರಣೆಯ ಅಂಗವಾಗಿ ಹೆಣ್ಣು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಕ್ಷ್ಮೀದೇವಮ್ಮ, ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ದೇವಾಲಯದ ಆವರಣವನ್ನು ಶುಚಿಗೊಳಿಸಿದ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು
ಶಿಡ್ಲಘಟ್ಟದ ಅರಳೇಪೇಟೆಯ ಬಸವೇಶ್ವರ ಸ್ವಾಮಿ ದೇವಾಲಯದ ಆವರಣವನ್ನು ಸೋಮವಾರ ದಿವ್ಯ ಭಾರತ್ ಕರಾಟೆ ಡೋ ಕರಾಟೆಪಟುಗಳು ಮತ್ತು ಶಿಕ್ಷಕ ಅರುಣ್ಕುಮಾರ್ ಶುಚಿಗೊಳಿಸಿದರು.
ರಾಗಿಮಾಲಕಹಳ್ಳಿಯ ನಾಗರೀಕರಿಂದ ತಹಶೀಲ್ದಾರ್ ಗೆ ಅಭಿನಂದನೆ
ಶಿಡ್ಲಘಟ್ಟದ ತಾಲ್ಲೂಕಿನ ಮೇಲೂರು ಗ್ರಾಮದ ರಾಗಿಮಾಲಕಹಳ್ಳಿಯ ಸರ್ವೆ ನಂಬರ್ ೨೩ ರಲ್ಲಿ ನಾಗರಿಕರಿಗೆ ಸ್ಮಶಾನಕ್ಕೆ ಹೋಗಿಬರಲು ದಾರಿಯನ್ನು ಮಂಜೂರು ಮಾಡಿಕೊಟ್ಟಿದ್ದಕ್ಕೆ ಅಂಬರೀಶ್, ತ್ರಿಮೂರ್ತಿ, ಶ್ರೀನಿವಾಸ್, ತಿಲಕ್ ಮುಂತಾದ ಗ್ರಾಮಸ್ಥರು ಸೋಮವಾರ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರನ್ನು ಅಭಿನಂದಿಸಿದರು.
ನಗರದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಸೂಚನೆ
ನಗರದಾದ್ಯಂತ ಸ್ವಚ್ಛತೆಯನ್ನು ಕಾಪಾಡಲು ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳುವಂತೆ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ನಾಗರಾಜಯ್ಯಶೆಟ್ಟಿ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್ ಅವರಿಗೆ ಸೂಚಿಸಿದರು.
ನಗರದ ಪ್ರಥಮದರ್ಜೆ ಕಾಲೇಜಿನ ಬಳಿಯಲ್ಲಿ ರಸ್ತೆಯ ಇಕ್ಕೆಲುಗಳಲ್ಲಿ ಹಾಕಿದ್ದ ಕಸದ ರಾಶಿ ಹಾಗೂ ಪ್ರಥಮದರ್ಜೆ ಕಾಲೇಜಿನ ಆವರಣವನ್ನು ಸೋಮವಾರ ವೀಕ್ಷಣೆ ಮಾಡಿದ ಅವರು ಪ್ರಥಮದರ್ಜೆ ಕಾಲೇಜಿನ ಮುಂಭಾಗದಲ್ಲಿರುವ ತರಕಾರಿ ಅಂಗಡಿಯನ್ನು ತೆರವುಗೊಳಿಸಿ ಎಂದರು. ನಗರದಾದ್ಯಂತ ಕಾಲ ಕಾಲಕ್ಕೆ ಬ್ಲೀಚಿಂಗ್ ಸಿಂಪಡಣೆ ಮಾಡುವಂತೆ ಸೂಚಿಸಿದರು.
ನಗರದ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜುಗಳ ಆವರಣ ಹಾಗೂ ಮುಂಭಾಗದಲ್ಲಿ ಸ್ವಚ್ಚತೆಯನ್ನು ಕಾಪಾಡುವಂತೆ ಸೂಚಿಸಿದರು. ಕಾಲೇಜಿನ ಆವರಣವನ್ನು ಪರಿಶೀಲನೆ ನಡೆಸಿದ ಅವರು, ಕಾಲೇಜಿನಲ್ಲಿರುವ ಎನ್.ಎಸ್.ಎಸ್ನ ಸಹಯೋಗದಲ್ಲಿ ಕಾಲೇಜಿನ ಆವರಣವನ್ನು ಸ್ವಚ್ಚಗೊಳಿಸಿಕೊಳ್ಳುವಂತೆ ಪ್ರಾಂಶುಪಾಲರಿಗೆ ಸಲಹೆ ನೀಡಿ, ಪ್ಲಾಸ್ಟಿಕ್ ಬಳಕೆ ಹಾಗೂ ಸ್ವಚ್ಚತೆಯನ್ನು ಕಾಪಾಡದಿದ್ದಲ್ಲಿ ಅಂತಹ ಹೋಟೆಲುಗಳ ಮಾಲೀಕರುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ನಗರಸಭೆಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅವರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ನಗರಸಭೆ ಮುಖ್ಯಾಧಿಕಾರಿ ಎಸ್.ಎ.ರಾಮ್ಪ್ರಕಾಶ್, ಪರಿಸರ ಎಂಜಿನಿಯರ್ ದಿಲೀಪ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ನಗು ಎಂದರೆ ನಗಬೇಕೇ?
ಮಗು ಜಾರಿ ಬಿದ್ದು ಸ್ವಲ್ಪ ಗಾಯ ಮಾಡಿಕೊಂಡಿದೆ. ಆಗ ಅಳುವುದು ಸಹಜ ಅಲ್ವಾ? ಅಳು ಗಾಯದ ನೋವನ್ನು ಸಹಿಸಲಾರದ ದು:ಖದಿಂದ ಬಂದಿರುವುದರಿಂದ ಅದು ಮಗುವಿನ ಆ ಕ್ಷಣದ ಭಾವನೆಯ ನೈಜ ಅಭಿವ್ಯಕ್ತಿ. ಬಿದ್ದಾಗ ಗಾಯವೇ ಆಗಿರದಿದ್ದರೂ ಮಗು ಅಳುವ ಸಾಧ್ಯತೆಗಳಿರುತ್ತವೆ. ಆಗ ನೋವಿನ ದು:ಖವಿಲ್ಲದಿದ್ದರೂ ಮಗು ಅಳುವುದಕ್ಕೆ ಕಾರಣ ಏನಿರಬಹುದು?
1. ಮಗು ಬಿದ್ದಿದ್ದನ್ನು ಸುತ್ತಲಿನವರೆಲ್ಲಾ ನೋಡಿರುತ್ತಾರೆ. ಇವರಲ್ಲಿ ಕೆಲವರು ದೊಡ್ಡದಾಗಿ ನಕ್ಕಿರಬಹುದು. ಇದರಿಂದ ಅವಮಾನಗೊಂಡ ಮಗು ಅಳುತ್ತದೆ.
2. ಬೀಳುವುದನ್ನು ಅವಮಾನವೆಂದು ಸ್ವೀಕರಿಸುವ ಮಗುವಿಗೆ ನಕ್ಕವರ ಮೇಲೆ ಸಿಟ್ಟು ಬರಬಹುದು; ದೊಡ್ಡವರ ಮೇಲೆ ತನ್ನ ಸಿಟ್ಟನ್ನು ತೀರಿಸಲಾರದ ಅಸಹಾಯಕತೆಯಿಂದ ಮಗು ಅಳಬಹುದು.
3. ಅತ್ತ ತಕ್ಷಣ ಚಾಕೋಲೇಟ್ ಸಿಗುತ್ತದೆ ಅಥವಾ ಅಮ್ಮ ಮುದ್ದುಮಾಡುತ್ತಾಳೆ ಎಂದು ಕಂಡುಕೊಂಡಿರುವ ಮಗು ಕಣ್ಣೀರೇ ಬರದಿದ್ದರೂ ಕೇರಿಗೆಲ್ಲಾ ಕೇಳುವಂತೆ ಅಳಬಹುದು!
ಹೀಗೆ ಅಳುವೆಂಬ ಒಂದೇ ಅಭಿವ್ಯಕ್ತಿಯ ಹಿಂದೆ ನೋವು, ಅವಮಾನ, ಸಿಟ್ಟು, ಬೇಸರ-ಹೀಗೆ ಬೇರೆ ಬೇರೆ ಭಾವನೆಗಳಿರಬಹುದು. ಇದೇ ರೀತಿ ನಗು, ಬೈಯುವುದು, ಹೊಡೆಯುವುದು, ಮುದ್ದಿಸುವುದು-ಹೀಗೆ ಎಲ್ಲಾ ಅಭಿವ್ಯಕ್ತಿಯ ಹಿಂದೆ ವಿಭಿನ್ನ ಭಾವನೆಗಳಿರಲು ಸಾಧ್ಯ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ.
ಇದೆಲ್ಲಾ ಸಂಶೋಧಕರಿಗೆ ಸಂಬಂಧಪಟ್ಟ ವಿಷಯ, ಜನಸಾಮಾನ್ಯರಿಗೇಕೆ ಬೇಕು-ಎಂದು ನೀವು ಅಂದುಕೊಳ್ಳುತ್ತಿರಬಹುದು. ಮಗು ತನ್ನ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಾವು ಹೇಗೆ ತಡೆಯುತ್ತೇವೆ ಅಥವಾ ಭಾವನೆಗಳನ್ನು ರೂಪಾಂತರಿಸಿಕೊಳ್ಳಲು ನಾವು ಹೇಗೆ ಪ್ರಚೋದಿಸುತ್ತೇವೆ ಮತ್ತು ಇದರಿಂದಾಗಬಹುದಾದ ಪರಿಣಾಮಗಳೇನು ಎಂದು ನಾವೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.
ಎಂಟು ವರ್ಷದ ಗಂಡು ಮಗು ಬಿದ್ದು ಅಳುತ್ತಾ ಇದೆ ಅಂದ್ಕೊಳ್ಳಿ. ನಾವು “ಛೇ ಎಂತಹ ಗಂಡ್ಸೋ ನೀನು, ಇಷ್ಟಕ್ಕೆಲ್ಲಾ ಅಳುತ್ತಾರಾ. ಎಲ್ಲಿ ನಗು ನೋಡೋಣ” ಅಂತ ಬಲವಂತವಾಗಿ ನಗಿಸುತ್ತೇವೆ. ಆ ಮುಗ್ಧ ಜೀವ ನೋವಿನಲ್ಲೂ ಕಣ್ಣೊರೆಸಿಕೊಳ್ಳುತ್ತಾ ಪೆದ್ದ ನಗು ನಕ್ಕಾಗ ನಾವು “ಶಹಭಾಷ್” ಎನ್ನುತ್ತೇವೆ. ಇದರ ಸಂದೇಶ ಏನು ಅಂದ್ರೆ, ‘ಗಂಡಸಾದ ನಿನಗೆ ಅಳು ಸಹಜ ಅಭಿವ್ಯಕ್ತಿ ಆಗಬಾರದು, ಅದು ಹೆಣ್ಣು ಮಕ್ಕಳಿಗೆ ಸರಿ’ ಎನ್ನುವುದು ಅಂತಲ್ಲವೇ?.
ಇದೇ ರೀತಿ ಹೆಣ್ಣು ಮಗುವೊಂದು ತನ್ನನ್ನು ಅವಮಾನಿಸಿದವರಿಗೆ ಕೋಪದಿಂದ ಕೂಗಾಡಿದಾಗ, ಹೆಣ್ಣು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ಸಿಟ್ಟು ಮಾಡಬಾರದು, ಇದರಿಂದ ಮುಂದೆ ಸಂಸಾರ ಮಾಡುವುದಕ್ಕೆ ತೊಂದರೆಯಾಗುತ್ತದೆ-ಎಂದು ನಾವು ಉಪದೇಶ ಮಾಡುತ್ತೇವೆ.
ಇಂತಹ ನಮ್ಮ ಪ್ರತಿಕ್ರಿಯೆಗಳು ಮಗು ಗಂಡೊ ಹೆಣ್ಣೊ ಅನ್ನುವುದಕ್ಕಷ್ಟೇ ಸೀಮೀತವಾಗಿರುವುದಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಇದನ್ನು ಹೇಗೆ ಮಾಡುತ್ತೇವೆಂಬುದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹದು.
1. ಯಾರಾದರೂ ಮೃತರಾದಾಗ ಕಡ್ಡಾಯವಾಗಿ ಅಳಲೇಬೇಕು.
2. ದೊಡ್ಡವರು ಮಾತನಾಡುತ್ತಿರುವಾಗ ಮಕ್ಕಳು ಗಂಭೀರವಾಗಿರಬೇಕು.
3. ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ದೊಡ್ಡ ಧ್ವನಿಯಲ್ಲಿ ನಗಬಾರದು.
4. ಗಂಡು ಮಕ್ಕಳಿಗೆ ನೋವನ್ನು, ದು:ಖವನ್ನು, ಸಹಿಸಿಕೊಳ್ಳುವ ಶಕ್ತಿ ಇರಲೇಬೇಕು.
5. ಎಲ್ಲರ ಎದುರು ಮಕ್ಕಳು ಗೌರವಯುತವಾಗಿ ನಡೆದುಕೊಳ್ಳಬೇಕು. ಉದಾಹರಣೆಗೆ ಅತಿಥಿಗಳಿಗೆ ಅಂತ ಇಟ್ಟ ತಿಂಡಿಯನ್ನು ಮುಟ್ಟಬಾರದು. ನಮಗೆ ಕ್ಷುಲ್ಲಕ ಅನ್ನಿಸುವ ಅಥವ ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳನ್ನು ಎಲ್ಲರೆದುರು ಕೇಳಬಾರದು, ಗಲೀಜಾದ ಬಟ್ಟೆಗಳನ್ನು ಹಾಕಿಕೊಂಡು ಬರಬಾರದು-ಇತ್ಯಾದಿ. ಹೀಗೆ ನಿಯಮಗಳ ದೊಡ್ಡ ಪಟ್ಟಿಯೇ ಇರುತ್ತದೆ.
ಹೀಗೆಲ್ಲಾ ಹೇಳುವಾಗ ಅಥವಾ ಮಾಡುವಾಗ ನಾವು ಮಗುವನ್ನು ಸುಸಂಸ್ಕøತವಾಗಿ ಬೆಳೆಸುತ್ತಿದ್ದೇವೆ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತ ಇದ್ದೇವೆ ಅಂತ ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುತ್ತದೆಯೇ? ಮನಶ್ಯಾಸ್ತ್ರಜ್ಞರ ಚಿಂತನೆಗಳು ಸ್ವಲ್ಪ ಬೇರೆಯೇ ಆಗಿವೆ.
ನಾವು ದೊಡ್ಡವರ ಪ್ರಪಂಚಕ್ಕೆ ಸೂಕ್ತವೆಂದುಕೊಂಡಿರುವ ನಿಯಮಗಳನ್ನು ಮಗುವಿನ ಮೇಲೆ ಹೇರಿದಾಗ ಅದಕ್ಕೆ ಗಲಿಬಿಲಿಯಾಗುತ್ತದೆ. ಪ್ರತಿಹಂತದಲ್ಲೂ ತಾನೇನೋ ತಪ್ಪು ಮಾಡುತ್ತಿರಬಹುದೇ ಎಂದುಕೊಳ್ಳುತ್ತಾ, ಮಕ್ಕಳು ತಮ್ಮ ಸಹಜ ಕುತೂಹಲದ ಸ್ವಭಾವವನ್ನೇ ಕಳೆದುಕೊಳ್ಳಬಹುದು. ನಮ್ಮ ನೀತಿನಿಯಮಗಳು ಮಕ್ಕಳ ಮೇಲೆ ಬೀರಬಹುದಾದ ಕೆಟ್ಟಪರಿಣಾಮಗಳು ಹೀಗಿರಲು ಸಾಧ್ಯ;
1. ಮಗುವಿಗೆ ತನ್ನ ಸಹಜ ಭಾವನೆಗಳಾದ ಅಳು, ನಗು ಸಿಟ್ಟು, ಬೇಸರ-ಇವೆಲ್ಲವುಗಳನ್ನು ವ್ಯಕ್ತಪಡಿಸಲಾಗದೇ ಹೋದಾಗ ಅದು ಬೆಳೆಯುತ್ತಾ ಬಂದಂತೆ ಭಾವನೆಗಳನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಇಂತಹ ವ್ಯಕ್ತಪಡಿಸದ ಭಾವನೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ.
2. ನಮಗೆಲ್ಲಾ ಒಂದು ಹಂತದವರೆಗೆ ಮಾತ್ರ ಭಾವನೆಗಳನ್ನು ಮುಚ್ಚಿಡಲು ಸಾಧ್ಯ. ನಂತರ ಅದು ಬೇರೆಬೇರೆ ರೀತಿಗಳಲ್ಲಾದರೂ ಹೊರಬರಲೇಬೇಕು. ಇದು ಕುಡಿಯುವುದು, ಹಿಂಸಾತ್ಮಕ ಕ್ರಿಯೆಗಳು, ಮನೆ ಬಿಟ್ಟು ಓಡಿಹೋಗುವುದು, ತೀರಾ ವಿಷಮ ಪರಿಸ್ಥಿತಿಗಳಲ್ಲಿ ಆತ್ಮಹತ್ಯೆ, ಮುಂತಾದ ರೂಪದಲ್ಲಿರಲು ಸಾಧ್ಯ ಎಂದು ನಾವು ಮರೆಯಬಾರದು.
3. ಹತ್ತಿಕ್ಕಲ್ಪಟ್ಟ ಭಾವನೆಗಳು ಒಮ್ಮೆಲೇ ಅನುಚಿತವಾಗಿ ಸ್ಫೋಟಗೊಳ್ಳುವುದು ಅಪರೂಪವೇನಲ್ಲ. ಇದು ಮಕ್ಕಳಲ್ಲಷ್ಟೇ ಅಲ್ಲ ದೊಡ್ಡವರಲ್ಲೂ ಕೂಡ ಆಗಬಹುದು. ಮಗುವಿನ ಸಣ್ಣಪುಟ್ಟ ತರಲೆಗಳಿಗೆ ಸಿಟ್ಟು ಬಂದಿದ್ದರೂ ನಾವು ತಡೆಯುತ್ತಾ ಬಂದಿರುತ್ತೇವೆ. ಕೊನೆಗೆ ಒಂದು ದಿನ ಎಲ್ಲಾ ಸೇರಿಸಿ ಚನ್ನಾಗಿ ತದುಕುತ್ತೇವೆ! “ನಾನು ನೋಡೋ ಅಷ್ಟು ದಿನ ನೋಡಿದೆ. ಇವನು ಸರಿ ಆಗೋ ಹಾಗೆ ಕಾಣ್ಲಿಲ್ಲ” ಅಂತ ನಮ್ಮ ಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತೇವೆ. ನಾವು ಯಾಕೆ ಮೊದಲನೇ ಸಾರಿ ಮಗು ತಪ್ಪುಮಾಡಿದಾಗಲೇ ಅವನಿಗೆ ಸ್ಪಷ್ಟವಾಗಿ ತಿಳಿಸಿ ಹೇಳಲಿಲ್ಲ ಅಂತ ಯೋಚಿಸುವುದೇ ಇಲ್ಲ. “ಹಾಗೆಲ್ಲಾ ತಕ್ಷಣ ಸಿಟ್ಟು ಮಾಡಬಾರದು ಸಹನೆ ಇಟ್ಟುಕೊಳ್ಳುಬೇಕು” ಎಂದು ನಮಗೆ ಬಾಲ್ಯದಲ್ಲಿ ಕಲಿಸಲಾಗುತ್ತದೆ. ಇದರಿಂದಾಗಿ ನಾವು ಭಾವನೆಗಳನ್ನು ಸಂಗ್ರಹಿಸಿರುತ್ತೇವೆ.
4. ನಮ್ಮ ನಿಯಮಗಳು ಮಕ್ಕಳ ಪ್ರಶ್ನೆ ಕೇಳುವ ಪ್ರವೃತ್ತಿಯನ್ನೇ ಕಡಿಮೆ ಮಾಡಬಹುದು. ಎಲ್ಲರೆದುರು ಪ್ರಶ್ನೆ ಕೇಳಿ, “ಏ ದಡ್ಡಾ ಅಷ್ಟೂ ಗೊತ್ತಾಗೊಲ್ವೇನೋ” ಅಂತ ಹೇಳಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಂತ ಮಗು ಅಂದುಕೊಂಡರೆ ಜ್ಞಾನದ ಬೆಳವಣಿಗೆಯೇ ಕುಂಟಿತವಾಗಬಹುದು.
ಈ ರೀತಿಯ ಸಮಸ್ಯೆಗಳು ಎಲ್ಲಾ ಮಕ್ಕಳಲ್ಲೂ ಆಗಲೇಬೇಕೆಂದಿಲ್ಲ. ಹಾಗಿದ್ದರೂ ದೊಡ್ಡವರ ನೀತಿ ನಿಯಮಗಳು ಹೆಚ್ಚಾದಷ್ಟೂ ಇದರ ಸಾಧ್ಯತೆಗಳು ಹೆಚ್ಚುತ್ತವೆ.
ಹಾಗಿದ್ದರೆ ಮಕ್ಕಳನ್ನು ಹಾಗೆಯೇ ಬಿಟ್ಟುಬಿಡಬೇಕೇ?, ಅವರಿಗೆ ವಾಸ್ತವಿಕ ಜಗತ್ತನ್ನು ಪರಿಚಯಿಸುವವರು ಯಾರು ಮತ್ತು ಯಾವಾಗ?-ಎನ್ನುವ ಪ್ರಶ್ನೆ ಏಳುವುದು ಸಹಜ.
ನಿಜ ಹೇಳ್ಬೂಕೂಂದ್ರೆ ಈ ದೊಡ್ಡವರದ್ದು ಮಹಾ ಬೂಟಾಟಿಕೆಯ, ನಯವಂಚಕತನದ ಪ್ರಪಂಚ. ನಮಗೆಲ್ಲರಿಗೂ ಮಕ್ಕಳ ತರಹ ನೇರವಾಗಿ, ಸರಳವಾಗಿ ಇರುವುದು ಸಾಧ್ಯವಿದ್ದಿದ್ದರೆ ಇಲ್ಲಿನ ಬದುಕು ಬಹಳ ಸುಂದರವಾಗಿರುತ್ತಿತ್ತು. ಆದರೆ ಸದ್ಯಕ್ಕಂತೂ ಹಾಗಿಲ್ಲವಲ್ಲ, ಏನು ಮಾಡುವುದು?
1. ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸುವ ಹಂತದಲ್ಲೇ ಅವರನ್ನು ತಡೆಯಬಾರದು. ಬುದ್ಧಿಯಲ್ಲಿ ಮತ್ತು ಪ್ರಾಪಂಚಿಕ ಜ್ಞಾನದಲ್ಲಿ ಅವರು ದೊಡ್ಡವರಂತೆ ಇರುವುದು ಸಾದ್ಯವಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಹಾಗಾಗಿ ಅವರ ವರ್ತನೆಗಳ ಹಿಂದಿರುವುದು ಮುಗ್ಧತೆಯೇ ಹೊರತು ದಡ್ಡತನವಲ್ಲ ಎಂದುಕೊಳ್ಳಬೇಕು. ಎಲ್ಲರೆದುರು ಮಕ್ಕಳು ಪೆದ್ದುಪದ್ದಾಗಿ ವರ್ತಿಸಿದರೆ ಅದು ನಮಗಾದ ಅವಮಾನ ಎಂದು ತಿಳಿದುಕೊಳ್ಳಬಾರದು.
2. ಅವರು ತಮ್ಮ ಭಾವನೆ, ವರ್ತನೆಗಳಲ್ಲಿ ತಮ್ಮತನವನ್ನು ಸಹಜವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ನಿಧಾನವಾಗಿ ಅವರ ಬುದ್ಧಿ ಬಲಿಯುತ್ತಾ ಬಂದಂತೆ ನಮಗೆ ಬೇಕಾದಂತ ಬದಲಾವಣೆಗಳನ್ನು ತರಬಹುದು.
3. ಮಗು ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ ದುಃಖ ಹತಾಶೆಗಳಂತಹ ಭಾವನೆಗಳನ್ನು ಹೊರಹಾಕಲು ಉತ್ತೇಜಿಸಿ. ಸಾರ್ವಜನಿಕವಾಗಿ ಅಳುವುದು, ಕೂಗಾಡುವುದು ಅವಮಾನಕರ ಎಂದುಕೊಳ್ಳಬೇಕಿಲ್ಲ. ಜೊತೆಗೆ ಕೋಪ, ಭಯ ಮುಂತಾದ ಭಾವನೆಗಳನ್ನು ನಮ್ಮ ಸಂಬಂಧಗಳು ಹಾಳಾಗದಂತೆ ವ್ಯಕ್ತಪಡಿಸುವುದು ಹೇಗೆ ಎನ್ನುವುದರ ತರಬೇತಿಯನ್ನೂ ನೀಡುತ್ತಾ ಹೋಗಬೇಕು.
4. ಹೆಣ್ಣು ಮಕ್ಕಳಿಗೆ ವಿಶೇಷ ನಿಯಮಗಳನ್ನು ಮಾಡಿ ಅವರನ್ನು ದುರ್ಬಲರನ್ನಾಗಿ ಮಾಡಬಾರದು. ಹಾಗೆಯೇ ಗಂಡುಮಕ್ಕಳು ಸೂಕ್ಷ್ಮವಾದ, ನವಿರಾದ ಭಾವನೆಗಳನ್ನು ಹೊಂದಿರಬಾರದು ಎಂದು ಸೂಚಿಸುತ್ತಾ ಅವರನ್ನು ಮೃಗಗಳನ್ನಾಗಿಸಬಾರದು.
ನಾವೆಲ್ಲಾ ಯಾವಾಗಲೂ ನೆನಪಿಡಬೇಕಾದದ್ದು ಮಕ್ಕಳು ನಮ್ಮ ಕಲ್ಪನೆಗೆ ಮೀರಿದ ಸೂಕ್ಷ್ಮ ಜೀವಿಗಳು. ಅವರನ್ನು ನಯವಾಗಿ, ಸೌಜನ್ಯದಿಂದ ನಡೆಸಿಕೊಂಡಷ್ಟೂ ಅವರ ಮುಂದಿನ ಬದುಕು ಸುಂದರವಾಗುತ್ತದೆ. ಜೊತೆಗೆ ನಮ್ಮ ವೃದ್ಧಾಪ್ಯವೂ ಆರಾಮದಾಯಕವಾಗಿರುತ್ತದೆ!
ನಡಹಳ್ಳಿ ವಸಂತ್
ಉರ್ದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ
ನಗರದ ತೈಬಾನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನ ಬಳಸಿಕೊಂಡು ಮನೆ ನಿರ್ಮಾಣ ಸೇರಿದಂತೆ ದೇಹದ ಕಾರ್ಯನಿರ್ವಹಣೆ, ಎಚ್೧ ಎನ್೧ ಖಾಯಿಲೆಯ ಬಗ್ಗೆ ಅರಿವು, ವಿದ್ಯುತ್ ಉತ್ಪಾದನಾ ಮಾದರಿ, ರಾಕೆಟ್, ಅರಣ್ಯ, ಪರಿಸರ ಮತ್ತು ಪ್ರಮುಖವಾಗಿ ಈ ಭಾಗದ ಜನರ ಜೀವನಾಡಿಯಾಗಿರುವ ರೇಷ್ಮೆ ಉತ್ಪಾದನೆ, ನೂಲು ಬಿಚ್ಚಾಣಿಕೆ ಘಟಕಗಳ ಮಾದರಿಗಳನ್ನು ತಯಾರಿಸಿದ್ದು, ವಿವರಣೆ ನೀಡಿ ನೋಡುಗರ ಗಮನ ಸೆಳೆದರು.
ಶಾಲಾ ಮುಖ್ಯಶಿಕ್ಷಕಿ ರಜಿಯಾಖಾನಂ ಮಾತನಾಡಿ, ತಾಂತ್ರಿಕವಾಗಿ ಬೆಳೆಯುತ್ತಿರುವ ಯುಗವನ್ನು ಜ್ಞಾನದ ಯುಗವೆಂದು ಭಾವಿಸಿದ್ದು ಮಕ್ಕಳಿಗೆ ಅಕ್ಷರಾಭ್ಯಾಸ ನೀಡಿದರಷ್ಟೇ ಸಾಲದು ಬದಲಿಗೆ ಸಾಮಾನ್ಯ ಜ್ಞಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ವೃತ್ತಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ವಸ್ತು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸಿದರೆ ಇಂತಹ ವಿಜ್ಞಾನ ವಸ್ತು ಪ್ರದರ್ಶನಗಳು ಮಕ್ಕಳ ವೈಜ್ಞಾನಿಕ ಮನೋಭಾವವನ್ನು ಪ್ರದರ್ಶಿಸಲು ವೇದಿಕೆಯಾಗಿದೆ ಎಂದರು.
ಮುಖಂಡರಾದ ಅಮ್ಜದ್, ಅಫ್ಜಲ್ಪಾಷ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ, ಶಾಲಾ ಶಿಕ್ಷಕರಾದ ಮೂಮೂನಾ ಬಾನು, ಮುಬೀನಾಬೇಗಂ, ಉಮ್ಮೇಜಕಿಯಾ, ಯಾಸ್ಮೀನಾ, ಸೈಯ್ಯದ್ ಜಿಯಾವುಲ್ಲಾ, ಕೃಷ್ಣಪ್ಪ, ಗೋವಿಂದಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಶಕ್ತ ವೃದ್ಧೆಯರಿಗೆ ಮಾಸಾಶನ
ಅಶಕ್ತರು ಮತ್ತು ಬಡವರಿಗೆ ನೆರವು ನೀಡುವ ಮೂಲಕ ಅವರಿಗೆ ಆಸರೆಯಾಗುವುದು ನಮ್ಮ ಯೋಜನೆಯ ಮೂಲ ಉದ್ದೇಶ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಬಿ.ಆರ್.ಯೋಗೀಶ್ ಕನ್ಯಾಡಿ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದ ವೃದ್ಧೆಯರಾದ ಪಾರ್ವತಮ್ಮ ಮತ್ತು ನಾರಾಯಣಮ್ಮ ಅವರಿಗೆ ಐದು ನೂರುಗಳ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಗ್ರಾಮದಲ್ಲೂ ನಮ್ಮ ಕಾರ್ಯಕರ್ತರು ಸರ್ವೇಕ್ಷಣೆ ನಡೆಸುತ್ತಿರುವಾಗ ಈ ಹಳ್ಳಿಯಲ್ಲಿ ಯಾವುದೇ ಆಸರೆಯಿಲ್ಲದೆ, ದುಡಿಯಲು ಶಕ್ತಿಯಿಲ್ಲದ ಪರಿಸ್ಥಿತಿಯಲ್ಲಿ ಗುಡಿಸಲಲ್ಲಿ ನೆಲೆಸಿರುವ ವೃದ್ಧೆಯರನ್ನು ಗುರುತಿಸಿದರು. ಅವರಿಗೆ ಬದುಕಲು ಆಸರೆ ಹಾಗೂ ಶಕ್ತಿಯನ್ನು ತುಂಬುವ ನಿಟ್ಟಿನಲ್ಲಿ ಈಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾಸಾಶನ ಮಂಜೂರಾತಿ ಪತ್ರವನ್ನು ನೀಡಲಾಗಿದೆ. ಮುಂದೆ ಅದನ್ನು ಒಂದು ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಮಳ್ಳೂರಾಂಭ ಸ್ವಸಹಾಯ ಸಂಘದ ಲಕ್ಷ್ಮಮ್ಮ, ಪುಟ್ಟಮ್ಮ, ಪ್ರಿಯದರ್ಶಿನಿ ಸ್ವಸಹಾಯ ಸಂಘದ ಉಮ, ಮಂಜುಳಮ್ಮ, ನವೋದಯ ಸ್ವಸಹಾಯ ಸಂಘದ ವರಲಕ್ಷ್ಮಿ, ಲಕ್ಷ್ಮಮ್ಮ, ಮೇಲ್ವಿಚಾರಕಿ ಮಮತಾ, ಸೇವಾಪ್ರತಿನಿಧಿ ನಂದಿನಿ, ಗ್ರಾಮ ಪಂಚಾಯತಿ ಸದಸಯ ಸೊಣ್ಣಪ್ಪ, ಕೆ.ಆರ್.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಮೇಲೂರು ಜೇಸಿಸ್ ವಿಧ್ಯಾಸಂಸ್ಥೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ವಿದ್ಯಾರ್ಥಿಗಳು ನಾಲ್ಕು ಗೋಡೆಗಳ ನಡುವೆ ಕುಳಿತು ಕೇವಲ ಪಾಠ, ಪ್ರವಚನಕ್ಕಷ್ಟೇ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಎಂದು ಚಲನಚಿತ್ರ ನಟ ಶಂಕರ್ ಅಶ್ವಥ್ ಹೇಳಿದರು.
ತಾಲೂಕಿನ ಮೇಲೂರು ಗ್ರಾಮದ ಜೇಸಿಸ್ ವಿಧ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು, ಏಕಾಗ್ರತೆಯನ್ನು ಬೆಳೆಸಿಕೊಳ್ಳುವುದರೊಂದಿಗೆ ವಿಚಾರಗಳನ್ನು ಅರ್ಥಮಾಡಿಕೊಳ್ಳುವಂತಹ ಹಂಬಲ ಹೊಂದಿರಬೇಕು ಎಂದರು.
ಪೋಷಕರೂ ಕೂಡಾ ತಮ್ಮ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಷ್ಟೆ ಸೀಮಿತಗೊಳಿಸದೇ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು.
ಮಕ್ಕಳನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡಲು ಶಿಕ್ಷಣ ಸಂಸ್ಥೆಗಳು ಕ್ರೀಡಾ ಚಟುವಟಿಕೆಗಳನ್ನು ಆಯೋಜನೆ ಮಾಡುವ ಮೂಲಕ ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗಾಗಿ ಹೆಚ್ಚಿನ ಪರಿಶ್ರಮ ಹಾಕಬೇಕು.
ವಿದ್ಯಾರ್ಥಿಗಳು ಕೇವಲ ಓದುವುದು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾಗಿ ನಂತರ ಒಂದು ಉದ್ಯೋಗ ಪಡೆಯುವುದಷ್ಟೇ ಜೀವನದ ಗುರಿ ಎಂದು ಭಾವಿಸದೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಗಮನಹರಸುವುದರೊಂದಿಗೆ ಸಾಮಾಜಿಕ ಕಳಕಳಿಯ ಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ರವಿಚಂದ್ರ, ಕಾರ್ಯದರ್ಶಿ ಪ್ರಶಾಂತ್‍ಕುಮಾರ್ ಸೇರಿದಂತೆ ಶಾಲಾ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು.

