32.5 C
Sidlaghatta
Thursday, March 28, 2024

ನಗು ಎಂದರೆ ನಗಬೇಕೇ?

- Advertisement -
- Advertisement -

ಮಗು ಜಾರಿ ಬಿದ್ದು ಸ್ವಲ್ಪ ಗಾಯ ಮಾಡಿಕೊಂಡಿದೆ. ಆಗ ಅಳುವುದು ಸಹಜ ಅಲ್ವಾ? ಅಳು ಗಾಯದ ನೋವನ್ನು ಸಹಿಸಲಾರದ ದು:ಖದಿಂದ ಬಂದಿರುವುದರಿಂದ ಅದು ಮಗುವಿನ ಆ ಕ್ಷಣದ ಭಾವನೆಯ ನೈಜ ಅಭಿವ್ಯಕ್ತಿ. ಬಿದ್ದಾಗ ಗಾಯವೇ ಆಗಿರದಿದ್ದರೂ ಮಗು ಅಳುವ ಸಾಧ್ಯತೆಗಳಿರುತ್ತವೆ. ಆಗ ನೋವಿನ ದು:ಖವಿಲ್ಲದಿದ್ದರೂ ಮಗು ಅಳುವುದಕ್ಕೆ ಕಾರಣ ಏನಿರಬಹುದು?
1. ಮಗು ಬಿದ್ದಿದ್ದನ್ನು ಸುತ್ತಲಿನವರೆಲ್ಲಾ ನೋಡಿರುತ್ತಾರೆ. ಇವರಲ್ಲಿ ಕೆಲವರು ದೊಡ್ಡದಾಗಿ ನಕ್ಕಿರಬಹುದು. ಇದರಿಂದ ಅವಮಾನಗೊಂಡ ಮಗು ಅಳುತ್ತದೆ.
2. ಬೀಳುವುದನ್ನು ಅವಮಾನವೆಂದು ಸ್ವೀಕರಿಸುವ ಮಗುವಿಗೆ ನಕ್ಕವರ ಮೇಲೆ ಸಿಟ್ಟು ಬರಬಹುದು; ದೊಡ್ಡವರ ಮೇಲೆ ತನ್ನ ಸಿಟ್ಟನ್ನು ತೀರಿಸಲಾರದ ಅಸಹಾಯಕತೆಯಿಂದ ಮಗು ಅಳಬಹುದು.
3. ಅತ್ತ ತಕ್ಷಣ ಚಾಕೋಲೇಟ್ ಸಿಗುತ್ತದೆ ಅಥವಾ ಅಮ್ಮ ಮುದ್ದುಮಾಡುತ್ತಾಳೆ ಎಂದು ಕಂಡುಕೊಂಡಿರುವ ಮಗು ಕಣ್ಣೀರೇ ಬರದಿದ್ದರೂ ಕೇರಿಗೆಲ್ಲಾ ಕೇಳುವಂತೆ ಅಳಬಹುದು!
ಹೀಗೆ ಅಳುವೆಂಬ ಒಂದೇ ಅಭಿವ್ಯಕ್ತಿಯ ಹಿಂದೆ ನೋವು, ಅವಮಾನ, ಸಿಟ್ಟು, ಬೇಸರ-ಹೀಗೆ ಬೇರೆ ಬೇರೆ ಭಾವನೆಗಳಿರಬಹುದು. ಇದೇ ರೀತಿ ನಗು, ಬೈಯುವುದು, ಹೊಡೆಯುವುದು, ಮುದ್ದಿಸುವುದು-ಹೀಗೆ ಎಲ್ಲಾ ಅಭಿವ್ಯಕ್ತಿಯ ಹಿಂದೆ ವಿಭಿನ್ನ ಭಾವನೆಗಳಿರಲು ಸಾಧ್ಯ ಎಂದು ಮನಶ್ಯಾಸ್ತ್ರಜ್ಞರು ಹೇಳುತ್ತಾರೆ.
ಇದೆಲ್ಲಾ ಸಂಶೋಧಕರಿಗೆ ಸಂಬಂಧಪಟ್ಟ ವಿಷಯ, ಜನಸಾಮಾನ್ಯರಿಗೇಕೆ ಬೇಕು-ಎಂದು ನೀವು ಅಂದುಕೊಳ್ಳುತ್ತಿರಬಹುದು. ಮಗು ತನ್ನ ಸಹಜ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನಾವು ಹೇಗೆ ತಡೆಯುತ್ತೇವೆ ಅಥವಾ ಭಾವನೆಗಳನ್ನು ರೂಪಾಂತರಿಸಿಕೊಳ್ಳಲು ನಾವು ಹೇಗೆ ಪ್ರಚೋದಿಸುತ್ತೇವೆ ಮತ್ತು ಇದರಿಂದಾಗಬಹುದಾದ ಪರಿಣಾಮಗಳೇನು ಎಂದು ನಾವೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು.
ಎಂಟು ವರ್ಷದ ಗಂಡು ಮಗು ಬಿದ್ದು ಅಳುತ್ತಾ ಇದೆ ಅಂದ್ಕೊಳ್ಳಿ. ನಾವು “ಛೇ ಎಂತಹ ಗಂಡ್ಸೋ ನೀನು, ಇಷ್ಟಕ್ಕೆಲ್ಲಾ ಅಳುತ್ತಾರಾ. ಎಲ್ಲಿ ನಗು ನೋಡೋಣ” ಅಂತ ಬಲವಂತವಾಗಿ ನಗಿಸುತ್ತೇವೆ. ಆ ಮುಗ್ಧ ಜೀವ ನೋವಿನಲ್ಲೂ ಕಣ್ಣೊರೆಸಿಕೊಳ್ಳುತ್ತಾ ಪೆದ್ದ ನಗು ನಕ್ಕಾಗ ನಾವು “ಶಹಭಾಷ್” ಎನ್ನುತ್ತೇವೆ. ಇದರ ಸಂದೇಶ ಏನು ಅಂದ್ರೆ, ‘ಗಂಡಸಾದ ನಿನಗೆ ಅಳು ಸಹಜ ಅಭಿವ್ಯಕ್ತಿ ಆಗಬಾರದು, ಅದು ಹೆಣ್ಣು ಮಕ್ಕಳಿಗೆ ಸರಿ’ ಎನ್ನುವುದು ಅಂತಲ್ಲವೇ?.
ಇದೇ ರೀತಿ ಹೆಣ್ಣು ಮಗುವೊಂದು ತನ್ನನ್ನು ಅವಮಾನಿಸಿದವರಿಗೆ ಕೋಪದಿಂದ ಕೂಗಾಡಿದಾಗ, ಹೆಣ್ಣು ಸಹಿಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಹೋಗಬೇಕು, ಸಿಟ್ಟು ಮಾಡಬಾರದು, ಇದರಿಂದ ಮುಂದೆ ಸಂಸಾರ ಮಾಡುವುದಕ್ಕೆ ತೊಂದರೆಯಾಗುತ್ತದೆ-ಎಂದು ನಾವು ಉಪದೇಶ ಮಾಡುತ್ತೇವೆ.
ಇಂತಹ ನಮ್ಮ ಪ್ರತಿಕ್ರಿಯೆಗಳು ಮಗು ಗಂಡೊ ಹೆಣ್ಣೊ ಅನ್ನುವುದಕ್ಕಷ್ಟೇ ಸೀಮೀತವಾಗಿರುವುದಿಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಇದನ್ನು ಹೇಗೆ ಮಾಡುತ್ತೇವೆಂಬುದಕ್ಕೆ ಇನ್ನೂ ಕೆಲವು ಉದಾಹರಣೆಗಳನ್ನು ಕೊಡಬಹದು.
1. ಯಾರಾದರೂ ಮೃತರಾದಾಗ ಕಡ್ಡಾಯವಾಗಿ ಅಳಲೇಬೇಕು.
2. ದೊಡ್ಡವರು ಮಾತನಾಡುತ್ತಿರುವಾಗ ಮಕ್ಕಳು ಗಂಭೀರವಾಗಿರಬೇಕು.
3. ಹೆಣ್ಣು ಮಕ್ಕಳು ಸಾರ್ವಜನಿಕವಾಗಿ ದೊಡ್ಡ ಧ್ವನಿಯಲ್ಲಿ ನಗಬಾರದು.
4. ಗಂಡು ಮಕ್ಕಳಿಗೆ ನೋವನ್ನು, ದು:ಖವನ್ನು, ಸಹಿಸಿಕೊಳ್ಳುವ ಶಕ್ತಿ ಇರಲೇಬೇಕು.
5. ಎಲ್ಲರ ಎದುರು ಮಕ್ಕಳು ಗೌರವಯುತವಾಗಿ ನಡೆದುಕೊಳ್ಳಬೇಕು. ಉದಾಹರಣೆಗೆ ಅತಿಥಿಗಳಿಗೆ ಅಂತ ಇಟ್ಟ ತಿಂಡಿಯನ್ನು ಮುಟ್ಟಬಾರದು. ನಮಗೆ ಕ್ಷುಲ್ಲಕ ಅನ್ನಿಸುವ ಅಥವ ಉತ್ತರಿಸಲು ಕಷ್ಟವಾಗುವ ಪ್ರಶ್ನೆಗಳನ್ನು ಎಲ್ಲರೆದುರು ಕೇಳಬಾರದು, ಗಲೀಜಾದ ಬಟ್ಟೆಗಳನ್ನು ಹಾಕಿಕೊಂಡು ಬರಬಾರದು-ಇತ್ಯಾದಿ. ಹೀಗೆ ನಿಯಮಗಳ ದೊಡ್ಡ ಪಟ್ಟಿಯೇ ಇರುತ್ತದೆ.
ಹೀಗೆಲ್ಲಾ ಹೇಳುವಾಗ ಅಥವಾ ಮಾಡುವಾಗ ನಾವು ಮಗುವನ್ನು ಸುಸಂಸ್ಕøತವಾಗಿ ಬೆಳೆಸುತ್ತಿದ್ದೇವೆ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತ ಇದ್ದೇವೆ ಅಂತ ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಹಾಗಾಗುತ್ತದೆಯೇ? ಮನಶ್ಯಾಸ್ತ್ರಜ್ಞರ ಚಿಂತನೆಗಳು ಸ್ವಲ್ಪ ಬೇರೆಯೇ ಆಗಿವೆ.
ನಾವು ದೊಡ್ಡವರ ಪ್ರಪಂಚಕ್ಕೆ ಸೂಕ್ತವೆಂದುಕೊಂಡಿರುವ ನಿಯಮಗಳನ್ನು ಮಗುವಿನ ಮೇಲೆ ಹೇರಿದಾಗ ಅದಕ್ಕೆ ಗಲಿಬಿಲಿಯಾಗುತ್ತದೆ. ಪ್ರತಿಹಂತದಲ್ಲೂ ತಾನೇನೋ ತಪ್ಪು ಮಾಡುತ್ತಿರಬಹುದೇ ಎಂದುಕೊಳ್ಳುತ್ತಾ, ಮಕ್ಕಳು ತಮ್ಮ ಸಹಜ ಕುತೂಹಲದ ಸ್ವಭಾವವನ್ನೇ ಕಳೆದುಕೊಳ್ಳಬಹುದು. ನಮ್ಮ ನೀತಿನಿಯಮಗಳು ಮಕ್ಕಳ ಮೇಲೆ ಬೀರಬಹುದಾದ ಕೆಟ್ಟಪರಿಣಾಮಗಳು ಹೀಗಿರಲು ಸಾಧ್ಯ;
1. ಮಗುವಿಗೆ ತನ್ನ ಸಹಜ ಭಾವನೆಗಳಾದ ಅಳು, ನಗು ಸಿಟ್ಟು, ಬೇಸರ-ಇವೆಲ್ಲವುಗಳನ್ನು ವ್ಯಕ್ತಪಡಿಸಲಾಗದೇ ಹೋದಾಗ ಅದು ಬೆಳೆಯುತ್ತಾ ಬಂದಂತೆ ಭಾವನೆಗಳನ್ನು ಹತ್ತಿಕ್ಕುವ ಪ್ರವೃತ್ತಿ ಬೆಳೆಸಿಕೊಳ್ಳಬಹುದು. ಇಂತಹ ವ್ಯಕ್ತಪಡಿಸದ ಭಾವನೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಎಲ್ಲರಿಗೂ ಗೊತ್ತಿದೆ.
2. ನಮಗೆಲ್ಲಾ ಒಂದು ಹಂತದವರೆಗೆ ಮಾತ್ರ ಭಾವನೆಗಳನ್ನು ಮುಚ್ಚಿಡಲು ಸಾಧ್ಯ. ನಂತರ ಅದು ಬೇರೆಬೇರೆ ರೀತಿಗಳಲ್ಲಾದರೂ ಹೊರಬರಲೇಬೇಕು. ಇದು ಕುಡಿಯುವುದು, ಹಿಂಸಾತ್ಮಕ ಕ್ರಿಯೆಗಳು, ಮನೆ ಬಿಟ್ಟು ಓಡಿಹೋಗುವುದು, ತೀರಾ ವಿಷಮ ಪರಿಸ್ಥಿತಿಗಳಲ್ಲಿ ಆತ್ಮಹತ್ಯೆ, ಮುಂತಾದ ರೂಪದಲ್ಲಿರಲು ಸಾಧ್ಯ ಎಂದು ನಾವು ಮರೆಯಬಾರದು.
3. ಹತ್ತಿಕ್ಕಲ್ಪಟ್ಟ ಭಾವನೆಗಳು ಒಮ್ಮೆಲೇ ಅನುಚಿತವಾಗಿ ಸ್ಫೋಟಗೊಳ್ಳುವುದು ಅಪರೂಪವೇನಲ್ಲ. ಇದು ಮಕ್ಕಳಲ್ಲಷ್ಟೇ ಅಲ್ಲ ದೊಡ್ಡವರಲ್ಲೂ ಕೂಡ ಆಗಬಹುದು. ಮಗುವಿನ ಸಣ್ಣಪುಟ್ಟ ತರಲೆಗಳಿಗೆ ಸಿಟ್ಟು ಬಂದಿದ್ದರೂ ನಾವು ತಡೆಯುತ್ತಾ ಬಂದಿರುತ್ತೇವೆ. ಕೊನೆಗೆ ಒಂದು ದಿನ ಎಲ್ಲಾ ಸೇರಿಸಿ ಚನ್ನಾಗಿ ತದುಕುತ್ತೇವೆ! “ನಾನು ನೋಡೋ ಅಷ್ಟು ದಿನ ನೋಡಿದೆ. ಇವನು ಸರಿ ಆಗೋ ಹಾಗೆ ಕಾಣ್ಲಿಲ್ಲ” ಅಂತ ನಮ್ಮ ಕ್ರಿಯೆಯನ್ನು ಸಮರ್ಥಿಸಿಕೊಳ್ಳುತ್ತೇವೆ. ನಾವು ಯಾಕೆ ಮೊದಲನೇ ಸಾರಿ ಮಗು ತಪ್ಪುಮಾಡಿದಾಗಲೇ ಅವನಿಗೆ ಸ್ಪಷ್ಟವಾಗಿ ತಿಳಿಸಿ ಹೇಳಲಿಲ್ಲ ಅಂತ ಯೋಚಿಸುವುದೇ ಇಲ್ಲ. “ಹಾಗೆಲ್ಲಾ ತಕ್ಷಣ ಸಿಟ್ಟು ಮಾಡಬಾರದು ಸಹನೆ ಇಟ್ಟುಕೊಳ್ಳುಬೇಕು” ಎಂದು ನಮಗೆ ಬಾಲ್ಯದಲ್ಲಿ ಕಲಿಸಲಾಗುತ್ತದೆ. ಇದರಿಂದಾಗಿ ನಾವು ಭಾವನೆಗಳನ್ನು ಸಂಗ್ರಹಿಸಿರುತ್ತೇವೆ.
4. ನಮ್ಮ ನಿಯಮಗಳು ಮಕ್ಕಳ ಪ್ರಶ್ನೆ ಕೇಳುವ ಪ್ರವೃತ್ತಿಯನ್ನೇ ಕಡಿಮೆ ಮಾಡಬಹುದು. ಎಲ್ಲರೆದುರು ಪ್ರಶ್ನೆ ಕೇಳಿ, “ಏ ದಡ್ಡಾ ಅಷ್ಟೂ ಗೊತ್ತಾಗೊಲ್ವೇನೋ” ಅಂತ ಹೇಳಿಸಿಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಉತ್ತಮ ಅಂತ ಮಗು ಅಂದುಕೊಂಡರೆ ಜ್ಞಾನದ ಬೆಳವಣಿಗೆಯೇ ಕುಂಟಿತವಾಗಬಹುದು.
ಈ ರೀತಿಯ ಸಮಸ್ಯೆಗಳು ಎಲ್ಲಾ ಮಕ್ಕಳಲ್ಲೂ ಆಗಲೇಬೇಕೆಂದಿಲ್ಲ. ಹಾಗಿದ್ದರೂ ದೊಡ್ಡವರ ನೀತಿ ನಿಯಮಗಳು ಹೆಚ್ಚಾದಷ್ಟೂ ಇದರ ಸಾಧ್ಯತೆಗಳು ಹೆಚ್ಚುತ್ತವೆ.
ಹಾಗಿದ್ದರೆ ಮಕ್ಕಳನ್ನು ಹಾಗೆಯೇ ಬಿಟ್ಟುಬಿಡಬೇಕೇ?, ಅವರಿಗೆ ವಾಸ್ತವಿಕ ಜಗತ್ತನ್ನು ಪರಿಚಯಿಸುವವರು ಯಾರು ಮತ್ತು ಯಾವಾಗ?-ಎನ್ನುವ ಪ್ರಶ್ನೆ ಏಳುವುದು ಸಹಜ.
ನಿಜ ಹೇಳ್ಬೂಕೂಂದ್ರೆ ಈ ದೊಡ್ಡವರದ್ದು ಮಹಾ ಬೂಟಾಟಿಕೆಯ, ನಯವಂಚಕತನದ ಪ್ರಪಂಚ. ನಮಗೆಲ್ಲರಿಗೂ ಮಕ್ಕಳ ತರಹ ನೇರವಾಗಿ, ಸರಳವಾಗಿ ಇರುವುದು ಸಾಧ್ಯವಿದ್ದಿದ್ದರೆ ಇಲ್ಲಿನ ಬದುಕು ಬಹಳ ಸುಂದರವಾಗಿರುತ್ತಿತ್ತು. ಆದರೆ ಸದ್ಯಕ್ಕಂತೂ ಹಾಗಿಲ್ಲವಲ್ಲ, ಏನು ಮಾಡುವುದು?
1. ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸುವ ಹಂತದಲ್ಲೇ ಅವರನ್ನು ತಡೆಯಬಾರದು. ಬುದ್ಧಿಯಲ್ಲಿ ಮತ್ತು ಪ್ರಾಪಂಚಿಕ ಜ್ಞಾನದಲ್ಲಿ ಅವರು ದೊಡ್ಡವರಂತೆ ಇರುವುದು ಸಾದ್ಯವಿಲ್ಲ ಎನ್ನುವುದನ್ನು ನಾವು ನೆನಪಿನಲ್ಲಿಡಬೇಕು. ಹಾಗಾಗಿ ಅವರ ವರ್ತನೆಗಳ ಹಿಂದಿರುವುದು ಮುಗ್ಧತೆಯೇ ಹೊರತು ದಡ್ಡತನವಲ್ಲ ಎಂದುಕೊಳ್ಳಬೇಕು. ಎಲ್ಲರೆದುರು ಮಕ್ಕಳು ಪೆದ್ದುಪದ್ದಾಗಿ ವರ್ತಿಸಿದರೆ ಅದು ನಮಗಾದ ಅವಮಾನ ಎಂದು ತಿಳಿದುಕೊಳ್ಳಬಾರದು.
2. ಅವರು ತಮ್ಮ ಭಾವನೆ, ವರ್ತನೆಗಳಲ್ಲಿ ತಮ್ಮತನವನ್ನು ಸಹಜವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಬೇಕು. ನಿಧಾನವಾಗಿ ಅವರ ಬುದ್ಧಿ ಬಲಿಯುತ್ತಾ ಬಂದಂತೆ ನಮಗೆ ಬೇಕಾದಂತ ಬದಲಾವಣೆಗಳನ್ನು ತರಬಹುದು.
3. ಮಗು ಗಂಡೇ ಆಗಿರಲಿ, ಹೆಣ್ಣೇ ಆಗಿರಲಿ ದುಃಖ ಹತಾಶೆಗಳಂತಹ ಭಾವನೆಗಳನ್ನು ಹೊರಹಾಕಲು ಉತ್ತೇಜಿಸಿ. ಸಾರ್ವಜನಿಕವಾಗಿ ಅಳುವುದು, ಕೂಗಾಡುವುದು ಅವಮಾನಕರ ಎಂದುಕೊಳ್ಳಬೇಕಿಲ್ಲ. ಜೊತೆಗೆ ಕೋಪ, ಭಯ ಮುಂತಾದ ಭಾವನೆಗಳನ್ನು ನಮ್ಮ ಸಂಬಂಧಗಳು ಹಾಳಾಗದಂತೆ ವ್ಯಕ್ತಪಡಿಸುವುದು ಹೇಗೆ ಎನ್ನುವುದರ ತರಬೇತಿಯನ್ನೂ ನೀಡುತ್ತಾ ಹೋಗಬೇಕು.
4. ಹೆಣ್ಣು ಮಕ್ಕಳಿಗೆ ವಿಶೇಷ ನಿಯಮಗಳನ್ನು ಮಾಡಿ ಅವರನ್ನು ದುರ್ಬಲರನ್ನಾಗಿ ಮಾಡಬಾರದು. ಹಾಗೆಯೇ ಗಂಡುಮಕ್ಕಳು ಸೂಕ್ಷ್ಮವಾದ, ನವಿರಾದ ಭಾವನೆಗಳನ್ನು ಹೊಂದಿರಬಾರದು ಎಂದು ಸೂಚಿಸುತ್ತಾ ಅವರನ್ನು ಮೃಗಗಳನ್ನಾಗಿಸಬಾರದು.
ನಾವೆಲ್ಲಾ ಯಾವಾಗಲೂ ನೆನಪಿಡಬೇಕಾದದ್ದು ಮಕ್ಕಳು ನಮ್ಮ ಕಲ್ಪನೆಗೆ ಮೀರಿದ ಸೂಕ್ಷ್ಮ ಜೀವಿಗಳು. ಅವರನ್ನು ನಯವಾಗಿ, ಸೌಜನ್ಯದಿಂದ ನಡೆಸಿಕೊಂಡಷ್ಟೂ ಅವರ ಮುಂದಿನ ಬದುಕು ಸುಂದರವಾಗುತ್ತದೆ. ಜೊತೆಗೆ ನಮ್ಮ ವೃದ್ಧಾಪ್ಯವೂ ಆರಾಮದಾಯಕವಾಗಿರುತ್ತದೆ!
ನಡಹಳ್ಳಿ ವಸಂತ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!