H Cross ನಿಂದ ಟಿನ್ ಫ್ಯಾಕ್ಟರಿ-ನೆಲಮಂಗಲ ನೂತನ ಬಸ್ ಸೇವೆಗೆ ಚಾಲನೆ

- Advertisement -
- Advertisement -

H Cross, Sidlaghatta : ರಾಜ್ಯದ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಹಾಗೂ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಲೆಕ್ಕಕ್ಕೆ ಅಂದಾಜು ಸಿಗದ ರೀತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿ, ಸುಗಮ ಸುವ್ಯವಸ್ಥೆಯ ಸಾರಿಗೆ ಬಸ್ ಸೇವೆ ನೀಡುವುದು ರಾಜ್ಯ ಸರಕಾರದ ಪ್ರಮುಖ ಗುರಿಯಾಗಿದೆ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ತಾಲ್ಲೂಕಿನ ಎಚ್.ಕ್ರಾಸ್‌ನಿಂದ ಬೆಂಗಳೂರಿನ ಹೊಸಕೋಟೆಯ ಟಿನ್ ಫ್ಯಾಕ್ಟರಿ ಹಾಗೂ ಅಲ್ಲಿಂದ ನೆಲಮಂಗಲದವರೆಗೂ ನೂತನ BMTC ವೇಗದೂತ ಬಸ್ ಸೇವೆಯ ಸಂಚಾರಕ್ಕೆ ಎಚ್.ಕ್ರಾಸ್‌ನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

1983ರಲ್ಲಿ ಬೆಂಗಳೂರಿನ ಜನಸಂಖ್ಯೆ ಕೇವಲ ೧೫ ಲಕ್ಷ ಇತ್ತು. ಆದರೆ ಈಗ ಅದು ಸುಮಾರು 1 ಕೋಟಿ 40 ಲಕ್ಷಕ್ಕೆ ಏರಿಕೆಯಾಗಿದೆ. ಪ್ರತಿದಿನ ಸುಮಾರು 46 ಲಕ್ಷ ಜನರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಖಾಸಗಿ ವಾಹನಗಳ ಬಳಕೆ ಹೆಚ್ಚುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಗಂಭೀರವಾಗಿದೆ ಎಂದರು.

ಸಂಚಾರದ ಒತ್ತಡವನ್ನು ನಿಯಂತ್ರಿಸಲು ನಗರ ಹಾಗೂ ಗ್ರಾಮೀಣ ಸಂಪರ್ಕ ಬಲಪಡಿಸುವ ಉದ್ದೇಶದಿಂದ ಬಿಎಂಟಿಸಿ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು. ಪ್ರಸ್ತುತ ಬಿಎಂಟಿಸಿಯು ಸುಮಾರು 7 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು 66 ಸಾವಿರ ಟ್ರಿಪ್‌ಗಳನ್ನು ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ಕನಕಪುರ, ಚನ್ನಪಟ್ಟಣ, ಮಾಗಡಿ ಹಾಗೂ ಕುಣಿಗಲ್ ಭಾಗಗಳಿಗೂ ಬಿಎಂಟಿಸಿ ಸೇವೆ ವಿಸ್ತರಣೆ ಮಾಡುವ ಯೋಜನೆ ಇದೆ ಎಂದು ಹೇಳಿದರು.

ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಲವು ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿ, ಎಚ್.ಕ್ರಾಸ್‌ನಿಂದ ಬೆಂಗಳೂರಿನ ಟಿನ್ ಫ್ಯಾಕ್ಟರಿವರೆಗೆ ಆರಂಭಿಸಿರುವ ನೂತನ ಬಸ್ ಸೇವೆ ಗ್ರಾಮೀಣ ಭಾಗದ ಜನರಿಗೆ ಬಹು ವರ್ಷಗಳ ಕನಸಾಗಿತ್ತು ಎಂದು ಹೇಳಿದರು. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಖಾಸಗಿ ಕಂಪನಿಗಳ ಉದ್ಯೋಗಿಗಳು ಬೆಂಗಳೂರಿಗೆ ತೆರಳುತ್ತಿದ್ದಾರೆ. ಸಮರ್ಪಕ ಸಾರಿಗೆ ಸೌಲಭ್ಯ ಇಲ್ಲದ ಕಾರಣ ಅನೇಕರು ತೊಂದರೆ ಅನುಭವಿಸುತ್ತಿದ್ದರು. ಈಗ ಆರಂಭಿಸಿರುವ ವೇಗದೂತ ಬಸ್ ಸೇವೆಯಿಂದ ಪ್ರಯಾಣ ಸಮಯ ಕಡಿಮೆಯಾಗುವುದರ ಜೊತೆಗೆ ಸುರಕ್ಷಿತ ಹಾಗೂ ಕಡಿಮೆ ವೆಚ್ಚದ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ ಎಂದು ಹೇಳಿದರು.

ಜಂಗಮಕೋಟೆ, ದೇವನಹಳ್ಳಿ, ಯಲಹಂಕ, ವಿಜಯಪುರ, ಮೇಲೂರು, ಮಳ್ಳೂರು ಸೇರಿದಂತೆ ವಿವಿಧ ಗ್ರಾಮೀಣ ಮಾರ್ಗಗಳಿಗೆ ಹೆಚ್ಚುವರಿ ಬಸ್ ಸೇವೆ ಒದಗಿಸುವಂತೆ ಸಚಿವರಿಗೆ ಮನವಿ ಸಲ್ಲಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ವಿಶೇಷ ಶೆಡ್ಯೂಲ್‌ಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆ ಮಹಿಳೆಯರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ . ರಾಜ್ಯಾದ್ಯಂತ ಮಹಿಳೆಯರು ಈಗಾಗಲೇ ಸುಮಾರು 740 ಕೋಟಿ ಉಚಿತ ಪ್ರಯಾಣಗಳನ್ನು ಕೈಗೊಂಡಿದ್ದಾರೆ. ಇದರ ಪರಿಣಾಮ ಗ್ರಾಮೀಣ ಮಹಿಳೆಯರ ಆರ್ಥಿಕ ಭಾರ ಕಡಿಮೆಯಾಗಿದ್ದು, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿಯೂ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ ಎಂದು ತಿಳಿಸಿದರು.

ಇದೀಗ ಎಚ್.ಕ್ರಾಸ್‌ನಿಂದ ಟಿನ್ ಫ್ಯಾಕ್ಟರಿ ವರೆಗೆ ಅರ್ಧ ಗಂಟೆಗೆ ಒಂದು ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ್ದಾರೆ. 317 ಸಿಹೆಚ್ ಮಾರ್ಗದ ಮೂಲಕ 7 ಶೆಡ್ಯೂಲ್‌ಗಳನ್ನು ಆರಂಭಿಸಲಾಗಿದ್ದು, ಪ್ರಯಾಣಿಕರಿಗೆ ಬೆಂಗಳೂರು ನಗರದ ವಿವಿಧ ಭಾಗಗಳಿಗೆ ಸುಲಭ ಸಂಪರ್ಕ ಲಭ್ಯವಾಗಲಿದೆ ಎಂದು ವಿವರಿಸಿದರು.

ಬಿಎಂಟಿಸಿ ಅಧ್ಯಕ್ಷ ಆರಾಧ್ಯ, ಉಪಾಧ್ಯಕ್ಷ ನಿಕೇತ್ ರಾಜ್, ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್, ಟಿಎಪಿಸಿಎಂಎಸ್ ಅಧ್ಯಕ್ಷ ಸುರೇಶ್, ಕೆಪಿಸಿಸಿ ಸದಸ್ಯ ಗೋಪಾಲ್, ಕಾಂಗ್ರೆಸ್ ಮುಖಂಡ ಸಗೀರ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚಾಂದ್ ಪಾಷಾ, ಗ್ಯಾರಂಟಿ ಸಮಿತಿಗಳ ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್, ಮುಖಂಡ ತಾದೂರು ರಘು ಇನ್ನಿತರರು ಹಾಜರಿದ್ದರು.

Sidlaghatta WhatsApp Channel Group

For Daily Updates WhatsApp ‘HI’ to 7406303366

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!