ಪೌಷ್ಠಿಕ ಮತ್ತು ಸಮತೋಲನ ಆಹಾರ ಮಕ್ಕಳಿಗೆ ನೀಡುವಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ ಮಹತ್ವದ್ದು ಎಂದು ವೈದ್ಯರಾದ ಡಾ.ಡಿ.ಕೆ.ರಮೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಹೊಸಪೇಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಕ್ಕಳ ಮೇಲೆ ಒತ್ತಡ ಹೇರದಂತೆ ಅವರ ಸೃಜನಶೀಲತೆ ಅರಳುವಂತಹ ವಾತಾವರಣವನ್ನು ಶಾಲಾ ಪರಿಸರದಲ್ಲಿ ನಿರ್ಮಾಣ ಮಾಡಬೇಕು. ಉತ್ತಮ ಆರೋಗ್ಯಪೂರ್ಣವಾದ ದೇಹದಲ್ಲಿ ಒಳ್ಳೆಯ ಆಲೋಚನೆಗಳು ತುಂಬಬೇಕು. ದೇಹದ ಆರೋಗ್ಯಕ್ಕೆ ಸಮತೋಲನ ಆಹಾರ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯ ಮಾರ್ಗದರ್ಶನ ಅಗತ್ಯವಿದೆ. ಗ್ರಾಮೀಣ ಪರಿಸರದಿಂದ ಆತ್ಮಸ್ಥೈರ್ಯವುಳ್ಳ ಪ್ರತಿಭೆಗಳು ಹೊರಹೊಮ್ಮಬೇಕು ಎಂದು ತಿಳಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ನೀರಿನ ಕೊರತೆಯಿಂದ, ಅಂತರ್ಜಲದ ಕುಸಿತದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿ, ಶಾಶ್ವತ ನೀರಾವರಿಗಾಗಿ ಎಲ್ಲರ ಸಹಕಾರವನ್ನು ಕೋರಿದರು.
ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ನಿವೃತ್ತ ಶಿಕ್ಷಕ ನಂದೀಶ್ ಅವರನ್ನು ಸನ್ಮಾನಿಸಿದರು. ನಂದಿನಿ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗುಡಿಯಪ್ಪ, ಜಂಗಮಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎಂ.ಮುನಿಯಪ್ಪ, ಮಂಜುನಾಥ್, ಜಯಣ್ಣ, ಮುನೇಗೌಡ, ರಮೇಶ್, ಉಮಾ ರವಿಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪೌಷ್ಠಿಕ ಮತ್ತು ಸಮತೋಲನ ಆಹಾರ ಮಕ್ಕಳಿಗೆ ಸಿಗಬೇಕು
ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಕ್ರೀಡಾಪಟುಗಳಿಗೆ ನಗದು ಬಹುಮಾನ
ಜಿಲ್ಲೆ ಹಾಗು ವಿಭಾಗ ಮಟ್ಟದ ಕ್ರೀಡೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ ನಗರದ ಶ್ರೀ ಸರಸ್ವತಿ ಕಾನ್ವೆಂಟ್ ಶಾಲೆಯ ಕ್ರೀಡಾಪಟುಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ ಇಲಾಖೆಯ ಪರವಾಗಿ ನಗದು ಬಹುಮಾನಗಳನ್ನು ಈಚೆಗೆ ವಿತರಿಸಿದರು.
ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳಿಗೆ ಪದಕಗಳು
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಯ ಮದರ್ ಇಂಡಿಯಾ ಕರಾಟೆ ಕ್ಲಬ್ನ ಕರಾಟೆ ಪಟುಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ಕರಾಟೆ ಡೋ ಫೆಡರೇಷನ್ನ 2ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಷಿಪ್ನಲ್ಲಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಶಿಕ್ಷಕರಾದ ಎಸ್.ಮೊಹಮ್ಮದ್ ಇಲಾಯತ್ತುಲ್ಲಾ ಮತ್ತು ಎಸ್.ನೂರುಲ್ಲಾ ಉಪಸ್ಥಿತರಿದ್ದರು.
ಪಿ.ಎಲ್.ಡಿ.ಬ್ಯಾಂಕಿನ ನಿರ್ದೇಶಕರ ಸ್ಥಾನಗಳಿಗೆ ಉಮೇದುವಾರಿಕೆ ಸಲ್ಲಿಕೆ
ತಾಲ್ಲೂಕಿನ ಪ್ರಾಥಮಿಕ ವ್ಯವಸಾಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಫೆಬ್ರವರಿ ೧೫ ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಬೆಂಬಲಿತ ೨೦ ಮಂದಿ ಅಭ್ಯರ್ಥಿಗಳು ಗುರುವಾರ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ನಗರದ ರೇಷ್ಮೆ ಗೂಡು ಮಾರುಕಟ್ಟೆಯ ರಸ್ತೆಯಲ್ಲಿರುವ ಪಿ.ಎಲ್.ಡಿ.ಬ್ಯಾಂಕಿನ ಕಚೇರಿಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬೆಳಗಿನಿಂದಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದರು.
ಶಿಡ್ಲಘಟ್ಟ ಟೌನ್ (ಬಿ.ಸಿ.ಎಂ.ಎ) ಅಶ್ವಥ್ಥನಾರಾಯಣ ಟಿ. ೦೧. ಆನೂರು ಕ್ಷೇತ್ರ ಪ.ಜಾ/ಪ.ಪಂ ಬಂಕ್ಮುನಿಯಪ್ಪ ೦೧. ಮೇಲೂರು ಸಾಮಾನ್ಯ ಕ್ಷೇತ್ರ ಎಚ್.ಎಂ.ನಾರಾಯಣಸ್ವಾಮಿ, ೦೧. ಜಂಗಮಕೋಟೆ ಸಾಮಾನ್ಯ ಕ್ಷೇತ್ರ ಕೆ.ಸಿದ್ದಲಿಂಗಪ್ಪ, ಎಂ.ಕೆ. ಬೀಮೇಶ್, ೦೨, ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ ಅಶ್ವಥ್ಥನಾರಾಯಣರೆಡ್ಡಿ, ಅಶ್ವಥ್ಥನಾರಾಯಣರೆಡ್ಡಿ, ೦೨, ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ ರಾಮಸ್ವಾಮಿ, ಶಿವಾರೆಡ್ಡಿ, ವೆಂಕಟರೆಡ್ಡಿ, ನಾರಾಯಣಸ್ವಾಮಿ, ಶಿವಾರೆಡ್ಡಿ, ೦೫, ಚೀಮಂಗಲ ಕ್ಷೇತ್ರ ಬಿ.ಸಿ.ಎಂ.ಎ ಸಿದ್ದಪ್ಪ, ಬಿ.ವೆಂಕಟೇಶಪ್ಪ ೦೨, ಗಂಜಿಗುಂಟೆ ಸಾಮಾನ್ಯ ಕ್ಷೇತ್ರ ಚಂದ್ರಶೇಖರೆಡ್ಡಿ. ೦೧, ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರ ರತ್ನಮ್ಮ, ೦೧, ಸಾಲಗಾರರಲ್ಲದ ಕ್ಷೇತ್ರ ಪ್ರಭಾಕರರೆಡ್ಡಿ, ಎಂ.ದೇವರಾಜು, ಲೋಕೇಶ್, ನಾರಾಯಣಸ್ವಾಮಿ, ೦೪, ಒಟ್ಟು ೨೦ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಳೆದ ಮೂರು ಬಾರಿ ಪಿ.ಎಲ್.ಡಿ. ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿ ಸತತವಾಗಿ ಜಯಗಳಿಸಿದ್ದ ಮಾಜಿ ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಬಂಕ್ಮುನಿಯಪ್ಪ, ಮಾಜಿ ನಿರ್ದೇಶಕ ರಾಯಪ್ಪಲ್ಲಿ ಅಶ್ವಥ್ಥರೆಡ್ಡಿ ಕೂಡಾ ಈ ಬಾರಿಯೂ ಸ್ಪರ್ಧೆಯಲ್ಲಿದ್ದಾರೆ. ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿರುವ ಈ ಚುನಾವಣೆಯಲ್ಲಿ ಜಯಗಳಿಸಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ನಡೆಸಲಿದ್ದಾರೆ ಎನ್ನುವ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ.
ಕಣವಾದ ಕಾಂಗ್ರೆಸ್ ಭವನದ ರಸ್ತೆ
ತಾಲ್ಲೂಕಿನ ಗ್ರಾಮಗಳಲ್ಲಿ ಎಲ್ಲಾ ಬೆಳೆಗಳ ಕಟಾವು ಮುಗಿದಿದ್ದು ರೈತರು ಕಣ ಸುಗ್ಗಿ ಮಾಡುವಲ್ಲಿ ನಿರತರಾಗಿದ್ದಾರೆ. ತಾಲ್ಲೂಕಿನ ಬಹುತೇಕ ರೈತರಿಗೆ ವಾಹನಗಳು ಸಂಚರಿಸುವ ಟಾರು ರಸ್ತೆಗಳೇ ಕಣಗಳಾಗಿವೆ.
ಅದು ಮುಖ್ಯ ರಸ್ತೆ ಆಗಿರಲಿ, ಸಂಪರ್ಕ ರಸ್ತೆ ಆಗಿರಲಿ, ಗ್ರಾಮಾಂತರ ಪ್ರದೇಶಗಳ ಟಾರ್ ರಸ್ತೆಗಳಾಗಿರಲಿ, ಒಟ್ಟಾರೆ ಅತಿ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಾಗಿದ್ದರೆ ಸಾಕು. ಅದೇ ರೈತರಿಗೆ ಕಣ.
ನಗರದ ಕಾಂಗ್ರೆಸ್ ಭವನದ ಮುಂದಿನ ಹೆಚ್ಚು ಸಂಚಾರದ ರಸ್ತೆಯು ಕೂಡ ಕಣವಾಗಿ ಪರಿಣಮಿಸಿದ್ದು ದ್ವಿಚಕ್ರ ವಾಹನ ಚಾಲಕರಿಗೆ ಕಂಟಕವಾಗಿದೆ. ರಸ್ತೆಗಳೇ ಕಣಗಳಾಗಿರುವುದರಿಂದ ರಸ್ತೆಯ ಮೇಲೆ ವಾಹನ ಚಲಿಸುವುದರಿಂದ ಡಿಸೇಲ್, ಪೆಟ್ರೋಲ್ ಮತ್ತು ವಾಹನಗಳ ಹೊಗೆಗಳಿಂದ ಹಾಗೂ ವಾಹನಗಳ ಟೈರುಗಳಿಗೆ ಅಂಟಿದ ಹೊಲಸು ತ್ಯಾಜ್ಯದಿಂದ ಆಹಾರ ಧಾನ್ಯಗಳು ಕಲುಷಿತ ಗೊಳ್ಳುತ್ತಿವೆ. ರಸ್ತೆಯ ಮೇಲೆ ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು, ಕಣಗಳ ಧೂಳಿನಿಂದಾಗಿ ತೊಂದರೆಯಾಗುತ್ತಿದೆ.
ನಗರದ ಪೊಲೀಸ್ ಠಾಣೆಯ ಸಮೀಪವೇ, ಕಾಂಗ್ರೆಸ್ ಭವನದ ಮುಂದೆಯೇ ರಸ್ತೆಯ ಮೇಲೆ ಕಣಗಳನ್ನು ಮಾಡುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಆಯಾ ತಪ್ಪಿ ಬೀಳುತ್ತಾ, ಅಪಘಾತಗಳಾಗುತ್ತಿವೆ. ಈ ಬಗ್ಗೆ ಯಾರು ಆಕ್ಷೇಪಣೆ ಮಾಡುತ್ತಿಲ್ಲ. ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ಯಾವುದೇ ಅಡಚಣೆಗಳಾಗದಂತೆ ರಸ್ತೆ ನಿಯಮಗಳಿರಬೇಕು. ಆದರೆ ಖಣಗಳನ್ನು ಮಾಡುತ್ತಿರುವ ರಸ್ತೆಗಳ ಮೇಲೆಯೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಾಹನಗಳು ಸಂಚರಿಸುತ್ತಿದ್ದರೂ ಸಹಾ ಈ ಬಗ್ಗೆ ಯಾರು ಆಕ್ಷೇಪಣೆ ವ್ಯಕ್ತಪಡಿಸುತ್ತಿಲ್ಲ, ರಸ್ತೆ ನಿಯಮಗಳೆಲ್ಲ ಉಲ್ಲಂಘನೆಯಾಗುತ್ತಾ, ಅಮಾಯಕ ವಾಹನ ಸವಾರರು ಏಳುತ್ತಾ, ಬೀಳುತ್ತ ಸಂಚರಿಸುತ್ತಿದ್ದಾರೆ.
ಹಿಂದೆ ಖಣ ಸುಗ್ಗಿ ಎಂದರೆ ಹಗಲು, ರಾತ್ರಿಗಳೆನ್ನದೆ, ದುಂಡಾಗಿರುವ ರೋಣಗಲ್ಲಿಗೆ ಜೋಡೆತ್ತುಗಳನ್ನು ಕಟ್ಟಿಕೊಂಡು ಕಟಾವು ಮಾಡಿದ ಬೆಳೆಗಳನ್ನು ತಂದು ವಿಶಾಲವಾದ ಖಣದಲ್ಲಿ ದುಂಡಾಗಿ ಹರಡಿ ಬೆಳೆಗಳನ್ನು ತುಳಿಸುತ್ತಾ ತಿಂಗಳಾನುಗಟ್ಟಲೆ ಖಣಸುಗ್ಗಿಯನ್ನು ಮಾಡುತ್ತಿದ್ದ ಆ ಕಾಲದಲ್ಲಿ ಬೆಳೆಗಳನ್ನು ತುಳಿಸುವ ಖಣಗಳನ್ನು ಪೂಜ್ಯ ಭಾವನೆಗಳಿಂದ ರೈತರು ಕಾಣುತ್ತಿದ್ದರು. ಈಗ ಅಂತಹ ಕಣಗಳೆಲ್ಲ ಮರೆಯಾಗಿವೆ.
‘ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ದೀರ್ಘ ಬಾಳಿಕೆಯ ಸರ್ವಋತು ಕಣಗಳನ್ನು ನಿರ್ಮಿಸಬಹುದು. ಇದರಿಂದ ರಸ್ತೆಕಣಗಳಿಂದ ಆಗುವ ಪ್ರಾಣಾಪಾಯಗಳನ್ನು ತಪ್ಪಿಸಬಹುದು. ಈಗ ಡೀಸಲ್ ಚಾಲಿತ ಬೀಜ ಮಾಡುವ ಯಂತ್ರಗಳೂ ಬಂದಿವೆ. ಕೆಲ ಸಂಸ್ಥೆಗಳು ರೈತರಿಗೆ ಉಪಯುಕ್ತ ಯಂತ್ರಗಳನ್ನು ಬಾಡಿಗೆಗೂ ನೀಡುತ್ತಿದ್ದಾರೆ. ಅವನ್ನು ಬಳಸಿಕೊಳ್ಳಬೇಕು. ರಸ್ತೆಯಲ್ಲಿ ಕಣ ಮಾಡುವುದು ಅವೈಜ್ಞಾನಿಕ’ ಎಂದು ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಿದರು.
ನಿಷೇಧಿತ ಗುಟ್ಕಾ ವಶಪಡಿಸಿಕೊಂಡ ಪೊಲೀಸರು
ಆಂಧ್ರದಿಂದ ನಗರಕ್ಕೆ ಸಾಗಾಣಿಕೆ ಮಾಡುತ್ತಿದ್ದ ಸುಮಾರು 80 ಸಾವಿರ ರೂಗಳ ಬೆಲೆಯ ಐದು ಮೂಟೆಯಷ್ಟು ನಿಷೇಧಿತ ಗುಟ್ಕಾ ಕಲೇಜವನ್ನು ಬುಧವಾರ ಪುರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಹಬೂಬ್ ನಗರದ ರೋಷನ್ ಮತ್ತು ಅಕ್ಬರ್ ಪಾಷ ಎಂಬುವರನ್ನು ಬಂಧಿಸಿರುವ ಪೊಲೀಸರು, ಅವರು ಗುಟ್ಕಾ ಸಾಗಿಸುತ್ತಿದ್ದ ವ್ಯಾನ್ ಮತ್ತು ಗುಟ್ಕಾ ಮೂಟೆಗಳನ್ನು ಅಮಾನತ್ತುಪಡಿಸಿಕೊಂಡಿದ್ದಾರೆ.
ತಿರುಪತಿಯಿಂದ ಚಿಕ್ಕಬಳ್ಳಾಪುರಕ್ಕೆ ಬರುವ ಖಾಸಗಿ ಬಸ್ಸಿನಲ್ಲಿ ನಿಷೇಧಿತ ಗುಟ್ಕಾವನ್ನು ಸಾಗಿಸಿ, ನಗರದ ಹೊರವಲಯದ ಬೂದಾಳ ಗೇಟ್ ಬಳಿ ಇಳಿಸಿಕೊಂಡು, ಅಲ್ಲಿಂದ ಮಾರುತಿ ವ್ಯಾನ್ಗೆ ತುಂಬಿ ತರುವಾಗ ಪೊಲೀಸರು ಧಾಳಿ ನಡೆಸಿದ್ದಾರೆ.
ಧಾಳಿಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಶ್ರೀನಿವಾಸಮೂರ್ತಿ, ಸಬ್ ಇನ್ಸ್ಪೆಕ್ಟರ್ ಪುರುಷೋತ್ತಮ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಜಿಲ್ಲಾ ಅಂಕಿತ ಅಧಿಕಾರಿ ಮಹದೇವಶೆಟ್ಟಿ ಭೇಟಿ ನೀಡಿದ್ದರು.
ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ಕ್ಯಾನ್ಸರ್ ರೋಗಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನಿಸಿ ಸರ್ಕಾರ ನಿಷೇಧವನ್ನು ಜಾರಿಗೊಳಿಸಿದೆ. ರಾಜ್ಯದಲ್ಲಿ ಗುಟ್ಕಾ ನಿಷೇಧಿಸಿ ಎರಡು ವರ್ಷ ಕಳೆದಿದ್ದರೂ ತಾಲ್ಲೂಕಿನಾದ್ಯಂತ ಖಲೇಜಾ ಎಂಬ ಹೆಸರಿನಲ್ಲಿ ಗುಟ್ಕಾ ಮಾರಾಟ ನಿರಂತರವಾಗಿ ನಡೆಯುತ್ತಿತ್ತು. ಕಟ್ಟುನಿಟ್ಟಿನ ಕ್ರಮ ಕೈಗೊಂಡು ಈ ರೀತಿಯ ಧಾಳಿಗಳನ್ನು ಮೊದಲೇ ಪೊಲೀಸರು ನಡೆಸಬೇಕಿತ್ತು ಎಂಬ ಮಾತು ಸಾರ್ವಜನಿಕರಲ್ಲಿ ಕೇಳಿ ಬಂದಿತು.
ಹೊಸಪೇಟೆ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಉಮಾ ರವಿಕುಮಾರ್ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು, ಉಮಾ ರವಿಕುಮಾರ್ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಕೊತ್ತನೂರು ಭೂನೀಳಾ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ತಿರುಕಲ್ಯಾಣ ಮಹೋತ್ಸವ
ತಾಲ್ಲೂಕಿನ ಕೊತ್ತನೂರು ಗ್ರಾಮದ ಭೂನೀಳಾ ಸಮೇತ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಈಚೆಗೆ ಮಹಾ ಸುದರ್ಶನ ಹೋಮ ಹಾಗೂ ತಿರುಕಲ್ಯಾಣ ಮಹೋತ್ಸವ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು.
ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿನ ದೇವಾಲಯದಲ್ಲಿ ಎರಡು ದಿನಗಳ ಕಾಲ ನಾನಾ ವಿದವಾದ ಪೂಜಾ ಕಾರ್ಯಗಳನ್ನು ಕೈಗೊಂಡಿದ್ದು ಮಹಾ ಸುದರ್ಶನ ಹೋಮ ಹಾಗೂ ತಿರುಕಲ್ಯಾಣ ಮಹೋತ್ಸವವನ್ನು ನಡೆಸಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಮಂದಿ ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ದೇವಾಲಯದ ಪ್ರಧಾನ ಅರ್ಚಕ ಚನ್ನಕೇಶವಾಚಾರ್ ಹಾಗೂ ತಂಡದವರಿಂದ ಮುಂಜಾನೆ ಸೂರ್ಯೋದಯಕ್ಕೂ ಮುನ್ನವೇ ಸ್ವಸ್ತಿವಾಚನ, ಅನುಜ್ಞೆ, ವಿಶ್ವಕ್ಷೇನ ಪೂಜೆ, ಭಗವತ್ ವಾಸುದೇವ ಪುಣ್ಯಾಹವಾಚನ, ರಕ್ಷಾ ಬಂಧನ, ಕಳಶಾರಾಧನೆ ಮಾಡಿ ನಂತರ ಶ್ರೀ ಮಹಾ ಸುದರ್ಶನ ಹೋಮವನ್ನು ನಡೆಸಿದರು. ಆ ನಂತರ ಸುಪ್ರಭಾತ ಸೇವೆ, ವೇದ ಪಾರಾಯಣ, ವಿಶೇಷ ಫಲಪಂಚಾಮೃತಾಭಿಷೇಕ, ಅಲಂಕಾರ ಸೇವೆಯನ್ನು ಮಾಡಿ ಭೂನೀಳಾ ಸಮೇತ ಚನ್ನಕೇಶವ ಸ್ವಾಮಿಗೆ ತಿರು ಕಲ್ಯಾಣ ಮಹೋತ್ಸವವನ್ನು ನೆರವೇರಿಸಲಾಯಿತು.
ರಾಜ್ಯಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಬಹುಮಾನ
ಮಕ್ಕಳು ಯಾವ ಕ್ಷೇತ್ರ, ವಿಷಯದ ಬಗ್ಗೆ ಆಸಕ್ತಿಯನ್ನು ತೋರುತ್ತಾರೋ ಅದನ್ನು ಗುರ್ತಿಸಿ ಅವರು ಅದೇ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ಮಾಡಿಕೊಡುವ ಕೆಲಸವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಕಾರಿ ಎಸ್.ರಘುನಾಥರೆಡ್ಡಿ ತಿಳಿಸಿದರು.
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಿ ಅವರು ಮಾತನಾಡಿದರು.
ಪಾಠ ಪ್ರವಚನಕ್ಕೆ ನೀಡುವಷ್ಟೆ ಪ್ರಾಮುಖ್ಯತೆಯನ್ನು ಕ್ರೀಡೆ, ಸಾಂಸ್ಕೃತಿಕ, ಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ನೀಡಿದಾಗ ಮಾತ್ರ ಮಕ್ಕಳ ಸಮಗ್ರ ಬೆಳವಣಿಗೆ ಸಾಧ್ಯ. ಪ್ರತಿಭಾವಂತರನ್ನು ಗುರ್ತಿಸಿ ಪ್ರೋತ್ಸಾಹಿಸುವ ಕೆಲಸ ಈ ಸಮುದಾಯದಿಂದ ಆಗಬೇಕಿದೆ ಎಂದು ಆಶಿಸಿದರು.
ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತರಾದ ಪ್ರಥಮ ಸ್ಥಾನ ಪಡೆದವರಿಗೆ ೩೦೦ ರೂ, ದ್ವಿತೀಯ ಸ್ಥಾನಗಳಿಸಿದವರಿಗೆ ೨೫೦ ಹಾಗೂ ತೃತೀಯ ಸ್ಥಾನಪಡೆದವರಿಗೆ ೨೦೦ ರೂ.ಗಳ ನಗದು ಪ್ರೋತ್ಸಾಹದ ಹಣವನ್ನು ನೀಡಲಾಯಿತು.
ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ, ಕಾರ್ಯದರ್ಶಿ ನಾರಾಯಣಸ್ವಾಮಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶ್ವತ್ಥನಾರಾಯಣ್, ಕ್ರೀಡಾ ಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಶಾಲಾ ಶಿಕ್ಷಕರು ಹಾಜರಿದ್ದರು.
ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು
ಉದ್ದಜಿಗಿತ-: ನವೋದಯ ಶಾಲೆಯ ಚೇತನ್(ಪ್ರಥಮ), ಎತ್ತರ ಜಿಗಿತ ಹಾಗೂ ಗುಂಡು ಎಸೆತ-: ಶ್ರೀಸರಸ್ವತಿ ಕಾನ್ವೆಂಟ್ನ ರಿಯಾಜ್ಪಾಷ(ಪ್ರಥಮ), ಚಕ್ರ ಎಸೆತ-: ಜಂಗಮಕೋಟೆಯ ಜ್ಞಾನಜ್ಯೋತಿ ಶಾಲೆಯ ಜಗದೀಶ್(ದ್ವಿತೀಯ), ಗುಂಡು ಎಸೆತ-: ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಜಗದೀಶ್(ತೃತೀಯ)ಸ್ಥಾನ ಪಡೆದುಕೊಂಡಿದ್ದಾರೆ.
೧೦೦ಮೀ ಓಟ-: ಜಂಗಮಕೋಟೆ ಶಾಲೆಯ ಸಾಕ್ಷಿ(ತೃತೀಯ), ಎಚ್.ಕ್ರಾಸ್ನ ಸುಮುಖ ಶಾಲೆಯ ಚಂದನ ೨೦೦ ಮೀ ಓಟದಲ್ಲಿ (ದ್ವಿತೀಯ), ೪೦೦ ಮೀ ಓಟದಲ್ಲಿ ತೃತೀಯ ಸ್ಥಾನ, ೨೦೦ ಮೀ ಓಟ-: ಜಂಗಮಕೋಟೆ ಜ್ಞಾನ ಜ್ಯೋತಿ ಶಾಲೆಯ ಮೇಘ(ತೃತೀಯ), ೬೦೦ ಮೀ ಓಟ-: ಜ್ಞಾನಜ್ಯೋತಿ ಶಾಲೆಯ ಹರ್ಷಿತ(ತೃತೀಯ)ಸ್ಥಾನ.
ಜಂಗಮಕೋಟೆ ಜ್ಞಾನಜ್ಯೋತಿ ಶಾಲೆಯ ಜೆ.ಪಿ.ಸಿಂಧು ೨೦೦ ಮೀ ಓಟದಲ್ಲಿ(ದ್ವಿತೀಯ), ೧೦೦ ಮೀ ಓಟದಲ್ಲಿ(ತೃತೀಯ), ಎತ್ತರ ಜಿಗಿತ-: ಡಾಲಿನ್ ಶಾಲೆಯ ಹರ್ಷಿಯಾ ತಾಜ್(ಪ್ರಥಮ), ವಾಸವಿ ಶಾಲೆಯ ಯಶಸ್ವಿನಿ ಚಕ್ರ ಎಸೆತದಲ್ಲಿ(ಪ್ರಥಮ), ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ.
ಗುಂಡು ಎಸೆತ-: ಮೇಲೂರಿನ ಸೇಂಟ್ ಥಾಮಸ್ ಶಾಲೆಯ ದೀಪಿಕಾ(ತೃತೀಯ), ೮೦೦ ಮೀ ಓಟ-: ತುಮ್ಮನಹಳ್ಳಿ ಸರ್ಕಾರಿ ಶಾಲೆಯ ಸುಷ್ಮ(ತೃತೀಯ), ತುಮ್ಮನಹಳ್ಳಿ ಸರ್ಕಾರಿ ಶಾಲೆಯ ಗಾಯಿತ್ರಿ ೩೦೦೦ ಮೀಟರ್ ಓಟದಲ್ಲಿ ದ್ವಿತೀಯ ಹಾಗೂ ೧೫೦೦ ಮೀಟರ್ನಲ್ಲಿ ತೃತೀಯ ಸ್ಥಾನ.
ಮಜ್ಜಿಗೆ ವಿಶೇಷತೆ
“ತಂಕ್ರ ಜಾಕ್ರಸ್ತ ದುರ್ಲಭಂ” ಮಜ್ಜಿಗೆ ದೇವಲೋಕದ ದೇವೇಂದ್ರನಿಗೂ ಕೂಡ ದುರ್ಲಭವಾಗಿತ್ತಂತೆ. ಈ ಉಕ್ತಿಯೇ ಮಜ್ಜಿಗೆಯ ಪ್ರಾಧಾನ್ಯತೆಯನ್ನು ಸಾರಿ ಹೇಳುತ್ತದೆ. ಮಲೆನಾಡಿನ ಬ್ರಾಹ್ಮಣರ ಮನೆಗಳಲ್ಲಿ ಮಜ್ಜಿಗೆ ಹಾಗೂ ಅದರಿಂದ ತಯಾರಿಸಿದ ಭೋಜ್ಯಗಳಿಲ್ಲದೆ ದಿನದ ಊಟವೇ ಮುಕ್ತಾಯಗೊಳ್ಳದು. ಮಜ್ಜಿಗೆಯಿಂದ ವಿವಿಧ ರೀತಿಯ ಪದಾರ್ಥಗಳನ್ನು ಸಿದ್ಧ ಪಡಿಸುತ್ತಾರೆ. ಬಿಸಿಲಿನಿಂದ ಬಸವಳಿದು ಬಂದ ಅತಿಥಿಗಳಿಗೆ ಮಲೆನಾಡಿನ ಮನೆಗಳಲಿ ಮಜ್ಜಿಗೆಯನ್ನು ಪಾನೀಯವಾಗಿ ಬೆಲ್ಲ ಅಥವಾ ಉಪ್ಪಿನ ಮಿಶ್ರಣದೊಂದಿಗೆ ನೀಡುವುದು ಒಂದು ಪದ್ಧತಿ. ಅರ್ಶಸ್ಸು (Piles) ಹಾಗೂ ಕೆಲವು ಜೀರ್ಣಕ್ರಿಯೆ ಸಂಬಂಧಿ ರೋಗಗಳಲ್ಲಿ ಮಜ್ಜಿಗೆ ಹಾಗೂ ಅದರಿಂದ ಸಿದ್ಧಪಡಿಸಿದ ಔಷಧಗಳೇ ರಾಮಬಾಣ. ಹೀಗಿರುವ ಮಜ್ಜಿಗೆಯ ಆಯುರ್ವೇದ ಗ್ರಂಥಗಳಲ್ಲಿ ವಿವರಿಸಿರುವ ಗುಣ ದೋಷಗಳು, ತಯಾರಿಸುವ ವಿಧಾನ, ರೋಗಗಳಲ್ಲಿ ಉಪಯೋಗಗಳನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳೋಣ.
ಮಜ್ಜಿಗೆಯ ಗುಣಗಳು
ಮಜ್ಜಿಗೆಯು ಜೀರ್ಣಕ್ಕೆ ಹಗುರವಾದಂಥಹುದು. ಸಿಹಿ, ಕಷಾಯ ರಸ ಹಾಗೂ ಹುಳಿ ರಸಗಳು ಪ್ರಧಾನವಾಗಿರುತ್ತವೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಫ ಹಾಗೂ ವಾತದೋಷಗಳನ್ನು ಶಮನ ಮಾಡುತ್ತದೆ. ಉಷ್ಣ ಗುಣವನ್ನು ಹೊಂದಿದೆ. ಬಾವು, ಉದರ (Ascites) ಅರ್ಶಸ್ (Piles), ಜೀರ್ಣ ಸಂಬಂಧಿ ರೋಗಗಳಲ್ಲಿ, ಅತಿಸಾರ ವಿಷ, ಮೂತ್ರ ಸಂಬಂಧಿ ವಿಕಾರಗಳಲ್ಲಿ ಇದನ್ನು ಉಪಯೋಗಿಸಬಹುದು. ಅಲ್ಲದೆ ಪ್ಲೀಹ ಸಂಬಂಧಿ ವಿಕಾರಗಳಲ್ಲಿ, ರಕ್ತಹೀನತೆ, ಹಾಗೂ ಅತಿಯಾಗಿ ತುಪ್ಪವನನ್ನು ಸೇವಿಸುವುದರಿಂದ ಉಂಟಾದ ವಿಕಾರಗಳನ್ನು ಶಮನ ಮಾಡುವುದು.
ತಯಾರಿಸುವ ವಿಧಾನ
1. ರೂಕ್ಷ ತಕ್ರ: ಇಲ್ಲಿ ಮೊಸರಿಗೆ ಅರ್ಧ ಪ್ರಮಾಣದಷ್ಟು ನೀರನ್ನು ಬೆರೆಸಿ ಕಡೆದು ಬೆಣ್ಣೆಯನ್ನು ಪೂರ್ತಿಯಾಗಿ ತೆಗೆದು ಬಿಡುವಂಥದ್ದು.
2. ಅರ್ಧೋಧೃತ ಸ್ನೇಹ ತಕ್ರ: ಇಲ್ಲಿ ಮೊಸರಿಗೆ ನೀರನ್ನು ಬೆರೆಸಿ ಕಡೆದು, ಅರ್ಧದಷ್ಟು ಬೆಣ್ಣೆಯನ್ನು ಮಾತ್ರ ತೆಗೆಯಲಾಗುತ್ತದೆ.
3. ಅನುಧೃತ ಸ್ನೇಹ ತಕ್ರ ಅಥವಾ ಘೋಲ: ಇಲ್ಲಿಮೊಸರಿಗೆ ನೀರನ್ನು ಬೆರೆಸದೆಯೆ ಕಡೆಯುವುದು. ಇಲ್ಲಿ ಬೆಣ್ಣೆಯನ್ನು ತೆಗೆಯಲಾಗುವುದಿಲ್ಲ.
ಇವೆಲ್ಲವುಗಳಲ್ಲಿ ಬೆಣ್ಣೆಯನ್ನು ಪೂರ್ತಿಯಾಗಿ ತೆಗೆದ ರೂಕ್ಷ ತಕ್ರ (ಮಜ್ಜಿಗೆ) ಅತ್ಯಂತ ಶ್ರೇಷ್ಠ.
ಮಜ್ಜಿಗೆಯನ್ನು ಯಾವಾಗ ಬಳಸಬಾರದು?
1. ಉಷ್ಣಕಾಲಗಳಾದ ಶರದ್ ಋತು ಹಾಗೂ ಗ್ರೀಷ್ಮ ಋತುಗಳಲ್ಲಿ ಮಜ್ಜಿಗೆಯನ್ನು ಉಪಯೋಗಿಸಬಾರದು.
2. ಅತಿಯಾಗಿ ದುರ್ಬಲರಾದವರು ಮಜ್ಜಿಗೆಯನ್ನು ಉಪಯೋಗಿಸ ಕೂಡದು.
3. ಮೂರ್ಛೆ ರೋಗದಲ್ಲಿ, ರಕ್ತ ಪಿತ್ತಜ, ವಿಕಾರಗಳಲ್ಲಿ, ಕೈ ಕಾಲುಗಳಲ್ಲಿ ಉರಿ, ಅಂಗಾಂಗಗಳಲ್ಲಿ ದಾಹ ಹಾಗೂ ಹೊಟ್ಟೆಯಲ್ಲಿ ದಾಹ ಇರುವವರು ಮಜ್ಜಿಗೆಯನ್ನು ಬಳಸದಿದ್ದರೆ ಉತ್ತಮ.
ಮಜ್ಜಿಗೆಯನ್ನು ಯಾವಾಗ ಬಳಸಬಹುದು?
ಶೀತಕಾಲದಲ್ಲಿ, ಜೀರ್ಣ ಶಕ್ತಿ ಕುಂದಿರುವವರು, ಕಫ ಹಾಗೂ ವಾತ ಪ್ರಾಧಾನ್ಯತೆಯುಳ್ಳ ರೋಗಗಳಲ್ಲಿ, ದುಷ್ಟವಾತ ವಿಕಾರಗಳಲ್ಲಿ, ದೇಹದಲ್ಲಿರುವ ಸ್ರೋತಸ್ಸುಗಳ ಅವರೋಧಗಳಲ್ಲಿ ಮಜ್ಜಿಗೆಯನ್ನು ಬಳಸತಕ್ಕದ್ದು.
ದೋಷ ಪ್ರಾಧಾನ್ಯತೆಗನುಗುಣವಾಗಿ ಮಜ್ಜಿಗೆಯ ಬಳಕೆ
ವಾತದೋಷದ ವಿಕಾರಗಳಲ್ಲಿ ಹುಳಿ ಮಜ್ಜಿಗೆಯನ್ನು ಸೈಂಧವ ಲವಣದೊಂದಿಗೆ ಸೇವನೆ ಮಾಡುವುದು ಉತ್ತಮ. ಪಿತ್ತ ವಿಕಾರಗಳಲ್ಲಿ ಸಕ್ಕರೆಯೊಂದಿಗೆ ಸೇವನೆ ಮಾಡಬಹುದು ಹಾಗೂ ಕಫಜ ವಿಕಾರಗಳಲ್ಲಿ ಹಿಪ್ಪಲಿ, ಕಾಳುಮೆಣಸು ಹಾಗೂ ಶುಂಠಿಯೊಂದಿಗೆ ಮಜ್ಜಿಗೆಯ ಸೇವನೆ ಮಾಡುವುದು ಹಿತಕರ.
“ಅತಿಯಾದರೆ ಅಮೃತವೂ ವಿಷ” ಅಂತೆಯೇ ಮಜ್ಜಿಗೆಯ ಗುಣ ದೋಷಗಳನ್ನು ತಿಳಿದು, ನಮ್ಮ ನಮ್ಮ ದೇಹ ಪ್ರಕೃತಿಗೆ, ಋತುವಿಗೆ, ಜೀರ್ಣ ಶಕ್ತಿಗೆ ಅಡ್ಡಿಯಾಗದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ ಪ್ರಯತ್ನಿಸೋಣ ಅಲ್ಲವೆ?
ಡಾ. ನಾಗಶ್ರೀ.ಕೆ.ಎಸ್

