16.1 C
Sidlaghatta
Monday, December 29, 2025
Home Blog Page 996

ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಶಾಸಕರ ಕನಿಷ್ಠ ಜವಾಬ್ದಾರಿ – ವಿ.ಮುನಿಯಪ್ಪ

0

ಕ್ಷೇತ್ರದ ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಶಾಸಕರ ಅನುದಾನವನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ವಿಳಂಬ ಮಾಡಿ ಅವರಿಂದ ಮನೆಯ ಮುಂದೆ ಪ್ರತಿಭಟನೆ ಮಾಡಿಸಿಕೊಂಡಿರುವುದು ದುರದೃಷ್ಟಕರ ಎಂದು ಕೆ.ಪಿ.ಸಿ.ಸಿ. ಉಪಾಧ್ಯಕ್ಷ ವಿ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪಟ್ಟಣದ ಸರ್ಕಾರಿ ಕಾಲೇಜು ಕಟ್ಟುವ ಮುನ್ನವೇ ನನ್ನ ಅಧಿಕಾರಾವಧಿಯಲ್ಲಿ ವಿದ್ಯಾರ್ಥಿಗಳಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದೆ. ಅನೈತಿಕ ಚಟುವಟಿಕೆಗಳನ್ನು ತಡೆಯಲು ಕಾಂಪೋಂಡ್ ನಿರ್ಮಿಸಲು ವಿದ್ಯಾರ್ಥಿಗಳು ಕೋರಿದ್ದು ತಪ್ಪಲ್ಲ. ಶಾಸಕರ ವಿವೇಚನಾ ಅನುದಾನ ಬಳಸಿ ತಕ್ಷಣವೇ ಮಾಡಬಹುದಾದ ಕೆಲಸವನ್ನು ತಡ ಮಾಡುತ್ತಿರುವುದು ಅವರ ಆಧ್ಯತೆಗಳನ್ನು ತೋರಿಸುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ಆಡಳಿತದ ನಿರ್ವಹಣೆ ನಡೆಯುತ್ತಿರುವುದು ನೋಡಿದಾಗ ಬೇಸರ ಮತ್ತು ನೋವುಂಟಾಗುತ್ತಿದೆ. ಭೂಗಳ್ಳರ ಕಪ್ಪುಹಣದ ಪ್ರಭಾವ ತಾಲ್ಲೂಕು ಕಚೇರಿಯ ಮೇಲೆ ಬೀರುತ್ತಿರುವುದು ದೊಡ್ಡ ದುರಂತವಾಗಿದೆ. ಜನಪ್ರತಿನಿಧಿಗಳೆ ನೇರವಾಗಿ ಭೂ ಮಾಫಿಯಾಗೆ ನೆರವು ನೀಡುತ್ತಿದ್ದರೆ ತಾಲ್ಲೂಕನ್ನು ರಕ್ಷಣೆ ಮಾಡುವವರ್ಯಾರು ಎನ್ನುವಂತಹ ಆತಂಕ ಜನತೆಯನ್ನು ಕಾಡುತ್ತಿದೆ. ತಾಲ್ಲೂಕು ಆಡಳಿತದ ಮೇಲಿನ ಕಪ್ಪುಹಣದ ದುಷ್ಪರಿಣಾಮದಿಂದ ಸಾಮಾನ್ಯ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಾಗೂ ಅದನ್ನು ತಡೆಗಟ್ಟುವ ಕುರಿತಂತೆ ಈಚೆಗೆ ಮುಖ್ಯಮಂತ್ರಿಗಳೊಂದಿಗೆ ನಡೆದ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ, ಆದರೆ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೇಲೆ ಸಂಸದ ಕೆ.ಹೆಚ್.ಮುನಿಯಪ್ಪ ಅವರು ಜೆಡಿಎಸ್ನ ಸಖ್ಯವನ್ನು ಹೆಚ್ಚಾಗಿ ಬೆಳೆಸುತ್ತಿರುವುದರಿಂದ ಅವರ ವರ್ತನೆ ನನಗೆ ಬೇಸರ ತಂದಿದ್ದು ದೂರವಿದ್ದೇನೆ. ಈಚೆಗೆ ಔತಣಕೂಟವೊಂದರಲ್ಲಿ ಪಕ್ಷೇತರರಾಗಿರುವ ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್ ಅವರೊಂದಿಗೆ ಅಲ್ಲಿನ ಸ್ಥಳೀಯ ಅಭಿಮಾನಿಗಳ ಒತ್ತಡಗಳಿಂದಾಗಿ ಅವರೊಂದಿಗೆ ಮಾತನಾಡಿದ್ದರ ಬಗ್ಗೆ ಬೇರೆ ಅರ್ಥ ಕಲ್ಪಿಸಲಾಗಿದೆ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುತ್ತಿದ್ದು, ಪುನಃ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ಸುಧಾಕರ್ ಅವರನ್ನು ಆಹ್ವಾನಿಸಲಾಗಿದೆ, ಮುಂಬರುವ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿ ಚುನಾವಣೆಗಳಲ್ಲಿ ಪಕ್ಷವನ್ನು ಬಲಪಡಿಸಲು ಅವರ ಸಹಕಾರ ಬೇಕಾಗಿದೆ. ಪಕ್ಷದ ಅಭ್ಯರ್ಥಿಗಳನ್ನು ಬಲಗೊಳಿಸುವಂತಹ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಎಲ್ಲಾ ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದೇನೆ ಎಂದು ನುಡಿದರು.
ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವ ವಿಚಾರ ಸತ್ಯಕ್ಕೆ ದೂರವಾದದ್ದು, ಸುಧಾಕರ್ ಅವರೂ ಪಕ್ಷೇತರರಾಗಿದ್ದಾರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ನಾನೂ ಶಾಸಕನಾಗಿದ್ದೆ, ಬಹಳಷ್ಟು ಮಂದಿ ಶಾಸಕರು ಕೋಟಿಗಟ್ಟಲೆ ಹಣವನ್ನು ಪಡೆದುಕೊಂಡು ಬಿಜೆಪಿಗೆ ಹೋಗಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ವಾಪಸ್ಸು ಬಂದಿದ್ದಾರೆ, ನಾನು ಹೋಗುವುದಾದರೆ ಅಂದೇ ಹೋಗುತ್ತಿದ್ದೆ, ಈಗ ಕಾಂಗ್ರೆಸ್ ಪಕ್ಷದಲ್ಲೆ ಇದ್ದೇನೆ, ಮುಂದೆಯೂ ಇರುತ್ತೇನೆ. ನನಗೆ ಸಿಕ್ಕಿರುವ ಜವಾಬ್ದಾರಿಯ ಕೆಲಸವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ರಾಜ್ಯದಲ್ಲಿ ಕೆ.ಪಿ.ಸಿ.ಸಿ.ಯ ಉಪಾಧ್ಯಕ್ಷನಾಗಿ ಒಂದು ಜವಾಬ್ದಾರಿಯನ್ನು ಪಕ್ಷ ನೀಡಿದೆ, ಕಾಂಗ್ರೆಸ್ ಪಕ್ಷದಿಂದಲೇ ಶಾಸಕನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ, ಪ್ರತಿಯೊಂದು ಚುನಾವಣೆಯಲ್ಲಿಯೂ ಅನುಕೂಲಕರವಾದ ರಾಜಕಾರಣ ಮಾಡುವುದನ್ನು ನಾವು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಕೋಚಿಮುಲ್ ನಿರ್ದೇಶಕ ಕೆ.ಗುಡಿಯಪ್ಪ, ಚಿಕ್ಕಮುನಿಯಪ್ಪ, ಬಾಲಕೃಷ್ಣ, ನಾಗರಾಜ್, ಎನ್.ಮುನಿಯಪ್ಪ, ಸಮೀರ್, ತನ್ವೀರ್, ಕೃಷ್ಣಪ್ಪ, ಅಬ್ದುಲ್ಗಫೂರ್, ಸಾದಿಕ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಕ್ಷುದ್ರಗ್ರಹಗಳ ಅಧ್ಯಯನ: ಶೋಧನೌಕೆ ಡಾನ್ ಪಯಣ

0

‘ನಾವಿಂದು ವೆಸ್ತಾದ ಕಕ್ಷೆಯನ್ನು ಸೇರಲಿದ್ದೇವೆ!!’ ಸೆಕ್ಯುರಿಟಿ ಚೆಕ್ ಮಾಡಲು ಬಂದÀವನಿಗೆ ಮುಖದ ತುಂಬಾ ನಗು ತುಂಬಿದ ಇಂಜಿನಿಯರ್ ಮಾರ್ಕ್ ರೇಮಂಡ್ ಹೇಳಿದ. ಆ ನಗು ಸಾಂಕ್ರಾಮಿಕವಾಗಿ ಬಿಗುಮುಖದ ಗಾರ್ಡ್‍ನನ್ನೂ ಆವರಿಸಿಕೊಂಡುಬಿಟ್ಟಿತು. ಆತನಿಗೆಷ್ಟು ಅರ್ಥವಾಯಿತೋ ಬಿಟ್ಟಿತೋ, ‘ಹೌದೇ ಸರ್?’ ಎಂದು ಆತನೂ ಸಂಭ್ರಮಿಸುತ್ತ ತಪಾಸಣೆ ನಡೆಸತೊಡಗಿದ.
ಅಂದು ಜುಲೈ 16, 2011. ಮುಂಜಾನೆಯೇ ತಂತ್ರಜ್ಞರು ನಾಸಾದ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿಯ ಕಛೇರಿಯೊಳಗೆ ನುಗ್ಗುತ್ತಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಹಾರಿಬಿಟ್ಟ ‘ಡಾನ್’ ಅಂದು ತನ್ನ ಗುರಿಯನ್ನು ತಲುಪಲಿದೆ.
ಏನಿದು ವೆಸ್ತಾ? ಏನಿದು ಡಾನ್? ಅದು ಹೊರಟಿದ್ದೆಲ್ಲಿಗೆ?
‘ಡಾನ್’ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಅಂತರಿಕ್ಷಕ್ಕೆ ಕಳುಹಿಸಿದ ರೊಬಾಟ್ ನೌಕೆ. ಸೌರಮಂಡಲದ ನಡುವಿನ ‘ಕ್ಷುದ್ರಗ್ರಹಗಳ ಪಟ್ಟಿ’ಯ* ಪ್ರಮುಖ ಎರಡು ಕಾಯಗಳಾದ ವೆಸ್ತಾ ಮತ್ತು ಸಿರಿಸ್‍ಗಳ ರಹಸ್ಯಗಳನ್ನು ಭೇದಿಸಲು ಹೊರಟ ಬಾನವಾಹನ.
ತುಂಬಾ ಹಿಂದೆ ಬಾನಲ್ಲಿ ದೂಳು ಮತ್ತು ಅನಿಲ ಒಗ್ಗೂಡುತ್ತ ಬಂದು ಅಲ್ಲಲ್ಲಿ ಗುರುತ್ವದ ಕೇಂದ್ರಗಳಾಗುತ್ತಾ ಗ್ರಹಗಳು ತಯಾರಾದವು ಮತ್ತು ಕೇಂದ್ರದಲ್ಲಿದ್ದ ಸೂರ್ಯನ ಸುತ್ತ ಸುತ್ತತೊಡಗಿದವು, ಆ ಗ್ರಹಗಳಲ್ಲೊಂದು ಭೂಮಿ, ಮುಂದೆ ಭೂಮಿಯಲ್ಲಿ ಜೀವಿಗಳ ಉಗಮವಾಯಿತು ಎಂದೆಲ್ಲ ನಾವು ಶಾಲೆಯಲ್ಲಿ ಓದಿದ್ದೇವೆ. ಆದರೆ ನಮ್ಮ ಸೌರಮಂಡಲದ ವಿಧವಿಧದ ಗ್ರಹಗಳ ರಚನೆಗೆ ಕಾರಣವೇನು? ಭೂಮಿ ಹೇಗೆ ನೀಲಿ ಗ್ರಹವಾಯಿತು? ಭೂಮಿಯ ಹೊರತಾಗಿ ಬೇರೆಲ್ಲಾದರೂ ನೀರಿರಬಹುದೆ? ಜೀವಿಗಳಿರಬಹುದೆ?
ಇವು ಮಾನವನನ್ನು ಎಂದಿನಿಂದಲೂ ಕಾಡುತ್ತಿರುವ ಪ್ರಶ್ನೆಗಳು. ಪುರಾತನ ಕಾಲದಿಂದ ಹಿಡಿದು ಇಂದಿನ ಆಧುನಿಕ ವಿಜ್ಞಾನದವರೆಗೆ ಬಾಹ್ಯಾಕಾಶದ ಕೌತುಕಗಳಿಗೆ ವಿವರಣೆ ನೀಡಲು ಮಾನವ ಹಿಡಿದ ದಾರಿ ನೂರಾರು. ಐವತ್ತು ವರ್ಷಗಳ ಹಿಂದೆ ಮೊದಲ ಮಾನವ ನಿರ್ಮಿತ ಉಪಗ್ರಹ ಗಗನಕ್ಕೆ ಹಾರಿದ ನಂತರದ ವರ್ಷಗಳಲ್ಲಿ ಸಿರಿವಂತ, ಮಧ್ಯಮವರ್ಗಕ್ಕೆ ಸೇರಿದ (ಆರ್ಥಿಕ ಸಂಪತ್ತಿನ ಅರ್ಥದಲ್ಲಿ) ದೇಶಗಳು ಅಂತರಿಕ್ಷ ಅವಲೋಕನಕ್ಕೆ ಸಾಕಷ್ಟು ಹಣವನ್ನು ಮೀಸಲಾಗಿಡತೊಡಗಿವೆ. ಈ ನಿಟ್ಟಿನಲ್ಲಿ ಅಮೆರಿಕದ ನಾಸಾ ಮುಂಚೂಣಿಯಲ್ಲಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ. ಹೆಚ್ಚಿನ ದೇಶಗಳು ಭೂಮಿಯ ಸುತ್ತಲ ಪ್ರದೇಶಕ್ಕೆ ತಮ್ಮ ಸಂಶೋಧನೆಗಳನ್ನು ಸೀಮಿತವಾಗಿರಿಸಿದರೆ ನಾಸಾ ಸೌರಮಂಡಲದ ಇತರ ಗ್ರಹಗಳನ್ನು, ಅಂತರ ಗ್ರಹ ವಲಯಗಳನ್ನು ಹಾಗೂ ಅನ್ಯತಾರೆಗಳನ್ನು ಅಧ್ಯಯನ ನಡೆಸುವ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ.
ಇಂಥಹ ಯೋಜನೆಗಳಲ್ಲೊಂದು ಕ್ಷುದ್ರಗ್ರಹಗಳ ಪರಿಶೋಧನೆ. ನಾಸಾದ ‘ಡಾನ್’ ಹೆಸರಿನ ಗಗನನೌಕೆ ಕ್ಷುದ್ರಗ್ರಹಗಳ ವಲಯದ ಪ್ರಮುಖ ಸದಸ್ಯರುಗಳಾದ ವೆಸ್ತಾ ಮತ್ತು ಸಿರಿಸ್ ಗಳ ಬಳಿ ಸಾಗಿ ಸಂಶೋಧನೆ ನಡೆಸಲಿದೆ. ಇದೇ ಮೊದಲ ಬಾರಿ ಎರಡು ಆಕಾಶಕಾಯಗಳ ಅಧ್ಯಯನಕ್ಕೆಂದು ಮಾನವ ನಿರ್ಮಿತ ಬಾನನೌಕೆ ಹಾರಿದೆ.
ವೆಸ್ತಾ ಮತ್ತು ಸಿರಿಸ್ ಇವೆರಡೂ ಸೌರಮಂಡಲದ ಉಗಮದ ವೇಳೆಯಲ್ಲಿ ರೂಪುಗೊಂಡ ಕಾಯಗಳು. ಇದುವರೆಗಿನ ಅನ್ವೇಷಣೆಯ ಪ್ರಕಾರ ಗ್ರಹಗಳಾಗಬೇಕಿದ್ದ ವೆಸ್ತಾ ಮತ್ತು ಸಿರಿಸ್ ರಚನೆ ಬೃಹದ್ ಕಾಯವಾದ ಗುರುಗ್ರಹದ ಗುರುತ್ವದ ಬಲದೆದುರು ಒಂದು ಹಂತದಲ್ಲಿ ಸ್ತಬ್ಧವಾಗಿಬಿಟ್ಟಿದೆ. ಇಲ್ಲವಾದರೆ ಮಂಗಳನ ಸಮೀಪವಿರುವ ವೆಸ್ತಾ ಬುಧ, ಶುಕ್ರ ಭೂಮಿ ಮತ್ತು ಮಂಗಳರಂತೆ ಗಟ್ಟಿ ಗ್ರಹವೂ ಗುರುವಿಗೆ ಸಮೀಪವಿರುವ ಸಿರಿಸ್ ಗುರು, ಶನಿ, ಯುರೇನಸ್ ಹಾಗೂ ನೆಪ್ಚೂನ್‍ಗಳಂತೆ ಅನಿಲದ ಚೆಂಡಾಗಿಯೂ ಹಾರುವ ಸಾಧ್ಯತೆ ಇತ್ತು. ಈ ಎರಡೂ ಸಂಪೂರ್ಣ ವಿಕಾಸ ಹೊಂದಿಲ್ಲದ ಕಾರಣ ಅವುಗಳ ಅಧ್ಯಯನವು ಸೌರಮಂಡಲದ ರಚನೆಯ ಕುರಿತು ಇನ್ನಷ್ಟು ಬೆಳಕು ಚೆಲ್ಲಬಹುದೆಂದು ವಿಜ್ಞಾನಿಗಳು ನಂಬಿದ್ದಾರೆ. ಸೌರವ್ಯೂಹದ ಉಗಮದ ಕುರುಹುಗಳನ್ನು ಇನ್ನೂ ಧರಿಸಿರುವ ಇವೆರಡೂ ಕ್ಷುದ್ರಗ್ರಹಗಳನ್ನು ‘ಪ್ರೋಟೋಗ್ರಹಗಳು’ ಅಥವಾ ಆದಿಗ್ರಹಗಳೆಂದು ಕರೆಯಲಾಗುತ್ತಿದೆ.
ಡಾನ್ ಉಡ್ಡಯನ:
ನಾಲ್ಕು ವರ್ಷಗಳ ಹಿಂದೆ ಹತ್ತಾರು ಉಪಕರಣಗಳನ್ನು ಹೊತ್ತ ಡಾನ್ ನೌಕೆ ದಿಗಂತದೆಡೆಗೆ ಹಾರಿತು. ಮೂರು ಹಂತದ ಉಡ್ಡಯನದಲ್ಲಿ ರಾಕೆಟ್ಟುಗಳಿಂದ ವೇಗವನ್ನು ಪಡೆದು ಭೂಗುರುತ್ವವನ್ನು ಮೀರಿ ಚಿಮ್ಮುತ್ತ ಮುನ್ನಡೆದ ಡಾನ್ ಭೂವಾತಾವರಣವನ್ನು ದಾಟುತ್ತಲೇ ಕೇಬಲ್ ಹಗ್ಗಗಳಿಂದ ಬಂಧಿತವಾಗಿದ್ದ ಸೌರರೆಕ್ಕೆಗಳು ನಿಧಾನವಾಗಿ ಬಿಚ್ಚಿಕೊಂಡವು. ಇದಕ್ಕೆ ಮುನ್ನ ಸೂರ್ಯನಿರುವ ದಿಕ್ಕನ್ನು ಖಚಿತಪಡಿಸಿಕೊಂಡು ಆಕಡೆಗೆ ಸೌರರೆಕ್ಕೆಗಳನ್ನು ತಿರುಗಿಸಲೆಂದು ಪುಟ್ಟದೆರಡು ಸೋಲಾರ್ ಸೆಲ್ಲುಗಳು ಕಣ್ಣುಬಿಟ್ಟು ಸೂರ್ಯನನ್ನು ಗುರುತಿಸಿದವು. ಮುಂದಿನ 8 ವರ್ಷಗಳ ಕಾರ್ಯಾವಧಿಗೆ ಡಾನ್‍ನ ಉಪಕರಣಗಳಿಗೆ ಬೇಕಾದೆಲ್ಲ ವಿದ್ಯುತ್ ಶಕ್ತಿಯನ್ನೂ ಈಗಲೇ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ. ಏಕೆಂದರೆ ಈಗ ಡಾನ್ ಸಾಗುತ್ತಿರುವುದು ಸೂರ್ಯನಿಂದ ದೂರದೂರಕ್ಕೆ, ಅಂದರೆ ಬಿಸಿಲು ಪ್ರಖರವಾಗಿಲ್ಲದ ಪ್ರದೇಶಕ್ಕೆ. (ಈ ಸೋಲಾರ್ ರೆಕ್ಕೆಗಳೋ ಅಮಿತ ಸಾಮಥ್ರ್ಯವುಳ್ಳವು. ಇರುವ ಐದು ರೆಕ್ಕೆಗಳಲ್ಲಿ ಒಂದೇ ಒಂದು ಕೆಲಸ ಮಾಡಿದರೂ ಇಡೀ ನೌಕೆಗೆ ಬೇಕಾಗುವಷ್ಟು ಸೌರವಿದ್ಯುತ್ ದೊರೆಯುತ್ತದೆ.)
ಡಾನ್ ಹೊತ್ತು ಸಾಗುತ್ತಿರುವ ಪ್ರಮುಖ ವೈಜ್ಞಾನಿಕ ಉಪಕರಣಗಳು: 1. ಫ್ರೇಮಿಂಗ್ ಕ್ಯಾಮೆರಾ 2. ಅವಗೆಂಪು ಮತ್ತು ಬೆಳಕಿನ ಸ್ಪೆಕ್ಟ್ರೋಮೀಟರ್ 3. ಗಾಮಾ ಕಿರಣ ಮತ್ತು ನ್ಯೂಟ್ರಾನ್ ಕಣ ಡಿಟೆಕ್ಟರ್
ಈ ಹಂತದಲ್ಲಿ ಅಯಾನ್ ಇಂಜಿನ್ ನೌಕೆಯನ್ನು ಮುನ್ನಡೆಸುತ್ತದೆ. ಅಯಾನ್ ಇಂಜಿನ್ನಿನಲ್ಲಿ ಕ್ಸೆನಾನ್ ಎಂಬ ಜಡ ಅನಿಲವನ್ನು ಬಳಸಲಾಗುತ್ತದೆ. ಬಲವಾದ ಸೌರವಿದ್ಯುತ್ ಕಿರಣಗಳು ಕ್ಸೆನಾನ್ ಅನಿಲದ ಮೇಲೆ ಬಿದ್ದಾಗ ಅದರ ಅಯಾನುಗಳು(ಅಂದರೆ ಅಸ್ಥಿರವಾದ ಅಣುಗಳು) ಬಿಡುಗಡೆಯಾಗುತ್ತವೆ. ಆ ಅಣುಗಳು ಅಪಾರ ವೇಗದಿಂದ ನೌಕೆಯ ಹಿಂಭಾಗದ ಸೂಸುನಳಿಕೆಯ ಮೂಲಕ ಹೊರಬಿದ್ದಾಗ ನೌಕೆಯು ಅದೇ ವೇಗವನ್ನು ಪಡೆದು ಮುಂದೆ ಹಾರುತ್ತದೆ.
ಇನ್ನು ಮುಂದೆ ಮಾತೃಗ್ರಹಕ್ಕೆ ಸಂದೇಶಗಳನ್ನು ಕಳುಹಿಸುವ ಸಮಯ. ಇಲ್ಲಿಯವರೆಗೂ ನಿದ್ರಾವಸ್ಥೆಯಲ್ಲಿರುವ (ಹೈಬರ್‍ನೇಶನ್) ಒಳಗಿರುವ ವೈಜ್ಞಾನಿಕ ಉಪಕರಣಗಳೆಲ್ಲವೂ ಬೆಚ್ಚಗಾಗುತ್ತವೆ. ಡಾನ್‍ನ ಅಂಟೆನಾಗಳ ಮೂಲಕ ರೇಡಿಯೋ ಟ್ರಾನ್ಸ್‍ಮೀಟರ್ ತನ್ನ ಕೆಲಸವನ್ನು ಆರಂಭಿಸುತ್ತದೆ. ಇದಕ್ಕೆಂದು ನೌಕೆಯೊಳಗೆ ಭದ್ರಪಡಿಸಿರುವ ಪ್ರಮುಖ ಅಂಟೆನಾ ಐದಡಿ ಉದ್ದವಿದೆ. ಇನ್ನೆರಡು ಪುಟ್ಟ ಅಂಟೆನಾಗಳು ನೌಕೆಯ ನಿರ್ವಹಣಾ ವಿವರಗಳನ್ನು ಕಳಿಸಿದರೆ ಈ ಮುಖ್ಯ ಅಂಟೆನಾ ಮಹತ್ವದ ವೈಜ್ಞಾನಿಕ ಮಾಹಿತಿಗಳು ಹಾಗೂ ಸ್ಪಷ್ಟ ಚಿತ್ರಗಳನ್ನು ಕಳಿಸಲು ಬಳಕೆಯಾಗುತ್ತದೆ. ಭೂಮಿಯತ್ತ ಸಂದೇಶಗಳು ಪ್ರಸಾರವಾಗತೊಡಗುತ್ತವೆ. ಗಿರಕಿ ಹೊಡೆಯುತ್ತಿರುವ ಡಾನ್‍ನ ಅಂಟೆನಾಗಳು ಭೂಮಿಯತ್ತ ಮುಖ ಮಾಡಿದಾಗ ಅಂದರೆ ತಾಸಿಗೆ ಮೂವತ್ತು ನಿಮಿಷಗಳ ಕಾಲ ಮಾತ್ರ ಸಂದೇಶಗಳು ಬೆಳಕಿನ ವೇಗದಲ್ಲಿ ಓಡುತ್ತ ಭೂಪ್ರಯೋಗಾಲಯಗಳನ್ನು ಸೇರುತ್ತವೆ.
ಮೊದಲ ಮೂರು ತಾಸಿನೊಳಗೆ ವಾಯುಮಂಡಲವನ್ನು ದಾಟಿ, ಭೂಉಪಗ್ರಹಗಳ ವಲಯವನ್ನೂ ಹಾದು ಹಾರಿದ ಡಾನ್ ಮುಂದೆ ಒಂದೇ ದಿನದೊಳಗೆ ಚಂದ್ರನ ಎಲಿಪ್ಟಿಕಲ್ ಕಕ್ಷೆಯನ್ನೂ ದಾಟಿ, ಇದುವರೆಗೆ ಮಾನವ ಅನ್ವೇಷಿಸದ ಬಾಹ್ಯಾಕಾಶ ಪ್ರದೇಶದಲ್ಲಿ ಹಾರಾಟ ನಡೆಸಿತು. ಆದರೆ ಅದಿನ್ನೂ ಡಾನಿಗೆ ಪ್ರಾರಂಭಿಕ ಹಂತವಷ್ಟೆ. ಮುಂದೆ ಇನ್ನೂ ಮತ್ತೂ ಪಯಣಿಸಬೇಕು.
ಎಂಥ ವಿಚಿತ್ರ! ‘ರವಿ ಕಾಣದ್ದನ್ನು ಕವಿ ಕಾಣುತ್ತಾನೆ’ ಎನ್ನುತ್ತಾರೆ. ಆದರೆ ಬಾಹ್ಯಾಕಾಶದ ವಿಷಯದಲ್ಲಿ ವಿಜ್ಞಾನಿಗಳು ಯಾವ ಕಲಾವಿದನ ಕಲ್ಪನೆಗೂ ಕಡಿಮೆಯಿಲ್ಲದಂತೆ ಅಥವಾ ಕಲಾವಿದನೊಬ್ಬ ಊಹೆಯನ್ನೂ ಮಾಡಲಾಗದ ಬ್ರಹ್ಮಾಂಡದ ಭಾಗವನ್ನು ಭೂಗ್ರಹದ ಪುಟ್ಟ ಪ್ರಯೋಗಾಲಯದಲ್ಲಿ ಕುಳಿತೇ ಶೋಧಿಸ ಹೊರಟಿದ್ದಾರೆ. ಆದರಿದು ಒಬ್ಬಿಬ್ಬರ ಬುದ್ಧಿವಂತಿಕೆಯ ಪ್ರದರ್ಶನವಲ್ಲ. ವಿಜ್ಞಾನದ ನಾನಾ ಕ್ಷೇತ್ರದ ಸಾವಿರಾರು ಅನ್ವೇಷಕರು ಹತ್ತಾರು ವರ್ಷಗಳಲ್ಲಿ ಸಾಧಿಸಿದ ಅಪ್ರತಿಮ ಸಾಧನೆಯ ಫಲವಿದು. ನಮ್ಮ ಪೂರ್ವಜರು ಹಾಕಿಕೊಟ್ಟ ಖಗೋಳಶಾಸ್ತ್ರದ ತಳಹದಿಯ ಮೇಲೆ ಇಂದಿನ ವಿಜ್ಞಾನ ವಿಕಾಸಗೊಂಡಿದೆ.
ದಿನಗಳು ಕಳೆದಂತೆ ಡಾನ್ ಇನ್ನೂ, ಮತ್ತೂ ವೇಗವನ್ನು ಪಡೆಯುತ್ತ ವೆಸ್ತಾದತ್ತ ಮುನ್ನುಗ್ಗುತ್ತಿದೆ. ಅಯಾನ್ ಇಂಜಿನ್ನಿನ ನೂಕು ಬಲವೇ ಅಂಥಾದ್ದು. ಮೊದಮೊದಲು ನಿಧಾನವಿದ್ದು ಮುಂದೆ ನಿರ್ವಾತ ಆಕಾಶದಲ್ಲಿ ಹೆಚ್ಚು ಬಲದಿಂದ ನೌಕೆಯನ್ನು ಮುಂದೂಡುತ್ತದೆ. ದಾರಿಯಲ್ಲಿ ಆಚೀಚಿನ ಆಕಾಶಕಾಯಗಳÀನ್ನು ಕ್ಯಾಮೆರಾ ಕ್ಲಿಕ್ಕಿಸುತ್ತದೆ. ಡಾನ್‍ನ ಅವರೋಹಿತ ಹಾಗೂ ದೃಷ್ಟಿಗೋಚರ ಸ್ಪೆಕ್ಟ್ರೋಮೀಟರ್‍ಗಳು ಸುತ್ತಲಿನ ಕಾಯಗಳು ಹೊರಸೂಸುವ ಬೆಳಕನ್ನು ಸೆರೆಹಿಡಿಯುತ್ತವೆ. ಆ ಚಿತ್ರಗಳು ಅದರ ಪಥ ನಿರ್ದೇಶನ ಮಾಡಲು ತಂತ್ರಜ್ಞರಿಗೆ ಸಹಾಯಕವಾಗುತ್ತವೆ. ಎರಡು ವರ್ಷ ಹಾರಿದ ಡಾನ್ 2009 ರಲ್ಲಿ ಮಂಗಳನ ಬಳಿ ಬಂದಾಗ ಅದರ ಗುರುತ್ವ ಬಲವನ್ನು ಉಪಯೋಗಿಸಿಕೊಂಡು ಇನ್ನೂ ವೇಗವನ್ನು ಹೆಚ್ಚಿಸಿಕೊಂಡಿದೆ.
ಮಂಗಳನನ್ನು ದಾಟಿ ಕ್ಷುದ್ರಗ್ರಹಗಳ ವಲಯವನ್ನು ಪ್ರವೇಶಿಸುವವರೆಗೂ ಡಾನ್ ವೇಗ ಏರುತ್ತಲೇ ಇತ್ತು. ವೆಸ್ತಾ ಡಾನ್‍ನ ಕ್ಯಾಮೆರಾ ಕಣ್ಣಿಗೆ ಬಿದ್ದಾಗಿನಿಂದ ಅದರ ವೇಗವನ್ನು ಹತೋಟಿಯಲ್ಲಿಟ್ಟು ಲೆಕ್ಕಾಚಾರ ಹಾಕಿ ಮುಂದುವರೆಯುವಂತೆ ಆದೇಶ ನೀಡಲಾಯಿತು.
ಜುಲೈ 1 ರಂದು ವೆಸ್ತಾ ತನ್ನ ಅಕ್ಷದ ಸುತ್ತ ತಿರುಗಲು 5 ತಾಸು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆಂಬುದನ್ನು ಡಾನ್ ದಾಖಲಿಸಿತು. ಇದೇ ಜುಲೈನಿಂದ ಮುಂದಿನ ಜುಲೈವರೆಗೆ ವೆಸ್ತಾದ ಕಕ್ಷೆಯಿಂದ ಸ್ವಲ್ಪವೇ ದೂರದಲ್ಲಿ ಅದರೊಂದಿಗೇ ಹಾರಾಟ ನಡೆಸುತ್ತ (ಭೂಮಿಯ ಸುತ್ತ ಚಂದ್ರ ತಿರುಗಿದಂತೆ) ಸತತ ಚಿತ್ರೀಕರಣ ನಡೆಸಲಿದೆ. ಸೂರ್ಯನನ್ನು ಸುತ್ತಲು ಭೂಮಿಯ ಐದೂಕಾಲು ವರ್ಷ ಕಾಲ ತೆಗೆದುಕೊಳ್ಳುವ ವೆಸ್ತಾಗೆ ಈ ಕಾಲ ಬೇಸಿಗೆ. ಅದರಲ್ಲೂ ಬೃಹದ್ ಕಣಿವೆಯುಳ್ಳ ದಕ್ಷಿಣ ಗೋಲಾರ್ಧದಲ್ಲಿ ಈಗ ಬಿರಿಬಿರಿ ಬಿಸಿಲು. ಚಿತ್ರಗಳನ್ನು ತೆಗೆಯಲು ಸಕಾಲ.
16 ಜುಲೈ. ಅಂದು ತಂತ್ರಜ್ಞರು ತವಕದಿಂದ ಕಾಯುತ್ತಿದ್ದ ದಿನ. ವೆಸ್ತಾದ ಕಕ್ಷೆಯನ್ನು ಪ್ರವೇಶಿಸಿದ ಡಾನ್ ಅದರ ಹಿಂದೆಯೇ ಹಾರುತ್ತ 16 ಸಾವಿರ ಕಿಮೀ ದೂರದಿಂದ ಚಿತ್ರವನ್ನು ಕ್ಲಿಕ್ಕಿಸಿ ಭೂಮಿಗೆ ರವಾನಿಸಿದೆ. ಅಂದುಕೊಂಡಂತೆ, ಇನ್ನೂರೆಂಬತ್ತು ಕೋಟಿ ಕಿಮೀ ದೂರವನ್ನು ನಾಲ್ಕು ವರ್ಷಗಳಲ್ಲಿ ಕ್ರಮಿಸಿ ಪಂಕ್ಚರ್ ಆದ ಫುಟ್ ಬಾಲಿನಂತಿದ್ದ ವೆಸ್ತಾದ ಸ್ಪಷ್ಟ ಚಿತ್ರವನ್ನು ಅಂದು ಡಾನ್ ಕಳುಹಿಸಿದಾಗ ಪ್ರಯೋಗಾಲಯದಲ್ಲಿ ಕುಳಿತ ಡಾನ್ ತಂತ್ರಜ್ಞರು ಹರ್ಷಿಸಿದ್ದಾರೆ. ಇನ್ನೂ ವೆಸ್ತಾದ ಬಳಿ ಸಾಗುತ್ತ ಜುಲೈ 23ಕ್ಕೆ ಬರೀ 5200 ಕಿಮೀ ದೂರದಿಂದ ಡಾನ್ ಕಳಿಸಿರುವ ವೆಸ್ತಾದ ಮೇಲ್ಮೈ ಚಿತ್ರ ಸುಟ್ಟ ಹಪ್ಪಳದಂತಿದೆ.
ಇನ್ನೊಂದು ವರ್ಷ ವೆಸ್ತಾದೊಂದಿಗೆ ಹಾರಾಟ ನಡೆಸಿ ಡಾನ್ ತನ್ನ ಪಥವನ್ನು ಬದಲಿಸಲಿದೆ. ಅದರ ಅಯಾನ್ ಎಂಜಿನ್ನುಗಳು ಭೂಮಿಯಿಂದ ಆದೇಶ ಪಡೆದು ಹೊಸ ನೂಕು ಬಲವನ್ನು ಒದಗಿಸಿ ವೆಸ್ತಾದ ಕಕ್ಷೆಯಿಂದ ಆಚೆ ಜಿಗಿದು ಸಿರಿಸ್ ನತ್ತ ತಳ್ಳಲಿವೆ.
ಇದುವರೆಗೆ ದೊರೆತ ವಿವರಗಳೆಲ್ಲವೂ ಭೂದೂರದರ್ಶಕಗಳು ಹಾಗೂ ಗಗನದಲ್ಲಿದ್ದ ಹಬ್ಬಲ್ ದರ್ಶಕ ತೆಗೆದ ಚಿತ್ರಗಳಾಗಿವೆ. ಈಗ ಡಾನ್ ಕಳುಹಿಸುವ ಚಿತ್ರಗಳು ಇದುವರೆಗೆ ನಮಗೆ ತಿಳಿದಿಲ್ಲದ ನೂರಾರು ರಹಸ್ಯಗಳನ್ನು ಬಹಿರಂಗಪಡಿಸಲಿವೆ.
ಹಾರಲು ಅಡ್ಡಬಂದ ತೊಂದರೆಗಳು: ಡಾನ್ 2007ರ ಜೂನ್ 20 ರಂದೇ ಹಾರಬೇಕಿತ್ತು. ಆದರೆ ಒಂದಾದ ನಂತರ ಒಂದು ಅಡ್ಡ ತೊಂದರೆಗಳು ಎದುರಾದವು. ಮೊದಲ ನಿಗದಿತ ದಿನದಂದು ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಡಾನ್ ನ ಬಿಡಿಭಾಗಗಳಲ್ಲಿ ಕೆಲವು ಉಡ್ಡಯನಾ ಸ್ಥಳಕ್ಕೆ ಬಂದಿರಲಿಲ್ಲ. ಎಲ್ಲಾ ಸಿದ್ಧತೆ ನಡೆಸುತ್ತಿರುವಾಗ ಬಿಡಿಭಾಗಗಳನ್ನು ಜೋಡಿಸುವ ಕ್ರೇನ್ ಮುರಿಯಿತು, ಆನಂತರ ಎರಡನೇ ಹಂತದ ರಾಕೆಟ್ ಉಡ್ಡಯನಕ್ಕೆಂದು ಇಂಧನ ತುಂಬಿಸುವ ಕಾರ್ಯ ನಿಧಾನವಾಯಿತು. ಇಷ್ಟೆಲ್ಲ ನಡೆದಾಗ ಮಂಗಳ ಗ್ರಹಕ್ಕೆ ಹೊರಟಿದ್ದ ಫೀನಿಕ್ಸ್ ಅದೇ ಉಡ್ಡಯನಾ ಕೇಂದ್ರದಿಂದ ಹಾರುವ ಕಾರ್ಯದಲ್ಲಿ ಮತ್ತೂ ಒಂದಿಷ್ಟು ದಿನ ಕಳೆಯಿತು. ಇನ್ನೇನು ಹಾರುವ ದಿನದ ಕ್ಷಣಗಣನೆ ನಡೆಯುತ್ತಿರುವಾಗ ರಾಕೆಟ್ ಕಳಚಿ ಬೀಳಬೇಕಾಗಿದ್ದ ಸಮುದ್ರ ಪ್ರದೇಶದಲ್ಲಿ ನಿಷೇಧವಿದ್ದರೂ ಹಡಗೊಂದು ಚಲಿಸುತ್ತಿರುವುದು ಕಂಡುಬಂದಿತು. ದೂರಹೋಗಲು ಅದಕ್ಕೆ ಆಣತಿ ನೀಡುತ್ತಿರುವಂತೆಯೇ ಡಾನ್ ನ ಏರು ಮಾರ್ಗದಲ್ಲಿ ‘ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ ಅಡ್ಡ ಬರುವ ಸೂಚನೆ ದೊರಕಿತು. ಅದೂ ದೂರ ಚಲಿಸಿದ ನಂತರ ಅಂತೂ 2007 ರ ಸೆಪ್ಟೆಂಬರ್À ಹತ್ತರಂದು ಡಾನ್ ಅಂತರಿಕ್ಷನೌಕೆ ದೂರದ ಪಯಣವನ್ನು ಆರಂಭಿಸಿತು.
*ಕ್ಷುದ್ರಗ್ರಹಗಳ ಪಟ್ಟಿ: ಆ ಕಡೆ ನಾಲ್ಕು, ಈ ಕಡೆ ನಾಲ್ಕು (ಪ್ಲೂಟೋ ಈಗ ಗ್ರಹವಲ್ಲ) ಹೀಗೆ ಎಂಟು ಗ್ರಹಕಕ್ಷೆಗಳ ನಡುವಿನ ತೆಳ್ಳನೆಯ ನಡುಪಟ್ಟಿ ಇದು. ಇದರಲ್ಲಿ ಲಕ್ಷಗÀಟ್ಟಲೆ ವಿವಿಧ ಆಕಾರದ, ವಿವಿಧ ಬಣ್ಣದ ಲೋಹ ಮತ್ತು ಬಂಡೆಚೂರುಗಳು ಹಾಗೂ ಧೂಳಿನ ಮೋಡಗಳು ಸೂರ್ಯನ ಸುತ್ತ ಗಿರಗಿಟ್ಲೆ ಸುತ್ತುತ್ತಿವೆ. ಪ್ರಮುಖ ಎಂಟುಗ್ರಹಗಳಿಗಿಂತ ಆಕಾರದಲ್ಲಿ ಚಿಕ್ಕದಾಗಿರುವ ಹಾಗೂ ಸೂರ್ಯನ ಪ್ರದಕ್ಷಿಣೆ ಹಾಕುತ್ತಿರುವ ಈ ಕಾಯಗಳಿಗೆ ‘ಕ್ಷುದ್ರಗ್ರಹಗಳು’ ಎಂದು ಹೆಸರು. ಇವುಗಳಲ್ಲಿ ಸುಮಾರು ಒಂದು ಲಕ್ಷದಷ್ಟನ್ನು ಎಣಿಕೆ ಮಾಡಲಾಗಿದೆ, 12 ಸಾವಿರದಷ್ಟನ್ನು ಹೆಸರಿಸಲಾಗಿದೆ. ಇವೆಲ್ಲವುಗಳನ್ನು ಕ್ಷುದ್ರಗ್ರಹಗಳು ಎಂದು ಕರೆಯಲಾಗುತ್ತಿದೆ. ಆಗೀಗ ನಮಗೆ ಬಾನಿನಿಂದುದುರುವ ಉಲ್ಕೆಗಳು ಕಂಡು ಬರುತ್ತವಲ್ಲ? ಅವು ಇದೇ ಪಟ್ಟಿಯಲ್ಲಿ ನಡೆಯುವ ಗುದ್ದಾಟದ ಪರಿಣಾಮವಾಗಿ ಭೂಮಿಯತ್ತ ಜಿಗಿಯುವ ವಸ್ತುಗಳು. ಈ ಪಟ್ಟಿಯ ಆಚೆ ಸುತ್ತುತ್ತಿರುವ ಬೃಹದ್ ಕಾಯ ಗುರುಗ್ರಹ. ಈವರೆಗಿನ ಅನ್ವೇಷಣೆಗಳ ಪ್ರಕಾರ ನಾನೂರರವತ್ತು ಕೋಟಿ ವರ್ಷಗಳ ಹಿಂದೆ ಸೌರವ್ಯೂಹ ಉಗಮವಾಗುತ್ತಿರುವಾಗ, ಈ ವಲಯದಲ್ಲಿ ಪಯಣಿಸುತ್ತಿದ್ದ ಪುಟ್ಟ ಪುಟ್ಟ ಕಾಯಗಳು ಗುರುತ್ವದ ಸೆಳೆತದಲ್ಲಿ ಒಂದಾಗಿ ದೊಡ್ಡದಾಗುತ್ತ ಗ್ರಹಗಳಾಗುವ ಸಂಭವವನ್ನು ತಪ್ಪಿಸಿದ್ದು ಗುರು ಗ್ರಹ. ಏಕೆಂದರೆ ಭರ್ರೆಂದು ಹಾರುತ್ತಿದ್ದ ಗುರುವಿನ ಗುರುತ್ವ ಈ ಪುಟ್ಟ ಕಾಯಗಳ ಕಕ್ಷಾಪಥವನ್ನೇ ತಪ್ಪಿಸಿ ಅವು ಒಂದಾಗುವ ಅವಕಾಶವನ್ನೇ ನೀಡುತ್ತಿಲ್ಲ.
ಇವುಗಳಲ್ಲಿ ಅತಿ ದೊಡ್ಡ ಕಾಯ ಸಿರಿಸ್. ಕ್ಷುದ್ರಗ್ರಹಗಳ ವಲಯಕ್ಕೆ ಅದ್ಯಾವುದೋ ತಪ್ಪಿನಿಂದಾಗಿ ಸಿಕ್ಕಿಬಿದ್ದಂತೆ ತೋರುವ ಭಾರವಾದ ಕಾಯ ಸಿರಿಸ್. ಏಕೆಂದರೆ ಉಳಿದ ಕ್ಷುದ್ರಗ್ರಹಗಳಂತೆ ಜಜ್ಜಿದ ಬಟಾಟೆಯ ಆಕಾರದ ಬದಲಾಗಿ ದುಂಡಗಿರುವ ಸಿರಿಸ್ ಮೇಲ್ಮೈನಲ್ಲಿ ದಪ್ಪನಾದ ಹಿಮ ಕವಚ ಹಾಗೂ ಒಳಗಡೆ ವಿವಿಧ ಪದರಗಳನ್ನು ಹೊದ್ದಿರುವ ಕಪ್ಪು ಕಾಯ. ಇದರ ವ್ಯಾಸ ಸುಮಾರು 930 ಕಿಮೀ. 1801 ರಲ್ಲಿ ಇದರ ಪತ್ತೆಯಾದಾಗಿನಿಂದ, ಇದರ ದುಂಡನೆಯ ಆಕಾರದಿಂದಾಗಿ ಮುಂದಿನ ಐವತ್ತು ವರ್ಷಗಳ ಕಾಲ ಎಂಟನೆಯ ಗ್ರಹವೆಂದೇ ಹೆಸರುಪಡೆದಿತ್ತಿದು. ಈಗಿದನ್ನು ಕಿರುಗ್ರಹ ಎಂದು ಕರೆಯಲಾಗುತ್ತಿದೆ.
ಎರಡನೆಯ ದೊಡ್ಡ ಕಾಯ ವೆಸ್ತಾ. ಎರಡೂ ಒಂದಕ್ಕೊಂದು ಸಮೀಪವಿದ್ದರೂ ರಚನೆಯಲ್ಲಿ ಅಜಗಜಾಂತರ. 530 ಕಿಮೀ ಅಗಲದ ವೆಸ್ತಾ ಮೊದಲ ನಾಲ್ಕು ಗ್ರಹಗಳಂತೆ ಬಂಡೆಗ್ರಹ. ಹಿಂದೊಂದು ಕಾಲದಲ್ಲಿ ಇದು ಕರಗಿದ ಲಾವಾದಿಂದ ಕೂಡಿದ್ದು ಕಾಲಾಂತರದಲ್ಲಿ ಅದು ಗಟ್ಟಿಯಾಗಿ ಭಾರಲೋಹಗಳು ತಳಕ್ಕೆ ಸೇರಿ ಬಂಡೆಕಲ್ಲುಗಳ ಕವಚ ಉಂಟಾಗಿರಬಹುದೆಂದು ಈವರೆಗಿನ ಶೋಧ ತಿಳಸುತ್ತದೆ. ಎಷ್ಟೋ ವರ್ಷಗಳ ಹಿಂದೆ ಯಾವುದೋ ವಸ್ತು ಢಿಕ್ಕಿ ಹೊಡೆದು ಆಳವಾದ ಕುಳಿಯೊಂದು ವೆಸ್ತಾದಲ್ಲಿ ಒಡಮೂಡಿದೆ. ಅದೆಷ್ಟು ಆಳವಾಗಿದೆಯೆಂದರೆ ವೆಸ್ತಾದ ಗರ್ಭದೊಳಗಿನ ರಚನೆಯೂ ಕಂಡುಬರುತ್ತಿವೆ. ಇದೇನಾದರೂ ನಿಜವಾದಲ್ಲಿ, ಭೂಮಿಯಂತೆ ಶಿಲಾಗ್ರಹವಾದ ವೆಸ್ತಾವನ್ನು ಅಧ್ಯಯನ ಮಾಡಿ ಭೂಮಿಯ ರಚನೆಯ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಈ ಕುಳಿಯಿರುವ ಭಾಗವೇ ಈಗ ಡಾನ್‍ಗೆ ಎದುರಾಗಿದೆ.
ಸರೋಜ ಪ್ರಕಾಶ್

ಅಂಧಮಕ್ಕಳೊಂದಿಗೆ ಕಾಂಗ್ರೆಸ್ ಕಾರ್ಯಕರ್ತರ ವರ್ಷಾಚರಣೆ

0

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಅಂಧಮಕ್ಕಳಿಗೆ ಊಟ ಮತ್ತು ಬಟ್ಟೆಗಳನ್ನು ನೀಡುವ ಮೂಲಕ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಹೊಸವರ್ಷಾಚರಣೆಯ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಸಂದರ್ಭದಲ್ಲಿ ಅಂಧಮಕ್ಕಳಿಗೆ ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ‘ಅಂಗವಿಕಲತೆ ಶಾಪವಲ್ಲ. ಅದೊಂದು ಆಕಸ್ಮಿಕವಷ್ಟೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಹಲವು ದಾರಿಗಳಿವೆ. ಅಂಗವಿಕಲರಿಗೆ ಎಲ್ಲಾ ಕ್ಷೇತ್ರದಲ್ಲೂ ಅವಕಾಶ ಸಿಗಬೇಕು. ಸರ್ಕಾರದ ಯೋಜನೆಗಳು ಅವರನ್ನು ತಲುಪಬೇಕು. ಹೊಸವರ್ಷವನ್ನು ಉತ್ತಮ ರೀತಿಯಲ್ಲಿ ಪ್ರಾರಂಭಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷವನ್ನು ಇದೇ ಉತ್ತಮ ಆದರ್ಶಗಳೊಂದಿಗೆ ಬಲಪಡಿಸುವತ್ತ ಶ್ರಮಿಸಬೇಕು. ರಾಜ್ಯ ಸರ್ಕಾರದ ಹಲವಾರು ಯೋಜನೆಗಳನ್ನು ಕಟ್ಟ ಕಡೆಯ ವ್ಯಕ್ತಿಯವರೆಗೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಒಳ್ಳೆಯ ಕೆಲಸಗಳು ಉತ್ತಮ ಫಲಗಳನ್ನೇ ನೀಡುತ್ತವೆ’ ಎಂದು ಹೇಳಿದರು. ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ಭಕ್ತಿಗೀತೆಗಳನ್ನು ಹಾಡಿದರು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಚಿಕ್ಕಮುನಿಯಪ್ಪ, ಲಕ್ಷ್ಮೀನಾರಾಯಣ, ಗುಡಿಯಪ್ಪ, ಎಚ್.ಎಂ.ಮುನಿಯಪ್ಪ, ರಾಮಕೃಷ್ಣಪ್ಪ, ಬಾಲಕೃಷ್ಣ, ಎನ್.ಮುನಿಯಪ್ಪ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಉದ್ಘಾಟನೆ

0

ರೈತರಲ್ಲಿ ತಾರತಮ್ಯ ಮಾಡದೆ ಎಲ್ಲರಿಗೂ ಅವಕಾಶ ಸಿಗುವಂತೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ನೀಡುವ ಕೇಂದ್ರ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ತಾಲ್ಲೂಕಿನ ಹೊಸಪೇಟೆ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಉದ್ಘಾಟನೆ ಮತ್ತು ಕೃಷಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೂಲಿ ಕಾರ್ಮಿಕರ ಅಭಾವದಿಂದಾಗಿ ಕೃಷಿ ಕಾರ್ಯ ಕಷ್ಟವಾಗುತ್ತಿದೆ. ಅದಕ್ಕಾಗಿ ಹಲವಾರು ಯಂತ್ರೋಪಕರಣಗಳ ಆವಿಷ್ಕಾರವಾಗುತ್ತಿವೆ. ಆದರೆ ಎಲ್ಲಾ ರೈತರೂ ಯಂತ್ರೋಪಕರಣಗಳಿಗೆ ಹಣ ವ್ಯಯಿಸಲು ಶಕ್ತರಾಗಿರುವುದಿಲ್ಲ. ಈ ಕೊರತೆಯನ್ನು ನೀಗಿಸಲು ಕೃಷಿ ಇಲಾಖೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಂಟಿಯಾಗಿ ಹೋಬಳಿ ಮಟ್ಟದಲ್ಲಿ ಕಚೇರಿಗಳನ್ನು ತೆರೆದಿದ್ದು, ರೈತರಿಗೆ ಸುಲಭ ಬೆಲೆಯಲ್ಲಿ ಬಾಡಿಗೆಗೆ ಯಂತ್ರೋಪಕರಣಗಳು ಸಿಗುತ್ತಿರುವುದು ಒಂದು ರೀತಿಯ ವರದಾನದಂತಿದೆ ಎಂದು ಹೇಳಿದರು.
ಅಲ್ಪ ಸ್ವಲ್ಪ ನೀರಿನಲ್ಲೇ ನಮ್ಮ ಭಾಗದ ರೈತರು ಹಲವಾರು ಬೆಳೆಗಳನ್ನು ಬೆಳೆಯುವ ಸಾಹಸಿಗಳಾಗಿದ್ದಾರೆ. ಇನ್ನು ಶಾಶ್ವತ ನೀರಾವರಿ ಯೋಜನೆಯು ಈ ಭಾಗಕ್ಕೆ ಬಂದಲ್ಲಿ ಆಹಾರ ಉತ್ಪನ್ನ ಬೆಳೆಯುವುದಲ್ಲದೆ, ಆರ್ಥಿಕವಾಗಿಯೂ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ರಾಧಾಕೃಷ್ಣರಾವ್ ಮಾತನಾಡಿ, ‘ಕಳೆದ 33 ವರ್ಷಗಳಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವ ಯೋಜನೆಯನ್ನು ನಡೆಸುತ್ತಿದ್ದೇವೆ. ಕೆಲವು ವರ್ಷಗಳಿಂದ ಸರ್ಕಾರದೊಂದಿಗೆ ಸೇರಿ 180 ಹೋಬಳಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಒಟ್ಟು 90 ಕೋಟಿ ರೂಗಳನ್ನು ಕೃಷಿ ಯಂತ್ರೋಪಕರಣಗಳಿಗೆ ಮೀಸಲಿಡಲಾಗಿದೆ. ರಾಜ್ಯಾದ್ಯಂತ 2 ಲಕ್ಷ 25 ಸಾವಿರ ವೃದ್ಧ ರೈತರಿಗೆ ಪಿಂಚಣಿ ಸೌಲಭ್ಯವನ್ನು ನಮ್ಮ ಸಂಸ್ಥೆ ವತಿಯಿಂದ ಒದಗಿಸುತ್ತಿದ್ದೇವೆ. ಜಂಗಮಕೋಟೆ ಹೋಬಳಿಯಲ್ಲಿಯೂ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ’ ಎಂದು ಹೇಳಿದರು.
ಟ್ರಾಕ್ಟರ್, ಮಿನಿ ಟ್ರಾಕ್ಟರ್, ಟಿಲ್ಲರ್, ಡಿಸ್ಕ್, ಕಲ್ಟಿವೇಟರ್, ರಾಗಿ ಕ್ಲೀನಿಂಗ್ ಮಿಷಿನ್, ಪವರ್ ಸ್ಪ್ರೇಯರ್, ಯಂತ್ರಚಾಲಿತ ಬಿತ್ತನೆ ಕೂರಿಗೆ ಮುಂತಾದ ಬಾಡಿಗೆ ನೀಡುವ ಯಂತ್ರೋಪಕರಣಗಳನ್ನು ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.
ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಕಾರ್ಯನಿರ್ವಾಹಣಾಧಿಕಾರಿ ಗಣಪತಿ ಸಾಕ್ರೆ, ಕೃಷಿ ಇಲಾಖೆ ಉಪನಿರ್ದೇಶಕ ಎಸ್.ಎಸ್.ಅಬೀದ್, ಸಹಾಯಕ ಕೃಷಿ ನಿರ್ದೇಶಕ ಬಿ.ಸಿ.ದೇವೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಆನಂದ್, ಗುಡಿಯಪ್ಪ, ಭಕ್ತರಹಳ್ಳಿ ಬೈರೇಗೌಡ, ಸೂರ್ಯನಾರಾಯಣಗೌಡ, ಎಚ್.ಎಂ.ಮುನಿಯಪ್ಪ, ಕೃಷ್ಣಪ್ಪ, ಜಯಣ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಗೀಶ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮೆಂತೆಸೊಪ್ಪಿನ ಅನ್ನ (ಮೇತಿ ಬಾತ್)

0

ಬೇಕಾಗುವ ಸಾಮಗ್ರಿ:
3-4 ಮೆಂತೆ ಸೊಪ್ಪು ಕಟ್ಟು
2 ಕ್ಯಾರೆಟ್
6-8 ಬೀನ್ಸ್
1 ಡೊಳ್ಳು ಮೆಣಸು
2 ಈರುಳ್ಳಿ
2-3 ಹಸಿಮೆಣಸು
1/2 ಮುಷ್ಟಿಯಾಗುವಷ್ಟು ಶೇಂಗ
ಉಪ್ಪು
ಅರ್ಧ ನಿಂಬೆಹಣ್ಣು
ಮಾಡುವ ವಿಧಾನ:
ಮೊದಲು ಅನ್ನವನ್ನು ತಯಾರು ಮಾಡಿಟ್ಟುಕೊಳ್ಳಿ.
ಮೆಂತೆ ಸೊಪ್ಪಿನ ದಂಟನ್ನು ತೆಗೆದು ಸ್ವಚ್ಛ ಮಾಡಿ, ತರಕಾರಿಯನ್ನು ಮತ್ತು ಸೊಪ್ಪನ್ನು ಸಣ್ಣಕ್ಕೆ ಹೆಚ್ಚಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಾಕಿ ಶೇಂಗವನ್ನು ಹುರಿದುಕೊಳ್ಳಿ, ಅದಕ್ಕೆ ಸಾಸಿವೆ, ಜೀರಿಗೆ, ಉದ್ದಿನಬೇಳೆ ಅರಿಶಿನ ಪುಡಿ ಹಾಕಿ, ಅದು ಸಿಡಿದ ನಂತರ ಹಸಿ ಮೆಣಸು ಈರುಳ್ಳಿ ಹೆಚ್ಚಿಟ್ಟುಕೊಂಡ ಸೊಪ್ಪು ತರಕಾರಿಯನ್ನು ಹಾಕಿ, ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸಕ್ಕರೆ ಹಾಕಿ ಹುರಿಯಿರಿ. ಮಿಶ್ರಣಕ್ಕೆ ಉಪ್ಪು ಹಾಕಿದ ಕಾರಣ ಸ್ವಲ್ಪ ನೀರು ಬರುತ್ತದೆ. ಆ ನೀರು ಪೂರ್ತಿಯಾಗಿ ಆರುವವರೆಗೆ ಹುರಿಯಿರಿ. ಅದೇ ನೀರು ತರಕಾರಿ ಬೇಯಲು ಸಾಕಾಗುತ್ತದೆ.
ಮೆಂತೆ ಸೊಪ್ಪಿನ ಪಲ್ಯ ತಯಾರಾಗಿದೆ. ಇದಕ್ಕೆ ರುಚಿಗೆ ಸರಿಯಾಗುವಷ್ಟು ಅನ್ನವನ್ನು ಹಾಕಿ ಕಲಸಿ. ಕೊನೆಯದಾಗಿ ಲಿಂಬುವನ್ನು ಹಿಂಡಿ ಮತ್ತೊಮ್ಮೆ ಮಿಶ್ರಣವನ್ನು ಕಲಸಿ. ಲಿಂಬುವು ರುಚಿಗೆ ತಕ್ಕಷ್ಟು ಹಾಕಿಕೊಳ್ಳಿ, ಹುಳಿ ಬೇಡದವರು ಹಾಕದೆಯು ತಿನ್ನಬಹುದು.
ತರಕಾರಿಯನ್ನು ಕೂಡ ಇಷ್ಟವಾಗದೇ ಇರುವವರು ಹಾಗೆಯೇ ಮೆಂತೆ ಈರುಳ್ಳಿಯ್ನನು ಹಾಕಿ ಪಲ್ಯ ಮಾಡಿ ಅದಕ್ಕೆ ಅನ್ನ ಕಲಸಿ ತಿನ್ನಬಹುದು. ಇನ್ನು ಬೇರೆ ತರಕಾರಿ ಅಂದರೆ ಹೂಕೋಸು, ಎಲೆಕೋಸು, ಆಲೂ ಕೂಡ ಸೇರಿಸಿ ಪಲ್ಯ ಮಾಡಬಹುದು.
ಇದನ್ನು ಹಾಗೆಯೂ ತಿನ್ನಬಹುದು, ಇಲ್ಲದಿದ್ದರೆ ಮೊಸರು ಬಜ್ಜಿ (ಸ್ವಲ್ಪ ಮೊಸರಿಗೆ 1 ಈರುಳ್ಳಿಯನ್ನು ಹೆಚ್ಚಿ ಉಪ್ಪು ಕೊತ್ತುಂಬರಿ ಸೊಪ್ಪು ಹಾಕಿ ಮಾಡುವುದು) ಯೊಡನೆಯು ತಿನ್ನಬಹುದು.
ತರಕಾರಿ ಯಾವುದು ಬೇಕು ಯಾವುದು ಬೇಡ ಎನ್ನುವುದು ತಿನ್ನುವವರ ಇಚ್ಛೆ.
ಇದೇ ವಿಧಾನದಲ್ಲಿ ಸಬ್ಬಸ್ಸಿಗೆ ಸೊಪ್ಪಿನ ಅನ್ನವನ್ನು ಮಾಡಬಹುದು.

ಶಿಡ್ಲಘಟ್ಟದಲ್ಲಿ ಲಕ್ಷ್ಮೀ ಶ್ರೀನಿವಾಸರ ವೈಕುಂಠ ದರ್ಶನ

0

ಪುಷ್ಯಮಾಸ ಶುಕ್ಲಪಕ್ಷದ ಏಕಾದಶಿಯು ವೈಕುಂಠ ಏಕಾದಶಿ ಎಂಬ ವಿಶೇಷ ದಿನವೆಂದು ಗುರುವಾರ ತಾಲ್ಲೂಕಿನ ಪ್ರಮುಖ ವೆಂಕಟೇಶ್ವರ, ಶ್ರೀನಿವಾಸ, ವಿಷ್ಣು ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜೆಗಳನ್ನು ಏರ್ಪಡಿಸಿದ್ದರು. ಎಲ್ಲಾ ದೇವಸ್ಥಾನಗಳಲ್ಲಿ ಜನಸಂದಣಿ ಹೆಚ್ಚಿದ್ದು, ಕೆಲವು ದೇವಸ್ಥಾನಗಳಲ್ಲಿ ನಿರ್ಮಿಸಿದ್ದ ವೈಕುಂಠ ದ್ವಾರದ ಒಳಗೆ ಹೋಗಿ ಬಂದರೆ ಮೋಕ್ಷ ಸಿಗುವುದೆಂಬ ನಂಬಿಕೆಯಿಂದ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ವೈಕುಂಠದ ದರ್ಶನಕ್ಕೆ ದ್ವಾರಗಳನ್ನು ಸ್ಥಾಪಿಸಿದ್ದು, ಸಪ್ತದ್ವಾರಗಳನ್ನು ದಾಟುತ್ತಿದ್ದಂತೆಯೇ ಲಕ್ಷ್ಮೀ ಶ್ರೀನಿವಾಸರ ಅಲಂಕೃತ ಬೃಹತ್ ಮೂರ್ತಿಗಳ ದರ್ಶನ ಸಿಗುವಂತೆ ಮಾಡಲಾಗಿತ್ತು. ಸುತ್ತಮುತ್ತಲಿನ ಗ್ರಾಮಗಳು ಹಾಗೂ ತಾಲ್ಲೂಕಿನಿಂದ ಆಗಮಿಸಿದ್ದ ಭಕ್ತರು ಸಾಲಾಗಿ ಸಾಗುತ್ತಾ ದೇವರ ದರ್ಶನ ಪಡೆದರು. ಪ್ರಸಾದ ವಿನಿಯೋಗ ಮತ್ತು ಅನ್ನಸಂತರ್ಪಣೆಯನ್ನೂ ದೇವಾಲಯದಲ್ಲಿ ಆಯೋಜಿಸಿದ್ದರು.
ತಾಲ್ಲೂಕಿನ ಮೇಲೂರು ಗ್ರಾಮದ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಭಕ್ತರಿಗಾಗಿ ವೈಕುಂಠ ಉತ್ತರ ದ್ವಾರ ದರ್ಶನ ಏರ್ಪಡಿಸಲಾಗಿತ್ತು. ಸುಪ್ರಭಾತ, ವಿಷ್ಣು ಸಹಸ್ರನಾಮ, ವಿಶ್ವಕ್ಸೇನ ಪೂಜೆ, ಪುಣ್ಯಾಹವಾಚನ, ಪಂಚಾಮೃತಾಭಿಷೇಕ, ರಾಷ್ಟ್ರಾಶೀರ್ವಾದ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವನ್ನು ನಡೆಸಲಾಯಿತು.

2jan2
ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಹೊರವಲಯದ ಸಾಯಿನಾಥ ಜ್ಞಾನ ಮಂದಿರದಲ್ಲಿ ದೇವರ ಮುಂದಿನ ಅಲಂಕೃತ ದೀಪ.

ತಾಲ್ಲೂಕಿನ ಚೌಡಸಂದ್ರದ ಸೋಮೇಶ್ವರಸ್ವಾಮಿ ದೇವಸ್ಥಾನ, ತಲಕಾಯಲಬೆಟ್ಟದ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ, ಚಿಕ್ಕದಾಸರಹಳ್ಳಿ ಬಳಿಯ ಬ್ಯಾಟರಾಯಸ್ವಾಮಿ ದೇವಾಲಯ, ಜಂಗಮಕೋಟೆ ಬಳಿಯ ಮುತ್ಯಾಲಮ್ಮ ದೇವಸ್ಥಾನ, ವಾಸವಿ ರಸ್ತೆಯ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳನ್ನು ನಡೆಸಲಾಗಿತ್ತು.
‘ಈ ವರ್ಷದ ಮೊದಲ ದಿನವೇ ವೈಕುಂಠ ಏಕಾದಶಿ ಬಂದಿರುವುದರಿಂದ ದೇವರ ಸೇವೆಯೊಂದಿಗೆ ವರ್ಷಾರಂಭವನ್ನು ಮಾಡುತ್ತಿದ್ದೇವೆ. ಬೆಳಿಗ್ಗೆ ದೇವರ ಆಶೀರ್ವಾದದಂತೆ ಮಳೆ ಬರುವ ಮೂಲಕ ಶುಭಪ್ರದವಾಗಿದೆ. ವೈಕುಂಠವನ್ನು ದರ್ಶಿಸಿ ಭಕ್ತರು ಸಾಯಿನಾಥ, ಗಣೇಶ, ಅಯ್ಯಪ್ಪ, ಸುಬ್ರಮಣ್ಯ ಸ್ವಾಮಿಯವರ ದರ್ಶನವನ್ನು ಹಾಗೂ ಪೂಜೆಯನ್ನು ನಡೆಸಿಕೊಂಡು ಪ್ರಸಾದವನ್ನು ತೆಗೆದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಸಾಯಿನಾಥ ಜ್ಞಾನ ಮಂದಿರದ ಧರ್ಮದರ್ಶಿ ನಾರಾಯಣಸ್ವಾಮಿ ತಿಳಿಸಿದರು.

ರೇಷ್ಮೆ ಗೂಡಿಗೆ ಸರ್ಕಾರದಿಂದ 350 ರೂಪಾಯಿಗಳ ಬೆಲೆ ನಿಗದಿಗೊಳಿಸಬೇಕು

0

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಸಂಘವನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ಹಿಂದೆ ಇದ್ದ ಸಮಿತಿಯನ್ನು ವಿಸರ್ಜಿಸಿ ನೂತನ ಶಿಡ್ಲಘಟ್ಟ ತಾಲ್ಲೂಕು ಶಾಖೆಯನ್ನು ರೂಪಿಸುತ್ತಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರೇಷ್ಮೆ ಗೂಡಿಗೆ ಸರ್ಕಾರದಿಂದ 350 ರೂಪಾಯಿಗಳ ಬೆಲೆ ನಿಗದಿಗೊಳಿಸಬೇಕು. ಅದಕ್ಕಿಂತ ಕಡಿಮೆಯಾದಲ್ಲಿ ಸರ್ಕಾರ ಸಹಾಯಧನ ನೀಡಬೇಕು. ಬಯಲುಸೀಮೆ ಪ್ರದೇಶಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹೈನುಗಾರಿಕೆಗೆ ಸಾಕಷ್ಟು ತೊಂದರೆಗಳಿವೆ. ಅವನ್ನು ನಿವಾರಿಸಲು ಕ್ರಮ ಕೈಗೊಳ್ಳುವುದರೊಂದಿಗೆ ಹಾಲಿನ ಬೆಲೆ ಲೀಟರ್ಗೆ 30 ರೂಪಾಯಿ ನಿಗದಿಗೊಳಿಸಬೇಕು. ರೈತರ ಮೋಟರ್ ಪಂಪ್ಸೆಟ್ಗಳಿಗೆ ಬೆಸ್ಕಾಂ ಮೀಟರ್ ಅಳವಡಿಸುವುದನ್ನು ನಿಲ್ಲಿಸಬೇಕು. ರೈತ ದಿನಾಚರಣೆಗೆ ರಜಾ ಘೋಷಿಸಬೇಕು. ರಾಜಕೀಯ ಮುಖಂಡರು ಶಾಶ್ವತ ನೀರಾವರಿ ವಿಚಾರದಲ್ಲಿ ಸುಳ್ಳಿ ಭರವಸೆಗಳನ್ನು ನೀಡುವುದನ್ನು ನಿಲ್ಲಿಸಿ ರೈತರೊಂದಿಗೆ ಹೋರಾಟಕ್ಕಿಳಿಯಬೇಕು. ಎಲ್ಲಾ ಸಂಘ ಸಂಸ್ಥೆಗಳೂ ಒಗ್ಗೂಡಿ ಶಾಶ್ವತ ನೀರಾವರಿಗೆ ಹೋರಾಡಬೇಕೆಂದು ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪುಟ್ಟಣ್ಣನವರ ಬಣದ ಜಿಲ್ಲಾ ಘಟಕದ ಉಪಾಧ್ಯಕ್ಷ ಮುನಿಕೆಂಪಣ್ಣ, ಟಿ.ಆರ್.ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಗೌರವಾಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ನಾಗರಾಜು, ಉಪಾಧ್ಯಕ್ಷ ಡಿ.ವಿ.ನಾರಾಯಣಸ್ವಾಮಿ, ನಾಗರಾಜು, ಸುರೇಶ್, ರಾಮಮೂರ್ತಿ, ಬೈರಪ್ಪ, ಬಾಲಮುರಳಿ, ಹನುಮಂತಯ್ಯ, ಮುನೇಗೌಡ, ಆಂಜಿನಪ್ಪ, ಮುರಳಿ, ಮುನಿಶಾಮಗೌಡ, ನಾಗೇಶ್, ಚಂದ್ರಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಭೆ

0

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಕಾಲೇಜು ಅಭಿವೃದ್ಧಿ ಸಮಿತಿಯ ಸಭೆ ನಡೆಯಿತು.
ಈಚೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ಸಂಗಟನೆಗಳ ನೇತೃತ್ವದಲ್ಲಿ ಕಾಲೇಜಿನ ಮೂಲಭೂತ ಸೌಕರ್ಯಗಳ ಕೊರತೆಯನ್ನು ಸರಿಪಡಿಸಿಲ್ಲವೆಂದು ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಯಲ್ಲಿ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಂ.ರಾಜಣ್ಣ ಅವರು ಭಾಗವಹಿಸಿದ ಸಭೆಯು ಪ್ರಾಮುಖ್ಯತೆ ಪಡೆದಿತ್ತು.
ಸಭೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಆನಂದ್,ಕಾಲೇಜಿನ ಸಮಸ್ಯೆಗಳ ಕುರಿತಂತೆ ಮನವಿ ಪತ್ರವನ್ನು ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸರಿಯಾದ ಕಾಂಪೋಂಡ್ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೆ ಶೈಕ್ಷಣಿಕ ವಾತಾವರಣ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಸುಭದ್ರ ಕಾಂಪೋಂಡ್ ಇಲ್ಲದೆ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಬೆಳಿಗ್ಗೆ ಕಾಲೇಜು ಪ್ರಾರಂಭವಾಗುವ ವೇಳೆಗೆ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಮುಜುಗರ ಪಡುವ ಸನ್ನಿವೇಶ ಉಂಟಾಗಿರುತ್ತದೆ. ಸುಭದ್ರ ಕಾಂಪೋಂಡ್, ಹೆಣ್ಣುಮಕ್ಕಳಿಗೆ ಶೌಚಾಲಯ, ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ, ಕಿಟಕಿಗಳ ಗಾಜು ಒಡೆದಿರುವುದರಿಂದ ಪೂರಕ ದುರಸ್ಥಿ, ಪ್ರಯೋಗಾಲಯಗಳು, ರಾತ್ರಿ ಪಾಳಿಯ ಕಾವಲುಗಾರನ ವ್ಯವಸ್ಥೆ ಮುಂತಾದ ಸೌಕರ್ಯಗಳನ್ನು ಒದಗಿಸುವಂತೆ ಮನವಿಯಲ್ಲಿ ಸಲ್ಲಿಸಿದರು.
ಸಭೆಯಲ್ಲಿ ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಈಗಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅತಿ ಶೀಘ್ರವಾಗಿ ಕಾಲೇಜಿಗೆ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಈಚೆಗೆ ವಿದ್ಯಾರ್ಥಿಗಳು ಸಂಘಟನೆಗಳ ಮುಖಂಡರೊಂದಿಗೆ ನಮ್ಮ ಮನೆಯ ಮುಂದೆ ಪ್ರತಿಭಟಿಸುವಾಗ ಅನುಚಿತವಾಗಿ ವರ್ತಿಸಿದ್ದು ಮನಸ್ಸಿಗೆ ಬೇಸರವಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಯವರಿಗೆ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ದೂರು ನೀಡಿದ್ದೇನೆ’ ಎಂದು ಹೇಳಿದರು.
‘ಶಿಡ್ಲಘಟ್ಟದ ಮೊಟ್ಟಮೊದಲ ಪುರಸಭಾ ಅಧ್ಯಕ್ಷರಾಗಿದ್ದ ಬಿ.ಎಂ.ವಿರೂಪಾಕ್ಷಪ್ಪನವರು ಕಟ್ಟಿಸಿ ದಾನವಾಗಿ ಸರ್ಕಾರಕ್ಕೆ ನೀಡಿದ್ದ ಈಗಿನ ಕಾಲೇಜು ಕಟ್ಟಡವು ಹಳೆಯದಾಗಿದೆ. ಅದನ್ನು ಪುನಶ್ಚೇತನಗೊಳಿಸಲು 35 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿಸಲಾಗುತ್ತಿದೆ’ ಎಂದು ಅವರು ಹೇಳಿದರು.
ಪ್ರಾಂಶುಪಾಲ ಆನಂದ್, ಅಬ್ದುಲ್ ಸಮದ್, ಬದ್ರಿನಾಥ್, ಸುಬ್ಬಾರೆಡ್ಡಿ, ಚಿಕ್ಕಮುನಿಯಪ್ಪ, ಮಂಜುಳಾ, ದೀಪಕ್, ವೆಂಕಟಶಿವಾರೆಡ್ಡಿ, ಮಧು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಹೊಗಳಿಕೆ ಎನ್ನುವ ಶೂಲ

0

ಮನುಷ್ಯ ಭಾವುಕ ಜೀವಿ ಅರಿಷದ್ವರ್ಗಗಳನ್ನು ಹೊಂದಿದವನು. ಅದರಲ್ಲೂ ಹೊಗಳಿಕೆಗೆ ಅತೀ ಬೇಗ ಸೋಲುತ್ತಾನೆ. ಇದಕ್ಕೆ ಮಕ್ಕಳಿಂದ ಹಿಡಿದು ಮುದುಕರವರೆಗೂ ಯಾರೂ ಹೊರತಲ್ಲ.
ಇಲ್ಲಿ ಹೊಗಳಿಕೆ ಎಂದರೆ ಮೆಚ್ಚುಗೆ ಆತನ/ಆಕೆಯ ಪ್ರತಿಭೆಗೆ ಅಥವಾ ಕೆಲಸಕ್ಕೆ ತುಂಬು ಹೃದಯದಿಂದ ಅಭಿನಂದಿಸುವುದು. ಈ ಮೆಚ್ಚಿಗೆಯೂ ಆರೋಗ್ಯಕರ ಮಟ್ಟದಲ್ಲಿದ್ದರೆ ಒಳ್ಳೆಯದು, ಯಾವುದೊಂದು ಜಾಸ್ತಿ ಆದರೂ ಅದರಿಂದ ಹಾನಿ ತಪ್ಪಿದ್ದಲ್ಲ.
ಮೆಚ್ಚುಗೆ ಎನ್ನುವುದು ಮನುಷ್ಯನ ಸಹಜ ಸ್ವಭಾವ ಅದು ಪ್ರತಿಯೊಬ್ಬರಿಗೂ ಪ್ರೇರಣೆಯ್ನನು ಕೊಡುತ್ತದೆ. ಇನ್ನೂ ಮುಂದೆ ಹೋಗಿ ಹೇಳಬೇಕೆಂದರೆ ಒಂದು ರೀತಿಯಲ್ಲಿ ಹೊಗಳಿಕೆ ಎನ್ನುವುದು “ಗುರುತಿಸುವಿಕೆ”ಯಾಗಿದೆ. (ಐಡೆಂಟಿಟಿ) ನಾವು ಮಾಡಿದ ಒಂದು ಸಣ್ಣ ಕೆಲಸವೇ ಆಗಲಿ ಅದನ್ನು ಗುರುತಿಸಿ ಬೆನ್ನು ತಟ್ಟುವುದರಿಂದ ಕೆಲಸ ಮಾಡಿರುವಾತ/ಕೆ ಗೆ ತನ್ನ ಕೆಲಸದ ಅಥವಾ ತನ್ನ ಸಾಮಥ್ರ್ಯದ “ಗುರುತಿಸುವಿಕೆ”ಯಿಂದ ಸಂತೋಷ, ಹೆಮ್ಮೆಯಾದರೆ, ಹೊಗಳುವಾತ/ಕೆ ಯು ಒಂದು ಮೆಟ್ಟಿಲು ಏರಿ ನಿಂತು ಇನ್ನೊಬ್ಬರ ಕೆಲಸವನ್ನು ಗೌರವಿಸಿ ಮೆಚ್ಚುವಂತ ಗುಣ ಬೆಳೆಸಿಕೊಳ್ಳುವಂತಾಗುತ್ತದೆ.
ಆಶ್ಚರ್ಯವಾಗಬಹುದು ಇದರಲ್ಲಿ ಬೆಳೆಸಿಕೊಳ್ಳುವಂತದ್ದೇನು ಇಲ್ಲದಿರಬಹುದು. ಆದರೆ ಮನೆಯಲ್ಲಿ ಯಾರೂ ಯಾರನ್ನು ಹೊಗಳಿ ಒಂದು ಮಾತನಾಡಲಾರರು. ಹೆಂಡತಿಯ ರಂಗೋಲಿ, ಅಡುಗೆ ಅಚ್ಚುಕಟ್ಟುತನ, ಮಕ್ಕಳ ಆಟಪಾಠ, ಕೆಲಸದವಳ ಕೆಲಸ, ಹೀಗೆ ಯಾವುದನ್ನೂ ನಾವು ಮೆಚ್ಚಿ ಒಂದು ಒಳ್ಳೆ ಮಾತನಾಡುತ್ತೇವೆ? ಪ್ರತಿಯೊಬ್ಬರಿಗೂ ತನ್ನ ಕೆಲಸವನ್ನು ಬೇರೆಯವರು ಗುರುತಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಕಡೇ ಪಕ್ಷ ದಿನ ಅಲ್ಲದಿದ್ದರೂ ಅಪರೂಪಕ್ಕೊಮ್ಮೆ ಒಂದು ಒಳ್ಳೆ ಮಾತನಾಡುತ್ತೇವಾ ನಾವು? ಇಲ್ಲ….. ನಮಗೆ ಅಹಂ! ಇದೇನು ಮಹಾಕೆಲಸ ಎನ್ನುವ ಉಢಾಫೆ. ಆದರೆ ದಿನಚರಿಯಲಿ ಯಾವುದೇ ಕೆಲಸ ಏರುಪೇರಾದರೂ ಕಷ್ಟವೇ ಪ್ರತಿಯೊಂದು ಅದರದರದ್ದೇ ಆದ ಮಹತ್ವ ಹೊಂದಿರುತ್ತದೆ. ಅದನ್ನು ಗುರುತಿಸುವ ಗುಣ ನಾವು ಬೆಳೆಸಿಕೊಳ್ಳಬೇಕಲ್ಲವೇ?
ಮನೆಯ ಮುಂದೆ ಸಣ್ಣ ರಂಗೋಲಿ ಹಾಕುವ ಗೃಹಿಣಿಯಿಂದ ಹಿಡಿದು ಉನ್ನತ ಹುದ್ದೆಗೇರಿದ ಗಂಡಸು/ಹೆಂಗಸಿನ ತನಕ, ಹುಟ್ಟಿದ ಮಗುವಿನಿಂದ ಹಿಡಿದು ಕೊನೆದಿನ ಎಣಿಸುತ್ತಿರುವ ಮುದುಕರವರೆಗೂ ಹೊಗಳಿಕೆ ಪ್ರಭಾವ ಬೀರುತ್ತದೆ. ಮೆಚ್ಚುಗೆಯಲ್ಲಿ ವಿಚಿತ್ರವಾದ ಶಕ್ತಿಯಿದೆ, ಒಮ್ಮೆ ನಿಮ್ಮ ಮನೆ ಕೆಲಸದಾಕೆಗೆ ಅಥವಾ ಮಕ್ಕಳಿಗೆ, ಅಥವಾ ಬೇರೇಯಾರಿಗೇ ಅಗಿರಲಿ ಅವರು ಮಾಡಿದ ಕೆಲಸದ ಬಗ್ಗೆ ಒಳ್ಳೆ ಮಾತನಾಡಿ ಅದರ ಪರಿಣಾಮ ನೀವೇ ಕಾಣುವಿರಿ.
– ರಚನ

ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮ

0

ತಾಲ್ಲೂಕಿನ ಚೀಮಂಗಲದ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ‘ಪುಸ್ತಕ ವಾಚನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕುವೆಂಪು ಜನ್ಮದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಂಗಮಕೋಟೆಯ ‘ನಮ್ಮುಡುಗ್ರು ಬಳಗ’ದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ೨೦ಕ್ಕೂ ಹೆಚ್ಚು ಕಿರಿಯ, ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಆಯ್ದ ಪುಸ್ತಕಗಳನ್ನು ಓದಿ ಅದರ ಅರ್ಥವನ್ನು ವಿವರಿಸುವುದು ಹಾಗೂ ಆ ನಂತರ ಅದರ ಮೇಲೆಯ ರಸಪ್ರಶ್ನೆಯ ಕಾರ್ಯಕ್ರಮ ನಡೆಯಿತು.
ಹಿರಿಯ ಪ್ರಾಥಮಿಕ ಶಾಲೆಗಳ ಪುಸ್ತಕ ವಾಚನ ವಿಭಾಗದಲ್ಲಿ ಆನೂರು ಸರಕಾರಿ ಶಾಲೆ(ಪ್ರಥಮ), ಜಂಗಮಕೋಟೆ ತೋಟಗಳ ಸರಕಾರಿ ಶಾಲೆ(ದ್ವಿತೀಯ) ಹಾಗೂ ತೃತೀಯ ಸ್ಥಾನವನ್ನು ಯಣ್ಣೂರು ಶಾಲೆಯ ಮಕ್ಕಳು ಪಡೆದರು.
ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ಜಂಗಮಕೋಟೆ ತೋಟದ ಶಾಲೆ(ಪ್ರಥಮ), ವರದನಾಯಕನಹಳ್ಳಿಯ ಶಾಲೆ(ದ್ವಿತೀಯ) ಹಾಗೂ ಯಣ್ಣೂರಿನ ಶಾಲೆ ತೃತೀಯ ಬಹುಮಾನ ಪಡೆಯಿತು.
ಮುಖ್ಯ ಶಿಕ್ಷಕ ಶಿವಶಂಕರ್, ಚೀಮಂಗಲ ಗ್ರಾಮ ಪಂಚಾಯತಿ ಅಧ್ಯಕ್ಷ ಈಶ್ವರ್, ಎಸ್ಡಿಎಂಸಿ ಅಧ್ಯಕ್ಷ ಎಂ.ಮಂಜುನಾಥ್, ಸದಸ್ಯ ಪಿ.ಬಿ.ಕೃಷ್ಣಪ್ಪ, ಸಿ.ಕೆ.ಮಂಜುನಾಥ್, ನಮ್ಮುಡಗ್ರು ಬಳಗದ ವಿಜಯಕುಮಾರ್, ಮೋಹನ್, ಸಹಶಿಕ್ಷಕರಾದ ರಾಜೀವ್ಗೌಡ, ನಾಗೇಶ್, ನಾಗವೇಣಿ, ಮಮತ, ಲಕ್ಷ್ಮಿ, ಶ್ರೀನಿವಾಸ್, ವೆಂಕಟೇಶ್, ತೀರ್ಪುಗಾರರಾಗಿ ಶ್ರೀಕಂಠ, ಪ್ರಶಾಚಿತ್, ಸವಿತ, ಪ್ರವೀಣ್, ಸುರೇಶ್ ಮತ್ತಿತರರು ಹಾಜರಿದ್ದರು.

error: Content is protected !!