23.1 C
Sidlaghatta
Tuesday, July 23, 2024

ಗ್ರಾಮೀಣ ಪ್ರದೇಶದಲ್ಲಿ ಇಂಗ್ಲೀಷ್ ಕಲಿಕೆ

- Advertisement -
- Advertisement -

ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಳಿದೆಲ್ಲ ವಿಷಯಗಳಿಗಿಂತ ಇಂಗ್ಲೀಷ್ ಕಲಿಕೆ ಕಬ್ಬಿಣದ ಕಡಲೆ. ಉಳಿದೆಲ್ಲ ವಿಷಯಗಳಲ್ಲೂ ಅತ್ಯುತ್ತಮ ಅಂಕಗಳಿಸಿದರೂ ಸಹ – ಇಂಗ್ಲೀಷ್‍ಲ್ಲಿ ಕಡಿಮೆ ಅಂಕಗಳು ಅಥವಾ ಅನುತ್ತೀರ್ಣ. ಯಾಕೆ ಹೀಗೆ? ಗಣಿತ – ವಿಜ್ಞಾನಗಳ ಕಲಿಕೆಗಿಂತ ಇಂಗ್ಲೀಷ್ ಕಲಿಕೆ ಕಷ್ಟ ಎಂದು ಭಾವಿಸುವುದರ ಹಿಂದಿನ ಕಾರಣಗಳೇನು? ವಿಚಾರಿಸಿದಾಗ ಸಹಜವಾಗಿ ಸಿಗುವ ಉತ್ತರವೆಂದರೆ ಅದು ಪರಭಾಷೆ. ಹಾಗಾಗಿ ಕಲಿಕೆ ಕಷ್ಟ ಎನ್ನುವುದು ಪ್ರಾಥಮಿಕ ಹಂತದಲ್ಲಿ ದೊರಕುವ ಉತ್ತರವಾದರೆ, ಆನಂತರದಲ್ಲಿ ಹಿಂದಿನ ತರಗತಿಗಳಲ್ಲಿ ನಮಗದನ್ನು ಸರಿಯಾಗಿ ಕಲಿಸಿಲ್ಲ ಎಂಬುದು ವಿದ್ಯಾರ್ಥಿಗಳಿಂದ ದೊರಕುವ ಉತ್ತರ. ಬಹಳಷ್ಟು ಶಿಕ್ಷಕರದ್ದು ಇದೇ ಮಾತು. ಇದೆಲ್ಲ ವಾಸ್ತವವನ್ನು ಸ್ವಲ್ಪಮಟ್ಟಿಗೆ ತಿಳಿಸಿದರೂ ಸಮಸ್ಯೆಯನ್ನು ತೀರಾ ಸರಳೀಕೃತಗೊಳಿಸದಂತೆ ಭಾಸವಾಗುತ್ತದೆ.
ಯಾವುದೇ ಭಾಷೆಯ ಅರಿವು ಪ್ರಾಪ್ತವಾಗುವುದು ಪರಿಸರದ ಪ್ರಭಾವದಿಂದ. ನಮ್ಮ ಸುತ್ತ-ಮುತ್ತಲಿನ ಜನರ ಆಡುಭಾಷೆ ತನ್ನಿಂದ ತಾನೇ ನಮಗೆ ದಕ್ಕುತ್ತ ಸಾಗುತ್ತದೆ. ಅದರಲ್ಲಿ ಯಾವುದೇ ವಿಶೇಷವಿಲ್ಲ. ಆದರೆ ಪರಿಸರದಲ್ಲಿ ಪಸರಿಸಿರದ ಭಾಷೆಯೊಂದು ನಮಗೆ ದಕ್ಕಬೇಕೆಂದಾದರೆ ಅದಕ್ಕೆ ಪೂರಕವಾದ ಪರಿಸರಬೇಕು ಅಥವಾ ಪ್ರಯತ್ನ ಬೇಕು. ಇವೆರಡೂ ಇರದ ಸ್ಥಿತಿಯಲ್ಲಿ ಕಲಿಕೆ ಕಷ್ಟವಷ್ಟೆ ಅಲ್ಲ ಅಸಾಧ್ಯ ಕೂಡಾ. ಇಂಗ್ಲೀಷ್ ಕಲಿಕೆ ಕಷ್ಟವಾಗಿರುವುದಕ್ಕೆ ಮೂಲ ಕಾರಣ ಆ ಪರಿಸರ ಇರದಿರುವುದು ಮತ್ತು ಪ್ರಯತ್ನದಲ್ಲಿ ದೋಷ ಅಥವಾ ಕೊರತೆ ಅಷ್ಟೇ ಹೊರತೂ ಅದು ಕಷ್ಟದ ಭಾಷೆ – ಪರಭಾಷೆ ಎಂದು ಕಾರಣ ಕೊಡಲಾಗುವುದಿಲ್ಲ. ಆ ಭಾಷೆಯ ಕುರಿತು ನಾವು ಯಾರೇ ಏನನ್ನೇ ಹೇಳಿದರೂ ವಾದ ಮಾಡಿದರೂ ಅದು ವ್ಯರ್ಥ. ಯಾಕೆಂದರೆ ಅದರ ಕಲಿಕೆ ಇಂದಿನ ಅಗತ್ಯ. ಹಾಗಾಗಿ ನಮ್ಮ ಗಮನವಿರಬೇಕಾದದ್ದು ಅದರ ಸಮರ್ಪಕ ಕಲಿಕೆಯ ಕುರಿತಾಗಿ ಮಾತ್ರ. ಕೇವಲ ಹೇಳಿಕೆಗಳಿಂದ ಅಥವಾ ಪಠ್ಯಕ್ರಮದಲ್ಲಿ ಪದೇ ಪದೇ ಬದಲಾವಣೆ ತರುವುದರಿಂದ ಯಾವ ಉದ್ದೇಶವೂ ಅಷ್ಟಾಗಿ ಈಡೇರಿದಂತೆ ಕಾಣುವುದಿಲ್ಲ. ಬದಲಿಗೆ ಅದರ ಕಲಿಕೆಗೆ ಕೈಗೊಂಡ ಕ್ರಮಗಳು ಮತ್ತು ಅವುಗಳಿಂದಾದ ಪ್ರಯೋಜನಗಳ ಅಧ್ಯಯನದ ಅನಂತರವಷ್ಟೆ ಹೊಸ ಸುಧಾರಣೆಗಳಿಗೆ ಮುಂದಾಗುವುದು ಉಚಿತ ಕ್ರಮವಾದೀತು.
ಇತ್ತೀಚಿಗೆ ದೊಡ್ಡ ದೊಡ್ಡ ಹಳ್ಳಿಗಳಲ್ಲೂ ಸಹಿತ ಇಂಗ್ಲೀಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿವೆ ನಿಜ. ಆದರೂ ಬಹುಸಂಖ್ಯಾತ ಹಳ್ಳಿಗಳಲ್ಲಿ ಕನ್ನಡ ಶಾಲೆಗಳೇ ಇವೆ. ಹಿಂದೆ ಐದನೇಯ ತರಗತಿಯಿಂದ ಇಂಗ್ಲೀಷ್ ಕಲಿಕೆ ಪ್ರಾರಂಭಿಸುತ್ತಿದ್ದರು. ಈಗ ಒಂದನೆಯ ತರಗತಿಯಿಂದಲೇ ಪ್ರಾರಂಭಿಸಲು ಯೋಚನೆ, ಯೋಜನೆಗಳು ತಯಾರಾಗುತ್ತಿವೆ. ಅದೇನೇ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತವರು ಬಹುತೇಕ ಕೃಷಿಕರು ಮತ್ತು ಇನ್ನಿತರ ಚಿಕ್ಕ-ಪುಟ್ಟ ಉದ್ಯೋಗದಲ್ಲಿ ತೊಡಗಿದವರು. ಅವರಲ್ಲಿ ಹಲವರು ಅನಕ್ಷರಸ್ಥರು. ಅಕ್ಷರಸ್ಥರಾದವರೂ ಕೂಡ ಕನ್ನಡ ಮಾಧ್ಯಮದಲ್ಲಿ ಮಾತ್ರ ಅಷ್ಟಷ್ಟು ಕಲಿತವರು. ಹೀಗಾಗಿ ಶಾಲೆಗೆ ಬರುವ ಅವರ ಮಕ್ಕಳು ಸಂಪೂರ್ಣವಾಗಿ ತಮ್ಮ ಕಲಿಕೆಗೆ ಶಾಲೆಯ ಶಿಕ್ಷಕರನ್ನೇ ಅವಲಂಬಿಸಿರುತ್ತಾರೆ.
ಮನೆಯಲ್ಲಿ ಹೇಳಿಕೊಡುವವರಲ್ಲಿ, ತಪ್ಪುಗಳನ್ನು ತಿದ್ದುವವರಲ್ಲಿ, ಒತ್ತಾಯಿಸುವ ಸ್ಥಿತಿಯೂ ಇಲ್ಲ, ಹೀಗಾಗಿ ಮಕ್ಕಳ ಕಲಿಕೆ ಶಾಲೆಯ ಕೊಠಡಿಯೊಳಗೆ ಮಾತ್ರ. ಹೀಗಾಗಿ ಅವರಿಗೆಲ್ಲ ಇಂಗ್ಲೀಷ್ ಕಲಿಕೆಗೆ ಪೂರಕ ವಾತಾವರಣವೇ ಲಭ್ಯವಾಗುವುದಿಲ್ಲ. ಕಲಿಕೆ ಏನಿದ್ದರೂ ತರಗತಿಯಲ್ಲಿ. ಇಂಗ್ಲೀಷ್ ಕಲಿಕೆ ದಿನದಲ್ಲಿ ಒಂದು ಗಂಟೆ. ಅದೂ ಭಾಷಾಂತರ ಕ್ರಮದಲ್ಲಿ! ಇದರೊಟ್ಟಿಗೇ ಇತರ ವಿಷಯಗಳನ್ನು ಅವರು ಕಲಿಯುತ್ತಿರುತ್ತಾರೆ. ಆ ಎಲ್ಲಾ ಇತರ ವಿಷಯಗಳೂ ಕನ್ನಡ ಮಾಧ್ಯಮದಲ್ಲಿ. ನಿಜ ಹೇಳಬೇಕೆಂದರೆ ಎಲ್ಲಾ ಶಿಕ್ಷಕರೂ ಕನ್ನಡ ಶಿಕ್ಷಕರು ಬೋಧನೆಯ ವಿಷಯ ಬೇರೆ ಬೇರೆ. ಇಂಗ್ಲಿಷ್ ಶಿಕ್ಷಕರು ಮಾತ್ರ ಒಂದಿಷ್ಟು ಇಂಗ್ಲೀಷನ್ನು ಅರ್ಥಮಾಡಿಸಲು ಅನುವಾದವನ್ನು ಬಳಸಿದಾಗ ದ್ವಿಭಾಷಾ ಕಲಿಕೆ!
ಶಾಲೆಯ ಅವಧಿ ಮತ್ತು ಮನೆಯಲ್ಲಿ ಓದಿಕೊಳ್ಳುವ ಅವಧಿಯಲ್ಲಿ ಬಹುತೇಕ ಅವಧಿ ಕನ್ನಡ ಮಾಧ್ಯಮದಲ್ಲಿ ಸಾಗುತ್ತಿರುವುದರಿಂದ ಇಂಗ್ಲೀಷ್ ಕಷ್ಟವಾಗುತ್ತದೆ. ದಿನಕ್ಕೆ ಕನಿಷ್ಠ ಒಂದೆರೆಡು ಗಂಟೆಗಳನ್ನು ಇಂಗ್ಲೀಷ್ ಕಲಿಕೆಗೆ ಉಪಯೋಗಿಸುವುದಿಲ್ಲ. ಕನ್ನಡ ಸುಲಭವಾಗಿ ದಕ್ಕಿದ್ದರಿಂದ ಅದನ್ನೆ ಮತ್ತೆ ಮತ್ತೆ ಓದುತ್ತ ಇಂಗ್ಲೀಷನ್ನು ನಿರ್ಲಕ್ಷಿಸುತ್ತ ಪರೀಕ್ಷೆಗಳು ಎದುರಾದಾಗ ಮಾತ್ರ ಜ್ಞಾಪಿಸಿಕೊಳ್ಳುತ್ತ ಸಾಗಿದರೆ, ಅದು ನಿಜಕ್ಕೂ ಕಷ್ಟವೇ ಆಗುತ್ತದೆ. ಇದರ ಜೊತೆಗೆ ಎಲ್ಲಾ ವಿಷಯಗಳನ್ನು ಕನ್ನಡದಲ್ಲೇ ಬರೆದು ಬರೆದೂ, ಬರೆಯಲು ಕೈ ಕೂತಿರುತ್ತದೆ. ಇಂಗ್ಲೀಷ್‍ನ್ನು ಪರೀಕ್ಷೆಯಲ್ಲಿ ಮಾತ್ರ ಬರೆಯಲು ಕುಳಿತರೆ ಅದು ಕೈಕೊಡುತ್ತದೆ. ಕೊನೆಗೆ ಬರೆಯಲು ವೇಳೆಯೇ ಸಾಕಾಗಿಲ್ಲ ಎಂದು ಪರಿತಪಿಸುತ್ತಾರೆ. ಇಂಗ್ಲೀಷ್‍ನ್ನು ಕೇವಲ ಪರೀಕ್ಷಾ ದೃಷ್ಟಿಯಿಂದ ಉತ್ತೀರ್ಣಗೊಳ್ಳುವುದಕ್ಕಷ್ಟೇ ಸೀಮಿತಗೊಳಿಸಿಕೊಂಡರೆ ಅದು ಉಪಯೋಗಕ್ಕೆ ಬರುವುದಿಲ್ಲ. ಮುಂದಿನ ತರಗತಿಗಳಿಗೆ ಹೋದರೂ ಹಿಂದಿನ ಪುನರಾವರ್ತನೆ ಅನಿವಾರ್ಯವಾಗುತ್ತದೆ.
ಇಂಥ ಸ್ಥಿತಿಗೆ ಹಳಿಯುವುದು ಯಾರನ್ನು? ಯಾವುದನ್ನು? ಒಟ್ಟಾರೆ ಸ್ಥಿತಿಯನ್ನರಿತು ಸುಧಾರಿಸಲು ಪ್ರಯತ್ನಿಸುವುದು ಸೂಕ್ತವಾದ ಕ್ರಮ. ತಕ್ಷಣ ಈ ನಿಟ್ಟಿನಲ್ಲಿ ಕಾರ್ಯ ತತ್ಪರರಾಗದಿದ್ದರೆ ಕೊನೆಯವರೆಗೂ ಇದೇ ಸ್ಥಿತಿ ಮುಂದುವರಿಯುತ್ತದೆ. ಆದ್ದರಿಂದ ನಾವೀಗ ವರ್ತಮಾನದ ಅಗತ್ಯಗಳನ್ನು ಗಮನಿಸದೇ ಬೇರೆ ವಿಧಿಯಿಲ್ಲ.
1. ಗುಣ್ಮಾತಕ ಚಿಂತನೆ ಅಗತ್ಯ – ಬೇರೆಯವರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಕೆಳಗಣ ಶಿಕ್ಷಕರನ್ನು ನಿಂದಿಸಿದ ಮಾತ್ರಕ್ಕೆ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಬರುವುದಿಲ್ಲ. ಬದಲಿಗೆ ಹಿಂದಿನದ್ದು ಆಯಿತು, ಮುಂದಿನ ಕುರಿತು ಯೋಚಿಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ. ಅವರೆಷ್ಟು ಕಲಿಸಿದ್ದಾರೆ ಎಂದು ಕೇಳುವುದಕ್ಕಿಂತ ನಾವೆಷ್ಟು ಕಲಿಸಬಹುದೆಂದು ನೋಡುವುದು ಒಳ್ಳೆಯದು.
2. ಭಾಷಾ ತಿಳುವಳಿಕೆ ಬೇರೆ ಭಾಷೆಯ ಕುರಿತಾದ ತಿಳುವಳಿಕೆ ಬೇರೆ! ನಮಗೆ ಅಗತ್ಯವಾದ್ದು ಭಾಷಾ ತಿಳುವಳಿಕೆ. ಅನೇಕರು ಕನ್ನಡವನ್ನು ತಪ್ಪಿಲ್ಲದೆ ಮಾತನಾಡುತ್ತಾರೆ. ಆದರೆ ಅವರಿಗೆ ಅದರ ವ್ಯಾಕರಣ ಕೇಳಿದರೆ ಗೊತ್ತಿರುವುದಿಲ್ಲ. ಹಾಗಂತ ಅವರಿಗೆ ಭಾಷಾ ಪ್ರಬುದ್ಧತೆ ಇಲ್ಲವೆನ್ನಲಾಗದು. ಹಾಗಾಗಿ ಭಾಷೆಯ ಕುರಿತಾದ ತಿಳುವಳಿಕೆಯನ್ನು ನೀಡುವುದರಲ್ಲೆ ಹೆಚ್ಚು ಹೆಚ್ಚು ಕಾಲಹರಣ ಮಾಡುವುದಕ್ಕಿಂತ ಒಟ್ಟಾರೆ ಭಾಷೆ ಸಂವಹನ ಕಲೆಗೆ ಒತ್ತು ನೀಡುವುದು ಒಳ್ಳೆಯದು. ನಾವು ಗಮನಿಸಬೇಕಾದ ಅಂಶವೆಂದರೆ ಪರೀಕ್ಷೆಯಲ್ಲಿ ಅದೂ ಇಂಗ್ಲಿಷ್‍ನಲ್ಲಿ ಮಾತನಾಡಲು ಬಾರದಿದ್ದರೆ ಬಹುರಾಷ್ಟ್ರೀಯ ಕಂಪನಿಗಳು ಅವರನ್ನು ಆಯ್ಕೆಮಾಡಿಕೊಳ್ಳುವುದಿಲ್ಲ.
3. ಒಂದು ಭಾಷೆಯ ಮೇಲೆ ಹಿಡಿತವಿದ್ದರೆ ಇನ್ನೊಂದು ಭಾಷೆಯ ಕಲಿಕೆ ಸಾಧ್ಯ. ಕನ್ನಡ ಭಾಷಾ ಕಲಿಕೆ ಉತ್ತಮವಾದಷ್ಟೂ ಉಳಿದ ಭಾಷಾ ಕಲಿಕೆ ಸುಲಭವಾಗುತ್ತದೆ. ಯಾಕೆಂದರೆ ಇಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಹೊರಗಿಟ್ಟು ಇಂಗ್ಲೀಷ್ ಕಲಿಯಲಾಗಲಿ, ಕಲಿಸಲಾಗಲಿ ಸಾಧ್ಯವಿಲ್ಲ ಎಂಬಂತಹ ವಾತಾವರಣವಿದೆ. ನಮ್ಮ ಯೋಚನಾ ಕ್ರಮವೇನಿದ್ದರೂ ಮೊದಲು ನಮ್ಮ ನುಡಿಯಲ್ಲಾಗಿ ಅನಂತರ ಇಂಗ್ಲೀಷ್‍ಗೆ ತರ್ಜುಮೆಗೊಳ್ಳುತ್ತದೆ.
ವ್ಯಾಕರಣ ಮತ್ತು ಶಬ್ದಗಳ ಬಳಕೆ:
ಭಾಷಾ ಕಲಿಕೆಗೆ ವ್ಯಾಕರಣ ಸೂತ್ರಗಳು ಮುಖ್ಯ ನಿಜ. ಆದರೆ ಕೇವಲ ವ್ಯಾಕರಣವನ್ನು ಹಾಗೇ ಕಲಿಸಿದರೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇಳಿಯುವುದು ಕಷ್ಟ.
ಅನಂತರ ಬಳಕೆ ಕೂಡ ಕಷ್ಟವೆನ್ನಿಸಬಹುದು. ಹಾಗಾಗಿ ಸಾಂದರ್ಭಿಕತೆಯನ್ನು ಅನುಸರಿಸಿ ವ್ಯಾಕರಣವನ್ನು ಭೋಧಿಸುವ ಕ್ರಮವನ್ನು ಅನುಸರಿಸಿ ವ್ಯಾಕರಣವನ್ನು ಭೋಧಿಸುವ ಕ್ರಮ ಹೆಚ್ಚು ಆಪ್ತವಾಗಬಹುದು. ಜೊತೆಗೆ ಶಬ್ದ ರಚನೆಯಲ್ಲಿ ಶುದ್ಧತೆ ಹೆಚ್ಚು ಆಪ್ತವಾಗಬಹುದು. ಜೊತೆಗೆ ಶಬ್ದ ರಚನೆಯಲ್ಲಿ ಶುದ್ಧತೆ ಇರುವಂತೆ ಮಾಡುವುದು ಹೆಚ್ಚು ಮುಖ್ಯ. ಯಾಕೆಂದರೆ ಪರೀಕ್ಷೆಯ ಉತ್ತರ ಪತ್ರಿಕೆಗಳು ಮೌಲ್ಯಮಾಪನ ಸಂದರ್ಭದಲ್ಲಿಯೂ ತಪ್ಪಾಗಿ ಬರೆದ ಶಬ್ದಗಳಿಗೆಲ್ಲ ಕೆಂಪು ಶಾಯಿಯ ಪ್ರದಕ್ಷಿಣಿಯಾಗುತ್ತ ಅಂಕಗಳು ಕಡಿಮೆಯಾಗುತ್ತ ಹೋಗುತ್ತದೆ. ಯಾಕೆಂದರೆ ವ್ಯಾಕರಣದ ಸೂಕ್ಷ್ಮಗಳಿಗಿಂತ ಮೇಲ್ನೊಟಕ್ಕೇ ಶಬ್ದದ ಶುದ್ಧ ರೂಪ ಗೋಚರಿಸಿ ಬಿಡುತ್ತದೆ?
ಪ್ರತಿ ವಿದ್ಯಾರ್ಥಿಯೂ ಒಂದು ಘಟಕ
ಭಾಷಾ ಕಲಿಕೆಯ ಸಂದರ್ಭದಲ್ಲಿ ಪ್ರತಿ ವಿದ್ಯಾರ್ಥಿಯೂ ಒಂದೇ ಮಟ್ಟದಲ್ಲಿ ಕಲಿಯಲಾರರು. ಎಲ್ಲಿ ವಿದ್ಯಾರ್ಥಿಗಳೂ ಒಂದೇ ಮಟ್ಟದಲ್ಲಿ ಕಲಿಯಲಾರರೋ ಅಲ್ಲಿ ವಿದ್ಯಾರ್ಥಿಗಳೂ ಒಂದೇ ರೀತಿಯ ತಪ್ಪು ಮಾಡಲಾರರು. ಪ್ರತಿಯೊಬ್ಬರು ಪ್ರತ್ಯೇಕವಾದ ತಪ್ಪುಗಳು ಅವರರದ್ದೇ ಆದ ಅನುಮಾನಗಳಿರುತ್ತದೆ. ಹಾಗಾಗಿ ವೈಯಕ್ತಿಕ ಗಮನ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ವರ್ಕ್‍ಬುಕ್ ಕೊಟ್ಟು ತರಗತಿಯಲ್ಲಿ 100-150 ವಿದ್ಯಾರ್ಥಿಗಳಿದ್ದರೆ ಯಾವ ಶಿಕ್ಷಕನಿಗೇ ಆದರೂ ಅಷ್ಟುನ್ನು ಗಮನಿಸಿ ತಿದ್ದುವುದು ಸಾಧ್ಯವಾಗದು. ಹಾಗಾಗಿ ಇಂಗ್ಲೀಷ್ ಬೋಧಕರ ಸಂಖ್ಯೆಯನ್ನು ಹೆಚ್ಚಿಸುವುದು ಮತ್ತು ತರಗತಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಒಂದು ಮಿತಿಯೊಳಗಿದ್ದಲ್ಲಿ ಶಿಕ್ಷಕರು ಜವಾಬ್ದಾರಿಯಿಂದ ವೈಯಕ್ತಿಕವಾಗಿ ಗಮನಕೊಟ್ಟು ಕಲಿಸಲು ಸಾಧ್ಯ. ಮತ್ತು ಇಂಗ್ಲೀಷ್ ಕಲಿಕೆಗೆ ಪೂರಕವಾದ ವಾತಾವರಣ ಸ್ವಲ್ಪವಾದರೂ ಲಭ್ಯವಾಗುವ ದೃಷ್ಟಿಯಿಂದ ಇಂಗ್ಲೀಷ್ ಭಾಷಾ ಕಲಿಕೆಯ ಬೋಧನಾವಧಿಯನ್ನು ಹೆಚ್ಚಿಸುವುದು ಒಳ್ಳೆಯದು. ಹೀಗಾದ ಪಕ್ಷದಲ್ಲಿ ಹಂತ ಹಂತವಾಗಿ ಸರಿಯಾಗಿ ಇಂಗ್ಲಿಷ್ ಕಲಿಕೆ ಸಾಧ್ಯವಾಗಬಹುದು.
ಹಿಂಜರಿಕೆಯನ್ನು ಮೀರುವುದು ಮುಖ್ಯ. ಕನ್ನಡ ಅಥವಾ ಯಾವುದೇ ಪ್ರಾದೇಶಿಕ ಭಾಷೆಯನ್ನು, ಆ ಪ್ರದೇಶದ ಮಗು ಮಾತನಾಡುವಾಗ ಸಂಕೋಚಕ್ಕೊಳಗಾಗುವುದಿಲ್ಲ. ಹಿಂಜರಿಕೆಗೆ ಒಳಗಾಗುವುದಿಲ್ಲ. ಒಳಗಿನ ಧೈರ್ಯದಿಂದ ಮಾತನ್ನಾಡುತ್ತದೆ. ಅದೇ ಇಂಗ್ಲೀಷ್ ವಿಷಯ ಬಂದಾಗ ಬಾಯಿಬಿಡುವುದಿಲ್ಲ ಹಿಂಜರಿಕೆ ಎಲ್ಲಿ ಏನು ತಪ್ಪಾಗುತ್ತದೆಯೋ? ಎಂಬ ಭಯ. ಮೊದಲು ಇದು ತಪ್ಪಬೇಕು. ಕನ್ನಡ ಮಾತನಾಡುವ ಅಥವಾ ಬರೆಯುವ ಎಷ್ಟು ಮಂದಿಯಲ್ಲಿ ಭಾಷಾ ಶುದ್ಧಿಯಿರುತ್ತದೆ? ನಾವು ಅದನ್ನು ಯೋಚಿಸುವುದಿಲ್ಲ. ಪರೀಕ್ಷಿಸಿದರೆ ಮಾತ್ರ ತಪ್ಪುಗಳು ಗೋಚರಿಸುತ್ತವೆ. ತಲೆಕೆಡಿಸಿಕೊಳ್ಳುವುದಿಲ್ಲ ಹಾಗೇ ಇಂಗ್ಲೀಷನ್ನು ಬಳಸಿ ಅಲ್ಲಲ್ಲಿ ಅಷ್ಟಿಷ್ಟು ತಪ್ಪುಗಳಾದರೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಆದರೆ ಅವುಗಳನ್ನು ತಿದ್ದಿಕೊಳ್ಳುವುದಕ್ಕೆ ಮುಕ್ತ ಮನಸ್ಸನ್ನು ಹೊಂದಿರಬೇಕು. ಅಂದರೆ ಮಾತ್ರ ಬೆಳೆಯಲು ಸಾಧ್ಯ.
ರವೀಂದ್ರ ಭಟ್ ಕುಳಿಬೀಡು

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!