‘ಬಾಹ್ಯಾಕಾಶ ನಿಲ್ದಾಣ’ ಹೆಸರನ್ನು ಕೇಳಿದರೆ ಬಾಹ್ಯ ಆಕಾಶದಲ್ಲಿ ಒಂದು ನಿಂತಿರುವ ತಾಣ ಇದೆಯೇ ಎಂಬ ಶಂಕೆ ಮೂಡುವುದು ಸಹಜ. ಆದರೆ ಈ ವಿಶ್ವದಲ್ಲಿ ಯಾವ ವಸ್ತುವೂ ನಿಶ್ಚಲವಾಗಿರಲು ಸಾಧ್ಯವಿಲ್ಲ. ನಾವು, ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಗೆಲಾಕ್ಸಿಗಳು ಸದಾಕಾಲ ಚಲಿಸುತ್ತಲೇ ಇವೆ. ಅತಿ ಸರಳವಾಗಿ ಹೇಳುವುದಾದರೆ, ಅಂತರ್ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಇಂಟರ್‍ನಾಷನಲ್ ಸ್ಪೇಸ್ ಸ್ಟೇಶನ್ ಅಥವಾ ಐಎಸ್‍ಎಸ್ ಭೂಮಿಯ ಸುತ್ತ ಹಾರಾಡುತ್ತಿರುವ ಒಂದು ಕೃತಕ ಉಪಗ್ರಹ.
ಐಎಸ್‍ಎಸ್ ಹಾರಾಟ ಮೂಲತಃ ಒಂದು ವೈಜ್ಞಾನಿಕ ಪ್ರಯೋಗ. ಅಂತರಿಕ್ಷದಲ್ಲಿ ಆದಷ್ಟು ಹೆಚ್ಚು ದಿನ ಇದ್ದುಕೊಂಡು, ಬಾಹ್ಯ ಜಗತ್ತಿನ ವಿದ್ಯಮಾನಗಳಲ್ಲಿ ಸಾಧ್ಯವಾದಷ್ಟನ್ನೂ ದಾಖಲಿಸುತ್ತ, ವಾಯುಮಂಡಲದ ಸುರಕ್ಷೆ ಇಲ್ಲದಿರುವ ಹಾಗೂ ಅಲ್ಪ ಗುರುತ್ವವಿರುವ ಪರಿಸರದಲ್ಲಿ ಮಾನವ ದೇಹ ದೀರ್ಘಕಾಲದವರೆಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಪರೀಕ್ಷಿಸುತ್ತ, ಆ ಮೂಲಕ ಮುಂದೆ ಅನ್ಯಗ್ರಹಗಳಿಗೆ ಹಾರುವ ಮಾನವ ಕನಸನ್ನು ಸಾಕಾರಗೊಳಿಸುವತ್ತ ಒಂದು ಹೆಜ್ಜೆ.
ದೀರ್ಘಕಾಲ ಅಂತರಿಕ್ಷದಲ್ಲಿ ಹಾರಾಡುವ ಮಾನವಸಹಿತ ನೌಕೆಯ ಯೋಜನೆಗೆ ಹತ್ತಾರು ಪ್ರಯತ್ನಗಳಿಂದಲೂ ಯಶಸ್ಸು ಸಿಕ್ಕಿರಲಿಲ್ಲ. * ಛಲ ಬಿಡದ ತಿವಿಕ್ರಮನ ಹಾಗೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದ ಅಮೆರಿಕಾ ಮತ್ತು ರಷ್ಯಾದ ವಿಜ್ಞಾನಿಗಳು 1993 ರಲ್ಲಿ ಮತ್ತೂ ಒಮ್ಮೆ ರೂಪಿಸಿದ ಯೋಜನೆಗೆ ಎರಡೂ ದೇಶಗಳ ಸರಕಾರಗಳು ಸಮ್ಮತಿಸಿದವು. ಈ ಸಾಹಸ ಕಾರ್ಯಕ್ಕೆ ತಾವೂ ಕೈಜೋಡಿಸಲು ಐರೋಪ್ಯ ಅಂತರಿಕ್ಷ ಸಂಘ, ಕೆನಡಾ ಮತ್ತು ಜಪಾನ್ ದೇಶಗಳು ಮುಂದೆ ಬಂದವು.
1998ರಲ್ಲಿ ಈ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣ ಆರಂಭವಾಯಿತು.
ಐವತ್ತು ವರ್ಷಗಳ ಹಿಂದೆ ಯೂರಿ ಗ್ಯಾಗರಿನ್ ಮೊಟ್ಟಮೊದಲು ಬಾಹ್ಯಾಕಾಶಕ್ಕೆ ಹಾರಿದ ಕಝಾಕಿಸ್ತಾನದ ಬೈಕನೂರ್ ವಿಶೇಷ ಲಾಂಚ್ ಪ್ಯಾಡಿನಿಂದ ಬಾನಿಗೆ ಜಿಗಿಯಿತು ಐಎಸ್‍ಎಸ್. ಅಂದು ಅದು ‘ಝರ್ಯಾ’ ಹೆಸರಿನ ರಷ್ಯನ್ ಬಾಹ್ಯಾಕಾಶ ನೌಕೆ. ಅದರಲ್ಲಿ ಬರೀ ಯಂತ್ರೋಪಕರಣಗಳು ತುಂಬಿದ್ದವು. ಮಾನವನಿಗೆ ಇರಲು ಹೆಚ್ಚು ಸ್ಥಳಾವಕಾಶವೂ ಇಲ್ಲ, ಬದುಕಲು ಬೇಕಾದ ವಾತಾವರಣವೂ ಅಲ್ಲಿಲ್ಲ. ಆ ವೇಳೆಗಾಗಲೇ ಭೂ ಸುತ್ತ ಹಾರಾಡುತ್ತಿದ್ದ ಇತರ ಕೃತಕ ಮತ್ತು ಮಾನವರಹಿತ ಉಪಗ್ರಹಗಳನ್ನು ಹೋಲುತ್ತಿದ್ದ ಈ ನೌಕೆ ಆಕಾರದಲ್ಲಿ ಮಾತ್ರ ಸ್ವಲ್ಪ ದೊಡ್ಡದು. ಅದು ನೌಕೆಗೆ ಪ್ರಪ್ರಥಮವಾಗಿ ಅಗತ್ಯವಿದ್ದ ಬ್ಯಾಟರಿ ಆಧಾರಿತ ವಿದ್ಯುತ್ ವ್ಯವಸ್ಥೆ, ಇಂಧನ ಸಂಗ್ರಹಾಗಾರ ಹಾಗೂ ನೂಕುಬಲದ ಸೌಕರ್ಯಗಳನ್ನು ಒಳಗೊಂಡಿತ್ತು. ಮುಂದೆ ಭೂಮಿಯಿಂದ ಹಾರಿಬರುವ ನೌಕೆಗಳನ್ನು ಜೋಡಿಸಿ ತನ್ನೊಡನೆ ಹೊತ್ತೊಯ್ಯುವ ವ್ಯವಸ್ಥೆಯೂ ಅದರಲ್ಲಿತ್ತು.
ನಂತರ ವರ್ಷದಿಂದ ವರ್ಷಕ್ಕೆ ಐಎಸ್‍ಎಸ್‍ಗೆ ಹೊಸ ಹೊಸ ಅಂಗಗಳ ಸೇರ್ಪಡೆ. 2000ರ ನವೆಂಬರಿನಿಂದ ಅಂತರಿಕ್ಷದಲ್ಲಿ ಸತತ ಮಾನವ ವಾಸ್ತವ್ಯ ಆರಂಭವಾಯಿತು. ರಷ್ಯಾದ ಇಬ್ಬರು ತಂತ್ರಜ್ಞರು ಸೋಯುಝ್ ನೌಕೆಯಲ್ಲಿ ಹಾರಿ ಬಂದು ಆ ನೌಕೆಯನ್ನೇ ಐಎಸ್‍ಎಸ್‍ಗೆ ಜೋಡಿಸಿದರು. ಕೆಲವೇ ದಿನಗಳಲ್ಲಿ ಅಮೆರಿಕದ ಆರು ಬೃಹತ್ ಸೌರಫಲಕಗಳ ಜೋಡಣೆಯಾಯಿತು. ಶಕ್ತಿಮೂಲವನ್ನು ಮುಷ್ಟಿಯೊಳಗಿರಿಸಿಕೊಂಡಿದ್ದರಿಂದ ಇನ್ನು ಮುಂದೆ ಬ್ಯಾಟರಿಯನ್ನು ನಂಬಿ ಕೂರುವ ಅಗತ್ಯವಿಲ್ಲ. ನಿಲ್ದಾಣದ ಯಂತ್ರಾಂಶ, ತಂತ್ರಾಂಶಗಳಿಗೆ ಅವಶ್ಯವಿರುವ ವಿದ್ಯುತ್ ಅಲ್ಲಿಯೇ ಉತ್ಪಾದನೆಯಾಗುತ್ತದೆ.
ಮೂರನೆಯದು ಮತ್ತೊಮ್ಮೆ ಪ್ರೋಟಾನ್ ನೌಕೆಯ ಮೂಲಕ 2000 ರ ಜುಲೈನಲ್ಲಿ ಹಾರಿದ ರಷ್ಯಾದ ಝ್ವೇಜ್ದಾ ಘಟಕ. ಸಿಬ್ಬಂದಿಗೆ ಅಡಿಗೆಮನೆ, ಶೌಚಾಲಯ, ಮಲಗುವ ಕೋಣೆ ಇತ್ಯಾದಿಗಳ ನಿವಾಸ ವ್ಯವಸ್ಥೆ, ಆಕ್ಸಿಜನ್ ಉತ್ಪಾದಿಸುವ, ಇಂಗಾಲದ ಡೈಆಕ್ಸೈಡ್ ನಿವಾರಿಸುವ ಮತ್ತು ಸಿಬ್ಬಂದಿಗೆ ವ್ಯಾಯಾಮ ಪರಿಕರಗಳು ಹಾಗೂ ಭೂಮಿಯಲ್ಲಿನ ಕಂಟ್ರೋಲ್ ರೂಮಿನೊಂದಿಗೆ ಧ್ವನಿ ಮತ್ತು ಬೆಳಕಿನ ಸಂಪರ್ಕಸಾಧನಗಳು ಈ ಎಲ್ಲ ಸೇವಾಸೌಕರ್ಯಗಳನ್ನು ಇದು ಒದಗಿಸುತ್ತಿದೆ. ಈಗ ಭೂನಿವಾಸಿಗಳು ಇಲ್ಲಿ ವಾಸಿಸಲು ತಕ್ಕ ವ್ಯವಸ್ಥೆ ತಯಾರಾಗಿದೆ.
ಪಾಳಿಯ ಮೇಲೆ ತಂತ್ರಜ್ಞರ ಒಂದೊಂದೇ ತಂಡ ಹಾಜರಾಗತೊಡಗಿತು. ಒಂದೊಂದು ತಂಡಕ್ಕೂ ಮೂರು ತಿಂಗಳ ಅವಧಿಯ ವಾಸ. ಅಷ್ಟರೊಳಗಾಗಿ ಮುಂದಿನ ತಂಡ ದೈಹಿಕವಾಗಿ, ಮಾನಸಿಕವಾಗಿ ಸಜ್ಜುಗೊಂಡು ತಾಂತ್ರಿಕ ತರಬೇತಿಗಳನ್ನೂ ಪಡೆದು ಹೊರಡುತ್ತದೆ. ಪ್ರತಿ ಬಾರಿಯ ಯಾತ್ರೆಯಲ್ಲೂ ಯಂತ್ರೋಪಕರಣಗಳಿದ್ದ ಘಟಕವೊಂದನ್ನು ಜೊತೆಗೊಯ್ದು ನಿಲ್ದಾಣಕ್ಕೆ ಜೋಡಿಸಲಾಗುತ್ತದೆ. ಸಿಬ್ಬಂದಿಗೆಂದು ಜೀವನಾವಶ್ಯಕ ಸಾಮಗ್ರಿಗಳ ಜೊತೆಗೆ ರಿಪೇರಿಯಾಗಬೇಕಾಗಿದ್ದ ಯಂತ್ರಗಳ ಬಿಡಿಭಾಗಗಳು, ಹೊಸ ಸಂಶೋಧನೆಗಳಿಗೆ ಬೇಕಾದ ತಾಂತ್ರಿಕ ಸಲಕರಣೆಗಳು ಇವೆಲ್ಲವೂ ಪೂರೈಕೆಯಾಗುತ್ತವೆ.
ಡೆಸ್ಟಿನಿ, ಕೊಲಂಬಸ್, ಕಿಬೋ, ಪೊಯಿಸ್ಕ್, ಟ್ರಾಂಕ್ವಿಲಿಟಿ, ಕಪೋಲಾ, ರಾಸ್ವೆಟ್, ಲಿಯೋನಾರ್ಡೊ ಹೀಗೆ ಒಂದಾದ ಮೇಲೊಂದರಂತೆ ಚಿತ್ರವಿಚಿತ್ರ ಹೆಸರು ಹೊತ್ತ ಅತಿವೆಚ್ಚದ ಪ್ರಯೋಗಾಲಯಗಳು ನಿಲ್ದಾಣಕ್ಕೆ ಸೇರ್ಪಡೆಯಾದವು. ಒಂದೊಂದು ಹೊಸ ಉಪಕರಣ ಬಂದಾಗಲೂ ತಂತ್ರಜ್ಞರು ಮೂಲ ನೌಕೆಯಿಂದ ತಾವು ದೂರ ಸರಿಯದಂತೆ ಸೊಂಟಕ್ಕೆ ಲೋಹದ ಹಗ್ಗವನ್ನು ಕಟ್ಟಿಕೊಂಡು, ಆಮ್ಲಜನಕದ ಪೂರೈಕೆ ಉಳ್ಳ ವಿಶೇಷ ಉಡುಪನ್ನು ಧರಿಸಿ ನಿರ್ವಾತ ಅವಕಾಶದಲ್ಲಿ ಗಗನನೃತ್ಯ ನಡೆಸಿ ಅವನ್ನು ಮೂಲ ನೌಕೆಗೆ ಜೋಡಿಸಬೇಕು. ಕೆಲವೊಮ್ಮೆ ರೋಬಾಟ್ ರಟ್ಟೆ ಸ್ವತಂತ್ರ ಘಟಕಗಳನ್ನು ನಿಲ್ದಾಣಕ್ಕೆ ಜೋಡಿಸಿದ ನಂತರ ಸೂಕ್ಷ್ಮ ಜೋಡಣೆಗಳನ್ನು ಸಿಬ್ಬಂದಿ ಗಗನನಡಿಗೆ ನಡೆಸಿ ಮುಗಿಸುತ್ತಾರೆ.
ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ 2003ರಲ್ಲಿಯೇ ನೌಕೆ ಸುಸಜ್ಜಿತವಾದ ಪ್ರಯೋಗ ಶಾಲೆಯಾಗಿ ಪೂರ್ಣಗೊಳ್ಳಬೇಕಿತ್ತು. ಅಂತೂ ಈ ವರ್ಷ ನಿರ್ಮಾಣಕಾರ್ಯ ಕೊನೆಗೊಳ್ಳಲಿದೆ. ಈಗದು ಭೂಮಿಯನ್ನು ಸುತ್ತು ಹಾಕುತ್ತಿರುವ ಅತಿ ದೊಡ್ಡ ಕೃತಕ ಉಪಗ್ರಹವೆನಿಸಿದೆ.
ಬಾಹ್ಯಾಕಾಶ ನಿಲ್ದಾಣದಲ್ಲಿರುವವರ ನಿತ್ಯದ ರೂಟಿನ್ ಹೇಗಿರುತ್ತದೆ?
ಇದನ್ನು ಚರ್ಚಿಸುವ ಮುನ್ನ ಅವರಿರುವ ಪರಿಸ್ಥಿತಿಯನ್ನು ಅವಲೋಕಿಸೋಣ. ಮುಖ್ಯವಾಗಿ ಭೂಗುರುತ್ವ ಮತ್ತು ವಾತಾವರಣ ಇವೆರಡರ ಕೊರತೆಯನ್ನು ತಂತ್ರಜ್ಞರು ಸದಾಕಾಲ ಅನುಭವಿಸಬೇಕಾಗುತ್ತದೆ. ಈಗ ಐಎಸ್‍ಎಸ್ ಹಾರಾಡುತ್ತಿರುವ ಕಕ್ಷೆ ಭೂಮಿಯ ಆಚೆ 270ರಿಂದ 478 ಕಿಮೀ ವ್ಯಾಪ್ತಿಯಲ್ಲಿದೆ. ಅಂದರೆ ಅದು ಭೂಮಿಯ ಹತ್ತಿರವೇ ಅಥವಾ ‘ಭೂಸಮೀಪ ಕಕ್ಷೆ’ಯಲ್ಲಿ (ನಿಯರ್ ಅರ್ಥ್ ಆರ್ಬಿಟ್) ಹಾರಾಡುತ್ತಿದೆ. ವಸ್ತುಗಳ ನಡುವಿನ ಅಂತರ ಹೆಚ್ಚಾದಂತೆ ಗುರುತ್ವಬಲವೂ ಕ್ಷೀಣವಾಗುತ್ತಹೋಗುತ್ತದಷ್ಟೆ. ಅಲ್ಲಿ ವಾಯುಮಂಡಲ ಅತಿ ವಿರಳವಾಗಿದೆ, ಆದರೆ ಭೂಮಿಯ ಗುರುತ್ವದ ಆಕರ್ಷಣಾ ಶಕ್ತಿ ಶೇಕಡಾ ಎಂಭತ್ತರಷ್ಟು ಇದ್ದೇ ಇದೆ. ಅಂದರೆ ಅದು ಮೈಕ್ರೋ ಅಥವಾ ಕಿರುಗುರುತ್ವದ ವಲಯ. ಐಎಸ್‍ಎಸ್ ನಲ್ಲಿ ತಂತ್ರಜ್ಞರು ವಾಸಿಸುವ, ಓಡಾಡುವ ಸ್ಥಳಗಳಲ್ಲಿ ಕೃತಕ ವಾಯುಮಂಡಲವನ್ನು ಸೃಷ್ಟಿಸಿರುವುದರಿಂದ ಉಸಿರಾಟದ ಸಮಸ್ಯೆ ಇರುವುದಿಲ್ಲ.
ಭೂಮಿಯ ಜಗ್ಗುಬಲ ನಿಲ್ದಾಣದಲ್ಲಿ ಹೆಚ್ಚಿಲ್ಲ. ಆದರೆ ನೌಕೆ ಸದಾಕಾಲ ಭೂಮಿಗೆ ಬೀಳುತ್ತಲೇ ಇರುತ್ತದೆ. (ಇದೇ ಕೃತಕ ನೌಕೆಗಳ ಹಾರಾಟದಲ್ಲಿರುವ ವಿಶೇಷತೆ. ಭೂಮಿಯ ಆಚೆ ನೌಕೆಯನ್ನು ರಾಕೆಟ್ ಮೂಲಕ ಹಾರಿಸಲಾಗುವುದಷ್ಟೆ? ನಿರ್ದಿಷ್ಟ ಎತ್ತರವನ್ನು ತಲುಪಿದ ನಂತರ ವೇಗ ಕಡಿಮೆಯಾಗಿ ಅದು ಬೀಳತೊಡಗುತ್ತದೆ. ತಿರುಗುವ ದುಂಡನೆಯ ಭೂಮಿಯ ಬಾಗುವಿಕೆಯ ವೇಗಕ್ಕೆ ಸಮನಾದ ವೇಗದಲ್ಲಿ ನೌಕೆ ಬೀಳುವಂತೆ ರಚಿಸಲಾಗಿರುವುದರಿಂದ, ನೌಕೆ ಬೀಳುತ್ತಲೇ ಇರುತ್ತದೆ, ಭೂಮಿ ತಿರುಗುತ್ತಲೇ ಇರುತ್ತದೆ, ನೌಕೆ ಭೂಮಿಯನ್ನು ತಲುಪುವುದೇ ಇಲ್ಲ) ನೌಕೆಯೊಳಗಿರುವ ಸಿಬ್ಬಂದಿಯೂ ಯಾವಾಗಲೂ ಬೀಳುತ್ತಲೇ ಇರುತ್ತಾರೆ. ವೇಗವಾಗಿ ಬೀಳುವಾಗ ‘ಭಾರರಹಿತ ಸ್ಥಿತಿ’ ಅವರದಾಗಿರುವುದರಿಂದ ಅವರು ಓಲಾಡುತ್ತ, ತೇಲಾಡುತ್ತಿರುತ್ತಾರೆ. ನಿಲ್ದಾಣದಲ್ಲಿ ಒಂದು ಹಣ್ಣನ್ನು ಕೆಳಕ್ಕೆ ಬಿಟ್ಟರೆ ಅದು ಬೀಳತೊಡಗುತ್ತದೆ, ಆದರದು ಬಿದ್ದಂತೆ ಕಾಣುವುದೇ ಇಲ್ಲ! ಯಾಕೆಂದರೆ ಅಲ್ಲಿ ಬೀಳಿಸಿದವನೂ ಭೂಮಿಯ ಕಡೆ ಬೀಳುತ್ತಿರುತ್ತಾನೆ, ನೌಕೆಯೂ ಬೀಳುತ್ತಿರುತ್ತದೆ ಹಾಗೂ ಹಣ್ಣೂ ಬೀಳುತ್ತದೆ! ಎಲ್ಲರೂ ಒಂದೇ ವೇಗದಲ್ಲಿ. ಹೀಗಾಗಿ ನೌಕೆಯೊಳಗೆ ಎಲ್ಲವೂ ತೇಲುತ್ತಿರುತ್ತವೆ.
ಬಾಹ್ಯಾಕಾಶ ನಿಲ್ದಾಣದಲ್ಲಿ ಬೆಳಗಾಗುತ್ತದೆ. ನಮ್ಮ ಬೆಳಗಿನ ಹಾಗೆ 24 ಗಂಟೆಗಳಿಗೊಮ್ಮೆ ಅಲ್ಲ, ಪ್ರತಿ ಒಂದೂವರೆ ಗಂಟೆಗೊಮ್ಮೆ. ಏಕೆಂದರೆ ನೌಕೆ 90 ನಿಮಿಷಗಳಿಗೊಮ್ಮೆ ಭೂಮಿಯನ್ನು ಸುತ್ತು ಹಾಕಿ ಬರುತ್ತದೆ. ಹಾಗೆಂದು 90 ನಿಮಿಷಗಳನ್ನು ಹಗಲು ಮತ್ತು ರಾತ್ರಿಯೆಂದು ಇಬ್ಭಾಗಿಸಿ ಅದರಂತೆ ನಡೆಯಲು ಸಿಬ್ಬಂದಿಗೆ ಸಾಧ್ಯವಿಲ್ಲ. ಮಾನವ ದೇಹ ಲಕ್ಷಾಂತರ ವರ್ಷಗಳಿಂದ 24 ಗಂಟೆಗಳ ಜೈವಿಕ ಗಡಿಯಾರಕ್ಕೆ ಒಗ್ಗಿಕೊಂಡಿದೆ, ಅದನ್ನು ಬದಲಾಯಿಸುವುದು ಸುಲಭಸಾಧ್ಯವಿಲ್ಲ. ಆದ್ದರಿಂದ 24 ಗಂಟೆಗಳ ಸಮಯ ಚಕ್ರಕ್ಕೆ ಅನುಗುಣವಾಗಿಯೇ ನೌಕೆಯಲ್ಲಿ ದಿನಚರಿ ಆರಂಭವಾಗುತ್ತದೆ.
ಇಡೀ ನೌಕೆಯೇ ಒಂದು ಪ್ರಯೋಗಶಾಲೆ, ನೌಕೆಯ ವಿವಿಧ ಭಾಗಗಳಿಗೆಂದು ಬಳಸಿದ ಯಂತ್ರೋಪಕರಣಗಳು ಹಾಗೂ ತಂತ್ರಜ್ಞರ ದೇಹಗಳೂ ಪ್ರಯೋಗದ ವಸ್ತುಗಳೇ.
ಕಿರುಗುರುತ್ವದ ಪ್ರದೇಶದಲ್ಲಿ ಪ್ರತಿಯೊಂದು ಕೆಲಸವೂ ಕಷ್ಟವೇ. ಅಡ್ಡಾದಿಡ್ಡಿಯಾಗಿ ಬಿದ್ದಿದ್ದ ಕೈಕಾಲುಗಳನ್ನು ಎತ್ತಿಕೊಂಡು ಬಟ್ಟೆ ಧರಿಸುತ್ತಾರೆ. ಅವರುಡುವ ಬಟ್ಟೆಗಳು ಮರುಬಳಸಲಾರದಂಥವುಗಳು. ಮೂರು ದಿನಗಳಿಗೊಮ್ಮೆ ಅವನ್ನು ಎಸೆದು ಹೊಸಬಟ್ಟೆಯನ್ನು ಬಳಸಲಾಗುತ್ತದೆ. ಹೊಸದಾಗಿ ಬಂದ ಟೂಥ್‍ಪೇಸ್ಟ್‍ನಿಂದ ಹಲ್ಲುಜ್ಜಿದ ಮೇಲೆ ಅದನ್ನು ಉಗುಳಬೇಕೆಂದಿಲ್ಲ, ನುಂಗಬಹುದು. ಪುರುಷ ತಂತ್ರಜ್ಞರಿಗೆ ಮುಖಕ್ಷೌರ ಮಹಾ ತಲೆನೋವಿನ ಕೆಲಸ. ನೀರು, ಶೇವಿಂಗ್ ಕ್ರೀಮುಗಳೆರಡೂ ಮುಖಕ್ಕೆ ಅಂಟಿಕೊಂಡುಬಿಡುತ್ತವೆ. ಎಲೆಕ್ಟ್ರಿಕ್ ಶೇವಿಂಗ್ ಮಾಡುವುದಾದರೆ ಕತ್ತರಿಸಿದ ಕೂದಲು ಅತ್ತಿತ್ತ ಹೋಗಿ ಯಂತ್ರಗಳಿಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಮುಖದ ಹತ್ತಿರವೇ ಕೂದಲು ಹೀರಿಕೊಳ್ಳುವ ಸಕ್ಷನ್ ಫ್ಯಾನ್ ಹಾಕಿಕೊಂಡಿರಬೇಕಾಗುತ್ತದೆ. ನೌಕೆಯಲ್ಲಿ ಶವರ್ ಸೌಕರ್ಯವಿದೆ. ಆದರೆ ಶೌಚಕಾರ್ಯ ಅಸಹನೀಯವಾದದ್ದು. ಶೌಚಾಲಯದಲ್ಲಿ ತೊಡೆ, ಕಾಲುಗಳಿಗೆ ಪಟ್ಟಿಬಿಗಿದು ಕೂತಿರಬೇಕಾಗುತ್ತದೆ. ವಿಸರ್ಜನೆಗಳು ಲವಲೇಶವಿಲ್ಲದಂತೆ ಕೂಡಲೇ ಹೀರಲ್ಪಟ್ಟು ಪ್ರತ್ಯೇಕ ಚೀಲದಲ್ಲಿ ಸಂಗ್ರಹವಾಗುತ್ತವೆ. ಬಳಸಿದ ಎಲ್ಲಾ ನೀರು ಶುದ್ಧೀಕೃತಗೊಂಡು ಮರುಬಳಕೆಯಾದರೆ ಶೇಖರಿಸಿಟ್ಟ ಮಲಕಸವನ್ನು ಭೂಮಿಗೆ ಕಳಿಸಲಾಗುತ್ತದೆ.
ನೌಕೆಯಲ್ಲಿ ದಿನಕ್ಕೊಬ್ಬರಿಗೆ 0.9 ಕೆಜಿ ಆಮ್ಲಜನಕ ಬೇಕಾಗುತ್ತದೆ. ಕುಡಿಯಲು 2.7 ಕೆಜಿ ನೀರು ಅವಶ್ಯವಿದೆ. ಭೂಮಿಯಿಂದ ಪೂರೈಕೆಯಾಗುವ ಸಾಮಗ್ರಿಗಳ ಪ್ರಮಾಣ ಆದಷ್ಟು ಕಡಿಮೆ ಇರಲೆಂದು ಇಲ್ಲಿ ಮರುಬಳಕೆಯ ಕಾರ್ಯಕ್ಕೆ ಅತಿ ಹೆಚ್ಚು ಒತ್ತು ನೀಡಲಾಗುತ್ತದೆ. ಮಾನವ ಮೂತ್ರ ಹಾಗೂ ನೌಕೆಯೊಳಗೆ ಸಾಂದ್ರೀಕೃತಗೊಂಡ ನೀರಾವಿಯನ್ನು ಒಂದೋ ಶುದ್ಧಗೊಳಿಸಲಾಗುತ್ತದೆ ಅಥವಾ ಎಲೆಕ್ಟ್ರೋಲೈಸಿಸ್ ಮೂಲಕ ಜಲಜನಕ ಮತ್ತು ಆಮ್ಲಜನಕವಾಗಿ ವಿಭಜಿಸಿ ಬಳಸಲಾಗುತ್ತದೆ. ಇಂಗಾಲದ ಡೈಆಕ್ಸೈಡ್ ಲೀಥಿಯಂ ಹೈಡ್ರಾಕ್ಸೈಡ್‍ನೊಂದಿಗೆ ಮಿಶ್ರಗೊಂಡು ರಾಸಾಯನಿಕವಾಗಿ ನೀರನ್ನು ಉತ್ಪಾದಿಸುವ ವ್ಯವಸ್ಥೆ ಅಲ್ಲಿದೆ.
* ಬಾಹ್ಯಾಕಾಶದಲ್ಲಿ ತಂಗುದಾಣದ ಕನಸು
ಬಹಳ ಹಿಂದೆಯೇ ವೆರ್ನರ್ ವಾನ್ ಬ್ರೌನ್, ಹರ್ಮನ್ ಒಬರ್ತ್, ಹರ್ಮನ್ ನೂರ್ಡಂಗ್ ಹಾಗೂ ಕಾನ್‍ಸ್ಟಂಟಿನ್ ಸಿಲೋವ್‍ಸ್ಕಿ ಇತ್ಯಾದಿ ಖಗೋಳ ವಿಜ್ಞಾನಿಗಳು ಅಂತರಿಕ್ಷ ನಿಲ್ದಾಣದ ಬಗ್ಗೆ ಕನಸು ಕಂಡಿದ್ದರು. ನೀರಿನಲ್ಲಿ ಸಂಚರಿಸುವ ಹಡಗಿನಂತೆ ಆಗಸದಲ್ಲಿ ಸಂಚರಿಸುವ ಗಾಡಿಯೊಂದಿರಬೇಕು, ಬೇಕಾದಾಗ ಭೂಮಿಯಿಂದ ಅಲ್ಲಿಗೆ ಹಾರಿಹೋಗಿ ಅಲ್ಲಿದ್ದು ಹೊರಜಗತ್ತನ್ನು ಅರಿಯುವಂತಿರಬೇಕು, ಚಂದ್ರ ಅಥವಾ ಮತ್ಯಾವುದೇ ಆಕಾಶಕಾಯಕ್ಕೆ ಜಿಗಿಯಲು ಈ ತಂಗುದಾಣ ಸಂಪರ್ಕ ಸೇತುವೆಯಾಗಬೇಕು ಇತ್ಯಾದಿ ಆ ಕನಸಿಗೆ ರೆಕ್ಕೆಪುಕ್ಕಗಳನ್ನೂ ಕಟ್ಟಿದ್ದರು.
ಈ ನಿಲ್ದಾಣಕ್ಕೆ ಕೃತಕ ಗುರುತ್ವವನ್ನು ಸೃಷ್ಟಿಸಲೆಂದು ಗಾಲಿಗಳಿರುತ್ತವೆ, ಈ ತಂಗುದಾಣದಿಂದ ನೌಕೆಗಳು ಭೂಮಿಗೆ ಹಿಂದಕ್ಕೂ ಮುಂದಕ್ಕೂ ಓಡಾಡಿ ಆವಶ್ಯಕ ಸಾಮಗ್ರಿಗಳನ್ನು ಹೊತ್ತು ತರುತ್ತವೆ. ರಜಾ ದಿನಗಳಲ್ಲಿ ಜನಸಾಮಾನ್ಯರೂ ಕೂಡ ಈ ತಂಗುದಾಣಕ್ಕೆ ಬಂದಿದ್ದು ಹೋಗುತ್ತಾರೆ, ಹೀಗೆ ಆ ಕನಸುಗಳು ಮುಂದುವರೆದಿದ್ದವು.
ಬಾಹ್ಯಾಕಾಶ ನಿಲ್ದಾಣದ ಕುರಿತು ಕನಸು ಕಟ್ಟುವುದರಲ್ಲಿ ಸಿನೆಮಾ, ಸಾಹಿತ್ಯಗಳೂ ಹಿಂದೆ ಬಿದ್ದಿರಲಿಲ್ಲ 1968 ರಷ್ಟು ಹಿಂದೆಯೇ 2001: A Space Odyssey ಎಂಬ ವೈಜ್ಞಾನಿಕ ಸಾಹಸ ಸಿನೆಮಾವೊಂದು ಬಿಡುಗಡೆಯಾಗಿತ್ತು. ಭೂಮಿಯನ್ನು ಸತತವಾಗಿ ಸುತ್ತುಹಾಕುತ್ತಿರುವ ಉಪಗ್ರಹ, ಅದರಲ್ಲಿ ಮಾನವರ ವಾಸ, ಚಂದ್ರ ಅವರಿಗೆ ಪಕ್ಕದ ಮನೆಯಂತೆ ಹಾಗೂ ದೂರದೂರದ ಗ್ರಹಗಳತ್ತ ಆಗಾಗ ಅವರ ಪಯಣ ಹೀಗೆ ಅಂದಿನ ಕಲ್ಪನೆಯ ಕತೆ ಸಾಗಿತ್ತು.
ಇಂದಿನ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಗೆ ನೂರಾರು ವರ್ಷಗಳ, ಸಾವಿರಾರು ಜನರ ಕೊಡುಗೆ ಇದೆ. ರಷ್ಯಾದ ಮೀರ್ ಹಾಗೂ ಅಂತರ್ರಾಷ್ಟ್ರೀಯ ಮಟ್ಟದ ‘ಬಾಹ್ಯಾಕಾಶ ನಿಲ್ದಾಣ’ ಗಳು ಕಲಾವಿದರ ಕಲ್ಪನೆಗಳನ್ನು ನಿಜಗೊಳಿಸುವ ಯತ್ನಗಳಾಗಿವೆ.
ಸರೋಜಾ ಪ್ರಕಾಶ.
ಮುಂದುವರೆಯುವುದು..
- Advertisement -
- Advertisement -
- Advertisement -
- Advertisement -