Sidlaghatta : ಶಿಡ್ಲಘಟ್ಟದ ಹೃದಯಭಾಗದಲ್ಲಿರುವ ಒಂದು ಸಣ್ಣ ಅಂಗಡಿಯಿಂದ ಆರಂಭವಾದ ಪಯಣ, ಇಂದಿಗೆ ಒಂದು ಕುಟುಂಬದ ನಾಲ್ಕು ತಲೆಮಾರನ್ನು ದಾಟಿ “ನಂಬಿಕೆಯ ಕಥೆ” ಆಗಿದೆ. 1942ರ ವಿಜಯದಶಮಿಯಂದು ಕೆ.ನಾರಾಯಣಶೆಟ್ಟಿ ಅವರು ಪ್ರಾರಂಭಿಸಿದ “ದೇಶನಾರಾಯಣ ಸ್ಟೋರ್ಸ್”, ಕೇವಲ ಔಷಧಿ ಮಾರುವ ಸ್ಥಳವಲ್ಲ – ಇದು ಸಮುದಾಯದ ಆರೋಗ್ಯ ಸೇವೆಯ ನಂಟಾಗಿದೆ.
ಕಾಲರಾ ವ್ಯಾಪಕವಾಗಿದ್ದಾಗ ಮದ್ರಾಸಿನಿಂದ ಕ್ಲೋರೋಕ್ವಿನ್ ಗುಳಿಗೆಗಳನ್ನು ತಂದು ಜನರಿಗೆ ನೀಡಿದ ನಾರಾಯಣಶೆಟ್ಟಿಯವರ ಮಾನವೀಯ ಸೇವೆಯೇ ಈ ಅಂಗಡಿಯ ಮೂಲ ಕತೆ. ತಾವು ಮದ್ರಾಸಿನಲ್ಲಿ ತರಬೇತಿ ಪಡೆದು ಪಡೆದ ಪ್ರಮಾಣಪತ್ರದೊಂದಿಗೆ ಪ್ರಾರಂಭಿಸಿದ ಈ ಪ್ರಯಾಣ, ಇಂದಿಗೂ ಗುಣಮಟ್ಟದ ಮೇಲೆ ನಂಬಿಕೆ ಉಳಿಸಿಕೊಂಡಿದೆ.
“ಒಂದಾಣಿ ಜಾಸ್ತಿ ತಗೋ, ಆದರೆ ಸರಕಲ್ಲಿ ನಾಣ್ಯವಿರಲಿ” ಎಂಬ ತಾತನ ಮಾತನ್ನು ಧ್ಯೇಯವಾಕ್ಯವನ್ನಾಗಿಸಿಕೊಂಡ ಕುಟುಂಬವು, ಶಿಡ್ಲಘಟ್ಟದಲ್ಲಿರುವ 40ಕ್ಕೂ ಹೆಚ್ಚು ಔಷಧಿ ಅಂಗಡಿಗಳ ನಡುವೆ ತನ್ನದೇ ಆದ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯಿಂದ ಮುಂದುವರಿದಿದೆ. ಇಂದಿಗೆ ರೋಹನ್ ಗಂಧರ್ವ ಎಂಬ ನಾಲ್ಕನೇ ತಲೆಮಾರಿನ ಮೂಲಕ ‘ದೇಶನಾರಾಯಣ ಸ್ಟೋರ್ಸ್’ ತನ್ನ ಸೇವೆಯನ್ನು ಮುಂದುವರೆಸುತ್ತಿದೆ.

ಸಂಪ್ರದಾಯ, ನಂಬಿಕೆ ಮತ್ತು ಮಾನವೀಯತೆಗೆ ಮೆರಗು ನೀಡುತ್ತಿರುವ ಈ ಪಯಣ, ಸ್ಥಳೀಯರ ಹೃದಯದಲ್ಲಿ ಇನ್ನೂ ವಿಶೇಷ ಸ್ಥಾನವನ್ನು ಕಾಯ್ದುಕೊಂಡಿದೆ.