ಪಿಂಚಣಿ ಹಣವನ್ನು ಪಡೆಯುವ ವೃದ್ಧರು ಮತ್ತು ಅಂಗವಿಕಲರ ಖಾತೆಗಳನ್ನು ಅಂಚೆ ಕಚೇರಿಯಲ್ಲಿ ತೆರೆಸಬೇಕಾದ ಗುರುತರ ಜವಾಬ್ದಾರಿ ಪೋಸ್ಟ್ ಮನ್ಗಳ ಮೇಲಿದೆ ಎಂದು ಅಂಚೆ ಇಲಾಖೆಯ ಕೋಲಾರ ವಿಭಾಗದ ಸಹಾಯಕ ಅಧೀಕ್ಷಕ ವಿ.ಆರ್.ಸ್ವಾಮಿ ತಿಳಿಸಿದರು.
‘ಕಾಗದ ರಹಿತ’ ವ್ಯವಹಾರವನ್ನು ನಡೆಸುವ ಉದ್ದೇಶದಿಂದ ಪ್ರಾರಂಭಿಸಿರುವ ‘ಪೋಸ್ಟಲ್ ಡಿಜಿಟಲ್ ಇಂಡಿಯಾ ಸಪ್ತಾಹ’ಕ್ಕೆ ಗುರುವಾರ ನಗರದ ಅಂಚೆ ಕಚೇರಿಯಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕೋಲಾರ ಮತ್ತು ಚಿಕ್ಕಬಲ್ಲಾಪುರವನ್ನು ಒಂದು ವಲಯವೆಂದು ಗುರುತಿಸಿದ್ದು, ಅದರಲ್ಲಿ 65 ಅಂಚೆ ಕಚೇರಿಗಳು ಮತ್ತು 451 ಉಪ ಅಂಚೆ ಕಚೇರಿಗಳಿವೆ. ಇವುಗಳಲ್ಲಿ 26 ಅಂಚೆ ಕಚೇರಿಗಳು ಸಂಪೂರ್ಣ ಆನ್ಲೈನ್ ಆಗಿವೆ. ಇನ್ನುಳಿದ 31 ಅಂಚೆ ಕಚೇರಿಗಳು ಮತ್ತು 451 ಉಪ ಅಂಚೆ ಕಚೇರಿಗಳನ್ನು ಡಿಜಿಟಲೈಸ್ ಮಾಡಲು ಪ್ರಾರಂಭಿಸಿದ್ದೇವೆ. ಪಿಂಚಣಿ ಪಡೆಯುವ ಪ್ರತಿಯೊಬ್ಬರದ್ದೂ ಖಾತೆ ಮಾಡಿಸಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ದೇಶದಾದ್ಯಂತ ಹಣವನ್ನು ಖಾತೆದಾರರು ಎಲ್ಲಿಗೆ ಬೇಕಾದರೂ ವರ್ಗಾಯಿಸಬಹುದಾದಂತ ‘ಕಾಗದ ರಹಿತ’ ಸೇವೆಯನ್ನು ಕಂಪ್ಯೂಟರ್ ಮೂಲಕ ನಡೆಸುತ್ತಿದ್ದೇವೆ. ತಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ಎಸ್ಎಂಎಸ್ ಮೂಲಕ ಪಡೆಯಬಹುದಾಗಿದೆ ಎಂದು ವಿವರಿಸಿದರು. ಅಂಚೆ ಕಚೇರಿಯ ಮುಖ್ಯಪೋಸ್ಟ್ ಮಾಸ್ಟರ್ ಪ್ರಭಾವತಿ, ಸಿಬ್ಬಂದಿ ಮತ್ತು ಪೋಸ್ಟ್ ಮನ್ಗಳು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -