ಅಪ್ರಾಪ್ತ ವಯಸ್ಕರನ್ನು ಕಾರ್ಖಾನೆ ಇನ್ನಿತರೆ ಕಡೆ ದುಡಿಮೆ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಕೇವಲ ಕಾನೂನು ದೃಷ್ಟಿಯಿಂದ ಮಾತ್ರವಲ್ಲ ಸಾಮಾಜಿಕವಾಗಿಯೂ ದುಷ್ಪರಿಣಾಮ ಬೀರಲಿದೆ ಎಂದು ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಅನಿತ ಅಭಿಪ್ರಾಯಪಟ್ಟರು.
ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ’ಯನ್ನು ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕರನ್ನು ಕಾರ್ಖಾನೆಗಳಲ್ಲಿ ದುಡಿಮೆ ನೇಮಿಸಿಕೊಳ್ಳುವುದು ಕಾನೂನು ದೃಷ್ಠಿಯಲ್ಲಿ ಅಪರಾಧ. ಬಾಲಕರನ್ನು ನೇಮಿಸಿಕೊಳ್ಳುವುದು ಎಷ್ಟು ತಪ್ಪೋ ದುಡಿಮೆಗೆ ದೂಡುವುದು ಕೂಡ ಅಷ್ಟೇ ಅಪರಾಧ. ನೇಮಕ ಮಾಡಿಕೊಳ್ಳುವ ಮಾಲೀಕರು ಹಾಗೂ ಅದಕ್ಕೆ ಅವಕಾಶ ಕೊಡುವ ಪೋಷಕರೂ ಸಹ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದರು.
ಬಾಲ ಕಾರ್ಮಿಕ ಪದ್ಧತಿಗೆ ಬಡತನ, ಅನಕ್ಷರತೆ, ಮೂಢನಂಬಿಕೆ ಇನ್ನಿತರೆ ಏನೇ ಕಾರಣಗಳಿರಬಹದು. ಅವೆಲ್ಲವನ್ನೂ ಮೀರಿ ನಾವು ನೀವೆಲ್ಲರೂ ಸೇರಿ ಈ ಅನಿಷ್ಠ ಪದ್ದತಿಯನ್ನು ನಿರ್ನಾಮ ಮಾಡಲು ಮುಂದಾಗಬೇಕಿದೆ. ಈ ಪದ್ಧತಿಯನ್ನು ಕೇವಲ ಕಾನೂನಿಂದ ನಿಯಂತ್ರಿಸಲು ಸಾಧ್ಯವಿಲ್ಲ.
ಈ ಸಮಾಜದ ಎಲ್ಲರೂ ಕೈ ಜೋಡಿಸಿ ಅನಿಷ್ಠ ಪದ್ದತಿಗೆ ತಿಲಾಂಜಲಿ ಇಡಬೇಕಿದೆ. ಈ ದೇಶದ ಭವಿಷ್ಯದ ಪ್ರಜೆಗಳನ್ನು ಉತ್ತಮವಾಗಿ ರೂಪಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ, ಜೀತ ಪದ್ಧತಿ, ವರದಕ್ಷಿಣೆ ಇನ್ನಿತರೆ ಹತ್ತಾರು ಮೂಢ ನಂಬಿಕೆಗಳು ಈ ಶತಮಾನದಲ್ಲೂ ಇನ್ನೂ ಆಚರಣೆಯಲ್ಲಿರುವುದು ನಾವು ನೀವೆಲ್ಲರೂ ತಲೆ ತಗ್ಗಿಸುವ ವಿಚಾರವಾಗಿದೆ ಎಂದರು.
ಸರ್ಕಾರವು ಈ ಎಲ್ಲ ಅನಿಷ್ಠ ಪದ್ಧತಿಗಳ ನಿರ್ಮೂಲನೆಗೆ ಕಾನೂನುಗಳನ್ನು ರೂಪಿಸಬಹುದು. ಕಾರ್ಯಾಂಗವು ಅದನ್ನು ಅನುಷ್ಠಾನಕ್ಕೂ ತರಬಹುದು. ಆದರೆ ಸಾರ್ವಜನಿಕವಾಗಿ ಈ ನಿಟ್ಟಿನಲ್ಲಿ ಅರಿವು, ಪ್ರಜ್ಞೆ ಮೂಡದಿದ್ದರೆ ಕಾನೂನುಗಳು ಕೇವಲ ಕಾಗದದ ಮೇಲೆ ಉಳಿದುಬಿಡುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಮಿಕ ನಿರೀಕ್ಷಕ ಎಚ್.ಎಂ.ಸೋಮಶೇಖರ್ ‘ಬಾಲಕಾರ್ಮಿಕರಿಗೆ ಇಲಾಖೆಯಿಂದ ಸಿಗುವ ಸೌಲಭ್ಯಗಳು’ ಕುರಿತು ವಿಷಯ ತಿಳಿಸಿದರು.
ಸರ್ಕಾರಿ ವಕೀಲ ಈ.ಡಿ.ಶ್ರೀನಿವಾಸ್, ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳ, ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ಟಿ.ವಿ.ಚಂದ್ರೇಗೌಡ, ಸುಬ್ರಮಣಿ, ಮಂಜುನಾಥ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -