20.1 C
Sidlaghatta
Tuesday, October 4, 2022

ಅಬ್ಲೂಡು ಗ್ರಾಮದಲ್ಲಿ ವಿಶಿಷ್ಟ ಜನಪದ ಕಲಾಪ್ರಕಾರ ‘ಕೇಳಿಕೆ’

- Advertisement -
- Advertisement -

ತಾಲ್ಲೂಕಿನ ಅಬ್ಲೂಡು ಗ್ರಾಮದ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಶನಿವಾರ ರಾತ್ರಿ ಜಿಲ್ಲೆಯ ವಿಶಿಷ್ಟ ಜನಪದ ಕಲಾಪ್ರಕಾರ ‘ಕೇಳಿಕೆ’ಯನ್ನು ಅಭಯ ಆಂಜನೇಯಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯಿಂದ ಆಯೋಜಿಸಲಾಗಿತ್ತು.
‘ದ್ರೌಪದಿ ವಸ್ತ್ರಾಪಹರಣ ಮತ್ತು ದುಶ್ಯಾಸನ ವಧೆ’ ಪ್ರಸಂಗವನ್ನು ‘ಕೇಳಿಕೆ’ ರಂಗಪ್ರಕಾರದಲ್ಲಿ ಕನ್ನಡದಲ್ಲಿ ಅಭಿನಯಿಸಿ ಪ್ರದರ್ಶಿಸಲಾಯಿತು. ಹಳಗನ್ನಡ, ಹೊಸಗನ್ನಡ, ಗ್ರಾಮೀಣ ಕನ್ನಡ ಮುಂತಾದ ವಿವಿಧ ಕನ್ನಡ ಭಾಷೆ ಮಿಳಿತವಾದ ಈ ಪ್ರದರ್ಶನದಲ್ಲಿನ ಹಾಡುಗಳು, ಪ್ರಸಂಗಗಳು, ನುಡಿಗಟ್ಟುಗಳು, ವೀರರಸ ಪ್ರಧಾನವಾದ ಸಂಭಾಷಣೆಗಳು, ಗ್ರಾಮೀಣ ಗಾದೆ ಮಾತುಗಳು, ಬೈಗುಳಗಳು ಪ್ರೇಕ್ಷಕನ್ನು ರಂಜಿಸಿದ್ದು ವಿಶೇಷವಾಗಿತ್ತು.
ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಹಾಗೂ ಸುತ್ತ ಮುತ್ತ ‘ಕೇಳಿಕೆ’ ಎಂಬ ರಂಗಪ್ರಕಾರ ಕಂಡುಬರುತ್ತದೆ. ಕೇಳಿಕೆ ಯಕ್ಷಗಾನದ ಒಂದು ಪ್ರಕಾರವೇ ಆಗಿದೆ. ತೆಲುಗಿನ ವೀದಿ ನಾಟಕ ಮತ್ತು ವೀದಿ ಭಾಗವತದ ಲಕ್ಷಣಗಳನ್ನು ಹಾಗೂ ಕೆಲಮಟ್ಟಿಗೆ ಕನ್ನಡ ಮೂಡಲಪಾಯದ ಲಕ್ಷಣಗಳನ್ನು ಈ ಕೇಳಿಕೆ ಹೊಂದಿದೆ. ಆದರೆ ಇದು ಸಂಪೂರ್ಣ ರಂಗವಲ್ಲ, ನೃತ್ಯ, ಅಭಿನಯ ಮತ್ತು ಹಾಡುಗಾರಿಕೆಯ ತುಣುಕುಗಳು ಇದರಲ್ಲಿರುತ್ತವೆ. ಚೌಡಮ್ಮ, ಮಾರಮ್ಮ, ಗಂಗಮ್ಮ ಮುಂತಾದ ದೇವತೆಯರ ಹಬ್ಬ ಮತ್ತು ಜಾತ್ರೆಗಳ ಸಂದರ್ಭದಲ್ಲಿ ಈ ‘ಕೇಳಿಕೆ’ ಹೆಚ್ಚು ನಡೆಯುತ್ತದೆ. ಹಿನ್ನೆಲೆ ವಾದ್ಯಗಳಾಗಿ ಮದ್ದಲೆ, ತಾಳ ಮತ್ತು ಮುಖವೀಣೆಗಳಿರುತ್ತವೆ. ಜಿಲ್ಲೆಯ ಕೇಳಿಕೆಗಳು ಹೆಚ್ಚಿಗೆ ತೆಲುಗು ಭಾಷೆಯಲ್ಲಿದ್ದರೂ ಕನ್ನಡ ಕೇಳಿಕೆಗಳೂ ಆಗಾಗ್ಗೆ ಪ್ರದರ್ಶಿತವಾಗುತ್ತವೆ.

ದ್ರೌಪದಿಯ ಪಾತ್ರಧಾರಿಯ ಅಭಿನಯ
ದ್ರೌಪದಿಯ ಪಾತ್ರಧಾರಿಯ ಅಭಿನಯ

ಕೇಳಿಕೆ ಇಡೀ ರಾತ್ರಿ ನಡೆಯುವ ಸಾಂಪ್ರದಾಯಿಕ ಜಾನಪದ ಕಲೆ. ವೃತ್ತಿ ರಂಗಭೂಮಿಯ ಶಿಷ್ಟತೆಯನ್ನು ಗಳಿಸಿಕೊಳ್ಳದೆ ಇನ್ನೂ ಜನಪದ ಮಟ್ಟದಲ್ಲೇ ಇದು ಉಳಿದಿದೆ. ಕಲಾವಿದರು ಕಿರೀಟ, ಎದೆಹಾರ, ಭುಜಕೀರ್ತಿಗಳನ್ನು ಧರಿಸುತ್ತಾರೆ. ಪಾತ್ರಗಳಿಗೆ ತಕ್ಕಂತೆ ಕಿರೀಟಗಳನ್ನು, ಬೇರೆ ಬೇರೆ ಆಭರಣಗಳನ್ನು ವೈವಿಧ್ಯಪೂರ್ಣವಾಗಿ ಕಂಗೊಳಿಸುವಂತೆ ಮಾಡುತ್ತಾರೆ. ಲವಕುಶ, ಕುರುಕ್ಷೇತ್ರ, ವಿರಾಟಪರ್ವ, ಲಂಕಾದಹನ, ಬಾಲನಾಗಮ್ಮ, ಶಶಿರೇಖಾಪಹರಣ, ದ್ರೌಪದಿ ವಸ್ತ್ರಾಪಹರಣ ಮುಂತಾದ ಪ್ರಸಂಗಗಳ ರಸವತ್ತಾದ ಘಟನೆಗಳನ್ನು ಇವರು ಆಯ್ಕೆಮಾಡಿಕೊಂಡು ಕೇಳಿಕೆ ನಡೆಸಿಕೊಡುತ್ತಾರೆ. ತಂಡದ ಪ್ರಧಾನ ಹಾಡುಗಾರನೇ ಭಾಗವತನಾಗಿರುತ್ತಾನೆ.
‘ ಅಬ್ಲೂಡು ಗ್ರಾಮಕ್ಕೆ 1819 ರಲ್ಲಿ ಬಳ್ಳಾರಿಯ ನರಹರಿಶಾಸ್ತ್ರಿಯವರ ಮೂಲಕ ‘ಕೇಳಿಕೆ’ ಕಲಾ ಪ್ರಕಾರ ಪ್ರವೇಶಿಸಿತು. ಅವರಿಂದ ಕಲಿತ ತಿಮ್ಮಪ್ಪ, ಮುನಿಯಪ್ಪ, ನಡುವಲಪ್ಪ, ಅಪ್ಪಾಲಪ್ಪ, ಚಿಕ್ಕಹುಚ್ಚಪ್ಪ ಮುಂತಾದವರು ಗುರುಗಳಾಗಿ ಹಲವಾರು ಮಂದಿ ಕಲಾವಿದರ ಸೃಷ್ಟಿಗೆ ಕಾರಣರಾದರು. ನಂತರದ ಕಾಲದ ಗುರುಗಳಾದ ಚಿಕ್ಕಮುನಿಶಾಮಪ್ಪ, ಮಾಳಿಗೆ ಮುನಿಯಪ್ಪ, ಎ.ನರಸಿಂಹಯ್ಯ ಅವರ ಮೂಲಕ ಈ ಕಲೆ ಬೆಳೆಯಿತು. 1957 ರಲ್ಲಿ ಪಂಜುಗಳನ್ನು ಕಟ್ಟಿ ‘ಕೇಳಿಕೆ’ಯನ್ನು ಪ್ರದರ್ಶಿಸುತ್ತಿದ್ದರು. ಆಮೇಲೆ ಪೆಟ್ರೋಮಾಕ್ಸ್ ಬಂತು. ಈಗ ವಿದ್ಯುದ್ದೀಪಗಳಿವೆ. ಸೀನರಿಗಳು, ವೇಷಭೂಷಣಗಳು ಈಗ ಮಳಮಾಚನಹಳ್ಳಿಯಿಂದ ಬಾಡಿಗೆಗೆ ತರುತ್ತೇವೆ. ಮುಂದಿನ ತಲೆಮಾರಿನವರೂ ಉತ್ಸಾಹ ತೋರುತ್ತಿರುವುದರಿಂದ ಕಲಿಸುತ್ತಿದ್ದೇನೆ’ ಎಂದು ‘ಕೇಳಿಕೆ’ ನಿರ್ದೇಶಕ ಬಿ.ಸಿ.ಚನ್ನಕೃಷ್ಣಪ್ಪ ತಿಳಿಸಿದರು.
‘ಕೇಳಿಕೆ’ಯ ನಿರ್ದೇಶಕ ಬಿ.ಸಿ.ಚನ್ನಕೃಷ್ಣಪ್ಪ, ಭಾಗವತ ಎ.ಎನ್. ವೀರಪ್ಪ, ಸಾರಥಿ ಎ.ಎನ್.ನರಸಿಂಹಯ್ಯ, ಹಿನ್ನೆಲೆ ಗಾಯಕರಾದ ಡಿ.ವೆಂಕಟರಾಯಪ್ಪ, ಆರ್.ವಿ.ವೆಂಕಟರಾಯಪ್ಪ, ಸಾಧು ನಾರಾಯಣಪ್ಪ, ಮುನಯ್ಯಪ್ಪ, ಜಿ.ನರಸಿಂಹಯ್ಯ, ಹಾರ್ಮೋನಿಯಂ ಶ್ರೀನಿವಾಸ್, ತಬಲ ನಾಗರಾಜ್, ಮುಖವೀಣೆ ಮುಳವಾಗಿಲಪ್ಪ, ಪಾತ್ರವರ್ಗದಲ್ಲಿ ಎ.ಎಲ್.ನರಸಿಂಹಮೂರ್ತಿ(ಧರ್ಮರಾಯ), ನಾಗೇಶ್(ದ್ರೌಪದಿ), ವಿ.ವೆಂಕಟೇಶ್(ಧುರ್ಯೋಧನ), ಕೆ.ಚನ್ನಕೃಷ್ಣಪ್ಪ(ದುಶ್ಯಾಸನ), ಬಿ.ಶ್ರೀನಿವಾಸ್(ಹಿಡಂಬಿ), ಎ.ಆರ್ .ರಾಮಚಂದ್ರ(ಭೀಮಸೇನ), ಎ.ಪಿ.ನವೀನ್ಕುಮಾರ್(ಅರ್ಜುನ), ಮುರಳಿ ಮತ್ತು ಶೇಷಾದ್ರಿ(ಕೃಷ್ಣ), ಟಿ.ವೆಂಕಟೇಶ್(ಪ್ರಾತಿಕಾಮಿಕ), ಡಿ.ರಾಮಾಂಜಿ(ಕರ್ಣಗಾಂಧಾರಿ), ಪ್ರಸಾದನ ಮಳಮಾಚನಹಳ್ಳಿ ನಾರಾಯಣಸ್ವಾಮಿ, ಅತಿಥಿಗಳಾಗಿದ್ದ ಈಧರೆ ತಿರುಮಲ ಪ್ರಕಾಶ್, ಕ.ಸಾ.ಪ ಜಿಲ್ಲಾಧ್ಯಕ್ಷ ಕೈವಾರ ಶ್ರೀನಿವಾಸ್, ಅಬ್ಲೂಡು ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯ ಜೆಸಿಬಿ ಮಂಜುನಾಥ್ ಮತ್ತಿತರರು ಹಾಜರಿದ್ದರು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here