ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ತಾಲ್ಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗು ನಗರಸಭೆ ವತಿಯಿಂದ ಗಣೇಶ ಚತುರ್ಥಿಯ ಅಂಗವಾಗಿ ಆಯೋಜಿಸಲಾಗಿದ್ದ ಶಾಂತಿಸಭೆಯಲ್ಲಿ ತಹಸೀಲ್ದಾರ್ ಎಸ್.ಅಜಿತ್‌ಕುಮಾರ್ ರೈ ಮಾತನಾಡಿದರು.
ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ನಾಗರಿಕರು ಸಹಕರಿಸಬೇಕು ಎಂದು ಅವರು ತಿಳಿಸಿದರು.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಗಣಪತಿ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲು ಇಚ್ಚಿಸುವ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನಾಗರಿಕರು ಕಡ್ಡಾಯವಾಗಿ ನಗರಸಭೆ, ಬೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆದುಕೊಳ್ಳುವುದರೊಂದಿಗೆ ಆಯಾ ಇಲಾಖೆಯವರು ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಅನುಮತಿ ಪಡೆಯದೆ ಗಣೇಶನ ಪ್ರತಿಷ್ಟಾಪನೆಗೆ ಯಾರಾದರೂ ಮುಂದಾದಲ್ಲಿ ಅಂತಹವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಗಣೇಶನ ಪ್ರತಿಷ್ಟಾಪನೆಯ ದಿನಾಂಕ, ಸ್ಥಳ, ವಿಸರ್ಜನೆ ಮಾಡುವ ದಿನಾಂಕ, ಮೆರವಣಿಗೆ ಹೋಗುವ ಮಾರ್ಗ, ವಿಸರ್ಜನೆ ಮಾಡುವ ಸ್ಥಳ ಮುಂತಾದ ಅಗತ್ಯವಾದ ಮಾಹಿತಿಯನ್ನು ಪೊಲೀಸ್ ಠಾಣೆಗೆ ಕಡ್ಡಾಯವಾಗಿ ನೀಡಬೇಕು. ವಿಸರ್ಜನೆಯ ದಿನಾಂಕದಂದು ಗಣೇಶನ ಮೂರ್ತಿಯನ್ನು ಸಂಜೆ ೬ ಘಂಟೆಯ ಒಳಗೆ ವಿಸರ್ಜಿಸಬೇಕು ಎಂದರು.
ಪ್ರವಾಹ ಪೀಡಿತ ಕೊಡಗು ಜಿಲ್ಲಾ ನಿರಾಶ್ರಿತರಿಗೆ ಗೌರವ ನೀಡುವ ಸಲುವಾಗಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವುದನ್ನು ಒಂದು ದಿನ ಅಥವ ಮೂರು ದಿನಗಳಿಗೆ ಸೀಮಿತಗೊಳಿಸಿ ಹಬ್ಬಕ್ಕೆ ಖರ್ಚು ಮಾಡುವ ಹಣವನ್ನು ಉಳಿಸಿ ಕೊಡಗು ಸಂತ್ರಸ್ಥರಿಗೆ ಡಿಡಿ ಮೂಲಕ ನೀಡಿದರೆ ಉತ್ತಮ. ಅಂತಹ ಸಂಘ ಸಂಸ್ಥೆಗಳಿಗೆ ಮುಂಬರುವ ಗಾಂಧಿ ಜಯಂತಿಯಂದು ತಾಲ್ಲೂಕು ಆಡಳಿತದಿಂದ ಪ್ರಶಂಸಾ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಸರ್ಕಲ್ ಇನ್ಸ್‌ಪೆಕ್ಟರ್ ಸಿದ್ದರಾಜು ಮಾತನಾಡಿ, ಹಬ್ಬಗಳನ್ನು ಆಚರಿಸುವುದು ಸಂತೋಷ ಪಡಲಿಕ್ಕಾಗಿಯೇ ಹೊರತು ಅನ್ಯ ಧರ್ಮೀಯರ ಭಾವನೆಗಳಿಗೆ ಧಕ್ಕೆ ಯುಂಟು ಮಾಡಲಿಕ್ಕಲ್ಲ. ಹಬ್ಬದ ಹೆಸರಿನಲ್ಲಿ ನಾಗರಿಕರ ಭಾವನೆಗಳಿಗೆ ಧಕ್ಕೆಯುಂಟಾಗದಂತೆ ಆಚರಿಸಲು ಗಣೇಶ ಪ್ರತಿಷ್ಠಪನೆ ಮಾಡುವವರು ಕಡ್ಡಾಯವಾಗಿ ವ್ಯವಸ್ಥಾಪನಾ ಸಮಿತಿ ರಚಿಸಿಕೊಳ್ಳಬೇಕು ಹಾಗೂ ಸಮಿತಿಯ ಎಲ್ಲಾ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಇಲಾಖೆಗೆ ನೀಡುವುದರೊಂದಿಗೆ ಶಾಂತಿಯುತವಾಗಿ ಹಬ್ಬ ಆಚರಿಸಬೇಕು ಎಂದರು.
ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಮಾತನಾಡಿ ಗಣೇಶನ ಮೂರ್ತಿಯ ಪ್ರತಿಷ್ಠಾಪನೆಯ ಹೆಸರಲ್ಲಿ ರಸ್ತೆಗೆ ಅಡ್ಡ ಹಾಕುವುದು, ಫ್ಲೆಕ್ಸ್, ಬಂಟಿಂಗ್ ಬಳಸುವುದಕ್ಕೆ ಈ ಬಾರಿ ಅವಕಾಶವಿರುವುದಿಲ್ಲ. ವಿಸರ್ಜನೆ ವೇಳೆಯಲ್ಲಿ ನಾಗರಿಕರು ಅದರಲ್ಲಿಯೂ ಮುಖ್ಯವಾಗಿ ಯುವಕರು ಸಂಯಮದಿಂದ ವರ್ತಿಸಬೇಕು. ಡಿಜೆ ಸೌಂಡ್ ಸಿಸ್ಟಂ ಮತ್ತು ಪಟಾಕಿ ಹೊಡೆಯುವುದನ್ನು ಸಂಪುರ್ಣ ನಿಷೇಧಿಸಲಾಗಿದೆ. ಗಣೇಶನ ವಿಸರ್ಜನೆಗೆ ಈಗಾಗಲೇ ತಾಲ್ಲೂಕು ಆಡಳಿತ ಸ್ಥಳ ನಿಗಧಿಪಡಿಸಿದ್ದು ಸೂರ್ಯಾಸ್ತದ ಮೊದಲೇ ವಿಸರ್ಜನೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.
ನಗರಠಾಣೆ ಪಿಎಸ್ಸೈ ಲಿಯಾಖತ್ ಮಾತನಾಡಿ, ಗಣೇಶನ ಹಬ್ಬದ ಆಚರಣೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯಾ ವ್ಯವಸ್ಥಾಪನಾ ಸಮಿತಿ ಸದಸ್ಯರು ನೋಡಿಕೊಳ್ಳಬೇಕು. ಹಬ್ಬದ ಆಚರಣೆಯ ಹೆಸರಲ್ಲಿ ರಾತ್ರಿಯಿಡೀ ಧ್ವನಿವರ್ಧಕಗಳನ್ನು ಬಳಸುವುದರಿಂದ ವೃದ್ದರೂ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತದೆ. ಹಾಗಾಗಿ ಸುಪ್ರೀಂ ಕೋರ್ಟ್ ಆಧೇಶದಂತೆ ರಾತ್ರಿ ೧೦ ಗಂಟೆಯ ನಂತರ ಯಾವುದೇ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅನ್ಯ ಸಮುದಾಯಗಳ ಜನತೆಯ ಭಾವನೆಗಳಿಗೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಹಬ್ಬ ಆಚರಿಸಲು ಎಲ್ಲರ ಸಹಕಾರ ಅಗತ್ಯ ಎಂದರು.
- Advertisement -
- Advertisement -
- Advertisement -