ಕಣ್ಣಿನಿಂದ ನೋಡಿದ್ದಷ್ಟೇ ಸತ್ಯವಲ್ಲ. ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಪ್ರಮಾಣಿಸಿ ನೋಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ವಿಜ್ಞಾನ ಶಿಕ್ಷಕ ಎಂ.ಎ.ರಾಮಕೃಷ್ಣ ತಿಳಿಸಿದರು.
ತಾಲ್ಲೂಕಿನ ಇರಗಪ್ಪನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಅಂಗವಾಗಿ ನಡೆದ ವಿಜ್ಞಾನ ಮತ್ತು ಗಣಿತ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಮಾಯಕತೆಯಿರುವವರನ್ನು ಮೋಸಗೊಳಿಸಬಲ್ಲರು. ವಿಜ್ಞಾನ ತಿಳಿದವರನ್ನು ಯಾರೂ ಮೋಸಗೊಳಿಸಲಾರರು. ಚಿಕ್ಕ ಚಿಕ್ಕ ವಿಜ್ಞಾನದ ಪ್ರಯೋಗಗಳನ್ನು ಮಾಡುತ್ತಾ ಹೋದಂತೆ ವಿಜ್ಞಾದ ವಿಷಯದ ಬಗ್ಗೆ ಆಸಕ್ತಿ, ಪ್ರೀತಿ ಹುಟ್ಟುತ್ತದೆ. ದಿನನಿತ್ಯದಲ್ಲಿ ಕಂಡುಬರುವ ಪ್ರತಿಯೊಂದು ಸಂಗತಿಗಳನ್ನೂ ವಿಜ್ಞಾನದ ಹಿನ್ನೆಲೆಯಿಂದ ನೋಡುತ್ತಾ ಬಂದರೆ ನಮ್ಮ ಸುತ್ತಲಿನ ಜಗತ್ತು ನಮಗೆ ಇನ್ನಷ್ಟು ಸುಂದರವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಏಳನೇ ತರಗತಿಯ ಪಠ್ಯದಲ್ಲಿರುವ ಪ್ರತಿಫಲನ, ಬೆಳಕು, ಗಾಳಿಗೆ ಸಂಬಂಧಿಸಿದ ಪ್ರಯೋಗಗಳು, ಅಗ್ನಿಪರ್ವತ ಮತ್ತು ಜ್ವಾಲಾಮುಖಿಗಳ ಪ್ರಾತ್ಯಕ್ಷಿಕೆಯನ್ನು ಮಾಡುವ ಬಗ್ಗೆ, ಪವಾಡಗಳ ಹಿಂದಿನ ವೈಜ್ಞಾನಿಕ ಸತ್ಯಗಳು, ಕೈಚಳಕಗಳ ಬಗ್ಗೆ ವಿದ್ಯಾರ್ಥಿಗಳಿಗೆ ತೋರಿಸಿ ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳು ವಿವಿಧ ವಿಜ್ಞಾನದ ಮಾದರಿಗಳಾದ ಹೃದಯ, ನೀರು ಶುದ್ಧೀಕರಣ, ಮೂತ್ರ ವಿಸರ್ಜನಾಂಗ, ಎಲೆ ಮತ್ತು ಗಣಿತ ಮಾದರಿಗಳಾದ ನೇಪಿಯರ್ ಗುಣಾಕಾರ, ಹಣ, ತೂಕ, ದ್ರವದ ಅಳತೆ, ಕೋನಗಳು, ಸ್ಥಾನಬೆಲೆ ಮುಂತಾದವುಗಳನ್ನು ಪ್ರದರ್ಶಿಸಿದ್ದರು. ಸುತ್ತಮುತ್ತಲಿನ ಶಾಲೆಗಳಿಂದ ವಿದ್ಯಾರ್ಥಿಗಳು ಬಂದು ವೀಕ್ಷಿಸಿ ಮಾಹಿತಿ ಪಡೆದರು.
ಸಮೂಹ ಸಂಪನ್ಮೂಲ ವ್ಯಕ್ತಿ ಎನ್.ವೆಂಕಟೇಶಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಗರಿಗರೆಡ್ಡಿ, ಉಪಾಧ್ಯಕ್ಷೆ ನಾಗಮ್ಮ ದ್ಯಾವಪ್ಪ, ತಾಲ್ಲೂಕು ಭೂ ಮಂಜೂರಾತಿ ಸಮಿತಿ ಸದಸ್ಯ ಅಶ್ವತ್ಥನಾರಾಯಣರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯರಾದ ಗಾಯಿತ್ರಿ ನರಸಿಂಹಮೂರ್ತಿ, ಮುನಿರತ್ನಮ್ಮ, ಮುಖ್ಯ ಶಿಕ್ಷಕ ಎಸ್.ರವಿ, ಶಿಕ್ಷಕರಾದ ವಿ.ವಿಜಯಮಣಿ, ವೈ.ವನಿತ, ಸಾದಿಕ್‌ಪಾಷ, ಸಾದಲಿ ಹಾಗೂ ಇರಗಪ್ಪನಹಳ್ಳಿ ಸಮೂಹ ಸಂಪನ್ಮೂಲ ಕೇಂದ್ರದ ಶಿಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -