ಅರಣ್ಯ ನಾಶ, ಪರಿಸರ ಮಾಲಿನ್ಯದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ. ಕಾಲಕಾಲಕ್ಕೆ ಮಳೆ–ಬೆಳೆಯಾಗದೆ, ಹೆಚ್ಚುತ್ತಿರುವ ಸೂರ್ಯನ ತಾಪ ಹಾಗೂ ಬಿಸಿ ಗಾಳಿ. ನೀರಿಲ್ಲದೆ ಪರಿತಪಿಸುವ ಪ್ರಾಣಿ ಪಕ್ಷಿಗಳು. ಈ ಪರಿಸ್ಥಿತಿಯನ್ನು ಸರಿಪಡಿಸಲು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸಿ ಎಂದು ಉಪವಲಯ ಅರಣ್ಯಾಧಿಕಾರಿ ರಾಮಾಂಜನೇಯುಲು ತಿಳಿಸಿದರು.
ತಾಲ್ಲೂಕಿನ ಇರಗಪ್ಪನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಅರಣ್ಯ ಇಲಾಖೆ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ‘ವಿದ್ಯಾರ್ಥಿಗೊಂದು ಸಸಿ’ ಕಾರ್ಯಕ್ರಮವನ್ನು ಶಾಲಾ ಆವರಣದಲ್ಲಿ ಗಿಡವನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಮನುಷ್ಯನ ತೀರದ ಆಸೆಗಳ ಫಲವೇ ಈಗಿನ ಪರಿಸ್ಥಿತಿಗೆ ಕಾರಣ. ಆದರೂ ಪರಿಸ್ಥಿತಿ ಇನ್ನೂ ಕೈಮೀರಿಲ್ಲ. ಮನುಷ್ಯ ಈಗ ಎಚ್ಚೆತ್ತುಕೊಂಡರೂ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ನಿರ್ಮಾಣ ಮಾಡಿಕೊಡಬಹುದು. ಅದಕ್ಕಾಗಿ ಈಗಿನಿಂದಲೇ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ನೆಡುವ ಅಗತ್ಯ ಇದೆ. ‘ಒಬ್ಬ ವ್ಯಕ್ತಿಗೆ ಒಂದು ಮರ’ ಆಂದೋಲನಕ್ಕೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೈಜೋಡಿಸಬೇಕು ಎಂದರು.
ಗಸಗಸೆ ಗಿಡಗಳು ತುಂಬಾ ಬೇಗ ಹಾಗೂ ಚಿಕ್ಕದಾಗಿ ಬೆಳೆಯುತ್ತವೆ. ಇದರಿಂದ ನೆರಳು, ಹಕ್ಕಿ ಮತ್ತು ಮನುಷ್ಯರಿಗೆ ಸಿಹಿಯಾದ ಹಣ್ಣು ಸಹ ದೊರೆಯುತ್ತದೆ. ಅರಳಿ ನರದಿಂದ ಹೆಚ್ಚು ಆಮ್ಲಜನಕ ಉತ್ಪತ್ತಿಯಾಗುತ್ತದೆ ಎಂದು ಮರಗಳ ಕುರಿತು ಮಾಹಿತಿ ನೀಡಿದರು.
ಮಹಾಗನಿ, ಅರಳಿ, ಸಂಪಿಗೆ, ಜಂಬುನೇರಳೆ, ಗಸಗಸೆ, ನುಗ್ಗೆಕಾಯಿ ಮುಂತಾದ 80 ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಟ್ಟು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದೊಂದು ಗಿಡದ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು.
ಸಮೂಹ ಸಂಪನ್ಮೂಲ ವ್ಯಕ್ತಿ ವೆಂಕಟೇಶಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರಮೇಶ್, ಕೃಷಿ ಮೇಲ್ವಿಚಾರಕ ಜನಾರ್ಧನ್, ಮುಖ್ಯ ಶಿಕ್ಷಕ ಎಸ್.ರವಿ, ಸಹಶಿಕ್ಷಕರಾದ ವೈ.ವನಿತಾ, ವಿಜಯಮಣಿ, ಶ್ರೀನಿವಾಸ್, ಗ್ರಾಮ ಪಂಚಾಯತಿ ಸದಸ್ಯರಾದ ಗಾಯತ್ರಿ ನರಸಿಂಹಮೂರ್ತಿ, ಮುನಿರತ್ನಮ್ಮ, ಗ್ರಾಮದ ಮುಖಂಡ ಅಶ್ವತ್ಥರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷ ಚಾಂದ್ಪಾಷ, ಸದಸ್ಯರಾದ ನವಾಬ್, ಸುಧಾಕರ್, ಇಮಾಮ್ಸಾಬಿ, ಬಾಬಾಜಾನ್, ವಿಷ್ಣುಕುಮಾರ್, ಅನಿಲ್ಕುಮಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -