ಉದ್ದೇಶಪೂರ್ವಕವಾಗಿ ಬಿ.ಬಿ.ಎಂ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡದೆ ಸತಾಯಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು.
ನಗರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ರಾಮಚಂದ್ರಪ್ಪ ಎಂಬುವವರು ಕಾಲೇಜಿನಲ್ಲಿ ಬಿ.ಬಿ.ಎಂ ಮಾಡುತ್ತಿರುವ ೧೨ ಮಂದಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಗ್ರೇಡ್ ಅಂಕಗಳನ್ನು ನೀಡದೆ ಸತಾಯಿಸುತ್ತಿದ್ದಾರೆ. ಪರೀಕ್ಷೆಗಳು ಮುಗಿದು ಫಲಿತಾಂಶ ಹೊರಬಿದ್ದರೂ ಕೂಡಾ ಉದ್ದೇಶಪೂರ್ವಕವಾಗಿ ನಮಗೆ ನೀಡಬೇಕಾಗಿದ್ದ ಅಂಕಗಳನ್ನು ನೀಡದೆ ವಂಚನೆ ಮಾಡಲಾಗಿದೆ ಎಂದು ಪ್ರಾಂಶುಪಾಲ ಚಂದ್ರಾನಾಯಕ್ ಅವರಿಗೆ ದೂರು ನೀಡಿದರು.
ಪ್ರಾಂಶುಪಾಲರ ಕೊಠಡಿಯಲ್ಲಿ ಉಪನ್ಯಾಸಕ ರಾಮಚಂದ್ರಪ್ಪ ಅವರನ್ನು ಕರೆದು ಈ ವಿಚಾರಣೆ ನಡೆಸಿದಾಗ ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ, ನಾನು ಅಂಕಗಳನ್ನು ಕೊಟ್ಟಿದ್ದೇನೆ ಆದರೆ ಕಚೇರಿಯ ಗುಮಾಸ್ತರು ಕಂಪ್ಯೂಟರ್ನಲ್ಲಿ ಸೇರ್ಪಡೆಗೊಳಿಸಿಲ್ಲವೆಂದು ಉದಾಸೀನತೆಯಿಂದ ಉತ್ತರಿಸಿದಾಗ ಕೆರಳಿದ ಕೆಲ ವಿದ್ಯಾರ್ಥಿಗಳು ನೀವು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದೀರಿ, ನಿಮ್ಮ ವಿಷಯಗಳಿಗೆ ಸಂಬಂಧಿಸಿದ ಅಂಕಗಳನ್ನು ಕ್ರಮಬದ್ದವಾಗಿ ನೀಡುವುದು ನಿಮ್ಮ ಕರ್ತವ್ಯ, ಕೇವಲ ಗುಮಾಸ್ತರಿಗೆ ನೀಡಿದರೆ, ನಮ್ಮ ಮುಂದಿನ ವ್ಯಾಸಂಗಕ್ಕಾಗಿ ನಾವೇನು ಮಾಡಬೇಕು, ಕಳೆದ ವರ್ಷವೂ ಕೂಡಾ ಇದೇ ರೀತಿಯಾಗಿ ವರ್ತನೆ ಮಾಡಿದ್ದೀರಿ ಈಗಲೂ ಇದೇ ರೀತಿ ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ವಿಧ್ಯಾರ್ಥಿಗಳೊಂದಿಗೆ ಮಾತನಾಡಿದ ಪ್ರಾಂಶುಪಾಲ ಚಂದ್ರಾನಾಯಕ್, ಆಗಿರುವ ತಪ್ಪನ್ನು ಕೂಡಲೇ ಸರಿಪಡಿಸಿ, ನಿಮಗೆ ನೀಡಬೇಕಾಗಿರುವ ಗ್ರೇಡ್ ಅಂಕಗಳನ್ನು ಕಂಪ್ಯೂಟರ್ನಲ್ಲಿ ಕೂಡಲೇ ನಮೂದಿಸುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ನಂತರ ವಿಧ್ಯಾರ್ಥಿಗಳು ಕಾಲೇಜಿನಿಂದ ಹೊರನಡೆದರು.
ವಿದ್ಯಾರ್ಥಿ ಮುಖಂಡರಾದ ಸುರೇಶ್, ಚಂದ್ರು, ಮಧುಕುಮಾರ್, ಗಂಗರಾಜು, ಇಮ್ರಾನ್ಪಾಷಾ, ಲಾವಣ್ಯ, ಮಧುಚಂದ್ರ, ಮಹೇಶ್, ಮಂಜುನಾಥ್, ಮಲ್ಲಿಕ್, ನರಸಿಂಹ, ನವಾಜ್ಪಾಷಾ, ಸಾದಿಕ್ಪಾಷಾ, ಶ್ರೀನಿವಾಸ್, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -