ಬಯಲುಸೀಮೆ ಭಾಗದ ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ರೈತರ ಪಂಪ್ಸೆಟ್ಟುಗಳಿಗೆ ಸಮರ್ಪಕ ವಿದ್ಯುಚ್ಛಕ್ತಿ ಪೂರೈಕೆ ಹಾಗು ಈ ಭಾಗದ ರೈತರ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಅಕ್ಟೋಬರ್ ೮ ರ ಗುರುವಾರದಂದು ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಕರವೇ (ಪ್ರವೀಣ್ಕುಮಾರ್ ಶೆಟ್ಟಿ ಬಣದ) ತಾಲ್ಲೂಕು ಅಧ್ಯಕ್ಷ ಜಿ.ಎನ್.ವಸಂತ್ಕುಮಾರ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಬರಪೀಡಿತ ಪ್ರದೇಶಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಕಾಲದಲ್ಲಿ ಸರಿಯಾದ ಮಳೆಯಾಗದೇ ಜನರು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಕೃಷಿ ಮಾಡಲು ನೀರಿಲ್ಲದಿರುವುದರಿಂದ ಗುಳೆ ಹೋಗುವ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ಈ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು.
ಇನ್ನು ಈ ಭಾಗದ ರೈತನಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಸದೇ ಇರುವುದರಿಂದ ಇರುವ ಅಲ್ಪ ಪ್ರಮಾಣದ ಕೊಳವೆ ಬಾವಿ ನೀರನ್ನು ಸಹ ಬಳಕೆ ಮಾಡಿಕೊಂಡು ಕೃಷಿ ಮಾಡಲಾಗುತ್ತಿಲ್ಲ. ರೈತರಿಗೆ ವಿದ್ಯುತ್ ಸಮರ್ಪಕವಾಗಿ ಪೂರೈಸಬೇಕು ಎಂದರು.
ಕಳೆದ ಆರು ವರ್ಷಗಳಿಂದ ಸತತವಾಗಿ ಬೆಳೆ ಕೈ ಕೊಡುತ್ತಿದ್ದು ಈ ಭಾಗದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದ್ದು ಕೂಡಲೇ ರೈತರು ಬ್ಯಾಂಕುಗಳಲ್ಲಿ ಮಾಡಿರುವ ಸಾಲ ಹಾಗು ಬಡ್ಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕರವೇ ವತಿಯಿಂದ ಗುರುವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೂ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು ವಿವಿಧ ರಾಜಕೀಯ ಪಕ್ಷಗಳ ಮುಖಂಡರೂ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಹಾಗು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ರ್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಕರವೇ ತಾಲ್ಲೂಕು ಸಂಚಾಲಕ ಆನಂದರೆಡ್ಡಿ, ಗೌರವಾಧ್ಯಕ್ಷ ಚೌಡರೆಡ್ಡಿ, ಸಂಚಾಲಕ ಆರ್.ನರಸಿಂಹರೆಡ್ಡಿ, ರೈತ ಮುಖಂಡರಾದ ಶಿವಾರೆಡ್ಡಿ, ಆರ್.ಆನಂದರೆಡ್ಡಿ, ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -