ನಗರದ ನ್ಯಾಯಾಲಯದ ಸಂಕೀರ್ಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ‘ಆಮ್ಲ ದಾಳಿಯ ಸಂತ್ರಸ್ಥರ ಯೋಜನೆ(ನಲ್ಸಾ ಯೋಜನೆ 2016)’ಯ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆ.ಎಂ.ಎಫ್.ಸಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಆಸಿಡ್ ದಾಳಿಯೆಂಬುದು ಭಾರತವನ್ನು ಬಹುಕಾಲದಿಂದ ಕಾಡುತ್ತಿರುವ ಪಿಡುಗು. ಆಸಿಡ್ ದಾಳಿಯಿಂದ ಬದುಕುಳಿದ ಯುವತಿಯರು, ಮಹಿಳೆಯರು ನರಕಯಾತನೆ ಅನುಭವಿಸುವ ದುರ್ಘಟನೆಗಳು ಸಮಾಜದಲ್ಲಿ ಕಂಡಿರುತ್ತೇವೆ. ಈ ರೀತಿಯ ಸಮಾಜದ ಸ್ವಾಸ್ಥ್ಯ ಕೆಡಿಸುವ ಘಟನೆಗಳು ನಡೆಯಬಾರದು ಎಂದು ಕಾನೂನು ರೂಪುಗೊಂಡಿದೆ.
ಕ್ರೂರ ಮನಸ್ಸಿನ ಸಮಾಜಘಾತುಕರಿಂದ ಮಹಿಳೆಯರ ಮೇಲೆ ಆಸಿಡ್ ದಾಳಿ ನಡೆಯುತ್ತಿದ್ದು, ಇಂತಹ ದಾಳಿಯನ್ನು ತಪ್ಪಿಸಲು ಜೀವಾವಧಿ ಶಿಕ್ಷೆಯಂತಹ ಕಠಿಣ ಕಾನೂನು ಸಮಾಜದಲ್ಲಿ ಜೀವಂತವಿದೆ ಎಂದು ಅವರು ತಿಳಿಸಿದರು.
ಅಪರಿಚಿತರಿಗೆ ಆಸಿಡ್ ಮಾರಾಟ ಮಾಡಬಾರದು ಎಂಬ ನಿಯಮವಿದೆ. ಆಸಿಡ್ ಖರೀದಿಸಿದವರು ಅದನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ದಾಳಿ ನಡೆಸಲೆಂದೇ ಆಸಿಡ್ ಖರೀದಿಸುವುದು ಮುಂಚಿತವಾಗಿ ಗೊತ್ತಿದ್ದರೆ ಪೊಲೀಸರಿಗೆ ದೂರು ನೀಡಬೇಕು ಎಂದರು.
ಸಿವಿಲ್ ನ್ಯಾಯಾಧೀಶರಾಸ ಟಿ.ಎಲ್.ಸಂದೀಶ್ ಮಾತನಾಡಿ, ಆಸಿಡ್ ದಾಳಿ ಅಪರಾಧಕ್ಕೆ ಪ್ರತ್ಯೇಕವಾಗಿ ಶಿಕ್ಷೆ ನೀಡುವಂತಾಗಬೇಕು ಎಂದು 2013ರ ಏಪ್ರಿಲ್ 3ರಂದು ಜಾರಿಗೆ ತಂದಿತು. ಈ ಕಾನೂನಿನಲ್ಲಿ ಐಪಿಸಿಗೆ ಎರಡು ಉಪವಿಧಿಗಳನ್ನು ಸೇರಿಸಲಾಯಿತು. 326ಎ ಉಪವಿಧಿಯು ಆಸಿಡ್ ಬಳಕೆಯಿಂದ ಸ್ವಯಂಪ್ರೇರಿತವಾಗಿ ಇತರರಿಗೆ ತೀವ್ರ ಹಾನಿಯುಂಟುಮಾಡುವುದಕ್ಕೆ ಸಂಬಂಧಿಸಿದ್ದರೆ, 326ಬಿ ಉಪವಿಧಿಯು ಸ್ವಇಚ್ಛೆಯಿಂದ ಆಸಿಡ್ ಎರಚುವುದು ಅಥವಾ ಎರಚಲು ಯತ್ನಿಸುವುದಕ್ಕೆ ಸಂಬಂಧಿಸಿದೆ. ಇದಲ್ಲದೆ, ಲೈಂಗಿಕ ದೌರ್ಜನ್ಯ, ದುರುದ್ದೇಶದಿಂದ ಹಿಂಬಾಲಿಸುವುದು ಮುಂತಾದ ಅಂಶಗಳನ್ನೂ ಈ ಕಾನೂನಿನ ವ್ಯಾಪ್ತಿಗೆ ಸೇರಿಸಲಾಗಿದೆ.
ಆಸಿಡ್ ದಾಳಿ ಮೂಲಕ ತೀವ್ರತರಹದ ಹಾನಿ ಮಾಡಿದರೆ ಅಥವಾ ಇದರಿಂದ ಶಾಶ್ವತ ಅಥವಾ ಭಾಗಶಃ ಅಂಗ ಊನವಾದರೆ ಅಥವಾ ಸುಟ್ಟ ಗಾಯಗಳಾದರೆ ಅಥವಾ ಸಂತ್ರಸ್ತರ ದೇಹದ ಯಾವುದೇ ಅಂಗಕ್ಕೆ ವೈಕಲ್ಯ ಉಂಟಾದರೆ ಅಂಥ ವ್ಯಕ್ತಿಗೆ ಸೆಕ್ಷನ್ 326 ಎ ಪ್ರಕಾರ,10 ವರ್ಷಕ್ಕೆ ಕಡಿಮೆಯಿಲ್ಲದ ಕಾರಾಗೃಹ ಶಿಕ್ಷೆ ವಿಧಿಸಬಹುದು. ಈ ಶಿಕ್ಷೆ ಪ್ರಮಾಣವನ್ನು ಜೀವಾವಧಿಗೂ ವಿಸ್ತರಿಸಬಹುದು. ಇದಲ್ಲದೆ, ಸಂತ್ರಸ್ತೆಯ ವೈದ್ಯಕೀಯ ಚಿಕಿತ್ಸೆಗೆ ತಗಲುವ ವೆಚ್ಚದಷ್ಟು ದಂಡವನ್ನೂ ಆರೋಪಿಗೆ ವಿಧಿಸಬಹುದಾಗಿದೆ ಎಂದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಂ.ಬಿ.ಲೋಕೇಶ್ ಹಾಜರಿದ್ದರು.
- Advertisement -
- Advertisement -
- Advertisement -