ವಿದ್ಯಾರ್ಥಿ ದೆಸೆಯಲ್ಲಿಯೇ ನಮ್ಮ ಮುಂದಿನ ಜೀವನ ಹೇಗೆ ಕಟ್ಟಿಕೊಳ್ಳಬೇಕು ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಜೆಎಂಎಫ್‍ಸಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಹಾಗು ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು ಮತ್ತು ರ್ಯಾಗಿಂಗ್ ತಡೆ ಕುರಿತು ಏರ್ಪಡಿಸಲಾಗಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದಲ್ಲಿರುವ ಒಳ್ಳೆಯ ಹಾಗು ಕೆಟ್ಟ ವ್ಯಸನಗಳಾವುವು ಎಂಬುದನ್ನು ಗುರುತಿಸುವ ಶಕ್ತಿಯನ್ನು ವಿದ್ಯಾರ್ಥಿಗಳು ಮೊದಲು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಬರೀ ಓದುವುದಕ್ಕೆ ಸಮಯ ನೀಡಬೇಕಿಲ್ಲ ಬದಲಿಗೆ ಮುಂದಿನ ನಿಮ್ಮ ಜೀವನ ಉತ್ತಮವಾಗಿ ರೂಪಿಸಿಕೊಳ್ಳಲು ಬೇಕಾದ ಅಗತ್ಯ ಸಮಯವನ್ನು ನೀಡಬೇಕು ಎಂದರು.
ಕಾಲೇಜು ವಿದ್ಯಾರ್ಥಿಗಳು ಅದರಲ್ಲಿಯೂ ಹೆಣ್ಣು ಮಕ್ಕಳು ಅತಿ ಎಚ್ಚರಿಕೆಯಿಂದ ಇರಬೇಕು. ಸ್ನೇಹದಿಂದಿರುವುದು ಒಳ್ಳೆಯದು ಆದರೆ ಅದರ ಇತಿ ಮಿತಿ ಮೀರದ ಹಾಗೆ ನಡೆದುಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ ಎಂದರು.
ಹಣಕಾಸಿನ ವಿಚಾರದಲ್ಲಿ ಸ್ವಾತಂತ್ರ್ಯವಿಲ್ಲದಿದ್ದರೆ ಸಮಾಜದಲ್ಲಿ ಯಾವುದೇ ಪುರುಷ ಅಥವ ಮಹಿಳೆಯರಿಗೆ ಗೌರವವಿರುವುದಿಲ್ಲ. ಹಾಗಾಗಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಿಕ್ಷಣ ಪಡೆದು ನಾಳೆಯ ದೇಶದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳಿ ಎಂದರು.
ವಕೀಲರಾದ ಎಂ.ಬಿ.ಲೋಕೇಶ್ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಹಾಗು ರ್ಯಾಗಿಂಗ್ ತಡೆ ಕುರಿತು ಮಾತನಾಡಿ ಇತ್ತೀಚಗೆ ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳು ಮಾದಕ ವಸ್ತುಗಳ ಅಡ್ಡೆಗಳಾಗಿ ರೂಪಗೊಂಡಿದ್ದು ವಿದ್ಯಾರ್ಥಿಗಳು ಯಾವುದೇ ವ್ಯಸಕ್ಕೆ ಒಳಗಾಗಬಾರದು ಎಂದರು.
ಇನ್ನು ಕಾಲೇಜುಗಳಿಗೆ ನೂತನವಾಗಿ ಬರುವ ವಿದ್ಯಾರ್ಥಿಗಳನ್ನು ರ್ಯಾಗಿಂಗ್ ಮಾಡಿದರೆ ಕಾನೂನು ಅಡಿಯಲ್ಲಿ ಉಗ್ರ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಕೇವಲ ಕೆಲ ಕ್ಷಣಗಳ ತಮ್ಮ ಮೋಜಿಗಾಗಿ ನೀವು ಮಾಡುವ ರ್ಯಾಗಿಂಗ್‍ನಿಂದ ದುರ್ಭಲ ಮನಸ್ಸಿನ ಹುಡುಗ ಹುಡುಗಿಯರು ತಮ್ಮ ಅಮೂಲ್ಯವಾದ ಜೀವನ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಕಾಲೆಜುಗಳಲ್ಲಿ ರ್ಯಾಗಿಂಗ್ ಸಂಸ್ಕøತಿಯನ್ನು ಕೈ ಬಿಟ್ಟು ಎಲ್ಲರೂ ಉತ್ತಮ ಸ್ನೇಹ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಜಯ್‍ಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೋಜಿಗಾಗಿ ಕಲಿಯುವ ಕೆಲ ಚಟಗಳು ತಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು ಪ್ರಾಣಕ್ಕೆ ಸಂಚಕಾರ ತರಲಿದೆ. ಮಾದಕ ವ್ಯಸನಗಳಿಂದ ವಿದ್ಯಾರ್ಥಿಗಳು ದೂರವಿರಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಎ.ಶ್ರೀಕಂಠ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರಕಾರಿ ಸಹಾಯಕಿ ಅಭಿಯೋಜಕಿ ಎಸ್.ಕುಮುದಿನಿ, ವಕೀಲರಾದ ಬೈರಾರೆಡ್ಡಿ, ಯಣ್ಣಂಗೂರು ಮಂಜುನಾಥ್, ಗುಡಿಹಳ್ಳಿ ಚಂದ್ರಶೇಖರ್, ಕಾಲೇಜು ಪ್ರಭಾರ ಪ್ರಾಂಶುಪಾಲ ಶಿವಾರೆಡ್ಡಿ, ಪ್ರಾಧ್ಯಾಪಕರಾದ ಮುನಿರಾಜು, ಗೀತ ಇನ್ನಿತರರು ಹಾಜರಿದ್ದರು.
- Advertisement -
- Advertisement -
- Advertisement -