ಪ್ರಕೃತಿಯಿಂದ ಪ್ರೇರಣೆ ಹೊಂದುತ್ತಾ ವಿಜ್ಞಾನಿಗಳು ಹಲವಾರು ಸಂಶೋಧನೆಗಳನ್ನು ನಡೆಸಿದ್ದಾರೆ. ವಿಜ್ಞಾನವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಕುತೂಹಲಿಗಳಾಗಿ ನಮ್ಮ ಸುತ್ತಲಿನ ಜೀವಿಗಳನ್ನು ಗಮನಿಸಬೇಕು. ಆಗ ವಿಜ್ಞಾನ ಇಷ್ಟವಾಗುತ್ತದೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಹರೀಶ್ ಆರ್ ಭಟ್ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ‘ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆ’ ಕಾರ್ಯಕ್ರಮದಲ್ಲಿ ‘ವಿಜ್ಞಾನದ ಬೆಳವಣಿಗೆ’ ವಿಷಯವಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಚೀನಾದವರು ಭಾರತೀಯ ವಸ್ತುಗಳನ್ನು ಕೊಳ್ಳುವಂತಾಗಬೇಕಾದರೆ ನಮ್ಮ ಯುವ ವಿದ್ಯಾರ್ಥಿಗಳು ವಿಜ್ಞಾನದೆಡೆಗೆ ಆಕರ್ಷಿತರಾಗಬೇಕು. ಹೊಸ ಹೊಸ ಅನ್ವೇಷಣೆಗಳಾಗಬೇಕು. ವಿದ್ಯಾರ್ಥಿಗಳು ಮನಸ್ಸು ಮಾಡಿದಲ್ಲಿ ಉಜ್ವಲ ಭವ್ಯ ಭಾರತ ನಿರ್ಮಾಣ ಸಾಧ್ಯವಿದೆ ಎಂದು ಹೇಳಿದರು.
ಚಿತ್ರಗಳನ್ನು ಸ್ಲೈಡ್ ಶೋ ಮೂಲಕ ತೋರಿಸುತ್ತಾ, ಜೇಡನಿಂದ ತಯಾರಾದ ಬುಲೆಟ್ ಪ್ರೂಫ್ ಜಾಕೆಟ್, ಜೇನಿನ ಷಟ್ಕೋನದ ಆಕಾರದ ಗೂಡಿನಿಂದ ತಯಾರಾದ ವಿವಿಧ ಉಪಕರಣಗಳು, ಕೀಟಗಳನ್ನು ಆಹಾರವಾಗಿ ಸೇವಿಸುವ ಸಸ್ಯಗಳಿಂದ ರೈತರಿಗೆ ಉಪಯುಕ್ತ ಸಂಶೋಧನೆಗಳು, ಚಿಟ್ಟೆಗಳ ರೆಕ್ಕೆಗಳಿಂದ ಸೋಲಾರ್ ಪ್ಯಾನಲ್, ಫಾಲ್ಕನ್ ಹಕ್ಕಿಯಿಂದ ವೇಗದ ಏರೋಪ್ಲೇನ್, ಚಿರತೆಯಿಂದ ಬೈಕ್, ಏರೋಪ್ಲೇನ್ ಚಿಟ್ಟೆಯಿಂದ ಡ್ರೋನ್, ಹೊಳೆಯ ಹುಳುಗಳಿಂದ ಸೊಳ್ಳೆಗಳನ್ನು ಹಿಡಿಯುವ ಸಾಧನ, ಹಲವಾರು ಜೀವಿಗಳಿಂದ ವೈದ್ಯಕೀಯ ಸಂಶೋಧನೆಗಳು ಮುಂತಾದವುಗಳನ್ನು ತೋರಿಸಿ, ನಮ್ಮ ಸುತ್ತಮುತ್ತ ಇರುವ ಪ್ರಕೃತಿಯಿಂದಲೇ ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವತ್ತ ಕುತೂಹಲಿಗಳಾಗಿರಿ ಎಂದು ವಿದ್ಯಾರ್ಥಿಗಳಿಗೆ ವಿವರಿಸಿದರು.
ಕಾಲೇಜಿನ ವತಿಯಿಂದ ನಡೆಸಿದ್ದ ವಿಜ್ಞಾನದ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ದ್ವಿತೀಯ ಪಿಯುಸಿಯ ಎನ್.ಜಿ.ಅಕ್ಷಯ್ ಕುಮಾರ್, ಜೆ.ಎಂ.ಮನೋಹರ, ಸಿ.ಎನ್.ಕಾವ್ಯಶ್ರೀ, ಪ್ರಥಮ ಪಿಯುಸಿಯ ವೈ.ಎನ್.ಗಂಗಾಧರ, ಎ.ಎಂ.ಅನೂಷ, ಎಂ.ಅನು ಅವರಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪ್ರಮಾಣ ಪತ್ರ, ಪಾರಿತೋಷಕ ಮತ್ತು ವಿಕ್ರಂ ಸಾರಾಬಾಯ್, ಅಬ್ದುಲ್ ಕಲಾಂ ಅವರ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.
ವಿದ್ಯಾರ್ಥಿಗಳೊಂದಿಗೆ ಸಂವಾದ : ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರುವುದು ಹೇಗೆ, ಭೂಕಂಪದ ಬಗ್ಗೆ ಪ್ರಾಣಿಗಳಿಗೆ ಮೊದಲು ಹೇಗೆ ತಿಳಿಯುತ್ತದೆ, ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧನೆಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ಉಪಯೋಗಗಳು, ಸೈನಿಕರಿಗೆ ಬದಲಾಗಿ ರೋಬೋಟ್ ಬಳಸಬಹುದೆ, ಹಕ್ಕಿಗಳಲ್ಲಿ ಗಂಡು ಹೆಣ್ಣುಗಳ ವ್ಯತ್ಯಾಸ, ಖಾಲಿಯಾಗುತ್ತಿರುವ ನೈಸರ್ಗಿಕ ಅನಿಲಗಳು, ಮೊಬೈಲ್ ತರಂಗಗಳಿಂದ ಹಕ್ಕಿಗಳಿಗೆ ಆಗುತ್ತಿರುವ ಅಪಾಯ, ಕಪ್ಪು ರಂಧ್ರ ಇತ್ಯಾದಿ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿ ವಿಜ್ಞಾನಿ ಹರೀಶ್ ಆರ್ ಭಟ್ ಅವರಿಂದ ಉತ್ತರ ಪಡೆದರು. ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನೃತ್ಯಪಟು ಸಿ.ಎನ್.ಮುನಿರಾಜು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯ್ತಿ ಸದಸ್ಯೆ ತನುಜಾ ರಘು, ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಎಸ್.ಸತೀಶ್, ಹುಜಗೂರು ಕೆಂಪೇಗೌಡ, ಯೋಧ ರವಿಕುಮಾರ್, ಲೋಕಮಾತಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಎನ್.ಆರ್.ಕೃಷ್ಣಮೂರ್ತಿ, ಕಪಿಲಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸುದರ್ಶನ್, ಸಿದ್ದಾರ್ಥ್ ಪೈ ಹಾಜರಿದ್ದರು.
- Advertisement -
- Advertisement -
- Advertisement -
- Advertisement -