26 C
Sidlaghatta
Thursday, July 31, 2025

ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು

- Advertisement -
- Advertisement -

ಕನ್ನಡದ ರಾಷ್ಟ್ರ ಕವಿ ಕುವೆಂಪು ಅವರ ವಿಶ್ವಮಾನವ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್‌ ಅವರ ಮನೆಯಲ್ಲಿ ಏರ್ಪಡಿಸಿದ್ದ ಮನೆಯಂಗಳದಲ್ಲಿ ನುಡಿಸಿರಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು ಅವರು ನಮ್ಮನ್ನಗಲಿದ್ದು 1994 ರ ನವೆಂಬರ್‌ 11ರಂದು. ಈ ತಿಂಗಳ ಕವಿಯಾಗಿ ಅವರನ್ನು ನೆನಪಿಸಿಕೊಳ್ಳುವುದು, ಅವರ ಸಾಹಿತ್ಯ ಓದಿ ಚರ್ಚಿಸುವುದು ಕಸಾಪ ತಾಲ್ಲೂಕು ಘಟಕದ ಉದ್ದೇಶವಾಗಿದೆ.
ಕುವೆಂಪು ಕನ್ನಡದ ಅಗ್ರಮಾನ್ಯ ಕವಿ. ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ ‘ಯುಗದ ಕವಿ ಜಗದ ಕವಿ’ ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಎಂದು ಹೇಳಿದರು.
ಕಸಾಪ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಮಾತನಾಡಿ, ಕನ್ನಡ ಎಂಬುದು ಒಂದು ಭಾಷೆಯ ಹೆಸರು ಮಾತ್ರವಲ್ಲ, ಅದೊಂದು ಸಾಹಿತ್ಯದ ಹೆಸರು, ಸಂಸ್ಕೃತಿಯ ಹೆಸರು, ಜನಾಂಗದ ಮತ್ತು ಜನಜೀವನದ ಹೆಸರು. ಕನ್ನಡಿಗರು ‘ನವೆಂಬರ್ ಕನ್ನಡಿಗ’ರಾಗದೆ ನಿತ್ಯ ಕನ್ನಡಿಗರಾಗಬೇಕು, ಕನ್ನಡ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಬೇಕು; ವೃತ್ತಿ, ಪ್ರವೃತ್ತಿಗಳೆಲ್ಲ ಕನ್ನಡಮಯವಾಗಬೇಕು. ಉತ್ಸಾಹ ಕ್ಷಣಿಕವಾಗಬಾರದು ಎಂದು ಹೇಳಿದರು.
ಕಸಾಪ ತಾಲ್ಲೂಕು ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ ಮಾತನಾಡಿ, ಕನ್ನಡ ಅಳಿಯುತ್ತಿರುವುದು ನಗರ ಪ್ರದೇಶಗಳಲ್ಲಿ ಮಾತ್ರ, ಗ್ರಾಮಾಂತರ ಪ್ರದೇಶಗಳಲ್ಲಿ ಅದು ಸುಸ್ಥಿರವಾಗಿದೆ ಎಂದು ಇದುವರೆಗೆ ನಾವು ತಿಳಿದಿದ್ದೆವು. ಆದರೆ ಈಗ ಅಲ್ಲಿಯೂ ಕನ್ನಡದ ಬೇರುಗಳು ಸಡಿಲವಾಗುತ್ತಿವೆ ಎಂಬುದು ಕಳವಳಕಾರಿ. ಕಾನ್ವೆಂಟ್ ಮೋಹ ಹಳ್ಳಿಗಾಡಿನಲ್ಲೂ ಮೂಡಿ ಬೆಳೆಯುತ್ತಿದೆ. ಜನರ ಬಾಯಲ್ಲಿ ಕನ್ನಡ ಶಬ್ದಗಳು ಮರೆಯಾಗಿ ಇಂಗ್ಲಿಷ್ ಶಬ್ದಗಳು ಅನಗತ್ಯವಾಗಿ ಮೆರೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಜನಪದ ಗಾಯಕ ದೇವರಮಳ್ಳೂರು ಮಹೇಶ್‌ ಕುವೆಂಪು ರಚಿಸಿರುವ ಗೀತೆಗಳನ್ನು ಹಾಡಿದರು.
ಗ್ರಾಮ ಪಂಚಾಯತಿ ಸದಸ್ಯೆ ಉಮಾ ಚನ್ನೇಗೌಡ, ನಾಗರಾಜ್‌, ಚಂದ್ರಶೇಖರ್‌, ಶ್ರೀರಾಮ್‌, ನರಸಿಂಹಮೂರ್ತಿ, ಜಗದೀಶ್‌, ಮಧು, ಚನ್ನಕೇಶವ, ಲಕ್ಷ್ಮೀಪತಿ, ಮನೋಜ್‌ಕುಮಾರ್‌, ಶ್ರೀನಾಥ್‌, ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!