ಯಮುನಾ ನದಿಯಲ್ಲಿದ್ದ ಕಾಳಿಂಗ ಎಂಬ ವಿಷ ಸರ್ಪವನ್ನು ಶಿಕ್ಷಸಲು ಶ್ರೀಕೃಷ್ಣ ಕದಂಬ ಮರದ ಮೇಲಿಂದ ನೀರಿಗೆ ಧುಮುಕಿದ. ಸರ್ಪದ ಹೆಡೆಯ ಮೇಲೆ ಜಿಗಿದು ಅದರ ಮೇಲೆ ನೃತ್ಯಮಾಡಿದ. ಗೋಪಾಲಕರು ನಮ್ಮನ್ನು ಸದಾ ಕಾಪಾಡು ದೇವರೆ ಎಂದು ಪ್ರಾರ್ಥಿಸುವಂತಿದ್ದ ಅವರ ಮನಃಸ್ಥಿತಿಯನ್ನು ಪ್ರದರ್ಶಿಸುವ ಪ್ರತಿಕೃತಿಯನ್ನು ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಗರದ ಗೌಡರಬೀದಿಯ ಮಂಜುನಾಥ್ ಅವರ ಮನೆಯಲ್ಲಿ ಸುಂದರವಾಗಿ ರೂಪಿಸಲಾಗಿತ್ತು.
ಗೋಕುಲದ ನದಿ, ಮರ ಗಿಡ, ಕೃಷ್ಣನ ಪ್ರೀತಿಯ ಬೆಣ್ಣೆ ಮತ್ತು ಸಿಹಿತಿನಿಸುಗಳೊಂದಿಗೆ ನೂರೆಂಟು ವಿಧದ ತಿನಿಸುಗಳನ್ನಿಟ್ಟು ಪೂಜಿಸಲಾಯಿತು. ಸುತ್ತಮುತ್ತಲಿನ ಮನೆಗಳವರು, ಮಕ್ಕಳು ಬಂದು ಭಾಗವತದ ಪ್ರಮುಖ ಘಟ್ಟ ಹಾಗೂ ಬಾಲಕೃಷ್ಣನ ಲೀಲೆಗಳನ್ನು ಕಂಡು ಪ್ರಸಾದವನ್ನು ಪಡೆದರು.
‘ಸುಮಾರು ಹದಿನಾರು ವರ್ಷಗಳಿಂದ ಕೃಷ್ಣ ಜನ್ಮಾಷ್ಠಮಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದು, ಒಂದೊಂದು ವರ್ಷ ಒಂದೊಂದು ಕೃಷ್ಣ ಮಹಿಮೆಯನ್ನು ವ್ಯಕ್ತವಾಗುವಂತೆ ಅಲಂಕಾರ ಮಾಡುತ್ತೇವೆ. ಈ ಬಾರಿ ಕೃಷ್ಣನು ಗೋಕುಲದಲ್ಲಿ ಕಾಳಿಂಗನನ್ನು ಮರ್ಧಿಸಿ ಗೋಪಾಲಕರನ್ನು ಕಾಪಾಡುವ ಹಾಗೂ ಅವರೆಲ್ಲರ ಪ್ರೀತಿಪಾತ್ರನಾಗುವುದನ್ನು ಪ್ರದರ್ಶಿಸಿದ್ದೇವೆ. ಮಕ್ಕಳಿಗೆ ಈ ರೀತಿಯ ಪ್ರತಿಕೃತಿಗಳ ಮೂಲಕ ಶ್ರೀಕೃಷ್ಣನ ಲೀಲೆಗಳು ಹಾಗೂ ಭಾಗವತದ ಕಥೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದೇವೆ’ ಎಂದು ಗೌಡರಬೀದಿಯ ಮಂಜುನಾಥ್ ತಿಳಿಸಿದರು.