ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕಾದರೆ, ವಿವಿಧ ಬಗೆಯ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜೆ.ವೆಂಕಟಾಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎನ್.ರಘುನಾಥ್ ಹೇಳಿದರು.
ತಾಲ್ಲೂಕಿನ ಸುಗಟೂರು ಗ್ರಾಮದಲ್ಲಿ ಸೋಮವಾರ ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತಿಯ ಸಂಯುಕ್ತಾಶ್ರಯದಲ್ಲಿ ಆಯೋಜನೆ ಮಾಡಲಾಗಿದ್ದ ವೃತ್ತಿ ಕೌಶಲ್ಯ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ವಯಸ್ಕರ ಶಿಕ್ಷಣ ಇಲಾಖೆಯ ಮೂಲಕ ಮಹಿಳೆಯರಿಗೆ ಹೊಲಿಗೆ ತರಬೇತಿ, ಸೇರಿದಂತೆ ವಿವಿಧ ಬಗೆಯ ಕೌಶಲ್ಯಗಳ ತರಬೇತಿಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಕುಟುಂಬಗಳಲ್ಲಿ ಆರ್ಥಿಕ ಮಟ್ಟ ಸುಧಾರಣೆ ಮಾಡಬೇಕಾದರೆ, ಉಪಕಸುಬುಗಳು ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುವಂತಹ ಅನುದಾನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು, ಪ್ರತಿಯೊಂದು ಮನೆಗೆ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡು ಸ್ವಚ್ಚತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ೨೦ ಮಂದಿ ಕಲಿಕಾರ್ಥಿಗಳಿಗೆ ಹೊಲಿಗೆಯಂತ್ರಗಳನ್ನು ಉಚಿತವಾಗಿ ನೀಡುವುದಾಗಿ ಅವರು ಭರವಸೆ ನೀಡಿದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಚಂದ್ರೇಗೌಡ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಕಾತ್ಯಾಯಿನಿ. ತಾಲ್ಲೂಕು ಪಂಚಾಯತಿ ಸದಸ್ಯ ಜೆ.ಟಿ.ನಾಗರಾಜು, ಗ್ರಾಮ ಪಂಚಾಯತಿ ಸದಸ್ಯರಾದ ಭಾಗ್ಯಮ್ಮ, ಅರುಣ್ಕುಮಾರ್, ಶಾಂತಮ್ಮದೇವರಾಜ್, ನರಸಿಂಹಮೂರ್ತಿ, ಮಳ್ಳೂರು ಮುನಿರಾಜು, ಎಚ್.ಜಿ.ಶಶಿಕುಮಾರ್, ವಯಸ್ಕರ ಶಿಕ್ಷಣ ಇಲಾಖೆಯ ಅಧಿಕಾರಿ ಶಿವಲಿಂಗಯ್ಯ, ಸಂಯೋಜಕ ಟಿ.ವಿ.ಶ್ರೀನಿವಾಸ, ರತ್ನಮ್ಮಚಂದ್ರಪ್ಪ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -