ಅಂಗನವಾಡಿ ಕೇಂದ್ರಗಳನ್ನು ಮತ್ತು ಐ.ಸಿ.ಡಿ.ಎಸ್ ಯೋಜನೆಯನ್ನು ಖಾಸಗೀಕರಿಸಲು ಯೋಜಿಸಿರುವ ಸರ್ಕಾರಿ ಯೋಜನೆಯನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರು ಗುರುವಾರ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಿಗೆ ಜಾಗೃತಿ ಜಾಥಾ ಪ್ರಾರಂಭಿಸಿದರು.
ಸರ್ಕಾರದ ಖಾಸಗೀಕರಣ ನೀತಿಯನ್ನು ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಫೆಬ್ರುವರಿ 2 ರಂದು ಅನಿರ್ಧಿಷ್ಠಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ತಾಲ್ಲೂಕು ಘಟಕದ ಸದಸ್ಯರು ಗುರುವಾರ ತಾಲ್ಲೂಕಿನ ಎಲ್ಲಾ ಪಂಚಾಯತಿಗಳಿಗೆ ಬೆಂಬಲ ಕೋರಿ ಜಾಥಾ ನಡೆಸಿದರು.
ಅನೇಕ ಬಡ ಕುಟುಂಬಗಳಿಗೆ ಆಶಾ ಕಿರಣವಾಗಿದ್ದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯನ್ನು ಇಂದು ಇಲಾಖೆಯನ್ನಾಗಿ ಮಾರ್ಪಡಿಸಿ ಖಾಯಂ ಮಾಡುವ ಬದಲು ಬಲಹೀನಗೊಳಿಸಲಾಗುತ್ತಿದೆ. ಅಂಗನವಾಡಿ ಕೇಂದ್ರದ ಯಜಮಾನಿಕೆ ಮತ್ತು ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಶ್ರೀಮಂತ ಹಿತಾಸಕ್ತಿಗಳಿಗೆ ನೀಡಲಾಗುತ್ತಿದೆ. ಪೂರ್ವ ಪ್ರಾಥಮಿಕ ಶಿಕ್ಷಣವನ್ನು ನೀಡುವ ನೆಪದಲ್ಲಿ ಖಾಸಗಿ ಕಾನ್ವೆಂಟ್ಗಳಿಗೆ ಐಸಿಡಿಎಸ್ ಹಣವನ್ನು ವರ್ಗಾಯಿಸಲು ಪ್ರಸ್ತಾಪಿಸಲಾಗಿದೆ. ಸರ್ಕಾರ ತನ್ನ ನೀತಿಗಳನ್ನು ಬದಲಿಸಬೇಕು. ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿಯನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀದೇವಮ್ಮ ಒತ್ತಾಯಿಸಿದರು.
ಸಿ.ಐ.ಟಿ.ಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುಳಮ್ಮ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮುನಿಕೃಷ್ಣಪ್ಪ, ಎನ್.ಪಾಪಣ್ಣ, ಮುನೀಂದ್ರ, ಸುಬ್ರಮಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -