ಮಳೆ ನೀರನ್ನು ವ್ಯರ್ಥ ಮಾಡಬಾರದು. ಆಯಾ ಸ್ಥಳದಲ್ಲಿ ಬಿದ್ದ ಮಳೆ ನೀರು ಅಲ್ಲಲ್ಲೇ ಇಂಗುವಂತೆ ವ್ಯವಸ್ಥೆ ಮಾಡಬೇಕೆಂದು ಯುವಶಕ್ತಿ ಸಂಘಟನೆಯ ವಿಜಯ ಬಾವರೆಡ್ಡಿ ತಿಳಿಸಿದರು.
ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ 11ನೇ ಮೈಲಿ ಕ್ರಾಸ್ನಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಆವರಣದಲ್ಲಿ ಬುಧವಾರ ಯುವಶಕ್ತಿ ಸಂಘಟನೆಯ ‘ಪರಿಸರ ಶಕ್ತಿ’ ಕಾರ್ಯಕ್ರಮದಲ್ಲಿ 250 ಸಸಿಗಳನ್ನು ಕಾಲೇಜು ವಿದ್ಯಾರ್ಥಿಗಳ ನೆರವಿನಿಂದ ನೆಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಾಲಾ ಆವರಣದಲ್ಲಿ ನೀರಿನ ಅಭಾವವಿರುವದರಿಂದ ಮಳೆ ಆದ ಮರುದಿನ ನೆಟ್ಟರೆ ತೇವಾಂಶದ ಸದ್ಭಳಕೆ ಆಗುವುದೆಂದು ಸಂಘಟನೆಯ ಸದಸ್ಯರು ಕೆಲಸಗಳಿಗೆ ರಜೆ ಹಾಕಿ ಗಿಡನೆಡುವ ಕಾರ್ಯಕ್ರಮದಲ್ಲಿ ಸ್ಥಳೀಯ ರೈತರ ಸಹಾಯ ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಗಿಡ ನೆಡುತ್ತಿದ್ದೇವೆ. ಆದಷ್ಟೂ ಮಳೆ ನೀರು ಪೋಲಾಗದಂತೆ ಕಾಳಜಿ ವಹಿಸಿ. ಗಿಡಗಳ ಪೋಷಣೆಗೆ ಅದು ಸಹಕಾರಿಯಾಗಲಿ. ಮುಂದೆ ಇದೇ ರೀತಿ ಜಿಲ್ಲೆಯಾದ್ಯಂತ ಬೇಲಿ ಮತ್ತು ನೀರಿರುವ ಆವರಣಗಳಲ್ಲಿ ಹೆಚ್ಚಿನ ಗಿಡಗಳನ್ನು ಬೆಳೆಸಿ ಬಯಲು ಸೀಮೆಯನ್ನು ಹಸಿರು ಸೀಮೆಯನ್ನಾಗಿಸುವತ್ತ ಯುವಶಕ್ತಿ ಶ್ರಮಿಸಲಿದೆ ಎಂದರು.
ಯುವಶಕ್ತಿಯು ಇದುವರೆಗೆ ಜಿಲ್ಲೆಯಲ್ಲಿ ಸುಮಾರು ೩೦೦೦ ಗಿಡಗಳನ್ನು ನೆಡಲಾಗಿದ್ದು, ಅವುಗಳ ಪೋಷನೆಯನ್ನು ಶಾಲಾ ಮಕ್ಕಳ ಸಹಕಾರದಿಂದ ಮಾಡಲಾಗುತ್ತಿದೆ. ಮುಂದಿನ ವಾರಗಳಲ್ಲಿ ತಾಲ್ಲೂಕಿನ ಎ.ತಿಮ್ಮಸಂದ್ರ ಮತ್ತು ಮಳ್ಳೂರು ಪಂಚಾಯತಿಗಳಲ್ಲಿ ಗಿಡಗಳನ್ನು ನೆಡಲಾಗುವುದು ಎಂದು ಹೇಳಿದರು.
ಶಿವಕುಮಾರ, ಬಾವರೆಡ್ಡಿ, ನರಸಿಂಹಮೂರ್ತಿ, ಮಂಜುನಾಥ, ಮನೋಹರ ರೆಡ್ಡಿ, ಮುನಿರೆಡ್ಡಿ, ನಲ್ಲೋಜನಹಳ್ಳಿ ರೈತ ಮುಖಂಡರು, ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಗಿಡ ನೆಡುವುದರಲ್ಲಿ ಭಾಗವಹಿಸಿದ್ದರು.
- Advertisement -
- Advertisement -
- Advertisement -
- Advertisement -