ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತೆಯನ್ನು ಕಾಪಾಡುವಲ್ಲಿ ವಿಫಲರಾಗಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಡೆಂಗ್ಯೂ ಜ್ವರಗಳಿಂದ ಜನರು ಮೃತಪಟ್ಟಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲವೆಂದು ಆರೋಪಿಸಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಮುತ್ತಿಗೆಹಾಕಿ ಪ್ರತಿಭಟಿಸಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಗಂಜಿಗುಂಟೆ ಗ್ರಾಮ ಪಂಚಾಯತಿಯ ಅಧಿಕಾರಿಗಳು ಹಾಗೂ ಅಧ್ಯಕ್ಷರು, ಸ್ವಚ್ಚತೆಗೆ ಹೆಚ್ಚು ಒತ್ತು ನೀಡುತ್ತಿಲ್ಲ. ಇದರಿಂದಾಗಿ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿನ ಜನರು ಜ್ವರಗಳಿಂದಾಗಿ ಚಿಂತಾಮಣಿ, ಹೊಸಕೋಟೆ, ಕೋಲಾರ ಮುಂತಾದ ಕಡೆಗಳಲ್ಲಿ ಮನೆಗಳಲ್ಲಿರುವ ದನಕರುಗಳನ್ನು ಮಾರುಕೊಂಡು ಚಿಕಿತ್ಸೆ ಪಡೆಯಬೇಕಾಗಿದೆ. ಚರಂಡಿಗಳನ್ನು ಸ್ವಚ್ಚಗೊಳಿಸುತ್ತಿಲ್ಲ, ಬ್ಲೀಚಿಂಗ್ ಸಿಂಪಡಣೆ ಮಾಡುತ್ತಿಲ್ಲ, ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗಿದೆ.
ಬಾಳೇಗೌಡನಹಳ್ಳಿ ಗ್ರಾಮದಲ್ಲಿನ ನಾಗರಿಕರು ಒಂದೊಂದು ಹನಿಗೂ ಪರದಾಡುವಂತಾಗಿದೆ. ಟ್ಯಾಂಕರುಗಳಲ್ಲಿಯೂ ಸರಬರಾಜು ಮಾಡುತ್ತಿಲ್ಲ. ಈ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯುತ್ತಿಲ್ಲ. ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿದ್ದು, ಈ ಬಗ್ಗೆ ಲಿಖಿತವಾಗಿ ನಾಗರಿಕರು ದೂರುಗಳು ನೀಡಿದ್ದರೂ ಕೂಡಾ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮರಳುದಿಬ್ಬಗಳು ಕುಸಿದು ಅಮಾಯಕರು ಸಾವನ್ನಪ್ಪಿದ್ದರೂ ಕೂಡಾ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸಭೆಯನ್ನು ಕರೆಯುವಂತೆ ಪಿ.ಡಿ.ಓ.ಅಧಿಕಾರಿಗಳಿಗೆ ಹೇಳಿದರೂ ಕೂಡಾ ಸಭೆಯನ್ನು ಕರೆದಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಆಚರಣೆಗೆ ಪೂರ್ವಭಾವಿ ಸಭೆಯನ್ನು ನಡೆಸಿಲ್ಲ. ಈ ಬಗ್ಗೆಯೂ ನಿರ್ಲಕ್ಷ್ಯ ವಹಿಸಿದ್ದಾರೆ.
ಕೆಲವು ಮಂದಿ ಸದಸ್ಯರೂ ಕೂಡಾ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ಕ್ರಮತೆಗೆದುಕೊಳ್ಳುವಂತೆ ಅಧ್ಯಕ್ಷರಿಗೆ ಮನವಿ ಮಾಡಿದ್ದರೂ ಕೂಡಾ ಯಾವುದೇ ಕ್ರಮತೆಗೆದುಕೊಳ್ಳುತ್ತಿಲ್ಲವೆಂದು ಗ್ರಾಮ ಪಂಚಾಯತಿ ಸದಸ್ಯ ಗಂಜಿಗುಂಟೆ ನರಸಿಂಹಮೂರ್ತಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತಿ ಅಭಿವೃದ್ದಿ ಅಧಿಕಾರಿ ಶ್ರೀನಿವಾಸ, ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸ್ವಚ್ಛತೆಯನ್ನು ಕಾಪಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಕ್ರಮ ಮರಳು ಸಾಗಾಣಿಕೆಯ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿರುವುದು ನಿಜ. ತಹಶೀಲ್ದಾರರೂ ಕೂಡಾ ಮರಳು ಸಾಗಾಣಿಕೆ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ರಾತ್ರಿಯ ವೇಳೆಯಲ್ಲಿ ಸಾಗಾಣಿಕೆ ನಡೆಯುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಶುಕ್ರವಾರದಂದು ತುರ್ತು ಸಭೆ ಕರೆದು ತೀರ್ಮಾನಿಸಲಾಗುತ್ತದೆ. ಪಂಚಾಯ್ತಿಯ ವ್ಯಾಪ್ತಿಯಲ್ಲಿ ಯಾರೊಬ್ಬರೂ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿಲ್ಲವೆಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ರಾಮಬಾಬು, ಬಿ.ಎನ್.ನರಸಿಂಹರೆಡ್ಡಿ, ಮಾಜಿ ಉಪಾಧ್ಯಕ್ಷ ಚೊಕ್ಕನಹಳ್ಳಿ ಮೂರ್ತಿ, ನಾರಾಯಣಸ್ವಾಮಿ, ಬೈರಾರೆಡ್ಡಿ, ಕೃಷ್ಣಪ್ಪ, ವೆಂಕಟರವಣಪ್ಪ, ರಾಮಸ್ವಾಮಿ, ಯುವರಾಜ, ಶ್ರೀನಿವಾಸ್, ರೋಷನ್, ದೊಡ್ಡನರಸಿಂಹಪ್ಪ, ಲಕ್ಕೇನಹಳ್ಳಿ ಶಿವಾರೆಡ್ಡಿ, ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಆನಂದರೆಡ್ಡಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -