25.1 C
Sidlaghatta
Sunday, December 21, 2025

ಚೌಡೇಶ್ವರಿ ದೇವಾಲಯದಲ್ಲಿ ನಡೆದ ಅಲಗುಸೇವೆ

- Advertisement -
- Advertisement -

‘ಶ್ರೀಜಗದಾಂಬ ಶೃಂಗಾರ ಚೌಡಾಂಬ, ರಾಜರಾಜೇಶ್ವರಿ ರಮಣೀ ಮುಖಾಂಬ, ಭುಜಗಭೂಷಣ ಪಾಣಿ, ಭಳಿರೇ ಗೀರ್ವಾಣಿ, ಅಜನುರಾರ್ಜಿತ ಅಂಬುಜಾ ಪಾಣಿ, ನಿನ್ನು ನೇ ವರ್ಣಿಂಪ ಎಂತಡವಾಡನು…’ ಎಂದು ಸಾಗುವ ಚೌಡೇಶ್ವರಿ ದೇವಿಯ ದಂಡಕವನ್ನು ಪಠಿಸುತ್ತಾ ಎದೆಗೆ ಭರ್ಜಿಗಳಿಂದ ಚುಚ್ಚಿಕೊಳ್ಳುವುದನ್ನು ಜನರು ಭಯ, ಭೀತಿ ಮತ್ತು ಅಚ್ಚರಿಯಿಂದ ನೋಡುತ್ತಿದ್ದರು.
ತಾಲ್ಲೂಕಿನ ಸದ್ದಹಳ್ಳಿಯಲ್ಲಿ ಈಚೆಗೆ ನಡೆದ ಚೌಡೇಶ್ವರಿ ಜ್ಯೋತಿ ಉತ್ಸವ ಎಂಬ ವೈಶಿಷ್ಟ್ಯಪೂರ್ಣ ಜನಪದ ಆಚರಣೆಗೆ ಗ್ರಾಮಸ್ಥರು ಸಾಕ್ಷಿಯಾದರು. ಅನಾದಿಕಾಲದಿಂದ ಆಚರಣೆಯಲ್ಲಿರುವ ತೊಗಟವೀರ ಜನಾಂಗದ ವೈಶಿಷ್ಟ್ಯಪೂರ್ಣ ಜ್ಯೋತಿ ಉತ್ಸವವು ಈಚೆಗೆ ಕಡಿಮೆಯಾಗಿದ್ದು, ಸದ್ದಹಳ್ಳಿಯಲ್ಲಿ ನಡೆದ ಉತ್ಸವವು ಅಳಿಯುತ್ತಿರುವ ಆಚರಣೆಯನ್ನು ಮೆಲುಕು ಹಾಕುವಂತೆ ಮಾಡಿತು. ಹಿಂದೆ ಪ್ರತಿವರ್ಷವೂ ಶ್ರಾವಣ ಶುದ್ಧ ಹುಣ್ಣಿಮೆಯಿಂದ ನಾಲ್ಕು ದಿನಗಳವರೆಗೆ ದೇವಿಯ ಉತ್ಸವವನ್ನು ನಡೆಸಲಾಗುತ್ತಿತ್ತು. ಆದರೆ ಈಗ ಅದು ಒಂದು ದಿನದ ಆಚರಣೆಗೆ ಸೀಮಿತವಾಗಿದೆ.
ಜ್ಯೋತಿ ಉತ್ಸವವೆಂಬುದು ಅಗ್ನಿಪೂಜೆ ಮತ್ತು ತಂಬಿಟ್ಟು ದೀಪಹೊತ್ತ ಮಹಿಳೆಯರ ಸಾಲಂಕೃತ ಮೆರವಣಿಗೆಯನ್ನು ಹೊಂದಿರುತ್ತದೆ. ಚೌಡೇಶ್ವರಿ ದೇವಾಲಯದಲ್ಲಿ ವಿಧಿವತ್ತಾಗಿ ಕಳಸ ಪೂಜೆ ಮಾಡಿದ ನಂತರ ಕುಲಬಾಂಧವರಿಂದ ಕೆಲವು ಪೂಜಾವಿಧಿಗಳನ್ನು ಆಚರಿಸುತ್ತಾರೆ.

ತಂಬಿಟ್ಟು ದೀಪಹೊತ್ತ ಮಹಿಳೆಯರ ಸಾಲಂಕೃತ ಮೆರವಣಿಗೆಯನ್ನು ನಡೆಸಿ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.
ತಂಬಿಟ್ಟು ದೀಪಹೊತ್ತ ಮಹಿಳೆಯರ ಸಾಲಂಕೃತ ಮೆರವಣಿಗೆಯನ್ನು ನಡೆಸಿ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ದಂಡಕಗಳನ್ನು ಹೇಳುತ್ತಾ ಮಾಡುವ ಅಲಗುಸೇವೆ ಆವೇಶಭರಿತವೂ ಮತ್ತು ರೋಮಾಂಚನಕಾರಿಯಾದುದು. ಮಡಿಯುಟ್ಟ ವೀರಕುಮಾರರು ಕತ್ತಿಯನ್ನಿಡಿದು ವಿಶಿಷ್ಟ ರೀತಿಯಲ್ಲಿ ಝಳಪಿಸುತ್ತಾ ತಮ್ಮ ಎದೆ ಮತ್ತು ಸೊಂಟದ ಮೇಲೆ ಹೊಡೆದುಕೊಳ್ಳುತ್ತಾರೆ. ಈ ರೀತಿಯ ಅಲಗು ಸೇವೆಗೂ ಒಂದು ಐತಿಹ್ಯವಿದೆ. ಇದೇ ಸಂದರ್ಭದಲ್ಲಿ ಹರಕೆಯನ್ನು ಹೊತ್ತವರು ಮತ್ತು ಮಕ್ಕಳಿಗೆ ಒಳ್ಳೆಯದಾಗಲೆಂದು ಚೂಪಾದ ದಬ್ಬಳದಿಂದ ದವಡೆಗೆ ಮತ್ತು ಅಂಗೈಗಳಿಗೆ ಚುಚ್ಚಿಸಿಕೊಳ್ಳುತ್ತಾರೆ. ಅಚ್ಚರಿಯೆಂದರೆ ಗಾಯದಿಂದ ರಕ್ತ ಬರುವುದೇ ಇಲ್ಲ. ದೇವರ ಭಂಡಾರ ಸೋಕಿದ ಕೆಲವೇ ಗಂಟೆಗಳಲ್ಲಿ ಗಾಯದ ಗುರುತುಗಳು ಸಿಗದಂತೆ ವಾಸಿಯಾಗುತ್ತವೆ. ಗಾವು ಸಿಗಿಯುವುದು ಮತ್ತು ಮಾಂಸದಡಿಗೆಯ ನೈವೇದ್ಯ ಮಾಡಿ ನಂತರ ಪ್ರಸಾದದಂತೆ ಹಂಚುತ್ತಾರೆ.
‘ನಮ್ಮ ಗ್ರಾಮದಲ್ಲಿರುವ ಚೌಡೇಶ್ವರಿ ದೇವರಿಗೆ ದೂರದ ಊರುಗಳಲ್ಲಿರುವ ತೊಗಟವೀರ ಕ್ಷತ್ರಿಯರು ಆಗಮಿಸಿ ಪೂಜೆ ನೆರವೇರಿಸುತ್ತಾರೆ. ಎರಡು ವರ್ಷಕ್ಕೊಮ್ಮೆ ಬರುವ ಇವರು ಹೇಳುವ ದೇವರ ಪದಗಳು, ಹಲಗು ಸೇವೆ, ಗಾವು ಸಿಗಿತ, ದಬ್ಬಳದಿಂದ ದವಡೆಗೆ ಚುಚ್ಚಿಕೊಳ್ಳುವುದು ನೋಡುವುದಕ್ಕೆ ಭೀಕರ ಮತ್ತು ರೋಮಾಂಚಕ’ ಎನ್ನುತ್ತಾರೆ ಸದ್ದಹಳ್ಳಿಯ ಎಸ್ಎಲ್.ವಿ. ಗೋಪಾಲ್.
ತೊಗಟವೀರ ಕ್ಷತ್ರಿಯರ ಜನನದ ಬಗ್ಗೆ ಒಂದು ಐತಿಹ್ಯವಿದೆ. ದೇವದಾನವರ ಯುದ್ಧದಲ್ಲಿ ದಾನವರ ಮೇಲುಗೈ ಆದಾಗ ತ್ರಿಮೂರ್ತಿಗಳ ಶಕ್ತಿಯಿಂದ ಉದ್ಭವಿಸಿದ್ದೇ ಚಾಮುಂಡಿ ಅಥವಾ ಚೌಡೇಶ್ವರಿ. ಈ ಚೌಡೇಶ್ವರಿ ದೇವಿಯ ಬಾಯಿಯ ಬೆಂಕಿಯ ಮೂಲಕ ಉದ್ಭವಿಸಿದ ಭಟರೇ ಅಗ್ನಿಕುಲೋದ್ಭವರಾಗಿ ವೀರರಾಗಿ ಹೋರಾಡಿದ್ದರಿಂದ ವೀರಕ್ಷತ್ರಿಯರೆಂದು ಕಾಲಕ್ರಮೇಣ ತೊಗಟವೀರ ಕ್ಷತ್ರಿಯರೆಂದು ಹೆಸರಾದರು. ಆಗಿನಿಂದಲೂ ತೊಗಟವೀರ ಕ್ಷತ್ರಿಯರು ಚೌಡೇಶ್ವರಿ ದೇವಿಯನ್ನು ಮನೆದೇವರನ್ನಾಗಿ ಸ್ವೀಕರಿಸಿ ವರ್ಷಂಪ್ರತಿ ಯುಗಾದಿ ತದಿಗೆಯಲ್ಲಿ ಚೌಡೇಶ್ವರಿ ಜ್ಯೋತಿ ಉತ್ಸವ ಮತ್ತು ದಂಡಕಗಳೊಂದಿಗೆ ಅಲಗುಸೇವೆ ಮಾಡುತ್ತಾರೆ. ಇಂಥಹ ಆಚರಣೆಗಳು ಈಗ ವಿರಳವಾಗುತ್ತಿರುವುದರಿಂದ ಇವನ್ನು ದಾಖಲಿಸಬೇಕಿದೆ. ಇವರ ಮೂಲ ಸ್ಥಳ ಆಂದ್ರದ ನಂದಾವರಂ. ನಂದವರಿಕ ಬ್ರಾಹ್ಮಣರದ್ದೂ ಕೂಡ ಅದೇ ಮೂಲ. ಇಬ್ಬರಿಗೂ ಚೌಡೇಶ್ವರಿಯೇ ದೇವರು ಹಾಗೂ ಇವರಿಬ್ಬರ ಕುಲಗೋತ್ರಗಳಲ್ಲೂ ಸಾಕಷ್ಟು ಸಾಮ್ಯತೆಯಿದೆ. ಒಬ್ಬರ ಶಾಖಾಹಾರಿ ದೇವತೆ ಮತ್ತೊಬ್ಬರ ಮಾಂಸಾಹಾರಿ ದೇವತೆ ಹೇಗಾದರು ಎಂಬುದರ ಬಗ್ಗೆಯೂ ಸಾಕಷ್ಟು ಸಂಶೋಧನೆಗಳಾಗಬೇಕಿದೆ’ ಎಂದು ಜನಪದ ತಜ್ಞ ಡಾ.ಶ್ರೀನಿವಾಸಯ್ಯ ತಿಳಿಸಿದರು.

For Daily Updates

WhatsApp 'HI' to 7406303366

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!