ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕೃಷಿ ಬೆಳೆಗಳ ನಷ್ಟವನ್ನು ಅಂದಾಜಿಸಿ 83 ಕೋಟಿ ರೂಗಳ ಸಹಾಯಧನ ನೀಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗುರುವಾರ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ, ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರ, ಬೋದಗೂರು ಸಿರಿ ಸಮೃದ್ಧಿ ರೈತಕೂಟ ಸಂಯುಕ್ತಾಶ್ರಯದಲ್ಲಿ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ತೋಟದಲ್ಲಿ ನಡೆದ ಮಾವು ಸುಸ್ತಿರ ಕೃಷಿ ಕುರಿತು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ಆತ್ಮವಿಶ್ವಾಸ ಮೂಡಿಸುವ, ಮಾಹಿತಿಯನ್ನು ನೀಡುವ, ಗುಣಮಟ್ಟದ ಉತ್ಪಾದಕತೆಯನ್ನು ಹೆಚ್ಚಿಸುವ ಕಾರ್ಯಾಗಾರಗಳನ್ನು ಆಗಾಗ್ಗೆ ನಡೆಸಬೇಕಾದ ಅಗತ್ಯವಿದೆ. ವಿಜ್ಞಾನಿಗಳು, ಕ್ಷೇತ್ರ ತಜ್ಞರು, ಸಾವಯವ ಕೃಷಿಕರು, ಪ್ರಗತಿಪರ ರೈತರಿಂದ ಅನುಭವಗಳನ್ನು ತಿಳಿಸುವ ಮೂಲಕ ರೈತರಿಗೆ ಮಾರ್ಗದರ್ಶನ ಕೊಡುವ ಕೆಲಸಗಳು ನಡೆಯುವುದು ಆಶಾದಾಯಕ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಜೆ.ಮಂಜುನಾಥ್ ಮಾತನಾಡಿ, ವಿವಿಧ ಇಲಾಖೆಗಳ ಅಧಿಕಾರಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿಯನ್ನು ಸಮರ್ಪಕವಾಗಿ ನೀಡಬೇಕು. ನರೇಗಾ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಸ್ವಚ್ಛಭಾರತ್ ಅಭಿಯಾನದಡಿ ವೈಯಕ್ತಿಕ ಶೌಚಾಲಯಗಳನ್ನು ಪ್ರತಿಯೊಬ್ಬ ಮನೆಯವರೂ ಕಟ್ಟಿಸಿಕೊಳ್ಳಬೇಕು. ಬರುವ ಮಾರ್ಚ್ ತಿಂಗಳೋಳಗೆ ಪ್ರತಿಯೊಂದು ಮನೆಗೂ ಶೌಚಾಲಯವಿರಬೇಕು. ಸ್ನಾನದ ಗೃಹವನ್ನೂ ಸೇರಿಸಿ ಸರ್ಕಾರ 20 ಸಾವಿರ ರೂ ನೀಡುತ್ತಿದೆ ಸದುಪಯೋಗ ಮಾಡಿಕೊಳ್ಳಿ ಎಂದು ನುಡಿದರು.
ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್.ಜಿ.ಗೋಪಾಲಗೌಡ ಮಾತನಾಡಿ, ಪಶುವಿಗೆ ಆಹಾರವಾಗಿ ಎಲ್ಲೆಲ್ಲಿಂದಲೋ ಒಣಹುಲ್ಲು ತರಿಸಿಕೊಡಬೇಡಿ. ಅದರ ಬದಲಿಗೆ ಪಶು ಆಹಾರವನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಮೂಲಕ ರಿಯಾಯಿತಿ ದರದಲ್ಲಿ ಒದಗಿಸಿ. ಬರದ ಕಾಲದಲ್ಲಿ ಉಪಕಾರವಾಗುತ್ತದೆ. ನಮ್ಮ ಉತ್ಪಾದನೆಗಳಾದ ಹಾಲು ಮತ್ತು ರೇಷ್ಮೆಗೆ ನ್ಯಾಯಬದ್ಧವಾದ ರಸೀದಿ ಸಿಗುತ್ತದೆ. ಇದರಿಂದ ಹಣದ ಮೂಲವನ್ನು ತಿಳಿಸಲು ಸಹಕಾರಿಯಾಗಿದೆ. ಪ್ರತಿಯೊಬ್ಬ ರೈತರೂ ತಮ್ಮ ಭೂಮಿಯಲ್ಲಿ ಕನಿಷ್ಠ 2 ಗುಂಟೆಯಲ್ಲಾದರೂ ತಮ್ಮ ಕುಟುಂಬಕ್ಕಾಗಿಯೇ ತರಕಾರಿಯನ್ನು ಬೆಳೆಯಿರಿ. ಕುರಿ, ಕೋಳಿ, ಮೀನು, ಹಸು, ಎಮ್ಮೆಗಳನ್ನು ಸಾಕಿ. ಕಷ್ಟದಲ್ಲಿ ನೆರವಾಗುತ್ತದೆ ಎಂದು ವಿವರಿಸಿದರು.
ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ, ಕೆನರಾ ಬ್ಯಾಂಕ್ ಸಹಾಯಕ ಮಹಾಪ್ರಬಂಧಕ ಜಿ.ಸಿ.ಬಸವರಾಜು, ನಬಾರ್ಡ್ ಬ್ಯಾಂಕ್ ಡಿ.ಡಿ.ಎಂ. ಚಿತ್ರಾ ಶ್ರೀಧರ್ ಮಾತನಾಡಿದರು.
ಲಾಲ್‌ಬಾಗ್ ತೋಟಗಾರಿಕಾ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ, ಸಸ್ಯರೋಗ ತಜ್ಞ ಡಾ.ದೇವರಾಜ್ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 166 ಮಂದಿ ರೈತರಿಗೆ ಸಿರಿ ರೈತಕೂಟದಿಂದ ಕರಿಬೇವು ಮತ್ತು ನಿಂಬೆ ಗಿಡಗಳನ್ನು ನೀಡಲಾಯಿತು.
ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಕಾರ್ಯಾಗಾರವನ್ನು ಕರಿಬೇವು ಮತ್ತು ನಿಂಬೆ ಗಿಡಗಳನ್ನು ನೆಡುವ ಮೂಲಕ ಉದ್ಘಾಟಿಸಿದರು. ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ಮಳೆಯಾಶ್ರಿತ ಸುಮಾರು 30 ವಿಧದ ಬೆಳೆಗಳಿರುವ ತೋಟ, ಕೃಷಿ ಹೊಂಡವನ್ನು, ಮಾವಿನ ಬೆಳೆ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಹಾಗೂ ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ ಅವರ ಸಾವಯವ ಬೆಳೆಗಳಾದ ಸಿರಿಧಾನ್ಯಗಳು, ಹಣ್ಣುಗಳು ಮುಂತಾದ ಪ್ರದರ್ಶನವನ್ನು ವೀಕ್ಷಿಸಿದರು.
ಚಿಂತಾಮಣಿ ಮಾವು ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕಿ ಗಾಯಿತ್ರಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಜಿ.ಆರ್.ನಾಗಭೂಷಣ್, ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಆನಂದ್, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕಿ ಡಿ.ಸುಧಾಜ್ಯೋತಿ, ಸಿರಿ ಸಮೃದ್ಧಿ ರೈತಕೂಟದ ಅಧ್ಯಕ್ಷ ಬೋದಗೂರು ವೆಂಕಟಸ್ವಾಮಿರೆಡ್ಡಿ, ಬಿ.ಎಂ.ಪ್ರಕಾಶ್, ರಾಮಮೂರ್ತಿ, ಬಿ.ಪಿ.ಸತೀಶ್, ಬಿ.ಕೆ.ಮುನಿರಾಜು, ವಿ.ಕೃಷ್ಣಪ್ಪ, ದೊಡ್ಡ ಮಾರಪ್ಪ, ಬಂಗಾರು ಶ್ರೀನಿವಾಸ್, ಆರ್.ಶ್ರೀನಿವಾಸ್, ನಾರಾಯಣಸ್ವಾಮಿ, ನಾಗೇಂದ್ರ, ಬಿ.ಎಂ.ಪ್ರಕಾಶ್, ಭಾರತಾಂಬೆ ಮಹಿಳಾ ರೈತಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -