ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ 12-14 ವರ್ಷದ ಮಕ್ಕಳಿಗೆ ಶನಿವಾರ ತಾಲ್ಲೂಕು ಆರೋಗ್ಯಧಿಕಾರಿ ಡಾ.ವೆಂಕಟೇಶ್ ಮೂರ್ತಿ ಕೊರೊನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ 12-14 ವರ್ಷ ವಯೋಮಾನದ ಮಕ್ಕಳಿಗೆ ಕೊರೊನಾ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.
12 ರಿಂದ 13 ವರ್ಷ ಹಾಗೂ 13ರಿಂದ 14 ವರ್ಷ ವಯೋಮಾನದ ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆಯನ್ನು ಮಾತ್ರ ನೀಡಲಾಗುತ್ತದೆ. ಈ ಲಸಿಕೆಯನ್ನು ಎರಡು ಡೋಸ್‌ಗಳನ್ನು ನೀಡಲು ಉದ್ದೇಶಿಸಿದ್ದು, ಇವುಗಳ ನಡುವೆ 28 ದಿನಗಳ ಅಂತರವಿರಬೇಕು ಎಂದು ಮಾರ್ಗಸೂಚಿ ತಿಳಿಸಿದೆ.
2010 ಹಾಗೂ ಅದಕ್ಕೂ ಮುನ್ನ ಜನಿಸಿರುವವರು ಅಂದರೆ, 12 ವರ್ಷ ಪೂರ್ಣಗೊಂಡ ಮಕ್ಕಳು ‘ಕೋವಿನ್’ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದಾರೆ. ನೋಂದಣಿ ಆಧಾರದಲ್ಲಿ ಲಸಿಕೆ ನೀಡುವ ದಿನಾಂಕ ಹಾಗೂ ಸಮಯ ನಿಗದಿಯಾಗುತ್ತದೆ. ಲಸಿಕೆ ಪಡೆಯುವ ದಿನಾಂಕಕ್ಕೆ ಸರಿಯಾಗಿ 12 ವರ್ಷ ತುಂಬಿರುವುದು ಕಡ್ಡಾಯ. ಒಂದು ವೇಳೆ ಕೋವಿನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದರೂ, ಮಗುವಿಗೆ 12 ವರ್ಷ ತುಂಬದಿದ್ದ ಪಕ್ಷದಲ್ಲಿ, ಲಸಿಕೆ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ನೋಂದಣಿಗೆ ಹಲವು ವಿಧಾನಗಳನ್ನು ಸೂಚಿಸಲಾಗಿದೆ. ಕೋವಿನ್‌ನಲ್ಲಿ ಹೊಸ ಖಾತೆ ತೆರೆದು ನೋಂದಣಿ ಮಾಡಿಕೊಳ್ಳಬಹುದು. ಕುಟುಂಬ ಸದಸ್ಯರು ಈಗಾಗಲೇ ಕೋವಿನ್ ಖಾತೆ ಹೊಂದಿದ್ದರೆ, ಅದರ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು. ಅಥವಾ ಲಸಿಕಾ ಕೇಂದ್ರದಲ್ಲೇ ನೋಂದಣಿ ಮಾಡಿಕೊಳ್ಳಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಯಶ್ವಂತ್, ಆಸ್ಪತ್ರೆಯ ಸಿಬ್ಬಂದಿ ವಿಜಯಮ್ಮ, ದೀಪಾ, ದರ್ಶಿನಿ, ನಬೀಉಲ್ಲಾ, ಶೋಭಾ ಹಾಜರಿದ್ದರು.