ಮ್ಯೂರಲ್ ಅಥವಾ ಮ್ಯೂರಲ್ ಆರ್ಟ್ ಕೇರಳದ ಸಾಂಪ್ರದಾಯಿಕ ಕಲಾ ಪ್ರಕಾರ. ಹೆಚ್ಚಾಗಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಲ್ಪನೆಯ ಚಿತ್ರಗಳು ಈ ಪದ್ಧತಿಯ ವೈಶಿಷ್ಟ್ಯ. ಅದಕ್ಕಾಗಿಯೇ ಕೇರಳದ ಅರಮನೆಗಳು, ದೇವಾಲಯಗಳು ಹಾಗೂ ಕಲಾ ಮಂದಿರಗಳಲ್ಲಿ ಈ ಕಲಾಕೃತಿಯ ವೈಭವ ಕಾಣಸಿಗುತ್ತದೆ.
ಈ ಕಲೆಯಲ್ಲಿ ಪಳಗಿರುವ ಕಲಾವಿದರು ಬಹಳ ಅಪರೂಪ. ಆದರೆ, ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಪಂಚಾಯತಿಯ ನಾರಾಯಣದಾಸರಹಳ್ಳಿಯ ಶಿವರಾಜ್ ಈ ಮ್ಯೂರಲ್ ಕಲೆಯಲ್ಲಿ ಸಿದ್ಧಹಸ್ತರಾಗಿದ್ದು, ಶಿಡ್ಲಘಟ್ಟ ಹಾಗೂ ಸುತ್ತಮುತ್ತ ನೂತನವಾಗಿ ಕಟ್ಟಿಸುವ ಮನೆಗಳನ್ನು ತ್ರೀಡಿ ಮ್ಯೂರಲ್ ಕಲೆಯಿಂದ ಸಿಂಗರಿಸುತ್ತಿದ್ದಾರೆ. ಈ ಕಲೆಯನ್ನು ಮನೆಗಳಿಗೆ ಮಾತ್ರವಲ್ಲದೆ, ಮಸೀದಿ ಮತ್ತು ಚರ್ಚ್ಗಳಿಗೂ ವಿಸ್ತರಿಸಿದ್ದಾರೆ.
ಕೆಲವೊಂದು ಕಾಲಘಟ್ಟದಲ್ಲಿ ಕೆಲ ಕಲಾಪ್ರಕಾರಗಳನ್ನು ಜನರು ಇಷ್ಟಪಡುವಂತೆ ಈಗೀಗ ತಾಲ್ಲೂಕು ಹಾಗೂ ಸುತ್ತ ಮುತ್ತಲಿನ ನಗರಗಳ ಜನರು ಮ್ಯೂರಲ್ ಕಲೆಗೆ ಮನಸೋತಿದ್ದಾರೆ. ನೂತನವಾಗಿ ಕಟ್ಟಿಸುವ ಮನೆಗಳಿಗೆ ಕೆಲವರು ವಾಸ್ತುಪ್ರಕಾರದ ಮ್ಯೂರಲ್ ಮಾಡಿಸಿದರೆ, ಇನ್ನು ಕೆಲವರು ದೇವರುಗಳ ಮ್ಯೂರಲ್ ಮಾಡಿಸುತ್ತಿದ್ದಾರೆ.
ಯಾವ ಆಕಾರ, ಚಿತ್ರಗಳು ಬೇಕೆಂಬುದನ್ನು ಕೇಳಿ ಚಿತ್ರ ಬಿಡಿಸಿಕೊಂಡು ಶಿವರಾಜ್, ಅತ್ಯುತ್ತಮ ಜೇಡಿ ಮಣ್ಣನ್ನು ತಂದು ಹದ ಮಾಡಿಕೊಳ್ಳುತ್ತಾರೆ. ನಂತರ ಚಿತ್ರದ ಅಚ್ಚು ತಯಾರಿಸಿ, ಫೈಬರ್ ಎರಕಹೊಯ್ದು, ಒಣಗಿದ ನಂತರ ಬಣ್ಣ ಹಚ್ಚುತ್ತಾರೆ. ಸಾಕಷ್ಟು ಸಮಯ, ಕೈಚಳಕ, ಕಲ್ಪನೆ ಬೇಕಾದ ಈ ಕಲೆಯಲ್ಲಿ ಪರಿಣತಿ ಪಡೆಯಲು ಇವರು ಸಾಕಷ್ಟು ಶ್ರಮಿಸಿದ್ದಾರೆ.
ತಾಲ್ಲೂಕಿನ ನಾರಾಯಣದಾಸರಹಳ್ಳಿಯಿಂದ ಕಲೆಯ ಅಭ್ಯಾಸಕ್ಕಾಗಿ ದಿಲ್ಲಿಯವರೆಗೂ ಸಾಗಿದ ಇವರ ಪಯಣ ಕೊನೆಗೆ ತನ್ನ ಸ್ವಂತ ತಾಲ್ಲೂಕಿನಲ್ಲೇ ಬಣ್ಣ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ಚಿತ್ರಕಲೆಯಲ್ಲಿ ಪದವಿ ಪಡೆದ ಶಿವರಾಜ್, ಸ್ನಾತಕೋತ್ತರವನ್ನು ಮೈಸೂರಿನ ಲಲಿತ ಕಲಾ ಅಕಾಡೆಮಿಯಲ್ಲಿ ಪೂರೈಸಿದ್ದಾರೆ. ತ್ರಿಡಿ ಅನಿಮೇಷನ್ ದೆಹಲಿಯಲ್ಲಿ ಕಲಿತಿದ್ದಾರೆ.
ಕೆಲ ಕಾಲ ತಾಲ್ಲೂಕಿನ ಮೇಲೂರು ಗ್ರಾಮದ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದ ಅವರು ಪ್ರಸ್ತುತ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ವಾರಕ್ಕೆ ಮೂರುದಿನ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಉಳಿದ ದಿನಗಳನ್ನು ಮ್ಯೂರಲ್ ಕಲೆಗೆ ಮೀಸಲಿಟ್ಟಿದ್ದಾರೆ.
ಚಿಂತಾಮಣಿಯಲ್ಲಿ 20 ಮನೆಗಳು, ಚಿಕ್ಕಬಳ್ಳಾಪುರದಲ್ಲಿ 40 ಮನೆಗಳು, ವಿಜಯಪುರದಲ್ಲಿ 15 ಮನೆಗಳು, ಗೌರಿಬಿದನೂರಿನಲ್ಲಿ 7 ಮನೆಗಳು, ಬಾಗೇಪಲ್ಲಿಯಲ್ಲಿ 8 ಮನೆಗಳ ಮೇಲೆ ಮ್ಯೂರಲ್ ಚಿತ್ರವನ್ನು ರೂಪಿಸಿಕೊಟ್ಟಿರುವ ಶಿವರಾಜ್ಗೆ ಮಸೀದಿ ಮತ್ತು ಚರ್ಚ್ಗಳ ಮೇಲೂ ಮ್ಯೂರಲ್ ರೂಪಿಸಲು ಒಪ್ಪಿಕೊಂಡಿದ್ದಾರೆ.
‘ಒಂದೊಂದು ತ್ರೀಡಿ ಮ್ಯೂರಲ್ ಕಲೆಯನ್ನು ರೂಪಿಸಲು ಸುಮಾರು 10 ರಿಂದ 20 ದಿನಗಳು ಬೇಕಾಗುತ್ತದೆ. ಧೂಳು, ರಾಸಾಯನಿಕಗಳ ಸಹವಾಸದಿಂದ ಮತ್ತು ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕೆಲಸ ಮಾಡಬೇಕಾಗುವುದರಿಂದ ಆರೋಗ್ಯವು ಆಗಾಗ ಕೈಕೊಡುತ್ತದೆ. ಆದರೆ ಕಲಿತ ಕಲೆಯ ಬಗೆಗಿನ ಆಸಕ್ತಿ ಮತ್ತು ಹುಟ್ಟಿದೂರಿನ ಮಮಕಾರದಿಂದ ಹಣ ಸಂಪಾದಿಸಲು ಆಗದಿದ್ದರೂ ಉತ್ಸಾಹವನ್ನು ಕಳೆದುಕೊಂಡಿಲ್ಲ. ಮಕ್ಕಳ ಸೃಜನಶೀಲತೆಯನ್ನು ಬೆಳೆಸಲು ಕಸ ಅಥವಾ ಬೇಡದ ವಸ್ತುಗಳನ್ನು ಕಲೆಯಾಗಿಸುವ ಬಗ್ಗೆ ಶಾಲೆಗಳಲ್ಲಿ ಕಲಿಸಲು ಆಸಕ್ತಿಯಿದೆ. ಆದರೆ ಅವಕಾಶಗಳು ಸಿಗುತ್ತಿಲ್ಲ. ಶಾಲೆಗಳಲ್ಲಿ ಕಲೆಗೂ ಸಮಯವನ್ನು ಮೀಸಲಿಡಬೇಕು. ಪ್ರತಿಭಾ ಕಾರಂಜಿಗೆ ಮಾತ್ರ ತೀರ್ಪುಗಾರನಾಗಿ ನನ್ನನ್ನು ಕರೆಯುತ್ತಾರಷ್ಟೆ. ಅವಕಾಶ ಸಿಕ್ಕಲ್ಲಿ ನಮ್ಮ ತಾಲ್ಲೂಕಿನ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸಲು ಶ್ರಮಿಸುವೆ’ ಎನ್ನುತ್ತಾರೆ ಶಿವರಾಜ್. ಶಿವರಾಜ್ ದೂರವಾಣಿ ಸಂಖ್ಯೆ: 9972948994
- Advertisement -
- Advertisement -
- Advertisement -