ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಇದುವರೆಗೂ ದಲಿತರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಆರೋಪಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬಶೆಟ್ಟಿಹಳ್ಳಿ ಹೋಬಳಿಯ ದ್ಯಾವರಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆಯಾಗಿದೆ. ದಲಿತ ಕುಟುಂಬಕ್ಕೆ ಭದ್ರತೆಯಿಲ್ಲದಂತಾಗಿದೆ ಎಂದರು.
ಗ್ರಾಮದ ನಿವಾಸಿ ಶೈಲಜಾ ಎಂಬುವವರ ತಂದೆ ನರಸಿಂಹಪ್ಪ ಹಾಗೂ ಇದೇ ಗ್ರಾಮದ ಸವರ್ಣಿಯರ ಜನಾಂಗಕ್ಕೆ ಸೇರಿದ ಬೈರಾರೆಡ್ಡಿ, ಸುರೇಶ್, ಎಂಬುವವರಿಗೆ ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಜಮೀನಿನ ವಿಚಾರವಾಗಿ ವಿವಾದವಿತ್ತು. ಈ ಜಮೀನಿನ ವಿಚಾರವಾಗಿ ನರಸಿಂಹಪ್ಪ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದಾರೆ. ಜೂನ್ 30 ರಂದು ಬೆಳಿಗ್ಗೆ ದಲಿತ ಕುಟುಂಬದ ಶೈಲಜಾ ಎಂಬುವವರು ಕುಡಿಯುವ ನೀರು ಹಿಡಿಯಲು ಬಂದಾಗ ಸವರ್ಣಿಯರ ಜನಾಂಗದ ಬೈರಾರೆಡ್ಡಿ, ಸುರೇಶ್, ರತ್ನಮ್ಮ, ಅಶ್ವಥಮ್ಮ, ಡಿ.ಸಿ.ನಾರಾಯಣಸ್ವಾಮಿ, ಜಯಮ್ಮ, ಆಂಜಿನಮ್ಮ, ಮುನಿರೆಡ್ಡಿ, ಶಿವ, ಲಕ್ಷ್ಮೀಪತಿ, ಮಮತ ಎಂಬುವವರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿನಿಂದನೆ ಮಾಡಿ, ದೈಹಿಕವಾಗಿ ಹಲ್ಲೆ ನಡೆಸಿ, ಪ್ರಾಣಬೆದರಿಕೆಯನ್ನೂ ಹಾಕಿದ್ದಾರೆ. ಈ ಬಗ್ಗೆ ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಕೂಡಾ ಇದುವರೆಗೂ ಪೊಲೀಸರು ಒಂದು ಆರೋಪಿಯನ್ನೂ ಬಂಧಿಸಿ, ವಿಚಾರಣೆಗೊಳಪಡಿಸದೆ ನಿರ್ಲಕ್ಷ್ಯ ವಹಿಸಿ, ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆಯ ಅಧಿಕಾರಿಗಳ ಬಳಿ ವಿಚಾರಿಸಿದರೆ, ಎಫ್.ಐ.ಆರ್. ಹಾಕಿದ್ದೇವೆ, ಅವರನ್ನು ಬಂಧಿಸುತ್ತೇವೆ ಎಂಬ ಜಾರಿಕೆಯ ಉತ್ತರಗಳನ್ನು ನೀಡುತ್ತಿದ್ದಾರೆಯೆ ಹೊರತು ದಲಿತರಿಗೆ ನ್ಯಾಯ ಒದಗಿಸಿಲ್ಲವೆಂದು ಆರೋಪಿಸಿದ್ದಾರೆ.
ತಾಲ್ಲೂಕು ಸಂಚಾಲಕ ನಡಿಪಿನಾಯಕನಹಳ್ಳಿ ವೆಂಕಟೇಶ್, ಕೆ.ಎಸ್.ದ್ಯಾವಕೃಷ್ಣಪ್ಪ, ಗಾಯಾಳು ಶೈಲಜಾ, ಚಲಪತಿ, ಲಕ್ಷ್ಮೀನಾರಾಯಣ, ನರಸಿಂಹಪ್ಪ, ನಾರಾಯಣಸ್ವಾಮಿ, ಲಕ್ಷ್ಮಣ್ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -