ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ಪಿಎಸ್ಸೈ ವಿಜಯ್‌ರೆಡ್ಡಿರನ್ನು ಕೂಡಲೇ ಅಮಾನತ್ತುಗೊಳಿಸಬೇಕು ಎಂದು ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಜಿ.ನಾರಾಯಣಸ್ವಾಮಿ ಒತ್ತಾಯಿಸಿದರು.
ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ದೀಪಾವಳಿ ಹಬ್ಬದಂದು ತಾಲ್ಲೂಕಿನ ವೇಮಗಲ್ ಗ್ರಾಮದಲ್ಲಿ ದಲಿತರು ಹಾಗು ಸವರ್ಣೀಯರ ನಡುವೆ ನಡೆದ ಘರ್ಷಣೆಯ ಹಿನ್ನಲೆಯಲ್ಲಿ ದಲಿತರು ನೀಡಿದ್ದ ದೂರು ದಾಖಲಿಸಲು ನಿರ್ಲಕ್ಷ್ಯ ತೋರಿದ್ದಷ್ಟೇ ಅಲ್ಲದೇ ತಡವಾಗಿ ದೂರು ದಾಖಲಿಸಿ ನಂತರ ಕೋರ್ಟ್‌ಗೆ ಸುಳ್ಳು ವರದಿ ನೀಡಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕುವ ಮೂಲಕ ಡಿವೈಎಸ್‌ಪಿ ಸೇರಿದಂತೆ ಪಿಎಸ್ಸೈ ದಲಿತರಿಗೆ ಅನ್ಯಾಯ ಮಾಡಿದ್ದಾರೆ.
ಇದು ಸಾಲದು ಎಂಬಂತೆ ತಾಲ್ಲೂಕಿನ ಹಳೇ ಗಂಜಿಗುಂಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ಮಾಣ ಮಾಡುವ ಸಮಯದಲ್ಲಿ ಗ್ರಾಮದಲ್ಲಿ ಕೆಲವರನ್ನು ಎತ್ತಿಗಟ್ಟಿ ವಿನಾಕಾರಣ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.
ದಸಂಸ ಮಾಜಿ ತಾಲ್ಲೂಕು ಸಂಚಾಲಕ ಜಿ.ನರಸಿಂಹಮೂರ್ತಿ ಮಾತನಾಡಿ, ಇವರ ದಲಿತ ವಿರೋಧಿ ಧೋರಣೆಯಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜನ ಭಯಬೀತರಾಗಿದ್ದು ಕೂಡಲೇ ಈತನನ್ನು ಅಮಾನತ್ತುಗೊಳಿಸಬೇಕು ಎಂದರು.
ಇವರ ಕರ್ತವ್ಯದ ಅವಧಿಯಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಬೇರೆ ತನಿಖಾಧಿಕಾರಿಯಿಂದ ತನಿಖೆ ಮಾಡಿಸಬೇಕು ಹಾಗು ಇವರಿಗೆ ಬೆಂಬಲವಾಗಿ ನಿಂತಿರುವ ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಕೃಷ್ಣಮೂರ್ತಿ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇದೇ ಜುಲೈ ೧೫ ರಂದು ತಾಲ್ಲೂಕಿನ ವೇಮಗಲ್ ಗ್ರಾಮದಿಂದ ದಿಬ್ಬೂರಹಳ್ಳಿ ಠಾಣೆಯವರೆಗೂ ಪಾದಯಾತ್ರೆ ಮೂಲಕ ಸಾಗಿ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಟಿ.ವಿ.ಚಲಪತಿ, ದ್ಯಾವಕೃಷ್ಣಪ್ಪ, ಎಲ್.ವೆಂಕಟೇಶ್, ಲಕ್ಷ್ಮಿನಾರಾಯಣ, ಹುಜಗೂರು ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -
- Advertisement -