ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಚಲನಚಿತ್ರ ನಟ ಸೋಹನ್ ಅಭಿರಾಮ್ ಮಾತನಾಡಿದರು.
ವಿದ್ಯೆ ಎಂಬುದಕ್ಕೆ ಪರಿಮಿತಿಯಿಲ್ಲ. ಸಾಗರದ ಆಳ, ಮುಗಿಲಿನ ವಿಸ್ತಾರವನ್ನು ಸರಿಗಟ್ಟಲಾಗದು. ವಿದ್ಯೆಗೆ ವಿನಯವೇ ಭೂಷಣ. ಕಲಿಕೆಯಿಂದ ಮಾನವನ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಕಲಿಯುವುದು ಎಂದರೆ ಸುಮ್ಮನೆ ಓದುವುದಲ್ಲ, ಬರೆಯುವುದಲ್ಲ. ಆದರೆ ಕಾರ್ಯರೂಪದಲ್ಲಿ ಅದನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ವಿದ್ಯಾರ್ಥಿಯೊಬ್ಬ ತಾನು ಕಲಿತ ವಿದ್ಯೆಯ ಬೆಳಕಿನಲ್ಲಿ ತನ್ನ ಜೀವನವನ್ನು ಎಷ್ಟರ ಮಟ್ಟಿಗೆ ಎದ್ದುನಿಲ್ಲಿಸಿಕೊಂಡಿದ್ದಾನೆಂಬುದೇ ಆ ವಿದ್ಯೆಯ ನಿಜವಾದ ಬಾಳಿಕೆಗೆ ಮಾನದಂಡವಾಗುವಂಥದ್ದು. ಅನ್ನದ ವೈಜ ಅರ್ಥ ಇರುವುದು ಅದರ ರೂಪದಲ್ಲಿ ಅಲ್ಲ, ಅದು ನಮ್ಮಲ್ಲಿ ರಕ್ತವಾಗಿ ಎಷ್ಟು ಶಕ್ತಿಯನ್ನು ಒದಗಿಸಬಹುದು ಎಂಬುದರಲ್ಲಿಯೇ ಅದರ ಸಾರ್ಥಕತೆ ಸಿದ್ಧವಾಗುವುದು. ಅಂತೆಯೇ ವಿದ್ಯೆಯ ಬೆಳಕು ನಮ್ಮ ಅಂತರಂಗದ ಕತ್ತಲೆಯನ್ನು ಕಳೆಯಬೇಕು, ಜೀವನಯಾನಕ್ಕೆ ಕಸುವನ್ನೂ ಕಣ್ಣೋಟವನ್ನೂ ನೀಡಬೇಕು.
ಪ್ರತಿಯೊಬ್ಬರೂ ಸಮಾಜಕ್ಕೆ ಋಣಿಗಳಾಗಿರುತ್ತೇವೆ. ನಮ್ಮನ್ನು ಬೆಳೆಸಿದ ಸಮಾಜಕ್ಕೆ ನಮ್ಮ ಕೊಡೆಗೆಯೇನು ಎಂಬುದನ್ನು ಪ್ರತಿಯೊಬ್ಬರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಹುಟ್ಟಿದ ಊರಿಗೆ, ವಿದ್ಯೆ ಕಲಿಸಿದ ಶಾಲಾ ಕಾಲೇಜಿಗೆ ನಾವು ಕಿಂಚಿತ್ತಾದರೂ ಕೊಡುಗೆಯನ್ನು ಕೊಡುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಚಂದ್ರಾನಾಯಕ್, ಚಲನಚಿತ್ರ ನಟಿ ರೂಪಿಕಾ, ಚಿತ್ರ ನಿರ್ಮಾಪಕ ನಾರಾಯಣಸ್ವಾಮಿ, ನಿವೃತ್ತ ಪ್ರಾಂಶುಪಾಲ ಎಂ.ನಾರಾಯಣಸ್ವಾಮಿ, ಪ್ರಾಧ್ಯಾಪಕ ಡಾ.ವಿ.ವೆಂಕಟೇಶ್ ಹಾಜರಿದ್ದರು.
- Advertisement -
- Advertisement -
- Advertisement -