ನಮ್ಮ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದು ರೇಷ್ಮೆ ಕೃಷಿ ಕೆಲಸ ಕಷ್ಟಕರವಾಗಿದೆ. ಹೀಗಿದ್ದರೂ ನಮ್ಮ ರೈತರನ್ನು ಕಾಪಾಡುತ್ತಿರುವುದು ಕಾಮಧೇನು ಹಸುಗಳು. ಸಾಮೂಹಿಕ ವಿವಾಹದಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ 91 ಜೋಡಿಗಳಿಗೆ ಹಸುಗಳನ್ನು ನೀಡುತ್ತಿದ್ದು ಅವರ ಜೀವನ ಹಸನಾಗಿರಲಿ ಎಂದು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಮಂಗಳವಾರ ತಮ್ಮ ತೋಟದಲ್ಲಿ ನೂತನ ವಧೂವರರಿಗೆ ಹಸುಗಳನ್ನು ಟ್ರಸ್ಟ್ ವತಿಯಿಂದ ವಿತರಿಸಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕು ರೇಷ್ಮೆ ಮತ್ತು ಹೈನುಗಾರಿಕೆಗೆ ಪ್ರಸಿದ್ಧಿ. ಸತತ ಬರಗಾಲದಿಂದ ರೇಷ್ಮೆ ಕೃಷಿ ಕಷ್ಟಕರವಾಗಿದೆ. ಆದರೆ ನಮ್ಮಲ್ಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಹಕಾರದಿಂದ ಹೈನುಗಾರಿಕೆಯನ್ನು ನಂಬಿದವರು ಮೋಸಹೋಗಿಲ್ಲ. ಮಾಜಿ ಪ್ರಧಾನಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಬ್ಯಾಟರಾಯಸ್ವಾಮಿ ಸನ್ನಿಧಿಯಲ್ಲಿ ನಡೆಸಿದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಹೊಸಬಾಳಿಗೆ ಕಾಲಿಟ್ಟ ಹೊಸಜೋಡಿಗಳಿಗೆ ಜೀವನೋಪಾಯಕ್ಕಾಗಿ ಸೀಮೆ ಹಸುಗಳನ್ನು ಎಚ್.ಡಿ.ದೇವೇಗೌಡ ಮತ್ತು ಜಯಪ್ರಕಾಶ್ ನಾರಾಯಣ್ ಸೇವಾಭಿವೃದ್ಧಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಕೊಡಲಾಗುತ್ತಿದೆ.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಮಾತನಾಡಿ, ಮನೆಯಲ್ಲಿ ಹಸುವೊಂದಿದ್ದರೆ ಕುಟುಂಬಕ್ಕೆ ಜೀವನಾಧಾರದಂತೆ. ಈ ರೀತಿಯ ಸಾಮೂಹಿಕ ವಿವಾಹ ನಡೆಸಿ ವಧೂವರರಿಗೆ ಹಸುಗಳನ್ನು ನೀಡುತ್ತಿರುವುದು ಪರೋಕ್ಷವಾಗಿ ಹಾಲು ಒಕ್ಕೂಟವನ್ನು ಬಲಪಡಿಸಿದಂತೆ. ಒಂದು ಜೋಡಿ ಮುಂದೆ ಕುಟುಂಬವಾಗಿ ಬೆಳೆದಂತೆ ಒಂದು ಹಸು ಹಲವು ಹಸುಗಳಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ವಿ.ನಾಗರಾಜ್, ಗೋಪಾಲಪ್ಪ, ಕೆ.ಎಸ್.ಮಂಜುನಾಥ್, ಆರ್.ಎ.ಉಮೇಶ್, ತಾದೂರು ರಘು, ರಾಜಶೇಖರ್, ಲಕ್ಷ್ಮಣ, ಯೂಸುಫ್, ಸಮೀವುಲ್ಲ, ಆದಿಲ್‌ಪಾಷ, ಲಕ್ಷ್ಮೀನಾರಾಯಣ್, ಬಶೆಟ್ಟಹಳ್ಳಿ ವೆಂಕಟೇಶ್, ಶ್ರೀನಿವಾಸಗೌಡ, ನಂಜಪ್ಪ, ರಘುರಾಜ್, ಚನ್ನೇಗೌಡ, ಮಾರಪ್ಪ, ಲಕ್ಷ್ಮೀಪತಿ ಹಾಜರಿದ್ದರು.