ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಬರಗಾಲ ಘೋಷಿತ ತಾಲ್ಲೂಕುಗಳಲ್ಲಿ ಇದುವರೆಗೂ ಸರ್ಕಾರ ಕಾಮಗಾರಿ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆರೋಪಿಸಿದರು.
ನಗರದ ಕೋಟೆ ವೃತ್ತದಲ್ಲಿ ಶನಿವಾರ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ರೈತ ಚೈತನ್ಯ ಯಾತ್ರೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ರಾಜ್ಯ ಸರ್ಕಾರದಲ್ಲಿ 363 ಕೋಟಿ ರೂಗಳಷ್ಟು ಬರಗಾಲದ ಕಾಮಗಾರಿಗಳಿಗೆ ಬಳಸಬಹುದಾದ ಹಣವಿದೆ. ಅದರಲ್ಲಿ 244 ಕೋಟಿ ರೂಗಳು ಖರ್ಚಾಗದೇ ಉಳಿದಿದೆ. ಕೇಂದ್ರ ಸರ್ಕಾರದಿಂದ ಬರುವ ಹಣ ಹಿಂದಿಗಿಂತಲೂ ಈಗ 10 ಸಾವಿರ ಕೋಟಿ ರೂಗಳಷ್ಟು ಹೆಚ್ಚಳವಾಗಿದೆ. 14ನೇ ಫೈನಾನ್ಸ್ ಕಮಿಷನ್ ಜಾರಿಯಾದಂತೆ ಈಗ ಬರುವ ಹಣ ದುಪ್ಪಟ್ಟಾಗಲಿದೆ. ಆದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ನರೇಂದ್ರ ಮೋದಿಯವರನ್ನು ಹಳಿಯುತ್ತಿರುವುದು ವಿಪರ್ಯಾಸ.
ಎಂಟು ಬಜೆಟ್ ಮಂಡಿಸಿರುವ ಸಿದ್ಧರಾಮಯ್ಯ 45 ಸಾವಿರ ಕೋಟಿ ರೂಗಳಷ್ಟು ಸಾಲದ ಹೊರೆಯನ್ನು ಜನತೆಯ ತಲೆ ಮೇಲೆ ಹೊರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡಿ ಅಂದರೆ ಬಡ್ಡಿ ಮನ್ನಾ ಮಾಡುವುದಾಗಿ ಮಂಕುಬೂದಿ ಎರಚುತ್ತಿದ್ದಾರೆ. ರೈತರ ನೆರವಿಗೆ ಬರದ, ಆತ್ಮಹತ್ಯೆ ಮಾಡಿಕೊಂಡವರ ಮನೆಗೆ ಹೋಗಿ ಸಾಂತ್ವನ ಹೇಳದ ಸರ್ಕಾರಕ್ಕೆ ನಾಚಿಕೆ ಆಗಬೇಕು. ರೈತರ ಸಾಲ ಮನ್ನಾ ಮಾಡುವಂತೆ ಹಾಗೂ ಶಾಶ್ವತ ನೀರನ್ನು ನೀಡುವಂತೆ ಬಿ.ಜೆ.ಪಿ ಸರ್ಕಾರ ನಿರಂತರ ಹೋರಾಟಕ್ಕೆ ಬದ್ಧವಾಗಿದೆ. ಕುಂಬಕರ್ಣ ನಿದ್ರೆಯ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿಲ್ಲ. ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಯೋಜನೆ ರೂಪಿಸಿಲ್ಲ. ಮುದ್ದೇನಹಳ್ಳಿಯ ಐಐಟಿ, ರೈಲ್ವೆ ಯೋಜನೆ, ತೈಲ ಕಂಪೆನಿಗಳ ಹೂಡಿಕೆ ಎಲ್ಲವೂ ವೀರಪ್ಪ ಮೊಯಿಲಿಯವರ ಭಾಷಣಗಳ ಮಾತಷ್ಟೇ. ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಟೀಕಿಸಿದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ರಾಜ್ಯದ 600 ಮಂದಿ ರೈತರ ಆತ್ಮಹತ್ಯೆಗೆ ರಾಜ್ಯ ಸರ್ಕಾರದ ಬೇಜವಾಬ್ದಾರಿತನ ಕಾರಣ. ಹಗರಣಗಳಿಗೆ ಸರ್ಕಾರದ ಬಳಿ ಹಣವಿದೆ, ಆದರೆ ರೈತರಿಗೆ ಪರಿಹಾರ ನೀಡಲು ಮಾತ್ರ ಹಣವಿಲ್ಲ. ಎತ್ತಿನ ಹೊಳೆ, ಐಐಟಿ, ಕಳಸಾಬಂಡೂರಿ ವಿಷಯಗಳಲ್ಲಿ ಜಿಲ್ಲೆಜಿಲ್ಲೆಗಳ ನಡುವೆ ವೈಷಮ್ಯ ಮೂಡಿಸುತ್ತಿರುವ ರಾಜ್ಯ ಸರ್ಕಾರ ಬ್ರಿಟಿಷರ ಒಡೆದಾಳುವ ನೀತಿಯನ್ನು ಅನುಸರಿಸುತ್ತಿದೆ. ರೈತರಿಗೆ ಸಾಂತ್ವನ, ಬೆಂಬಲ, ಧೈರ್ಯ ನೀಡಿ ಆತ್ಮಹತ್ಯೆ ಮಾಡಿಕೊಳ್ಳದಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಸರ್ಕಾರದ ಸಚಿವರುಗಳು ಮನವಿ ಮಾಡಬೇಕಾದ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಕೊಳವೆ ಬಾವಿ ಕೊರೆಸಿ ನೀರು ಸಿಗದವರಿಗೆ ಪರಿಹಾರವನ್ನು ಸರ್ಕಾರ ನೀಡಬೇಕು.
ಹಾಲಿನ 6 ಕೋಟಿ ರೂ ಸಹಾಯಧನ ಮತ್ತು ಹನಿನೀರಾವರಿಯ 32 ಕೋಟಿ 17 ಲಕ್ಷ ರೂಗಳ ಸಹಾಯಧನವನ್ನು ಸರ್ಕಾರ ಇನ್ನೂ ರೈತರಿಗೆ ನೀಡಿಲ್ಲ. ಪಡಿತರ ವ್ಯವಸ್ಥೆಯಲ್ಲಿ 30 ಕೆಜಿ ಅಕ್ಕಿಯನ್ನು ನೀಡುತ್ತಿದ್ದುದು ಈಗಿನ ಸರ್ಕಾರದಲ್ಲಿ 4 ಕೆಜಿಗೆ ಇಳಿದಿದೆ. ಇದರಿಂದ ಬಡವರು ಅನ್ನದ ಗಂಜಿ ಕುಡಿಯುವಂತಾಗಿದೆ. ಉಳಿದ ಅಕ್ಕಿ ‘ಅಮ್ಮ ಇಡ್ಲಿ’ಗೆ ಹೋಗುತ್ತಿದೆ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತರಾದ ಕೇಶವಾರ ಅಂಬರೀಷ್ ಮತ್ತು ಯಣ್ಣಗೂರು ಮುನಿಶಾಮಿ ಕುಟುಂಬದವರಿಗೆ ಬಿಜೆಪಿ ಮುಖಂಡರು ತಲಾ 20 ಸಾವರ ರೂಗಳ ಪರಿಹಾರ ಧನದ ಚೆಕ್ ವಿತರಿಸಿದರು.
ಬಿಜೆಪಿ ಮುಖಂಡರಾದ ರೇವೂನಾಯಕ್ ಬೆಳಮಗಿ, ವೈ.ಎ.ನಾರಾಯಣಸ್ವಾಮಿ, ಡಿ.ಎಸ್.ವೀರಯ್ಯ, ಚಂದ್ರಣ್ಣ, ರವಿನಾರಾಯಣರೆಡ್ಡಿ, ಜ್ಯೋತಿರೆಡ್ಡಿ, ಶ್ರೀರಾಮರೆಡ್ಡಿ, ಸುರೇಂದ್ರಗೌಡ, ರಮೇಶ್ ಬಾಯಿರಿ, ಲೋಕೇಶ್ಗೌಡ, ಮಂಜುಳಮ್ಮ, ನಂದೀಶ್, ರಾಘವೇಂದ್ರ, ಶಿವಕುಮಾರಗೌಡ ಮತ್ತಿತರರು ಹಾಜರಿದ್ದರು.
ಕೊನೆಯ ಮುಖ್ಯಮಂತ್ರಿ
‘ಸಿದ್ಧರಾಮಯ್ಯನವರಿಗೆ ಮುಖ್ಯಮಂತ್ರಿ ಆಗಬೇಕೆಂಬ ಕನಸಿತ್ತು. ದೇವೇಗೌಡರು ಆಗಗೊಡಲಿಲ್ಲ. ಕಾಂಗ್ರೆಸ್ ಸೇರಿದ ಮೇಲೆ ಆದರು. ಜನರಿಗೆ ಕತ್ತಲೆ ಭಾಗ್ಯ, ಸಾಲದ ಭಾಗ್ಯ ಕೊಟ್ಟಿದ್ದಾರೆ. ರಾಜ್ಯದ ಜನರ ಕಷ್ಟಕ್ಕೆ ಸ್ಪಂದಿಸದೇ, ರೈತರ ನೆರವಿಗೆ ಬರದೇ ಕಾಂಗ್ರಸ್ ಪಕ್ಷವನ್ನೂ ಮನೆಗೆ ಕಳಿಸಿ ತಾವೂ ಮನೆಗೆ ಹೋಗುತ್ತಾರೆ. ಸಿದ್ಧರಾಮಯ್ಯನವರು ಕಾಂಗ್ರೆಸ್ನ ಕಡೆಯ ಮುಖ್ಯಮಂತ್ರಿ ಆಗಲಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವ್ಯಂಗ್ಯವಾಗಿ ಹೇಳಿದರು.
ರೈತರ ಮನವಿ
ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕ ಹೆಚ್ಚಿಸಿ ರೇಷ್ಮೆ ಬೆಳೆಗಾರರನ್ನು ರಕ್ಷಿಸಿ. ನೀರಾವರಿ ಯೋಜನೆಯನ್ನು ಶೀಘ್ರವಾಗಿ ರೂಪಿಸಿ ಬಯಲು ಸೀಮೆಯ ಜನರ ಕಷ್ಟಕ್ಕೆ ಸ್ಪಂದಿಸಿ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಲ್ಲಿಸಿದರು.
ತಮ್ಮ ಭಾಷಣದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಆಮದು ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಶಾಶ್ವತ ನೀರಾವರಿ ಯೋಜನೆ ರೂಪಿಸಲು ಒತ್ತಾಯಿಸಿ ಬಿಜೆಪಿ ಪಕ್ಷ ಹೋರಾಡುತ್ತದೆ ಎಂದರು.
- Advertisement -
- Advertisement -
- Advertisement -
- Advertisement -